ಗೃಹ ವ್ಯವಹಾರಗಳ ಸಚಿವಾಲಯ  
                
                
                
                
                
                    
                    
                        ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಬಿಹಾರದ ಪಾಟ್ನಾದಲ್ಲಿ, ರಾಷ್ಟ್ರೀಯ ಏಕತಾ ದಿವಸ್ - 2025ರ ನಿಮಿತ್ತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಕುರಿತು ಮಾಧ್ಯಮ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು
                    
                    
                        
ಸ್ವಾತಂತ್ರ್ಯ ಚಳವಳಿಯ ಸಂಘಟನಾತ್ಮಕ ಬೆನ್ನೆಲುಬಾಗಿದ್ದ ಸರ್ದಾರ್ ಪಟೇಲ್ ಅವರು ನಮ್ಮ ದೇಶಕ್ಕೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ಸಿದ್ಧಾಂತ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕ್ಟೋಬರ್ 31ರಂದು ಏಕತಾ ನಗರದಲ್ಲಿ ನಡೆಯಲಿರುವ ಭವ್ಯ ಪರೇಡ್ ನಲ್ಲಿ ಗೌರವ ವಂದನೆ ಸ್ವೀಕರಿಸಲಿದ್ದಾರೆ
ಈ ರಾಷ್ಟ್ರೀಯ ಪರೇಡ್ ನಲ್ಲಿ, ಸಿಎಪಿಎಫ್ ಗಳು, ವಿವಿಧ ರಾಜ್ಯ ಪೊಲೀಸ್ ಪಡೆಗಳು ಮತ್ತು 900ಕ್ಕೂ ಹೆಚ್ಚು ಕಲಾವಿದರು ತಮ್ಮ ಕೌಶಲ್ಯ, ಶಿಸ್ತು, ಶೌರ್ಯ ಮತ್ತು ಪರಂಪರೆಯನ್ನು ಪ್ರದರ್ಶಿಸಲಿದ್ದಾರೆ
‘ಏಕ್ ಭಾರತ್, ಶ್ರೇಷ್ಠ ಭಾರತ್’ ಪರಿಕಲ್ಪನೆಗೆ ಜೀವ ತುಂಬುವ ಈ ಪರೇಡ್ ಅನ್ನು ಇನ್ನುಮುಂದೆ ಪ್ರತಿ ವರ್ಷ ಅಕ್ಟೋಬರ್ 31ರಂದು ಆಯೋಜಿಸಲಾಗುವುದು
ಸರ್ದಾರ್ ಸಾಹೇಬರು ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜಯಂತಿಯ ಸ್ಮರಣಾರ್ಥ, ಏಕತಾ ನಗರದಲ್ಲಿ ನವೆಂಬರ್ 1 - 15ರ ವರೆಗೆ 'ಭಾರತ ಪರ್ವ' ಆಯೋಜಿಸಲಾಗುವುದು
562 ಸಂಸ್ಥಾನಗಳನ್ನು ಒಗ್ಗೂಡಿಸುವ ಬೃಹತ್ ಕಾರ್ಯವನ್ನು ಸರ್ದಾರ್ ಪಟೇಲ್ ಅವರು ಸಾಧಿಸಿದರು; ಇಂದು ನಮ್ಮ ಮುಂದಿರುವ ಪ್ರಸ್ತುತ ಭಾರತದ ನಕ್ಷೆಯು ಅವರ ದೃಷ್ಟಿ ಮತ್ತು ಪ್ರಯತ್ನಗಳ ಫಲವಾಗಿದೆ
ಭೋಪಾಲ್, ಕಾಠಿಯಾವಾಡ್, ತಿರುವಾಂಕೂರ್, ಮತ್ತು ಜೋಧಪುರದಲ್ಲಿನ ಸಮಸ್ಯೆಗಳನ್ನು ಸರ್ದಾರ್ ಪಟೇಲ್ ಅವರು ಬಗೆಹರಿಸಿದರು ಮತ್ತು ಕಾರಿಡಾರ್ ರಚಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ವಿಫಲಗೊಳಿಸಿದರು
ಸರ್ದಾರ್ ಪಟೇಲ್ ಅವರ ನಿಧನದ ನಂತರ, ವಿರೋಧ ಪಕ್ಷಗಳು ಅವರ ಪರಂಪರೆಯನ್ನು ಅಳಿಸಲು ಪ್ರಯತ್ನಿಸುವಲ್ಲಿ ಯಾವುದೇ ಅವಕಾಶವನ್ನು ಬಿಡಲಿಲ್ಲ, ಅವರಂತಹ ಮಹಾನ್ ವ್ಯಕ್ತಿತ್ವಕ್ಕೆ ಭಾರತ ರತ್ನ ಪ್ರಶಸ್ತಿ ನೀಡಲು 41 ವರ್ಷಗಳು ಬೇಕಾಯಿತು
'ಏಕತಾ ಪ್ರತಿಮೆ'ಯು ಭಾರತದ ಇಂಜಿನಿಯರಿಂಗ್ ಅದ್ಭುತವಾಗಿ ಸ್ಥಾಪಿತವಾಗಿದೆ
ಪ್ರಧಾನಮಂತ್ರಿ ಶ್ರೀ ಮೋದಿ ಅವರು ಏಕತಾ ಪ್ರತಿಮೆಯ ಸುತ್ತ 14 ವಿವಿಧ ಪ್ರವಾಸಿ ಆಕರ್ಷಣೆಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಈ ಸ್ಥಳವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಮಾಡಿದ್ದಾರೆ
                    
                
                
                    Posted On:
                30 OCT 2025 3:05PM by PIB Bengaluru
                
                
                
                
                
                
                ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಬಿಹಾರದ ಪಾಟ್ನಾದಲ್ಲಿ, ರಾಷ್ಟ್ರೀಯ ಏಕತಾ ದಿವಸ್- 2025ರ ಸಂದರ್ಭದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ವರ್ಷಾಚರಣೆಗೆ ಸಂಬಂಧಿಸಿದಂತೆ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಶ್ರೀ ಅಮಿತ್ ಶಾ ಅವರು, ಸ್ವಾತಂತ್ರ್ಯದ ನಂತರ ದೇಶವನ್ನು ಒಗ್ಗೂಡಿಸುವಲ್ಲಿ, ಇಂದಿನ ಭಾರತವನ್ನು ನಿರ್ಮಿಸುವಲ್ಲಿ ಮತ್ತು ಅಖಂಡ ದೇಶವನ್ನು ರಚಿಸುವಲ್ಲಿ ಸರ್ದಾರ್ ಪಟೇಲ್ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. 2014ರಿಂದ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿ ವರ್ಷ ಅಕ್ಟೋಬರ್ 31ರಂದು ಕೆವಾಡಿಯಾಗೆ ಆಗಮಿಸುತ್ತಿದ್ದು, ಅಲ್ಲಿ ಸರ್ದಾರ್ ಪಟೇಲ್ ಅವರ ಭವ್ಯ ಪ್ರತಿಮೆಯ ಮುಂದೆ ಬೃಹತ್ ಪರೇಡ್ ನಡೆಯುತ್ತದೆ ಎಂದು ಅವರು ಹೇಳಿದರು. ಈ ವರ್ಷ, ಸರ್ದಾರ್ ಪಟೇಲ್ ಅವರ 150ನೇ ಜಯಂತಿ ಸಂದರ್ಭದಲ್ಲಿ, ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಮತ್ತು ಪ್ರತಿ ವರ್ಷ ಅಕ್ಟೋಬರ್ 31ರಂದು ಬೃಹತ್ ಪರೇಡ್ ನಡೆಸಲು ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು ಪುನರುಚ್ಚರಿಸಲು ಎಲ್ಲಾ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳನ್ನು (CAPF) ಮತ್ತು ರಾಜ್ಯಗಳ ಪೊಲೀಸ್ ಪಡೆಗಳನ್ನು ಗೌರವಿಸಲು ಈ ಪರೇಡ್ ಆಯೋಜಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಭಾರತದ ಏಕತೆ ಮತ್ತು ಸಮಗ್ರತೆಯ ಸಂಕೇತವಾಗಿರುವ ಸರ್ದಾರ್ ಪಟೇಲ್ ಅವರ ಪ್ರತಿಮೆಯ ಮುಂದೆ ಈ ಪರೇಡ್ ನಡೆಯಲಿದೆ ಎಂದು ಅವರು ಹೇಳಿದರು.
ಈ ವರ್ಷ, 'ಏಕತೆಗಾಗಿ ಓಟ'ವನ್ನು (Run for Unity) ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದರು. ದೇಶಾದ್ಯಂತ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಜಿಲ್ಲಾ ಪೊಲೀಸ್ ಠಾಣೆಗಳು, ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಈ ಓಟವನ್ನು ಆಯೋಜಿಸಲಾಗುತ್ತಿದೆ. ಓಟದ ನಂತರ, ಪ್ರತಿಯೊಬ್ಬ ನಾಗರಿಕನು ರಾಷ್ಟ್ರದ ಏಕತೆ ಮತ್ತು ಸಮಗ್ರತೆಗಾಗಿ 'ಏಕತಾ ಪ್ರತಿಜ್ಞೆ'ಯನ್ನು ತೆಗೆದುಕೊಳ್ಳುತ್ತಾನೆ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಏಕತಾ ನಗರದಲ್ಲಿ ನವೆಂಬರ್ 1 ರಿಂದ 'ಭಾರತ ಪರ್ವ'ವನ್ನು ಆಯೋಜಿಸಲಾಗುತ್ತಿದೆ ಮತ್ತು ಇದು ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯೊಂದಿಗೆ ಸೇರಿಕೊಳ್ಳುವಂತೆ ನವೆಂಬರ್ 15ರಂದು ಮುಕ್ತಾಯಗೊಳ್ಳಲಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ನವೆಂಬರ್ 15ರಂದು ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮಗಳ ಭವ್ಯ ಆಚರಣೆಯೊಂದಿಗೆ ಭಾರತ್ ಪರ್ವವು ಮುಕ್ತಾಯಗೊಳ್ಳಲಿದೆ. ಈ ಕಾರ್ಯಕ್ರಮವು ದೇಶಾದ್ಯಂತದ ಬುಡಕಟ್ಟುಗಳ ಸಾಂಸ್ಕೃತಿಕ ವೈವಿಧ್ಯತೆ, ಆಹಾರ, ಉಡುಪು, ಕರಕುಶಲ ವಸ್ತುಗಳು, ಜಾನಪದ ಕಲೆ ಮತ್ತು ಸಂಗೀತದ ಅದ್ಭುತ ಸಮ್ಮಿಲನವನ್ನು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.
ಸರ್ದಾರ್ ಪಟೇಲ್ ಅವರು ನಮ್ಮ ರಾಷ್ಟ್ರಕ್ಕೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಂದು ಸಿದ್ಧಾಂತ ಎಂದು ಹೇಳಿದರು. ಸರ್ದಾರ್ ಪಟೇಲ್ ಅವರು ಸಂಪೂರ್ಣವಾಗಿ ದೇಶಕ್ಕೆ ಸಮರ್ಪಿತರಾಗಿದ್ದರು, ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಮಾತ್ರವಲ್ಲದೆ, ಮಹಾತ್ಮ ಗಾಂಧಿಯವರೊಂದಿಗೆ ಕೆಲಸ ಮಾಡುತ್ತಾ ಚಳವಳಿಯ ಸಂಘಟನಾತ್ಮಕ ಬೆನ್ನೆಲುಬಾಗಿದ್ದರು ಎಂದು ಅವರು ಹೇಳಿದರು. ರೈತರ ಶೋಷಣೆಯನ್ನು ವಿರೋಧಿಸಿ 1928ರ ಬಾರ್ಡೋಲಿ ಸತ್ಯಾಗ್ರಹವನ್ನು ಬ್ರಿಟಿಷರ ವಿರುದ್ಧ ಪ್ರಾರಂಭಿಸಲಾಯಿತು, ಮತ್ತು ಈ ಚಳವಳಿಯ ಸಮಯದಲ್ಲಿಯೇ ಮಹಾತ್ಮ ಗಾಂಧಿಯವರು ಸ್ವತಃ ಅವರಿಗೆ ‘ಸರ್ದಾರ್’ ಎಂಬ ಬಿರುದು ನೀಡಿದರು. ಭಾರತದ ಸ್ವಾತಂತ್ರ್ಯದ ನಂತರ, ಬ್ರಿಟಿಷರು ದೇಶವನ್ನು 562 ಸಂಸ್ಥಾನಗಳಾಗಿ ವಿಭಜಿಸಿ ಬಿಟ್ಟುಹೋಗಲು ನಿರ್ಧರಿಸಿದ್ದರು. ಆ ಸಮಯದಲ್ಲಿ, ಈ 562 ಸಂಸ್ಥಾನಗಳನ್ನು ಒಂದೇ ರಾಷ್ಟ್ರವಾಗಿ ಒಗ್ಗೂಡಿಸುವುದು ಅಸಾಧ್ಯವೆಂದು ಇಡೀ ಜಗತ್ತು ಭಾವಿಸಿತ್ತು. ಆದಾಗ್ಯೂ, ಕಡಿಮೆ ಅವಧಿಯಲ್ಲಿ, ಸರ್ದಾರ್ ಪಟೇಲ್ ಅವರು ಎಲ್ಲಾ 562 ಸಂಸ್ಥಾನಗಳನ್ನು ಒಗ್ಗೂಡಿಸುವ ಬೃಹತ್ ಕಾರ್ಯವನ್ನು ಸಾಧಿಸಿದರು ಮತ್ತು ಇಂದು ನಾವು ನೋಡುತ್ತಿರುವ ಆಧುನಿಕ ಭಾರತದ ನಕ್ಷೆಯು ಅವರ ದೃಷ್ಟಿ ಮತ್ತು ಪ್ರಯತ್ನಗಳ ಫಲವಾಗಿದೆ.
ಹೈದರಾಬಾದ್ ನಲ್ಲಿನ ಪೊಲೀಸ್ ಕಾರ್ಯಾಚರಣೆ ಮತ್ತು ಜುನಾಗಢದ ವಿಲೀನ ಸೇರಿದಂತೆ ಸರ್ದಾರ್ ಪಟೇಲ್ ಅವರು ಒಂದರ ನಂತರ ಒಂದರಂತೆ ಸವಾಲುಗಳನ್ನು ಪರಿಹರಿಸಿದರು. ಭೋಪಾಲ್, ಕಾಠಿಯಾವಾಡ್, ತಿರುವಾಂಕೂರ್, ಅಥವಾ ಜೋಧಪುರವೇ ಇರಲಿ, ಸರ್ದಾರ್ ಪಟೇಲ್ ಅವರು ಪ್ರತಿಯೊಂದು ಸಮಸ್ಯೆಯನ್ನು ದೃಢಸಂಕಲ್ಪದಿಂದ ಬಗೆಹರಿಸಿದರು ಮತ್ತು ಭಾರತದ ಭೂಪ್ರದೇಶದ ಮೂಲಕ ಕಾರಿಡಾರ್ ರಚಿಸುವ ಪಾಕಿಸ್ತಾನದ ಪ್ರಯತ್ನವನ್ನು ಸಹ ವಿಫಲಗೊಳಿಸಿದರು ಎಂದು ಅವರು ಹೇಳಿದರು.
ಪ್ರಚಾರ ಅಥವಾ ವೈಯಕ್ತಿಕ ವೈಭವದ ಯಾವುದೇ ಆಸೆಯಿಲ್ಲದೆ, ತಮ್ಮ ಇಡೀ ಜೀವನವನ್ನು ರಾಷ್ಟ್ರಕ್ಕಾಗಿ ಬದುಕಿದ ವ್ಯಕ್ತಿಗೆ ಸರ್ದಾರ್ ಪಟೇಲ್ ಅಸಾಧಾರಣ ಉದಾಹರಣೆಯಾಗಿದ್ದಾರೆ. 15 ಆಗಸ್ಟ್ 1947ರಂದು, ಇಡೀ ದೇಶವು ಸ್ವಾತಂತ್ರ್ಯವನ್ನು ಆಚರಿಸುತ್ತಾ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಾಗ, ಸರ್ದಾರ್ ಪಟೇಲ್ ಅವರು ನೌಕಾ ಅಧಿಕಾರಿಗಳೊಂದಿಗೆ ಕಮಾಂಡ್ ರೂಮ್ ನಲ್ಲಿದ್ದರು, ಲಕ್ಷದ್ವೀಪವು ಭಾರತದ ಭಾಗವಾಗುವುದನ್ನು ಖಚಿತಪಡಿಸಿದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದರು ಎಂದು ಅವರು ಹೇಳಿದರು. ಈ ಕಾರ್ಯಾಚರಣೆಯು ಭಾರತದ ದಕ್ಷಿಣದ ಗಡಿಗಳನ್ನು ಬಲಪಡಿಸಿತು ಮತ್ತು ಸರ್ದಾರ್ ಪಟೇಲ್ ಅವರ ದೂರದೃಷ್ಟಿ ಮತ್ತು ಕ್ರಿಯೆಯಿಂದಾಗಿಯೇ ಲಕ್ಷದ್ವೀಪದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು ಎಂದು ಅವರು ಹೇಳಿದರು.
ಸರ್ದಾರ್ ಪಟೇಲ್ ಅವರ ನಿಧನದ ನಂತರ, ವಿರೋಧ ಪಕ್ಷಗಳು ಅವರ ಪರಂಪರೆಯನ್ನು ಅಳಿಸಲು ಎಲ್ಲಾ ಅವಕಾಶಗಳನ್ನು ಬಳಸಲು ಪ್ರಯತ್ನಿಸಿದ್ದು ದುರದೃಷ್ಟಕರ. ಸರ್ದಾರ್ ಪಟೇಲ್ ಅವರಂತಹ ಮಹಾನ್ ವ್ಯಕ್ತಿತ್ವಕ್ಕೆ 41 ವರ್ಷಗಳ ವಿಳಂಬದ ನಂತರ ಭಾರತ ರತ್ನ ನೀಡಲಾಯಿತು ಮತ್ತು ಈ ವಿಳಂಬಕ್ಕೆ ವಿರೋಧ ಪಕ್ಷಗಳಿಗೆ ಸರ್ದಾರ್ ಪಟೇಲ್ ಬಗ್ಗೆ ಇದ್ದ ಅಗೌರವವೇ ಕಾರಣ ಎಂದು ಅವರು ಹೇಳಿದರು. ಸರ್ದಾರ್ ಪಟೇಲ್ ಅವರಂತಹ ಮಹಾನ್ ವ್ಯಕ್ತಿಗಾಗಿ ದೇಶದಲ್ಲಿ ಎಲ್ಲಿಯೂ ಸ್ಮಾರಕ ನಿರ್ಮಿಸಲಾಗಿಲ್ಲ ಎಂದು ಅವರು ಹೇಳಿದರು. ಶ್ರೀ ನರೇಂದ್ರ ಮೋದಿಯವರು ಗುಜರಾತ್ ನ ಮುಖ್ಯಮಂತ್ರಿಯಾದಾಗ ಮಾತ್ರ ಅವರು 'ಏಕತಾ ಪ್ರತಿಮೆ'ಯ ಪರಿಕಲ್ಪನೆ ರೂಪಿಸಿ ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ಭವ್ಯ ಸ್ಮಾರಕ ನಿರ್ಮಿಸಿದರು. ಏಕತಾ ಪ್ರತಿಮೆಗೆ ಅಕ್ಟೋಬರ್ 31, 2013ರಂದು ಅಡಿಗಲ್ಲು ಹಾಕಲಾಯಿತು ಎಂದು ಅವರು ಹೇಳಿದರು. 182 ಮೀಟರ್ ಎತ್ತರದ ಪ್ರತಿಮೆಯು ಕೇವಲ 57 ತಿಂಗಳಲ್ಲಿ ಪೂರ್ಣಗೊಂಡಿತು. ಸರ್ದಾರ್ ಪಟೇಲ್ ಅವರ ಜೀವನವು ರೈತರಿಗೆ ಸಮರ್ಪಿತವಾಗಿತ್ತು ಮತ್ತು ಈ ಪ್ರತಿಮೆಯನ್ನು ನಿರ್ಮಿಸಲು ಬಳಸಿದ ಕಬ್ಬಿಣವನ್ನು ದೇಶಾದ್ಯಂತದ ರೈತರ ಉಪಕರಣಗಳಿಂದ ಸಂಗ್ರಹಿಸಲಾಗಿದೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಈ ಉಪಕರಣಗಳನ್ನು ಸಂಗ್ರಹಿಸಿ, ಕರಗಿಸಿ, ಪ್ರತಿಮೆಯ ನಿರ್ಮಾಣದಲ್ಲಿ ಬಳಸಿದ ಸುಮಾರು 25,000 ಟನ್ ಕಬ್ಬಿಣವನ್ನು ಉತ್ಪಾದಿಸಲಾಯಿತು. 90,000 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಮತ್ತು 1,700 ಟನ್ ಗೂ ಹೆಚ್ಚು ಕಂಚನ್ನು ಬಳಸಿ, ಈ ಅವಿಸ್ಮರಣೀಯ ಸ್ಮಾರಕವನ್ನು ರಚಿಸಲಾಗಿದೆ, ಇದು ಈಗ ಸರ್ದಾರ್ ಪಟೇಲ್ ಅವರಿಗೆ ಗೌರವ ಸಲ್ಲಿಸುವ ಒಂದು ಪ್ರಮುಖ ತಾಣವಾಗಿದೆ. ಪ್ರತಿದಿನ ಸುಮಾರು 15,000 ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ ಮತ್ತು ಇಲ್ಲಿಯವರೆಗೆ, ಭಾರತ ಮತ್ತು ವಿದೇಶಗಳಿಂದ 2.5 ಕೋಟಿಗೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ ಎಂದು ಹೇಳಿದರು. ಏಕತಾ ಪ್ರತಿಮೆಯು ಭಾರತೀಯ ಇಂಜಿನಿಯರಿಂಗ್ ನ ನಿಜವಾದ ಅದ್ಭುತವಾಗಿ ಹೊರಹೊಮ್ಮಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಏಕತಾ ಪ್ರತಿಮೆಯ ಸುತ್ತ 14 ಹೆಚ್ಚುವರಿ ಪ್ರವಾಸಿ ಆಕರ್ಷಣೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಇದು ಒಂದು ಪ್ರಮುಖ ಪ್ರವಾಸಿ ತಾಣವಾಗಿ ರೂಪಾಂತರಗೊಂಡಿದೆ ಎಂದು ಅವರು ಹೇಳಿದರು. ಇವುಗಳಲ್ಲಿ ಹೂಗಳ ಕಣಿವೆ (Valley of Flowers), ಏಕತಾ ನಗರ ಟೌನ್ ಶಿಪ್, ಲೇಕ್ ಸರ್ಕ್ಯೂಟ್, ಬೆಳಕು ಮತ್ತು ಧ್ವನಿ ಪ್ರದರ್ಶನ, ಪಟೇಲ್ ಗಾರ್ಡನ್, ಏಕತಾ ಕ್ರೂಸ್, ಬಟರ್ಫ್ಲೈ ಗಾರ್ಡನ್, ಜಂಗಲ್ ಸಫಾರಿ, ಏಕತಾ ಮಾಲ್ ಮತ್ತು ಗ್ಲೋ ಟಾರ್ಚ್ ವ್ಯೂ ಪಾಯಿಂಟ್ ಸೇರಿವೆ.
ಅಕ್ಟೋಬರ್ 31ರಂದು ಬೆಳಗ್ಗೆ ಏಕತಾ ನಗರದಲ್ಲಿ ನಡೆಯಲಿರುವ ಭವ್ಯ ಪರೇಡ್ ನ ಗೌರವ ವಂದನೆಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವೀಕರಿಸಲಿದ್ದಾರೆ ಎಂದು ಶ್ರೀ ಅಮಿತ್ ಶಾ ಅವರು ತಿಳಿಸಿದರು. ಈ ರಾಷ್ಟ್ರೀಯ ಪರೇಡ್ ನಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (ಸಿ ಎ ಪಿ ಎಫ್) ಮತ್ತು ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು ತಮ್ಮ ಕೌಶಲ್ಯ, ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಲಿವೆ ಎಂದು ಅವರು ಹೇಳಿದರು. ಈ ವರ್ಷದ ಪರೇಡ್ ನಲ್ಲಿ ಸಿ ಆರ್ ಪಿ ಎಫ್ ನ 5 ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತರು ಮತ್ತು ಬಿ ಎಸ್ ಎಫ್ ನ 16 ಶೌರ್ಯ ಪದಕ ವಿಜೇತರು ಸಹ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು. ಪರೇಡ್ ನ ನೇತೃತ್ವವನ್ನು ಮಹಿಳಾ ಪೊಲೀಸ್ ಅಧಿಕಾರಿಗಳು ವಹಿಸಲಿದ್ದು, ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಇರಲಿವೆ. ರಾಜ್ಯ ಪೊಲೀಸ್ ಪಡೆಗಳು ಮತ್ತು ಸಿ ಎ ಪಿ ಎಫ್ ಸಿಬ್ಬಂದಿ ಕೂಡ ತಮ್ಮ ಸಾಂಸ್ಕೃತಿಕ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ ಎಂದು ಅವರು ಹೇಳಿದರು. ಬಿ ಎಸ್ ಎಫ್ ನ ಒಂಟೆ ತುಕಡಿ ಮತ್ತು ಒಂಟೆ ಮೇಲಿನ ಬ್ಯಾಂಡ್ ಪರೇಡ್ ಗೆ ಮೆರಗು ನೀಡಲಿದ್ದು, ಗುಜರಾತ್ ನ ಅಶ್ವದಳ ತುಕಡಿ, ಅಸ್ಸಾಂ ಪೊಲೀಸ್ ನ ಮೋಟಾರ್ ಸೈಕಲ್ ಡೇರ್ ಡೆವಿಲ್ ಶೋ ಹಾಗೂ ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರೂ ಪರೇಡ್ ನಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಎನ್ ಎಸ್ ಜಿ, ಎನ್ ಡಿ ಆರ್ ಎಫ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೊಲೀಸ್, ಪುದುಚೇರಿ ಪೊಲೀಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಗಳು ಕಾರ್ಯಕ್ರಮದ ಸಮಯದಲ್ಲಿ ತಮ್ಮ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಿವೆ. ಭಾರತೀಯ ವಾಯುಪಡೆಯ 'ಸೂರ್ಯ ಕಿರಣ್' ತಂಡದ ಅದ್ಭುತ ವೈಮಾನಿಕ ಪ್ರದರ್ಶನವು ಪರೇಡ್ ನ ಪ್ರಮುಖ ಆಕರ್ಷಣೆಯಾಗಿರಲಿದೆ. ದೇಶಾದ್ಯಂತ 900ಕ್ಕೂ ಹೆಚ್ಚು ಕಲಾವಿದರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ರಾಷ್ಟ್ರ ಮತ್ತು ಪ್ರಪಂಚದ ಮುಂದೆ ಪ್ರಸ್ತುತಪಡಿಸಲಿದ್ದಾರೆ ಎಂದು ಶ್ರೀ ಅಮಿತ್ ಶಾ ಅವರು ಹೇಳಿದರು. ಈ ಪರೇಡ್ ನಿಜವಾಗಿಯೂ ಭಾರತದ ಏಕತೆಯ ಪರೇಡ್ ಆಗಿರಲಿದ್ದು, ‘ಏಕ್ ಭಾರತ್, ಶ್ರೇಷ್ಠ ಭಾರತ್’ ದ ಸ್ಫೂರ್ತಿಯನ್ನು ಅದರ ನಿಜವಾದ ಅರ್ಥದಲ್ಲಿ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.
ಸರ್ದಾರ್ ಪಟೇಲ್ ಅವರ 150ನೇ ಜನ್ಮ ವಾರ್ಷಿಕೋತ್ಸವದ ನಂತರ, ಜನವರಿ 26ರ ಗಣರಾಜ್ಯೋತ್ಸವದ ಪರೇಡ್ ನಂತೆಯೇ, ಪ್ರತಿ ವರ್ಷ ಅಕ್ಟೋಬರ್ 31ರಂದು ಈ ಪರೇಡ್ ಅನ್ನು ಆಯೋಜಿಸಲಾಗುವುದು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಪರೇಡ್ ರಾಷ್ಟ್ರದ ಯುವಕರಿಗೆ ಸ್ಫೂರ್ತಿ ನೀಡಲು ಮತ್ತು ಸರ್ದಾರ್ ಪಟೇಲ್ ಅವರ ತತ್ವಗಳು ಹಾಗೂ ದೇಶಕ್ಕೆ ಅವರ ಅಪಾರ ಕೊಡುಗೆಗಳ ಬಗ್ಗೆ ಅವರಿಗೆ ಶಿಕ್ಷಣ ನೀಡಲು ಬಲವಾದ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ. ಈ ಪರೇಡ್ ಮೂಲಕ ನಾವೆಲ್ಲರೂ ಒಗ್ಗೂಡಿ ದೇಶದಲ್ಲಿ ಮತ್ತೊಮ್ಮೆ ಏಕತೆ ಮತ್ತು ಸಮಗ್ರತೆಯ ಬಲಿಷ್ಠ ವಾತಾವರಣ ಸೃಷ್ಟಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು.
 
*****
                
                
                
                
                
                (Release ID: 2184241)
                Visitor Counter : 18
                
                
                
                    
                
                
                    
                
                Read this release in: 
                
                        
                        
                            Malayalam 
                    
                        ,
                    
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Marathi 
                    
                        ,
                    
                        
                        
                            Bengali-TR 
                    
                        ,
                    
                        
                        
                            Bengali 
                    
                        ,
                    
                        
                        
                            Assamese 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Tamil 
                    
                        ,
                    
                        
                        
                            Telugu