ಹಣಕಾಸು ಸಚಿವಾಲಯ
azadi ka amrit mahotsav

ಗ್ರಾಮೀಣ ಉದ್ಯೋಗ ಯೋಜನೆ MGNREGS ತನ್ನ ಮಿತಿ ತಲುಪಿದ್ದು ವಿಕಸನಗೊಳ್ಳುತ್ತಿರುವ ಗ್ರಾಮೀಣ ವಾಸ್ತವಗಳ ಹಿನ್ನೆಲೆಯಲ್ಲಿ ಮರುಮೌಲ್ಯಮಾಪನ ಅಗತ್ಯವಾಗಿಸಿದೆ: ಆರ್ಥಿಕ ಸಮೀಕ್ಷೆ


ವಿಬಿ - ಜಿ ರಾಮ್ ಜಿ ಎಂಬುದು ವಿಕಸಿತ ಭಾರತ 2047ರ ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಗ್ರಾಮೀಣ ಉದ್ಯೋಗವನ್ನು ಸರಿಹೊಂದಿಸುವ MGNREGSದ ಸಮಗ್ರ ಶಾಸನಬದ್ಧ ಪರಿಷ್ಕರಣೆ

ಹಣಕಾಸು ವರ್ಷ 2014 ಮತ್ತು ಹಣಕಾಸು ವರ್ಷ 2025ರ ನಡುವೆ ಗ್ರಾಮೀಣ ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ.48 ರಿಂದ ಶೇ.58.1 ಕ್ಕೆ ಸ್ಥಿರ ಏರಿಕೆ

ಪ್ರಕಟಣಾ ದಿನಾಂಕ: 29 JAN 2026 1:59PM by PIB Bengaluru

ಗ್ರಾಮೀಣ ಉದ್ಯೋಗವು ಸುಮಾರು ಎರಡು ದಶಕಗಳಿಂದ ಭಾರತದ ಸಾಮಾಜಿಕ ರಕ್ಷಣಾ ಚೌಕಟ್ಟಿನ ಮೂಲಾಧಾರವಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿಂದು ಮಂಡಿಸಿದ 2025-26ರ ಆರ್ಥಿಕ ಸಮೀಕ್ಷೆ ತಿಳಿಸಿದೆ. 

2005 ರಲ್ಲಿ ಜಾರಿಗೆ ಬಂದಾಗಿನಿಂದ MGNREGS, ವೇತನ ಉದ್ಯೋಗವನ್ನು ಒದಗಿಸಿದೆ, ಗ್ರಾಮೀಣ ಆದಾಯವನ್ನು ಸ್ಥಿರಗೊಳಿಸಿದೆ ಮತ್ತು ಮೂಲಭೂತ ಮೂಲಸೌಕರ್ಯಗಳನ್ನು ಸೃಷ್ಟಿಸಿದ್ದು ಗ್ರಾಮೀಣ ಕುಟುಂಬಗಳಿಗೆ ಕನಿಷ್ಠ 100 ದಿನಗಳ ಖಾತರಿಯ ಕೌಶಲ್ಯರಹಿತ ಕೆಲಸವನ್ನು ನೀಡಿದೆ. ಕಾಲಕ್ರಮೇಣ,  ಹೆಚ್ಚುತ್ತಿರುವ ಆದಾಯ, ವರ್ಧಿತ ಸಂಪರ್ಕ, ವ್ಯಾಪಕವಾದ ಡಿಜಿಟಲ್ ಅಳವಡಿಕೆ ಮತ್ತು ವೈವಿಧ್ಯಮಯ ಜೀವನೋಪಾಯಗಳು ಗ್ರಾಮೀಣ ಉದ್ಯೋಗದ ಅಗತ್ಯಗಳ ಸ್ವರೂಪವನ್ನು ಬದಲಿಸಿದ್ದು, ಕಾರ್ಯಕ್ರಮದ (ಉದ್ಯೋಗ ಖಾತರಿ ಯೋಜನೆಯ) ಸಾಧನೆಗಳು ಹಾಗೂ ಅದರ ವಿನ್ಯಾಸ ಮತ್ತು ಗುರಿಗಳ ಮರುಮೌಲ್ಯಮಾಪನದ ಅಗತ್ಯವನ್ನು ಹೇಳಿವೆ.

ವರ್ಷಗಳು ಕಳೆದಂತೆ, ಹಲವಾರು ಆಡಳಿತಾತ್ಮಕ ಮತ್ತು ತಾಂತ್ರಿಕ ಸುಧಾರಣೆಗಳು ಯೋಜನೆಯ ಅನುಷ್ಠಾನ ವ್ಯಾಪ್ತಿಯನ್ನು ಹೆಚ್ಚಿಸಿದ್ದು, ಇದರ ಪರಿಣಾಮವಾಗಿ ಭಾಗವಹಿಸುವಿಕೆ, ಪಾರದರ್ಶಕತೆ ಮತ್ತು ಡಿಜಿಟಲ್ ಆಡಳಿತದಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ. ಹಣಕಾಸು ವರ್ಷ 14 ಮತ್ತು ಹಣಕಾಸು ವರ್ಷ 25 ರ ನಡುವೆ ಮಹಿಳೆಯರ ಭಾಗವಹಿಸುವಿಕೆಯ ಪ್ರಮಾಣ ಶೇಕಡ 48 ರಿಂದ ಶೇಕಡ 58.1 ಕ್ಕೆ ಸ್ಥಿರವಾಗಿ ಏರಿಕೆಯಾಗಿದೆ, ಆಧಾರ್ ಸೀಡಿಂಗ್ ಪ್ರಕ್ರಿಯೆ ಕೂಡ ವ್ಯಾಪಕವಾಗಿ ವಿಸ್ತರಣೆಯಾಗಿದೆ ಮತ್ತು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ವ್ಯಾಪಕ ಅಳವಡಿಕೆಯೊಂದಿಗೆ ವಿದ್ಯುನ್ಮಾನ ವೇತನ ಪಾವತಿಗಳು ಬಹುತೇಕ ಸಾರ್ವತ್ರಿಕವಾಗಿವೆ. ಜಿಯೋ-ಟ್ಯಾಗ್ ಮಾಡಲಾದ ಸ್ವತ್ತುಗಳಲ್ಲಿ ಬೃಹತ್ ವಿಸ್ತರಣೆ ಮತ್ತು ಕೌಟುಂಬಿಕ ಮಟ್ಟದಲ್ಲಿ ರಚಿಸಲಾದ ವೈಯಕ್ತಿಕ ಸ್ವತ್ತುಗಳ ಹೆಚ್ಚುತ್ತಿರುವ ಪಾಲಿನೊಂದಿಗೆ, ಕೆಲಸಗಳ ಮೇಲ್ವಿಚಾರಣೆಯೂ ಸುಧಾರಿಸಿದೆ. ಸೀಮಿತ ಸಂಪನ್ಮೂಲಗಳ ಹೊರತಾಗಿಯೂ ಸುಸ್ಥಿರ ಅನುಷ್ಠಾನಕ್ಕಾಗಿ ಕ್ಷೇತ್ರ ಮಟ್ಟದ ಸಿಬ್ಬಂದಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಆದಾಗ್ಯೂ, ಈ ಅನುಕೂಲಗಳಿದ್ದರೂ, ಆಳವಾದ ರಚನಾತ್ಮಕ ಸಮಸ್ಯೆಗಳು ಮುಂದುವರಿದು, ಹಲವು ರಾಜ್ಯಗಳಲ್ಲಿ ತಳಮಟ್ಟದಲ್ಲಿ ಕಾರ್ಯನಿರ್ವಹಿಸದೇ ಇರುವುದು, ವಾಸ್ತವದ ಪ್ರಗತಿಗೆ ತಕ್ಕಂತೆ ವೆಚ್ಚ ಇಲ್ಲದಿರುವುದು, ಕಾರ್ಮಿಕರ ಅಗತ್ಯದ ಕಾರ್ಯಗಳಲ್ಲೂ ಯಂತ್ರಗಳ ಬಳಕೆ ಮತ್ತು ಡಿಜಿಟಲ್‌ ಹಾಜರಾತಿ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೊಳಿಸದೇ ಇರುವುದು ಮೊದಲಾದ ಅಂತರಗಳು ಮೇಲ್ವಿಚಾರಣೆಯಲ್ಲಿ ಬಹಿರಂಗಗೊಂಡಿವೆ. ಕಾಲ ಕಳೆದಂತೆ ದುರುಪಯೋಗ ಹೆಚ್ಚುತ್ತಾ, ಕಡಿಮೆ ಸಂಖ್ಯೆಯ ಕುಟುಂಬಗಳು ಮಾತ್ರ ಸಾಂಕ್ರಾಮಿಕ ರೋಗದ ಅವಧಿಯ ನಂತರ ಸಂಪೂರ್ಣ 100 ದಿನಗಳ ಉದ್ಯೋಗವನ್ನು ಪಡೆದಿದ್ದು, ಇದು ವಿತರಣಾ ವ್ಯವಸ್ಥೆಗಳು ಸುಧಾರಿಸಿದ್ದರೂ, MGNREGA ದ ಒಟ್ಟಾರೆ ಪರಿಕಲ್ಪನೆಯು ಅದರ ಗರಿಷ್ಠ ಮಟ್ಟವನ್ನು ತಲುಪಿದ್ದು ವಿಕಸನಗೊಳ್ಳುತ್ತಿರುವ ಗ್ರಾಮೀಣ ವಾಸ್ತವಗಳ ಹಿನ್ನೆಲೆಯಲ್ಲಿ ಮರುಮೌಲ್ಯಮಾಪನದ ಅಗತ್ಯವನ್ನು ಸೂಚಿಸಿದೆ.

ಈ ಹಿನ್ನೆಲೆಯಲ್ಲಿ, ಸರ್ಕಾರವು ವಿಬಿ - ಜಿ ರಾಮ್ ಜಿ ಕಾಯ್ದೆ, 2025 ಎಂದು ಕರೆಯಲ್ಪಡುವ ವಿಕಸಿತ ಭಾರತ – ಉದ್ಯೋಗ ಮತ್ತು ಜೀವನೋಪಾಯ ಖಾತರಿ ಮಿಷನ್ (ಗ್ರಾಮೀಣ) ಕಾಯ್ದೆ, 2025 ಅನ್ನು ಜಾರಿಗೆ ತಂದಿದೆ. ಈ ಕಾಯ್ದೆಯು MGNREGS ನ ಸಮಗ್ರ ಶಾಸನಬದ್ಧ ಪರಿಷ್ಕರಣೆಯಾಗಿದ್ದು, ಹೊಣೆಗಾರಿಕೆ, ಮೂಲಸೌಕರ್ಯ ಫಲಿತಾಂಶಗಳು ಮತ್ತು ಆದಾಯ ಭದ್ರತೆಯನ್ನು ಬಲಪಡಿಸುತ್ತಾ ಗ್ರಾಮೀಣ ಉದ್ಯೋಗವನ್ನು ವಿಕಸಿತ ಭಾರತ 2047 ರ ದೀರ್ಘಕಾಲೀನ ಮುನ್ನೋಟದೊಂದಿಗೆ ಹೊಂದಿಸುತ್ತದೆ. ವಿಬಿ ಜಿ-ರಾಮ್ ಜಿ ಕಾಯ್ದೆ, 2025, ಭಾರತದ ಗ್ರಾಮೀಣ ಉದ್ಯೋಗ ನೀತಿಯಲ್ಲಿ ನಿರ್ಣಾಯಕ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಎಂ ಜಿ ಎನ್ ಆರ್ ಇ ಜಿ ಎಸ್, ಕಾಲಾನಂತರದಲ್ಲಿ ಭಾಗವಹಿಸುವಿಕೆ, ಡಿಜಿಟಲೀಕರಣ ಮತ್ತು ಪಾರದರ್ಶಕತೆಯಲ್ಲಿ ಗಮನಾರ್ಹ ಸುಧಾರಣೆ ಸಾಧಿಸಿದರೂ, ನಿರಂತರ ರಚನಾತ್ಮಕ ದೌರ್ಬಲ್ಯಗಳು ಅದರ ಪರಿಣಾಮಕಾರಿತ್ವವನ್ನು ಸೀಮಿತಗೊಳಿಸಿದವು. ಹಿಂದಿನ ಸುಧಾರಣೆಗಳನ್ನು ಆಧರಿಸಿದ ಆಧುನಿಕ, ಜವಾಬ್ದಾರಿಯುತ ಮತ್ತು ಮೂಲಸೌಕರ್ಯ-ಕೇಂದ್ರಿತ ಚೌಕಟ್ಟಿನ ಮೂಲಕ ಈ ನ್ಯೂನತೆಗಳನ್ನು ಹೊಸ ಕಾಯ್ದೆಯು ಪರಿಹರಿಸಲಿದೆ. 

ವಿಬಿ – ಜಿ ರಾಮ್ ಜಿ ಕಾಯ್ದೆ, 2025 ರ ಪ್ರಮುಖ ಲಕ್ಷಣಗಳು: 

ವೇತನ ಮತ್ತು ಸಾಮಾಜಿಕ ರಕ್ಷಣಾ ಕ್ರಮಗಳು:

ವಾರಕ್ಕೊಮ್ಮೆ ಅಥವಾ ಕೆಲಸ ಪೂರ್ಣಗೊಂಡ ಹದಿನೈದು ದಿನಗಳೊಳಗಾಗಿ ವೇತನವನ್ನು ವಿತರಿಸಬೇಕೆಂದು ಈ ಕಾಯ್ದೆಯು ನಿರ್ದಿಷ್ಟಪಡಿಸಿದೆ. ಈ ಸಕಾಲಿಕ ಪಾವತಿ ಕಾರ್ಯವಿಧಾನವು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಲಿದೆ ಮತ್ತು ಕೆಲಸದಲ್ಲಿ ತೊಡಗುವಿಕೆಯ ಮೇಲೆ ಬಹು ಹಿಂದಿನಿಂದಲೂ ಪರಿಣಾಮ ಬೀರಿದ ವಿಳಂಬವನ್ನು ತಗ್ಗಿಸಲಿದೆ.

ಆಡಳಿತಾತ್ಮಕ ಬಲವರ್ಧನೆ ಮತ್ತು ಸಾಮರ್ಥ್ಯ ವೃದ್ಧಿ:

ಸೀಮಿತ ಸಂಪನ್ಮೂಲಗಳ ಹೊರತಾಗಿಯೂ MGNREGA ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ಕ್ಷೇತ್ರ ಮಟ್ಟದ ಸಿಬ್ಬಂದಿಯ ನಿರ್ಣಾಯಕ ಪಾತ್ರವನ್ನು ಗುರುತಿಸಿ, VB G-RAM G ಆಡಳಿತಾತ್ಮಕ ವೆಚ್ಚದ ಮಿತಿಯನ್ನು ಒಟ್ಟು ವೆಚ್ಚದ ಶೇಕಡ 6 ರಿಂದ 9 ಕ್ಕೆ ಹೆಚ್ಚಿಸುವ ಮೂಲಕ ಆಡಳಿತಾತ್ಮಕ ಸಾಮರ್ಥ್ಯವನ್ನು ಬಲಪಡಿಸಿದ್ದು ಸಿಬ್ಬಂದಿ ನೇಮಕಾತಿ, ತರಬೇತಿ, ಸಂಭಾವನೆ ಮತ್ತು ತಾಂತ್ರಿಕ ಸಾಮರ್ಥ್ಯಗಳಿಗೆ ಬೆಂಬಲ ನೀಡಿದೆ. ವೃತ್ತಿಪರ, ಉತ್ತಮ ಬೆಂಬಲಿತ ವ್ಯವಸ್ಥೆಯತ್ತ ಈ ಬದಲಾವಣೆಯು ಯೋಜನೆ, ಕಾರ್ಯಗತಗೊಳಿಸುವಿಕೆ ಮತ್ತು ಸೇವಾ ವಿತರಣೆಯನ್ನು ಸುಧಾರಿಸುತ್ತಾ ಎಲ್ಲಾ ಹಂತಗಳಲ್ಲಿ ಹೊಣೆಗಾರಿಕೆಯನ್ನು ಬಲಪಡಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ವಿಕೇಂದ್ರೀಕೃತ ಯೋಜನೆ ಮತ್ತು ಸ್ಥಳೀಯ ಸಬಲೀಕರಣ:

ವಿಬಿ ಜಿ – ರಾಮ್ ಜಿ ಅಡಿಯಲ್ಲಿ ಯೋಜನೆಯು ಪಿಎಂ ಗತಿ ಶಕ್ತಿಯಂತಹ ರಾಷ್ಟ್ರೀಯ ವ್ಯವಸ್ಥೆಗಳೊಂದಿಗೆ ಪ್ರಾದೇಶಿಕವಾಗಿ ಸಂಯೋಜಿಸಲ್ಪಟ್ಟ ವಿಕಸಿತ ಗ್ರಾಮ ಪಂಚಾಯತ್ ಯೋಜನೆಗಳ ಮೂಲಕ ಸ್ಥಳೀಯ ವಾಸ್ತವಗಳನ್ನು ಆಧರಿಸಿದೆ. ಗ್ರಾಮ ಪಂಚಾಯಿತಿಗಳು ಕೇಂದ್ರ ಪಾತ್ರ ವಹಿಸುವುದನ್ನು ಮುಂದುವರಿಸಲಿದ್ದು ಸಂಪನ್ಮೂಲಗಳು ಮತ್ತು ಕಾರ್ಯಕ್ರಮಗಳ ಸಾಂಸ್ಥಿಕ ಒಗ್ಗೂಡಿದ ವೆಚ್ಚದೊಂದಿಗೆ ಕನಿಷ್ಠ ಅರ್ಧದಷ್ಟು ಕೆಲಸವನ್ನು ಕಾರ್ಯಗತಗೊಳಿಸಲಿವೆ. ಈ ವಿಧಾನದಿಂದಾಗಿ ಪಾಲ್ಗೊಳ್ಳುವಿಕಾತ್ಮಕ ಯೋಜನೆ ವರ್ಧಿಸಲಿದ್ದು, ಗ್ರಾಮೀಣಾಭಿವೃದ್ಧಿ ಮಧ್ಯಸ್ಥಿಕೆಗಳು ಸ್ಥಳೀಯ ಸಂದರ್ಭಕ್ಕೆ ಅನುಗುಣವಾಗಿ, ಸುಸ್ಥಿರ ಮತ್ತು ಸಮುದಾಯದ ಅಗತ್ಯಗಳಿಗೆ ಸ್ಪಂದಿಸುವುದನ್ನು ಖಚಿತಪಡಿಸಲಿವೆ. 

ಆಸ್ತಿ ಸೃಜನೆ ಮತ್ತು ರಾಷ್ಟ್ರೀಯ ಅಭಿವೃದ್ಧಿ ಏಕೀಕರಣ:

ವಿಬಿ ಜಿ – ರಾಮ್ ಜಿ ಅಡಿಯಲ್ಲಿ ಸೃಜಿಸಲಾದ ಎಲ್ಲಾ ಸ್ವತ್ತುಗಳನ್ನು ವಿಕಸಿತ ಭಾರತ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಬಣವೆಯಲ್ಲಿ ಒಟ್ಟುಗೂಡಿಸಲಾಗುತ್ತದೆ, ಇದು ಏಕೀಕೃತ ಮತ್ತು ಸಂಘಟಿತ ಅಭಿವೃದ್ಧಿ ಕಾರ್ಯತಂತ್ರವನ್ನು ಖಚಿತಪಡಿಸಲಿದೆ. ಸ್ಥಳೀಯ ಕೆಲಸಗಳನ್ನು ವಿಶಾಲ ರಾಷ್ಟ್ರೀಯ ಆದ್ಯತೆಗಳಿಗೆ ಸಂಪರ್ಕಿಸುವ ಮೂಲಕ, ಈ ಕಾಯ್ದೆಯು ಗ್ರಾಮೀಣ ಜೀವನೋಪಾಯಕ್ಕೆ ತಕ್ಷಣದ ಬೆಂಬಲ ಮತ್ತು ದೀರ್ಘಕಾಲೀನ ಕಾರ್ಯತಂತ್ರದ ಮೂಲಸೌಕರ್ಯ ಫಲಿತಾಂಶಗಳೆರಡನ್ನೂ ಒದಗಿಸುತ್ತದೆ.

ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಮೇಲ್ವಿಚಾರಣೆ:

ಈ ಕಾಯ್ದೆಯು ವ್ಯವಸ್ಥೆಯಾದ್ಯಂತ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ವರ್ಧಿಸಲಿದೆ. ದೂರುಗಳನ್ನು ತನಿಖೆ ಮಾಡಲು, ಗಂಭೀರ ಅಕ್ರಮಗಳ ಪ್ರಕರಣಗಳಲ್ಲಿ ನಿಧಿ ಬಿಡುಗಡೆಯನ್ನು ತಡೆಹಿಡಿಯಲು ಮತ್ತು ಅಗತ್ಯವಿರುವೆಡೆ ನೇರ ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ. ನೈಜ-ಸಮಯದ ಮೇಲ್ವಿಚಾರಣೆ, ಜಿಪಿಎಸ್-ಸಕ್ರಿಯಗೊಳಿಸಿದ ಕೆಲಸಗಳ ಟ್ರ್ಯಾಕಿಂಗ್, ಎಂಐಎಸ್ ಡ್ಯಾಶ್ ಬೋರ್ಡ್ ಗಳು ಮತ್ತು ಸಾಪ್ತಾಹಿಕ ಸಾರ್ವಜನಿಕ ಪ್ರಕಟಣೆಯ ಮೂಲಕ ಡಿಜಿಟಲ್ ಆಡಳಿತವನ್ನು ಬಲಪಡಿಸಲಾಗುತ್ತಿದೆ. ಕನಿಷ್ಠ ಆರು ತಿಂಗಳಿಗೊಮ್ಮೆ ಸಾಮಾಜಿಕ ಲೆಕ್ಕಪರಿಶೋಧನೆಗಳನ್ನು ಕಡ್ಡಾಯಗೊಳಿಸಲಾಗಿದೆ ಹಾಗೂ ನೋಡುವ ಸಾಮರ್ಥ್ಯ ಮತ್ತು ಸಮುದಾಯದ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಗ್ರಾಮ ಪಂಚಾಯತ್‌ ಗಳು ಹೆಚ್ಚು ಪ್ರಮುಖ ಪಾತ್ರ ವಹಿಸಲಿವೆ. ಕೇಂದ್ರ ಮತ್ತು ರಾಜ್ಯ ಸ್ಟೀರಿಂಗ್ ಸಮಿತಿಗಳು ನಿರಂತರ ಮಾರ್ಗದರ್ಶನ, ಮೇಲ್ವಿಚಾರಣೆ ಮತ್ತು ಸಮನ್ವಯವನ್ನು ಒದಗಿಸುತ್ತವೆ, ಹಾಗೆಯೇ ಬಯೋಮೆಟ್ರಿಕ್ ದೃಢೀಕರಣ ಮತ್ತು ಎಐ-ಬೆಂಬಲಿತ ಮೇಲ್ವಿಚಾರಣೆಯಂತಹ ಡಿಜಿಟಲ್ ಪರಿಕರಗಳು ಅಕ್ರಮಗಳ ಆರಂಭಿಕ ಪತ್ತೆಹಚ್ಚುವಿಕೆಯನ್ನು ಸುಗಮಗೊಳಿಸಲಿವೆ. 

ಆರ್ಥಿಕ ಸುಸ್ಥಿರತೆ:

ಕಾಯ್ದೆಯ ಹಣಕಾಸು ರಚನೆಯು ರಾಜ್ಯಗಳ ಮೇಲಿನ ಅನಗತ್ಯ ಹೊರೆಯನ್ನು ಸೀಮಿತಗೊಳಿಸುವ ಜೊತೆಗೆ ನಿಧಿ ಅಂದಾಜನ್ನು ಖಾತರಿಪಡಿಸಲಿದೆ. ವೆಚ್ಚ ಹಂಚಿಕೆ ಕಾರ್ಯವಿಧಾನಗಳು ಮತ್ತು ವಿಪತ್ತುಗಳ ಸಮಯದಲ್ಲಿ ಹೆಚ್ಚುವರಿ ಬೆಂಬಲದೊಂದಿಗೆ ವೆಚ್ಚ ಹಂಚಿಕೆ ವಿಧಾನವು ಸುಸ್ಥಿರ ಹಣಕಾಸಿನ ಚೌಕಟ್ಟನ್ನು ಒದಗಿಸಲಿದೆ. ಸದೃಢ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ಕಾರ್ಯವಿಧಾನಗಳು ದುರುಪಯೋಗದ ಸಾಧ್ಯತೆಯನ್ನು ಮತ್ತಷ್ಟು ಕಡಿಮೆ ಮಾಡಲಿದ್ದು ಸಾರ್ವಜನಿಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸಲಿದೆ.

******

 


(ಪ್ರಕಟಣೆ ಐ.ಡಿ.: 2220603) ವಿಸಿಟರ್ ಕೌಂಟರ್ : 17
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Punjabi , Gujarati , Tamil , Telugu , Malayalam