“ನೀವು ಇದೀಗ ಚಿತ್ರವನ್ನು ಹೇಗೆ ಸಿದ್ಧಪಡಿಸಿದ್ದೇವೆಯೋ ಹಾಗೆ ನೋಡಬಹುದು”: ರಮೇಶ್ ಸಿಪ್ಪಿ ಅವರ 50 ವರ್ಷ ಪೂರ್ಣಗೊಳಿಸಿದ ಶೋಲೆ ಚಿತ್ರದ ಕುರಿತು ಐಎಫ್ಎಫ್ಐ 2025ನಲ್ಲಿ ಸಂವಾದ
ಸಂವಾದ ಗೋಷ್ಠಿಯಲ್ಲಿ ಖ್ಯಾತ ಚಿತ್ರ ನಿರ್ದೇಶಕ ರಮೇಶ್ ಸಿಪ್ಪಿ ಹೇಗೆ ಒಬ್ಬ ಹಿಂದಿ ಚಿತ್ರದ ಅತ್ಯುತ್ತಮ ಖಳನಾಯಕ ಗಬ್ಬರ್ ಸಿಂಗ್ ಜನಿಸಿದ ಎಂಬುದನ್ನು ವಿವರಿಸಿದರು
ದಿವಂಗತ ಧರ್ಮೇಂದ್ರ ಅವರು ಕುದುರೆ ಓಡಿಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಕೆಳಗೆ ಬಿದ್ದರೂ ಅಭಿನಯಿಸಿದ ಅವರ ಬದ್ಧತೆಯನ್ನು ಸ್ಮರಿಸಿಕೊಂಡ ರಮೇಶ್ ಸಿಪ್ಪಿ
ಶೋಲೆ ಹಿಂದಿ ಸಿನಿಮಾಗಳ ಸಾಹಸ ದೃಶ್ಯಗಳಲ್ಲಿ ಸುರಕ್ಷತಾ ಶಿಷ್ಟಾಚಾರಗಳನ್ನು ಮುಂಚೂಣಿಗೆ ತಂದಿತು ಎಂದ ಕಿರಣ್ ಸಿಪ್ಪಿ
56ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ(ಐಎಫ್ಎಫ್ಐ) ವೇಳೆ “ಶೋಲೆಗೆ 50 ವರ್ಷ; ಏಕೆ ಶೋಲೆ ಇನ್ನು ಪ್ರತಿಧ್ವನಿಸುತ್ತಿದೆ?” ಎಂಬ ಶೀರ್ಷಿಕೆಯಡಿ ನಡೆಸಿದ ಸಂವಾದದಲ್ಲಿ ಶೋಲೆ ಚಿತ್ರದ ಸೃಷ್ಟಿಕರ್ತ ಹಾಗೂ ಖ್ಯಾತ ಚಿತ್ರ ನಿರ್ದೇಶಕ ರಮೇಶ್ ಸಿಪ್ಪಿ, ಪ್ರೇಕ್ಷಕರಿಗೆ ಚಿತ್ರದ ಇತಿಹಾಸದ ಪಯಣವನ್ನು ಕಟ್ಟಿಕೊಟ್ಟು ಸಿನಿಮಾ ಪ್ರಿಯರು ಆ ಕಾಲಕ್ಕೆ ತಿರುಗಿ ನೋಡುವಂತೆ ಮಾಡಿದರು.
ಈ ಗೋಷ್ಠಿಯನ್ನು ಅವರ ಪತ್ನಿ ಹಾಗೂ ಹೆಸರಾಂತ ನಟಿ – ನಿರ್ಮಾಪಕಿ ಕಿರಣ್ ಸಿಪ್ಪಿ ನಡೆಸಿಕೊಟ್ಟರು ಮತ್ತು ರಮೇಶ್ ಸಿಪ್ಪಿ, ಚಿತ್ರ ನಿರ್ಮಾಣದ ಕತೆಯನ್ನು ವಿವರಿಸಿ, ಅದೊಂದು ಸಾಂಸ್ಕೃತಿಕ ಮೈಲಿಗಲ್ಲಿಗಿಂತ ಕಡಿಮೆ ಇಲ್ಲ ಎಂದರು.
50 ವರ್ಷಗಳ ನಂತರ ಮೂಲ ಚಿತ್ರದ ಮುಕ್ತಾಯ ವಾಪಸ್
ರಮೇಶ್ ಸಿಪ್ಪಿ ಈ ಸಂದರ್ಭದಲ್ಲಿ ಸಿನಿಪ್ರಿಯರು ಬಹು ನಿರೀಕ್ಷಿತ ಘೋಷಣೆಯನ್ನು ಮಾಡಿದರು. ಅದೆಂದರೆ : ಶೋಲೆ ಚಿತ್ರವನ್ನು ಅದರ ಮುಕ್ತಾಯದ ಭಾಗದ ಮೂಲ ದೃಶ್ಯಗಳನ್ನೊಳಗೊಂಡಂತೆ ಮರು ಬಿಡುಗಡೆ ಮಾಡಲಾಗುವುದು ಎಂದರು.
ಚಲನಚಿತ್ರ ಮೊದಲಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ 1975ರಲ್ಲಿ ಬಿಡುಗಡೆಯಾಗಿತ್ತು. ಆಗಿನ ಸೆನ್ಸಾರ್ ಮಂಡಳಿ ಠಾಕೂರ್ ಬಲ್ದೇವ್ ಸಿಂಗ್, ಗಬ್ಬರ್ ಸಿಂಗ್ ನನ್ನು ತನ್ನ ಮೊನಾಚಾದ ಬೂಟುಗಳನ್ನು ಬಳಸಿ ಕೊಲ್ಲುವ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಪೊಲೀಸ್ ಅಧಿಕಾರಿಯನ್ನು ದ್ವೇಷ ತೀರಿಸಿಕೊಳ್ಳುವವರನ್ನಾಗಿ ಚಿತ್ರಿಸುವುದು ಸರಿಯಲ್ಲ ಎಂದು ಹೇಳಿತ್ತು. ಇದರಿಂದಾಗಿ ಚಿತ್ರ ನಿರ್ದೇಶಕರು ಮತ್ತು ಅವರ ತಂಡ ಚಿತ್ರದ ಕೊನೆಯ ಭಾಗವನ್ನು ರಿಶೂಟ್ ಮಾಡಿತ್ತು.
“ಉತ್ಸಾಹಭರಿತ ಸಿಪ್ಪಿ ಅವರು ಪ್ರೇಕ್ಷಕರಿಗೆ ಚಿತ್ರವನ್ನು ಹೇಗೆ ನಿರ್ಮಾಣ ಮಾಡಲಾಗಿತ್ತೋ ಹಾಗೇ ನೀವು ನೋಡುತ್ತೀರಿ ಎಂದು ಹೇಳುವ ಮೂಲಕ ತಮ್ಮ ಸೃಜನಶೀಲ ಕಲೆಯನ್ನು ಬಹುವರ್ಷಗಳ ನಂತರ ನೀಡುತ್ತಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿದರು.
ಹೊಸ ಭೂದೃಶ್ಯಗಳು ಮತ್ತು ಭಯಂಕರ ಖಳನಾಯಕ
ನಿರ್ದೇಶಕರು ಚಿತ್ರಕ್ಕೆ ಸಂಪೂರ್ಣವಾಗಿ ಹೊಸ ದೃಶ್ಯಗಳನ್ನು ಕಟ್ಟಿಕೊಡಬೇಕೆಂದು ವಿವರಿಸಿದ್ದರು. ಹಿಂದಿ ಸಿನಿಮಾಗಳಲ್ಲಿ ಬಹುತೇಕ ಡಕಾಯಿತಿ ಡ್ರಾಮಾಗಳನ್ನು ರಾಜಸ್ತಾನ ಮತ್ತು ಚಂಬಲ್ ಕಣಿವೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ರಮೇಶ್ ಸಿಪ್ಪಿ ಬೆಂಗಳೂರು ಮತ್ತು ಮೈಸೂರು ನಡುವಿನ ಬೆಟ್ಟ ಗುಡ್ಡಗಳ ಸಾಲನ್ನು ಹುಡುಕಿ, ಅಲ್ಲಿ ಚಿತ್ರೀಕರಣ ಮಾಡಿದ್ದರು. ಹಿಂಭಾದಲ್ಲಿ ಕಲ್ಲುಗಳ ಹಿನ್ನೆಲೆ ಇರುವ ಜಾಗದಲ್ಲಿ ವಿಭಿನ್ನ ನೋಟವನ್ನು ಕಟ್ಟಿಕೊಡುವ ಶೋಲೆ ಚಿತ್ರೀಕರಣ ಮಾಡಲಾಗಿತ್ತು.
ಗಬ್ಬರ್ ಸಿಂಗ್ ಎಂಬ ಅಪರೂಪದ ಪಾತ್ರವನ್ನು ಸೃಷ್ಟಿಸಲಾಯಿತು. ತನ್ನ ಉತ್ತರ ಪ್ರದೇಶದ ಶೈಲಿಯಲ್ಲಿಯೇ ದಕ್ಷಿಣ ಭಾರತದ ಭೂದೃಶ್ಯಗಳಲ್ಲಿ ಭಯ ಹುಟ್ಟಿಸುವಂತೆ ರೂಪಿಸಲಾಗಿತ್ತು. ಅಮ್ಜದ್ ಖಾನ್ ಅವರನ್ನು ಚಿತ್ರೀಕರಿಸಿದ ರೀತಿಯ ಬಗ್ಗೆ ವಿವರಿಸಿದ ಸಿಪ್ಪಿ, ಆ ಪಾತ್ರಕ್ಕೆ ಡ್ಯಾನಿ ಡೆನ್ಜೊಂಗ್ಪಾಅವರು ಮೂಲ ಆಯ್ಕೆಯಾಗಿದ್ದರು. ಆದರೆ ವಿದೇಶದಲ್ಲಿ ಮೊದಲೇ ಒಪ್ಪಿಕೊಂಡ ಶೂಟಿಂಗ್ ಇದ್ದ ಕಾರಣ ಅವರು ಲಭ್ಯವಾಗಲಿಲ್ಲ. ಅಮ್ಜದ್ ಖಾನ್ ಅವರನ್ನು ಬರಹಗಾರರಾದ ಸಲೀಂ ಜಾವೇದ್, ಅಮ್ಜದ್ ಖಾನ್ ಹೆಸರನ್ನು ಸೂಚಿಸಿದ್ದರು. ರಂಗಭೂಮಿಯ ಹಿನ್ನೆಲೆ ಇರುವ ಖಾನ್ ಅವರನ್ನು ನೋಡಿ ಸಿಪ್ಪಿ, ಆಕರ್ಷಿತರಾಗಿದ್ದರು. ಆನಂತರದ್ದು ಸಿನಿಮಾ ಇತಿಹಾಸ
ಎರಡು ಸಾಲಿನ ಕಲ್ಪನೆಯನ್ನು ಆರಂಭದಲ್ಲಿ ಮನಮೋಹನ್ ದೇಸಾಯಿ ಅವರಿಗೆ ಹೇಳಿದ್ದೆ, ಅವರು ಅದನ್ನು ಚಿತ್ರಕತೆ ವೇಳೆ ಬೇರೆಯವರಿಗೆ ತಿಳಿಸಿದ್ದರು. ಆದರೆ ಸಿಪ್ಪಿಯ ತಂದೆ ಜಿಪಿ ಸಿಪ್ಪಿ ಮತ್ತು ಪುತ್ರ ರಮೇಶ್ ಸಿಪ್ಪಿ ತಕ್ಷಣವೇ ಅವರ ಸಾಮರ್ಥ್ಯವನ್ನು ಅರಿತುಕೊಂಡರು. ಒಂದು ತಿಂಗಳೊಳಗೆ ಚಿತ್ರಕತೆ ಸಿದ್ಧವಾಗಿತ್ತು ಮತ್ತು ಮರ್ಕುರಿಯಲ್ ವಿಲನ್ ಪಾತ್ರವು ಹುಟ್ಟಿಕೊಂಡಿತ್ತು. ಸಿಪ್ಪಿ ಅವರು, ಸಲೀಂ ಜಾವೇದ್ ಗೆ ಅನಿರೀಕ್ಷಿತ ಅಪಾಯವನ್ನು ಒಡ್ಡುವಂತಹ ಪಾತ್ರ ಸೃಷ್ಟಿಸಬೇಕೆಂದು ಬಯಸಿದ್ದರು. ಅದರಿಂದಾಗಿಯೇ ಹಿಂದಿ ಸಿನಿಮಾಗಳಲ್ಲಿ ಸರ್ವಕಾಲಿಕ ಅತ್ಯುತ್ತಮ ಖಳನಾಯಕನ ಪಾತ್ರ ಹೊರಹೊಮ್ಮಿತು.

ದಿಗ್ಗಜರ ಸ್ಮರಣೆ
ಕಾಲ ಉರಳಿ ಹೋಗಿದ್ದನ್ನು ಸ್ಮರಿಸಿಕೊಂಡ ರಮೇಶ್ ಸಿಪ್ಪಿ, ಭಾವೋದ್ವೇಗಕ್ಕೆ ಒಳಗಾಗಿ ಚಿತ್ರದ ಇಬ್ಬರು ಮೇರು ವ್ಯಕ್ತಿಗಳು ಇಂದು ನಮ್ಮೊಡನಿಲ್ಲ ಎಂದರು. ಅವರು ಸಂಜೀವ ಕುಮಾರ್, ಅಮ್ಜದ್ ಖಾನ್ ಮತ್ತು ಇತ್ತೀಚೆಗೆ ನಿಧನರಾದ ಧರ್ಮೇಂದ್ರ ಅವರಿಗೆ ಗೌರವ ನಮನ ಸಲ್ಲಿಸಿದರು.
ದಿವಂಗತ ಧರ್ಮೇಂದ್ರ ಅವರು, ಕುದುರೆ ಓಡಿಸುವ ದೃಶ್ಯದ ಚಿತ್ರೀಕರಣದ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದನ್ನು ರಮೇಶ್ ಸಿಪ್ಪಿ ಸ್ಮರಿಸಿಕೊಂಡರು ಮತ್ತು “ಒಂದು ಕ್ಷಣ ನನ್ನ ಹೃದಯ ಬಡಿತ ನಿಂತುಹೋಗಿತ್ತು” ಎಂದ ರಮೇಶ್ ಸಿಪ್ಪಿ ಅವರು, ಆದರೆ ಧರ್ಮೇಂದ್ರ ಜಿ ಅವರು, ತಾವೇ ಎದ್ದು ನಿಂತು ದೂಳು ಕೊಡವಿಕೊಂಡು ಮತ್ತೆ ಸವಾರಿಗೆ ಸಿದ್ಧರಾಗಿದ್ದರು. ಅವರು ಸದಾ ಮುನ್ನುಗ್ಗುವವರಾಗಿದ್ದರದು ಮತ್ತು ಸದಾ ಹೊಸತನಕ್ಕೆ ಪ್ರಯತ್ನಿಸುತ್ತಿದ್ದರು” ಎಂದು ಹೇಳಿದರು.
ಶೋಲೆ ಅಸಮಾನ್ಯ ಕೌಶಲ್ಯ
ಸಿಪ್ಪಿ ಅವರು, ಶೋಲೆ ಚಿತ್ರ ಅಸಮಾನ್ಯ ತಂಡದ ಕೆಲಸವಾಗಿತ್ತು. ಚಿತ್ರದಲ್ಲಿ ಹಲವು ಮೊದಲುಗಳಿದ್ದವು. ಮೊದಲ ಬಾರಿಗೆ ಯುಕೆಯಿಂದ ಸಾಹಸ ದೃಶ್ಯಗಳಿಗಾಗಿ ವೃತ್ತಿಪರ ತಂಡವನ್ನು ಕರೆಸಲಾಗಿತ್ತು ಎಂದರು. ಕಿರಣ್ ಸಿಪ್ಪಿ ಹಿಂದಿ ಸಿನಿಮಾಗಳಲ್ಲಿ ಮೊದಲ ಬಾರಿಗೆ ಸಾಹಸ ದೃಶ್ಯಗಳಲ್ಲಿ ಸುರಕ್ಷತಾ ಶಿಷ್ಟಾಚಾರಗಳನ್ನು ಅದು ಮುಂಚೂಣಿಗೆ ತಂದಿತು ಎಂದು ಹೇಳಿದರು.
ಪ್ರೇಕ್ಷಕರೊಂದಿಗೆ ಸಂವಾದದ ವೇಳೆ ಸಿನಿಮಾಟೋಗ್ರಾಫರ್ ದ್ವರಕಾ ದಿವೇಚ ತಮ್ಮ ದೃಶ್ಯ ನಿರೂಪಣೆಯ ಮೂಲಕ ಹೊಸ ಮಾನದಂಡವನ್ನು ನಿಗದಿಪಡಿಸಿದರು ಎಂದು ಹೇಳಿದರು. ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದ ಅಜೀಜ್ ಭಾಯ್ ತೆರೆಯ ಹಿಂದೆ ಪ್ರಮುಖ ಪಾತ್ರವಹಿಸಿದ್ದನ್ನು ಅವರು ಸ್ಮರಿಸಿಕೊಂಡರು.
ಜಯ ಭಾದುರಿ ಅವರು ಸಂಜೆ ವೇಳೆ ದೀಪಗಳನ್ನು ಹಚ್ಚುವ ದೃಶ್ಯಗಳನ್ನು ಸೆರೆಹಿಡಿಯಲು ಬೆಳಕಿಗಾಗಿ ಹಲವು ದಿನಗಳು ಕಾಯಬೇಕಾಗಿತ್ತು. ಪ್ರತಿಯೊಂದು ದಿನ ‘ಮ್ಯಾಜಿಕ್ ಹವರ್’ಗಾಗಿ ಕಾಯುತ್ತಿದ್ದೆವು ಎಂದು ಚಿತ್ರ ನಿರ್ದೇಶಕರು ಹೇಳಿದರು.
ಆನಂದ ಬಕ್ಸಿ ಅವರು ಬರೆದ “ಯೇ ದೋಸ್ತಿ ಹಮ್ ನಹಿ ತೋಡೆಂಗೆ” ಹಾಡಿಗೆ ಆರ್.ಡಿ. ಬರ್ಮನ್ ಸಂಗೀತ ನೀಡಿದ್ದು, ಅದು ಹಲವು ಪೀಳಿಗೆಗಳು ಕಳೆದರು ಇನ್ನೂ ಇನ್ನ ಸಾರ್ವಕಾಲಿಕ ಜನಪ್ರಿಯತೆಯನ್ನು ಪಡೆದಿದೆ ಎಂದರು.

ವೈಭವ ಜೀವಂತ
ಸಂವಾದ ಮುಕ್ತಾಯಗೊಂಡಾಗ, ಒಂದು ವಿಷಯ ಸ್ಪಷ್ಟವಾಗಿತ್ತು - ಶೋಲೆ ಕೇವಲ ಒಂದು ಚಲನಚಿತ್ರವಲ್ಲ. ಇದು ಚಲನಚಿತ್ರ ನಿರ್ಮಾಪಕರನ್ನು ಪ್ರೇರೇಪಿಸುವ, ಪ್ರೇಕ್ಷಕರನ್ನು ಮೋಡಿ ಮಾಡುವ ಮತ್ತು ಭಾರತೀಯ ಚಿತ್ರರಂಗದ ಗಡಿಗಳನ್ನು ಮರು ವ್ಯಾಖ್ಯಾನಿಸುವ ಜೀವಂತ ಪರಂಪರೆಯಾಗಿದೆ.
ತನ್ನ 50 ವರ್ಷಗಳ ಆಚರಣೆ ಮತ್ತು ಬಹುನಿರೀಕ್ಷಿತ ತನ್ನ ಮೂಲ ಅಂತ್ಯದ ಮರಳುವಿಕೆಯೊಂದಿಗೆ, ಶೋಲೆ ಮತ್ತೊಮ್ಮೆ ಘರ್ಜಿಸಲು ಸಿದ್ಧವಾಗಿದೆ - ಅರ್ಧ ಶತಮಾನದ ಹಿಂದೆ ಐಕಾನಿಕ್ ನಿರ್ಮಾಪಕ ರಮೇಶ್ ಸಿಪ್ಪಿ ಅದನ್ನು ಕಲ್ಪಿಸಿಕೊಂಡಂತೆಯೇ.
ಶೋಲೆ ಚಿತ್ರದ 50ನೇ ವಾರ್ಷಿಕೋತ್ಸವಕ್ಕೆ ಗೌರವ ಸಲ್ಲಿಸುವ ಭಾಗವಾಗಿ ಚಿತ್ರದಲ್ಲಿ ಬಳಕೆ ಮಾಡಲಾಗಿದ್ದ ಮೋಟಾರ್ ಬೈಕ್ ಅನ್ನು ಉತ್ಸವದ ಮೈದಾನದಲ್ಲಿ ಪ್ರದರ್ಶಿಸಲಾಗಿತ್ತು. ಅದನ್ನು ನೋಡಲು ಸಿನಿಮಾ ಪ್ರಿಯರು ಸಾಕಷ್ಟು ಆಸಕ್ತಿ ತೋರುತ್ತಿದ್ದರು.


For more information, click on:
IFFI Website: https://www.iffigoa.org/
PIB’s IFFI Microsite: https://www.pib.gov.in/iffi/56/
PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F
X Post Link: https://x.com/PIB_Panaji/status/1991438887512850647?s=20
X Handles: @IFFIGoa, @PIB_India, @PIB_Panaji
*****
रिलीज़ आईडी:
2195847
| Visitor Counter:
2