ಪ್ರಧಾನ ಮಂತ್ರಿಯವರ ಕಛೇರಿ
ನೆದರ್ಲೆಂಡ್ಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಡಿಕ್ ಸ್ಕೂಫ್ ಅವರ ಭಾರತ ಭೇಟಿ
ಪ್ರಕಟಣಾ ದಿನಾಂಕ:
19 FEB 2026 8:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ರ ಫೆಬ್ರವರಿ 19ರಂದು ನೆದರ್ಲೆಂಡ್ಸ್ ಪ್ರಧಾನಮಂತ್ರಿ ಘನತೆವೆತ್ತ ಶ್ರೀ ಡಿಕ್ ಸ್ಕೂಫ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಎಐ ಇಂಪ್ಯಾಕ್ಟ್ ಶೃಂಗಸಭೆಗೆ ನೆದರ್ಲೆಂಡ್ಸ್ ನಿಯೋಗವನ್ನು ಪ್ರಧಾನಮಂತ್ರಿ ಸ್ಕೂಫ್ ಮುನ್ನಡೆಸುತ್ತಿದ್ದಾರೆ.
ಶೃಂಗಸಭೆಯಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಸ್ಕೂಫ್ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಒಳಿತಿಗಾಗಿ ಕೃತಕ ಬುದ್ಧಿಮತ್ತೆ ಕುರಿತ ಕಾರ್ಯ ಗುಂಪಿನ ಸಹ-ಅಧ್ಯಕ್ಷರಾಗಿ ನೆದರ್ಲೆಂಡ್ಸ್ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಪ್ರಧಾನಮಂತ್ರಿ ಸ್ಕೂಫ್ ಅವರು ಶೃಂಗಸಭೆಯ ಮಹತ್ವವನ್ನು ಒತ್ತಿಹೇಳಿದರು ಮತ್ತು ಶೃಂಗಸಭೆಯ ಘೋಷಣೆಯು ಭವಿಷ್ಯದ ನೀತಿ ಚರ್ಚೆಗಳನ್ನು ಮುನ್ನಡೆಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಕೃತಕ ಬುದ್ಧಿಮತ್ತೆಯ ಆಗಮನವು ತಾಂತ್ರಿಕ ವಿಕಾಸದಲ್ಲಿ ಒಂದು ಪ್ರಮುಖ ಕ್ಷಣವಾಗಿದೆ ಮತ್ತು ಸಮಾಜಕ್ಕೆ ಮಹತ್ವದ ಅವಕಾಶಗಳನ್ನು ಹೊಂದಿದೆ ಎಂದು ಒಪ್ಪಿಕೊಂಡ ಉಭಯ ನಾಯಕರು, ಸಾಮಾಜಿಕ ಪರಿವರ್ತನೆಯನ್ನು ಸಾಧಿಸಲು ಕೃತಕ ಬುದ್ಧಿಮತ್ತೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಭಾರತ ಮತ್ತು ನೆದರ್ಲೆಂಡ್ಸ್ ಒಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿಹೇಳಿದರು. ಈ ಸಂದರ್ಭದಲ್ಲಿ, ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಮತ್ತು ಸೆಮಿಕಂಡಕ್ಟರ್ ಗಳು ಸೇರಿದಂತೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸುವ ಬಗ್ಗೆ ನಾಯಕರು ಚರ್ಚಿಸಿದರು.
ದ್ವಿಪಕ್ಷೀಯ ಸಂಬಂಧವನ್ನು ಪರಿಶೀಲಿಸಿದ ಇಬ್ಬರೂ ನಾಯಕರು ಭಾರತ-ನೆದರ್ಲೆಂಡ್ಸ್ ಪಾಲುದಾರಿಕೆಯಲ್ಲಿನ ಸ್ಥಿರ ಪ್ರಗತಿಯನ್ನು ಸ್ವಾಗತಿಸಿದರು ಮತ್ತು ಡಬ್ಲ್ಯುಎಎಚ್ (ನೀರು, ಕೃಷಿ, ಆರೋಗ್ಯ), ಶುದ್ಧ ಇಂಧನ, ಹಸಿರು ಹೈಡ್ರೋಜನ್, ರಕ್ಷಣೆ ಮತ್ತು ಭದ್ರತೆ, ಶಿಕ್ಷಣ ಮತ್ತು ಜನರ ನಡುವಿನ ಸಂಬಂಧಗಳಂತಹ ವಿವಿಧ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಗಾಢವಾಗಿಸುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. ಮೈಲಿಗಲ್ಲು ಭಾರತ-ಐರೋಪ್ಯ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳ ಮುಕ್ತಾಯವು ಉಭಯ ದೇಶಗಳ ನಡುವಿನ ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಐತಿಹಾಸಿಕ ಅವಕಾಶವನ್ನು ಒದಗಿಸಿದೆ ಎಂದು ಅವರು ಒಪ್ಪಿಕೊಂಡರು.
ನಾಯಕರು ಪ್ರಮುಖ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ವೇದಿಕೆಗಳಲ್ಲಿ ಒಟ್ಟಾಗಿ ಕೆಲಸ ಮಾಡುವ ಬದ್ಧತೆಯನ್ನು ಪುನರುಚ್ಚರಿಸಿದರು. ಉಕ್ರೇನ್ ನಲ್ಲಿನ ಸಂಘರ್ಷದ ಬಗ್ಗೆ ಭಾರತದ ನಿಲುವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದರು. ಇದೇ ವೇಳೆ ಅವರು ಅದನ್ನು ಶೀಘ್ರವಾಗಿ ನಿಲ್ಲಿಸುವ ಅಗತ್ಯವನ್ನು ಒತ್ತಿ ಹೇಳಿದರು. ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಲು ಉಭಯ ನಾಯಕರು ಬದ್ಧರಾಗಿದ್ದಾರೆ.
ಭಾರತ-ನೆದರ್ಲೆಂಡ್ಸ್ ಸಹಭಾಗಿತ್ವವು ಸಾಂಪ್ರದಾಯಿಕ ವಲಯಗಳಾದ ವ್ಯಾಪಾರ ಮತ್ತು ಹೂಡಿಕೆ, ಡಬ್ಲ್ಯುಎಎಚ್ (ಜಲ, ಕೃಷಿ, ಆರೋಗ್ಯ) ಕ್ಷೇತ್ರಗಳು, ಜನರ ನಡುವಿನ ಸಂಬಂಧಗಳಲ್ಲಿ ಗಣನೀಯವಾಗಿ ಗಾಢವಾಗಿದೆ ಮತ್ತು ಇತ್ತೀಚೆಗೆ ತಂತ್ರಜ್ಞಾನ, ನಾವೀನ್ಯತೆ, ರಕ್ಷಣೆ ಮತ್ತು ಭದ್ರತೆ, ನವೀಕರಿಸಬಹುದಾದ ಇಂಧನ, ಶಿಕ್ಷಣ ಮತ್ತು ಕಡಲ ಕ್ಷೇತ್ರದಂತಹ ಕಾರ್ಯತಂತ್ರದ ಕ್ಷೇತ್ರಗಳಿಗೆ ವಿಸ್ತರಿಸಿದೆ.
*****
(ಪ್ರಕಟಣೆ ಐ.ಡಿ.: 2230622)
ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Gujarati
,
Tamil
,
Telugu
,
Malayalam