iffi banner

ಟರ್ಬೊ ಮೋಡ್‌ ನಲ್ಲಿ ಪ್ರತಿಭೆಗಳು! 'ಸಿ.ಎಂ.ಒ.ಟಿ 2025'ಗೆ ಚಾಲನೆ: ಕಣಕ್ಕಿಳಿದ ಭಾರತದ ನವಪೀಳಿಗೆಯ ಸೃಜನಶೀಲರು


ಸಿ.ಎಂ.ಒ.ಟಿ ಕೇವಲ ಸಿನಿಮಾ ನಿರ್ಮಾಣವಲ್ಲ, ಇದು ರಾಷ್ಟ್ರದ ಸೃಜನಶೀಲ ಭವಿಷ್ಯವನ್ನು ರೂಪಿಸುವ ಮಹತ್ಕಾರ್ಯ: ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ 

ಸಿ.ಎಂ.ಒ.ಟಿ ಪ್ರತಿಭೆಗಳೇ ಭಾರತದ ಭವಿಷ್ಯದ ಕಥೆಗಾರರು ಮತ್ತು ಜಾಗತಿಕ ಸಾಂಸ್ಕೃತಿಕ ರಾಯಭಾರಿಗಳು: ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು

ಟರ್ಬೊ ಮೋಡ್‌ ನಲ್ಲಿ ಪ್ರತಿಭೆಗಳು! ಗೋವಾದಲ್ಲಿ ಇಂದು 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ (CMOT) 2025'ರ 5ನೇ ಆವೃತ್ತಿಗೆ ಚಾಲನೆ ದೊರೆತಿದ್ದು, ಭಾರತದ ಮುಂದಿನ ತಲೆಮಾರಿನ ಕಂಟೆಂಟ್‌ ಕ್ರಿಯೇಟರ್‌ ಗಳು ಕಣಕ್ಕಿಳಿದಿದ್ದಾರೆ.  ರಮಣೀಯ ಕರಾವಳಿ ನಗರವೀಗ ದೇಶದ ಅತ್ಯಂತ ಪ್ರತಿಭಾನ್ವಿತ ಮತ್ತು ಉದಯೋನ್ಮುಖ ಯುವ ಫಿಲ್ಮ್‌ಮೇಕರ್‌ಗಳ ಪಾಲಿಗೆ ಸೃಜನಶೀಲತೆಯ ತಾಣವಾಗಿ ಮಾರ್ಪಟ್ಟಿದೆ.

ಒಟ್ಟು 125 ಉದಯೋನ್ಮುಖ ತಾರೆಗಳು ಅತ್ಯಂತ ರೋಚಕವಾದ 48 ಗಂಟೆಗಳ 'ಫಿಲ್ಮ್‌ಮೇಕಿಂಗ್ ಚಾಲೆಂಜ್' (ಚಲನಚಿತ್ರ ನಿರ್ಮಾಣದ ಸವಾಲು) ಎದುರಿಸಲು ಸಜ್ಜಾಗಿದ್ದಾರೆ. ಸೃಜನಶೀಲತೆ, ಸಹಯೋಗ ಮತ್ತು ಸಿನಿಮೀಯ ಮ್ಯಾಜಿಕ್‌ ನ ಈ ಸುಂಟರಗಾಳಿಯಲ್ಲಿ, ಕಲ್ಪನೆಗಳು ಕೇವಲ ಸ್ಕ್ರಿಪ್ಟ್‌ನಿಂದ ನೇರವಾಗಿ ತೆರೆಯ ಮೇಲೆ ಮಿಂಚಿನ ವೇಗದಲ್ಲಿ ಮೂಡಿಬರಲಿವೆ. ಇದೊಂದು ಕೇವಲ ಉತ್ಸವವಲ್ಲ; ಬದಲಾಗಿ, ನಾಳೆಯ ನಿರ್ದೇಶಕರು, ನಟರು ಮತ್ತು ಕಥೆಗಾರರು ತಮ್ಮದೇ ಆದ ಬ್ಲಾಕ್‌ಬಸ್ಟರ್ ಕಥೆಗಳನ್ನು ರಚಿಸಲು ಆರಂಭಿಸುವ ಅದ್ಭುತ ವೇದಿಕೆಯಾಗಿದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಈ ಚಾಲೆಂಜ್‌ಗೆ ಚಾಲನೆ ನೀಡಿದರು ಹಾಗೂ ಸ್ಪರ್ಧಿಗಳ ಉತ್ಸಾಹ ಮತ್ತು ಸೃಜನಶೀಲತೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. 2021 ರಿಂದ ಈ ಉಪಕ್ರಮವು ಸ್ಥಿರವಾಗಿ ಬೆಳೆಯುತ್ತಿರುವುದನ್ನು ಉಲ್ಲೇಖಿಸಿದ ಅವರು, ಯುವ ಕಥೆಗಾರರಿಗೆ ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯನ್ನು ಒದಗಿಸುತ್ತಿರುವುದಕ್ಕಾಗಿ 'ಸಿ.ಎಂ.ಒ.ಟಿ' ಅನ್ನು ಪ್ರಶಂಸಿಸಿದರು. 'ಈ ವೇದಿಕೆಯು ಭಾರತದ ಉದಯೋನ್ಮುಖ ಕ್ರಿಯೇಟರ್‌ ಗಳನ್ನು ಜಾಗತಿಕ ನಿರ್ಮಾಪಕರು ಮತ್ತು ಕ್ರಿಯೇಟಿವ್ ನೆಟ್‌ ವರ್ಕ್‌ಗಳೊಂದಿಗೆ ಸಂಪರ್ಕಿಸುತ್ತದೆ. ಇದು ಕೇವಲ ಚಲನಚಿತ್ರ ನಿರ್ಮಾಣದ ವಿಷಯವಲ್ಲ, ಬದಲಾಗಿ ಇದು ರಾಷ್ಟ್ರದ ಸೃಜನಶೀಲ ಭವಿಷ್ಯವನ್ನು ರೂಪಿಸುವ ಮಹತ್ವದ ಕಾರ್ಯವಾಗಿದೆ,' ಎಂದು ಅವರು ನುಡಿದರು.

48 ಗಂಟೆಗಳ ಈ ಕಠಿಣ ಫಿಲ್ಮ್‌ಮೇಕಿಂಗ್ ಸವಾಲನ್ನು ಸ್ವೀಕರಿಸುವಂತೆ ಡಾ. ಮುರುಗನ್ ಅವರು ಸ್ಪರ್ಧಿಗಳಿಗೆ ಕರೆ ನೀಡಿದರು. 'ಇಂತಹ ಒತ್ತಡದ ಸನ್ನಿವೇಶಗಳು ನಿಮ್ಮ ಕೌಶಲ್ಯಗಳನ್ನು ಹರಿತಗೊಳಿಸುತ್ತವೆ ಮತ್ತು ನಿಮ್ಮಲ್ಲಿನ ಅತ್ಯುತ್ತಮ ಪ್ರತಿಭೆಯನ್ನು ಹೊರತರುತ್ತವೆ,' ಎಂದು ಅವರು ಒತ್ತಿ ಹೇಳಿದರು. ಇದೇ ವೇಳೆ, ಮುಂಬೈನಲ್ಲಿ ಹೊಸದಾಗಿ ಆರಂಭಿಸಲಾದ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕ್ರಿಯೇಟಿವ್ ಟೆಕ್ನಾಲಜೀಸ್' ಸೇರಿದಂತೆ ಸರ್ಕಾರದ ಪ್ರಮುಖ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಈ ಉಪಕ್ರಮಗಳು ಪ್ರತಿಭೆಗಳನ್ನು ಪೋಷಿಸಲು, ಭಾರತದ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಪ್ರಧಾನಮಂತ್ರಿ ಅವರ ಕ್ರಿಯಾಶೀಲ ಮತ್ತು ನಾವೀನ್ಯತೆ-ಚಾಲಿತ ದೂರದೃಷ್ಟಿಗೆ ಅನುಗುಣವಾಗಿ 'ಆರೆಂಜ್ ಎಕಾನಮಿ'ಗೆ ಉತ್ತೇಜನ ನೀಡಲು ವಿನ್ಯಾಸಗೊಳಿಸಲಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಸಂಜಯ್ ಜಾಜು ಅವರು, ಆಯ್ಕೆಯಾದ ಯುವಜನತೆಯನ್ನು ಅಭಿನಂದಿಸಿದರು ಹಾಗೂ ಅವರ ಈ ಆಯ್ಕೆಯನ್ನು ಒಂದು 'ಮಹತ್ವದ ಸಾಧನೆ' ಎಂದು ಬಣ್ಣಿಸಿದರು. ಸ್ಪರ್ಧಿಗಳ ಉತ್ಸಾಹವನ್ನು ಶ್ಲಾಘಿಸಿದ ಅವರು, ಕಳೆದ ವರ್ಷದ ಚಾಲೆಂಜ್‌ನಲ್ಲಿ ನಿರ್ಮಾಣವಾಗಿದ್ದ ಅತ್ಯುತ್ತಮ ಚಲನಚಿತ್ರಗಳನ್ನು ಸ್ಮರಿಸಿಕೊಂಡರು ಮತ್ತು ಅಂತಿಮ ಪ್ರದರ್ಶನವು 'ಬಹುತೇಕ ಆಸ್ಕರ್ ಮಾದರಿಯಲ್ಲಿತ್ತು' ಎಂದು ವರ್ಣಿಸಿದರು. 'ಸಿ.ಎಂ.ಒ.ಟಿ' ವೇದಿಕೆಯು ಅಪರೂಪದ ಸಹಯೋಗಕ್ಕೆ ಸಾಕ್ಷಿಯಾಗುತ್ತದೆ, ಇಲ್ಲಿ ಒಬ್ಬರಿಗೊಬ್ಬರು ಪರಿಚಯವಿಲ್ಲದವರೂ ಒಂದಾಗಿ ಸೇರಿ, ಒತ್ತಡದ ನಡುವೆಯೂ ಆಕರ್ಷಕ ಕಥೆಗಳನ್ನು ಸೃಷ್ಟಿಸುತ್ತಾರೆ ಎಂದು ಅವರು ಒತ್ತಿ ಹೇಳಿದರು. ಇತ್ತೀಚೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದ ಸಿ.ಎಂ.ಒ.ಟಿಯ ಹಳೆಯ ವಿದ್ಯಾರ್ಥಿಯೊಬ್ಬರ ಉದಾಹರಣೆಯನ್ನು ನೀಡಿದ ಅವರು, 'ನಿಮ್ಮಲ್ಲಿ ಅನೇಕರು ಮುಂದೊಂದು ದಿನ ಭಾರತದ ಕಥೆಗಾರರಾಗಿ ಮತ್ತು ಜಾಗತಿಕ ಸಾಂಸ್ಕೃತಿಕ ರಾಯಭಾರಿಗಳಾಗಿ ಹೊರಹೊಮ್ಮಲಿದ್ದೀರಿ,' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಾರ್ಟ್ಸ್ ಇಂಟರ್‌ನ್ಯಾಶನಲ್‌ ನ ಸ್ಥಾಪಕರು ಮತ್ತು ಸಿಇಒ (CEO) ಕಾರ್ಟರ್ ಪಿಲ್ಚರ್ ಅವರು, ಈ ವರ್ಷದ ಸಿ.ಎಂ.ಒ.ಟಿ ಅನ್ನು ಇಲ್ಲಿಯವರೆಗಿನ ಅತ್ಯಂತ ರೋಚಕ ಆವೃತ್ತಿಗಳಲ್ಲಿ ಒಂದೆಂದು ಬಣ್ಣಿಸಿದರು. ಜಗತ್ತಿನ ಮತ್ಯಾವುದೇ ಉತ್ಸವದಲ್ಲಿ ಸಿಗದಂತಹ ಸಾಟಿಯಿಲ್ಲದ ವೇದಿಕೆಯನ್ನು ನಿರ್ಮಿಸಿದ್ದಕ್ಕಾಗಿ ಅವರು ಸಚಿವಾಲಯವನ್ನು ಶ್ಲಾಘಿಸಿದರು. 'ಹಿಂದಿನ ಆವೃತ್ತಿಗಳ ಸ್ಪರ್ಧಿಗಳ ಚಿತ್ರಗಳು ಈಗಾಗಲೇ ಕೇನ್ಸ್‌ ಹಾಗೂ ವಿಶ್ವದ ಇತರ ಪ್ರಮುಖ ಉತ್ಸವಗಳಲ್ಲಿ ಪ್ರದರ್ಶನ ಕಾಣುತ್ತಿವೆ. ಅಷ್ಟೇ ಅಲ್ಲ, ಆಸ್ಕರ್ ಶಾರ್ಟ್‌ ಲಿಸ್ಟ್ ಅನ್ನೂ ತಲುಪಿವೆ,' ಎಂದು ಅವರು ಹೇಳಿದರು. ಕಲಿಯಲು, ಸಹಯೋಗ ಸಾಧಿಸಲು ಮತ್ತು ಸೃಜನಶೀಲತೆಯ ಎಲ್ಲೆಗಳನ್ನು ಮೀರಲು ಈ ಅವಕಾಶವನ್ನು ಬಳಸಿಕೊಳ್ಳುವಂತೆ ಪಿಲ್ಚರ್ ಅವರು ಕರೆ ನೀಡಿದರು. 'ಕಿರು-ರೂಪದ ಕಥಾ ನಿರೂಪಣೆ' (Short-form storytelling) ಈಗ ಜಾಗತಿಕ ಮನರಂಜನೆಯ ಹೃದಯಭಾಗದಲ್ಲಿದೆ ಎಂದು ಅವರು ಪುನರುಚ್ಚರಿಸಿದರು. 

ಉದ್ಘಾಟನಾ ಸಮಾರಂಭದಲ್ಲಿ ಜಂಟಿ ಕಾರ್ಯದರ್ಶಿ (ಚಲನಚಿತ್ರ) ಡಾ. ಅಜಯ್ ನಾಗಭೂಷಣ್ ಮತ್ತು ಎನ್‌.ಎಫ್‌.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ದುಮ್ ಅವರು ಉಪಸ್ಥಿತರಿದ್ದರು.

ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ (ಸಿ.ಎಂ.ಒ.ಟಿ) ಬಗ್ಗೆ

'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೊ' ಎನ್ನುವುದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್‌.ಎಫ್‌.ಡಿ.ಸಿ) ಒಂದು ದೂರದೃಷ್ಟಿಯ ಉಪಕ್ರಮವಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಉದಯೋನ್ಮುಖ ತಾರೆಗಳನ್ನು ಗುರುತಿಸಲು, ಪೋಷಿಸಲು ಮತ್ತು ಅವರನ್ನು ಬೆಳಕಿಗೆ ತರಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದೊಂದು ಕೇವಲ ಪ್ರತಿಭಾ ಕಾರ್ಯಕ್ರಮವಲ್ಲ; ಬದಲಾಗಿ, ಭಾರತದ ಸೃಜನಶೀಲ ಆರ್ಥಿಕತೆಯನ್ನು ಮುನ್ನಡೆಸುವ ಭವಿಷ್ಯದ ಕಥೆಗಾರರಿಗೆ ಇದೊಂದು 'ಲಾಂಚ್‌ಪ್ಯಾಡ್' ಆಗಿದೆ.

ಪ್ರತಿ ವರ್ಷ, ಯುವ ಮನಸ್ಸುಗಳ ಸುಪ್ತ ಪ್ರತಿಭೆಗೆ ಸಾಣೆ ಹಿಡಿದು, ಅದನ್ನು ಸಿನಿಮೀಯ ಅದ್ಭುತವನ್ನಾಗಿ ಮಾರ್ಪಡಿಸುವ ಕೆಲಸವನ್ನು ಸಿ.ಎಂ.ಒ.ಟಿ ಮಾಡುತ್ತಿದೆ. ದೇಶದ ಮೂಲೆಮೂಲೆಗಳಿಂದ ಬರುವ ಉದಯೋನ್ಮುಖ ಫಿಲ್ಮ್‌ಮೇಕರ್‌ಗಳಿಗೆ, ಏಷ್ಯಾದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವದ ಜಾಗತಿಕ ವೇದಿಕೆಯಲ್ಲಿ ತಮ್ಮ ಕೌಶಲ್ಯ ಪ್ರದರ್ಶಿಸಲು ಇದೊಂದು ಸುವರ್ಣಾವಕಾಶವಾಗಿದೆ.

ಭಾರತದ ಪ್ರಮುಖ ಚಲನಚಿತ್ರೋತ್ಸವವಾದ ಐಎಫ್‌ಎಫ್‌ಐ ಯ ಅಂಗವಾಗಿ ಈ ಉಪಕ್ರಮವು ಈಗಾಗಲೇ ನಾಲ್ಕು ಯಶಸ್ವಿ ಆವೃತ್ತಿಗಳನ್ನು ಕಂಡಿದೆ. ಈ ಐತಿಹಾಸಿಕ ಐದನೇ ಆವೃತ್ತಿಯಲ್ಲಿ, ಸಿ.ಎಂ.ಒ.ಟಿ ಮತ್ತೊಮ್ಮೆ ಭಾರತದಾದ್ಯಂತದ 13 ವಿವಿಧ ಚಲನಚಿತ್ರ ಕಲೆಗಳಲ್ಲಿ ಸುಮಾರು 125 ಯುವ ಪ್ರತಿಭೆಗಳನ್ನು ಪರಿಚಯಿಸಲಿದೆ.

ಐ.ಎಫ್‌.ಎಫ್‌.ಐ ಬಗ್ಗೆ

1952ರಲ್ಲಿ ಆರಂಭವಾದ 'ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ' (ಐ.ಎಫ್‌.ಎಫ್‌.ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಹಾಗೂ ಬೃಹತ್ ಸಿನಿಮಾ ಹಬ್ಬವಾಗಿ ಇಂದಿಗೂ ತನ್ನ ಗರಿಮೆಯನ್ನು ಎತ್ತಿ ಹಿಡಿದಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ಎನ್‌.ಎಫ್‌.ಡಿ.ಸಿ, ಹಾಗೂ ಗೋವಾ ಸರ್ಕಾರ (ESG) ಜಂಟಿಯಾಗಿ ಅರ್ಪಿಸುವ ಈ ಉತ್ಸವ, ಇಂದು ಜಗತ್ತಿನ 'ಸಿನಿಮೀಯ ಶಕ್ತಿಕೇಂದ್ರ'ವಾಗಿ ಹೊರಹೊಮ್ಮಿದೆ. ಇಲ್ಲಿ, ಮರುಜೀವ ಪಡೆದ 'ಕ್ಲಾಸಿಕ್' ಚಿತ್ರಗಳ ಗಾಂಭೀರ್ಯ ಮತ್ತು ಹೊಸ ಪ್ರಯೋಗಗಳ ಸಾಹಸ ಒಂದೇ ಕಡೆ ಸಂಗಮಿಸುತ್ತವೆ. ಅಷ್ಟೇ ಅಲ್ಲ, ಸಿನಿಮಾ ಲೋಕದ ದಿಗ್ಗಜರು ಮತ್ತು ನಿರ್ಭೀತ ನವಪೀಳಿಗೆಯ ಪ್ರತಿಭೆಗಳು ಒಂದೇ ವೇದಿಕೆಯನ್ನು ಹಂಚಿಕೊಳ್ಳುವ ಅಪರೂಪದ ತಾಣವಿದು. ಐಎಫ್‌ಎಫ್‌ಐ ಯ ನಿಜವಾದ ವೈಶಿಷ್ಟ್ಯವಿರುವುದೇ ಅದರ 'ರೋಮಾಂಚಕ ಸಮ್ಮಿಲನ'ದಲ್ಲಿ: ಜಾಗತಿಕ ಸ್ಪರ್ಧೆಗಳು, ಸಾಂಸ್ಕೃತಿಕ ವೈಭವ, ಮಾಸ್ಟರ್‌ ಕ್ಲಾಸ್‌ ಗಳು ಮತ್ತು ಗೌರವ ಸಲ್ಲಿಕೆಗಳ ಜೊತೆಗೆ, ಕಲ್ಪನೆಗಳು, ಒಪ್ಪಂದಗಳು ಮತ್ತು ಸಹಯೋಗಗಳಿಗೆ ರೆಕ್ಕೆ ನೀಡುವಂತಹ ಹೈ-ಎನರ್ಜಿಯ 'ವೇವ್ಸ್ ಫಿಲ್ಮ್ ಬಜಾರ್' ಇಲ್ಲಿನ ಪ್ರಮುಖ ಆಕರ್ಷಣೆ. ನವೆಂಬರ್ 20 ರಿಂದ 28 ರವರೆಗೆ ಗೋವಾದ ರಮಣೀಯ ಕಡಲತೀರದ ಹಿನ್ನೆಲೆಯಲ್ಲಿ ನಡೆಯಲಿರುವ ಈ 56ನೇ ಆವೃತ್ತಿಯು, ಭಾಷೆಗಳು, ಪ್ರಕಾರಗಳು, ಮತ್ತು ನಾವೀನ್ಯತೆಗಳ ವರ್ಣರಂಜಿತ ಲೋಕವನ್ನೇ ತೆರೆದಿಡಲಿದೆ. ಒಟ್ಟಾರೆಯಾಗಿ, ಇದು ಜಾಗತಿಕ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಅದ್ಧೂರಿ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡಿ:

https://www.pib.gov.in/PressReleasePage.aspx?PRID=2191768

https://www.pib.gov.in/PressReleasePage.aspx?PRID=2075551

https://www.pib.gov.in/PressReleasePage.aspx?PRID=2073892

https://www.pib.gov.in/PressReleaseIframePage.aspx?PRID=1978454

https://www.pib.gov.in/PressReleasePage.aspx?PRID=1979776

https://www.pib.gov.in/PressReleseDetailm.aspx?PRID=1856855

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji


*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2192536   |   Visitor Counter: 4