ಪ್ರಧಾನ ಮಂತ್ರಿಯವರ ಕಛೇರಿ
ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025ರಲ್ಲಿ ರೈತರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
ಕೃಷಿ, ನಾವೀನ್ಯತೆ ಮತ್ತು ಸುಸ್ಥಿರತೆಯೆಡೆಗೆ ರೈತರಿಗಿರುವ ಉತ್ಸಾಹ ಅತ್ಯಂತ ಶ್ಲಾಘನೀಯ: ಪ್ರಧಾನಮಂತ್ರಿ
ಭತ್ತದ ಕೃಷಿ ಕ್ಷೇತ್ರದಲ್ಲಿ ತಮಿಳುನಾಡು ಮಾಡಿರುವ ಕೆಲಸ ಜಾಗತಿಕ ಮಟ್ಟದಲ್ಲಿ ಸಾಟಿಯಿಲ್ಲದ್ದು: ಪ್ರಧಾನಮಂತ್ರಿ
ಸ್ವಚ್ಛ ಗ್ರಾಮಗಳು ಮತ್ತು ಪರಿಣಾಮಕಾರಿ ಜಾನುವಾರು ಪಾಲನೆಗಾಗಿ ಗುಜರಾತ್ನ ‘ಜಾನುವಾರು ಹಾಸ್ಟೆಲ್’ ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ
Posted On:
20 NOV 2025 12:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ‘ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆ 2025’ರಲ್ಲಿ ರೈತರೊಂದಿಗೆ ಸಂವಾದ ನಡೆಸಿದರು. ನೈಸರ್ಗಿಕ ಕೃಷಿಯಲ್ಲಿ ತೊಡಗಿರುವ ರೈತರನ್ನು ಅಭಿನಂದಿಸಿದ ಶ್ರೀ ಮೋದಿ ಅವರು, ಅಲ್ಲಿನ ಬಾಳೆ ಬೆಳೆಯನ್ನು ವೀಕ್ಷಿಸಿದರು ಮತ್ತು ಬಾಳೆ ತ್ಯಾಜ್ಯದ ಉಪಯೋಗದ ಬಗ್ಗೆ ವಿಚಾರಿಸಿದರು. ಅಲ್ಲಿ ಪ್ರದರ್ಶಿಸಲಾದ ಎಲ್ಲಾ ವಸ್ತುಗಳು ಬಾಳೆ ತ್ಯಾಜ್ಯದಿಂದ ತಯಾರಿಸಿದ ಮೌಲ್ಯವರ್ಧಿತ ಉತ್ಪನ್ನಗಳು ಎಂದು ರೈತರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ತಮ್ಮ ಉತ್ಪನ್ನಗಳು ಭಾರತದಾದ್ಯಂತ ಆನ್ ಲೈನ್ ನಲ್ಲಿ ಮಾರಾಟವಾಗುತ್ತವೆಯೇ ಎಂದು ಪ್ರಧಾನಮಂತ್ರಿಯವರು ಕೇಳಿದರು, ಅದಕ್ಕೆ ರೈತರು ಹೌದು ಎಂದು ಉತ್ತರಿಸಿದರು. ರೈತ ಉತ್ಪಾದಕ ಸಂಸ್ಥೆಗಳು (FPOs) ಹಾಗೂ ವೈಯಕ್ತಿಕ ಕೊಡುಗೆದಾರರ ಮೂಲಕ ತಾವು ಇಡೀ ತಮಿಳುನಾಡನ್ನು ಪ್ರತಿನಿಧಿಸುತ್ತಿರುವುದಾಗಿ ರೈತರು ತಿಳಿಸಿದರು. ತಮ್ಮ ಉತ್ಪನ್ನಗಳು ಆನ್ ಲೈನ್ನಲ್ಲಿ ಮಾರಾಟವಾಗುವುದರ ಜೊತೆಗೆ ರಫ್ತು ಕೂಡ ಆಗುತ್ತವೆ ಮತ್ತು ಭಾರತದಾದ್ಯಂತ ಸ್ಥಳೀಯ ಮಾರುಕಟ್ಟೆಗಳು ಹಾಗೂ ಸೂಪರ್ಮಾರ್ಕೆಟ್ ಗಳಲ್ಲಿ ಲಭ್ಯವಿವೆ ಎಂದು ಅವರು ಮಾಹಿತಿ ನೀಡಿದರು. ಪ್ರತಿ FPO ನಲ್ಲಿ ಎಷ್ಟು ಜನರು ಒಟ್ಟಿಗೆ ಕೆಲಸ ಮಾಡುತ್ತಾರೆ ಎಂದು ಶ್ರೀ ಮೋದಿ ಕೇಳಿದರು, ಇದಕ್ಕೆ ಉತ್ತರಿಸಿದ ರೈತರು, ಸುಮಾರು ಒಂದು ಸಾವಿರ ಜನರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಇದನ್ನು ಆಲಿಸಿದ ಪ್ರಧಾನಮಂತ್ರಿಯವರು, ಬಾಳೆ ಕೃಷಿಯನ್ನು ಒಂದೇ ಪ್ರದೇಶದಲ್ಲಿ ಪ್ರತ್ಯೇಕವಾಗಿ ಮಾಡಲಾಗುತ್ತಿದೆಯೇ ಅಥವಾ ಇತರ ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ರೈತರು, ವಿವಿಧ ಪ್ರದೇಶಗಳು ವಿಭಿನ್ನ ಮತ್ತು ವಿಶೇಷ ಉತ್ಪನ್ನಗಳಲ್ಲಿ ಪರಿಣತಿ ಹೊಂದಿವೆ ಎಂದು ತಿಳಿಸಿದರು ಮತ್ತು ತಮ್ಮಲ್ಲಿ ಜಿಐ (GI - ಭೌಗೋಳಿಕ ಸೂಚಕ) ಟ್ಯಾಗ್ ಹೊಂದಿರುವ ಉತ್ಪನ್ನಗಳು ಸಹ ಇವೆ ಎಂದು ಹೇಳಿದರು.
ಮತ್ತೊಬ್ಬ ರೈತರು ಚಹಾದಲ್ಲಿ ಬ್ಲಾಕ್ ಟೀ (ಕಪ್ಪು ಚಹಾ), ವೈಟ್ ಟೀ (ಬಿಳಿ ಚಹಾ), ಊಲಾಂಗ್ ಟೀ ಮತ್ತು ಗ್ರೀನ್ ಟೀ (ಹಸಿರು ಚಹಾ) ಎಂಬ ನಾಲ್ಕು ವಿಧಗಳಿವೆ ಎಂದು ವಿವರಿಸಿದರು. ಊಲಾಂಗ್ ಟೀ ಶೇ. 40 ರಷ್ಟು ಫರ್ಮೆಂಟೆಡ್ (ಹುದುಗುವಿಕೆ ಪ್ರಕ್ರಿಯೆಗೆ ಒಳಪಟ್ಟದ್ದು) ಆಗಿರುತ್ತದೆ ಎಂದು ಅವರು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವೈಟ್ ಟೀಗೆ ಮಾರುಕಟ್ಟೆಯಲ್ಲಿ ಗಮನಾರ್ಹ ಬೇಡಿಕೆ ಇದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಅಭಿಪ್ರಾಯಪಟ್ಟರು, ಇದಕ್ಕೆ ರೈತರು ಸಮ್ಮತಿಸಿದರು. ನೈಸರ್ಗಿಕ ಕೃಷಿಯ ಮೂಲಕ ವಿವಿಧ ಋತುಗಳಲ್ಲಿ ಬೆಳೆದ ಬದನೆಕಾಯಿ ಮತ್ತು ಮಾವಿನಹಣ್ಣಿನಂತಹ ವಿವಿಧ ತರಕಾರಿ ಮತ್ತು ಹಣ್ಣುಗಳನ್ನು ಸಹ ರೈತರು ಪ್ರದರ್ಶಿಸಿದರು.
ನಂತರ ಪ್ರಧಾನಮಂತ್ರಿ ಮೋದಿ ಅವರು ನುಗ್ಗೆಕಾಯಿಯನ್ನು ತೋರಿಸಿ, ಪ್ರಸ್ತುತ ಈ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಪ್ರಬಲವಾದ ಬೇಡಿಕೆ ಇದೆಯೇ ಎಂದು ಕೇಳಿದರು, ಇದಕ್ಕೆ ರೈತರು ಹೌದು ಎಂದು ಉತ್ತರಿಸಿದರು. ಇದರ ಎಲೆಗಳ ಉಪಯೋಗವೇನು ಎಂದು ಮೋದಿ ವಿಚಾರಿಸಿದರು. ಅದಕ್ಕೆ ರೈತರು, ನುಗ್ಗೆ ಸೊಪ್ಪನ್ನು ಸಂಸ್ಕರಿಸಿ ಪುಡಿ ಮಾಡಿ ರಫ್ತು ಮಾಡಲಾಗುತ್ತದೆ ಎಂದು ವಿವರಿಸಿದರು. ಇತ್ತೀಚಿನ ದಿನಗಳಲ್ಲಿ ನುಗ್ಗೆ ಸೊಪ್ಪಿನ ಪುಡಿಗೆ ಹೆಚ್ಚಿನ ಬೇಡಿಕೆಯಿದೆ ಎಂದು ಪ್ರಧಾನಿ ಹೇಳಿದರು, ರೈತರು ಇದನ್ನು ದೃಢಪಡಿಸಿದರು. ಯಾವ ದೇಶಗಳು ಈ ಉತ್ಪನ್ನವನ್ನು ಪ್ರಮುಖವಾಗಿ ಆಮದು ಮಾಡಿಕೊಳ್ಳುತ್ತವೆ ಎಂದು ಶ್ರೀ ಮೋದಿ ಅವರು ಮುಂದೆ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ರೈತರು, ಅಮೆರಿಕ ಸಂಯುಕ್ತ ಸಂಸ್ಥಾನ (USA), ಆಫ್ರಿಕನ್ ದೇಶಗಳು, ಜಪಾನ್ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳು ಇದರ ಪ್ರಮುಖ ಮಾರುಕಟ್ಟೆಗಳಾಗಿವೆ ಎಂದು ತಿಳಿಸಿದರು.
ನಂತರ ರೈತರು ಮಾತನಾಡಿ, ಪ್ರದರ್ಶನದಲ್ಲಿ ಇರಿಸಲಾದ ವಸ್ತುಗಳು ತಮಿಳುನಾಡಿನ ಜಿಐ (GI - ಭೌಗೋಳಿಕ ಸೂಚಕ) ಉತ್ಪನ್ನಗಳಾಗಿವೆ ಎಂದು ಮಾಹಿತಿ ನೀಡಿದರು. ಇದರಲ್ಲಿ ಕುಂಭಕೋಣಂನ ವೀಳ್ಯದೆಲೆ ಮತ್ತು ಮಧುರೈ ಮಲ್ಲಿಗೆ ಸೇರಿದಂತೆ 25 ವಸ್ತುಗಳನ್ನು ಪ್ರದರ್ಶಿಸಲಾಗಿತ್ತು. ಶ್ರೀ ಮೋದಿಯವರು ಮಾರುಕಟ್ಟೆ ವ್ಯಾಪ್ತಿಯ ಬಗ್ಗೆ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೈತರು, ಈ ಉತ್ಪನ್ನಗಳು ಭಾರತದಾದ್ಯಂತ ಲಭ್ಯವಿವೆ ಮತ್ತು ತಮಿಳುನಾಡಿನ ಪ್ರತಿ ಶುಭ ಸಮಾರಂಭಗಳಲ್ಲಿ ಇವುಗಳಿಗೆ ಪ್ರಮುಖ ಸ್ಥಾನವಿದೆ ಎಂದು ಉತ್ತರಿಸಿದರು. ವಾರಣಾಸಿಯ ಜನರು ಕೂಡ ಇಲ್ಲಿಂದಲೇ ವೀಳ್ಯದೆಲೆಗಳನ್ನು ತರಿಸಿಕೊಳ್ಳುತ್ತಾರೆಯೇ ಎಂದು ಪ್ರಧಾನಮಂತ್ರಿಯವರು ಕೇಳಿದರು, ಅದಕ್ಕೆ ರೈತರು ಹೌದು ಎಂದು ದೃಢಪಡಿಸಿದರು.
ಉತ್ಪಾದನೆಯ ಹೆಚ್ಚಳದ ಬಗ್ಗೆ ಶ್ರೀ ಮೋದಿ ಅವರು ಕೇಳಿದಾಗ, ತಮ್ಮ ಬಳಿ ಪ್ರಸ್ತುತ 100ಕ್ಕೂ ಹೆಚ್ಚು ಉತ್ಪನ್ನಗಳಿವೆ ಮತ್ತು ಅದರಲ್ಲಿ ಜೇನುತುಪ್ಪ ಪ್ರಮುಖವಾದುದು ಎಂದು ರೈತರು ಉತ್ತರಿಸಿದರು. ಪ್ರಧಾನಮಂತ್ರಿಯವರು ಮಾರುಕಟ್ಟೆ ಸಾಮರ್ಥ್ಯದ ಬಗ್ಗೆ ವಿಚಾರಿಸಿದರು. ಇದಕ್ಕೆ ಉತ್ತರಿಸಿದ ರೈತರು, ಬೇಡಿಕೆ ತುಂಬಾ ಹೆಚ್ಚಾಗಿದೆ ಮತ್ತು ತಮ್ಮ ಜೇನುತುಪ್ಪದ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ದೃಢಪಡಿಸಿದರು.
ತಮ್ಮ ಬಳಿ ಸುಮಾರು ಒಂದು ಸಾವಿರ ಸಾಂಪ್ರದಾಯಿಕ ಭತ್ತದ ತಳಿಗಳಿವೆ ಮತ್ತು ಅವು ಸಿರಿಧಾನ್ಯಗಳಿಗೆ ಸಮಾನವಾದ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿವೆ ಎಂದು ಪ್ರಧಾನಮಂತ್ರಿಯವರಿಗೆ ಇದೇ ವೇಳೆ ಮಾಹಿತಿ ನೀಡಲಾಯಿತು. ಭತ್ತದ ಕೃಷಿ ಕ್ಷೇತ್ರದಲ್ಲಿ ತಮಿಳುನಾಡು ಮಾಡಿರುವ ಕೆಲಸ ಜಗತ್ತಿನಲ್ಲೇ ಸಾಟಿಯಿಲ್ಲದ್ದು ಎಂದು ಶ್ರೀ ಮೋದಿ ಶ್ಲಾಘಿಸಿದರು. ರೈತರು ಈ ಮಾತನ್ನು ಒಪ್ಪಿ ದೃಢಪಡಿಸಿದರು ಮತ್ತು ರಫ್ತು ಮಾಡಲಾಗುತ್ತಿರುವ ಎಲ್ಲಾ ಭತ್ತ, ಅಕ್ಕಿ ಹಾಗೂ ಸಂಬಂಧಿತ ಮೌಲ್ಯವರ್ಧಿತ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.
ಮತ್ತೊಬ್ಬ ರೈತರೊಂದಿಗೆ ಸಂವಾದ ನಡೆಸಿದ ಶ್ರೀ ಮೋದಿ ಅವರು, ತರಬೇತಿಗಾಗಿ ಯುವ ರೈತರು ಮುಂದೆ ಬರುತ್ತಿದ್ದಾರೆಯೇ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ರೈತರು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಖಚಿತಪಡಿಸಿದರು. ಪಿ ಎಚ್ ಡಿ ಪದವೀಧರರೂ ಸೇರಿದಂತೆ ಉನ್ನತ ಶಿಕ್ಷಣ ಪಡೆದ ವ್ಯಕ್ತಿಗಳಿಗೆ ಆರಂಭದಲ್ಲಿ ಈ ಕೆಲಸದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗಬಹುದು, ಆದರೆ ಒಮ್ಮೆ ಇದರ ಪ್ರಯೋಜನಗಳನ್ನು ಕಂಡುಕೊಂಡರೆ, ಅವರು ಇದನ್ನು ಮೆಚ್ಚಲಾರಂಭಿಸುತ್ತಾರೆ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು. ಇದಕ್ಕೆ ದನಿಗೂಡಿಸಿದ ರೈತರು, ಮೊದಲೆಲ್ಲ ಇಂತಹ ವ್ಯಕ್ತಿಗಳನ್ನು ವಿಚಿತ್ರ ಸ್ವಭಾವದವರು ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಅವರು ತಿಂಗಳಿಗೆ 2 ಲಕ್ಷ ರೂ. ಗಳಿಸುತ್ತಿದ್ದಾರೆ ಮತ್ತು ಇತರರಿಗೆ ಸ್ಫೂರ್ತಿಯಾಗಿ ಕಾಣುತ್ತಿದ್ದಾರೆ ಎಂದು ವಿವರಿಸಿದರು. ನೈಸರ್ಗಿಕ ಕೃಷಿ ಯೋಜನೆಯಡಿ ತಮ್ಮ ಮಾದರಿ ಕೃಷಿ ಕ್ಷೇತ್ರದಲ್ಲಿ ಇದುವರೆಗೆ 7,000 ರೈತರಿಗೆ ಹಾಗೂ 3,000 ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದಾಗಿ ರೈತರು ಹೇಳಿದರು. ನಿಮಗೆ ಮಾರುಕಟ್ಟೆ ಲಭ್ಯವಿದೆಯೇ ಎಂದು ಪ್ರಧಾನಮಂತ್ರಿಯವರು ಕೇಳಿದರು. ತಾವು ನೇರ ಮಾರುಕಟ್ಟೆ ಮತ್ತು ಇತರೆ ದೇಶಗಳಿಗೆ ರಫ್ತು ಮಾಡುತ್ತೇವೆ. ಅಲ್ಲದೆ, ಹೇರ್ ಆಯಿಲ್ (ತಲೆಗೆ ಹಚ್ಚುವ ಎಣ್ಣೆ), ಕೊಬ್ಬರಿ ಮತ್ತು ಸಾಬೂನಿನಂತಹ ಉತ್ಪನ್ನಗಳ ಮೂಲಕ ಮೌಲ್ಯವರ್ಧನೆ ಕೈಗೊಳ್ಳುತ್ತೇವೆ ಎಂದು ರೈತರು ಉತ್ತರಿಸಿದರು.
ಗುಜರಾತ್ ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ತಾವು "ಜಾನುವಾರು ಹಾಸ್ಟೆಲ್" (Cattle hostel) ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿರುವುದಾಗಿ ಶ್ರೀ ಮೋದಿ ಹೇಳಿದರು. ಊರಿನ ಎಲ್ಲಾ ಜಾನುವಾರುಗಳನ್ನು ಒಂದೇ ಸಾಮಾನ್ಯ ಜಾಗದಲ್ಲಿ ಇರಿಸುವುದರಿಂದ ಗ್ರಾಮವು ಸ್ವಚ್ಛವಾಗಿ ಉಳಿಯುತ್ತದೆ ಮತ್ತು ಪರಿಣಾಮಕಾರಿ ನಿರ್ವಹಣೆಗೆ ಕೇವಲ ಒಬ್ಬ ವೈದ್ಯರು ಮತ್ತು ನಾಲ್ಕರಿಂದ ಐದು ಸಹಾಯಕ ಸಿಬ್ಬಂದಿ ಸಾಕಾಗುತ್ತದೆ ಎಂದು ಅವರು ವಿವರಿಸಿದರು. ಇದನ್ನು ಒಪ್ಪಿದ ರೈತರು, ಈ ವ್ಯವಸ್ಥೆಯು 'ಜೀವಾಮೃತ'ದ ಬೃಹತ್ ಉತ್ಪಾದನೆಗೆ ಸಹಾಯಕವಾಗಿದೆ ಮತ್ತು ಇದನ್ನು ಹತ್ತಿರದ ರೈತರಿಗೆ ಪೂರೈಸಲಾಗುತ್ತದೆ ಎಂದು ಸೇರಿಸಿದರು.
ಈ ಸಂದರ್ಭದಲ್ಲಿ ತಮಿಳುನಾಡು ರಾಜ್ಯಪಾಲರಾದ ಶ್ರೀ ಆರ್.ಎನ್. ರವಿ ಮತ್ತು ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್ ಅವರು ಉಪಸ್ಥಿತರಿದ್ದರು.
*****
(Release ID: 2192023)
Visitor Counter : 9
Read this release in:
English
,
Urdu
,
Marathi
,
हिन्दी
,
Bengali
,
Assamese
,
Gujarati
,
Odia
,
Tamil
,
Telugu
,
Malayalam