ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪರೀಕ್ಷಾ ಪೇ ಚರ್ಚಾ 2026ರ ಎರಡನೇ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೊಯಮತ್ತೂರು, ರಾಯ್‌ಪುರ, ದೇವಮೊಗ್ರಾ ಮತ್ತು ಗುವಾಹಟಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು


ವಿದ್ಯಾರ್ಥಿಗಳು ಉದ್ಯಮದ ವೃತ್ತಿಪರರನ್ನು ಸಂಪರ್ಕಿಸಬೇಕು ಮತ್ತು ಅವರು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು: ಪ್ರಧಾನಮಂತ್ರಿ

ಅಧ್ಯಯನ ಮತ್ತು ಕಲೆಯನ್ನು ಬೇರೆ ಬೇರೆಯಾಗಿ ನೋಡಬೇಡಿ: ಪ್ರಧಾನಮಂತ್ರಿ

ಅಧ್ಯಯನದಿಂದ ಉಂಟಾಗುವ ಒತ್ತಡ ಮತ್ತು ಸುಸ್ತನ್ನು ಹೋಗಲಾಡಿಸಲು ನೀವು ಕಲೆಯನ್ನು ಬಳಸಬಹುದು: ಪ್ರಧಾನಮಂತ್ರಿ

ರಸ್ತೆಗಳಲ್ಲಿ ಕಸ ಎಸೆಯಬೇಡಿ ಅಥವಾ ಉಗುಳಬೇಡಿ, ಕೆಂಪು ದೀಪದ ಸಂಕೇತವಿದ್ದಾಗ ವಾಹನ ನಿಲ್ಲಿಸಿ ಮತ್ತು ಆಹಾರವನ್ನು ವ್ಯರ್ಥ ಮಾಡಬೇಡಿ ಎಂದು ಪ್ರಧಾನಮಂತ್ರಿ ನಾಗರಿಕರಿಗೆ ಮನವಿ ಮಾಡಿದರು.

ಪ್ರತಿಯೊಂದು ಸಣ್ಣ ಹೆಜ್ಜೆಯೂ 2047 ರ ವೇಳೆಗೆ ವಿಕಸಿತ ಭಾರತವನ್ನು ನಿರ್ಮಿಸುತ್ತದೆ: ಪ್ರಧಾನಮಂತ್ರಿ

ಶಿಸ್ತು ಯಶಸ್ಸಿಗೆ ಪ್ರಮುಖ ಆಧಾರ, ಸ್ಫೂರ್ತಿಯು ಅದಕ್ಕೆ ಹೆಚ್ಚಿನ ಮೌಲ್ಯವನ್ನು ಸೇರಿಸುತ್ತದೆ: ಪ್ರಧಾನಮಂತ್ರಿ

ತಂತ್ರಜ್ಞಾನಕ್ಕೆ ಗುಲಾಮರಾಗಬೇಡಿ: ಪ್ರಧಾನಮಂತ್ರಿ

ತಂತ್ರಜ್ಞಾನವು ಒಬ್ಬ ಉತ್ತಮ ಶಿಕ್ಷಕ, ಅದನ್ನು ಮುಕ್ತವಾಗಿ ಸ್ವೀಕರಿಸಿ: ಪ್ರಧಾನಮಂತ್ರಿ

ಪ್ರವಾಸ ಎಂದರೆ ಕೇವಲ ಸ್ಥಳಗಳನ್ನು ನೋಡುವುದಲ್ಲ, ಬದಲಿಗೆ ಒಬ್ಬ ವಿದ್ಯಾರ್ಥಿಯಂತೆ ಅವುಗಳನ್ನು ಅರ್ಥಮಾಡಿಕೊಳ್ಳುವುದು: ಪ್ರಧಾನಮಂತ್ರಿ

ಭಾರತವು ಅದ್ಭುತವಾಗಿದೆ - ಪ್ರಯಾಣಿಸಿ ಮತ್ತು ಅನ್ವೇಷಿಸಿ: ಪ್ರಧಾನಮಂತ್ರಿ

ನೀವು ಏನನ್ನೇ ಅಧ್ಯಯನ ಮಾಡಿದರೂ ಅದು ಎಂದಿಗೂ ವ್ಯರ್ಥವಾಗುವುದಿಲ್ಲ, ಅದು ನಿಮ್ಮ ಮನಸ್ಸಿನಲ್ಲಿ ಸಂಗ್ರಹವಾಗಿರುತ್ತದೆ: ಪ್ರಧಾನಮಂತ್ರಿ

ಓದಿನಲ್ಲಿ ಹಿಂದುಳಿದವರೊಂದಿಗೆ ಸ್ನೇಹ ಬೆಳೆಸಿ ಮತ್ತು ಅವರಿಗೆ ಕಲಿಯಲು ಸಹಾಯ ಮಾಡಿ: ಪ್ರಧಾನಮಂತ್ರಿ

ಕ್ರೀಡೆಯನ್ನು ಜೀವನದ ಭಾಗವಾಗಿಸಿಕೊಳ್ಳುವುದು ಮುಖ್ಯ: ಪ್ರಧಾನಮಂತ್ರಿ

ಒಬ್ಬ ನಾಯಕನಾಗಲು, ಸ್ವತಃ ಮುಂದಾಳತ್ವ ವಹಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ: ಪ್ರಧಾನಮಂತ್ರಿ

ಒಬ್ಬ ಉತ್ತಮ ನಾಯಕನು ತನ್ನ ಆಲೋಚನೆಗಳನ್ನು ಸ್ಪಷ್ಟವಾಗಿ ಮತ್ತು ಪರಿಣಾಮಕಾರಿಯಾಗಿ ಸಂವಹನ ಮಾಡಬೇಕು: ಪ್ರಧಾನಮಂತ್ರಿ

ಬಲವಾದ ಮೂಲಸೌಕರ್ಯವು ದೀರ್ಘಕಾಲೀನ ಅಭಿವೃದ್ಧಿಗೆ ಅಡಿಪಾಯವಾಗಿದೆ: ಪ್ರಧಾನಮಂತ್ರಿ

ಕೇವಲ ಓದುವುದಲ್ಲದೆ, ಬರೆಯುವ ಮೂಲಕವೂ ಅಭ್ಯಾಸ ಮಾಡಿ: ಪ್ರಧಾನಮಂತ್ರಿ

ಕೇವಲ ಯಶಸ್ಸನ್ನು ನೋಡಿ ಮರುಳಾಗಬೇಡಿ, ಮಹಾನ್ ವ್ಯಕ್ತಿಗಳ ಸಾಮಾನ್ಯ ಆರಂಭದಿಂದ ಕಲಿಯಿರಿ: ಪ್ರಧಾನಮಂತ್ರಿ

ಭಾರತದ ಪ್ರಗತಿಯು ಅದರ ಬುಡಕಟ್ಟು ಸಮುದಾಯಗಳಿಂದ ಸಮೃದ್ಧವಾಗಿದೆ: ಪ್ರಧಾನಮಂತ್ರಿ

ಜೀವನದಲ್ಲಿ ಎಂದಿಗೂ ಒಂದೇ ಕಡೆ ಸ್ಥಿರವಾಗಬೇಡಿ, ಯಾವಾಗಲೂ ಹೆಚ್ಚಿನ ಸಾಧನೆಗಾಗಿ ಶ್ರಮಿಸಿ: ಪ್ರಧಾನಮಂತ್ರಿ

ನಮ್ಮ ಬಗ್ಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳುವುದು ಮುಖ್ಯ: ಪ್ರಧಾನಮಂತ್ರಿ

ಪ್ರತಿಯೊಬ್ಬರೂ ದಿನಕ್ಕೆ ಒಮ್ಮೆಯಾದರೂ ಉಸಿರಾಟದ ವ್ಯಾಯಾಮವನ್ನು ಮಾಡಬೇಕು: ಪ್ರಧಾನಮಂತ್ರಿ

ಹೋಲಿಕೆಯಿಂದ ಒತ್ತಡಕ್ಕೆ ಒಳಗಾಗುವ ಬದಲು, ಇತರರಿಂದ ಕಲಿಯಲು ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಿ: ಪ್ರಧಾನಮಂತ್ರಿ

ಪೋಷಕರು ಮನೆಯಲ್ಲಿ ಹೋಲಿಕೆ ಮಾಡುವ ವಾತಾವರಣವನ್ನು ಪ್ರೋತ್ಸಾಹಿಸಬಾರದು: ಪ್ರಧಾನಮಂತ್ರಿ

ನಿಮಗಿಂತ ಉತ್ತಮವಾಗಿರುವ ಜನರಿಂದ ಕಲಿಯಿರಿ: ಪ್ರಧಾನಮಂತ್ರಿ

ಯಾವಾಗಲೂ ನಿಮ್ಮ ಮೇಲೆ ನೀವು ನಂಬಿಕೆ ಇಡಿ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 09 FEB 2026 1:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 'ಪರೀಕ್ಷಾ ಪೇ ಚರ್ಚಾ' 2026ರ 9ನೇ ಆವೃತ್ತಿಯ ಮುಂದುವರಿದ ಭಾಗವಾಗಿ ಇಂದು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಪರೀಕ್ಷಾ ಪೇ  ಚರ್ಚಾ 2026ರ ಎರಡನೇ ಸಂಚಿಕೆಯ ಅವಧಿಯಲ್ಲಿ ಪ್ರಧಾನಮಂತ್ರಿಯವರು ಕೊಯಮತ್ತೂರು, ರಾಯ್‌ಪುರ, ದೇವಮೊಗ್ರಾ ಮತ್ತು ಗುವಾಹಟಿಯ 'ಎಕ್ಸಾಮ್ ವಾರಿಯರ್ಸ್' (ಪರೀಕ್ಷಾ ಯೋಧರ) ಜೊತೆಗೆ ಅನೌಪಚಾರಿಕ ಸಂವಾದ ನಡೆಸಿದರು. 'ಪರೀಕ್ಷಾ ಪೇ ಚರ್ಚಾ'ದ ವಿಶೇಷ ಆವೃತ್ತಿಗೆ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಶ್ರೀ ಮೋದಿಯವರು, ಈ ಬಾರಿ ಕಾರ್ಯಕ್ರಮವನ್ನು ದೇಶದ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿದೆ ಎಂದು ಉಲ್ಲೇಖಿಸಿದರು.

ಕೊಯಮತ್ತೂರು ಆವೃತ್ತಿಯನ್ನು ಪ್ರಾರಂಭಿಸುತ್ತಾ, ತಮಿಳುನಾಡಿನ ವಿದ್ಯಾರ್ಥಿಗಳ ಶಕ್ತಿ ಮತ್ತು ಕುತೂಹಲವು ತಮ್ಮನ್ನು ಬಹಳವಾಗಿ ಪ್ರಭಾವಿತಗೊಳಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರಿಗೆ "ವಣಕ್ಕಂ" ಎಂದು ಶುಭ ಕೋರಿದ ಅವರು, ಲಘು ಮಾತುಕತೆಯಲ್ಲಿ ತೊಡಗಿಕೊಂಡರು. ವಿದ್ಯಾರ್ಥಿಗಳು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸುತ್ತಾ, ಪ್ರಧಾನಮಂತ್ರಿಯವರನ್ನು ಕಂಡಾಗ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ ಎಂದು ಹೇಳಿದರು; ಅವರು ಯಾವುದೋ ಅದ್ಧೂರಿ ಪ್ರವೇಶವನ್ನು ನಿರೀಕ್ಷಿಸಿದ್ದರು, ಆದರೆ ಪ್ರಧಾನಮಂತ್ರಿಯವರು ಅತ್ಯಂತ ಸರಳ, ವಿನಮ್ರ ಮತ್ತು ವಿನಯಶೀಲರಾಗಿ ಕಂಡುಬಂದರು. ಅವರ ಆಗಮನವು ತಮಗೆ ರೋಮಾಂಚನಗೊಳಿಸಿತು ಎಂದು ಒಬ್ಬ ವಿದ್ಯಾರ್ಥಿ ಹಂಚಿಕೊಂಡರು.

ಸ್ಟಾರ್ಟ್ ‌ಅಪ್ ‌ಗಳು ಮತ್ತು ಅಧ್ಯಯನಕ್ಕಾಗಿ ಪ್ರಧಾನಮಂತ್ರಿಯವರ ಮಂತ್ರ

ಕಳೆದ ಹಲವು ವರ್ಷಗಳಿಂದ ತಾವು 'ಪರೀಕ್ಷಾ ಪೇ ಚರ್ಚಾ' ಮೂಲಕ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿರುವುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇದು ಅವರಿಗೆ ಕಲಿಯುವ ಕಾರ್ಯಕ್ರಮವೇ ಹೊರತು ಬೋಧಿಸುವ ಕಾರ್ಯಕ್ರಮವಲ್ಲ ಎಂದು ತಿಳಿಸಿದ ಅವರು, ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲು ವಿದ್ಯಾರ್ಥಿಗಳನ್ನು ಆಹ್ವಾನಿಸಿದರು. ಸ್ಟಾರ್ಟ್ ಅಪ್ ಗಳ ಕುರಿತಾದ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಂತ್ರಜ್ಞಾನದಲ್ಲಿ ನಾವೀನ್ಯತೆ ಇರಲಿ ಅಥವಾ ಡ್ರೋನ್ ಗಳು ಅಥವಾ ವಿದ್ಯುತ್ ವ್ಯವಸ್ಥೆಗಳಂತಹ ಪ್ರಾಯೋಗಿಕ ಪರಿಹಾರಗಳಿರಲಿ, ಮೊದಲು ನಾವು ಏನು ಮಾಡಲು ಬಯಸುತ್ತೇವೆ ಎಂಬುದರ ಮೇಲೆ ಗಮನ ಹರಿಸಬೇಕು ಎಂದು ತಿಳಿಸಿದರು. ತಂತ್ರಜ್ಞಾನ ಅಥವಾ ಹಣಕಾಸು ಕ್ಷೇತ್ರದಲ್ಲಿ ನೈಪುಣ್ಯ ಹೊಂದಿರುವ ಸ್ನೇಹಿತರೊಂದಿಗೆ ಸಣ್ಣ ತಂಡಗಳನ್ನು ರಚಿಸಿಕೊಳ್ಳಲು ಅವರು ಸಲಹೆ ನೀಡಿದರು. ಉದ್ಯಮವನ್ನು ಪ್ರಾರಂಭಿಸಲು ಯಾವುದೇ ವಯಸ್ಸಿನ ಮಿತಿ ಇಲ್ಲ ಮತ್ತು ಸಣ್ಣ ಸ್ಟಾರ್ಟ್ ಅಪ್ ಗಳು ಕೂಡ ದೊಡ್ಡ ಪ್ರಭಾವ ಬೀರಬಲ್ಲವು ಎಂದು ಅವರು ಅಭಿಪ್ರಾಯಪಟ್ಟರು. ಒಂದು ವೇಳೆ ವಿಷಯದಲ್ಲಿ ನಿಜವಾದ ಆಸಕ್ತಿ ಇದ್ದರೆ ಅದು ಅತ್ಯಂತ ಒಳ್ಳೆಯ ಸಂಗತಿ ಎಂದು ಅವರು ಹೇಳಿದರು. ಅಸ್ತಿತ್ವದಲ್ಲಿರುವ ಸ್ಟಾರ್ಟ್ಅಪ್ಗಳಿಗೆ ಭೇಟಿ ನೀಡಲು, ಪ್ರಾಜೆಕ್ಟ್ ವರದಿಯನ್ನು ಸಿದ್ಧಪಡಿಸಲು ಮತ್ತು ಅದನ್ನು ಶಾಲಾ ಪ್ರಾಜೆಕ್ಟ್ ನಂತೆ ಪ್ರಾಮಾಣಿಕವಾಗಿ ಮಂಡಿಸಲು ಅವರು ಸಲಹೆ ನೀಡಿದರು, ಇದು ಮಾರ್ಗದರ್ಶನ ಮತ್ತು ಬೆಂಬಲವನ್ನು ಪಡೆಯಲು ಸಹಕಾರಿಯಾಗುತ್ತದೆ ಎಂದರು. ಹೇಗೆ ಮುಂದುವರಿಯಬೇಕು ಎಂಬುದರ ಕುರಿತು ಕ್ರಮೇಣ ಅಮೂಲ್ಯವಾದ ಜ್ಞಾನವನ್ನು ಪಡೆಯಬಹುದು ಎಂದು ಅವರು ಮಾತು ಮುಗಿಸಿದರು.

ಅಧ್ಯಯನ ಮತ್ತು ಆಸಕ್ತಿಯ ವಿಷಯಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಕುರಿತಾದ ಇನ್ನೊಬ್ಬ ವಿದ್ಯಾರ್ಥಿಯ ಆತಂಕವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮೋದಿಯವರು, ಎರಡೂ ಉಪಯುಕ್ತ ಮತ್ತು ಅವು ಒಂದಕ್ಕೊಂದು ಪೂರಕವಾಗಿರಬಲ್ಲವು ಎಂದು ಒತ್ತಿಹೇಳಿದರು. ವಿಜ್ಞಾನದ ಪ್ರಯೋಗಗಳೊಂದಿಗೆ ಕಲೆಯನ್ನು ಸಂಯೋಜಿಸುವ ಉದಾಹರಣೆಯನ್ನು ನೀಡಿದ ಅವರು, ಸೃಜನಶೀಲತೆಯು ಕಲಿಕೆಗೆ ಸಹಾಯ ಮಾಡುತ್ತದೆ ಮತ್ತು ಸುಸ್ತನ್ನು ಕಡಿಮೆ ಮಾಡುತ್ತದೆ ಎಂದರು. ಶಿಕ್ಷಣಕ್ಕೆ ಆದ್ಯತೆ ನೀಡುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ವೈಯಕ್ತಿಕ ಆಸಕ್ತಿಗಳಿಗಾಗಿ ಪ್ರತಿದಿನ ಅಥವಾ ವಾರಕ್ಕೊಮ್ಮೆ ಸಮಯವನ್ನು ಮೀಸಲಿಡಲು ಅವರು ಶಿಫಾರಸು ಮಾಡಿದರು.

ವಿಕಸಿತ ಭಾರತ ಮತ್ತು ವೋಕಲ್ ಫಾರ್ ಲೋಕಲ್ ಗೆ ಯುವಜನರ ಕೊಡುಗೆ

2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ (ವಿಕಸಿತ ಭಾರತ) ಬಗ್ಗೆ ಕೇಳಿದಾಗ, ಯುವ ವಿದ್ಯಾರ್ಥಿಗಳೂ ಈ ಕನಸನ್ನು ಹಂಚಿಕೊಳ್ಳುತ್ತಿರುವುದಕ್ಕೆ ಪ್ರಧಾನಮಂತ್ರಿಯವರು ಸಂತೋಷ ವ್ಯಕ್ತಪಡಿಸಿದರು. ಸಿಂಗಾಪುರವು ಒಂದು ಮೀನುಗಾರಿಕಾ ಗ್ರಾಮದಿಂದ ಹೇಗೆ ಪರಿವರ್ತನೆಗೊಂಡಿತು ಎಂಬುದನ್ನು ಉದಾಹರಿಸಿದ ಅವರು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಶಿಸ್ತಿನ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಬಗ್ಗೆ ಲೀ ಕುವಾನ್ ಯೂ ಅವರು ನೀಡಿದ್ದ ಒತ್ತು ಹಾಗೂ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದರು. ಕಸ ಹಾಕದಿರುವುದು, ಸಂಚಾರ ನಿಯಮಗಳನ್ನು ಪಾಲಿಸುವುದು, ಆಹಾರ ಪೋಲು ಮಾಡುವುದನ್ನು ತಪ್ಪಿಸುವುದು ಮತ್ತು ಸ್ಥಳೀಯ ಉತ್ಪನ್ನಗಳನ್ನು ಬೆಂಬಲಿಸುವಂತಹ ಸಣ್ಣ ಹೆಜ್ಜೆಗಳು ರಾಷ್ಟ್ರದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. "ವೋಕಲ್ ಫಾರ್ ಲೋಕಲ್" ಆಗಿರುವಂತೆ ಮತ್ತು ಮದುವೆಯಂತಹ ಸಮಾರಂಭಗಳನ್ನು ವಿದೇಶಗಳ ಬದಲಿಗೆ ಭಾರತದಲ್ಲೇ ಆಚರಿಸಲು ನಿರ್ಧರಿಸುವಂತೆ ಅವರು ಒತ್ತಿಹೇಳಿದರು. ಪ್ರತಿಯೊಬ್ಬ ನಾಗರಿಕನ ಸಣ್ಣ ಸಣ್ಣ ಕ್ರಮಗಳು ಒಟ್ಟಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಹಾಯ ಮಾಡುತ್ತವೆ ಎಂದು ಅವರು ತಿಳಿಸಿದರು. ದೊಡ್ಡ ಬದಲಾವಣೆಗಳಿಗಿಂತ ಸಣ್ಣ ಹೆಜ್ಜೆಗಳಿಗೆ ಪ್ರಧಾನಮಂತ್ರಿಯವರು ಪ್ರಾಮುಖ್ಯತೆ ನೀಡಿದ್ದನ್ನು ವಿದ್ಯಾರ್ಥಿಗಳು ಆಶ್ಚರ್ಯದಿಂದ ಗಮನಿಸಿದರು, ಮತ್ತು ಇವುಗಳೇ ಅತ್ಯಂತ ಮುಖ್ಯ ಎಂಬುದನ್ನು ಇದು ಪುನರುಚ್ಚರಿಸಿತು.

ಪ್ರೇರಣೆ ಅಥವಾ ಶಿಸ್ತು?

ಯಶಸ್ಸಿಗೆ ಪ್ರೇರಣೆ (Motivation) ಮುಖ್ಯವೋ ಅಥವಾ ಶಿಸ್ತು (Discipline) ಮುಖ್ಯವೋ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಜೀವನದಲ್ಲಿ ಎರಡೂ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಶಿಸ್ತು ಇಲ್ಲದಿದ್ದರೆ ಕೇವಲ ಸ್ಫೂರ್ತಿಯಿಂದ ಯಾವುದೇ ಪ್ರಯೋಜನವಿಲ್ಲ ಎಂದು ವಿವರಿಸಿದ ಅವರು, ನೆರೆಯವರ ಯಶಸ್ಸಿನಿಂದ ಸ್ಫೂರ್ತಿ ಪಡೆದರೂ ಮಳೆ ಬರುವ ಮೊದಲು ತನ್ನ ಹೊಲವನ್ನು ಸಿದ್ಧಪಡಿಸದ ರೈತನ ಉದಾಹರಣೆಯನ್ನು ನೀಡುತ್ತಾ, ಅಂತಹ ಸಂದರ್ಭದಲ್ಲಿ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ ಎಂದು ಅವರು ತಿಳಿಸಿದರು. ಶಿಸ್ತು ಎಂಬುದು ಅನಿವಾರ್ಯ, ಆದರೆ ಪ್ರೇರಣೆಯು "ಬಂಗಾರಕ್ಕೆ ಆಭರಣದ ಮೆರುಗು" ನೀಡಿದಂತೆ ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೈಲೈಟ್ ಮಾಡಿದರು. ಶಿಸ್ತು ಇಲ್ಲದಿದ್ದರೆ, ಪ್ರೇರಣೆಯು ಒಂದು ಹೊರೆಯಾಗುತ್ತದೆ ಮತ್ತು ನಿರಾಶೆಯನ್ನು ಉಂಟುಮಾಡುತ್ತದೆ ಎಂದು ಅವರು ಎಚ್ಚರಿಸಿದರು. ವರ್ಷಗಳಿಂದ ತಮ್ಮನ್ನು ಕಾಡುತ್ತಿದ್ದ ಪ್ರಶ್ನೆಗೆ ಇಷ್ಟು ಸ್ಪಷ್ಟವಾದ ಉತ್ತರ ಸಿಕ್ಕಿರುವುದಕ್ಕೆ ವಿದ್ಯಾರ್ಥಿಯೊಬ್ಬರು ಹರ್ಷ ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಮತ್ತು ಅದರ ಸೂಕ್ತ ಬಳಕೆ

ಕೃತಕ ಬುದ್ಧಿಮತ್ತೆಯ ಕುರಿತಾದ ಮತ್ತೊಂದು ಪ್ರಶ್ನೆಗೆ ಉತ್ತರಿಸುತ್ತಾ, ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಗಳಂತಹ ಹೊಸ ತಂತ್ರಜ್ಞಾನಗಳು ಬಂದಾಗಲೆಲ್ಲ ಪ್ರತಿ ಕಾಲಘಟ್ಟದಲ್ಲೂ ಆತಂಕಗಳು ಎದುರಾಗಿವೆ, ಆದರೆ ಭಯಪಡುವ ಅಗತ್ಯವಿಲ್ಲ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು. ತಂತ್ರಜ್ಞಾನವು ಮಾನವ ಜೀವನದ ಯಜಮಾನನಾಗಬಾರದು ಎಂದು ಒತ್ತಿಹೇಳಿದ ಅವರು, ಸಾಧನಗಳಿಗೆ ಗುಲಾಮರಾಗದಂತೆ ಎಚ್ಚರಿಸಿದರು. "ನಾನು ಗುಲಾಮನಾಗುವುದಿಲ್ಲ" ಎಂದು ಅವರು ದೃಢವಾಗಿ ಹೇಳಿದರು. AI ಅನ್ನು ಮಾರ್ಗದರ್ಶನ ಮತ್ತು ಮೌಲ್ಯವರ್ಧನೆಗಾಗಿ ಬಳಸಬೇಕೇ ಹೊರತು, ಅದನ್ನು ಕಲಿಕೆಗೆ ಪರ್ಯಾಯವಾಗಿ ಬಳಸಬಾರದು ಎಂದು ಅವರು ಸಲಹೆ ನೀಡಿದರು. ಸಾರಿಗೆ ವ್ಯವಸ್ಥೆಯು ಎತ್ತಿನ ಬಂಡಿಗಳಿಂದ ವಿಮಾನಗಳವರೆಗೆ ಬದಲಾದಂತೆ, ಉದ್ಯೋಗಗಳ ಸ್ವರೂಪವು ಯಾವಾಗಲೂ ವಿಕಸನಗೊಳ್ಳುತ್ತಿರುತ್ತದೆ, ಆದರೆ ಜೀವನವು ಮುಂದುವರಿಯುತ್ತದೆ ಎಂದು ಅವರು ಹೇಳಿದರು. ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವುದು, ಒಬ್ಬರ ಸ್ವಂತ ಸಾಮರ್ಥ್ಯಗಳನ್ನು ವಿಸ್ತರಿಸುವುದು ಮತ್ತು ಅದರ ಶಕ್ತಿಯನ್ನು ಕೆಲಸದಲ್ಲಿ ಸಂಯೋಜಿಸುವುದು ಭಯವಿಲ್ಲದೆ ಪ್ರಗತಿಯನ್ನು ಖಚಿತಪಡಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ವಿಕಸಿತ ಭಾರತದತ್ತ ಸಂಕಲ್ಪ

ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಹಂಚಿಕೊಳ್ಳುತ್ತಾ, ತಾವು ತುಂಬಾ ಭಾವುಕರಾಗಿದ್ದೇವೆ ಮತ್ತು ಗೌರವಿತರಾಗಿದ್ದೇವೆ ಎಂದು ಹೇಳಿದರು. ಅಲ್ಲದೆ ಪ್ರಧಾನಮಂತ್ರಿಯವರು ಒಬ್ಬ ನಾಯಕನಿಗಿಂತ ಹೆಚ್ಚಾಗಿ ಕುಟುಂಬದ ಸದಸ್ಯರಂತೆ ಕಂಡರು ಎಂದು ತಿಳಿಸಿದರು. ಕೊಯಮತ್ತೂರಿನ ವಿದ್ಯಾರ್ಥಿಗಳೊಂದಿಗೆ ತಮ್ಮ ಸಂವಾದವನ್ನು ಮುಕ್ತಾಯಗೊಳಿಸುತ್ತಾ, ಪ್ರಧಾನಮಂತ್ರಿ ಮೋದಿಯವರು ಕೊಯಮತ್ತೂರಿನ ಯುವಜನತೆ AI, ಸ್ಟಾರ್ಟ್ ಅಪ್ ಗಳು ಮತ್ತು ಭವಿಷ್ಯದ ತಂತ್ರಜ್ಞಾನಗಳ ಬಗ್ಗೆ ಹೆಚ್ಚಿನ ಅರಿವು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟರು. ಇದು ಭಾರತದ ಯುವ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪಕ್ಕೆ ಹೊಸ ಶಕ್ತಿಯನ್ನು ನೀಡುತ್ತಿದೆ ಎಂದು ಅವರು ಪ್ರತಿಪಾದಿಸಿದರು.

'ಪರೀಕ್ಷಾ ಪೇ ಚರ್ಚಾ'ದ ಸಂವಾದ ಮತ್ತು ಪರಸ್ಪರ ಕಲಿಕೆಯ ಆಶಯವನ್ನು ಮುಂದುವರಿಸುತ್ತಾ, ಈ ಚರ್ಚೆಯು ನಂತರ ಕೊಯಂಬತ್ತೂರಿನಿಂದ ಛತ್ತೀಸ್ಗಢದ ರಾಯ್ಪುರಕ್ಕೆ ಸ್ಥಳಾಂತರಗೊಂಡಿತು ಎಂದು ಅವರು ಉಲ್ಲೇಖಿಸಿದರು. ಅಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆಗಳನ್ನು ನಡೆಸಿದ್ದಲ್ಲದೆ, ಸ್ಥಳೀಯ ಖಾದ್ಯಗಳನ್ನು ಸವಿದು ಆನಂದಿಸಿದರು.

ಪ್ರವಾಸ ಮತ್ತು ಏಕಾಗ್ರತೆಗೆ ಪ್ರಧಾನಮಂತ್ರಿಯವರ ಮಾರ್ಗದರ್ಶನ

ವಿದ್ಯಾರ್ಥಿಗಳನ್ನು "ಜೈ ಜೋಹರ್" ಎಂದು ಅಭಿನಂದಿಸಿದ ಅವರು, ಅಲ್ಲಿನ ಆಹಾರ ಸಂಪ್ರದಾಯಗಳು ಮತ್ತು ಸ್ಥಳೀಯ ಖಾದ್ಯಗಳ ಬಗ್ಗೆ ವಿಚಾರಿಸಿದರು. ನಂತರ ಪ್ರಶ್ನೆಗಳನ್ನು ಆಹ್ವಾನಿಸಿದ ಅವರು, ರಜೆಯ ಪ್ರವಾಸದ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ, ವಿದ್ಯಾರ್ಥಿಗಳು ದೂರದ ಪ್ರಯಾಣ ಬೆಳೆಸುವ ಮೊದಲು ತಮ್ಮದೇ ಆದ ತಾಲೂಕ, ಜಿಲ್ಲೆ ಮತ್ತು ರಾಜ್ಯವನ್ನು ಅನ್ವೇಷಿಸಬೇಕು ಎಂದು ಸಲಹೆ ನೀಡಿದರು. ಪ್ರವಾಸೋದ್ಯಮವನ್ನು ವಿದ್ಯಾರ್ಥಿಯಾಗಿ ಅನುಭವಿಸಿದಾಗ, ರೈಲಿನಲ್ಲಿ ಪ್ರಯಾಣಿಸುತ್ತಾ, ಆಹಾರವನ್ನು ಜೊತೆಯಲ್ಲಿ ಕೊಂಡೊಯ್ಯುತ್ತಾ ಮತ್ತು ಭಾರತದ ವೈವಿಧ್ಯತೆಯಿಂದ ಕಲಿಯುತ್ತಾ ಆನಂದಿಸಿದರೆ ಅದು ಅತ್ಯಂತ ಆನಂದದಾಯಕವಾಗಿರುತ್ತದೆ ಎಂದು ಅವರು ಒತ್ತಿಹೇಳಿದರು.

ಪರೀಕ್ಷೆಯ ಒತ್ತಡ ಮತ್ತು ಪುನರ್ಮನನದ (ರಿವಿಷನ್) ಕುರಿತಾದ ಪ್ರಶ್ನೆಗೆ ಉತ್ತರಿಸಿದ ಶ್ರೀ ಮೋದಿಯವರು, ವಿದ್ಯಾರ್ಥಿಗಳು ತಮ್ಮ ಸಿದ್ಧತೆಯ ಮೇಲೆ ನಂಬಿಕೆ ಇಡಬೇಕು, ಶಾಂತವಾಗಿರಬೇಕು ಮತ್ತು ವಿಷಯದ ಪಾಂಡಿತ್ಯದ ಮೇಲೆ ಗಮನ ಹರಿಸಬೇಕು ಎಂದು ಅಭಿಪ್ರಾಯಪಟ್ಟರು. ಅವರು ಕಲಿಕೆಯನ್ನು ಕ್ರೀಡೆಗೆ ಹೋಲಿಸುತ್ತಾ, ನಿರಂತರ ಅಭ್ಯಾಸ, ಶಿಸ್ತು ಮತ್ತು ಸ್ಪರ್ಧೆಯು ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಓದಿನಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳೊಂದಿಗೆ ಸ್ನೇಹ ಬೆಳೆಸಿ, ಅವರಿಗೆ ಕಲಿಯಲು ಸಹಾಯ ಮಾಡುವ ಪ್ರಾಯೋಗಿಕ ತಂತ್ರವನ್ನು ಅವರು ಇದೇ ವೇಳೆ ಸೂಚಿಸಿದರು.

ವ್ಯಾಸಂಗ ಮತ್ತು ಕ್ರೀಡೆಗಳ ನಡುವೆ ಸಮತೋಲನ

ಕ್ರೀಡೆ ಮತ್ತು ವ್ಯಾಸಂಗದ ನಡುವೆ ಸಮತೋಲನ ಕಾಯ್ದುಕೊಳ್ಳಲು ಬಯಸುವ ವಿದ್ಯಾರ್ಥಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶಿಕ್ಷಣವು ಕೇವಲ ವೈಯಕ್ತಿಕ ಜೀವನಕ್ಕಷ್ಟೇ ಅಲ್ಲದೆ ಸಾಮಾಜಿಕ ಜೀವನಕ್ಕೂ ಅತ್ಯಗತ್ಯವಾಗಿದ್ದು, ಅದನ್ನು ಎಂದಿಗೂ ಕಡೆಗಣಿಸಬಾರದು ಎಂದು ತಿಳಿಸಿದರು. ಕ್ರೀಡೆಯಲ್ಲಿನ ಶ್ರೇಷ್ಠತೆಯೊಂದೇ ಶಿಕ್ಷಣದ ಅಗತ್ಯವನ್ನು ಇಲ್ಲವಾಗಿಸುತ್ತದೆ ಎಂಬ ತಪ್ಪು ಕಲ್ಪನೆಯ ವಿರುದ್ಧ ಅವರು ಎಚ್ಚರಿಸಿದರು, ಹಾಗೆಯೇ ಶಿಕ್ಷಣವೊಂದೇ ಸರ್ವಸ್ವವಲ್ಲ ಎಂದೂ ಸ್ಪಷ್ಟಪಡಿಸಿದರು. ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು. ಒಬ್ಬ ಕ್ರೀಡಾಪಟುವಾಗಲು ಆಟವಾಡುವುದು ಎಷ್ಟು ಅಗತ್ಯವೋ, ಜೀವನದಲ್ಲಿ ಆಟದ ಮನೋಭಾವವನ್ನು ಹೊಂದಿರುವುದು ಅಷ್ಟೇ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು. ಜೀವನವು ಸಮತೋಲಿತವಾಗಿರಲು ಆಟವನ್ನು ಒಳಗೊಂಡಿರಬೇಕು ಎಂದು ಹೇಳುತ್ತಾ, "ನಾನು ಆಡಿದರೆ, ನಾನು ಅಭಿವೃದ್ಧಿ ಹೊಂದುತ್ತೇನೆ" ಎಂದು ಅವರು ಉಲ್ಲೇಖಿಸಿದರು. ಜ್ಞಾನವಿಲ್ಲದೆ ಕೇವಲ ಮೈದಾನದಲ್ಲಷ್ಟೇ ಇರುವ ವ್ಯಕ್ತಿ ಎಂದು ಇತರರು ತಮ್ಮನ್ನು ನಿರ್ಲಕ್ಷಿಸದಂತೆ ಓದಿನಲ್ಲೂ ತೊಡಗಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಶೈಕ್ಷಣಿಕವಾಗಿ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಎರಡರಲ್ಲೂ ಪ್ರಬಲರಾಗಿರುವುದರಲ್ಲೇ ನಿಜವಾದ ಶಕ್ತಿ ಅಡಗಿದೆ ಎಂದು ಅವರು ಸಂವಾದವನ್ನು ಮುಕ್ತಾಯಗೊಳಿಸಿದರು. ಪ್ರಧಾನಮಂತ್ರಿಯವರ ಈ ಸಲಹೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಾಗಿ ವಿದ್ಯಾರ್ಥಿಗಳು ತಿಳಿಸಿದರು ಮತ್ತು ಈ ಅಭೂತಪೂರ್ವ ಅನುಭವಕ್ಕಾಗಿ ತಮ್ಮ ಅಪಾರ ಕೃತಜ್ಞತೆಯನ್ನು ಹಂಚಿಕೊಂಡರು.

ಪರಿಸರ ಸಂರಕ್ಷಣೆ

ಪರಿಸರ ಸಂರಕ್ಷಣೆಗೆ ಕೊಡುಗೆ ನೀಡುವ ಬಗ್ಗೆ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿ ಮೋದಿಯವರು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ನಮ್ಮ ಸ್ವಭಾವದ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟರು. ದೈನಂದಿನ ಜೀವನದಲ್ಲಿ ಪಾಲಿಸುವ ಸಣ್ಣ ನಿಯಮಗಳು ದೊಡ್ಡ ಬದಲಾವಣೆಯನ್ನು ತರುತ್ತವೆ ಎಂದು ಒತ್ತಿಹೇಳಿದ ಅವರು, ಹಲ್ಲುಜ್ಜುವಾಗ ನಲ್ಲಿಯನ್ನು ಆಫ್ ಮಾಡುವುದು ಮತ್ತು ಅಗತ್ಯವಿದ್ದಾಗ ಮಾತ್ರ ನೀರನ್ನು ಬಳಸುವ ಉದಾಹರಣೆಯನ್ನು ನೀಡಿದರು. ಇದೇ ವೇಳೆ ಅವರು ಒಬ್ಬ ಶಿಕ್ಷಕರ ಸ್ಫೂರ್ತಿದಾಯಕ ಕಥೆಯನ್ನು ಹಂಚಿಕೊಂಡರು; ಆ ಶಿಕ್ಷಕರು ಪೆಟ್ರೋಲ್ ಪಂಪ್ ಗಳಿಂದ ಎಣ್ಣೆ ಕ್ಯಾನ್ ಗಳನ್ನು ಸಂಗ್ರಹಿಸಿ, ಮಕ್ಕಳಿಗೆ ತಮ್ಮ ಮನೆಯಲ್ಲಿ ಉಳಿದ ನೀರನ್ನು ಬಾಟಲಿಗಳಲ್ಲಿ ತರಲು ಸೂಚಿಸಿದ್ದರು, ಆ ನೀರನ್ನು ಗಿಡಗಳಿಗೆ ಬಳಸಲಾಗುತ್ತಿತ್ತು. ತರಕಾರಿ ತ್ಯಾಜ್ಯಗಳನ್ನು ಗೊಬ್ಬರವಾಗಿ ಬಳಸುವ ಮೂಲಕ ಇಡೀ ಶಾಲೆಯೇ ಹಸಿರಾಗಿ ಮಾರ್ಪಟ್ಟಿತು. ಒಬ್ಬ ಶಿಕ್ಷಕರ ಈ ಉಪಕ್ರಮವು ಪರಿಸರವನ್ನು ಹೇಗೆ ಬದಲಿಸಿತು ಎಂಬುದನ್ನು ಅವರು ವಿವರಿಸಿದರು. ಮಾನವನ ನಡವಳಿಕೆಯು ಇಂತಹ ಬದಲಾವಣೆಯನ್ನು ಉಂಟುಮಾಡಬಹುದು ಮತ್ತು ಪರಿಸರವನ್ನು ರಕ್ಷಿಸಲು ಸಣ್ಣ ಹಾಗೂ ಸರಳ ಕ್ರಮಗಳೇ ಸಾಕು ಎಂದು ಅವರು ಹೈಲೈಟ್ ಮಾಡಿದರು.

ನಾಯಕತ್ವದ ಒಳನೋಟಗಳು

ಭವಿಷ್ಯದ ಪೀಳಿಗೆಯಿಂದ ನಾಯಕತ್ವದ ಯಾವ ಗುಣಗಳನ್ನು ನಿರೀಕ್ಷಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ಮೊದಲ ಗುಣವೆಂದರೆ 'ನಿರ್ಭಯವಾಗಿರುವುದು' ಎಂದು ಅಭಿಪ್ರಾಯಪಟ್ಟರು. ನಾಯಕತ್ವವು ಇತರರಿಗಾಗಿ ಕಾಯದೆ ಸ್ವತಃ ಕಾರ್ಯಪ್ರವೃತ್ತರಾಗಲು ನಿರ್ಧರಿಸಿದಾಗ ಪ್ರಾರಂಭವಾಗುತ್ತದೆ ಎಂದು ಅವರು ಸಲಹೆ ನೀಡಿದರು. ಉದಾಹರಣೆಗೆ, ರಸ್ತೆಯಲ್ಲಿರುವ ಕಸವನ್ನು ಎತ್ತುವ ಕೆಲಸವು ಇತರರಿಗೂ ಅದನ್ನು ಅನುಸರಿಸಲು ಪ್ರೇರಣೆ ನೀಡುತ್ತದೆ ಎಂದರು. ನಾಯಕತ್ವವೆಂದರೆ ಕೇವಲ ಚುನಾವಣೆಗಳು ಅಥವಾ ಭಾಷಣಗಳಲ್ಲ, ಬದಲಿಗೆ ಇತರರಿಗೆ ವಿಷಯಗಳನ್ನು ವಿವರಿಸುವ ಮತ್ತು ಮನವರಿಕೆ ಮಾಡುವ ಸಾಮರ್ಥ್ಯ ಎಂದು ಅವರು ಸ್ಪಷ್ಟಪಡಿಸಿದರು. ನಿಜವಾದ ನಾಯಕರು ಜನರಿಗೆ ಮಾರ್ಗದರ್ಶನ ನೀಡುವ ಮೊದಲು ಅವರನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಅವರು ಒತ್ತಿಹೇಳಿದರು. ವಿದ್ಯಾರ್ಥಿಗಳು ಈ ಅನುಭವವನ್ನು ಒಂದು ಕನಸಿನಂತೆ ಬಣ್ಣಿಸಿದರು ಮತ್ತು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ್ದಕ್ಕೆ ತಾವು ಅದೃಷ್ಟವಂತರು ಹಾಗೂ ಗೌರವಿತರು ಎಂದು ತಿಳಿಸಿದರು. 

ರಾಯ್ ಪುರದ ಸಂವಾದವನ್ನು ಮುಕ್ತಾಯಗೊಳಿಸುತ್ತಾ ಮಾತನಾಡಿದ ಪ್ರಧಾನಮಂತ್ರಿ ಮೋದಿಯವರು, ಪರೀಕ್ಷೆಯ ಸಿದ್ಧತೆ, ಒತ್ತಡ ಮತ್ತು ನಿರೀಕ್ಷೆಗಳು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದ ಮರುಕಳಿಸುವ ವಿಷಯಗಳಾಗಿವೆ ಮತ್ತು ಯುವಜನರು ಇಂತಹ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಲು ಅವಕಾಶ ನೀಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು. ಈ ಚರ್ಚೆಗಳು ಕೇವಲ ಬೋರ್ಡ್ ಪರೀಕ್ಷೆಯ ಸಿದ್ಧತೆಗೆ ಮಾತ್ರ ಸೀಮಿತವಾಗಿರದೆ ಜೀವನದ ಅನೇಕ ಆಯಾಮಗಳನ್ನು ಸ್ಪರ್ಶಿಸುತ್ತವೆ, ಇದು ಯುವ ಮನಸ್ಸುಗಳಲ್ಲಿ ಓಡುತ್ತಿರುವ ಆಲೋಚನೆಗಳನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿಹೇಳಿದರು. ಈ ಸಂವಾದದ ಮುಂದಿನ ಭಾಗವು ಗುಜರಾತ್ ನಲ್ಲಿ ನಡೆಯಲಿದ್ದು, ಅಲ್ಲಿನ ಬುಡಕಟ್ಟು ವಿದ್ಯಾರ್ಥಿಗಳು ತಮ್ಮನ್ನು ಆಶ್ಚರ್ಯಗೊಳಿಸುವಂತಹ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಅವರು ತಿಳಿಸಿದರು.

ಗುಜರಾತ್ ನ ದೇವಮೊಗ್ರಾದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿಯವರು, ಅವರ ಹಿನ್ನೆಲೆಯ ಬಗ್ಗೆ ವಿಚಾರಿಸಿದರು. ವಿದ್ಯಾರ್ಥಿಗಳ ಕಲಾಕೃತಿಗಳನ್ನು ಶ್ಲಾಘಿಸಿದ ಅವರು, ಹಿಂದಿನ ಸಭೆಗಳಲ್ಲಿ ಭಾಗವಹಿಸಿದ್ದ ಕೆಲವು ಪರಿಚಿತ ಮುಖಗಳನ್ನು ಗುರುತಿಸಿ ಅವರ ಧೈರ್ಯವನ್ನು ಪ್ರಶಂಸಿಸಿದರು.

ಗುಜರಾತ್ ನ ಬುಡಕಟ್ಟು ಪ್ರದೇಶಗಳ ಅಭಿವೃದ್ಧಿ

ಬುಡಕಟ್ಟು ಪ್ರದೇಶಗಳಲ್ಲಿ ಕೆಲಸ ಮಾಡಲು ತಮಗೆ ಸಿಕ್ಕ ಪ್ರೇರಣೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀ ಮೋದಿಯವರು, ಬುಡಕಟ್ಟು ಸಮುದಾಯವು ದೊಡ್ಡ ಮಟ್ಟದ ಸ್ವಾತಂತ್ರ್ಯ ಸಂಗ್ರಾಮ ನಡೆಸಿದ ಐತಿಹಾಸಿಕ ಪಾಲ್ಚೆಟೇರಿಯಾ (Palchetaria) ಘಟನೆಯನ್ನು ಸ್ಮರಿಸಿದರು. ಅಲ್ಲದೆ, ತಾವು ಆ ಪ್ರದೇಶದಲ್ಲಿದ್ದಾಗ ಎದುರಾದ ತೀವ್ರ ಬರಗಾಲದ ಸಂದರ್ಭದಲ್ಲಿ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವನ್ನು ಮನಗಂಡಿದ್ದಾಗಿ ತಿಳಿಸಿದರು. ತಾವು ಮುಖ್ಯಮಂತ್ರಿಯಾದಾಗ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದನ್ನು ಉಲ್ಲೇಖಿಸಿದ ಅವರು, ಒಂದು ಕಾಲದಲ್ಲಿ ಉಮರಗಾಮ್ ನಿಂದ ಅಂಬಾಜಿವರೆಗೆ ಒಂದೇ ಒಂದು ವಿಜ್ಞಾನ ಶಾಲೆ ಇರಲಿಲ್ಲ, ಆದರೆ ಈಗ ಅಲ್ಲಿ ವಿಶ್ವವಿದ್ಯಾಲಯಗಳು, ವಿಜ್ಞಾನ ಶಾಲೆಗಳು, ಎಂಜಿನಿಯರಿಂಗ್ ಸಂಸ್ಥೆಗಳು ಮತ್ತು ಐಟಿಐಗಳಿವೆ ಎಂದು ಹೇಳಿದರು. ಇದು ದೊಡ್ಡ ಬದಲಾವಣೆ ಮತ್ತು ಪ್ರಯೋಜನಗಳನ್ನು ತಂದಿದೆ ಎಂದರು.

ಅತಿ ಹಿಂದುಳಿದಿರುವ ಬುಡಕಟ್ಟು ಸಮುದಾಯಗಳನ್ನು ಬೆಂಬಲಿಸಲು 'ಪಿಎಂ ಜನಮನ್ ಯೋಜನೆ' (PM Janman Yojana) ರೂಪಿಸಿರುವುದನ್ನು ಉಲ್ಲೇಖಿಸಿದ ಅವರು, ಇವರಿಗಾಗಿ ಪ್ರತ್ಯೇಕ ಯೋಜನೆಗಳು ಮತ್ತು ಬಜೆಟ್ಗಳ ಅವಶ್ಯಕತೆಯಿದೆ ಎಂದು ವಿವರಿಸಿದರು. ಶಿಕ್ಷಣವು ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಎಂದು ಅವರು ಒತ್ತಿಹೇಳಿದರು. ಜೊತೆಗೆ ಉಮರ್ಗಾಮ್-ಅಂಬಾಜಿ ಹೆದ್ದಾರಿಯಂತಹ ಮೂಲಸೌಕರ್ಯ ಯೋಜನೆಗಳನ್ನು ಉಲ್ಲೇಖಿಸುತ್ತಾ, ಪ್ರಗತಿಗೆ ಸಂಪರ್ಕವು ಅತ್ಯಗತ್ಯ ಮತ್ತು ಅದು ತಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದರು. 

ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂದೂರ್ ನಂತಹ ರಾಷ್ಟ್ರೀಯ ನಿರ್ಣಾಯಕ ಕ್ಷಣಗಳಲ್ಲಿ ಒತ್ತಡವನ್ನು ಹೇಗೆ ನಿಭಾಯಿಸಿದಿರಿ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳು ಸಾಮಾನ್ಯವಾಗಿ ಪರೀಕ್ಷೆಯ ಒತ್ತಡವನ್ನು ಅನುಭವಿಸುತ್ತಾರೆ, ಆದರೆ ಪರೀಕ್ಷೆ ಮುಗಿದ ನಂತರ ಅದು ತಾತ್ಕಾಲಿಕ ಎಂಬುದು ಅವರಿಗೆ ಅರಿವಾಗುತ್ತದೆ ಎಂದರು. ಪರೀಕ್ಷೆಯ ಆತಂಕವನ್ನು ಹೋಗಲಾಡಿಸಲು ಕೇವಲ ಓದುವುದಕ್ಕಿಂತ ಹೆಚ್ಚಾಗಿ, ನಿಯಮಿತವಾಗಿ ಬರೆಯುವುದು ಮತ್ತು ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅತ್ಯುತ್ತಮ ಮಾರ್ಗ ಎಂದು ಅವರು ಒತ್ತಿ ಹೇಳಿದರು. ನಿರಂತರ ಅಭ್ಯಾಸವು ಒತ್ತಡವನ್ನು ತಡೆಯುತ್ತದೆ ಎಂದರು. ನಗು ಮತ್ತು ಮುಖ್ಯವಾಗಿ ಸರಿಯಾದ ನಿದ್ರೆಯ ಮಹತ್ವವನ್ನು ಅವರು ಹೈಲೈಟ್ ಮಾಡಿದರು; ಸರಿಯಾದ ವಿಶ್ರಾಂತಿ ಮನಸ್ಸನ್ನು ಪ್ರಫುಲ್ಲವಾಗಿಡುತ್ತದೆ, ಹೊಸ ಆಲೋಚನೆಗಳನ್ನು ಮೂಡಿಸುತ್ತದೆ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದರು.

ಸರಿಯಾದ ವೃತ್ತಿ ಮಾರ್ಗ 

ವೃತ್ತಿಜೀವನದ ಆಯ್ಕೆಗಳ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಆಕಾಂಕ್ಷೆಗಳನ್ನು ಪದೇ ಪದೇ ಬದಲಾಯಿಸುವುದು ಕುಟುಂಬಗಳಲ್ಲಿ ಗೊಂದಲ ಉಂಟುಮಾಡುತ್ತದೆ, ಆದರೆ ಯಶಸ್ವಿ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯುವುದು ಸಹಜ ಎಂದು ಸಲಹೆ ನೀಡಿದರು. ಕೇವಲ ಅವರ ಸಾಧನೆಗಳನ್ನು ಮಾತ್ರ ನೋಡಬಾರದು, ಬದಲಿಗೆ ಆ ಸಾಧನೆಯ ಹಿಂದಿರುವ ಪರಿಶ್ರಮ ಮತ್ತು ಶಿಸ್ತನ್ನು ಗಮನಿಸಬೇಕು ಎಂದು ಅವರು ಒತ್ತಿಹೇಳಿದರು. ಬೆಳಗಿನ ಜಾವ 4 ಗಂಟೆಗೆ ಎದ್ದು ಸೈಕಲ್ ತುಳಿಯುತ್ತಾ ಅಭ್ಯಾಸಕ್ಕೆ ಹೋಗುವ ಕ್ರಿಕೆಟಿಗನ ಉದಾಹರಣೆಯನ್ನು ನೀಡಿದ ಅವರು, ಕನಸುಗಳು ಕಠಿಣ ಪರಿಶ್ರಮ ಮತ್ತು ದಿನಚರಿಯೊಂದಿಗೆ ಹೊಂದಿಕೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ನಿಜವಾದ ಯಶಸ್ಸು ತನ್ನದೇ ಆದ ಸದ್ದನ್ನು ಮಾಡುತ್ತದೆ ಮತ್ತು ಒಬ್ಬ ವ್ಯಕ್ತಿ ಶ್ರೇಷ್ಠನಾದಾಗ, ಇಡೀ ಶಾಲೆ, ಗ್ರಾಮ ಮತ್ತು ಸಮುದಾಯವು ಅದನ್ನು ಗುರುತಿಸುತ್ತದೆ ಎಂದು ಅವರು ಹೇಳಿದರು.

ನಂತರ ವಿದ್ಯಾರ್ಥಿಗಳು ವರ್ಲಿ (Warli), ಲಿಪನ್ (Lipan) ಮತ್ತು ಪಿತೋರಾ (Pithora) ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾಕೃತಿಗಳನ್ನು ಪ್ರದರ್ಶಿಸಿ ಅವುಗಳ ಪರಂಪರೆಯನ್ನು ವಿವರಿಸಿದರು. ಈ ಕಲಾಕೃತಿಗಳನ್ನು ಕೈಯಿಂದ ತಯಾರಿಸಿದ್ದೀರಾ ಎಂದು ಕೇಳುತ್ತಾ ಅವರ ಸೃಜನಶೀಲತೆಯನ್ನು ಮೆಚ್ಚಿದ ಪ್ರಧಾನಮಂತ್ರಿಯವರು, "ನೀವು ಒಬ್ಬ ಮಹಾನ್ ಕಲಾವಿದರಾಗಿದ್ದೀರಿ" ಎಂದು ಅವರ ಪ್ರತಿಭೆಯನ್ನು ಶ್ಲಾಘಿಸಿದರು. ಕಲಾಕೃತಿಗಳ ಸಾಂಸ್ಕೃತಿಕ ಆಳ ಮತ್ತು ಸೃಜನಶೀಲತೆಯನ್ನು ಗಮನಿಸಿದ ಅವರು, ಆ ವರ್ಣಚಿತ್ರಗಳನ್ನು ಸ್ವೀಕರಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದರು. ಪ್ರಧಾನಮಂತ್ರಿಯವರೊಂದಿಗೆ ಮಾತನಾಡಿದ್ದು ಒಬ್ಬ ಸ್ನೇಹಿತನೊಂದಿಗೆ ಮಾತನಾಡಿದಂತೆ ಭಾಸವಾಯಿತು ಎಂದು ಸಂತಸ ಹಂಚಿಕೊಂಡ ವಿದ್ಯಾರ್ಥಿಗಳು, ಅವರು ವೈಯಕ್ತಿಕವಾಗಿ ನಮ್ಮ ಕೆಲಸವನ್ನು ಪ್ರಶಂಸಿಸಿದ್ದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಶಿಕ್ಷಕರ ಪಾತ್ರ ಮತ್ತು ಬುಡಕಟ್ಟು ಯುವಜನತೆ

ತಮ್ಮ ಜೀವನದಲ್ಲಿ ಶಿಕ್ಷಕರ ಪಾತ್ರದ ಕುರಿತಾದ ವಿದ್ಯಾರ್ಥಿಯ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಮೋದಿಯವರು, ಶಿಕ್ಷಕರು ತಮ್ಮ ಜೀವನದಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು. ಪ್ರತಿದಿನ ಗ್ರಂಥಾಲಯಕ್ಕೆ ಭೇಟಿ ನೀಡಲು, ‘ದಿ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯ ಸಂಪಾದಕೀಯ ಸಾಲುಗಳನ್ನು ಓದಲು, ಅದನ್ನು ಬರೆದಿಟ್ಟುಕೊಳ್ಳಲು ಮತ್ತು ಮರುದಿನ ಅದರ ಬಗ್ಗೆ ಚರ್ಚಿಸಲು ತಮ್ಮ ಶಿಕ್ಷಕರು ಹೇಗೆ ಪ್ರೋತ್ಸಾಹಿಸುತ್ತಿದ್ದರು ಎಂಬುದನ್ನು ಅವರು ಸ್ಮರಿಸಿದರು. ಇದು ಅವರಲ್ಲಿ ಶಿಸ್ತು ಮತ್ತು ಕುತೂಹಲವನ್ನು ಬೆಳೆಸಿತು. ತಮ್ಮ ಪ್ರಾಥಮಿಕ ಶಾಲಾ ದಿನಗಳ ಪರ್ಮಾರ್ ಸರ್ ಅವರ ನೆನಪುಗಳನ್ನು ಹಂಚಿಕೊಂಡ ಅವರು, ಸರ್ ದೈಹಿಕ ಫಿಟ್ ನೆಸ್ ಬಗ್ಗೆ ಬಹಳ ಪಟ್ಟು ಹಿಡಿಯುತ್ತಿದ್ದರು ಎಂದು ತಿಳಿಸಿದರು. ಅವರು ಮೋದಿಯವರಿಗೆ ಯೋಗ ಮತ್ತು ಮಲ್ಲಕಂಬವನ್ನು ಕಲಿಸಿದ್ದರು; ತಾವು ವೃತ್ತಿಪರ ಆಟಗಾರನಾಗದಿದ್ದರೂ, ಆರೋಗ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಇದು ಸಹಾಯ ಮಾಡಿತು ಎಂದು ಅವರು ಹೇಳಿದರು. ಪ್ರತಿಯೊಬ್ಬ ಮಹಾನ್ ವ್ಯಕ್ತಿಯ ಜೀವನದಲ್ಲಿ ಇಬ್ಬರ ಪ್ರಭಾವವನ್ನು ಯಾವಾಗಲೂ ಗುರುತಿಸಲಾಗುತ್ತದೆ—ಅವರ ತಾಯಿ ಮತ್ತು ಅವರ ಶಿಕ್ಷಕರು ಎಂದು ಅವರು ಒತ್ತಿ ಹೇಳಿದರು.

ಭಾರತದ ಪ್ರಗತಿಗೆ ಬುಡಕಟ್ಟು ಸಮುದಾಯಗಳ ಕೊಡುಗೆಯ ಬಗ್ಗೆ ಕೇಳಿದಾಗ, ಅವರಿಂದಲೇ ದೇಶವು ಗಮನಾರ್ಹವಾಗಿ ಮುನ್ನಡೆದಿದೆ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು. ಬುಡಕಟ್ಟು ಸಮಾಜವು ಪ್ರಕೃತಿಯನ್ನು ಆರಾಧಿಸುವುದರಿಂದ ಮತ್ತು ಸಂರಕ್ಷಿಸುವುದರಿಂದ ಭಾರತದ ಪರಿಸರವು ಉಳಿದುಕೊಂಡಿದೆ ಎಂದು ಅವರು ಹೈಲೈಟ್ ಮಾಡಿದರು. ಬುಡಕಟ್ಟು ಸಮುದಾಯದ ಹೆಚ್ಚಿನ ಸಂಖ್ಯೆಯ ಪುತ್ರರು ಮತ್ತು ಪುತ್ರಿಯರು ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಗಮನಿಸಿದರು ಮತ್ತು ಎಲ್ಲಾ ಕ್ಷೇತ್ರಗಳಲ್ಲಿನ ಅವಕಾಶಗಳ ವಿಷಯದಲ್ಲಿ ಯಾವುದೇ ತಾರತಮ್ಯ ಇರಬಾರದು ಎಂದು ತಿಳಿಸಿದರು. ಬುಡಕಟ್ಟು ಯುವಜನರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಬೆರಳು ಮಾಡಿ ತೋರಿಸಿದ ಅವರು, ಕ್ರಿಕೆಟ್ನಲ್ಲಿ ಗುರುತಿಸಿಕೊಂಡ ಮಧ್ಯಪ್ರದೇಶದ ಬುಡಕಟ್ಟು ಪುತ್ರಿ ಕ್ರಾಂತಿ ಗೌಡ್ ಮತ್ತು ದೇಶಕ್ಕೆ ಕೀರ್ತಿ ತಂದ ಇತರ ಅನೇಕ ಬುಡಕಟ್ಟು ಕ್ರೀಡಾಪಟುಗಳ ಉದಾಹರಣೆಯನ್ನು ನೀಡಿದರು. ಬುಡಕಟ್ಟು ಸಮುದಾಯಗಳು ಅಪಾರ ಪ್ರತಿಭೆಯನ್ನು ಹೊಂದಿವೆ ಮತ್ತು ಅದನ್ನು ತಂತ್ರಜ್ಞಾನದೊಂದಿಗೆ ಸಂಯೋಜಿಸಿದರೆ ಅವರ ಸಾಮರ್ಥ್ಯವು ಮತ್ತಷ್ಟು ಹೆಚ್ಚುತ್ತದೆ ಎಂದು ಅವರು ಹೇಳಿದರು. ಜೀವನವನ್ನು ಕೇವಲ ಉದ್ಯೋಗಕ್ಕಾಗಿ ನಡೆಸಬಾರದು, ಬದಲಾಗಿ ಸಾರ್ಥಕ ಜೀವನವನ್ನು ನಿರ್ಮಿಸುವ ಕನಸುಗಳೊಂದಿಗೆ ಬದುಕಬೇಕು, ಅದು ನಿಜವಾದ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.

ಶ್ರೀ ಮೋದಿಯವರು ನಂತರ ಮೋಗಿ ಮಾತಾ ದೇವಿಗೆ ಸಮರ್ಪಿತವಾದ ವಿದ್ಯಾರ್ಥಿಗಳ ಸಾಮೂಹಿಕ ಗೀತೆಯನ್ನು ಆಲಿಸಿದರು. ಆ ಹಾಡಿನಲ್ಲಿ ಆ ತಾಯಿ ಎಲ್ಲಿ ನೆಲೆಸಿದ್ದಾಳೆ ಮತ್ತು ಹೇಗೆ ಬದುಕುತ್ತಾಳೆ ಎಂಬುದನ್ನು ವಿವರಿಸಿತು; ಅದರಲ್ಲಿ ಅಡಕವಾಗಿರುವ ಸಾಂಸ್ಕೃತಿಕ ಅಭಿವ್ಯಕ್ತಿಯನ್ನು ಅವರು ಶ್ಲಾಘಿಸಿದರು. ಜೀವನದಲ್ಲಿ ಹೇಗೆ ಸಂತೋಷವಾಗಿರಬೇಕು, ಒತ್ತಡವನ್ನು ಹೇಗೆ ಹೋಗಲಾಡಿಸಬೇಕು, ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಹೇಗೆ ಮತ್ತು ಭಯವಿಲ್ಲದೆ ಪರೀಕ್ಷೆಗಳಿಗೆ ಸಿದ್ಧರಾಗುವುದು ಹೇಗೆ ಎಂಬ ವಿಷಯಗಳ ಬಗ್ಗೆ ಈ ಸಂವಾದವು ಬೆಳಕು ಚೆಲ್ಲಿದೆ ಎಂದು ವಿದ್ಯಾರ್ಥಿಗಳು ಹಂಚಿಕೊಂಡರು. ಪ್ರಧಾನಮಂತ್ರಿಯವರನ್ನು ಖುದ್ದಾಗಿ ಭೇಟಿಯಾಗಿದ್ದು ತಮಗೆ ಆಶ್ಚರ್ಯ ತಂದಿದೆ ಎಂದು ಹೇಳಿದ ಅವರು, ಅವರನ್ನು ಕಂಡಾಗ ಕಣ್ಣುಗಳನ್ನೇ ನಂಬಲಾಗಲಿಲ್ಲ ಮತ್ತು ಸಂವಾದದ ಸಮಯದಲ್ಲಿ ಸಮಯ ಕಳೆದದ್ದೇ ತಿಳಿಯಲಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

'ಪರೀಕ್ಷಾ ಪೆ ಚರ್ಚಾ' ಪಯಣವು ಈಗ ಅಷ್ಟಲಕ್ಷ್ಮಿ ಪ್ರದೇಶವಾದ ಈಶಾನ್ಯ ಭಾರತವನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಮೋದಿಯವರು ತಿಳಿಸಿದರು. ಹರಿಯುವ ಬ್ರಹ್ಮಪುತ್ರ ನದಿಯ ಮಧ್ಯೆ ಗುವಾಹಟಿಯಲ್ಲಿ ಈ ಚರ್ಚೆಗಳು ನಡೆದವು. ಅಲ್ಲಿ ಅವರನ್ನು ಸಾಂಪ್ರದಾಯಿಕ 'ಗಮೋಚ' ನೀಡಿ ಬರಮಾಡಿಕೊಳ್ಳಲಾಯಿತು; ಅಸ್ಸಾಂನಲ್ಲಿ ಇಂತಹ ಸ್ವಾಗತವು ಅತ್ಯಗತ್ಯ ಎಂದು ಅವರು ಈ ವೇಳೆ ಸ್ಮರಿಸಿದರು. ಪ್ರಧಾನಮಂತ್ರಿಯವರ ಉಪಸ್ಥಿತಿಯು ತಮಗೆ ನೆಮ್ಮದಿ ನೀಡಿತು ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡಿತು ಎಂದು ವಿದ್ಯಾರ್ಥಿಗಳು ತಿಳಿಸಿದರು. ನೀವು ಈ ಕಾರ್ಯಕ್ರಮವನ್ನು ಈ ಹಿಂದೆ ದೂರದರ್ಶನದಲ್ಲಿ ನೋಡಿದ್ದೀರಾ ಅಥವಾ ತಮ್ಮ 'ಎಕ್ಸಾಮ್ ವಾರಿಯರ್' ಪುಸ್ತಕವನ್ನು ಓದಿದ್ದೀರಾ ಎಂದು ಪ್ರಧಾನಮಂತ್ರಿಯವರು ಕೇಳಿದಾಗ, ಅದು ಪರೀಕ್ಷೆಯ ಭಯವನ್ನು ಕಡಿಮೆ ಮಾಡಿದೆ ಮತ್ತು ಪರೀಕ್ಷೆಗಳನ್ನು ಹಬ್ಬದಂತೆ ಆಚರಿಸುವುದನ್ನು ಕಲಿಸಿದೆ ಎಂದು ವಿದ್ಯಾರ್ಥಿಗಳು ಹಂಚಿಕೊಂಡರು. ಹೆಚ್ಚಾಗಿ ಕುಟುಂಬ ಸದಸ್ಯರೇ ಅಂಕಗಳ ಬಗ್ಗೆ ಪ್ರಶ್ನಿಸುವ ಮೂಲಕ ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಾರೆ ಎಂದು ಅವರು ಗಮನಿಸಿದರು ಮತ್ತು ತೃಪ್ತಿಯು ಪ್ರಗತಿಯನ್ನು ಎಂದಿಗೂ ತಡೆಯಬಾರದು ಎಂದು ಒತ್ತಿಹೇಳಿದರು. ಸ್ಪರ್ಧೆಯು ಯಾವಾಗಲೂ ತನ್ನೊಂದಿಗೆ ಇರಬೇಕೇ ಹೊರತು ಇತರರೊಂದಿಗಲ್ಲ ಮತ್ತು ಸ್ವಯಂ ಸುಧಾರಣೆ ನಿರಂತರವಾಗಿರಬೇಕು ಎಂಬ ತಮ್ಮ ಮಂತ್ರವನ್ನು ಅವರು ಪುನರುಚ್ಚರಿಸಿದರು.

ಆರೋಗ್ಯಕರ ಆಹಾರ ಮತ್ತು ಜೀವನಶೈಲಿ

ಆಹಾರ ಮತ್ತು ಜೀವನಶೈಲಿಯ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ತಾವು ಯಾವುದೇ ನಿರ್ದಿಷ್ಟ ಪದ್ಧತಿಯನ್ನು ಅನುಸರಿಸುವುದಿಲ್ಲ ಎಂದು ತಿಳಿಸಿದರು. ವಿವಿಧ ಮನೆಗಳಲ್ಲಿ ಸಸ್ಯಾಹಾರವನ್ನು ಸೇವಿಸಿದ ಮತ್ತು ಸ್ವತಃ ಖಿಚಡಿಯಂತಹ ಸರಳ ಖಾದ್ಯಗಳನ್ನು ತಯಾರಿಸುತ್ತಿದ್ದ ದಿನಗಳನ್ನು ಅವರು ಸ್ಮರಿಸಿಕೊಂಡರು. ಆಹಾರವನ್ನು ಔಷಧದಂತೆ ಪರಿಗಣಿಸದೆ ವೈಯಕ್ತಿಕ ಇಚ್ಛೆಯಂತೆ ಸೇವಿಸಬೇಕು ಮತ್ತು ಹೊಟ್ಟೆ ತುಂಬಿಸಿಕೊಳ್ಳಲು ತಿನ್ನಬೇಕೇ ಅಥವಾ ಮನಸ್ಸಿನ ತೃಪ್ತಿಗಾಗಿ ತಿನ್ನಬೇಕೇ ಎಂಬುದನ್ನು ತಾವೇ ನಿರ್ಧರಿಸಬೇಕು ಎಂದು ಅವರು ಸಲಹೆ ನೀಡಿದರು. ಜನರು ಹೊಟ್ಟೆ ತುಂಬಿಸಿಕೊಳ್ಳಲು ಧಾನ್ಯಗಳನ್ನು ಸೇವಿಸುತ್ತಾರೆ, ಆದರೆ ಎದೆ ತುಂಬ ಉಸಿರಾಡುವುದನ್ನು ನಿರ್ಲಕ್ಷಿಸುತ್ತಾರೆ ಎಂದು ಗಮನಿಸಿದ ಅವರು, ಇದರ ವಿರುದ್ಧವಾಗಿ ಅಂದರೆ ಉಸಿರಾಟಕ್ಕೆ ಹೆಚ್ಚು ಒತ್ತು ನೀಡುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಒತ್ತಿಹೇಳಿದರು. ವಿದ್ಯಾರ್ಥಿಗಳು ತಮ್ಮ ದೇಹಕ್ಕೆ ಆದ್ಯತೆ ನೀಡಬೇಕು, ಸೂರ್ಯೋದಯವನ್ನು ನೋಡುವುದರಂತಹ ಅಭ್ಯಾಸಗಳನ್ನು ಮಾಡಿಕೊಳ್ಳಬೇಕು ಮತ್ತು ಆರೋಗ್ಯಕ್ಕೆ ಅತ್ಯುನ್ನತ ಆದ್ಯತೆ ನೀಡಬೇಕು ಎಂದು ಅವರು ಪ್ರೋತ್ಸಾಹಿಸಿದರು. ಇಂತಹ ಅಭ್ಯಾಸಗಳು ಜೀವನದಲ್ಲಿ ತಾಜಾತನ ಮತ್ತು ಶಕ್ತಿಯನ್ನು ತರುತ್ತವೆ ಎಂದು ಅವರು ತಿಳಿಸಿದರು.

ಹೋಲಿಕೆಯ ಒತ್ತಡವನ್ನು ನಿಭಾಯಿಸುವುದು

ಸಹೋದರ-ಸಹೋದರಿಯರು ಅಥವಾ ಸ್ನೇಹಿತರೊಂದಿಗೆ ಪೋಷಕರು ಮಾಡುವ ಹೋಲಿಕೆಗಳ ಕುರಿತಾದ ವಿದ್ಯಾರ್ಥಿಯ ಕಳಕಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಮೋದಿಯವರು, ಇಂತಹ ಸಂದರ್ಭಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು. ಪೋಷಕರು ಸಹೋದರ ಅಥವಾ ಸಹೋದರಿಯ ಕೈಬರಹವನ್ನು ಹೊಗಳಿದರೆ, ನಿರ್ಲಕ್ಷಕ್ಕೊಳಗಾದ ಭಾವನೆ ಹೊಂದುವ ಬದಲಿಗೆ ಅದನ್ನು ತಮಗೂ ಕಲಿಸಿಕೊಡುವಂತೆ ಕೇಳುವುದೇ ಸರಿಯಾದ ಪ್ರತಿಕ್ರಿಯೆ ಎಂದು ಅವರು ವಿವರಿಸಿದರು. ಮಕ್ಕಳು ತಮ್ಮ ಒಡಹುಟ್ಟಿದವರ ಸಾಮರ್ಥ್ಯಗಳಿಂದ ಕಲಿಯಬೇಕು ಮತ್ತು "ನೀವು ಉತ್ತಮ ಗುಣವನ್ನು ಗುರುತಿಸಿದ್ದೀರಿ, ಈಗ ಅದನ್ನು ನಾನೂ ಹೇಗೆ ಬೆಳೆಸಿಕೊಳ್ಳಬೇಕು ಎಂದು ನನಗೆ ಮಾರ್ಗದರ್ಶನ ನೀಡಿ" ಎಂದು ಪೋಷಕರಿಗೆ ಹೇಳಬೇಕು ಎಂದು ಅವರು ಒತ್ತಿ ಹೇಳಿದರು. ಇತರರ ಮುಂದೆ ಒಬ್ಬ ಮಗುವನ್ನು ಅತಿಯಾಗಿ ಹೊಗಳುವುದನ್ನು ಪೋಷಕರು ತಪ್ಪಿಸಬೇಕು, ಏಕೆಂದರೆ ಇದು ಅಸಮತೋಲನವನ್ನು ಉಂಟುಮಾಡಬಹುದು ಎಂದು ಅವರು ಸಲಹೆ ನೀಡಿದರು. ನಮಗೆ ಹತ್ತಿರವಿರುವವರು ಯಾವುದಾದರೂ ವಿಷಯದಲ್ಲಿ ಶ್ರೇಷ್ಠತೆ ಹೊಂದಿದ್ದರೆ, ಅವರಿಗೆ ತಿಳಿಸದೆಯೇ ಅವರನ್ನು ಮನಸ್ಸಿನಲ್ಲಿಯೇ 'ಗುರು' ಎಂದು ಭಾವಿಸಬೇಕು ಮತ್ತು ಅವರಿಂದ ಮಾರ್ಗದರ್ಶನ ಪಡೆಯಬೇಕು; ಇದು ಸಮಾನತೆ ಮತ್ತು ಗೌರವವನ್ನು ಬೆಳೆಸುತ್ತದೆ ಎಂದು ಅವರು ಅವರು ಒತ್ತಿ ಹೇಳಿದರು.

ಸ್ವಯಂ ನಂಬಿಕೆ 

ವೇದಿಕೆಯ ಭಯ ಮತ್ತು ಆತ್ಮವಿಶ್ವಾಸದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿಯವರು, ಆತ್ಮವಿಶ್ವಾಸ ಎನ್ನುವುದು "ಆತ್ಮ" ಮತ್ತು "ವಿಶ್ವಾಸ" ಎಂಬ ಎರಡು ಪದಗಳಿಂದ ಬಂದಿದೆ, ಅಂದರೆ ತನ್ನ ಮೇಲೆ ತನಗಿರುವ ನಂಬಿಕೆ ಎಂದು ವಿವರಿಸಿದರು. ತಮ್ಮನ್ನು ತಾವು ನಂಬುವವರು ಎಂದಿಗೂ ಭಯಪಡುವುದಿಲ್ಲ ಮತ್ತು ಅವರು ಯಾವುದೇ ಕಾರ್ಯ ಮಾಡುವ ಮೊದಲು ಪರಿಸ್ಥಿತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು. ಸ್ವಾಮಿ ವಿವೇಕಾನಂದರ ಪ್ರಸಿದ್ಧ ಚಿಕಾಗೋ ಭಾಷಣವನ್ನು ನೆನಪಿಸಿಕೊಂಡ ಅವರು, ವಿವೇಕಾನಂದರು ಆರಂಭದಲ್ಲಿ ಸ್ವಲ್ಪ ಆತಂಕಕ್ಕೊಳಗಾಗಿದ್ದರು ಆದರೆ ಶಕ್ತಿಗಾಗಿ ತಾಯಿ ಸರಸ್ವತಿಯನ್ನು ಪ್ರಾರ್ಥಿಸಿದರು; ಅವರು "ಅಮೆರಿಕದ ಸಹೋದರ ಮತ್ತು ಸಹೋದರಿಯರೇ" ಎಂದು ಭಾಷಣ ಆರಂಭಿಸಿದಾಗ ಸಭಿಕರು ನಿಮಿಷಗಳ ಕಾಲ ಚಪ್ಪಾಳೆ ತಟ್ಟಿದರು, ಇದು ಅವರ ಜೀವನದ ಮಹತ್ವದ ತಿರುವಾಯಿತು ಎಂದು ತಿಳಿಸಿದರು. ಶ್ರೇಷ್ಠ ಭಾಷಣಕಾರರು ಮತ್ತು ಆಟಗಾರರು ಕೂಡ ಹಿನ್ನಡೆಗಳನ್ನು ಎದುರಿಸುತ್ತಾರೆ, ಸಚಿನ್ ತೆಂಡೂಲ್ಕರ್ ಅವರು ಸೊನ್ನೆ ರನ್ಗೆ ಔಟ್ ಆಗಿದ್ದನ್ನು ಉದಾಹರಿಸಿದ ಅವರು, ಅಂತಹ ಸಂದರ್ಭದಲ್ಲೂ ಅವರು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವುದಿಲ್ಲ ಎಂದು ಹೇಳಿದರು. ವಿದ್ಯಾರ್ಥಿಗಳು ಪರಿಸ್ಥಿತಿಗಳನ್ನು ಗಮನಿಸಬೇಕು, ಸವಾಲುಗಳನ್ನು ಸ್ವೀಕರಿಸಬೇಕು ಮತ್ತು ತಮ್ಮ ಆಂತರಿಕ ಶಕ್ತಿಯನ್ನು ಅವಲಂಬಿಸಬೇಕು ಎಂದು ಅವರು ಕರೆ ನೀಡಿದರು.

ನಂತರ ವಿದ್ಯಾರ್ಥಿಗಳು ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ ಹಾಡನ್ನು ಪ್ರಸ್ತುತಪಡಿಸಿದರು, ಇದನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ವಿದ್ಯಾರ್ಥಿನಿಯೊಬ್ಬಳು ತನ್ನ ಕುಟುಂಬದ ಟೀ ತೋಟದ ಸಂಪರ್ಕವನ್ನು ಹಂಚಿಕೊಂಡು ಅವರಿಗೆ ಚಹಾ ಎಲೆಗಳನ್ನು ಅರ್ಪಿಸಿದಳು; ಅದಕ್ಕೆ ಪ್ರೀತಿಯಿಂದ ಪ್ರತಿಕ್ರಿಯಿಸಿದ ಅವರು ಆಕೆಯ ತಾಯಿಗೆ ತಮ್ಮ ಗೌರವಪೂರ್ವಕ ವಂದನೆಗಳನ್ನು ಸಲ್ಲಿಸಿದರು. ಪ್ರಧಾನಮಂತ್ರಿಯವರನ್ನು ಭೇಟಿಯಾದ ಬಗ್ಗೆ ವಿದ್ಯಾರ್ಥಿಗಳು ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದರು, ತಲೆಮಾರಿನ ಅಂತರವಿದ್ದರೂ ಅವರು ನಮ್ಮನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಅಂತಿಮವಾಗಿ ಮಾತು ಮುಗಿಸಿದ ಪ್ರಧಾನಮಂತ್ರಿಯವರು, 'ಪರೀಕ್ಷಾ ಪೇ ಚರ್ಚಾ' ಕಾರ್ಯಕ್ರಮವು ಕೇವಲ ಪರೀಕ್ಷೆಯ ಚರ್ಚೆಗಳನ್ನು ಮಾತ್ರವಲ್ಲದೆ ಸ್ಥಳೀಯ ಸಂಗೀತ ಮತ್ತು ಅಸ್ಸಾಂನ ಚಹಾವನ್ನೂ ಒಳಗೊಂಡಿದ್ದು, ಇದೊಂದು ಸ್ಮರಣೀಯ ಅನುಭವವಾಗಿದೆ ಎಂದು ತಿಳಿಸಿದರು. ಪರೀಕ್ಷೆಗಳು ಒಂದು ಅವಕಾಶವಿದ್ದಂತೆ ಮತ್ತು ಆರೋಗ್ಯಕರ ಸ್ಪರ್ಧೆಯು ಸಿದ್ಧತೆಯನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿಹೇಳಿದರು. ಸ್ಥಳಗಳು, ವಿದ್ಯಾರ್ಥಿಗಳು ಮತ್ತು ಅನುಭವಗಳು ಬದಲಾದರೂ, ಪ್ರತಿ ಚರ್ಚೆಯ ಉದ್ದೇಶವು ಒಂದೇ ಆಗಿರುತ್ತದೆ—ಅದು ಕೇಳುವುದು, ಅರ್ಥಮಾಡಿಕೊಳ್ಳುವುದು ಮತ್ತು ಒಟ್ಟಾಗಿ ಕಲಿಯುವುದು ಎಂದು ಅವರು ಅಭಿಪ್ರಾಯಪಟ್ಟರು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

 

*****


(ಪ್ರಕಟಣೆ ಐ.ಡಿ.: 2225414) ವಿಸಿಟರ್ ಕೌಂಟರ್ : 24