ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಐ.ಎಫ್‌.ಎಫ್‌.ಐ 2025 ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯ ಸಂಕೇತವಾಗಿದ್ದು, ಮಹಿಳಾ ಚಲನಚಿತ್ರ ನಿರ್ಮಾತೃಗಳು, ಹೊಸ ಪ್ರತಿಭೆ ಮತ್ತು ಸಿನೆಮಾದಲ್ಲಿನ ಸೃಜನಶೀಲ ಶ್ರೇಷ್ಠತೆಯನ್ನು ಆಚರಿಸುತ್ತದೆ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್


ನವದೆಹಲಿಯಲ್ಲಿ ನಡೆದ ಕರ್ಟನ್‌ ರೈಸರ್‌ ಕಾರ್ಯಕ್ರಮದೊಂದಿಗೆ ಐ.ಎಫ್‌.ಎಫ್‌.ಐ 2025 ರ ಕ್ಷಣಗಣನೆ ಪ್ರಾರಂಭವಾಯಿತು

ನವೆಂಬರ್ 20 ರಿಂದ 28, 2025 ರವರೆಗೆ ಗೋವಾದಲ್ಲಿ ನಡೆಯಲಿರುವ 56 ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಪರದೆಗಳು ಸರಿದಿವೆ

ಚಿತ್ರರಂಗದಲ್ಲಿ 50 ಅದ್ಭುತ ವರ್ಷಗಳನ್ನು ಪೂರೈಸಿದ್ದಕ್ಕಾಗಿ 56 ನೇ ಐ.ಎಫ್‌.ಎಫ್‌.ಐ ಸಮಾರೋಪ ಸಮಾರಂಭದಲ್ಲಿ ಖ್ಯಾತ ನಟ ರಜನಿಕಾಂತ್ ಅವರನ್ನು ಸನ್ಮಾನಿಸಲಾಗುವುದು

13 ವಿಶ್ವ ಪ್ರಥಮ ಪ್ರದರ್ಶನಗಳು, 5 ಅಂತರರಾಷ್ಟ್ರೀಯ ಪ್ರಥಮ ಪ್ರದರ್ಶನಗಳು ಮತ್ತು 44 ಏಷ್ಯನ್ ಪ್ರಥಮ ಪ್ರದರ್ಶನಗಳು ಸೇರಿದಂತೆ 81 ದೇಶಗಳ 240 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು

ಮೂರು ಅತ್ಯುತ್ತಮ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಐದು ಖಂಡಗಳ 32 ಚಲನಚಿತ್ರಗಳು ಭಾಗವಹಿಸಲಿವೆ

2025 ರಲ್ಲಿ ವಿಶ್ವದ ಅತ್ಯುತ್ತಮ ಚಲನಚಿತ್ರೋತ್ಸವಗಳ ಪ್ರಶಸ್ತಿ ವಿಜೇತ ಚಲನಚಿತ್ರಗಳನ್ನು ಮೊದಲ ಬಾರಿಗೆ ಭಾರತದಲ್ಲಿ ಪ್ರದರ್ಶಿಸಲಾಗುವುದು

ಆಯ್ದ ಒಂಬತ್ತು ವಿಭಾಗಗಳು: ಡಾಕ್ಯು-ಮಾಂಟೇಜ್, ಫ್ರಮ್ ದಿ ಫೆಸ್ಟಿವಲ್ಸ್, ರೈಸಿಂಗ್ ಸ್ಟಾರ್ಸ್, ಮಿಷನ್ ಲೈಫ್, ಎಕ್ಸ್‌ಪರಿಮೆಂಟಲ್ ಫಿಲ್ಮ್ಸ್, ರಿಸ್ಟೋರೇಟೆಡ್ ಕ್ಲಾಸಿಕ್ಸ್, ಮೆಕಾಬ್ರೆ ಡ್ರೀಮ್ಸ್, ಯುನಿಸೆಫ್ ಮತ್ತು ಸಿನಿಮಾ ಆಫ್ ದಿ ವರ್ಲ್ಡ್

ಫೋಕಸ್‌ ಕಂಟ್ರಿ: ಜಪಾನ್. ಜಪಾನೀಸ್ ಸಿನಿಮಾ, ಸಾಂಸ್ಥಿಕ ಸಹಯೋಗಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳ ಆಯ್ದ ಪ್ಯಾಕೇಜ್‌ ಗಳು.

ವಿಶೇಷ ಚಲನಚಿತ್ರ ಪ್ಯಾಕೇಜ್‌ ಗಳು: ಪಾಲುದಾರ ರಾಷ್ಟ್ರ ಸ್ಪೇನ್ ಮತ್ತು ಸ್ಪಾಟ್‌ಲೈಟ್ ರಾಷ್ಟ್ರ ಆಸ್ಟ್ರೇಲಿಯಾ

ಐ.ಎಫ್‌.ಎಫ್‌.ಐ 2025 ಶತಮಾನ ಪೂರೈಸಿದ ಸಿನಿಮಾಗಳನ್ನು ಆಚರಿಸುತ್ತದೆ ಮತ್ತು ಪುನಃಸ್ಥಾಪಿಸಲಾದ ಕ್ಲಾಸಿಕ್ ಚಲನಚಿತ್ರಗಳ ಮೂಲಕ ದಿಗ್ಗಜ ಚಲನಚಿತ್ರ ನಿರ್ಮಾತೃಗಳು ಮತ್ತು ಕಲಾವಿದರನ್ನು ಗೌರವಿಸುತ್ತದೆ

Posted On: 07 NOV 2025 5:10PM by PIB Bengaluru

56ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್.ಎಫ್.ಐ) ನವೆಂಬರ್ 20 ರಿಂದ 28, 2025 ರವರೆಗೆ ಗೋವಾದಲ್ಲಿ ನಡೆಯಲಿದೆ. ಐ.ಎಫ್.ಎಫ್.ಐ ನ ಕರ್ಟನ್‌ ರೈಸರ್‌ ಕಾರ್ಯಕ್ರಮವು ಇಂದು ನವದೆಹಲಿಯಲ್ಲಿ ನಡೆಯಿತು. 81 ದೇಶಗಳ 240 ಕ್ಕೂ ಹೆಚ್ಚು ಚಲನಚಿತ್ರಗಳು, 13 ವಿಶ್ವ ಪ್ರಥಮ ಪ್ರದರ್ಶನಗಳು, 4 ಅಂತರರಾಷ್ಟ್ರೀಯ ಪ್ರಥಮ ಪ್ರದರ್ಶನಗಳು ಮತ್ತು 46 ಏಷ್ಯನ್ ಪ್ರಥಮ ಪ್ರದರ್ಶನಗಳು ಸೇರಿದಂತೆ ವಿಶಾಲ ಮತ್ತು ವೈವಿಧ್ಯಮಯ ಕಾರ್ಯಕ್ರಮವನ್ನು ಉತ್ಸವವು ಒಳಗೊಂಡಿದೆ. ಈ ಉತ್ಸವವು 127 ದೇಶಗಳಿಂದ ದಾಖಲೆಯ 2,314 ನಮೂದುಗಳನ್ನು ಸ್ವೀಕರಿಸಿತು, ಇದು ಜಾಗತಿಕ ಉತ್ಸವಗಳಲ್ಲಿ ಐ.ಎಫ್.ಎಫ್.ಐ ನ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.

ಈ ವರ್ಷದ ಐ.ಎಫ್‌.ಎಫ್‌.ಐ ನಾವೀನ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸುವ ಹಲವಾರು ಹೊಸ ಉಪಕ್ರಮಗಳನ್ನು ಪರಿಚಯಿಸುತ್ತಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಹೇಳಿದರು. ಈ ವರ್ಷ 50 ಕ್ಕೂ ಹೆಚ್ಚು ಮಹಿಳಾ ನಿರ್ದೇಶಕರ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದ್ದು, ಇದು ಸಿನಿಮಾದಲ್ಲಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಸಚಿವರು ಹೇಳಿದರು. ವೆಬ್ ಮತ್ತು ಸ್ಟ್ರೀಮಿಂಗ್ ವಿಷಯದಲ್ಲಿ ಶ್ರೇಷ್ಠತೆಯನ್ನು ಗುರುತಿಸಲು ಈ ವರ್ಷವೂ ಒಟಿಟಿ ಪ್ರಶಸ್ತಿಗಳು ಮುಂದುವರಿಯಲಿವೆ ಎಂದು ಅವರು ಘೋಷಿಸಿದರು. ಚಿತ್ರಕಥೆ, ನಿರ್ಮಾಣ ವಿನ್ಯಾಸ ಮತ್ತು ಧ್ವನಿಯಂತಹ ಕ್ಷೇತ್ರಗಳಲ್ಲಿ ಹೊಸ ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಉತ್ಸವವು ನಿರಂತರವಾಗಿ ಬೆಂಬಲಿಸುತ್ತದೆ ಎಂದು ಅವರು ಹೇಳಿದರು. ಪೈರಸಿ ನಿಗ್ರಹ ಕಾನೂನುಗಳನ್ನು ಬಲಪಡಿಸಲು ಮತ್ತು ಚಲನಚಿತ್ರ ಪ್ರಮಾಣೀಕರಣವನ್ನು ಸರಳೀಕರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಬಹುಭಾಷಾ ಚಲನಚಿತ್ರಗಳಿಗೆ ಸಿ ಬಿ ಎಫ್‌ ಸಿ ಯ ಮುಂಬರುವ ಏಕ್ ಭಾರತ್ ಶ್ರೇಷ್ಠ ಭಾರತ್ ಪ್ರಮಾಣೀಕರಣವು ಭಾರತದ ಸಾಂಸ್ಕೃತಿಕ ಏಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮಾತನಾಡಿ, ಭಾರತೀಯ ಸಿನಿಮಾಗಳು ಜಾಗತಿಕವಾಗಿ ಬಲವಾದ ಛಾಪು ಮೂಡಿಸುತ್ತಿವೆ, ಆಸ್ಟ್ರೇಲಿಯಾದ ಬಾಕ್ಸ್ ಆಫೀಸ್‌ ನಲ್ಲಿ ಭಾರತೀಯ ಸಿನಿಮಾಗಳು ಹಾಲಿವುಡ್ ಸಿನಿಮಾಗಳಿಗಿಂತ ಮುಂದಿವೆ ಎಂದು ಹೇಳಿದರು. ಈ ವರ್ಷದ ಐ.ಎಫ್‌.ಎಫ್‌.ಐ ನಲ್ಲಿ ಜಪಾನ್, ಸ್ಪೇನ್ ಮತ್ತು ಆಸ್ಟ್ರೇಲಿಯಾ ಹೊಸ ಸಹಯೋಗಗಳನ್ನು ಪ್ರಸ್ತುತಪಡಿಸುತ್ತವೆ. ನಿರ್ಮಾಣ ಸಂಸ್ಥೆಗಳು, ರಾಜ್ಯಗಳು ಮತ್ತು ಸಾಂಸ್ಕೃತಿಕ ತಂಡಗಳ ಭವ್ಯ ಕಾರ್ನೀವಲ್ ಪರೇಡ್‌ ರೋಮಾಂಚಕ ವಾತಾವರಣವನ್ನು ಸೃಷ್ಟಿಸುತ್ತದೆ, ಹಾಗಯೇ ಬೃಹತ್‌ ಫಿಲ್ಮ್‌ ಬಜಾರ್‌ ಅಂತರರಾಷ್ಟ್ರೀಯ ಸಹ-ನಿರ್ಮಾಣಗಳನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.

IFFIesta ಎಂಬುದು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್‌.ಎಫ್‌.ಐ) ಕ್ಕೆ ಸಂಬಂಧಿಸಿದ ಒಂದು ರೋಮಾಂಚಕ ಮನರಂಜನೆ ಮತ್ತು ಸಾಂಸ್ಕೃತಿಕ ಉತ್ಸವವಾಗಿದೆ. ಈ  ಕಾರ್ಯಕ್ರಮದ ಸಮಯದಲ್ಲಿ IFFIesta ಸಂಗೀತ, ಸಂಸ್ಕೃತಿ ಮತ್ತು ಮನರಂಜನೆಯನ್ನು ಆಚರಿಸುತ್ತದೆ. ಚಲನಚಿತ್ರ, ಆಹಾರ, ಕಲೆ ಮತ್ತು ಸಂವಾದಾತ್ಮಕ ಅನುಭವಗಳ ಮೂಲಕ ಸಮುದಾಯಗಳನ್ನು ಒಟ್ಟುಗೂಡಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಮುಖ್ಯ ಉತ್ಸವದಲ್ಲಿ ಯುವಜನರ ಭಾಗವಹಿಸುವಿಕೆ ಮತ್ತು ಸಾರ್ವಜನಿಕರ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜನರೇಟಿವ್ ಎಐ ಮನರಂಜನಾ ಉದ್ಯಮವನ್ನು ಅಸ್ತವ್ಯಸ್ತಗೊಳಿಸುತ್ತಿದ್ದರೂ, ಅದನ್ನು ಕಥೆ ಹೇಳುವ ಭವಿಷ್ಯವನ್ನು ರೂಪಿಸುವ ಸೃಜನಶೀಲ ಸಾಧನವಾಗಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಜಾಜು ಒತ್ತಿ ಹೇಳಿದರು.

ಐ.ಎಫ್‌.ಎಫ್‌.ಐ 2025 ರ ಉತ್ಸವ ನಿರ್ದೇಶಕ ಶ್ರೀ ಶೇಖರ್ ಕಪೂರ್ ಮಾತನಾಡಿ, ಭಾರತವು ವಿಶ್ವದ ಅತಿದೊಡ್ಡ ಚಲನಚಿತ್ರ ನಿರ್ಮಾಣ ಮತ್ತು ಚಲನಚಿತ್ರ ವೀಕ್ಷಿಸುವ ರಾಷ್ಟ್ರವಾಗಿದ್ದು, ಕಥೆಗಳ ಮೇಲಿನ ಜನರ ಪ್ರೀತಿಯನ್ನು ಆಚರಿಸುತ್ತದೆ. ಕಥೆ ಹೇಳುವಿಕೆಯು ಸಂಸ್ಕೃತಿಗಳಾದ್ಯಂತ ತಿಳುವಳಿಕೆ ಮತ್ತು ಶಾಂತಿಯನ್ನು ನಿರ್ಮಿಸುತ್ತದೆ ಎಂದು ಹೇಳಿದರು. ಫಿಲ್ಮ್ ಬಜಾರ್ ಬಗ್ಗೆ ಮಾತನಾಡಿದ ಅವರು, ಇದು ತಂತ್ರಜ್ಞಾನದ ಮೂಲಕ ಯುವ ಸೃಷ್ಟಿಕರ್ತರನ್ನು ಸಬಲೀಕರಣಗೊಳಿಸುವ ಆಂದೋಲನ ಎಂದು ಕರೆದರು. ಭಾರತದ ಕಥೆಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ಕಥೆಗಾರರಿಗೆ ಸಹಾಯ ಮಾಡುವ ಸೃಜನಶೀಲ ಸಾಧನವಾಗಿ ಕೃತಕ ಬುದ್ಧಿಮತ್ತೆಯನ್ನು ನೋಡಬೇಕು ಎಂದು ಅವರು ಹೇಳಿದರು.

ಕರ್ಟನ್‌ ರೈಸರ್‌ ಕಾರ್ಯಕ್ರಮದಲ್ಲಿ ಪಿಐಬಿ ಪ್ರಧಾನ ಮಹಾನಿರ್ದೇಶಕ ಶ್ರೀ ಧೀರೇಂದ್ರ ಓಜಾ; ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್; ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ (ಚಲನಚಿತ್ರಗಳು) ಡಾ. ಅಜಯ್ ನಾಗಭೂಷಣ್; ಭಾರತೀಯ ಪನೋರಮಾ ಜ್ಯೂರಿ (ಫೀಚರ್) ಅಧ್ಯಕ್ಷ ಶ್ರೀ ರಾಜ ಬುಂದೇಲಾ; ಎನ್‌ ಎಫ್‌ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರಕಾಶ್ ಮಗ್ದುಮ್; ಮತ್ತು ಭಾರತೀಯ ಪನೋರಮಾ ಜ್ಯೂರಿ (ನಾನ್-ಫೀಚರ್) ಅಧ್ಯಕ್ಷ ಶ್ರೀ ಧರಮ್ ಗುಲಾಟಿ ಭಾಗವಹಿಸಿದ್ದರು.

 

56ನೇ ಆವೃತ್ತಿಯ ಮುಖ್ಯಾಂಶಗಳು

 

ಉದ್ಘಾಟನಾ ಚಲನಚಿತ್ರ ಮತ್ತು ಗಾಲಾ ಪ್ರೀಮಿಯರ್‌ ಗಳು

  • ಐ.ಎಫ್‌.ಎಫ್‌.ಐ 2025 ರ ಉದ್ಘಾಟನಾ ಚಿತ್ರ "ದಿ ಬ್ಲೂ ಟ್ರೈಲ್", ಇದು ಬ್ರೆಜಿಲಿಯನ್ ಲೇಖಕ ಗೇಬ್ರಿಯಲ್ ಮಸ್ಕರೋ ಅವರ ಸೈ-ಫೈ ಮತ್ತು ಫ್ಯಾಂಟಸಿ ಚಿತ್ರ. ಇದು 75 ವರ್ಷದ ಮಹಿಳೆಯ ಕಥೆಯನ್ನು ಹೇಳುತ್ತದೆ, ಅಮೆಜಾನ್ ನದಿಯ ಉದ್ದಕ್ಕೂ ನಡೆಯುವ ಅವರ ಸಾಹಸವು ಸ್ವಾತಂತ್ರ್ಯ, ಘನತೆ ಮತ್ತು ಕನಸು ಕಾಣುವ ಪಯಣವನ್ನು ಹೇಳುತ್ತದೆ. ಈ ಚಿತ್ರವು 2025 ರ ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಿಲ್ವರ್ ಬೇರ್ - ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.

  • ಗಾಲಾ ಪ್ರೀಮಿಯರ್ಸ್ ವಿಭಾಗವು 13 ವಿಶ್ವ ಪ್ರೀಮಿಯರ್‌ ಗಳು, 2 ಏಷ್ಯಾ ಪ್ರೀಮಿಯರ್‌ ಗಳು, 1 ಭಾರತೀಯ ಪ್ರೀಮಿಯರ್ ಮತ್ತು 2 ವಿಶೇಷ ಪ್ರದರ್ಶನಗಳು ಸೇರಿದಂತೆ 18 ಶೀರ್ಷಿಕೆಗಳನ್ನು ಪ್ರಸ್ತುತಪಡಿಸುತ್ತದೆ. ರೆಡ್ ಕಾರ್ಪೆಟ್ ಗಣ್ಯ ಕಲಾವಿದರು ಮತ್ತು ಚಲನಚಿತ್ರ ನಿರ್ಮಾತೃಗಳನ್ನು ಸ್ವಾಗತಿಸುತ್ತದೆ.

 

ಕಾರ್ಯಕ್ರಮದ ಪ್ರಮಾಣ ಮತ್ತು ಪ್ರಥಮ ಪ್ರದರ್ಶನಗಳು

  • 81 ದೇಶಗಳ ಒಟ್ಟು 240+ ಚಲನಚಿತ್ರಗಳು.
  • 13 ವಿಶ್ವ ಪ್ರಥಮ ಪ್ರದರ್ಶನಗಳು ಸೇರಿದಂತೆ ಅಂತರರಾಷ್ಟ್ರೀಯ ವಿಭಾಗದಲ್ಲಿ 160 ಚಲನಚಿತ್ರಗಳು.
  • 80 ಕ್ಕೂ ಹೆಚ್ಚು ಚಿತ್ರೋತ್ಸವ ಪ್ರಶಸ್ತಿ ವಿಜೇತ ಚಿತ್ರಗಳು ಮತ್ತು 21 ಅಧಿಕೃತ ಆಸ್ಕರ್-ನಾಮನಿರ್ದೇಶಿತ ಚಲನಚಿತ್ರಗಳು ಐ.ಎಫ್‌.ಎಫ್‌.ಐ 2025 ರಲ್ಲಿ ಪ್ರದರ್ಶನಗೊಳ್ಳುತ್ತವೆ.
  • “ಸಿನಿಮಾ ಆಫ್ ದಿ ವರ್ಲ್ಡ್”ಅಡಿಯಲ್ಲಿ 55 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು ಉತ್ಸವಗಳಲ್ಲಿ ಭಾಗವಹಿಸಿರುವ 133 ಅಂತರರಾಷ್ಟ್ರೀಯ ಆಯ್ದ ಶೀರ್ಷಿಕೆಗಳು.

 

ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಆಯ್ದ ವಿಭಾಗಗಳು

  • ಜಪಾನ್: ಕಂಟ್ರಿ ಆಫ್‌ ಫೋಕಸ್‌, ಮತ್ತು ಹೊಸದಾಗಿ ಸೇರಿಸಲಾದ ಎರಡು ವಿಭಾಗಗಳು, ಪಾಲುದಾರ ದೇಶ: ಸ್ಪೇನ್ ಮತ್ತು ಸ್ಪಾಟ್‌ಲೈಟ್ ದೇಶ: ಆಸ್ಟ್ರೇಲಿಯಾ.

 

  • ಒಟ್ಟಾರೆಯಾಗಿ, ಉತ್ಸವವು ಅಂತರರಾಷ್ಟ್ರೀಯ ಸ್ಪರ್ಧೆ, ನಿರ್ದೇಶಕರ ಅತ್ಯುತ್ತಮ ಚೊಚ್ಚಲ ಚಲನಚಿತ್ರ, ICFT-UNESCO ಗಾಂಧಿ ಪದಕ ಮತ್ತು ಮಕಾಬ್ರೆ ಡ್ರೀಮ್ಸ್, ಡಾಕ್ಯು-ಮಾಂಟೇಜ್, ಪ್ರಾಯೋಗಿಕ ಚಲನಚಿತ್ರಗಳು, ಯುನಿಸೆಫ್ ಮತ್ತು ಪುನಃಸ್ಥಾಪಿಸಿದ ಕ್ಲಾಸಿಕ್‌‌ ಗಳಂತಹ ವಿಶೇಷ ವಿಭಾಗಗಳನ್ನು ಒಳಗೊಂಡಂತೆ 15 ಸ್ಪರ್ಧಾತ್ಮಕ ಮತ್ತು ಕ್ಯುರೇಟೆಡ್ ವಿಭಾಗಗಳನ್ನು ಪ್ರಸ್ತುತಪಡಿಸುತ್ತದೆ.

 

ಕಂಟ್ರಿ ಫೋಕಸ್ — ಜಪಾನ್

  • 2025 ರ ಐ.ಎಫ್‌.ಎಫ್‌.ಐ ಗಾಗಿ ಜಪಾನ್ ಫೋಕಸ್‌ ಕಂಟ್ರಿಯಾಗಿದೆ. ಜಪಾನ್ ಇಂದಿನ ಜಪಾನೀಸ್ ಸಿನೆಮಾದ ಸಮಗ್ರ ನೋಟವನ್ನು ಪ್ರಸ್ತುತಪಡಿಸುತ್ತದೆ, ದೇಶದ ವಿಕಸನಗೊಳ್ಳುತ್ತಿರುವ ಚಲನಚಿತ್ರ ಪರಿಭಾಷೆಯನ್ನು ರೂಪಿಸುತ್ತಿರುವ ಉದಯೋನ್ಮುಖ ಚಲನಚಿತ್ರ ನಿರ್ಮಾತೃಗಳು ಮತ್ತು ಸ್ಥಾಪಿತ ಲೇಖಕರ ಸೃಜನಶೀಲ ಶಕ್ತಿಯನ್ನು ಆಚರಿಸುತ್ತದೆ. ಡ್ರಾಮಾಗಳಿಂದ ಹಿಡಿದು ಉತ್ಸವ ವಿಜೇತ ಮಾನಸಿಕ ಥ್ರಿಲ್ಲರ್‌ ಗಳು, ವಿಲಕ್ಷಣ ನಿರೂಪಣೆಗಳು, ಯುವ ಸೈ-ಫೈಗಳು ಮತ್ತು ಕಾವ್ಯಾತ್ಮಕ ಪ್ರಯೋಗಗಳವರೆಗೆ ಎಚ್ಚರಿಕೆಯಿಂದ ಆಯ್ಕೆ ಮಾಡಲಾದ ಆರು ಶೀರ್ಷಿಕೆಗಳು ನಇರುತ್ತವೆ.

 

ಶತಮಾನೋತ್ಸವದ ಗೌರವಗಳು

  • ಐ.ಎಫ್‌.ಎಫ್‌.ಐ 2025 ಶತಮಾನ ಪೂರೈಸಿರುವ ಸಿನಿಮಾಗಳನ್ನು ಆಚರಿಸುತ್ತದೆ ಮತ್ತು ದಿಗ್ಗಜ ಚಲನಚಿತ್ರ ನಿರ್ಮಾತೃಗಳಾದ ಗುರುದತ್, ರಾಜ್ ಖೋಸ್ಲಾ, ಋತ್ವಿಕ್ ಘಾಟಕ್, ಪಿ. ಭಾನುಮತಿ, ಭೂಪೇನ್ ಹಜಾರಿಕಾ ಮತ್ತು ಸಲೀಲ್ ಚೌಧರಿ ಅವರ ಮೇರುಕೃತಿಗಳನ್ನು ಪ್ರದರ್ಶಿಸುವ ಮೂಲಕ ಗೌರವಿಸುತ್ತದೆ. ಸಲೀಲ್ ಚೌಧರಿಯವರ ಮುಸಾಫಿರ್ ಮತ್ತು ಋತ್ವಿಕ್ ಘಾಟಕ್ ಅವರ ಸುವರ್ಣರೇಖಾ ಐ.ಎಫ್‌.ಎಫ್‌.ಐ 2025 ರಲ್ಲಿ ಪ್ರದರ್ಶನಗೊಳ್ಳುತ್ತವೆ.

 

ರಜನಿಕಾಂತ್ ಅವರ ಸುವರ್ಣ ಮಹೋತ್ಸವ

  • ತಮ್ಮ ಸುಪ್ರಸಿದ್ಧ ಸಿನಿಮಾ ಪ್ರಯಾಣದ 50 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಸೂಪರ್‌ ಸ್ಟಾರ್ ರಜನಿಕಾಂತ್ ಅವರನ್ನು ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಲಾಗುವುದು.

ಭಾರತೀಯ ಪನೋರಮಾ ಮತ್ತು ನ್ಯೂ ಹಾರಿಜಾನ್ಸ್

  • ಭಾರತೀಯ ಪನೋರಮಾ 2025: 25 ಚಲನಚಿತ್ರಗಳು, 20 ನಾನ್-ಫೀಚರ್ ಚಲನಚಿತ್ರಗಳು ಮತ್ತು 5 ಚೊಚ್ಚಲ ಚಲನಚಿತ್ರಗಳು.
  • ಉದ್ಘಾಟನಾ ಚಿತ್ರ (ಇಂಡಿಯನ್ ಪನೋರಮಾ): ಅಮರನ್ (ತಮಿಳು), ನಿರ್ದೇಶಕ- ರಾಜ್‌ಕುಮಾರ್ ಪೆರಿಯಸಾಮಿ.
  • ಉದ್ಘಾಟನಾ ನಾನ್-ಫೀಚರ್ ಚಿತ್ರ: ಕಾಕೋರಿ.
  • ನ್ಯೂ ಹಾರಿಜಾನ್ಸ್: ಭಾರತೀಯ ಪನೋರಮಾ ಆಯ್ಕೆಯ ಹೊರಗೆ ಐದು ವಿಶೇಷವಾಗಿ ಆಯ್ದ ಚಲನಚಿತ್ರಗಳು (ವಿಶ್ವ, ಅಂತರರಾಷ್ಟ್ರೀಯ, ಏಷ್ಯನ್ ಅಥವಾ ಭಾರತದ ಪ್ರಥಮ ಪ್ರದರ್ಶನಗಳು).

ಮಹಿಳೆಯರು, ಚೊಚ್ಚಲ ಚಿತ್ರಗಳು ಮತ್ತು ಉದಯೋನ್ಮುಖ ಪ್ರತಿಭೆಗಳು

  • ಸಿನಿಮಾದಲ್ಲಿ ಮಹಿಳೆಯರು: ಮಹಿಳೆಯರು ನಿರ್ದೇಶಿಸಿದ 50+ ಚಲನಚಿತ್ರಗಳು; ಚೊಚ್ಚಲ ಚಲನಚಿತ್ರ ನಿರ್ಮಾತೃಗಳ 50+ ಕೃತಿಗಳು, ಉತ್ಸವದ ಒಳಗೊಳ್ಳುವಿಕೆ ಮತ್ತು ಉದಯೋನ್ಮುಖ ಪ್ರತಿಭೆಗಳ ಮೇಲಿನ ಗಮನವನ್ನು ಪ್ರತಿಬಿಂಬಿಸುತ್ತದೆ (ಅಂತರರಾಷ್ಟ್ರೀಯ ವಿಭಾಗ)
  • ಭಾರತೀಯ ಚಲನಚಿತ್ರದ ಅತ್ಯುತ್ತಮ ಚೊಚ್ಚಲ ನಿರ್ದೇಶಕ: ಪ್ರದರ್ಶಿಸಲಾಗುವ ಐದು ಆಯ್ದ ಚೊಚ್ಚಲ ಚಲನಚಿತ್ರಗಳು; ಪ್ರಶಸ್ತಿಯು ನಿರ್ದೇಶಕರಿಗೆ ಪ್ರಮಾಣಪತ್ರ ಮತ್ತು ರೂ. 5 ಲಕ್ಷ ನಗದು ಬಹುಮಾನವನ್ನು ಒಳಗೊಂಡಿದೆ.
  • ಅತ್ಯುತ್ತಮ ವೆಬ್ ಸರಣಿ (ಒಟಿಟಿ) ಪ್ರಶಸ್ತಿ: ಐದು ಅಂತಿಮ ಸ್ಪರ್ಧಿಗಳಿಂದ (30 ಸಲ್ಲಿಕೆಗಳಲ್ಲಿ ಆಯ್ಕೆಯಾದವರು), ವಿಜೇತರು ಪ್ರಮಾಣಪತ್ರ ಮತ್ತು 10 ಲಕ್ಷ ರೂ. ನಗದು ಬಹುಮಾನವನ್ನು ಪಡೆಯುತ್ತಾರೆ, ಇದನ್ನು ರಚನೆಕಾರರು ಮತ್ತು ನಿರ್ಮಾಪಕರು ಹಂಚಿಕೊಳ್ಳುತ್ತಾರೆ.

 

ನಾಳೆಯ ಸೃಜನಶೀಲ ಮನಸ್ಸುಗಳು (ಸಿ.ಎಂ.ಒ.ಟಿ)

  • CMOT 2025 ರಲ್ಲಿ 799 ನಮೂದುಗಳನ್ನು ಸ್ವೀಕರಿಸಲಾಯಿತು. ಆಯ್ಕೆಯಾದ ಭಾಗವಹಿಸುವವರ ಸಂಖ್ಯೆ 75 ರಿಂದ 124 ಕ್ಕೆ ಏರಿದೆ, ಈ ವರ್ಷ ಮೂರು ಹೊಸ ನಿರ್ಮಾಣ ಕಲೆಗಳು ಸೇರಿದಂತೆ 13 ಚಲನಚಿತ್ರ ನಿರ್ಮಾಣ ಕಲೆಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ಶಾರ್ಟ್ಸ್‌ ಟಿವಿ ಸಹಯೋಗದೊಂದಿಗೆ 48 ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲನ್ನು ಒಳಗೊಂಡಿದೆ.

 

ವೇವ್ಸ್ ಫಿಲ್ಮ್ ಬಜಾರ್

  • ವೇವ್ಸ್ ಫಿಲ್ಮ್ ಬಜಾರ್ (19 ನೇ ಆವೃತ್ತಿ): ಚಿತ್ರಕಥೆಗಾರರ ಲ್ಯಾಬ್, ಮಾರುಕಟ್ಟೆ ಪ್ರದರ್ಶನಗಳು, ವೀಕ್ಷಣಾ ಕೊಠಡಿ ಗ್ರಂಥಾಲಯ, ಸಹ-ನಿರ್ಮಾಣ ಮಾರುಕಟ್ಟೆ ವೈಶಿಷ್ಟ್ಯ ಮತ್ತು ಸಾಕ್ಷ್ಯಚಿತ್ರದಿಂದ 300 ಕ್ಕೂ ಹೆಚ್ಚು ಚಲನಚಿತ್ರ ಯೋಜನೆಗಳನ್ನು ನಿರ್ಮಾಣ, ವಿತರಣೆ ಮತ್ತು ಮಾರಾಟ ಸಹಯೋಗಗಳಿಗಾಗಿ ಪ್ರಸ್ತುತಪಡಿಸಲಾಗಿದೆ; ಬಜಾರ್ ದಕ್ಷಿಣ ಏಷ್ಯಾದಲ್ಲಿ ಪ್ರಮುಖ ಚಲನಚಿತ್ರ ಮಾರುಕಟ್ಟೆಯಾಗಿ ಬೆಳೆಯುತ್ತಲೇ ಇದೆ.
  • ವೇವ್ಸ್ ಫಿಲ್ಮ್ ಬಜಾರ್ ಸಹ-ನಿರ್ಮಾಣ ಮಾರುಕಟ್ಟೆ: 22 ಚಲನಚಿತ್ರಗಳು ಮತ್ತು 5 ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಮೂವರು ವಿಜೇತರು ಒಟ್ಟು $20,000 ನಗದು ಅನುದಾನವನ್ನು ಪಡೆಯುತ್ತಾರೆ (ಮೊದಲ ಬಹುಮಾನ: ಸಹ-ನಿರ್ಮಾಣ ಮಾರುಕಟ್ಟೆ - $10,000, 2ನೇ ಬಹುಮಾನ: ಸಹ-ನಿರ್ಮಾಣ ಮಾರುಕಟ್ಟೆ - $5,000. ಸಹ-ನಿರ್ಮಾಣ ಮಾರುಕಟ್ಟೆ ಸಾಕ್ಷ್ಯಚಿತ್ರ ಯೋಜನೆಗೆ ವಿಶೇಷ ನಗದು ಅನುದಾನ - $5,000).
  • ಈ ವರ್ಷದ ವೇವ್ಸ್ ಫಿಲ್ಮ್ ಬಜಾರ್ ಶಿಫಾರಸು (WFBR) ವಿಭಾಗವು 14 ಭಾಷೆಗಳು ಮತ್ತು 4 ದೇಶಗಳನ್ನು ಪ್ರತಿನಿಧಿಸುವ 3 ಕಿರುಚಿತ್ರಗಳು, 3 ಮಧ್ಯಮ-ಅವಧಿಯ ಸಾಕ್ಷ್ಯಚಿತ್ರಗಳು ಮತ್ತು 16 ಫಿಕ್ಷನ್ ಚಲನಚಿತ್ರಗಳನ್ನು ಒಳಗೊಂಡ 22 ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ ಮತ್ತು ಹಲವಾರು ಚೊಚ್ಚಲ ನಿರ್ದೇಶಕರನ್ನು ಹೈಲೈಟ್ ಮಾಡುತ್ತದೆ.
  • "ಜ್ಞಾನ ಸರಣಿ"ಯು ಪಿಚಿಂಗ್ ಗೋಷ್ಠಿಗಳು, ದೇಶ ಮತ್ತು ರಾಜ್ಯ ಪ್ರದರ್ಶನಗಳು ಮತ್ತು ನಿರ್ಮಾಣ ಮತ್ತು ವಿತರಣೆಯ ಕುರಿತು ಪ್ರಾಯೋಗಿಕ ಗೋಷ್ಠಿಗಳನ್ನು ಒಳಗೊಂಡಿರುತ್ತದೆ.
  • ವೇವ್ಸ್ ಫಿಲ್ಮ್ ಬಜಾರ್ ಪೆವಿಲಿಯನ್‌ ಗಳು ಮತ್ತು ಮಳಿಗೆಗಳು 7ಕ್ಕೂ ಹೆಚ್ಚು ದೇಶಗಳ ನಿಯೋಗಗಳಿಗೆ ಆತಿಥ್ಯ ನೀಡುತ್ತವೆ ಮತ್ತು 10ಕ್ಕೂ ಹೆಚ್ಚು ಭಾರತೀಯ ರಾಜ್ಯಗಳಿಂದ ಪ್ರೋತ್ಸಾಹಕಗಳನ್ನು ಪ್ರದರ್ಶಿಸುತ್ತವೆ. ಐದು ಪ್ರಮುಖ ತಂತ್ರಜ್ಞಾನ ಕಂಪನಿಗಳನ್ನು ಒಳಗೊಂಡ ಮೀಸಲಾದ ಟೆಕ್ ಪೆವಿಲಿಯನ್ ಪ್ರಮುಖ ಉದ್ಯಮ ಪಾಲುದಾರರ ಸಹಯೋಗದೊಂದಿಗೆ ವಿ ಎಫ್‌ ಎಕ್ಸ್, ಅನಿಮೇಷನ್, ಸಿಜಿಐ ಮತ್ತು ಇತರ ಚಲನಚಿತ್ರ ನಿರ್ಮಾಣ ತಂತ್ರಜ್ಞಾನಗಳಲ್ಲಿ ಅತ್ಯಾಧುನಿಕ ನಾವೀನ್ಯತೆಗಳನ್ನು ಪ್ರದರ್ಶಿಸುತ್ತದೆ.

ಮಾರುಕಟ್ಟೆ ಮತ್ತು ಸಹ-ನಿರ್ಮಾಣ ಅವಕಾಶಗಳು: ವೇವ್ಸ್ ಫಿಲ್ಮ್ ಬಜಾರ್ ನೆಟ್‌ವರ್ಕಿಂಗ್ ಕಾರ್ಯಕ್ರಗಳು ಚಲನಚಿತ್ರ ನಿರ್ಮಾತೃಗಳು, ನಿರ್ಮಾಪಕರು, ಮಾರಾಟ ಏಜೆಂಟರು, ಉತ್ಸವ ನಿರ್ವಾಹಕರು ಮತ್ತು ಹೂಡಿಕೆದಾರರನ್ನು ಒಟ್ಟುಗೂಡಿಸಿ ಸೃಜನಶೀಲ ಮತ್ತು ಆರ್ಥಿಕ ಸಹಯೋಗಗಳನ್ನು ಬೆಳೆಸುತ್ತವೆ.

 

ಮಾಸ್ಟರ್‌ ಕ್ಲಾಸ್‌, ಚರ್ಚೆ ಮತ್ತು ಸಂವಾದಾತ್ಮಕ ಕಾರ್ಯಕ್ರಮಗಳು

  • ಚಲನಚಿತ್ರ ಪ್ರೇಮಿಗಳು ಕಲಾ ಅಕಾಡೆಮಿಯಲ್ಲಿ 10 ಸ್ವರೂಪಗಳಲ್ಲಿ 21 ಮಾಸ್ಟರ್‌ ಕ್ಲಾಸ್‌ ಗಳು ಮತ್ತು ಚರ್ಚಾ ಗೋಷ್ಠಿಗಳನ್ನು ಎದುರು ನೋಡಬಹುದು, ಇದರಲ್ಲಿ ವಿಧು ವಿನೋದ್ ಚೋಪ್ರಾ, ಅನುಪಮ್ ಖೇರ್, ಕ್ರಿಸ್ಟೋಫರ್ ಚಾರ್ಲ್ಸ್ ಕಾರ್ಬೌಲ್ಡ್ ಒಬೆ, ಬಾಬಿ ಡಿಯೋಲ್, ಅಮೀರ್ ಖಾನ್, ರವಿ ವರ್ಮನ್, ಖುಶ್ಬೂ ಸುಂದರ್, ಸುಹಾಸಿನಿ ಮಣಿರತ್ನಂ, ಪೀಟ್ ಡ್ರೇಪರ್ ಮತ್ತು ಶ್ರೀಕರ್ ಪ್ರಸಾದ್ ಸೇರಿದಂತೆ ಇತರ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಡಿಜಿಟಲ್ ಯುಗದಲ್ಲಿ ಸಂಕಲನ ಮತ್ತು ನಟನೆಯಿಂದ ಹಿಡಿದು ಸುಸ್ಥಿರತೆ, ರಂಗಭೂಮಿ ನಟನೆ, ಎಐ ಮತ್ತು ವಿ ಎಫ್‌ ಎಕ್ಸ್ ತಂತ್ರಜ್ಞಾನಗಳವರೆಗೆ ಗೋಷ್ಠಿಗಳು ನಡೆಯಲಿವೆ.
  • ಶಾಂತಿಯನ್ನು ಉತ್ತೇಜಿಸುವಲ್ಲಿ ಸಿನಿಮಾದ ಪಾತ್ರ ಮತ್ತು ಚಲನಚಿತ್ರ ನಿರ್ಮಾಣದ ಸವಾಲುಗಳನ್ನು ಹೊಸ ಚರ್ಚಾ ಸಮಿತಿಗಳು ಚರ್ಚಿಸುತ್ತವೆ. "ಇನ್‌ ಕಾನ್ವರ್ಸೇಷನ್‌" ಗೋಷ್ಠಿಗಳು ಉದ್ಯಮದ ಪ್ರಸಿದ್ಧ ಕಲಾವಿದರು ಮತ್ತು ಚಲನಚಿತ್ರ ನಿರ್ಮಾಪಕರನ್ನು ಒಳಗೊಂಡಿರುತ್ತವೆ. ತಾಂತ್ರಿಕ ಗೋಷ್ಠಿನಗಳು ಸಂಕಲನ, ಛಾಯಾಗ್ರಹಣ, ವಿ ಎಫ್‌ ಎಕ್ಸ್ ಮತ್ತು ಎಸ್‌ ಎಫ್‌ ಎಕ್ಸ್‌ ಅನ್ನು ಹೈಲೈಟ್ ಮಾಡುತ್ತವೆ.

ಉತ್ಸವ ಸ್ಥಳಗಳು ಮತ್ತು ಪ್ರವೇಶ

  • ಐದು ಪ್ರಮುಖ ಸ್ಥಳಗಳಲ್ಲಿ ಚಲನಚಿತ್ರ ಪ್ರದರ್ಶನ ಮತ್ತು ಕಾರ್ಯಕ್ರಮಗಳು ನಡೆಯಲಿವೆ: ಐನಾಕ್ಸ್ ಪಣಜಿ, ಮಕ್ವಿನೆಜ್ ಪ್ಯಾಲೇಸ್, ಐನಾಕ್ಸ್ ಪೊರ್ವೊರಿಮ್, ಝಡ್-ಸ್ಕ್ವೇರ್ ಸಾಮ್ರಾಟ್ ಅಶೋಕ್ ಮತ್ತು ಮಡ್ಗಾಂವ್‌ ನ ರವೀಂದ್ರ ಭವನ. ಮಿರಾಮಾರ್ ಬೀಚ್, ರವೀಂದ್ರ ಭವನ ಫಟೋರ್ಡಾ ಮತ್ತು ಅಂಜುನಾ ಬೀಚ್‌ ನಲ್ಲಿ ತೆರೆದ ಪ್ರದರ್ಶನಗಳು ನಡೆಯಲಿವೆ.
  • ಉತ್ಸವದ ಸಮಗ್ರ ಭಾಗವಹಿಸುವಿಕೆಯ ಬದ್ಧತೆಗೆ ಅನುಗುಣವಾಗಿ, ಎಲ್ಲಾ ಸ್ಥಳಗಳು ಸುಗಮ ಪ್ರವೇಶದ ಕ್ರಮಗಳನ್ನು ಹೊಂದಿವೆ - ಆಡಿಯೋ ವಿವರಣೆಗಳು, ಸಂಕೇತ ಭಾಷೆಯ ವ್ಯಾಖ್ಯಾನ ಮತ್ತು ಬಹುಭಾಷಾ ಡಬ್ಬಿಂಗ್.

 

ಅಂತರರಾಷ್ಟ್ರೀಯ ಸ್ಪರ್ಧೆಯ ತೀರ್ಪುಗಾರರ ಸಮಿತಿ - 56 ನೇ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

  • ಅಧ್ಯಕ್ಷರು:

ರಾಕೇಶ್ ಓಂಪ್ರಕಾಶ್ ಮೆಹ್ರಾ (ಭಾರತ)

  • ಸದಸ್ಯರು:
  • ಗ್ರೇಮ್ ಕ್ಲಿಫರ್ಡ್, ಸಂಕಲನಕಾರರು ಮತ್ತು ನಿರ್ದೇಶಕರು (ಆಸ್ಟ್ರೇಲಿಯಾ)
  • ರೆಮಿ ಅಡೆಫರಾಸಿನ್, ಛಾಯಾಗ್ರಾಹಕರು (ಇಂಗ್ಲೆಂಡ್)
  • ಕ್ಯಾಥರೀನಾ ಷುಟ್ಲರ್, ನಟಿ (ಜರ್ಮನಿ)
  • ಚಂದ್ರನ್ ರುಟ್ನಮ್, ಚಲನಚಿತ್ರ ನಿರ್ಮಾತೃ (ಶ್ರೀಲಂಕಾ)

 

ಪಟ್ಟಿಯಲ್ಲಿ ಗಮನಾರ್ಹ ಚಲನಚಿತ್ರಗಳು ಮತ್ತು ಪ್ರಶಸ್ತಿ ವಿಜೇತರು

ಈ ಚಲನಚಿತ್ರೋತ್ಸವವು ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತರು ಮತ್ತು ಚಲನಚಿತ್ರೋತ್ಸವದ ನೆಚ್ಚಿನ ಚಲನಚಿತ್ರಗಳನ್ನು ಪ್ರದರ್ಶಿಸುತ್ತದೆ, ಇದರಲ್ಲಿ ಕೇನ್ಸ್, ಬರ್ಲಿನ್, ಲೊಕಾರ್ನೊ ಮತ್ತು ವೆನಿಸ್‌ ನಲ್ಲಿ ಗೆದ್ದ ಚಿತ್ರಗಳು ಸೇರಿವೆ, ಇದು ಅತ್ಯುತ್ತಮ ಸಿನಿಮಾಗಳಿಗೆ ಜಾಗತಿಕ ಸಭೆಯ ಸ್ಥಳವಾಗಿ ಐ.ಎಫ್‌.ಎಫ್‌.ಐ ಪಾತ್ರವನ್ನು ಬಲಪಡಿಸುತ್ತದೆ. ಅಂತಹ ಕೆಲವು ಹೆಸರುಗಳು ಹೀಗಿವೆ: ಇಟ್ ವಾಸ್ ಜಸ್ಟ್ ಆನ್ ಆಕ್ಸಿಡೆಂಟ್ (ಪಾಮ್ ಡಿ'ಓರ್, ಕೇನ್ಸ್), ಫಾದರ್ ಮದರ್ ಸಿಸ್ಟರ್ ಬ್ರದರ್ (ಗೋಲ್ಡನ್ ಲಯನ್, ವೆನಿಸ್), ಡ್ರೀಮ್ಸ್ (ಸೆಕ್ಸ್ ಲವ್) (ಗೋಲ್ಡನ್ ಬೇರ್, ಬರ್ಲಿನ್), ಸಿರಾಟ್ (ಗ್ರ್ಯಾಂಡ್ ಜ್ಯೂರಿ ಪ್ರಶಸ್ತಿ, ಕೇನ್ಸ್), ದಿ ಮೆಸೇಜ್ (ಸಿಲ್ವರ್ ಬೇರ್, ಜ್ಯೂರಿ ಪ್ರಶಸ್ತಿ, ಬರ್ಲಿನ್), ನೋ ಅದರ್ ಚಾಯ್ಸ್ (ಪೀಪಲ್ಸ್ ಚಾಯ್ಸ್ ಪ್ರಶಸ್ತಿ, ಟಿ‌ ಐ ಎಫ್‌ ಎಫ್), ಗ್ಲೋಮಿಂಗ್ ಇನ್ ಲುವೋಮು (ಅತ್ಯುತ್ತಮ ಚಿತ್ರ, ಬುಸಾನ್), ಫಿಯುಮೆ ಒ ಮಾರ್ಟೆ! (ಟೈಗರ್ ಪ್ರಶಸ್ತಿ, ಐ ಎಫ್‌ ಎಫ್‌ ಆರ್).


ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐ.ಎಫ್‌.ಎಫ್‌.ಐ)

1952 ರಲ್ಲಿ ಸ್ಥಾಪನೆಯಾದ ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು, ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಗೋವಾ ಸರ್ಕಾರವು ಆಯೋಜಿಸುವ ದೇಶದ ಪ್ರಮುಖ ಚಲನಚಿತ್ರೋತ್ಸವವಾಗಿದೆ. ಇದು ಜಾಗತಿಕ ವೇದಿಕೆಯಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಪ್ರತಿಭೆಯನ್ನು ಉತ್ತೇಜಿಸುವುದರ ಜೊತೆಗೆ ವಿಶ್ವ ಸಿನೆಮಾದ ಶ್ರೇಷ್ಠತೆಯನ್ನು ಆಚರಿಸುವ ಗುರಿಯನ್ನು ಹೊಂದಿದೆ. ಗೋವಾದಲ್ಲಿ ವಾರ್ಷಿಕವಾಗಿ ನಡೆಯುವ ಐ.ಎಫ್‌.ಎಫ್‌.ಐ, ಸೃಜನಶೀಲ ವಿನಿಮಯ, ಹೊಸ ಪ್ರತಿಭೆಗಳ ಆವಿಷ್ಕಾರ ಮತ್ತು ಸಿನೆಮಾ ಕಲೆಯ ಮೂಲಕ ಸಾಂಸ್ಕೃತಿಕ ತಿಳುವಳಿಕೆಯನ್ನು ಬೆಳೆಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (ಎನ್‌.ಎಫ್‌.ಡಿ.ಸಿ)

ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಸಾರ್ವಜನಿಕ ವಲಯದ ಉದ್ಯಮವಾಗಿದೆ. 1975 ರಲ್ಲಿ ಸ್ಥಾಪನೆಯಾದ ಎನ್‌ ಎಫ್‌ ಡಿ ಸಿ, ಭಾರತೀಯ ಸಿನಿಮಾವನ್ನು ಉತ್ತೇಜಿಸುವಲ್ಲಿ, ಸ್ವತಂತ್ರ ಚಲನಚಿತ್ರ ನಿರ್ಮಾತೃಗಳನ್ನು ಬೆಂಬಲಿಸುವಲ್ಲಿ ಮತ್ತು ಅಂತರರಾಷ್ಟ್ರೀಯ ಪಾಲುದಾರರೊಂದಿಗೆ ಸಹ-ನಿರ್ಮಾಣಗಳನ್ನು ಸುಗಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಭಾರತೀಯ ಸೃಷ್ಟಿಕರ್ತರನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ, ಭಾರತದ ಸೃಜನಶೀಲ ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸುವ ಫಿಲ್ಮ್ ಬಜಾರ್ (ಈಗ ವೇವ್ಸ್ ಬಜಾರ್) ಅನ್ನು ಸಹ ನಿರ್ವಹಿಸುತ್ತದೆ.

****


(Release ID: 2187658) Visitor Counter : 8