ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ದೇಡಿಯಾಪಾಡಾದಲ್ಲಿ ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಅಂಗವಾಗಿ ಜನಜಾತೀಯಯ ಗೌರವ ದಿವಸ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು


ಪ್ರಧಾನಮಂತ್ರಿ ಅವರು ₹9,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ಶಿಲಾನ್ಯಾಸ ನೆರವೇರಿಸಿದರು

ಸಾವಿರಾರು ವರ್ಷಗಳಿಂದ ಬುಡಕಟ್ಟು ಹೆಮ್ಮೆ ಭಾರತದ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದೆ; ರಾಷ್ಟ್ರದ ಗೌರವ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಅಪಾಯದಲ್ಲಿದ್ದಾಗಲೆಲ್ಲಾ ನಮ್ಮ ಬುಡಕಟ್ಟು ಸಮುದಾಯಗಳು ಮುಂಚೂಣಿಯಲ್ಲಿ ನಿಂತಿವೆ: ಪ್ರಧಾನಮಂತ್ರಿ

ಸ್ವಾತಂತ್ರ್ಯ ಚಳವಳಿಗೆ ಬುಡಕಟ್ಟು ಸಮುದಾಯಗಳ ಕೊಡುಗೆಯನ್ನು ನಾವು ಮರೆಯಲು ಸಾಧ್ಯವಿಲ್ಲ: ಪ್ರಧಾನಮಂತ್ರಿ

ಇಂದು, ಬುಡಕಟ್ಟು ಭಾಷಾ ಉತ್ತೇಜನಾ ಕೇಂದ್ರದ ಶ್ರೀ ಗೋವಿಂದ ಗುರು ಪೀಠವನ್ನು ಉದ್ಘಾಟಿಸಲಾಗಿದೆ; ಈ ಕೇಂದ್ರವು ಭಿಲ್, ಗಮಿತ್, ವಾಸವ, ಗರಾಸಿಯಾ, ಕೊಂಕಣಿ, ಸಂತಾಲ್, ರಥ್ವಾ, ನಾಯಕ್, ದಾಬ್ಲಾ, ಚೌಧರಿ, ಕೊಕ್ನಾ, ಕುಂಭಿ, ವಾರ್ಲಿ ಮತ್ತು ದೋಡಿಯಾ ಮುಂತಾದ ಬುಡಕಟ್ಟು ಸಮುದಾಯಗಳ ಉಪಭಾಷೆಗಳನ್ನು ಅಧ್ಯಯನ ಮಾಡುತ್ತದೆ; ಈ ಸಮುದಾಯಗಳಿಗೆ ಸಂಬಂಧಿಸಿದ ಕಥೆಗಳು ಮತ್ತು ಹಾಡುಗಳನ್ನು ಸಂರಕ್ಷಿಸಲಾಗುತ್ತದೆ: ಪ್ರಧಾನಮಂತ್ರಿ

ಅನುವಂಶಿಕ ರಕ್ತಹೀನತೆ ರೋಗವು ಬುಡಕಟ್ಟು ಸಮುದಾಯಗಳಿಗೆ ಬಹಳ ಹಿಂದಿನಿಂದಲೂ ಗಂಭೀರ ಬೆದರಿಕೆಯಾಗಿದೆ ಮತ್ತು ಅದನ್ನು ಪರಿಹರಿಸಲು, ಬುಡಕಟ್ಟು ಪ್ರದೇಶಗಳಲ್ಲಿ ಔಷಧಾಲಯಗಳು, ವೈದ್ಯಕೀಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ; ಅನುವಂಶಿಕ ರಕ್ತಹೀನತೆ ರೋಗವನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಮತ್ತು ನಿರ್ವಹಿಸಲು ಪ್ರಸ್ತುತ ರಾಷ್ಟ್ರವ್ಯಾಪಿ ಅಭಿಯಾನ ನಡೆಯುತ್ತಿದೆ: ಪ್ರಧಾನಮಂತ್ರಿ

ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಶುಭ ಸಂದರ್ಭದಲ್ಲಿ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಂತ್ರವನ್ನು ಮತ್ತಷ್ಟು ಬಲಪಡಿಸಲು ನಾವು ಸಂಕಲ್ಪ ಮಾಡಬೇಕು; ಪ್ರಗತಿಯಲ್ಲಿ ಯಾರೂ ಹಿಂದೆ ಬೀಳಬಾರದು, ಅಭಿವೃದ್ಧಿಯಿಂದ ಯಾರೂ ವಂಚಿತರಾಗಬಾರದು; ಇದು ಮಣ್ಣಿನ ಮಗ ಧರ್ತಿ ಆಬಾ ಅವರ ಪಾದಗಳಿಗೆ ಸಲ್ಲಿಸುವ ನಿಜವಾದ ಗೌರವ: ಪ್ರಧಾನಮಂತ್ರಿ

Posted On: 15 NOV 2025 5:28PM by PIB Bengaluru

ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಸ್ಮರಣಾರ್ಥ ಗುಜರಾತಿನ ದೇಡಿಯಾಪಾಡಾದಲ್ಲಿ ಇಂದು ನಡೆದ ಜನಜಾತೀಯ ಗೌರವ ದಿವಸ್‌ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ, ಅವರು ₹9,700 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ನರ್ಮದಾ ಮಾತೆಯ ಪವಿತ್ರ ಭೂಮಿ ಇಂದು ಮತ್ತೊಂದು ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುತ್ತಿದೆ ಎಂದು ಹೇಳಿದ ಶ್ರೀ ಮೋದಿ, ಭಾರತದ ಏಕತೆ ಮತ್ತು ವೈವಿಧ್ಯತೆಯನ್ನು ಸಂಭ್ರಮಿಸಲು ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ ಅವರ 150ನೇ ಜಯಂತಿಯನ್ನು ಇದೇ ಸ್ಥಳದಲ್ಲಿ ಆಚರಿಸಲಾಯಿತು ಎಂದು ನೆನಪಿಸಿಕೊಂಡರು, ಅಂದು ಭಾರತ ಪರ್ವಕ್ಕೆ ಚಾಲನೆ ನೀಡಲಾಯಿತು. ಇಂದು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಅದ್ಧೂರಿ ಆಚರಣೆಯೊಂದಿಗೆ, ನಾವು ಭಾರತ ಪರ್ವದ ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಭಗವಾನ್ ಬಿರ್ಸಾ ಮುಂಡಾ ಅವರಿಗೆ ಗೌರವ ಸಲ್ಲಿಸಿದರು. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಇಡೀ ಬುಡಕಟ್ಟು ಪ್ರದೇಶದಲ್ಲಿ ಸ್ವಾತಂತ್ರ್ಯದ ಮನೋಭಾವವನ್ನು ಜಾಗೃತಗೊಳಿಸಿದ ಗೋವಿಂದ ಗುರುಗಳ ಆಶೀರ್ವಾದ ಸಹ ಈ ಕಾರ್ಯಕ್ರಮಕ್ಕೆ ಇದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಅವರು ವೇದಿಕೆಯಿಂದ ಗೋವಿಂದ ಗುರುಗಳಿಗೆ ಗೌರವ ನಮನ ಸಲ್ಲಿಸಿದರು. ಸ್ವಲ್ಪ ಸಮಯದ ಹಿಂದೆ ದೇವಮೋಗ್ರ ಮಾತೆಯ ದೇಗುಲಕ್ಕೆ ಭೇಟಿ ನೀಡುವ ಸೌಭಾಗ್ಯ ಸಿಕ್ಕಿತು ಮತ್ತು ಮತ್ತೊಮ್ಮೆ ಅವರ ಪಾದಗಳಿಗೆ ನಮಸ್ಕರಿಸಿದೆ ಎಂದು ಅವರು ಹೇಳಿದರು.

ದೇಡಿಯಾಪಾಡಾ ಮತ್ತು ಸಗ್ಬರಾ ಪ್ರದೇಶಗಳು ಸಂತ ಕಬೀರರ ಬೋಧನೆಗಳಿಂದ ಪ್ರೇರಿತವಾಗಿವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ತಾವು ಸಂತ ಕಬೀರರ ನಾಡು ವಾರಾಣಸಿಯ ಸಂಸತ್ ಸದಸ್ಯರಾಗಿರುವುದರಿಂದ ಸಂತ ಕಬೀರರು ತಮ್ಮ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ ಎಂದು ಹೇಳಿದರು. ಪ್ರಧಾನಮಂತ್ರಿ ಅವರು ವೇದಿಕೆಯಿಂದ ಸಂತ ಕಬೀರರಿಗೆ ಗೌರವ ನಮನ ಸಲ್ಲಿಸಿದರು.

ರಾಷ್ಟ್ರೀಯ ಅಭಿವೃದ್ಧಿ ಮತ್ತು ಬುಡಕಟ್ಟು ಕಲ್ಯಾಣಕ್ಕೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಇಂದು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ಪ್ರಧಾನ ಮಂತ್ರಿ ಜನಮನ್‌ ಮಿಷನ್ ಮತ್ತು ಇತರ ಯೋಜನೆಗಳ ಅಡಿಯಲ್ಲಿ, ಈ ಪ್ರದೇಶದ ಒಂದು ಲಕ್ಷ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಒದಗಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಏಕಲವ್ಯ ಮಾದರಿ ಶಾಲೆಗಳು ಮತ್ತು ಆಶ್ರಮ ಶಾಲೆಗಳನ್ನು ಸಹ ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ಮಾಡಲಾಗಿದೆ. ಬಿರ್ಸಾ ಮುಂಡಾ ಬುಡಕಟ್ಟು ವಿಶ್ವವಿದ್ಯಾಲಯದಲ್ಲಿ ಶ್ರೀ ಗೋವಿಂದ ಗುರು ಪೀಠವನ್ನು ಸ್ಥಾಪಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. ಆರೋಗ್ಯ, ರಸ್ತೆಗಳು ಮತ್ತು ಸಾರಿಗೆಗೆ ಸಂಬಂಧಿಸಿದ ಹಲವಾರು ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಈ ಅಭಿವೃದ್ಧಿ ಮತ್ತು ಸೇವಾ ಕಾರ್ಯಗಳಿಗಾಗಿ ಅವರು ಎಲ್ಲರನ್ನೂ ಅಭಿನಂದಿಸಿದರು.

2021 ರಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಅಧಿಕೃತವಾಗಿ ಜನಜಾತೀಯ ಗೌರವ ದಿನವನ್ನಾಗಿ ಆಚರಿಸಲಾಯಿತು ಎಂದು ಶ್ರೀ ಮೋದಿ ಹೇಳಿದರು. ಸಾವಿರಾರು ವರ್ಷಗಳಿಂದ ಬುಡಕಟ್ಟು ಹೆಮ್ಮೆ ಭಾರತದ ಪ್ರಜ್ಞೆಯ ಅವಿಭಾಜ್ಯ ಅಂಗವಾಗಿದೆ. ರಾಷ್ಟ್ರದ ಗೌರವ, ಸ್ವಾಭಿಮಾನ ಮತ್ತು ಸ್ವಾತಂತ್ರ್ಯ ಅಪಾಯದಲ್ಲಿದ್ದಾಗಲೆಲ್ಲಾ ಬುಡಕಟ್ಟು ಸಮುದಾಯವು ಮುಂಚೂಣಿಯಲ್ಲಿ ನಿಂತಿದೆ. ಭಾರತದ ಸ್ವಾತಂತ್ರ್ಯ ಹೋರಾಟವು ಈ ಮನೋಭಾವದ ಶ್ರೇಷ್ಠ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಬುಡಕಟ್ಟು ಸಮುದಾಯದ ಅಸಂಖ್ಯಾತ ವೀರರು ಸ್ವಾತಂತ್ರ್ಯದ ಜ್ಯೋತಿಯನ್ನು ಮುಂದಕ್ಕೆ ಕೊಂಡೊಯ್ದರು ಎಂದು ಪ್ರಧಾನಮಂತ್ರಿ ಹೇಳಿದರು. ತಿಲ್ಕಾ ಮಾಂಝಿ, ರಾಣಿ ಗೈಡಿನ್ಲಿಯು, ಸಿಧು-ಕನ್ಹೋ, ಭೈರವ ಮುರ್ಮು, ಬುದ್ಧ ಭಗತ್ ಮತ್ತು ಅಲ್ಲೂರಿ ಸೀತಾರಾಮ ರಾಜು ಅವರನ್ನು ಬುಡಕಟ್ಟು ಸಮುದಾಯದ ಸ್ಪೂರ್ತಿದಾಯಕ ವ್ಯಕ್ತಿಗಳೆಂದು ಪ್ರಧಾನಮಂತ್ರಿ ಬಣ್ಣಿಸಿದರು. ಮಧ್ಯಪ್ರದೇಶದ ತಾಂತ್ಯಾ ಭಿಲ್, ಛತ್ತೀಸಗಢದ ವೀರ್ ನಾರಾಯಣ್ ಸಿಂಗ್, ಜಾರ್ಖಂಡ್‌ ನ ತೆಲಂಗಾ ಖಾಡಿಯಾ, ಅಸ್ಸಾಂನ ರೂಪಚಂದ್ ಕೊನ್ವರ್ ಮತ್ತು ಒಡಿಶಾದ ಲಕ್ಷ್ಮಣ್ ನಾಯಕ್ ಅವರನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಅಪಾರ ತ್ಯಾಗ ಮಾಡಿದ ಧೀರ ವ್ಯಕ್ತಿಗಳೆಂದು ಅವರು ಉಲ್ಲೇಖಿಸಿದರು. ಬುಡಕಟ್ಟು ಸಮುದಾಯವು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಲೆಕ್ಕವಿಲ್ಲದಷ್ಟು ದಂಗೆಗಳನ್ನು ನಡೆಸಿ ರಕ್ತ ಸುರಿಸಿದೆ ಎಂದು ಅವರು ಒತ್ತಿ ಹೇಳಿದರು.

ಗುಜರಾತ್ ಬುಡಕಟ್ಟು ಸಮುದಾಯದ ಅನೇಕ ಧೀರ ದೇಶಭಕ್ತರಿಗೆ ನೆಲೆಯಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ, ಭಗತ್ ಚಳವಳಿಯ ನೇತೃತ್ವ ವಹಿಸಿದ್ದ ಗೋವಿಂದ ಗುರು, ಪಂಚಮಹಲ್‌ ನಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ದೀರ್ಘ ಹೋರಾಟ ನಡೆಸಿದ ರಾಜಾ ರೂಪಸಿಂಗ್ ನಾಯಕ್, ಏಕಿ ಚಳವಳಿಯ ಪ್ರವರ್ತಕ ಮೋತಿಲಾಲ್ ತೇಜವತ್ ಮತ್ತು ಗಾಂಧೀಜಿಯ ತತ್ವಗಳನ್ನು ಬುಡಕಟ್ಟು ಸಮುದಾಯಕ್ಕೆ ತಲುಪಿಸಿದ ದಶ್ರಿಬೆನ್ ಚೌಧರಿ ಅವರನ್ನು ಉಲ್ಲೇಖಿಸಿದರು. ಸ್ವಾತಂತ್ರ್ಯ ಹೋರಾಟದ ಅಸಂಖ್ಯಾತ ಅಧ್ಯಾಯಗಳು ಬುಡಕಟ್ಟು ಹೆಮ್ಮೆ ಮತ್ತು ಶೌರ್ಯದಿಂದ ಅಲಂಕರಿಸಲ್ಪಟ್ಟಿವೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಹೋರಾಟಕ್ಕೆ ಬುಡಕಟ್ಟು ಸಮುದಾಯದ ಕೊಡುಗೆಯನ್ನು ಭವಿಷ್ಯದ ಪೀಳಿಗೆಗೆ ತಲುಪಿಸುವ ಮಹತ್ವವನ್ನು ಶ್ರೀ ಮೋದಿ ಒತ್ತಿ ಹೇಳಿದರು. ದೇಶಾದ್ಯಂತ ಹಲವಾರು ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದರು. ಗುಜರಾತಿನ ರಾಜ್‌ ಪಿಪ್ಲಾದಲ್ಲಿ 25 ಎಕರೆ ಪ್ರದೇಶದಲ್ಲಿ ದೊಡ್ಡ ಬುಡಕಟ್ಟು ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆ ಛತ್ತೀಸಗಢಕ್ಕೆ ಭೇಟಿ ನೀಡಿ ಅಲ್ಲಿ ಶಹೀದ್ ವೀರ್ ನಾರಾಯಣ್ ಸಿಂಗ್ ಬುಡಕಟ್ಟು ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದ್ದಾಗಿ ಅವರು ಹೇಳಿದರು. ಬಿರ್ಸಾ ಮುಂಡಾ ಅವರನ್ನು ಬಂಧಿಸಿಟ್ಟಿದ್ದ ರಾಂಚಿ ಜೈಲಿನ ಬಗ್ಗೆಯೂ ಅವರು ಪ್ರಸ್ತಾಪಿಸಿದರು, ಇದನ್ನು ಬುಡಕಟ್ಟು ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬುಡಕಟ್ಟು ಭಾಷಾ ಉತ್ತೇಜನಕ್ಕಾಗಿ ಶ್ರೀ ಗೋವಿಂದ ಗುರು ಪೀಠದ ಸ್ಥಾಪನೆಯನ್ನು ಘೋಷಿಸಿದ ಶ್ರೀ ಮೋದಿ, ಈ ಕೇಂದ್ರವು ಭಿಲ್, ಗಮಿತ್, ವಾಸವ, ಗರಸಿಯಾ, ಕೊಂಕಣಿ, ಸಂತಾಲ್, ರಥ್ವಾ, ನಾಯಕ್, ದಾಬ್ಲಾ, ಚೌಧರಿ, ಕೊಕನಾ, ಕುಂಭಿ, ವಾರ್ಲಿ ಮತ್ತು ದೋಡಿಯಾ ಮುಂತಾದ ಬುಡಕಟ್ಟು ಸಮುದಾಯಗಳ ಉಪಭಾಷೆಗಳನ್ನು ಅಧ್ಯಯನ ಮಾಡುತ್ತದೆ. ಈ ಸಮುದಾಯಗಳಿಗೆ ಸಂಬಂಧಿಸಿದ ಕಥೆಗಳು ಮತ್ತು ಹಾಡುಗಳನ್ನು ಸಂರಕ್ಷಿಸಲಾಗುವುದು ಎಂದು ಹೇಳಿದರು. ಬುಡಕಟ್ಟು ಸಮಾಜಗಳು ಸಾವಿರಾರು ವರ್ಷಗಳ ಅನುಭವದ ಮೂಲಕ ಪಡೆದ ಜ್ಞಾನವನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರ ಜೀವನಶೈಲಿಯು ವಿಜ್ಞಾನದಿಂದ, ಅವರ ಕಥೆಗಳು ತತ್ವಶಾಸ್ತ್ರದಿಂದ ಮತ್ತು ಅವರ ಭಾಷೆಗಳು ಪರಿಸರದ ತಿಳುವಳಿಕೆಯಿಂದ ತುಂಬಿವೆ ಎಂದು ಅವರು ಹೇಳಿದರು. ಶ್ರೀ ಗೋವಿಂದ ಗುರು ಪೀಠವು ಹೊಸ ಪೀಳಿಗೆಯನ್ನು ಈ ಶ್ರೀಮಂತ ಸಂಪ್ರದಾಯದೊಂದಿಗೆ ಸಂಪರ್ಕಿಸುತ್ತದೆ ಎಂದು ಅವರು ಹೇಳಿದರು.

ಜನಜಾತೀಯ ಗೌರವ ದಿವಸ್ ಸಂದರ್ಭವು ನಮ್ಮ ಕೋಟ್ಯಂತರ ಬುಡಕಟ್ಟು ಸಹೋದರ ಸಹೋದರಿಯರಿಗೆ ಆಗಿರುವ ಅನ್ಯಾಯವನ್ನು ನೆನಪಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಆರು ದಶಕಗಳ ಕಾಲ ದೇಶವನ್ನು ಆಳಿದ ವಿರೋಧ ಪಕ್ಷವು ಬುಡಕಟ್ಟು ಸಮುದಾಯಗಳನ್ನು ಅವರ ಹಣೆಬರಹಕ್ಕೆ ಬಿಟ್ಟಿತು ಎಂದು ಅವರು ಹೇಳಿದರು. ಬುಡಕಟ್ಟು ಪ್ರದೇಶಗಳು ಅಪೌಷ್ಟಿಕತೆ, ಆರೋಗ್ಯ ರಕ್ಷಣೆಯ ಕೊರತೆ, ಅಸಮರ್ಪಕ ಶಿಕ್ಷಣ ಮತ್ತು ಕಳಪೆ ಸಂಪರ್ಕದಿಂದ ಬಳಲುತ್ತಿದ್ದವು ಎಂದು ಅವರು ಎತ್ತಿ ತೋರಿಸಿದರು. ಹಿಂದಿನ ಸರ್ಕಾರಗಳು ನಿಷ್ಕ್ರಿಯವಾಗಿದ್ದವು, ಈ ಕೊರತೆಗಳು ಬುಡಕಟ್ಟು ಪ್ರದೇಶಗಳ ನಿರ್ಣಾಯಕ ಲಕ್ಷಣಗಳಾದವು ಎಂದರು. ಬುಡಕಟ್ಟು ಕಲ್ಯಾಣವು ಯಾವಾಗಲೂ ತಮ್ಮ ಪಕ್ಷದ ಪ್ರಮುಖ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಬುಡಕಟ್ಟು ಸಮುದಾಯಗಳ ಮೇಲಿನ ಅನ್ಯಾಯವನ್ನು ಕೊನೆಗಾಣಿಸುವ ಮತ್ತು ಅಭಿವೃದ್ಧಿಯ ಪ್ರಯೋಜನಗಳು ಅವರನ್ನು ತಲುಪುವಂತೆ ನೋಡಿಕೊಳ್ಳುವ ಸರ್ಕಾರದ ಅಚಲ ಸಂಕಲ್ಪವನ್ನು ಪುನರುಚ್ಚರಿಸಿದರು.

ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ತಮ್ಮ ಪಕ್ಷವು ಬುಡಕಟ್ಟು ವ್ಯವಹಾರಗಳಿಗಾಗಿ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿತು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಅಟಲ್‌ ಜಿ ಅವರ ಅಧಿಕಾರಾವಧಿಯ ನಂತರ, ನಂತರದ ಸರ್ಕಾರಗಳು ಹತ್ತು ವರ್ಷಗಳ ಕಾಲ ಸಚಿವಾಲಯವನ್ನು ನಿರ್ಲಕ್ಷಿಸಿದವು ಎಂದು ಹೇಳಿದರು. 2013ರಲ್ಲಿ, ಅಂದಿನ ಸರ್ಕಾರ ಬುಡಕಟ್ಟು ಕಲ್ಯಾಣಕ್ಕಾಗಿ ಕೆಲವೇ ಸಾವಿರ ಕೋಟಿ ರೂಪಾಯಿಗಳನ್ನು ಮಾತ್ರ ಮೀಸಲಿಟ್ಟಿತ್ತು ಎಂದು ಅವರು ಹೇಳಿದರು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಬುಡಕಟ್ಟು ಜನರ ಹಿತಾಸಕ್ತಿಗಳಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸಿತು ಮತ್ತು ಸಚಿವಾಲಯದ ಬಜೆಟ್ ಅನ್ನು ಹೆಚ್ಚಿಸಿತು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬುಡಕಟ್ಟು ಜನರ ಕಲ್ಯಾಣಕ್ಕಾಗಿ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಬಜೆಟ್ ಇಂದು ಹಲವು ಪಟ್ಟು ಹೆಚ್ಚಾಗಿದೆ ಎಂದು ಅವರು ಒತ್ತಿ ಹೇಳಿದರು.

ಗುಜರಾತಿನ ಬುಡಕಟ್ಟು ಪ್ರದೇಶಗಳಲ್ಲಿ ಪರಿಸ್ಥಿತಿ ಅಷ್ಟೊಂದು ಉತ್ತಮವಾಗಿರದಿದ್ದ ಸಮಯವನ್ನು ನೆನಪಿಸಿಕೊಂಡ ಶ್ರೀ ಮೋದಿ, ಅಂಬಾಜಿಯಿಂದ ಉಮರ್ಗಮ್‌ ವರೆಗಿನ ಬುಡಕಟ್ಟು ಪ್ರದೇಶದಲ್ಲಿ ಒಂದೇ ಒಂದು ವಿಜ್ಞಾನ ಶಾಲೆ ಇರಲಿಲ್ಲ ಎಂದು ಒತ್ತಿ ಹೇಳಿದರು. ದೇಡಿಯಾಪಾಡಾ ಮತ್ತು ಸಗ್ಬರಾದಂತಹ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅವಕಾಶವಿರಲಿಲ್ಲ ಎಂದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಅವಧಿಯನ್ನು ನೆನಪಿಸಿಕೊಂಡ ಅವರು, ದೇಡಿಯಾಪಾಡಾದಿಂದ ಕನ್ಯಾ ಕೆಲವಾಣಿ ಮಹೋತ್ಸವವನ್ನು ಆರಂಭಿಸಿದ್ದಾಗಿ ಹೇಳಿದರು. ಆ ಸಮಯದಲ್ಲಿ, ಅನೇಕ ಮಕ್ಕಳು ತಮ್ಮನ್ನು ಭೇಟಿಯಾದರು - ಕೆಲವರು ವೈದ್ಯರಾಗಲು, ಇತರರು ಎಂಜಿನಿಯರ್‌ ಗಳು ಅಥವಾ ವಿಜ್ಞಾನಿಗಳಾಗಿರಲು ಆಶಿಸಿದರು. ಅವರು ಮುಂದುವರಿಯಲು ಪ್ರೋತ್ಸಾಹಿಸಲಾಯಿತು ಮತ್ತು ಅವರ ಕನಸುಗಳನ್ನು ನನಸಾಗಿಸುವ ಹಾದಿಯಲ್ಲಿ ನಿಂತಿರುವ ಪ್ರತಿಯೊಂದು ಅಡಚಣೆಯನ್ನು ನಿವಾರಿಸುವ ಭರವಸೆ ನೀಡಲಾಯಿತು ಎಂದು ಅವರು ಹೇಳಿದರು.

ಪರಿಸ್ಥಿತಿಯನ್ನು ಪರಿವರ್ತಿಸಲು ಮಾಡಿದ ಅವಿರತ ಪ್ರಯತ್ನಗಳನ್ನು ಒತ್ತಿ ಹೇಳಿದ ಶ್ರೀ ಮೋದಿ, ಇದರ ಪರಿಣಾಮವಾಗಿ, ಗುಜರಾತಿನ ಬುಡಕಟ್ಟು ಪ್ರದೇಶಗಳಲ್ಲಿ ಈಗ 10,000ಕ್ಕೂ ಹೆಚ್ಚು ಶಾಲೆಗಳಿವೆ ಎಂದು ಹೇಳಿದರು. ಕಳೆದ ಎರಡು ದಶಕಗಳಲ್ಲಿ, ಬುಡಕಟ್ಟು ಪ್ರದೇಶಗಳಲ್ಲಿ ಡಜನಗ ಗಟ್ಟಲೆ ವಿಜ್ಞಾನ, ವಾಣಿಜ್ಯ ಮತ್ತು ಕಲಾ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ತಮ್ಮ ಸರ್ಕಾರ ಬುಡಕಟ್ಟು ಮಕ್ಕಳಿಗಾಗಿ ನೂರಾರು ಹಾಸ್ಟೆಲ್‌ ಗಳನ್ನು ನಿರ್ಮಿಸಿದೆ ಮತ್ತು ಗುಜರಾತಿನಲ್ಲಿ ಎರಡು ಬುಡಕಟ್ಟು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಈ ಪ್ರದೇಶದಲ್ಲಿ ಗಮನಾರ್ಹ ಬದಲಾವಣೆಯನ್ನು ತಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಇಪ್ಪತ್ತು ವರ್ಷಗಳ ಹಿಂದೆ, ಮಕ್ಕಳು ತಮ್ಮ ಕನಸು ಕಂಗಳೊಂದಿಗೆ ತಮ್ಮನ್ನು ಭೇಟಿಯಾಗುತ್ತಿದ್ದರು - ಕೆಲವರು ವೈದ್ಯರು, ಕೆಲವರು ಎಂಜಿನಿಯರ್‌ ಗಳು ಅಥವಾ ವಿಜ್ಞಾನಿಗಳಾಗುವ ಆಕಾಂಕ್ಷೆ ಹೊಂದಿದ್ದರು. ಇಂದು, ಈ ಮಕ್ಕಳಲ್ಲಿ ಅನೇಕರು ವೈದ್ಯರು, ಎಂಜಿನಿಯರ್‌ ಗಳು ಮತ್ತು ಸಂಶೋಧಕರಾಗಿದ್ದಾರೆ ಎಂದು ಅವರು ಹೇಳಿದರು. ಬುಡಕಟ್ಟು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು. ಕಳೆದ ಐದರಿಂದ ಆರು ವರ್ಷಗಳಲ್ಲಿಯೇ, ದೇಶಾದ್ಯಂತ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಕೇಂದ್ರ ಸರ್ಕಾರ ₹18,000 ಕೋಟಿಗೂ ಹೆಚ್ಚು ಹಣವನ್ನು ಮಂಜೂರು ಮಾಡಿದೆ. ಹೆಣ್ಣು ಮಕ್ಕಳಿಗಾಗಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರ ಪರಿಣಾಮವಾಗಿ, ಈ ಶಾಲೆಗಳಲ್ಲಿ ದಾಖಲಾದ ಬುಡಕಟ್ಟು ಮಕ್ಕಳ ಸಂಖ್ಯೆ ಶೇಕಡಾ 60 ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಬುಡಕಟ್ಟು ಯುವಕರಿಗೆ ಅವಕಾಶಗಳು ದೊರೆತಾಗ, ಅವರು ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುವ ಶಕ್ತಿಯನ್ನು ಪಡೆಯುತ್ತಾರೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಅವರ ಧೈರ್ಯ, ಕಠಿಣ ಪರಿಶ್ರಮ ಮತ್ತು ಸಾಮರ್ಥ್ಯವು ಅವರ ಸಂಪ್ರದಾಯಗಳಿಂದ ಆನುವಂಶಿಕವಾಗಿ ಬಂದಿದೆ ಎಂದು ಹೇಳಿದರು. ಇದಕ್ಕೆ ಇಂದಿನ ಕ್ರೀಡಾ ಜಗತ್ತು ಒಂದು ಸ್ಪಷ್ಟ ಉದಾಹರಣೆಯಾಗಿದೆ, ಅಲ್ಲಿ ಬುಡಕಟ್ಟು ಯುವಕರು ವಿಶ್ವಾದ್ಯಂತ ಭಾರತೀಯ ಧ್ವಜದ ಪ್ರತಿಷ್ಠೆಯನ್ನು ಹೆಚ್ಚಿಸಲು ಗಮನಾರ್ಹ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು. ಮೇರಿ ಕೋಮ್, ಥೋನಕಲ್ ಗೋಪಿ, ದ್ಯುತಿ ಚಂದ್ ಮತ್ತು ಬೈಚುಂಗ್ ಭುಟಿಯಾ ಅವರಂತಹ ಹೆಸರುಗಳು ಒಂದು ಕಾಲದಲ್ಲಿ ಚಿರಪರಿಚಿತವಾಗಿದ್ದರೂ, ಈಗ ಬುಡಕಟ್ಟು ಪ್ರದೇಶಗಳಿಂದ ಉದಯೋನ್ಮುಖ ಕ್ರೀಡಾಪಟುಗಳು ಪ್ರತಿಯೊಂದು ಪ್ರಮುಖ ಸ್ಪರ್ಧೆಯಲ್ಲೂ ಕಂಡುಬರುತ್ತಿದ್ದಾರೆ ಎಂದು ಅವರು ಹೇಳಿದರು. ಭಾರತೀಯ ಮಹಿಳಾ ಕ್ರಿಕೆಟ್ ತಂಡ ಇತ್ತೀಚೆಗೆ ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ ಮತ್ತು ಬುಡಕಟ್ಟು ಸಮುದಾಯದ ಮಗಳು ಆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಬುಡಕಟ್ಟು ಪ್ರದೇಶಗಳಲ್ಲಿ ಹೊಸ ಪ್ರತಿಭೆಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಬುಡಕಟ್ಟು ಪ್ರದೇಶಗಳಲ್ಲಿ ಕ್ರೀಡಾ ಸೌಲಭ್ಯಗಳನ್ನು ಸಹ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.

ತಮ್ಮ ಸರ್ಕಾರವು ವಂಚಿತರಿಗೆ ಆದ್ಯತೆಯ ವಿಧಾನದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಒಂದು ಕಾಲದಲ್ಲಿ ಹಿಂದುಳಿದ ಜಿಲ್ಲೆ ಎಂದು ಪರಿಗಣಿಸಲಾಗಿದ್ದ ನರ್ಮದಾ ಜಿಲ್ಲೆಯ ಉದಾಹರಣೆಯನ್ನು ಉಲ್ಲೇಖಿಸಿದರು. ಜಿಲ್ಲೆಗೆ ಆದ್ಯತೆ ನೀಡಲಾಯಿತು, ಮಹತ್ವಾಕಾಂಕ್ಷಿ ಜಿಲ್ಲೆಯಾಗಿ ಘೋಷಿಸಲಾಯಿತು ಮತ್ತು ಇಂದು ವಿವಿಧ ಅಭಿವೃದ್ಧಿ ನಿಯತಾಂಕಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಅವರು ಹೇಳಿದರು. ಈ ಪರಿವರ್ತನೆಯು ಈ ಪ್ರದೇಶದ ಬುಡಕಟ್ಟು ಸಮುದಾಯಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದು ಅವರು ಒತ್ತಿ ಹೇಳಿದರು. ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಬುಡಕಟ್ಟು ಪ್ರಾಬಲ್ಯದ ರಾಜ್ಯಗಳು ಮತ್ತು ಹಿಂದುಳಿದ ಸಮುದಾಯಗಳನ್ನು ನೇರವಾಗಿ ಗುರಿಯಾಗಿರಿಸಿಕೊಂಡಿವೆ ಎಂದು ಶ್ರೀ ಮೋದಿ ಹೇಳಿದರು. 2018 ರಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಪ್ರಾರಂಭಿಸಿದ್ದನ್ನು ನೆನಪಿಸಿಕೊಂಡ ಅವರು, ಈ ಯೋಜನೆಯನ್ನು ಜಾರ್ಖಂಡ್‌ ನ ರಾಂಚಿಯಿಂದ ಪ್ರಾರಂಭಿಸಲಾಯಿತು ಎಂದು ಹೇಳಿದರು. ಇಂದು, ದೇಶಾದ್ಯಂತ ಕೋಟ್ಯಂತರ ಬುಡಕಟ್ಟು ಸಹೋದರ ಸಹೋದರಿಯರು ಈ ಯೋಜನೆಯಡಿಯಲ್ಲಿ ₹5 ಲಕ್ಷದವರೆಗೆ ಉಚಿತ ಚಿಕಿತ್ಸಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಆಯುಷ್ಮಾನ್ ಆರೋಗ್ಯ ಮಂದಿರ ಉಪಕ್ರಮವನ್ನು ಸಹ ಬುಡಕಟ್ಟು ಪ್ರಾಬಲ್ಯದ ಛತ್ತೀಸಗಢದಿಂದ ಪ್ರಾರಂಭಿಸಲಾಗಿದ್ದು, ಇದು ಬುಡಕಟ್ಟು ಜನರಿಗೆ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತಿದೆ ಎಂದು ಅವರು ಹೇಳಿದರು.

ಬುಡಕಟ್ಟು ಸಮುದಾಯಗಳ ಅತ್ಯಂತ ಹಿಂದುಳಿದ ವರ್ಗಗಳಿಗೆ ತಮ್ಮ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ವಿದ್ಯುತ್, ನೀರು, ರಸ್ತೆ ಅಥವಾ ಆಸ್ಪತ್ರೆಗಳಂತಹ ಸೌಲಭ್ಯಗಳಿಲ್ಲದ ಪ್ರದೇಶಗಳಿದ್ದವು ಎಂದು ಹೇಳಿದರು. ಅಂತಹ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು, ಜಾರ್ಖಂಡ್‌ ನ ಖುಂಟಿಯಿಂದ ಪ್ರಧಾನ ಮಂತ್ರಿ ಜನಮನ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಉಪಕ್ರಮಕ್ಕಾಗಿ ₹24,000 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಧರ್ತಿ ಆಬಾ ಆದಿವಾಸಿ ಗ್ರಾಮ ಉತ್ಕರ್ಷ್ ಅಭಿಯಾನವು ಹಿಂದುಳಿದ ಬುಡಕಟ್ಟು ಗ್ರಾಮಗಳಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶಾದ್ಯಂತ 60,000ಕ್ಕೂ ಹೆಚ್ಚು ಹಳ್ಳಿಗಳು ಈ ಅಭಿಯಾನದಲ್ಲಿ ಸೇರಿವೆ ಎಂದು ಅವರು ಹೇಳಿದರು. ಈ ಸಾವಿರಾರು ಹಳ್ಳಿಗಳು ಮೊದಲ ಬಾರಿಗೆ ನಲ್ಲಿ ಮೂಲಕ ಕುಡಿಯುವ ನೀರನ್ನು ಪಡೆದಿವೆ ಮತ್ತು ನೂರಾರು ಹಳ್ಳಿಗಳು ಈಗ ಟೆಲಿಮೆಡಿಸಿನ್ ಸೇವೆಗಳನ್ನು ಪಡೆದಿವೆ. ಈ ಅಭಿಯಾನದಡಿಯಲ್ಲಿ, ಗ್ರಾಮ ಸಭೆಗಳನ್ನು ಅಭಿವೃದ್ಧಿಯ ಕೇಂದ್ರವನ್ನಾಗಿ ಮಾಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಆರೋಗ್ಯ, ಶಿಕ್ಷಣ, ಪೋಷಣೆ, ಕೃಷಿ ಮತ್ತು ಜೀವನೋಪಾಯದ ಮೇಲೆ ಕೇಂದ್ರೀಕರಿಸುವ ಹಳ್ಳಿಗಳಲ್ಲಿ ಸಮುದಾಯ ಆಧಾರಿತ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಈ ಅಭಿಯಾನವು ಅಸಾಧ್ಯವಾದ ಗುರಿಗಳನ್ನು ಸಹ ದೃಢನಿಶ್ಚಯದಿಂದ ಸಾಧಿಸಬಹುದು ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಹೇಳಿದರು.

ಬುಡಕಟ್ಟು ಜೀವನದ ಪ್ರತಿಯೊಂದು ಅಂಶವನ್ನು ಪರಿಹರಿಸಲು ಸರ್ಕಾರ ಸಮಗ್ರ ವಿಧಾನದೊಂದಿಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. ಕಿರು ಅರಣ್ಯ ಉತ್ಪನ್ನಗಳ ಸಂಖ್ಯೆಯನ್ನು 20 ರಿಂದ ಸುಮಾರು 100 ಕ್ಕೆ ಹೆಚ್ಚಿಸಲಾಗಿದೆ ಮತ್ತು ಅರಣ್ಯ ಉತ್ಪನ್ನಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್‌.ಪಿ) ಯನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಬುಡಕಟ್ಟು ಸಮುದಾಯಕ್ಕೆ ಪ್ರಯೋಜನಕಾರಿಯಾಗುತ್ತಿರುವ ಸಿರಿಧಾನ್ಯಗಳಾದ ಶ್ರೀ ಅನ್ನವನ್ನು ಸರ್ಕಾರ ಸಕ್ರಿಯವಾಗಿ ಉತ್ತೇಜಿಸುತ್ತಿದೆ ಎಂದು ಅವರು ಹೇಳಿದರು. ಗುಜರಾತಿನಲ್ಲಿ ವನಬಂಧು ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಲಾಯಿತು ಎಂದು ಪ್ರಧಾನಮಂತ್ರಿ ಸ್ಮರಿಸಿದರು, ಇದು ಬುಡಕಟ್ಟು ಜನಾಂಗಕ್ಕೆ ಹೊಸ ಆರ್ಥಿಕ ಶಕ್ತಿಯನ್ನು ಒದಗಿಸಿತು. ಇದರಿಂದ ಪ್ರೇರಿತರಾಗಿ, ಈಗ ಜನಜಾತೀಯ ಕಲ್ಯಾಣ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅನುವಂಶಿಕ ರಕ್ತಹೀನತೆ ರೋಗವು ಬುಡಕಟ್ಟು ಸಮುದಾಯಗಳಿಗೆ ಬಹಳ ಹಿಂದಿನಿಂದಲೂ ದೊಡ್ಡ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ, ಇದನ್ನು ಎದುರಿಸಲು ಬುಡಕಟ್ಟು ಪ್ರದೇಶಗಳಲ್ಲಿ ಔಷಧಾಲಯಗಳು, ವೈದ್ಯಕೀಯ ಕೇಂದ್ರಗಳು ಮತ್ತು ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು. ಅನುವಂಶಿಕ ರಕ್ತಹೀನತೆ ರೋಗವನ್ನು ಪರಿಹರಿಸಲು ರಾಷ್ಟ್ರವ್ಯಾಪಿ ಅಭಿಯಾನ ನಡೆಯುತ್ತಿದೆ ಮತ್ತು ಈ ಉಪಕ್ರಮದಡಿಯಲ್ಲಿ, ದೇಶಾದ್ಯಂತ ಆರು ಕೋಟಿ ಬುಡಕಟ್ಟು ಸಹೋದರ ಸಹೋದರಿಯರನ್ನು ಈಗಾಗಲೇ ಪರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಶಿಕ್ಷಣದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣವನ್ನು ಒದಗಿಸುತ್ತದೆ ಎಂದು ಹೇಳಿದರು. ಭಾಷೆಯ ಅಡೆತಡೆಗಳಿಂದಾಗಿ ಹಿಂದುಳಿದಿದ್ದ ಬುಡಕಟ್ಟು ಮಕ್ಕಳು ಈಗ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣದ ಮೂಲಕ ಮುನ್ನಡೆಯುತ್ತಿದ್ದಾರೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಹೆಚ್ಚು ಸಕ್ರಿಯ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಗುಜರಾತಿನ ಬುಡಕಟ್ಟು ಸಮುದಾಯಗಳ ಶ್ರೀಮಂತ ಕಲಾತ್ಮಕ ಪರಂಪರೆಯನ್ನು ಒತ್ತಿ ಹೇಳಿದ ಅವರು, ಅವರ ವರ್ಣಚಿತ್ರಗಳು ಮತ್ತು ಕಲಾಕೃತಿಗಳು ವಿಶಿಷ್ಟವೆಂದು ಬಣ್ಣಿಸಿದರು. ಈ ಕಲಾ ಪ್ರಕಾರಗಳ ಪ್ರವರ್ತಕರಾಗಿರುವ ಕಲಾವಿದ ಪರೇಶಭಾಯ್ ರಥ್ವಾ ಅವರನ್ನು ಶ್ರೀ ಮೋದಿ ಉಲ್ಲೇಖಿಸಿದರು ಮತ್ತು ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಎಂದು ತಿಳಿಸಿದರು.

ಯಾವುದೇ ಸಮಾಜದ ಪ್ರಗತಿಗೆ ಪ್ರಜಾಪ್ರಭುತ್ವದಲ್ಲಿ ಅರ್ಥಪೂರ್ಣ ಭಾಗವಹಿಸುವಿಕೆ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಬುಡಕಟ್ಟು ಸಮುದಾಯದವರು ಉನ್ನತ ಸ್ಥಾನಗಳನ್ನು ತಲುಪಿ ರಾಷ್ಟ್ರವನ್ನು ಮುನ್ನಡೆಸುವುದು ಸರ್ಕಾರದ ಗುರಿಯಾಗಿದೆ ಎಂದು ಅವರು ಹೇಳಿದರು. ಇಂದು ಭಾರತದ ರಾಷ್ಟ್ರಪತಿ ಬುಡಕಟ್ಟು ಮಹಿಳೆಯಾಗಿದ್ದಾರೆ ಎಂದು ಅವರು ಹೇಳಿದರು. ಬುಡಕಟ್ಟು ನಾಯಕರನ್ನು ಪಕ್ಷ ಮತ್ತು ಸರ್ಕಾರದಲ್ಲಿ ಉನ್ನತ ಸ್ಥಾನಗಳಿಗೆ ಏರಿಸಲು ತಮ್ಮ ಪಕ್ಷ ಮತ್ತು ಮೈತ್ರಿಕೂಟ ಅವಿಶ್ರಾಂತವಾಗಿ ಶ್ರಮಿಸಿದೆ ಎಂದು ಅವರು ಹೇಳಿದರು. ಛತ್ತೀಸಗಢದಲ್ಲಿ ಶ್ರೀ ವಿಷ್ಣುದೇವ್ ಸಾಯಿ, ಒಡಿಶಾದಲ್ಲಿ ಶ್ರೀ ಮೋಹನ್ ಚರಣ್ ಮಾಝಿ, ಅರುಣಾಚಲ ಪ್ರದೇಶದಲ್ಲಿ ಶ್ರೀ ಪೇಮಾ ಖಂಡು ಮತ್ತು ನಾಗಾಲ್ಯಾಂಡ್‌ ನಲ್ಲಿ ಶ್ರೀ ನೀಫಿಯು ರಿಯೊ ಅವರ ಉದಾಹರಣೆಗಳನ್ನು ಉಲ್ಲೇಖಿಸಿ, ಬುಡಕಟ್ಟು ನಾಯಕರನ್ನು ಹಲವಾರು ರಾಜ್ಯಗಳಲ್ಲಿ ಮುಖ್ಯಮಂತ್ರಿಗಳನ್ನಾಗಿ ಮಾಡಲಾಗಿದೆ ಎಂದು ಅವರು ಹೇಳಿದರು. ಪಕ್ಷವು ಅನೇಕ ರಾಜ್ಯ ವಿಧಾನಸಭೆಗಳಲ್ಲಿ ಬುಡಕಟ್ಟು ಸ್ಪೀಕರ್‌ ಗಳನ್ನು ನೇಮಿಸಿದೆ ಎಂದು ಅವರು ಹೇಳಿದರು. ಗುಜರಾತಿನ ಶ್ರೀ ಮಂಗುಭಾಯಿ ಪಟೇಲ್ ಪ್ರಸ್ತುತ ಮಧ್ಯಪ್ರದೇಶದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೋವಾಲ್ ಅವರು ಈಗ ತಮ್ಮ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರದ ಅಭಿವೃದ್ಧಿಗೆ ಈ ನಾಯಕರ ಸೇವೆ ಮತ್ತು ಕೊಡುಗೆಗಳು ಅಪ್ರತಿಮ ಮತ್ತು ಅಸಾಧಾರಣವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.

"ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಎಂಬ ಮಂತ್ರದ ಶಕ್ತಿಯಿಂದ ಇಂದು ದೇಶ ತುಂಬಿದೆ ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು. ಈ ಮಂತ್ರವು ಇತ್ತೀಚಿನ ವರ್ಷಗಳಲ್ಲಿ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸಿದೆ, ರಾಷ್ಟ್ರೀಯ ಏಕತೆಯನ್ನು ಬಲಪಡಿಸಿದೆ ಮತ್ತು ದೀರ್ಘಕಾಲದಿಂದ ನಿರ್ಲಕ್ಷಿಸಲ್ಪಟ್ಟ ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ತಂದಿದೆ ಎಂದು ಅವರು ಹೇಳಿದರು. ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಶುಭ ಸಂದರ್ಭದಲ್ಲಿ, ಈ ಮಂತ್ರಕ್ಕೆ ಎಲ್ಲರೂ ತಮ್ಮ ಬದ್ಧತೆಯನ್ನು ಪುನರುಚ್ಚರಿಸುವಂತೆ ಪ್ರಧಾನಮಂತ್ರಿ ಕರೆ ನೀಡಿದರು. ಅಭಿವೃದ್ಧಿಯಲ್ಲಿ ಯಾರೂ ಹಿಂದೆ ಉಳಿಯಬಾರದು ಎಂದು ಅವರು ಒತ್ತಿ ಹೇಳಿದರು. ಇದು ಧರ್ತಿ ಆಬಾ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಹೇಳಿದರು. ನಾವೆಲ್ಲರೂ ಒಟ್ಟಾಗಿ ಮುಂದುವರಿಯುತ್ತೇವೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುತ್ತೇವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಈ ಸಂಕಲ್ಪದೊಂದಿಗೆ, ಅವರು ಎಲ್ಲರಿಗೂ ಜನಜಾತೀಯ ಗೌರವ ದಿನದ ಶುಭಾಶಯಗಳನ್ನು ಕೋರಿದರು.

ಬುಡಕಟ್ಟು ಸಮುದಾಯಗಳು ಪಾಲಿಸುವ ಸಂಪ್ರದಾಯಗಳು ಮತ್ತು ಭವಿಷ್ಯದ ಪೀಳಿಗೆಯ ಆಕಾಂಕ್ಷೆಗಳ ನಿಜವಾದ ಸಾರವೇ ಜನಜಾತೀಯ ಗೌರವ ದಿನ ಎಂದು ಶ್ರೀ ಮೋದಿ ಹೇಳಿದರು. ಆದ್ದರಿಂದ, ನವೆಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯನ್ನು ಭಾರತದಾದ್ಯಂತ ಜನಜಾತೀಯ ಗೌರವ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಅವರು ಹೇಳಿದರು. ಭಾರತೀಯತೆಯಲ್ಲಿ ಬೇರೂರುವ ಮೂಲಕ ನಾವು ಹೊಸ ಶಕ್ತಿ ಮತ್ತು ಚೈತನ್ಯದೊಂದಿಗೆ ಮುನ್ನಡೆಯಬೇಕು ಮತ್ತು ವೈಭವದ ಹೊಸ ಶಿಖರಗಳನ್ನು ಸಾಧಿಸಬೇಕು ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ತಮ್ಮ ಮಾತು ಮುಕ್ತಾಯಗೊಳಿಸಿದರು.

ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯ್ ಪಟೇಲ್ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.‌

ಹಿನ್ನೆಲೆ

ದೇಡಿಯಾಪಾಡಾದಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ಬುಡಕಟ್ಟು ಸಮುದಾಯಗಳ ಉನ್ನತಿ ಮತ್ತು ಪ್ರದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಬಹು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನಮನ್) ಮತ್ತು ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ (DA-JAGUA) ಅಡಿಯಲ್ಲಿ ನಿರ್ಮಿಸಲಾದ 100,000 ಮನೆಗಳ ಗೃಹ ಪ್ರವೇಶದಲ್ಲಿ ಪ್ರಧಾನಮಂತ್ರಿ ಅವರು ಪಾಲ್ಗೊಂಡರು.

ಬುಡಕಟ್ಟು ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಸುಮಾರು ₹1,900 ಕೋಟಿ ವೆಚ್ಚದ 42 ಏಕಲವ್ಯ ಮಾದರಿ ವಸತಿ ಶಾಲೆಗಳು (ಇ.ಎಂ.ಆರ್‌.ಎಸ್); ಸಮುದಾಯ ಆಧಾರಿತ ಚಟುವಟಿಕೆಗಳಿಗೆ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ 228 ಬಹುಪಯೋಗಿ ಕೇಂದ್ರಗಳು; ದಿಬ್ರುಗಢದ ಅಸ್ಸಾಂ ವೈದ್ಯಕೀಯ ಕಾಲೇಜಿನ ಸಾಮರ್ಥ್ಯ ಕೇಂದ್ರ; ಮತ್ತು ಮಣಿಪುರದ ಇಂಫಾಲ್‌ ನಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗಾಗಿ ಬುಡಕಟ್ಟು ಸಂಶೋಧನಾ ಸಂಸ್ಥೆ (ಟಿ.ಆರ್‌.ಐ) ಕಟ್ಟಡವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಇದಲ್ಲದೆ, ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕವನ್ನು ಸುಧಾರಿಸಲು ಗುಜರಾತಿನ 14 ಬುಡಕಟ್ಟು ಜಿಲ್ಲೆಗಳಿಗೆ 250 ಬಸ್‌ ಗಳ ಸಂಚಾರಕ್ಕೆ ಪ್ರಧಾನಮಂತ್ರಿ ಹಸಿರು ನಿಶಾನೆ ತೋರಿದರು.

ಬುಡಕಟ್ಟು ಪ್ರದೇಶಗಳಲ್ಲಿ ಸಂಪರ್ಕವನ್ನು ಹೆಚ್ಚಿಸಲು 748 ಕಿಲೋಮೀಟರ್ ಹೊಸ ರಸ್ತೆಗಳು ಮತ್ತು ಸಮುದಾಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನ ಅಡಿಯಲ್ಲಿ 14 ಬುಡಕಟ್ಟು ಬಹು-ಮಾರುಕಟ್ಟೆ ಕೇಂದ್ರಗಳ (ಟಿ.ಎಂ.ಎಂ.ಸಿ) ನಿರ್ಮಾಣಕ್ಕೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರದ ಬದ್ಧತೆಯನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ, ₹2,320 ಕೋಟಿಗೂ ಹೆಚ್ಚು ಮೌಲ್ಯದ 50 ಹೊಸ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಶಂಕುಸ್ಥಾಪನೆಯನ್ನೂ ಅವರು ನೆರವೇರಿಸಿದರು.

 

****


(Release ID: 2190388) Visitor Counter : 6