ಪ್ರಧಾನ ಮಂತ್ರಿಯವರ ಕಛೇರಿ
ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಐ.ಬಿ.ಎಸ್.ಎ ನಾಯಕರ ಸಭೆಯಲ್ಲಿ ಪ್ರಧಾನಮಂತ್ರಿ ಭಾಗಿ
Posted On:
23 NOV 2025 2:33PM by PIB Bengaluru
ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಐ.ಬಿ.ಎಸ್.ಎ ನಾಯಕರ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಭಾಗವಹಿಸಿದ್ದರು. ಈ ಸಭೆಯನ್ನು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಗೌರವಾನ್ವಿತ ಸಿರಿಲ್ ರಾಮಫೋಸಾ ಆಯೋಜಿಸಿದ್ದರು ಮತ್ತು ಬ್ರೆಜಿಲ್ ಅಧ್ಯಕ್ಷ ಗೌರವಾನ್ವಿತ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಭಾಗವಹಿಸಿದ್ದರು.
ಸಭೆಯನ್ನು ಸಕಾಲಿಕ ಎಂದು ಬಣ್ಣಿಸಿದ ಪ್ರಧಾನಮಂತ್ರಿ, ಕಾಕತಾಳೀಯವೆಂದರೆ ಇದು ಆಫ್ರಿಕಾದ ನೆಲದಲ್ಲಿ ನಡೆದ ಮೊದಲ ಜಿ20 ಶೃಂಗಸಭೆಯಾಗಿದೆ ಮತ್ತು ಜಾಗತಿಕ ದಕ್ಷಿಣ ದೇಶಗಳು ಸತತ ನಾಲ್ಕು ಜಿ20 ಸಭೆಗಳ ಅಧ್ಯಕ್ಷತೆಗಳನ್ನು ವಹಿಸಿಕೊಂಡವು, ಅವುಗಳಲ್ಲಿ ಕೊನೆಯ ಮೂರು ಐ.ಬಿ.ಎಸ್.ಎ ಸದಸ್ಯ ರಾಷ್ಟ್ರಗಳದ್ದಾಗಿದ್ದವು ಎಂದು ಉಲ್ಲೇಖಿಸಿದರು. ಇದು ಮಾನವ ಕೇಂದ್ರಿತ ಅಭಿವೃದ್ಧಿ, ಬಹುಪಕ್ಷೀಯ ಸುಧಾರಣೆ ಮತ್ತು ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ ಹಲವಾರು ಪ್ರಮುಖ ಉಪಕ್ರಮಗಳಿಗೆ ಕಾರಣವಾಗಿದೆ ಎಂದು ಅವರು ಉಲ್ಲೇಖಿಸಿದರು.
ಐ.ಬಿ.ಎಸ್.ಎ ಕೇವಲ ಮೂರು ದೇಶಗಳ ಗುಂಪಲ್ಲ, ಆದರೆ ಮೂರು ಖಂಡಗಳು, ಮೂರು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಮೂರು ಪ್ರಮುಖ ಆರ್ಥಿಕತೆಗಳನ್ನು ಬೆಸೆಯುವ ಪ್ರಮುಖ ವೇದಿಕೆಯಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು.
ಜಾಗತಿಕ ಆಡಳಿತ ಸಂಸ್ಥೆಗಳು 21ನೇ ಶತಮಾನದ ವಾಸ್ತವಗಳಿಂದ ಬಹಳ ದೂರದಲ್ಲಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆ, ವಿಶೇಷವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಈಗ ಒಂದು ಆಯ್ಕೆಯಾಗಿಲ್ಲ, ಬದಲಿಗೆ ಕಡ್ಡಾಯವಾಗಿದೆ ಎಂಬ ಬಲಿಷ್ಠ ಸಂದೇಶವನ್ನು ರವಾನಿಸಬೇಕೆಂದು ಅವರು ಐ.ಬಿ.ಎಸ್.ಎಗೆ ಕರೆ ನೀಡಿದರು.
ಭಯೋತ್ಪಾದನೆ ನಿಗ್ರಹದ ಕುರಿತು ಮಾತನಾಡಿದ ಪ್ರಧಾನಮಂತ್ರಿ ಅವರು ನಿಕಟ ಸಮನ್ವಯದ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡುವಾಗ ದ್ವಂದ್ವ ಮಾನದಂಡಗಳಿಗೆ ಅವಕಾಶವಿರುವುದಿಲ್ಲ ಎಂದರು. ಮಾನವ ಕೇಂದ್ರಿತ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು ಯು.ಪಿ.ಐ ನಂತಹ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೋವಿನ್ ನಂತಹ ಆರೋಗ್ಯ ವೇದಿಕೆಗಳು, ಸೈಬರ್ ಭದ್ರತಾ ಚೌಕಟ್ಟುಗಳು ಮತ್ತು ಮಹಿಳಾ ನೇತೃತ್ವದ ತಂತ್ರಜ್ಞಾನ ಉಪಕ್ರಮಗಳನ್ನು ಮೂರು ದೇಶಗಳ ನಡುವೆ ಹಂಚಿಕೊಳ್ಳಲು ಅನುಕೂಲವಾಗುವಂತೆ ‘ಐ.ಬಿ.ಎಸ್.ಎ ಡಿಜಿಟಲ್ ನಾವಿನ್ಯ ಮೈತ್ರಿ’ಯನ್ನು ಸ್ಥಾಪಿಸುವ ಪ್ರಸ್ತಾಪವನ್ನು ಮಂಡಿಸಿದರು.
ಸುರಕ್ಷಿತ, ವಿಶ್ವಾಸಾರ್ಹ ಮತ್ತು ಮಾನವ ಕೇಂದ್ರಿತ ಕೃತಕ ಬುದ್ಧಿಮತ್ತೆ (ಎ.ಐ.) ಮಾನದಂಡಗಳ ಅಭಿವೃದ್ಧಿಗೆ ಕೊಡುಗೆ ನೀಡುವ ಐ.ಬಿ.ಎಸ್.ಎ ಸಾಮರ್ಥ್ಯವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಎ.ಐ. ಇಂಪ್ಯಾಕ್ಟ್ ಶೃಂಗಸಭೆಗೆ ಅವರು ಐ.ಬಿ.ಎಸ್.ಎ ನಾಯಕರನ್ನು ಆಹ್ವಾನಿಸಿದರು.
ಐ.ಬಿ.ಎಸ್.ಎ ಪರಸ್ಪರರ ಅಭಿವೃದ್ಧಿಗೆ ಪೂರಕವಾಗಬಹುದು ಮತ್ತು ಸುಸ್ಥಿರ ಬೆಳವಣಿಗೆಗೆ ಉದಾಹರಣೆಯಾಗಬಹುದು ಎಂದು ಪ್ರಧಾನಮಂತ್ರಿ ಹೇಳಿದರು. ಸಿರಿಧಾನ್ಯ, ನೈಸರ್ಗಿಕ ಕೃಷಿ, ವಿಪತ್ತು ಸ್ಥಿತಿಸ್ಥಾಪಕತ್ವ, ಹಸಿರು ಶಕ್ತಿ, ಸಾಂಪ್ರದಾಯಿಕ ಔಷಧಗಳು ಮತ್ತು ಆರೋಗ್ಯ ಭದ್ರತೆಯಂತಹ ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳನ್ನು ಅವರು ಉಲ್ಲೇಖಿಸಿದರು.
ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಮತ್ತು ಸೌರಶಕ್ತಿಯಂತಹ ಕ್ಷೇತ್ರಗಳಲ್ಲಿ ನಲವತ್ತು ದೇಶಗಳಲ್ಲಿ ಯೋಜನೆಗಳನ್ನು ಬೆಂಬಲಿಸುವಲ್ಲಿ ಐ.ಬಿ.ಎಸ್.ಎ ನಿಧಿಯ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ದಕ್ಷಿಣ-ದಕ್ಷಿಣ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಹವಾಮಾನ ಸ್ಥಿತಿಸ್ಥಾಪಕ ಕೃಷಿಗಾಗಿ ಐ.ಬಿ.ಎಸ್.ಎ ನಿಧಿ ಸ್ಥಾಪಿಸುವ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಪ್ರಧಾನಮಂತ್ರಿ ಅವರ ಪೂರ್ಣ ಭಾಷಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.
****
(Release ID: 2193182)
Visitor Counter : 5