ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಆಧಾರ್ ಗೆ ಸಿಕ್ಕಿತು ಹೊಸ ಮುಖ: UIDAI ನಿಂದ ಆಧಾರ್ ಮ್ಯಾಸ್ಕಾಟ್ ‘ಉದಯ್’ (Udai) ಬಿಡುಗಡೆ


ಆಧಾರ್ ಸೇವೆಗಳ ಬಗ್ಗೆ ಸಾರ್ವಜನಿಕರ ತಿಳುವಳಿಕೆಯನ್ನು ಸರಳಗೊಳಿಸಲು, ನಾಗರಿಕರೊಂದಿಗೆ ಸಂವಹನ ನಡೆಸುವ ಒಡನಾಡಿಯಾಗಿ ಮ್ಯಾಸ್ಕಾಟ್ ನ್ನು ರೂಪಿಸಲಾಗಿದೆ

MyGov ಪ್ಲಾಟ್ ಫಾರ್ಮ್ ನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯ ನಂತರ ‘ಉದಯ್’ (Udai) ಅನ್ನು ಆಯ್ಕೆ ಮಾಡಲಾಗಿದ್ದು, 875 ಎಂಟ್ರಿಗಳಲ್ಲಿ ಕೇರಳದ ಅರುಣ್ ಗೋಕುಲ್ ವಿಜೇತರಾಗಿದ್ದಾರೆ ಎಂದು ಘೋಷಿಸಲಾಗಿದೆ

प्रविष्टि तिथि: 08 JAN 2026 3:06PM by PIB Bengaluru

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಇಂದು 'ಆಧಾರ್ ಮ್ಯಾಸ್ಕಾಟ್' ಅನ್ನು ಬಿಡುಗಡೆ ಮಾಡಿದೆ. ಆಧಾರ್ ಸೇವೆಗಳ ಕುರಿತು ಸಾರ್ವಜನಿಕರ ತಿಳುವಳಿಕೆಯನ್ನು ಸರಳಗೊಳಿಸಲು ಮತ್ತು ನಿವಾಸಿಗಳಿಗೆ ಸಂವಹನ ಒಡನಾಡಿಯಾಗಿ ಇದನ್ನು ಪರಿಚಯಿಸಲಾಗಿದೆ. 'ಉದಯ್' (Udai) ಎಂದು ಹೆಸರಿಸಲಾದ ಈ ಆಧಾರ್ ಮ್ಯಾಸ್ಕಾಟ್, ಆಧಾರ್ ಸಂಬಂಧಿತ ಮಾಹಿತಿಯನ್ನು ಜನರಿಗೆ ಹೆಚ್ಚು ಹತ್ತಿರವಾಗುವಂತೆ ಮತ್ತು ಜನಸ್ನೇಹಿಯಾಗಿ ತಲುಪಿಸಲು ಸಹಕಾರಿಯಾಗಲಿದೆ. ಆಧಾರ್ ನವೀಕರಣಗಳು , ದೃಢೀಕರಣ, ಆಫ್ಲೈನ್ ಪರಿಶೀಲನೆ, ಮಾಹಿತಿಯ ಆಯ್ದ ಹಂಚಿಕೆ, ಹೊಸ ತಂತ್ರಜ್ಞಾನದ ಅಳವಡಿಕೆ ಹಾಗೂ ಜವಾಬ್ದಾರಿಯುತ ಬಳಕೆ ಸೇರಿದಂತೆ ಹಲವು ಆಧಾರ್ ಸೇವೆಗಳ ಬಗ್ಗೆ ಇದು ಸರಳವಾಗಿ ಮಾಹಿತಿ ನೀಡಲಿದೆ.

ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು  MyGov ಪ್ಲಾಟ್ ಫಾರ್ಮ್ ನಲ್ಲಿ ರಾಷ್ಟ್ರಮಟ್ಟದ ವಿನ್ಯಾಸ ಮತ್ತು ಹೆಸರುಗಳ ಸ್ಪರ್ಧೆಯನ್ನು ಎಲ್ಲರಿಗಾಗಿ ಆಯೋಜಿಸಿತು. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಯಿತು. ದೇಶಾದ್ಯಂತ ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ವಿನ್ಯಾಸಕರಿಂದ ಒಟ್ಟು 875 ಪ್ರವೇಶಗಳು ಬಂದವು; ಇವು ಆಧಾರ್ ತಮಗೆ ಏನನ್ನು ಪ್ರತಿನಿಧಿಸುತ್ತದೆ ಎಂಬ ಬಗ್ಗೆ ವಿಶಿಷ್ಟವಾದ ಕಲ್ಪನೆಯನ್ನು ನೀಡಿದ್ದವು. ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳಲು ಹಲವು ಹಂತಗಳ ಮೌಲ್ಯಮಾಪನ ಪ್ರಕ್ರಿಯೆಯನ್ನು ನಡೆಸಲಾಯಿತು. ಈ ಸುದೀರ್ಘ ಪ್ರಯತ್ನದ ಫಲವಾಗಿ ಮೂಡಿಬಂದ ಸುಂದರ ಸೃಜನೆಯೇ ಈ ‘ಮ್ಯಾಸ್ಕಾಟ್'; ಇದು ಸಾರ್ವಜನಿಕರ ಕಲ್ಪನೆಯಿಂದ ರೂಪುಗೊಂಡಿದೆ ಮತ್ತು ಸಾಂಸ್ಥಿಕ ಶ್ರದ್ಧೆಯ ಮೂಲಕ ಅಂತಿಮ ರೂಪ ಪಡೆದಿದೆ.

ಕೇರಳದ ತ್ರಿಶೂರ್ ನ ಅರುಣ್ ಗೋಕುಲ್ ಮ್ಯಾಸ್ಕಾಟ್ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರೆ, ಮಹಾರಾಷ್ಟ್ರದ ಪುಣೆಯ ಇದ್ರಿಸ್ ದವೈವಾಲಾ ಮತ್ತು ಉತ್ತರ ಪ್ರದೇಶದ ಗಾಜಿಪುರದ ಕೃಷ್ಣ ಶರ್ಮಾ ಅವರು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಬಹುಮಾನ ವಿಜೇತರಾದರು.

ಮ್ಯಾಸ್ಕಾಟ್ ಹೆಸರಿಸುವ ಸ್ಪರ್ಧೆಯಲ್ಲಿ ಭೋಪಾಲ್ ನ ರಿಯಾ ಜೈನ್ ಪ್ರಥಮ ಬಹುಮಾನ ಪಡೆದರು, ಪುಣೆಯ ಇದ್ರಿಸ್ ದವೈವಾಲಾ ಮತ್ತು ಹೈದರಾಬಾದ್ ನ ಮಹಾರಾಜ್ ಸರಣ್ ಚೆಲ್ಲಪಿಳ್ಳ ಅವರು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಗಳನ್ನು ಪಡೆದರು.

ತಿರುವನಂತಪುರದಲ್ಲಿ ನಡೆದ ಯುಐಡಿಎಐ ವಿಶೇಷ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ನೀಲಕಂಠ ಮಿಶ್ರಾ ಅವರು ಆಧಾರ್ ನ ನೂತನ ಮ್ಯಾಸ್ಕಾಟ್ ಅನ್ನು ಅನಾವರಣಗೊಳಿಸಿದರು ಹಾಗೂ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಭಾರತದ ಶತಕೋಟಿ ಜನರಿಗೆ ಆಧಾರ್ ಕುರಿತಾದ ಮಾಹಿತಿಯನ್ನು ಇನ್ನಷ್ಟು ಸರಳವಾಗಿ, ಎಲ್ಲರಿಗೂ ಅರ್ಥವಾಗುವಂತೆ ಹಾಗೂ ಜನಸ್ನೇಹಿಯಾಗಿ ತಲುಪಿಸುವ ನಿಟ್ಟಿನಲ್ಲಿ ಈ ಮ್ಯಾಸ್ಕಾಟ್ ಬಿಡುಗಡೆಯು ಅತ್ಯಂತ ಪ್ರಮುಖ ಹೆಜ್ಜೆಯಾಗಿದೆ," ಎಂದು ತಿಳಿಸಿದರು.

ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಭುವನೇಶ್ ಕುಮಾರ್ ಮಾತನಾಡಿ, "ಮುಕ್ತ ರಾಷ್ಟ್ರೀಯ ಸ್ಪರ್ಧೆಯ ಮೂಲಕ ಈ ಮ್ಯಾಸ್ಕಾಟ್ ಅನ್ನು ವಿನ್ಯಾಸಗೊಳಿಸಿ, ಹೆಸರಿಟ್ಟಿರುವುದು ಆಧಾರ್ ನ ಮೂಲ ತತ್ವವಾದ 'ಜನರ ಭಾಗವಹಿಸುವಿಕೆ'ಯನ್ನು ಎತ್ತಿಹಿಡಿದಿದೆ. ಸಾರ್ವಜನಿಕರಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆಯು, ಜನರು ಆಧಾರ್ ಅನ್ನು ತಮ್ಮದೇ ಆದ ಸಾರ್ವಜನಿಕ ಆಸ್ತಿಯೆಂದು ಎಷ್ಟು ಆಪ್ತವಾಗಿ ಭಾವಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ," ಎಂದರು.

ಸಂಸ್ಥೆಯ ಉಪ ಮಹಾನಿರ್ದೇಶಕರಾದ ಶ್ರೀ ವಿವೇಕ್ ಸಿ. ವರ್ಮಾ ಅವರು ಮಾತನಾಡಿ, "ಈ ಮ್ಯಾಸ್ಕಾಟ್ ಇನ್ನು ಮುಂದೆ ಆಧಾರ್ ನ ಅಧಿಕೃತ ನಿರೂಪಕ ಹಾಗೂ ಒಡನಾಡಿಯಾಗಿ ಕೆಲಸ ಮಾಡಲಿದೆ. ಇದು ನಿವಾಸಿಗಳಿಗೆ ಆಧಾರ್ ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಲು ಮತ್ತು ಅದರೊಂದಿಗೆ ಉತ್ತಮ ಸಂಪರ್ಕ ಹೊಂದಲು ಸಹಕಾರಿಯಾಗಲಿದೆ," ಎಂದು ಹೇಳಿದರು.

 

*****


(रिलीज़ आईडी: 2212529) आगंतुक पटल : 116
इस विज्ञप्ति को इन भाषाओं में पढ़ें: English , Urdu , हिन्दी , Marathi , Bengali , Bengali-TR , Punjabi , Gujarati , Tamil , Telugu , Malayalam