ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವ ದೆಹಲಿಯಲ್ಲಿ ಭಾರತ-ಯುರೋಪ್ ಒಕ್ಕೂಟದ ವ್ಯವಹಾರ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು


ಭಾರತ-ಯುರೋಪ್ ಒಕ್ಕೂಟ ಸಂಬಂಧಗಳು ಹೊಂದಾಣಿಕೆಯ ಹೊಸ ಯುಗವನ್ನು ಪ್ರವೇಶಿಸುತ್ತಿವೆ: ಪ್ರಧಾನಮಂತ್ರಿ

ಐತಿಹಾಸಿಕ ಭಾರತ-ಯುರೋಪ್ ಒಕ್ಕೂಟ ಮುಕ್ತ ವ್ಯಾಪಾರವು ಕಾರ್ಮಿಕ-ಕೇಂದ್ರಿತ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶವನ್ನು ತೆರೆಯುತ್ತದೆ: ಪ್ರಧಾನಮಂತ್ರಿ

ಭಾರತ-ಯುರೋಪ್ ಒಕ್ಕೂಟ ಸಂಬಂಧಗಳನ್ನು ಹೆಚ್ಚಿಸಲು ಇಡೀ ಸಮಾಜದ ಸಹಭಾಗಿತ್ವಕ್ಕೆ ಪ್ರಧಾನಮಂತ್ರಿ ಕರೆ

ಭಾರತ-ಯುರೋಪ್ ಒಕ್ಕೂಟ ಜಾಗತಿಕ ಬೆಳವಣಿಗೆಯ ಡಬಲ್ ಎಂಜಿನ್ ಆಗಬೇಕು: ಪ್ರಧಾನಮಂತ್ರಿ

प्रविष्टि तिथि: 27 JAN 2026 9:21PM by PIB Bengaluru

ನವ ದೆಹಲಿಯ ಭಾರತ್ ಮಂಟಪದಲ್ಲಿ ಇಂದು ಭಾರತ-ಯುರೋಪಿಯನ್ ಯೂನಿಯನ್ ವ್ಯಾಪಾರ ವೇದಿಕೆಯನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ, ಭಾರತ-ಯುರೋಪಿಯನ್ ಯೂನಿಯನ್ (ಇಯು) ವ್ಯಾಪಾರ ವೇದಿಕೆಯಲ್ಲಿ ಭಾಗವಹಿಸಿದ್ದಕ್ಕೆ ಸಂತೋಷ ವ್ಯಕ್ತಪಡಿಸಿದರು. ಯುರೋಪಿಯನ್ ಯೂನಿಯನ್ ಕೌನ್ಸಿಲ್ ಮತ್ತು ಆಯೋಗದ ಅಧ್ಯಕ್ಷರ ಭಾರತ ಭೇಟಿ ಸಾಮಾನ್ಯ ರಾಜತಾಂತ್ರಿಕ ಪ್ರವಾಸವಲ್ಲ, ಅದು ಭಾರತ-ಯುರೋಪಿಯನ್ ಯೂನಿಯನ್ ಸಂಬಂಧಗಳಲ್ಲಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ ಎಂದು ಹೇಳಿದರು. ಭಾರತದ ಗಣರಾಜ್ಯೋತ್ಸವದಲ್ಲಿ ಇದೇ ಮೊದಲ ಬಾರಿಗೆ ಯುರೋಪಿಯನ್ ಯೂನಿಯನ್ ನಾಯಕರು ಮುಖ್ಯ ಅತಿಥಿಗಳಾಗಿ ಸೇರಿಕೊಂಡರು, ಭಾರತ ಮತ್ತು ಯುರೋಪಿಯನ್ ಯೂನಿಯನ್ ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸಿದವು ಮತ್ತು ಇಂದು, ಹಲವಾರು ಸಿಇಒಗಳ ಉಪಸ್ಥಿತಿಯೊಂದಿಗೆ, ಭಾರತ-ಯುರೋಪಿಯನ್ ಯೂನಿಯನ್ ವ್ಯಾಪಾರ ವೇದಿಕೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲಾಗುತ್ತಿದೆ ಎಂದೂ ಶ್ರೀ ಮೋದಿ ಎತ್ತಿ ತೋರಿಸಿದರು. ಈ ಸಾಧನೆಗಳು ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ಶಕ್ತಿಗಳ ನಡುವಿನ ಅಭೂತಪೂರ್ವ ಹೊಂದಾಣಿಕೆಯನ್ನು ಸಂಕೇತಿಸುತ್ತವೆ ಎಂದೂ ಅವರು ಹೇಳಿದರು.

ಹೊಂದಾಣಿಕೆ ಆಕಸ್ಮಿಕವಾಗಿ ಸಂಭವಿಸಿದ್ದಲ್ಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು; ಮಾರುಕಟ್ಟೆ ಆರ್ಥಿಕತೆಗಳು, ಭಾರತ ಮತ್ತು ಯುರೋಪಿಯನ್ ಒಕ್ಕೂಟಗಳು ಸಾಮಾನ್ಯ ಮೌಲ್ಯಗಳು, ಜಾಗತಿಕ ಸ್ಥಿರತೆಗಾಗಿ ಜಂಟಿ ಆದ್ಯತೆಗಳು ಮತ್ತು ಮುಕ್ತ ಸಮಾಜಗಳಾಗಿ ತಮ್ಮ ಜನರ ನಡುವಿನ ನೈಸರ್ಗಿಕ ಸಂಪರ್ಕಗಳನ್ನು ಹಂಚಿಕೊಳ್ಳುತ್ತವೆ. ಈ ಬಲವಾದ ಅಡಿಪಾಯದ ಮೇಲೆ, ಪಾಲುದಾರಿಕೆ ಹೊಸ ಎತ್ತರವನ್ನು ತಲುಪುತ್ತಿದೆ ಮತ್ತು ವಿಶ್ವದ ಅತ್ಯಂತ ಪ್ರಭಾವಶಾಲಿ ಪಾಲುದಾರಿಕೆಗಳಲ್ಲಿ ಒಂದಾಗಿ ಸ್ಥಾಪನೆಯಾಗುತ್ತಿದೆ, ಸ್ಪಷ್ಟ ಫಲಿತಾಂಶಗಳು ಗೋಚರಿಸುತ್ತಿವೆ ಎಂದು ಅವರು ಒತ್ತಿ ಹೇಳಿದರು. ಕಳೆದ ಹತ್ತು ವರ್ಷಗಳಲ್ಲಿ, ವ್ಯಾಪಾರವು 180 ಬಿಲಿಯನ್ ಯುರೋಗಳಿಗೆ ದ್ವಿಗುಣಗೊಂಡಿದೆ, 6,000ಕ್ಕೂ ಹೆಚ್ಚು ಯುರೋಪಿಯನ್ ಕಂಪನಿಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಭಾರತದಲ್ಲಿ ಯುರೋಪಿಯನ್ ಯೂನಿಯನ್ ನಿಂದ ಹೂಡಿಕೆಗಳು 120 ಬಿಲಿಯನ್ ಯುರೋಗಳನ್ನು ಮೀರಿದೆ ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು. ಯುರೋಪಿಯನ್ ಯೂನಿಯನ್ ನಲ್ಲಿ 1,500 ಭಾರತೀಯ ಕಂಪನಿಗಳು ಇವೆ, ಅಲ್ಲಿ ಭಾರತೀಯ ಹೂಡಿಕೆಗಳು ಸುಮಾರು 40 ಬಿಲಿಯನ್ ಯುರೋಗಳನ್ನು ತಲುಪಿವೆ ಎಂದು ಅವರು ಹೇಳಿದರು. ಇಂದು, ಭಾರತ ಮತ್ತು ಯುರೋಪಿಯನ್ ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪಾದನೆ ಮತ್ತು ಸೇವೆಗಳಲ್ಲಿ ಆಳವಾಗಿ ಸಹಕರಿಸುತ್ತಿವೆ ಮತ್ತು ವ್ಯಾಪಾರ ಮುಖಂಡರು ಸಹಕಾರದ ಚಾಲಕರು ಮತ್ತು ಫಲಾನುಭವಿಗಳು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಪಾಲುದಾರಿಕೆಯನ್ನು 'ಇಡೀ ಸಮಾಜದ ಪಾಲುದಾರಿಕೆ'ಯನ್ನಾಗಿ ಮಾಡುವ ಸಮಯ ಇದೀಗ ಬಂದಿದೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. ಈ ದೃಷ್ಟಿಕೋನದೊಂದಿಗೆ, ಸಮಗ್ರ ಎಫ್‌ಟಿಎ ಇಂದು ಪೂರ್ಣಗೊಂಡಿದೆ, ಇದು ಭಾರತದ ಕಾರ್ಮಿಕ-ಕೇಂದ್ರಿತ ಉತ್ಪನ್ನಗಳಿಗೆ ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು. ಜವಳಿ, ರತ್ನಗಳು ಮತ್ತು ಆಭರಣಗಳು, ಆಟೋ ಬಿಡಿಭಾಗಗಳು ಮತ್ತು ಎಂಜಿನಿಯರಿಂಗ್ ಸರಕುಗಳು ಪ್ರಯೋಜನ ಪಡೆಯುತ್ತವೆ, ಹಣ್ಣುಗಳು, ತರಕಾರಿಗಳು, ಸಂಸ್ಕರಿಸಿದ ಆಹಾರ ಮತ್ತು ಸಮುದ್ರ ಉತ್ಪನ್ನಗಳು ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಇದು ರೈತರು, ಮೀನುಗಾರರು ಮತ್ತು ಸೇವಾ ವಲಯಕ್ಕೆ, ವಿಶೇಷವಾಗಿ ಐಟಿ, ಶಿಕ್ಷಣ, ಸಾಂಪ್ರದಾಯಿಕ ಔಷಧ ಮತ್ತು ವ್ಯಾಪಾರ ಸೇವೆಗಳಿಗೆ ನೇರ ಪ್ರಯೋಜನವನ್ನು ನೀಡುತ್ತದೆ ಎಂದೂ ಅವರು ಒತ್ತಿ ಹೇಳಿದರು.

ಜಾಗತಿಕ ವ್ಯವಹಾರವು ದೊಡ್ಡ ಏರಿಳಿತಕ್ಕೆ ಒಳಗಾಗುತ್ತಿದೆ, ಕಂಪನಿಗಳು ತಮ್ಮ ಮಾರುಕಟ್ಟೆ ತಂತ್ರಗಳು ಮತ್ತು ಪಾಲುದಾರಿಕೆಗಳನ್ನು ಪುನರ್ವಿಮರ್ಶಿಸುತ್ತಿವೆ ಎಂಬುದನ್ನೂ ಪ್ರಧಾನಮಂತ್ರಿ ಗಮನಿಸಿದರು. ಅಂತಹ ಸಮಯದಲ್ಲಿ, ಈ ಎಫ್.ಟಿ.ಎ. ವ್ಯಾಪಾರ ಜಗತ್ತಿಗೆ ಸ್ಪಷ್ಟ ಮತ್ತು ಸಕಾರಾತ್ಮಕ ಸಂದೇಶವನ್ನು ರವಾನಿಸುತ್ತದೆ ಮತ್ತು ಎರಡೂ ಕಡೆಯ ವ್ಯಾಪಾರ ಸಮುದಾಯಗಳಿಗೆ ಸಮರ್ಥ, ವಿಶ್ವಾಸಾರ್ಹ ಮತ್ತು ಭವಿಷ್ಯ-ಆಧಾರಿತ ಪಾಲುದಾರಿಕೆಗಳನ್ನು ನಿರ್ಮಿಸಲು ಆಹ್ವಾನವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಈ ಎಫ್.ಟಿ.ಎ. ಯಿಂದ ಉಂಟಾಗುವ ಅವಕಾಶಗಳನ್ನು ವ್ಯಾಪಾರ ಮುಖಂಡರು ಸಂಪೂರ್ಣವಾಗಿ ಬಳಸಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಶ್ರೀ ಮೋದಿ ವ್ಯಕ್ತಪಡಿಸಿದರು.

ಭಾರತ ಮತ್ತು ಯುರೋಪಿಯನ್ ಒಕ್ಕೂಟವು ವ್ಯಾಪಾರ ಪಾಲುದಾರಿಕೆಗೆ ಪ್ರಯೋಜನಕಾರಿಯಾದ ಹಲವಾರು ಆದ್ಯತೆಗಳನ್ನು ಹಂಚಿಕೊಂಡಿವೆ ಎಂದು ಶ್ರೀ ಮೋದಿ ಹೇಳಿದರು. ಅವರು ಮೂರು ಪ್ರಮುಖ ಆದ್ಯತೆಗಳನ್ನು ವಿವರಿಸಿದರು: ಮೊದಲನೆಯದಾಗಿ, ವ್ಯಾಪಾರ, ತಂತ್ರಜ್ಞಾನ ಮತ್ತು ನಿರ್ಣಾಯಕ ಖನಿಜಗಳನ್ನು ಶಸ್ತ್ರಗಳಂತೆ ಉಪಯೋಗಿಸಲ್ಪಡುತ್ತಿರುವ ಜಗತ್ತಿನಲ್ಲಿ, ಜಂಟಿಯಾಗಿ ಅಪಾಯದ ಅವಲಂಬನೆಗಳನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ. ವ್ಯಾಪಾರ ಸಮುದಾಯವು ಇ.ವಿ. ಗಳು, ಬ್ಯಾಟರಿಗಳು, ಚಿಪ್‌ಗಳು ಮತ್ತು ಎ.ಪಿ.ಐ. ಗಳಲ್ಲಿ ಬಾಹ್ಯ ಅವಲಂಬನೆಯನ್ನು ಕಡಿಮೆ ಮಾಡಬಹುದೇ ಮತ್ತು ವಿಶ್ವಾಸಾರ್ಹ ಪೂರೈಕೆ ಸರಪಳಿಗಳಿಗಾಗಿ ಹಂಚಿಕೆಯ ಆಯ್ಕೆಯನ್ನು ನಿರ್ಮಿಸಬಹುದೇ ಎಂದು ಅವರು ಕೇಳಿದರು. ಎರಡನೆಯದಾಗಿ, ಭಾರತ ಮತ್ತು ಇ.ಯು. ಎರಡೂ ರಕ್ಷಣಾ ಕೈಗಾರಿಕೆಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ, ರಕ್ಷಣೆ, ಬಾಹ್ಯಾಕಾಶ, ದೂರಸಂಪರ್ಕ ಮತ್ತು ಎ.ಐ. ಯಲ್ಲಿ ಹೆಚ್ಚಿನ ಸಹಯೋಗವನ್ನು ಬಯಸುತ್ತವೆ ಎಂಬುದನ್ನು ಅವರು ಗಮನಿಸಿದರು. ಮೂರನೆಯದಾಗಿ, ಸ್ವಚ್ಛ ಮತ್ತು ಸುಸ್ಥಿರ ಭವಿಷ್ಯವು ಎರಡೂ ಕಡೆಯವರಿಗೆ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದರು, ಹಸಿರು ಹೈಡ್ರೋಜನ್, ಸೌರಶಕ್ತಿ ಮತ್ತು ಸ್ಮಾರ್ಟ್ ಗ್ರಿಡ್‌ಗಳಲ್ಲಿ ಜಂಟಿ ಸಂಶೋಧನೆ ಮತ್ತು ಹೂಡಿಕೆಗೆ ಕರೆ ನೀಡಿದರು. ಕೈಗಾರಿಕೆಗಳು ಸಣ್ಣ ಮಾಡ್ಯುಲರ್ ರಿಯಾಕ್ಟರ್‌ಗಳು ಮತ್ತು ಸುಸ್ಥಿರ ಚಲನಶೀಲತೆಯ ಮೇಲೆ ಒಟ್ಟಾಗಿ ಕೆಲಸ ಮಾಡಬೇಕು, ಅದೇ ಸಮಯದಲ್ಲಿ ನೀರಿನ ನಿರ್ವಹಣೆ, ವೃತ್ತಾಕಾರದ ಆರ್ಥಿಕತೆ ಮತ್ತು ಸುಸ್ಥಿರ ಕೃಷಿಯಲ್ಲಿ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕು ಎಂದೂ ಶ್ರೀ ಮೋದಿ ಹೇಳಿದರು.

ಇಂದಿನ ಐತಿಹಾಸಿಕ ನಿರ್ಧಾರಗಳ ನಂತರ, ಈಗ ವ್ಯಾಪಾರ ಸಮುದಾಯದ ಮೇಲೆ ವಿಶೇಷ ಜವಾಬ್ದಾರಿ ಇದೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ಮುಂದಿನ ಹೆಜ್ಜೆಯನ್ನು ವ್ಯಾಪಾರ ಸಮುದಾಯವೇ ತೆಗೆದುಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು, "ಚೆಂಡು ನಿಮ್ಮ ಅಂಗಳದಲ್ಲಿದೆ" ಎಂದು ಹೇಳಿದರು. ಪರಸ್ಪರ ಸಹಕಾರದ ಮೂಲಕ ಮಾತ್ರ ಪಾಲುದಾರಿಕೆ ವಿಶ್ವಾಸ, ತಲುಪುವಿಕೆ ಮತ್ತು ಪ್ರಮಾಣವನ್ನು ಗಳಿಸುತ್ತದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಸಾಮೂಹಿಕ ಪ್ರಯತ್ನಗಳಿಂದ ಹಂಚಿಕೆಯ ಸಮೃದ್ಧಿಯನ್ನು ಸಾಧಿಸಬಹುದು ಎಂದು ಅವರು ಒತ್ತಿ ಹೇಳಿದರು. ಪ್ರತಿಯೊಬ್ಬರೂ ತಮ್ಮ ತಮ್ಮ ಸಾಮರ್ಥ್ಯಗಳನ್ನು ಸಂಯೋಜಿಸಿ ಇಡೀ ಪ್ರಪಂಚದ ಬೆಳವಣಿಗೆಯ ಡಬಲ್ ಎಂಜಿನ್ ಆಗಬೇಕೆಂದು ಒತ್ತಾಯಿಸುವ ಮೂಲಕ ಪ್ರಧಾನಮಂತ್ರಿ ಮಾತು ಮುಗಿಸಿದರು.

ಯುರೋಪಿಯನ್ ಆಯೋಗದ ಅಧ್ಯಕ್ಷರಾದ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್, ಭಾರತೀಯ ಮತ್ತು ಯುರೋಪಿಯನ್ ವ್ಯಾಪಾರ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

*****


(रिलीज़ आईडी: 2219456) आगंतुक पटल : 8
इस विज्ञप्ति को इन भाषाओं में पढ़ें: English , Urdu , Marathi , Bengali , Assamese , Gujarati , Odia , Telugu , Malayalam