ಉಪರಾಷ್ಟ್ರಪತಿಗಳ ಕಾರ್ಯಾಲಯ
ದೆಹಲಿ ವಿಶ್ವವಿದ್ಯಾಲಯದಲ್ಲಿ ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ಅಭಿಯಾನ ಉದ್ಘಾಟಿಸಿದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್
ರಾಷ್ಟ್ರವ್ಯಾಪಿ ಮಾದಕ ದ್ರವ್ಯ ಮುಕ್ತ ಕ್ಯಾಂಪಸ್‌ಗಳಿಗೆ ಉಪರಾಷ್ಟ್ರಪತಿ ಕರೆ
ವ್ಯಸನಕ್ಕಿಂತ ವ್ಯಕ್ತಿತ್ವವನ್ನು ಆರಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಉಪರಾಷ್ಟ್ರಪತಿ ಆಗ್ರಹ
ಮಾದಕ ದ್ರವ್ಯ ಮುಕ್ತ ಕ್ಯಾಂಪಸ್‌ಗಳಿಗಾಗಿ ಇ-ಪ್ರತಿಜ್ಞೆ ವೇದಿಕೆ ಮತ್ತು ಮೊಬೈಲ್ ಅಪ್ಲಿಕೇಶನ್ ಗೆ ಚಾಲನೆ ನೀಡಿದ ಉಪರಾಷ್ಟ್ರಪತಿ
प्रविष्टि तिथि:
13 JAN 2026 1:52PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿಂದು ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ಅಭಿಯಾನವನ್ನು ಉದ್ಘಾಟಿಸಿದರು. ಮಾದಕ ದ್ರವ್ಯಗಳ ಸೇವನೆಯಿಂದ ಯುವಕರನ್ನು ರಕ್ಷಿಸಲು ಮತ್ತು ವಿಕಸಿತ ಮತ್ತು ಆತ್ಮನಿರ್ಭರ ಭಾರತದ ದೂರದೃಷ್ಟಿಯ ಸಾಕಾರಕ್ಕೆ ನಿರಂತರ ಮತ್ತು ಸಾಮೂಹಿಕ ಪ್ರಯತ್ನಗಳ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.
ಬಲಿಷ್ಠ ರಾಷ್ಟ್ರಗಳಿಗೆ ಬಲಿಷ್ಠ ನಾಯಕತ್ವದ ಅಗತ್ಯವಿದೆ ಎಂದು ಒತ್ತಿ ಹೇಳಿದ ಉಪರಾಷ್ಟ್ರಪತಿಯವರು, ವಿಶ್ವವಿದ್ಯಾಲಯಗಳು ಕೇವಲ ಶೈಕ್ಷಣಿಕ ಕಲಿಕೆಯ ಕೇಂದ್ರಗಳಲ್ಲ, ಬದಲಿಗೆ ಮೌಲ್ಯಗಳನ್ನು ರೂಪಿಸುವ, ನಾಯಕತ್ವವನ್ನು ಪೋಷಿಸುವ ಮತ್ತು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಸಂಸ್ಥೆಗಳಾಗಿವೆ ಎಂದು ಹೇಳಿದರು. ದೆಹಲಿ ವಿಶ್ವವಿದ್ಯಾಲಯದಂತಹ ಪ್ರಮುಖ ಸಂಸ್ಥೆಯು ಮಾದಕ ದ್ರವ್ಯ ದುರುಪಯೋಗದ ವಿರುದ್ಧ ದೃಢವಾದ ನಿಲುವನ್ನು ಕೈಗೊಂಡಾಗ ಅದು ಒಟ್ಟಾರೆಯಾಗಿ ಸಮಾಜಕ್ಕೆ ಪ್ರಬಲ ಸಂದೇಶವನ್ನು ರವಾನಿಸುತ್ತದೆ ಎಂದು ಅವರು ಉಲ್ಲೇಖಿಸಿದರು.
ನಶ ಮುಕ್ತ ಪರಿಸರ ಅಭಿಯಾನದ ಅಡಿಯಲ್ಲಿ ಉಪರಾಷ್ಟ್ರಪತಿ ಅವರು ನಿರ್ದಿಷ್ಟ ಇ-ಪ್ರತಿಜ್ಞಾ ವೇದಿಕೆ (https://pledge.du.ac.in/home) ಮತ್ತು ಮೊಬೈಲ್ ಅಪ್ಲಿಕೇಶನ್ ಗೆ ಚಾಲನೆ ನೀಡಿದರು ಮತ್ತು ದೇಶಾದ್ಯಂತದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಮಾದಕ ದ್ರವ್ಯ ಮುಕ್ತ ಕ್ಯಾಂಪಸ್‌ಗಾಗಿ ಪ್ರತಿಜ್ಞೆ ಕೈಗೊಳ್ಳುವಂತೆ ಕರೆ ನೀಡಿದರು. ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ಅಭಿಯಾನವು ಎಲ್ಲಾ ಕೇಂದ್ರ ಉನ್ನತ ಶಿಕ್ಷಣ ಸಂಸ್ಥೆಗಳ ಅವಿಭಾಜ್ಯ ಅಂಗವಾಗುವಂತೆ ನೋಡಿಕೊಳ್ಳುವಂತೆ ಅವರು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರಿಗೆ ಕರೆ ನೀಡಿದರು.
ಭಾರತವು ಯುವ ಜನಾಂಗದ ರಾಷ್ಟ್ರವಾಗಿದೆ ಎಂದು ಒತ್ತಿ ಹೇಳಿದ ಉಪರಾಷ್ಟ್ರಪತಿ, ಮಾದಕ ದ್ರವ್ಯ ದುರುಪಯೋಗವು ಕೇವಲ ವೈಯಕ್ತಿಕ ಸಮಸ್ಯೆಯಲ್ಲ, ಗಂಭೀರ ಸಾಮಾಜಿಕ ಸವಾಲು, ಸಾರ್ವಜನಿಕ ಆರೋಗ್ಯ ಕಾಳಜಿ ಮತ್ತು ದೇಶದ ಜನಸಂಖ್ಯಾ ಲಾಭಾಂಶಕ್ಕೆ ಅಪಾಯ ಎಂದು ಬಣ್ಣಿಸಿದರು. ಮಾದಕ ದ್ರವ್ಯ ಸೇವನೆಯು ದೈಹಿಕ ಮತ್ತು ಮಾನಸಿಕ ಆರೋಗ್ಯ, ಶೈಕ್ಷಣಿಕ ಕಾರ್ಯಕ್ಷಮತೆ, ಕುಟುಂಬ ಸಾಮರಸ್ಯ, ಉತ್ಪಾದಕತೆ ಮತ್ತು ರಾಷ್ಟ್ರೀಯ ಭದ್ರತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಇದರಲ್ಲಿ ಮಾದಕ ದ್ರವ್ಯ-ಭಯೋತ್ಪಾದನೆಯೊಂದಿಗಿನ ಸಂಪರ್ಕವೂ ಸೇರಿದೆ ಎಂದು ಅವರು ಉಲ್ಲೇಖಿಸಿದರು.
ಯುವಜನರು ಆರೋಗ್ಯವಾಗಿ, ಮಾದಕ ದ್ರವ್ಯ ಮುಕ್ತರಾಗಿ ಮತ್ತು ಉದ್ದೇಶವಿಟ್ಟುಕೊಂಡು ಜೀವನ ಸಾಗಿಸದಾದ ಮಾತ್ರ ಅಭಿವೃದ್ಧಿ ಹೊಂದಿದ ಮತ್ತು ಸ್ವಾವಲಂಬಿ ಭಾರತದ ದೂರದೃಷ್ಟಿಯನ್ನು ಸಾಕಾರಗೊಳಿಸಬಹುದು ಎಂದು ಉಪರಾಷ್ಟ್ರಪತಿ ಹೇಳಿದರು. ಮಾದಕ ದ್ರವ್ಯ ಮುಕ್ತ ಯುವಕರು ಕೌಶಲ್ಯಗಳನ್ನು ಪಡೆಯಲು, ಉದ್ಯಮಶೀಲತೆಯನ್ನು ಉತ್ತೇಜಿಸಲು ಮತ್ತು ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಉತ್ತಮವಾಗಿ ಸಜ್ಜಾಗಿರುತ್ತಾರೆ ಎಂದು ತಿಳಿಸಿದರು.
ಶಿಕ್ಷಣ ಮತ್ತು ಸಂಸ್ಕೃತಿಯ ಪಾತ್ರವನ್ನು ಒತ್ತಿ ಹೇಳಿದ ಉಪರಾಷ್ಟ್ರಪತಿ ಅವರು, ಭಾರತದ ಪ್ರಾಚೀನ ಸಂಪ್ರದಾಯಗಳು ಸ್ವಯಂ ಶಿಸ್ತು, ಮಾನಸಿಕ ಸಮತೋಲನ ಮತ್ತು ಮನಸ್ಸು ಮತ್ತು ದೇಹದ ಶುದ್ಧತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತವೆ ಎಂದು ಹೇಳಿದರು. ಧ್ಯಾನ ಮತ್ತು ಯೋಗವನ್ನು ಉತ್ತೇಜಿಸಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಪ್ರಯತ್ನಗಳಲ್ಲಿ ಈ ನೀತಿಯು ಪ್ರತಿಫಲಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ಸಂಶೋಧನೆ, ನಾವೀನ್ಯತೆ, ಸ್ವಯಂಸೇವೆ ಮತ್ತು ರಾಷ್ಟ್ರ ನಿರ್ಮಾಣದೆಡೆಗೆ ಯುವ ಜನಾಂಗದ ಶಕ್ತಿಯನ್ನು ಹರಿಸಲು ಮೈ ಭಾರತ್ ಪೋರ್ಟಲ್ ಮತ್ತು ಪಿಎಂ ಅನುಸಂಧಾನ ಯೋಜನೆಯಂತಹ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉಪರಾಷ್ಟ್ರಪತಿ ಪ್ರಮುಖವಾಗಿ ಪ್ರಸ್ತಾಪಿಸಿದರು.
ಮಾನಸಿಕ ಆರೋಗ್ಯ, ಜೀವನ ಕೌಶಲ್ಯ ಮತ್ತು ವಿದ್ಯಾರ್ಥಿಗಳ ಯೋಗಕ್ಷೇಮಕ್ಕೆ ಒತ್ತು ನೀಡುವ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ 2020 ಈ ಸಮಗ್ರ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ ಎಂದು ಉಪರಾಷ್ಟ್ರಪತಿಗಳು ಉಲ್ಲೇಖಿಸಿದರು. ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ಅಭಿಯಾನದಂತಹ ಉಪಕ್ರಮಗಳು ಸುರಕ್ಷಿತ, ಎಲ್ಲರನ್ನೂ ಒಳಗೊಳ್ಳುವ ಮತ್ತು ಪೋಷಿಸುವ ಕಲಿಕಾ ವಾತಾವರಣವನ್ನು ಸೃಷ್ಟಿಸುವ ಮೂಲಕ ನೀತಿಯ ಚೈತನ್ಯದೊಂದಿಗೆ ಪ್ರತಿಧ್ವನಿಸುತ್ತವೆ ಎಂದು ಅವರು ಹೇಳಿದರು.
ಜಾಗೃತಿ ಕಾರ್ಯಕ್ರಮಗಳು, ಸಮಾಲೋಚನೆ ಕಾರ್ಯವಿಧಾನಗಳು, ವಿದ್ಯಾರ್ಥಿ ನೇತೃತ್ವದ ಉಪಕ್ರಮಗಳು ಮತ್ತು ಪಾಲುದಾರರ ಸಹಯೋಗವನ್ನು ಸಂಯೋಜಿಸಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ ವಿದ್ಯಾರ್ಥಿಗಳು ಬದಲಾವಣೆಯ ರಾಯಭಾರಿಗಳಾದಾಗ, ಅದರ ಪರಿಣಾಮವು ಕ್ಯಾಂಪಸ್‌ಗಳನ್ನು ಮೀರಿ ಕುಟುಂಬಗಳು ಮತ್ತು ಸಮುದಾಯಗಳಿಗೂ ವಿಸ್ತರಿಸುತ್ತದೆ ಎಂದು ಹೇಳಿದರು. ವಿದ್ಯಾರ್ಥಿಗಳು ಜಾಗರೂಕರಾಗಿರಲು ಸಂಕಷ್ಟದಲ್ಲಿರುವ ಗೆಳೆಯರನ್ನು ಬೆಂಬಲಿಸಲು, ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಮಾತನಾಡಲು ಮತ್ತು ಮಾದರಿಯ ಮೂಲಕ ಮುನ್ನಡೆಸುವಂತೆ ಅವರು ಕರೆ ನೀಡಿದರು.
ದೆಹಲಿ ವಿಶ್ವವಿದ್ಯಾಲಯವು ಮಾದರಿ ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ಆಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಉಪರಾಷ್ಟ್ರಪತಿ, ಆರೋಗ್ಯಕರ, ಬಲಿಷ್ಠ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರದ ಗುರಿಯನ್ನು ಸಾಧಿಸಲು ನಶ ಮುಕ್ತ ಭಾರತ ಅತ್ಯಗತ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್, ದೆಹಲಿ ಶಿಕ್ಷಣ ಸಚಿವರಾದ ಶ್ರೀ ಆಶಿಶ್ ಸೂದ್, ದೆಹಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಯೋಗೇಶ್ ಸಿಂಗ್, ಹಿರಿಯ ಅಧಿಕಾರಿಗಳು, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
*****
(रिलीज़ आईडी: 2214110)
आगंतुक पटल : 5