ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರು ರಾಜಸ್ಥಾನದ ನಾಥದ್ವಾರದಲ್ಲಿ ₹5500 ಕೋಟಿಗೂ ಹೆಚ್ಚು ಮೌಲ್ಯದ ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ರಾಷ್ಟ್ರಕ್ಕೆ ಸಮರ್ಪಿಸಿದರು


ರಾಜಸಮಂದ್ ಮತ್ತು ಉದಯಪುರದಲ್ಲಿ ರಸ್ತೆ ನಿರ್ಮಾಣ ಯೋಜನೆಗಳನ್ನು ಎರಡು-ಲೇನ್‌ಗೆ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ ನೆರವೇರಿಸಿದರು

ಉದಯಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿ ಮತ್ತು ಗೇಜ್ ಪರಿವರ್ತನೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು

ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಿದರು

ಭಾರತ ಸರ್ಕಾರವು ರಾಜ್ಯದ ಅಭಿವೃದ್ಧಿಯೊಂದಿಗೆ ರಾಷ್ಟ್ರದ ಅಭಿವೃದ್ಧಿಯ ಮಂತ್ರದಲ್ಲಿ ನಂಬಿಕೆ ಇಟ್ಟಿದೆ"

ನಾವು 'ಜೀವನ ಸುಗಮಗೊಳಿಸುವಿಕೆ'ಯನ್ನು ಹೆಚ್ಚಿಸಲು ಆಧುನಿಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ

ಹಿಂದಿನ ಅಲ್ಪಾವಧಿಯ ಚಿಂತನೆಯು ದೇಶಕ್ಕೆ ದೊಡ್ಡ ವೆಚ್ಚದಲ್ಲಿ ಮೂಲಸೌಕರ್ಯ ನಿರ್ಮಾಣವನ್ನು ನಿರ್ಲಕ್ಷಿಸಲು ಕಾರಣವಾಯಿತು"

ಮುಂದಿನ 25 ವರ್ಷಗಳಲ್ಲಿ ವಿಕಸಿತ ಭಾರತದ ಸಂಕಲ್ಪದ ಹಿಂದಿನ ಶಕ್ತಿಯಾಗಿ ಆಧುನಿಕ ಮೂಲಸೌಕರ್ಯವು ಹೊರಹೊಮ್ಮುತ್ತಿದೆ

ಇಂದಿನ ಭಾರತವು ಒಂದು ಆಕಾಂಕ್ಷೆಯ ಸಮಾಜವಾಗಿದೆ

ರಾಜಸ್ಥಾನವು ಶೇಕಡಾ 100 ರಷ್ಟು ರೈಲು ವಿದ್ಯುದೀಕರಣವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗುವ ದಿನ ದೂರವಿಲ್ಲ

ಸರ್ಕಾರವು ಸೇವಾ ಮನೋಭಾವದಿಂದ ಮತ್ತು ಅದನ್ನು ಭಕ್ತಿ ಭಾವದಿಂದ ಕಾಣುತ್ತಾ ಕೆಲಸ ಮಾಡುತ್ತಿದೆ

प्रविष्टि तिथि: 10 MAY 2023 1:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ನಾಥದ್ವಾರದಲ್ಲಿ ₹ 5500 ಕೋಟಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಅಭಿವೃದ್ಧಿ ಯೋಜನೆಗಳು ಈ ಪ್ರದೇಶದಲ್ಲಿ ಮೂಲಸೌಕರ್ಯ ಮತ್ತು ಸಂಪರ್ಕವನ್ನು ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿವೆ, ಅಲ್ಲಿ ರೈಲ್ವೆ ಮತ್ತು ರಸ್ತೆ ಯೋಜನೆಗಳು ಸರಕು ಮತ್ತು ಸೇವೆಗಳ ಸಾಗಣೆಗೆ ಅನುಕೂಲ ಮಾಡಿಕೊಡುತ್ತವೆ, ಆ ಮೂಲಕ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಉತ್ತೇಜನ ನೀಡುತ್ತವೆ ಮತ್ತು ಈ ಪ್ರದೇಶದ ಜನರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುತ್ತವೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಶ್ರೀನಾಥರವರ ಭವ್ಯವಾದ ಮೇವಾಡದ ಭೂಮಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರಧಾನಮಂತ್ರಿಯವರು ಅಂದು ಬೆಳಗ್ಗೆ ನಾಥದ್ವಾರದಲ್ಲಿರುವ ಶ್ರೀನಾಥಜಿ ದೇವಸ್ಥಾನದಲ್ಲಿ ದರ್ಶನ ಮತ್ತು ಪೂಜೆ ಸಲ್ಲಿಸಿದ್ದನ್ನು ನೆನಪಿಸಿಕೊಂಡು, ಆಜಾದಿ ಕಾ ಅಮೃತ್ ಕಾಲ್‌ನಲ್ಲಿ ವಿಕಸಿತ ಭಾರತದ ಗುರಿಗಳನ್ನು ಸಾಧಿಸಲು ಆಶೀರ್ವಾದ ಕೋರಿದರು.

ಇಂದು ಸಮರ್ಪಿಸಿದ ಮತ್ತು ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಈ ಯೋಜನೆಗಳು ರಾಜಸ್ಥಾನದ ಸಂಪರ್ಕವನ್ನು ಹೆಚ್ಚಿಸಲಿವೆ ಎಂದರು. ರಾಷ್ಟ್ರೀಯ ಹೆದ್ದಾರಿಯ ಉದಯಪುರದಿಂದ ಶ್ಯಾಮಲಾಜಿ ವಿಭಾಗವನ್ನು ಆರು-ಲೇನ್ ಮಾಡುವಿಕೆಯು ಉದಯಪುರ, ದುಂಗರಪುರ ಮತ್ತು ಬನ್ಸ್ವಾರಾಕ್ಕೆ ಪ್ರಯೋಜನ ನೀಡುತ್ತದೆ. NH-25ರ ಬಿಲಾರಾ-ಜೋಧಪುರ ವಿಭಾಗವು ಜೋಧಪುರದಿಂದ ಗಡಿ ಪ್ರದೇಶಗಳಿಗೆ ಪ್ರವೇಶವನ್ನು ಸುಲಭಗೊಳಿಸುತ್ತದೆ. ಜೈಪುರ-ಜೋಧಪುರ ನಡುವಿನ ಪ್ರಯಾಣಕ್ಕೆ ತೆಗೆದುಕೊಳ್ಳುವ ಸಮಯ ಮೂರು ಗಂಟೆಗಳಷ್ಟು ಕಡಿಮೆಯಾಗಲಿದೆ ಮತ್ತು ಕುಂಭಲಗಢ ಮತ್ತು ಹಲ್ದಿ ಘಾಟಿ ಯಂತಹ ವಿಶ್ವ ಪರಂಪರೆಯ ತಾಣಗಳು ಹೆಚ್ಚು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. "ಶ್ರೀ ನಾಥದ್ವಾರದಿಂದ ಹೊಸ ರೈಲು ಮಾರ್ಗವು ಮೇವಾರನ್ನು ಮಾರ್ವಾಡದೊಂದಿಗೆ ಸಂಪರ್ಕಿಸುತ್ತದೆ ಮತ್ತು ಮಾರ್ಬಲ್, ಗ್ರಾನೈಟ್ ಮತ್ತು ಗಣಿಗಾರಿಕೆ ಉದ್ಯಮದಂತಹ ಕ್ಷೇತ್ರಗಳಿಗೆ ಸಹಾಯ ಮಾಡುತ್ತದೆ" ಎಂದು ಅವರು ಹೇಳಿದರು.

ರಾಜಸ್ಥಾನವು ಭಾರತದ ಅತಿದೊಡ್ಡ ರಾಜ್ಯಗಳಲ್ಲಿ ಒಂದಾಗಿದೆ ಎಂದು ಗಮನಿಸಿದ ಪ್ರಧಾನಮಂತ್ರಿಯವರು, "ರಾಜ್ಯದ ಅಭಿವೃದ್ಧಿಯೊಂದಿಗೆ ರಾಷ್ಟ್ರದ ಅಭಿವೃದ್ಧಿಯ ಮಂತ್ರದಲ್ಲಿ ಭಾರತ ಸರ್ಕಾರವು ನಂಬಿಕೆ ಇಟ್ಟಿದೆ" ಎಂದು ಅಭಿಪ್ರಾಯಪಟ್ಟರು. ರಾಜ್ಯವು ಭಾರತದ ಧೈರ್ಯ, ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿರುವ ರಾಜ್ಯ ಎಂಬುದನ್ನು ಒತ್ತಿಹೇಳಿದ ಪ್ರಧಾನಿ, ದೇಶದ ಅಭಿವೃದ್ಧಿಯ ವೇಗವು ರಾಜಸ್ಥಾನದ ಅಭಿವೃದ್ಧಿಗೆ ನೇರವಾಗಿ ಸಂಬಂಧಿಸಿದೆ ಎಂದು ಹೇಳಿದರು. ಕೇಂದ್ರ ಸರ್ಕಾರವು ರಾಜ್ಯದಲ್ಲಿ ಆಧುನಿಕ ಮೂಲಸೌಕರ್ಯಕ್ಕೆ ವಿಶೇಷ ಒತ್ತು ನೀಡುತ್ತಿದೆ ಎಂದು ಅವರು ಗಮನಿಸಿದರು. ಆಧುನಿಕ ಮೂಲಸೌಕರ್ಯವು ರೈಲ್ವೆ ಮತ್ತು ರಸ್ತೆಗಳಿಗೆ ಸೀಮಿತವಾಗಿಲ್ಲ ಆದರೆ ಇದು ಹಳ್ಳಿಗಳು ಮತ್ತು ನಗರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ, ಸೌಲಭ್ಯಗಳಿಗೆ ಉತ್ತೇಜನ ನೀಡುತ್ತದೆ ಮತ್ತು ಸಮಾಜವನ್ನು ಸಂಪರ್ಕಿಸುತ್ತದೆ, ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸುವ ಮೂಲಕ ಜನರ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಅವರು ವಿವರಿಸಿದರು. ಆಧುನಿಕ ಮೂಲಸೌಕರ್ಯವು ಭೂಮಿಯ ಪರಂಪರೆಯನ್ನು ಉತ್ತೇಜಿಸುವುದಲ್ಲದೆ ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ಅವರು ಹೇಳಿದರು. ದೇಶದಲ್ಲಿ ಸಾಧ್ಯವಿರುವ ಪ್ರತಿಯೊಂದು ಮೂಲಸೌಕರ್ಯದಲ್ಲಿ ಅಭೂತಪೂರ್ವ ಹೂಡಿಕೆಗಳು ಮತ್ತು ಅಭಿವೃದ್ಧಿಯ ಅದ್ಭುತ ವೇಗವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, "ಮುಂದಿನ 25 ವರ್ಷಗಳಲ್ಲಿ ವಿಕಸಿತ ಭಾರತದ ಸಂಕಲ್ಪದ ಹಿಂದಿನ ಶಕ್ತಿಯಾಗಿ ಆಧುನಿಕ ಮೂಲಸೌಕರ್ಯವು ಹೊರಹೊಮ್ಮುತ್ತಿದೆ" ಎಂದು ಹೇಳಿದರು. ರೈಲ್ವೆ, ವಾಯುಮಾರ್ಗಗಳು ಅಥವಾ ಹೆದ್ದಾರಿಗಳು ಹೀಗಿರಲಿ, ಕೇಂದ್ರ ಸರ್ಕಾರವು ಪ್ರತಿಯೊಂದು ಮೂಲಸೌಕರ್ಯ ಕ್ಷೇತ್ರದಲ್ಲಿ ಸಾವಿರಾರು ಕೋಟಿಗಳನ್ನು ಹೂಡಿಕೆ ಮಾಡುತ್ತಿದೆ ಎಂದು ಪ್ರಧಾನಿ ಗಮನಿಸಿದರು. ಈ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕಾಗಿ ₹ 10 ಲಕ್ಷ ಕೋಟಿಗಳ ಅವಕಾಶವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಈ ಪ್ರಮಾಣದ ಹೂಡಿಕೆಯನ್ನು ಮೂಲಸೌಕರ್ಯದಲ್ಲಿ ಮಾಡಿದಾಗ, ಅದು ನೇರವಾಗಿ ಆ ಪ್ರದೇಶದ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಭಾರತ ಸರ್ಕಾರದ ಈ ಯೋಜನೆಗಳು ಆರ್ಥಿಕತೆಗೆ ಹೊಸ ಉತ್ತೇಜನ ನೀಡಿವೆ ಎಂದು ಅವರು ಹೇಳಿದರು.

ದೇಶದಲ್ಲಿ ಉತ್ತೇಜನ ನೀಡಲಾಗುತ್ತಿರುವ ನಕಾರಾತ್ಮಕತೆಯನ್ನು ಪ್ರಧಾನಿ ಉಲ್ಲೇಖಿಸಿದರು. ಆಟಾ ಮತ್ತು ಡೇಟಾ, ಸಡಕ್-ಸ್ಯಾಟಲೈಟ್ ನಡುವಿನ ಆದ್ಯತೆಗಳನ್ನು ಪ್ರಶ್ನಿಸುವ ವಿರೋಧಿಗಳ ಬಗ್ಗೆ ಅವರು ಮಾತನಾಡಿದರು. ಮೂಲಭೂತ ಸೌಕರ್ಯಗಳ ಜೊತೆಗೆ, ಆಧುನಿಕ ಮೂಲಸೌಕರ್ಯದ ಸೃಷ್ಟಿಯೂ ಅಷ್ಟೇ ಮುಖ್ಯ ಎಂದು ಪ್ರಧಾನಿ ಹೇಳಿದರು. ಮತ ರಾಜಕೀಯವು ದೇಶದ ಭವಿಷ್ಯಕ್ಕಾಗಿ ಯೋಜನೆಯನ್ನು ಅಸಾಧ್ಯವಾಗಿಸುತ್ತದೆ ಎಂದು ಅವರು ಹೇಳಿದರು. ಬೆಳೆಯುತ್ತಿರುವ ಅಗತ್ಯಗಳಿಗೆ ಬಹಳ ಬೇಗನೆ ಕಡಿಮೆ ಬೀಳುವ ಸಣ್ಣ ಸ್ವತ್ತುಗಳನ್ನು ಸೃಷ್ಟಿಸುವ ಅಲ್ಪಾವಧಿಯ ಚಿಂತನೆಯನ್ನು ಅವರು ಟೀಕಿಸಿದರು. ಈ ಚಿಂತನೆಯು ದೇಶಕ್ಕೆ ದೊಡ್ಡ ವೆಚ್ಚದಲ್ಲಿ ಮೂಲಸೌಕರ್ಯ ನಿರ್ಮಾಣವನ್ನು ನಿರ್ಲಕ್ಷಿಸಲು ಕಾರಣವಾಯಿತು ಎಂದು ಅವರು ಹೇಳಿದರು.

"ದೇಶದಲ್ಲಿ ಮೂಲಸೌಕರ್ಯಕ್ಕಾಗಿ ಭವಿಷ್ಯದ ದೃಷ್ಟಿಯ ಕೊರತೆಯಿಂದಾಗಿ ರಾಜಸ್ಥಾನವು ಬಹಳಷ್ಟು ಅನುಭವಿಸಿದೆ" ಎಂದು ಪ್ರಧಾನಿ ಅಭಿಪ್ರಾಯಪಟ್ಟರು, ಜನರು ಎದುರಿಸುತ್ತಿರುವ ತೊಂದರೆಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದಕ್ಕೆ ಮಾತ್ರ ಸೀಮಿತವಾಗಿಲ್ಲ ಆದರೆ ಕೃಷಿ, ವ್ಯವಹಾರಗಳು ಮತ್ತು ಕೈಗಾರಿಕೆಗಳನ್ನು ಸಹ ಒಳಗೊಂಡಿವೆ ಎಂದು ಅವರು ಗಮನಸೆಳೆದರು. 2000 ರಲ್ಲಿ ಅಂದಿನ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನಾ ಪ್ರಾರಂಭವಾಯಿತು ಎಂದು ಗಮನಿಸಿದ ಶ್ರೀ ಮೋದಿ ಅವರು, 2014 ರವರೆಗೆ ಸುಮಾರು 3 ಲಕ್ಷದ 80 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗಿದೆ, ಆದರೆ ಪ್ರಸ್ತುತ ಸರ್ಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ಸುಮಾರು 3 ಲಕ್ಷದ 50 ಸಾವಿರ ಕಿಲೋಮೀಟರ್ ರಸ್ತೆಗಳನ್ನು ಹಾಕಿದೆ ಎಂದು ಹೇಳಿದರು. ಇದರಲ್ಲಿ 70 ಸಾವಿರ ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು ರಾಜಸ್ಥಾನದ ಹಳ್ಳಿಗಳಲ್ಲಿಯೇ ನಿರ್ಮಿಸಲಾಗಿದೆ ಎಂದು ಪ್ರಧಾನಿ ಹೇಳಿದರು. "ಈಗ ದೇಶದ ಹೆಚ್ಚಿನ ಗ್ರಾಮಗಳು ಕಚ್ಚಾ ರಸ್ತೆಗಳಿಂದ ಸಂಪರ್ಕಗೊಂಡಿವೆ" ಎಂದು ಅವರು ಹೇಳಿದರು.

ಭಾರತ ಸರ್ಕಾರವು ಹಳ್ಳಿಗಳಿಗೆ ರಸ್ತೆಗಳನ್ನು ತೆಗೆದುಕೊಂಡು ಹೋಗುವುದರ ಜೊತೆಗೆ, ನಗರಗಳನ್ನು ಆಧುನಿಕ ಹೆದ್ದಾರಿಗಳೊಂದಿಗೆ ಸಂಪರ್ಕಿಸುತ್ತಿದೆ ಎಂದು ಪ್ರಧಾನಿ ಹೇಳಿದರು. 2014 ಕ್ಕಿಂತ ಮೊದಲು ಇದ್ದ ವೇಗಕ್ಕೆ ಹೋಲಿಸಿದರೆ ರಾಷ್ಟ್ರೀಯ ಹೆದ್ದಾರಿಗಳನ್ನು ಎರಡು ಪಟ್ಟು ವೇಗದಲ್ಲಿ ನಿರ್ಮಿಸಲಾಗುತ್ತಿದೆ. ದೌಸಾದಲ್ಲಿ ದೆಹಲಿ "ಇಂದಿನ ಭಾರತವು ಆಕಾಂಕ್ಷೆಯ ಸಮಾಜವಾಗಿದೆ. ಮತ್ತು ಜನರು ಕಡಿಮೆ ಸಮಯದಲ್ಲಿ ಹೆಚ್ಚು ಸೌಲಭ್ಯಗಳನ್ನು ಪಡೆಯಲು ಬಯಸುತ್ತಾರೆ. ಭಾರತ ಮತ್ತು ರಾಜಸ್ಥಾನದ ಜನರ ಆಕಾಂಕ್ಷೆಯನ್ನು ಈಡೇರಿಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಪ್ರಧಾನಿ ಹೇಳಿದರು.

ಮಾನ್ಯ ನಾಗರಿಕರ ಜೀವನದಲ್ಲಿ ರೈಲ್ವೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಿ, ಆಧುನಿಕ ರೈಲುಗಳು, ರೈಲು ನಿಲ್ದಾಣಗಳು ಮತ್ತು ಹಳಿಗಳಂತಹ ಬಹುಮುಖಿ ಕ್ರಮಗಳ ಮೂಲಕ ರೈಲ್ವೆಯನ್ನು ಆಧುನೀಕರಿಸುವ ಯೋಜನೆಗಳನ್ನು ವಿವರಿಸಿದರು. ರಾಜಸ್ಥಾನವು ಈಗಾಗಲೇ ತನ್ನ ಮೊದಲ ವಂದೇ ಭಾರತ್ ರೈಲನ್ನು ಪಡೆದುಕೊಂಡಿದೆ ಎಂದು ಅವರು ಹೇಳಿದರು. ಮಾವ್ಲಿ ಮಾರ್ವಾರ್ ವಿಭಾಗದ ಗೇಜ್ ಬದಲಾವಣೆ ಮತ್ತು ಅಹಮದಾಬಾದ್ ಮತ್ತು ಉದಯಪುರ ಮಾರ್ಗದ ಬ್ರಾಡ್ ಗೇಜಿಂಗ್ ಸಹ ಪೂರ್ಣಗೊಂಡಿದೆ.

ಮಾನವ ರಹಿತ ಗೇಟ್‌ಗಳನ್ನು ತೆಗೆದುಹಾಕಿದ ನಂತರ ದೇಶದಲ್ಲಿ ಸಂಪೂರ್ಣ ರೈಲು ಜಾಲದ ವಿದ್ಯುದೀಕರಣದ ಮೇಲೆ ಸರ್ಕಾರವು ಗಮನಹರಿಸಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಉದಯಪುರ ರೈಲ್ವೆ ನಿಲ್ದಾಣಕ್ಕೆ ಹೋಲುವ ರೀತಿಯಲ್ಲಿಯೇ ದೇಶದ ನೂರಾರು ರೈಲು ನಿಲ್ದಾಣಗಳ ಆಧುನೀಕರಣ ನಡೆಯುತ್ತಿದೆ ಮತ್ತು ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು. ಸರಕು ಸಾಗಣೆ ರೈಲುಗಳಿಗಾಗಿ, ಪ್ರಧಾನಮಂತ್ರಿಯವರು ವಿಶೇಷ ಟ್ರ್ಯಾಕ್, ಮೀಸಲಾದ ಸರಕು ಸಾಗಣೆ ಕಾರಿಡಾರ್ ಅನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. 2014 ಕ್ಕೆ ಹೋಲಿಸಿದರೆ ರಾಜಸ್ಥಾನದ ರೈಲ್ವೆ ಬಜೆಟ್ ಹದಿನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ಅವರು ಎತ್ತಿ ತೋರಿಸಿದರು. ದುಂಗರಪುರ, ಉದಯಪುರ, ಚಿತ್ತೂರ್, ಪಾಲಿ, ಸಿರೋಹಿ ಮತ್ತು ರಾಜಸಮಂದ್‌ನಂತಹ ಜಿಲ್ಲೆಗಳು ಗೇಟ್ ಬದಲಾವಣೆ ಮತ್ತು ಮಾರ್ಗಗಳ ದ್ವಿಗುಣಗೊಳಿಸುವಿಕೆಯ ಪ್ರಯೋಜನಗಳನ್ನು ಪಡೆದಿರುವ ರಾಜಸ್ಥಾನದಲ್ಲಿ ಶೇಕಡಾ 75 ರಷ್ಟು ರೈಲು ಜಾಲವು ಈಗಾಗಲೇ ವಿದ್ಯುದೀಕರಣಗೊಂಡಿದೆ ಎಂದು ಅವರು ಮಾಹಿತಿ ನೀಡಿದರು. "ರಾಜಸ್ಥಾನವು ಶೇಕಡಾ 100 ರಷ್ಟು ರೈಲು ವಿದ್ಯುದೀಕರಣವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗುವ ದಿನ ದೂರವಿಲ್ಲ" ಎಂದು ಶ್ರೀ ಮೋದಿ ಹೇಳಿದರು.

ಪ್ರವಾಸೋದ್ಯಮ ಮತ್ತು ರಾಜಸ್ಥಾನದ ಧಾರ್ಮಿಕ ಸ್ಥಳಗಳಿಗೆ ಹೆಚ್ಚಿದ ಸಂಪರ್ಕದ ಪ್ರಯೋಜನಗಳನ್ನು ಸಹ ಪ್ರಧಾನಿ ಒತ್ತಿಹೇಳಿದರು. ಮಹಾರಾಣಾ ಪ್ರತಾಪ್ ಅವರ ಶೌರ್ಯ, ಭಾಮಾಶಾ ಅವರ ಔದಾರ್ಯ ಮತ್ತು ವೀರ ಪನ್ನಾ ದಾಯಿ ಅವರ ಕಥೆಯನ್ನು ಅವರು ಸ್ಮರಿಸಿದರು. ನಿನ್ನೆ ಅವರ ಜಯಂತಿಯಂದು ಮಹಾರಾಣಾ ಪ್ರತಾಪ್ ಅವರಿಗೆ ದೇಶವು ಗೌರವ ಸಲ್ಲಿಸಿದ್ದರ ಬಗ್ಗೆ ಅವರು ಮಾತನಾಡಿದರು. ದೇಶದ ಪರಂಪರೆಯನ್ನು ಸಂರಕ್ಷಿಸಲು ಸರ್ಕಾರವು ವಿವಿಧ ಸರ್ಕ್ಯೂಟ್‌ಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಶ್ರೀ ಕೃಷ್ಣನಿಗೆ ಸಂಬಂಧಿಸಿದ ಯಾತ್ರಾ ಸ್ಥಳಗಳನ್ನು ಸಂಪರ್ಕಿಸಲಾಗುತ್ತಿದೆ. ರಾಜಸ್ಥಾನದಲ್ಲಿ ಗೋವಿಂದ್ ದೇವ್ ಜಿ, ಖಾತು ಶ್ಯಾಮ್ ಜಿ ಮತ್ತು ಶ್ರೀ ನಾಥ್ ಜಿ ದರ್ಶನವನ್ನು ಸುಲಭಗೊಳಿಸಲು ಕೃಷ್ಣ ಸರ್ಕ್ಯೂಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು. "ಸರ್ಕಾರವು ಸೇವಾ ಮನೋಭಾವದಿಂದ ಮತ್ತು ಅದನ್ನು ಭಕ್ತಿ ಭಾವದಿಂದ ಕಾಣುತ್ತಾ ಕೆಲಸ ಮಾಡುತ್ತಿದೆ" ಎಂದು ಪ್ರಧಾನಿ ಹೇಳಿದರು, "ಜನತಾ ಜನಾರ್ಧನರಿಗೆ ಜೀವನ ಸುಗಮಗೊಳಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ" ಎಂದು ಅವರು ತೀರ್ಮಾನಿಸಿದರು.

ರಾಜಸ್ಥಾನದ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾ, ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್, ಸಂಸತ್ ಸದಸ್ಯರು ಮತ್ತು ರಾಜಸ್ಥಾನ ಸರ್ಕಾರದ ಮಂತ್ರಿಗಳು ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ಪ್ರಧಾನಮಂತ್ರಿ ಅವರು ರಾಜಸಮಂದ್ ಮತ್ತು ಉದಯಪುರದಲ್ಲಿ ರಸ್ತೆ ನಿರ್ಮಾಣ ಯೋಜನೆಗಳನ್ನು ಎರಡು-ಲೇನ್‌ಗೆ ಮೇಲ್ದರ್ಜೆಗೇರಿಸಲು ಶಂಕುಸ್ಥಾಪನೆ ನೆರವೇರಿಸಿದರು. ಸಾರ್ವಜನಿಕರಿಗೆ ವರ್ಧಿತ ಸೌಕರ್ಯಗಳನ್ನು ಒದಗಿಸಲು ಉದಯಪುರ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಗೆ ಸಹ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಅವರು ಗೇಜ್ ಪರಿವರ್ತನೆ ಯೋಜನೆ ಮತ್ತು ರಾಜಸಮಂದ್‌ನಲ್ಲಿ ನಾಥದ್ವಾರದಿಂದ ನಾಥದ್ವಾರ ಪಟ್ಟಣದವರೆಗೆ ಹೊಸ ಮಾರ್ಗವನ್ನು ಸ್ಥಾಪಿಸಲು ಶಂಕುಸ್ಥಾಪನೆ ನೆರವೇರಿಸಿದರು.

ಇದಲ್ಲದೆ, ಪ್ರಧಾನಮಂತ್ರಿಯವರು ಮೂರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು, ಅವುಗಳಲ್ಲಿ NH-48ರ 114 ಕಿ.ಮೀ ಉದ್ದದ ಆರು-ಲೇನ್ ಉದಯಪುರದಿಂದ ಶ್ಯಾಮಲಾಜಿ ವಿಭಾಗ; NH-25ರ ಬಾರ್-ಬಿಲಾರಾ-ಜೋಧಪುರ ವಿಭಾಗದ 110 ಕಿ.ಮೀ ಉದ್ದದ ನಾಲ್ಕು-ಲೇನ್ ರಸ್ತೆಯ ಅಗಲೀಕರಣ ಮತ್ತು ಬಲವರ್ಧನೆ; ಮತ್ತು NH 58Eರ 47 ಕಿ.ಮೀ ಉದ್ದದ ಪೇವ್ಡ್ ಶೋಲ್ಡರ್ ವಿಭಾಗದೊಂದಿಗೆ ಎರಡು-ಲೇನ್ ರಸ್ತೆ ಸೇರಿವೆ.

 

*****

 


(रिलीज़ आईडी: 2189102) आगंतुक पटल : 19
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam