ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸಾಂಸ್ಥಿಕ ವಿಭಾಗದಲ್ಲಿ ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಮತ್ತು ವೈಯಕ್ತಿಕ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಸೀತಾ ಅಶೋಕ್ ಶೆಲ್ಕೆ ಅವರು ʻಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ-2026ʼಕ್ಕೆ ಆಯ್ಕೆಯಾಗಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಹಾಗೂ ಗೌರವಿಸಲು ʻಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರʼವನ್ನು ಸ್ಥಾಪಿಸಿದೆ

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ದೇಶವು ವಿಪತ್ತು ನಿರ್ವಹಣಾ ಅಭ್ಯಾಸಗಳಲ್ಲಿ ಗಮನಾರ್ಹ ಸುಧಾರಣೆಗೆ ಸಾಕ್ಷಿಯಾಗಿದೆ. ಸನ್ನದ್ಧತೆ, ಅಪಾಯ ತಗ್ಗಿಸುವಿಕೆ ಮತ್ತು ಪ್ರತಿಕ್ರಿಯೆ ಕಾರ್ಯವಿಧಾನಗಳು ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಾವುನೋವುಗಳ ಸಂಖ್ಯೆಯನ್ನು ಗಮನಾರ್ಹವಾಗಿ ತಗ್ಗಿಸಲು ನೆರವಾಗುತ್ತಿವೆ

प्रविष्टि तिथि: 23 JAN 2026 9:07AM by PIB Bengaluru

ಸಾಂಸ್ಥಿಕ ವಿಭಾಗದಲ್ಲಿ ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಎಸ್‌ಡಿಎಂಎ), ಮತ್ತು ವೈಯಕ್ತಿಕ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಸೀತಾ ಅಶೋಕ್ ಶೆಲ್ಕೆ ಅವರು ವಿಪತ್ತು ನಿರ್ವಹಣೆಯಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ʻಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ-2026ʼಕ್ಕೆ ಆಯ್ಕೆಯಾಗಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಸರ್ಕಾರವು ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ಭಾರತದಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಹಾಗೂ ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ ಎಂಬ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23ರಂದು ಪ್ರತಿ ವರ್ಷ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ದೇಶವು ತನ್ನ ವಿಪತ್ತು ನಿರ್ವಹಣಾ ಅಭ್ಯಾಸಗಳು, ಸನ್ನದ್ಧತೆ, ಅಪಾಯ ತಗ್ಗಿಸುವಿಕೆ ಮತ್ತು ಪ್ರತಿಕ್ರಿಯೆ ಕಾರ್ಯವಿಧಾನಗಳಲ್ಲಿ ಗಮನಾರ್ಹ ಸುಧಾರಣೆಗೆ ಸಾಕ್ಷಿಯಾಗಿದೆ. ಇದರ ಪರಿಣಾಮವಾಗಿ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಸಾವುಗಳು ಗಮನಾರ್ಹವಾಗಿ ಕಡಿಮೆಯಾಗಿವೆ.

2026ನೇ ಸಾಲಿನ ಪ್ರಶಸ್ತಿಗಾಗಿ, 2025ರ ಮೇ 1ರಿಂದ ನಾಮನಿರ್ದೇಶನಗಳನ್ನು ಆಹ್ವಾನಿಸಲಾಗಿತ್ತು. 2026ನೇ ಸಾಲಿನ ಪ್ರಶಸ್ತಿಗಳಿಗೆ ಮುದ್ರಣ, ವಿದ್ಯುನ್ಮಾನ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕ ಪ್ರಚಾರ ನೀಡಲಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಸಂಸ್ಥೆಗಳು ಮತ್ತು ವ್ಯಕ್ತಿಗಳಿಂದ 271 ನಾಮನಿರ್ದೇಶನಗಳನ್ನು ಸ್ವೀಕರಿಸಲಾಗಿದೆ.

ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ 2026ರ ಪ್ರಶಸ್ತಿ ವಿಜೇತರ ಅತ್ಯುತ್ತಮ ಕಾರ್ಯದ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ:

ಲೆಫ್ಟಿನೆಂಟ್ ಕರ್ನಲ್ ಸೀತಾ ಅಶೋಕ್ ಶೆಲ್ಕೆ - ವೈಯಕ್ತಿಕ ವರ್ಗ

ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಸೀತಾ ಅಶೋಕ್ ಶೆಲ್ಕೆ ಅವರು 2024ರಲ್ಲಿ ಕೇರಳದ ವಯನಾಡಿನಲ್ಲಿ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದ ಸಮಯದಲ್ಲಿ ದೊಡ್ಡ ಪ್ರಮಾಣದ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಕಾರ್ಯಾಚರಣೆಗಳನ್ನು ಮುನ್ನಡೆಸಿದರು. ತ್ವರಿತ ಸ್ಥಳಾಂತರ, ಪರಿಹಾರ ವಿತರಣೆ ಮತ್ತು ಅಗತ್ಯ ಸೇವೆಗಳ ಪುನಃಸ್ಥಾಪನೆಯನ್ನು ಖಚಿತಪಡಿಸಿಕೊಳ್ಳಲು ಅವರು ನಾಗರಿಕ ಅಧಿಕಾರಿಗಳು ಮತ್ತು ಸ್ಥಳೀಯ ನಾಯಕರೊಂದಿಗೆ ಸಮನ್ವಯ ಸಾಧಿಸಿದರು. ಲೆಫ್ಟಿನೆಂಟ್ ಕರ್ನಲ್ ಸೀತಾ ಅಶೋಕ್ ಶೆಲ್ಕೆ ಅವರು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಅನೇಕ ಕ್ಲಿಷ್ಕರ ರಕ್ಷಣಾ ಕಾರ್ಯಾಚರಣೆಗಳಿಗೆ ಮಾರ್ಗದರ್ಶನ ನೀಡಿ ನೂರಾರು ನಾಗರಿಕರ ಜೀವವನ್ನು ಉಳಿಸಿದರು. ಚೂರಲ್ಮಲಾದಲ್ಲಿ 190 ಅಡಿ ಬೈಲಿ ಸೇತುವೆಯ ತ್ವರಿತ ನಿರ್ಮಾಣದ ಮೇಲ್ವಿಚಾರಣೆಯನ್ನು ಅವರು ವಹಿಸಿದರು. ಆ ಮೂಲಕ ದೂರದ ಹಳ್ಳಿಗಳಿಗೆ ಪ್ರಮುಖ ಸಂಪರ್ಕವನ್ನು ಪುನಃಸ್ಥಾಪಿಸಿದರು. ʻಕೊಮಾಟ್ಸು ಪಿಸಿ-210 ಎಕ್ಸ್‌ಕಾವೇಟರ್‌ ಯಂತ್ರವನ್ನು ಆಧಾರವಾಗಿ ಬಳಸಿ ರಾತ್ರೋರಾತ್ರಿ ನಾಲ್ಕು ಗಂಟೆಗಳಲ್ಲೇ ಸುಧಾರಿತ ಪಾದಚಾರಿ ಸೇತುವೆಯನ್ನು ನಿರ್ಮಿಸುವುದು ಮುಂತಾದ ನವೀನ ಎಂಜಿನಿಯರಿಂಗ್ ಪರಿಹಾರಗಳನ್ನು ಅವರು ಅನುಷ್ಠಾನಗೊಳಿಸಿದರು.

150 ಟನ್ ಉಪಕರಣಗಳನ್ನು ಸಜ್ಜುಗೊಳಿಸುವ ಮೂಲಕ ಲೆಫ್ಟಿನೆಂಟ್ ಕರ್ನಲ್ ಸೀತಾ ಅಶೋಕ್ ಶೆಲ್ಕೆ ಅವರು ಕಾರ್ಯಾಚರಣೆಗಳನ್ನು ಮುನ್ನಡೆಸಿದರು. ಇದು ಸಮಯೋಚಿತ ಪರಿಹಾರ ಮತ್ತು ಪುನಶ್ಚೇತನ ಪ್ರಯತ್ನಗಳ ಮೂಲಕ ಸಾವಿರಾರು ಜನರಿಗೆ ಪ್ರಯೋಜನವನ್ನು ನೀಡಿತು. ಅವರು 2,300ಕ್ಕೂ ಹೆಚ್ಚು ಸಿಬ್ಬಂದಿಗೆ ವಿಪತ್ತು ಪ್ರತಿಕ್ರಿಯೆ ಮತ್ತು ಮಾನವೀಯ ಕಾರ್ಯಾಚರಣೆಗಳಲ್ಲಿ ತರಬೇತಿ ನೀಡಿದರು. ಅವರು ತಮ್ಮ ಎಂಜಿನಿಯರಿಂಗ್ ಸೇವೆಯ ಮೂಲಕ ʻವಿಪತ್ತು ಅಪಾಯ ತಗ್ಗಿಸುವಿಕೆʼ(ಡಿಆರ್‌ಆರ್) ತತ್ವವನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಕಾರ್ಪ್ಸ್ ಆಫ್ ಎಂಜಿನಿಯರ್ಸ್ ಕೌಶಲ್ಯಗಳನ್ನು ಬಳಸಿಕೊಂಡು, ದೂರದ ವಿಪತ್ತು ಪೀಡಿತ ಪ್ರದೇಶಗಳಲ್ಲಿ ಸೇತುವೆಗಳು, ಪ್ರವೇಶ ಮಾರ್ಗಗಳು ಮತ್ತು ಆಶ್ರಯಗಳ ತ್ವರಿತ ನಿರ್ಮಾಣವನ್ನು ಕಾರ್ಯಸಾಧ್ಯವಾಗಿಸಿದ್ದಾರೆ. ತ್ವರಿತ ಪರಿಹಾರ ಮತ್ತು ಪುನರ್ವಸತಿಗೆ ನೆರವಾಗಿದ್ದಾರೆ. ಪ್ರಾಯೋಗಿಕ ನಾಯಕತ್ವ ಮತ್ತು ಕಾರ್ಯಾಚರಣೆ ವೇಳೆ ವಿಪತ್ತು ಅಪಾಯ ತಗ್ಗಿಸುವಿಕೆಯಲ್ಲಿ(ಡಿಆರ್‌ಆರ್‌) ಹೆಚ್ಚುತ್ತಿರುವ ಮಹಿಳೆಯರ ಪಾತ್ರವನ್ನು ಅವರ ಕೆಲಸವು ಪ್ರತಿಬಿಂಬಿಸುತ್ತದೆ.

ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್ಎಸ್‌ಡಿಎಂಎ) - ಸಾಂಸ್ಥಿಕ ವರ್ಗ

ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು(ಎಸ್ಎಸ್‌ಡಿಎಂಎ) 2005ರಲ್ಲಿ ಸ್ಥಾಪಿಸಲಾಯಿತು. ಗ್ರಾಮ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಹಾಯಕರು, ಬ್ಲಾಕ್ ಪ್ರಧಾನ ಕಚೇರಿಯಲ್ಲಿ ವಿಪತ್ತು ನಿರ್ವಹಣಾ ಮೇಲ್ವಿಚಾರಕರು ಹಾಗೂ ಜಿಲ್ಲಾ ಕೇಂದ್ರದಲ್ಲಿ ವಿಪತ್ತು ನಿರ್ವಹಣಾ ಸಂಯೋಜಕರು - ಹೀಗೆ ಮೂರು ಹಂತಗಳಲ್ಲಿ ವಿಪತ್ತು ನಿರ್ವಹಣಾ ಅಧಿಕಾರಿಗಳಾಗಿ 1,185 ತರಬೇತಿ ಪಡೆದ ʻಆಪದಾ ಮಿತ್ರʼರನ್ನು ʻಎಸ್ಎಸ್‌ಡಿಎಂಎʼ ನಿಯೋಜಿಸಿದೆ. ಆ ಮೂಲಕ ಸಿಕ್ಕಿಂನಲ್ಲಿ ವಿಪತ್ತು ಸನ್ನದ್ಧತೆ ಮತ್ತು ಪ್ರತಿಕ್ರಿಯೆಯನ್ನು ಗಮನಾರ್ಹವಾಗಿ ಬಲಪಡಿಸಿದೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿಪತ್ತು ನಿರ್ವಹಣಾ ಸಹಾಯಕರನ್ನು ನಿಯೋಜಿಸಲಾಗಿದೆ. ಇದು ಸಂಬಂಧಪಟ್ಟವರ ಪಾಲ್ಗೊವಿಕೆಯನ್ನು ಒಳಗೊಂಡ ಯೋಜನೆ, ಸಾಮರ್ಥ್ಯ ವರ್ಧನೆ ಉಪಕ್ರಮಗಳು ಮತ್ತು ಪಂಚಾಯತ್ ಮಟ್ಟದ ಸಮಿತಿಗಳ ರಚನೆಗೆ ಕಾರಣವಾಗಿದೆ. ಇದು ಎಲ್ಲಾ ಆರು ಜಿಲ್ಲೆಗಳಲ್ಲಿ ವಿಪತ್ತುಗಳು ಮತ್ತು ಹವಾಮಾನ ಅಪಾಯಗಳಿಗೆ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಿದೆ.

2016ರ ಮಂತಮ್ ಭೂಕುಸಿತ ಮತ್ತು 2023ರ ತೀಸ್ತಾ ಪ್ರವಾಹದಂತಹ ನಿರ್ಣಾಯಕ ಘಟನೆಗಳ ಸಮಯದಲ್ಲಿ ʻಎಸ್ಎಸ್‌ಡಿಎಂಎʼ ತನ್ನ ನೈಜ-ಸಮಯದ ಸಮನ್ವಯ ಮತ್ತು ತರಬೇತಿ ಪಡೆದ ಮೊದಲ ಪ್ರತಿಸ್ಪಂದಕರ ಮೂಲಕ 2,563 ಜನರನ್ನು ರಕ್ಷಿಸಲು ನೆರವಾಯಿತು. ಆ ಮೂಲಕ ಜೀವಹಾನಿ ಮತ್ತು ಒಟ್ಟಾರೆ ಹಾನಿಯನ್ನು ಕಡಿಮೆ ಮಾಡಿತು. ʻಎಸ್ಎಸ್‌ಡಿಎಂಎʼ ತನ್ನ ʻಆಪದಾ ಮಿತ್ರʼ ಉಪಕ್ರಮದ ಮೂಲಕ ಸಕ್ರಿಯ, ಸಮುದಾಯ-ಕೇಂದ್ರಿತ ವಿಪತ್ತು ಅಪಾಯ ಕಡಿತ ವಿಧಾನವನ್ನು ಸಾಂಸ್ಥಿಕಗೊಳಿಸಿದೆ. ಮುನ್ನೆಚ್ಚರಿಕೆ, ಸನ್ನದ್ಧತೆ ಮತ್ತು ಸ್ಥಳೀಯ ಸಾಮರ್ಥ್ಯ ವರ್ಧನೆಯ ಮೇಲೆ ಬಲವಾದ ಗಮನವನ್ನು ಹರಿಸಿದೆ. ವಿಶೇಷವಾಗಿ ಇತರ ಹಿಮಾಲಯ ಮತ್ತು ಈಶಾನ್ಯ ರಾಜ್ಯಗಳಿಗೆ ಪ್ರಸ್ತುತವಾಗಿರುವಂತಹ ಸಮುದಾಯ ಕೇಂದ್ರಿತವಾದ ವಿಪತ್ತು ಪರಿಹಾರಕ್ಕೆ ಸುಸ್ಥಿರ, ಬೃಹತ್‌ ಮತ್ತು ಪುನರಾವರ್ತಿಸಬಹುದಾದ ಮಾದರಿಯನ್ನು ರಚಿಸಿದೆ.

 

*****


(रिलीज़ आईडी: 2217559) आगंतुक पटल : 10
इस विज्ञप्ति को इन भाषाओं में पढ़ें: Odia , Telugu , Malayalam , English , Urdu , Nepali , हिन्दी , Bengali , Assamese , Punjabi , Gujarati , Tamil