ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಂವಿದಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ಕಾಮನ್‌ವೆಲ್ತ್‌ನ ಸ್ಪೀಕರ್‌ಗಳು ಮತ್ತು ಪೀಠಾಸೀನಾಧಿಕಾರಿಗಳ 28ನೇ ಸಮ್ಮೇಳನ ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಭಾರತವು ವೈವಿಧ್ಯತೆಯನ್ನು ತನ್ನ ಪ್ರಜಾಪ್ರಭುತ್ವದ ಶಕ್ತಿಯನ್ನಾಗಿ ಪರಿವರ್ತಿಸಿದೆ: ಪ್ರಧಾನಮಂತ್ರಿ

ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಪ್ರಜಾಪ್ರಭುತ್ವಕ್ಕೆ ಸ್ಥಿರತೆ, ವೇಗ ಮತ್ತು  ವ್ಯಾಪ್ತಿಯನ್ನು ನೀಡುತ್ತವೆ ಎಂಬುದನ್ನು ಭಾರತ ತೋರಿಸಿದೆ: ಪ್ರಧಾನಮಂತ್ರಿ

ಭಾರತದಲ್ಲಿ ಪ್ರಜಾಪ್ರಭುತ್ವ ಎಂದರೆ ಕೊನೆಯ ಹಂತದ ಸೇವೆ : ಪ್ರಧಾನಮಂತ್ರಿ

ನಮ್ಮ ಪ್ರಜಾಪ್ರಭುತ್ವವು ಆಳವಾದ ಬೇರುಗಳ ನೆರವಿನ ದೊಡ್ಡ ಮರದಂತಿದೆ; ನಾವು ಚರ್ಚೆ, ಸಂವಾದ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ದೀರ್ಘ ಸಂಪ್ರದಾಯ ಹೊಂದಿದ್ದೇವೆ: ಪ್ರಧಾನಮಂತ್ರಿ

ಜಾಗತಿಕ ದಕ್ಷಿಣದ ಕಳವಳಗಳನ್ನು ಭಾರತವು ಪ್ರತಿಯೊಂದು ಜಾಗತಿಕ ವೇದಿಕೆಯಲ್ಲಿ ಬಲವಾಗಿ ಎತ್ತುತ್ತಿದೆ; ತನ್ನ ಜಿ 20 ಅಧ್ಯಕ್ಷತೆ ಅವಧಿಯಲ್ಲಿ, ಭಾರತವು ಜಾಗತಿಕ ದಕ್ಷಿಣದ ಆದ್ಯತೆಗಳನ್ನು ಜಾಗತಿಕ ಕಾರ್ಯಸೂಚಿಯ ಕೇಂದ್ರ ಬಿಂದುವಾಗಿರಿಸಿದೆ: ಪ್ರಧಾನಮಂತ್ರಿ

प्रविष्टि तिथि: 15 JAN 2026 12:09PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ನವದೆಹಲಿಯ ಸಂಸತ್ ಭವನದ ಸಂಕೀರ್ಣದಲ್ಲಿರುವ ಸಂವಿಧಾನ ಸದನದ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಕಾಮನ್‌ವೆಲ್ತ್‌ನ ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರ 28 ನೇ ಸಮ್ಮೇಳನವನ್ನು (ಸಿಎಸ್‌ಪಿಒಸಿ) ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಶ್ರೀ ನರೇಂದ್ರ ಮೋದಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ಪೀಕರ್ ಪಾತ್ರ ವಿಶಿಷ್ಟವಾಗಿದೆ ಎಂದು ಹೇಳಿದರು. ಸ್ಪೀಕರ್‌ಗೆ ಹೆಚ್ಚು ಮಾತನಾಡಲು ಅವಕಾಶವಿಲ್ಲ, ಆದರೆ ಅವರ ಜವಾಬ್ದಾರಿ ಇತರರ ಮಾತುಗಳನ್ನು ಕೇಳುವುದು ಮತ್ತು ಪ್ರತಿಯೊಬ್ಬರೂ ತಮ್ಮ ಅನಿಸಿಕೆಗಳನ್ನು ಅಭಿವ್ಯಕ್ತ ವ್ಯಕ್ತಪಡಿಸಲು ಅವಕಾಶ ದೊರಕುವಂತೆ ನೋಡಿಕೊಳ್ಳುವುದಾಗಿದೆ ಎಂದು ಅವರು ಒತ್ತಿ ಹೇಳಿದರು. ಗದ್ದಲದ ಮತ್ತು ಅತಿಯಾದ ಉತ್ಸಾಹಭರಿತ ಸದಸ್ಯರನ್ನು ಸಹ ನಗುವಿನೊಂದಿಗೆ ನಿಭಾಯಿಸುವ ಸ್ಪೀಕರ್‌ಗಳ ಸಾಮಾನ್ಯ ಲಕ್ಷಣವೆಂದರೆ ತಾಳ್ಮೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.  

ಈ ವಿಶೇಷ ಸಂದರ್ಭದಲ್ಲಿ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದ ಶ್ರೀ ನರೇಂದ್ರ ಮೋದಿ, ಅವರು ಉಪಸ್ಥಿತರಿರುವುದಕ್ಕೆ ಗೌರವ ಸಲ್ಲಿಸಿದರು. ಭಾರತದ ಪ್ರಜಾಪ್ರಭುತ್ವ ಪಯಣದಲ್ಲಿ ನೀವೆಲ್ಲರೂ ಕುಳಿತಿರುವ ಸ್ಥಳವು ಅಪಾರ ಮಹತ್ವದ್ದಾಗಿದೆ ಎಂದು ಅವರು ಹೇಳಿದರು. ವಸಾಹತುಶಾಹಿ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ, ಭಾರತದ ಸ್ವಾತಂತ್ರ್ಯ ಖಾತ್ರಿಯಾಗಿದ್ದಾಗ ಸಂವಿಧಾನ ಸಭೆಯು ಸಂವಿಧಾನದ ಕರಡನ್ನು ಸಿದ್ಧಪಡಿಸಲು ಇದೇ ಕೇಂದ್ರ ಸಭಾಂಗಣದಲ್ಲಿ ಸಭೆ ಸೇರಿತು ಎಂದು ಅವರು ಸ್ಮರಿಸಿಕೊಂಡರು. ಸ್ವಾತಂತ್ರ್ಯಾ ನಂತರ 75 ವರ್ಷಗಳ ಕಾಲ ಈ ಕಟ್ಟಡವು ಭಾರತದ ಸಂಸತ್ತಾಗಿ ಕಾರ್ಯನಿರ್ವಹಿಸಿತು, ಅಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಹಲವು ನಿರ್ಣಾಯಕ ನಿರ್ಧಾರಗಳು ಮತ್ತು ಚರ್ಚೆಗಳು ನಡೆದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಈಗ ಈ ಐತಿಹಾಸಿಕ ಸ್ಥಳವನ್ನು ಸಂವಿಧಾನ ಸದನ ಎಂದು ನಾಮಕರಣ ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಸಮರ್ಪಿಸಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇತ್ತೀಚೆಗೆ ಭಾರತವು ತನ್ನ ಸಂವಿಧಾನ ಜಾರಿಯ 75 ವರ್ಷಗಳನ್ನು ಆಚರಿಸಿದೆ ಎಂದು ಅವರು ಒತ್ತಿ ಹೇಳಿದರು. ಸಂವಿಧಾನ ಸದನದಲ್ಲಿ ಎಲ್ಲಾ ಗಣ್ಯ ಅತಿಥಿಗಳ ಉಪಸ್ಥಿತಿಯು ಭಾರತದ ಪ್ರಜಾಪ್ರಭುತ್ವಕ್ಕೆ ಬಹಳ ವಿಶೇಷವಾದ ಕ್ಷಣವಾಗಿದೆ ಎಂದು ಅವರು ಒತ್ತಿ ಹೇಳಿದರು.

ಕಾಮನ್‌ವೆಲ್ತ್ ಸ್ಪೀಕರ್‌ಗಳು ಮತ್ತು ಪೀಠಾಸೀನಾಧಿಕಾರಿಗಳ ಸಮ್ಮೇಳನ ಭಾರತದಲ್ಲಿ ನಡೆಯುತ್ತಿರುವುದು ಇದು ನಾಲ್ಕನೇ ಬಾರಿ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಮ್ಮೇಳನದ ಮುಖ್ಯ ವಿಷಯವೆಂದರೆ ‘ಸಂಸದೀಯ ಪ್ರಜಾಪ್ರಭುತ್ವದ ಪರಿಣಾಮಕಾರಿ ಸೇವೆ’ ಎಂದು ಅವರು ಒತ್ತಿ ಹೇಳಿದರು. ಭಾರತ ಸ್ವಾತಂತ್ರ್ಯ ಪಡೆದಾಗ ಇಂತಹ ವೈವಿಧ್ಯತೆಯನ್ನು ಹೊಂದಿರುವ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ ಎಂಬ ಆತಂಕಗಳು ವ್ಯಕ್ತವಾಗಿದ್ದವು ಎಂದು ಶ್ರೀ ನರೇಂದ್ರ ಮೋದಿ ಸ್ಮರಿಸಿಕೊಂಡರು. ಭಾರತವು ಈ ವೈವಿಧ್ಯತೆಯನ್ನೇ ತನ್ನ ಪ್ರಜಾಪ್ರಭುತ್ವದ ಶಕ್ತಿಯನ್ನಾಗಿ ಪರಿವರ್ತಿಸಿಕೊಂಡಿತು ಎಂದು ಅವರು ಒತ್ತಿ ಹೇಳಿದರು. ಮತ್ತೊಂದು ಪ್ರಮುಖ ಕಳವಳವೆಂದರೆ ಭಾರತದಲ್ಲಿ ಪ್ರಜಾಪ್ರಭುತ್ವ ಹೇಗಾದರೂ ಉಳಿದುಕೊಂಡರೂ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು. "ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಪ್ರಜಾಪ್ರಭುತ್ವಕ್ಕೆ ಸ್ಥಿರತೆ, ವೇಗ ಮತ್ತು ವ್ಯಾಪ್ತಿಯನ್ನು ಒದಗಿಸುತ್ತವೆ ಎಂಬುದನ್ನು ಭಾರತ ಸಾಬೀತುಪಡಿಸಿದೆ" ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಇಂದು ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ, ಭಾರತವು ಯುಪಿಐ ಮೂಲಕ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಹೊಂದಿದೆ, ಅತಿದೊಡ್ಡ ಲಸಿಕೆ ಉತ್ಪಾದಕ, ಎರಡನೇ ಅತಿದೊಡ್ಡ ಉಕ್ಕಿನ ಉತ್ಪಾದಕ, ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಪೂರಕ ವ್ಯವಸ್ಥೆ, ಮೂರನೇ ಅತಿದೊಡ್ಡ ವೈಮಾನಿಕ ಮಾರುಕಟ್ಟೆ, ನಾಲ್ಕನೇ ಅತಿದೊಡ್ಡ ರೈಲ್ವೆ ಜಾಲ, ಮೂರನೇ ಅತಿದೊಡ್ಡ ಮೆಟ್ರೋ ರೈಲು ಜಾಲ, ಅತಿದೊಡ್ಡ ಹಾಲು ಉತ್ಪಾದಕ ಮತ್ತು ಎರಡನೇ ಅತಿದೊಡ್ಡ ಅಕ್ಕಿ ಉತ್ಪಾದಕ ಎಂದು ಅವರು ಒತ್ತಿ ಹೇಳಿದರು.

”ಭಾರತದಲ್ಲಿ, ಪ್ರಜಾಪ್ರಭುತ್ವ ಎಂದರೆ ಕೊನೆಯ ಹಂತದವರೆಗೆ ಸೇವೆಯನ್ನು ತಲುಪಿಸುವುದು’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಭಾರತವು ಸಾರ್ವಜನಿಕ ಕಲ್ಯಾಣದ ಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತದೆ, ಸವಲತ್ತುಗಳು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ತಲುಪುವುದನ್ನು ಖಚಿತಪಡಿಸುತ್ತದೆ ಎಂದು ಹೇಳಿದರು. ಈ ಕಲ್ಯಾಣದ ಮನೋಭಾವದಿಂದಾಗಿ ಇತ್ತೀಚಿನ ವರ್ಷಗಳಲ್ಲಿ 25 ಕೋಟಿ ಜನರು ಬಡತನ ರೇಖೆಯಿಂದ ಹೊರಬಂದಿದ್ದಾರೆ ಎಂದು ಅವರು ಒತ್ತಿ ಹೇಳಿದರು. ”ಭಾರತದಲ್ಲಿ ಪ್ರಜಾಪ್ರಭುತ್ವವು ಸೇವೆಯನ್ನು ನೀಡುತ್ತದೆ’’ ಎಂದು ಅವರು ಪ್ರತಿಪಾದಿಸಿದರು.

ಭಾರತದಲ್ಲಿ ಜನರೇ ಪರಮೋಚ್ಚರಾಗಿರುವುದರಿಂದ ಪ್ರಜಾಪ್ರಭುತ್ವವು ಸೇವೆಯನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರ ಆಕಾಂಕ್ಷೆಗಳು ಮತ್ತು ಕನಸುಗಳಿಗೆ ಆದ್ಯತೆ ನೀಡಲಾಗಿದೆ ಮತ್ತು ಅವರ ಹಾದಿಯಲ್ಲಿ ಯಾವುದೇ ಅಡೆತಡೆಗಳು ಬಾರದಂತೆ ನೋಡಿಕೊಳ್ಳಲು, ಪ್ರಕ್ರಿಯೆಗಳಿಂದ ತಂತ್ರಜ್ಞಾನದವರೆಗೆ ಎಲ್ಲವನ್ನೂ ಸಾರ್ವಜನಕರಿಗೆ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಪ್ರಜಾಪ್ರಭುತ್ವದ ಮನೋಭಾವವು ಭಾರತದ ರಕ್ತನಾಡಿಗಳು ಮತ್ತು ಮನಸ್ಸಿನಲ್ಲಿ ಚಲಿಸುತ್ತಿದೆ ಎಂದು ಅವರು ಹೇಳಿದರು. ಇಡೀ ವಿಶ್ವ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಹೆಣಗಾಡುತ್ತಿದ್ದ ಉದಾಹರಣೆಯನ್ನು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ದೇಶದೊಳಗಿನ ಸವಾಲುಗಳ ಹೊರತಾಗಿಯೂ, ಭಾರತವು 150 ಕ್ಕೂ ಅಧಿಕ ರಾಷ್ಟ್ರಗಳಿಗೆ ಔಷಧಿಗಳು ಮತ್ತು ಲಸಿಕೆಗಳನ್ನು ಪೂರೈಸಿದೆ ಎಂದು ಅವರು ಉಲ್ಲೇಖಿಸಿದರು. ಜನರ ಹಿತಾಸಕ್ತಿಗಳು, ಕಲ್ಯಾಣ ಮತ್ತು ಸ್ವಾಸ್ಥ್ಯವನ್ನು ಒದಗಿಸುವುದು ಭಾರತದ ನೀತಿಯಾಗಿದೆ ಮತ್ತು ಈ ನೀತಿಯನ್ನು ಭಾರತದ ಪ್ರಜಾಪ್ರಭುತ್ವವು ಪೋಷಿಸಿದೆ ಎಂದು ಅವರು ಒತ್ತಿ ಹೇಳಿದರು.

ವಿಶ್ವದಾದ್ಯಂತ ಹಲವರು ಭಾರತವನ್ನು ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆಂದು ತಿಳಿದಿದ್ದಾರೆ ಎಂದು ಬಲವಾಗಿ ಪ್ರತಿಪಾದಿಸಿದ ಶ್ರೀ ನರೇಂದ್ರ ಮೋದಿ, ಭಾರತದ ಪ್ರಜಾಪ್ರಭುತ್ವದ ವ್ಯಾಪ್ತಿ ನಿಜಕ್ಕೂ ಅಸಾಧಾರಣವಾಗಿದೆ ಎಂದು ಹೇಳಿದರು. 2024 ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಗಳನ್ನು ಉಲ್ಲೇಖಿಸಿದ ಅವರು, ಅದು ಮನುಕುಲದ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಕ್ರಿಯೆ ಎಂದು ಅವರು ಒತ್ತಿ ಹೇಳಿದರು. ಸುಮಾರು 980 ಮಿಲಿಯನ್ ನಾಗರಿಕರು ಮತ ಚಲಾಯಿಸಲು ನೋಂದಾಯಿಸಲ್ಪಟ್ಟಿದ್ದರು, ಇದು ಹಲವು ಖಂಡಗಳ ಜನಸಂಖ್ಯೆಗಿಂತ ಜಾಸ್ತಿಯಾಗಿದೆ. 8 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಮತ್ತು 700 ಕ್ಕೂ ಅಧಿಕ ರಾಜಕೀಯ ಪಕ್ಷಗಳು ಸ್ಪರ್ಧಿಸುತ್ತಿವೆ ಮತ್ತು ಚುನಾವಣೆಗಳು ಮಹಿಳಾ ಮತದಾರರ ದಾಖಲೆಯ ಭಾಗವಹಿಸುವಿಕೆಗೆ ಸಾಕ್ಷಿಯಾಗಿವೆ ಎಂದು ಅವರು ತಿಳಿಸಿದರು. ಇಂದು ಭಾರತೀಯ ಮಹಿಳೆಯರು ಪಾಲ್ಗೊಳ್ಳುತ್ತಿರುವುದು ಮಾತ್ರವಲ್ಲದೆ ಅವರೇ ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ರಾಷ್ಟ್ರದ ಪ್ರಥಮ ಪ್ರಜೆಯಾದ ಭಾರತದ ರಾಷ್ಟ್ರಪತಿ ಒರ್ವ ಮಹಿಳೆ ಮತ್ತು ಸಮ್ಮೇಳನ ನಡೆಯುತ್ತಿರುವ ನಗರವಾದ ದೆಹಲಿಯ ಮುಖ್ಯಮಂತ್ರಿಯೂ ಒರ್ವ ಮಹಿಳೆ ಎಂದು ಅವರು ಗಮನಸೆಳೆದರು. ಗ್ರಾಮೀಣ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳಲ್ಲಿ, ಭಾರತವು ಸುಮಾರು 1.5 ಮಿಲಿಯನ್ ಚುನಾಯಿತ ಮಹಿಳಾ ಪ್ರತಿನಿಧಿಗಳನ್ನು ಹೊಂದಿದ್ದು, ಅವರು ಸುಮಾರು ಶೇ.50ರಷ್ಟು ತಳಮಟ್ಟದ ನಾಯಕರನ್ನು ಪ್ರತಿನಿಧಿಸುತ್ತಾರೆ, ಇದು ಜಾಗತಿಕವಾಗಿ ಯಾವುದಕ್ಕೂ ಸರಿಸಾಟಿಯಿಲ್ಲ ಎಂದು ಅವರು ಒತ್ತಿ ಹೇಳಿದರು. ಭಾರತೀಯ ಪ್ರಜಾಪ್ರಭುತ್ವವು ವೈವಿಧ್ಯತೆಯಿಂದ ಸಮೃದ್ಧವಾಗಿದೆ ಎಂದ ಪ್ರಧಾನಮಂತ್ರಿ, ನೂರಾರು ಭಾಷೆಗಳನ್ನು ಮಾತನಾಡುವವರಿದ್ದಾರೆ, ವಿವಿಧ ಭಾಷೆಗಳಲ್ಲಿ 900ಕ್ಕೂ ಅಧಿಕ ಟೆಲಿವಿಷನ್ ಚಾನೆಲ್‌ಗಳಿವೆ ಮತ್ತು ಸಾವಿರಾರು ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಪ್ರಕಟವಾಗುತ್ತಿವೆ ಎಂದು ಅವರು ಉಲ್ಲೇಖಿಸಿದರು. ಕೆಲವೇ ಕೆಲವು ಸಮುದಾಯಗಳು ಮಾತ್ರ ವೈವಿಧ್ಯತೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಹೊಂದಿವೆ ಮತ್ತು ಭಾರತವು ಈ ವೈವಿಧ್ಯತೆಯನ್ನು ಆಚರಿಸುತ್ತದೆ ಏಕೆಂದರೆ ಅದರ ಪ್ರಜಾಪ್ರಭುತ್ವವು ಸದೃಢವಾದ ಬುನಾದಿಯನ್ನು ಹೊಂದಿದೆ. ಭಾರತದ ಪ್ರಜಾಪ್ರಭುತ್ವವನ್ನು ಆಳವಾದ ಬೇರುಗಳ ನೆರವಿರುವ ದೊಡ್ಡ ಮರಕ್ಕೆ ಹೋಲಿಸಿದ ಶ್ರೀ ನರೇಂದ್ರ ಮೋದಿ, ಭಾರತದ ಚರ್ಚೆ, ಸಂವಾದ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ದೀರ್ಘ ಸಂಪ್ರದಾಯವನ್ನು ಒತ್ತಿ ಹೇಳಿದರು ಮತ್ತು ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎಂದು ಕರೆಯಲಾಗುತ್ತದೆ ಎಂದು ಸ್ಮರಿಸಿಕೊಂಡರು. 5 ಸಾವಿರ ವರ್ಷಗಳಿಗೂ ಹಳೆಯದಾದ ಭಾರತದ ಪವಿತ್ರ ಗ್ರಂಥಗಳಾದ ವೇದಗಳು ಜನರು ಸಮಸ್ಯೆಗಳನ್ನು ಚರ್ಚಿಸಲು ಮತ್ತು ಚರ್ಚೆ ಮತ್ತು ಒಪ್ಪಂದದ ನಂತರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಭೆಗಳು ನಡೆದಿರುವುದನ್ನು ಉಲ್ಲೇಖಿಸುತ್ತವೆ ಎಂದು ಅವರು ಪ್ರಸ್ತಾಪಿಸಿದರು. ಭಾರತವು ಭಗವಾನ್ ಬುದ್ಧನ ಭೂಮಿಯಾಗಿದೆ, ಇಲ್ಲಿ ಬೌದ್ಧ ಸಂಘವು ಮುಕ್ತ ಮತ್ತು ವ್ಯವಸ್ಥಿಕ ಚರ್ಚೆಗಳು ನಡೆಯುತ್ತಿದ್ದವು, ಒಮ್ಮತ ಅಥವಾ ಮತದಾನದ ಮೂಲಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿತ್ತು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಅವರು ತಮಿಳುನಾಡಿನ 10ನೇ ಶತಮಾನದ ಶಾಸನವನ್ನು ಉಲ್ಲೇಖಿಸಿ ಪ್ರಜಾಪ್ರಭುತ್ವ ಮೌಲ್ಯಗಳೊಂದಿಗೆ ಕೆಲಸ ಮಾಡುವ ಗ್ರಾಮ ಸಭೆಯನ್ನು ವ್ಯಾಖ್ಯಾನಿಸಿದರು. ಅದು ಹೊಣೆಗಾರಿಕೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಗೆ ಸ್ಪಷ್ಟ ನಿಯಮಗಳೊಂದಿಗೆ. "ಭಾರತದ ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಲ ಕಾಲಕ್ಕೆ ಪರೀಕ್ಷಿಸಲಾಗುತ್ತಿದೆ, ವೈವಿಧ್ಯತೆಯಿಂದ ನೆರವಿನೊಂದಿಗೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಬಲವರ್ಧನೆಗೊಳ್ಳುತ್ತಾ ಹೋಗುತ್ತಿದೆ’’ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಕಾಮನ್‌ವೆಲ್ತ್‌ ರಾಷ್ಟ್ರಗಳ ಒಟ್ಟು ಜನಸಂಖ್ಯೆಯ ಸುಮಾರು ಶೇಕಡ 50 ರಷ್ಟು ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಎಲ್ಲಾ ರಾಷ್ಟ್ರಗಳ ಅಭಿವೃದ್ಧಿಗೆ ಭಾರತ ನಿರಂತರವಾಗಿ ಸಾಧ್ಯವಾದಷ್ಟು ಕೊಡುಗೆ ನೀಡಲು ಪ್ರಯತ್ನಿಸುತ್ತಿದೆ ಎಂದು ಅವರು ಪ್ರಮುಖವಾಗಿ ಪ್ರತಿಪಾದಿಸಿದರು. ಕಾಮನ್‌ವೆಲ್ತ್‌ನ ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ, ಅದು ಆರೋಗ್ಯ, ಹವಾಮಾನ ಬದಲಾವಣೆ, ಆರ್ಥಿಕ ಬೆಳವಣಿಗೆ ಅಥವಾ ನಾವೀನ್ಯತೆ ಕ್ಷೇತ್ರಗಳಲ್ಲಿರಲಿ, ಭಾರತವು ತನ್ನ ಬದ್ಧತೆಗಳನ್ನು ಪೂರ್ಣ ಜವಾಬ್ದಾರಿಯೊಂದಿಗೆ ಪೂರೈಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಭಾರತವು ಸಹ ಪಾಲುದಾರರಿಂದ ಕಲಿಯಲು ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತದೆ ಮತ್ತು ಭಾರತದ ಅನುಭವಗಳು ಇತರ ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.

ವಿಶ್ವ ಹಿಂದೆಂದೂ ಕಾಣದ ಅಭೂತಪೂರ್ವ ಪರಿವರ್ತನೆಗೆ ಒಳಗಾಗುತ್ತಿರುವ ಸಮಯದಲ್ಲಿ, ಜಾಗತಿಕ ದಕ್ಷಿಣವು ಹೊಸ ಮಾರ್ಗಗಳನ್ನು ರೂಪಿಸುವ ಸಮಯ ಇದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಜಾಗತಿಕ ದಕ್ಷಿಣದ ಕಳವಳಗಳನ್ನು ಪ್ರತಿಯೊಂದು ಜಾಗತಿಕ ವೇದಿಕೆಯಲ್ಲಿ ಬಲವಾಗಿ ಎತ್ತುತ್ತಿದೆ ಎಂದು ಅವರು ಹೇಳಿದರು. ಜಿ 20 ಅಧ್ಯಕ್ಷತೆಯಲ್ಲಿ ಭಾರತವು ಜಾಗತಿಕ ದಕ್ಷಿಣದ ಕಳವಳಗಳನ್ನು ಜಾಗತಿಕ ಕಾರ್ಯಸೂಚಿಯ ಕೇಂದ್ರ ಬಿಂದುವರಿನಲ್ಲಿರಿಸಿತ್ತು ಎಂದು ಅವರು ಸ್ಮರಿಸಿಕೊಂಡರು. ನಾವೀನ್ಯತೆಗಳು ಇಡೀ ಜಾಗತಿಕ ದಕ್ಷಿಣ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಭಾರತದಲ್ಲಿ ಮಾಡುತ್ತಿರುವ ಸ್ಥಿರ ಪ್ರಯತ್ನವನ್ನು ಶ್ರೀ ನರೇಂದ್ರ ಮೋದಿ ಪ್ರಮುಖವಾಗಿ ಪ್ರತಿಪಾದಿಸಿದರು. ಜಾಗತಿಕ ದಕ್ಷಿಣದಲ್ಲಿರುವ ಪಾಲುದಾರ ರಾಷ್ಟ್ರಗಳು ಭಾರತದಲ್ಲಿ ಸ್ಥಾಪಿಸಲಾದ ವ್ಯವಸ್ಥೆಗಳಂತೆಯೇ ತಮ್ಮಲ್ಲೂ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಲು ಭಾರತವು ಮುಕ್ತ ಮೂಲ ತಂತ್ರಜ್ಞಾನ ವೇದಿಕೆಗಳನ್ನು ನಿರ್ಮಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಸಂಸದೀಯ ಪ್ರಜಾಪ್ರಭುತ್ವದ ಜ್ಞಾನ ಮತ್ತು ಅರ್ಥ ಮಾಡಿಕೊಳ್ಳುವುದನ್ನು ಉತ್ತೇಜಿಸುವ ವಿಭಿನ್ನ ವಿಧಾನಗಳನ್ನು ಅನ್ವೇಷಿಸುವುದು ಈ ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಈ ಪ್ರಯತ್ನದಲ್ಲಿ ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರು ಇಬ್ಬರೂ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ, ಏಕೆಂದರೆ ಇದು ಜನರನ್ನು ತಮ್ಮ ದೇಶದ ಪ್ರಜಾಪ್ರಭುತ್ವ ಪ್ರಕ್ರಿಯೆಯೊಂದಿಗೆ ಹೆಚ್ಚು ನಿಕಟವಾಗಿ ಸಂಪರ್ಕಿಸುತ್ತದೆ. ಭಾರತೀಯ ಸಂಸತ್ತು ಈಗಾಗಲೇ ಅಂತಹ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅವರು ಉಲ್ಲೇಖಿಸಿದರು. ಅಧ್ಯಯನ ಪ್ರವಾಸಗಳು, ಕಸ್ಟಮೈಸ್ ಮಾಡಿದ ತರಬೇತಿ ಕಾರ್ಯಕ್ರಮಗಳು ಮತ್ತು ಇಂಟರ್ನ್‌ಶಿಪ್‌ಗಳ ಮೂಲಕ, ನಾಗರಿಕರಿಗೆ ಸಂಸತ್ತನ್ನು ಹೆಚ್ಚು ನಿಕಟವಾಗಿ ಅರ್ಥಮಾಡಿಕೊಳ್ಳಲು ಅವಕಾಶಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಚರ್ಚೆಗಳು ಮತ್ತು ಸದನದ ಕಲಾಪಗಳನ್ನು ನೈಜ ಸಮಯದಲ್ಲಿ (ರಿಯಲ್ ಟೈಮ್ ನಲ್ಲಿ) ಪ್ರಾದೇಶಿಕ ಭಾಷೆಗಳಿಗೆ ಭಾಷಾಂತರಿಸಲು ಭಾರತವು ಎಐ (ಕೃತಕ ಬುದ್ಧಿಮತ್ತೆ)ಯನ್ನು ಬಳಸಲು ಆರಂಭಿಸಿದೆ ಎಂದು ಅವರು ಹೇಳಿದರು. ಎಐ ಸಹಾಯದಿಂದ ಸಂಸತ್ತಿಗೆ ಸಂಬಂಧಿಸಿದ ಸಂಪನ್ಮೂಲಗಳನ್ನು ಹೆಚ್ಚು ಬಳಕೆದಾರ ಸ್ನೇಹಿಯನ್ನಾಗಿ ಮಾಡಲಾಗುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇದು ಯುವ ಪೀಳಿಗೆಗೆ ಸಂಸತ್ತಿನ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಉತ್ತಮ ಅವಕಾಶವನ್ನು ಒದಗಿಸುತ್ತಿದೆ ಎಂದು ಅವರು ತಿಳಿಸಿದರು.

ಕಾಮನ್‌ವೆಲ್ತ್‌ಗೆ ಸಂಬಂಧಿಸಿದ 20 ಕ್ಕೂ  ಅಧಿಕ ಸದಸ್ಯ ರಾಷ್ಟ್ರಗಳಿಗೆ ಭೇಟಿ ನೀಡುವ ಅವಕಾಶ ತಮಗೆ ಸಿಕ್ಕಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಹಲವು ದೇಶಗಳ ಸಂಸತ್ತುಗಳನ್ನು ಉದ್ದೇಶಿಸಿ ಮಾತನಾಡುವ ಸೌಭಾಗ್ಯವೂ ತಮಗೆ ಸಿಕ್ಕಿದೆ ಎಂದು ಒತ್ತಿ ಹೇಳಿದರು. ತಾವು ಎಲ್ಲಿಗೆ ಹೋದರೂ ಸಾಕಷ್ಟು ಕಲಿತಿದ್ದೇನೆ ಎಂದು ಅವರು ಉಲ್ಲೇಖಿಸಿದರು. ತಾವು ಕಂಡ ಪ್ರತಿಯೊಂದು ಅತ್ಯುತ್ತಮ ಪದ್ಧತಿಯನ್ನು ಲೋಕಸಭೆಯ ಸ್ಪೀಕರ್ ಜೊತೆಗೆ ರಾಜ್ಯಸಭೆಯ ಅಧ್ಯಕ್ಷರು ಮತ್ತು ಉಪರಾಷ್ಟ್ರಪತಿ ಅವರೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಮ್ಮೇಳನವು ಕಲಿಕೆ ಮತ್ತು ಹಂಚಿಕೆ ಪ್ರಕ್ರಿಯೆಯನ್ನು ಮತ್ತಷ್ಟು ಉತ್ಕೃಷ್ಟಗೊಳಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಅವರು, ಭಾಗವಹಿಸಿರುವ ಎಲ್ಲರಿಗೂ ಶುಭ ಕೋರಿದರು.

ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ, ರಾಜ್ಯಸಭೆಯ ಉಪಾಧ್ಯಕ್ಷರಾದ ಶ್ರೀ ಹರಿವಂಶ್‌, ಅಂತರ ಸಂಸದೀಯ ಒಕ್ಕೂಟದ ಅಧ್ಯಕ್ಷರಾದ ಡಾ. ತುಲಿಯಾ ಅಕ್ಸನ್, ಕಾಮನ್‌ವೆಲ್ತ್ ಸಂಸದೀಯ ಸಂಘದ ಅಧ್ಯಕ್ಷರಾದ ಡಾ. ಕ್ರಿಸ್ಟೋಫರ್ ಕಲಿಲಾ ಸೇರಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರ ಅಧ್ಯಕ್ಷತೆಯಲ್ಲಿ 28ನೇ ಸಿಎಸ್‌ಪಿಒಸಿಯು ನಡೆಯುತ್ತಿದ್ದು, 42 ಕಾಮನ್‌ವೆಲ್ತ್ ದೇಶಗಳು ಮತ್ತು ವಿಶ್ವದ ವಿವಿಧ ಭಾಗಗಳ 4 ಅರೆ ಸ್ವಾಯತ್ತ ಸಂಸತ್ತುಗಳ 61 ಸ್ಪೀಕರ್‌ಗಳು ಮತ್ತು ಸಭಾಧ್ಯಕ್ಷರು ಭಾಗವಹಿಸಿದ್ದಾರೆ.

ಸಮ್ಮೇಳನವು ವ್ಯಾಪಕ ಶ್ರೇಣಿಯ ಸಮಕಾಲೀನ ಸಂಸದೀಯ ವಿಷಯಗಳ ಕುರಿತು ಚರ್ಚಿಸಲಿದೆ, ಇದರಲ್ಲಿ ಸದೃಢವಾದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಿರ್ವಹಿಸುವಲ್ಲಿ ಸಭಾಧ್ಯಕ್ಷರು ಮತ್ತು ಪೀಠಾಸೀನಾಧಿಕಾರಿಗಳ ಪಾತ್ರ, ಸಂಸದೀಯ ಕಾರ್ಯನಿರ್ವಹಣೆಯಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆ, ಸಂಸತ್ತಿನ ಸದಸ್ಯರ ಮೇಲೆ ಸಾಮಾಜಿಕ ಮಾಧ್ಯಮದ ಪರಿಣಾಮ, ಸಂಸತ್ತಿನ ಬಗ್ಗೆ ಸಾರ್ವಜನಿಕ ತಿಳಿವಳಿಕೆಯನ್ನು ಹೆಚ್ಚಿಸಲು ನವೀನ ತಂತ್ರಗಳ ಬಳಕೆ ಮತ್ತು ಮತದಾನವನ್ನು ಮೀರಿ ನಾಗರಿಕರ ಪಾಲ್ಗೊಳ್ಳುವಿಕೆ ಸೇರಿದಂತೆ ಮತ್ತಿತರ ಅಂಶಗಳು ಸೇರಿವೆ.

 

*****


(रिलीज़ आईडी: 2214875) आगंतुक पटल : 18
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Assamese , Gujarati , Odia , Tamil , Telugu , Malayalam