ಹಣಕಾಸು ಸಚಿವಾಲಯ
azadi ka amrit mahotsav

ಮುಖ್ಯಾಂಶಗಳು: ಆರ್ಥಿಕ ಸಮೀಕ್ಷೆ 2025-26


ಮೊದಲ ಮುಂಗಡ ಅಂದಾಜುಗಳು 2025-26ರ ಆರ್ಥಿಕ ವರ್ಷಕ್ಕೆ ನೈಜ ಜಿಡಿಪಿ ಬೆಳವಣಿಗೆ ಮತ್ತು ಜಿವಿಎ ಬೆಳವಣಿಗೆಯನ್ನು ಕ್ರಮವಾಗಿ ಶೇ. 7.4 ಮತ್ತು ಶೇ. 7.3 ರಷ್ಟು ಅಂದಾಜಿಸಿವೆ.

ಭಾರತದ ಸಂಭಾವ್ಯ ಬೆಳವಣಿಗೆಯು ಸುಮಾರು ಶೇ. 7 ರಷ್ಟಿದೆ ಎಂದು ಅಂದಾಜಿಸಲಾಗಿದ್ದು, 2026-27ರ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆಯು ಶೇ. 6.8 ರಿಂದ 7.2 ರ ನಡುವೆ ಇರಲಿದೆ ಎಂದು ಅಂದಾಜಿಸಲಾಗಿದೆ.

2024-25ರ ಹಣಕಾಸು ವರ್ಷದಲ್ಲಿ ಕೇಂದ್ರದ ಆದಾಯ ಸ್ವೀಕೃತಿಗಳು ಜಿಡಿಪಿಯ ಶೇ. 9.2 ಕ್ಕೆ ಏರಿಕೆಯಾಗಿದೆ.

ಸೆಪ್ಟೆಂಬರ್ 2025 ರ ಹೊತ್ತಿಗೆ ಒಟ್ಟು ವಸೂಲಾಗದ ಸಾಲಗಳು ಹಲವು ದಶಕಗಳ ಕನಿಷ್ಠ ಮಟ್ಟವಾದ ಶೇ. 2.2 ಕ್ಕೆ ತಲುಪಿವೆ.

ಪ್ರಧಾನ ಮಂತ್ರಿ ಜನ ಧನ್ ಯೋಜನೆ ಅಡಿಯಲ್ಲಿ ಮಾರ್ಚ್ 2025 ರವರೆಗೆ 55.02 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಈ ಪೈಕಿ 36.63 ಕೋಟಿ ಖಾತೆಗಳು ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿವೆ.

ಸೆಪ್ಟೆಂಬರ್ 2025 ರಲ್ಲಿ ವಿಶಿಷ್ಟ ಹೂಡಿಕೆದಾರರ ಸಂಖ್ಯೆ 12 ಕೋಟಿ ದಾಟಿದ್ದು, ಈ ಪೈಕಿ ಸುಮಾರು ಶೇ. 25 ರಷ್ಟು ಮಹಿಳೆಯರಾಗಿದ್ದಾರೆ.

2005 ಮತ್ತು 2024 ರ ನಡುವೆ ಜಾಗತಿಕ ವ್ಯಾಪಾರ ರಫ್ತಿನಲ್ಲಿ ಭಾರತದ ಪಾಲು ಶೇ. 1 ರಿಂದ ಶೇ. 1.8 ಕ್ಕೆ ದುಪ್ಪಟ್ಟಾಗಿದೆ.

2024-25ರ ಹಣಕಾಸು ವರ್ಷದಲ್ಲಿ ಸೇವಾ ರಫ್ತುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 387.6 ಬಿಲಿಯನ್ ಯುಎಸ್ ಡಾಲರ್ ತಲುಪಿದ್ದು, ಶೇ. 13.6 ರಷ್ಟು ಬೆಳವಣಿಗೆ ಸಾಧಿಸಿದೆ.

प्रविष्टि तिथि: 29 JAN 2026 2:18PM by PIB Bengaluru

2024-25ರ ಹಣಕಾಸು ವರ್ಷದಲ್ಲಿ 135.4 ಬಿಲಿಯನ್ ಯುಎಸ್ ಡಾಲರ್ ವಿದೇಶಿ ಹಣದ ಒಳಹರಿವಿನೊಂದಿಗೆ ಭಾರತವು ವಿಶ್ವದ ಅತಿದೊಡ್ಡ ವಿದೇಶಿ ಹಣ ಸ್ವೀಕರಿಸುವ ದೇಶವಾಗಿ ಮುಂದುವರೆದಿದೆ

ಭಾರತದ ವಿದೇಶಿ ವಿನಿಮಯ ಮೀಸಲು 16 ಜನವರಿ 2026 ರ ಹೊತ್ತಿಗೆ 701.4 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ಇದು 11 ತಿಂಗಳ ಆಮದಿಗೆ ಮತ್ತು ಶೇ. 94 ರಷ್ಟು ಬಾಹ್ಯ ಸಾಲಕ್ಕೆ ರಕ್ಷಣೆ ನೀಡುತ್ತದೆ

ಏಪ್ರಿಲ್-ಡಿಸೆಂಬರ್ 2025 ರ ಅವಧಿಯಲ್ಲಿ ದೇಶೀಯ ಹಣದುಬ್ಬರವು ಸರಾಸರಿ ಶೇ. 1.7 ರಷ್ಟಿತ್ತು

2024-25ರ ಕೃಷಿ ವರ್ಷದಲ್ಲಿ ಭಾರತದ ಆಹಾರ ಧಾನ್ಯ ಉತ್ಪಾದನೆಯು 3577.3 ಲಕ್ಷ ಮೆಟ್ರಿಕ್ ಟನ್ ತಲುಪಿದೆ ಎಂದು ಅಂದಾಜಿಸಲಾಗಿದೆ, ಇದು ಹಿಂದಿನ ವರ್ಷಕ್ಕಿಂತ 254.3 ಲಕ್ಷ ಮೆಟ್ರಿಕ್ ಟನ್ ಹೆಚ್ಚಳವಾಗಿದೆ

ಪಿಎಂ-ಕಿಸಾನ್ ಆರಂಭವಾದಾಗಿನಿಂದ ಅರ್ಹ ರೈತರಿಗೆ ₹4.09 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ

'ವಿಕಸಿತ ಭಾರತ-ಜಿ ರಾಮ್ಜಿ ಎನ್ನುವುದು ಮನರೇಗಾ ಯೋಜನೆಯ ಸಮಗ್ರ ಶಾಸನಬದ್ಧ ಕೂಲಂಕಷ ಪರಿಶೀಲನೆಯಾಗಿದ್ದು, ಇದು ಗ್ರಾಮೀಣ ಉದ್ಯೋಗವನ್ನು 'ವಿಕಸಿತ ಭಾರತ್ 2047' ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಸಂಯೋಜಿಸುತ್ತದೆ

ತಯಾರಿಕಾ ವಲಯದ ಜಿವಿಎ 2025-26 ಮೊದಲ ತ್ರೈಮಾಸಿಕದಲ್ಲಿ ಶೇ. 7.72 ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ. 9.13 ರಷ್ಟು ಬೆಳೆದಿದ್ದು, ಇದು ರಚನಾತ್ಮಕ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ

14 ವಲಯಗಳಾದ್ಯಂತ ಉತ್ಪಾದನೆ ಆಧಾರಿತ ಪ್ರೋತ್ಸಾಹಕ ಯೋಜನೆಗಳು ₹2.0 ಲಕ್ಷ ಕೋಟಿಗೂ ಹೆಚ್ಚು ನೈಜ ಹೂಡಿಕೆಯನ್ನು ಆಕರ್ಷಿಸಿವೆ. ಸೆಪ್ಟೆಂಬರ್ 2025 ಹೊತ್ತಿಗೆ ಇವು ₹18.7 ಲಕ್ಷ ಕೋಟಿಗೂ ಹೆಚ್ಚಿನ ಉತ್ಪಾದನೆ/ಮಾರಾಟ ಮತ್ತು 12.6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಿವೆ

ಭಾರತೀಯ ಸೆಮಿಕಂಡಕ್ಟರ್ ಮಿಷನ್ ದೇಶೀಯ ಸಾಮರ್ಥ್ಯಗಳನ್ನು ಹೆಚ್ಚಿಸಿದ್ದು, ಸುಮಾರು ₹1.60 ಲಕ್ಷ ಕೋಟಿ ಹೂಡಿಕೆಯ 10 ಯೋಜನೆಗಳನ್ನು ಹೊಂದಿದೆ

ಹೈ-ಸ್ಪೀಡ್ ಕಾರಿಡಾರ್ಗಳು ಸುಮಾರು ಹತ್ತು ಪಟ್ಟು ಹೆಚ್ಚಾಗಿವೆಹಣಕಾಸು ವರ್ಷ 2014 ರಲ್ಲಿ 550 ಕಿ.ಮೀ ಇದ್ದದ್ದು ಡಿಸೆಂಬರ್ 2025 ಹೊತ್ತಿಗೆ 5,364 ಕಿ.ಮೀ ಗೆ ಏರಿದೆ; 2025-26 ಹಣಕಾಸು ವರ್ಷದಲ್ಲಿ 3,500 ಕಿ.ಮೀ ರೈಲ್ವೆ ಮಾರ್ಗವನ್ನು ಸೇರಿಸಲಾಗಿದೆ

ಭಾರತವು ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದ್ದು, ವಿಮಾನ ನಿಲ್ದಾಣಗಳ ಸಂಖ್ಯೆ 2014 ರಲ್ಲಿದ್ದ 74 ರಿಂದ 2025 ರಲ್ಲಿ 164 ಕ್ಕೆ ಏರಿದೆ

ಡಿಸ್ಕಾಮ್ಗಳಿಗೆ ಐತಿಹಾಸಿಕ ತಿರುವು ಲಭಿಸಿದ್ದು; 2024-25 ಹಣಕಾಸು ವರ್ಷದಲ್ಲಿ ಮೊದಲ ಬಾರಿಗೆ ₹2,701 ಕೋಟಿ ನಿವ್ವಳ ಲಾಭ ದಾಖಲಿಸಿವೆ

ಒಟ್ಟಾರೆ ನವೀಕರಿಸಬಹುದಾದ ಇಂಧನ ಮತ್ತು ಅಳವಡಿಸಲಾದ ಸೌರಶಕ್ತಿ ಸಾಮರ್ಥ್ಯದಲ್ಲಿ ಭಾರತವು ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ

ಸ್ವಾಯತ್ತ ಉಪಗ್ರಹ ಡಾಕಿಂಗ್ (SPADEX) ಸಾಮರ್ಥ್ಯವನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ

ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಪ್ರಾಥಮಿಕದಲ್ಲಿ ಶೇ. 90.9, ಉನ್ನತ ಪ್ರಾಥಮಿಕದಲ್ಲಿ ಶೇ. 90.3 ಮತ್ತು ಪ್ರೌಢ ಶಿಕ್ಷಣ ಹಂತದಲ್ಲಿ ಶೇ. 78.7 ರಷ್ಟಿದೆ

ಭಾರತವು ಈಗ 23 ಐಐಟಿ, 21 ಐಐಎಂ ಮತ್ತು 20 ಏಮ್ಸ್ ಸಂಸ್ಥೆಗಳನ್ನು ಹೊಂದಿದೆ. ಜೊತೆಗೆ ಜಂಜಿಬಾರ್ ಮತ್ತು ಅಬುಧಾಬಿಯಲ್ಲಿ ಎರಡು ಅಂತರರಾಷ್ಟ್ರೀಯ ಐಐಟಿ ಕ್ಯಾಂಪಸ್ಗಳನ್ನು ಸ್ಥಾಪಿಸಲಾಗಿದೆ

1990 ರಿಂದ ಭಾರತವು ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಜಾಗತಿಕ ಸರಾಸರಿಗಿಂತ ಹೆಚ್ಚಿನ ವೇಗವನ್ನು ಸಾಧಿಸಿದೆ

ಜನವರಿ 2026 ಹೊತ್ತಿಗೆ -ಶ್ರಮ್ (e-SHRAM) ಪೋರ್ಟಲ್ನಲ್ಲಿ 31 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರು ನೋಂದಾಯಿಸಿಕೊಂಡಿದ್ದಾರೆ, ಪೈಕಿ ಶೇ. 54 ರಷ್ಟು ಮಹಿಳೆಯರಾಗಿದ್ದಾರೆ

ನ್ಯಾಷನಲ್ ಕೆರಿಯರ್ ಸರ್ವಿಸ್ ಪೋರ್ಟಲ್ನಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು 2024-25 ಹಣಕಾಸು ವರ್ಷದಲ್ಲಿ 2.8 ಕೋಟಿ ಮೀರಿದ್ದು, 2025-26 ಸೆಪ್ಟೆಂಬರ್ ವೇಳೆಗೆ ಈಗಾಗಲೇ 2.3 ಕೋಟಿ ದಾಟಿದೆ

ನೀತಿ ಆಯೋಗವು ಅಳೆದಂತೆ ಬಹು ಆಯಾಮದ ಬಡತನ ಸೂಚ್ಯಂಕವು (ಎಂಪಿಐ) 2005-06 ರಲ್ಲಿದ್ದ ಶೇ. 55.3 ರಿಂದ 2022-23 ರಲ್ಲಿ ಶೇ. 11.28 ಕ್ಕೆ ಇಳಿಕೆಯಾಗಿದೆ

ಸಮೀಕ್ಷೆಯು ಕಾರ್ಯತಂತ್ರದ ಸ್ಥಿತಿಸ್ಥಾಪಕತ್ವಕ್ಕಾಗಿ 'ಶಿಸ್ತುಬದ್ಧ ಸ್ವದೇಶಿ' ಯೋಜನೆಯನ್ನು ಪ್ರಸ್ತಾಪಿಸಿದೆ: ಇದು ಪ್ರಮುಖ ಸಾಮರ್ಥ್ಯಗಳನ್ನು ನಿರ್ಮಿಸುವ, ಉತ್ಪಾದನಾ ವೆಚ್ಚಗಳನ್ನು ಕಡಿಮೆ ಮಾಡುವ, ಸುಧಾರಿತ ತಯಾರಿಕೆಯನ್ನು ಬಲಪಡಿಸುವ ಮತ್ತು ಸ್ವಾವಲಂಬನೆಯಿಂದ ಕಾರ್ಯತಂತ್ರದ ಅನಿವಾರ್ಯತೆಯತ್ತ ಮುನ್ನಡೆಯುವ ಮೂರು ಹಂತದ ಕಾರ್ಯತಂತ್ರವಾಗಿದೆ

 

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದರು.

ಆರ್ಥಿಕ ಸಮೀಕ್ಷೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:

ಆರ್ಥಿಕತೆಯ ಸ್ಥಿತಿಗತಿ

  1. ಜಾಗತಿಕ ವಾತಾವರಣವು ಅಸ್ಥಿರವಾಗಿದ್ದು, ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿದೆ. ಆದರೆ ತೀವ್ರಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ವಿಘಟನೆ ಮತ್ತು ಹಣಕಾಸಿನ ದುರ್ಬಲತೆಗಳ ನಡುವೆ ಅಪಾಯಗಳು ಹೆಚ್ಚಿವೆ. ಈ ಆಘಾತಗಳ ಪ್ರಭಾವವು ಇನ್ನೂ ಮುಂದುವರಿಯಬಹುದು.

  2. ಈ ಹಿನ್ನೆಲೆಯಲ್ಲಿ ಭಾರತದ ಪ್ರದರ್ಶನವು ಎದ್ದು ಕಾಣುತ್ತದೆ. ಮೊದಲ ಮುಂಗಡ ಅಂದಾಜುಗಳು 2025-26ರ ನೈಜ ಜಿಡಿಪಿ ಬೆಳವಣಿಗೆಯನ್ನು ಶೇ. 7.4 ಮತ್ತು ಜಿವಿಎ ಬೆಳವಣಿಗೆಯನ್ನು ಶೇ. 7.3 ಎಂದು ಅಂದಾಜಿಸಿವೆ. ಇದು ಭಾರತವು ಸತತ ನಾಲ್ಕನೇ ವರ್ಷವೂ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಉಳಿದಿರುವುದನ್ನು ದೃಢಪಡಿಸುತ್ತದೆ.

  3. ಖಾಸಗಿ ಅಂತಿಮ ಬಳಕೆ ವೆಚ್ಚವು (PFCE) 2025-26ರಲ್ಲಿ ಶೇ. 7.0 ರಷ್ಟು ಬೆಳೆದು, ಜಿಡಿಪಿಯ ಶೇ. 61.5 ರಷ್ಟನ್ನು ತಲುಪಿದೆ. ಇದು 2012 ರ ನಂತರದ ಗರಿಷ್ಠ ಮಟ್ಟವಾಗಿದೆ. ಕಡಿಮೆ ಹಣದುಬ್ಬರ, ಸ್ಥಿರ ಉದ್ಯೋಗ ಮತ್ತು ಹೆಚ್ಚುತ್ತಿರುವ ನೈಜ ಕೊಳ್ಳುವ ಶಕ್ತಿಯು ಈ ಬೆಳವಣಿಗೆಗೆ ಬೆಂಬಲ ನೀಡಿವೆ. ಕೃಷಿ ವಲಯದ ಉತ್ತಮ ಪ್ರದರ್ಶನವು ಗ್ರಾಮೀಣ ಬಳಕೆಯನ್ನು ಹೆಚ್ಚಿಸಿದ್ದರೆ, ತೆರಿಗೆ ಸುಧಾರಣೆಗಳಿಂದ ನಗರ ಬಳಕೆಯು ಸುಧಾರಿಸಿದೆ.

  4. 2025-26ರಲ್ಲಿ ಹೂಡಿಕೆ ಚಟುವಟಿಕೆಯು ಬಲಗೊಂಡಿದ್ದು, ಒಟ್ಟು ಸ್ಥಿರ ಬಂಡವಾಳ ರಚನೆಯು (GFCF) ಶೇ. 7.8 ರಷ್ಟು ಬೆಳೆದಿದೆ ಮತ್ತು ಜಿಡಿಪಿಯ ಶೇ. 30 ರಷ್ಟು ಪಾಲನ್ನು ಕಾಯ್ದುಕೊಂಡಿದೆ. ಇದು ಸರ್ಕಾರದ ಸಾರ್ವಜನಿಕ ಬಂಡವಾಳ ವೆಚ್ಚ ಮತ್ತು ಖಾಸಗಿ ಹೂಡಿಕೆಯ ಚೇತರಿಕೆಯಿಂದ ಸಾಧ್ಯವಾಗಿದೆ.

  5. ಪೂರೈಕೆಯ ದೃಷ್ಟಿಯಿಂದ ಸೇವಾ ವಲಯವು ಬೆಳವಣಿಗೆಯ ಮುಖ್ಯ ಚಾಲಕವಾಗಿದೆ. 2025-26ರ ಮೊದಲಾರ್ಧದಲ್ಲಿ ಸೇವೆಗಳ ಒಟ್ಟು ಮೌಲ್ಯವರ್ಧನೆ (GVA) ಶೇ. 9.3 ರಷ್ಟು ಹೆಚ್ಚಾಗಿದೆ.

ವಿತ್ತೀಯ ಬೆಳವಣಿಗೆಗಳು: ವಿಶ್ವಾಸಾರ್ಹ ಬಲವರ್ಧನೆಯ ಮೂಲಕ ಸ್ಥಿರತೆಯನ್ನು ಸಾಧಿಸುವುದು

  1. ಸರ್ಕಾರದ ವಿವೇಕಯುತ ಹಣಕಾಸು ನಿರ್ವಹಣೆಯು ಭಾರತದ ಆರ್ಥಿಕ ಚೌಕಟ್ಟಿನ ಮೇಲೆ ವಿಶ್ವಾಸವನ್ನು ಹೆಚ್ಚಿಸಿದೆ. ಇದರ ಪರಿಣಾಮವಾಗಿ 2025 ರಲ್ಲಿ ಮಾರ್ನಿಂಗ್‌ ಸ್ಟಾರ್ ಡಿ ಬಿ ಆರ್‌ ಎಸ್, ಎಸ್ ಆಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಮತ್ತು ರೇಟಿಂಗ್ ಮತ್ತು ಇನ್ವೆಸ್ಟ್‌ಮೆಂಟ್ ಇನ್ಫರ್ಮೇಷನ್ (R&I) Inc. ಸಂಸ್ಥೆಗಳಿಂದ ಭಾರತದ ಕ್ರೆಡಿಟ್ ರೇಟಿಂಗ್ ಮೇಲ್ದರ್ಜೆಗೇರಿದೆ.

  2. ಕೇಂದ್ರದ ಆದಾಯ ಸ್ವೀಕೃತಿಗಳು 2016-20ರ ನಡುವಿನ ಸರಾಸರಿ ಶೇ. 8.5 ರಿಂದ 2024-25ರಲ್ಲಿ ಜಿಡಿಪಿಯ ಶೇ. 9.2 ಕ್ಕೆ ಏರಿದೆ. ಇದು ಮುಖ್ಯವಾಗಿ ಕಾರ್ಪೊರೇಟ್ ಯೇತರ ತೆರಿಗೆ ಸಂಗ್ರಹದ ಹೆಚ್ಚಳದಿಂದ ಸಾಧ್ಯವಾಗಿದೆ. ಇದು ಸಾಂಕ್ರಾಮಿಕ ಪೂರ್ವ ಜಿಡಿಪಿಯ ಶೇ. 2.4 ರಿಂದ ಸಾಂಕ್ರಾಮಿಕ ನಂತರದ ಶೇ. 3.3 ಕ್ಕೆ ಏರಿತು.

  3. ನೇರ ತೆರಿಗೆ ಮೂಲವು ಸ್ಥಿರವಾಗಿ ವಿಸ್ತರಿಸಿತು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆಯು 2021-22ರಲ್ಲಿ 6.9 ಕೋಟಿ ಇದ್ದದ್ದು 2024-25ರಲ್ಲಿ 9.2 ಕೋಟಿಗೆ ಏರಿದೆ. ಹೆಚ್ಚಿನ ರಿಟರ್ನ್ ಫೈಲಿಂಗ್‌ ಗಳು ಸುಧಾರಿತ ಅನುಸರಣೆ, ತೆರಿಗೆ ಆಡಳಿತದಲ್ಲಿ ತಂತ್ರಜ್ಞಾನದ ಹೆಚ್ಚಿನ ಬಳಕೆ ಮತ್ತು ಆದಾಯ ಹೆಚ್ಚಾದಂತೆ ತೆರಿಗೆ ನಿವ್ವಳಕ್ಕೆ ಪ್ರವೇಶಿಸುವ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಪ್ರತಿಬಿಂಬಿಸುತ್ತವೆ.

  4. ಏಪ್ರಿಲ್-ಡಿಸೆಂಬರ್ 2025 ರ ಅವಧಿಯಲ್ಲಿ ಒಟ್ಟು ಜಿ ಎಸ್‌ ಟಿ ಸಂಗ್ರಹವು ₹17.4 ಲಕ್ಷ ಕೋಟಿಗಳಾಗಿದ್ದು, ಶೇ. 6.7 ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸಿದೆ. ಜಿ ಎಸ್‌ ಟಿ ಆದಾಯದ ಬೆಳವಣಿಗೆಯು ಚಾಲ್ತಿಯಲ್ಲಿರುವ ನಾಮಮಾತ್ರ ಜಿಡಿಪಿ ಬೆಳವಣಿಗೆಯ ಪರಿಸ್ಥಿತಿಗಳೊಂದಿಗೆ ವಿಶಾಲವಾಗಿ ಹೊಂದಿಕೆಯಾಗುತ್ತದೆ. ಸಮಾನಾಂತರವಾಗಿ, ಹೆಚ್ಚಿನ ಆವರ್ತನ ಸೂಚಕಗಳು ಬಲವಾದ ವಹಿವಾಟು ಪರಿಮಾಣಗಳನ್ನು ಸೂಚಿಸುತ್ತವೆ. ಇ-ವೇ ಬಿಲ್ ಪರಿಮಾಣಗಳು ಶೇ. 21 ರಷ್ಟು ಬೆಳೆದಿವೆ.

  1. ಕೇಂದ್ರ ಸರ್ಕಾರದ ಪರಿಣಾಮಕಾರಿ ಬಂಡವಾಳ ವೆಚ್ಚವು ಸಾಂಕ್ರಾಮಿಕ ಪೂರ್ವ ಅವಧಿಯಲ್ಲಿ ಜಿಡಿಪಿಯ ಸರಾಸರಿ ಶೇ. 2.7 ರಷ್ಟಿತ್ತು. ಇದು ಸಾಂಕ್ರಾಮಿಕೋತ್ತರ ಅವಧಿಯಲ್ಲಿ ಸುಮಾರು ಶೇ. 3.9 ಕ್ಕೆ ಏರಿದೆ ಮತ್ತು 2024-25ರ ಹಣಕಾಸು ವರ್ಷದಲ್ಲಿ ಜಿಡಿಪಿಯ ಶೇ. 4 ರಷ್ಟು ಗರಿಷ್ಠ ಮಟ್ಟಕ್ಕೆ ತಲುಪಿದೆ.

  2. ರಾಜ್ಯಗಳಿಗೆ ಬಂಡವಾಳ ವೆಚ್ಚಕ್ಕಾಗಿ ವಿಶೇಷ ನೆರವು (SASCI) ಯೋಜನೆಯ ಮೂಲಕ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಪ್ರೋತ್ಸಾಹ ನೀಡಿದೆ. ಇದರಿಂದಾಗಿ 2024-25ರ ಹಣಕಾಸು ವರ್ಷದಲ್ಲಿ ರಾಜ್ಯಗಳು ತಮ್ಮ ಬಂಡವಾಳ ವೆಚ್ಚವನ್ನು ಜಿಡಿಪಿಯ ಸುಮಾರು ಶೇ. 2.4 ರಷ್ಟು ಮಟ್ಟದಲ್ಲಿ ಕಾಯ್ದುಕೊಳ್ಳಲು ಸಾಧ್ಯವಾಗಿದೆ.

  3. ರಾಜ್ಯ ಸರ್ಕಾರಗಳ ಒಟ್ಟು ವಿತ್ತೀಯ ಕೊರತೆಯು ಸಾಂಕ್ರಾಮಿಕೋತ್ತರ ಅವಧಿಯಲ್ಲಿ ಜಿಡಿಪಿಯ ಸುಮಾರು ಶೇ. 2.8 ರಷ್ಟಿದ್ದು, ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಸಮನಾಗಿ ಸ್ಥಿರವಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಸ್ವಲ್ಪ ಏರಿಕೆಯಾಗಿದ್ದು, 2024-25ರ ಹಣಕಾಸು ವರ್ಷದಲ್ಲಿ ಶೇ. 3.2 ಕ್ಕೆ ತಲುಪಿದೆ. ಇದು ರಾಜ್ಯಗಳ ಹಣಕಾಸಿನ ಮೇಲಿರುವ ಒತ್ತಡಗಳನ್ನು ಪ್ರತಿಬಿಂಬಿಸುತ್ತದೆ.

  4. ಭಾರತವು 2020 ರಿಂದ ತನ್ನ ಒಟ್ಟಾರೆ ಸರ್ಕಾರಿ ಸಾಲ ಮತ್ತು ಜಿಡಿಪಿ ಅನುಪಾತವನ್ನು ಸುಮಾರು 7.1 ಶೇಕಡಾವಾರು ಪಾಯಿಂಟ್‌ ಗಳಷ್ಟು ಕಡಿಮೆ ಮಾಡಿದೆ. ಹೆಚ್ಚಿನ ಸಾರ್ವಜನಿಕ ಹೂಡಿಕೆಯನ್ನು ಕಾಯ್ದುಕೊಳ್ಳುವ ನಡುವೆಯೇ ಈ ಸಾಧನೆ ಮಾಡಲಾಗಿದೆ.

ಹಣಕಾಸು ನಿರ್ವಹಣೆ ಮತ್ತು ಹಣಕಾಸು ಮಧ್ಯಸ್ಥಿಕೆ: ನಿಯಂತ್ರಕ ಸುಧಾರಣೆ

ವಿತ್ತೀಯ ಆಯಾಮಗಳು

  1. ಕಾರ್ಯತಂತ್ರದ ನೀತಿ ಕ್ರಮಗಳು ಮತ್ತು ಹಣಕಾಸು ಮಧ್ಯಸ್ಥಿಕೆ ಮಾರ್ಗಗಳಾದ್ಯಂತ ಇರುವ ರಚನಾತ್ಮಕ ಸ್ಥಿತಿಸ್ಥಾಪಕತ್ವದಿಂದಾಗಿ, 2025-26ರ ಹಣಕಾಸು ವರ್ಷದಲ್ಲಿ (ಏಪ್ರಿಲ್-ಡಿಸೆಂಬರ್ 2025) ಭಾರತದ ಹಣಕಾಸು ಮತ್ತು ಆರ್ಥಿಕ ವಲಯಗಳು ಸದೃಢವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿವೆ.

ಬ್ಯಾಂಕಿಂಗ್ ವಲಯದ ಸಾಧನೆ

  1. ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಆಸ್ತಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಸೆಪ್ಟೆಂಬರ್ 2025 ರಲ್ಲಿ ಅವುಗಳ ಒಟ್ಟು ವಸೂಲಾಗದ ಸಾಲದ ಅನುಪಾತವು (GNPA ratio) ಶೇ. 2.2 ರಷ್ಟಿದ್ದು ಮತ್ತು ನಿವ್ವಳ ವಸೂಲಾಗದ ಸಾಲದ ಅನುಪಾತವು (Net NPA ratio) ಶೇ. 0.5 ರಷ್ಟಿದೆ. ಇವು ಕ್ರಮವಾಗಿ ಹಲವು ದಶಕಗಳ ಕನಿಷ್ಠ ಮಟ್ಟ ಮತ್ತು ದಾಖಲೆ ಮಟ್ಟದ ಕನಿಷ್ಠ ಮಟ್ಟವನ್ನು ತಲುಪಿವೆ.

  2. 31 ಡಿಸೆಂಬರ್ 2025ರ ಹೊತ್ತಿಗೆ, ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ನೀಡಿದ ಬಾಕಿ ಸಾಲದ ಮೊತ್ತದಲ್ಲಿನ ವಾರ್ಷಿಕ ಬೆಳವಣಿಗೆಯು ಶೇ. 14.5ಕ್ಕೆ ಏರಿದೆ. ಇದು ಡಿಸೆಂಬರ್ 2024 ರಲ್ಲಿ ಶೇ. 11.2 ರಷ್ಟಿತ್ತು.

ಹಣಕಾಸು ಒಳಗೊಳ್ಳುವಿಕೆ

  1. 2014 ರಲ್ಲಿ ಪ್ರಾರಂಭಿಸಲಾದ ಪ್ರಧಾನ ಮಂತ್ರಿ ಜನ ಧನ್ ಯೋಜನೆ, ಮಾರ್ಚ್ 2025 ರ ಹೊತ್ತಿಗೆ 55.02 ಕೋಟಿ ಖಾತೆಗಳನ್ನು ತೆರೆದಿದೆ. ಈ ಪೈಕಿ 36.63 ಕೋಟಿ ಖಾತೆಗಳು ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿದ್ದು, ಈ ಹಿಂದೆ ಬ್ಯಾಂಕಿಂಗ್ ಸೌಲಭ್ಯವಿಲ್ಲದ ಜನಸಮುದಾಯಕ್ಕೆ ಅಡಿಪಾಯದ ಉಳಿತಾಯ ಮತ್ತು ವಹಿವಾಟು ಮೂಲಸೌಕರ್ಯವನ್ನು ಸ್ಥಾಪಿಸಿದೆ.

  2. ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಿಗೆ ಹೊಸ ಉದ್ಯಮಗಳನ್ನು ಸ್ಥಾಪಿಸಲು ₹10 ಲಕ್ಷದಿಂದ ₹1 ಕೋಟಿವರೆಗಿನ ಬ್ಯಾಂಕ್ ಸಾಲಗಳನ್ನು ನೀಡುತ್ತದೆ.

  3. ಪಿಎಂ ಬೀದಿ ಬದಿ ವ್ಯಾಪಾರಿಗಳ ಆತ್ಮನಿರ್ಭರ ನಿಧಿ (ಪಿಎಂ ಸ್ವನಿಧಿ) ಯೋಜನೆಯು ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ಭದ್ರತೆ ಇಲ್ಲದ ದುಡಿಯುವ ಬಂಡವಾಳ ಸಾಲಗಳನ್ನು ಒದಗಿಸುತ್ತಿದೆ.

  4. ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ತಯಾರಿಕೆ, ವ್ಯಾಪಾರ, ಸೇವೆಗಳು ಮತ್ತು ಕೃಷಿ ಪೂರಕ ಚಟುವಟಿಕೆಗಳಲ್ಲಿ ತೊಡಗಿರುವ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಧನಸಹಾಯ ನೀಡುತ್ತಿದೆ. ಅಕ್ಟೋಬರ್ 2025 ರ ವೇಳೆಗೆ, ಈ ಯೋಜನೆಯಡಿ 55.45 ಕೋಟಿ ಸಾಲದ ಖಾತೆಗಳ ಮೂಲಕ ₹36.18 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ವಿತರಿಸಲಾಗಿದೆ.

ಹಣಕಾಸು ವಲಯದ ಇತರ ಆಯಾಮಗಳು

  1. 2025-26ರ ಹಣಕಾಸು ವರ್ಷದಲ್ಲಿ (ಡಿಸೆಂಬರ್ 2025 ರವರೆಗೆ), 235 ಲಕ್ಷ ಡಿಮ್ಯಾಟ್ ಖಾತೆಗಳನ್ನು ಹೊಸದಾಗಿ ಸೇರಿಸಲಾಗಿದ್ದು, ಒಟ್ಟು ಖಾತೆಗಳ ಸಂಖ್ಯೆ 21.6 ಕೋಟಿ ಮೀರಿದೆ. ಸೆಪ್ಟೆಂಬರ್ 2025 ರಲ್ಲಿ ವಿಶಿಷ್ಟ ಹೂಡಿಕೆದಾರರ ಸಂಖ್ಯೆ 12 ಕೋಟಿಯ ಗಡಿ ದಾಟಿರುವುದು ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಈ ಪೈಕಿ ಸುಮಾರು ಕಾಲು ಭಾಗದಷ್ಟು (ಶೇ. 25) ಮಹಿಳೆಯರಾಗಿದ್ದಾರೆ.

  2. ಮ್ಯೂಚುವಲ್ ಫಂಡ್ ಉದ್ದಿಮೆಯೂ ಸಹ ವಿಸ್ತರಣೆಗೊಂಡಿದ್ದು, ಡಿಸೆಂಬರ್ 2025 ರ ಅಂತ್ಯದ ವೇಳೆಗೆ 5.9 ಕೋಟಿ ವಿಶಿಷ್ಟ ಹೂಡಿಕೆದಾರರನ್ನು ಹೊಂದಿದೆ. ಈ ಪೈಕಿ 3.5 ಕೋಟಿ ಹೂಡಿಕೆದಾರರು (ನವೆಂಬರ್ 2025 ರ ಹೊತ್ತಿಗೆ) ಶ್ರೇಣಿ-I ಅಲ್ಲದ ಮತ್ತು ಶ್ರೇಣಿ-II ನಗರಗಳಿಗೆ ಸೇರಿದವರಾಗಿದ್ದಾರೆ. ಇದು ಹಣಕಾಸು ಪಾಲ್ಗೊಳ್ಳುವಿಕೆಯು ಸಾಂಪ್ರದಾಯಿಕ ನಗರ ಕೇಂದ್ರಗಳಿಂದ ಆಚೆಗೂ ಹರಡುತ್ತಿರುವುದನ್ನು ಎತ್ತಿ ತೋರಿಸುತ್ತದೆ.

10. ಗಿಫ್ಟ್ ಸಿಟಿಯಲ್ಲಿರುವ ಭಾರತದ ಮೊದಲ ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರವು ಜಾಗತಿಕ ಬಂಡವಾಳವನ್ನು ಆಕರ್ಷಿಸಲು ಮತ್ತು ಸಜ್ಜುಗೊಳಿಸಲು ಪೂರಕವಾದ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿದೆ.

ಈ ವಲಯದ ಮುನ್ನೋಟ

11. ನಿಯಂತ್ರಕ ಗುಣಮಟ್ಟದಲ್ಲಿನ ವ್ಯವಸ್ಥಿತ ಸುಧಾರಣೆಯು 2025 ರಲ್ಲಿ ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಜಂಟಿಯಾಗಿ ನಡೆಸಿದ ಹಣಕಾಸು ವಲಯದ ಮೌಲ್ಯಮಾಪನ ಕಾರ್ಯಕ್ರಮ (FSAP) ಮೂಲಕ ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ. ಭಾರತದ ಹಣಕಾಸು ವ್ಯವಸ್ಥೆಯು ಹೆಚ್ಚು ಸ್ಥಿತಿಸ್ಥಾಪಕತ್ವ ಹೊಂದಿದ್ದು, ವೈವಿಧ್ಯಮಯ ಮತ್ತು ಒಳಗೊಳ್ಳುವಿಕೆಯಿಂದ ಕೂಡಿದೆ ಎಂದು ಎರಡೂ ವರದಿಗಳು ಹೇಳಿವೆ. 2024 ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು ಹಣಕಾಸು ವಲಯದ ಆಸ್ತಿಗಳು ಜಿಡಿಪಿಯ ಸುಮಾರು ಶೇ. 187 ರಷ್ಟಿವೆ ಮತ್ತು ಬಂಡವಾಳ ಮಾರುಕಟ್ಟೆಯು 2017 ರಲ್ಲಿದ್ದ ಜಿಡಿಪಿಯ ಶೇ. 144 ರಿಂದ 2024 ರಲ್ಲಿ ಶೇ. 175 ಕ್ಕೆ ವಿಸ್ತರಣೆಗೊಂಡಿದೆ. ತೀವ್ರತರವಾದ ಆರ್ಥಿಕ ಒತ್ತಡದ ಸಂದರ್ಭಗಳಲ್ಲೂ ಬ್ಯಾಂಕುಗಳು ಮತ್ತು ಎನ್‌ ಬಿ ಎಫ್‌ ಸಿ ಗಳು ಸಾಕಷ್ಟು ಬಂಡವಾಳದ ರಕ್ಷಣೆಯನ್ನು ಹೊಂದಿವೆ ಎಂದು ಈ ಮೌಲ್ಯಮಾಪನಗಳು ಕಂಡುಕೊಂಡಿವೆ.

ಬಾಹ್ಯ ವಲಯ: ದೀರ್ಘಾವಧಿಯ ಗುರಿ

1. ಕ್ಯಾಲೆಂಡರ್ ವರ್ಷ 2005 ಮತ್ತು 2024 ರ ನಡುವೆ, ಜಾಗತಿಕ ಸರಕು ರಫ್ತಿನಲ್ಲಿ ಭಾರತದ ಪಾಲು ಶೇ. 1 ರಿಂದ ಶೇ. 1.8 ಕ್ಕೆ ಸುಮಾರು ದುಪ್ಪಟ್ಟಾಗಿದೆ. ಇದೇ ಅವಧಿಯಲ್ಲಿ ಜಾಗತಿಕ ವಾಣಿಜ್ಯ ಸೇವಾ ರಫ್ತಿನಲ್ಲಿ ಭಾರತದ ಪಾಲು ಶೇ. 2 ರಿಂದ ಶೇ. 4.3 ಕ್ಕೆ ಎರಡರಷ್ಟು ಹೆಚ್ಚಾಗಿದೆ.

  1. ಅಂಕ್ಟಾಡ್ (UNCTAD) ಸಂಸ್ಥೆಯ 'ವ್ಯಾಪಾರ ಮತ್ತು ಅಭಿವೃದ್ಧಿ ವರದಿ 2025' ರ ಪ್ರಕಾರ, ವ್ಯಾಪಾರ ಪಾಲುದಾರರ ವೈವಿಧ್ಯೀಕರಣದಲ್ಲಿ ಭಾರತವು ಮುಂಚೂಣಿಯಲ್ಲಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಜಾಗತಿಕ ದಕ್ಷಿಣದ ರಾಷ್ಟ್ರಗಳಲ್ಲಿ ಭಾರತವು ಮೂರನೇ ಸ್ಥಾನದಲ್ಲಿದೆ ಮತ್ತು ಎಲ್ಲಾ ಜಾಗತಿಕ ಉತ್ತರದ ಆರ್ಥಿಕತೆಗಳಿಗಿಂತ ಹೆಚ್ಚಿನ 'ವ್ಯಾಪಾರ ವೈವಿಧ್ಯತೆ ಸ್ಕೋರ್' ಅನ್ನು ದಾಖಲಿಸಿದೆ.

  2. 2024-25ರ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ರಫ್ತು ದಾಖಲೆಯ 825.3 ಬಿಲಿಯನ್ ಯುಎಸ್ ಡಾಲರ್ ತಲುಪಿದೆ. ಇದು ಮುಖ್ಯವಾಗಿ ಸೇವಾ ರಫ್ತಿನ ಬಲವಾದ ಬೆಳವಣಿಗೆಯಿಂದಾಗಿ ಶೇ. 6.1 ರಷ್ಟು ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.

  3. ಪೆಟ್ರೋಲಿಯಂಯೇತರ ರಫ್ತುಗಳು 2024-25ರಲ್ಲಿ 374.3 ಬಿಲಿಯನ್ ಯುಎಸ್ ಡಾಲರ್‌ ನ ಐತಿಹಾಸಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಪೆಟ್ರೋಲಿಯಂಯೇತರ, ರತ್ನ ಮತ್ತು ಆಭರಣಗಳೇತರ ರಫ್ತುಗಳು ಒಟ್ಟು ಸರಕು ರಫ್ತಿನ ಸುಮಾರು ಐದನೇ ನಾಲ್ಕು ಭಾಗದಷ್ಟಿವೆ.

  4. 2024-25ರ ಹಣಕಾಸು ವರ್ಷದಲ್ಲಿ ಸೇವಾ ರಫ್ತುಗಳು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 387.6 ಬಿಲಿಯನ್ ಯುಎಸ್ ಡಾಲರ್ ತಲುಪಿದ್ದು, ಶೇ. 13.6 ರಷ್ಟು ಬೆಳೆದಿವೆ. ಇದು ತಂತ್ರಜ್ಞಾನ ಮತ್ತು ವ್ಯವಹಾರ ಸೇವೆಗಳ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸಿದೆ.

  5. ಸೇವಾ ರಫ್ತು ಮತ್ತು ವಿದೇಶಿ ಹಣದ ಒಳಹರಿವಿನಿಂದಾಗಿ ಭಾರತದ ಚಾಲ್ತಿ ಖಾತೆ ಕೊರತೆಯು (CAD) ಸಾಧಾರಣ ಮಟ್ಟದಲ್ಲಿದೆ. 2025-26ರ ಎರಡನೇ ತ್ರೈಮಾಸಿಕದಲ್ಲಿ ಭಾರತದ ಸಿಎಡಿ ಜಿಡಿಪಿಯ ಸುಮಾರು ಶೇ. 1.3 ರಷ್ಟಿದ್ದು, ಇದು ಇತರ ಪ್ರಮುಖ ಆರ್ಥಿಕತೆಗಳಿಗೆ ಹೋಲಿಸಿದರೆ ಉತ್ತಮ ಸ್ಥಿತಿಯಲ್ಲಿದೆ.

  6. ಭಾರತವು ವಿಶ್ವದ ಅತಿದೊಡ್ಡ ವಿದೇಶಿ ಹಣ ಸ್ವೀಕರಿಸುವ ದೇಶವಾಗಿ ಮುಂದುವರೆದಿದ್ದು, 2024-25ರಲ್ಲಿ 135.4 ಬಿಲಿಯನ್ ಯುಎಸ್ ಡಾಲರ್ ಒಳಹರಿವು ದಾಖಲಾಗಿದೆ. ಇದು ಬಾಹ್ಯ ಆರ್ಥಿಕತೆಯ ಸ್ಥಿರತೆಗೆ ಬೆಂಬಲ ನೀಡಿದೆ. ಮುಂದುವರಿದ ದೇಶಗಳಿಂದ ಬರುತ್ತಿರುವ ಹಣದ ಪಾಲು ಹೆಚ್ಚಾಗಿದ್ದು, ಇದು ಭಾರತೀಯ ನುರಿತ ಮತ್ತು ವೃತ್ತಿಪರ ಉದ್ಯೋಗಿಗಳ ಹೆಚ್ಚುತ್ತಿರುವ ಕೊಡುಗೆಯನ್ನು ಪ್ರತಿಫಲಿಸುತ್ತದೆ.

  7. ಭಾರತದ ವಿದೇಶಿ ವಿನಿಮಯ ಮೀಸಲು 16 ಜನವರಿ 2026 ರ ಹೊತ್ತಿಗೆ 701.4 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ಇದು ಸುಮಾರು 11 ತಿಂಗಳ ಆಮದಿಗೆ ರಕ್ಷಣೆ ನೀಡುತ್ತದೆ ಮತ್ತು ಶೇ. 94 ಕ್ಕೂ ಹೆಚ್ಚು ಬಾಹ್ಯ ಸಾಲವನ್ನು ಸರಿದೂಗಿಸುವ ಸಾಮರ್ಥ್ಯ ಹೊಂದಿದೆ, ಇದರಿಂದಾಗಿ ಬಾಹ್ಯ ಆರ್ಥಿಕ ಏರಿಳಿತಗಳ ವಿರುದ್ಧ ಭಾರತದ ಸ್ಥಿತಿಸ್ಥಾಪಕತ್ವವು ಬಲಗೊಂಡಿದೆ.

  1. ಜಾಗತಿಕ ಹೂಡಿಕೆಯ ವಾತಾವರಣವು ಮಂದಗತಿಯಲ್ಲಿದ್ದರೂ ಸಹ, ಭಾರತವು ಗಣನೀಯ ಪ್ರಮಾಣದ ನೇರ ವಿದೇಶಿ ಹೂಡಿಕೆಯನ್ನು ಆಕರ್ಷಿಸುವುದನ್ನು ಮುಂದುವರೆಸಿದೆ. ಏಪ್ರಿಲ್-ನವೆಂಬರ್ 2025 ರ ಅವಧಿಯಲ್ಲಿ ಒಟ್ಟು ಎಫ್‌ ಡಿ ಐ ಒಳಹರಿವು 64.7 ಬಿಲಿಯನ್ ಯುಎಸ್ ಡಾಲರ್ ತಲುಪಿದೆ.

  2. 2024 ರಲ್ಲಿ 'ಗ್ರೀನ್‌ಫೀಲ್ಡ್' (ಹೊಸ ಯೋಜನೆಗಳ) ಹೂಡಿಕೆಯ ಘೋಷಣೆಗಳಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಸ್ಥಾನ ಪಡೆದಿದೆ. 1,000 ಕ್ಕೂ ಹೆಚ್ಚು ಯೋಜನೆಗಳೊಂದಿಗೆ, 2020-24ರ ನಡುವೆ ಗ್ರೀನ್‌ಫೀಲ್ಡ್ ಡಿಜಿಟಲ್ ಹೂಡಿಕೆಗಳಿಗೆ ಭಾರತವು ವಿಶ್ವದ ಅತಿದೊಡ್ಡ ತಾಣವಾಗಿ ಹೊರಹೊಮ್ಮಿದೆ.

ಹಣದುಬ್ಬರ: ನಿಯಂತ್ರಣ ಮತ್ತು ಸ್ಥಿರತೆ

  1. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐI) ಸರಣಿಯ ಆರಂಭದ ನಂತರ ಭಾರತವು ಅತ್ಯಂತ ಕಡಿಮೆ ಹಣದುಬ್ಬರ ದರವನ್ನು ದಾಖಲಿಸಿದೆ. ಏಪ್ರಿಲ್-ಡಿಸೆಂಬರ್ 2025 ರ ಅವಧಿಯಲ್ಲಿ ಸರಾಸರಿ ಒಟ್ಟಾರೆ (Headline) ಹಣದುಬ್ಬರವು ಶೇ. 1.7 ರಷ್ಟಿದೆ. ಚಿಲ್ಲರೆ ಹಣದುಬ್ಬರದಲ್ಲಿನ ಈ ಇಳಿಕೆಗೆ ಮುಖ್ಯವಾಗಿ ಆಹಾರ ಮತ್ತು ಇಂಧನ ಬೆಲೆಗಳಲ್ಲಿನ ಕುಸಿತ ಕಾರಣವಾಗಿದೆ. ಭಾರತದ ಸಿಪಿಐ ಬುಟ್ಟಿಯಲ್ಲಿ ಇವೆರಡೂ ಸೇರಿ ಶೇ. 52.7 ರಷ್ಟು ಪಾಲನ್ನು ಹೊಂದಿವೆ.

  2. ಗಮನಾರ್ಹವಾಗಿ, ಪ್ರಮುಖ ಉದಯೋನ್ಮುಖ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳಲ್ಲಿ (EMDE), 2024 ಕ್ಕೆ ಹೋಲಿಸಿದರೆ 2025 ರಲ್ಲಿ ಒಟ್ಟಾರೆ ಹಣದುಬ್ಬರದಲ್ಲಿ ಅತ್ಯಂತ ವೇಗವಾಗಿ ಇಳಿಕೆ ಕಂಡ ದೇಶಗಳಲ್ಲಿ ಭಾರತವೂ ಒಂದಾಗಿದೆ. ಇದು ಸುಮಾರು 1.8 ಶೇಕಡಾವಾರು ಪಾಯಿಂಟ್‌ ಗಳಷ್ಟು ಇಳಿಕೆಯನ್ನು ದಾಖಲಿಸಿದೆ.

ಕೃಷಿ ಮತ್ತು ಆಹಾರ ನಿರ್ವಹಣೆ

  1. 2014-15 ರಿಂದ 2023-24ರ ಹಣಕಾಸು ವರ್ಷಗಳ ನಡುವೆ, ಪಶುಸಂಗೋಪನಾ ವಲಯವು ಬಲವಾದ ಬೆಳವಣಿಗೆಯನ್ನು ಕಂಡಿದ್ದು, ಇದರ ಒಟ್ಟು ಮೌಲ್ಯವರ್ಧನೆ (ಜಿವಿಎ) ಸುಮಾರು ಶೇ. 195 ರಷ್ಟು ಏರಿಕೆಯಾಗಿದೆ. ಮೀನುಗಾರಿಕೆ ವಲಯವೂ ಉತ್ತಮ ಪ್ರದರ್ಶನ ನೀಡಿದ್ದು, 2004-14ರ ಅವಧಿಗೆ ಹೋಲಿಸಿದರೆ 2014-2024ರ ಅವಧಿಯಲ್ಲಿ ಮೀನು ಉತ್ಪಾದನೆಯು ಶೇ. 140 ಕ್ಕೂ ಹೆಚ್ಚು ಹೆಚ್ಚಳವಾಗಿದೆ.

  2. ಉತ್ತಮ ಮುಂಗಾರು ಹಂಗಾಮಿನಿಂದಾಗಿ, 2024-25ರ ಕೃಷಿ ವರ್ಷದಲ್ಲಿ ಭಾರತದ ಆಹಾರ ಧಾನ್ಯ ಉತ್ಪಾದನೆಯು 3,577.3 ಲಕ್ಷ ಮೆಟ್ರಿಕ್ ಟನ್ ತಲುಪಿದೆ ಎಂದು ಅಂದಾಜಿಸಲಾಗಿದೆ. ಇದು ಹಿಂದಿನ ವರ್ಷಕ್ಕಿಂತ 254.3 ಲಕ್ಷ ಮೆಟ್ರಿಕ್ ಟನ್ ಗಳಷ್ಟು ಹೆಚ್ಚಳವಾಗಿದೆ. ಅಕ್ಕಿ, ಗೋಧಿ, ಮೆಕ್ಕೆಜೋಳ ಮತ್ತು ಸಿರಿಧಾನ್ಯಗಳ (ಶ್ರೀ ಅನ್ನ) ಹೆಚ್ಚಿನ ಇಳುವರಿಯಿಂದ ಈ ಬೆಳವಣಿಗೆ ಸಾಧ್ಯವಾಗಿದೆ.

  1. ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗುತ್ತಿದ್ದರೂ, ಕೃಷಿ ಜಿವಿಎಯಲ್ಲಿ ಸುಮಾರು ಶೇ. 33 ರಷ್ಟು ಪಾಲು ಹೊಂದಿರುವ ತೋಟಗಾರಿಕೆ ವಲಯವು ಕೃಷಿ ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯಾಗಿ ಹೊರಹೊಮ್ಮಿದೆ. 2024-25ರಲ್ಲಿ ತೋಟಗಾರಿಕಾ ಉತ್ಪಾದನೆಯು 362.08 ಮಿಲಿಯನ್ ಟನ್‌ ಗಳನ್ನು ತಲುಪುವ ಮೂಲಕ, ಅಂದಾಜು ಆಹಾರ ಧಾನ್ಯ ಉತ್ಪಾದನೆಯಾದ 357.73 ಮಿಲಿಯನ್ ಟನ್‌ ಅನ್ನು ಮೀರಿದೆ. 

  2. ಕೃಷಿ ಮಾರುಕಟ್ಟೆ ಮತ್ತು ಮೂಲಸೌಕರ್ಯದಲ್ಲಿ ದಕ್ಷತೆಯನ್ನು ಸುಧಾರಿಸಲು, ಸರ್ಕಾರವು ಐ ಎಸ್ ಎ ಎಂ ಅಡಿಯಲ್ಲಿ 'ಕೃಷಿ ಮಾರುಕಟ್ಟೆ ಮೂಲಸೌಕರ್ಯ' (ಎಎಂಐ) ಉಪ-ಯೋಜನೆ ಮತ್ತು 'ಕೃಷಿ ಮೂಲಸೌಕರ್ಯ ನಿಧಿ' (ಎಐಎಫ್) ಅನ್ನು ಜಾರಿಗೆ ತರುತ್ತಿದೆ. ಇ-ನ್ಯಾಮ್ ಯೋಜನೆಯ ಮೂಲಕ ಬೆಲೆ ನಿರ್ಧಾರ ಪ್ರಕ್ರಿಯೆಯನ್ನು ಬಲಪಡಿಸಲಾಗಿದ್ದು, 31 ಡಿಸೆಂಬರ್ 2025 ರ ಹೊತ್ತಿಗೆ ಸುಮಾರು 1.79 ಕೋಟಿ ರೈತರು, 2.72 ಕೋಟಿ ವ್ಯಾಪಾರಿಗಳು ಮತ್ತು 4,698 ಎಫ್‌‌ ಪಿ ಒ ಗಳು ಇದರಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇದು 23 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳಾದ್ಯಂತ 1,522 ಮಂಡಿಗಳನ್ನು ಒಳಗೊಂಡಿದೆ.

  3. ಕನಿಷ್ಠ ಬೆಂಬಲ ಬೆಲೆ (ಎಂ ಎಸ್‌ ಪಿ) ಮತ್ತು ಪಿಎಂ-ಕಿಸಾನ್ ಆದಾಯ ವರ್ಗಾವಣೆಯ ಮೂಲಕ ರೈತರ ಆದಾಯಕ್ಕೆ ಬೆಂಬಲ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ, 'ಪಿಎಂ ಕಿಸಾನ್ ಮಾನ್-ಧನ್ ಯೋಜನೆ' (ಪಿಎಂಕೆಎಂವೈ) ರೈತರಿಗೆ ಪಿಂಚಣಿ ಸೌಲಭ್ಯವನ್ನು ಒದಗಿಸುತ್ತದೆ. ಪಿಎಂ-ಕಿಸಾನ್ ಅಡಿಯಲ್ಲಿ ಇದುವರೆಗೆ ₹4.09 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಅರ್ಹ ರೈತರಿಗೆ 21 ಕಂತುಗಳಲ್ಲಿ ಬಿಡುಗಡೆ ಮಾಡಲಾಗಿದೆ. 31 ಡಿಸೆಂಬರ್ 2025 ರ ಹೊತ್ತಿಗೆ ಪಿಎಂಕೆಎಂವೈ ಅಡಿಯಲ್ಲಿ 24.92 ಲಕ್ಷ ರೈತರು ನೋಂದಾಯಿಸಿಕೊಂಡಿದ್ದಾರೆ.

ಸೇವೆಗಳು: ಸ್ಥಿರತೆಯಿಂದ ಹೊಸ ಮೈಲಿಗಲ್ಲುಗಳವರೆಗೆ

1. 2025-26ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಜಿಡಿಪಿಯಲ್ಲಿ ಸೇವಾ ವಲಯದ ಪಾಲು ಶೇ. 53.6 ಕ್ಕೆ ಏರಿದೆ. 2026ರ ಮೊದಲ ಮುಂಗಡ ಅಂದಾಜುಗಳ ಪ್ರಕಾರ, ಜಿವಿಎಯಲ್ಲಿ ಸೇವೆಗಳ ಪಾಲು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇ. 56.4 ರಷ್ಟಿದೆ. ಇದು ಆಧುನಿಕ, ವ್ಯಾಪಾರಯೋಗ್ಯ ಮತ್ತು ಡಿಜಿಟಲ್ ಮೂಲಕ ವಿತರಿಸಲಾಗುವ ಸೇವೆಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ.

  1. ಭಾರತವು ವಿಶ್ವದ ಏಳನೇ ಅತಿದೊಡ್ಡ ಸೇವಾ ರಫ್ತುದಾರ ದೇಶವಾಗಿದೆ. ಜಾಗತಿಕ ಸೇವಾ ವ್ಯಾಪಾರದಲ್ಲಿ ಭಾರತದ ಪಾಲು 2005 ರಲ್ಲಿದ್ದ ಶೇ. 2 ರಿಂದ 2024 ರಲ್ಲಿ ಶೇ. 4.3 ಕ್ಕೆ ಎರಡರಷ್ಟು ಹೆಚ್ಚಾಗಿದೆ.

  2. ಸೇವಾ ವಲಯವು ವಿದೇಶಿ ನೇರ ಹೂಡಿಕೆಯ ಅತಿದೊಡ್ಡ ಸ್ವೀಕೃತಿದಾರನಾಗಿ ಮುಂದುವರೆದಿದೆ. 2022-23 ರಿಂದ 2024-25ರ ಅವಧಿಯಲ್ಲಿ ಒಟ್ಟು ಎಫ್‌ ಡಿ ಐ ಒಳಹರಿವಿನಲ್ಲಿ ಸೇವಾ ವಲಯದ ಸರಾಸರಿ ಪಾಲು ಶೇ. 80.2 ರಷ್ಟಿದೆ. ಇದು ಸಾಂಕ್ರಾಮಿಕ ಪೂರ್ವದ ಅವಧಿಯಲ್ಲಿ (2016-2020) ಇದ್ದ ಶೇ. 77.7 ಕ್ಕಿಂತ ಹೆಚ್ಚಾಗಿದೆ.

ಕೈಗಾರಿಕೆಯ ಮುಂದಿನ ಜಿಗಿತ: ರಚನಾತ್ಮಕ ರೂಪಾಂತರ ಮತ್ತು ಜಾಗತಿಕ ಏಕೀಕರಣ

  1. ಜಾಗತಿಕ ಮಟ್ಟದಲ್ಲಿ ಪ್ರತಿಕೂಲ ಪರಿಸ್ಥಿತಿಗಳು ಮುಂದುವರೆದಿದ್ದರೂ ಸಹ, 2025-26ರ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕೈಗಾರಿಕಾ ಚಟುವಟಿಕೆಗಳು ಬಲಗೊಂಡಿವೆ. ಈ ಅವಧಿಯಲ್ಲಿ ಕೈಗಾರಿಕಾ ಜಿವಿಎ ನೈಜ ದರದಲ್ಲಿ ಶೇ. 7.0 ರಷ್ಟು ಬೆಳವಣಿಗೆ ಸಾಧಿಸಿದೆ.

  2. ತಯಾರಿಕಾ ವಲಯದ ಬೆಳವಣಿಗೆಯು ವೇಗವನ್ನು ಪಡೆದುಕೊಂಡಿದೆ. 2025-26ರ ಮೊದಲ ತ್ರೈಮಾಸಿಕದಲ್ಲಿ ಜಿವಿಎ ಶೇ. 7.72 ರಷ್ಟು ಮತ್ತು ಎರಡನೇ ತ್ರೈಮಾಸಿಕದಲ್ಲಿ ಶೇ. 9.13 ರಷ್ಟು ವಿಸ್ತರಣೆಗೊಂಡಿದೆ. ಇದು ಆರ್ಥಿಕತೆಯ ರಚನಾತ್ಮಕ ಚೇತರಿಕೆಯನ್ನು ಪ್ರತಿಬಿಂಬಿಸುತ್ತದೆ.

  3. 14 ವಲಯಗಳಾದ್ಯಂತ ಜಾರಿಯಲ್ಲಿರುವ ಉತ್ಪಾದನಾ ಆಧಾರಿತ ಪ್ರೋತ್ಸಾಹಕ (ಪಿ ಎಲ್‌ ಐ) ಯೋಜನೆಗಳು ₹2.0 ಲಕ್ಷ ಕೋಟಿಗೂ ಅಧಿಕ ನೈಜ ಹೂಡಿಕೆಯನ್ನು ಆಕರ್ಷಿಸಿವೆ. ಸೆಪ್ಟೆಂಬರ್ 2025 ರ ಹೊತ್ತಿಗೆ, ಈ ಯೋಜನೆಗಳು ₹18.7 ಲಕ್ಷ ಕೋಟಿಗೂ ಹೆಚ್ಚಿನ ಹೆಚ್ಚುವರಿ ಉತ್ಪಾದನೆ/ಮಾರಾಟವನ್ನು ಮತ್ತು 12.6 ಲಕ್ಷಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿವೆ.

  4. ಭಾರತದ ನಾವೀನ್ಯತೆ ಪ್ರದರ್ಶನವು ಸ್ಥಿರವಾಗಿ ಬಲಗೊಳ್ಳುತ್ತಿದೆ. ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2019 ರಲ್ಲಿದ್ದ 66 ರಿಂದ 2025 ರಲ್ಲಿ 38ನೇ ಸ್ಥಾನಕ್ಕೆ ಸುಧಾರಿಸಿದೆ.

  5. ಭಾರತೀಯ ಸೆಮಿಕಂಡಕ್ಟರ್ ಮಿಷನ್ ದೇಶೀಯ ಸಾಮರ್ಥ್ಯಗಳನ್ನು ಹೆಚ್ಚಿಸಿದೆ. 6 ರಾಜ್ಯಗಳಾದ್ಯಂತ ಸುಮಾರು ₹1.60 ಲಕ್ಷ ಕೋಟಿ ಹೂಡಿಕೆಯ 10 ಸೆಮಿಕಂಡಕ್ಟರ್ ತಯಾರಿಕೆ ಮತ್ತು ಪ್ಯಾಕೇಜಿಂಗ್ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಹೂಡಿಕೆ ಮತ್ತು ಮೂಲಸೌಕರ್ಯ: ಸಂಪರ್ಕ, ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕತೆಯ ಬಲವರ್ಧನೆ

  1. ಭಾರತ ಸರ್ಕಾರದ ಬಂಡವಾಳ ವೆಚ್ಚವು 2017-18ರ ಹಣಕಾಸು ವರ್ಷದಲ್ಲಿದ್ದ ₹2.63 ಲಕ್ಷ ಕೋಟಿಯಿಂದ 2025-26ರ ಬಜೆಟ್ ಅಂದಾಜಿನಲ್ಲಿ (ಬಿಇ) ₹11.21 ಲಕ್ಷ ಕೋಟಿಗೆ ತಲುಪುವ ಮೂಲಕ ಸುಮಾರು 4.2 ಪಟ್ಟು ಹೆಚ್ಚಾಗಿದೆ. 2025-26ರಲ್ಲಿ ಪರಿಣಾಮಕಾರಿ ಬಂಡವಾಳ ವೆಚ್ಚವು ₹15.48 ಲಕ್ಷ ಕೋಟಿಯಾಗಿದ್ದು, ಮೂಲಸೌಕರ್ಯವನ್ನು ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಯನ್ನಾಗಿ ಮಾಡಿದೆ.

  2. ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯವು ಗಣನೀಯವಾಗಿ ವಿಸ್ತರಿಸಲ್ಪಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಜಾಲವು 2014ರ ಹಣಕಾಸು ವರ್ಷದಲ್ಲಿದ್ದ 91,287 ಕಿ.ಮೀ ನಿಂದ 1,46,572 ಕಿ.ಮೀ ಗೆ (ಡಿಸೆಂಬರ್ 2025 ರವರೆಗೆ) ಸುಮಾರು ಶೇ. 60 ರಷ್ಟು ಬೆಳೆದಿದೆ. ಕಾರ್ಯಾಚರಣೆಯಲ್ಲಿರುವ ಹೈ-ಸ್ಪೀಡ್ ಕಾರಿಡಾರ್‌ ಗಳು ಸುಮಾರು ಹತ್ತು ಪಟ್ಟು ಹೆಚ್ಚಾಗಿದ್ದು—550 ಕಿ.ಮೀ (2014) ನಿಂದ 5,364 ಕಿ.ಮೀ (2026) ಗೆ ಏರಿವೆ.

  3. ರೈಲ್ವೆ ಮೂಲಸೌಕರ್ಯವು ವಿಸ್ತರಣೆಯನ್ನು ಮುಂದುವರೆಸಿದ್ದು, ಮಾರ್ಚ್ 2025 ರ ವೇಳೆಗೆ ರೈಲು ಜಾಲವು 69,439 ರೂಟ್ ಕಿ.ಮೀ ತಲುಪಿದೆ. 2025-26ರಲ್ಲಿ 3,500 ಕಿ.ಮೀ ಸೇರ್ಪಡೆಯ ಗುರಿ ಹೊಂದಲಾಗಿದ್ದು, ಅಕ್ಟೋಬರ್ 2025 ರ ವೇಳೆಗೆ ಶೇ. 99.1 ರಷ್ಟು ವಿದ್ಯುದೀಕರಣ ಸಾಧಿಸಲಾಗಿದೆ.

  4. ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ವಿಮಾನ ನಿಲ್ದಾಣಗಳ ಸಂಖ್ಯೆಯು 2014 ರಲ್ಲಿ 74 ಇದ್ದದ್ದು 2025 ರಲ್ಲಿ 164 ಕ್ಕೆ ಏರಿದೆ.

  5. ವಿದ್ಯುತ್ ವಲಯವು ಸುಸ್ಥಿರ ಸಾಮರ್ಥ್ಯದ ವಿಸ್ತರಣೆಯನ್ನು ದಾಖಲಿಸಿದೆ. ನವೆಂಬರ್ 2025 ರ ವೇಳೆಗೆ ಸ್ಥಾಪಿತ ಸಾಮರ್ಥ್ಯವು ಶೇ. 11.6 ರಷ್ಟು ಬೆಳೆದು 509.74 ಗಿಗಾವ್ಯಾಟ್ ತಲುಪಿದೆ. ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವು 2014ರ ಹಣಕಾಸು ವರ್ಷದಲ್ಲಿದ್ದ ಶೇ. 4.2 ರಿಂದ ನವೆಂಬರ್ 2025 ರ ವೇಳೆಗೆ ಶೂನ್ಯಕ್ಕೆ ಇಳಿದಿದೆ.

  6. ವಿದ್ಯುತ್ ವಲಯದ ಸುಧಾರಣೆಗಳು ಐತಿಹಾಸಿಕ ಬದಲಾವಣೆ ತಂದಿವೆ. ವಿದ್ಯುತ್ ವಿತರಣಾ ಕಂಪನಿಗಳು 2024-25ರಲ್ಲಿ ಮೊದಲ ಬಾರಿಗೆ ₹2,701 ಕೋಟಿ ನಿವ್ವಳ ಲಾಭ (ಪಿಎಟಿ) ದಾಖಲಿಸಿವೆ. ಒಟ್ಟು ತಾಂತ್ರಿಕ ಮತ್ತು ವಾಣಿಜ್ಯ (AT&C) ನಷ್ಟವು ಶೇ. 22.62 ರಿಂದ (2014) ಶೇ. 15.04 ಕ್ಕೆ (2025) ಇಳಿದಿದೆ. ನವೆಂಬರ್ 2025 ರ ಹೊತ್ತಿಗೆ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯದಲ್ಲಿ ನವೀಕರಿಸಬಹುದಾದ ಇಂಧನವು ಸುಮಾರು ಶೇ. 49.83 ರಷ್ಟಿದೆ.

  7. ಟೆಲಿ-ಸಾಂದ್ರತೆಯು ಶೇ. 86.76 ತಲುಪಿದ್ದು, ದೇಶದ ಶೇ. 99.9 ರಷ್ಟು ಜಿಲ್ಲೆಗಳಲ್ಲಿ ಈಗ 5ಜಿ ಸೇವೆಗಳು ಲಭ್ಯವಿವೆ.

  8. ಅಕ್ಟೋಬರ್ 2025 ರ ಹೊತ್ತಿಗೆ, ಜಲ ಜೀವನ್ ಮಿಷನ್ ಅಡಿಯಲ್ಲಿ ಶೇ. 81 ಕ್ಕೂ ಹೆಚ್ಚು ಗ್ರಾಮೀಣ ಮನೆಗಳು ಶುದ್ಧ ನಲ್ಲಿ ನೀರು ಸಂಪರ್ಕವನ್ನು ಹೊಂದಿವೆ.

  9. ಬಾಹ್ಯಾಕಾಶ ಮೂಲಸೌಕರ್ಯವು ಬಲಗೊಂಡಿದ್ದು, ಸ್ವಾಯತ್ತ ಉಪಗ್ರಹ ಡಾಕಿಂಗ್ (SpaDeX) ಸಾಮರ್ಥ್ಯವನ್ನು ಸಾಧಿಸಿದ ವಿಶ್ವದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಇದರೊಂದಿಗೆ ದೇಶೀಯ ಮಿಷನ್‌ ಗಳು ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯು ವಿಸ್ತರಣೆಗೊಂಡಿದೆ.

ಪರಿಸರ ಮತ್ತು ಹವಾಮಾನ ಬದಲಾವಣೆ: ಸ್ಥಿತಿಸ್ಥಾಪಕ, ಸ್ಪರ್ಧಾತ್ಮಕ ಮತ್ತು ಅಭಿವೃದ್ಧಿ ಚಾಲಿತ ಭಾರತದ ನಿರ್ಮಾಣ

  1. 2025-26ರ ಅವಧಿಯಲ್ಲಿ (31 ಡಿಸೆಂಬರ್ 2025 ರವರೆಗೆ), ದೇಶದಲ್ಲಿ ಒಟ್ಟು 38.61 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸ್ಥಾಪಿಸಲಾಗಿದೆ. ಇದರಲ್ಲಿ 30.16 ಗಿಗಾವ್ಯಾಟ್‌ ಸೌರಶಕ್ತಿ, 4.47 ಗಿಗಾವ್ಯಾಟ್‌ ಪವನ ಶಕ್ತಿ, 0.03 ಗಿಗಾವ್ಯಾಟ್‌ ಜೈವಿಕ ಶಕ್ತಿ ಮತ್ತು 3.24 ಗಿಗಾವ್ಯಾಟ್‌ ಜಲವಿದ್ಯುತ್ ಶಕ್ತಿ ಸೇರಿದೆ.

ಶಿಕ್ಷಣ ಮತ್ತು ಆರೋಗ್ಯ: ಪ್ರಸ್ತುತ ಮತ್ತು ಮುಂದಿನ ಹಾದಿ

  1. ಭಾರತವು ಇಂದು ವಿಶ್ವದ ಅತಿದೊಡ್ಡ ಶಾಲಾ ವ್ಯವಸ್ಥೆಗಳಲ್ಲಿ ಒಂದನ್ನು ನಡೆಸುತ್ತಿದೆ. ಇದು 14.71 ಲಕ್ಷ ಶಾಲೆಗಳಾದ್ಯಂತ 24.69 ಕೋಟಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, 1.01 ಕೋಟಿಗೂ ಹೆಚ್ಚು ಶಿಕ್ಷಕರ ಬೆಂಬಲವನ್ನು ಹೊಂದಿದೆ (UDISE+ 2024-25).

  2. ಮೂಲಸೌಕರ್ಯ ಮತ್ತು ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸುವ ಮೂಲಕ ಭಾರತವು ಶಾಲಾ ದಾಖಲಾತಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 'ಪೋಷಣ್ ಶಕ್ತಿ ನಿರ್ಮಾಣ್' ಮತ್ತು 'ಸಮಗ್ರ ಶಿಕ್ಷಾ ಅಭಿಯಾನ'ದಂತಹ ಯೋಜನೆಗಳು ಪ್ರವೇಶ ಮತ್ತು ಸಮಾನತೆಯನ್ನು ಉತ್ತೇಜಿಸುತ್ತಿವೆ. ಒಟ್ಟು ದಾಖಲಾತಿ ಅನುಪಾತ (ಜಿಇಆರ್) ಈ ಕೆಳಗಿನಂತಿದೆ:

    • ಪ್ರಾಥಮಿಕ ಹಂತ (1 ರಿಂದ 5 ನೇ ತರಗತಿ): 90.9

    • ಉನ್ನತ ಪ್ರಾಥಮಿಕ ಹಂತ (6 ರಿಂದ 8 ನೇ ತರಗತಿ): 90.3

    • ಪ್ರೌಢ ಶಿಕ್ಷಣ ಹಂತ (9 ಮತ್ತು 10 ನೇ ತರಗತಿ): 78.7

    • ಪದವಿ ಪೂರ್ವ ಹಂತ (11 ಮತ್ತು 12 ನೇ ತರಗತಿ): 58.4

ಉನ್ನತ ಶಿಕ್ಷಣ

  1. ಉನ್ನತ ಶಿಕ್ಷಣ ಸಂಸ್ಥೆಗಳ (ಎಚ್‌ ಇ ಐ) ಸಂಖ್ಯೆಯು 2014-15 ರಲ್ಲಿ 51,534 ಇದ್ದದ್ದು ಜೂನ್ 2025 ರ ವೇಳೆಗೆ 70,018 ಕ್ಕೆ ಏರಿದೆ, ಇದು ಶಿಕ್ಷಣದ ಲಭ್ಯತೆಯನ್ನು ಗಣನೀಯವಾಗಿ ಸುಧಾರಿಸಿದೆ. ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳ ಸಂಖ್ಯೆಯಲ್ಲಿನ ಭಾರಿ ಬೆಳವಣಿಗೆಯಿಂದ ಈ ಹೆಚ್ಚಳ ಸಾಧ್ಯವಾಗಿದೆ. ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆಯು 2014-15 ಮತ್ತು 2024-25 ರ ನಡುವೆ ಗಮನಾರ್ಹವಾಗಿ ವಿಸ್ತರಿಸಿದೆ. ಭಾರತವು ಈಗ 23 ಐಐಟಿ, 21 ಐಐಎಂ, ಮತ್ತು 20 ಏಮ್ಸ್ ಸಂಸ್ಥೆಗಳನ್ನು ಹೊಂದಿದೆ. ಇದರ ಜೊತೆಗೆ, ಜಂಜಿಬಾರ್ ಮತ್ತು ಅಬುಧಾಬಿಯಲ್ಲಿ ಎರಡು ಅಂತರರಾಷ್ಟ್ರೀಯ ಐಐಟಿ ಕ್ಯಾಂಪಸ್‌ ಗಳನ್ನು ಸ್ಥಾಪಿಸಲಾಗಿದೆ.

  2. ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ ಇ ಪಿ) ಅಡಿಯಲ್ಲಿ, ಉನ್ನತ ಶಿಕ್ಷಣ ವ್ಯವಸ್ಥೆಯು ಹಲವಾರು ಸುಧಾರಣೆಗಳಿಗೆ ಒಳಗಾಗಿದೆ:

ಎ. ರಾಷ್ಟ್ರೀಯ ಕ್ರೆಡಿಟ್ ಫ್ರೇಮ್‌ವರ್ಕ್ (NCrF): ಶೈಕ್ಷಣಿಕ ಮತ್ತು ಕೌಶಲ್ಯಾಧಾರಿತ ಕಲಿಕೆಯನ್ನು ಸಂಯೋಜಿಸುವ ಗುರಿಯನ್ನು ಹೊಂದಿರುವ ಈ ಚೌಕಟ್ಟನ್ನು 170 ವಿಶ್ವವಿದ್ಯಾಲಯಗಳು ಅಳವಡಿಸಿಕೊಂಡಿವೆ.

ಬಿ. ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (ಎಬಿಸಿ): ಇದು 2660 ಸಂಸ್ಥೆಗಳನ್ನು ಒಳಗೊಂಡಿದೆ. 4.6 ಕೋಟಿಗೂ ಹೆಚ್ಚು ಐಡಿಗಳನ್ನು ನೀಡಲಾಗಿದ್ದು, ಇದರಲ್ಲಿ ಕ್ರೆಡಿಟ್‌ ಗಳೊಂದಿಗೆ 2.2 ಕೋಟಿ APAAR (Automated Permanent Academic Account Registry) ಐಡಿಗಳನ್ನೂ ಸೃಷ್ಟಿಸಲಾಗಿದೆ.

ಸಿ.  2035 ರ ವೇಳೆಗೆ ಶೇ. 50 ರಷ್ಟು ಒಟ್ಟು ದಾಖಲಾತಿ ಅನುಪಾತವನ್ನು (ಜಿ ಇ ಆರ್) ಸಾಧಿಸುವ ಎನ್‌ ಇ ಪಿ ಗುರಿಯನ್ನು ತಲುಪಲು, 153 ವಿಶ್ವವಿದ್ಯಾಲಯಗಳು ನಮ್ಯ ಪ್ರವೇಶ-ನಿರ್ಗಮನ ಮಾರ್ಗಗಳನ್ನು ಮತ್ತು ವರ್ಷಕ್ಕೆ ಎರಡು ಬಾರಿ ಪ್ರವೇಶಾತಿ ಪ್ರಕ್ರಿಯೆಯನ್ನು ಪರಿಚಯಿಸಿವೆ.

ಆರೋಗ್ಯ

  1. 1990 ರಿಂದ, ಭಾರತವು ತನ್ನ ತಾಯಂದಿರ ಮರಣ ಪ್ರಮಾಣವನ್ನು (ಎಂಎಂಆರ್) ಶೇ. 86 ರಷ್ಟು ಕಡಿಮೆ ಮಾಡಿದೆ, ಇದು ಶೇ. 48 ರಷ್ಟಿರುವ ಜಾಗತಿಕ ಸರಾಸರಿಗಿಂತ ಬಹಳ ಹೆಚ್ಚಾಗಿದೆ. 1990-2023ರ ಅವಧಿಯಲ್ಲಿ, ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣದಲ್ಲಿ (U5MR) ಶೇ. 78 ರಷ್ಟು ಇಳಿಕೆ ಸಾಧಿಸಲಾಗಿದ್ದು, ಇದು ಶೇ. 61 ರಷ್ಟಿರುವ ಜಾಗತಿಕ ಇಳಿಕೆಗಿಂತ ಉತ್ತಮವಾಗಿದೆ. ಹಾಗೆಯೇ, ನವಜಾತ ಶಿಶು ಮರಣ ಪ್ರಮಾಣವು (ಎನ್‌ ಎಂ ಆರ್) ಜಾಗತಿಕವಾಗಿ ಶೇ. 54 ರಷ್ಟು ಕಡಿಮೆಯಾಗಿದ್ದರೆ, ಭಾರತದಲ್ಲಿ ಶೇ. 70 ರಷ್ಟು ಇಳಿಕೆ ಕಂಡಿದೆ.

  2. ಶಿಶು ಮರಣ ಪ್ರಮಾಣವು (ಐಎಂಆರ್) ಕಳೆದ ದಶಕದಲ್ಲಿ ಶೇ. 37 ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ. 2013 ರಲ್ಲಿ ಪ್ರತಿ ಸಾವಿರ ಜೀವಂತ ಜನನಗಳಿಗೆ 40 ಮರಣಗಳಿದ್ದವು, ಇದು 2023 ರಲ್ಲಿ 25 ಕ್ಕೆ ಇಳಿಕೆಯಾಗಿದೆ.

ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ: ಸೂಕ್ತ ಕೌಶಲ್ಯೀಕರಣ

  1. 2025-26ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟು 56.2 ಕೋಟಿ ಜನರು (15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಉದ್ಯೋಗದಲ್ಲಿದ್ದಾರೆ. ಇದು ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಎರಡನೇ ತ್ರೈಮಾಸಿಕದಲ್ಲಿ ಸುಮಾರು 8.7 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಯನ್ನು ಪ್ರತಿಫಲಿಸುತ್ತದೆ.

  2. ಸಂಘಟಿತ ತಯಾರಿಕಾ ವಲಯವನ್ನು ಒಳಗೊಂಡಿರುವ 'ಕೈಗಾರಿಕೆಗಳ ವಾರ್ಷಿಕ ಸಮೀಕ್ಷೆ' (ಎ ಎಸ್‌ ಐ) 2023-24ರ ಫಲಿತಾಂಶಗಳು ತಯಾರಿಕಾ ವಲಯದ ಸ್ಥಿತಿಸ್ಥಾಪಕತ್ವವನ್ನು ಎತ್ತಿ ತೋರಿಸುತ್ತವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಉದ್ಯೋಗಾವಕಾಶಗಳಲ್ಲಿ ಶೇ. 6 ರಷ್ಟು ವಾರ್ಷಿಕ ಹೆಚ್ಚಳವನ್ನು ತೋರಿಸುತ್ತದೆ. ಅಂದರೆ, 2022-23ಕ್ಕೆ ಹೋಲಿಸಿದರೆ 2023-24ರಲ್ಲಿ 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಸೇರ್ಪಡೆಯಾಗಿವೆ.

  3. ಕಾರ್ಮಿಕ ಸಂಹಿತೆಗಳು ಈಗ ಅಧಿಕೃತವಾಗಿ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಗುರುತಿಸಿವೆ. ಇದು ಅವರಿಗೆ ಸಾಮಾಜಿಕ ಭದ್ರತೆ, ಕಲ್ಯಾಣ ನಿಧಿಗಳು ಮತ್ತು ಸೌಲಭ್ಯಗಳ ವರ್ಗಾವಣೆ ಸೌಲಭ್ಯವನ್ನು ವಿಸ್ತರಿಸಿದೆ.

  4. ಜನವರಿ 2026 ರ ಹೊತ್ತಿಗೆ, ಇ-ಶ್ರಮ್ ಪೋರ್ಟಲ್ 31 ಕೋಟಿಗೂ ಹೆಚ್ಚು ಅಸಂಘಟಿತ ಕಾರ್ಮಿಕರನ್ನು ಯಶಸ್ವಿಯಾಗಿ ನೋಂದಾಯಿಸಿಕೊಂಡಿದೆ. ಒಟ್ಟು ನೋಂದಾಯಿತರಲ್ಲಿ ಶೇ. 54 ಕ್ಕಿಂತ ಹೆಚ್ಚು ಮಹಿಳೆಯರಿದ್ದು, ಇದು ಲಿಂಗ-ಆಧಾರಿತ ಕಲ್ಯಾಣ ಯೋಜನೆಗಳ ತಲುಪುವಿಕೆಯನ್ನು ಗಣನೀಯವಾಗಿ ಬಲಪಡಿಸಿದೆ.

  5. ನ್ಯಾಷನಲ್ ಕೆರಿಯರ್ ಸರ್ವಿಸ್ (ಎನ್‌ ಸಿ ಎಸ್) ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು ಮತ್ತು ತರಬೇತಿ ನೀಡುವವರನ್ನು ಸಂಪರ್ಕಿಸುವ ಏಕಗವಾಕ್ಷಿ ಪರಿಹಾರವಾಗಿದೆ. ಇದು 5.9 ಕೋಟಿಗೂ ಹೆಚ್ಚು ನೋಂದಾಯಿತ ಉದ್ಯೋಗಾಕಾಂಕ್ಷಿಗಳು ಮತ್ತು 53 ಲಕ್ಷ ಉದ್ಯೋಗದಾತರನ್ನು ಹೊಂದಿದ್ದು, ಸುಮಾರು 8 ಕೋಟಿ ಉದ್ಯೋಗಾವಕಾಶಗಳನ್ನು ಒದಗಿಸಿದೆ.

ಕೌಶಲ್ಯ ಪರಿಸರ ವ್ಯವಸ್ಥೆ

  1. ಐಟಿಐ ಗಳ ಮೇಲ್ದರ್ಜೆಗೇರಿಸುವಿಕೆಗಾಗಿನ ರಾಷ್ಟ್ರೀಯ ಯೋಜನೆಯಡಿ 1,000 ಸರ್ಕಾರಿ ಐಟಿಐಗಳನ್ನು ಮೇಲ್ದರ್ಜೆಗೇರಿಸಲು ಪ್ರಸ್ತಾಪಿಸಲಾಗಿದೆ. ಇದರಲ್ಲಿ 200 'ಹಬ್' ಐಟಿಐಗಳು ಮತ್ತು 800 'ಸ್ಪೋಕ್' ಐಟಿಐಗಳು ಸೇರಿವೆ. ಇವುಗಳನ್ನು ಸ್ಮಾರ್ಟ್ ತರಗತಿಗಳು, ಆಧುನಿಕ ಪ್ರಯೋಗಾಲಯಗಳು, ಡಿಜಿಟಲ್ ಪಠ್ಯಕ್ರಮ ಮತ್ತು ಉದ್ಯಮದ ಅಗತ್ಯಕ್ಕೆ ಅನುಗುಣವಾಗಿರುವ ದೀರ್ಘಕಾಲೀನ ಹಾಗೂ ಅಲ್ಪಕಾಲೀನ ಕೋರ್ಸ್‌ ಗಳ ಮೂಲಕ ನವೀಕರಿಸಲಾಗುವುದು.

ಗ್ರಾಮೀಣಾಭಿವೃದ್ಧಿ ಮತ್ತು ಸಾಮಾಜಿಕ ಪ್ರಗತಿ: ಭಾಗವಹಿಸುವಿಕೆಯಿಂದ ಪಾಲುದಾರಿಕೆಯವರೆಗೆ

  1. ವಿಶ್ವಬ್ಯಾಂಕ್ ಬಡತನ ರೇಖೆಯನ್ನು ದಿನಕ್ಕೆ 2.15 ಯುಎಸ್ ಡಾಲರ್‌ನಿಂದ 3.00 ಯುಎಸ್ ಡಾಲರ್‌ ಗೆ ಏರಿಸಿದೆ (2021ರ ಬೆಲೆಗಳ ಖರೀದಿ ಸಾಮರ್ಥ್ಯಕ್ಕೆ ಅನುಗುಣವಾಗಿ). ಈ ಪರಿಷ್ಕೃತ ಅಂತರರಾಷ್ಟ್ರೀಯ ಬಡತನ ರೇಖೆಯ (ಐಪಿಎಲ್) ಪ್ರಕಾರ, 2022-23ರಲ್ಲಿ ಭಾರತದ ಬಡತನ ದರವು ತೀವ್ರ ಬಡತನಕ್ಕೆ ಶೇ. 5.3 ರಷ್ಟು ಮತ್ತು ಕೆಳ-ಮಧ್ಯಮ ಆದಾಯದ ಬಡತನಕ್ಕೆ ಶೇ. 23.9 ರಷ್ಟಿತ್ತು.

  2. ಸರ್ಕಾರದ ಸಾಮಾಜಿಕ ಸೇವೆಗಳ ವೆಚ್ಚವು (ಎಸ್‌ ಎಸ್‌ ಇ) 2021-22ರ ಹಣಕಾಸು ವರ್ಷದಿಂದ ಏರಿಕೆ ಪ್ರವೃತ್ತಿಯನ್ನು ತೋರಿಸುತ್ತಿದೆ.

  3. ಸಾಮಾಜಿಕ ಸೇವೆಗಳ ವೆಚ್ಚವು (ಎಸ್‌ ಎಸ್‌ ಇ) 2023-24ರಲ್ಲಿ ಜಿಡಿಪಿಯ ಶೇ. 7 ರಷ್ಟಿತ್ತು ಮತ್ತು 2024-25ರಲ್ಲಿ (ಪರಿಷ್ಕೃತ ಅಂದಾಜು) ಶೇ. 7.7 ರಷ್ಟಿತ್ತು. ಇದು 2025-26ರ ಬಜೆಟ್ ಅಂದಾಜಿನಲ್ಲಿ (ಬಿಇ) ಶೇ. 7.9 ಕ್ಕೆ ಏರಿದೆ.

ಗ್ರಾಮೀಣ ಆರ್ಥಿಕತೆಯ ಆರೋಗ್ಯ

  1. ಡಿಸೆಂಬರ್ 2025 ರ ಹೊತ್ತಿಗೆ, ಸ್ವಾಮಿತ್ವ ಯೋಜನೆಯಡಿ ಡ್ರೋನ್ ಸಮೀಕ್ಷೆಗಾಗಿ ಅಧಿಸೂಚನೆ ಹೊರಡಿಸಲಾದ 3.44 ಲಕ್ಷ ಗ್ರಾಮಗಳ ಪೈಕಿ 3.28 ಲಕ್ಷ ಗ್ರಾಮಗಳಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಸುಮಾರು 1.82 ಲಕ್ಷ ಗ್ರಾಮಗಳಿಗೆ 2.76 ಕೋಟಿ ಆಸ್ತಿ ಕಾರ್ಡ್‌ ಗಳನ್ನು ಸಿದ್ಧಪಡಿಸಲಾಗಿದೆ. ಪ್ರಮುಖ ರಸಗೊಬ್ಬರ ಕಂಪನಿಗಳು ತಮ್ಮ ಸ್ವಂತ ಸಂಪನ್ಮೂಲಗಳನ್ನು ಬಳಸಿ 2023-24ರಲ್ಲಿ 'ಸ್ವಸಹಾಯ ಗುಂಪು'ಗಳ ಡ್ರೋನ್ ದೀದಿಗಳಿಗೆ 1,094 ಡ್ರೋನ್‌ ಗಳನ್ನು ವಿತರಿಸಿವೆ. ಈ ಪೈಕಿ 500 ಡ್ರೋನ್‌ ಗಳನ್ನು 'ನಮೋ ಡ್ರೋನ್ ದೀದಿ' ಯೋಜನೆಯಡಿ ಒದಗಿಸಲಾಗಿದೆ.

ಭಾರತದಲ್ಲಿ ಎಐ ಪರಿಸರ ವ್ಯವಸ್ಥೆಯ ವಿಕಾಸ: ಮುಂದಿನ ಹಾದಿ

ವಿವಿಧ ವಲಯಗಳಲ್ಲಿ ಅಳವಡಿಸಲಾದ ಸಣ್ಣ ಮತ್ತು ನಿರ್ದಿಷ್ಟ ಕೆಲಸಗಳಿಗಾಗಿ ರೂಪಿಸಲಾದ ಮಾದರಿಗಳು ನಾವೀನ್ಯತೆಯು ಎಲ್ಲಾ ಕಡೆ ಸಮಾನವಾಗಿ ಹರಡಲು ಸಹಾಯ ಮಾಡುತ್ತವೆ. ಇವು ಕಂಪನಿಗಳಿಗೆ ಈ ಕ್ಷೇತ್ರದಲ್ಲಿ ಪ್ರವೇಶಿಸಲು ಇರುವ ಅಡೆತಡೆಗಳನ್ನು ಕಡಿಮೆ ಮಾಡುತ್ತವೆ ಮತ್ತು ಭಾರತದ ವೈವಿಧ್ಯಮಯ ಆರ್ಥಿಕ ಪರಿಸರಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತವೆ. ಭಾರತದಲ್ಲಿ ಎಐ ನ ಬೇಡಿಕೆಯು ಕೇವಲ ಕಾಲ್ಪನಿಕ ಬಳಕೆಗಳಿಗಿಂತ ಹೆಚ್ಚಾಗಿ, ವಾಸ್ತವ ಪ್ರಪಂಚದ ಸಮಸ್ಯೆಗಳಿಂದ ಉದ್ಭವಿಸುತ್ತಿದೆ. ಆರೋಗ್ಯ, ಕೃಷಿ, ನಗರ ನಿರ್ವಹಣೆ, ಶಿಕ್ಷಣ, ವಿಪತ್ತು ಸಿದ್ಧತೆ ಮತ್ತು ಸಾರ್ವಜನಿಕ ಆಡಳಿತದಾದ್ಯಂತ ಸ್ಥಳೀಯ ಹಾರ್ಡ್‌ವೇರ್‌ ಗಳಲ್ಲಿ ಕಾರ್ಯನಿರ್ವಹಿಸುವ ಮತ್ತು ಕಡಿಮೆ ಸಂಪನ್ಮೂಲಗಳಿರುವ ಸನ್ನಿವೇಶಗಳಲ್ಲಿ ಕೆಲಸ ಮಾಡುವ ಎಐ ವ್ಯವಸ್ಥೆಗಳಿಗಾಗಿ ಹೆಚ್ಚಿನ ಆಸಕ್ತಿ ಕಂಡುಬರುತ್ತಿದೆ.

ನಗರೀಕರಣ: ಭಾರತದ ನಗರಗಳು ನಾಗರಿಕರಿಗಾಗಿ ಕೆಲಸ ಮಾಡುವಂತೆ ಮಾಡುವುದು

'ನಮೋ ಭಾರತ್' ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯು, ಅತಿ ವೇಗದ ಪ್ರಾದೇಶಿಕ ಸಂಪರ್ಕವು ನಗರ ಮತ್ತು ನಗರದ ಸುತ್ತಮುತ್ತಲಿನ ಕಾರ್ಮಿಕ ಮಾರುಕಟ್ಟೆಗಳನ್ನು ಹೇಗೆ ಮರುರೂಪಿಸಬಹುದು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ನಗರಗಳು ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುವ ಮೂಲಕ, ಇಂತಹ ವ್ಯವಸ್ಥೆಗಳು ಉದ್ಯೋಗಗಳ ಲಭ್ಯತೆಯನ್ನು ವಿಸ್ತರಿಸುತ್ತವೆ, ಬಹುಕೇಂದ್ರಿತ ಬೆಳವಣಿಗೆಯನ್ನು ಬೆಂಬಲಿಸುತ್ತವೆ ಮತ್ತು ಮೆಟ್ರೋಪಾಲಿಟನ್ ನಗರಗಳ ಕೇಂದ್ರ ಭಾಗಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತವೆ.

ಆಮದು ಪರ್ಯಾಯದಿಂದ ಕಾರ್ಯಂತ್ರದ ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯಂತ್ರದ ಅನಿವಾರ್ಯತೆಯವರೆಗೆ

  1.  ‘ಸ್ವದೇಶಿ’ ಎಂಬುದು ಒಂದು ಶಿಸ್ತುಬದ್ಧ ಕಾರ್ಯತಂತ್ರವಾಗಿರಬೇಕು; ಏಕೆಂದರೆ ಎಲ್ಲಾ ಆಮದು ಪರ್ಯಾಯಗಳು ಕಾರ್ಯಸಾಧ್ಯವೂ ಅಲ್ಲ ಅಥವಾ ಅಪೇಕ್ಷಣೀಯವೂ ಅಲ್ಲ. ದೇಶೀಕರಣಕ್ಕೆ ಒಂದು ಶಿಸ್ತುಬದ್ಧವಾದ ಮೂರು-ಹಂತದ ಚೌಕಟ್ಟನ್ನು ಪ್ರಸ್ತುತಪಡಿಸಲಾಗಿದ್ದು, ಅದು ಈ ಅಂಶಗಳನ್ನು ಪ್ರತ್ಯೇಕಿಸುತ್ತದೆ: ಹೆಚ್ಚಿನ ಆಯಕಟ್ಟಿನ ತುರ್ತು ಹೊಂದಿರುವ ನಿರ್ಣಾಯಕ ದುರ್ಬಲತೆಗಳು, ಆಯಕಟ್ಟಿನ ಲಾಭಗಳನ್ನು ನೀಡಬಲ್ಲ ಆರ್ಥಿಕವಾಗಿ ಕಾರ್ಯಸಾಧ್ಯವಾದ ಸಾಮರ್ಥ್ಯಗಳು, ಮತ್ತು ಕಡಿಮೆ ಆಯಕಟ್ಟಿನ ತುರ್ತು ಅಥವಾ ಹೆಚ್ಚಿನ ವೆಚ್ಚದ ಪರ್ಯಾಯಗಳು.

  2. ಕೈಗೆಟುಕುವ ಮತ್ತು ವಿಶ್ವಾಸಾರ್ಹ ಇನ್‌ಪುಟ್‌ ಗಳನ್ನು (ಕಚ್ಚಾ ವಸ್ತು/ಸಂಪನ್ಮೂಲ) ಗುರುತಿಸುವ ಹಾಗೂ ‘ಸ್ಪರ್ಧಾತ್ಮಕತೆಯನ್ನು ಮೂಲಸೌಕರ್ಯ’ ಎಂದು ಪರಿಗಣಿಸುವ ‘ರಾಷ್ಟ್ರೀಯ ಇನ್‌ಪುಟ್ ವೆಚ್ಚ ಕಡಿತ ಕಾರ್ಯತಂತ್ರ’.

  3. ‘ಸ್ವದೇಶಿ’ಯಿಂದ ‘ಕಾರ್ಯತಂತ್ರದ ಸ್ಥಿತಿಸ್ಥಾಪಕತ್ವ’ ಮತ್ತು ಅಲ್ಲಿಂದ ‘ಕಾರ್ಯತಂತ್ರದ ಅನಿವಾರ್ಯತೆ’ಯ ಕಡೆಗಿನ ಬೆಳವಣಿಗೆ. ಇದರಲ್ಲಿ ಬುದ್ಧಿವಂತಿಕೆಯಿಂದ ಕೂಡಿದ ಆಮದು ಪರ್ಯಾಯವು ರಾಷ್ಟ್ರೀಯ ಶಕ್ತಿಯಲ್ಲಿ ಹೂಡಿಕೆ ಮಾಡುತ್ತದೆ ಮತ್ತು ಅಂತಿಮವಾಗಿ ಭಾರತವನ್ನು ಜಾಗತಿಕ ವ್ಯವಸ್ಥೆಗಳಲ್ಲಿ ಎಷ್ಟು ಆಳವಾಗಿ ಬೆರೆಸುತ್ತದೆ ಎಂದರೆ, ಇಡೀ ಜಗತ್ತು “ಭಾರತೀಯ ವಸ್ತುಗಳನ್ನು ಕೊಳ್ಳುವ ಬಗ್ಗೆ ಯೋಚಿಸುವ” ಹಂತದಿಂದ “ಯೋಚಿಸದೆಯೇ ಭಾರತೀಯ ವಸ್ತುಗಳನ್ನು ಕೊಳ್ಳುವ” ಹಂತಕ್ಕೆ ಮುನ್ನಡೆಯುತ್ತದೆ.


(रिलीज़ आईडी: 2220113) आगंतुक पटल : 20
इस विज्ञप्ति को इन भाषाओं में पढ़ें: Malayalam , English , हिन्दी , Gujarati