ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ಅವರು ದಿನಾಂಕ 26.10.2025 ರಂದು ಮಾಡಿದ ‘ಮನ್ ಕಿ ಬಾತ್’ – 127ನೇ ಸಂಚಿಕೆಯ ಕನ್ನಡ ಅವತರಣಿಕೆ
Posted On:
26 OCT 2025 11:40AM by PIB Bengaluru
ನನ್ನ ಪ್ರಿಯ ದೇಶವಾಸಿಗಳೇ,
ನಮಸ್ಕಾರ, ‘ಮನದ ಮಾತಿಗೆ’ ನಿಮ್ಮೆಲ್ಲರಿಗೂ ಸ್ವಾಗತ. ಪ್ರಸ್ತುತ ಇಡೀ ದೇಶದಲ್ಲಿ ಹಬ್ಬದ ಸಂಭ್ರಮ ತುಂಬಿದೆ. ನಾವೆಲ್ಲರೂ ಕೆಲವು ದಿನಗಳ ಹಿಂದೆ ದೀಪಾವಳಿಯನ್ನು ಆಚರಿಸಿದ್ದೇವೆ. ಈಗ ಹೆಚ್ಚಿನ ಸಂಖ್ಯೆಯ ಜನರು ಛಟ್ ಪೂಜೆಯಲ್ಲಿ ನಿರತರಾಗಿದ್ದಾರೆ. ಮನೆಗಳಲ್ಲಿ ಠೇಕುವಾ ತಯಾರಿಸಲಾಗುತ್ತಿದೆ. ಅಲ್ಲಲ್ಲಿ ಘಾಟ್‌ಗಳನ್ನು ಅಲಂಕರಿಸಲಾಗುತ್ತಿದೆ. ಮಾರುಕಟ್ಟೆಗಳು ಚಟುವಟಿಕೆಯಿಂದಿವೆ. ಎಲ್ಲೆಡೆ ಭಕ್ತಿಭಾವದ, ಬಾಂಧವ್ಯ ಮತ್ತು ಸಂಪ್ರದಾಯಗಳ ಸಂಗಮ ಕಂಡುಬರುತ್ತಿದೆ. ಛಠ್ ವೃತಾಚರಣೆ ಮಾಡುವ ಮಹಿಳೆಯರು ಈ ಹಬ್ಬಕ್ಕಾಗಿ ನಿಷ್ಠೆ ಹಾಗೂ ಸಮರ್ಪಣಾ ಭಾವದಿಂದ ಮತ್ತು ಭಕ್ತಿಯಿಂದ ಯಾವ ರೀತಿ ಸಿದ್ಧತೆ ನಡೆಸುತ್ತಾರೋ, ಅದು ನಿಜಕ್ಕೂ ಸ್ಪೂರ್ತಿದಾಯಕ.
ಸ್ನೇಹಿತರೇ,
ಛಠ್ ಎಂಬ ಈ ಅಭೂತಪೂರ್ವ ಆಚರಣೆ ಸಂಸ್ಕೃತಿ, ಪ್ರಕೃತಿ ಮತ್ತು ಸಮಾಜದ ನಡುವಿನ ಗಹನವಾದ ಏಕತೆಯ ಪ್ರತಿಬಿಂಬವಾಗಿದೆ. ಛಠ್ ಘಾಟ್‌ಗಳ ಮೇಲೆ ಸಮಾಜದ ಪ್ರತಿಯೊಂದು ವರ್ಗದವರು ಒಗ್ಗೂಡಿ ನಿಲ್ಲುತ್ತಾರೆ. ಈ ದೃಶ್ಯವು ಭಾರತದ ಸಾಮಾಜಿಕ ಏಕತೆಗೆ ಅತ್ಯಂತ ಸುಂದರ ಉದಾಹರಣೆಯಾಗಿದೆ. ನೀವು ದೇಶದಲ್ಲಿ ಅಥವಾ ಜಗತ್ತಿನಲ್ಲಿ ಎಲ್ಲೇ ಇದ್ದರೂ, ಅವಕಾಶ ಸಿಕ್ಕರೆ, ಛಠ್ ಪೂಜೆಯಲ್ಲಿ ಖಂಡಿತ ಭಾಗವಹಿಸಿ. ಈ ಅನನ್ಯ ಅನುಭವವನ್ನು ಸ್ವತಃ ಅನುಭವಿಸಿ. ಛಠಿ ಮಾತೆಗೆ ನಾನು ನಮಿಸುತ್ತೇನೆ. ಛಠ್ ಹಬ್ಬದ ಶುಭ ಸಂದರ್ಭದಲ್ಲಿ ನನ್ನ ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ಬಿಹಾರ, ಜಾರ್ಖಂಡ್ ಮತ್ತು ಪೂರ್ವಾಂಚಲ್ ಜನತೆಗೆ ನನ್ನ ಶುಭಾಶಯಗಳನ್ನು ಕೋರುತ್ತಿದ್ದೇನೆ.
ಸ್ನೇಹಿತರೇ,
ಈ ಹಬ್ಬದ ಸಂದರ್ಭದಲ್ಲಿ, ನಿಮ್ಮೆಲ್ಲರಿಗೂ ನಾನು ಒಂದು ಪತ್ರ ಬರೆಯುವ ಮೂಲಕ ನನ್ನ ಭಾವನೆಗಳನ್ನು ಹಂಚಿಕೊಂಡಿದ್ದೆ. ನನ್ನ ಪತ್ರದಲ್ಲಿ, ಹಬ್ಬಗಳನ್ನು ಹಿಂದೆಂದಿಗಿಂತಲೂ ಹೆಚ್ಚು ರೋಮಾಂಚಕವಾಗಿಸಿರುವ ದೇಶದ ಸೌಲಭ್ಯಗಳ ಬಗ್ಗೆ ಮಾತನಾಡಿದ್ದೇನೆ. ನನ್ನ ಪತ್ರಕ್ಕೆ ಪ್ರತಿಕ್ರಿಯೆಯಾಗಿ, ದೇಶದ ಅನೇಕ ನಾಗರಿಕರು ನನಗೆ ತಮ್ಮ ಸಂದೇಶಗಳನ್ನು ಕಳುಹಿಸಿದ್ದಾರೆ. 'ಆಪರೇಷನ್ ಸಿಂದೂರ್' ನಿಜಕ್ಕೂ ಪ್ರತಿಯೊಬ್ಬ ಭಾರತೀಯನನ್ನು ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ಈ ಬಾರಿ, ಮಾವೋವಾದಿ ಭಯೋತ್ಪಾದನೆಯ ಕಗ್ಗತ್ತಲೆಯಲ್ಲಿ ಮುಳುಗಿದ್ದ ಪ್ರದೇಶಗಳಲ್ಲಿಯೂ ಸಹ ಆನಂದದ ದೀಪಗಳನ್ನು ಬೆಳಗಿಸಲಾಯಿತು. ತಮ್ಮ ಮಕ್ಕಳ ಭವಿಷ್ಯಕ್ಕೆ ಅಪಾಯ ತಂದೊಡ್ಡಿದ್ದ ಮಾವೋವಾದಿ ಭಯೋತ್ಪಾದನೆಯನ್ನು ಜನರು ಬುಡಸಮೇತ ನಿರ್ಮೂಲನೆ ಮಾಡಲು ಬಯಸುತ್ತಾರೆ.
ಜಿಎಸ್‌ಟಿ ಉಳಿತಾಯ ಉತ್ಸವದ ಬಗ್ಗೆ ಕೂಡ ಜನರಲ್ಲಿ ಉತ್ಸಾಹ ತುಂಬಿದೆ. ಈ ಬಾರಿ ಹಬ್ಬಗಳ ಸಮಯದಲ್ಲಿ ಮತ್ತೊಂದು ಆಹ್ಲಾದಕರ ಸಂಗತಿ ಕಂಡುಬಂದಿದೆ. ಮಾರುಕಟ್ಟೆಗಳಲ್ಲಿ ಸ್ಥಳೀಯ ವಸ್ತುಗಳ ಖರೀದಿ ಗಮನಾರ್ಹವಾಗಿ ಹೆಚ್ಚಾಗಿದೆ. ನನಗೆ ಕಳುಹಿಸಿರುವ ಸಂದೇಶಗಳಲ್ಲಿ, ಜನರು ಈ ಬಾರಿ ತಾವು ಯಾವ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿದ್ದಾರೆ ಎಂದು ಹೇಳಿದ್ದಾರೆ.
ಸ್ನೇಹಿತರೇ,
ನನ್ನ ಪತ್ರದಲ್ಲಿ, ಖಾದ್ಯ ತೈಲದಲ್ಲಿ ಶೇಕಡಾ 10 ರಷ್ಟು ಕಡಿತವನ್ನು ಮಾಡುವ ಕುರಿತು ಆಗ್ರಹಿಸಿದ್ದೆ ಮತ್ತು ಜನರು ಇದಕ್ಕೆ ಕೂಡಾ ತುಂಬಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ಸ್ನೇಹಿತರೇ,
ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ಪ್ರಯತ್ನಗಳ ಬಗ್ಗೆಯು ಸಹ ನನಗೆ ಅನೇಕ ಸಂದೇಶಗಳು ಬಂದಿವೆ. ಅತ್ಯಂತ ಸ್ಪೂರ್ತಿದಾಯಕವಾಗಿರುವ ದೇಶದ ವಿಭಿನ್ನ ನಗರಗಳ ರೋಚಕ ಗಾಥೆಗಳನ್ನು ನಿಮ್ಮೊಂದಿಗೆ ನಾನು ಹಂಚಿಕೊಳ್ಳಲು ಬಯಸುತ್ತೇನೆ. ಛತ್ತೀಸ್ ಗಢದ ಅಂಬಿಕಾಪುರದಲ್ಲಿ, ನಗರದಿಂದ ಪ್ಲಾಸ್ಟಿಕ್ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಒಂದು ವಿಶಿಷ್ಟ ಉಪಕ್ರಮವನ್ನು ಕೈಗೊಳ್ಳಲಾಗಿದೆ. ಅಂಬಿಕಾಪುರದಲ್ಲಿ Garbage Cafeಗಳನ್ನು ತೆರೆಯಲಾಗಿದೆ. ಈ ಕೆಫೆಗಳು ಪ್ಲಾಸ್ಟಿಕ್ ತ್ಯಾಜ್ಯವನ್ನು ತರುವ ಜನರಿಗೆ ಇಲ್ಲಿ ಹೊಟ್ಟೆ ತುಂಬಾ ಊಟವನ್ನು ಒದಗಿಸುತ್ತವೆ. ಒಂದು ಕಿಲೋಗ್ರಾಂ ಪ್ಲಾಸ್ಟಿಕ್ ತರುವವರಿಗೆ ಮಧ್ಯಾಹ್ನದ ಊಟ ಅಥವಾ ರಾತ್ರಿ ಭೋಜನ ಮತ್ತು ಅರ್ಧ ಕಿಲೋಗ್ರಾಂ ತರುವವರಿಗೆ ಉಪಾಹಾರ ದೊರೆಯುತ್ತದೆ. ಅಂಬಿಕಾಪುರ ಮಹಾನಗರ ಪಾಲಿಕೆ ಈ ಕೆಫೆಗಳನ್ನು ನಡೆಸುತ್ತಿದೆ.
ಸ್ನೇಹಿತರೇ,
ಬೆಂಗಳೂರಿನಲ್ಲಿ ಎಂಜಿನಿಯರ್ ಕಪಿಲ್ ಶರ್ಮಾ ಕೂಡ ಇದೇ ರೀತಿಯ ಸಾಧನೆಯನ್ನು ಮಾಡಿದ್ದಾರೆ. ಬೆಂಗಳೂರನ್ನು ಕೆರೆಕಟ್ಟೆಗಳ ನಗರ ಎಂದು ಕರೆಯಲಾಗುತ್ತದೆ. ಕಪಿಲ್ ಇಲ್ಲಿನ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಕಪಿಲ್ ಅವರ ತಂಡವು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ಬಾವಿಗಳು ಮತ್ತು ಆರು ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ತಮ್ಮ ಧ್ಯೇಯ ಸಾಧನೆಗೆ ಅವರು ಉದ್ದಿಮೆಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಸಹ ತೊಡಗಿಸಿಕೊಂಡಿರುವುದು ಗಮನಾರ್ಹ ಸಂಗತಿ. ಅವರ ಸಂಘಟನೆಯು ಮರ ನೆಡುವ ಅಭಿಯಾನಗಳಲ್ಲಿಯೂ ತೊಡಗಿಸಿಕೊಂಡಿದೆ.
ಸ್ನೇಹಿತರೇ,
ಅಂಬಿಕಾಪುರ ಮತ್ತು ಬೆಂಗಳೂರೀನ - ಈ ಸ್ಪೂರ್ತಿದಾಯಕ ಉದಾಹರಣೆಗಳು ದೃಢನಿಶ್ಚಯವಿದ್ದಾಗ ಬದಲಾವಣೆ ಖಂಡಿತ ಸಾಧ್ಯ ಎಂದು ಸಾಬೀತುಪಡಿಸುತ್ತದೆ.
ಸ್ನೇಹಿತರೇ,
ಬದಲಾವಣೆಯನ್ನು ತರುವ ಪ್ರಯತ್ನದ ಮತ್ತೊಂದು ಉದಾಹರಣೆಯನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮಗೆಲ್ಲರಿಗೂ ತಿಳಿದಿರುವಂತೆ ಪರ್ವತಗಳು ಮತ್ತು ಬಯಲು ಪ್ರದೇಶಗಳಲ್ಲಿ ಕಾಡುಗಳು ಇರುತ್ತವೆ ಮತ್ತು ಈ ಕಾಡುಗಳು ಮಣ್ಣನ್ನು ಸವಕಳಿಯಾಗದಂತೆ ಹಿಡಿದಿಟ್ಟುಕೊಳ್ಳುತ್ತವೆ. ಕರಾವಳಿಯುದ್ದಕ್ಕೂ mangrove ಗಳು ಇದೇ ರೀತಿಯ ಪ್ರಾಮುಖ್ಯತೆಯನ್ನು ಹೊಂದಿವೆ. mangroveಗಳು ಸಮುದ್ರದ ಉಪ್ಪು ನೀರು ಮತ್ತು ಜೌಗು ಭೂಮಿಯಲ್ಲಿ ಬೆಳೆಯುತ್ತವೆ. ಇವು ಸಮುದ್ರ ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಸುನಾಮಿ ಅಥವಾ ಚಂಡಮಾರುತಗಳಂತಹ ವಿಪತ್ತುಗಳ ಸಮಯದಲ್ಲಿ ಈ Mangrove ಗಳು ಬಹಳ ಸಹಾಯಕರವಾಗಿವೆ.
ಸ್ನೇಹಿತರೇ,
Mangroveಗಳ ಮಹತ್ವವನ್ನು ಅರಿತ, ಗುಜರಾತ್ ಅರಣ್ಯ ಇಲಾಖೆ ವಿಶೇಷ ಅಭಿಯಾನವನ್ನು ಪ್ರಾರಂಭಿಸಿದೆ. ಐದು ವರ್ಷಗಳ ಹಿಂದೆ, ಅರಣ್ಯ ಇಲಾಖೆಯ ತಂಡಗಳು ಅಹಮದಾಬಾದ್ ಬಳಿಯ ಧೋಲೆರಾದಲ್ಲಿ Mangrove ಗಳ ನಾಟಿಗೆ ಮುಂದಾಯಿತು. ಇಂದು, ಧೋಲೆರಾ ಕರಾವಳಿಯಲ್ಲಿ ಮೂರುವರೆ ಸಾವಿರ ಹೆಕ್ಟೇರ್‌ಗಳಲ್ಲಿ Mangrove ಗಳು ಹರಡಿಕೊಂಡಿವೆ. ಈ Mangroveಗಳ ಪ್ರಭಾವವು ಪ್ರದೇಶದಾದ್ಯಂತ ಗೋಚರಿಸುತ್ತದೆ. ಪರಿಸರ ವ್ಯವಸ್ಥೆಯಲ್ಲಿ ಡಾಲ್ಫಿನ್‌ಗಳ ಸಂಖ್ಯೆ ಹೆಚ್ಚಾಗಿದೆ. ಏಡಿಗಳು ಮತ್ತು ಇತರ ಜಲಚರಗಳು ಸಹ ಹೆಚ್ಚಿವೆ. ಇದಲ್ಲದೆ, ವಲಸೆ ಹಕ್ಕಿಗಳು ಈಗ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿವೆ. ಇದು ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ. ಅಷ್ಟೇ ಅಲ್ಲ, ಧೋಲೆರಾದ ಮೀನು ಕೃಷಿಕರಿಗೂ ಪ್ರಯೋಜನಾಕಾರಿಯಾಗಿದೆ.
ಸ್ನೇಹಿತರೇ,
ಧೋಲೆರಾ ಜೊತೆಗೆ, ಗುಜರಾತ್‌ನ ಕಚ್‌ನಲ್ಲಿ ಕೂಡಾ Mangrove Plantation ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ಕೋರಿ ಕ್ರೀಕ್‌ನಲ್ಲಿ ‘Mangrove Learning Centre’ ಸಹ ಸ್ಥಾಪಿಸಲಾಗಿದೆ.
ಸ್ನೇಹಿತರೇ,
ಸಸ್ಯಗಳು ಮತ್ತು ಮರ ಗಿಡಗಳ ವಿಶೇಷ ಗುಣವಿ ಇದಾಗಿದೆ. ಯಾವುದೇ ಸ್ಥಳ ಇರಲಿ, ಅವು ಪ್ರತಿಯೊಂದು ಜೀವಿಯ ಒಳಿತಿಗಾಗಿ ಕೊಡುಗೆ ನೀಡುತ್ತವೆ. ಅದಕ್ಕಾಗಿಯೇ ನಮ್ಮ ಧರ್ಮಗ್ರಂಥಗಳಲ್ಲಿ ಈ ರೀತಿ ಹೇಳಲಾಗಿದೆ -
ಧನ್ಯಾ ಮಹಿರುಹಾ ಏಭ್ಯೋ,
ನಿರಾಶಾಮ್ ಯಾಂತಿ ನಾರ್ಥಿನಃ
ಅಂದರೆ, ಎಂದಿಗೂ ಯಾರನ್ನೂ ನಿರಾಶೆಗೊಳಿಸದ ಮರಗಳು ಮತ್ತು ಸಸ್ಯಗಳೇ ಧನ್ಯ. ನಾವು ಯಾವುದೇ ಪ್ರದೇಶದಲ್ಲಿ ವಾಸಿಸಲಿ, ಮರಗಳನ್ನು ನೆಡಬೇಕು. "ಏಕ್ ಪೇಡ್ ಮಾ ಕೆ ನಾಮ್ " ಅಭಿಯಾನವನ್ನು ಮುಂದುವರಿಸಬೇಕು.
ನನ್ನ ಪ್ರಿಯ ದೇಶವಾಸಿಗಳೇ,
“ಮನದ ಮಾತಿನಲ್ಲಿ” ನಾವು ಚರ್ಚಿಸುವ ವಿಷಯಗಳಲ್ಲಿ ನನಗೆ ಹೆಚ್ಚು ತೃಪ್ತಿ ನೀಡುವ ವಿಷಯ ಯಾವುದು ಎಂದು ನಿಮಗೆ ತಿಳಿದಿದೆಯೇ? ಇದಕ್ಕೆ ನನ್ನ ಉತ್ತರ “ಮನದ ಮಾತಿನಲ್ಲಿ” ನಾವು ಚರ್ಚಿಸುವ ವಿಷಯಗಳು ಜನರನ್ನು ಏನಾದರೂ ಒಳ್ಳೆಯದನ್ನು ಮಾಡಲು, ಸಮಾಜದಲ್ಲಿ ಏನಾದರೂ ನವೀನತೆಯನ್ನು ಹುಟ್ಟುಹಾಕಲು ಪ್ರೇರೇಪಿಸುತ್ತವೆ ಎಂಬುದು. ಇದರಿಂದ ನಮ್ಮ ಸಂಸ್ಕೃತಿ ಮತ್ತು ನಮ್ಮ ದೇಶದ ಹಲವಾರು ಅಂಶಗಳು ಬೆಳಕಿಗೆ ಬರುತ್ತವೆ.
ಸ್ನೇಹಿತರೇ,
ಸುಮಾರು ಐದು ವರ್ಷಗಳ ಹಿಂದೆ ನಾನು ಈ ಕಾರ್ಯಕ್ರಮದಲ್ಲಿ ಭಾರತೀಯ ತಳಿಯ ಶ್ವಾನಗಳ ಬಗ್ಗೆ ಚರ್ಚಿಸಿದ್ದೆ ಎಂಬುದು ನಿಮ್ಮಲ್ಲಿ ಹಲವರಿಗೆ ನೆನಪಿರಬಹುದು. ನಮ್ಮ ಪರಿಸರ ಮತ್ತು ಪರಿಸ್ಥಿತಿಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ಕಾರಣ ಭಾರತೀಯ ತಳಿಯ ಶ್ವಾನಗಳನ್ನು ದತ್ತು ತೆಗೆದುಕೊಳ್ಳುವಂತೆ ನಾನು ದೇಶವಾಸಿಗಳು ಮತ್ತು ನಮ್ಮ ಭದ್ರತಾ ಪಡೆಗಳನ್ನು ಆಗ್ರಹಿಸಿದ್ದೆ. ಈ ನಿಟ್ಟಿನಲ್ಲಿ ನಮ್ಮ ಭದ್ರತಾ ಸಂಸ್ಥೆಗಳು ಶ್ಲಾಘನೀಯ ಪ್ರಯತ್ನಗಳನ್ನು ಮಾಡಿವೆ ಎಂದು ತಿಳಿಸಲು ನನಗೆ ಸಂತಸವೆನಿಸುತ್ತದೆ. ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಮ್ಮ ತಂಡಗಳಲ್ಲಿ ಭಾರತೀಯ ತಳಿಯ ಶ್ವಾನಗಳ ಸಂಖ್ಯೆಯನ್ನು ಹೆಚ್ಚಿಸಿವೆ. ಬಿಎಸ್‌ಎಫ್‌ನ ರಾಷ್ಟ್ರೀಯ ಶ್ವಾನ ತರಬೇತಿ ಕೇಂದ್ರವು ಗ್ವಾಲಿಯರ್‌ನ ಟೆಕನ್‌ಪುರದಲ್ಲಿದೆ. ಇಲ್ಲಿ, ಉತ್ತರ ಪ್ರದೇಶದ ರಾಂಪುರ ಹೌಂಡ್‌ಗಳು, ಕರ್ನಾಟಕ ಮತ್ತು ಮಹಾರಾಷ್ಟ್ರದ ಮುಧೋಳ ಹೌಂಡ್‌ಗಳಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಈ ಕೇಂದ್ರದಲ್ಲಿ, ತರಬೇತುದಾರರು ತಂತ್ರಜ್ಞಾನ ಮತ್ತು ನಾವೀನ್ಯತೆಯ ಸಹಾಯದಿಂದ ಶ್ವಾನಗಳಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಭಾರತೀಯ ತಳಿಯ ಶ್ವಾನಗಳ ವಿಶಿಷ್ಟ ಸಾಮರ್ಥ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಅವುಗಳ ತರಬೇತಿ ಕೈಪಿಡಿಗಳನ್ನು ಪುನಃ ಬರೆಯಲಾಗಿದೆ. ಮೊಂಗ್ರೆಲ್ಸ್, ಮುಧೋಳ ಹೌಂಡ್, ಕೊಂಬೈ ಮತ್ತು ಪಾಂಡಿಕೋನದಂತಹ ಭಾರತೀಯ ಶ್ವಾನಗಳಿಗೆ ಬೆಂಗಳೂರಿನ ಸಿಆರ್‌ಪಿಎಫ್‌ನ ಶ್ವಾನ ತಳಿ ಮತ್ತು ತರಬೇತಿ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದೆ.
ಸ್ನೇಹಿತರೇ,
ಕಳೆದ ವರ್ಷ ಲಕ್ನೋದಲ್ಲಿ All India Police Duty Meet ನಡೆದಿತ್ತು. ಆ ಸಮಯದಲ್ಲಿ, ರಿಯಾ ಎಂಬ ಶ್ವಾನ ಗಮನ ಸೆಳೆಯಿತು. ಅದು ಬಿಎಸ್‌ಎಫ್‌ನಿಂದ ತರಬೇತಿ ಪಡೆದ ಮುಧೋಳ ಹೌಂಡ್ ತಳಿ. ರಿಯಾ ಹಲವಾರು ವಿದೇಶಿ ತಳಿಗಳನ್ನು ಹಿಂದಿಕ್ಕಿ ಪ್ರಥಮ ಬಹುಮಾನ ಗೆದ್ದಿತು.
ಸ್ನೇಹಿತರೇ,
ಬಿಎಸ್‌ಎಫ್ ತನ್ನ ಶ್ವಾನಗಳಿಗೆ ಈಗ ವಿದೇಶಿ ಹೆಸರುಗಳ ಬದಲಿಗೆ ಭಾರತೀಯ ಹೆಸರುಗಳನ್ನು ಇಡುವ ಸಂಪ್ರದಾಯವನ್ನು ಪ್ರಾರಂಭಿಸಿದೆ. ನಮ್ಮ ಸ್ಥಳೀಯ ಶ್ವಾನಗಳು ಕೂಡಾ ಗಮನಾರ್ಹ ಧೈರ್ಯವನ್ನು ಮೆರೆದಿವೆ. ಕಳೆದ ವರ್ಷ, ಛತ್ತೀಸ್‌ಗಢದ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಸ್ಥಳೀಯ ಸಿಆರ್‌ಪಿಎಫ್ ಶ್ವಾನವೊಂದು 8 ಕಿಲೋಗ್ರಾಂಗಳಷ್ಟು ಸ್ಫೋಟಕವನ್ನು ಪತ್ತೆಹಚ್ಚಿತು. ಈ ನಿಟ್ಟಿನಲ್ಲಿ ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ಮಾಡಿದ ಪ್ರಯತ್ನಗಳಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ. ಅಂದಹಾಗೆ, ನಾನು ಅಕ್ಟೋಬರ್ 31 ರ ನಿರೀಕ್ಷೆಯಲ್ಲಿದ್ದೇನೆ. ಅಂದು ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರ ಜಯಂತಿ. ಪ್ರತಿ ವರ್ಷ, ಈ ಸಂದರ್ಭದಲ್ಲಿ ಗುಜರಾತ್‌ನ ಏಕ್ತಾ ನಗರದಲ್ಲಿರುವ Statue of Unity - ಏಕತಾ ಪ್ರತಿಮೆಯ ಬಳಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಏಕತಾ ದಿನದ ಮೆರವಣಿಗೆಯನ್ನು ಸಹ ನಡೆಸಲಾಗುತ್ತದೆ. ಈ ಮೆರವಣಿಗೆ ಮತ್ತೊಮ್ಮೆ ಭಾರತೀಯ ಶ್ವಾನಗಳ ಪರಾಕ್ರಮವನ್ನು ಪ್ರದರ್ಶಿಸಲಾಗುತ್ತದೆ. ನೀವೂ ಕೂಡಾ, ಅವಕಾಶ ಕಲ್ಪಿಸಿಕೊಂಡು ಖಂಡಿತ ಅದನ್ನು ವೀಕ್ಷಿಸಿ.
ನನ್ನ ಪ್ರಿಯ ದೇಶವಾಸಿಗಳೇ,
ಸರ್ದಾರ್ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯು ಇಡೀ ದೇಶಕ್ಕೆ ಬಹಳ ವಿಶೇಷ ಸಂದರ್ಭವಾಗಿದೆ. ಸರ್ದಾರ್ ಪಟೇಲ್ ಆಧುನಿಕ ಕಾಲಘಟ್ಟದ ಮಹಾನ್ ವ್ಯಕ್ತಿಗಳಲ್ಲಿ ಒಬ್ಬರು. ಅವರ ಅತ್ಯುನ್ನತ ವ್ಯಕ್ತಿತ್ವದಲ್ಲಿ ಅನೇಕ ಗುಣಗಳು ಮಿಳಿತವಾಗಿದ್ದವು. ಅವರು ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು, ಭಾರತ ಮತ್ತು ಬ್ರಿಟನ್ ಉಭಯ ದೇಶಗಳಲ್ಲಿನ ತಮ್ಮ ಅಧ್ಯಯನದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಅವರು ತಮ್ಮ ಕಾಲದ ಅತ್ಯಂತ ಯಶಸ್ವಿ ವಕೀಲರಲ್ಲಿ ಒಬ್ಬರಾಗಿದ್ದರು. ಅವರು ಕಾನೂನಿನಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಬಹುದಿತ್ತು, ಆದರೆ ಗಾಂಧೀಜಿಯವರಿಂದ ಪ್ರೇರಿತರಾಗಿ, ಸ್ವಾತಂತ್ರ್ಯ ಚಳವಳಿಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಖೇಡಾ ಸತ್ಯಾಗ್ರಹದಿಂದ ಹಿಡಿದು ಬೋರ್ಸಾದ್ ಸತ್ಯಾಗ್ರಹದವರೆಗೆ ಹಲವಾರು ಚಳುವಳಿಗಳಿಗೆ ಅವರು ನೀಡಿದ ಕೊಡುಗೆಗಳು ಇಂದಿಗೂ ಸ್ಮರಣೀಯವಾಗಿವೆ. ಅಹಮದಾಬಾದ್ ಪುರಸಭೆಯ ಮುಖ್ಯಸ್ಥರಾಗಿ ಅವರ ಆಡಳಿತ ಅವಧಿಯೂ ಐತಿಹಾಸಿಕವಾಗಿತ್ತು. ಸ್ವಚ್ಛತೆ ಮತ್ತು ಉತ್ತಮ ಆಡಳಿತಕ್ಕೆ ಅವರು ಹೆಚ್ಚಿನ ಆದ್ಯತೆ ನೀಡಿದರು. ಉಪಪ್ರಧಾನಿ ಮತ್ತು ಗೃಹ ಸಚಿವರಾಗಿ ಅವರ ಕೊಡುಗೆಗಳಿಗೆ ನಾವೆಲ್ಲರೂ ಋಣಿಯಾಗಿರುತ್ತೇವೆ.
ಸ್ನೇಹಿತರೇ,
ಸರ್ದಾರ್ ಪಟೇಲ್ ಭಾರತದ bureaucratic framework ಗೆ ಬಲವಾದ ಅಡಿಪಾಯವನ್ನು ಹಾಕಿದರು. ಅವರು ದೇಶದ ಏಕತೆ ಮತ್ತು ಸಮಗ್ರತೆಗೆ ಅಪ್ರತಿಮ ಪ್ರಯತ್ನ ಮಾಡಿದರು. ಅಕ್ಟೋಬರ್ 31 ರಂದು ಸರ್ದಾರ್ ಸಾಹೇಬ್ ಅವರ ಜಯಂತಿ ನಿಮಿತ್ತ ದೇಶಾದ್ಯಂತ ನಡೆಯುವ Run For Unity ಯಲ್ಲಿ ನೀವೆಲ್ಲರೂ ಭಾಗವಹಿಸಿ, ಕೇವಲ ನೀವು ಮಾತ್ರವಲ್ಲ, ಎಲ್ಲರೊಂದಿಗೆ ಒಗ್ಗೂಡಿ ಭಾಗವಹಿಸಿ ಎಂದು ನಾನು ಆಗ್ರಹಿಸುತ್ತೇನೆ. ಇದು ಯುವ ಜಾಗೃತಿಗೆ ಒಂದು ಅವಕಾಶವಾಗಬೇಕು; ಏಕತಾ ಓಟವು ಏಕತೆಯನ್ನು ಬಲಪಡಿಸುತ್ತದೆ. ಇದು ಭಾರತವನ್ನು ಒಗ್ಗೂಡಿಸಿದ ಆ ಮಹಾನ್ ಚೇತನಕ್ಕೆ ನಾವು ನೀಡುವ ನಿಜವಾದ ಗೌರವ.
ನನ್ನ ಪ್ರೀತಿಯ ದೇಶಬಾಂಧವರೆ,
ಚಹಾದೊಂದಿಗೆ ನನ್ನ ನಂಟು ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇಂದು ‘ಮನದ ಮಾತಿ’ನಲ್ಲಿ ಕಾಫಿಯ ಬಗ್ಗೆ ಮಾತನಾಡಬಾರದೇಕೆ ಎಂದು ನನಗನಿಸಿತು. ನಿಮಗೆ ನೆನಪಿರಬಹುದು, ಕಳೆದ ವರ್ಷ ನಾವು ‘ಮನದ ಮಾತಿ’ನಲ್ಲಿ ಅರಕು ಕಾಫಿಯ ಬಗ್ಗೆ ಮಾತನಾಡಿದ್ದೆವು. ಕೆಲವು ದಿನಗಳ ಹಿಂದೆ ಒಡಿಶಾದ ಹಲವರು ನನ್ನೊಂದಿಗೆ ಕೊರಾಪುಟ್ ಕಾಫಿಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಅವರು ನನಗೆ ಪತ್ರ ಬರೆದು, ‘ಮನದ ಮಾತಿ’ನಲ್ಲಿ ಕೊರಾಪುಟ್ ಕಾಫಿ ಬಗ್ಗೆ ಮಾತನಾಡಬೇಕೆಂದು ಹೇಳಿದ್ದರು.
ಸ್ನೇಹಿತರೇ,
ಕೊರಾಪುಟ್ ಕಾಫಿ ಅದ್ಭುತ ರುಚಿ ಹೊಂದಿದೆ ಎಂದು ನಾನು ಕೇಳಿದ್ದೇನೆ, ಅಷ್ಟೇ ಅಲ್ಲ, ರುಚಿಯ ಜೊತೆಯಲ್ಲಿ ಕಾಫಿ ಕೃಷಿಯು ಜನರಿಗೆ ಪ್ರಯೋಜನವನ್ನೂ ನೀಡುತ್ತಿದೆ. ಕೊರಾಪುಟ್ ನಲ್ಲಿ ಕೆಲವರು ಸ್ವಯಂ ಉತ್ಸಾಹದಿಂದ ಕಾಫಿ ಕೃಷಿ ಮಾಡುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನಲ್ಲಿ ಒಳ್ಳೆಯ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ, ಅವರು ಕಾಫಿಯನ್ನು ಎಷ್ಟೊಂದು ಇಷ್ಟಪಡುತ್ತಿದ್ದರೆಂದರೆ, ಈ ಕ್ಷೇತ್ರಕ್ಕೆ ಕಾಲಿಟ್ಟರು ಮತ್ತು ಈಗ ಯಶಸ್ಸಿನೊಂದಿಗೆ ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾಫಿಯಿಂದಾಗಿ ತಮ್ಮ ಜೀವನದಲ್ಲಿ ಸಂತೋಷಕರ ಬದಲಾವಣೆ ಕಂಡುಕೊಂಡ ಅನೇಕ ಮಹಿಳೆಯರೂ ಇದ್ದಾರೆ. ಕಾಫಿಯಿಂದಾಗಿ ಅವರಿಗೆ ಜೀವನದಲ್ಲಿ ಮನ್ನಣೆ ಹಾಗೂ ಸಮೃದ್ಧಿ ಎರಡೂ ದೊರೆತಿದೆ. ನಿಜ ಹೇಳಬೇಕೆಂದರೆ :
कोरापुट कॉफी अत्यंत सुस्वादु |
एहा ओडिशार गौरव |
ಕೊರಾಪುಟ್ ಕಾಫಿ ನಿಜಕ್ಕೂ ಅತ್ಯಂತ ಸ್ವಾದಿಷ್ಠವಾಗಿದೆ.
ಇದು ಒಡಿಶಾದ ಗೌರವವಾಗಿದೆ.
(English Translation)
Koraput Coffee is truly delectable!
This indeed is the pride of Odisha!
ಸ್ನೇಹಿತರೇ,
ವಿಶ್ವಾದ್ಯಂತ ಭಾರತದ ಕಾಫಿ ಬಹಳ ಜನಪ್ರಿಯವಾಗುತ್ತಿದೆ. ಕರ್ನಾಟಕದ ಚಿಕ್ಕಮಗಳೂರು, ಕೊಡಗು ಮತ್ತು ಹಾಸನವೇ ಆಗಲಿ, ತಮಿಳುನಾಡಿನಲ್ಲಿ ಪುಲನಿ, ಶೆವರಾಯ್, ನೀಲಗಿರಿ ಮತ್ತು ಅಣ್ಣಾಮಲೈ ಪ್ರದೇಶಗಳೇ ಆಗಲಿ, ಕರ್ನಾಟಕ-ತಮಿಳುನಾಡು ಗಡಿಭಾಗದಲ್ಲಿನ ಬಿಳಿಗಿರಿ ಪ್ರದೇಶವಾಗಿರಲಿ ಅಥವಾ ಕೇರಳದ ವೈನಾಡು, ತಿರುವಾಂಕೂರ್ ಮತ್ತು ಮಲಬಾರ್ ವಿಭಾಗಗಳೇ ಆಗಲಿ, -ಭಾರತದ ಕಾಫಿಯ ವೈವಿಧ್ಯತೆ ನೋಡಲು ಬಹಳ ಅದ್ಭುತವೆನಿಸುತ್ತದೆ. ನಮ್ಮ ದೇಶದ ಈಶಾನ್ಯ ಭಾಗವೂ ಕೂಡಾ ಕಾಫಿ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತಿದೆ ಎಂದು ನನಗೆ ತಿಳಿದು ಬರುತ್ತಿದೆ. ಇದರಿಂದಾಗಿ ಭಾರತೀಯ ಕಾಫಿಯ ಖ್ಯಾತಿ ಹೆಚ್ಚಾಗುತ್ತಿದೆ – ಆದ್ದರಿಂದಲೇ ಕಾಫಿ ಪ್ರಿಯರು ಹೀಗೆನ್ನುತ್ತಾರೆ :
India’s coffee is coffee at its finest.
It is brewed in India and loved by the World.
ಭಾರತದ ಕಾಫಿ ಎಂದರೆ ಅದು ಅತ್ಯುತ್ತಮ ಕಾಫಿ.
ಇದನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಮತ್ತು ಜಗತ್ತು ಅದನ್ನು ಪ್ರೀತಿಸುತ್ತದೆ.
ನನ್ನ ಪ್ರೀತಿಯ ದೇಶಬಾಂಧವರೆ,
ಈಗ ‘ಮನದ ಮಾತಿ’ನಲ್ಲಿ ನಲ್ಲಿ, ನಮ್ಮೆಲ್ಲರ ಹೃದಯಗಳಿಗೆ ತುಂಬಾ ಹತ್ತಿರವಾದ ವಿಷಯದ ಬಗ್ಗೆ ನಾವು ಮಾತನಾಡೋಣ. ಈ ವಿಷಯವೆಂದರೆ ನಮ್ಮ ರಾಷ್ಟ್ರಗೀತೆ - ಭಾರತದ ರಾಷ್ಟ್ರಗೀತೆ, ಅಂದರೆ ‘ವಂದೇಮಾತರಂ’. ಈ ಗೀತೆಯ ಮೊದಲ ಪದವೇ ನಮ್ಮ ಹೃದಯಗಳಿಗೆ ಭಾವನೆಗಳ ಮಹಾಪೂರವನ್ನೇ ಉಂಟುಮಾಡುತ್ತದೆ. ‘ವಂದೇಮಾತರಂ’ ಎಂಬ ಒಂದೇ ಪದದಲ್ಲಿ ಹಲವಾರು ಭಾವನೆಗಳು ಮತ್ತು ಅಪಾರ ಶಕ್ತಿ ಒಳಗೊಂಡಿದೆ. ಇದು ಭಾರತ ಮಾತೆಯ ವಾತ್ಸಲ್ಯವನ್ನು ನಾವು ಸಹಜವಾಗಿಯೇ ಅನುಭವಿಸುವಂತೆ ಮಾಡುತ್ತದೆ. ಭಾರತ ಮಾತೆಯ ಮಕ್ಕಳಾಗಿ ನಮ್ಮ ಜವಾಬ್ದಾರಿಗಳನ್ನು ಸಹ ಇದು ನಮಗೆ ನೆನಪಿಸುತ್ತದೆ. ಕಠಿಣ ಪರಿಸ್ಥಿತಿಗಳಲ್ಲಿ ‘ವಂದೇಮಾತರಂ’ ಪಠಣವು 1.4 ಶತಕೋಟಿ ಭಾರತೀಯರ ಮನಸ್ಸನ್ನು ಏಕತೆಯ ಶಕ್ತಿಯಿಂದ ತುಂಬುತ್ತದೆ.
ಸ್ನೇಹಿತರೇ,
ದೇಶಭಕ್ತಿ, ಭಾರತ ಮಾತೆಯ ಮೇಲಿನ ಪ್ರೀತಿ ಪದಗಳಿಗೆ ಮೀರಿದ ಭಾವನೆಯಾದರೆ, ‘ವಂದೇಮಾತರಂ’ ಆ ಅಮೂರ್ತ ಭಾವನೆಗೆ ಸಾಕಾರ ಸ್ವರ ನೀಡುವ ಗೀತೆಯಾಗಿದೆ. ಈ ಗೀತೆಯನ್ನು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು, ಶತಮಾನಗಳ ಗುಲಾಮಗಿರಿಯಿಂದ ನಲುಗಿ ಹೋಗಿದ್ದ ಭಾರತದಲ್ಲಿ ಹೊಸ ಪ್ರಾಣಶಕ್ತಿ ತುಂಬಲು ರಚಿಸಿದರು. 'ವಂದೇ ಮಾತರಂ' ಅನ್ನು 19ನೇ ಶತಮಾನದಲ್ಲಿ ಬರೆಯಲಾಗಿದ್ದರೂ, ಅದರ ಚೈತನ್ಯವು ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಅಮರ ಪ್ರಜ್ಞೆಯೊಂದಿಗೆ ಜೋಡಣೆಯಾಗಿತ್ತು. “ಮಾತಾ ಭೂಮಿ: ಪುತ್ರೋ ಅಹಂ ಪೃಥ್ವಿವ್ಯಾಃ: ”(ಭೂಮಿಯೇ ತಾಯಿ ಮತ್ತು ನಾನು ಅವಳ ಮಗು) ವೇದಗಳು ಈ ರೀತಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾ, ಭಾರತೀಯ ನಾಗರಿಕತೆಯ ಅಡಿಪಾಯವನ್ನು ಹಾಕಿವೆ. 'ವಂದೇ ಮಾತರಂ' ಗೀತೆ ರಚಿಸುವ ಮೂಲಕ, ಬಂಕಿಮ್ ಚಂದ್ರ ಅವರು ಮಾತೃಭೂಮಿ ಮತ್ತು ಆಕೆಯ ಮಕ್ಕಳ ನಡುವಿನ ಅದೇ ಸಂಬಂಧವನ್ನು ಭಾವನೆಗಳ ಜಗತ್ತಿನಲ್ಲಿ ಒಂದು ಮಂತ್ರದ ರೂಪದಲ್ಲಿ ಬಂಧಿಸಿದರು.
ಸ್ನೇಹಿತರೇ,
ನಾನು ಇದ್ದಕ್ಕಿದ್ದಂತೆ ವಂದೇಮಾತರಂ ಬಗ್ಗೆ ಇಷ್ಟೊಂದು ಮಾತುಗಳನ್ನು ಏಕೆ ಆಡುತ್ತಿದ್ದೇನೆಂದು ನೀವು ಯೋಚಿಸುತ್ತಿರಬಹುದಲ್ಲವೇ. ವಾಸ್ತವದಲ್ಲಿ ಕೆಲವೇ ದಿನಗಳ ನಂತರ ನವೆಂಬರ್ 7 ರಂದು ನಾವು ವಂದೇಮಾತರಂ ನ 150 ನೇ ವರ್ಷದ ಆಚರಣೆಗೆ ಪ್ರವೇಶಿಸಲಿದ್ದೇವೆ. 150 ವರ್ಷಗಳ ಹಿಂದೆ ‘ವಂದೇಮಾತರಂ’ ನ ರಚನೆಯಾಯಿತು ಮತ್ತು 1896 ರಲ್ಲಿ (ಸಾವಿರದ ಎಂಟುನೂರಾ ತೊಂಭತ್ತಾರು) ಗುರುದೇವ ರವೀಂದ್ರನಾಥ್ ಟಾಗೂರ್ ಅವರು ಪ್ರಥಮ ಬಾರಿಗೆ ಇದನ್ನು ಹಾಡಿದ್ದರು.
ಸ್ನೇಹಿತರೇ, ‘ವಂದೇಮಾತರಂ’ ಗೀತೆಯಲ್ಲಿ ಕೋಟ್ಯಂತರ ದೇಶವಾಸಿಗಳು ಸದಾಕಾಲ ರಾಷ್ಟ್ರಪ್ರೇಮದ ಅಗಾಧ ಭಾವನೆಯನ್ನು ಅನುಭವಿಸಿದ್ದಾರೆ. ನಮ್ಮ ಪೀಳಿಗೆಯು ‘ವಂದೇಮಾತರಂ’ ನ ಪದಗಳಲ್ಲಿ, ಭಾರತದ ಒಂದು ಜೀವಂತ ಮತ್ತು ಭವ್ಯ ಸ್ವರೂಪವನ್ನು ಕಂಡಿದೆ.
ಸುಜಲಾಮ್, ಸುಫಲಾಮ್, ಮಲಯಜ ಶೀತಲಾಮ್
ಸಸ್ಯ ಶ್ಯಾಮಲಾಂ ಮಾತರಂ!
ವಂದೇ ಮಾತರಂ!
ನಾವು ಇಂತಹ ಭಾರತವನ್ನೇ ನಿರ್ಮಿಸಬೇಕು. ‘ವಂದೇಮಾತರಂ’ ನಮ್ಮ ಈ ಪ್ರಯತ್ನಗಳಲ್ಲಿ ಸದಾಕಾಲ ನಮಗೆ ಪ್ರೇರಣೆಯಾಗಿರುತ್ತದೆ. ಆದ್ದರಿಂದ, ನಾವು ‘ವಂದೇಮಾತರಂ’ ನ 150 ನೇ ವರ್ಷವನ್ನು ಕೂಡಾ ಸ್ಮರಣೀಯವಾಗಿಸಬೇಕು. ಮುಂದಿನ ಪೀಳಿಗೆಗಳಿಗಾಗಿ ನಾವು ಈ ಮೌಲ್ಯಗಳ ಹರಿವನ್ನು ಮುಂದುವರಿಸಬೇಕು. ಮುಂಬರುವ ದಿನಗಳಲ್ಲಿ ‘ವಂದೇಮಾತರಂ’ ಸಂಬಂಧಿತ ಅನೇಕ ಕಾರ್ಯಕ್ರಮಗಳ ನಡೆಯಲಿವೆ, ದೇಶದಲ್ಲಿ ಹಲವಾರು ಆಯೋಜನೆಗಳು ನಡೆಯಲಿವೆ. ನಾವು ದೇಶವಾಸಿಗಳೆಲ್ಲರೂ 'ವಂದೇ ಮಾತರಂ' ಅನ್ನು ವೈಭವೀಕರಿಸಲು ಸ್ವಯಂಪ್ರೇರಿತ ಪ್ರಯತ್ನ ಮಾಡಬೇಕೆಂದು ನಾನು ಬಯಸುತ್ತೇನೆ. ದಯವಿಟ್ಟು ನಿಮ್ಮ ಸಲಹೆಗಳನ್ನು #VandeMatram150 ನೊಂದಿಗೆ ನನಗೆ ಕಳುಹಿಸಿ. ನಾನು ನಿಮ್ಮ ಸಲಹೆ ಸೂಚನೆಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ ಮತ್ತು ನಾವೆಲ್ಲರೂ ಈ ಸಂದರ್ಭವನ್ನು ಐತಿಹಾಸಿಕವನ್ನಾಗಿ ಮಾಡಲು ಕೆಲಸ ಮಾಡೋಣ.
ನನ್ನ ಪ್ರೀತಿಯ ದೇಶಬಾಂಧವರೇ,
ಸಂಸ್ಕೃತ ಎಂಬ ಪದ ಕೇಳುತ್ತಿದ್ದಂತೆಯೇ ನಮ್ಮ ಮನದಲ್ಲಿ ಬರುವ ವಿಷಯಗಳೆಂದರೆ – ನಮ್ಮ ಧರ್ಮಗ್ರಂಥ, ವೇದ, ಉಪನಿಷತ್ತು, ಪುರಾಣ, ಶಾಸ್ತ್ರ, ಪ್ರಾಚೀನ ಜ್ಞಾನ-ವಿಜ್ಞಾನ, ಆಧ್ಯಾತ್ಮ ಮತ್ತು ದರ್ಶನಶಾಸ್ತ್ರ. ಆದರೆ ಒಂದಾನೊಂದು ಕಾಲದಲ್ಲಿ, ಇವುಗಳೊಂದಿಗೆ ಸಂಸ್ಕೃತ ಜನರ ಸಂಭಾಷಣೆಯ ಭಾಷೆಯೂ ಆಗಿತ್ತು. ಆ ಕಾಲದಲ್ಲಿ, ಅಧ್ಯಯನ ಮತ್ತು ಸಂಶೋಧನೆಗಳು ಸಂಸ್ಕೃತದಲ್ಲೇ ನಡೆಯುತ್ತಿದ್ದವು. ನಾಟಕ ಪ್ರದರ್ಶನಗಳು ಕೂಡಾ ಸಂಸ್ಕೃತದಲ್ಲೇ ನಡೆಯುತ್ತಿದ್ದವು. ಆದರೆ ದೌರ್ಭಾಗ್ಯವಶಾತ್, ಗುಲಾಮಗಿರಿಯ ಕಾಲಘಟ್ಟದಲ್ಲಿ, ಮತ್ತು ಸ್ವಾತಂತ್ರ್ಯಾನಂತರವೂ ಸಂಸ್ಕೃತ ಭಾಷೆಯು ನಿರಂತರವಾಗಿ ನಿರ್ಲಕ್ಷ್ಯಕ್ಕೆ ಗುರಿಯಾಯಿತು. ಈ ಕಾರಣದಿಂದಾಗಿ, ಯುವ-ಪೀಳಿಗೆಯಲ್ಲಿ ಸಂಸ್ಕೃತ ಭಾಷೆಯಲ್ಲಿ ಆಕರ್ಷಣೆ ಕಡಿಮೆಯಾಗುತ್ತಾ ಬಂದಿತು. ಆದರೆ ಸ್ನೇಹಿತರೇ, ಈಗ ಕಾಲ ಬದಲಾಗುತ್ತಿದೆ. ಹೀಗಾಗಿ ಸಂಸ್ಕೃತದ ಸಮಯ ಕೂಡಾ ಬದಲಾಗುತ್ತಿದೆ. ಸಂಸ್ಕೃತಿ ಮತ್ತು ಸಾಮಾಜಿಕ ಮಾಧ್ಯಮಗಳ ಜಗತ್ತು ಸಂಸ್ಕೃತಕ್ಕೆ ಹೊಸ ಜೀವ ತುಂಬಿದೆ. ಇತ್ತೀಚಿನ ದಿನಗಳಲ್ಲಿ, ಯುವಜನತೆ ಸಂಸ್ಕೃತಕ್ಕೆ ಸಂಬಂಧಿಸಿದ ಆಸಕ್ತಿದಾಯಕ ಕೆಲಸಗಳನ್ನು ಮಾಡುತ್ತಿದ್ದಾರೆ. ನೀವು ಸಾಮಾಜಿಕ ಮಾಧ್ಯಮಕ್ಕೆ ಭೇಟಿ ನೀಡಿದರೆ, ಯುವಜನತೆ ಸಂಸ್ಕೃತ ಭಾಷೆಯಲ್ಲಿ ಮತ್ತು ಅದರ ಬಗ್ಗೆ ಮಾತನಾಡುವ ಅನೇಕ ರೀಲ್ ಗಳನ್ನು ನೀವು ನೋಡಬಹುದು. ಕೆಲವರಂತೂ ತಮ್ಮ ಸೋಷಿಯಲ್ ಮೀಡಿಯಾ ಚಾನೆಲ್ ಮೂಲಕ ಸಂಸ್ಕೃತ ಭಾಷೆಯನ್ನು ಕಲಿಸುತ್ತಿದ್ದಾರೆ ಕೂಡಾ. ಈ ರೀತಿಯ ಓರ್ವ ಯುವ ಕಂಟೆಂಟ್ ಕ್ರಿಯೇಟರ್ – ಸೋದರ ಯಶ್ ಸಾಲುಂಕೆ. ಯಶ್ ಅವರ ವಿಶಿಷ್ಟ ಪ್ರತಿಭೆಯೆಂದರೆ ಅವರು ಕಂಟೆಂಟ್ ಕ್ರಿಯೇಟರ್ ಮತ್ತು ಕ್ರಿಕೆಟಿಗ ಎರಡೂ ಆಗಿದ್ದಾರೆ. ಸಂಸ್ಕೃತದಲ್ಲಿ ಮಾತನಾಡುತ್ತಾ ಕ್ರಿಕೆಟ್ ಆಡುವ ಅವರ ರೀಲ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಳಿ -
(AUDIO BYTE OF YASH’s SANSKRIT COMMENTARY)
ಸ್ನೇಹಿತರೇ,
ಕಮಲಾ ಮತ್ತು ಜಾಹ್ನವಿ ಎಂಬ ಈ ಇಬ್ಬರು ಸಹೋದರಿಯರ ಕೆಲಸವೂ ಅತ್ಯುತ್ತಮವಾಗಿದೆ. ಅವರು ಆಧ್ಯಾತ್ಮಿಕತೆ, ತತ್ವಶಾಸ್ತ್ರ ಮತ್ತು ಸಂಗೀತದ ಕುರಿತು ವಿಷಯವನ್ನು ರಚಿಸುತ್ತಾರೆ. ಇನ್ನೊಬ್ಬ ಯುವಕನ ಇನ್ ಸ್ಟಾಗ್ರಾಮ್ ನ ಚಾನೆಲ್ "ಸಂಸ್ಕೃತ ಛಾತ್ರೋಹಂ" ಎಂದಾಗಿದೆ. ಈ ಚಾನೆಲ್ ನಡೆಸುವ ಯುವ ಸ್ನೇಹಿತ ಸಂಸ್ಕೃತಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಲ್ಲದೆ, ಸಂಸ್ಕೃತದಲ್ಲಿ ಹಾಸ್ಯಮಯ ವೀಡಿಯೊಗಳನ್ನು ಸಹ ರಚಿಸುತ್ತಾರೆ. ಯುವಜನತೆ ಸಂಸ್ಕೃತದ ಈ ವಿಡಿಯೋವನ್ನು ಬಹಳ ಇಷ್ಟಪಡುತ್ತಾರೆ. ನಿಮ್ಮಲ್ಲಿ ಹಲವರು ಸಮಷ್ಟಿಯ ವೀಡಿಯೊಗಳನ್ನು ನೋಡಿರಬಹುದು. ಸಮಷ್ಟಿ ತಮ್ಮ ಹಾಡುಗಳನ್ನು ಸಂಸ್ಕೃತದಲ್ಲಿ ವಿಭಿನ್ನ ಶೈಲಿಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಮತ್ತೊಬ್ಬ ಯುವಕ ‘ಭಾವೇಶ್ ಭೀಮನಾಥನಿ’. ಭಾವೇಶ್ ಅವರು ಸಂಸ್ಕೃತ ಶ್ಲೋಕಗಳು, ಆಧ್ಯಾತ್ಮಿಕ ದರ್ಶನಶಾಸ್ತ್ರ ಮತ್ತು ತತ್ವಗಳ ಬಗ್ಗೆ ಮಾತನಾಡುತ್ತಾರೆ.
ಸ್ನೇಹಿತರೇ,
ಭಾಷೆ ಎನ್ನುವುದು ಯಾವುದೇ ನಾಗರಿಕತೆಯ ಮೌಲ್ಯಗಳು ಮತ್ತು ಸಂಪ್ರದಾಯಗಳನ್ನು ಹೊಂದಿದೆ. ಸಂಸ್ಕೃತವು ಸಾವಿರಾರು ವರ್ಷಗಳಿಂದ ಈ ಕರ್ತವ್ಯವನ್ನು ಪೂರೈಸಿದೆ. ಕೆಲವು ಯುವಕರು ಈಗ ಸಂಸ್ಕೃತ ಭಾಷೆಗಾಗಿ ತಮ್ಮ ಕರ್ತವ್ಯವನ್ನು ಪೂರೈಸುತ್ತಿರುವುದನ್ನು ನೋಡಲು ಸಂತೋಷವೆನಿಸುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ,
ನಾನು ಈಗ ನಿಮ್ಮನ್ನು ಸ್ವಲ್ಪ Flashback ಗೆ ಕರೆದುಕೊಂಡು ಹೋಗುತ್ತೇನೆ. 20ನೇ ಶತಮಾನದ ಆರಂಭದ ಸಮಯವನ್ನು ಸ್ವಲ್ಪ ಊಹಿಸಿಕೊಳ್ಳಿ. ಆಗ ಸ್ವಾತಂತ್ರ್ಯದ ಭರವಸೆ ಎಲ್ಲಿಯೂ ಸ್ವಲ್ಪ ಮಾತ್ರವೂ ಕಂಡುಬರುತ್ತಿರಲಿಲ್ಲ. ಬ್ರಿಟಿಷರು ಭಾರತದಾದ್ಯಂತ ಶೋಷಣೆಯ ಎಲ್ಲಾ ಮಿತಿಗಳನ್ನು ಮೀರಿದ್ದರು ಮತ್ತು ಹೈದರಾಬಾದ್ ನ ದೇಶಭಕ್ತರ ಮೇಲಿನ ದಬ್ಬಾಳಿಕೆ ಇನ್ನೂ ಭಯಾನಕವಾಗಿತ್ತು. ಕ್ರೂರ ಮತ್ತು ನಿರ್ದಯ ನಿಜಾಮನ ದೌರ್ಜನ್ಯಗಳನ್ನು ಸಹಿಸಿಕೊಳ್ಳುವಂತೆ ಅವರು ಒತ್ತಾಯಿಸಲ್ಪಟ್ಟರು. ಬಡವರು, ಸೌಲಭ್ಯ ವಂಚಿತರು ಮತ್ತು ಬುಡಕಟ್ಟು ಸಮುದಾಯಗಳ ಮೇಲಿನ ದೌರ್ಜನ್ಯಗಳಿಗೆ ಯಾವುದೇ ಮಿತಿ ಇರಲಿಲ್ಲ. ಅವರ ಭೂಮಿಯನ್ನು ಬಲವಂತವಾಗಿ ಕಿತ್ತುಕೊಳ್ಳಲಾಗುತ್ತಿತ್ತು, ಜೊತೆಯಲ್ಲೇ ಅತ್ಯಂತ ಹೆಚ್ಚಿನ ತೆರಿಗೆಯನ್ನು ಹೇರಲಾಗುತ್ತಿತ್ತು. ಒಂದುವೇಳೆ ಅವರು ಈ ಅನ್ಯಾಯವನ್ನು ವಿರೋಧಿಸಿದರೆ, ಅವರ ಕೈಗಳನ್ನು ಕೂಡಾ ಕತ್ತರಿಸಲಾಗುತ್ತಿತ್ತು.
ಸ್ನೇಹಿತರೇ,
ಇಂತಹ ಕಠಿಣ ಸಮಯದಲ್ಲಿ ಸುಮಾರು 20 ವರ್ಷ ವಯೋಮಾನದ ಓರ್ವ ಯುವಕ ಈ ಅನ್ಯಾಯದ ವಿರುದ್ಧ ಸಿಡಿದೆದ್ದು ನಿಂತನು. ಇಂದು ನಾನು ಒಂದು ವಿಶೇಷ ಕಾರಣಕ್ಕಾಗಿ ಈ ಯುವಕನ ಬಗ್ಗೆ ಮಾತನಾಡುತ್ತಿದ್ದೇನೆ. ಆತನ ಹೆಸರನ್ನು ಬಹಿರಂಗಪಡಿಸುವ ಮೊದಲು, ಆತನ ಧೈರ್ಯದ ಬಗ್ಗೆ ನಾನು ನಿಮಗೆ ಹೇಳುತ್ತೇನೆ. ಸ್ನೇಹಿತರೇ, ಆ ದಿನಗಳಲ್ಲಿ, ನಿಜಾಮನ ಆಡಳಿತದ ವಿರುದ್ಧ ಒಂದೇ ಒಂದು ಮಾತನಾಡುವುದನ್ನು ಕೂಡಾ ಅಪರಾಧವೆಂದೇ ಪರಿಗಣಿಸಲಾಗುತ್ತಿತ್ತು. ಆ ಯುವಕ ಸಿದ್ದಿಕಿ ಎಂಬ ನಿಜಾಮನ ಅಧಿಕಾರಿಗೆ ಬಹಿರಂಗವಾಗಿ ಸವಾಲು ಹಾಕಿದ್ದನು. ರೈತರ ಬೆಳೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿಜಾಮ ಸಿದ್ದಿಕಿಯನ್ನು ಕಳುಹಿಸಿದ್ದನು. ಆದರೆ ದಬ್ಬಾಳಿಕೆಯ ವಿರುದ್ಧದ ಈ ಹೋರಾಟದಲ್ಲಿ, ಯುವಕ ಸಿದ್ದಿಕಿಯನ್ನು ಕೊಂದು ಹಾಕಿದನು. ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿಯೂ ಯಶಸ್ವಿಯಾದನು. ನಿಜಾಮನ ದಬ್ಬಾಳಿಕೆಯ ಪೊಲೀಸರಿಂದ ತಪ್ಪಿಸಿಕೊಂಡು, ಆ ಯುವಕ ನೂರಾರು ಕಿಲೋಮೀಟರ್ ದೂರದ ಅಸ್ಸಾಂಗೆ ಪಲಾಯನ ಮಾಡಿದನು.
ಸ್ನೇಹಿತರೇ,
ನಾನು ಯಾವ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದೇನೋ ಆ ವ್ಯಕ್ತಿಯ ಹೆಸರು ಕೋಮರಂ ಭೀಮ್. ಈಗ ಅಕ್ಟೋಬರ್ 22 ರಂದು ಈತನ ಜನ್ಮಜಯಂತಿ ಆಚರಿಸಲಾಯಿತು. ಕೋಮರಂ ಭೀಮ್ ಅವರು ಹೆಚ್ಚು ಕಾಲ ಬದುಕಲಿಲ್ಲ. ಕೇವಲ 40 ವರ್ಷಗಳ ಕಾಲ ಜೀವಿಸಿದ್ದರು. ಆದರೆ ತಮ್ಮ ಜೀವಿತಾವಧಿಯಲ್ಲಿ ಅವರು ಅಸಂಖ್ಯಾತ ಜನರ ಮೇಲೆ, ವಿಶೇಷವಾಗಿ ಬುಡಕಟ್ಟು ಸಮುದಾಯದ ಮೇಲೆ ಅಳಿಸಲಾಗದ ಗುರುತು ಮೂಡಿಸಿದರು. ನಿಜಾಮನ ವಿರುದ್ಧ ಹೋರಾಡುವವರಿಗೆ ಅವರು ಹೊಸ ಶಕ್ತಿಯನ್ನು ತುಂಬಿದರು. ಅವರು ತಮ್ಮ ಕಾರ್ಯತಂತ್ರದ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದರು. ಅವರು ನಿಜಾಮನ ಅಧಿಕಾರಕ್ಕೆ ಗಮನಾರ್ಹ ಸವಾಲನ್ನು ಒಡ್ಡಿದರು. 1940 ರಲ್ಲಿ ನಿಜಾಮನ ಜನರು ಈತನನ್ನು ಹತ್ಯೆಗೈದರು. ಈತನ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಪ್ರಯತ್ನಿಸಬೇಕೆಂದು ನಾನು ಯುವಜನರಲ್ಲಿ ಮನವಿ ಮಾಡುತ್ತೇನೆ.
ಕೋಮರಂ ಭೀಮ್ ಕೀ ...
ನಾ ವಿನಮ್ರ್ ನಿವಾಳೀ.
ಆಯನ್ ಪ್ರಜಲ ಹೃದಯಾಲ್ಲೋ...
ಎಪ್ಪಟಿಕೀ ನಿಲಿಚಿ-ವುಂಟಾರೂ.
(कोमरम भीम की…
ना विनम्र निवाली |
आयन प्रजल हृदयाल्लों...
एप्पटिकी निलिचि-वूँटारू |)
ಕೊಮರಂ ಭೀಮ್ ಅವರಿಗೆ ನನ್ನ ವಿನಮ್ರ ಪ್ರಣಾಮಗಳು.
ಅವರು ಜನರ ಹೃದಯಗಳಲ್ಲಿ ಸದಾ ಕಾಲ ಜೀವಿಸಿರುತ್ತಾರೆ.
(English Translation)
My humble tributes to Komaram Bhimji ,
He remains forever in the hearts of people.
ಸ್ನೇಹಿತರೇ,
ಮುಂದಿನ ತಿಂಗಳ 15 ನೇ ತಾರೀಖಿನಂದು ನಾವು ‘ಜನಜಾತೀಯ ಗೌರವ್ ದಿನ’ ಆಚರಿಸಲಿದ್ದೇವೆ. ಇದು ಭಗವಾನ್ ಬಿರ್ಸಾ ಮುಂಡಾ ಅವರ ಜಯಂತಿಯ ಶುಭ ಸಂದರ್ಭವಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ರಾಷ್ಟ್ರದ ಸ್ವಾತಂತ್ರ್ಯ ಮತ್ತು ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಅವರು ಮಾಡಿದ ಕೆಲಸ ಅನುಪಮ. ಜಾರ್ಖಂಡ್ ನ ಭಗವಾನ್ ಬಿರ್ಸಾ ಮುಂಡಾ ಅವರ ಉಲಿಹಾತು ಗ್ರಾಮಕ್ಕೆ ಭೇಟಿ ನೀಡುವ ಅವಕಾಶ ದೊರೆತಿದ್ದು ನನ್ನ ಪಾಲಿನ ಅದೃಷ್ಟ. ನಾನು ಅಲ್ಲಿನ ಮಣ್ಣನ್ನು ನನ್ನ ಹಣೆಯ ಮೇಲೆ ಧರಿಸಿ ನಮನ ಸಲ್ಲಿಸಿದೆ. ಭಗವಾನ್ ಬಿರ್ಸಾ ಮುಂಡಾ ಮತ್ತು ಕೋಮರಂ ಭೀಮ್ ನಂತೆ ನಮ್ಮ ಬುಡಕಟ್ಟು ಸಮುದಾಯಗಳಲ್ಲಿ ಇನ್ನೂ ಅನೇಕ ಮಹಾನ್ ವ್ಯಕ್ತಿಗಳು ಇದ್ದಾರೆ. ಅವರ ಬಗ್ಗೆ ಖಂಡಿತವಾಗಿಯೂ ಓದಬೇಕೆಂದು ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ,
‘ಮನದ ಮಾತಿ’ಗಾಗಿ ನನಗೆ ನೀವು ಕಳುಹಿಸುವ ಅನೇಕ ಸಂದೇಶಗಳು ದೊರೆಯುತ್ತವೆ. ಕೆಲವರು ಈ ಸಂದೇಶಗಳಲ್ಲಿ, ತಮ್ಮ ಸುತ್ತ ಮುತ್ತಲಿನ ಪ್ರತಿಭಾವಂತರ ಬಗ್ಗೆ ಮಾತನಾಡುತ್ತಾರೆ. ಅವುಗಳನ್ನು ಓದಿ, ನಮ್ಮ ಸಣ್ಣ ನಗರಗಳು, ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಕೂಡಾ ಆವಿಷ್ಕಾರಕ ಚಿಂತನೆಗಳೊಂದಿಗೆ ಕೆಲಸ ನಡೆಯುತ್ತಿರುವ ಬಗ್ಗೆ ನನಗೆ ಬಹಳ ಸಂತೋಷವಾಗುತ್ತದೆ. ಸೇವಾ ಮನೋಭಾವದಿಂದ ಸಮಾಜದಲ್ಲಿ ಬದಲಾವಣೆ ತರುವ ಕಾರ್ಯದಲ್ಲಿ ತೊಡಗಿರುವ, ವ್ಯಕ್ತಿಯ ಬಗ್ಗೆ ಅಥವಾ ಗುಂಪುಗಳ ಬಗ್ಗೆ ನಿಮಗೆ ತಿಳಿದಿದ್ದರೆ, ನನಗೆ ಖಂಡಿತಾ ತಿಳಿಯಪಡಿಸಿ. ಎಂದಿನಂತೆ ನಾನು ನಿಮ್ಮ ಸಂದೇಶಗಳಿಗಾಗಿ ನಿರೀಕ್ಷಿಸುತ್ತಿರುತ್ತೇನೆ. ಮುಂದಿನ ತಿಂಗಳು ನಾವು, ‘ಮನದ ಮಾತಿ’ನ ಮತ್ತೊಂದು ಸಂಚಿಕೆಯಲ್ಲಿ ಭೇಟಿಯಾಗೋಣ, ಕೆಲವು ಹೊಸ ವಿಷಯಗಳೊಂದಿಗೆ ಭೇಟಿಯಾಗೋಣ, ಅಲ್ಲಿಯವರೆಗೆ ನಿಮ್ಮಿಂದ ವಿದಾಯ ಕೋರುತ್ತಿದ್ದೇನೆ. ನಿಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು. ನಮಸ್ಕಾರ.
*****
(Release ID: 2182586)
Visitor Counter : 10
Read this release in:
Punjabi
,
Telugu
,
Manipuri
,
Assamese
,
English
,
Urdu
,
Marathi
,
हिन्दी
,
Bengali
,
Gujarati
,
Odia
,
Tamil
,
Malayalam