ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರು ಗುಜರಾತಿನ ಸೂರತ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು; ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು
ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ತಂಡದೊಂದಿಗೆ ಪ್ರಧಾನಮಂತ್ರಿ ಅವರು ಮಾತುಕತೆ ನಡೆಸಿದರು
ಬುಲೆಟ್ ರೈಲು ಅನುಷ್ಠಾನದಿಂದ ಕಲಿತ ಪಾಠಗಳನ್ನು ದಾಖಲಿಸುವ ಮಹತ್ವವನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು
ರಾಷ್ಟ್ರಕ್ಕಾಗಿ ಕೆಲಸ ಮಾಡುವ ಮತ್ತು ಹೊಸದನ್ನು ಕೊಡುಗೆ ನೀಡುವ ಮನೋಭಾವ ಜಾಗೃತಗೊಂಡಾಗ, ಅದು ಅಪಾರ ಸ್ಫೂರ್ತಿಯ ಮೂಲವಾಗುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು
Posted On:
16 NOV 2025 3:47PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಗುಜರಾತಿನ ಸೂರತ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ ನ ಪ್ರಗತಿಯನ್ನು ಪರಿಶೀಲಿಸಿದರು. ಅವರು ಭಾರತದ ಮೊದಲ ಬುಲೆಟ್ ರೈಲು ಯೋಜನೆಯ ತಂಡದೊಂದಿಗೆ ಮಾತುಕತೆ ನಡೆಸಿದರು ಹಾಗು ವೇಗ ಮತ್ತು ವೇಳಾಪಟ್ಟಿ ಗುರಿಗಳನ್ನು ಪಾಲಿಸುವುದು ಸೇರಿದಂತೆ ಯೋಜನೆಯ ಪ್ರಗತಿಯ ಬಗ್ಗೆ ವಿಚಾರಿಸಿದರು. ಯೋಜನೆಯು ಯಾವುದೇ ತೊಂದರೆಗಳಿಲ್ಲದೆ ಸರಾಗವಾಗಿ ಮುಂದುವರಿಯುತ್ತಿದೆ ಎಂದು ಸಿಬ್ಬಂದಿಯು ಅವರಿಗೆ ಭರವಸೆ ನೀಡಿದರು.
ಗುಜರಾತ್ ನ ನವಸಾರಿಯಲ್ಲಿರುವ ಶಬ್ದ ತಡೆಗೋಡೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ತಮ್ಮ ಅನುಭವವನ್ನು ಕೇರಳದ ಮಹಿಳಾ ಎಂಜಿನಿಯರ್ ಒಬ್ಬರು ಹಂಚಿಕೊಂಡರು. ಅಲ್ಲಿ ವೆಲ್ಡಿಂಗ್ ರಿಬಾರ್ ಕೇಜ್ಗಳಿಗಾಗಿ ರೋಬೋಟಿಕ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಭಾರತದ ಮೊದಲ ಬುಲೆಟ್ ರೈಲನ್ನು ನಿರ್ಮಿಸುವ ಬಗ್ಗೆ ಅವರು ವೈಯಕ್ತಿಕವಾಗಿ ಹೇಗೆ ಭಾವಿಸುತ್ತಾರೆ ಮತ್ತು ಈ ಐತಿಹಾಸಿಕ ಸಾಧನೆಯ ಬಗ್ಗೆ ಅವರು ತಮ್ಮ ಕುಟುಂಬದೊಂದಿಗೆ ಏನು ಹಂಚಿಕೊಳ್ಳುತ್ತಾರೆ ಎಂದು ಶ್ರೀ ಮೋದಿ ಅವರನ್ನು ಕೇಳಿದರು. ದೇಶದ ಮೊದಲ ಬುಲೆಟ್ ರೈಲಿಗೆ ಕೊಡುಗೆ ನೀಡುವ ಬಗ್ಗೆ ಅವರು ಹೆಮ್ಮೆ ವ್ಯಕ್ತಪಡಿಸಿದರು, ಇದನ್ನು "ಕನಸಿನ ಯೋಜನೆ" ಮತ್ತು ಅವರ ಕುಟುಂಬಕ್ಕೆ "ಹೆಮ್ಮೆಯ ಕ್ಷಣ" ಎಂದು ಹೇಳಿದರು.
ರಾಷ್ಟ್ರದ ಸೇವೆಯ ಮನೋಭಾವವನ್ನು ಪ್ರತಿಬಿಂಬಿಸುತ್ತಾ, ರಾಷ್ಟ್ರಕ್ಕಾಗಿ ಕೆಲಸ ಮಾಡುವ ಮತ್ತು ಹೊಸದನ್ನು ಕೊಡುಗೆ ನೀಡುವ ಭಾವನೆ ಬಂದಾಗ, ಅದು ಅಪಾರ ಪ್ರೇರಣೆಯ ಮೂಲವಾಗುತ್ತದೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ದೇಶದ ಮೊದಲ ಉಪಗ್ರಹವನ್ನು ಉಡಾವಣೆ ಮಾಡಿದ ವಿಜ್ಞಾನಿಗಳು ಹೇಗೆ ಭಾವಿಸಿರಬೇಕು ಮತ್ತು ಇಂದು ನೂರಾರು ಉಪಗ್ರಹಗಳನ್ನು ಹೇಗೆ ಉಡಾವಣೆ ಮಾಡಲಾಗುತ್ತಿದೆ ಎಂಬುದನ್ನು ನೆನಪಿಸಿಕೊಂಡು ಅವರು ಭಾರತದ ಬಾಹ್ಯಾಕಾಶ ಪ್ರಯಾಣದೊಂದಿಗೆ ಹೋಲಿಸಿ ಚಿತ್ರಿಸಿದರು.
ಬೆಂಗಳೂರಿನ ಮತ್ತೊಬ್ಬ ಉದ್ಯೋಗಿ, ಲೀಡ್ ಎಂಜಿನಿಯರಿಂಗ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿರುವ ಶೃತಿ ಅವರು, ಕಠಿಣ ವಿನ್ಯಾಸ ಮತ್ತು ಎಂಜಿನಿಯರಿಂಗ್ ನಿಯಂತ್ರಣ ಪ್ರಕ್ರಿಯೆಗಳನ್ನು ವಿವರಿಸಿದರು. ಕಾರ್ಯಗತಗೊಳಿಸುವಿಕೆಯ ಪ್ರತಿಯೊಂದು ಹಂತದಲ್ಲೂ, ಅವರ ತಂಡವು ಸಾಧಕ-ಬಾಧಕಗಳನ್ನು ಮೌಲ್ಯಮಾಪನ ಮಾಡುತ್ತದೆ, ಪರಿಹಾರಗಳನ್ನು ಗುರುತಿಸುತ್ತದೆ ಮತ್ತು ದೋಷರಹಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಪರ್ಯಾಯಗಳನ್ನು ಅನ್ವೇಷಿಸುತ್ತದೆ ಎಂದು ಅವರು ಹೇಳಿದರು.
ಇಲ್ಲಿ ಪಡೆದ ಅನುಭವಗಳನ್ನು ದಾಖಲಿಸಿ ಬ್ಲೂ ಬುಕ್ ನಂತೆ ಸಂಕಲಿಸಿದರೆ, ದೇಶವು ಬುಲೆಟ್ ರೈಲುಗಳ ದೊಡ್ಡ ಪ್ರಮಾಣದ ಅನುಷ್ಠಾನದತ್ತ ನಿರ್ಣಾಯಕವಾಗಿ ಸಾಗಬಹುದು ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. ಭಾರತವು ಪುನರಾವರ್ತಿತ ಪ್ರಯೋಗಗಳನ್ನು ತಪ್ಪಿಸಬೇಕು ಮತ್ತು ಬದಲಾಗಿ ಅಸ್ತಿತ್ವದಲ್ಲಿರುವ ಮಾದರಿಗಳಿಂದ ಕಲಿತದ್ದನ್ನು ಪುನರಾವರ್ತಿಸಬೇಕು ಎಂದು ಅವರು ಒತ್ತಿ ಹೇಳಿದರು. ಕೆಲವು ಕ್ರಮಗಳನ್ನು ಏಕೆ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಸ್ಪಷ್ಟವಾದ ತಿಳುವಳಿಕೆ ಇದ್ದರೆ ಮಾತ್ರ ಪುನರಾವರ್ತನೆ ಅರ್ಥಪೂರ್ಣವಾಗುತ್ತದೆ ಎಂದು ಶ್ರೀ ಮೋದಿ ಎತ್ತಿ ತೋರಿಸಿದರು. ಇಲ್ಲದಿದ್ದರೆ, ಉದ್ದೇಶ ಅಥವಾ ನಿರ್ದೇಶನವಿಲ್ಲದೆ ಪುನರಾವರ್ತನೆ ಸಂಭವಿಸಬಹುದು ಎಂದು ಅವರು ಮುನ್ನೆಚ್ಚರಿಕೆ ನೀಡಿದರು. ಅಂತಹ ದಾಖಲೆಗಳನ್ನು ನಿರ್ವಹಿಸುವುದು ಭವಿಷ್ಯದ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಸೂಚಿಸಿದರು. "ನಾವು ಇಲ್ಲಿ ನಮ್ಮ ಜೀವನವನ್ನು ಅರ್ಪಿಸುತ್ತೇವೆ ಮತ್ತು ದೇಶಕ್ಕಾಗಿ ಅಮೂಲ್ಯವಾದದ್ದನ್ನು ಕೊಟ್ಟು ಹೋಗುತ್ತೇವೆ" ಎಂದು ಪ್ರಧಾನಮಂತ್ರಿಯವರು ಹೇಳಿದರು.
ಒಬ್ಬ ಉದ್ಯೋಗಿ ತನ್ನ ಬದ್ಧತೆಯನ್ನು ಕವಿತೆಯ ಮೂಲಕ ಹೃತ್ಪೂರ್ವಕ ಮಾತುಗಳಲ್ಲಿ ವ್ಯಕ್ತಪಡಿಸಿದನರು, ಅದಕ್ಕೆ ಪ್ರಧಾನಮಂತ್ರಿಯವರು ಅವರ ಸಮರ್ಪಣೆಯನ್ನು ಶ್ಲಾಘಿಸಿದರು ಮತ್ತು ಮೆಚ್ಚುಗೆಯೊಂದಿಗೆ ಪ್ರತಿಕ್ರಿಯಿಸಿದರು.
ಭೇಟಿಯ ಸಮಯದಲ್ಲಿ ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಜರಿದ್ದರು.
ಹಿನ್ನೆಲೆ
ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾದ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಕಾರಿಡಾರ್ (ಎಂ.ಎ.ಎಚ್.ಎಸ್.ಆರ್) ನ ಪ್ರಗತಿಯನ್ನು ಪರಿಶೀಲಿಸಲು ಪ್ರಧಾನಮಂತ್ರಿಯವರು ಸೂರತ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು - ಇದು ದೇಶದ ಹೈ-ಸ್ಪೀಡ್ ಸಂಪರ್ಕದ ಯುಗಕ್ಕೆ ಪ್ರವೇಶಿಸುವುದನ್ನು ತೋರಿಸುತ್ತದೆ.
ಎಂ.ಎ.ಎಚ್.ಎಸ್.ಆರ್ ಸುಮಾರು 508 ಕಿಲೋಮೀಟರ್ ಉದ್ದವಿದ್ದು ಗುಜರಾತ್ ಹಾಗು ದಾದ್ರಾ ಮತ್ತು ನಗರ ಹವೇಲಿಯಲ್ಲಿ 352 ಕಿಮೀ ಮತ್ತು ಮಹಾರಾಷ್ಟ್ರದಲ್ಲಿ 156 ಕಿಮೀಗಳನ್ನು ಒಳಗೊಂಡಿದೆ. ಈ ಕಾರಿಡಾರ್ ಸಬರಮತಿ, ಅಹಮದಾಬಾದ್, ಆನಂದ್, ವಡೋದರಾ, ಭರೂಚ್, ಸೂರತ್, ಬಿಲಿಮೋರಾ, ವಾಪಿ, ಬೋಯಿಸರ್, ವಿರಾರ್, ಥಾಣೆ ಮತ್ತು ಮುಂಬೈ ಸೇರಿದಂತೆ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ, ಇದು ಭಾರತದ ಸಾರಿಗೆ ಮೂಲಸೌಕರ್ಯದಲ್ಲಿ ಒಂದು ಪರಿವರ್ತನಾತ್ಮಕ ಹೆಜ್ಜೆಯನ್ನು ತೋರಿಸುತ್ತದೆ.
ಅಂತರರಾಷ್ಟ್ರೀಯ ಮಾನದಂಡಗಳಿಗೆ ಸಮಾನವಾಗಿ ಸುಧಾರಿತ ಎಂಜಿನಿಯರಿಂಗ್ ತಂತ್ರಗಳೊಂದಿಗೆ ನಿರ್ಮಿಸಲಾದ ಈ ಯೋಜನೆಯು 465 ಕಿಮೀ (ಮಾರ್ಗದ ಸುಮಾರು 85%) ವಯಾಡಕ್ಟ್ ಗಳ ಮೇಲೆ ಒಳಗೊಂಡಿದೆ, ಇದು ಕನಿಷ್ಠ ಭೂ ಅಡಚಣೆ ಮತ್ತು ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಇಲ್ಲಿಯವರೆಗೆ, 326 ಕಿಮೀ ವಯಡಕ್ಟ್ ಕೆಲಸ ಪೂರ್ಣಗೊಂಡಿದೆ ಮತ್ತು 25 ನದಿ ಸೇತುವೆಗಳಲ್ಲಿ 17 ಈಗಾಗಲೇ ನಿರ್ಮಿಸಲಾಗಿದೆ.
ಪೂರ್ಣಗೊಂಡ ನಂತರ, ಬುಲೆಟ್ ರೈಲು ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಎರಡು ಗಂಟೆಗಳವರೆಗೆ ಕಡಿಮೆ ಮಾಡುತ್ತದೆ, ಅಂತರ-ನಗರ ಪ್ರಯಾಣವನ್ನು ವೇಗವಾಗಿ, ಸುಲಭ ಮತ್ತು ಹೆಚ್ಚು ಆರಾಮದಾಯಕವಾಗಿಸುವ ಮೂಲಕ ಕ್ರಾಂತಿಯನ್ನುಂಟು ಮಾಡುತ್ತದೆ. ಈ ಯೋಜನೆಯು ಇಡೀ ಕಾರಿಡಾರ್ನಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ನಿರೀಕ್ಷೆಯಿದೆ, ಪ್ರಾದೇಶಿಕ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ.
ಸುಮಾರು 47 ಕಿ.ಮೀ. ವ್ಯಾಪ್ತಿಯ ಸೂರತ್-ಬಿಲಿಮೊರಾ ವಿಭಾಗವು ಪೂರ್ಣಗೊಳ್ಳುವ ಹಂತದಲ್ಲಿದೆ, ಕಾಮಗಾರಿ ಕೆಲಸಗಳು ಮತ್ತು ಟ್ರ್ಯಾಕ್-ಬೆಡ್ ಹಾಕುವಿಕೆಯು ಸಂಪೂರ್ಣವಾಗಿ ಪೂರ್ಣಗೊಂಡಿದೆ. ಸೂರತ್ ನಿಲ್ದಾಣದ ವಿನ್ಯಾಸವು ನಗರದ ವಿಶ್ವಪ್ರಸಿದ್ಧ ವಜ್ರದ ಉದ್ಯಮದಿಂದ ಸ್ಫೂರ್ತಿ ಪಡೆಯುತ್ತದೆ, ಇದು ಸೊಬಗು ಮತ್ತು ಕ್ರಿಯಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ. ಪ್ರಯಾಣಿಕರ ಸೌಕರ್ಯದ ಮೇಲೆ ಬಲವಾದ ಗಮನವನ್ನು ನೀಡುವ ಮೂಲಕ ನಿಲ್ದಾಣವನ್ನು ವಿನ್ಯಾಸಗೊಳಿಸಲಾಗಿದೆ, ವಿಶಾಲವಾದ ಕಾಯುವ ಕೋಣೆಗಳು, ವಿಶ್ರಾಂತಿ ಕೊಠಡಿಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಒಳಗೊಂಡಿದೆ. ಇದು ಸೂರತ್ ಮೆಟ್ರೋ, ನಗರ ಬಸ್ ಗಳು ಮತ್ತು ಭಾರತೀಯ ರೈಲ್ವೆ ನೆಟ್‌ವರ್ಕ್ ನೊಂದಿಗೆ ತಡೆರಹಿತ ಬಹು-ಮಾದರಿ ಸಂಪರ್ಕವನ್ನು ಸಹ ನೀಡುತ್ತದೆ.
*****
(Release ID: 2190719)
Visitor Counter : 8
Read this release in:
English
,
Urdu
,
Marathi
,
हिन्दी
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu