ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ವೈವಿಧ್ಯಮಯ ಅಗತ್ಯಗಳು ಮತ್ತು ನೈಜ ಪ್ರಪಂಚದ ಸವಾಲುಗಳನ್ನು ಎದುರಿಸಲು 'ಇಂಡಿಯಾ AI ಮಿಷನ್' ರೂಪಿಸಲಾಗಿದೆ: ಶ್ರೀ ಎಸ್. ಕೃಷ್ಣನ್, ಕಾರ್ಯದರ್ಶಿ, MeitY
"ಅಲ್ಗಾರಿದಮ್ ಗಳಿಂದ ಫಲಿತಾಂಶಗಳವರೆಗೆ: ಜನರಿಗಾಗಿ ಕಾರ್ಯನಿರ್ವಹಿಸುವ AI ನಿರ್ಮಾಣ" ಅಧಿವೇಶನದಲ್ಲಿ ಮಾತನಾಡಿದ MeitY ಕಾರ್ಯದರ್ಶಿ
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯು AI ಬಳಸಿ ನಾವು ರಚಿಸಬಹುದಾದ ಪ್ರಭಾವಶಾಲಿ ಅನ್ವಯಿಕೆಗಳನ್ನು ಕಂಡುಕೊಳ್ಳುವ ಬಗ್ಗೆ ಇದೆ: ಶ್ರೀ ಎಸ್. ಕೃಷ್ಣನ್
ಎಕ್ಸ್ ಪೋದಲ್ಲಿರುವ 600ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳು ಮತ್ತು ಕಂಪನಿಗಳಿಗೆ ಭೇಟಿ ನೀಡಿ, AI ಬಳಕೆಯಾಗುತ್ತಿರುವ ವಿವಿಧ ಕ್ಷೇತ್ರಗಳನ್ನು ವೀಕ್ಷಿಸುವಂತೆ ಪಾಲ್ಗೊಂಡವರಿಗೆ MeitY ಕಾರ್ಯದರ್ಶಿ ಕರೆ
ಪ್ರಕಟಣಾ ದಿನಾಂಕ:
17 FEB 2026 3:42PM by PIB Bengaluru
'ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026'ರ ಎರಡನೇ ದಿನವು ಮಾನವ ಕೇಂದ್ರಿತ ಕೃತಕ ಬುದ್ಧಿಮತ್ತೆ (AI) ಮತ್ತು ಸಾರ್ವಭೌಮ ತಾಂತ್ರಿಕ ಸಾಮರ್ಥ್ಯದ ದ್ವಿಮುಖ ಅಗತ್ಯಗಳನ್ನು ಪರಿಶೀಲಿಸುವ ಪ್ರಭಾವಶಾಲಿ ಅಧಿವೇಶನದೊಂದಿಗೆ ಆರಂಭವಾಯಿತು.

ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆ 2026'ರಲ್ಲಿ ನಡೆದ "ಅಲ್ಗಾರಿದಮ್ ಗಳಿಂದ ಫಲಿತಾಂಶಗಳವರೆಗೆ: ಜನರಿಗಾಗಿ ಕಾರ್ಯನಿರ್ವಹಿಸುವ AI ನಿರ್ಮಾಣ" (From Algorithms to Outcomes: Building AI that Works for People) ಎಂಬ ಅಧಿವೇಶನವು, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಸಾರ್ವಜನಿಕ ಸೇವೆ ಮತ್ತು ನಾಗರಿಕರ ಕಲ್ಯಾಣದಲ್ಲಿ ಅಳೆಯಬಹುದಾದ ಸುಧಾರಣೆಗಳನ್ನು ತರುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಿತು. ಕಂಪ್ಯೂಟ್, ಮಾದರಿಗಳು ಮತ್ತು ದತ್ತಾಂಶಗಳು ಅಂತಿಮವಾಗಿ ಉತ್ಪಾದಕತೆಯನ್ನು ಹೆಚ್ಚಿಸುವ, ಆಡಳಿತವನ್ನು ಬಲಪಡಿಸುವ ಮತ್ತು ನಾಗರಿಕರಿಗೆ ಸ್ಪಷ್ಟ ಪ್ರಯೋಜನಗಳನ್ನು ತಲುಪಿಸುವ ಅನ್ವಯಿಕೆಗಳಿಗೆ ಹೇಗೆ ಕಾರಣವಾಗಬೇಕು ಎಂಬುದರ ಕುರಿತು ಚರ್ಚೆ ಕೇಂದ್ರೀಕೃತವಾಗಿತ್ತು.

ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಕಾರ್ಯದರ್ಶಿ ಎಸ್. ಕೃಷ್ಣನ್ ಅವರು, ಇಂಡಿಯಾ AI ಮಿಷನ್ ವಿವಿಧ ಅಗತ್ಯಗಳು ಮತ್ತು ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸಲು ರೂಪಿತವಾಗಿದೆ ಎಂದು ಹೇಳಿದರು. ಇಂಡಿಯಾ AI ಇಂಪ್ಯಾಕ್ಟ್ ಸಮ್ಮಿಟ್ ಎನ್ನುವುದು AI ಬಳಸಿ ನಾವು ರಚಿಸಬಹುದಾದ ಪ್ರಭಾವಶಾಲಿ ಅನ್ವಯಿಕೆಗಳನ್ನು ಕಂಡುಕೊಳ್ಳುವುದೇ ಆಗಿದೆ ಎಂದು ಅವರು ಒತ್ತಿ ಹೇಳಿದರು. ಕಾರ್ಯದರ್ಶಿಯವರು ಹೀಗೆ ಅಭಿಪ್ರಾಯಪಟ್ಟರು, "ನಾವು ಕಂಪ್ಯೂಟ್, ಮಾದರಿಗಳು ಮತ್ತು ಡೇಟಾವನ್ನು ಒಂದೇ ಒಂದು ಕಾರಣಕ್ಕಾಗಿ ಒದಗಿಸುತ್ತಿದ್ದೇವೆ, ಅದೇನೆಂದರೆ ನೈಜ ಪ್ರಭಾವ ಬೀರುವ ಅನ್ವಯಿಕೆಗಳನ್ನು ನಿರ್ಮಿಸುವುದು. AI ಅಬ್ಬರವನ್ನು ಮೀರಿ ಯಶಸ್ವಿಯಾಗುತ್ತದೆಯೇ ಎಂಬುದು ಸಂಪೂರ್ಣವಾಗಿ ಅದು ಜನರ ಜೀವನವನ್ನು ಸುಧಾರಿಸುವ ಪರಿಹಾರಗಳನ್ನು ನೀಡುತ್ತದೆಯೇ ಎಂಬುದರ ಮೇಲೆ ಅವಲಂಬಿತವಾಗಿದೆ. ನೀವು ಪ್ರದರ್ಶನವನ್ನು (expo) ವೀಕ್ಷಿಸಿದರೆ, ಆರೋಗ್ಯ ರಕ್ಷಣೆ, ಕೃಷಿ, ಶಿಕ್ಷಣ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಸ್ಟಾರ್ಟ್-ಅಪ್ ಗಳನ್ನು ನೀವು ನೋಡುತ್ತೀರಿ. ಅಲ್ಲಿಂದಲೇ ಪ್ರಭಾವವು ಉಂಟಾಗುತ್ತದೆ. ಸರ್ಕಾರಗಳ ಬಳಿ ಎಂದಿಗೂ ಸಾಕಷ್ಟು ಶಿಕ್ಷಕರು, ವೈದ್ಯರು ಅಥವಾ ನ್ಯಾಯಾಧೀಶರು ಇರುವುದಿಲ್ಲ, ಆದರೆ AI ಉತ್ಪಾದಕತೆಯನ್ನು ಹೆಚ್ಚಿಸಬಲ್ಲದಾದರೆ, ಸೇವೆಯ ಗುಣಮಟ್ಟವು ನಾಟಕೀಯವಾಗಿ ಸುಧಾರಿಸುತ್ತದೆ. ಯಾವುದು ಕೆಲಸ ಮಾಡುತ್ತದೆ ಎಂಬುದನ್ನು ಆಯ್ಕೆ ಮಾಡುವುದು, ಅದನ್ನು ಜವಾಬ್ದಾರಿಯುತವಾಗಿ ವಿಸ್ತರಿಸುವುದು, ಗೌಪ್ಯತೆಯನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಹಣವು ಅಳೆಯಬಹುದಾದ ಫಲಿತಾಂಶಗಳನ್ನು ಸೃಷ್ಟಿಸುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಮುಂದಿರುವ ಸವಾಲಾಗಿದೆ.” ಪ್ರದರ್ಶನದಲ್ಲಿರುವ 600ಕ್ಕೂ ಹೆಚ್ಚು ಸ್ಟಾರ್ಟ್-ಅಪ್ ಗಳು ಮತ್ತು ಕಂಪನಿಗಳಿಗೆ ಭೇಟಿ ನೀಡುವಂತೆ ಮತ್ತು AI ಬಳಕೆಯಾಗುತ್ತಿರುವ ಕ್ಷೇತ್ರಗಳನ್ನು ವೀಕ್ಷಿಸುವಂತೆ ಪಾಲ್ಗೊಂಡವರಿಗೆ ಮನವಿ ಮಾಡುವ ಮೂಲಕ ಅವರು ಮಾತು ಮುಗಿಸಿದರು.
ಈ ಅಧಿವೇಶನದಲ್ಲಿ ಜೆ-ಪಾಲ್ (J-PAL) ನ ಜಾಗತಿಕ ಕಾರ್ಯನಿರ್ವಾಹಕ ನಿರ್ದೇಶಕ ಇಕ್ಬಾಲ್ ಸಿಂಗ್ ಧಲಿವಾಲ್ ಮತ್ತು ಚಿಕಾಗೋ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಮೈಕೆಲ್ ಕ್ರೆಮರ್ ಸೇರಿದಂತೆ ಇತರ ನೀತಿ ನಿರೂಪಕರು ಮತ್ತು ಕ್ಷೇತ್ರದ ಮುಖಂಡರು ಭಾಗವಹಿಸಿದ್ದರು.
ಜೆ-ಪಾಲ್ ಜಾಗತಿಕ ಕಾರ್ಯನಿರ್ವಾಹಕ ನಿರ್ದೇಶಕ ಇಕ್ಬಾಲ್ ಸಿಂಗ್ ಧಲಿವಾಲ್ ಅವರು ಕಟ್ಟುನಿಟ್ಟಾದ ಮೌಲ್ಯಮಾಪನದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ “ನೀವು ಅಭಿವೃದ್ಧಿ ವಲಯದಲ್ಲಿ ಸಾಕಷ್ಟು ಸಮಯ ಕಳೆದಿದ್ದರೆ, ಅನೇಕ 'ಮ್ಯಾಜಿಕ್ ಪರಿಹಾರಗಳು' (silver bullets) ಬಂದು ಹೋಗುವುದನ್ನು ನೀವು ನೋಡಿರುತ್ತೀರಿ. ಒಂದು ತಂತ್ರಜ್ಞಾನವು ಸೈದ್ಧಾಂತಿಕವಾಗಿ ಅಥವಾ ಪ್ರಯೋಗಾಲಯದ ಪರಿಸರದಲ್ಲಿ ಅದ್ಭುತವಾಗಿ ಕಾಣಿಸಬಹುದು, ಆದರೆ ಅದು ವಾಸ್ತವದ ನೆಲೆಗಟ್ಟಿಗೆ ಬಂದಾಗ ವಿಫಲವಾಗಬಹುದು. ಅದಕ್ಕಾಗಿಯೇ ಪುರಾವೆಗಳು ಬಹಳ ಮುಖ್ಯವಾಗುತ್ತವೆ. AI ಕೆಲಸ ಮಾಡುತ್ತದೆಯೇ ಎಂದು ಮಾತ್ರವಲ್ಲದೆ, ಅದು ಯಾರಿಗಾಗಿ ಕೆಲಸ ಮಾಡುತ್ತದೆ, ಯಾವ ಸಂದರ್ಭಗಳಲ್ಲಿ ಮತ್ತು ಎಂತಹ ಫಲಿತಾಂಶಗಳೊಂದಿಗೆ ಕೆಲಸ ಮಾಡುತ್ತದೆ ಎಂದು ನಾವು ಕೇಳಬೇಕಾಗಿದೆ. ಕಟ್ಟುನಿಟ್ಟಾದ ಮೌಲ್ಯಮಾಪನವಿಲ್ಲದೆ, ನಾವು ಕೇವಲ ಉತ್ಸಾಹವನ್ನೇ ಪ್ರಭಾವ ಎಂದು ತಪ್ಪಾಗಿ ಭಾವಿಸುವ ಅಪಾಯವಿದೆ. AI ಅಗಾಧವಾದ ಸಾಮರ್ಥ್ಯವನ್ನು ಹೊಂದಿದೆ, ಆದರೆ ಅದನ್ನು ಕ್ಷೇತ್ರ ಮಟ್ಟದಲ್ಲಿ ಪರೀಕ್ಷಿಸಿ, ಜನರು ಮತ್ತು ಫಲಿತಾಂಶಗಳನ್ನು ಕೇಂದ್ರವಾಗಿಟ್ಟುಕೊಂಡು ಜವಾಬ್ದಾರಿಯುತವಾಗಿ ವಿಸ್ತರಿಸಿದಾಗ ಮಾತ್ರ ಅದು ಸಾಧ್ಯವಾಗುತ್ತದೆ." ಎಂದು ತಿಳಿಸಿದರು.
ಚಿಕಾಗೊ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಮತ್ತು ಜೆ-ಪಾಲ್ (J-PAL) ಪ್ರತಿನಿಧಿ ಮೈಕೆಲ್ ಕ್ರೆಮರ್ ಅವರು ಮಾತನಾಡಿ, "ಸಂಚಾರ ನಿಯಮಗಳ ಜಾರಿ, ಚಾಲನಾ ಪರವಾನಗಿಯ ಸ್ವಯಂಚಾಲಿತ ಪರೀಕ್ಷೆ, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ AI (AI) ಬೀರುತ್ತಿರುವ ಆರಂಭಿಕ ಪ್ರಭಾವದ ಪುರಾವೆಗಳನ್ನು ನಾವು ನೋಡುತ್ತಿದ್ದೇವೆ. ಇದರಲ್ಲಿ ವೈಯಕ್ತಿಕ ಕಲಿಕೆಯ ಕ್ರಮವು ಸೇರಿದ್ದು, ವಾರಕ್ಕೆ ಕೇವಲ ಒಂದು ಗಂಟೆಯ ಬಳಕೆಯಿಂದ ವಿದ್ಯಾರ್ಥಿಗಳ ಕಲಿಕೆಯ ವೇಗವು ದ್ವಿಗುಣಗೊಂಡಿದೆ. ಆದರೆ ಕೇವಲ ತಂತ್ರಜ್ಞಾನವೊಂದೇ ಸಾಲದು. ಸರ್ಕಾರಿ ಸೇವೆಗಳನ್ನು ಸುಧಾರಿಸುವುದು ಯಾವಾಗಲೂ ಖಾಸಗಿ ವಲಯದ ಪ್ರೋತ್ಸಾಹದಾಯಕ ಮಾರುಕಟ್ಟೆಯಾಗಿರುವುದಿಲ್ಲ, ಹಾಗಾಗಿ ಇಲ್ಲಿ ದಾನಿಗಳು ಮತ್ತು ಸರ್ಕಾರದ ಪಾತ್ರ ಮುಖ್ಯವಾಗಿರುತ್ತದೆ. ಸಾರ್ವಜನಿಕ ವ್ಯವಸ್ಥೆಗಳಲ್ಲಿ ಇವುಗಳನ್ನು ಅಳವಡಿಸಿಕೊಳ್ಳುವುದು ಕಷ್ಟಕರ ಮತ್ತು ಸಂಗ್ರಹಣಾ ಪ್ರಕ್ರಿಯೆಯು ಇಲ್ಲಿ ಬಹಳ ಮುಖ್ಯವಾಗುತ್ತದೆ. ರಾಜ್ಯಗಳು ಒಂದರಿಂದ ಮತ್ತೊಂದು ಕಲಿಯಲು ಮೌಲ್ಯಮಾಪನವು ನಿರ್ಣಾಯಕವಾಗಿದೆ. AI ಅಗಾಧ ಸಾಮರ್ಥ್ಯವನ್ನು ಹೊಂದಿದೆ, ಆದರೆ ಅದನ್ನು ಸಾಕಾರಗೊಳಿಸಲು ಪುರಾವೆಗಳು, ವ್ಯವಸ್ಥಿತ ಬದಲಾವಣೆ ಮತ್ತು ಎಚ್ಚರಿಕೆಯ ಅನುಷ್ಠಾನದ ಅಗತ್ಯವಿದೆ," ಎಂದು ಸೇರಿಸಿದರು.
ಈ ಅಧಿವೇಶನವು ಶೃಂಗಸಭೆಯ ವಿಶಾಲ ಕಾರ್ಯಸೂಚಿಯ ಪ್ರಮುಖ ಭಾಗವಾಗಿತ್ತು. ಇದು AI ಸಾಮರ್ಥ್ಯಗಳನ್ನು ಸಾರ್ವಜನಿಕವಾಗಿ ವಿಸ್ತರಿಸಬಹುದಾದ ಅನ್ವಯಿಕೆಗಳಾಗಿ ಪರಿವರ್ತಿಸುವ ಕುರಿತು ಚರ್ಚಿಸಲು ನೀತಿ ನಿರೂಪಕರು, ಸಂಶೋಧಕರು ಮತ್ತು ಉದ್ಯಮದ ಮುಖಂಡರನ್ನು ಒಂದೆಡೆ ಸೇರಿಸಿತು. AI-ಚಾಲಿತ ಸೇವಾ ವಿತರಣೆಯನ್ನು ಮುಂದುವರಿಸುವಲ್ಲಿ ವ್ಯವಸ್ಥಿತ ಅನುಷ್ಠಾನ ಮತ್ತು ವಿವಿಧ ವಲಯಗಳ ನಡುವಿನ ಸಹಯೋಗದ ಪ್ರಾಮುಖ್ಯತೆಯನ್ನು ಚರ್ಚೆಗಳು ಉಲ್ಲೇಖಿಸಿದವು.
*****
(ಪ್ರಕಟಣೆ ಐ.ಡಿ.: 2229403)
ವಿಸಿಟರ್ ಕೌಂಟರ್ : 4