ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವವರಿಂದ ಭಾರತದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಕಾರಿಡಾರ್ ಉದ್ಘಾಟನೆ ಮತ್ತು ನಮೋ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ ಭಾಷಣದ ಕನ್ನಡ ಅನುವಾದ
प्रविष्टि तिथि:
20 OCT 2023 4:35PM by PIB Bengaluru
ಭಾರತ ಮಾತೆಗೆ – ಜಯವಾಗಲಿ!
ಭಾರತ ಮಾತೆಗೆ – ಜಯವಾಗಲಿ!
ಭಾರತ ಮಾತೆಗೆ – ಜಯವಾಗಲಿ!
ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರೇ, ಉತ್ತರ ಪ್ರದೇಶದ ಜನಪ್ರಿಯ ಮತ್ತು ಕ್ರಿಯಾಶೀಲ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ್ ಅವರೇ, ಕರ್ನಾಟಕದ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರೇ, ಕೇಂದ್ರ ಸಚಿವ ಸಂಪುಟದಲ್ಲಿರುವ ನನ್ನ ಸಹೋದ್ಯೋಗಿಗಳಾದ ಹರ್ದೀಪ್ ಸಿಂಗ್ ಪುರಿ ಅವರೇ, ವಿ.ಕೆ. ಸಿಂಗ್ ಅವರೇ, ಕೌಶಲ್ ಕಿಶೋರ್ ಅವರೇ, ಹಾಗೂ ಇಲ್ಲಿ ನೆರೆದಿರುವ ಇತರ ಗೌರವಾನ್ವಿತ ಗಣ್ಯರೇ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ನನ್ನ ಕುಟುಂಬ ಸದಸ್ಯರೇ.
ಇಂದು ಇಡೀ ದೇಶಕ್ಕೆ ಐತಿಹಾಸಿಕ ಕ್ಷಣವಾಗಿದೆ. ಭಾರತದ ಮೊದಲ ಕ್ಷಿಪ್ರ ರೈಲು ಸೇವೆ, ನಮೋ ಭಾರತ್ ರೈಲನ್ನು ದೇಶಕ್ಕೆ ಸಮರ್ಪಿಸಲಾಗಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ, ನಾನು ದೆಹಲಿ-ಘಾಜಿಯಾಬಾದ್-ಮೀರತ್ ಪ್ರಾದೇಶಿಕ ಕಾರಿಡಾರ್ ಯೋಜನೆಗೆ ಅಡಿಗಲ್ಲು ಹಾಕಿದ್ದೆ. ಇಂದು, ಸಾಹಿಬಾಬಾದ್‌ನಿಂದ ದುಹೈ ಡಿಪೋವರೆಗೆ ನಮೋ ಭಾರತ್ ಸೇವೆ ಕಾರ್ಯಾಚರಣೆಯಲ್ಲಿದೆ. ನಾನು ಮೊದಲು ಹೇಳಿದಂತೆ, ನಾವು ಕೇವಲ ಅಡಿಗಲ್ಲು ಹಾಕುವುದಿಲ್ಲ, ನಾವು ಪ್ರಾರಂಭಿಸಿದ ಯೋಜನೆಗಳನ್ನು ಉದ್ಘಾಟನೆಯೂ ಮಾಡುತ್ತೇವೆ ಎಂದು ಪುನರುಚ್ಚರಿಸುತ್ತೇನೆ. ಮೀರತ್ ವಿಭಾಗವು ಒಂದು ಅಥವಾ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಮತ್ತು ಆ ಸಮಯದಲ್ಲಿಯೂ ನಾನು ನಿಮ್ಮ ಸೇವೆಯಲ್ಲಿರುತ್ತೇನೆ.
ನಾನು ಈ ಅತ್ಯಾಧುನಿಕ ರೈಲಿನಲ್ಲಿ ಪ್ರಯಾಣದ ಅನುಭವವನ್ನೂ ಪಡೆದಿದ್ದೇನೆ. ನಾನು ನನ್ನ ಬಾಲ್ಯವನ್ನು ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ಕಳೆದಿದ್ದರೂ, ರೈಲ್ವೆಯ ಈ ಹೊಸ ರೂಪವು ನನಗೆ ಹೆಚ್ಚು ಉತ್ಸಾಹ ನೀಡುತ್ತದೆ. ಇದು ಸಮೃದ್ಧ ಮತ್ತು ಸಂತೋಷದಾಯಕ ಅನುಭವವನ್ನು ನೀಡುತ್ತದೆ. ನಮ್ಮ ಸಂಪ್ರದಾಯದಲ್ಲಿ, ನವರಾತ್ರಿಯ ಸಮಯದಲ್ಲಿ ಶುಭ ಕಾರ್ಯಗಳನ್ನು ಮಾಡಲಾಗುತ್ತದೆ. ಇಂದು, ದೇಶದ ಮೊದಲ ನಮೋ ಭಾರತ್ ರೈಲು ಕೂಡ ಕತ್ಯಾಯನಿ ದೇವಿಯ ಆಶೀರ್ವಾದವನ್ನು ಪಡೆದಿದೆ. ಈ ಹೊಸ ರೈಲಿನಲ್ಲಿ ಚಾಲಕರಿಂದ ಹಿಡಿದು ಎಲ್ಲಾ ಸಿಬ್ಬಂದಿ ವರ್ಗದಲ್ಲಿ ಮಹಿಳೆಯರೇ ಇರುವುದು ಗಮನಾರ್ಹ. ಇವರು ನಮ್ಮ ದೇಶದ ಹೆಣ್ಣು ಮಕ್ಕಳು. ಇದು 'ನಾರಿ ಶಕ್ತಿ'ಯ (ಮಹಿಳಾ ಶಕ್ತಿ) ಹೆಚ್ಚುತ್ತಿರುವ ಸಾಮರ್ಥ್ಯವನ್ನು ಪ್ರತಿನಿಧಿಸುತ್ತದೆ. ನವರಾತ್ರಿಯ ಶುಭ ಸಂದರ್ಭದಲ್ಲಿ, ದೆಹಲಿ-ಎನ್‌ಸಿಆರ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಎಲ್ಲ ಜನರಿಗೆ ಈ ಉಡುಗೊರೆಗಾಗಿ ನಾನು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ತಿಳಿಸುತ್ತೇನೆ. ನಮೋ ಭಾರತ್ ರೈಲು ಆಧುನಿಕತೆ, ವೇಗ ಮತ್ತು ನಂಬಲಸಾಧ್ಯವಾದ ದಕ್ಷತೆಯನ್ನು ಒಳಗೊಂಡಿದೆ. ಈ ನಮೋ ಭಾರತ್ ರೈಲು ಹೊಸ ಭಾರತದ ಹೊಸ ಪ್ರಯಾಣಗಳು ಮತ್ತು ಸಂಕಲ್ಪಗಳನ್ನು ವ್ಯಾಖ್ಯಾನಿಸುತ್ತದೆ.
ನನ್ನ ಕುಟುಂಬ ಸದಸ್ಯರೇ,
ರಾಜ್ಯಗಳ ಅಭಿವೃದ್ಧಿಯ ಮೂಲಕವೇ ಭಾರತದ ಅಭಿವೃದ್ಧಿ ಸಾಧ್ಯ ಎಂದು ನಾನು ಸದಾ ನಂಬಿದ್ದೇನೆ. ಪ್ರಸ್ತುತ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಎರಡು ಮೆಟ್ರೋ ಮಾರ್ಗಗಳನ್ನು ದೇಶಕ್ಕೆ ಸಮರ್ಪಿಸಲಾಗಿದ್ದು, ಬೆಂಗಳೂರಿನ ಐಟಿ ಹಬ್‌ಗೆ ಸಂಪರ್ಕವನ್ನು ಸುಧಾರಿಸಲಾಗಿದೆ. ಬೆಂಗಳೂರಿನಲ್ಲಿ ಸುಮಾರು 800,000 ಜನರು ಈಗ ಪ್ರತಿದಿನ ಮೆಟ್ರೋ ಮೂಲಕ ಪ್ರಯಾಣಿಸುತ್ತಾರೆ. ಈ ಹೊಸ ಮೆಟ್ರೋ ಸೌಲಭ್ಯಕ್ಕಾಗಿ ನಾನು ಬೆಂಗಳೂರಿನ ಜನರಿಗೆ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ನನ್ನ ಕುಟುಂಬ ಸದಸ್ಯರೇ,
21ನೇ ಶತಮಾನದಲ್ಲಿ, ಭಾರತವು ಪ್ರತಿ ವಲಯದಲ್ಲಿ ಪ್ರಗತಿಯ ಹೊಸ ಕಥೆಯನ್ನು ಬರೆಯುತ್ತಿದೆ. ನಮ್ಮ ಭಾರತವು ಚಂದ್ರನ ಮೇಲೆ ಚಂದ್ರಯಾನವನ್ನು ಇಳಿಸುವ ಮೂಲಕ ಜಗತ್ತಿನ ಮೇಲೆ ತನ್ನ ಛಾಯೆಯನ್ನು ಬೀರಿದೆ. ಭವ್ಯವಾದ ಜಿ20 ಶೃಂಗಸಭೆಯನ್ನು ಆಯೋಜಿಸಿದ ಭಾರತವು ಜಗತ್ತಿಗೆ ಒಂದು ಆಕರ್ಷಣೆಯ ಕೇಂದ್ರವಾಗಿ ಮತ್ತು ಕುತೂಹಲಕ್ಕೆ ಕಾರಣವಾಗಿದೆ, ಇದು ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಹೊಸ ಅವಕಾಶಗಳನ್ನು ಉತ್ಸುಕತೆಯಿಂದ ಸ್ವೀಕರಿಸುತ್ತಿದೆ. ಇಂದು ಏಷ್ಯನ್ ಗೇಮ್ಸ್‌ನಲ್ಲಿ 100ಕ್ಕೂ ಹೆಚ್ಚು ಪದಕಗಳನ್ನು ಗೆಲ್ಲುವ ಮೂಲಕ ಭಾರತವು ಮಿಂಚುತ್ತಿದೆ, ಅದರಲ್ಲಿ ನನ್ನ ಉತ್ತರ ಪ್ರದೇಶದ ಕೊಡುಗೆಗಳೂ ಇವೆ. ಇಂದಿನ ಭಾರತವು ತನ್ನದೇ ಆದ 5ಜಿ ಅನ್ನು ಪ್ರಾರಂಭಿಸಿ ದೇಶದ ಮೂಲೆ ಮೂಲೆಗೆ ಕೊಂಡೊಯ್ಯುತ್ತಿದೆ. ಇಂದು ಭಾರತವು ಜಾಗತಿಕವಾಗಿ ಡಿಜಿಟಲ್ ವಹಿವಾಟುಗಳಲ್ಲಿ ಮುಂಚೂಣಿಯಲ್ಲಿದೆ.
ಕೋವಿಡ್-19 ಬಿಕ್ಕಟ್ಟು ಉದ್ಭವಿಸಿದಾಗ, ಭಾರತದಲ್ಲಿ ಅಭಿವೃದ್ಧಿಪಡಿಸಿದ ಲಸಿಕೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಉಳಿಸಿದವು. ಮೊಬೈಲ್ ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್‌ಗಳು ಮತ್ತು ಕಂಪ್ಯೂಟರ್‌ಗಳನ್ನು ತಯಾರಿಸಲು ಪ್ರಮುಖ ಕಂಪನಿಗಳು ಈಗ ಭಾರತಕ್ಕೆ ಬರುತ್ತಿವೆ. ಇಂದು ಭಾರತವು ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುತ್ತಿದೆ ಮತ್ತು ವಿಕ್ರಾಂತ್ ವಿಮಾನವಾಹಕ ನೌಕೆಯನ್ನು ನಿರ್ಮಿಸುತ್ತಿದೆ, ಸಮುದ್ರದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದೆ. ಇಂದು ಪ್ರಾರಂಭವಾಗಿರುವ ಅತಿ ವೇಗದ ನಮೋ ಭಾರತ್ ರೈಲು ಕೂಡ ಮೇಡ್ ಇನ್ ಇಂಡಿಯಾ. ಇದು ಭಾರತದ ದೇಶೀಯ ರೈಲು. ಇದನ್ನು ಕೇಳಿ ನಿಮಗೆ ಹೆಮ್ಮೆ ಅನಿಸುತ್ತಿದೆಯೇ ಅಥವಾ ಇಲ್ಲವೇ? ನಿಮ್ಮ ತಲೆ ಎತ್ತುತ್ತಿದೆಯೇ ಅಥವಾ ಇಲ್ಲವೇ? ಪ್ರತಿ ಭಾರತೀಯನಿಗೆ ಉಜ್ವಲ ಭವಿಷ್ಯ ಕಾಣಿಸುತ್ತಿದೆಯೇ ಅಥವಾ ಇಲ್ಲವೇ? ಯುವಕರಿಗೆ ಉಜ್ವಲ ಭವಿಷ್ಯ ಕಾಣಿಸುತ್ತಿದೆಯೇ ಅಥವಾ ಇಲ್ಲವೇ? ಪ್ಲಾಟ್‌ಫಾರ್ಮ್‌ನಲ್ಲಿ ಉದ್ಘಾಟನೆಗೊಂಡಿರುವ ಪರದೆಯ ಬಾಗಿಲಿನ ವ್ಯವಸ್ಥೆ ಕೂಡ ಮೇಡ್ ಇನ್ ಇಂಡಿಯಾ.
ಮತ್ತು ನಾನು ನಿಮಗೆ ಇನ್ನೊಂದು ವಿಷಯ ಹೇಳಲು ಬಯಸುತ್ತೇನೆ: ನಾವು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವಾಗ, ಪ್ರಧಾನ ಮಂತ್ರಿಯ ಹೆಲಿಕಾಪ್ಟರ್‌ನಲ್ಲಿ, ಒಳಗಿನ ಶಬ್ದ ಎಷ್ಟು ಜೋರಾಗಿರುತ್ತದೆ ಎಂದರೆ ಅದು ಹಾರುವ ಟ್ರಾಕ್ಟರ್‌ನಂತೆ ಭಾಸವಾಗುತ್ತದೆ, ಶಬ್ದವು ಟ್ರಾಕ್ಟರ್‌ಗಿಂತ ಜೋರಾಗಿರುತ್ತದೆ ಮತ್ತು ನೀವು ನಿಮ್ಮ ಕಿವಿಗಳನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ವಿಮಾನದಲ್ಲಿಯೂ ಶಬ್ದವು ಸಾಕಷ್ಟು ಜೋರಾಗಿರುತ್ತದೆ. ಇಂದು, ನಾನು ನೋಡಿದೆ, ನಮೋ ಭಾರತ್ ರೈಲಿನಲ್ಲಿ ವಿಮಾನಕ್ಕಿಂತಲೂ ಕಡಿಮೆ ಶಬ್ದವಿದೆ, ಅಂದರೆ ಇದು ಎಷ್ಟು ಆಹ್ಲಾದಕರ ಪ್ರಯಾಣವಾಗಿದೆ!
ಸ್ನೇಹಿತರೇ,
ನಮೋ ಭಾರತ್ ಭಾರತದ ಭವಿಷ್ಯದ ಒಂದು ನೋಟ. ದೇಶದ ಆರ್ಥಿಕ ಶಕ್ತಿ ಹೆಚ್ಚಾದಾಗ, ನಮ್ಮ ರಾಷ್ಟ್ರದ ಚಿತ್ರಣವು ಬದಲಾಗುತ್ತದೆ ಎಂಬುದನ್ನು ಕೂಡ ನಮೋ ಭಾರತ್ ಸಾಬೀತುಪಡಿಸುತ್ತದೆ. ದೆಹಲಿ ಮತ್ತು ಮೀರತ್ ನಡುವಿನ 80 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದದ ಈ ಮಾರ್ಗವು ಕೇವಲ ಆರಂಭ. ಕೇಳಿ, ಇದು ಕೇವಲ ಆರಂಭ. ಮೊದಲ ಹಂತದಲ್ಲಿ, ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ರಾಜಸ್ಥಾನದ ಅನೇಕ ಪ್ರದೇಶಗಳನ್ನು ನಮೋ ಭಾರತ್ ರೈಲಿನ ಮೂಲಕ ಸಂಪರ್ಕಿಸಲಾಗುವುದು. ಈಗ ನಾನು ರಾಜಸ್ಥಾನವನ್ನು ಉಲ್ಲೇಖಿಸಿದಾಗ, ಅಶೋಕ್ ಗೆಹ್ಲೋಟ್ ಅವರಿಗೆ ನಿದ್ರೆ ತಪ್ಪಬಹುದು. ಮುಂಬರುವ ದಿನಗಳಲ್ಲಿ, ದೇಶದ ಹೆಚ್ಚಿನ ಪ್ರದೇಶಗಳಲ್ಲಿ ನಮೋ ಭಾರತ್ ನಂತಹ ವ್ಯವಸ್ಥೆಯನ್ನು ಹೊಂದಿರುತ್ತದೆ. ಇದು ಕೈಗಾರಿಕಾ ಅಭಿವೃದ್ಧಿಗೆ ಕಾರಣವಾಗುತ್ತದೆ, ಮತ್ತು ನನ್ನ ದೇಶದ ಯುವಕರಿಗೆ, ನನ್ನ ದೇಶದ ಯುವ ಪುತ್ರರು ಮತ್ತು ಪುತ್ರಿಯರಿಗೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
ಸ್ನೇಹಿತರೇ,
ಈ ಶತಮಾನದ ಮೂರನೇ ದಶಕವು ಭಾರತೀಯ ರೈಲ್ವೆಗೆ ರೂಪಾಂತರದ ದಶಕವಾಗಿದೆ. ಸ್ನೇಹಿತರೇ, ಈ 10 ವರ್ಷಗಳಲ್ಲಿ ಇಡೀ ರೈಲ್ವೆ ವ್ಯವಸ್ಥೆಯು ರೂಪಾಂತರಗೊಳ್ಳುವುದನ್ನು ನೀವು ನೋಡಲಿದ್ದೀರಿ. ಮತ್ತು ನಾನು ಚಿಕ್ಕ ಕನಸು ಕಾಣುವ ಅಭ್ಯಾಸ ಮಾಡಿಕೊಂಡಿಲ್ಲ, ಅಥವಾ ನಿಧಾನ ಗತಿಗೆ ಒಗ್ಗಿಕೊಂಡಿಲ್ಲ. ಈ ದಶಕದ ಅಂತ್ಯದ ವೇಳೆಗೆ ಭಾರತದಲ್ಲಿನ ರೈಲುಗಳು ಜಗತ್ತಿನ ಯಾರಿಂದಲೂ ಹಿಂದೆ ಉಳಿಯುವುದಿಲ್ಲ ಎಂದು ನಾನು ಇಂದಿನ ಯುವಕರಿಗೆ ಭರವಸೆ ನೀಡಲು ಬಯಸುತ್ತೇನೆ, ನಾನು ಇಂದಿನ ಯುವಕರಿಗೆ ಖಾತರಿ ನೀಡಲು ಬಯಸುತ್ತೇನೆ. ಅದು ಸುರಕ್ಷತೆ, ಅನುಕೂಲತೆ, ಸ್ವಚ್ಛತೆ, ಸಾಮರಸ್ಯ, ಸಹಾನುಭೂತಿ, ಶಕ್ತಿಯಾಗಿರಲಿ - ಭಾರತೀಯ ರೈಲ್ವೆ ಜಾಗತಿಕವಾಗಿ ಹೊಸ ಮೈಲಿಗಲ್ಲನ್ನು ಸಾಧಿಸಲಿದೆ. ಭಾರತೀಯ ರೈಲ್ವೆ 100% ವಿದ್ಯುದೀಕರಣದ ಗುರಿಯನ್ನು ಸಾಧಿಸಲು ಹೆಚ್ಚು ದೂರವಿಲ್ಲ. ಇಂದು, ನಮೋ ಭಾರತ್ ಪ್ರಾರಂಭವಾಗಿದೆ. ಇದಕ್ಕೂ ಮೊದಲು, ದೇಶವು ವಂದೇ ಭಾರತ್ ರೂಪದಲ್ಲಿ ಆಧುನಿಕ ರೈಲುಗಳನ್ನು ಪಡೆಯಿತು. ಅಮೃತ್ ಭಾರತ್ ನಿಲ್ದಾಣ ಅಭಿಯಾನದ ಅಡಿಯಲ್ಲಿ ರೈಲ್ವೆ ನಿಲ್ದಾಣಗಳ ಆಧುನೀಕರಣದ ಕೆಲಸವೂ ವೇಗವಾಗಿ ಸಾಗುತ್ತಿದೆ. ಅಮೃತ್ ಭಾರತ್, ವಂದೇ ಭಾರತ್, ಮತ್ತು ನಮೋ ಭಾರತ್‌ನ ಈ ತ್ರಿಮೂರ್ತಿಗಳು ಈ ದಶಕದ ಅಂತ್ಯದ ವೇಳೆಗೆ ಭಾರತೀಯ ರೈಲ್ವೆಯ ಆಧುನೀಕರಣದ ಸಂಕೇತಗಳಾಗಿವೆ.
ಇಂದು, ದೇಶವು ಬಹು-ಮಾದರಿ ಸಾರಿಗೆ ವ್ಯವಸ್ಥೆಯ ಮೇಲೆ ವೇಗವಾಗಿ ಕೆಲಸ ಮಾಡುತ್ತಿದೆ. ಇದರರ್ಥ ವಿವಿಧ ಸಾರಿಗೆ ವಿಧಾನಗಳ ಏಕೀಕರಣ. ನಮೋ ಭಾರತ್ ರೈಲಿನಲ್ಲಿ ಬಹು-ಮಾದರಿ ಸಂಪರ್ಕಕ್ಕೆ ಸಹ ಗಮನ ನೀಡಲಾಗಿದೆ. ಇದು ದೆಹಲಿಯಲ್ಲಿನ ಸಾರಾಯ್ ಕಾಲೆ ಖಾನ್, ಆನಂದ್ ವಿಹಾರ್, ಗಾಜಿಯಾಬಾದ್ ಮತ್ತು ಮೀರತ್‌ನಂತಹ ನಿಲ್ದಾಣಗಳನ್ನು ರೈಲು, ಮೆಟ್ರೋ ಮತ್ತು ಬಸ್ ಟರ್ಮಿನಲ್‌ಗಳ ಮೂಲಕ ಮನಬಂದಂತೆ ಸಂಪರ್ಕಿಸುತ್ತದೆ. ಈಗ ಜನರು ರೈಲಿನಿಂದ ಇಳಿದ ನಂತರ ಮನೆಗೆ ಅಥವಾ ಕಚೇರಿಗೆ ಹೋಗಲು ಮತ್ತೊಂದು ಸಾರಿಗೆ ಸಾಧನವನ್ನು ಹುಡುಕುವ ಬಗ್ಗೆ ಚಿಂತಿಸಬೇಕಾಗಿಲ್ಲ.
ನನ್ನ ಕುಟುಂಬ ಸದಸ್ಯರೇ,
ಬದಲಾಗುತ್ತಿರುವ ಭಾರತದಲ್ಲಿ ಎಲ್ಲಾ ನಾಗರಿಕರ ಜೀವನದ ಗುಣಮಟ್ಟ ಸುಧಾರಿಸುವುದು ಅತ್ಯಗತ್ಯ. ಪ್ರತಿಯೊಬ್ಬರೂ ಶುದ್ಧ ಗಾಳಿಯನ್ನು ಉಸಿರಾಡಬೇಕು, ತ್ಯಾಜ್ಯದ ರಾಶಿಗಳು ಕಣ್ಮರೆಯಾಗಬೇಕು, ಉತ್ತಮ ಸಾರಿಗೆ ಸಾಧನಗಳು, ಅಧ್ಯಯನಕ್ಕಾಗಿ ಉತ್ತಮ ಶಿಕ್ಷಣ ಸಂಸ್ಥೆಗಳು ಮತ್ತು ಉತ್ತಮ ಆರೋಗ್ಯ ರಕ್ಷಣಾ ವ್ಯವಸ್ಥೆ ಇರಬೇಕು. ಭಾರತ ಸರ್ಕಾರ ಇಂದು ಈ ಎಲ್ಲಾ ಅಂಶಗಳ ಮೇಲೆ ವಿಶೇಷ ಮಹತ್ವ ನೀಡುತ್ತಿದೆ. ಇಂದು ಭಾರತದಲ್ಲಿ ಸಾರ್ವಜನಿಕ ಸಾರಿಗೆಗೆ ಖರ್ಚು ಮಾಡಲಾಗುತ್ತಿರುವ ಮೊತ್ತವು ನಮ್ಮ ದೇಶದಲ್ಲಿ ಹಿಂದೆಂದೂ ಆಗಿರಲಿಲ್ಲ.
ಸ್ನೇಹಿತರೇ,
ಸಾರಿಗೆಗಾಗಿ ನಾವು ನೀರು, ಭೂಮಿ, ಗಾಳಿ ಮತ್ತು ಬಾಹ್ಯಾಕಾಶ - ಪ್ರತಿ ದಿಕ್ಕಿನಲ್ಲಿ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಜಲಸಾರಿಗೆಯನ್ನು ನೋಡಿದರೆ, ಇಂದು ದೇಶದಲ್ಲಿ 100 ಕ್ಕೂ ಹೆಚ್ಚು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗಂಗಾ ನದಿಯಲ್ಲಿ ಅತಿದೊಡ್ಡ ಜಲಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಬನಾರಸ್‌ನಿಂದ ಹಲ್ಡಿಯಾವರೆಗೆ ಹಡಗುಗಳಿಗಾಗಿ ಬಹು ಜಲಮಾರ್ಗ ಟರ್ಮಿನಲ್‌ಗಳನ್ನು ನಿರ್ಮಿಸಲಾಗಿದೆ. ಇದು ರೈತರಿಗೆ ಪ್ರಯೋಜನವನ್ನು ನೀಡುತ್ತದೆ, ಅವರು ಈಗ ನೀರು ಮಾರ್ಗದ ಮೂಲಕ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಕಳುಹಿಸಬಹುದು. ಇತ್ತೀಚೆಗೆ, ವಿಶ್ವದ ಅತಿ ಉದ್ದದ ನದಿ ಕ್ರೂಸ್, ಗಂಗಾ ವಿಲಾಸ್, 3200 ಕಿಲೋಮೀಟರ್ ದೂರವನ್ನು ಕ್ರಮಿಸಿ ದಾಖಲೆಯನ್ನು ಸ್ಥಾಪಿಸಿತು. ಕರಾವಳಿ ಪ್ರದೇಶಗಳಲ್ಲಿ ಹೊಸ ಬಂದರು ಮೂಲಸೌಕರ್ಯವು ಅಭೂತಪೂರ್ವವಾಗಿ ವಿಸ್ತರಿಸುತ್ತಿದೆ ಮತ್ತು ಆಧುನೀಕರಣಗೊಳ್ಳುತ್ತಿದೆ. ಇದು ಕರ್ನಾಟಕದಂತಹ ರಾಜ್ಯಗಳಿಗೂ ಪ್ರಯೋಜನವನ್ನು ನೀಡುತ್ತಿದೆ. ಭೂಮಿಯ ಬಗ್ಗೆ ಹೇಳುವುದಾದರೆ, ಆಧುನಿಕ ಎಕ್ಸ್‌ಪ್ರೆಸ್‌ವೇಗಳ ಜಾಲಕ್ಕಾಗಿ ಸರ್ಕಾರವು 4 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ. ಅದು ನಮೋ ಭಾರತ್‌ನಂತಹ ರೈಲುಗಳಾಗಿರಲಿ ಅಥವಾ ಮೆಟ್ರೋ ರೈಲುಗಳಾಗಿರಲಿ, ಅವುಗಳಲ್ಲಿ 3 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ಮಾಡಲಾಗುತ್ತಿದೆ.
ದೆಹಲಿ-ಎನ್‌ಸಿಆರ್ ಪ್ರದೇಶದ ನಿವಾಸಿಗಳಿಗೆ ಇತ್ತೀಚಿನ ವರ್ಷಗಳಲ್ಲಿ ಮೆಟ್ರೋ ಮಾರ್ಗಗಳ ವಿಸ್ತರಣೆಯ ಬಗ್ಗೆ ಚೆನ್ನಾಗಿ ತಿಳಿದಿದೆ. ಉತ್ತರ ಪ್ರದೇಶದಲ್ಲಿ, ನೋಯ್ಡಾ, ಗಾಜಿಯಾಬಾದ್, ಲಕ್ನೋ, ಮೀರತ್, ಆಗ್ರಾ ಮತ್ತು ಕಾನ್ಪುರದಂತಹ ನಗರಗಳಲ್ಲಿ ಮೆಟ್ರೋ ಸೇವೆಗಳ ಪ್ರಾರಂಭ ಅಥವಾ ಭವಿಷ್ಯದ ಯೋಜನೆಗಳಿಗೆ ಸಾಕ್ಷಿಯಾಗುತ್ತಿವೆ. ಕರ್ನಾಟಕ ಕೂಡ ಬೆಂಗಳೂರು ಮತ್ತು ಮೈಸೂರಿನಂತಹ ನಗರಗಳಲ್ಲಿ ಮೆಟ್ರೋ ಸೇವೆಗಳನ್ನು ವಿಸ್ತರಿಸುತ್ತಿದೆ.
ಆಕಾಶದಲ್ಲಿಯೂ, ಭಾರತವು ವೇಗವಾಗಿ ತನ್ನ ರೆಕ್ಕೆಗಳನ್ನು ಹರಡುತ್ತಿದೆ. 'ಹವಾಯಿ ಚಪ್ಪಲ್‌ಗಳನ್ನು' ಧರಿಸಿರುವವರಿಗೂ ಸಹ ವಿಮಾನ ಪ್ರಯಾಣವು ಹೆಚ್ಚು ಸುಲಭವಾಗುತ್ತಿದೆ. ಕಳೆದ 9 ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ದುಪ್ಪಟ್ಟಾಗಿದೆ. ನಮ್ಮ ವಿಮಾನಯಾನ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಸಾವಿರಕ್ಕೂ ಹೆಚ್ಚು ಹೊಸ ವಿಮಾನಗಳಿಗೆ ಆದೇಶ ನೀಡಿವೆ. ಅದೇ ರೀತಿ, ನಮ್ಮ ಬಾಹ್ಯಾಕಾಶ ಪ್ರಯತ್ನಗಳು ವೇಗವಾಗಿ ಮುಂದುವರಿಯುತ್ತಿವೆ. ನಮ್ಮ ಚಂದ್ರಯಾನವು ಚಂದ್ರನ ಮೇಲೆ ತ್ರಿವರ್ಣ ಧ್ವಜವನ್ನು ಇರಿಸಿದೆ, ಮತ್ತು ನಾವು 2040 ರವರೆಗೆ ಒಂದು ಭದ್ರವಾದ ಮಾರ್ಗಸೂಚಿಯನ್ನು ಹೊಂದಿದ್ದೇವೆ. ಶೀಘ್ರದಲ್ಲೇ, ನಮ್ಮ ಗಗನಯಾನವು ಭಾರತೀಯರನ್ನು ಹೊತ್ತು ಬಾಹ್ಯಾಕಾಶಕ್ಕೆ ಹೋಗುತ್ತದೆ, ಮತ್ತು ನಾವು ನಮ್ಮ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುತ್ತೇವೆ. ಮೊದಲ ಭಾರತೀಯನನ್ನು ಚಂದ್ರನ ಮೇಲೆ ಇಳಿಸುವ ದಿನ ದೂರವಿಲ್ಲ. ಮತ್ತು ಇದೆಲ್ಲವೂ ಯಾರಿಗಾಗಿ ನಡೆಯುತ್ತಿದೆ? ಇದು ದೇಶದ ಯುವಕರಿಗಾಗಿ, ಅವರ ಭವಿಷ್ಯವನ್ನು ಉಜ್ವಲಗೊಳಿಸಲು ನಡೆಯುತ್ತಿದೆ.
ಸ್ನೇಹಿತರೇ,
ನಗರಗಳಲ್ಲಿನ ಮಾಲಿನ್ಯವನ್ನು ಕನಿಷ್ಠಗೊಳಿಸುವುದು ಉತ್ತಮ ವಾಯು ಗುಣಮಟ್ಟಕ್ಕೆ ಅತ್ಯಗತ್ಯ. ಇದನ್ನು ಗಮನದಲ್ಲಿಟ್ಟುಕೊಂಡು, ದೇಶದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ದೊಡ್ಡ ಜಾಲವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ರಾಜ್ಯಗಳಿಗೆ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲು ಕೇಂದ್ರ ಸರ್ಕಾರ ಯೋಜನೆಯನ್ನು ಪ್ರಾರಂಭಿಸಿದೆ. ರಾಜಧಾನಿ ದೆಹಲಿಯಲ್ಲಿ 600 ಕೋಟಿ ರೂಪಾಯಿಗಳ ವೆಚ್ಚದಲ್ಲಿ 1300 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಭಾರತ ಸರ್ಕಾರ ನಿರ್ಧರಿಸಿದೆ. ದೆಹಲಿಯಲ್ಲಿ ಈಗಾಗಲೇ 850 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳು ಓಡಲು ಪ್ರಾರಂಭಿಸಿವೆ. ಅದೇ ರೀತಿ, 1200 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಬೆಂಗಳೂರಿಗೆ 500 ಕೋಟಿ ರೂಪಾಯಿಗಳ ಸಹಾಯವನ್ನು ಭಾರತ ಸರ್ಕಾರ ಒದಗಿಸುತ್ತಿದೆ. ದೆಹಲಿಯಾಗಿರಲಿ, ಯುಪಿ ಆಗಿರಲಿ ಅಥವಾ ಕರ್ನಾಟಕವಾಗಿರಲಿ, ಪ್ರತಿಯೊಂದು ನಗರದಲ್ಲಿ ಆಧುನಿಕ ಮತ್ತು ಹಸಿರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಸ್ನೇಹಿತರೇ,
ಇಂದು ಭಾರತದಲ್ಲಿ ನಡೆಯುತ್ತಿರುವ ಎಲ್ಲಾ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಾಗರಿಕ ಸೌಕರ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮೆಟ್ರೋ ಅಥವಾ ನಮೋ ಭಾರತ್ ರೈಲುಗಳಂತಹ ಮೂಲಸೌಕರ್ಯಗಳು ಕಚೇರಿಗೆ ಹೋಗುವವರಿಗೆ ಹೆಚ್ಚಿನ ಮಹತ್ವವನ್ನು ಹೊಂದಿವೆ. ಮನೆಯಲ್ಲಿ ಚಿಕ್ಕ ಮಕ್ಕಳನ್ನು ಅಥವಾ ವಯಸ್ಸಾದ ಪೋಷಕರನ್ನು ಹೊಂದಿರುವವರಿಗೆ, ಇದು ಅವರ ಕುಟುಂಬಗಳಿಗೆ ಸಮಯವನ್ನು ಉಳಿಸುತ್ತದೆ. ಯುವಕರಿಗೆ, ಅತ್ಯುತ್ತಮ ಮೂಲಸೌಕರ್ಯ ಇರುವುದರಿಂದ ದೊಡ್ಡ ಕಂಪನಿಗಳು ಬರುತ್ತವೆ, ಕೈಗಾರಿಕೆಗಳನ್ನು ಸ್ಥಾಪಿಸುತ್ತವೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂಬುದನ್ನು ಖಚಿತಪಡಿಸುತ್ತದೆ. ಉದ್ಯಮಿಗಳಿಗೆ, ಉತ್ತಮ ವಾಯುಮಾರ್ಗಗಳು ಮತ್ತು ರಸ್ತೆಗಳು ಗ್ರಾಹಕರಿಗೆ ಸುಲಭ ಪ್ರವೇಶವನ್ನು ಖಚಿತಪಡಿಸುತ್ತದೆ. ಒಂದು ದೃಢವಾದ ಮೂಲಸೌಕರ್ಯವು ವಿವಿಧ ವ್ಯವಹಾರಗಳನ್ನು ಒಟ್ಟುಗೂಡಿಸುತ್ತದೆ, ಎಲ್ಲರಿಗೂ ಪ್ರಯೋಜನವನ್ನು ನೀಡುತ್ತದೆ. ಕೆಲಸ ಮಾಡುವ ಮಹಿಳೆಗೆ, ಮೆಟ್ರೋ ಅಥವಾ RRTS ನಂತಹ ಮೂಲಸೌಕರ್ಯವು ಭದ್ರತೆಯ ಭಾವನೆಯನ್ನು ನೀಡುತ್ತದೆ. ಅವಳು ತನ್ನ ಕಚೇರಿಗೆ ಸುರಕ್ಷಿತವಾಗಿ ಪ್ರಯಾಣಿಸುವುದಲ್ಲದೆ, ಇದು ಅವಳ ಹಣವನ್ನು ಸಹ ಉಳಿಸುತ್ತದೆ.
ವೈದ್ಯಕೀಯ ಕಾಲೇಜುಗಳ ಸಂಖ್ಯೆ ಹೆಚ್ಚಾದಂತೆ, ಚಿಕಿತ್ಸೆ ಪಡೆಯಲು ಬಯಸುವ ರೋಗಿಗಳು ಮತ್ತು ವೈದ್ಯರಾಗಲು ಬಯಸುವ ಯುವಕರು ಇಬ್ಬರಿಗೂ ಪ್ರಯೋಜನವಾಗುತ್ತದೆ. ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಯಾದಾಗ, ಅತ್ಯಂತ ಬಡ ವ್ಯಕ್ತಿ ಕೂಡ ತನ್ನ ಅರ್ಹತೆಗಳನ್ನು ನೇರವಾಗಿ ತನ್ನ ಬ್ಯಾಂಕ್ ಖಾತೆಗೆ ಪಡೆಯುತ್ತಾನೆ. ನಾಗರಿಕರು ಎಲ್ಲಾ ಸೇವೆಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲು ಪ್ರಾರಂಭಿಸಿದಾಗ, ಅದು ಕಚೇರಿಗಳಿಗೆ ಸುತ್ತಾಡುವ ಜಗಳದಿಂದ ಅವರನ್ನು ಮುಕ್ತಗೊಳಿಸುತ್ತದೆ. ಇದೀಗ, ನಾವು ಯುಪಿಐ-ಸಕ್ರಿಯಗೊಳಿಸಿದ ಟಿಕೆಟ್ ವಿತರಣಾ ಯಂತ್ರಗಳನ್ನು ನೋಡಿದ್ದೇವೆ, ಇದು ನಿಮ್ಮ ಅನುಕೂಲವನ್ನು ಹೆಚ್ಚಿಸಲು ಸಹ ಕೊಡುಗೆ ನೀಡುತ್ತದೆ. ಈ ಎಲ್ಲಾ ವಲಯಗಳು ಕಳೆದ ದಶಕದಲ್ಲಿ ಅಭೂತಪೂರ್ವ ಪ್ರಗತಿಯನ್ನು ಕಂಡಿದ್ದು, ಜನರ ಜೀವನವನ್ನು ಸುಲಭಗೊಳಿಸಿದೆ ಮತ್ತು ಅನೇಕ ತೊಂದರೆಗಳನ್ನು ನಿವಾರಿಸಿದೆ.
ನನ್ನ ಕುಟುಂಬ ಸದಸ್ಯರೇ,
ಇದು ಹಬ್ಬಗಳ ಸಮಯ, ಸಂತೋಷದ ಸಮಯ. ದೇಶದ ಪ್ರತಿಯೊಂದು ಕುಟುಂಬವೂ ಈ ಹಬ್ಬಗಳನ್ನು ಅತ್ಯಂತ ಸಂತೋಷದಿಂದ ಆಚರಿಸಲು ಕೇಂದ್ರ ಸರ್ಕಾರವು ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ನಿರ್ಧಾರಗಳು ರೈತರು, ಉದ್ಯೋಗಿಗಳು ಮತ್ತು ಪಿಂಚಣಿ ಪಡೆಯುವ ನಮ್ಮ ಸಹೋದರ ಸಹೋದರಿಯರಿಗೆ ಪ್ರಯೋಜನವನ್ನು ನೀಡುತ್ತವೆ. ಭಾರತ ಸರ್ಕಾರವು ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಗಮನಾರ್ಹವಾಗಿ ಹೆಚ್ಚಿಸಿದೆ. ಮಸೂರ್ ಬೇಳೆಕಾಳುಗಳ ಎಂಎಸ್‌ಪಿಯನ್ನು ಕ್ವಿಂಟಲ್‌ಗೆ 425 ರೂಪಾಯಿಗಳಿಗಿಂತ ಹೆಚ್ಚು, ಸಾಸಿವೆಗೆ 200 ರೂಪಾಯಿಗಳು ಮತ್ತು ಗೋಧಿಗೆ ಕ್ವಿಂಟಲ್‌ಗೆ 150 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದು ನಮ್ಮ ರೈತರಿಗೆ ಹೆಚ್ಚುವರಿ ಆದಾಯವನ್ನು ತರುತ್ತದೆ. 2014 ರಲ್ಲಿ ಕ್ವಿಂಟಲ್‌ಗೆ 1400 ರೂಪಾಯಿಗಳಷ್ಟಿದ್ದ ಗೋಧಿಯ ಎಂಎಸ್‌ಪಿ, ಈಗ 2000 ರೂಪಾಯಿಗಳನ್ನು ದಾಟಿದೆ. ಕಳೆದ 9 ವರ್ಷಗಳಲ್ಲಿ ಮಸೂರ್ ಬೇಳೆಕಾಳುಗಳ ಎಂಎಸ್‌ಪಿ ದುಪ್ಪಟ್ಟಾಗಿದೆ. ಈ ಅವಧಿಯಲ್ಲಿ ಸಾಸಿವೆ ಎಂಎಸ್‌ಪಿ ಸಹ ಕ್ವಿಂಟಲ್‌ಗೆ 2600 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ರೈತರಿಗೆ ಅವರ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಹೆಚ್ಚು ನೀಡುವುದರ ಈ ಬದ್ಧತೆಯು ನಮ್ಮ ಸಮರ್ಪಣೆಯನ್ನು ತೋರಿಸುತ್ತದೆ.
ಸ್ನೇಹಿತರೇ,
ಯೂರಿಯಾ ಸೇರಿದಂತೆ ಎಲ್ಲಾ ರಸಗೊಬ್ಬರಗಳು ರೈತರಿಗೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುವುದನ್ನು ಕೇಂದ್ರ ಸರ್ಕಾರ ಖಚಿತಪಡಿಸಿಕೊಳ್ಳುತ್ತಿದೆ. ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಸುಮಾರು 3000 ರೂಪಾಯಿಗಳಷ್ಟು ಬೆಲೆಯಿರುವ ಯೂರಿಯಾ ಚೀಲವನ್ನು ಭಾರತದಲ್ಲಿ 300 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಒದಗಿಸಲಾಗುತ್ತಿದೆ. ನೀವು ಈ ಅಂಕಿಅಂಶವನ್ನು ನೆನಪಿನಲ್ಲಿಟ್ಟುಕೊಳ್ಳುತ್ತೀರಾ? ಈ ಅಂಕಿಅಂಶವು ನಿಮ್ಮ ಸ್ಮರಣೆಯಲ್ಲಿ ಉಳಿಯಬೇಕು. ಇದು ಉತ್ತರ ಪ್ರದೇಶ, ಕರ್ನಾಟಕ ಮತ್ತು ದೇಶಾದ್ಯಂತದ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಭಾರತ ಸರ್ಕಾರವು ಇದಕ್ಕಾಗಿ ವರ್ಷಕ್ಕೆ 2.5 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಖರ್ಚು ಮಾಡುತ್ತಿದೆ. ನನ್ನ ರೈತರಿಗೆ ಯೂರಿಯಾ ದುಬಾರಿಯಾಗದಂತೆ ನೋಡಿಕೊಳ್ಳಲು ಸರ್ಕಾರದ ಖಜಾನೆಯಿಂದ ಈ ಬೃಹತ್ ಮೊತ್ತವನ್ನು ಖರ್ಚು ಮಾಡಲಾಗುತ್ತದೆ.
ಸ್ನೇಹಿತರೇ,
ಬೆಳೆಗಳನ್ನು ಕಟಾವು ಮಾಡಿದ ನಂತರ ಉಳಿದಿರುವ ಅಕ್ಕಿ ಹುಲ್ಲು ಮತ್ತು ಕೃಷಿ ತ್ಯಾಜ್ಯವನ್ನು ವ್ಯರ್ಥ ಮಾಡದಿರುವುದು ಬಹಳ ಮುಖ್ಯ. ದೇಶಾದ್ಯಂತ ಜೈವಿಕ ಇಂಧನ ಮತ್ತು ಎಥೆನಾಲ್ ಘಟಕಗಳನ್ನು ಸ್ಥಾಪಿಸುವ ಮೂಲಕ ಸರ್ಕಾರವು ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಒಂಬತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತ ಇಂದು ದೇಶದಲ್ಲಿ ಹತ್ತು ಪಟ್ಟು ಹೆಚ್ಚು ಎಥೆನಾಲ್ ಉತ್ಪಾದನೆಯಾಗುತ್ತಿದೆ. ಎಥೆನಾಲ್ ಉತ್ಪಾದನೆಯು ನಮ್ಮ ರೈತರ ಜೇಬಿಗೆ ಸುಮಾರು 65,000 ಕೋಟಿ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದೆ. ಕೇವಲ ಕಳೆದ ಹತ್ತು ತಿಂಗಳಲ್ಲಿ, ದೇಶಾದ್ಯಂತದ ರೈತರು 18,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಪಾವತಿಗಳನ್ನು ಪಡೆದಿದ್ದಾರೆ. ನಾನು ನಿರ್ದಿಷ್ಟವಾಗಿ ಮೀರತ್-ಗಾಜಿಯಾಬಾದ್ ಪ್ರದೇಶವನ್ನು ಉಲ್ಲೇಖಿಸಿದರೆ, ಇಲ್ಲಿನ ರೈತರು ಈ ವರ್ಷವೊಂದರಲ್ಲೇ ಎಥೆನಾಲ್‌ಗಾಗಿ 300 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಪಾವತಿಗಳನ್ನು ಪಡೆದಿದ್ದಾರೆ. ಎಥೆನಾಲ್‌ನ ಹೆಚ್ಚಿದ ಬಳಕೆ, ವಿಶೇಷವಾಗಿ ಸಾರಿಗೆ ವಲಯದಲ್ಲಿ, ನನ್ನ ಮೀರತ್-ಗಾಜಿಯಾಬಾದ್ ಪ್ರದೇಶದ ಕಬ್ಬು ಬೆಳೆಗಾರರಿಗೆ ಪ್ರಯೋಜನವನ್ನು ನೀಡುತ್ತಿದೆ. ಇದು ಕಬ್ಬು ಬೆಳೆಗಾರರ ಬಾಕಿ ಉಳಿದಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತಿದೆ.
ಸ್ನೇಹಿತರೇ,
ಹಬ್ಬದ ಸೀಸನ್ ಪ್ರಾರಂಭವಾಗುತ್ತಿದ್ದಂತೆ, ಭಾರತ ಸರ್ಕಾರವು ಈಗಾಗಲೇ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಒಂದು ಉಡುಗೊರೆಯನ್ನು ನೀಡಿದೆ. ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 500 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ದೇಶಾದ್ಯಂತ 80 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಸರ್ಕಾರ ನಿರಂತರವಾಗಿ ಉಚಿತ ಪಡಿತರವನ್ನು ನೀಡುತ್ತಿದೆ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 4% ತುಟ್ಟಿಭತ್ಯೆ ಘೋಷಿಸಲಾಗಿದೆ. ನಮ್ಮ ಗ್ರೂಪ್ ಬಿ ಮತ್ತು ಗ್ರೂಪ್ ಸಿ ಗೆಜೆಟೆಡ್ ಅಲ್ಲದ ರೈಲ್ವೆ ನೌಕರರಿಗೂ ದೀಪಾವಳಿ ಬೋನಸ್‌ಗಳನ್ನು ನೀಡಲಾಗಿದೆ. ರೈತರು ಮತ್ತು ಉದ್ಯೋಗಿಗಳಿಗೆ ತಲುಪುವ ಈ ಹೆಚ್ಚುವರಿ ಸಾವಿರಾರು ಕೋಟಿಗಳು ಇಡೀ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತವೆ. ಅವರು ಮಾಡುವ ಖರೀದಿಗಳು ಮಾರುಕಟ್ಟೆಗಳು ಮತ್ತು ವ್ಯವಹಾರಗಳಿಗೆ ಉತ್ತೇಜನ ನೀಡುತ್ತವೆ.
ನನ್ನ ಕುಟುಂಬ ಸದಸ್ಯರೇ,
ಸಹಾನುಭೂತಿಯ ನಿರ್ಧಾರಗಳು ಇದ್ದಾಗ, ಪ್ರತಿ ಕುಟುಂಬದಲ್ಲಿ ಹಬ್ಬಗಳ ಸಂತೋಷವು ಹೆಚ್ಚಾಗುತ್ತದೆ. ಮತ್ತು ದೇಶದ ಪ್ರತಿ ಕುಟುಂಬವು ಸಂತೋಷವಾಗಿದ್ದಾಗ, ನಿಮ್ಮ ಹಬ್ಬಗಳು ಚೆನ್ನಾಗಿ ನಡೆದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ನನ್ನ ಆಚರಣೆ ಆ ಸಂತೋಷದಲ್ಲಿದೆ.
ನನ್ನ ಪ್ರೀತಿಯ ಸಹೋದರ ಸಹೋದರಿಯರೇ,
ನೀವು ನನ್ನ ಕುಟುಂಬ, ಮತ್ತು ಆದ್ದರಿಂದ, ನೀವು ನನ್ನ ಆದ್ಯತೆ. ಈ ಕೆಲಸ ನಿಮಗಾಗಿ ನಡೆಯುತ್ತಿದೆ. ನೀವು ಸಂತೋಷವಾಗಿ ಮತ್ತು ಪ್ರಗತಿಯನ್ನು ಸಾಧಿಸಿದರೆ, ಆಗ ದೇಶವು ಪ್ರಗತಿ ಸಾಧಿಸುತ್ತದೆ. ನೀವು ಸಂತೋಷವಾಗಿದ್ದರೆ, ನಾನು ಸಂತೋಷವಾಗಿರುತ್ತೇನೆ. ನೀವು ಸಮರ್ಥರಾಗಿದ್ದರೆ, ದೇಶವು ಸಮರ್ಥವಾಗಿರುತ್ತದೆ.
ಮತ್ತು ಸಹೋದರ ಸಹೋದರಿಯರೇ,
ಇಂದು, ನಾನು ನಿಮ್ಮಲ್ಲಿ ಒಂದು ವಿಷಯವನ್ನು ಕೇಳಲು ಬಯಸುತ್ತೇನೆ. ನಾನು ನಿಮ್ಮಲ್ಲಿ ಒಂದು ವಿಷಯವನ್ನು ಕೇಳಲು ಬಯಸುತ್ತೇನೆ. ನೀವು ಕೊಡುತ್ತೀರಾ? ಈ ಧ್ವನಿ ಕೇಳದೆ ಹೋಗುವುದಿಲ್ಲ. ನಾನು ನಿಮ್ಮಲ್ಲಿ ಒಂದು ವಿಷಯವನ್ನು ಕೇಳಲು ಬಯಸುತ್ತೇನೆ. ನೀವು ಕೊಡುತ್ತೀರಾ? ನಿಮ್ಮ ಕೈಗಳನ್ನು ಮೇಲೆತ್ತಿ ಮತ್ತು ನೀವು ಕೊಡುತ್ತೀರಿ ಎಂದು ನನಗೆ ಭರವಸೆ ನೀಡಿ. ಸರಿ, ನೋಡಿ, ಬಡವನೂ ಸಹ, ಅವನ ಬಳಿ ಸೈಕಲ್ ಇದ್ದರೆ, ಅದನ್ನು ನೋಡಿಕೊಳ್ಳುತ್ತಾನೋ ಇಲ್ಲವೋ, ಅದನ್ನು ಸ್ವಚ್ಛಗೊಳಿಸುತ್ತಾನೋ ಇಲ್ಲವೋ, ಹೇಳಿ, ಮಾಡುತ್ತಾನೋ ಇಲ್ಲವೋ? ನಿಮ್ಮ ಬಳಿ ಸ್ಕೂಟರ್ ಇದ್ದರೆ, ಅದನ್ನು ಸರಿಯಾಗಿ ಇಟ್ಟುಕೊಳ್ಳುತ್ತೀರಾ, ಸ್ವಚ್ಛಗೊಳಿಸುತ್ತೀರಾ ಅಥವಾ ಇಲ್ಲ, ನಿಮ್ಮ ಸ್ಕೂಟರ್ ಉತ್ತಮ ಸ್ಥಿತಿಯಲ್ಲಿ ಇರುತ್ತದೆಯೇ, ಅದು ಚೆನ್ನಾಗಿ ಅನಿಸುತ್ತದೆಯೇ? ಹಾಗಾದರೆ, ಈ ಹೊಸ ರೈಲುಗಳು ಯಾರಿಗೆ ಸೇರಿವೆ. ಅವುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಯಾರದು? ನಾವು ಅವುಗಳನ್ನು ನೋಡಿಕೊಳ್ಳುತ್ತೇವೆ. ಒಂದೇ ಒಂದು ಗೀರು ಕೂಡ ಬರಬಾರದು. ನಮ್ಮ ಹೊಸ ರೈಲುಗಳಿಗೆ ಒಂದೇ ಒಂದು ಗೀರು ಕೂಡ ಇರಬಾರದು. ನಿಮ್ಮ ಸ್ವಂತ ವಾಹನವನ್ನು ನೀವು ನೋಡಿಕೊಳ್ಳುವಂತೆಯೇ, ಅದನ್ನು ನೋಡಿಕೊಳ್ಳಬೇಕು. ನೀವು ನೋಡಿಕೊಳ್ಳುತ್ತೀರಾ? ಮತ್ತೊಮ್ಮೆ, ನಮೋ ಭಾರತ್ ರೈಲಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು. ತುಂಬಾ ಧನ್ಯವಾದಗಳು!
ನಿಮ್ಮ ಧ್ವನಿಯನ್ನು ಏರಿಸಿ ಮತ್ತು ನನ್ನೊಂದಿಗೆ ಮಾತನಾಡಿ,
ಭಾರತ ಮಾತೆಗೆ – ಜಯವಾಗಲಿ!
ಭಾರತ ಮಾತೆಗೆ – ಜಯವಾಗಲಿ!
ಭಾರತ ಮಾತೆಗೆ – ಜಯವಾಗಲಿ!
ಭಾರತ ಮಾತೆಗೆ – ಜಯವಾಗಲಿ!
ತುಂಬಾ ಧನ್ಯವಾದಗಳು.
ಹಕ್ಕುತ್ಯಾಗ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.
*****
(रिलीज़ आईडी: 2189165)
आगंतुक पटल : 13
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam