ಪ್ರಧಾನ ಮಂತ್ರಿಯವರ ಕಛೇರಿ
23ನೇ ಭಾರತ - ರಷ್ಯಾ ವಾರ್ಷಿಕ ಶೃಂಗಸಭೆಯ ನಂತರದ ಜಂಟಿ ಹೇಳಿಕೆ
प्रविष्टि तिथि:
05 DEC 2025 5:31PM by PIB Bengaluru
ಭಾರತ - ರಷ್ಯಾ: ನಂಬಿಕೆ ಮತ್ತು ಪರಸ್ಪರ ಗೌರವದಲ್ಲಿ ನೆಲೆಗೊಂಡಿರುವ ಕಾಲ-ಪರೀಕ್ಷಿತ ಪ್ರಗತಿಪರ ಪಾಲುದಾರಿಕೆ
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ರಷ್ಯಾದ ಒಕ್ಕೂಟದ ಅಧ್ಯಕ್ಷರಾದ ಗೌರವಾನ್ವಿತ ಶ್ರೀ ವ್ಲಾಡಿಮಿರ್ ಪುಟಿನ್ ಅವರು ಡಿಸೆಂಬರ್ 04-05, 2025 ರಂದು 23ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗಾಗಿ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು.
ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ಸವಲತ್ತು ಪಡೆದ/ಆದ್ಯತೆಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ನಾಯಕರು ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು. ಈ ವರ್ಷವು ಭಾರತ ಮತ್ತು ರಷ್ಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆ ಘೋಷಣೆಯ 25ನೇ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ, ಇದನ್ನು ಅಕ್ಟೋಬರ್ 2000ರಲ್ಲಿ ಗೌರವಾನ್ವಿತ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರ ಮೊದಲ ಅಧಿಕೃತ ಭಾರತ ಭೇಟಿಯ ಸಮಯದಲ್ಲಿ ಸ್ಥಾಪಿಸಲಾಯಿತು.
ಪರಸ್ಪರ ನಂಬಿಕೆ, ಪರಸ್ಪರರ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಗೌರವ ಮತ್ತು ಕಾರ್ಯತಂತ್ರದ ಒಮ್ಮುಖದಿಂದ ನಿರೂಪಿಸಲ್ಪಟ್ಟ ಈ ದೀರ್ಘಕಾಲೀನ ಮತ್ತು ಕಾಲ-ಪರೀಕ್ಷಿತ ಸಂಬಂಧದ ವಿಶೇಷ ಸ್ವರೂಪವನ್ನು ನಾಯಕರು ತಿಳಿಸಿದರು. ಹಂಚಿಕೆಯ ಜವಾಬ್ದಾರಿಗಳನ್ನು ಹೊಂದಿರುವ ಪ್ರಮುಖ ಶಕ್ತಿಗಳಾಗಿ, ಈ ಪ್ರಮುಖ ಬಾಂಧವ್ಯವು ಸಮಾನತೆ ಮತ್ತು ಅವಿಭಾಜ್ಯ ಭದ್ರತೆಯ ಆಧಾರದ ಮೇಲೆ ಖಚಿತಪಡಿಸಿಕೊಳ್ಳಬೇಕಾದ ಜಾಗತಿಕ ಶಾಂತಿ ಮತ್ತು ಸ್ಥಿರತೆಯ ಆಧಾರಸ್ತಂಭವಾಗಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.
ರಾಜಕೀಯ ಮತ್ತು ಕಾರ್ಯತಂತ್ರ, ಮಿಲಿಟರಿ ಮತ್ತು ಭದ್ರತೆ, ವ್ಯಾಪಾರ ಮತ್ತು ಹೂಡಿಕೆ, ಇಂಧನ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಮಾಣು, ಬಾಹ್ಯಾಕಾಶ, ಸಾಂಸ್ಕೃತಿಕ, ಶಿಕ್ಷಣ ಮತ್ತು ಮಾನವೀಯ ಸಹಕಾರ ಸೇರಿದಂತೆ ಸಹಕಾರದ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿರುವ ಬಹುಮುಖಿಯಾದ ಪರಸ್ಪರ ಪ್ರಯೋಜನಕಾರಿ ಭಾರತ-ರಷ್ಯಾ ಸಂಬಂಧಗಳನ್ನು ನಾಯಕರು ಸಕಾರಾತ್ಮಕವಾಗಿ ನಿರ್ಣಯಿಸಿದರು. ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವಾಗ ಎರಡೂ ಕಡೆಯವರು ಸಹಕಾರಕ್ಕಾಗಿ ಹೊಸ ಮಾರ್ಗಗಳನ್ನು ಸಕ್ರಿಯವಾಗಿ ಅನ್ವೇಷಿಸುತ್ತಿದ್ದಾರೆ ಎಂಬುದನ್ನು ತೃಪ್ತಿಯಿಂದ ಗಮನಿಸಲಾಯಿತು.
ಸಂಕೀರ್ಣ, ಸವಾಲಿನ ಮತ್ತು ಅನಿಶ್ಚಿತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತ-ರಷ್ಯಾ ಸಂಬಂಧಗಳು ಸ್ಥಿತಿಸ್ಥಾಪಕತ್ವವನ್ನು ಉಳಿಸಿಕೊಂಡಿವೆ ಎಂದು ನಾಯಕರು ತಿಳಿಸಿದರು. ಎರಡೂ ಕಡೆಯವರು ಸಮಕಾಲೀನ, ಸಮತೋಲಿತ, ಪರಸ್ಪರ ಪ್ರಯೋಜನಕಾರಿ, ಸುಸ್ಥಿರ ಮತ್ತು ದೀರ್ಘಕಾಲೀನ ಪಾಲುದಾರಿಕೆಯನ್ನು ರೂಪಿಸಲು ಶ್ರಮಿಸಿದ್ದಾರೆ. ಇಡೀ ಕಾರ್ಯಸೂಚಿಯ ವರ್ಣಪಟಲದಲ್ಲಿ ಭಾರತ-ರಷ್ಯಾ ಸಂಬಂಧಗಳ ಅಭಿವೃದ್ಧಿಯು ಹಂಚಿಕೆಯ ವಿದೇಶಾಂಗ ನೀತಿಯ ಆದ್ಯತೆಯಾಗಿದೆ. ಕಾರ್ಯತಂತ್ರದ ಪಾಲುದಾರಿಕೆಯ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು (ಅನ್ಲಾಕ್ ಮಾಡಲು) ಎಲ್ಲಾ ಪ್ರಯತ್ನಗಳನ್ನು ಮಾಡಲು ನಾಯಕರು ಒಪ್ಪಿಕೊಂಡರು.
ಯೆಕಟೆರಿನ್‌ಬರ್ಗ್ ಮತ್ತು ಕಜಾನ್‌ನಲ್ಲಿ ಭಾರತದ ಎರಡು ಕಾನ್ಸುಲೇಟ್ ಜನರಲ್‌ಗಳನ್ನು ತೆರೆಯುವುದನ್ನು ನಾಯಕರು ಸ್ವಾಗತಿಸಿದರು ಮತ್ತು ಅಂತರ-ಪ್ರಾದೇಶಿಕ ಸಹಕಾರ, ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳು ಹಾಗು ಜನತ- ಜನತೆ ನಡುವಣ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಅವುಗಟು ತ್ವರಿತವಾಗಿ ಕಾರ್ಯಾಚರಿಸುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದರು..
ಕಳೆದ ಶೃಂಗಸಭೆಯ ನಂತರ ಎಲ್ಲಾ ಹಂತಗಳಲ್ಲಿ ಸಂಪರ್ಕಗಳು ನಿರಂತರ ಬಲಗೊಳ್ಳುತ್ತಿರುವುದನ್ನು ನಾಯಕರು ತೃಪ್ತಿಯಿಂದ ಗಮನಿಸಿದರು, ಇದರಲ್ಲಿ ಕಜಾನ್‌ನಲ್ಲಿ ನಡೆದ 16ನೇ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಮತ್ತು ಟಿಯಾಂಜಿನ್‌ನಲ್ಲಿ ನಡೆದ 25ನೇ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಅವರ ನಡುವಿನ ಸಭೆಗಳು ಸೇರಿವೆ; ಭಾರತದ ವಿದೇಶಾಂಗ ಸಚಿವರು ಮತ್ತು ರಷ್ಯಾದ ಮೊದಲ ಉಪ ಪ್ರಧಾನಮಂತ್ರಿ ಸಹ-ಅಧ್ಯಕ್ಷತೆಯಲ್ಲಿ ವ್ಯಾಪಾರ, ಆರ್ಥಿಕ, ವೈಜ್ಞಾನಿಕ, ತಾಂತ್ರಿಕ ಮತ್ತು ಸಾಂಸ್ಕೃತಿಕ ಸಹಕಾರದ ಕುರಿತಾದ ಭಾರತ-ರಷ್ಯಾ ಅಂತರ ಸರ್ಕಾರಿ ಆಯೋಗದ (ಐಆರ್‌ಐಜಿಸಿ-ಟಿಇಸಿ) 26ನೇ ಅಧಿವೇಶನ ಮತ್ತು ಎರಡೂ ದೇಶಗಳ ರಕ್ಷಣಾ ಮಂತ್ರಿಗಳು ಸಹ-ಅಧ್ಯಕ್ಷತೆಯಲ್ಲಿ ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರದ ಕುರಿತಾದ ಐಆರ್‌ಐಜಿಸಿಯ (ಐಆರ್‌ಐಜಿಸಿ-ಎಂ & ಎಂಟಿಸಿ) 22ನೇ ಅಧಿವೇಶನ; ಲೋಕಸಭಾ ಸ್ಪೀಕರ್, ವಿದೇಶಾಂಗ ಸಚಿವರು, ರಕ್ಷಾ ಮಂತ್ರಿ, ರೈಲ್ವೆ, ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವರು, ಗೃಹ ವ್ಯವಹಾರ, ರಕ್ಷಣಾ, ಯುವ ವ್ಯವಹಾರಗಳು ಮತ್ತು ಕ್ರೀಡೆ, ಜವಳಿ ರಾಜ್ಯ ಸಚಿವರು ಮತ್ತು ಭಾರತದ ಕಡೆಯಿಂದ ನೀತಿ ಆಯೋಗದ ಉಪಾಧ್ಯಕ್ಷರು; ರಷ್ಯಾದ ಸ್ಟೇಟ್ ಡುಮಾ ಅಧ್ಯಕ್ಷರು, ಮೊದಲ ಉಪ ಪ್ರಧಾನಮಂತ್ರಿ, ಇಂಧನ ಸಚಿವರು, ಸಂಸ್ಕೃತಿ ಸಚಿವರ ಭೇಟಿಗಳು; ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿ ಕಾರ್ಯತಂತ್ರದ ಸಂವಾದ ನಡೆಸುವುದು, ವಿದೇಶಾಂಗ ಕಚೇರಿಯ ಸಮಾಲೋಚನೆಗಳು, ವಿಶ್ವಸಂಸ್ಥೆಯ ವಿಷಯಗಳ ಕುರಿತು ಸಮಾಲೋಚನೆಗಳು, ಭಯೋತ್ಪಾದನೆ ನಿಗ್ರಹದ ಜಂಟಿ ಕಾರ್ಯಕಾರಿ ಗುಂಪಿನ ಸಭೆ ಇತ್ಯಾದಿಗಳನ್ನು ಅವರು ಅವಲೋಕಿಸಿದರು.
ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ
ರಷ್ಯಾಕ್ಕೆ ಭಾರತದ ರಫ್ತುಗಳನ್ನು ಹೆಚ್ಚಿಸುವುದು, ಕೈಗಾರಿಕಾ ಸಹಕಾರವನ್ನು ಬಲಪಡಿಸುವುದು, ಹೊಸ ತಾಂತ್ರಿಕ ಮತ್ತು ಹೂಡಿಕೆ ಪಾಲುದಾರಿಕೆಗಳನ್ನು ರೂಪಿಸುವುದು, ವಿಶೇಷವಾಗಿ ಮುಂದುವರಿದ ಉನ್ನತ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಮತ್ತು ಸಹಕಾರದ ರೂಪಗಳನ್ನು ಕಂಡುಕೊಳ್ಳುವುದು ಸೇರಿದಂತೆ ದ್ವಿಪಕ್ಷೀಯ ವ್ಯಾಪಾರವನ್ನು ಸಮತೋಲಿತ ಮತ್ತು ಸುಸ್ಥಿರ ರೀತಿಯಲ್ಲಿ ವಿಸ್ತರಿಸುವ ತಮ್ಮ ಹಂಚಿಕೆಯ ಮಹತ್ವಾಕಾಂಕ್ಷೆಯನ್ನು ನಾಯಕರು ಪುನರುಚ್ಚರಿಸಿದರು.
ಭಾರತದ ಕಾರ್ಯತಂತ್ರದ ಕ್ಷೇತ್ರಗಳ ಅಭಿವೃದ್ಧಿಗಾಗಿ ಕಾರ್ಯಕ್ರಮ - 2030 ರವರೆಗೆ ರಷ್ಯಾ ಆರ್ಥಿಕ ಸಹಕಾರ (ಕಾರ್ಯಕ್ರಮ 2030) ಅಳವಡಿಸಿಕೊಳ್ಳುವುದನ್ನು ನಾಯಕರು ಸ್ವಾಗತಿಸಿದರು.
ಪರಸ್ಪರ ಆಸಕ್ತಿಯ ವಲಯಗಳನ್ನು ಒಳಗೊಂಡಂತೆ ಭಾರತ ಮತ್ತು ಯುರೇಷಿಯನ್ ಆರ್ಥಿಕ ಒಕ್ಕೂಟದ ನಡುವಿನ ಸರಕುಗಳ ಮೇಲಿನ ಮುಕ್ತ ವ್ಯಾಪಾರ ಒಪ್ಪಂದದ ಜಂಟಿ ಕಾರ್ಯದ ಚಾಲ್ತಿಯಲ್ಲಿರುವ ಪ್ರಗತಿಯನ್ನು ನಾಯಕರು ಶ್ಲಾಘಿಸಿದರು. ಹೂಡಿಕೆಗಳ ಉತ್ತೇಜನ ಮತ್ತು ರಕ್ಷಣೆಯ ಕುರಿತು ಪರಸ್ಪರ ಪ್ರಯೋಜನಕಾರಿ ಒಪ್ಪಂದದ ಕುರಿತು ಮಾತುಕತೆಗಳಲ್ಲಿ ಪ್ರಯತ್ನಗಳನ್ನು ತೀವ್ರಗೊಳಿಸುವಂತೆ ಅವರು ಎರಡೂ ಕಡೆಯವರಿಗೆ ನಿರ್ದೇಶನ ನೀಡಿದರು.
ಹೊಸದಿಲ್ಲಿಯಲ್ಲಿ (ನವೆಂಬರ್ 2024) ಮತ್ತು ಮಾಸ್ಕೋದಲ್ಲಿ (ಆಗಸ್ಟ್ 2025) ಅನುಕ್ರಮವಾಗಿ ನಡೆದ ಭಾರತ-ರಷ್ಯಾ ವ್ಯಾಪಾರ ವೇದಿಕೆಯ 25 ಮತ್ತು 26ನೇ ಅಧಿವೇಶನಗಳು ಮತ್ತು ಭಾರತ-ರಷ್ಯಾ ವ್ಯಾಪಾರ ವೇದಿಕೆಯ ಫಲಿತಾಂಶಗಳನ್ನು ನಾಯಕರು ಸ್ವಾಗತಿಸಿದರು.
ವಿಶ್ವ ವ್ಯಾಪಾರ ಸಂಸ್ಥೆಯನ್ನು ಕೇಂದ್ರವಾಗಿಟ್ಟುಕೊಂಡು ಮುಕ್ತ, ಎಲ್ಲರನ್ನೂ ಒಳಗೊಳ್ಳುವ, ಪಾರದರ್ಶಕ ಮತ್ತು ತಾರತಮ್ಯವಿಲ್ಲದ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಮಹತ್ವವನ್ನು ಎರಡೂ ಕಡೆಯವರು ತಿಳಿಸಿದರು. ಸುಂಕ ಮತ್ತು ಸುಂಕ ರಹಿತ ವ್ಯಾಪಾರ ಅಡೆತಡೆಗಳನ್ನು ಪರಿಹರಿಸುವುದು, ಲಾಜಿಸ್ಟಿಕ್ಸ್‌ನಲ್ಲಿನ ಅಡಚಣೆಗಳನ್ನು ತೆಗೆದುಹಾಕುವುದು, ಸಂಪರ್ಕವನ್ನು ಉತ್ತೇಜಿಸುವುದು, ಸುಗಮ ಪಾವತಿ ಕಾರ್ಯವಿಧಾನಗಳನ್ನು ಖಚಿತಪಡಿಸುವುದು, ವಿಮೆ ಮತ್ತು ಮರುವಿಮೆಯ ಸಮಸ್ಯೆಗಳಿಗೆ ಪರಸ್ಪರ ಸ್ವೀಕಾರಾರ್ಹ ಪರಿಹಾರಗಳನ್ನು ಕಂಡುಹಿಡಿಯುವುದು ಮತ್ತು ಎರಡೂ ದೇಶಗಳ ವ್ಯವಹಾರಗಳ ನಡುವೆ ನಿಯಮಿತ ಸಂವಹನ ಮೂಲಕ 2030 ರ ವೇಳೆಗೆ 100 ಶತಕೋಟಿ ಅಮೆರಿಕನ್ ಡಾಲರ್‌ಗಳ ಪರಿಷ್ಕೃತ ದ್ವಿಪಕ್ಷೀಯ ವ್ಯಾಪಾರ ಗುರಿಯನ್ನು ಸಕಾಲಿಕವಾಗಿ ಸಾಧಿಸುವುದು ಪ್ರಮುಖ ಅಂಶಗಳಾಗಿವೆ ಎಂದು ಎರಡೂ ಕಡೆಯವರು ತಿಳಿಸಿದರು.
ದ್ವಿಪಕ್ಷೀಯ ವ್ಯಾಪಾರದ ಅಡೆತಡೆಯಿಲ್ಲದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಕರೆನ್ಸಿಗಳ ಬಳಕೆಯ ಮೂಲಕ ದ್ವಿಪಕ್ಷೀಯ ಪಾವತಿ ಪರಿಹಾರ ವ್ಯವಸ್ಥೆಗಳನ್ನು ಜಂಟಿಯಾಗಿ ಅಭಿವೃದ್ಧಿಪಡಿಸುವುದನ್ನು ಮುಂದುವರಿಸಲು ರಷ್ಯಾ ಮತ್ತು ಭಾರತ ಒಪ್ಪಿಕೊಂಡಿವೆ. ಹೆಚ್ಚುವರಿಯಾಗಿ, ರಾಷ್ಟ್ರೀಯ ಪಾವತಿ ವ್ಯವಸ್ಥೆಗಳು, ಹಣಕಾಸು ಸಂದೇಶ ವ್ಯವಸ್ಥೆಗಳು ಮತ್ತು ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ ವೇದಿಕೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ಸಕ್ರಿಯಗೊಳಿಸುವ ಕುರಿತು ತಮ್ಮ ಸಮಾಲೋಚನೆಗಳನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ.
ಭಾರತಕ್ಕೆ ರಸಗೊಬ್ಬರಗಳ ದೀರ್ಘಾವಧಿಯ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಉಭಯ ಕಡೆಯವರೂ ಸ್ವಾಗತಿಸಿದರು ಮತ್ತು ಈ ಕ್ಷೇತ್ರದಲ್ಲಿ ಜಂಟಿ ಉದ್ಯಮಗಳ ಸ್ಥಾಪನೆಯ ಸಂಭಾವ್ಯತೆ ಬಗ್ಗೆ ಚರ್ಚಿಸಿದರು
ಕೌಶಲ್ಯಪೂರ್ಣ ಕಾರ್ಮಿಕರ ಚಲನಶೀಲತೆಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು.
ಸೇಂಟ್ ಪೀಟರ್ಸ್‌ಬರ್ಗ್ ಅಂತಾರಾಷ್ಟ್ರೀಯ ಆರ್ಥಿಕ ವೇದಿಕೆ (ಜೂನ್ 2025) ಮತ್ತು ಪೂರ್ವ ಆರ್ಥಿಕ ವೇದಿಕೆ (ಸೆಪ್ಟೆಂಬರ್ 2025) ಗಳಲ್ಲಿ ಭಾರತೀಯ ನಿಯೋಗಗಳ ಭಾಗವಹಿಸುವಿಕೆಯನ್ನು ರಷ್ಯಾದ ಕಡೆಯವರು ಸ್ವಾಗತಿಸಿದರು. ದ್ವಿಪಕ್ಷೀಯ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಸಹಕಾರವನ್ನು ಉತ್ತೇಜಿಸಲು ಈ ಆರ್ಥಿಕ ವೇದಿಕೆಗಳ ಜೊತೆಗೆ ಆಯೋಜಿಸಲಾದ ಭಾರತ-ರಷ್ಯಾ ವ್ಯವಹಾರ ಸಂವಾದದ ಕೊಡುಗೆಯನ್ನು ಎರಡೂ ಕಡೆಯವರು ಗಮನಿಸಿದರು.
ಇಂಧನ ಮೂಲಗಳು, ಅಮೂಲ್ಯ ಹರಳು/ಕಲ್ಲುಗಳು ಮತ್ತು ಲೋಹಗಳು ಸೇರಿದಂತೆ ಖನಿಜ ಸಂಪನ್ಮೂಲಗಳಲ್ಲಿ ಉತ್ಪಾದಕ ಮತ್ತು ಪರಸ್ಪರ ಪ್ರಯೋಜನಕಾರಿ ದ್ವಿಪಕ್ಷೀಯ ವ್ಯಾಪಾರದ ಮಹತ್ವವನ್ನು ನಾಯಕರು ಗಮನಿಸಿದರು, ಇದರ ಜೊತೆಗೆ ಅಂತರರಾಷ್ಟ್ರೀಯ ಪೂರೈಕೆ ಸರಪಳಿಗಳ ವಿಶ್ವಾಸಾರ್ಹತೆಗೆ ನಿರ್ಣಾಯಕ ಕಚ್ಚಾ ವಸ್ತುಗಳನ್ನೂ ಅವಲೋಕಿಸಿದರು. ಈ ಕ್ಷೇತ್ರದಲ್ಲಿ ಸಾರ್ವಭೌಮ ರಾಷ್ಟ್ರಗಳಾಗಿ ರಷ್ಯಾ ಮತ್ತು ಭಾರತ ನಡೆಸುತ್ತಿರುವ ಪರಿಣಾಮಕಾರಿ ಸಹಕಾರವು ಅವುಗಳ ರಾಷ್ಟ್ರೀಯ ಭದ್ರತೆ ಮತ್ತು ಸಾಮಾಜಿಕ ಯೋಗಕ್ಷೇಮದ ಮಹತ್ವದ ಅಂಶವಾಗಿದೆ.
ಇಂಧನ ಪಾಲುದಾರಿಕೆ
ವಿಶೇಷ ಮತ್ತು ಆದ್ಯತೆ ಪಡೆದ ಕಾರ್ಯತಂತ್ರದ ಪಾಲುದಾರಿಕೆಯ ಮಹತ್ವದ ಆಧಾರಸ್ತಂಭವಾಗಿ ಇಂಧನ ವಲಯದಲ್ಲಿ ಪರಸ್ಪರ ವ್ಯಾಪಕ ಸಹಕಾರವನ್ನು ಎರಡೂ ಕಡೆಯವರು ಚರ್ಚಿಸಿ ಶ್ಲಾಘಿಸಿದರು. ತೈಲ ಮತ್ತು ತೈಲ ಉತ್ಪನ್ನಗಳು, ತೈಲ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ ತಂತ್ರಜ್ಞಾನಗಳು, ತೈಲಕ್ಷೇತ್ರ ಸೇವೆಗಳು ಮತ್ತು ಅಪ್‌ಸ್ಟ್ರೀಮ್ ತಂತ್ರಜ್ಞಾನಗಳು ಮತ್ತು ಸಂಬಂಧಿತ ಮೂಲಸೌಕರ್ಯ, ಎಲ್‌ಎನ್‌ಜಿ ಮತ್ತು ಎಲ್‌ಪಿಜಿ ಸಂಬಂಧಿತ ಮೂಲಸೌಕರ್ಯ, ತಮ್ಮ ದೇಶಗಳಲ್ಲಿ ಅಸ್ತಿತ್ವದಲ್ಲಿರುವ ವಿವಿಧ ಯೋಜನೆಗಳು, ಭೂಗತ ಕಲ್ಲಿದ್ದಲು ಅನಿಲೀಕರಣ (ಯುಸಿಜಿ) ತಂತ್ರಜ್ಞಾನ, ಪರಮಾಣು ಯೋಜನೆಗಳು ಇತ್ಯಾದಿ ಕ್ಷೇತ್ರಗಳಲ್ಲಿ ಭಾರತ ಮತ್ತು ರಷ್ಯಾದ ಕಂಪನಿಗಳ ನಡುವಿನ ಪ್ರಸ್ತುತ ಮತ್ತು ಸಂಭಾವ್ಯ ಸಹಕಾರವನ್ನು ಎರಡೂ ಕಡೆಯವರು ಗಮನಿಸಿದರು. ಈ ಕ್ಷೇತ್ರದಲ್ಲಿ ಹೂಡಿಕೆ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ತ್ವರಿತ ಪರಿಹಾರದ ಮಹತ್ವವನ್ನು ಅವರು ಗಮನಿಸಿದರು ಮತ್ತು ಇಂಧನ ವಲಯದಲ್ಲಿ ತಮ್ಮ ಹೂಡಿಕೆದಾರರು ಎದುರಿಸುತ್ತಿರುವ ವಿವಿಧ ಕಳವಳಗಳನ್ನು ಪರಿಹರಿಸಲು ಒಪ್ಪಿಕೊಂಡರು.
ಸಾರಿಗೆ ಮತ್ತು ಸಂಪರ್ಕ
ಅಂತಾರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (ಐ.ಎನ್.ಎಸ್.ಟಿ.ಸಿ.), ಚೆನ್ನೈ-ವ್ಲಾಡಿವೋಸ್ಟಾಕ್ (ಪೂರ್ವ ಸಮುದ್ರ) ಕಾರಿಡಾರ್ ಮತ್ತು ಉತ್ತರ ಸಮುದ್ರ ಮಾರ್ಗವನ್ನು ಬೆಂಬಲಿಸಲು ಮೂಲಸೌಕರ್ಯ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸಂಪರ್ಕವನ್ನು ಸುಧಾರಿಸಲು ಲಾಜಿಸ್ಟಿಕ್ಸ್ ಲಿಂಕ್‌ಗಳನ್ನು ವಿಸ್ತರಿಸುವತ್ತ ಗಮನಹರಿಸಿ, ಸ್ಥಿರ ಮತ್ತು ಪರಿಣಾಮಕಾರಿ ಸಾರಿಗೆ ಕಾರಿಡಾರ್‌ಗಳನ್ನು ನಿರ್ಮಿಸುವಲ್ಲಿ ಸಹಕಾರವನ್ನು ಗಾಢಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಧ್ರುವೀಯ ನೀರಿನಲ್ಲಿ ಕಾರ್ಯನಿರ್ವಹಿಸುವ ಹಡಗುಗಳಿಗೆ ತಜ್ಞರ ತರಬೇತಿಯ ಕುರಿತಾದ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವುದನ್ನು ಅವರು ಸ್ವಾಗತಿಸಿದರು.
ಪರಸ್ಪರ ಪ್ರಯೋಜನಕಾರಿ ತಂತ್ರಜ್ಞಾನ ವಿನಿಮಯ ಕ್ಷೇತ್ರದಲ್ಲಿ ಪಾಲುದಾರಿಕೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿರುವ ರಷ್ಯಾ ಮತ್ತು ಭಾರತದ ರೈಲ್ವೆಗಳ ನಡುವಿನ ಫಲಪ್ರದ ಸಹಕಾರವನ್ನು ಎರಡೂ ಕಡೆಯವರು ಗಮನಿಸಿದರು.
ರಷ್ಯಾದ ದೂರ ಪೂರ್ವ ಮತ್ತು ಆರ್ಕ್ಟಿಕ್ನಲ್ಲಿ ಸಹಕಾರ
ರಷ್ಯಾದ ದೂರ ಪೂರ್ವ ಮತ್ತು ಆರ್ಕ್ಟಿಕ್ ವಲಯದಲ್ಲಿ ವ್ಯಾಪಾರ ಮತ್ತು ಹೂಡಿಕೆ ಸಹಕಾರವನ್ನು ತೀವ್ರಗೊಳಿಸಲು ಎರಡೂ ಕಡೆಯವರು ತಮ್ಮ ಸಿದ್ಧತೆಯನ್ನು ದೃಢಪಡಿಸಿದರು. 2024-2029ರ ಅವಧಿಗೆ ರಷ್ಯಾದ ದೂರ ಪೂರ್ವದಲ್ಲಿ ವ್ಯಾಪಾರ, ಆರ್ಥಿಕ ಮತ್ತು ಹೂಡಿಕೆ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಹಕಾರ ಕಾರ್ಯಕ್ರಮವು ಭಾರತ ಮತ್ತು ರಷ್ಯಾದ ದೂರ ಪೂರ್ವ ಪ್ರದೇಶದ ನಡುವೆ, ವಿಶೇಷವಾಗಿ ಕೃಷಿ, ಇಂಧನ, ಗಣಿಗಾರಿಕೆ, ಮಾನವಶಕ್ತಿ, ವಜ್ರಗಳು, ಔಷಧಗಳು, ಸಮುದ್ರ ಸಾರಿಗೆ ಇತ್ಯಾದಿ ಕ್ಷೇತ್ರಗಳಲ್ಲಿ ಮತ್ತಷ್ಟು ಸಹಕಾರಕ್ಕೆ ಅಗತ್ಯವಾದ ಚೌಕಟ್ಟನ್ನು ಒದಗಿಸುತ್ತದೆ.
ಆರ್ಕ್ಟಿಕ್ ಸಂಬಂಧಿತ ವಿಷಯಗಳ ಕುರಿತು ನಿಯಮಿತ ದ್ವಿಪಕ್ಷೀಯ ಸಮಾಲೋಚನೆಗಳನ್ನು ನಡೆಸುವ ಮಹತ್ವವನ್ನು ಎರಡೂ ಕಡೆಯವರು ತಿಳಿಸಿದರು ಮತ್ತು ಉತ್ತರ ಸಮುದ್ರ ಮಾರ್ಗದಲ್ಲಿ ಬಹುಮುಖಿ ದ್ವಿಪಕ್ಷೀಯ ಸಹಕಾರದಲ್ಲಿ ಆಗಿರುವ ಪ್ರಗತಿಯನ್ನು ಸ್ವಾಗತಿಸಿದರು. ಮಾರ್ಚ್ 2025 ರಲ್ಲಿ ಮುರ್ಮನ್ಸ್ಕ್‌ನಲ್ಲಿ ನಡೆದ 6ನೇ ಅಂತರರಾಷ್ಟ್ರೀಯ ಆರ್ಕ್ಟಿಕ್ ವೇದಿಕೆಯಲ್ಲಿ ಭಾರತೀಯ ನಿಯೋಗದ ಭಾಗವಹಿಸುವಿಕೆಯನ್ನು ರಷ್ಯಾದ ಕಡೆಯವರು ಶ್ಲಾಘಿಸಿದರು. ಆರ್ಕ್ಟಿಕ್ ಮಂಡಳಿಯಲ್ಲಿ ವೀಕ್ಷಕರಾಗಿ ಸಕ್ರಿಯ ಪಾತ್ರ ವಹಿಸಲು ಭಾರತೀಯ ಕಡೆಯವರು ತಮ್ಮ ಸಿದ್ಧತೆಯನ್ನು, ತಯಾರಿಯನ್ನು ವ್ಯಕ್ತಪಡಿಸಿದರು.
ನಾಗರಿಕ ಪರಮಾಣು ಸಹಕಾರ, ಬಾಹ್ಯಾಕಾಶದಲ್ಲಿ ಸಹಕಾರ
ಇಂಧನ ಚಕ್ರ, ಕೂಡಂಕುಲಂ ಪರಮಾಣು ವಿದ್ಯುತ್ ಸ್ಥಾವರ (ಕೆಕೆಎನ್‌ಪಿಪಿ) ನಿರ್ವಹಣೆಗೆ ಜೀವನ ಚಕ್ರ ಬೆಂಬಲ ಮತ್ತು ವಿದ್ಯುತ್ ರಹಿತ ಅನ್ವಯಿಕೆಗಳು ಸೇರಿದಂತೆ ಪರಮಾಣು ಶಕ್ತಿಯಲ್ಲಿ ಸಹಕಾರವನ್ನು ವಿಸ್ತರಿಸುವ ಉದ್ದೇಶವನ್ನು ಉಭಯ ಕಡೆಯವರು ದೃಢಪಡಿಸಿದರು, ಜೊತೆಗೆ ಪರಮಾಣು ಶಕ್ತಿಯ ಶಾಂತಿಯುತ ಬಳಕೆ ಮತ್ತು ಸಂಬಂಧಿತ ಉನ್ನತ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಪರಸ್ಪರ ಸಹಕಾರದ ಹೊಸ ಕಾರ್ಯಸೂಚಿಯನ್ನು ವಿಸ್ತರಿಸುವ ಉದ್ದೇಶವನ್ನು ದೃಢಪಡಿಸಿದರು. 2047ರ ವೇಳೆಗೆ ಭಾರತದ ಪರಮಾಣು ಇಂಧನ ಸಾಮರ್ಥ್ಯವನ್ನು 100 ಗಿಗಾವ್ಯಾಟ್‌ಗೆ ಹೆಚ್ಚಿಸುವ ಭಾರತ ಸರ್ಕಾರದ ಯೋಜನೆಗಳನ್ನು ಗಣನೆಗೆ ತೆಗೆದುಕೊಂಡು, ಕಾರ್ಯತಂತ್ರದ ಪಾಲುದಾರಿಕೆಯ ಮಹತ್ವದ ಅಂಶವಾಗಿ ಪರಮಾಣು ಶಕ್ತಿಯ ಶಾಂತಿಯುತ ಬಳಕೆಯಲ್ಲಿ ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಗಮನಿಸಿದರು.
ಉಳಿದ ಪರಮಾಣು ವಿದ್ಯುತ್ ಸ್ಥಾವರ ಘಟಕಗಳ ನಿರ್ಮಾಣ ಸೇರಿದಂತೆ ಕೆಕೆಎನ್‌ಪಿಪಿ ಅನುಷ್ಠಾನದಲ್ಲಿ ಸಾಧಿಸಿದ ಪ್ರಗತಿಯನ್ನು ಎರಡೂ ಕಡೆಯವರು ಸ್ವಾಗತಿಸಿದರು ಮತ್ತು ಉಪಕರಣಗಳು ಹಾಗು ಇಂಧನ ಪೂರೈಕೆಗಾಗಿ ಕಾಲಮಿತಿಗೆ ಬದ್ಧವಾಗಿರಲು ಒಪ್ಪಿಕೊಂಡರು.
ಪರಮಾಣು ವಿದ್ಯುತ್ ಸ್ಥಾವರಕ್ಕಾಗಿ ಭಾರತದಲ್ಲಿ ಎರಡನೇ ಸ್ಥಳದ ಕುರಿತು ಹೆಚ್ಚಿನ ಚರ್ಚೆಯ ಮಹತ್ವವನ್ನು ಉಭಯ ಕಡೆಯವರು ಗಮನಿಸಿದರು; ಹಿಂದಿನ ಸಹಿ ಮಾಡಿದ ಒಪ್ಪಂದಗಳಿಗೆ ಅನುಗುಣವಾಗಿ ಎರಡನೇ ಸ್ಥಳದ ಔಪಚಾರಿಕ ಹಂಚಿಕೆಯನ್ನು ಅಂತಿಮಗೊಳಿಸಲು ಭಾರತ ಶ್ರಮಿಸುತ್ತದೆ.
ರಷ್ಯಾದ ವಿನ್ಯಾಸ, ಸಂಶೋಧನೆ ಮತ್ತು ಪರಮಾಣು ವಿದ್ಯುತ್ ಸ್ಥಾವರಗಳ ಜಂಟಿ ಅಭಿವೃದ್ಧಿ, ಸ್ಥಳೀಕರಣ ಮತ್ತು ಪರಮಾಣು ಉಪಕರಣಗಳ ಜಂಟಿ ಉತ್ಪಾದನೆ ಮತ್ತು ರಷ್ಯಾ ವಿನ್ಯಾಸಗೊಳಿಸಿದ ದೊಡ್ಡ ಸಾಮರ್ಥ್ಯದ ಪರಮಾಣು ವಿದ್ಯುತ್ ಸ್ಥಾವರಗಳಿಗೆ ಇಂಧನ ಜೋಡಣೆಗಳ ವಿವಿಇಆರ್ ಕುರಿತು ತಾಂತ್ರಿಕ ಮತ್ತು ವಾಣಿಜ್ಯ ಚರ್ಚೆಗಳನ್ನು ತ್ವರಿತಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಬಾಹ್ಯಾಕಾಶದಲ್ಲಿ ಸಹಕಾರದ ಮಹತ್ವವನ್ನು ಗಮನಿಸಿದ ಎರಡೂ ಕಡೆಯವರು, ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಗಳು, ಉಪಗ್ರಹ ಉಡಾವಣೆ, ನಿಭಾವಣೆ ಮತ್ತು ಬಾಹ್ಯಾಕಾಶ ಗ್ರಹಗಳ ಪರಿಶೋಧನೆ ಸೇರಿದಂತೆ ಶಾಂತಿಯುತ ಉದ್ದೇಶಗಳಿಗಾಗಿ ಬಾಹ್ಯಾಕಾಶದ ಬಳಕೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ಸರಕಾರಿ ಬಾಹ್ಯಾಕಾಶ ನಿಗಮ "ರೋಸ್ಕೋಸ್ಮೋಸ್" ನಡುವಿನ ವರ್ಧಿತ ಪಾಲುದಾರಿಕೆಯನ್ನು ಸ್ವಾಗತಿಸಿದರು. ರಾಕೆಟ್ ಎಂಜಿನ್ ಅಭಿವೃದ್ಧಿ, ಉತ್ಪಾದನೆ ಮತ್ತು ಬಳಕೆಯಲ್ಲಿ ಪರಸ್ಪರ ಪ್ರಯೋಜನಕಾರಿ ಸಹಕಾರದಲ್ಲಿನ ಪ್ರಗತಿಯನ್ನು ಅವರು ಗಮನಿಸಿದರು.
ಮಿಲಿಟರಿ ಮತ್ತು ಮಿಲಿಟರಿ ತಾಂತ್ರಿಕ ಸಹಕಾರ
ಮಿಲಿಟರಿ ಮತ್ತು ಮಿಲಿಟರಿ-ತಾಂತ್ರಿಕ ಸಹಕಾರವು ಸಾಂಪ್ರದಾಯಿಕವಾಗಿ ಭಾರತ ಮತ್ತು ರಷ್ಯಾ ನಡುವಿನ ವಿಶೇಷ ಮತ್ತು ಆದ್ಯತೆ ಪಡೆದ ಕಾರ್ಯತಂತ್ರದ ಪಾಲುದಾರಿಕೆಯ ಆಧಾರಸ್ತಂಭವಾಗಿದೆ, ಇದು ಐ.ಆರ್.ಐ.ಜಿ.ಸಿ.-ಎಂ.ಮತ್ತು ಎಂ.ಟಿ.ಸಿ. ನೇತೃತ್ವದಲ್ಲಿ ಹಲವಾರು ದಶಕಗಳ ಜಂಟಿ ಪ್ರಯತ್ನಗಳು ಮತ್ತು ಫಲಪ್ರದ ಸಹಕಾರದ ಮೂಲಕ ಬಲಗೊಳ್ಳುತ್ತ ಬೆಳೆದಿದೆ.
ಡಿಸೆಂಬರ್ 4, 2025 ರಂದು ಹೊಸದಿಲ್ಲಿಯಲ್ಲಿ ನಡೆದ ಐ.ಆರ್.ಐ.ಜಿ.ಸಿ.-ಎಂ.ಮತ್ತು ಎಂ.ಟಿ.ಸಿ. ಯ 22ನೇ ಅಧಿವೇಶನದ ಫಲಿತಾಂಶಗಳನ್ನು ನಾಯಕರು ಸ್ವಾಗತಿಸಿದರು. ಭಾರತದ ಸ್ವಾವಲಂಬನೆಯ ಅನ್ವೇಷಣೆಗೆ ಸ್ಪಂದಿಸುತ್ತಾ, ಆಧುನಿಕ ರಕ್ಷಣಾ ತಂತ್ರಜ್ಞಾನ ಮತ್ತು ವ್ಯವಸ್ಥೆಗಳ ಪಾಲುದಾರಿಕೆಯು ಪ್ರಸ್ತುತ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಗೆ ಅನುವು ಮಾಡಿಕೊಡುತ್ತದೆ.
ಜೂನ್ 2025ರಲ್ಲಿ ಕ್ವಿಂಗ್ಡಾವೊದಲ್ಲಿ ಎಸ್.ಸಿ.ಒ. ಸದಸ್ಯ ರಾಷ್ಟ್ರಗಳ ರಕ್ಷಣಾ ಮಂತ್ರಿಗಳ ಸಭೆಯ ನೇಪಥ್ಯದಲ್ಲಿ ನಡೆದ ನಡೆದ ರಕ್ಷಣಾ ಮಂತ್ರಿಗಳ ಸಭೆ ಸೇರಿದಂತೆ ನಿಯಮಿತ ಮಿಲಿಟರಿ ಸಂಪರ್ಕಗಳ ಬಗ್ಗೆ ನಾಯಕರು ತೃಪ್ತಿ ವ್ಯಕ್ತಪಡಿಸಿದರು. ಸಶಸ್ತ್ರ ಪಡೆಗಳ ಜಂಟಿ ಮಿಲಿಟರಿ ಕವಾಯತು/ವ್ಯಾಯಾಮ “ಇಂದ್ರ” ವನ್ನು ಎರಡೂ ಕಡೆಯವರು ಶ್ಲಾಘಿಸಿದರು ಮತ್ತು ಜಂಟಿ ಮಿಲಿಟರಿ ಸಹಕಾರ ಚಟುವಟಿಕೆಗಳ ವೇಗವನ್ನು ಕಾಯ್ದುಕೊಳ್ಳಲು ಮತ್ತು ಮಿಲಿಟರಿ ನಿಯೋಗ ವಿನಿಮಯವನ್ನು ವಿಸ್ತರಿಸಲು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.
ಭಾರತೀಯ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಹಾಗೂ ಪರಸ್ಪರ ಸ್ನೇಹಪರ ಮೂರನೇ ದೇಶಗಳಿಗೆ ರಫ್ತು ಮಾಡುವ ಮೂಲಕ ಮೇಕ್-ಇನ್-ಇಂಡಿಯಾ ಕಾರ್ಯಕ್ರಮದಡಿಯಲ್ಲಿ ರಷ್ಯಾ ಮೂಲದ ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಾಧನಗಳ ನಿರ್ವಹಣೆಗಾಗಿ ಬಿಡಿಭಾಗಗಳು, ಘಟಕಗಳು, ಸಮುಚ್ಚಯಗಳು ಮತ್ತು ಇತರ ಉತ್ಪನ್ನಗಳ ಜಂಟಿ ಉತ್ಪಾದನೆಯನ್ನು ಭಾರತದಲ್ಲಿ ಉತ್ತೇಜಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಹಕಾರ
ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಅನ್ವಯಿಸುವಿಕೆಯನ್ನು ಉತ್ತೇಜಿಸಲು ಸರ್ಕಾರ ಮತ್ತು ಸರ್ಕಾರ, ಶೈಕ್ಷಣಿಕ ಮತ್ತು ಖಾಸಗಿ ವಲಯದ ಸಹಯೋಗವನ್ನು ಹೆಚ್ಚಿಸಲು ಎರಡೂ ಕಡೆಯವರು ಕರೆ ನೀಡಿದರು.
ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಆಧುನಿಕ ಉತ್ಪಾದನೆಗೆ ನಿರ್ಣಾಯಕ ಖನಿಜಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗುರುತಿಸಿ, ನಿರ್ಣಾಯಕ ಖನಿಜಗಳು ಮತ್ತು ಅಪರೂಪದ ಖನಿಜಗಳ, ಸಂಸ್ಕರಣೆ ಮತ್ತು ಮರುಬಳಕೆ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಗಾಢವಾಗಿಸಲು ಎರಡೂ ಕಡೆಯವರು ಆಸಕ್ತಿ ವ್ಯಕ್ತಪಡಿಸಿದರು.
ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಜಂಟಿ ಸಂಶೋಧನೆಯ ಮಹತ್ವವನ್ನು ತಿಳಿಸಿದ ಎರಡೂ ಕಡೆಯವರು, "ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಹಕಾರಕ್ಕಾಗಿ ಮಾರ್ಗಸೂಚಿ"ಯಡಿಯಲ್ಲಿ ಸಹಕಾರವನ್ನು ಬಲಪಡಿಸಲು ಕರೆ ನೀಡಿದರು. ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ತಂತ್ರಜ್ಞಾನಗಳ ಸಹ-ಅಭಿವೃದ್ಧಿ ಸೇರಿದಂತೆ ನವೀನ ತಂತ್ರಜ್ಞಾನಗಳ ಮೂಲಕ ಸಾಮಾಜಿಕ ಸವಾಲುಗಳನ್ನು ಎದುರಿಸಲು ಎರಡೂ ದೇಶಗಳ ನವೋದ್ಯಮಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅವಕಾಶಗಳನ್ನು ಬಳಸಿಕೊಳ್ಳಲು ಸರ್ಕಾರ ಮತ್ತು ಖಾಸಗಿ ವಲಯದ ನಡುವಿನ ಸಹಯೋಗವನ್ನು ಸುಗಮಗೊಳಿಸಲು ಅವರು ಒಪ್ಪಿಕೊಂಡರು. ಮಾಹಿತಿ ರಕ್ಷಣೆ, ನಿರ್ಣಾಯಕ ಮೂಲಸೌಕರ್ಯದ ಭದ್ರತೆ ಮತ್ತು ಕಾನೂನು ಜಾರಿ ಸೇರಿದಂತೆ ಡಿಜಿಟಲ್ ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸಹಕಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಲ್ಲಿ ಅವರು ತಮ್ಮ ಆಸಕ್ತಿಯನ್ನು ದೃಢಪಡಿಸಿದರು. ಜ್ಞಾನ ವಿನಿಮಯ, ಸಾಮರ್ಥ್ಯ ವೃದ್ಧಿ ಹಾಗು ಅನ್ವೇಷಕರುಮತ್ತು ಉದ್ಯಮಿಗಳ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯಗೊಳಿಸಲು ನವೋದ್ಯಮಗಳಿಗೆ ಮೃದು ಬೆಂಬಲ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲು ಮತ್ತು ಕಾರ್ಯಗತಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ವಿಜ್ಞಾನ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಂವಹನದ ಶ್ರೀಮಂತ ಅನುಭವವನ್ನು ಗಣನೆಗೆ ತೆಗೆದುಕೊಂಡು, ವಿವಿಧ ರೀತಿಯ ಶೈಕ್ಷಣಿಕ ಚಲನಶೀಲತೆ, ಶೈಕ್ಷಣಿಕ ಕಾರ್ಯಕ್ರಮಗಳು, ವೈಜ್ಞಾನಿಕ ಮತ್ತು ಸಂಶೋಧನಾ ಯೋಜನೆಗಳ ಅನುಷ್ಠಾನ ಮತ್ತು ವಿಶೇಷ ಅಂತರರಾಷ್ಟ್ರೀಯ ಪ್ರದರ್ಶನಗಳು, ಸಮ್ಮೇಳನಗಳು, ವಿಚಾರ ಸಂಕಿರಣಗಳನ್ನು ನಡೆಸುವುದು ಸೇರಿದಂತೆ ಶೈಕ್ಷಣಿಕ ಮತ್ತು ವೈಜ್ಞಾನಿಕ ಸಂಸ್ಥೆಗಳ ನಡುವೆ ಪಾಲುದಾರಿಕೆಯನ್ನು ಬೆಳೆಸುವಲ್ಲಿ ಪರಸ್ಪರ ಆಸಕ್ತಿಯನ್ನು ಉಭಯ ಕಡೆಯವರೂ ವ್ಯಕ್ತಪಡಿಸಿದರು. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಜಂಟಿ ಸಂಶೋಧನೆಯ ಮಹತ್ವವನ್ನು ತಿಳಿಸಿದ ಎರಡೂ ಕಡೆಯವರು, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತೀಯ-ರಷ್ಯಾ ಸಹಕಾರಕ್ಕಾಗಿ ಮಾರ್ಗಸೂಚಿಯ ಚೌಕಟ್ಟಿನೊಳಗೆ ಸಹಕಾರವನ್ನು ವಿಸ್ತರಿಸಲು ತಮ್ಮ ಆಸಕ್ತಿಯನ್ನು ದೃಢಪಡಿಸಿದರು.
ಸಾಂಸ್ಕೃತಿಕ ಸಹಕಾರ, ಪ್ರವಾಸೋದ್ಯಮ ಮತ್ತು ಜನರಿಂದ ಜನರಿಗೆ ವಿನಿಮಯ
ಭಾರತ-ರಷ್ಯಾ ವಿಶೇಷ ಮತ್ತು ಆದ್ಯತೆ ಪಡೆದ ಕಾರ್ಯತಂತ್ರದ ಪಾಲುದಾರಿಕೆಯ ಪ್ರಮುಖ ಅಂಶವೆಂದರೆ ಸಾಂಸ್ಕೃತಿಕ ಸಂವಹನ ಮತ್ತು ಜನರಿಂದ ಜನರಿಗೆ ವಿನಿಮಯ ಎಂದು ಎರಡೂ ಕಡೆಯವರು ಒಪ್ಪಿಕೊಂಡರು. ಎರಡೂ ದೇಶಗಳಲ್ಲಿ ಆಯೋಜಿಸಲಾದ ಪ್ರಮುಖ ಅಂತರರಾಷ್ಟ್ರೀಯ ಸಾಂಸ್ಕೃತಿಕ ವೇದಿಕೆಗಳು, ಪುಸ್ತಕ ಮೇಳಗಳು, ಉತ್ಸವಗಳು ಮತ್ತು ಕಲಾ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಅವರು ಶ್ಲಾಘಿಸಿದರು ಮತ್ತು ಭಾರತೀಯ ಮತ್ತು ರಷ್ಯಾದ ಸಂಸ್ಕೃತಿಯ ಪೂರ್ಣ ಪ್ರದರ್ಶನವನ್ನು ಗುರಿಯಾಗಿಟ್ಟುಕೊಂಡು ತಮ್ಮ ದೇಶಗಳಲ್ಲಿ ಸಮಾನ ಆಧಾರದ ಮೇಲೆ ಸಾಂಸ್ಕೃತಿಕ ವಿನಿಮಯ ಉತ್ಸವಗಳನ್ನು ನಡೆಸುವುದನ್ನು ಸ್ವಾಗತಿಸಿದರು.
ಭಾರತ ಮತ್ತು ರಷ್ಯಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಜಂಟಿ ಚಲನಚಿತ್ರ ನಿರ್ಮಾಣದ ಅಭಿವೃದ್ಧಿ ಮತ್ತು ಪರಸ್ಪರ ಭಾಗವಹಿಸುವಿಕೆ ಸೇರಿದಂತೆ ಚಲನಚಿತ್ರೋದ್ಯಮದಲ್ಲಿ ಸಹಕಾರವನ್ನು ವಿಸ್ತರಿಸುವ ಕಲ್ಪನೆಯನ್ನು ಎರಡೂ ಕಡೆಯವರು ಬೆಂಬಲಿಸಿದರು.
ರಷ್ಯಾ ಮತ್ತು ಭಾರತದ ನಡುವಿನ ಪ್ರವಾಸಿ ವಿನಿಮಯದಲ್ಲಿನ ನಿರಂತರ ಹೆಚ್ಚಳವನ್ನು ಎರಡೂ ಕಡೆಯವರು ಶ್ಲಾಘಿಸಿದರು ಮತ್ತು ಎರಡೂ ದೇಶಗಳು ಇ-ವೀಸಾವನ್ನು ಪರಿಚಯಿಸುವುದು/ಅಳವಡಿಸಿಕೊಳ್ಳುವುದು ಸೇರಿದಂತೆ ವೀಸಾ ವಿಧಿವಿಧಾನಗಳ ಸರಳೀಕರಣವನ್ನು ಸ್ವಾಗತಿಸಿದರು. ಭವಿಷ್ಯದಲ್ಲಿ ವೀಸಾ ಆಡಳಿತವನ್ನು ಮತ್ತಷ್ಟು ಸರಳಗೊಳಿಸುವ ಕೆಲಸವನ್ನು ಮುಂದುವರಿಸಲು ಅವರು ಒಪ್ಪಿಕೊಂಡರು.
ಭಾರತ ಮತ್ತು ರಷ್ಯಾದ ತಜ್ಞರು, ಚಿಂತಕರ ಚಾವಡಿಗಳು ಮತ್ತು ಸಂಸ್ಥೆಗಳ ನಡುವಿನ ವಿನಿಮಯ ವರ್ಧನೆ ಮತ್ತು ಸಂಪರ್ಕಗಳನ್ನು ಎರಡೂ ಕಡೆಯವರು ಶ್ಲಾಘಿಸಿದರು. ವರ್ಷಗಳಲ್ಲಿ, ಈ ಸಂವಾದದ ಹಾದಿಯು ಭಾರತ ಮತ್ತು ರಷ್ಯಾದ ಕಾರ್ಯತಂತ್ರ ಮತ್ತು ನೀತಿ ನಿರೂಪಣಾ ವಲಯಗಳು ಮತ್ತು ವ್ಯವಹಾರಗಳ ನಡುವೆ ಪರಸ್ಪರ ತಿಳುವಳಿಕೆಯನ್ನು ಇನ್ನಷ್ಟು ಉತ್ತೇಜಿಸಿದೆ, ಇದರಿಂದಾಗಿ ಕಾರ್ಯತಂತ್ರದ ಪಾಲುದಾರಿಕೆ ಮತ್ತಷ್ಟು ಬಲಗೊಂಡಿದೆ.
ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಾಂಪ್ರದಾಯಿಕವಾಗಿ ಬಲವಾದ ಸಹಕಾರವನ್ನು ಗುರುತಿಸಿದ ಎರಡೂ ಕಡೆಯವರು ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ವಿಶ್ವವಿದ್ಯಾಲಯಗಳು ಹಾಗು ಶಿಕ್ಷಣ ಸಂಸ್ಥೆಗಳ ನಡುವೆ ಶೈಕ್ಷಣಿಕ ಸಂಪರ್ಕವನ್ನು ಉತ್ತೇಜಿಸುವಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸಲು ಒಪ್ಪಿಕೊಂಡರು.
ವಿಶ್ವಸಂಸ್ಥೆ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ
ವಿಶ್ವಸಂಸ್ಥೆಯಲ್ಲಿನ ವಿಷಯಗಳ ಕುರಿತು ತಮ್ಮ ನಡುವಿನ ಉನ್ನತ ಮಟ್ಟದ ರಾಜಕೀಯ ಸಂವಾದ ಮತ್ತು ಸಹಕಾರವನ್ನು ಎರಡೂ ಕಡೆಯವರು ಗಮನಿಸಿದರು ಮತ್ತು ಅದನ್ನು ಮತ್ತಷ್ಟು ಆಳಗೊಳಿಸಲು ಒಪ್ಪಿಕೊಂಡರು. ವಿಶ್ವಸಂಸ್ಥೆಯು ವಹಿಸುವ ಕೇಂದ್ರ ಸಮನ್ವಯ ಪಾತ್ರದೊಂದಿಗೆ ಬಹುಪಕ್ಷೀಯತೆಯನ್ನು ಪುನರುಜ್ಜೀವನಗೊಳಿಸುವ ಮಹತ್ವವನ್ನು ಅವರು ತಿಳಿಸಿದರು. ಅಂತಾರಾಷ್ಟ್ರೀಯ ಕಾನೂನಿಗೆ ಗೌರವದ ಪ್ರಾಮುಖ್ಯತೆಯನ್ನು ಅವರು ತಿಳಿಸಿದರು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳಿಗೆ ತಮ್ಮ ಬದ್ಧತೆಯನ್ನು ತಿಳಿಸಿದರು.
ಸಮಕಾಲೀನ ಜಾಗತಿಕ ವಾಸ್ತವಗಳನ್ನು ಪ್ರತಿಬಿಂಬಿಸಲು ಮತ್ತು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅದನ್ನು ಹೆಚ್ಚು ಪ್ರಾತಿನಿಧಿಕ, ಪರಿಣಾಮಕಾರಿ ಮತ್ತು ದಕ್ಷತೆಯುಕ್ತವನ್ನಾಗಿ ಮಾಡಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಗ್ರ ಸುಧಾರಣೆಗೆ ಎರಡೂ ಕಡೆಯವರು ಕರೆ ನೀಡಿದರು. ಸುಧಾರಿತ ಮತ್ತು ವಿಸ್ತೃತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಶಾಶ್ವತ ಸದಸ್ಯತ್ವಕ್ಕೆ ರಷ್ಯಾ ತನ್ನ ದೃಢ ಬೆಂಬಲವನ್ನು ಪುನರುಚ್ಚರಿಸಿತು.
ಎರಡೂ ಕಡೆಯವರು ಜಿ20 ಸ್ವರೂಪದೊಳಗೆ ತಮ್ಮ ಸಹಕಾರವನ್ನು ಉಲ್ಲೇಖಿಸಿದರು ಮತ್ತು ಅದನ್ನು ತೀವ್ರಗೊಳಿಸಲು ಒಪ್ಪಿಕೊಂಡರು. 2023ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಪ್ರಮುಖ ಪ್ರಾಯೋಗಿಕ ಪರಂಪರೆಯೆಂದರೆ ಅಂತರರಾಷ್ಟ್ರೀಯ ಆರ್ಥಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಮುಖ್ಯ ವೇದಿಕೆಯ ಕಾರ್ಯಸೂಚಿಯಲ್ಲಿ ಜಾಗತಿಕ ದಕ್ಷಿಣದ ದೇಶಗಳ ಆದ್ಯತೆಗಳ ಕ್ರೋಢೀಕರಣ ಮತ್ತು ಆಫ್ರಿಕನ್ ಒಕ್ಕೂಟದ ಪೂರ್ಣ ಸದಸ್ಯರ ಶ್ರೇಣಿಗೆ ಪ್ರವೇಶ ಎಂದು ಅವರು ತಿಳಿಸಿದರು. ಜಾಗತಿಕ ವ್ಯವಹಾರಗಳಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸ್ಥಾನವನ್ನು ಬಲಪಡಿಸುವ ಪರವಾಗಿ ಪ್ರಮುಖ ಸಂಕೇತವನ್ನು ಕಳುಹಿಸುವ ಭಾರತೀಯ ಅಧ್ಯಕ್ಷತೆಯಲ್ಲಿ ವಾಯ್ಸ್ ಆಫ್ ಗ್ಲೋಬಲ್ ಸೌತ್ ವರ್ಚುವಲ್ ಶೃಂಗಸಭೆಗಳನ್ನು ನಡೆಸುವುದನ್ನು ಅವರು ಸ್ವಾಗತಿಸಿದರು.
ಜಿ20 ಪ್ರಮುಖ ಅಂತರರಾಷ್ಟ್ರೀಯ ಆರ್ಥಿಕ ವೇದಿಕೆಯಾಗಿದ್ದು, ಇದು ಸಮಾನ ಮತ್ತು ಪರಸ್ಪರ ಪ್ರಯೋಜನಕಾರಿ ನೆಲೆಯಲ್ಲಿ ಉದಯೋನ್ಮುಖ ಮತ್ತು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ಸಂವಾದಕ್ಕೆ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ತಿಳಿಸಿದರು. ಒಮ್ಮತದ ಆಧಾರದ ಮೇಲೆ ಮತ್ತು ಅದರ ಪ್ರಮುಖ ತೀರ್ಪಿನ ಮೇಲೆ ಕೇಂದ್ರೀಕರಿಸುವ ಮೂಲಕ ಜಿ20 ಯ ನಿರಂತರ ಮತ್ತು ಉತ್ಪಾದಕ ಕಾರ್ಯನಿರ್ವಹಣೆಯ ಮಹತ್ವವನ್ನು ಅವರು ಗುರುತಿಸಿದರು.
ಎರಡೂ ಕಡೆಯವರು ತಮ್ಮ ಬ್ರಿಕ್ಸ್ ಪಾಲುದಾರಿಕೆಯನ್ನು ಬಲಪಡಿಸುವ ಮಹತ್ವವನ್ನು ತಿಳಿಸಿದರು ಮತ್ತು ವಿಸ್ತೃತ ಬ್ರಿಕ್ಸ್‌ನಲ್ಲಿ ರಾಜಕೀಯ ಮತ್ತು ಭದ್ರತೆ, ಆರ್ಥಿಕ ಮತ್ತು ಹಣಕಾಸು, ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ಸಹಕಾರ ಎಂಬ ಮೂರು ಸ್ತಂಭಗಳ ಅಡಿಯಲ್ಲಿ ಸಹಕಾರವನ್ನು ಉತ್ತೇಜಿಸಲು ತಮ್ಮನ್ನು ತಾವು ಮತ್ತಷ್ಟು ಬದ್ಧತೆಗೆ ಒಳಪಡಿಸಿಕೊಂಡರು. ಪರಸ್ಪರ ಗೌರವ ಮತ್ತು ತಿಳುವಳಿಕೆ, ಸಾರ್ವಭೌಮ ಸಮಾನತೆ, ಒಗ್ಗಟ್ಟು, ಪ್ರಜಾಪ್ರಭುತ್ವ, ಮುಕ್ತತೆ, ಎಲ್ಲರನ್ನೂ ಒಳಗೊಳ್ಳುವಿಕೆ, ಸಹಯೋಗ ಮತ್ತು ಒಮ್ಮತದ ಬ್ರಿಕ್ಸ್ ಮನೋಭಾವಕ್ಕೆ ಅವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು. 2026 ರಲ್ಲಿ ಭಾರತದ ಮುಂಬರುವ ಬ್ರಿಕ್ಸ್ ಅಧ್ಯಕ್ಷತೆಗೆ ರಷ್ಯಾ ತನ್ನ ಸಂಪೂರ್ಣ ಬೆಂಬಲವನ್ನು ಪ್ರಕಟಿಸಿತು.
ರಷ್ಯಾ ಮತ್ತು ಭಾರತದ ನಡುವಿನ ವಿಶೇಷ ಮತ್ತು ಆದ್ಯತೆ ಪಡೆದ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸಲು ಶಾಂಘೈ ಸಹಕಾರ ಸಂಸ್ಥೆಯ (SCO) ಚೌಕಟ್ಟಿನೊಳಗೆ ತಮ್ಮ ಜಂಟಿ ಕೆಲಸದ ಮಹತ್ವವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.
ರಷ್ಯಾದ ಒಕ್ಕೂಟದ ಗೌರವಾನ್ವಿತ ಪ್ರಧಾನಮಂತ್ರಿಯವರ ಅಧ್ಯಕ್ಷತೆಯಲ್ಲಿ 2025ರ ನವೆಂಬರ್ 17-18 ರಂದು ಮಾಸ್ಕೋದಲ್ಲಿ ನಡೆದ ಎಸ್.ಸಿ.ಒ. ಸರ್ಕಾರಿ ಮುಖ್ಯಸ್ಥರ ಮಂಡಳಿಯ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಭಾರತವು ರಷ್ಯಾವನ್ನು ಶ್ಲಾಘಿಸಿತು. 2026 ರಲ್ಲಿ ಭಾರತದಲ್ಲಿ ನಡೆಯಲಿರುವ ಎಸ್.ಸಿ.ಒ. ನಾಗರಿಕತಾ ಸಂವಾದ ವೇದಿಕೆಯನ್ನು ಸ್ಥಾಪಿಸುವ ಭಾರತದ ಉಪಕ್ರಮವನ್ನು ರಷ್ಯಾ ಕಡೆಯವರು ಶ್ಲಾಘಿಸಿದರು.
ಅಂತಾರಾಷ್ಟ್ರೀಯ ಕಾನೂನಿನನ್ವಯ ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ತತ್ವಗಳು ಮತ್ತು ಸಾಂಸ್ಕೃತಿಕ ಮತ್ತು ನಾಗರಿಕ ವೈವಿಧ್ಯತೆಯ ಆಧಾರದ ಮೇಲೆ ಪ್ರತಿನಿಧಿ, ಪ್ರಜಾಪ್ರಭುತ್ವ, ನ್ಯಾಯಯುತ ಬಹುಧ್ರುವೀಯ ವಿಶ್ವ ಕ್ರಮವನ್ನು ರೂಪಿಸುವಲ್ಲಿ ಎಸ್.ಸಿ.ಒ. ಪಾತ್ರದ ಪ್ರಾಮುಖ್ಯತೆ ಹೆಚ್ಚುತ್ತಿರುವುದನ್ನು ಪಾತ್ರವನ್ನು ಎರಡೂ ಕಡೆಯವರು ಗಮನಿಸಿದರು.
ರಾಜಕೀಯ, ಭದ್ರತೆ, ಆರ್ಥಿಕತೆ, ಸಂಸ್ಕೃತಿ ಮತ್ತು ಮಾನವೀಯ ಸಂಬಂಧಗಳ ಕ್ಷೇತ್ರಗಳಲ್ಲಿ ಎಸ್.ಸಿ.ಒ.ಯ ಸಾಮರ್ಥ್ಯ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಹತ್ವವನ್ನು ಎರಡೂ ಕಡೆಯವರು ತಿಳಿಸಿದರು. ಈ ಸಂದರ್ಭದಲ್ಲಿ, ವಿಶೇಷವಾಗಿ ಭಯೋತ್ಪಾದನೆ, ಉಗ್ರವಾದ, ಪ್ರತ್ಯೇಕತಾವಾದ, ಮಾದಕವಸ್ತು ಕಳ್ಳಸಾಗಣೆ, ಗಡಿಯಾಚೆಗಿನ ಸಂಘಟಿತ ಅಪರಾಧ ಮತ್ತು ಮಾಹಿತಿ ಭದ್ರತಾ ಬೆದರಿಕೆಗಳನ್ನು ಎದುರಿಸುವ ಕ್ಷೇತ್ರಗಳಲ್ಲಿ ಎಸ್.ಸಿ.ಒ. ಯ ಆಧುನೀಕರಣವನ್ನು ಉತ್ತೇಜಿಸುವ ಅಗತ್ಯವನ್ನು ಎರಡೂ ಕಡೆಯವರು ತಿಳಿಸಿದರು. ತಾಷ್ಕೆಂಟ್‌ನಲ್ಲಿ ಭದ್ರತಾ ಸವಾಲುಗಳು ಮತ್ತು ಬೆದರಿಕೆಗಳನ್ನು ಎದುರಿಸುವ ಸಾರ್ವತ್ರಿಕ ಕೇಂದ್ರ ಮತ್ತು ದುಶಾಂಬೆಯಲ್ಲಿ ಮಾದಕವಸ್ತು ನಿಗ್ರಹ ಕೇಂದ್ರವನ್ನು ಸ್ಥಾಪಿಸಲು ಅವರು ವಿಶೇಷ ಗಮನ ಹರಿಸಲಿದ್ದಾರೆ.
ಸುಧಾರಿತ ಬಹುಪಕ್ಷೀಯತೆಯತ್ತ ಪ್ರಯತ್ನಗಳು, ಅಂತಾರಾಷ್ಟ್ರೀಯ ಆರ್ಥಿಕ ಆಡಳಿತ ಸಂಸ್ಥೆಗಳ ಸುಧಾರಣೆ ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳು, ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಆಯಾಮಗಳಲ್ಲಿ ಎಸ್.ಡಿ.ಜಿ. ಗಳ ಸಾಧನೆಗೆ ಕೊಡುಗೆ ನೀಡುವುದು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು, ನಿರ್ಣಾಯಕ ಖನಿಜಗಳು ಸೇರಿದಂತೆ ಅಂತರರಾಷ್ಟ್ರೀಯ ಪೂರೈಕೆ ಸರಪಳಿಗಳ ಸುಸ್ಥಿರತೆಯನ್ನು ಹೆಚ್ಚಿಸುವುದು ಮತ್ತು ಸ್ಥಿತಿಸ್ಥಾಪಕತ್ವವನ್ನು ಅಭಿವೃದ್ಧಿಪಡಿಸುವುದು, ಮುಕ್ತ ಮತ್ತು ನ್ಯಾಯಯುತ ವ್ಯಾಪಾರ ಮಾನದಂಡಗಳ ಅನುಸರಣೆ ಮತ್ತು ಹವಾಮಾನ ಬದಲಾವಣೆಯಂತಹ ಪ್ರಮುಖ ವಿಷಯಗಳ ಕುರಿತು ಜಿ20, ಬ್ರಿಕ್ಸ್ ಮತ್ತು ಎಸ್.ಸಿ.ಒ. ದೊಳಗೆ ಆಂತರಿಕ ಸಂವಹನವನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಬಾಹ್ಯಾಕಾಶ ಚಟುವಟಿಕೆಗಳ ದೀರ್ಘಕಾಲೀನ ಸುಸ್ಥಿರತೆಯ ವಿಷಯಗಳು ಸೇರಿದಂತೆ ಬಾಹ್ಯಾಕಾಶದ ಶಾಂತಿಯುತ ಬಳಕೆಗಳ ಕುರಿತಾದ ವಿಶ್ವಸಂಸ್ಥೆಯ ಸಮಿತಿಯೊ (ಯು.ಎನ್.ಕೊಪೌಸ್ -UN COPUOS) ಳಗೆ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಎರಡೂ ಕಡೆಯವರು ಉದ್ದೇಶಿಸಿದ್ದಾರೆ.
ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳ ಪ್ರಸರಣ-ನಿಷೇಧಕ್ಕಾಗಿ ಜಾಗತಿಕ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕೆ ರಷ್ಯಾ ತನ್ನ ಬಲವಾದ ಬೆಂಬಲವನ್ನು ವ್ಯಕ್ತಪಡಿಸಿತು. ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸಲು ಪರಸ್ಪರ ನಂಬಿಕೆಯ ಮಟ್ಟವನ್ನು ಹೆಚ್ಚಿಸುವತ್ತ ಕೆಲಸ ಮಾಡುವಂತೆ ಅಂತರರಾಷ್ಟ್ರೀಯ ಸಮುದಾಯದ ಎಲ್ಲಾ ಸದಸ್ಯರನ್ನು ಎರಡೂ ಕಡೆಯವರು ಒತ್ತಾಯಿಸಿದರು. ರಫ್ತು ನಿಯಂತ್ರಣಗಳ ಪ್ರಸರಣ-ರಹಿತ ಸ್ವರೂಪ (ನಿಶಸ್ತ್ರೀಕರಣ ಸ್ವರೂಪ ) ಮತ್ತು ಭದ್ರತೆ ಮತ್ತು ವಾಣಿಜ್ಯ ಪರಿಗಣನೆಯ ನಡುವಿನ ಸಮತೋಲನವನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ಈ ಕ್ಷೇತ್ರದಲ್ಲಿ ಸಹಕಾರವನ್ನು ಮುಂದುವರಿಸುವ ಉದ್ದೇಶವನ್ನು ಹಾಗೂ ತಂತ್ರಜ್ಞಾನದ ಶಾಂತಿಯುತ ಬಳಕೆಯನ್ನು ಎರಡೂ ಕಡೆಯವರು ತಿಳಿಸಿದರು.
ಪೂರ್ವ ಏಷ್ಯಾ ಶೃಂಗಸಭೆ, ಆಸಿಯಾನ್ ಪ್ರಾದೇಶಿಕ ವೇದಿಕೆ, ಆಸಿಯಾನ್ ರಕ್ಷಣಾ ಮಂತ್ರಿಗಳ ಸಭೆ ಪ್ಲಸ್ ಸೇರಿದಂತೆ ಪ್ರಾದೇಶಿಕ ಶಾಂತಿ ಮತ್ತು ಭದ್ರತೆಯನ್ನು ಗಾಢವಾಗಿಸುವ ಗುರಿಯನ್ನು ಹೊಂದಿರುವ ವಿವಿಧ ಪ್ರಾದೇಶಿಕ ವೇದಿಕೆಗಳಲ್ಲಿ ಸಹಕಾರವನ್ನು ಬಲಪಡಿಸುವ ಮಹತ್ವವನ್ನು ಎರಡೂ ಕಡೆಯವರು ತಿಳಿಸಿದರು.
ಬ್ಯಾಕ್ಟೀರಿಯೊಲಾಜಿಕಲ್ (ಜೈವಿಕ) ಮತ್ತು ಟಾಕ್ಸಿನ್ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ ಮತ್ತು ದಾಸ್ತಾನು ನಿಷೇಧ ಮತ್ತು ಅವುಗಳ ವಿನಾಶ (ಬಿಟಿಡಬ್ಲ್ಯೂಸಿ) ಕುರಿತ ಸಮಾವೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮತ್ತು ಸ್ಥಿರವಾಗಿ ಬಲಪಡಿಸುವ ಅಗತ್ಯವನ್ನು ಪಕ್ಷಗಳು ತಿಳಿಸಿದವು, ಇದರಲ್ಲಿ ಅದರ ಸಾಂಸ್ಥೀಕರಣವೂ ಸೇರಿದೆ, ಜೊತೆಗೆ ಪರಿಣಾಮಕಾರಿ ಪರಿಶೀಲನಾ ಕಾರ್ಯವಿಧಾನದೊಂದಿಗೆ ಕಾನೂನುಬದ್ಧವಾಗಿಸುವ ಶಿಷ್ಟಾಚಾರ (ಪ್ರೋಟೋಕಾಲ್ ) ವನ್ನು ಅಳವಡಿಸಿಕೊಳ್ಳುವುದೂ ಒಳಗೊಂಡಿದೆ. ಬಿಟಿಡಬ್ಲ್ಯೂಸಿಯ ಕಾರ್ಯಗಳನ್ನು ನಕಲು ಮಾಡುವ ಯಾವುದೇ ಕಾರ್ಯವಿಧಾನಗಳನ್ನು ಸ್ಥಾಪಿಸುವುದನ್ನು ಅವರು ವಿರೋಧಿಸುತ್ತಾರೆ.
ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ಸ್ಪರ್ಧೆಯನ್ನು ತಡೆಗಟ್ಟುವುದನ್ನು ಕಾನೂನುಬದ್ಧವಾಗಿಸುವ ಸಾಧನದ ಕುರಿತು ಮಾತುಕತೆಗಳನ್ನು ಪ್ರಾರಂಭಿಸುವ ತುರ್ತು ಅಗತ್ಯವನ್ನು ಉಭಯ ಕಡೆಯವರು ತಿಳಿಸಿದರು. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಇಡುವುದನ್ನು ನಿಷೇಧಿಸುವುದು ಮತ್ತು ಬಾಹ್ಯಾಕಾಶದಿಂದ ಅಥವಾ ಬಾಹ್ಯಾಕಾಶದಲ್ಲಿ ಬಲಪ್ರಯೋಗದ ಬೆದರಿಕೆಯನ್ನು ನಿಷೇಧಿಸುವುದು.ಬಾಹ್ಯಾಕಾಶದ ವಿರುದ್ದ ಬಲಪ್ರಯೋಗ ನಿಷೇಧ ಕುರಿತೂ ಅದು ಗಮನ ಹರಿಸಲಿದೆ. ಅಂತಹ ದಾಖಲೆಗೆ ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಇಡುವುದನ್ನು ತಡೆಗಟ್ಟುವ ಒಪ್ಪಂದದ ಕರಡು ಮತ್ತು ಬಾಹ್ಯಾಕಾಶ ವಸ್ತುಗಳ ವಿರುದ್ಧ ಬಲಪ್ರಯೋಗದ ಬೆದರಿಕೆ ಅಥವಾ ಬಳಕೆಯ ಬಗ್ಗೆ ಹಾಗೂ 2024 ರಲ್ಲಿ ಅಂಗೀಕರಿಸಲಾದ ಸಂಬಂಧಿತ ಸರ್ಕಾರಿ ತಜ್ಞರ ಗುಂಪಿನ ವರದಿಯಾಗಿರಬಹುದು ಎಂದು ಎರಡೂ ಕಡೆಯವರು ಗಮನಿಸಿದರು.
ನಮ್ಮ ದೇಶಗಳನ್ನು ಒಗ್ಗೂಡಿಸುವ ಜೈವಿಕ ವೈವಿಧ್ಯತೆಯ ಸಂರಕ್ಷಣೆ ಮತ್ತು ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದಗಳ, ವಿಶೇಷವಾಗಿ ವಲಸೆ ಹಕ್ಕಿ ಪ್ರಭೇದಗಳ ರಕ್ಷಣೆಯನ್ನು ಖಚಿತಪಡಿಸುವ ಅಂತರರಾಷ್ಟ್ರೀಯ ಒಪ್ಪಂದಗಳಲ್ಲಿ ಪ್ರತಿಫಲಿಸುವ ತತ್ವಗಳಿಗೆ ತಮ್ಮ ಬದ್ಧತೆಯನ್ನು ನಾಯಕರು ಪುನರುಚ್ಚರಿಸಿದರು.
ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ)ಗೆ ಸೇರಲು ರಷ್ಯಾ ಕಡೆಯಿಂದ ಫ್ರೇಮ್‌ವರ್ಕ್ ಒಪ್ಪಂದವನ್ನು ಅಳವಡಿಸಿಕೊಳ್ಳುವುದನ್ನು ಎರಡೂ ಕಡೆಯವರು ಸ್ವಾಗತಿಸಿದರು. ಅಂತಾರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ (ಸಿಡಿಆರ್‌ಐ) ಕ್ಕೆ ರಷ್ಯಾ ಶೀಘ್ರವಾಗಿ ಸೇರ್ಪಡೆಗೊಳ್ಳುವುದನ್ನು ಭಾರತದ ಕಡೆಯವರು ಎದುರು ನೋಡುತ್ತಿದ್ದಾರೆ.
ಜಾಗತಿಕ ಆರ್ಥಿಕ ಸವಾಲುಗಳನ್ನು ಎದುರಿಸಲು ಜಂಟಿ ವಿಧಾನಗಳ ಅಭಿವೃದ್ಧಿಯನ್ನು ಮುಂದುವರಿಸಲು, ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಪರಿವರ್ತನೆಯ ಸಮಯದಲ್ಲಿ ಆರ್ಥಿಕತೆಗಳಿಗೆ ಹವಾಮಾನ ಹಣಕಾಸು ಮತ್ತು ತಂತ್ರಜ್ಞಾನಗಳಿಗೆ ಹೆಚ್ಚಿನ ಪ್ರವೇಶವನ್ನು ಸಜ್ಜುಗೊಳಿಸಲು ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಆಡಳಿತ ಸಂಸ್ಥೆಗಳ, ವಿಶೇಷವಾಗಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಸಮಂಜಸವಾದ ಸುಧಾರಣೆಯನ್ನು ಖಚಿತಪಡಿಸಿಕೊಳ್ಳಲು ಎರಡೂ ಕಡೆಯವರು ಒಪ್ಪಿಕೊಂಡರು.
ಭಯೋತ್ಪಾದನೆ ನಿಗ್ರಹ
ಭಯೋತ್ಪಾದನೆ, ಉಗ್ರವಾದ, ಅಂತಾರಾಷ್ಟ್ರೀಯ ಸಂಘಟಿತ ಅಪರಾಧ, ಹಣ ವರ್ಗಾವಣೆ, ಭಯೋತ್ಪಾದಕ ಹಣಕಾಸು ಮತ್ತು ಅಕ್ರಮ ಮಾದಕವಸ್ತು ಕಳ್ಳಸಾಗಣೆ ಮುಂತಾದ ಸಾಮಾನ್ಯ ಸವಾಲುಗಳು ಮತ್ತು ಬೆದರಿಕೆಗಳನ್ನು ಎದುರಿಸುವ ಕ್ಷೇತ್ರದಲ್ಲಿ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಬಲಪಡಿಸುವ ಬದ್ಧತೆಯನ್ನು ಎರಡೂ ಕಡೆಯವರು ಪುನರುಚ್ಚರಿಸಿದರು.
ಭಯೋತ್ಪಾದಕರ ಗಡಿಯಾಚೆಗಿನ ಚಲನೆ ಮತ್ತು ಭಯೋತ್ಪಾದಕ ಹಣಕಾಸು ಜಾಲಗಳು ಮತ್ತು ಸುರಕ್ಷಿತ ತಾಣಗಳು ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದನೆ ಮತ್ತು ಅದರ ಅಭಿವ್ಯಕ್ತಿಗಳನ್ನು ತಡೆಗಟ್ಟಲು ಮತ್ತು ಎದುರಿಸಲು ಇಬ್ಬರೂ ನಾಯಕರು ತಮ್ಮ ಬಲವಾದ ಬದ್ಧತೆಯನ್ನು ಪುನರುಚ್ಚರಿಸಿದರು. ಏಪ್ರಿಲ್ 22, 2025 ರಂದು ಭಾರತದ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಮತ್ತು ಮಾರ್ಚ್ 22, 2024 ರಂದು ರಷ್ಯಾದಲ್ಲಿಯ ಮಾಸ್ಕೋದ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಅವರು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿದರು. ಯಾವುದೇ ಧಾರ್ಮಿಕ ಅಥವಾ ಸೈದ್ಧಾಂತಿಕ ನೆಪಗಳಿಂದ ಪ್ರೇರಣೆ ಪಡೆದಿದ್ದರೂ, ಯಾವಾಗ, ಎಲ್ಲಿ, ಮತ್ತು ಯಾರಿಂದ ಅವು ನಡೆದಿದ್ದರೂ ಸಹ, ಎಲ್ಲಾ ಭಯೋತ್ಪಾದನಾ ಕೃತ್ಯಗಳನ್ನು ಅಪರಾಧ ಮತ್ತು ಅಸಮರ್ಥನೀಯ ಎಂದು ಅವರು ಏಕಾಭಿಪ್ರಾಯದಿಂದ ಖಂಡಿಸಿದರು. ಅಲ್ ಖೈದಾ, ಐಸಿಸ್/ಡಾಯಿಶ್ ಮತ್ತು ಅವುಗಳ ಅಂಗಸಂಸ್ಥೆಗಳು ಸೇರಿದಂತೆ ಎಲ್ಲಾ ವಿಶ್ವಸಂಸ್ಥೆ ಪಟ್ಟಿ ಮಾಡಲಾದ ಭಯೋತ್ಪಾದಕ ಗುಂಪುಗಳು ಮತ್ತು ಘಟಕಗಳ ವಿರುದ್ಧ ಸಂಘಟಿತ ಕ್ರಮಗಳಿಗೆ ಅವರು ಕರೆ ನೀಡಿದರು. ಭಯೋತ್ಪಾದಕರ ಸುರಕ್ಷಿತ ತಾಣಗಳನ್ನು ಬೇರುಸಹಿತ ನಿರ್ಮೂಲನೆ ಮಾಡುವುದು, ಭಯೋತ್ಪಾದಕ ಸಿದ್ಧಾಂತದ ಹರಡುವಿಕೆಯನ್ನು ಎದುರಿಸುವುದು, ಭಯೋತ್ಪಾದಕ ಹಣಕಾಸು ಮಾರ್ಗಗಳನ್ನು ಮತ್ತು ಅಂತರರಾಷ್ಟ್ರೀಯ ಅಪರಾಧಗಳೊಂದಿಗೆ ಅವುಗಳ ಸಂಬಂಧವನ್ನು ನಿರ್ಮೂಲನೆ ಮಾಡುವುದು ಮತ್ತು ವಿದೇಶಿ ಭಯೋತ್ಪಾದಕ ಹೋರಾಟಗಾರರು ಸೇರಿದಂತೆ ಭಯೋತ್ಪಾದಕರ ಗಡಿಯಾಚೆಗಿನ ಚಲನೆಯನ್ನು ನಿಲ್ಲಿಸುವುದು ಇದರ ಉದ್ದೇಶವಾಗಿದೆ.
ಅಂತಾರಾಷ್ಟ್ರೀಯ ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಎಲ್ಲಾ ರೀತಿಯ ಮತ್ತು ಅಭಿವ್ಯಕ್ತಿಗಳಲ್ಲಿ ರಾಜಿಯಾಗದ ಹೋರಾಟಕ್ಕೆ ಎರಡೂ ಕಡೆಯವರು ಕರೆ ನೀಡಿದರು, ಈ ಕ್ಷೇತ್ರದಲ್ಲಿ ಗುಪ್ತ ಕಾರ್ಯಸೂಚಿಗಳಿಲ್ಲದೆ ಮತ್ತು ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಬಲವಾದ ಆಧಾರದ ಮೇಲೆ ದ್ವಂದ್ವ ಮಾನದಂಡಗಳಿಲ್ಲದೆ ಸಹಕಾರವನ್ನು ಹೆಚ್ಚಿಸುವ ಮಹತ್ವವನ್ನು ಗಮನಿಸಿದರು. ಇದಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂಬಂಧಿತ ನಿರ್ಣಯಗಳ ದೃಢ ಅನುಷ್ಠಾನ ಮತ್ತು ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರದ ಸಮತೋಲಿತ ಅನುಷ್ಠಾನದ ಅಗತ್ಯವನ್ನು ಅವರು ತಿಳಿಸಿದರು.
ಭಯೋತ್ಪಾದನೆಯನ್ನು ಎದುರಿಸುವಲ್ಲಿ ದೇಶ/ರಾಜ್ಯಗಳು ಮತ್ತು ಅವುಗಳ ಸಮರ್ಥ ಅಧಿಕಾರಿಗಳ ಪ್ರಾಥಮಿಕ ಜವಾಬ್ದಾರಿಯನ್ನು ಎರಡೂ ಕಡೆಯವರು ತಿಳಿಸಿದರು. ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ ನೀತಿ ಮತ್ತು ವಿಶ್ವಸಂಸ್ಥೆಯ ಚೌಕಟ್ಟಿನಲ್ಲಿ ಅಂತರರಾಷ್ಟ್ರೀಯ ಭಯೋತ್ಪಾದನೆಯನ್ನು ಕುರಿತ ಸಮಗ್ರಸಮಾವೇಶವನ್ನು ತ್ವರಿತವಾಗಿ ಅಂತಿಮಗೊಳಿಸುವುದು ಮತ್ತು ಅಳವಡಿಸಿಕೊಳ್ಳುವುದು, ಜೊತೆಗೆ ಭಯೋತ್ಪಾದನೆ ಮತ್ತು ಭಯೋತ್ಪಾದನೆಗೆ ಅನುಕೂಲಕರವಾದ ಹಿಂಸಾತ್ಮಕ ಉಗ್ರವಾದವನ್ನು ಎದುರಿಸುವ ಕುರಿತು ಯು.ಎನ್.ಜಿ.ಎ. ಮತ್ತು ಯು.ಎನ್.ಎಸ್.ಸಿ. ನಿರ್ಣಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಅವರು ಕರೆ ನೀಡಿದರು.
2022 ರ ಅಕ್ಟೋಬರ್‌ನಲ್ಲಿ ಭಾರತದ ಸಿ.ಟಿ.ಸಿ. ಅಧ್ಯಕ್ಷತೆಯಲ್ಲಿ ಭಾರತದಲ್ಲಿ ನಡೆದ ಯು.ಎನ್.ಎಸ್.ಸಿ. ಭಯೋತ್ಪಾದನಾ ನಿಗ್ರಹ ಸಮಿತಿಯ ವಿಶೇಷ ಸಭೆಯನ್ನು ಎರಡೂ ಕಡೆಯವರು ನೆನಪಿಸಿಕೊಂಡರು ಮತ್ತು ಭಯೋತ್ಪಾದಕ ಉದ್ದೇಶಗಳಿಗಾಗಿ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ಎದುರಿಸುವ ಕುರಿತು ಸರ್ವಾನುಮತದಿಂದ ಅಂಗೀಕರಿಸಲ್ಪಟ್ಟದಲ್ಲಿ ಘೋಷಣೆಯನ್ನು ಸ್ವಾಗತಿಸಿದರು. ಪಾವತಿ ತಂತ್ರಜ್ಞಾನಗಳು, ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ನಿಧಿಸಂಗ್ರಹ ವಿಧಾನಗಳು ಮತ್ತು ಮಾನವರಹಿತ ವೈಮಾನಿಕ ವಾಹನಗಳ (ಯು.ಎ.ವಿ. ಗಳು ಅಥವಾ ಡ್ರೋನ್‌ಗಳು) ದುರುಪಯೋಗದಂತಹ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಭಯೋತ್ಪಾದಕ ಶೋಷಣೆಯ ಸುತ್ತಲಿನ ಪ್ರಮುಖ ಕಾಳಜಿಗಳನ್ನು ಒಳಗೊಳ್ಳುವ ಗುರಿಯನ್ನು ಈ ಘೋಷಣೆ ಹೊಂದಿದೆ ಎಂದು ಅವರು ಗಮನಿಸಿದರು. ಆನ್‌ಲೈನ್ ಜಾಗದಲ್ಲಿ ಮೂಲಭೂತೀಕರಣ ಮತ್ತು ಉಗ್ರಗಾಮಿ ಸಿದ್ಧಾಂತದ ಹರಡುವಿಕೆಯನ್ನು ತಡೆಗಟ್ಟುವತ್ತ ವಿಶೇಷ ಗಮನ ಹರಿಸುವ ಮೂಲಕ ಈ ಕ್ಷೇತ್ರದಲ್ಲಿ ಮತ್ತಷ್ಟು ಸಹಕಾರವನ್ನು ಅಭಿವೃದ್ಧಿಪಡಿಸಲು ಎರಡೂ ಕಡೆಯವರು ತಮ್ಮ ಸಿದ್ಧತೆಯನ್ನು ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಎಸ್.ಸಿ.ಒ. ಮತ್ತು ಬ್ರಿಕ್ಸ್ ಸ್ವರೂಪಗಳಲ್ಲಿ ಸಂಬಂಧಿತ ಕಾರ್ಯವಿಧಾನಗಳನ್ನು ಬಲಪಡಿಸುವ ಸಕಾರಾತ್ಮಕ ಚಲನಶೀಲತೆಯನ್ನು ಅವರು ತೃಪ್ತಿಯಿಂದ ಗಮನಿಸಿದರು.
ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳು
ಎರಡೂ ದೇಶಗಳ ಭದ್ರತಾ ಮಂಡಳಿಗಳ ನಡುವಿನ ಸಂವಾದ ಕಾರ್ಯವಿಧಾನ ಸೇರಿದಂತೆ ಅಫ್ಘಾನಿಸ್ತಾನದಲ್ಲಿ ಭಾರತ ಮತ್ತು ರಷ್ಯಾ ನಡುವಿನ ನಿಕಟ ಸಮನ್ವಯವನ್ನು ಎರಡೂ ಕಡೆಯವರು ಶ್ಲಾಘಿಸಿದರು. ಮಾಸ್ಕೋ ಸ್ವರೂಪ ಸಭೆಗಳ ಪ್ರಮುಖ ಪಾತ್ರವನ್ನು ಅವರು ತಿಳಿಸಿದರು.
ಐಸಿಸ್ ಮತ್ತು ಐಎಸ್‌ಕೆಪಿ ಮತ್ತು ಅವುಗಳ ಅಂಗಸಂಸ್ಥೆಗಳು ಸೇರಿದಂತೆ ಅಂತಾರಾಷ್ಟ್ರೀಯ ಭಯೋತ್ಪಾದಕ ಗುಂಪುಗಳ ವಿರುದ್ಧ ಭಯೋತ್ಪಾದನಾ ನಿಗ್ರಹ ಕ್ರಮಗಳನ್ನು ನಾಯಕರು ಸ್ವಾಗತಿಸಿದರು ಮತ್ತು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದನೆಯ ವಿರುದ್ಧದ ಹೋರಾಟವು ಸಮಗ್ರ ಮತ್ತು ಪರಿಣಾಮಕಾರಿಯಾಗಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಅಫ್ಘಾನ್ ಜನರಿಗೆ ತುರ್ತು ಮತ್ತು ನಿರಂತರ ಮಾನವೀಯ ನೆರವು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ತಿಳಿಸಿದರು.
ಮಧ್ಯಪ್ರಾಚ್ಯ/ಪಶ್ಚಿಮ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗೆ ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು, ಸಂಯಮ, ನಾಗರಿಕರ ರಕ್ಷಣೆ ಮತ್ತು ಅಂತಾರಾಷ್ಟ್ರೀಯ ಕಾನೂನಿನ ಅನುಸರಣೆ ಮತ್ತು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುವ ಮತ್ತು ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ತರುವ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ತಡೆಯುವ ಅಗತ್ಯವನ್ನು ಕರೆ ನೀಡಿದರು. ಇರಾನ್ ಪರಮಾಣು ಸಮಸ್ಯೆಯನ್ನು ಸಂವಾದದ ಮೂಲಕ ಪರಿಹರಿಸುವ ಮಹತ್ವವನ್ನು ಅವರು ತಿಳಿಸಿದರು. ಗಾಜಾದಲ್ಲಿನ ಮಾನವೀಯ ಪರಿಸ್ಥಿತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು ಮತ್ತು ಸಂಘರ್ಷ ನಿಲುಗಡೆ, ಮಾನವೀಯ ನೆರವು ಮತ್ತು ಸುಸ್ಥಿರ ಶಾಂತಿಗಾಗಿ ತಮ್ಮ ನಡುವೆ ಆಗಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳಿಗೆ ಸಂಬಂಧಪಟ್ಟ ಎಲ್ಲಾ ಪಕ್ಷಗಳು ಬದ್ಧವಾಗಿರುವುದು ಮುಖ್ಯ ಎಂದು ಬಲವಾಗಿ ತಿಳಿಸಿದರು.
ಹವಾಮಾನ ಬದಲಾವಣೆಯನ್ನು ಎದುರಿಸಲು ಪ್ರಯತ್ನಗಳನ್ನು ವಿಸ್ತರಿಸುವ ಮತ್ತು ಹವಾಮಾನ ಬದಲಾವಣೆಯ ಕುರಿತಾದ ವಿಶ್ವಸಂಸ್ಥೆಯ ಚೌಕಟ್ಟು ಸಮಾವೇಶದ ಗುರಿಗಳನ್ನು ಸಾಧಿಸುವ ಮಹತ್ವವನ್ನು ಎರಡೂ ಕಡೆಯವರು ಗಮನಿಸಿದರು. ಹವಾಮಾನ ಬದಲಾವಣೆ ಮತ್ತು ಕಡಿಮೆ-ಇಂಗಾಲ ಅಭಿವೃದ್ಧಿಯ ವಿಷಯಗಳ ಕುರಿತು ತಿಳುವಳಿಕಾ ಒಡಂಬಡಿಕೆಯ ಚೌಕಟ್ಟಿನೊಳಗೆ ಸೆಪ್ಟೆಂಬರ್ 10, 2025 ರಂದು ಹೊಸದಿಲ್ಲಿಯಲ್ಲಿ ನಡೆದ ಹವಾಮಾನ ಬದಲಾವಣೆ ಮತ್ತು ಕಡಿಮೆ-ಇಂಗಾಲ ಅಭಿವೃದ್ಧಿಯ ವಿಷಯಗಳ ಕುರಿತು ಜಂಟಿ ರಷ್ಯಾ-ಭಾರತ ಕಾರ್ಯನಿರತ ಗುಂಪಿನ ಮೊದಲ ಸಭೆಯನ್ನು ಎರಡೂ ಕಡೆಯವರು ಸ್ವಾಗತಿಸಿದರು. ಪ್ಯಾರಿಸ್ ಒಪ್ಪಂದದ 6
ನೇ ವಿಧಿಯ ಅನುಷ್ಠಾನ ಕಾರ್ಯವಿಧಾನಗಳು, ಕಡಿಮೆ ಇಂಗಾಲದ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸುಸ್ಥಿರ ಹಣಕಾಸು ಸಾಧನಗಳನ್ನು ಬಳಸುವ ಕುರಿತು ದ್ವಿಪಕ್ಷೀಯ ಸಂವಾದವನ್ನು ತೀವ್ರಗೊಳಿಸಲು ಎರಡೂ ಕಡೆಯವರು ಒಪ್ಪಿಕೊಂಡರು.
ಹವಾಮಾನ ಬದಲಾವಣೆಯ ಪ್ರಮುಖ ವಿಷಯಗಳ ಕುರಿತು ಜಿ20, ಬ್ರಿಕ್ಸ್ ಎಸ್.ಸಿ.ಒ. ಗಳ ಒಳಗೆ ಆಂತರಿಕ ಸಂವಹನವನ್ನು ಮುಂದುವರಿಸಲು ಎರಡೂ ಕಡೆಯವರು ಒಪ್ಪಿಕೊಂಡರು. ಬ್ರಿಕ್ಸ್ ಹವಾಮಾನ ಸಂಶೋಧನಾ ವೇದಿಕೆ ಮತ್ತು ವ್ಯಾಪಾರ, ಹವಾಮಾನ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಬ್ರಿಕ್ಸ್ ಪ್ರಯೋಗಾಲಯದ ಕಾರ್ಯಾರಂಭ ಸೇರಿದಂತೆ ಹವಾಮಾನ ಬದಲಾವಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕುರಿತಾದ ಬ್ರಿಕ್ಸ್ ಸಂಪರ್ಕ ಗುಂಪಿನೊಳಗಿನ ಸಂಘಟಿತ ಕಾರ್ಯದಿಂದ ಸಾಧಿಸಲಾದ ಫಲಿತಾಂಶಗಳನ್ನು ಎರಡೂ ಕಡೆಯವರು ಸ್ವಾಗತಿಸಿದರು. 2026ರಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಬ್ರಿಕ್ಸ್‌ನಲ್ಲಿ ಹವಾಮಾನ ಬದಲಾವಣೆಯನ್ನು ನಿಭಾಯಿಸುವ ಕ್ಷೇತ್ರದಲ್ಲಿ ಗುಂಪುಗಳ ಮೂಲಕ ಕೆಲಸ ಮಾಡುವ ನಿಟ್ಟಿನಲ್ಲಿ ಎರಡೂ ಕಡೆಯವರು ಫಲಪ್ರದ ಸಹಕಾರವನ್ನು ಪ್ರೋತ್ಸಾಹಿಸಿದರು.
ಭಾರತ-ರಷ್ಯಾ ವಿಶೇಷ ಮತ್ತು ಆದ್ಯತೆ ಪಡೆದ ಕಾರ್ಯತಂತ್ರದ ಪಾಲುದಾರಿಕೆಯ ಸ್ಥಿತಿಸ್ಥಾಪಕತ್ವ ಮತ್ತು ಅವರ ವಿದೇಶಾಂಗ ನೀತಿ ಆದ್ಯತೆಗಳ ಸಂಯೋಜನೆ ಮತ್ತು ಪೂರಕ ವಿಧಾನಗಳ ಸ್ಥಿತಿಸ್ಥಾಪಕತ್ವವನ್ನು ಎರಡೂ ಕಡೆಯವರು ತೃಪ್ತಿಯಿಂದ ಗಮನಿಸಿದರು ಮತ್ತು ಅದನ್ನು ಮತ್ತಷ್ಟು ಬಲಪಡಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಪ್ರಮುಖ ಶಕ್ತಿಗಳಾಗಿ ಭಾರತ ಮತ್ತು ರಷ್ಯಾ ಬಹುಧ್ರುವೀಯ ಜಗತ್ತಿನಲ್ಲಿ ಹಾಗೂ ಬಹುಧ್ರುವೀಯ ಏಷ್ಯಾದಲ್ಲಿ ಜಾಗತಿಕ ಶಾಂತಿ ಮತ್ತು ಸ್ಥಿರತೆಗಾಗಿ ಶ್ರಮಿಸುವುದನ್ನು ಮುಂದುವರಿಸುತ್ತವೆ ಎಂದು ಅವರು ತಿಳಿಸಿದರು.
ಹೊಸದಿಲ್ಲಿಯಲ್ಲಿ ತಮಗೆ ಮತ್ತು ತಮ್ಮ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಗೌರವಾನ್ವಿತ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು ಮತ್ತು 2026ರಲ್ಲಿ 24ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಗೆ ರಷ್ಯಾಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.
*****
(रिलीज़ आईडी: 2199822)
आगंतुक पटल : 4