ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯಲ್ಲಿ "ತಲೆಮರೆಸಿಕೊಂಡಿರುವ ಅಪರಾಧಿಗಳ ಹಸ್ತಾಂತರ: ಸವಾಲುಗಳು ಮತ್ತು ಕಾರ್ಯತಂತ್ರಗಳು" ಕುರಿತು ಸಿ.ಬಿ.ಐ ಆಯೋಜಿಸಿದ್ದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ತನ್ನ ಗಡಿಗಳ ಭದ್ರತೆಯ ಜೊತೆಗೆ ಕಾನೂನಿನ ನಿಯಮವನ್ನು ಬಲಪಡಿಸುವುದನ್ನು ಖಾತ್ರಿಪಡಿಸುತ್ತಿದೆ
ತಲೆಮರೆಸಿಕೊಂಡಿರುವ ಅಪರಾಧಿಗಳ ವಿಚಾರವು ರಾಷ್ಟ್ರದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ ಹಾಗೂ ಕಾನೂನು ಸುವ್ಯವಸ್ಥೆಯೊಂದಿಗೆ ಮಾತ್ರವಲ್ಲದೆ, ದೇಶದ ಭದ್ರತೆ ಜತೆಗೂ ನಂಟು ಹೊಂದಿದೆ
ದೇಶದ ಆರ್ಥಿಕತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಹಾನಿ ಮಾಡಿ ವಿದೇಶದಲ್ಲಿ ಕುಳಿತಿರುವವರು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಹೆದರದ ಹೊರತು ನಾವು ದೇಶವನ್ನು ಸುರಕ್ಷಿತವಾಗಿಸಲು ಸಾಧ್ಯವಿಲ್ಲ
ಆರ್ಥಿಕ ಅಪರಾಧ, ಸೈಬರ್ ಅಪರಾಧ, ಭಯೋತ್ಪಾದಕ ಕೃತ್ಯಗಳು ಅಥವಾ ಸಂಘಟಿತ ಅಪರಾಧದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ನಿರ್ದಯ ವಿಧಾನದೊಂದಿಗೆ ಕಾನೂನಿನ ಮುಂದೆ ತರಲು ಮೋದಿ ಸರ್ಕಾರ ವ್ಯವಸ್ಥೆ ಮಾಡುತ್ತಿದೆ
ತಲೆಮರೆಸಿಕೊಂಡಿರುವ ಅಪರಾಧಿಗಳಲ್ಲಿ ಬೇರೂರಿರುವ ಭಾರತೀಯ ಕಾನೂನು ತಮ್ಮನ್ನು ತಲುಪಲು ಸಾಧ್ಯವಿಲ್ಲ ಎಂಬ ನಂಬಿಕೆ ಈಗ ಕೊನೆಗೊಳ್ಳುತ್ತಿದೆ
ಪ್ರತಿ ರಾಜ್ಯವೂ ಸಿ.ಬಿ.ಐ ಸಹಯೋಗದೊಂದಿಗೆ ರಾಜ್ಯದಿಂದ ಪರಾರಿಯಾದವರನ್ನು ಮರಳಿ ಕರೆತರುವ ವ್ಯವಸ್ಥೆ ಅಭಿವೃದ್ಧಿಪಡಿಸಲು ಘಟಕವೊಂದನ್ನು ಸ್ಥಾಪಿಸಬೇಕು
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಾರಿಯಾದವರನ್ನು ಬಂಧಿಸಲು ಸಿ.ಬಿ.ಐ ವಿಶೇಷ ʻಜಾಗತಿಕ ಕಾರ್ಯಾಚರಣೆ ಕೇಂದ್ರʼವನ್ನು ಸ್ಥಾಪಿಸಿದೆ, ಇದು ವಿಶ್ವಾದ್ಯಂತ ಪೊಲೀಸ್ ಪಡೆಗಳೊಂದಿಗೆ ನೈಜ ಸಮಯದಲ್ಲಿ ಸಮನ್ವಯ ನಡೆಸುತ್ತಿದೆ
ಜನವರಿ 2025 ರಿಂದ ಸೆಪ್ಟೆಂಬರ್ ವರೆಗೆ, 189ಕ್ಕೂ ಹೆಚ್ಚು ʻರೆಡ್ ಕಾರ್ನರ್ ನೋಟಿಸ್ʼಗಳನ್ನು ನೀಡಲಾಗಿದೆ, ಇದು ಸಿ.ಬಿ.ಐ ಇತಿಹಾಸದಲ್ಲೇ ಅತ್ಯಧಿಕವಾಗಿದೆ
ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿ ಪರಾರಿಯಾದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಮೋದಿ ಸರ್ಕಾರ ಪರಿಚಯಿಸಿದ ಕಾನೂನಿನಿಂದಾಗಿ, ನಾಲ್ಕು ವರ್ಷಗಳಲ್ಲಿ ಸುಮಾರು 2 ಶತಕೋಟಿ ಡಾಲರ್ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ
ಹಸ್ತಾಂತರ ಪ್ರಕರಣಗಳ ಪರಿಣಾಮಕಾರಿ ಸಿದ್ಧತೆಗಾಗಿ ಪ್ರತಿ ರಾಜ್ಯದ ಪೊಲೀಸರು ಆದಷ್ಟು ತ್ವರಿತವಾಗಿ ತಜ್ಞರನ್ನು ಒಳಗೊಂಡ ವಿಶೇಷ ಘಟಕವನ್ನು ಸ್ಥಾಪಿಸಬೇಕು
ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪ್ರತಿ ರಾಜ್ಯದಲ್ಲೂ ವಿಶೇಷ ಕಾರಾಗೃಹಗಳನ್ನು ಸ್ಥಾಪಿಸಬೇಕು
Posted On:
16 OCT 2025 4:06PM by PIB Bengaluru
ಕೇಂದ್ರೀಯ ತನಿಖಾ ದಳ(ಸಿ.ಬಿ.ಐ) ಇಂದು ನವದೆಹಲಿಯಲ್ಲಿ ಆಯೋಜಿಸಿದ್ದ 'ತಲೆಮರೆಸಿಕೊಂಡಿರುವ ಅಪರಾಧಿಗಳ ಹಸ್ತಾಂತರ: ಸವಾಲುಗಳು ಮತ್ತು ಕಾರ್ಯತಂತ್ರಗಳು' ಕುರಿತ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ, ವಿದೇಶಾಂಗ ಕಾರ್ಯದರ್ಶಿ, ಗುಪ್ತಚರ ದಳದ ನಿರ್ದೇಶಕರು ಮತ್ತು ಕೇಂದ್ರೀಯ ತನಿಖಾ ದಳದ (ಸಿ.ಬಿ.ಐ) ನಿರ್ದೇಶಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ದೇಶವು ಜಾಗತಿಕ ವೇದಿಕೆಯಲ್ಲಿ ವಿಶ್ವಾಸದಿಂದ ಮುನ್ನಡೆಯುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ ಹೇಳಿದರು. ರಾಷ್ಟ್ರೀಯ ಭದ್ರತೆಯ ಎಲ್ಲಾ ಆಯಾಮಗಳನ್ನು ಖಾತರಿಪಡಿಸುವುದು ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಒತ್ತಿ ಹೇಳಿದರು. ದೇಶದೊಳಗಿನ ಭ್ರಷ್ಟಾಚಾರ, ಅಪರಾಧ ಮತ್ತು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿರುವಂತೆಯೇ, ಭಾರತದ ಗಡಿಯಾಚೆಯಿಂದ ಇಂತಹ ಚಟುವಟಿಕೆಗಳನ್ನು ನಡೆಸುವವರ ಬಗ್ಗೆಯೂ ನಾವು ಶೂನ್ಯ ಸಹಿಷ್ಣುತೆಯ ವಿಧಾನವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಅಂತಹ ಎಲ್ಲಾ ಅಪರಾಧಿಗಳನ್ನು ಭಾರತೀಯ ಕಾನೂನುಗಳ ವ್ಯಾಪ್ತಿಗೆ ತರುವುದು ಮತ್ತು ಈ ಉದ್ದೇಶಕ್ಕಾಗಿ ದೃಢವಾದ ಕಾರ್ಯವಿಧಾನವನ್ನು ರಚಿಸುವುದು ನಮ್ಮ ಜವಾಬ್ದಾರಿಯಾಗಿದೆ. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಕರೆತಂದು ಭಾರತೀಯ ನ್ಯಾಯಾಲಯಗಳ ಮುಂದೆ ನಿಲ್ಲಿಸುವ ನಿಟ್ಟಿನಲ್ಲಿ ʻಇಂಟರ್‌ಪೋಲ್ʼ ಅಡಿಯಲ್ಲಿ ಲಭ್ಯವಿರುವ ನಿಬಂಧನೆಗಳು ಹಾಗೂ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಜೊತೆಗೆ ಈ ಸಮ್ಮೇಳನವು ಒಂದು ಸಂಘಟಿತ ಪ್ರಯತ್ನವಾಗಿದೆ. ಜೊತೆಗೆ ಇದರ ಸಾಧನೆಗೆ ಈ ಸಮ್ಮೇಳನವು ಮಾರ್ಗಸೂಚಿಯನ್ನೂ ಒದಗಿಸುತ್ತದೆ ಎಂದು ಗೃಹ ಸಚಿವರು ಹೇಳಿದರು. ಸುಮಾರು ಒಂದೂವರೆ ವರ್ಷದ ಹಿಂದೆ ತಾವು ನೀಡಿದ ಸಲಹೆಯ ಮೇರೆಗೆ ಕೇಂದ್ರೀಯ ತನಿಖಾ ದಳವು (ಸಿ.ಬಿ.ಐ) ಪರಾರಿಯಾದ ಅಪರಾಧಿಗಳ ಹಸ್ತಾಂತರದ ಪರಿಕಲ್ಪನೆಯನ್ನು ಜಾರಿಗೆ ತಂದಿದ್ದು, ಇದಕ್ಕಾಗಿ ಸಂಸ್ಥೆಯು ಮೆಚ್ಚುಗೆಗೆ ಅರ್ಹವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
ಅಪರಾಧಿಯು ಎಷ್ಟೇ ಕುತಂತ್ರಿಯಾಗಿದ್ದರೂ, ನ್ಯಾಯದ ತಲುಪುವಿಕೆಯು ಇನ್ನಷ್ಟು ತ್ವರಿತವಾಗಿರಬೇಕು ಎಂಬುದು ನಮ್ಮ ಸಾಮೂಹಿಕ ಸಂಕಲ್ಪವಾಗಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಬಲಿಷ್ಠ ಭಾರತವು ಗಡಿ ಭದ್ರತೆಯನ್ನು ಮಾತ್ರವಲ್ಲದೆ ಕಾನೂನಿನ ನಿಯಮಗಳ ಬಲವರ್ಧನೆ ಮುಂದುವರಿಸಿದೆ ಎಂದು ಅವರು ಹೇಳಿದರು. ಎರಡು ದಿನಗಳ ಸಮ್ಮೇಳನವು ಜಾಗತಿಕ ಕಾರ್ಯಾಚರಣೆ, ಬಲವಾದ ಸಮನ್ವಯ ಮತ್ತು ಸ್ಮಾರ್ಟ್ ರಾಜತಾಂತ್ರಿಕತೆಯ ನಡುವೆ ಸಹಯೋಗವನ್ನು ಖಚಿತಪಡಿಸುತ್ತದೆ ಎಂದು ಗೃಹ ಸಚಿವರು ಒತ್ತಿ ಹೇಳಿದರು. ಸಮ್ಮೇಳನದ ವಿಷಯವು ಅತ್ಯಂತ ಮಹತ್ವಪೂರ್ಣ ಮತ್ತು ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ಈ ಸಮ್ಮೇಳನದ ಚರ್ಚೆಗಳು ಮತ್ತು ಸೂಚಿಸಲಾದ ಕ್ರಮಗಳು ರಾಷ್ಟ್ರೀಯ ಭದ್ರತೆ, ದೇಶದ ಆರ್ಥಿಕ ಸಮೃದ್ಧಿಗೆ ನೆರವಾಗುವುದರ ಜೊತೆಗೆ ನೀತಿ ಸಂಕೀರ್ಣತೆಗಳನ್ನು ನಿವಾರಿಸಲು ಹೆಚ್ಚು ಪ್ರಯೋಜನಕಾರಿಯಾಗಿವೆ. ಸೈಬರ್ ಅಪರಾಧ, ಆರ್ಥಿಕ ಅಪರಾಧಗಳು, ಹಣದ ಮೂಲ ಮತ್ತು ಹರಿವನ್ನು ಪತ್ತೆಹಚ್ಚುವುದು, ಸಂಕೀರ್ಣ ಹಸ್ತಾಂತರ ಪ್ರಕ್ರಿಯೆಗಳನ್ನು ಸರಳಗೊಳಿಸುವುದು, ಪರಾರಿಯಾದವರನ್ನು ಮರಳಿ ಕರೆತರುವುದು, ಅವರ ಭೌಗೋಳಿಕ ಸ್ಥಳಗಳ ಡೇಟಾಬೇಸ್ ರಚಿಸುವುದು ಮತ್ತು ಅಂತರರಾಷ್ಟ್ರೀಯ ಪೊಲೀಸರ ಸಹಕಾರದ ಮೂಲಕ ಈ ಕಾರ್ಯವಿಧಾನವನ್ನು ಬಳಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಏಳು ಅಧಿವೇಶನಗಳಲ್ಲಿ ಸಮ್ಮೇಳನವು ಅರ್ಥಪೂರ್ಣ ಚರ್ಚೆಗಳನ್ನು ಒಳಗೊಂಡಿರುತ್ತದೆ ಎಂದು ಶ್ರೀ ಶಾ ಅವರು ಒತ್ತಿ ಹೇಳಿದರು.
ತಲೆಮರೆಸಿಕೊಂಡಿರುವ ಅಪರಾಧಿಗಳ ವಿಚಾರವು ದೇಶದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ, ಕಾನೂನು-ಸುವ್ಯವಸ್ಥೆ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಬಹಳ ಸಮಯದ ನಂತರ, ಈ ವಿಷಯದ ಬಗ್ಗೆ ರಚನಾತ್ಮಕ ವಿಧಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ನಿರ್ದಯ ವಿಧಾನವನ್ನು ಅಳವಡಿಸಿಕೊಳ್ಳುವ ಮತ್ತು ಪರಾರಿಯಾದ ಪ್ರತಿಯೊಬ್ಬ ವ್ಯಕ್ತಿಯನ್ನು ಕಾಲಮಿತಿಯೊಳಗೆ ಭಾರತೀಯ ನ್ಯಾಯ ವ್ಯವಸ್ಥೆಯ ಮುಂದೆ ತರುವ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವ ಸಮಯ ಬಂದಿದೆ ಎಂದು ಅವರು ಹೇಳಿದರು. ಯಾವುದೇ ತಲೆಮರೆಸಿಕೊಂಡ ಅಪರಾಧಿಯನ್ನು ಬಂಧಿಸಲು ಭರವಸೆ ಮತ್ತು ಪರಿಸರ ವ್ಯವಸ್ಥೆ ಎಂಬ ಎರಡು ಅಂಶಗಳು ಅತ್ಯಗತ್ಯ ಎಂದು ಶ್ರೀ ಶಾ ಒತ್ತಿ ಹೇಳಿದರು. ದೇಶಭ್ರಷ್ಟ ಅಪರಾಧಿಗಳ ಮನಸ್ಸಿನಲ್ಲಿ ʻಕಾನೂನು ತಮ್ಮನ್ನು ತಲುಪಲು ಸಾಧ್ಯವಿಲ್ಲʼ ಎಂಬ ನಂಬಿಕೆ ಬೇರೂರಿದ್ದು, ಅದನ್ನು ತೊಡೆದುಹಾಕುವ ಅಗತ್ಯವನ್ನು ಸಚಿವರು ಒತ್ತಿ ಹೇಳಿದರು. ಇದಲ್ಲದೆ ಅಂತಹ ಅಪರಾಧಿಗಳಿಗೆ ಕಾನೂನು, ಆರ್ಥಿಕ ಮತ್ತು ರಾಜಕೀಯ ಬೆಂಬಲದ ಪರಿಸರ ವ್ಯವಸ್ಥೆಯನ್ನು ಸಹ ಕಿತ್ತೊಗೆಯಬೇಕು. ವಿದೇಶದಲ್ಲಿ ಪರಾರಿಯಾದವರು ಸೃಷ್ಟಿಸಿದ ಸಾಂಸ್ಥಿಕ ಸಂಬಂಧವನ್ನು ಸಹ ನಿರ್ಮೂಲನೆ ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.
ಭಾರತೀಯ ಹಸ್ತಾಂತರ ವ್ಯವಸ್ಥೆಗೆ ಉದ್ದೇಶ ಮತ್ತು ಪ್ರಕ್ರಿಯೆ ಎಂಬ ಎರಡು ಪ್ರಮುಖ ಅಂಶಗಳು ಬೇಕಾಗುತ್ತವೆ ಎಂದು ಶ್ರೀ ಅಮಿತ್ ಶಾ ಪ್ರತಿಪಾದಿಸಿದರು. ನಮ್ಮ ಹಸ್ತಾಂತರ ವ್ಯವಸ್ಥೆಯು ಐದು ಉದ್ದೇಶಗಳನ್ನು ಹೊಂದಿರಬೇಕು ಎಂದು ಗೃಹ ಸಚಿವರು ವಿವರಿಸಿದರು, ಅವುಗಳೆಂದರೆ: ಗಡಿಯಾಚೆಗಿನ ನ್ಯಾಯದ ವ್ಯಾಪ್ತಿಯನ್ನು ಖಾತರಿಪಡಿಸುವುದು; ಗುರುತಿನ ವ್ಯವಸ್ಥೆಯನ್ನು ಅತ್ಯಾಧುನಿಕ ಮತ್ತು ನಿಖರವಾಗಿಸುವ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವುದು; ಕಾನೂನು ಮತ್ತು ನ್ಯಾಯಾಂಗ ವ್ಯವಸ್ಥೆಗಳ ಬಗ್ಗೆ ನಮ್ಮ ಅಂತರರಾಷ್ಟ್ರೀಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವುದು; ನಮ್ಮ ಕಾಳಜಿಯಲ್ಲಿ ಇತರ ದೇಶಗಳನ್ನು ತೊಡಗಿಸಿಕೊಳ್ಳುವಾಗ ಆರ್ಥಿಕ ವ್ಯವಸ್ಥೆಯನ್ನು ರಕ್ಷಿಸುವುದು; ಹಾಗೂ ಕಾನೂನಿನ ನಿಯಮಕ್ಕೆ ಜಾಗತಿಕ ಸ್ವೀಕಾರತೆಯನ್ನು ಖಾತರಿಪಡಿಸುವುದು. ತಡೆರಹಿತ ಸಂವಹನ, ಕಾರ್ಯತಂತ್ರದ ವಿಧಾನ ಮತ್ತು ಸಂಘಟಿತ ಕಾರ್ಯಾಚರಣೆ ಮೂಲಕ ಪ್ರಕ್ರಿಯೆಯನ್ನು ಸುಧಾರಿಸಲು ಅವಕಾಶವಿದ್ದು, ಆ ಮೂಲಕ ನಾವು ಈ ಗುರಿಯನ್ನು ಸಾಧಿಸಬಹುದು ಎಂದು ಶ್ರೀ ಶಾ ಒತ್ತಿ ಹೇಳಿದರು.
ಅಪರಾಧ ಎಸಗಿ ರಾಜ್ಯದಿಂದ ಪಲಾಯನ ಮಾಡಿದ ಅಪರಾಧಿಗಳನ್ನು ಸಿ.ಬಿ.ಐ ಸಹಕಾರದೊಂದಿಗೆ ಮರಳಿ ಕರೆತರಲು ಕಾರ್ಯವಿಧಾನವನ್ನು ರಚಿಸಲು ಪ್ರತಿ ರಾಜ್ಯವು ವಿಶೇ಼ ಘಟಕವನ್ನು ಸ್ಥಾಪಿಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಪ್ರಯತ್ನವನ್ನು ಸಂಪೂರ್ಣ ಸರ್ಕಾರದ ವಿಧಾನದ ಮೂಲಕ ವೇಗಗೊಳಿಸಬೇಕು ಎಂದು ಅವರು ಒತ್ತಿ ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ನಂತರ ಅನೇಕ ರೀತಿಯ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. 2018ರಲ್ಲಿ, ನಾವು ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯನ್ನು ಪರಿಚಯಿಸಿದ್ದೇವೆ. ಇದು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳು ಭಾರತದಲ್ಲಿ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ನೀಡುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ, ಸರ್ಕಾರವು ಈ ಕಾನೂನಿನಡಿಯಲ್ಲಿ ಸುಮಾರು 2 ಶತಕೋಟಿ ಡಾಲರ್‌ಗಳಷ್ಟು ಸ್ವತ್ತನ್ನು ವಶಪಡಿಸಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ಕಾಯ್ದೆಯನ್ನು ಹೆಚ್ಚು ಕಠಿಣ ಮತ್ತು ದೃಢಗೊಳಿಸಲಾಗಿದೆ. 2014 ಮತ್ತು 2023ರ ನಡುವೆ ಸುಮಾರು 12 ಶತಕೋಟಿ ಡಾಲರ್ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ತಲೆಮರೆಸಿಕೊಂಡ ಅಪರಾಧಿಗಳನ್ನು ಹಿಡಿಯಲು ಸಿ.ಬಿ.ಐ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ʻಗ್ಲೋಬಲ್ ಆಪರೇಷನ್ ಸೆಂಟರ್ʼ ಅನ್ನು ಸ್ಥಾಪಿಸಿದೆ, ಇದು ವಿಶ್ವದಾದ್ಯಂತದ ಪೊಲೀಸ್ ಸಂಸ್ಥೆಗಳೊಂದಿಗೆ ನೈಜ ಸಮಯದಲ್ಲಿ ಸಮನ್ವಯ ಸಾಧಿಸುತ್ತಿದೆ. ಈ ವರ್ಷದ ಜನವರಿಯಿಂದ ಸೆಪ್ಟೆಂಬರ್‌ವರೆಗೆ 190ಕ್ಕೂ ಹೆಚ್ಚು ʻರೆಡ್ ಕಾರ್ನರ್ ನೋಟಿಸ್ʼಳನ್ನು ನೀಡಲಾಗಿದ್ದು, ಇದು ಸಿ.ಬಿ.ಐ ಇತಿಹಾಸದಲ್ಲಿ ಅತ್ಯಧಿಕವಾಗಿದೆ ಎಂದು ಶ್ರೀ ಶಾ ಹೇಳಿದರು. 'ಆಪರೇಷನ್ ತ್ರಿಶೂಲ್' ಅಡಿಯಲ್ಲಿ, ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಣಾಮಕಾರಿ ಫಲಿತಾಂಶಗಳನ್ನು ನೀಡಲಾಗಿದೆ. ಅಂತೆಯೇ, ಜನವರಿ 2025ರಲ್ಲಿ ʻಭಾರತ್ ಪೋಲ್ʼ ಸ್ಥಾಪನೆಯಾದಾಗಿನಿಂದ, ಪ್ರೋತ್ಸಾಹದಾಯಕ ಫಲಿತಾಂಶಗಳನ್ನು ಸಾಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮೋದಿ ಸರ್ಕಾರವು 160 ವರ್ಷಗಳಷ್ಟು ಹಳೆಯದಾದ ವಸಾಹತುಶಾಹಿ ಯುಗದ ಕಾನೂನುಗಳನ್ನು ಬದಲಾಯಿಸಿ ಮೂರು ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತಂದಿದೆ, ಇದು 21ನೇ ಶತಮಾನದ ಅತಿದೊಡ್ಡ ಸುಧಾರಣೆಯಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2027ರ ನಂತರ, ಮೂರು ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಮಟ್ಟದವರೆಗೆ ಯಾವುದೇ ಪ್ರಕರಣದಲ್ಲಿ ನ್ಯಾಯವನ್ನು ನೀಡಲಾಗುವುದು ಎಂದು ಅವರು ಹೇಳಿದರು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿ.ಎನ್.ಎಸ್.ಎಸ್) ಸೆಕ್ಷನ್ 355 ಮತ್ತು 356 ಆರೋಪಿಗಳ ʻಅನುಪಸ್ಥಿತಿಯಲ್ಲಿ ವಿಚಾರಣೆʼಗೆ ಅವಕಾಶ ನೀಡುತ್ತವೆ ಎಂದು ಗೃಹ ಸಚಿವರು ಹೇಳಿದರು. ಭಾರತದ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಈ ನಿಬಂಧನೆಯನ್ನು ಕಾನೂನಿನಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು. ಒಬ್ಬ ವ್ಯಕ್ತಿಯನ್ನು ತಲೆಮರೆಸಿಕಂಡ ಅಪರಾಧಿ ಎಂದು ಘೋಷಿಸಿದರೆ, ನ್ಯಾಯಾಲಯವು ಅವರ ಅನುಪಸ್ಥಿತಿಯಲ್ಲಿಯೂ ಅವರನ್ನು ಪ್ರತಿನಿಧಿಸಲು ವಕೀಲರನ್ನು ನೇಮಿಸುವ ಮೂಲಕ ವಿಚಾರಣೆಯನ್ನು ಮುಂದುವರಿಸಬಹುದು ಎಂದು ಶ್ರೀ ಶಾ ವಿವರಿಸಿದರು. ತಲೆಮರೆಸಿಕೊಂಡ ಅಪರಾಧಿಯು ಅವರ ಗೈರುಹಾಜರಿಯಲ್ಲಿ ನಡೆದ ವಿಚಾರಣೆ ವೇಳೆ ಶಿಕ್ಷೆಗೊಳಗಾದ ನಂತರ, ಅದು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಆ ವ್ಯಕ್ತಿಯ ಸ್ಥಾನಮಾನದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ ಎಂದು ಗೃಹ ಸಚಿವರು ಹೇಳಿದರು. ʻಬಿಎನ್ಎಸ್ಎಸ್ʼ ಅಡಿಯಲ್ಲಿ ಲಭ್ಯವಿರುವ ʻಅನುಪಸ್ಥಿತಿಯಲ್ಲಿ ವಿಚಾರಣೆʼಯ ನಿಬಂಧನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಮತ್ತು ಅಪರಾಧಿಗಳ ಅನುಪಸ್ಥಿತಿಯಲ್ಲಿಯೂ ವಿಚಾರಣೆ ಮುಂದುವರಿಯಬೇಕು ಎಂದು ಅವರು ಒತ್ತಿ ಹೇಳಿದರು.
ಈ ಸಮ್ಮೇಳನದಿಂದ ಹೊರಹೊಮ್ಮುವ ಕ್ರಿಯಾತ್ಮಕ ಅಂಶಗಳು, ʻಭಾರತ್ ಪೋಲ್ʼ ಮತ್ತು ʻಗೈರುಹಾಜರಿಯಲ್ಲಿ ವಿಚಾರಣೆʼ ನಿಬಂಧನೆಗಳನ್ನು ಬಳಸಿಕೊಂಡು ಸಂಯೋಜಿತ ಕಾರ್ಯವಿಧಾನವೊಂದನ್ನು ರಚಿಸಬೇಕು. ಈ ವ್ಯವಸ್ಥೆಯು ರಾಜ್ಯ ಪೊಲೀಸ್ ಪಡೆಗಳು ಮತ್ತು ಎಲ್ಲಾ ಕೇಂದ್ರ ಏಜೆನ್ಸಿಗಳಲ್ಲಿ ಲಭ್ಯವಿರಬೇಕು. ಸಿ.ಬಿ.ಐ ಅಧಿಕೃತವಾಗಿ ಅದರ ಮೇಲ್ವಿಚಾರಣೆ ನಡೆಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಅಪರಾಧಿಗಳ ದತ್ತಾಂಶವನ್ನು ಇಡೀ ದೇಶಾದ್ಯಂತದ ಪೊಲೀಸ್ ಪಡೆಗಳೊಂದಿಗೆ ಹಂಚಿಕೊಳ್ಳಲು ದೃಢವಾದ ವ್ಯವಸ್ಥೆಯನ್ನು ಸ್ಥಾಪಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಮಾದಕವಸ್ತುಗಳು, ಭಯೋತ್ಪಾದನೆ, ಗ್ಯಾಂಗ್‌ಸ್ಟರ್‌ಗಳು ಮತ್ತು ಆರ್ಥಿಕ ಅಪರಾಧಗಳು ಮತ್ತು ಸೈಬರ್ ಅಪರಾಧಗಳನ್ನು ಎದುರಿಸಲು ಪ್ರತಿ ರಾಜ್ಯ ಪೊಲೀಸ್ ಪಡೆಯಲ್ಲಿ ಕೇಂದ್ರೀಕೃತ ಸಮನ್ವಯ ಪಡೆಯನ್ನು ಸ್ಥಾಪಿಸಬೇಕು ಎಂದು ಶ್ರೀ ಶಾ ಸಲಹೆ ನೀಡಿದರು. ಮಾದಕವಸ್ತುಗಳು, ಭಯೋತ್ಪಾದನೆ, ಗ್ಯಾಂಗ್‌ಸ್ಟರ್‌ಗಳು ಹಾಗೂ ಆರ್ಥಿಕ ಮತ್ತು ಸೈಬರ್ ಅಪರಾಧಗಳ ಬಗ್ಗೆ ಸಮನ್ವಯ ಸಾಧಿಸಲು ಪ್ರತಿ ರಾಜ್ಯದ ಪೊಲೀಸ್ ಪಡೆಯಲ್ಲಿ ʻಫೋಕಸ್ ಗ್ರೂಪ್ʼ ಅನ್ನು ಸ್ಥಾಪಿಸಬೇಕು ಎಂದು ಶ್ರೀ ಶಾ ಹೇಳಿದರು. ಗುಪ್ತಚರ ಬ್ಯೂರೋ (ಐ.ಬಿ.) ಮತ್ತು ಸಿ.ಬಿ.ಐ ಮಲ್ಟಿ ಏಜೆನ್ಸಿ ಸೆಂಟರ್ (ಎಂ.ಎ.ಸಿ) ಮೂಲಕ ಈ ʻಫೋಕಸ್ ಗ್ರೂಪ್ʼ ಅನ್ನು ಬಲಪಡಿಸಲು ಮತ್ತು ವೇಗಗೊಳಿಸಲು ಕೆಲಸ ಮಾಡಬೇಕು ಎಂದು ಅವರು ಹೇಳಿದರು. ಹಸ್ತಾಂತರ ಪ್ರಕರಣಗಳ ಪರಿಣಾಮಕಾರಿ ಸಿದ್ಧತೆಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ರಾಜ್ಯ ಪೊಲೀಸ್ ಪಡೆಯು ಆದಷ್ಟು ಶೀಘ್ರವಾಗಿ ವಿಶೇಷ ತಜ್ಞರ ಘಟಕವನ್ನು ಸ್ಥಾಪಿಸಬೇಕು ಎಂದು ಶ್ರೀ ಶಾ ಹೇಳಿದರು. ಈ ವಿಶೇಷ ಘಟಕಗಳಿಗೆ ಮಾರ್ಗದರ್ಶನ ನೀಡಲು, ಹಸ್ತಾಂತರ ಮನವಿಗಳನ್ನು ಪರಿಶೀಲಿಸಲು ಸಿ.ಬಿ.ಐನೊಳಗೆ ಮೀಸಲಾದ ವಿಭಾಗವನ್ನು ಸ್ಥಾಪಿಸಬೇಕು ಎಂದು ಹೇಳಿದರು.
ʻಗೈರುಹಾಜರಿಯಲ್ಲಿ ವಿಚಾರಣೆʼಯ ನಿಬಂಧನೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಬೇಕು ಮತ್ತು ಪ್ರತಿ ರಾಜ್ಯವು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ತಲೆಮರೆಸಿಕೊಂಡ ಅಪರಾಧಿಗಳಿಗಾಗಿ ವಿಶೇಷ ಕಾರಾಗೃಹಗಳನ್ನು ಸ್ಥಾಪಿಸಬೇಕು ಎಂದು ಶ್ರೀ ಅಮಿತ್ ಶಾ ಹೇಳಿದರು. ಪಾಸ್ ಪೋರ್ಟ್ ವಿತರಣೆ ಪ್ರಕ್ರಿಯೆ ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ಸಮನ್ವಯ ಕಾರ್ಯವಿಧಾನಗಳು ಹಾಗೂ ಶಿಷ್ಟಾಚಾರಗಳನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಗೃಹ ಸಚಿವರು ಹೇಳಿದರು. ಇದರಿಂದಾಗಿ ಯಾವುದೇ ಪಾಸ್ ಪೋರ್ಟ್ ಹೊಂದಿರುವವರ ವಿರುದ್ಧ ʻರೆಡ್ ಕಾರ್ನರ್ ನೋಟಿಸ್ʼ ನೀಡುವ ಪ್ರಕ್ರಿಯೆ ಪ್ರಾರಂಭವಾದಾಗ, ಅವರ ಪಾಸ್‌ಪೋರ್ಟ್ ಅನ್ನು ನಿರ್ಬಂಧಿಸಬಹುದು ಎಂದು ಹೇಳಿದರು. ಅಸ್ತಿತ್ವದಲ್ಲಿರುವ ʻಬ್ಲೂ ಕಾರ್ನರ್ ನೋಟಿಸ್ʼಗಳನ್ನು ʻರೆಡ್ ಕಾರ್ನರ್ ನೋಟಿಸ್ʼಗಳಾಗಿ ಪರಿವರ್ತಿಸಲು ವಿಶೇಷ ಅಭಿಯಾನವನ್ನು ಪ್ರಾರಂಭಿಸಬೇಕು ಮತ್ತು ಈ ಉದ್ದೇಶಕ್ಕಾಗಿ ಪ್ರತಿ ರಾಜ್ಯದಲ್ಲೂ ವಿಶೇಷ ಘಟಕವನ್ನು ಸ್ಥಾಪಿಸಬೇಕು ಎಂದು ಶ್ರೀ ಶಾ ಹೇಳಿದರು. ʻಮಲ್ಟಿ ಏಜೆನ್ಸಿ ಸೆಂಟರ್ʼ(ಎಂ.ಎ.ಸಿ) ಅಡಿಯಲ್ಲಿ, ಈ ಸಂಪೂರ್ಣ ಪ್ರಕ್ರಿಯೆಯನ್ನು ಸುಗಮವಾಗಿ ಅನುಷ್ಠಾನಗೊಳಿಸಲು ಸಿ.ಬಿ.ಐ ಮತ್ತು ʻಐ.ಬಿ.ʼ ಜಂಟಿಯಾಗಿ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಬೇಕು ಎಂದು ಅವರು ಹೇಳಿದರು. ದೇಶದ ಆರ್ಥಿಕತೆ, ಸಾರ್ವಭೌಮತ್ವ ಮತ್ತು ಭದ್ರತೆಗೆ ಹಾನಿ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವವರು ಭಾರತೀಯ ನ್ಯಾಯ ವ್ಯವಸ್ಥೆಯ ಬಗ್ಗೆ ಭಯಪಡಲು ಪ್ರಾರಂಭಿಸುವವರೆಗೂ ಭಾರತ ನಿಜವಾಗಿಯೂ ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಗೃಹ ಸಚಿವರು ಒತ್ತಿ ಹೇಳಿದರು.
****
(Release ID: 2180067)
Visitor Counter : 7