ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ದಿನಾಂಕ 28.12.2025 ರಂದು ಮಾಡಿದ ‘ಮನ್ ಕಿ ಬಾತ್’ 129ನೇ ಸಂಚಿಕೆಯ ಕನ್ನಡ ಅವತರಣಿಕೆ
प्रविष्टि तिथि:
28 DEC 2025 11:47AM by PIB Bengaluru
ನನ್ನ ಪ್ರಿಯ ದೇಶವಾಸಿಗಳೇ,
ನಮಸ್ಕಾರ. ‘ಮನದ ಮಾತಿಗೆ’ ಮತ್ತೆ ಸ್ವಾಗತ, ಅಭಿನಂದನೆಗಳು. ಇನ್ನೇನು ಕೆಲವೇ ದಿನಗಳಲ್ಲಿ 2026 ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದ್ದೇವೆ ಮತ್ತು ಇಂದು, ನಾನು ನಿಮ್ಮೊಂದಿಗೆ ಮಾತನಾಡುತ್ತಿರುವಾಗ, ಇಡೀ ವರ್ಷದ ನೆನಪುಗಳು - ಅನೇಕ ಚಿತ್ರಗಳು, ಅನೇಕ ಚರ್ಚೆಗಳು, ರಾಷ್ಟ್ರವನ್ನು ಒಟ್ಟುಗೂಡಿಸಿದ ಅನೇಕ ಸಾಧನೆಗಳು ನನ್ನ ಮನಸ್ಸಿನಲ್ಲಿ ಸುಳಿದಾಡುತ್ತಿವೆ. 2025 ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಪಡುವಂತೆ ಮಾಡಿದ ಅನೇಕ ಕ್ಷಣಗಳನ್ನು ನಮಗೆ ನೀಡಿದೆ. ರಾಷ್ಟ್ರೀಯ ಭದ್ರತೆಯಿಂದ ಕ್ರೀಡಾ ಕ್ಷೇತ್ರಗಳವರೆಗೆ, ವಿಜ್ಞಾನ ಪ್ರಯೋಗಾಲಯಗಳಿಂದ ವಿಶ್ವದ ಅತಿದೊಡ್ಡ ವೇದಿಕೆಗಳವರೆಗೆ, ಭಾರತವು ಎಲ್ಲೆಡೆ ಗಾಢವಾದ ಛಾಪನ್ನು ಅಚ್ಚೊತ್ತಿದೆ. ಈ ವರ್ಷದಲ್ಲಿ ಕೈಗೊಂಡ , ‘ಆಪರೇಷನ್ ಸಿಂಧೂರ್’ ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಸಂಕೇತವಾಯಿತು. ಇಂದು ಭಾರತ ತನ್ನ ಭದ್ರತೆಯ ಬಗ್ಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಜಗತ್ತಿಗೆ ಸ್ಪಷ್ಟವಾಗಿದೆ. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ, ಭಾರತ ಮಾತೆಯ ಬಗೆಗಿರುವ ಪ್ರೀತಿ ಮತ್ತು ಗೌರವ ಸಾರುವ ಬಹಳಷ್ಟು ಚಿತ್ರಗಳು ದೇಶದ ಮೂಲೆ ಮೂಲೆಯಿಂದ ಹರಿದು ಬಂದವು. ಜನರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.
ಸ್ನೇಹಿತರೇ,
'ವಂದೇ ಮಾತರಂ' 150 ವರ್ಷಗಳನ್ನು ಪೂರೈಸಿದಾಗಲೂ ಇದೇ ಮನೋಭಾವ ಕಂಡುಬಂದಿತ್ತು. '#ವಂದೇ ಮಾತರಂ150' ನೊಂದಿಗೆ ನಿಮ್ಮ ಸಂದೇಶಗಳು ಮತ್ತು ಸಲಹೆಗಳನ್ನು ಕಳುಹಿಸಲು ನಾನು ವಿನಂತಿಸಿದ್ದೆ. ದೇಶವಾಸಿಗಳು ಈ ಅಭಿಯಾನದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ಸ್ನೇಹಿತರೇ,
2025 ಕ್ರೀಡಾ ದೃಷ್ಟಿಯಿಂದಲೂ ಸ್ಮರಣೀಯ ವರ್ಷವಾಗಿತ್ತು. ನಮ್ಮ ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದಿತು. ಮಹಿಳಾ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ತವರಿಗೆ ತಂದಿತು. ಭಾರತದ ಹೆಣ್ಣುಮಕ್ಕಳು Women's Blind T20 World Cup ಗೆಲ್ಲುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದರು. ಏಷ್ಯಾ ಕಪ್ ಟಿ 20 ಯಲ್ಲಿಯೂ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಲಾಯಿತು. ಪ್ಯಾರಾ-ಅಥ್ಲೀಟ್‌ಗಳು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬಹಳಷ್ಟು ಪದಕಗಳನ್ನು ಗೆಲ್ಲುವ ಮೂಲಕ, ಯಾವುದೇ ಅಡೆತಡೆಗಳು ಧೈರ್ಯ ಸಾಹಸಕ್ಕೆ ತಡೆಗೋಡೆಯಾಗಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಿದರು. ಭಾರತವು ವಿಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಗಣನೀಯ ಸಾಡನೆ ಮಾಡಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಮೊದಲ ಭಾರತೀಯರಾಗಿ ಶುಭಾಂಶು ಶುಕ್ಲಾ ಹೊರಹೊಮ್ಮಿದರು. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಗೆ ಸಂಬಂಧಿಸಿದ ಅನೇಕ ಪ್ರಯತ್ನಗಳು ಸಹ 2025 ರ ವಿಶಿಷ್ಟ ಹೆಗ್ಗುರುತುಗಳಾಗಿವೆ. ಭಾರತದಲ್ಲಿ ಚಿರತೆಗಳ ಸಂಖ್ಯೆ ಈಗ 30 ಕ್ಕಿಂತ ಹೆಚ್ಚಾಗಿದೆ. 2025 ರಲ್ಲಿ ಜನರ ನಂಬಿಕೆ, ಭಾರತದ ಸಂಸ್ಕೃತಿ ಮತ್ತು ವಿಶಿಷ್ಟ ಪರಂಪರೆ ಎಲ್ಲವೂ ಒಗ್ಗೂಡಿದವು. ವರ್ಷಾರಂಭದ ಪ್ರಯಾಗರಾಜ್ ಮಹಾಕುಂಭದ ಆಯೋಜನೆ ಇಡೀ ಜಗತ್ತನ್ನು ಬೆರಗುಗೊಳಿಸಿತು. ವರ್ಷದ ಕೊನೆಯಲ್ಲಿ, ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ಧ್ವಜಾರೋಹಣ ಸಮಾರಂಭವು ಪ್ರತಿಯೊಬ್ಬ ಭಾರತೀಯನನ್ನೂ ಹೆಮ್ಮೆಯಿಂದ ಬೀಗುವಂತೆ ಮಾಡಿತು. ಸ್ವದೇಶಿ ಬಗ್ಗೆ ಜನರ ಉತ್ಸಾಹವೂ ಸ್ಪಷ್ಟವಾಗಿತ್ತು. ಭಾರತದ ಮಣ್ಣಿನ ಪರಿಮಳ ಸೂಸುವ ಮತ್ತು ಭಾರತೀಯರ ಶ್ರಮದಿಂದ ಸಿಧ್ಧವಾದ ವಸ್ತುಗಳನ್ನು ಮಾತ್ರ ಜನರು ಖರೀದಿಸುತ್ತಿದ್ದಾರೆ. 2025 ಭಾರತಕ್ಕೆ ಅಪಾರ ಆತ್ಮವಿಶ್ವಾಸವನ್ನು ತಂದಿ ಕೊಟ್ಟಿದೆ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಈ ವರ್ಷ ಅನೇಕ ಕ್ಷೇತ್ರಗಳಲ್ಲಿ ನಾವು ನೈಸರ್ಗಿಕ ವಿಕೋಪಗಳನ್ನು ಎದುರಿಸಬೇಕಾಯಿತು ಎಂಬುದು ನಿಜ. ಆದರೆ ಈಗ ದೇಶವು 2026 ರಲ್ಲಿ ಹೊಸ ಭರವಸೆಗಳು ಮತ್ತು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಲು ಸಿದ್ಧವಾಗಿದೆ.
ನನ್ನ ಪ್ರಿಯ ದೇಶವಾಸಿಗಳೇ,
ಇಂದು ಜಗತ್ತು ಬಹಳ ಭರವಸೆಯಿಂದ ಭಾರತದತ್ತ ನೋಡುತ್ತಿದೆ. ನಮ್ಮ ಯುವ ಶಕ್ತಿ ಭಾರತದ ಈ ಭರವಸೆಯ ದೊಡ್ಡ ಕಾರಣವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ಸಾಧನೆಗಳು, ಹೊಸ ಆವಿಷ್ಕಾರಗಳು, ತಂತ್ರಜ್ಞಾನದ ವಿಸ್ತರಣೆ ಪ್ರಪಂಚದಾದ್ಯಂತದ ದೇಶಗಳನ್ನು ಪ್ರಭಾವಿತಗೊಳಿಸಿವೆ.
ಸ್ನೇಹಿತರೇ,
ಭಾರತದ ಯುವಕರಲ್ಲಿ ಹೊಸತನ್ನು ಮಾಡುವ ಉತ್ಸಾಹ ಯಾವಾಗಲೂ ತುಡಿಯುತ್ತಿರುತ್ತದೆ ಮತ್ತು ಅವರು ಅಷ್ಟೇ ಜಾಗೃತರೂ ಆಗಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆಯನ್ನು ಹೇಗೆ ಹೆಚ್ಚಿಸಬಹುದು? ತಮ್ಮ ಆಲೋಚನೆಗಳನ್ನು ಹೇಗೆ ಹಂಚಿಕೊಳ್ಳಬಹುದು? ಎಂದು ನನ್ನ ಯುವ ಸ್ನೇಹಿತರು ಆಗಾಗ್ಗೆ ಕೇಳುತ್ತಿರುತ್ತಾರೆ? ಅನೇಕ ಸ್ನೇಹಿತರು ತಮ್ಮ ಆಲೋಚನೆಗಳನ್ನು ನನ್ನ ಮುಂದೆ ಹೇಗೆ ಪ್ರಸ್ತುತಪಡಿಸಬಹುದು ಎಂದು ಕೂಡಾ ಕೇಳುತ್ತಾರೆ. ನಮ್ಮ ಯುವ ಸ್ನೇಹಿತರ ಈ ಕುತೂಹಲಕ್ಕೆ 'ವಿಕಸಿತ್ ಭಾರತ್ ಯುವ ನಾಯಕರ ಸಂವಾದ' ವೇದಿಕೆಯಾಗಿದೆ. ಇದರ ಮೊದಲ ಆವೃತ್ತಿ ಕಳೆದ ವರ್ಷ ನಡೆಯಿತು ಮತ್ತು ಅದರ ಎರಡನೇ ಆವೃತ್ತಿಯನ್ನು ಕೆಲವು ದಿನಗಳ ನಂತರ ನಡೆಸಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳು 12 ರಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುವುದು. ಅದೇ ದಿನ "ಯುವ ನಾಯಕರ ಸಂವಾದ" ಕೂಡ ನಡೆಯಲಿದೆ ಮತ್ತು ಖಂಡಿತವಾಗಿಯೂ ನಾನು ಭಾಗವಹಿಸುತ್ತೇನೆ. ನಾವೀನ್ಯತೆ, ಫಿಟ್‌ನೆಸ್, ಸ್ಟಾರ್ಟ್‌ಅಪ್‌ಗಳು ಮತ್ತು ಕೃಷಿಯಂತಹ ಪ್ರಮುಖ ವಿಷಯಗಳ ಕುರಿತು ನಮ್ಮ ಯುವಕರು ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಕುರಿತು ನಾನು ತುಂಬಾ ಉತ್ಸುಕನಾಗಿದ್ದೇನೆ.
ಸ್ನೇಹಿತರೇ,
ಈ ಕಾರ್ಯಕ್ರಮದಲ್ಲಿ ನಮ್ಮ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದನ್ನು ಕಂಡು ನನಗೆ ಸಂತೋಷವಾಗಿದೆ. ಕೆಲವು ದಿನಗಳ ಹಿಂದೆ ಇದಕ್ಕೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. 5೦ ಲಕ್ಷಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆಯನ್ನು ಸಹ ನಡೆಸಲಾಯಿತು, ಇದರಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಈ ಸ್ಪರ್ಧೆಯಲ್ಲಿ ತಮಿಳುನಾಡು ಪ್ರಥಮ ಮತ್ತು ಉತ್ತರ ಪ್ರದೇಶ ಎರಡನೇ ಸ್ಥಾನ ಪಡೆದವು.
ಸ್ನೇಹಿತರೇ,
ಇಂದು, ದೇಶಾದ್ಯಂತ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಯುವಕರಿಗೆ ಹೊಸ ಹೊಸ ಅವಕಾಶಗಳು ಲಭಿಸುತ್ತಿವೆ. ಯುವಕರು ತಮ್ಮ ಸಾಮರ್ಥ್ಯ ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ಪ್ರತಿಭೆಯನ್ನು ಪ್ರದರ್ಶಿಸಬಹುದಾದ ಅನೇಕ ವೇದಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ‘Smart India Hackathon’ ಅಂತಹ ಒಂದು ವೇದಿಕೆಯಾಗಿದೆ. ಇದು ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವ ಮತ್ತೊಂದು ಮಾಧ್ಯಮವಾಗಿದೆ.
ಸ್ನೇಹಿತರೇ,
'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ 2025' ಇದೇ ತಿಂಗಳು ಮುಕ್ತಾಯವಾಯಿತು. ಈ ಹ್ಯಾಕಥಾನ್ ಸಮಯದಲ್ಲಿ, 80 ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳ 270 ಕ್ಕೂ ಹೆಚ್ಚು ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಪರಿಹಾರ ಸೂಚಿಸಿದ್ದಾರೆ. ನಿಜ ಜೀವನದ ಸವಾಲುಗಳಿಗೆ ವಿದ್ಯಾರ್ಥಿಗಳು ಪರಿಹಾರಗಳನ್ನು ಒದಗಿಸಿದರು. ಉದಾಹರಣೆಗೆ ಸಂಚಾರ ಸಮಸ್ಯೆ. ಈ ನಿಟ್ಟಿನಲ್ಲಿ, ಯುವಕರು 'ಸ್ಮಾರ್ಟ್ ಟ್ರಾಫಿಕ್ ನಿರ್ವಹಣೆ' ಗೆ ಸಂಬಂಧಿಸಿದ ಆಸಕ್ತಿದಾಯಕ ದೃಷ್ಟಿಕೋನಗಳನ್ನು ಹಂಚಿಕೊಂಡರು. ಆರ್ಥಿಕ ವಂಚನೆಗಳು ಮತ್ತು ಡಿಜಿಟಲ್ ಬಂಧನಗಳಂತಹ ಸವಾಲುಗಳಿಗೆ ಪರಿಹಾರ ರೂಪದಲ್ಲಿ ತಮ್ಮ ಆಲೋಚನೆಗಳನ್ನು ಮಂಡಿಸಿದರು. ಗ್ರಾಮಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್‌ಗಾಗಿ Cyber Security Framework ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಕೃಷಿ ವಲಯದಲ್ಲಿನ ಸವಾಲುಗಳಿಗೆ ಪರಿಹಾರ ಹುಡುಕುವಲ್ಲಿ ಅನೇಕ ಯುವಕರು ತೊಡಗಿಸಿಕೊಂಡಿದ್ದರು. ಸ್ನೇಹಿತರೇ, ಕಳೆದ 7-8 ವರ್ಷಗಳಲ್ಲಿ 13 ಲಕ್ಷಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಮತ್ತು 6,000 ಕ್ಕೂ ಹೆಚ್ಚು ಸಂಸ್ಥೆಗಳು 'ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್' ನಲ್ಲಿ ಭಾಗವಹಿಸಿವೆ. ಯುವಕರು ನೂರಾರು ಸಮಸ್ಯೆಗಳಿಗೆ ನಿಖರವಾದ ಪರಿಹಾರಗಳನ್ನು ಸಹ ಒದಗಿಸಿದ್ದಾರೆ. ಅಂತಹ ಹ್ಯಾಕಥಾನ್‌ಗಳನ್ನು ಕಾಲಕಾಲಕ್ಕೆ ಆಯೋಜಿಸಲಾಗುತ್ತದೆ. ನನ್ನ ಯುವ ಸ್ನೇಹಿತರು ಈ ಹ್ಯಾಕಥಾನ್‌ಗಳಲ್ಲಿ ಭಾಗವಹಿಸಬೇಕೆಂದು ನಾನು ಆಗ್ರಹಿಸುತ್ತೇನೆ.
ಸ್ನೇಹಿತರೇ,
ಇಂದು ಜೀವನ ತಂತ್ರಜ್ಞಾನ ಆಧಾರಿತವಾಗಿ ಬದಲಾಗುತ್ತಿದೆ. ಶತಮಾನಗಳ ನಂತರ ಆಗುವಂತಹ ಬದಲಾವಣೆಗಳನ್ನು, ಕೆಲವೇ ವರ್ಷಗಳಲ್ಲಿ ಆಗುವುದನ್ನು ನಾವು ಕಾಣುತ್ತಿದ್ದೇವೆ. ಕೆಲವೊಮ್ಮೆ, ಕೆಲವರು ರೋಬೋಟ್‌ಗಳು ಮನುಷ್ಯರ ಸ್ಥಾನ ಆಕ್ರಮಿಸಬಹುದು ಎಂಬ ಕಳವಳ ವ್ಯಕ್ತಪಡಿಸುತ್ತಾರೆ. ಇಂತಹ ಬದಲಾಗುತ್ತಿರುವ ಕಾಲದಲ್ಲಿ, ಮಾನವ ಅಭಿವೃದ್ಧಿಗಾಗಿ ನಮ್ಮ ಮೂಲ ಬೇರುಗಳ ಸಂಪರ್ಕವನ್ನು ಗಟ್ಟಿಗೊಳಿಸುವುದು ಬಹಳ ಮುಖ್ಯ. ನಮ್ಮ ಮುಂದಿನ ಪೀಳಿಗೆಯು ನಮ್ಮ ಸಂಸ್ಕೃತಿಯ ಬೇರುಗಳನ್ನು - ಹೊಸ ಚಿಂತನೆ ಮತ್ತು ಹೊಸ ವಿಧಾನಗಳೊಂದಿಗೆ - ಭದ್ರವಾಗಿ ಸಂರಕ್ಷಿಸುತ್ತಿರುವುದನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ.
ಸ್ನೇಹಿತರೇ,
ನೀವು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಹೆಸರನ್ನು ಕೇಳಿರಬಹುದು. ಸಂಶೋಧನೆ ಮತ್ತು ನಾವೀನ್ಯತೆ ಈ ಸಂಸ್ಥೆಯ ವಿಶೇಷತೆಗಳಾಗಿವೆ. ಕೆಲವು ವರ್ಷಗಳ ಹಿಂದೆ, ಅಲ್ಲಿನ ಕೆಲವು ವಿದ್ಯಾರ್ಥಿಗಳು ಅಧ್ಯಯನ ಮತ್ತು ಸಂಶೋಧನೆಯ ನಡುವೆ ಸಂಗೀತಕ್ಕೂ ಒಂದು ಸ್ಥಾನ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು. ಅಲ್ಲಿ ಒಂದು ಪುಟ್ಟ ಸಂಗೀತ ತರಗತಿ ಪ್ರಾರಂಭವಾಯಿತು. ದೊಡ್ಡ ವೇದಿಕೆಯೂ ಅಲ್ಲ, ದೊಡ್ಡ ಬಜೆಟ್ ಕೂಡಾ ಅಲ್ಲ. ಕ್ರಮೇಣ, ಈ ಉಪಕ್ರಮ ಬೆಳೆಯುತ್ತಾ ಸಾಗಿತು ಮತ್ತು ಇಂದು ನಾವು ಅದನ್ನು 'ಗೀತಾಂಜಲಿ IISc' ಎಂದು ಗುರುತಿಸುತ್ತೇವೆ. ಇದೀಗ ಕೇವಲ ಒಂದು ತರಗತಿಯಲ್ಲ, ಇದು ಕ್ಯಾಂಪಸ್‌ನ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಜಾನಪದ ಸಂಪ್ರದಾಯಗಳು, ಶಾಸ್ತ್ರೀಯ ಪ್ರಕಾರಗಳಿವೆ; ವಿದ್ಯಾರ್ಥಿಗಳು ಒಟ್ಟಿಗೆ ಕುಳಿತು ಅಭ್ಯಾಸ ಮಾಡುತ್ತಾರೆ. ಪ್ರಾಧ್ಯಾಪಕರು ಒಟ್ಟಿಗೆ ಕುಳಿತುಕೊಳ್ಳುತ್ತಾರೆ ಮತ್ತು ಅವರ ಕುಟುಂಬಗಳು ಸಹ ಪಾಲ್ಗೊಳ್ಳುತ್ತಾರೆ. ಇಂದು, ಇನ್ನೂರಕ್ಕೂ ಹೆಚ್ಚು ಜನರು ಇದರ ನಂಟು ಹೊಂದಿದ್ದಾರೆ. ವಿಶೇಷವೆಂದರೆ ವಿದೇಶಗಳಿಗೆ ತೆರಳಿದವರು ಕೂಡಾ ಆನ್‌ಲೈನ್ ಮೂಲಕ ಈ ಕೊಂಡಿಯ ಸಂಪರ್ಕವನ್ನು ಹಿಡಿದಿಟ್ಟುಕೊಂಡಿದ್ದಾರೆ.
ಸ್ನೇಹಿತರೇ,
ನಮ್ಮ ಬೇರುಗಳೊಂದಿಗೆ ಸಂಪರ್ಕ ಉಳಿಸಿಕೊಳ್ಳುವಂತಹ ಈ ಪ್ರಯತ್ನ ಭಾರತಕ್ಕೆ ಸೀಮಿತವಾಗಿಲ್ಲ. ಪ್ರಪಂಚದ ವಿವಿಧೆಡೆ ವಾಸಿಸುವ ಭಾರತೀಯರು ಸಹ ತಮ್ಮ ತಮ್ಮ ಪ್ರಯತ್ನದಲ್ಲಿ ತೊಡಗಿದ್ದಾರೆ. ನಮ್ಮನ್ನು ದೇಶದ ಹೊರಗೆ ಕರೆದೊಯ್ಯುವ ಮತ್ತೊಂದು ಉದಾಹರಣೆ ಎಂದರೆ ದುಬೈ. ನಮ್ಮ ಮಕ್ಕಳು ತಂತ್ರಜ್ಞಾನ ಜಗತ್ತಿನಲ್ಲಿ ಸಾಧನೆ ಗೈಯ್ಯುತ್ತಿದ್ದಾರೆ, ಆದರೆ ಅವರು ತಮ್ಮ ಭಾಷೆಯಿಂದ ದೂರ ಉಳಿಯುತಿದ್ದಾರೆಯೇ? ಎಂಬ ಒಂದು ಪ್ರಮುಖ ಪ್ರಶ್ನೆಯನ್ನು ದುಬೈಯಲ್ಲಿ ವಾಸಿಸುವ ಕನ್ನಡ ಕುಟುಂಬಗಳು ತಮ್ಮನ್ನು ತಾವೇ ಕೇಳಿಕೊಂಡವು. ಆಗ ಜನ್ಮತಳೆಯಿತು 'ಕನ್ನಡ ಪಾಠಶಾಲೆ'. ಮಕ್ಕಳಿಗೆ ಕನ್ನಡ ಕಲಿಸಲು, ಕಲಿಯಲು, ಬರೆಯಲು ಮತ್ತು ಮಾತನಾಡಲು ಕಲಿಸುವ ಒಂದು ಉಪಕ್ರಮ ಇದಾಗಿತ್ತು. ಇಂದು, ಸಾವಿರಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕನ್ನಡ ಕಲಿಯುತ್ತಿದ್ದಾರೆ. ನಿಜಕ್ಕೂ, ಕನ್ನಡ ನಾಡು, ನುಡಿ ನಮ್ಮ ಹೆಮ್ಮೆ. ಕನ್ನಡದ ಭೂಮಿ ಮತ್ತು ಭಾಷೆ ನಮ್ಮ ಹೆಮ್ಮೆಯಾಗಿದೆ.
ಸ್ನೇಹಿತರೇ,
'ಮನಸ್ಸಿದ್ದರೆ ಮಾರ್ಗ' ಎಂಬ ಹಳೆಯ ಗಾದೆ ಮಾತಿದೆ. ಮಣಿಪುರದ ಯುವಕ ಮೊಯಿರಾಂಗ್ಥೆಮ್ ಸೇಠ್ ಈ ಗಾದೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಅವರ ವಯಸ್ಸು 40 ವರ್ಷಕ್ಕಿಂತ ಕಡಿಮೆ. ಶ್ರೀ ಮೊಯಿರಾಂಗ್ಥೆಮ್ ವಾಸಿಸುತ್ತಿದ್ದ ಮಣಿಪುರದ ದೂರದ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕ ದೊಡ್ಡ ಸಮಸ್ಯೆಯಾಗಿತ್ತು. ಈ ಸಮಸ್ಯೆಯಿಂದ ಹೊರಬರಲು, ಅವರು ಸ್ಥಳೀಯ ಸೌಲಭ್ಯಗಳತ್ತ ಗಮನಹರಿಸಿದರು. ಸೌರಶಕ್ತಿಯ ಮೂಲಕ ಪರಿಹಾರವನ್ನು ಕಂಡುಕೊಂಡರು. ಹೇಗಿದ್ದರೂ ನಮ್ಮ ಮಣಿಪುರದಲ್ಲಿ, ಸೌರಶಕ್ತಿಯನ್ನು ಉತ್ಪಾದಿಸುವುದು ಸುಲಭ. ಹಾಗಾಗಿ, ಮೊಯಿರಾಂಗ್ಥೆಮ್ ಸೌರ ಫಲಕಗಳನ್ನು ಸ್ಥಾಪಿಸುವ ಅಭಿಯಾನವನ್ನು ಪ್ರಾರಂಭಿಸಿದರು ಮತ್ತು ಈ ಅಭಿಯಾನದಿಂದಾಗಿ, ಇಂದು ಸೌರಶಕ್ತಿ ಅವರ ಪ್ರದೇಶದ ನೂರಾರು ಮನೆಗಳನ್ನು ತಲುಪಿದೆ. ವಿಶೇಷವೆಂದರೆ ಅವರು ಆರೋಗ್ಯ ರಕ್ಷಣೆ ಮತ್ತು ಜೀವನೋಪಾಯವನ್ನು ಸುಧಾರಿಸಲು ಸೌರಶಕ್ತಿಯನ್ನು ಬಳಸುತ್ತಿದ್ದಾರೆ. ಇಂದು, ಅವರ ಪ್ರಯತ್ನಗಳಿಂದಾಗಿ, ಮಣಿಪುರದ ಅನೇಕ ಆರೋಗ್ಯ ಕೇಂದ್ರಗಳು ಸಹ ಸೌರಶಕ್ತಿಯ ಲಾಭ ಪಡೆಯುತ್ತಿವೆ. ಮಣಿಪುರದ ಮಹಿಳಾ ಶಕ್ತಿಯು ಸಹ ಈ ಉಪಕ್ರಮದಿಂದ ಸಾಕಷ್ಟು ಪ್ರಯೋಜನ ಪಡೆದಿದೆ. ಸ್ಥಳೀಯ ಮೀನುಗಾರರು ಮತ್ತು ಕಲಾವಿದರು ಸಹ ಇದರಿಂದ ಸಹಾಯ ಪಡೆದಿದ್ದಾರೆ.
ಸ್ನೇಹಿತರೇ,
ಇಂದು, 'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ'ಯ ಅಡಿಯಲ್ಲಿ, ಸರ್ಕಾರವು ಪ್ರತಿ ಫಲಾನುಭವಿ ಕುಟುಂಬಕ್ಕೆ ಸೌರ ಫಲಕಗಳನ್ನು ಅಳವಡಿಸಲು ಸುಮಾರು 75,000 ರಿಂದ 80,000 ರೂಪಾಯಿಗಳನ್ನು ನೀಡುತ್ತಿದೆ. ಮೊಯಿರಾಂಗ್ಥೆಮ್ ಅವರ ಪ್ರಯತ್ನಗಳು ವೈಯಕ್ತಿಕವಾಗಿದ್ದರೂ, ಅವು ಸೌರಶಕ್ತಿಗೆ ಸಂಬಂಧಿಸಿದ ಪ್ರತಿಯೊಂದು ಅಭಿಯಾನಕ್ಕೂ ಹೊಸ ಪ್ರಚೋದನೆಯನ್ನು ನೀಡುತ್ತಿವೆ. 'ಮನದ ಮಾತು' ಮೂಲಕ ನಾನು ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ.
ನನ್ನ ಪ್ರಿಯ ದೇಶವಾಸಿಗಳೇ,
ಬನ್ನಿ ಈಗ ಜಮ್ಮು ಮತ್ತು ಕಾಶ್ಮೀರದತ್ತ ಪ್ರಯಾಣ ಬೆಳೆಸೋಣ. ಜಮ್ಮು ಮತ್ತು ಕಾಶ್ಮೀರದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯ ಕುರಿತಾದ ಒಂದು ಕಥೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇದು ನಿಮ್ಮಲ್ಲಿ ಹೆಮ್ಮೆ ಮೂಡಿಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ, ಜೆಹಾನ್‌ಪೋರಾ ಎಂಬ ಸ್ಥಳವಿದೆ. ವರ್ಷಗಳಿಂದ, ಜನರು ಅಲ್ಲಿ ಕೆಲವು ಎತ್ತರದ ದಿಬ್ಬಗಳನ್ನು ನೋಡುತ್ತಿದ್ದರು. ಇವು ಸಾಮಾನ್ಯ ದಿಬ್ಬಗಳಾಗಿದ್ದು, ಅವು ಏನೆಂದು ಯಾರಿಗೂ ತಿಳಿದಿರಲಿಲ್ಲ. ನಂತರ, ಒಂದು ದಿನ, ಪುರಾತತ್ವಶಾಸ್ತ್ರಜ್ಞರು ಅವುಗಳನ್ನು ಗಮನಿಸಿದರು. ಅವರು ಆ ಪ್ರದೇಶವನ್ನು ಎಚ್ಚರಿಕೆಯಿಂದ ಗಮನಿಸಲು ಪ್ರಾರಂಭಿಸಿದಾಗ, ಅವರಿಗೆ ಈ ದಿಬ್ಬಗಳು ಸ್ವಲ್ಪ ಭಿನ್ನವಾಗಿ ಕಂಡವು. ನಂತರ ಈ ದಿಬ್ಬಗಳ ವೈಜ್ಞಾನಿಕ ಅಧ್ಯಯನವನ್ನು ಪ್ರಾರಂಭಿಸಲಾಯಿತು. ಮೇಲಿನಿಂದ ಛಾಯಾಚಿತ್ರಗಳನ್ನು ತೆಗೆದುಕೊಳ್ಳಲು ಡ್ರೋನ್‌ಗಳನ್ನು ಬಳಸಲಾಯಿತು ಮತ್ತು ಆ ಸ್ಥಳದ Mapping ಮಾಡಲಾಯಿತು. ನಂತರ ಕೆಲವು ಆಶ್ಚರ್ಯಕರ ವಿಷಯಗಳು ಬೆಳಕಿಗೆ ಬರಲಾರಂಭಿಸಿದವು. ಈ ದಿಬ್ಬಗಳು ನೈಸರ್ಗಿಕವಾಗಿದುವಲ್ಲ, ಮಾನವ ನಿರ್ಮಿತ ಕೆಲವು ದೊಡ್ಡ ಕಟ್ಟಡದ ಅವಶೇಷಗಳು ಎಂಬುದು ತಿಳಿಯಿತು. ಇದೇ ಸಮಯದಲ್ಲಿ ಮತ್ತೊಂದು ಆಸಕ್ತಿದಾಯಕ ಕೊಂಡಿ ಇದಕ್ಕೆ ಸೇರಿಕೊಂಡಿತು. ಕಾಶ್ಮೀರದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ, ಫ್ರಾನ್ಸ್‌ನ ವಸ್ತುಸಂಗ್ರಹಾಲಯದ ಆರ್ಕೈವ್‌ಗಳಲ್ಲಿ ಹಳೆಯ, ಮಸುಕಾದ ಚಿತ್ರ ಒಂದು ದೊರೆಯಿತು. ಬಾರಾಮುಲ್ಲಾದ ಆ ಚಿತ್ರದಲ್ಲಿ ಮೂರು ಬೌದ್ಧ ಸ್ತೂಪಗಳು ಗೋಚರಿಸಿದವು. ಇಲ್ಲಿ ಚಿತ್ರಣ ತಿರುವು ಪಡೆದುಕೊಂಡಿತು ಮತ್ತು ಕಾಶ್ಮೀರದ ಅದ್ಭುತ ಭೂತಕಾಲವು ನಮ್ಮ ಮುಂದೆ ಅನಾವರಣಗೊಂಡಿತು. ಇದು ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದಾದ ಇತಿಹಾಸ. ಕಾಶ್ಮೀರದ ಜೆಹಾನ್‌ಪೋರಾದ ಈ ಬೌದ್ಧ ಸಂಕೀರ್ಣವು ಕಾಶ್ಮೀರದ ಭೂತಕಾಲ ಹೇಗಿತ್ತು, ಅದರ ಗುರುತು ಎಷ್ಟು ಶ್ರೀಮಂತವಾಗಿತ್ತು ಎಂಬುದನ್ನು ನಮಗೆ ನೆನಪಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ಮನ ಮುಟ್ಟುವಂತಹ, ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿನ ಒಂದು ಪ್ರಯತ್ನದ ಬಗ್ಗೆ ಹೇಳಲು ಇಷ್ಟಪಡುತ್ತೇನೆ. ಫಿಜಿಯಲ್ಲಿ ಭಾರತೀಯ ಭಾಷೆ ಮತ್ತು ಸಂಸ್ಕೃತಿಯ ಉತ್ತೇಜನಕ್ಕಾಗಿ ಒಂದು ಶ್ಲಾಘನೀಯ ಉಪಕ್ರಮ ನಡೆಯುತ್ತಿದೆ. ಹೊಸ ಪೀಳಿಗೆಯನ್ನು ತಮಿಳು ಭಾಷೆಯೊಂದಿಗೆ ಬೆಸೆಯಲು ವಿವಿಧ ಹಂತಗಳಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕಳೆದ ತಿಂಗಳು, ಫಿಜಿಯ ರಾಕಿ-ರಾಕಿ ಪ್ರದೇಶದ ಶಾಲೆಯಲ್ಲಿ ಮೊದಲ ಬಾರಿಗೆ ತಮಿಳು ದಿನ ಆಚರಿಸಲಾಯಿತು. ಆ ದಿನ, ತಮ್ಮ ಭಾಷೆಯಲ್ಲಿ ಮುಕ್ತವಾಗಿ ಹೆಮ್ಮೆ ವ್ಯಕ್ತಪಡಿಸುವ ವೇದಿಕೆ ಮಕ್ಕಳಿಗೆ ದೊರೆಯಿತು. ಮಕ್ಕಳು ತಮಿಳು ಭಾಷೆಯಲ್ಲಿ ಕವಿತೆಗಳನ್ನು ಕೇಳಿಸಿದರು, ಭಾಷಣ ಮಾಡಿದರು ಮತ್ತು ತಮ್ಮ ಸಂಸ್ಕೃತಿಯನ್ನು ಪೂರ್ಣ ಆತ್ಮವಿಶ್ವಾಸದಿಂದ ವೇದಿಕೆಯ ಮೇಲೆ ಪ್ರದರ್ಶಿಸಿದರು. ಸ್ನೇಹಿತರೇ, ದೇಶದೊಳಗೆ ಕೂಡಾ ತಮಿಳು ಭಾಷೆಯ ಪ್ರಚಾರಕ್ಕಾಗಿ ನಿರಂತರವಾಗಿ ಕೆಲಸ ನಡೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ನನ್ನ ಸಂಸದೀಯ ಕ್ಷೇತ ಕಾಶಿಯಲ್ಲಿ ನಾಲ್ಕನೇ ‘ಕಾಶೀ ತಮಿಳು ಸಂಗಮಮ್’ ನಡೆಯಿತು. ಈಗ ನಾನು ನಿಮಗೆ ಒಂದು ಆಡಿಯೋ ಕ್ಲಿಪ್ ಕೇಳಿಸಲಿದ್ದೇನೆ. ಆಲಿಸಿರಿ ಮತ್ತು ತಮಿಳು ಮಾತನಾಡಲು ಪ್ರಯತ್ನಿಸುತ್ತಿರುವ ಈ ಮಕ್ಕಳು ಎಲ್ಲಿಯವರೆಂದು ಊಹಿಸಿ?
# (ಆಡಿಯೋ ಕ್ಲಿಪ್ 1 ಪಾಯಲ್) #
ಸ್ನೇಹಿತರೇ,
ತಮಿಳು ಭಾಷೆಯಲ್ಲಿ ನಿರರ್ಗಳವಾಗಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುವ ಈ ಮಕ್ಕಳು ವಾರಾಣಸಿಯ ಕಾಶಿಯವರು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಅವರ ಮಾತೃಭಾಷೆ ಹಿಂದಿಯಾದರೂ, ತಮಿಳು ಭಾಷೆಯ ಮೇಲಿನ ಅವರ ಪ್ರೀತಿ ಅವರನ್ನು ತಮಿಳು ಕಲಿತುಕೊಳ್ಳಲು ಪ್ರೇರೇಪಿಸಿದೆ. ಈ ವರ್ಷ ವಾರಾಣಸಿಯಲ್ಲಿ ‘ಕಾಶಿ ತಮಿಳು ಸಂಗಮಮ್’ ಮೂಲಕ ತಮಿಳು ಭಾಷೆ ಕಲಿಸುವುದರ ಮೇಲೆ ವಿಶೇಷ ಒತ್ತು ನೀಡಲಾಗಿತ್ತು.
ತಮಿಳು ಕಲಿಯಿರಿ – ‘ತಮಿಳ್ ಕರಾಕಲಂ’ ಈ ಧ್ಯೇಯವಾಕ್ಯದ ಅಡಿಯಲ್ಲಿ, ವಾರಾಣಸಿಯ 50 ಕ್ಕೂ ಅಧಿಕ ಶಾಲೆಗಳಲ್ಲಿ ವಿಶೇಷ ಅಭಿಯಾನವನ್ನೂ ನಡೆಸಲಾಯಿತು. ಇದರ ಫಲಿತಾಂಶ ನಮಗೆ ಈ ಆಡಿಯೋ ಕ್ಲಿಪ್ ನಲ್ಲಿ ಕೇಳಿಬರುತ್ತದೆ.
# (ಆಡಿಯೋ ಕ್ಲಿಪ್ 2 ವೈಷ್ಣವಿ) #
ಸ್ನೇಹಿತರೇ,
ತಮಿಳು ಭಾಷೆ ಪ್ರಪಂಚದ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ತಮಿಳು ಸಾಹಿತ್ಯ ಕೂಡಾ ಅತ್ಯಂತ ಶ್ರೀಮಂತವಾಗಿದೆ. ನಾನು ‘ಮನದ ಮಾತಿನಲ್ಲಿ’ ‘ಕಾಶಿ ತಮಿಳು ಸಂಗಮಮ್’ ನಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದೆ. ಇಂದು ದೇಶದ ಇತರ ಭಾಗಗಳ ಮಕ್ಕಳು ಮತ್ತು ಯುವಕರಲ್ಲಿ ತಮಿಳು ಭಾಷೆಯ ಬಗ್ಗೆ ಹೊಸ ಆಕರ್ಷಣೆ ಮೂಡಿರುವುದು ನನಗೆ ಸಂತೋಷ ತಂದಿದೆ - ಇದೇ ಭಾಷೆಯ ಶಕ್ತಿ, ಇದೇ ಭಾರತದ ಏಕತೆ.
ಸ್ನೇಹಿತರೇ,
ಮುಂದಿನ ತಿಂಗಳು ನಾವು ದೇಶದ 77ನೇ ಗಣತಂತ್ರ ದಿನ ಆಚರಿಸಲಿದ್ದೇವೆ. ಇಂತಹ ಸಂದರ್ಭಗಳು ಬಂದಾಗಲೆಲ್ಲಾ, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ನಿರ್ಮಾತೃವಿನ ಬಗ್ಗೆ ನಮ್ಮ ಹೃದಯ ಕೃತಜ್ಞತೆಯ ಭಾವನೆಯಿಂದ ತುಂಬುತ್ತದೆ. ನಮ್ಮ ದೇಶ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಬಹುದೀರ್ಘ ಹೋರಾಟ ನಡೆಸಿತು. ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಪ್ರತಿಯೊಂದು ಭಾಗದ ಜನರು ತಮ್ಮ ಕೊಡುಗೆ ನೀಡಿದ್ದಾರೆ. ಆದರೆ ದೌರ್ಭಾಗ್ಯವಶಾತ್, ಸ್ವಾತಂತ್ರ್ಯ ಹೋರಾಟದ ಅನೇಕ ನಾಯಕ-ನಾಯಕಿಯರಿಗೆ ದೊರೆಯಬೇಕಿದ್ದ ಗೌರವ ದೊರೆಯಲಿಲ್ಲ. ಅಂತಹ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಒಬ್ಬರು ಒಡಿಶಾದ ಪಾರ್ವತಿ ಗಿರಿ. 2026 ರ ಜನವರಿ ತಿಂಗಳಿನಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುವುದು. ಅವರು ತಮ್ಮ 16ನೇ ವಯಸ್ಸಿನಲ್ಲಿಯೇ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಸ್ನೇಹಿತರೇ, ಸ್ವಾತಂತ್ರ್ಯ ಚಳವಳಿಯ ನಂತರ, ಪಾರ್ವತಿ ಗಿರಿ ಅವರು ತಮ್ಮ ಜೀವನವನ್ನು ಸಾಮಾಜಿಕ ಸೇವೆ ಮತ್ತು ಬುಡಕಟ್ಟು ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು. ಅವರು ಹಲವಾರು ಅನಾಥಾಶ್ರಮಗಳನ್ನು ಸ್ಥಾಪಿಸಿದರು. ಅವರ ಸ್ಪೂರ್ತಿದಾಯಕ ಜೀವನವು ಪ್ರತಿ ಪೀಳಿಗೆಗೂ ಮಾರ್ಗದರ್ಶನ ನೀಡುತ್ತಲೇ ಇರುತ್ತದೆ.
“ಮೂಂ ಪಾರ್ವತೀ ಗಿರಿ ಜಿಂಕು ಶ್ರದ್ಧಾಂಜಲಿ ಅರ್ಪಣ್ ಕರೂಚೀ.”
(ನಾನು ಪಾರ್ವತಿ ಗಿರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತೇನೆ)
ಸ್ನೇಹಿತರೇ,
ನಾವು ನಮ್ಮ ಪರಂಪರೆಯನ್ನು ಮರೆಯಬಾರದು, ಇದು ನಮ್ಮ ಜವಾಬ್ದಾರಿ. ನಮಗೆ ಸ್ವತಂತ್ರ ದೊರೆಯಲು ಕಾರಣರಾದ ನಾಯಕ-ನಾಯಕಿಯರ ಮಹಾನ್ ಕತೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು. ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ವೇಳೆ ಸರ್ಕಾರ ವಿಶೇಷವಾದ ಜಾಲತಾಣವೊಂದನ್ನು ಸಿದ್ಧಪಡಿಸಿದ್ದು ನಿಮಗೆಲ್ಲಾ ನೆನಪಿರಬಹುದು. ಇದರಲ್ಲಿ ಒಂದು ವಿಭಾಗವನ್ನು ‘ಅನ್ಸಂಗ್ ಹಿರೋಸ್ – ಮಾನ್ಯತೆ ದೊರೆಯದ ನಾಯಕರಿಗೆ’ ಸಮರ್ಪಿಸಲಾಗಿತ್ತು. ಈಗಲೂ ನೀವು ಈ ಜಾಲತಾಣಕ್ಕೆ ಭೇಟಿ ನೀಡಿ, ಸ್ವತಂತ್ರ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಬಹುದು.
ನನ್ನ ಪ್ರೀತಿಯ ದೇಶಬಾಂಧವರೇ,
‘ಮನದ ಮಾತಿನ’ ಮೂಲಕ ನಮಗೆ ಸಮಾಜದ ಒಳಿತಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಮಾತನಾಡುವ ಒಂದು ಅತ್ಯುತ್ತಮ ಅವಕಾಶ ದೊರೆಯುತ್ತದೆ. ಇಂದು, ನಮ್ಮೆಲ್ಲರಿಗೂ ಕಳವಳಕಾರಿ ವಿಷಯವಾಗಿ ಪರಿಣಮಿಸಿರುವ ಒಂದು ಸಮಸ್ಯೆ ಕುರಿತು ತಿಳಿಸಲು ಬಯಸುತ್ತೇನೆ. ICMR (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ನ್ಯುಮೋನಿಯಾ ಮತ್ತು ಯುಟಿಐ ಸೇರಿದಂತೆ ಹಲವು ರೋಗಗಳ ವಿರುದ್ಧ ಆಂಟಿ ಬಯಾಟಿಕ್ ಔಷಧಗಳು ದುರ್ಬಲವೆಂದು ಸಾಬೀತಾಗಿದೆ. ನಮ್ಮೆಲ್ಲರಿಗೂ ಇದು ಬಹಳ ಕಳವಳಕಾರಿ ವಿಷಯವಾಗಿದೆ. ವರದಿಯ ಪ್ರಕಾರ ಇದಕ್ಕೆ ಬಹು ದೊಡ್ಡ ಕಾರಣವೆಂದರೆ, ಜನರು ಹಿಂದೆ ಮುಂದೆ ಯೋಚಿಸದೆ ಆಂಟಿಬಯಾಟಿಕ್ ಔಷಧಗಳನ್ನು ಸೇವಿಸುವುದು. ಆಂಟಿಬಯಾಟಿಕ್ ಎನ್ನುವುದು “ಹೇಗೆಂದರೆ ಹಾಗೆ” ತೆಗೆದುಕೊಳ್ಳುವ ಔಷಧವಲ್ಲ. ಇದನ್ನು ವೈದ್ಯರ ಸಲಹೆಯ ಪ್ರಕಾರವೇ ಸೇವನೆ ಮಾಡಬೇಕು. ಒಂದು ಮಾತ್ರೆ ತೆಗೆದುಕೊಂಡರೆ ಸಾಕು ಪ್ರತಿಯೊಂದು ಸಮಸ್ಯೆಯೂ ದೂರವಾಗುತ್ತದೆ ಎನ್ನುವುದು ಇಂದು ಜನರ ಮನೋಭಾವವಾಗುತ್ತಿದೆ. ಇದರಿಂದಾಗಿಯೇ ಈ ಆಂಟಿಬಯಾಟಿಕ್ ಔಷಧಗಳಿಗಿಂತ ರೋಗಗಳು ಮತ್ತು ಸೋಂಕುಗಳು ಹೆಚ್ಚು ಉಲ್ಬಣವಾಗುತ್ತಿವೆ. ದಯವಿಟ್ಟು ನಿಮ್ಮ ಮನಸ್ಸಿಗೆ ತೋಚಿದಂತೆ ಔಷಧಗಳ ಸೇವನೆಯನ್ನು ಮಾಡಬೇಡಿ ಎಂದು ನಾನು ನಿಮ್ಮೆಲ್ಲರಲ್ಲಿ ಮನವಿ ಮಾಡುತ್ತೇನೆ. Antibiotic ಔಷಧಗಳ ವಿಷಯದಲ್ಲಂತೂ, ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕಾದುದು ಅತ್ಯಗತ್ಯವಾಗಿದೆ. ಔಷಧಗಳಿಗಾಗಿ ಮಾರ್ಗದರ್ಶನ ಮತ್ತು ಆಂಟಿಬಯಾಟಿಕ್ ಗಳಿಗಾಗಿ ವೈದ್ಯರ ಅಗತ್ಯ ಕಡ್ಡಾಯ ಎಂದು ನಾನು ಹೇಳುತ್ತೇನೆ. ಈ ಅಭ್ಯಾಸ ನಮ್ಮ ಆರೋಗ್ಯವನ್ನು ಉತ್ತಮವಾಗಿಸಲು ಬಹಳ ಸಹಕಾರಿಯೆಂದು ಸಾಬೀತಾಗುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನಮ್ಮ ಸಾಂಪ್ರದಾಯಿಕ ಕಲೆಗಳು ಸಮಾಜವನ್ನು ಸಶಕ್ತವನ್ನಾಗಿ ಮಾಡುವುದರೊಂದಿಗೆ, ಜನರ ಆರ್ಥಿಕ ಬೆಳವಣಿಗೆಗೆ ಕೂಡಾ ಬಹು ದೊಡ್ಡ ಮಾಧ್ಯಮವಾಗುತ್ತಿದೆ. ಆಂಧ್ರ ಪ್ರದೇಶದ ನರಸಾಪುರಂ ಜಿಲ್ಲೆಯ ಲೇಸ್ ಕ್ರಾಫ್ಟ್ ಈಗ ಇಡೀ ದೇಶದಲ್ಲಿ ಜನಪ್ರಿಯವಾಗುತ್ತಿವೆ. ಈ ಲೇಸ್ ಕ್ರಾಫ್ಟ್ ಹಲವಾರು ಪೀಳಿಗೆಗಳಿಂದ ಮಹಿಳೆಯರ ಕೈಯಲ್ಲಿಯೇ ಉಳಿದಿದೆ. ದೇಶದ ಮಹಿಳಾ ಶಕ್ತಿಯು ಬಹಳ ಧೈರ್ಯ ಮತ್ತು ತಾಳ್ಮೆಯಿಂದ ಈ ಕಲೆಯನ್ನು ಸಂರಕ್ಷಿಸಿದೆ. ಇಂದು ಈ ಸಂಪ್ರದಾಯವನ್ನು ಹೊಸ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಆಂಧ್ರ ಪ್ರದೇಶ ಸರ್ಕಾರ ಮತ್ತು ನಬಾರ್ಡ್ ಒಟ್ಟುಗೂಡಿ, ಕುಶಲಕರ್ಮಿಗಳಿಗೆ ಹೊಸ ವಿನ್ಯಾಸ ಕಲಿಸುತ್ತಿದೆ, ಉತ್ತಮ ಕೌಶಲ್ಯ ತರಬೇತಿ ನೀಡುತ್ತಿದೆ ಮತ್ತು ಹೊಸ ಹೊಸ ಮಾರುಕಟ್ಟೆಗಳೊಂದಿಗೆ ಜೋಡಿಸುತ್ತಿದೆ. ನರಸಾಪುರಂ ಲೇಸ್ ಗೆ ಜಿಐ ಟ್ಯಾಗ್ ಕೂಡಾ ದೊರೆತಿದೆ. ಇಂದು ಇದರಿಂದ 500 ಕ್ಕೂ ಅಧಿಕ ಉತ್ಪನ್ನಗಳು ತಯಾರಾಗುತ್ತಿವೆ, ಮತ್ತು 250 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸರಿ ಸುಮಾರು 1 ಲಕ್ಷ ಮಹಿಳೆಯರಿಗೆ ಇದರಿಂದ ಕೆಲಸ ದೊರೆಯುತ್ತಿದೆ.
ಸ್ನೇಹಿತರೆ,
ತಮ್ಮ ಪರಿಶ್ರಮದಿಂದ ಕೇವಲ ಸಾಂಪ್ರದಾಯಿಕ ಕಲೆಗಳನ್ನು ಉತ್ತೇಜಿಸಿ ಬೆಳಕಿಗೆ ತರುತ್ತಿರುವುದು ಮಾತ್ರವಲ್ಲದೇ ಇದರಿಂದ ಸ್ಥಳೀಯರನ್ನು ಸಶಕ್ತರನ್ನಾಗಿ ಕೂಡಾ ಮಾಡುತ್ತಿರುವಂತಹ ವ್ಯಕ್ತಿಗಳನ್ನು ಮುನ್ನೆಲೆಗೆ ತರುವುದಕ್ಕೆ ಕೂಡಾ ‘ಮನ್ ಕಿ ಬಾತ್’ ಒಂದು ವೇದಿಕೆಯಾಗಿದೆ. ಮಣಿಪುರದ ಚುರಾಚಂದ್ ಪೂರ್ ನಲ್ಲಿ Margaret Ramtharsiem ಅವರ ಪ್ರಯತ್ನಗಳು ಇದೇ ರೀತಿಯಾಗಿವೆ. ಅವರು ಮಣಿಪುರದ ಸಾಂಪ್ರದಾಯಿಕ ಉತ್ಪನ್ನಗಳನ್ನು, ಅಲ್ಲಿನ ಕರಕುಶಲ ವಸ್ತುಗಳನ್ನು, ಬಿದಿರು ಮತ್ತು ಮರದಿಂದ ಮಾಡಿದ ವಸ್ತುಗಳನ್ನು, ಒಂದು ದೊಡ್ಡ ಮುನ್ನೋಟದೊಂದಿಗೆ ನೋಡಿದರು ಮತ್ತು ಈ ಮುನ್ನೋಟದಿಂದಲೇ ಅವರು ಓರ್ವ ಕರಕುಶಲ ಕರ್ಮಿಯಿಂದ, ಜನರ ಜೀವನವನ್ನು ಬದಲಾಯಿಸುವ ಮಾಧ್ಯಮವಾಗಿದ್ದಾರೆ. ಇಂದು ಮಾರ್ಗರೇಟ್ ಅವರ ಘಟಕಗಲ್ಲಿ 50 ಕ್ಕಿಂತ ಅಧಿಕ ಕಲಾವಿದರು ಕೆಲಸ ಮಾಡುತ್ತಿದ್ದಾರೆ ಮತ್ತು ಅವರು ತಮ್ಮ ಪರಿಶ್ರಮದಿಂದಾಗಿ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಮ್ಮ ಉತ್ಪನ್ನಗಳ ಒಂದು ಮಾರುಕಟ್ಟೆಯನ್ನು ಕೂಡಾ ಅಭಿವೃದ್ಧಿ ಪಡಿಸಿದ್ದಾರೆ.
ಸ್ನೇಹಿತರೇ,
ಮಣಿಪುರದ ಮತ್ತೊಂದು ಉದಾಹರಣೆ ಎಂದರೆ ಸೇನಾಪತಿ ಜಿಲ್ಲೆಯ ನಿವಾಸಿ ಚೋಖೋನೆ ಕ್ರಿಚೇನಾ ಅವರದ್ದು. ಅವರ ಇಡೀ ಕುಟುಂಬ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಕ್ರಿಚೇನಾ ಈ ಸಾಂಪ್ರದಾಯಿಕ ಅನುಭವವನ್ನು ಮತ್ತೊಂದು ಹಂತಕ್ಕೆ ವಿಸ್ತರಿಸಿದ್ದಾರೆ. ಅವರು ಹೂವಿನ ಕೃಷಿಯನ್ನು ತಮ್ಮ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ. ಇಂದು, ಅವರು ಈ ಕೆಲಸದಿಂದಾಗಿ ವಿವಿಧ ಮಾರುಕಟ್ಟೆಗಳನ್ನು ಸಂಪರ್ಕಿಸುತ್ತಾರೆ ಮತ್ತು ತಮ್ಮ ಪ್ರದೇಶದ ಸ್ಥಳೀಯ ಸಮುದಾಯಗಳನ್ನು ಸಬಲೀಕರಣಗೊಳಿಸುತ್ತಾರೆ. ಸ್ನೇಹಿತರೇ, ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ದೃಷ್ಟಿಕೋನದಿಂದ ಬಳಸಿದಾಗ, ಅದು ಆರ್ಥಿಕ ಪ್ರಗತಿಗೆ ಪ್ರಮುಖ ದಾರಿಯಾಗಬಹುದು ಎಂಬುದನ್ನು ಈ ಉದಾಹರಣೆ ವಿವರಿಸುತ್ತದೆ. ನಿಮ್ಮ ಸುತ್ತಮುತ್ತ ಇಂತಹ ಯಶಸ್ಸಿನ ಕತೆಗಳು ನಿಮಗೆ ಕಂಡುಬಂದಲ್ಲಿ ದಯವಿಟ್ಟು ಅವುಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ.
ಸ್ನೇಹಿತರೇ,
ಇಡೀ ವರ್ಷ ದೇಶದ ಯಾವುದಾದರೊಂದು ಪ್ರದೇಶದಲ್ಲಿ ಹಬ್ಬದ ವಾತಾವರಣ ಕಂಡುಬರುತ್ತಲೇ ಇರುತ್ತದೆ ಎನ್ನುವುದು ನಮ್ಮ ದೇಶದ ಅತ್ಯಂತ ಸುಂದರವಾದ ವಿಷಯವಾಗಿದೆ. ಬೇರೆ ಬೇರೆ ಹಬ್ಬಗಳಂತೂ ಇದ್ದೇ ಇರುತ್ತವೆ, ಅದರೊಂದಿಗೆ ಬೇರೆ ಬೇರೆ ರಾಜ್ಯಗಳ ಸ್ಥಳೀಯ ಉತ್ಸವಗಳೂ ಆಯೋಜನೆಯಾಗುತ್ತಲೇ ಇರುತ್ತವೆ. ಅಂದರೆ, ನೀವು ಸುತ್ತಾಡಿ ಬರಬೇಕೆಂದು ಮನಸ್ಸು ಮಾಡಿದರೆ, ಪ್ರತಿಯೊಂದು ಸಮಯದಲ್ಲೂ, ದೇಶದ ಯಾವುದೇ ಮೂಲೆಯಾದರೂ, ತನ್ನ ವಿಶಿಷ್ಠ ಉತ್ಸವದೊಂದಿಗೆ ಸಿದ್ಧವಾಗಿರುವುದು ಕಂಡುಬರುತ್ತದೆ. ಇಂತಹದ್ದೇ ಒಂದು ಉತ್ಸವ ಈಗ ರಾನ್ (Rann) ಆಫ್ ಕಛ್ ನಲ್ಲಿ ನಡೆಯುತ್ತಿದೆ. ಈ ವರ್ಷ ಕಚ್ ರಾನೋತ್ಸವದ ಆಯೋಜನೆ ನವೆಂಬರ್ 23 ರಂದು ಆರಂಭವಾಗಿದ್ದು, ಇದು ಫೆಬ್ರವರಿ 20 ರವರೆಗೂ ಮುಂದುವರಿಯಲಿದೆ. ಇಲ್ಲಿ ಕಚ್ ನ ವೈವಿಧ್ಯಮಯ ಜಾನಪದ ಸಂಸ್ಕೃತಿ, ಜಾನಪದ ಸಂಗೀತ, ನೃತ್ಯ ಮತ್ತು ಕರಕುಶಲತೆ ಕಂಡುಬರುತ್ತದೆ. ರಾನ್ ಆಫ್ ಕಚ್ ನ ಬಿಳುಪಿನ ಭವ್ಯತೆಯನ್ನು ನೋಡುವುದು ನಮಗೆ ಒಂದು ಆನಂದದಾಯಕ ಅನುಭವ ಎನಿಸುತ್ತದೆ. ರಾತ್ರಿಯ ಸಮಯದಲ್ಲಿ ಶ್ವೇತ ವರ್ಣದ ರಾನ್ ಪ್ರದೇಶದ ಮೇಲೆ ಬೆಳದಿಂಗಳು ಪ್ರಸರಿಸಿದಾಗ, ಆ ದೃಶ್ಯ ನಮ್ಮನ್ನು ನಿಜಕ್ಕೂ ಮಂತ್ರಮುಗ್ಧರನ್ನಾಗಿಸುತ್ತದೆ. ರಾನ್ ಉತ್ಸವದ ಟೆಂಟ್ ಸಿಟಿ ಬಹಳ ಜನಪ್ರಿಯವಾಗಿದೆ. ಕಳೆದ 2 ತಿಂಗಳಿನಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ರಾನೋತ್ಸವದ ಭಾಗವಾಗಿದ್ದಾರೆ ಮತ್ತು ದೇಶದ ಮೂಲೆಮೂಲೆಗಳಿಂದ ಮತ್ತು ವಿದೇಶಗಳಿಂದಲೂ ಜನರು ಬರುತ್ತಿದ್ದಾರೆಂಬ ಮಾಹಿತಿ ನನಗೆ ದೊರೆತಿದೆ. ನಿಮಗೆ ಯಾವಾಗ ಅವಕಾಶ ದೊರೆತರೂ, ಈ ಉತ್ಸವದಲ್ಲಿ ಖಂಡಿತವಾಗಿಯೂ ಭಾಗಿಯಾಗಿ ಮತ್ತು ಭಾರತದ ವೈವಿಧ್ಯತೆಯ ಆನಂದವನ್ನು ಅನುಭವಿಸಿ.
ಸ್ನೇಹಿತರೇ,
ಇದು 2025 ರಲ್ಲಿ ‘ಮನ್ ಕಿ ಬಾತ್‘ ನ ಕೊನೆಯ ಸಂಚಿಕೆಯಾಗಿದೆ, ನಾವು ಈಗ ಇದೇ ಉತ್ಸಾಹ ಮತ್ತು ನಂಬಿಕೆಯೊಂದಿಗೆ, ನಮ್ಮ ‘ಮನದ ಮಾತು‘ ಆಡುವುದಕ್ಕಾಗಿ ನಮ್ಮವರೆನ್ನುವ ಭಾವನೆಯೊಂದಿಗೆ 2026ರಲ್ಲಿ ‘ಮನದ ಮಾತು‘ ಕಾರ್ಯಕ್ರಮದಲ್ಲಿ ಮತ್ತೊಮ್ಮೆ ಸೇರೋಣ. ಹೊಸ ಶಕ್ತಿ, ಹೊಸ ವಿಷಯ ಮತ್ತು ಪ್ರೇರಣೆ ತುಂಬುವಂತಹ ಅಸಂಖ್ಯಾತ ಗಾಥೆಗಳೊಂದಿಗೆ ಮನ್ ಕಿ ಬಾತ್ ನಮ್ಮೆಲ್ಲರನ್ನೂ ಬೆಸೆಯುತ್ತದೆ. ಪ್ರತಿ ತಿಂಗಳೂ ನನಗೆ ಇಂತಹ ಅನೇಕ ಸಂದೇಶಗಳು ದೊರೆಯುತ್ತವೆ, ಇವುಗಳಲ್ಲಿ ವಿಕಸಿತ ಭಾರತಕ್ಕೆ ಸಂಬಂಧಿಸಿದಂತೆ ಜನರು ತಮ್ಮ ಮುನ್ನೋಟವನ್ನು ಹಂಚಿಕೊಳ್ಳುತ್ತಾರೆ. ಜನರಿಂದ ದೊರೆಯುವ ಸಲಹೆಗಳು ಮತ್ತು ಈ ನಿಟ್ಟಿನಲ್ಲಿ ಅವರ ಪ್ರಯತ್ನಗಳನ್ನು ನೋಡಿ. ಈ ಎಲ್ಲಾ ವಿಷಯಗಳು ನನಗೆ ತಲುಪಿದಾಗ, ‘ವಿಕಸಿತ ಭಾರತದ’ ಸಂಕಲ್ಪ ಖಂಡಿತವಾಗಿಯೂ ಸಾಕಾರವಾಗುತ್ತದೆ ಎಂಬ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ. ಈ ನಂಬಿಕೆ ದಿನೇ ದಿನೇ ಬಲಿಷ್ಠವಾಗುತ್ತಿದೆ. 2026ನೇ ವರ್ಷ ಈ ಸಂಕಲ್ಪ ಸಿದ್ಧಿಯ ಪಯಣದಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿ ಸಾಬೀತಾಗಲಿ, ನಿಮ್ಮ ನಿಮ್ಮ ಕುಟುಂಬದ ಜೀವನ ಸುಖ ಶಾಂತಿಯಿಂದ ತುಂಬಿರಲಿ ಎಂಬ ಹಾರೈಕೆಯೊಂದಿಗೆ ಈ ಸಂಚಿಕೆಯನ್ನು ಮುಕ್ತಾಯಗೊಳಿಸುವುದಕ್ಕೆ ಮುನ್ನ, ಫಿಟ್ ಇಂಡಿಯಾ ಆಂದೋಲನ ನಿಮ್ಮನ್ನು ಆರೋಗ್ಯವಾಗಿರಿಸಲಿ ಎಂದು ಹೇಳಲು ಖಂಡಿತವಾಗಿಯೂ ಇಷ್ಟಪಡುತ್ತೇನೆ. ಚಳಿಗಾಲದ ಈ ಋತು ವ್ಯಾಯಾಮಕ್ಕೆ ಬಹಳ ಉತ್ತಮವಾಗಿರುತ್ತದೆ. ಖಂಡಿತವಾಗಿಯೂ ವ್ಯಾಯಾಮ ಮಾಡಿ. ನಿಮ್ಮೆಲ್ಲರಿಗೂ 2026 ಕ್ಕಾಗಿ ಅನೇಕಾನೇಕ ಶುಭ ಹಾರೈಕೆಗಳು. ಧನ್ಯವಾದ. ವಂದೇ ಮಾತರಂ.
(रिलीज़ आईडी: 2209158)
आगंतुक पटल : 19
इस विज्ञप्ति को इन भाषाओं में पढ़ें:
Gujarati
,
Malayalam
,
Punjabi
,
Punjabi
,
Assamese
,
English
,
Urdu
,
Marathi
,
हिन्दी
,
Bengali
,
Tamil