ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಫೆಬ್ರವರಿ 13ರಂದು ʻಸೇವಾ ತೀರ್ಥʼ ಮತ್ತು ʻಕರ್ತವ್ಯ ಭವನ-1 & 2ʼ ಕಟ್ಟಡಗಳನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ


ಈ ಉದ್ಘಾಟನೆಯು ಭಾರತದ ಆಡಳಿತ ವಾಸ್ತುಶಿಲ್ಪದಲ್ಲಿ ಪರಿವರ್ತನೆಯ ಮೈಲುಗಲ್ಲಾಗಿದೆ

ʻಸೇವಾ ತೀರ್ಥʼವು ಪ್ರಧಾನ ಮಂತ್ರಿಗಳ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಹಾಗೂ ಸಂಪುಟ ಸಚಿವಾಲಯವನ್ನು ಒಳಗೊಂಡಿರಲಿದೆ

ʻಕರ್ತವ್ಯ ಭವನ-1 & 2’ ಕಟ್ಟಡವು ಹಣಕಾಸು, ರಕ್ಷಣೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳನ್ನು ಹೊಂದಿರಲಿದೆ

ಪ್ರಕಟಣಾ ದಿನಾಂಕ: 12 FEB 2026 12:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಫೆಬ್ರವರಿ 13ರಂದು ಮಧ್ಯಾಹ್ನ 1:30 ಗಂಟೆ ಸುಮಾರಿಗೆ ʻಸೇವಾ ತೀರ್ಥʼ ಕಟ್ಟಡ ಸಂಕೀರ್ಣದ ನಾಮಫಲಕವನ್ನು ಅನಾವರಣಗೊಳಿಸಲಿದ್ದಾರೆ. ನಂತರ ಪ್ರಧಾನಮಂತ್ರಿಯವರು ʻಸೇವಾ ತೀರ್ಥʼ ಮತ್ತು ʻಕರ್ತವ್ಯ ಭವನ-1 & 2’ ಕಟ್ಟಡಗಳಣ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ. ಸಂಜೆ 6 ಗಂಟೆಗೆ ʻಸೇವಾ ತೀರ್ಥʼದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ.

ಈ ಉದ್ಘಾಟನೆಯು ಭಾರತದ ಆಡಳಿತ ವಾಸ್ತುಶಿಲ್ಪದಲ್ಲಿ ಒಂದು ಪರಿವರ್ತನೆಯ ಮೈಲಿಗಲ್ಲಾಗಿದೆ. ಆಡಳಿತದಲ್ಲಿ ಆಧುನಿಕ, ದಕ್ಷ, ಜನ-ಕೇಂದ್ರಿತ ಹಾಗೂ ಎಲ್ಲರಿಗೂ ಪ್ರವೇಶ ಸಾಧ್ಯವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ಬದ್ಧತೆಯನ್ನು ಇದು ಪ್ರತಿಬಿಂಬಿಸುತ್ತದೆ.

ಹಲವು ದಶಕಗಳಿಂದ, ಹಲವಾರು ಪ್ರಮುಖ ಸರ್ಕಾರಿ ಕಚೇರಿಗಳು ಮತ್ತು ಸಚಿವಾಲಯಗಳು ʻಸೆಂಟ್ರಲ್ ವಿಸ್ಟಾʼ ಪ್ರದೇಶದ ಅನೇಕ ಸ್ಥಳಗಳಲ್ಲಿ ಚದುರಿಹೋದ ಮತ್ತು ಹಳೆಯ ಮೂಲಸೌಕರ್ಯಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿದ್ದವು. ಇದು ಕಾರ್ಯಾಚರಣೆಯಲ್ಲಿ ಅಸಮರ್ಥತೆಗಳು, ಸಮನ್ವಯ ಸವಾಲುಗಳು, ಹೆಚ್ಚುತ್ತಿರುವ ನಿರ್ವಹಣಾ ವೆಚ್ಚಗಳು ಮತ್ತು ಅದಕ್ಷ ಕೆಲಸದ ವಾತಾವರಣಕ್ಕೆ ಕಾರಣವಾಗಿತ್ತು. ಹೊಸ ಕಟ್ಟಡ ಸಂಕೀರ್ಣಗಳು ಆಧುನಿಕ, ಭವಿಷ್ಯ ಸನ್ನದ್ಧ ವ್ಯವಸ್ಥೆಗಳಲ್ಲಿ ಆಡಳಿತಾತ್ಮಕ ಕಾರ್ಯಗಳನ್ನು ಬೆಸೆಯುವ ಮೂಲಕ ಈ ಸಮಸ್ಯೆಗಳನ್ನು ಪರಿಹರಿಸುತ್ತವೆ.

ʻಸೇವಾ ತೀರ್ಥʼವು ಪ್ರಧಾನ ಮಂತ್ರಿಗಳ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ, ಸಂಪುಟ ಸಚಿವಾಲಯವನ್ನು ಹೊಂದಿರಲಿದೆ. ಇವೆಲ್ಲವೂ ಈ ಹಿಂದೆ ಬೇರೆ ಬೇರೆ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು.

ʻಕರ್ತವ್ಯ ಭವನ-1 & 2’ ಕಟ್ಟಡವು ಹಣಕಾಸು ಸಚಿವಾಲಯ, ರಕ್ಷಣಾ ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಶಿಕ್ಷಣ ಸಚಿವಾಲಯ, ಸಂಸ್ಕೃತಿ ಸಚಿವಾಲಯ, ಕಾನೂನು ಮತ್ತು ನ್ಯಾಯ ಸಚಿವಾಲಯ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹಾಗೂ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಸೇರಿದಂತೆ ಹಲವಾರು ಪ್ರಮುಖ ಸಚಿವಾಲಯಗಳಿಗೆ ಅವಕಾಶ ಕಲ್ಪಿಸುತ್ತದೆ.

ಎರಡೂ ಕಟ್ಟಡ ಸಂಕೀರ್ಣಗಳು ಡಿಜಿಟಲ್ ಸಂಯೋಜಿತ ಕಚೇರಿಗಳು, ರಚನಾತ್ಮಕ ಸಾರ್ವಜನಿಕ ಒಡನಾಟ ವಲಯಗಳು ಮತ್ತು ಕೇಂದ್ರೀಕೃತ ಸ್ವಾಗತಕೇಂದ್ರ ಸೌಲಭ್ಯಗಳನ್ನು ಹೊಂದಿವೆ. ಈ ವೈಶಿಷ್ಟ್ಯಗಳು ಸಹಯೋಗ, ದಕ್ಷತೆ, ತಡೆರಹಿತ ಆಡಳಿತ, ಸುಧಾರಿತ ನಾಗರಿಕ ತೊಡಗಿಸಿಕೊಳ್ಳುವಿಕೆ ಮತ್ತು ಸುಧಾರಿತ ಉದ್ಯೋಗಿಗಳ ಯೋಗಕ್ಷೇಮವನ್ನು ಉತ್ತೇಜಿಸುತ್ತವೆ. 4-ಸ್ಟಾರ್ ʻಗೃಹʼ ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಈ ಕಟ್ಟಡ ಸಂಕೀರ್ಣವು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳು, ಜಲ ಸಂರಕ್ಷಣಾ ಕ್ರಮಗಳು, ತ್ಯಾಜ್ಯ ನಿರ್ವಹಣಾ ಪರಿಹಾರಗಳು ಮತ್ತು ಉನ್ನತ ಕಾರ್ಯಕ್ಷಮತೆಯ ಕಟ್ಟಡ ಪರಿಸರವನ್ನು ಒಳಗೊಂಡಿವೆ. ಈ ಕ್ರಮಗಳು ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಪರಿಸರದ ಮೇಲೆ ಪರಿಣಾಮವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಕಟ್ಟಡ ಸಂಕೀರ್ಣಗಳು ʻಸ್ಮಾರ್ಟ್ ಪ್ರವೇಶʼ ನಿಯಂತ್ರಣ ವ್ಯವಸ್ಥೆಗಳು, ಕಣ್ಗಾವಲು ಜಾಲಗಳು ಮತ್ತು ಸುಧಾರಿತ ತುರ್ತು ಪ್ರತಿಕ್ರಿಯೆ ಮೂಲಸೌಕರ್ಯಗಳಂತಹ ಸಮಗ್ರ ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸಹ ಒಳಗೊಂಡಿವೆ. ಇದು ಅಧಿಕಾರಿಗಳು ಮತ್ತು ಸಂದರ್ಶಕರಿಗೆ ಸುರಕ್ಷಿತ ಮತ್ತು ಸುಗಮ ಪ್ರವೇಶದ ವಾತಾವರಣವನ್ನು ಖಾತ್ರಿಪಡಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2226910) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , Marathi , हिन्दी , Bengali , Manipuri , Gujarati , Odia , Tamil , Telugu , Malayalam