ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

2025ರ ಸಂಸತ್‌ ಚಳಿಗಾಲದ ಅಧಿವೇಶನ ಆರಂಭದ ವೇಳೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆ


ಪಕ್ಷಾತೀತವಾಗಿ, ಹೊಸ ಪೀಳಿಗೆಯ ಸಂಸದರು ಮತ್ತು ಮೊದಲ ಬಾರಿಗೆ ಆಯ್ಕೆಯಾದ ಸಂಸದರಿಗೆ ಅರ್ಥಪೂರ್ಣ ಅವಕಾಶಗಳನ್ನು ನಾವು ಖಾತರಿಪಡಿಸಬೇಕು: ಪ್ರಧಾನಮಂತ್ರಿ

ಪ್ರಜಾಪ್ರಭುತ್ವವು ಫಲಿತಾಂಶಗಳನ್ನು ನೀಡಬಲ್ಲದು ಎಂಬುದನ್ನು ಭಾರತ ಸಾಬೀತುಪಡಿಸಿದೆ: ಪ್ರಧಾನಮಂತ್ರಿ

ಈ ಚಳಿಗಾಲದ ಅಧಿವೇಶನವು ದೇಶವನ್ನು ಮತ್ತಷ್ಟು ವೇಗವಾಗಿ ಮುನ್ನಡೆಸುವ ನಮ್ಮ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ತುಂಬಲಿದೆ: ಪ್ರಧಾನಮಂತ್ರಿ

प्रविष्टि तिथि: 01 DEC 2025 12:41PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನ ಆವರಣದಲ್ಲಿ 2025ರ ಚಳಿಗಾಲದ ಸಂಸತ್‌ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಅಧಿವೇಶನವು ಕೇವಲ ಒಂದು ಆಚರಣೆಯಲ್ಲ, ಬದಲಿಗೆ, ತ್ವರಿತ ಪ್ರಗತಿಯತ್ತ ರಾಷ್ಟ್ರದ ಪಯಣಕ್ಕೆ ಹೊಸ ಶಕ್ತಿಯ ಮೂಲವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. "ರಾಷ್ಟ್ರದ ಪ್ರಗತಿಯನ್ನು ವೇಗಗೊಳಿಸಲು ಪ್ರಸ್ತುತ ನಡೆಯುತ್ತಿರುವ ಪ್ರಯತ್ನಗಳಿಗೆ ಈ ಅಧಿವೇಶನವು ಹೊಸ ಶಕ್ತಿಯನ್ನು ತುಂಬಲಿದೆ ಎಂಬುದು ನನ್ನ ದೃಢವಾದ ನಂಬಿಕೆ," ಎಂದು ಶ್ರೀ ಮೋದಿ ಹೇಳಿದರು.

ಭಾರತವು ತನ್ನ ಪ್ರಜಾಸತ್ತಾತ್ಮಕ ಸಂಪ್ರದಾಯಗಳ ಚೈತನ್ಯ ಮತ್ತು ರೋಮಾಂಚಕತೆಯನ್ನು ನಿರಂತರವಾಗಿ ಪ್ರದರ್ಶಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇತ್ತೀಚಿನ ಬಿಹಾರ ಚುನಾವಣೆಯನ್ನು ಉಲ್ಲೇಖಿಸಿದ ಅವರು, ದಾಖಲೆ ಪ್ರಮಾಣದ ಮತದಾನವು ರಾಷ್ಟ್ರದ ಪ್ರಜಾಸತ್ತಾತ್ಮಕ ಶಕ್ತಿಯ ಬಲವಾದ ದೃಢೀಕರಣವಾಗಿದೆ ಎಂದು ಶ್ಲಾಘಿಸಿದರು. ಹೆಚ್ಚುತ್ತಿರುವ ಮಹಿಳಾ ಮತದಾರರ ಭಾಗವಹಿಸುವಿಕೆಯು, ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಹೊಸ ಭರವಸೆ ಮತ್ತು ಹೊಸ ವಿಶ್ವಾಸವನ್ನು ತುಂಬುವ ಗಮನಾರ್ಹ ಹಾಗೂ ಪ್ರೋತ್ಸಾಹದಾಯಕ ಪ್ರವೃತ್ತಿಯನ್ನು ಸೂಚಿಸುತ್ತದೆ ಎಂದು ಅವರು ತಿಳಿಸಿದರು. ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳು ಬಲಗೊಳ್ಳುತ್ತಿರುವುದರ ಜೊತೆಗೆ, ಈ ಪ್ರಜಾಪ್ರಭುತ್ವದ ಚೌಕಟ್ಟು ರಾಷ್ಟ್ರದ ಆರ್ಥಿಕ ಸಾಮರ್ಥ್ಯಗಳನ್ನು ಹೇಗೆ ಬಲಪಡಿಸುತ್ತಿದೆ ಎಂಬುದನ್ನು ಜಗತ್ತು ಹತ್ತಿರದಿಂದ ಗಮನಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. "ಪ್ರಜಾಪ್ರಭುತ್ವವು ಫಲಿತಾಂಶ ನೀಡಬಲ್ಲದು ಎಂಬುದನ್ನು ಭಾರತ ಸಾಬೀತುಪಡಿಸಿದೆ," ಎಂದು ಪ್ರಧಾನಮಂತ್ರಿ ಹೇಳಿದರು. "ಭಾರತದ ಆರ್ಥಿಕ ಪರಿಸ್ಥಿತಿಗಳು ವೇಗವಾಗಿ ಹೊಸ ಎತ್ತರವನ್ನು ತಲುಪುತ್ತಿವೆ. ಇದು ನಾವು ಅಭಿವೃದ್ಧಿ ಹೊಂದಿದ ಭಾರತದ ಗುರಿಯತ್ತ ಸಾಗುತ್ತಿರುವ ಈ ಸಮಯದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ನಮಗೆ ಹೊಸ ಶಕ್ತಿಯನ್ನು ನೀಡುತ್ತದೆ," ಎಂದು ಶ್ರೀ ಮೋದಿ ತಿಳಿಸಿದರು.

ಸಂಸತ್‌ ಅಧಿವೇಶನದ ಗಮನವನ್ನು ರಾಷ್ಟ್ರೀಯ ಹಿತಾಸಕ್ತಿ, ರಚನಾತ್ಮಕ ಚರ್ಚೆ ಮತ್ತು ನೀತಿ ಆಧರಿತ ಫಲಿತಾಂಶಗಳ ಮೇಲೆ ಕೇಂದ್ರೀಕರಿಸುವಂತೆ ಪ್ರಧಾನಮಂತ್ರಿ ಅವರು ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ರಾಷ್ಟ್ರಕ್ಕಾಗಿ ಏನನ್ನು ನೀಡಲು ಸಂಸತ್ತು ಉದ್ದೇಶಿಸಿದೆ ಎಂಬುದರತ್ತ ಮತ್ತು ಅದನ್ನು ತಲುಪಿಸುವ ಬದ್ಧತೆಯ ಮೇಲೆ ಸಂಸತ್ತು ಗಮನಹರಿಸಬೇಕು ಎಂದು ಅವರು ತಿಳಿಸಿದರು. ಪ್ರತಿಪಕ್ಷಗಳು ತಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿಯನ್ನು ಪೂರೈಸುವಂತೆ ಕರೆ ನೀಡಿದ ಪ್ರಧಾನಮಂತ್ರಿ ಅವರು, ಅರ್ಥಪೂರ್ಣ ಮತ್ತು ವಸ್ತುನಿಷ್ಠ ವಿಷಯಗಳನ್ನು ಎತ್ತುವಂತೆ ಅವರನ್ನು ಪ್ರೋತ್ಸಾಹಿಸಿದರು. ಚುನಾವಣಾ ಸೋಲಿನ ಬಗ್ಗೆ ಹತಾಶೆಯು ಸಂಸತ್ತಿನ ಕಲಾಪಗಳನ್ನು ಮರೆಮಾಚಲು ಬಿಡಬಾರದು ಎಂದು ಅವರು ಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಅಧಿವೇಶನವು ಚುನಾವಣಾ ಗೆಲುವಿನಿಂದ ಬರುವ ದುರಹಂಕಾರದ  ಪ್ರದರ್ಶನವಾಗಬಾರದು ಎಂದು ತಿಳಿಸಿದ ಶ್ರೀ ಮೋದಿ, "ಚಳಿಗಾಲದ ಅಧಿವೇಶನವು ಸಮತೋಲನ, ಜವಾಬ್ದಾರಿ ಮತ್ತು ಸಾರ್ವಜನಿಕ ಪ್ರತಿನಿಧಿಗಳಿಂದ ನಿರೀಕ್ಷಿಸುವ ಘನತೆಯನ್ನು ಪ್ರತಿಬಿಂಬಿಸಬೇಕು," ಎಂದು ಹೇಳಿದರು.

ಮಾಹಿತಿಯುತ ಚರ್ಚೆಯ ಮಹತ್ವವನ್ನು ತಿಳಿಸಿದ ಪ್ರಧಾನಮಂತ್ರಿ ಅವರು, ಉತ್ತಮ ಕಾರ್ಯನಿರ್ವಹಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಮತ್ತು ಅಗತ್ಯವಿದ್ದಲ್ಲಿ ರಚನಾತ್ಮಕ, ನಿಖರವಾದ ಟೀಕೆಗಳನ್ನು ಮಾಡುವಂತೆ ಸದಸ್ಯರನ್ನು ಒತ್ತಾಯಿಸಿದರು. ಇದರಿಂದ ನಾಗರಿಕರಿಗೆ ಉತ್ತಮ ಮಾಹಿತಿ ಸಿಗುತ್ತದೆ ಎಂದರು. "ಇದು ಅತ್ಯಂತ ಸವಾಲಿನದ್ದು, ಆದರೆ, ಇದು ರಾಷ್ಟ್ರಕ್ಕೆ ಅವಶ್ಯಕವಾದುದು," ಎಂದು ಅವರು ಹೇಳಿದರು.

ಮೊದಲ ಬಾರಿಗೆ ಸಂಸದರಾದವರು ಮತ್ತು ಯುವ ಸಂಸದರ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ಅವರು, ಪಕ್ಷಾತೀತವಾಗಿ ಅನೇಕರು ಸಂಸದರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲು ಅಥವಾ ರಾಷ್ಟ್ರೀಯ ಅಭಿವೃದ್ಧಿ ಚರ್ಚೆಗಳಿಗೆ ಕೊಡುಗೆ ನೀಡಲು ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿಲ್ಲ ಎಂದು ಭಾವಿಸುತ್ತಾರೆ ಎಂದು ಕಳವಳ ವ್ಯಕ್ತಡಿಸಿದರು. ಈ ಸಂಸದರಿಗೆ ಅರ್ಹವಾದ ವೇದಿಕೆಯನ್ನು ನೀಡುವಂತೆ ಅವರು ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದರು. "ಸದನ ಮತ್ತು ರಾಷ್ಟ್ರವು ಹೊಸ ಪೀಳಿಗೆಯ ಒಳನೋಟಗಳು ಮತ್ತು ಶಕ್ತಿಯಿಂದ ಪ್ರಯೋಜನ ಪಡೆಯಬೇಕು" ಎಂದು ಅವರು ಹೇಳಿದರು.

ಸಂಸತ್ತು ನೀತಿ ಮತ್ತು ಫಲಿತಾಂಶಗಳ ತಲುಪಿಸುವಿಕೆಯ ಸ್ಥಳವೇ ಹೊರತು ಹೈಡ್ರಾಮಾ ನಡೆಸುವ ಅಥವಾ ಘೋಷಣೆಗಳನ್ನು ಕೂಗುವ ಸ್ಥಳವಲ್ಲ ಎಂದು ಪ್ರಧಾನಮಂತ್ರಿ ತಿಳಿಸಿದರು. "ನಾಟಕಗಳು ಅಥವಾ ಘೋಷಣೆಗಳಿಗೆ ಬೇರೆಡೆ ಸ್ಥಳಗಳಿಗೆ ಕೊರತೆಯಿಲ್ಲ. ಸಂಸತ್ತಿನಲ್ಲಿ, ನಮ್ಮ ಗಮನವು ನೀತಿಯ ಮೇಲೆ ಇರಬೇಕು ಮತ್ತು ನಮ್ಮ ಉದ್ದೇಶವು ಸ್ಪಷ್ಟವಾಗಿರಬೇಕು," ಎಂದು ಅವರು ಹೇಳಿದರು.

ಮೇಲ್ಮನೆಯಲ್ಲಿ ಹೊಸ ಗೌರವಾನ್ವಿತ ಸಭಾಪತಿಗಳ ಕಾರ್ಯಾರಂಭದ ಹಿನ್ನೆಲೆಯಲ್ಲಿ ಈ ಅಧಿವೇಶನದ ವಿಶೇಷ ಮಹತ್ವ ಪಡೆದಿದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಮೇಲ್ಮನೆಯ ಹೊಸ ಸಭಾಪತಿಗಳಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದ ಪ್ರಧಾನಮಂತ್ರಿ, ಅವರ ನಾಯಕತ್ವವು ಸಂಸದೀಯ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ʻಜಿಎಸ್‌ಟಿʼ ಸುಧಾರಣೆಗಳು ನಾಗರಿಕರಲ್ಲಿ ಅಗಾಧ ವಿಶ್ವಾಸದ ವಾತಾವರಣವನ್ನು ಸೃಷ್ಟಿಸಿದ್ದು, ಅವುಗಳನ್ನು ಮುಂದಿನ ಪೀಳಿಗೆಯ ಸುಧಾರಣೆಗಳೆಂದು ಪರಿಗಣಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಚಳಿಗಾಲದ ಅಧಿವೇಶನವು ಈ ನಿಟ್ಟಿನಲ್ಲಿ ಹಲವಾರು ಪ್ರಮುಖ ಉಪಕ್ರಮಗಳನ್ನು ಮುಂದುವರಿಸಲು ಸಜ್ಜಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇತ್ತೀಚಿನ ಸಂಸದೀಯ ಪ್ರವೃತ್ತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಮೋದಿ, ಇತ್ತೀಚಿನ ದಿನಗಳಲ್ಲಿ, ನಮ್ಮ ಸಂಸತ್ತನ್ನು ಮುಂದಿನ ಚುನಾವಣೆಯ ʻಸಿದ್ಧತೆಯʼವೇದಿಕೆಯಾಗಿ ಅಥವಾ ಚುನಾವಣಾ ಸೋಲಿನ ನಂತರ ಹತಾಶೆಯನ್ನು ಹೊರಹಾಕುವ ಸ್ಥಳವಾಗಿ ಬಳಸಲಾಗುತ್ತಿದೆ ಎಂದು ಟೀಕಿಸಿದರು. "ದೇಶವು ಇಂತಹ ಕಾರ್ಯವಿಧಾನಗಳನ್ನು ಒಪ್ಪುವುದಿಲ್ಲ. ಅಂಥವರು ತಮ್ಮ ಕಾಋಯವಿಧಾನ ಮತ್ತು ಕಾರ್ಯತಂತ್ರವನ್ನು ಬದಲಾಯಿಸುವ ಸಮಯ ಬಂದಿದೆ. ಅವರು ಹೇಗೆ ಉತ್ತಮವಾಗಿ ಕಾರ್ಯನಿರ್ವಹಿಸಬಹುದು ಎಂಬುದರ ಕುರಿತು ಸಲಹೆಗಳನ್ನು ನೀಡಲು ನಾನು ಸಿದ್ಧನಿದ್ದೇನೆ," ಎಂದು ಶ್ರೀ ಮೋದಿ ಹೇಳಿದರು.

"ನಾವೆಲ್ಲರೂ ಈ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುತ್ತೇವೆ ಎಂದು ನಾನು ಭಾವಿಸುತ್ತೇನೆ. ದೇಶವು ಪ್ರಗತಿಯ ಪಥವನ್ನು ಪ್ರಾರಂಭಿಸಿದೆ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ", ಎಂದು ಶ್ರೀ ಮೋದಿ ಪುನರುಚ್ಚರಿಸಿದರು. ಪ್ರಗತಿಯತ್ತ ರಾಷ್ಟ್ರವು ದೃಢವಾದ ಹೆಜ್ಜೆ ಹಾಕುತ್ತಿದೆ ಎಂದ ಅವರು, "ದೇಶವು ಹೊಸ ಎತ್ತರದತ್ತ ಸಾಗುತ್ತಿದೆ ಮತ್ತು ಈ ಸದನವು ಆ ಪ್ರಯಾಣಕ್ಕೆ ಹೊಸ ಶಕ್ತಿ ಮತ್ತು ಚತನ್ಯವನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ," ಎಂದು ಹೇಳಿದರು.

 

*****


(रिलीज़ आईडी: 2196878) आगंतुक पटल : 2
इस विज्ञप्ति को इन भाषाओं में पढ़ें: Marathi , Assamese , English , Urdu , हिन्दी , Bengali , Gujarati , Telugu