ಹಣಕಾಸು ಸಚಿವಾಲಯ
ಕೇಂದ್ರ ಬಜೆಟ್ 2026-27ರ ಮುಖ್ಯಾಂಶಗಳು
प्रविष्टि तिथि:
01 FEB 2026 1:08PM by PIB Bengaluru
ಭಾಗ-ಎ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಬಜೆಟ್ ನ ಮುಖ್ಯಾಂಶಗಳು ಈ ಕೆಳಗಿನಂತಿವೆ:
ಕರ್ತವ್ಯ ಭವನದಲ್ಲಿ ಸಿದ್ಧಪಡಿಸಲಾದ ಮೊದಲ ಬಜೆಟ್ ಇದು, ಇದು 3 ಕರ್ತವ್ಯಗಳಿಂದ ಪ್ರೇರಿತವಾಗಿದೆ:
- ಮೊದಲ ಕರ್ತವ್ಯ: ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಹಾಗೂ ಅಸ್ಥಿರ ಜಾಗತಿಕ ವಿದ್ಯಮಾನಗಳಿಗೆ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ಮೂಲಕ ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು ಮತ್ತು ಸುಸ್ಥಿರಗೊಳಿಸುವುದು.
- ಎರಡನೇ ಕರ್ತವ್ಯ: ಜನರ ಆಕಾಂಕ್ಷೆಗಳನ್ನು ಈಡೇರಿಸುವುದು ಮತ್ತು ಅವರ ಸಾಮರ್ಥ್ಯವನ್ನು ವೃದ್ಧಿಸುವುದು, ಆ ಮೂಲಕ ಅವರನ್ನು ಭಾರತದ ಸಮೃದ್ಧಿಯ ಹಾದಿಯಲ್ಲಿ ಬಲಿಷ್ಠ ಪಾಲುದಾರರನ್ನಾಗಿ ಮಾಡುವುದು.
- ಮೂರನೇ ಕರ್ತವ್ಯ: 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ದೃಷ್ಟಿಕೋನಕ್ಕೆ ಅನುಗುಣವಾಗಿ, ಪ್ರತಿಯೊಂದು ಕುಟುಂಬ, ಸಮುದಾಯ, ಪ್ರದೇಶ ಮತ್ತು ವಲಯವು ಸಂಪನ್ಮೂಲಗಳು, ಸೌಲಭ್ಯಗಳು ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಯ ಅವಕಾಶಗಳಿಗೆ ಪ್ರವೇಶವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳುವುದು.
ಬಜೆಟ್ ಅಂದಾಜುಗಳು
- ಸಾಲೇತರ ಸ್ವೀಕೃತಿಗಳು ಮತ್ತು ಒಟ್ಟು ವೆಚ್ಚವನ್ನು ಕ್ರಮವಾಗಿ ₹36.5 ಲಕ್ಷ ಕೋಟಿ ಮತ್ತು ₹53.5 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಕೇಂದ್ರದ ನಿವ್ವಳ ತೆರಿಗೆ ಸ್ವೀಕೃತಿಗಳನ್ನು ₹28.7 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
- ಒಟ್ಟು ಮಾರುಕಟ್ಟೆ ಸಾಲಗಳನ್ನು ₹17.2 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ ಮತ್ತು ದಿನಾಂಕಿತ ಭದ್ರತೆಗಳಿಂದ ನಿವ್ವಳ ಮಾರುಕಟ್ಟೆ ಸಾಲಗಳನ್ನು ₹11.7 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
- ಸಾಲೇತರ ಸ್ವೀಕೃತಿಗಳ ಪರಿಷ್ಕೃತ ಅಂದಾಜು ₹34 ಲಕ್ಷ ಕೋಟಿ ಆಗಿದ್ದು, ಅದರಲ್ಲಿ ಕೇಂದ್ರದ ನಿವ್ವಳ ತೆರಿಗೆ ಸ್ವೀಕೃತಿ ₹26.7 ಲಕ್ಷ ಕೋಟಿ ಆಗಿದೆ.
- ಒಟ್ಟು ವೆಚ್ಚದ ಪರಿಷ್ಕೃತ ಅಂದಾಜು ₹49.6 ಲಕ್ಷ ಕೋಟಿ ಆಗಿದ್ದು, ಅದರಲ್ಲಿ ಬಂಡವಾಳ ವೆಚ್ಚ ಸುಮಾರು ₹11 ಲಕ್ಷ ಕೋಟಿ ಆಗಿದೆ.
- 2026-27ರ ಬಜೆಟ್ ಅಂದಾಜಿನಲ್ಲಿ ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 4.3 ರಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದೆ.
- 2025-26ರ ಪರಿಷ್ಕೃತ ಅಂದಾಜಿನಲ್ಲಿ ವಿತ್ತೀಯ ಕೊರತೆಯನ್ನು 2025-26ರ ಬಜೆಟ್ ಅಂದಾಜಿನಂತೆಯೇ ಜಿಡಿಪಿಯ ಶೇಕಡಾ 4.4 ರಷ್ಟು ಎಂದು ಅಂದಾಜಿಸಲಾಗಿದೆ.
- ಸಾಲ ಮತ್ತು ಜಿಡಿಪಿ ಅನುಪಾತವು 2026-27ರ ಬಜೆಟ್ ಅಂದಾಜಿನಲ್ಲಿ ಜಿಡಿಪಿಯ ಶೇಕಡಾ 55.6 ರಷ್ಟು ಇರುತ್ತದೆ ಎಂದು ಅಂದಾಜಿಸಲಾಗಿದೆ, ಇದು 2025-26ರ ಪರಿಷ್ಕೃತ ಅಂದಾಜಿನಲ್ಲಿ ಶೇಕಡಾ 56.1 ಆಗಿತ್ತು.

ಮೊದಲ ಕರ್ತವ್ಯ: ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವುದು ಮತ್ತು ಸುಸ್ಥಿರಗೊಳಿಸುವುದು - 6 ಪ್ರಮುಖ ಕ್ರಮಗಳ ಪ್ರಸ್ತಾವನೆ
1. 7 ಕಾರ್ಯತಂತ್ರದ ಮತ್ತು ಮುಂಚೂಣಿಯ ವಲಯಗಳಲ್ಲಿ ಉತ್ಪಾದನೆಯನ್ನು ವಿಸ್ತರಿಸುವುದು
i. ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮುಂದಿನ 5 ವರ್ಷಗಳಲ್ಲಿ ₹10,000 ಕೋಟಿ ವೆಚ್ಚದ ʼಬಯೋಫಾರ್ಮಾ ಶಕ್ತಿʼ (ಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಮೂಲಕ ಆರೋಗ್ಯ ರಕ್ಷಣೆಯ ಪ್ರಗತಿಗಾಗಿ ತಂತ್ರ) ಯೋಜನೆಯನ್ನು ಘೋಷಿಸಲಾಗಿದೆ.
-
- 3 ಹೊಸ ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು (NIPER) ಸ್ಥಾಪಿಸುವ ಮತ್ತು ಅಸ್ತಿತ್ವದಲ್ಲಿರುವ 7 ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಬಯೋಫಾರ್ಮಾ ಕೇಂದ್ರೀಕೃತ ಜಾಲ ರಚಿಸಲಾಗುವುದು.
- 1000ಕ್ಕೂ ಹೆಚ್ಚು ಮಾನ್ಯತೆ ಪಡೆದ ಭಾರತೀಯ ಕ್ಲಿನಿಕಲ್ ಪ್ರೋಗ ತಾಣಗಳ ಜಾಲವನ್ನು ರಚಿಸಲಾಗುವುದು.
ii. ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐ ಎಸ್ ಎಂ) 2.0: ಉಪಕರಣಗಳು ಮತ್ತು ಸಾಮಗ್ರಿಗಳನ್ನು ತಯಾರಿಸಲು, ಸಂಪೂರ್ಣ ಭಾರತೀಯ ಐಪಿ ವಿನ್ಯಾಸಗೊಳಿಸಲು ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸಲು ಇದನ್ನು ಪ್ರಾರಂಭಿಸಲಾಗುವುದು.
Iii. ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕಾ ಯೋಜನೆ: ಇದರ ವೆಚ್ಚವನ್ನು ₹40,000 ಕೋಟಿಗೆ ಹೆಚ್ಚಿಸಲಾಗಿದೆ.
iv. ಖನಿಜ ಸಮೃದ್ಧ ರಾಜ್ಯಗಳಾದ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಗಣಿಗಾರಿಕೆ, ಸಂಸ್ಕರಣೆ ಮತ್ತು ಉತ್ಪಾದನೆಯನ್ನು ಉತ್ತೇಜಿಸಲು ವಿಶೇಷ ಅಪರೂಪದ ಖನಿಜ ಕಾರಿಡಾರ್‌ಚಗಳನ್ನು ಸ್ಥಾಪಿಸಲಾಗುವುದು.
v. ಕ್ಲಸ್ಟರ್ ಆಧಾರಿತ ಪ್ಲಗ್-ಅಂಡ್-ಪ್ಲೇ ಮಾದರಿಯಲ್ಲಿ ಸವಾಲಿನ ಮಾರ್ಗದ ಮೂಲಕ 3 ಮೀಸಲಾದ ರಾಸಾಯನಿಕ ಪಾರ್ಕ್ ಗಳನ್ನು ಸ್ಥಾಪಿಸುವಲ್ಲಿ ರಾಜ್ಯಗಳಿಗೆ ಬೆಂಬಲ ನೀಡುವ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲಿದೆ.
vi. ಬಂಡವಾಳ ಸರಕುಗಳ ಸಾಮರ್ಥ್ಯವನ್ನು ಬಲಪಡಿಸುವುದು
- ಸಿ ಪಿ ಎಸ್ ಇ ಗಳಿಂದ 2 ಸ್ಥಳಗಳಲ್ಲಿ ಡಿಜಿಟಲ್ ಚಾಲಿತ ಸ್ವಯಂಚಾಲಿತ ಸೇವಾ ಬ್ಯೂರೋಗಳಾಗಿ ಹೈ-ಟೆಕ್ ಟೂಲ್ ರೂಮ್ ಗಳನ್ನು ಸ್ಥಾಪಿಸಲಾಗುವುದು.
- ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ (ಸಿಐಇ) ದೇಶೀಯ ಉತ್ಪಾದನೆಯನ್ನು ಬಲಪಡಿಸಲು ಹೊಸ ಯೋಜನೆಯನ್ನು ಪರಿಚಯಿಸಲಾಗುವುದು.
- ಕಂಟೈನರ್ ಉತ್ಪಾದನಾ ಯೋಜನೆ: ಜಾಗತಿಕವಾಗಿ ಸ್ಪರ್ಧಾತ್ಮಕ ಕಂಟೈನರ್ ಉತ್ಪಾದನಾ ವ್ಯವಸ್ಥೆಯನ್ನು ರಚಿಸಲು 5 ವರ್ಷಗಳ ಅವಧಿಗೆ ₹10,000 ಕೋಟಿಗೂ ಹೆಚ್ಚು ಅನುದಾನ ಘೋಷಿಸಲಾಗಿದೆ.
vii. ಜವಳಿ ವಲಯಕ್ಕಾಗಿ ಸಮಗ್ರ ಕಾರ್ಯಕ್ರಮ
ಎ. ನೈಸರ್ಗಿಕ ನಾರುಗಳು (ರೇಷ್ಮೆ, ಉಣ್ಣೆ, ಸೆಣಬು) ಮತ್ತು ಆಧುನಿಕ ನಾರುಗಳಲ್ಲಿ ಸ್ವಯಂ ಅವಲಂಬನೆಗಾಗಿ ರಾಷ್ಟ್ರೀಯ ಫೈಬರ್ ಯೋಜನೆ.
ಬಿ. ಯಂತ್ರೋಪಕರಣಗಳಿಗೆ ಬಂಡವಾಳ ನೆರವು, ತಂತ್ರಜ್ಞಾನ ಮೇಲ್ದರ್ಜೆಗೇರಿಸುವಿಕೆ ಮತ್ತು ಸಾಮಾನ್ಯ ಪರೀಕ್ಷಾ ಹಾಗೂ ಪ್ರಮಾಣೀಕರಣ ಕೇಂದ್ರಗಳ ಸ್ಥಾಪನೆಯ ಮೂಲಕ ಸಾಂಪ್ರದಾಯಿಕ ಕ್ಲಸ್ಟರ್ ಗಳನ್ನು ಆಧುನೀಕರಿಸಲು 'ಜವಳಿ ವಿಸ್ತರಣೆ ಮತ್ತು ಉದ್ಯೋಗ ಯೋಜನೆʼ.
- ತಾಂತ್ರಿಕ ಜವಳಿಗಳ ಮೇಲೆ ಕೇಂದ್ರೀಕರಿಸಿ ಮೆಗಾ ಟೆಕ್ಸ್ಟೈಲ್ ಪಾರ್ಕ್ ಗಳನ್ನು ಸ್ಥಾಪಿಸಲಾಗುವುದು.
- ಖಾದಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಬಲಪಡಿಸಲು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ ಉಪಕ್ರಮ ಘೋಷಿಸಲಾಗಿದೆ.
2. ಹಳೆಯ ಕೈಗಾರಿಕಾ ವಲಯಗಳ ಪುನಶ್ಚೇತನ
- 200 ಹಳೆಯ ಕೈಗಾರಿಕಾ ಕ್ಲಸ್ಟರ್ ಗಳ ಮೂಲಸೌಕರ್ಯ ಮತ್ತು ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸುವ ಮೂಲಕ ಅವುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಯೋಜನೆಯನ್ನು ಘೋಷಿಸಲಾಗಿದೆ.
3. "ಚಾಂಪಿಯನ್ ಎಸ್ ಎಂ ಇ" ಗಳ ರಚನೆ ಮತ್ತು ಕಿರು ಉದ್ಯಮಗಳಿಗೆ ಬೆಂಬಲ
- ಭವಿಷ್ಯದ ಚಾಂಪಿಯನ್ ಗಳನ್ನು ಸೃಷ್ಟಿಸಲು ₹₹10,000 ಕೋಟಿ ವೆಚ್ಚದ ಎಸ್ ಎಂ ಇ ಗ್ರೋತ್ ಫಂಡ್ ಪರಿಚಯಿಸಲಾಗುವುದು.
- ಕಿರು ಉದ್ಯಮಗಳಿಗೆ ಬೆಂಬಲ ನೀಡಲು ಸ್ವಾವಲಂಬಿ ಭಾರತ ನಿಧಿಗೆ ಹೆಚ್ಚುವರಿ ₹2,000 ಕೋಟಿ ನೀಡಲಾಗುವುದು.
- 2 ಮತ್ತು 3ನೇ ಶ್ರೇಣಿ ಪಟ್ಟಣಗಳಲ್ಲಿ 'ಕಾರ್ಪೊರೇಟ್ ಮಿತ್ರರ' ಕೇಡರ್ ಅಭಿವೃದ್ಧಿಪಡಿಸಲು ವೃತ್ತಿಪರ ಸಂಸ್ಥೆಗಳ ಮೂಲಕ ಅಲ್ಪಾವಧಿಯ ಕೋರ್ಸ್ ಗಳನ್ನು ವಿನ್ಯಾಸಗೊಳಿಸಲಾಗುವುದು.
4. ಮೂಲಸೌಕರ್ಯಕ್ಕೆ ಬಲವಾದ ಉತ್ತೇಜನ
- ಸಾರ್ವಜನಿಕ ಬಂಡವಾಳ ವೆಚ್ಚವನ್ನು 2026-27ರ ಹಣಕಾಸು ವರ್ಷದಲ್ಲಿ ₹₹12.2 ಲಕ್ಷ ಕೋಟಿಗೆ ಹೆಚ್ಚಿಸಲಾಗುವುದು.
- ಮೂಲಸೌಕರ್ಯ ಅಭಿವೃದ್ಧಿಯ ಹಂತದಲ್ಲಿ ಖಾಸಗಿ ಡೆವಲಪರ್ ಗಳ ವಿಶ್ವಾಸವನ್ನು ಹೆಚ್ಚಿಸಲು ಮೂಲಸೌಕರ್ಯ ಅಪಾಯ ಖಾತರಿ ನಿಧಿಯನ್ನು ಸ್ಥಾಪಿಸಲಾಗುವುದು.
- ಮೀಸಲಾದ ರೀಟ್ಸ್ (ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್) ಗಳನ್ನು ಸ್ಥಾಪಿಸುವ ಮೂಲಕ ಸಿ ಪಿ ಎಸ್ ಇ ಗಳ ಗಮನಾರ್ಹ ರಿಯಲ್ ಎಸ್ಟೇಟ್ ಸ್ವತ್ತುಗಳ ಮರುಬಳಕೆಯನ್ನು ಸರ್ಕಾರವು ವೇಗಗೊಳಿಸಲಿದೆ.
- ಪರಿಸರ ಸ್ನೇಹಿ ಸರಕು ಸಾಗಣೆಯನ್ನು ಉತ್ತೇಜಿಸಲು ಈ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ:
ಎ. ಪೂರ್ವದ ದಂಕುನಿಯಿಂದ ಪಶ್ಚಿಮದ ಸೂರತ್ ಗೆ ಸಂಪರ್ಕ ಕಲ್ಪಿಸುವ ಹೊಸ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಗಳ ಸ್ಥಾಪನೆ.
ಬಿ. ಒಡಿಶಾದ ಎನ್ ಡಬ್ಲ್ಯೂ-5 ರಿಂದ ಪ್ರಾರಂಭಿಸಿ ಮುಂದಿನ 5 ವರ್ಷಗಳಲ್ಲಿ 20 ಹೊಸ ರಾಷ್ಟ್ರೀಯ ಜಲಮಾರ್ಗಗಳನ್ನು ಕಾರ್ಯಾಚರಣೆಗೆ ತರಲಾಗುವುದು, ಇದು ತಾಲ್ಚರ್ ಮತ್ತು ಅಂಗುಲ್ ನಂತಹ ಖನಿಜ ಸಮೃದ್ಧ ಪ್ರದೇಶಗಳನ್ನು ಹಾಗೂ ಕಳಿಂಗ ನಗರದಂತಹ ಕೈಗಾರಿಕಾ ಕೇಂದ್ರಗಳನ್ನು ಪಾರದೀಪ್ ಮತ್ತು ಧಮ್ರಾ ಬಂದರುಗಳಿಗೆ ಸಂಪರ್ಕಿಸುತ್ತದೆ.
-
-
- ಅಗತ್ಯವಿರುವ ಮಾನವಶಕ್ತಿಯ ಅಭಿವೃದ್ಧಿಗಾಗಿ ಪ್ರಾದೇಶಿಕ ಶ್ರೇಷ್ಠತೆಯ ಕೇಂದ್ರಗಳಾಗಿ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.
- ಇದಲ್ಲದೆ, ವಾರಾಣಸಿ ಮತ್ತು ಪಾಟ್ನಾದಲ್ಲಿ ಒಳನಾಡಿನ ಜಲಮಾರ್ಗಗಳಿಗೆ ಸೇವೆ ಸಲ್ಲಿಸುವ ಹಡಗು ದುರಸ್ತಿ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು.
ಸಿ. 2047 ರ ವೇಳೆಗೆ ರೈಲು ಮತ್ತು ರಸ್ತೆಯಿಂದ ಮಾದರಿ ಬದಲಾವಣೆಯನ್ನು ಉತ್ತೇಜಿಸಲು, ಒಳನಾಡಿನ ಜಲಮಾರ್ಗಗಳು ಮತ್ತು ಕರಾವಳಿ ಸಾಗಣೆಯ ಪಾಲನ್ನು ಶೇ.6 ರಿಂದ ಶೇ.12 ಕ್ಕೆ ಹೆಚ್ಚಿಸಲು ಕರಾವಳಿ ಸರಕು ಉತ್ತೇಜನ ಯೋಜನೆಯನ್ನು ಪ್ರಾರಂಭಿಸಲಾಗುವುದು.
- ಸೀಪ್ಲೇನ್ ಗಳ ಉತ್ಪಾದನೆಯನ್ನು ಸ್ಥಳೀಯಗೊಳಿಸಲು ಮತ್ತು ಕೊನೆಯ ಮೈಲಿ ಮತ್ತು ರಿಮೋಟ್ ಸಂಪರ್ಕವನ್ನು ಹೆಚ್ಚಿಸಲು ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರೋತ್ಸಾಹಧನಗಳನ್ನು ಒದಗಿಸಲಾಗುವುದು.
ಎ. ಕಾರ್ಯಾಚರಣೆಗಳಿಗೆ ಬೆಂಬಲ ನೀಡಲು ಸೀಪ್ಲೇನ್ ವಿಜಿಎಫ್ ಯೋಜನೆಯನ್ನು ಪರಿಚಯಿಸಲಾಗುವುದು.
5. ದೀರ್ಘಾವಧಿಯ ಇಂಧನ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದು
- ಕಾರ್ಬನ್ ಕ್ಯಾಪ್ಚರ್ ಯುಟಿಲೈಸೇಶನ್ ಅಂಡ್ ಸ್ಟೋರೇಜ್ (CCUS) ತಂತ್ರಜ್ಞಾನಗಳಿಗಾಗಿ ಮುಂದಿನ 5 ವರ್ಷಗಳಲ್ಲಿ ₹₹20,000 ಕೋಟಿ ವೆಚ್ಚ ಮಾಡಲಾಗುವುದು.
6. ನಗರ ಆರ್ಥಿಕ ವಲಯಗಳ ಅಭಿವೃದ್ಧಿ
· ಸುಧಾರಣೆ-ಹಾಗೂ-ಫಲಿತಾಂಶ ಆಧಾರಿತ ಹಣಕಾಸು ಕಾರ್ಯವಿಧಾನದೊಂದಿಗೆ, 'ಚಾಲೆಂಜ್ ಮೋಡ್' ಮೂಲಕ ತಮ್ಮ ಯೋಜನೆಗಳನ್ನು ಜಾರಿಗೆ ತರಲು, ಪ್ರತಿ ನಗರ ಆರ್ಥಿಕ ವಲಯಕ್ಕೆ (ಸಿಇಆರ್) 5 ವರ್ಷಗಳ ಅವಧಿಯಲ್ಲಿ ₹5,000 ಕೋಟಿ ಹಂಚಿಕೆಯನ್ನು ಘೋಷಿಸಲಾಗಿದೆ.
· ಪರಿಸರ ಸ್ನೇಹಿ ಸುಸ್ಥಿರ ಪ್ರಯಾಣಿಕ ವ್ಯವಸ್ಥೆಗಳನ್ನು ಉತ್ತೇಜಿಸಲು ನಗರಗಳ ನಡುವೆ 'ಬೆಳವಣಿಗೆಯ ಸಂಪರ್ಕಕೇಂದ್ರಗಳಾಗಿ' ಏಳು ಹೈ-ಸ್ಪೀಡ್ ರೈಲು ಕಾರಿಡಾರ್ ಗಳನ್ನು ಸರ್ಕಾರ ಅಭಿವೃದ್ಧಿಪಡಿಸಲಿದೆ. ಇವುಗಳಲ್ಲಿ ಈ ಕೆಳಗಿನವು ಸೇರಿವೆ:
-
- ಮುಂಬೈ-ಪುಣೆ
- ಪುಣೆ-ಹೈದರಾಬಾದ್
- ಹೈದರಾಬಾದ್-ಬೆಂಗಳೂರು
- ಹೈದರಾಬಾದ್-ಚೆನ್ನೈ
- ಚೆನ್ನೈ-ಬೆಂಗಳೂರು
- ದೆಹಲಿ-ವಾರಾಣಸಿ,
- ವಾರಾಣಸಿ-ಸಿಲಿಗುರಿ
· ಆರ್ಥಿಕ ಸ್ಥಿರತೆ, ಒಳಗೊಳ್ಳುವಿಕೆ ಮತ್ತು ಗ್ರಾಹಕರ ರಕ್ಷಣೆಯನ್ನು ಕಾಪಾಡುವುದರ ಜೊತೆಗೆ, ಬ್ಯಾಂಕಿಂಗ್ ವಲಯವನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಭಾರತದ ಮುಂದಿನ ಹಂತದ ಬೆಳವಣಿಗೆಗೆ ಅನುಗುಣವಾಗಿ ಅದನ್ನು ರೂಪಿಸಲು ಸರ್ಕಾರವು “ವಿಕಸಿತ ಭಾರತಕ್ಕಾಗಿ ಬ್ಯಾಂಕಿಂಗ್ ಕುರಿತು ಉನ್ನತ ಮಟ್ಟದ ಸಮಿತಿ”ಯನ್ನು ಸ್ಥಾಪಿಸಲಿದೆ.
· ಸಾರ್ವಜನಿಕ ವಲಯದ ಎನ್ ಬಿ ಎಫ್ ಸಿ ಗಳಲ್ಲಿ ಕಾರ್ಯದಕ್ಷತೆಯನ್ನು ಸುಧಾರಿಸಲು ಮತ್ತು ಹೆಚ್ಚಿನ ಪ್ರಮಾಣದ ಬೆಳವಣಿಗೆಯನ್ನು ಸಾಧಿಸಲು ಸರ್ಕಾರವು ವಿದ್ಯುತ್ ಹಣಕಾಸು ನಿಗಮ ಮತ್ತು ಗ್ರಾಮೀಣ ವಿದ್ಯುದೀಕರಣ ನಿಗಮವನ್ನು ಪುನರ್‍ರಚಿಸಲಿದೆ.
· ಭಾರತದ ವಿಕಸನಗೊಳ್ಳುತ್ತಿರುವ ಆರ್ಥಿಕ ಆದ್ಯತೆಗಳಿಗೆ ಅನುಗುಣವಾಗಿ, ವಿದೇಶಿ ಹೂಡಿಕೆಗಳಿಗಾಗಿ ಹೆಚ್ಚು ಸಮಕಾಲೀನ ಮತ್ತು ಬಳಕೆದಾರ ಸ್ನೇಹಿ ಚೌಕಟ್ಟನ್ನು ರಚಿಸಲು ವಿದೇಶಿ ವಿನಿಮಯ ನಿರ್ವಹಣಾ (ಸಾಲೇತರ ಉಪಕರಣಗಳು) ನಿಯಮಗಳ ಸಮಗ್ರ ಪರಿಶೀಲನೆಯನ್ನು ಪ್ರಸ್ತಾಪಿಸಲಾಗಿದೆ.
ಮುನ್ಸಿಪಲ್ ಬಾಂಡ್ ಗಳು
· ದೊಡ್ಡ ನಗರಗಳು ಹೆಚ್ಚಿನ ಮೌಲ್ಯದ ಮುನ್ಸಿಪಲ್ ಬಾಂಡ್ ಗಳನ್ನು ಬಿಡುಗಡೆ ಮಾಡುವುದನ್ನು ಪ್ರೋತ್ಸಾಹಿಸಲು, ₹1000 ಕೋಟಿಗಿಂತ ಹೆಚ್ಚಿನ ಮೊತ್ತದ ಒಂದೇ ಬಾಂಡ್ ಬಿಡುಗಡೆಗೆ ₹100 ಕೋಟಿ ಪ್ರೋತ್ಸಾಹ ಧನವನ್ನು ಘೋಷಿಸಲಾಗಿದೆ.
ಎರಡನೇ ಕರ್ತವ್ಯ: ಆಕಾಂಕ್ಷೆಗಳನ್ನು ಈಡೇರಿಸುವುದು ಮತ್ತು ಜನರ ಸಾಮರ್ಥ್ಯವನ್ನು ವೃದ್ಧಿಸುವುದು
- ಸೇವಾ ವಲಯದ ಮೇಲೆ ಗಮನ ಕೇಂದ್ರೀಕರಿಸಲು ಉನ್ನತ ಮಟ್ಟದ ‘ಶಿಕ್ಷಣದಿಂದ ಉದ್ಯೋಗ ಮತ್ತು ಉದ್ಯಮ’ ಸ್ಥಾಯಿ ಸಮಿತಿಯನ್ನು ಸ್ಥಾಪಿಸಲಾಗುವುದು.
- ಮುಂದಿನ 5 ವರ್ಷಗಳಲ್ಲಿ 1,00,000 ಪೂರಕ ಆರೋಗ್ಯ ವೃತ್ತಿಪರರನ್ನು (Allied Health Professionals) ಸೇರಿಸಲಾಗುವುದು.
ವಿಕ್ಷಿತ್ ಭಾರತಕ್ಕಾಗಿ ವೃತ್ತಿಪರರ ಸೃಷ್ಟಿ
· ಅಸ್ತಿತ್ವದಲ್ಲಿರುವ ಪೂರಕ ಆರೋಗ್ಯ ವೃತ್ತಿಪರರ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲಾಗುವುದು ಮತ್ತು ಖಾಸಗಿ ಹಾಗೂ ಸರ್ಕಾರಿ ವಲಯಗಳಲ್ಲಿ ಹೊಸ ಎ.ಹೆಚ್.ಪಿ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.
ಎ. ಮುಂದಿನ 5 ವರ್ಷಗಳಲ್ಲಿ 1,00,000 ಪೂರಕ ಆರೋಗ್ಯ ವೃತ್ತಿಪರರನ್ನು ಸೇರ್ಪಡೆಗೊಳಿಸಲಾಗುವುದು.
· ಭಾರತವನ್ನು ವೈದ್ಯಕೀಯ ಪ್ರವಾಸೋದ್ಯಮ ಸೇವೆಗಳ ಕೇಂದ್ರವಾಗಿ ಉತ್ತೇಜಿಸಲು ಐದು ಪ್ರಾದೇಶಿಕ ವೈದ್ಯಕೀಯ ಹಬ್ ಗಳನ್ನು ಸ್ಥಾಪಿಸಲಾಗುವುದು.
ಆಯುಷ್
· 3 ಹೊಸ ಅಳಿಕ ಭಾರತ ಆಯುರ್ವೇದ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.
ಪಶುಸಂಗೋಪನೆ
· ಪಶುವೈದ್ಯಕೀಯ ವೃತ್ತಿಪರರ ಲಭ್ಯತೆಯನ್ನು ಸರ್ಕಾರವು 20,000 ಕ್ಕೂ ಹೆಚ್ಚು ಹೆಚ್ಚಿಸಲಿದೆ.
ಎ. ಖಾಸಗಿ ವಲಯದಲ್ಲಿ ಪಶುವೈದ್ಯಕೀಯ ಮತ್ತು ಪ್ಯಾರಾ ವೆಟ್ ಕಾಲೇಜುಗಳು, ಪಶುವೈದ್ಯಕೀಯ ಆಸ್ಪತ್ರೆಗಳು, ರೋಗನಿರ್ಣಯ ಪ್ರಯೋಗಾಲಯಗಳು ಮತ್ತು ಸಂತಾನೋತ್ಪತ್ತಿ ಕೇಂದ್ರಗಳ ಸ್ಥಾಪನೆಗಾಗಿ ಸಾಲ-ಆಧಾರಿತ ಬಂಡವಾಳ ಸಬ್ಸಿಡಿ ಬೆಂಬಲ ಯೋಜನೆಯನ್ನು ಪ್ರಾರಂಭಿಸಲಾಗುವುದು.
ಆರೆಂಜ್ ಎಕಾನಮಿ
· 15,000 ಪ್ರೌಢಶಾಲೆಗಳು ಮತ್ತು 500 ಕಾಲೇಜುಗಳಲ್ಲಿ ಅನಿಮೇಷನ್, ವಿಶ್ಯುವಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳನ್ನು ಸ್ಥಾಪಿಸಲು ಮುಂಬೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್ ಗೆ ಬೆಂಬಲ ನೀಡಲಾಗುವುದು.
ಶಿಕ್ಷಣ
· ಪ್ರಮುಖ ಕೈಗಾರಿಕಾ ಮತ್ತು ಲಾಜಿಸ್ಟಿಕ್ ಕಾರಿಡಾರ್ ಗಳ ಸಮೀಪದಲ್ಲಿ 'ಚಾಲೆಂಜ್ ರೂಟ್' ಮೂಲಕ 5 ವಿಶ್ವವಿದ್ಯಾಲಯ ಟೌನ್‌ಶಿಪ್ ಗಳನ್ನು ನಿರ್ಮಿಸಲಾಗುವುದು.
ಎ. ವಿಜಿಎಫ್/ಬಂಡವಾಳ ನೆರವಿನ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ಹೆಣ್ಣು ಮಕ್ಕಳ ಹಾಸ್ಟೆಲ್ ಸ್ಥಾಪಿಸಲಾಗುವುದು.
ಪ್ರವಾಸೋದ್ಯಮ
· ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್‌ಮೆಂಟ್ ಅಂಡ್ ಕ್ಯಾಟರಿಂಗ್ ಟೆಕ್ನಾಲಜಿಯನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಆಗಿ ಮೇಲ್ದರ್ಜೆಗೇರಿಸಲಾಗುವುದು.
ಎ. ಐಐಎಂ ಸಹಯೋಗದೊಂದಿಗೆ ಹೈಬ್ರಿಡ್ ಮೋಡ್ ನಲ್ಲಿ ಪ್ರಮಾಣಿತ, ಉತ್ತಮ ಗುಣಮಟ್ಟದ 12 ವಾರಗಳ ತರಬೇತಿ ಕೋರ್ಸ್ ಮೂಲಕ 20 ಪ್ರವಾಸಿ ತಾಣಗಳಲ್ಲಿ 10,000 ಮಾರ್ಗದರ್ಶಿಗಳನ್ನು ಕೌಶಲ್ಯಗೊಳಿಸಲು ಪ್ರಾಯೋಗಿಕ ಯೋಜನೆಯನ್ನು ಘೋಷಿಸಲಾಗಿದೆ.
ಬಿ. ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಪರಂಪರೆಯ ಎಲ್ಲಾ ಮಹತ್ವದ ಸ್ಥಳಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ರಾಷ್ಟ್ರೀಯ ತಾಣ ಡಿಜಿಟಲ್ ಜ್ಞಾನ ಗ್ರಿಡ್ ಅನ್ನು ಸ್ಥಾಪಿಸಲಾಗುವುದು.
ಪರಂಪರೆ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮ
· ಲೋಥಲ್, ಧೋಲಾವಿರಾ, ರಾಖಿಗರ್ಹಿ, ಆದಿಚನಲ್ಲೂರು, ಸಾರನಾಥ್, ಹಸ್ತಿನಾಪುರ ಮತ್ತು ಲೇಹ್ ಅರಮನೆ ಸೇರಿದಂತೆ 15 ಪುರಾತತ್ವ ತಾಣಗಳನ್ನು ರೋಮಾಂಚಕ ಮತ್ತು ಸಾಂಸ್ಕೃತಿಕ ಅನುಭವದ ತಾಣಗಳಾಗಿ ಅಭಿವೃದ್ಧಿಪಡಿಸಲಾಗುವುದು.
ಕ್ರೀಡೆ
• ಮುಂದಿನ ದಶಕದಲ್ಲಿ ಕ್ರೀಡಾ ವಲಯವನ್ನು ಪರಿವರ್ತಿಸಲು ಖೇಲೋ ಇಂಡಿಯಾ ಮಿಷನ್ ಅನ್ನು ಪ್ರಾರಂಭಿಸಲಾಗುವುದು.
ಮೂರನೇ ಕರ್ತವ್ಯ: 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ದೃಷ್ಟಿಕೋನದೊಂದಿಗೆ ನಾಲ್ಕು ಕ್ಷೇತ್ರಗಳ ಮೇಲೆ ಗಮನ
1. ರೈತರ ಆದಾಯ ಹೆಚ್ಚಳ
· ಈ ಕೆಳಗಿನವುಗಳಿಗಾಗಿ ಹೊಸ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:
ಎ. 500 ಜಲಾಶಯಗಳು ಮತ್ತು ಅಮೃತ ಸರೋವರಗಳ ಸಮಗ್ರ ಅಭಿವೃದ್ಧಿ.
ಉನ್ನತ ಮೌಲ್ಯದ ಕೃಷಿ:
· ಈ ಕೆಳಗಿನ ಉನ್ನತ ಮೌಲ್ಯದ ಬೆಳೆಗಳಿಗೆ ಸರ್ಕಾರ ಬೆಂಬಲ ನೀಡಲಿದೆ:
ಎ. ಕರಾವಳಿ ಪ್ರದೇಶಗಳಲ್ಲಿ ತೆಂಗು, ಶ್ರೀಗಂಧ, ಕೋಕೋ ಮತ್ತು ಗೋಡಂಬಿ.
ಬಿ. ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಉತ್ಪಾದಕತೆಯನ್ನು ವೃದ್ಧಿಸಲು 'ತೆಂಗು ಉತ್ತೇಜನ ಯೋಜನೆ' ಪ್ರಾರಂಭಿಸಲಾಗುವುದು.
ಭಾರತ್-ವಿಸ್ತಾರ
ಕೃಷಿ ಪದ್ಧತಿಗಳ ಮೇಲಿನ ಅಗ್ರಿಸ್ಟಾಕ್ ಪೋರ್ಟಲ್ ಗಳು ಮತ್ತು ಐಸಿಎಆರ್ ಪ್ಯಾಕೇಜ್ ಗಳನ್ನು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳೊಂದಿಗೆ ಸಂಯೋಜಿಸಲು, ಸರ್ಕಾರವು ಬಹುಭಾಷಾ ಎಐ ಸಾಧನವಾದ 'ಭಾರತ್-ವಿಸ್ತಾರ' ಅನ್ನು ಪ್ರಾರಂಭಿಸಲಿದೆ.
2. ದಿವ್ಯಾಂಗರ ಸಬಲೀಕರಣ
· ಐಟಿ, ಎವಿಜಿಸಿ ವಲಯಗಳು, ಆತಿಥ್ಯ ಮತ್ತು ಆಹಾರ ಹಾಗೂ ಪಾನೀಯ ವಲಯಗಳಲ್ಲಿ ಕಾರ್ಯ-ಆಧಾರಿತ ಮತ್ತು ಪ್ರಕ್ರಿಯೆ-ಚಾಲಿತ ಪಾತ್ರಗಳನ್ನು ನೀಡಲು ದಿವ್ಯಾಂಗರಿಗಾಗಿ 'ದಿವ್ಯಾಂಗಜನ ಕೌಶಲ್ಯ ಯೋಜನೆ'.
3. ಮಾನಸಿಕ ಆರೋಗ್ಯ ಮತ್ತು ಆಘಾತ ಆರೈಕೆಗೆ ಬದ್ಧತೆ
ಉತ್ತರ ಭಾರತದಲ್ಲಿ ಸರ್ಕಾರವು ನಿಮ್ಹಾನ್ಸ್-2 ಅನ್ನು ಸ್ಥಾಪಿಸಲಿದೆ.
ಎ. ರಾಂಚಿ ಮತ್ತು ತೇಜ್‌ಪುರದಲ್ಲಿರುವ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಪ್ರಾದೇಶಿಕ ಅತ್ಯುನ್ನತ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಲಿದೆ.
4. ಪೂರ್ವೋದಯ ರಾಜ್ಯಗಳು ಮತ್ತು ಈಶಾನ್ಯ ವಲಯದ ಮೇಲೆ ಗಮನ
· ದುರ್ಗಾಪುರದಲ್ಲಿ ಉತ್ತಮ ಸಂಪರ್ಕ ಹೊಂದಿದ ನೋಡ್ ನೊಂದಿಗೆ ಸಮಗ್ರ ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಪಡಿಸುವುದು, 5 ಪೂರ್ವೋದಯ ರಾಜ್ಯಗಳಲ್ಲಿ 5 ಪ್ರವಾಸಿ ತಾಣಗಳ ಸೃಷ್ಟಿ ಮತ್ತು 4,000 ಇ-ಬಸ್‌ಚಗಳ ಪೂರೈಕೆ.
ಎ. ಅರುಣಾಚಲ ಪ್ರದೇಶ, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಬೌದ್ಧ ಸರ್ಕ್ಯೂಟ್ ಗಳ ಅಭಿವೃದ್ಧಿಗಾಗಿ ಯೋಜನೆಯೊಂದನ್ನು ಪ್ರಾರಂಭಿಸಲಾಗುವುದು.
16ನೇ ಹಣಕಾಸು ಆಯೋಗ
· 16ನೇ ಹಣಕಾಸು ಆಯೋಗದ ಶಿಫಾರಸಿನಂತೆ ಸರ್ಕಾರವು 2026-27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ ₹1.4 ಲಕ್ಷ ಕೋಟಿಗಳನ್ನು ಹಣಕಾಸು ಆಯೋಗದ ಅನುದಾನವಾಗಿ ಒದಗಿಸಿದೆ.
ಭಾಗ – ಬಿ
ನೇರ ತೆರಿಗೆಗಳು

ಹೊಸ ಆದಾಯ ತೆರಿಗೆ ಕಾಯ್ದೆ
- ಹೊಸ ಆದಾಯ ತೆರಿಗೆ ಕಾಯ್ದೆ, 2025 ಏಪ್ರಿಲ್ 2026 ರಿಂದ ಜಾರಿಗೆ ಬರಲಿದೆ.
- ಸರಳೀಕೃತ ಆದಾಯ ತೆರಿಗೆ ನಿಯಮಗಳು ಮತ್ತು ನಮೂನೆಗಳನ್ನು ಶೀಘ್ರದಲ್ಲೇ ಅಧಿಸೂಚಿಸಲಾಗುವುದು. ಸಾಮಾನ್ಯ ನಾಗರಿಕರ ಸುಲಭ ಅನುಸರಣೆಗಾಗಿ ಈ ನಮೂನೆಗಳನ್ನು ಮರುರೂಪಿಸಲಾಗಿದೆ.
ಸುಲಭ ಜೀವನ
· ಮೋಟಾರು ಅಪಘಾತ ಹಕ್ಕುಗಳ ನ್ಯಾಯಮಂಡಳಿಯು ವ್ಯಕ್ತಿಗೆ ನೀಡುವ ಬಡ್ಡಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು ಮತ್ತು ಈ ಖಾತೆಯಲ್ಲಿನ ಯಾವುದೇ ಟಿಡಿಎಸ್ ಅನ್ನು ರದ್ದುಗೊಳಿಸಲಾಗುವುದು.
ಟಿಸಿಎಸ್ ತರ್ಕಬದ್ಧಗೊಳಿಸುವಿಕೆ
· ವಿದೇಶಿ ಪ್ರವಾಸ ಕಾರ್ಯಕ್ರಮದ ಪ್ಯಾಕೇಜ್ ಮಾರಾಟದ ಮೇಲಿನ ಟಿಸಿಎಸ್ ದರವನ್ನು ಶೇಕಡಾ 2 ಕ್ಕೆ ಇಳಿಸಲಾಗುವುದು (ಪ್ರಸ್ತುತ ಇರುವ ಶೇ. 2-20 ರಿಂದ).
· ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶದ ಎಲ್ ಆರ್ ಎಸ್ ಹಣ ವರ್ಗಾವಣೆಗಾಗಿ ಟಿಸಿಎಸ್ ದರವನ್ನು ಶೇಕಡಾ 2 ಕ್ಕೆ ಇಳಿಸಲಾಗುವುದು (ಪ್ರಸ್ತುತ ಇರುವ ಶೇ. 5 ರಿಂದ).
· ಮಾನವಶಕ್ತಿ ಪೂರೈಕೆಗಾಗಿ ಸರಳೀಕೃತ ಟಿಡಿಎಸ್ ನಿಬಂಧನೆಗಳು ಹೆಚ್ಚು ಕಾರ್ಮಿಕರು ಅಗತ್ಯವಿರುವ ಉದ್ಯಮಗಳಿಗೆ ಪ್ರಯೋಜನವನ್ನು ನೀಡಲಿವೆ.
· ಸಣ್ಣ ತೆರಿಗೆದಾರರಿಗಾಗಿ ಒಂದು ಯೋಜನೆ: ಇದರಲ್ಲಿ ಮೌಲ್ಯಮಾಪಕರ ಬಳಿ ಅರ್ಜಿ ಸಲ್ಲಿಸುವ ಬದಲಿಗೆ, ಕಡಿಮೆ ಅಥವಾ ಶೂನ್ಯ ಕಡಿತದ ಪ್ರಮಾಣಪತ್ರವನ್ನು ಪಡೆಯಲು ನಿಯಮ ಆಧಾರಿತ ಸ್ವಯಂಚಾಲಿತ ಪ್ರಕ್ರಿಯೆಯನ್ನು ಪರಿಚಯಿಸಲಾಗುವುದು.
· ಲಾಭಾಂಶ, ಬಡ್ಡಿ ಇತ್ಯಾದಿಗಳ ಮೇಲಿನ ಟಿಡಿಎಸ್ ಸಂಬಂಧಿತ ನಮೂನೆ 15ಜಿ ಅಥವಾ 15ಎಚ್ ಅನ್ನು ಡಿಪಾಸಿಟರಿಗಳೊಂದಿಗೆ ಸಲ್ಲಿಸಲು ಏಕಗವಾಕ್ಷಿ ವ್ಯವಸ್ಥೆ.
· ರಿಟರ್ನ್ಸ್ ಪರಿಷ್ಕರಿಸಲು ಲಭ್ಯವಿರುವ ಸಮಯವನ್ನು ನಾಮಮಾತ್ರದ ಶುಲ್ಕದೊಂದಿಗೆ ಡಿಸೆಂಬರ್ 31 ರಿಂದ ಮಾರ್ಚ್ 31 ರವರೆಗೆ ವಿಸ್ತರಿಸಲಾಗುವುದು.
· ತೆರಿಗೆ ರಿಟರ್ನ್ಸ್ ಸಲ್ಲಿಸುವ ಕಾಲಮಿತಿಯನ್ನು ಹಂತ ಹಂತವಾಗಿ ವಿಂಗಡಿಸಲಾಗುವುದು.
· ಅನಿವಾಸಿ ಭಾರತೀಯರನ್ನು ಒಳಗೊಂಡ ಆಸ್ತಿ ವಹಿವಾಟುಗಳಿಗಾಗಿ ಇರುವ ಟ್ಯಾನ್ (TAN) ಅನ್ನು ನಿವಾಸಿ ಖರೀದಿದಾರರ ಪಾನ್ (PAN) ಆಧಾರಿತ ಚಲನ್ ನೊಂದಿಗೆ ಬದಲಾಯಿಸಲಾಗುವುದು.
· ಸಣ್ಣ ತೆರಿಗೆದಾರರು ತಮ್ಮ ವಿದೇಶಿ ಆದಾಯ ಅಥವಾ ಆಸ್ತಿಯನ್ನು ಬಹಿರಂಗಪಡಿಸಲು ಒಂದು ಬಾರಿಯ 6 ತಿಂಗಳ ವಿದೇಶಿ ಆಸ್ತಿ ಬಹಿರಂಗಪಡಿಸುವಿಕೆ ಯೋಜನೆಯನ್ನು ನೀಡಲಾಗುವುದು.
ದಂಡ ಮತ್ತು ಪ್ರಾಸಿಕ್ಯೂಷನ್ ತರ್ಕಬದ್ಧಗೊಳಿಸುವಿಕೆ
· ಆದಾಯ ತೆರಿಗೆ ಮೌಲ್ಯಮಾಪನ ಮತ್ತು ದಂಡದ ಪ್ರಕ್ರಿಯೆಗಳನ್ನು ಎರಡಕ್ಕೂ ಅನ್ವಯವಾಗುವ ಸಾಮಾನ್ಯ ಆದೇಶದ ಮೂಲಕ ಸಂಯೋಜಿಸಲು ಪ್ರಸ್ತಾಪಿಸಲಾಗಿದೆ.
· ವ್ಯಾಜ್ಯಗಳನ್ನು ಕಡಿಮೆ ಮಾಡಲು, ಮರು-ಮೌಲ್ಯಮಾಪನ ಪ್ರಕ್ರಿಯೆಗಳು ಪ್ರಾರಂಭವಾದ ನಂತರವೂ ತೆರಿಗೆದಾರರು ತಮ್ಮ ರಿಟರ್ನ್ಸ್ ಅನ್ನು ಅಪ್‌ಡೇಟ್ ಮಾಡಲು ಅವಕಾಶ ನೀಡಲಾಗುವುದು; ಇದಕ್ಕೆ ಸಂಬಂಧಿತ ವರ್ಷಕ್ಕೆ ಅನ್ವಯವಾಗುವ ತೆರಿಗೆ ದರದ ಮೇಲೆ ಹೆಚ್ಚುವರಿ ಶೇಕಡಾ 10 ರಷ್ಟು ತೆರಿಗೆ ದರವನ್ನು ವಿಧಿಸಲಾಗುವುದು.
· ಆದಾಯದ ತಪ್ಪು ವರದಿಗಾಗಿ ವಿಧಿಸುವ ದಂಡಕ್ಕೂ, ಹೆಚ್ಚುವರಿ ಆದಾಯ ತೆರಿಗೆ ಪಾವತಿಯೊಂದಿಗೆ ವಿನಾಯಿತಿ ಪಡೆಯಲು ಅರ್ಹತೆ ನೀಡಲಾಗುವುದು.
· ಆದಾಯ ತೆರಿಗೆ ಕಾಯ್ದೆಯ ಅಡಿಯಲ್ಲಿರುವ ಪ್ರಾಸಿಕ್ಯೂಷನ್ ಚೌಕಟ್ಟನ್ನು ತರ್ಕಬದ್ಧಗೊಳಿಸಲಾಗುವುದು.
· ಲೆಕ್ಕಪುಸ್ತಕಗಳು ಮತ್ತು ದಾಖಲೆಗಳನ್ನು ಹಾಜರುಪಡಿಸದಿರುವುದು ಹಾಗೂ ವಸ್ತುವಿನ ರೂಪದಲ್ಲಿ ಪಾವತಿ ಮಾಡಿದಾಗ ಟಿಡಿಎಸ್ ಪಾವತಿಯ ಅವಶ್ಯಕತೆಗೆ ಸಂಬಂಧಿಸಿದ ನಿಯಮಗಳನ್ನು ಅಪರಾಧಮುಕ್ತಗೊಳಿಸಲಾಗುವುದು.
· 20 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಒಟ್ಟು ಮೌಲ್ಯದ ವಿದೇಶಿ ಚರಾಸ್ತಿಗಳನ್ನು ಬಹಿರಂಗಪಡಿಸದಿದ್ದಲ್ಲಿ, 01.10.2024 ರಿಂದ ಪೂರ್ವಾನ್ವಯವಾಗುವಂತೆ ಪ್ರಾಸಿಕ್ಯೂಷನ್ ನಿಂದ ವಿನಾಯಿತಿ ನೀಡಲಾಗುವುದು.
ಸಹಕಾರಿ ಸಂಘಗಳು
· ತಮ್ಮ ಸದಸ್ಯರು ಬೆಳೆದ ಅಥವಾ ಉತ್ಪಾದಿಸಿದ ಹಾಲು, ಎಣ್ಣೆಕಾಳುಗಳು, ಹಣ್ಣುಗಳು ಅಥವಾ ತರಕಾರಿಗಳನ್ನು ಪೂರೈಸುವ ಪ್ರಾಥಮಿಕ ಸಹಕಾರಿ ಸಂಘಗಳಿಗೆ ಈಗಾಗಲೇ ನೀಡಲಾಗಿರುವ ತೆರಿಗೆ ಕಡಿತದ ಸೌಲಭ್ಯವನ್ನು, ಪಶು ಆಹಾರ ಮತ್ತು ಹತ್ತಿ ಬೀಜಗಳನ್ನು ಪೂರೈಸುವ ಸಂಘಗಳಿಗೂ ವಿಸ್ತರಿಸಲಾಗುವುದು.
· ಅಂತರ-ಸಹಕಾರಿ ಸಂಘಗಳ ಲಾಭಾಂಶದ ಆದಾಯವನ್ನು ಅದು ಮುಂದೆ ತನ್ನ ಸದಸ್ಯರಿಗೆ ವಿತರಿಸಲ್ಪಟ್ಟ ಮಟ್ಟಿಗೆ ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಕಡಿತವಾಗಿ ಅನುಮತಿಸಲಾಗುವುದು.
· ಅಧಿಸೂಚಿತ ರಾಷ್ಟ್ರೀಯ ಸಹಕಾರಿ ಒಕ್ಕೂಟವು 31.1.2026 ರವರೆಗೆ ಕಂಪನಿಗಳಲ್ಲಿ ಮಾಡಿದ ಹೂಡಿಕೆಯ ಮೇಲೆ ಪಡೆದ ಲಾಭಾಂಶದ ಆದಾಯಕ್ಕೆ, ಆ ಲಾಭಾಂಶವನ್ನು ತನ್ನ ಸದಸ್ಯ ಸಹಕಾರ ಸಂಘಗಳಿಗೆ ಮುಂದೆ ವಿತರಿಸಿದಲ್ಲಿ 3 ವರ್ಷಗಳ ಅವಧಿಗೆ ವಿನಾಯಿತಿ ನೀಡಲಾಗುವುದು.
ಭಾರತದ ಬೆಳವಣಿಗೆಯ ಎಂಜಿನ್ ಆಗಿ ಐಟಿ ಲಯಕ್ಕೆ ಬೆಂಬಲ
· ಸಾಫ್ಟ್ ವೇರ್ ಅಭಿವೃದ್ಧಿ ಸೇವೆಗಳು, ಐಟಿ ಆಧಾರಿತ ಸೇವೆಗಳು, ಜ್ಞಾನ ಪ್ರಕ್ರಿಯೆ ಹೊರಗುತ್ತಿಗೆ ಸೇವೆಗಳು ಮತ್ತು ಸಾಫ್ಟ್ ವೇರ್ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದದ ಸಂಶೋಧನೆ ಮತ್ತು ಅಭಿವೃದ್ಧಿ ಸೇವೆಗಳನ್ನು ಶೇಕಡಾ 15.5 ರ ಸಾಮಾನ್ಯ 'ಸೇಫ್ ಹಾರ್ಬರ್ ಮಾರ್ಜಿನ್' ನೊಂದಿಗೆ 'ಮಾಹಿತಿ ತಂತ್ರಜ್ಞಾನ ಸೇವೆಗಳು' ಎಂಬ ಒಂದೇ ವರ್ಗದ ಅಡಿಯಲ್ಲಿ ಸೇರಿಸಲಾಗುವುದು.
· ಐಟಿ ಸೇವೆಗಳಿಗೆ ಸೇಫ್ ಹಾರ್ಬರ್ ಸೌಲಭ್ಯವನ್ನು ಪಡೆಯುವ ಮಿತಿಯನ್ನು 300 ಕೋಟಿ ರೂಪಾಯಿಗಳಿಂದ 2,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗುವುದು.
· ಐಟಿ ಸೇವೆಗಳ ಸೇಫ್ ಹಾರ್ಬರ್ ಅನ್ನು ಸ್ವಯಂಚಾಲಿತ ನಿಯಮ-ಚಾಲಿತ ಪ್ರಕ್ರಿಯೆಯ ಮೂಲಕ ಅನುಮೋದಿಸಲಾಗುವುದು ಮತ್ತು ಇದನ್ನು ಸತತ 5 ವರ್ಷಗಳ ಅವಧಿಯವರೆಗೆ ಮುಂದುವರಿಸಬಹುದು.
· ಐಟಿ ಸೇವೆಗಳಿಗಾಗಿ ಏಕಪಕ್ಷೀಯ ಮುಂಗಡ ಬೆಲೆ ಒಪ್ಪಂದ (ಎಪಿಎ) ಪ್ರಕ್ರಿಯೆಯನ್ನು ವೇಗಗೊಳಿಸಲಾಗುವುದು ಮತ್ತು ಇದನ್ನು 2 ವರ್ಷಗಳ ಅವಧಿಯೊಳಗೆ ಮುಕ್ತಾಯಗೊಳಿಸಲು ಪ್ರಯತ್ನಿಸಲಾಗುವುದು; ತೆರಿಗೆದಾರರ ಕೋರಿಕೆಯ ಮೇರೆಗೆ ಇದನ್ನು 6 ತಿಂಗಳು ವಿಸ್ತರಿಸಬಹುದು.
· ಎಪಿಎಗೆ ಒಳಪಡುವ ಸಂಸ್ಥೆಗೆ ಲಭ್ಯವಿರುವ 'ಪರಿಷ್ಕೃತ ರಿಟರ್ನ್ಸ್' ಸೌಲಭ್ಯವನ್ನು ಅದರ ಸಂಯೋಜಿತ ಸಂಸ್ಥೆಗಳಿಗೂ ವಿಸ್ತರಿಸಲಾಗುವುದು.
ಜಾಗತಿಕ ಹೂಡಿಕೆಯನ್ನು ಆಕರ್ಷಿಸುವುದು
· ಭಾರತದಿಂದ ಡೇಟಾ ಸೆಂಟರ್ ಸೇವೆಗಳನ್ನು ಬಳಸಿಕೊಂಡು ಜಾಗತಿಕವಾಗಿ ಗ್ರಾಹಕರಿಗೆ ಕ್ಲೌಡ್ ಸೇವೆಗಳನ್ನು ಒದಗಿಸುವ ಯಾವುದೇ ವಿದೇಶಿ ಕಂಪನಿಗೆ 2047 ರವರೆಗೆ 'ತೆರಿಗೆ ರಜೆ' ನೀಡಲಾಗುವುದು.
· ಭಾರತದಿಂದ ಡೇಟಾ ಸೆಂಟರ್ ಸೇವೆಗಳನ್ನು ಒದಗಿಸುವ ಕಂಪನಿಯು ಸಂಬಂಧಿತ ಸಂಸ್ಥೆಯಾಗಿದ್ದರೆ, ವೆಚ್ಚದ ಮೇಲೆ ಶೇಕಡಾ 15 ರಷ್ಟು 'ಸೇಫ್ ಹಾರ್ಬರ್' ನೀಡಲಾಗುವುದು.
· ಬಾಂಡೆಡ್ ವೇರ್‌ಹೌಸ್ ನಲ್ಲಿ ಬಿಡಿಭಾಗಗಳ ದಾಸ್ತಾನಿಗಾಗಿ ಅನಿವಾಸಿಗಳಿಗೆ ಇನ್‌ವಾಯ್ಸ್ ಮೌಲ್ಯದ ಶೇಕಡಾ 2 ರಷ್ಟು ಲಾಭದ ಮಿತಿಯಲ್ಲಿ 'ಸೇಫ್ ಹಾರ್ಬರ್' ನೀಡಲಾಗುವುದು. ಇದರ ಪರಿಣಾಮವಾಗಿ ಬರುವ ಸುಮಾರು ಶೇಕಡಾ 0.7 ರಷ್ಟು ತೆರಿಗೆಯು ಸ್ಪರ್ಧಾತ್ಮಕ ದೇಶಗಳಿಗಿಂತ ಗಣನೀಯವಾಗಿ ಕಡಿಮೆಯಿರಲಿದೆ.
· ಬಾಂಡೆಡ್ ಝೋನ್ ನಲ್ಲಿರುವ ಯಾವುದೇ ಟೋಲ್ ತಯಾರಕರಿಗೆ ಬಂಡವಾಳ ಸರಕುಗಳು, ಉಪಕರಣಗಳು ಅಥವಾ ಟೂಲಿಂಗ್ ಅನ್ನು ಒದಗಿಸುವ ಯಾವುದೇ ಅನಿವಾಸಿಗಳಿಗೆ 5 ವರ್ಷಗಳ ಕಾಲ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುವುದು.
· ಅಧಿಸೂಚಿತ ಯೋಜನೆಗಳ ಅಡಿಯಲ್ಲಿ 5 ವರ್ಷಗಳ ಕಾಲ ತಂಗುವ ಅನಿವಾಸಿ ತಜ್ಞರ ಜಾಗತಿಕ (ಭಾರತೀಯ ಮೂಲದ್ದಲ್ಲದ) ಆದಾಯಕ್ಕೆ ವಿನಾಯಿತಿ ನೀಡಲಾಗುವುದು.
· ಕಲ್ಪಿತ ಆಧಾರದ ಮೇಲೆ ತೆರಿಗೆ ಪಾವತಿಸುವ ಎಲ್ಲಾ ಅನಿವಾಸಿಗಳಿಗೆ ಕನಿಷ್ಠ ಪರ್ಯಾಯ ತೆರಿಗೆಯಿಂದ (MAT) ವಿನಾಯಿತಿ ನೀಡಲಾಗುವುದು.
ತೆರಿಗೆ ಆಡಳಿತ (Tax administration)
· ಭಾರತೀಯ ಲೆಕ್ಕಪತ್ರ ಮಾನದಂಡಗಳಲ್ಲಿಯೇ (IndAS) ಆದಾಯ ಗಣನೆ ಮತ್ತು ಪ್ರಕಟಣೆ ಮಾನದಂಡಗಳ (ಐಸಿಡಿಎಸ್) ಅವಶ್ಯಕತೆಗಳನ್ನು ಅಳವಡಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಮತ್ತು ಕೇಂದ್ರೀಯ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಜಂಟಿ ಸಮಿತಿಯನ್ನು ರಚಿಸಲಾಗುವುದು. ತೆರಿಗೆ ವರ್ಷ 2027-28 ರಿಂದ ಐಸಿಡಿಎಸ್ ಆಧಾರಿತ ಪ್ರತ್ಯೇಕ ಲೆಕ್ಕಪತ್ರ ನಿರ್ವಹಣೆಯ ಅಗತ್ಯವನ್ನು ರದ್ದುಗೊಳಿಸಲಾಗುವುದು.
· ಸೇಫ್ ಹಾರ್ಬರ್ ನಿಯಮಗಳ ಉದ್ದೇಶಕ್ಕಾಗಿ 'ಅಕೌಂಟೆಂಟ್' ಎಂಬ ಪದದ ವ್ಯಾಖ್ಯಾನವನ್ನು ತರ್ಕಬದ್ಧಗೊಳಿಸಲಾಗುವುದು.
ಇತರ ತೆರಿಗೆ ಪ್ರಸ್ತಾವನೆಗಳು
· ಸಣ್ಣ ಷೇರುದಾರರ ಹಿತದೃಷ್ಟಿಯಿಂದ, ಎಲ್ಲಾ ರೀತಿಯ ಷೇರುದಾರರ 'ಬೈಬ್ಯಾಕ್' (ಷೇರುಗಳ ಮರುಖರೀದಿ) ಅನ್ನು 'ಬಂಡವಾಳ ಲಾಭ' ಎಂದು ಪರಿಗಣಿಸಿ ತೆರಿಗೆ ವಿಧಿಸಲಾಗುವುದು. ಪ್ರವರ್ತಕರು ಹೆಚ್ಚುವರಿ ಬೈಬ್ಯಾಕ್ ತೆರಿಗೆಯನ್ನು ಪಾವತಿಸಬೇಕಾಗುತ್ತದೆ, ಇದರಿಂದಾಗಿ ಕಾರ್ಪೊರೇಟ್ ಪ್ರವರ್ತಕರಿಗೆ ಪರಿಣಾಮಕಾರಿ ತೆರಿಗೆ ಶೇಕಡಾ 22 ಮತ್ತು ಕಾರ್ಪೊರೇಟ್ ಯೇತರ ಪ್ರವರ್ತಕರಿಗೆ ಶೇಕಡಾ 30 ಆಗಲಿದೆ.
· ಮದ್ಯ, ಸ್ಕ್ರ್ಯಾಪ್ ಮತ್ತು ಖನಿಜಗಳಂತಹ ನಿರ್ದಿಷ್ಟ ಸರಕುಗಳ ಮಾರಾಟಗಾರರಿಗೆ ಟಿಸಿಎಸ್ ದರವನ್ನು ಶೇಕಡಾ 2 ಕ್ಕೆ ತರ್ಕಬದ್ಧಗೊಳಿಸಲಾಗುವುದು ಮತ್ತು ತೆಂಡೂ ಎಲೆಗಳ ಮೇಲಿನ ಟಿಸಿಎಸ್ ದರವನ್ನು ಶೇಕಡಾ 5 ರಿಂದ ಶೇಕಡಾ 2 ಕ್ಕೆ ಇಳಿಸಲಾಗುವುದು.
· ಫ್ಯೂಚರ್ಸ್ (Futures) ಮೇಲಿನ ಎಸ್ ಟಿ ಟಿ (Securities Transaction Tax) ಅನ್ನು ಪ್ರಸ್ತುತ ಇರುವ ಶೇಕಡಾ 0.02 ರಿಂದ ಶೇಕಡಾ 0.05 ಕ್ಕೆ ಏರಿಸಲಾಗುವುದು. ಆಪ್ಷನ್ಸ್ ಪ್ರೀಮಿಯಂ ಮತ್ತು ಆಪ್ಷನ್ಸ್ ಎಕ್ಸರ್ಸೈಸ್ ಮೇಲಿನ ಎಸ್ ಟಿ ಟಿ ಅನ್ನು ಪ್ರಸ್ತುತ ಇರುವ ಶೇಕಡಾ 0.1 ಮತ್ತು ಶೇಕಡಾ 0.125 ರಿಂದ ಶೇಕಡಾ 0.15 ಕ್ಕೆ ಏರಿಸಲಾಗುವುದು.
· ಕಂಪನಿಗಳು ಹೊಸ ತೆರಿಗೆ ಪದ್ಧತಿಗೆ ಬದಲಾಗುವುದನ್ನು ಪ್ರೋತ್ಸಾಹಿಸಲು, ಮ್ಯಾಟ್ ಕ್ರೆಡಿಟ್ (MAT credit) ಅನ್ನು ಹೊಸ ಪದ್ಧತಿಯಲ್ಲಿ ಸರಿದೂಗಿಸಲು (set-off) ಅನುಮತಿಸಲಾಗುವುದು. ಹೊಸ ಪದ್ಧತಿಯಲ್ಲಿ ಲಭ್ಯವಿರುವ ಮ್ಯಾಟ್ ಕ್ರೆಡಿಟ್ ಬಳಸಿ ತೆರಿಗೆ ಹೊಣೆಗಾರಿಕೆಯ 1/4 ಭಾಗದವರೆಗೆ ಮಾತ್ರ ಸೆಟ್ ಆಫ್ ಮಾಡಲು ಅವಕಾಶ ನೀಡಲಾಗುವುದು.
· ಮ್ಯಾಟ್ (MAT) ಅನ್ನು ಅಂತಿಮ ತೆರಿಗೆಯನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ. ಏಪ್ರಿಲ್ 1, 2026 ರಿಂದ ಯಾವುದೇ ಹೆಚ್ಚಿನ ಕ್ರೆಡಿಟ್ ಸಂಗ್ರಹಣೆ ಇರುವುದಿಲ್ಲ. ಅಂತಿಮ ತೆರಿಗೆ ದರವನ್ನು ಪ್ರಸ್ತುತ ಇರುವ ಶೇಕಡಾ 15 ರ ಮ್ಯಾಟ್ ದರದಿಂದ ಶೇಕಡಾ 14 ಕ್ಕೆ ಇಳಿಸಲಾಗುವುದು. ಮಾರ್ಚ್ 31, 2026 ರವರೆಗೆ ಸಂಗ್ರಹವಾದ ತೆರಿಗೆದಾರರ ಹಿಂದಿನ ಮ್ಯಾಟ್ ಕ್ರೆಡಿಟ್ ಮೇಲೆ ತಿಳಿಸಿದಂತೆ ಸೆಟ್ ಆಫ್ ಮಾಡಲು ಲಭ್ಯವಿರುತ್ತದೆ.
ಪರೋಕ್ಷ ತೆರಿಗೆಗಳು
ಸುಂಕದ ಸರಳೀಕರಣ
ಸಾಗರ, ಚರ್ಮ ಮತ್ತು ಜವಳಿ ಉತ್ಪನ್ನಗಳು:
· ರಫ್ತು ಮಾಡಲು ಸಮುದ್ರಾಹಾರ ಉತ್ಪನ್ನಗಳನ್ನು ಸಂಸ್ಕರಿಸಲು ಬಳಸುವ ನಿರ್ದಿಷ್ಟ ಇನ್‌ಪುಟ್ ಗಳ (ಪೂರಕ ಸಾಮಗ್ರಿಗಳು) ಸುಂಕ ರಹಿತ ಆಮದು ಮಿತಿಯನ್ನು ಪ್ರಸ್ತುತ ಇರುವ ಎಫ್ ಒ ಬಿ ಮೌಲ್ಯದ ಶೇಕಡಾ 1 ರಿಂದ ಶೇಕಡಾ 3 ಕ್ಕೆ ಹೆಚ್ಚಿಸಲಾಗುವುದು.
· ಚರ್ಮ ಅಥವಾ ಸಿಂಥೆಟಿಕ್ ಪಾದರಕ್ಷೆಗಳ ರಫ್ತಿಗೆ ಪ್ರಸ್ತುತ ಲಭ್ಯವಿರುವ ನಿರ್ದಿಷ್ಟ ಇನ್‌ಪುಟ್ ಗಳ ಸುಂಕ ರಹಿತ ಆಮದನ್ನು ಮುಂದುವರಿಸಲು ಅನುಮತಿಸಲಾಗುವುದು.
ಇಂಧನ ಪರಿವರ್ತನೆ ಮತ್ತು ಸುರಕ್ಷತೆ:
· ಬ್ಯಾಟರಿಗಳಿಗಾಗಿ ಲಿಥಿಯಂ-ಅಯಾನ್ ಸೆಲ್ ಗಳನ್ನು ತಯಾರಿಸಲು ಬಳಸುವ ಬಂಡವಾಳ ಸರಕುಗಳಿಗೆ ನೀಡಲಾದ ಮೂಲ ಕಸ್ಟಮ್ಸ್ ಸುಂಕದ ವಿನಾಯಿತಿಯನ್ನು ವಿಸ್ತರಿಸಲಾಗುವುದು.
· ಸೋಲಾರ್ ಗ್ಲಾಸ್ ತಯಾರಿಕೆಯಲ್ಲಿ ಬಳಸುವ ಸೋಡಿಯಂ ಆಂಟಿಮೋನೇಟ್ ಆಮದಿನ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು.
ಪರಮಾಣು ಇಂಧನ:
· ಪರಮಾಣು ಶಕ್ತಿ ಯೋಜನೆಗಳಿಗೆ ಅಗತ್ಯವಿರುವ ಸರಕುಗಳ ಆಮದಿನ ಮೇಲೆ ಪ್ರಸ್ತುತ ಇರುವ ಮೂಲ ಕಸ್ಟಮ್ಸ್ ಸುಂಕದ ವಿನಾಯಿತಿಯನ್ನು 2035 ರವರೆಗೆ ವಿಸ್ತರಿಸಲಾಗುವುದು.
ನಿರ್ಣಾಯಕ ಖನಿಜಗಳು:
· ನಿರ್ಣಾಯಕ ಖನಿಜಗಳ ಸಂಸ್ಕರಣೆಗೆ ಅಗತ್ಯವಿರುವ ಬಂಡವಾಳ ಸರಕುಗಳ ಆಮದಿನ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು.
ಜೈವಿಕ ಅನಿಲ ಮಿಶ್ರಿತ ಸಿ ಎನ್ ಜಿ:
· ಜೈವಿಕ ಅನಿಲ ಮಿಶ್ರಿತ ಸಿ ಎನ್ ಜಿ ಮೇಲೆ ಪಾವತಿಸಬೇಕಾದ ಕೇಂದ್ರ ಅಬಕಾರಿ ಸುಂಕವನ್ನು ಲೆಕ್ಕಹಾಕುವಾಗ, ಅದರಲ್ಲಿರುವ ಜೈವಿಕ ಅನಿಲದ ಸಂಪೂರ್ಣ ಮೌಲ್ಯವನ್ನು ಹೊರತುಪಡಿಸಲಾಗುವುದು.
ನಾಗರಿಕ ಮತ್ತು ರಕ್ಷಣಾ ವಿಮಾನಯಾನ
· ನಾಗರಿಕ, ತರಬೇತಿ ಮತ್ತು ಇತರ ವಿಮಾನಗಳ ತಯಾರಿಕೆಗೆ ಅಗತ್ಯವಿರುವ ಬಿಡಿಭಾಗಗಳು ಮತ್ತು ಘಟಕಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು.
· ರಕ್ಷಣಾ ವಲಯದ ಘಟಕಗಳು ನಿರ್ವಹಣೆ, ದುರಸ್ತಿ ಅಥವಾ ಓವರ್‌ಹಾಲ್ ಅವಶ್ಯಕತೆಗಳಿಗಾಗಿ ಬಳಸುವ ವಿಮಾನದ ಬಿಡಿಭಾಗಗಳ ತಯಾರಿಕೆಗೆ ಆಮದು ಮಾಡಿಕೊಳ್ಳುವ ಕಚ್ಚಾ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು.
ಎಲೆಕ್ಟ್ರಾನಿಕ್ಸ್:
· ಮೈಕ್ರೋವೇವ್ ಓವನ್ ಗಳ ತಯಾರಿಕೆಯಲ್ಲಿ ಬಳಸುವ ನಿರ್ದಿಷ್ಟ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು.
ವಿಶೇಷ ಆರ್ಥಿಕ ವಲಯ:
· ಎಸ್ ಇ ಜೆಡ್ ಗಳಲ್ಲಿನ ಅರ್ಹ ಉತ್ಪಾದನಾ ಘಟಕಗಳು ದೇಶೀಯ ಸುಂಕದ ಪ್ರದೇಶಕ್ಕೆ (ಡಿಟಿಎ) ರಿಯಾಯ್ತಿ ದರದಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ವಿಶೇಷ ಒಂದು ಬಾರಿಯ ಕ್ರಮವನ್ನು ಪ್ರಸ್ತಾಪಿಸಲಾಗಿದೆ. ಇಂತಹ ಮಾರಾಟದ ಪ್ರಮಾಣವು ಅವರ ರಫ್ತಿನ ನಿಗದಿತ ಅನುಪಾತಕ್ಕೆ ಸೀಮಿತವಾಗಿರುತ್ತದೆ.
ಸುಲಭ ಜೀವನ:
· ವೈಯಕ್ತಿಕ ಬಳಕೆಗಾಗಿ ಆಮದು ಮಾಡಿಕೊಳ್ಳುವ ಎಲ್ಲಾ ಸುಂಕ ವಿಧಿಸಬಹುದಾದ ಸರಕುಗಳ ಮೇಲಿನ ಸುಂಕದ ದರವನ್ನು ಶೇಕಡಾ 20 ರಿಂದ ಶೇಕಡಾ 10 ಕ್ಕೆ ಇಳಿಸಲಾಗುವುದು.
· 17 ಬಗೆಯ ಔಷಧಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು.
· ಇನ್ನೂ 7 ಅಪರೂಪದ ಕಾಯಿಲೆಗಳ ಔಷಧಗಳು ಮತ್ತು ಆಹಾರದ ವೈಯಕ್ತಿಕ ಆಮದನ್ನು ಸುಂಕ ಮುಕ್ತಗೊಳಿಸಲಾಗುವುದು.
ಕಸ್ಟಮ್ಸ್ ಪ್ರಕ್ರಿಯೆಯ ಸರಳೀಕರಣ:
· ಸರಕುಗಳ ಸುಗಮ ಮತ್ತು ವೇಗದ ಚಲನೆಗಾಗಿ ಕಸ್ಟಮ್ಸ್ ಪ್ರಕ್ರಿಯೆಗಳಲ್ಲಿ ಕನಿಷ್ಠ ಹಸ್ತಕ್ಷೇಪ ಇರುವಂತೆ ಕ್ರಮ ಕೈಗೊಳ್ಳಲಾಗುವುದು.
ವಿಶ್ವಾಸ-ಆಧಾರಿತ ವ್ಯವಸ್ಥೆಗಳು
· ಶ್ರೇಣಿ 2 ಮತ್ತು ಶ್ರೇಣಿ 3 ರ ಅಧಿಕೃತ ಆರ್ಥಿಕ ನಿರ್ವಾಹಕರ (ಎಇಒ) ಸುಂಕದ ವಿಳಂಬ ಅವಧಿಯನ್ನು ಪ್ರಸ್ತುತ ಇರುವ 15 ದಿನಗಳಿಂದ 30 ದಿನಗಳಿಗೆ ಹೆಚ್ಚಿಸಲಾಗುವುದು. ಇದೇ ಸೌಲಭ್ಯವನ್ನು ಅರ್ಹ ಉತ್ಪಾದಕ-ಆಮದುದಾರರಿಗೂ ವಿಸ್ತರಿಸಲಾಗುವುದು.
· ಕಸ್ಟಮ್ಸ್ ಮೇಲೆ ಬದ್ಧವಾಗಿರುವ 'ಅಡ್ವಾನ್ಸ್ ರೂಲಿಂಗ್” ಮಾನ್ಯತೆಯ ಅವಧಿಯನ್ನು ಪ್ರಸ್ತುತ ಇರುವ 3 ವರ್ಷಗಳಿಂದ 5 ವರ್ಷಗಳಿಗೆ ವಿಸ್ತರಿಸಲಾಗುವುದು.
· ಸರ್ಕಾರಿ ಏಜೆನ್ಸಿಗಳು ತಮ್ಮ ಸರಕುಗಳ ವಿಲೇವಾರಿಯಲ್ಲಿ ಆದ್ಯತೆಯನ್ನು ಪಡೆಯಲು ಎಇಒ ಮಾನ್ಯತೆಯನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸಲಾಗುವುದು.
· ವಿಶ್ವಾಸಾರ್ಹ ಆಮದುದಾರರು ಸಲ್ಲಿಸುವ ಬಿಲ್ ಆಫ್ ಎಂಟ್ರಿ ಮತ್ತು ಸರಕುಗಳ ಆಗಮನವು, ಕಸ್ಟಮ್ಸ್ ವಿಲೇವಾರಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸ್ವಯಂಚಾಲಿತವಾಗಿ ಅಧಿಸೂಚನೆ ನೀಡುತ್ತದೆ (ಯಾವುದೇ ವಿಶೇಷ ಅನುಸರಣೆ ಅಗತ್ಯವಿಲ್ಲದ ಸರಕುಗಳ ಆಮದಿಗಾಗಿ).
· ಕಸ್ಟಮ್ಸ್ ವೇರ್‌ಹೌಸಿಂಗ್ ಚೌಕಟ್ಟನ್ನು ಸ್ವಯಂ-ಘೋಷಣೆಗಳು, ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಮತ್ತು ಅಪಾಯ-ಆಧಾರಿತ ಆಡಿಟ್ ಒಳಗೊಂಡ ವೇರ್‌ಹೌಸ್ ಆಪರೇಟರ್-ಕೇಂದ್ರಿತ ವ್ಯವಸ್ಥೆಯಾಗಿ ಪರಿವರ್ತಿಸಲಾಗುವುದು.
ವ್ಯವಹಾರದ ಸುಲಭತೆ
· ವಿವಿಧ ಸರ್ಕಾರಿ ಏಜೆನ್ಸಿಗಳಿಂದ ಪಡೆಯಬೇಕಾದ ಸರಕು ವಿಲೇವಾರಿ ಅನುಮೋದನೆಗಳನ್ನು ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಏಕಮಾತ್ರ ಮತ್ತು ಪರಸ್ಪರ ಸಂಪರ್ಕಿತ ಡಿಜಿಟಲ್ ವಿಂಡೋ ಮೂಲಕ ತಡೆರಹಿತವಾಗಿ ಪ್ರಕ್ರಿಯೆಗೊಳಿಸಲಾಗುವುದು.
· ತಡೆಹಿಡಿಯಲಾದ ಒಟ್ಟು ಸರಕುಗಳ ಪೈಕಿ ಸುಮಾರು ಶೇಕಡಾ 70 ರಷ್ಟಿರುವ ಆಹಾರ, ಔಷಧಗಳು, ಸಸ್ಯಗಳು, ಪ್ರಾಣಿಗಳು ಮತ್ತು ವನ್ಯಜೀವಿ ಉತ್ಪನ್ನಗಳ ವಿಲೇವಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಏಪ್ರಿಲ್ 2026 ರೊಳಗೆ ಈ ವ್ಯವಸ್ಥೆಯಲ್ಲಿ ಕಾರ್ಯಗತಗೊಳಿಸಲಾಗುವುದು.
· ಯಾವುದೇ ಅನುಸರಣಾ ಅಗತ್ಯತೆಗಳಿಲ್ಲದ ಸರಕುಗಳಿಗಾಗಿ, ಆಮದುದಾರರು ಆನ್‌ಲೈನ್ ನೋಂದಣಿ ಪೂರ್ಣಗೊಳಿಸಿದ ತಕ್ಷಣ ಕಸ್ಟಮ್ಸ್ ವಿಲೇವಾರಿ ಮಾಡಲಾಗುವುದು.
· ಎಲ್ಲಾ ಕಸ್ಟಮ್ಸ್ ಪ್ರಕ್ರಿಯೆಗಳಿಗಾಗಿ ಏಕಮಾತ್ರ, ಸಂಯೋಜಿತ ಮತ್ತು ವಿಸ್ತರಿಸಬಹುದಾದ ವೇದಿಕೆಯಾಗಿ 'ಕಸ್ಟಮ್ಸ್ ಇಂಟಿಗ್ರೇಟೆಡ್ ಸಿಸ್ಟಮ್' (ಸಿಐಎಸ್) ಅನ್ನು ಮುಂದಿನ 2 ವರ್ಷಗಳಲ್ಲಿ ಜಾರಿಗೆ ತರಲಾಗುವುದು.
· ಎಲ್ಲಾ ಪ್ರಮುಖ ಬಂದರುಗಳಲ್ಲಿನ ಪ್ರತಿಯೊಂದು ಕಂಟೇನರ್ ಅನ್ನು ಸ್ಕ್ಯಾನ್ ಮಾಡುವ ಉದ್ದೇಶದೊಂದಿಗೆ, ಅಪಾಯದ ಮೌಲ್ಯಮಾಪನಕ್ಕಾಗಿ ಸುಧಾರಿತ ಇಮೇಜಿಂಗ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಹೊಂದಿರುವ 'ಹಸ್ತಕ್ಷೇಪರಹಿತ ಸ್ಕ್ಯಾನಿಂಗ್' ಬಳಕೆಯನ್ನು ಹಂತ ಹಂತವಾಗಿ ವಿಸ್ತರಿಸಲಾಗುವುದು.
ಹೊಸ ರಫ್ತು ಅವಕಾಶಗಳು
· ವಿಶಿಷ್ಟ ಆರ್ಥಿಕ ವಲಯ (ಇಇಝಡ್) ಅಥವಾ ಆಳ ಸಮುದ್ರದಲ್ಲಿ ಭಾರತೀಯ ಮೀನುಗಾರಿಕಾ ನೌಕೆಗಳು ಹಿಡಿಯುವ ಮೀನಿನ ಮೇಲೆ ಯಾವುದೇ ಸುಂಕ ಇರುವುದಿಲ್ಲ. ಅಂತಹ ಮೀನನ್ನು ವಿದೇಶಿ ಬಂದರುಗಳಲ್ಲಿ ಇಳಿಸುವುದನ್ನು 'ಸರಕುಗಳ ರಫ್ತು' ಎಂದು ಪರಿಗಣಿಸಲಾಗುವುದು.
· ಕೊರಿಯರ್ ರಫ್ತುಗಳ ಮೇಲೆ ಪ್ರಸ್ತುತ ಇರುವ ಪ್ರತಿ ರವಾನೆಗೆ ₹10 ಲಕ್ಷದ ಮೌಲ್ಯದ ಮಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುವುದು. ಇದು ಭಾರತದ ಸಣ್ಣ ಉದ್ಯಮಗಳು, ಕುಶಲಕರ್ಮಿಗಳು ಮತ್ತು ನವೋದ್ಯಮಗಳು ಇ-ಕಾಮರ್ಸ್ ಮೂಲಕ ಜಾಗತಿಕ ಮಾರುಕಟ್ಟೆಗಳನ್ನು ಪ್ರವೇಶಿಸುವ ಆಕಾಂಕ್ಷೆಗಳಿಗೆ ಬೆಂಬಲ ನೀಡುತ್ತದೆ.
ಸುಲಭ ಜೀವನ
· ಅಂತರರಾಷ್ಟ್ರೀಯ ಪ್ರಯಾಣದ ಸಮಯದಲ್ಲಿ ಬ್ಯಾಗೇಜ್ ವಿಲೇವಾರಿಗೆ ಸಂಬಂಧಿಸಿದ ನಿಬಂಧನೆಗಳನ್ನು ಪರಿಷ್ಕರಿಸಲಾಗುವುದು. ಇಂದಿನ ಪ್ರಯಾಣದ ವಾಸ್ತವಗಳಿಗೆ ಅನುಗುಣವಾಗಿ ಸುಂಕ ರಹಿತ ಭತ್ಯೆಯನ್ನು ಹೆಚ್ಚಿಸಲು ನಿಯಮಗಳನ್ನು ಪರಿಷ್ಕರಿಸಲಾಗುವುದು.
· ವಿವಾದಗಳನ್ನು ಬಗೆಹರಿಸಿಕೊಳ್ಳಲು ಇಚ್ಛಿಸುವ ಪ್ರಾಮಾಣಿಕ ತೆರಿಗೆದಾರರು, ದಂಡದ ಬದಲಿಗೆ ಹೆಚ್ಚುವರಿ ಮೊತ್ತವನ್ನು ಪಾವತಿಸುವ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸಲು ಸಾಧ್ಯವಾಗುತ್ತದೆ.
(रिलीज़ आईडी: 2221759)
आगंतुक पटल : 31