ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯ ಉದ್ಘಾಟನೆ ಮತ್ತು ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಯೋಜನೆಗಳ ಉದ್ಘಾಟನೆ ಹಾಗು ಶಂಕುಸ್ಥಾಪನೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಮಾಡಿದ ಭಾಷಣದ ಕನ್ನಡ ಅವತರಣಿಕೆ
Posted On:
11 OCT 2025 3:31PM by PIB Bengaluru
ವೇದಿಕೆಯಲ್ಲಿ ಉಪಸ್ಥಿತರಿರುವ ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಜೀ, ತಂತ್ರಜ್ಞಾನದಿಂದ ನಮ್ಮೊಂದಿಗೆ ಸಂಪರ್ಕ ಸಾಧಿಸಿದ ರಾಜೀವ್ ರಂಜನ್ ಸಿಂಗ್ ಜೀ, ಶ್ರೀ ಭಾಗೀರಥ ಚೌಧರಿ ಜೀ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು, ಶಾಸಕರು, ಇತರ ಗಣ್ಯರು ಮತ್ತು ದೇಶಾದ್ಯಂತದ ನನ್ನ ಎಲ್ಲಾ ರೈತ ಸಹೋದರರೇ ಮತ್ತು ಸಹೋದರಿಯರೇ.
ಇಂದು, ಅಕ್ಟೋಬರ್ 11, ಒಂದು ಐತಿಹಾಸಿಕ ದಿನ. ಇಂದು ಹೊಸ ಇತಿಹಾಸವನ್ನು ಸೃಷ್ಟಿಸಿದ ಭಾರತ ಮಾತೆಯ ಇಬ್ಬರು ಮಹಾನ್ ರತ್ನಗಳಾದ ಭಾರತ ರತ್ನ ಶ್ರೀ ಜಯಪ್ರಕಾಶ್ ನಾರಾಯಣ್ ಜೀ ಮತ್ತು ಭಾರತ ರತ್ನ ಶ್ರೀ ನಾನಾ ಜಿ ದೇಶಮುಖ್ ಅವರ ಜನ್ಮ ದಿನಾಚರಣೆ. ಈ ಇಬ್ಬರೂ ಮಹಾನ್ ಪುತ್ರರು ಗ್ರಾಮೀಣ ಭಾರತದ ಧ್ವನಿಯಾಗಿದ್ದರು, ಪ್ರಜಾಪ್ರಭುತ್ವ ಕ್ರಾಂತಿಯ ನಾಯಕರಾಗಿದ್ದರು ಮತ್ತು ರೈತರು ಹಾಗು ಬಡವರ ಕಲ್ಯಾಣಕ್ಕೆ ಸಮರ್ಪಿಸಿಕೊಂಡಿದ್ದರು. ಇಂದು, ಈ ಐತಿಹಾಸಿಕ ದಿನದಂದು, ದೇಶದ ಸ್ವಾವಲಂಬನೆಗಾಗಿ ಮತ್ತು ರೈತರ ಕಲ್ಯಾಣಕ್ಕಾಗಿ ಎರಡು ಪ್ರಮುಖ ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗುತ್ತಿದೆ. ಮೊದಲನೆಯದು ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಮತ್ತು ಎರಡನೆಯದು ಪಲ್ಸ್ ಸ್ವಾವಲಂಬನೆ ಮಿಷನ್ (ದಲ್ಹನ್ ಆತ್ಮ ನಿರ್ಭರತಾ ಮಿಷನ್). ಈ ಎರಡು ಯೋಜನೆಗಳು ಭಾರತದ ಲಕ್ಷಾಂತರ ರೈತರ ಭವಿಷ್ಯವನ್ನು ಪರಿವರ್ತಿಸುತ್ತವೆ. ಈ ಯೋಜನೆಗಳಿಗೆ ಭಾರತ ಸರ್ಕಾರ 35,000 ಕೋಟಿ ರೂಪಾಯಿಗಳಿಗೂ ಹೆಚ್ಚು ಖರ್ಚು ಮಾಡಲಿದೆ. ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಮತ್ತು ಪಲ್ಸ್ ಸ್ವಾವಲಂಬನೆ ಮಿಷನ್‌ಗಾಗಿ ನನ್ನ ಎಲ್ಲಾ ರೈತ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಕೃಷಿ ಮತ್ತು ತೋಟ ಸದಾ ನಮ್ಮ ಅಭಿವೃದ್ಧಿ ಪ್ರಯಾಣದ ಪ್ರಮುಖ ಭಾಗವಾಗಿದೆ. ಕಾಲ ಬದಲಾದಂತೆ ಕೃಷಿಗೆ ಸರ್ಕಾರದ ಬೆಂಬಲ ಸಿಗುವುದು ಬಹಳ ಮುಖ್ಯ, ಆದರೆ ದುರದೃಷ್ಟವಶಾತ್, ಹಿಂದಿನ ಸರ್ಕಾರಗಳು ಕೃಷಿಯನ್ನು ಅದರ ಹಣೆಬರಹದಂತಾಗಲಿ ಎಂದು ಕೈಬಿಟ್ಟವು. ಕೃಷಿಯ ಬಗ್ಗೆ ಸರ್ಕಾರಕ್ಕೆ ಯಾವುದೇ ದೃಷ್ಟಿಕೋನ ಅಥವಾ ಚಿಂತನೆ ಇರಲಿಲ್ಲ. ಕೃಷಿಯಲ್ಲಿ ತೊಡಗಿರುವ ವಿವಿಧ ಸರ್ಕಾರಿ ಇಲಾಖೆಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದವು, ಇದು ಭಾರತೀಯ ಕೃಷಿ ವ್ಯವಸ್ಥೆಯನ್ನು ಸ್ಥಿರವಾಗಿ ದುರ್ಬಲಗೊಳಿಸಲು ಕಾರಣವಾಯಿತು. 21 ನೇ ಶತಮಾನದ ಭಾರತದಲ್ಲಿ ತ್ವರಿತ ಅಭಿವೃದ್ಧಿಯನ್ನು ಸಾಧಿಸಲು, ಅದರ ಕೃಷಿ ವ್ಯವಸ್ಥೆಗೆ ಸುಧಾರಣೆಗಳು ಅತ್ಯಗತ್ಯವಾಗಿದ್ದವು. ಮತ್ತು ಇದು 2014 ರ ನಂತರ ಪ್ರಾರಂಭವಾಯಿತು, ಕೃಷಿಯ ಬಗ್ಗೆ ಹಿಂದಿನ ಸರ್ಕಾರಗಳ ನಿರ್ಲಕ್ಷ್ಯ ಮನೋಭಾವವನ್ನು ನಾವು ಬದಲಾಯಿಸಿದ್ದೇವೆ, ಬೀಜಗಳಿಂದ ಮಾರುಕಟ್ಟೆಯವರೆಗೆ ನಿಮ್ಮೆಲ್ಲ ರೈತರ ಅನುಕೂಲಕ್ಕಾಗಿ ನಾವು ಲೆಕ್ಕವಿಲ್ಲದಷ್ಟು ಬದಲಾವಣೆಗಳು ಮತ್ತು ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಅದರ ಫಲಿತಾಂಶಗಳು ಇಂದು ನಮ್ಮ ಮುಂದಿವೆ. ಕಳೆದ 11 ವರ್ಷಗಳಲ್ಲಿ, ಭಾರತದ ಕೃಷಿ ರಫ್ತುಗಳು ಬಹುತೇಕ ದ್ವಿಗುಣಗೊಂಡಿವೆ, ಧಾನ್ಯ ಉತ್ಪಾದನೆಯು ಮೊದಲಿಗಿಂತ ಸುಮಾರು 900 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಹೆಚ್ಚಾಗಿದೆ, ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯು 640 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚಾಗಿದೆ. ಇಂದು ನಾವು ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದ್ದೇವೆ, ಭಾರತ ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕ ರಾಷ್ಟ್ರವಾಗಿದೆ, ಭಾರತದಲ್ಲಿ ಜೇನುತುಪ್ಪ ಉತ್ಪಾದನೆಯೂ 2014 ಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ, ಕಳೆದ 11 ವರ್ಷಗಳಲ್ಲಿ ಮೊಟ್ಟೆ ಉತ್ಪಾದನೆಯೂ ದ್ವಿಗುಣಗೊಂಡಿದೆ. ಈ ಅವಧಿಯಲ್ಲಿ, ದೇಶದಲ್ಲಿ ಆರು ಪ್ರಮುಖ ರಸಗೊಬ್ಬರ ಕಾರ್ಖಾನೆಗಳನ್ನು ನಿರ್ಮಿಸಲಾಗಿದೆ. ರೈತರು 25 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ಪಡೆದಿದ್ದಾರೆ, ಸೂಕ್ಷ್ಮ ನೀರಾವರಿ ಸೌಲಭ್ಯಗಳು 100 ಲಕ್ಷ ಹೆಕ್ಟೇರ್‌ಗಳನ್ನು ತಲುಪಿವೆ, ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆಯಿಂದ ಸುಮಾರು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಪಡೆಯಲಾಗಿದೆ - ಈ ಅಂಕಿ ಅಂಶವು ಚಿಕ್ಕದಲ್ಲ, ರೈತರು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಕ್ಲೇಮ್‌ಗಳ ರೂಪದಲ್ಲಿ ಸ್ವೀಕರಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ, 10 ಸಾವಿರಕ್ಕೂ ಹೆಚ್ಚು ರೈತ ಉತ್ಪಾದಕ ಸಂಸ್ಥೆಗಳು - ಎಫ್‌ಪಿಒಗಳನ್ನು ಸಹ ರಚಿಸಲಾಗಿದೆ. ನಾನು ಬರಲು ತಡವಾಯಿತು ಏಕೆಂದರೆ ನಾನು ಅನೇಕ ರೈತರೊಂದಿಗೆ ಮಾತನಾಡುತ್ತಿದ್ದೆ, ನಾನು ಮೀನುಗಾರರೊಂದಿಗೆ ಮಾತನಾಡುತ್ತಿದ್ದೆ ಮತ್ತು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಮಹಿಳೆಯರ ಅನುಭವಗಳನ್ನು ಕೇಳಲು ನನಗೆ ಅವಕಾಶ ಸಿಕ್ಕಿತು. ಕಳೆದ 11 ವರ್ಷಗಳಲ್ಲಿ ದೇಶದ ರೈತರು ಅನುಭವಿಸಿದ ಇಂತಹ ಅನೇಕ ಸಾಧನೆಗಳಿವೆ.
ಆದರೆ ಸ್ನೇಹಿತರೇ,
ಇಂದು ದೇಶದ ಮನಸ್ಥಿತಿ ಹೇಗಿದೆ ಎಂದರೆ ಅದು ಕೆಲವೇ ಸಾಧನೆಗಳಿಂದ ತೃಪ್ತವಾಗುವುದಿಲ್ಲ. ನಾವು ಅಭಿವೃದ್ಧಿ ಹೊಂದಬೇಕಾದರೆ, ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಯನ್ನು ಸಾಧಿಸುತ್ತಲೇ ಇರಬೇಕು ಮತ್ತು ಸುಧಾರಣೆಯನ್ನು ಅನುಸರಿಸುತ್ತಲೇ ಇರಬೇಕು. ಪ್ರಧಾನ ಮಂತ್ರಿ ಧನ್-ಧನ್ಯ ಕೃಷಿ ಯೋಜನೆಯು ಈ ಚಿಂತನೆಯ ಫಲಿತಾಂಶವಾಗಿದೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯೋಜನೆಯ ಯಶಸ್ಸು ಈ ಯೋಜನೆಯ ಹಿಂದಿನ ಸ್ಫೂರ್ತಿಯಾಗಿದೆ. ಹಿಂದಿನ ಸರ್ಕಾರಗಳು ದೇಶದ ನೂರಕ್ಕೂ ಹೆಚ್ಚು ಜಿಲ್ಲೆಗಳನ್ನು ಹಿಂದುಳಿದ ಜಿಲ್ಲೆಗಳೆಂದು ಘೋಷಿಸಿದ ನಂತರ ಅವುಗಳನ್ನು ಮರೆತಿದ್ದವು. ನಾವು ಆ ಜಿಲ್ಲೆಗಳ ಮೇಲೆ ವಿಶೇಷ ಗಮನ ಹರಿಸಿ, ಅವುಗಳನ್ನು ಮಹತ್ವಾಕಾಂಕ್ಷೆಯ ಜಿಲ್ಲೆಗಳೆಂದು ಘೋಷಿಸಿದ್ದೇವೆ. ಈ ಜಿಲ್ಲೆಗಳಲ್ಲಿ ಬದಲಾವಣೆಗೆ ನಮ್ಮ ಮಂತ್ರ - ಒಮ್ಮುಖ, ಸಹಯೋಗ ಮತ್ತು ಸ್ಪರ್ಧೆ. ಇದರರ್ಥ ಮೊದಲು ಪ್ರತಿಯೊಂದು ಸರ್ಕಾರಿ ಇಲಾಖೆ, ವಿವಿಧ ಯೋಜನೆಗಳು ಮತ್ತು ಜಿಲ್ಲೆಯ ಪ್ರತಿಯೊಬ್ಬ ನಾಗರಿಕರನ್ನು ಸಂಪರ್ಕಿಸುವುದು/ಜೋಡಿಸುವುದು, ನಂತರ ಎಲ್ಲರ ಪ್ರಯತ್ನದ ಮನೋಭಾವದಿಂದ ಕೆಲಸ ಮಾಡುವುದು ಮತ್ತು ನಂತರ ಇತರ ಜಿಲ್ಲೆಗಳೊಂದಿಗೆ ಆರೋಗ್ಯಕರ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳುವುದು. ಈ ವಿಧಾನದ ಪ್ರಯೋಜನಗಳು ಇಂದು ಗೋಚರಿಸುತ್ತಿವೆ.
ಸ್ನೇಹಿತರೇ,
ಈ 100 ಕ್ಕೂ ಹೆಚ್ಚು ಹಿಂದುಳಿದ ಜಿಲ್ಲೆಗಳಲ್ಲಿ, ನಾವು ಈಗ ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ಕರೆಯುತ್ತೇವೆ. ಈಗ ನಾವು ಅವುಗಳನ್ನು ಹಿಂದುಳಿದ ಜಿಲ್ಲೆಗಳು ಎಂದು ಕರೆಯುವುದಿಲ್ಲ, ಸ್ವಾತಂತ್ರ್ಯದ ನಂತರ ರಸ್ತೆಯನ್ನು ನೋಡದ ಶೇ. 20 ರಷ್ಟು ಜನವಸತಿ ಪ್ರದೇಶಗಳು ಇದ್ದವು. ಇಂದು, ಮಹತ್ವಾಕಾಂಕ್ಷೆಯ ಜಿಲ್ಲಾ ಯೋಜನೆಯ ಕಾರಣದಿಂದಾಗಿ, ಅಂತಹ ಹೆಚ್ಚಿನ ಜನ ವಸತಿ ಪ್ರದೇಶಗಳು ರಸ್ತೆಗಳ ಮೂಲಕ ಸಂಪರ್ಕ ಹೊಂದಿವೆ. ಆ ಸಮಯದಲ್ಲಿ, ಹಿಂದುಳಿದ ಜಿಲ್ಲೆಗಳು ಎಂದು ಕರೆಯಲ್ಪಡುತ್ತಿದ್ದವುಗಳಲ್ಲಿ, ಲಸಿಕೆಯ ವ್ಯಾಪ್ತಿಯಿಂದ ಹೊರಗಿರುವ ಶೇ. 17 ರಷ್ಟು ಮಕ್ಕಳಿದ್ದರು. ಇಂದು, ಮಹತ್ವಾಕಾಂಕ್ಷೆಯ ಜಿಲ್ಲಾ ಯೋಜನೆಯ ಕಾರಣದಿಂದಾಗಿ, ಅಂತಹ ಹೆಚ್ಚಿನ ಮಕ್ಕಳು ಲಸಿಕೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆ ಹಿಂದುಳಿದ ಜಿಲ್ಲೆಗಳಲ್ಲಿ, ವಿದ್ಯುತ್ ಇಲ್ಲದ ಶೇ. 15 ಕ್ಕಿಂತ ಹೆಚ್ಚು ಶಾಲೆಗಳು ಇದ್ದವು. ಇಂದು, ಮಹತ್ವಾಕಾಂಕ್ಷೆಯ ಜಿಲ್ಲಾ ಯೋಜನೆಯ ಕಾರಣದಿಂದಾಗಿ, ಅಂತಹ ಪ್ರತಿಯೊಂದು ಶಾಲೆಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಗಿದೆ.
ಸ್ನೇಹಿತರೇ,
ಅವಕಾಶ ವಂಚಿತರಿಗೆ ಆದ್ಯತೆ ಸಿಕ್ಕಾಗ, ಹಿಂದುಳಿದವರಿಗೆ ಆದ್ಯತೆ ಸಿಗುತ್ತದೆ, ಆಗ ಫಲಿತಾಂಶಗಳು ಸಹ ತುಂಬಾ ಉತ್ತಮವಾಗಿರುತ್ತವೆ. ಇಂದು, ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ತಾಯಂದಿರ ಮರಣ ಪ್ರಮಾಣ ಕಡಿಮೆಯಾಗಿದೆ, ಮಕ್ಕಳ ಆರೋಗ್ಯ ಸುಧಾರಿಸಿದೆ, ಶಿಕ್ಷಣದ ಮಟ್ಟ ಸುಧಾರಿಸಿದೆ. ಈ ಜಿಲ್ಲೆಗಳು ಈಗ ಹಲವಾರು ನಿಯತಾಂಕಗಳಲ್ಲಿ ಇತರ ಜಿಲ್ಲೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
ಸ್ನೇಹಿತರೇ,
ಈಗ, ಈ ಮಾದರಿಯಲ್ಲಿ, ಕೃಷಿಯಲ್ಲಿ ಹಿಂದುಳಿದಿರುವ ಮತ್ತು ಇತರ ವಿಷಯಗಳಲ್ಲಿ ಮುಂದಿರುವ ದೇಶದ 100 ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ನಾವು ಬಯಸುತ್ತೇವೆ, ಅದರ ಮೇಲೆ ಗಮನ ಕೇಂದ್ರೀಕರಿಸುವ ಮೂಲಕ ನಾವು ಕೆಲಸ ಮಾಡಲು ಬಯಸುತ್ತೇವೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳಿಗೆ ಇರುವ ಮಾದರಿಯೇ, ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಹಿಂದಿನ ಸ್ಫೂರ್ತಿಯಾಗಿದೆ. ಈ ಯೋಜನೆಗಾಗಿ 100 ಜಿಲ್ಲೆಗಳನ್ನು ಬಹಳ ಚಿಂತನಶೀಲವಾಗಿ ಆಯ್ಕೆ ಮಾಡಲಾಗಿದೆ. ಈ ಜಿಲ್ಲೆಗಳನ್ನು, ಮೂರು ನಿಯತಾಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಮೊದಲನೆಯದಾಗಿ, ಒಂದು ಜಮೀನಿನ ಇಳುವರಿ, ಎರಡನೆಯದಾಗಿ, ಒಂದು ಜಮೀನಿನಲ್ಲಿ ಎಷ್ಟು ಬಾರಿ ಬೆಳೆ ಬೆಳೆಸಲಾಗುತ್ತದೆ, ಮತ್ತು ಮೂರನೆಯದಾಗಿ, ರೈತರಿಗೆ ಸಾಲ ಅಥವಾ ಹೂಡಿಕೆಗೆ ಅವಕಾಶ/ ಪ್ರವೇಶವಿದೆಯೇ, ಮತ್ತು ಯಾವುದಾದರೂ ಇದ್ದರೆ, ಅದು ಯಾವ ಪ್ರಮಾಣದಲ್ಲಿ ಎಂಬುದನ್ನಾಧರಿಸಿ ಆಯ್ಕೆ ಮಾಡಲಾಗಿದೆ.
ಸ್ನೇಹಿತರೇ,
ನಾವು 36 ಸಂಖ್ಯೆಯ ಬಗ್ಗೆ ಚರ್ಚಿಸುವುದನ್ನು ಆಗಾಗ್ಗೆ ಕೇಳಿರುತ್ತೇವೆ. ಅವರ ನಡುವೆ 36 ರ ಸಂಬಂಧ ಎಂದು ನಾವು ಪದೇ ಪದೇ ಹೇಳುತ್ತಿರುತ್ತೇವೆ. ನಾವು ಎಲ್ಲದಕ್ಕೂ ಸವಾಲು ಹಾಕುತ್ತೇವೆ, ನಾವು ಇದಕ್ಕೆ ವಿರುದ್ಧವಾದುದನ್ನು ಮಾಡುತ್ತೇವೆ. ಈ ಯೋಜನೆಯಲ್ಲಿ ನಾವು ಸರ್ಕಾರದ ಮೂವತ್ತಾರು ಯೋಜನೆಗಳನ್ನು ಒಟ್ಟಿಗೆ ಸೇರಿಸುತ್ತಿದ್ದೇವೆ. ನೈಸರ್ಗಿಕ ಕೃಷಿಯ ರಾಷ್ಟ್ರೀಯ ಮಿಷನ್ ಇರುವಂತೆ, ನೀರಾವರಿಗಾಗಿ ಪ್ರತಿ ಹನಿಗೆ ಹೆಚ್ಚು ಬೆಳೆ ಅಭಿಯಾನವಿದೆ, ತೈಲ ಉತ್ಪಾದನೆಯನ್ನು ಹೆಚ್ಚಿಸಲು ಎಣ್ಣೆಬೀಜಗಳ ಮಿಷನ್ ಇದೆ, ಅಂತಹ ಅನೇಕ ಯೋಜನೆಗಳನ್ನು ಒಟ್ಟಿಗೆ ತರಲಾಗುತ್ತಿದೆ. ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯು ನಮ್ಮ ಜಾನುವಾರುಗಳ ಮೇಲೆಯೂ ಗಮನಹರಿಸುತ್ತದೆ. ನಿಮಗೆ ಗೊತ್ತೇ, ಕಾಲು ಮತ್ತು ಬಾಯಿ ರೋಗದಂತಹ ರೋಗಗಳಿಂದ ಪ್ರಾಣಿಗಳನ್ನು ರಕ್ಷಿಸಲು 125 ಕೋಟಿಗೂ ಹೆಚ್ಚು ಲಸಿಕೆಗಳನ್ನು ಉಚಿತವಾಗಿ ನೀಡಲಾಗಿದೆ. ಇದರಿಂದಾಗಿ, ಪ್ರಾಣಿಗಳು ಆರೋಗ್ಯಕರವಾಗಿವೆ ಮತ್ತು ರೈತರ ಚಿಂತೆಗಳು ಕಡಿಮೆಯಾಗಿವೆ. ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯಡಿಯಲ್ಲಿ, ಸ್ಥಳೀಯ ಮಟ್ಟದಲ್ಲಿ ಜಾನುವಾರುಗಳ/ಪ್ರಾಣಿಗಳ ಆರೋಗ್ಯಕ್ಕೆ ಸಂಬಂಧಿಸಿದ ಅಭಿಯಾನಗಳನ್ನು ಸಹ ಪ್ರಾರಂಭಿಸಲಾಗುವುದು.
ಸ್ನೇಹಿತರೇ,
ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದಂತೆಯೇ, ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆಯು ರೈತರು ಹಾಗೂ ಸ್ಥಳೀಯ ಸರ್ಕಾರಿ ನೌಕರರು ಮತ್ತು ಆ ಜಿಲ್ಲೆಯ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಮ್ಯಾಜಿಸ್ಟ್ರೇಟರ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸುತ್ತದೆ. ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ವಿನ್ಯಾಸವು ಹೇಗಿರುತ್ತದೆಂದರೆ, ಪ್ರತಿ ಜಿಲ್ಲೆಯ ಅಗತ್ಯಗಳಿಗೆ ಅನುಗುಣವಾಗಿ ಅದರ ಯೋಜನೆಯನ್ನು ಬದಲಾಯಿಸಬಹುದು. ಆದ್ದರಿಂದ, ರೈತರು ಮತ್ತು ಸಂಬಂಧಪಟ್ಟ ಜಿಲ್ಲೆಗಳ ಮುಖ್ಯಸ್ಥರು ಜಿಲ್ಲಾ ಮಟ್ಟದಲ್ಲಿ ಅಂತಹ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಎಂದು ನಾನು ಒತ್ತಾಯಿಸುತ್ತೇನೆ, ಅದು ಅಲ್ಲಿನ ಮಣ್ಣು ಮತ್ತು ಹವಾಮಾನಕ್ಕೆ ಸೂಕ್ತವಾಗಿರಬೇಕು. ಯಾವ ಬೆಳೆಗಳನ್ನು ಬೆಳೆಯಬೇಕು, ಯಾವ ಬೀಜ ಪ್ರಭೇದಗಳನ್ನು ಬಳಸಬೇಕು ಮತ್ತು ಯಾವ ರಸಗೊಬ್ಬರಗಳು ಯಾವ ಉದ್ದೇಶಕ್ಕೆ ಸೂಕ್ತವಾಗಿವೆ ಎಂಬುದನ್ನು ನಿರ್ಧರಿಸಲು ಪ್ರತಿಯೊಂದು ಜಿಲ್ಲೆ ಒಗ್ಗೂಡಿ ಕೆಲಸ ಮಾಡಬೇಕು. ಇದನ್ನು ಎಚ್ಚರಿಕೆಯಿಂದ ಪರಿಗಣಿಸಬೇಕು ಮತ್ತು ಹೊಸ ರೀತಿಯಲ್ಲಿ ಕಾರ್ಯಗತಗೊಳಿಸಬೇಕು. ನೀವು ಪ್ರತಿ ಪ್ರದೇಶಕ್ಕೂ, ಪ್ರತಿ ಜಮೀನಿಗೂ ಸಂಬಂಧಪಟ್ಟಂತೆ ಯೋಜನೆ ತಯಾರಿಸಬೇಕಾಗಿದೆ. ಈಗ, ಎಲ್ಲೋ ಹೆಚ್ಚುವರಿ ನೀರು ಇದ್ದರೆ, ಅಲ್ಲಿ ಅಂತಹ ಬೆಳೆ ಇರಬೇಕಾಗುತ್ತದೆ, ಎಲ್ಲೋ ನೀರಿನ ಕೊರತೆಯಿದ್ದರೆ, ಅಲ್ಲಿ ಆ ರೀತಿಯ ಬೆಳೆಗಳನ್ನು ಬೆಳೆಯಬೇಕಾಗುತ್ತದೆ. ಕೃಷಿ ಸಾಧ್ಯವಾಗದಿದ್ದರೆ, ಪಶುಸಂಗೋಪನೆ ಮತ್ತು ಮೀನುಗಾರಿಕೆಯನ್ನು ಉತ್ತೇಜಿಸಬೇಕಾಗುತ್ತದೆ. ಕೆಲವು ಪ್ರದೇಶಗಳಲ್ಲಿ, ಜೇನುಸಾಕಣೆ ಉತ್ತಮ ಆಯ್ಕೆಯಾಗಿದೆ. ಕರಾವಳಿ ಪ್ರದೇಶಗಳಲ್ಲಿ ಕಡಲಕಳೆ ಕೃಷಿ ಒಂದು ಉತ್ತಮ ಆಯ್ಕೆಯಾಗಿದೆ. ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯ ಯಶಸ್ಸು ಸ್ಥಳೀಯ ಮಟ್ಟದಲ್ಲಿ ಅದರ ಅನುಷ್ಠಾನದ ಮೂಲಕ ಮಾತ್ರ ಸಾಧ್ಯವಾಗುತ್ತದೆ. ಆದ್ದರಿಂದ, ನಮ್ಮ ಯುವ ಅಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಅವರಿಗೆ ಬದಲಾವಣೆ ತರಲು ಅವಕಾಶವಿದೆ. ಯುವ ಸ್ನೇಹಿತರು, ರೈತರೊಂದಿಗೆ ಸೇರಿ ದೇಶದ ನೂರು ಜಿಲ್ಲೆಗಳಲ್ಲಿ ಕೃಷಿಯ ಚಿತ್ರಣವನ್ನು ಬದಲಾಯಿಸುತ್ತಾರೆ ಎಂದು ನನಗೆ ವಿಶ್ವಾಸವಿದೆ. ಮತ್ತು ಈ ಗ್ರಾಮದಲ್ಲಿ ಕೃಷಿಯ ಚಿತ್ರಣ ಬದಲಾದ ತಕ್ಷಣ, ಇಡೀ ಗ್ರಾಮದ ಆರ್ಥಿಕತೆಯು ಬದಲಾಗುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ.
ಸ್ನೇಹಿತರೇ,
ಇಂದು ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಅನ್ನು ಪ್ರಾರಂಭಿಸಲಾಗುತ್ತಿದೆ. ಇದು ದ್ವಿದಳ ಧಾನ್ಯಗಳ ಉತ್ಪಾದನೆಯನ್ನು ಹೆಚ್ಚಿಸುವ ಧ್ಯೇಯವಲ್ಲ, ಬದಲಾಗಿ ನಮ್ಮ ಭವಿಷ್ಯದ ಪೀಳಿಗೆಯನ್ನು ಸಬಲೀಕರಣಗೊಳಿಸುವ ಧ್ಯೇಯವೂ ಆಗಿದೆ. ನಾನು ಮೊದಲೇ ಹೇಳಿದಂತೆ, ಕಳೆದ ವರ್ಷಗಳಲ್ಲಿ, ಭಾರತೀಯ ರೈತರು ದಾಖಲೆಯ ಆಹಾರ ಧಾನ್ಯಗಳನ್ನು ಉತ್ಪಾದಿಸಿದ್ದಾರೆ, ಅದು ಗೋಧಿ ಅಥವಾ ಭತ್ತವಾಗಿರಬಹುದು, ಇಂದು ಭಾರತವು ವಿಶ್ವದ ಅತಿದೊಡ್ಡ ಉತ್ಪಾದಕರಲ್ಲಿ ಒಂದಾಗಿದೆ. ಆದರೆ ಸ್ನೇಹಿತರೇ, ನಾವು ಹಿಟ್ಟು ಮತ್ತು ಅಕ್ಕಿಯನ್ನು ಮೀರಿ ಯೋಚಿಸಬೇಕು, ನಮ್ಮ ಮನೆಗಳಲ್ಲಿಯೂ ಸಹ ನಾವು ಹಿಟ್ಟು ಮತ್ತು ಅಕ್ಕಿಯಿಂದ ಬದುಕುವುದಿಲ್ಲ, ನಮಗೆ ಇತರ ವಸ್ತುಗಳು ಸಹ ಬೇಕು. ಹಿಟ್ಟು ಮತ್ತು ಅಕ್ಕಿ ಹಸಿವನ್ನು ನೀಗಿಸಬಹುದಾದರೂ, ಸಾಕಷ್ಟು ಪೌಷ್ಟಿಕಾಂಶವು ಹೆಚ್ಚಿನದನ್ನು ಬಯಸುತ್ತದೆ ಮತ್ತು ಅದಕ್ಕಾಗಿ ನಾವು ಯೋಜಿಸಬೇಕಾಗಿದೆ. ಇಂದು ಭಾರತದ ಪೋಷಣೆಗೆ, ವಿಶೇಷವಾಗಿ ಸಸ್ಯಾಹಾರಿಗಳಿಗೆ ಪ್ರೋಟೀನ್ ನಿರ್ಣಾಯಕವಾಗಿದೆ. ನಮಗೆ ಅಗತ್ಯವಿರುವ ಇತರ ವಿಷಯಗಳಲ್ಲಿ ಪ್ರೋಟೀನ್ ಒಂದಾಗಿದೆ. ನಮ್ಮ ಮಕ್ಕಳಿಗೆ, ನಮ್ಮ ಭವಿಷ್ಯದ ಪೀಳಿಗೆಗೆ, ಅವರ ದೈಹಿಕ ಬೆಳವಣಿಗೆಗೆ ಮತ್ತು ಅವರ ಮಾನಸಿಕ ಬೆಳವಣಿಗೆಗೆ ಪ್ರೋಟೀನ್ ಅಷ್ಟೇ ಮುಖ್ಯವಾಗಿದೆ. ಮತ್ತು ಇದು ನೈಸರ್ಗಿಕವಾದುದಾಗಿದೆ, ವಿಶೇಷವಾಗಿ ನಮ್ಮ ದೇಶದಲ್ಲಿ ದೊಡ್ಡ ಸಮುದಾಯವಾಗಿರುವ ಸಸ್ಯಾಹಾರಿಗಳಿಗೆ, ದ್ವಿದಳ ಧಾನ್ಯಗಳು ಪ್ರೋಟೀನ್‌ನ ದೊಡ್ಡ ಮೂಲವಾಗಿವೆ. ದ್ವಿದಳ ಧಾನ್ಯಗಳ ಹಾದಿಯಲ್ಲಿ ನಾವು ಸಾಗಬೇಕಾಗಿದೆ. ಆದರೆ ಸವಾಲು ಏನೆಂದರೆ, ಭಾರತವು ಕೃಷಿ ದೇಶವಾಗಿದ್ದರೂ, ದುರದೃಷ್ಟವಶಾತ್, ಇಂದಿಗೂ ಈ ರೀತಿಯ ಅವಶ್ಯಕತೆಗಳನ್ನು ಪೂರೈಸಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ. ಇಂದು, ದೇಶವು ಹೆಚ್ಚಿನ ಪ್ರಮಾಣದಲ್ಲಿ ಬೇಳೆಕಾಳುಗಳನ್ನು ಆಮದು ಮಾಡಿಕೊಳ್ಳುತ್ತದೆ, ಅವುಗಳನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಮತ್ತು ಆದ್ದರಿಂದ, ಪಲ್ಸ್ ಸ್ವಾವಲಂಬನೆ ಮಿಷನ್ ಬಹಳ ಮುಖ್ಯವಾಗಿದೆ.
ಸ್ನೇಹಿತರೇ,
11 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ದ್ವಿದಳ ಧಾನ್ಯಗಳ ಸ್ವಾವಲಂಬನೆ ಮಿಷನ್ ಈ ನಿಟ್ಟಿನಲ್ಲಿ ರೈತರಿಗೆ ಬಹಳಷ್ಟು ಸಹಾಯ ಮಾಡುತ್ತದೆ. ದ್ವಿದಳ ಧಾನ್ಯಗಳ ಕೃಷಿಯನ್ನು 35 ಲಕ್ಷ ಹೆಕ್ಟೇರ್‌ಗಳಷ್ಟು ಹೆಚ್ಚಿಸುವುದು ಇದರ ಗುರಿಯಾಗಿದೆ, ಹೇಗಾದರೂ ಮಾಡಿ ಇದನ್ನು ಸಾಧಿಸಬೇಕಿದೆ. ಈ ಮಿಷನ್ ಅಡಿಯಲ್ಲಿ, ತೊಗರಿ, ಉದ್ದು ಮತ್ತು ಮಸೂರ್ ಬೇಳೆ ಉತ್ಪಾದನೆಯನ್ನು ಹೆಚ್ಚಿಸಲಾಗುವುದು ಮತ್ತು ದ್ವಿದಳ ಧಾನ್ಯಗಳ ಖರೀದಿಗೆ ಸರಿಯಾದ ವ್ಯವಸ್ಥೆಗಳನ್ನು ಮಾಡಲಾಗುವುದು. ಇದು ದೇಶದ ಸುಮಾರು ಎರಡು ಕೋಟಿ ದ್ವಿದಳ ಧಾನ್ಯ ರೈತರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತದೆ. ಸ್ವಲ್ಪ ಸಮಯದ ಹಿಂದೆ, ನಾನು ಕೆಲವು ದ್ವಿದಳ ಧಾನ್ಯ ರೈತರೊಂದಿಗೆ ಮಾತನಾಡಿದೆ. ಅವರು ಆತ್ಮವಿಶ್ವಾಸ ಮತ್ತು ಉತ್ಸಾಹದಿಂದ ತುಂಬಿದ್ದರು, ಮತ್ತು ಅವರ ಸ್ವಂತ ಅನುಭವಗಳು ಸಂಪೂರ್ಣವಾಗಿ ಯಶಸ್ವಿಯಾಗಿವೆ. ಅವರು ಈಗ ಅದನ್ನು ಹೇಗೆ ದೊಡ್ಡದಾಗಿಸಿದ್ದಾರೆಂದು ನೋಡಲು ಅನೇಕ ರೈತರು ಬರುತ್ತಾರೆ ಎಂದು ಅವರು ಹೇಳಿದರು. ದ್ವಿದಳ ಧಾನ್ಯಗಳಲ್ಲಿ ದೇಶವನ್ನು ಸ್ವಾವಲಂಬಿಗೊಳಿಸುವ ಬಗ್ಗೆ ಅವರು ಹೆಚ್ಚಿನ ಶಕ್ತಿ ಮತ್ತು ವಿಶ್ವಾಸದಿಂದ ಮಾತನಾಡುತ್ತಿರುವುದನ್ನು ನಾನು ನೋಡಿದೆ.
ಸ್ನೇಹಿತರೇ,
ಕೆಂಪು ಕೋಟೆಯಿಂದ ಮಾತನಾಡುವಾಗ, ನಾನು ಅಭಿವೃದ್ಧಿ ಹೊಂದಿದ ಭಾರತದ ನಾಲ್ಕು ಬಲವಾದ ಆಧಾರ ಸ್ತಂಭಗಳ ಬಗ್ಗೆ ಚರ್ಚಿಸಿದ್ದೆ. ಈ ನಾಲ್ಕು ಸ್ತಂಭಗಳಲ್ಲಿ, ನೀವು, ನನ್ನ ಸಂಗಾತಿಗಳು ಅಂದರೆ ರೈತರು, ನಮ್ಮ ಅತಿದೊಡ್ಡ ಆಹಾರ ಪೂರೈಕೆದಾರರು, ಬಲವಾದ ಸ್ತಂಭ. ಕಳೆದ 11 ವರ್ಷಗಳಿಂದ, ಸರ್ಕಾರವು ರೈತರನ್ನು ಸಬಲೀಕರಣಗೊಳಿಸಲು ಮತ್ತು ಕೃಷಿಯಲ್ಲಿ ಹೆಚ್ಚಿನ ಹೂಡಿಕೆಯನ್ನು ಖಚಿತಪಡಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ನಮ್ಮ ಈ ಆದ್ಯತೆಯು ಕೃಷಿ ಬಜೆಟ್‌ನಲ್ಲಿಯೂ ಗೋಚರಿಸುತ್ತದೆ. ಕಳೆದ 11 ವರ್ಷಗಳಲ್ಲಿ ಕೃಷಿ ಬಜೆಟ್ ಸುಮಾರು ಆರು ಪಟ್ಟು ಹೆಚ್ಚಾಗಿದೆ. ನಮ್ಮ ಸಣ್ಣ ರೈತರು ಈ ಬಜೆಟ್ ಹೆಚ್ಚಳದಿಂದ ಹೆಚ್ಚಿನ ಪ್ರಯೋಜನ ಪಡೆದಿದ್ದಾರೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಭಾರತವು ತನ್ನ ರೈತರಿಗೆ ರಸಗೊಬ್ಬರ ಸಬ್ಸಿಡಿಗಳನ್ನು ಒದಗಿಸುತ್ತದೆ ಎಂದು ನಿಮಗೆ ತಿಳಿದಿದೆ. ಕಾಂಗ್ರೆಸ್ ಸರ್ಕಾರವು ತನ್ನ 10 ವರ್ಷಗಳಲ್ಲಿ ರಸಗೊಬ್ಬರಗಳ ಮೇಲೆ 5 ಲಕ್ಷ ಕೋಟಿ ರೂ. ಸಬ್ಸಿಡಿಯನ್ನು ನೀಡಿತ್ತು. ನಾನು ಬರುವ ಮೊದಲು 10 ವರ್ಷಗಳಲ್ಲಿ 5 ಲಕ್ಷ ಕೋಟಿ ರೂ. ನಮ್ಮ ಸರ್ಕಾರ, ಬಿ.ಜೆ.ಪಿ-ಎನ್.ಡಿ.ಎ ಸರ್ಕಾರ, ಕಳೆದ 10 ವರ್ಷಗಳಲ್ಲಿ ರಸಗೊಬ್ಬರಗಳ ಮೇಲೆ 13 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಸಬ್ಸಿಡಿ ನೀಡಿದೆ.
ಸ್ನೇಹಿತರೇ,
ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಕೃಷಿಗೆ ಖರ್ಚು ಮಾಡುತ್ತಿದ್ದ ಮೊತ್ತಕ್ಕೆ ಸಮಾನವಾದ ಮೊತ್ತವನ್ನು, ಬಿ.ಜೆ.ಪಿ-ಎನ್.ಡಿ.ಎ ಸರ್ಕಾರ ಒಂದೇ ಬಾರಿಗೆ ಪಿ.ಎಂ. ಕಿಸಾನ್ ಸಮ್ಮಾನ್ ನಿಧಿಯ ರೂಪದಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದೆ. ಇಲ್ಲಿಯವರೆಗೆ ಪಿ.ಎಂ. ಕಿಸಾನ್ ಸಮ್ಮಾನ್ ನಿಧಿಯಡಿಯಲ್ಲಿ 3 ಲಕ್ಷ 75 ಸಾವಿರ ಕೋಟಿ ರೂ.ಗಳನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗಿದೆ.
ಸ್ನೇಹಿತರೇ,
ರೈತರ ಆದಾಯವನ್ನು ಹೆಚ್ಚಿಸಲು, ನಮ್ಮ ಸರ್ಕಾರವು ಅವರಿಗೆ ಸಾಂಪ್ರದಾಯಿಕ ಕೃಷಿಯನ್ನು ಮೀರಿದ ಆಯ್ಕೆಗಳನ್ನು ನೀಡುತ್ತಿದೆ. ಆದ್ದರಿಂದ, ಹೆಚ್ಚುವರಿ ಆದಾಯಕ್ಕಾಗಿ ಪಶುಸಂಗೋಪನೆ, ಮೀನು ಸಾಕಣೆ ಮತ್ತು ಜೇನು ಸಾಕಣೆಗೆ ಒತ್ತು ನೀಡಲಾಗುತ್ತಿದೆ. ಇದು ಸಣ್ಣ ರೈತರು ಮತ್ತು ಭೂಹೀನ ಕುಟುಂಬಗಳಿಗೆ ಸಬಲೀಕರಣವನ್ನು ನೀಡುತ್ತದೆ. ಮತ್ತು ದೇಶದ ರೈತರು ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಈಗ, ಜೇನು ಉತ್ಪಾದನಾ ವಲಯಕ್ಕೆ ಸಂಬಂಧಿಸಿದಂತೆ, ಇಂದು 11 ವರ್ಷಗಳ ಹಿಂದಿನದಕ್ಕೆ ಹೋಲಿಸಿದರೆ ಭಾರತದಲ್ಲಿ ಜೇನುತುಪ್ಪದ ಪ್ರಮಾಣವು ಎರಡು ಪಟ್ಟು ಹೆಚ್ಚಾಗಿದೆ. ಆರು-ಏಳು ವರ್ಷಗಳ ಹಿಂದೆ, ನಾವು ಸುಮಾರು 450 ಕೋಟಿ ರೂ. 450 ಕೋಟಿ ರೂ. ಮೌಲ್ಯದ ಜೇನುತುಪ್ಪವನ್ನು ರಫ್ತು ಮಾಡುತ್ತಿದ್ದೆವು. ಆದರೆ ಕಳೆದ ವರ್ಷ, 1500 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ ಜೇನುತುಪ್ಪವನ್ನು ವಿದೇಶಕ್ಕೆ ರಫ್ತು ಮಾಡಲಾಯಿತು. ಈ ಮೂರು ಪಟ್ಟು ಹೆಚ್ಚು ಹಣವನ್ನು ನಮ್ಮ ರೈತರು ಪಡೆದಿದ್ದಾರೆ.
ಸ್ನೇಹಿತರೇ,
ಇಂದು, ಹಳ್ಳಿಯ ಸಮೃದ್ಧಿ ಮತ್ತು ಕೃಷಿಯ ಆಧುನೀಕರಣದಲ್ಲಿ ನಮ್ಮ ಸಹೋದರಿಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ನಾನು ದೇವಿ ಜೀ ಜೊತೆ ಮಾತನಾಡುತ್ತಿದ್ದೆ, ಅವರು ರಾಜಸ್ಥಾನದವರು, ಅವರು ತಮ್ಮ ಸ್ವಸಹಾಯ ಗುಂಪಿನೊಂದಿಗೆ ಸಂಬಂಧ ಹೊಂದಿದ್ದಾರೆ, ಅವರು ಇಂದು 90 ಸಾವಿರ ಸದಸ್ಯರನ್ನು ಹೊಂದಿದ್ದಾರೆ, 90 ಸಾವಿರ, ಅವರು ಎಂತಹ ಉತ್ತಮ ಕೆಲಸ ಮಾಡಿರಬೇಕು. ನಾನು ಒಬ್ಬ ವೈದ್ಯ ಸಹೋದರಿಯನ್ನು ಭೇಟಿಯಾದೆ; ಅವರು ಸ್ವತಃ ವಿದ್ಯಾವಂತ ವೈದ್ಯೆ. ಆದರೆ ಈಗ ಅವರು ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ನೋಡಿ, ಹೊಲಗಳಲ್ಲಿ ಕೃಷಿ ಕೆಲಸವಾಗಲಿ ಅಥವಾ ಪಶುಸಂಗೋಪನೆಯಾಗಲಿ, ಇಂದು ಹಳ್ಳಿಯ ಹೆಣ್ಣುಮಕ್ಕಳಿಗೆ ಅನೇಕ ಅವಕಾಶಗಳಿವೆ. ದೇಶಾದ್ಯಂತ ಮೂರು ಕೋಟಿ ಲಕ್ಷಪತಿ ದೀದಿಗಳನ್ನು ರಚಿಸುವ ಅಭಿಯಾನವು ಕೃಷಿಗೆ ಸಾಕಷ್ಟು ಸಹಾಯವನ್ನು ಒದಗಿಸುತ್ತಿದೆ. ಇಂದು, ನಮೋ ಡ್ರೋನ್ ದೀದಿಗಳು ಹಳ್ಳಿಗಳಲ್ಲಿ ರಸಗೊಬ್ಬರ ಮತ್ತು ಕೀಟನಾಶಕ ಸಿಂಪರಣೆಯ ಆಧುನಿಕ ವಿಧಾನಗಳ ಪ್ರವರ್ತಕರಾಗಿದ್ದಾರೆ. ಇದರಿಂದಾಗಿ, ನಮೋ ಡ್ರೋನ್ ದೀದಿಗಳು ಸಾವಿರಾರು ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಅದೇ ರೀತಿ, ಕೃಷಿ ವೆಚ್ಚವನ್ನು ಕಡಿಮೆ ಮಾಡುವಲ್ಲಿ ಸಹೋದರಿಯರ ಪಾತ್ರವೂ ಹೆಚ್ಚುತ್ತಿದೆ. ರೈತರು ನೈಸರ್ಗಿಕ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಲು, ಅಗತ್ಯ ಬೆಂಬಲವನ್ನು ಒದಗಿಸಲು ದೇಶಾದ್ಯಂತ 17,000 ಕ್ಕೂ ಹೆಚ್ಚು ಕ್ಲಸ್ಟರ್‌ಗಳನ್ನು ರಚಿಸಲಾಗಿದೆ. ನೈಸರ್ಗಿಕ ಕೃಷಿಯ ಕುರಿತು ರೈತರಿಗೆ ಅಗತ್ಯ ಮಾರ್ಗದರ್ಶನ ನೀಡಲು ಸುಮಾರು 70 ಸಾವಿರ ಕೃಷಿ ಸಖಿಗಳು ಸಿದ್ಧರಾಗಿದ್ದಾರೆ.
ಸ್ನೇಹಿತರೇ,
ಪ್ರತಿಯೊಬ್ಬ ರೈತ ಮತ್ತು ಪ್ರತಿಯೊಬ್ಬ ಪಶುಸಾಕಾಣಿಕೆದಾರರ ವೆಚ್ಚವನ್ನು ಕಡಿಮೆ ಮಾಡುವುದು ಮತ್ತು ಅವರಿಗೆ ಹೆಚ್ಚಿನ ಲಾಭವನ್ನು ಒದಗಿಸುವುದು ನಮ್ಮ ಪ್ರಯತ್ನ. ಶಿವರಾಜ್ ಜೀ ಅವರು ಜಿಎಸ್ಟಿಯಲ್ಲಿನ ಹೊಸ ಸುಧಾರಣೆಗಳ ಬಗ್ಗೆ ಬಹಳ ಉತ್ಸಾಹದಿಂದ ಮಾತನಾಡುತ್ತಿದ್ದರು, ಇದು ಹಳ್ಳಿಯ ಜನರು, ರೈತರು ಮತ್ತು ಪಶುಪಾಲಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ. ಈಗ ಮಾರುಕಟ್ಟೆಯಿಂದ ಬರುತ್ತಿರುವ ಸುದ್ದಿಗಳು ಈ ಹಬ್ಬದ ಋತುವಿನಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳನ್ನು ಖರೀದಿಸುತ್ತಿದ್ದಾರೆ ಎಂಬುದನ್ನು ತೋರಿಸುತ್ತಿವೆ. ಏಕೆಂದರೆ ಟ್ರ್ಯಾಕ್ಟರ್‌ಗಳು ಇನ್ನೂ ಅಗ್ಗವಾಗಿವೆ. ದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ರೈತರಿಗೆ ಎಲ್ಲವೂ ದುಬಾರಿಯಾಗಿತ್ತು. ಟ್ರ್ಯಾಕ್ಟರ್‌ಗಳನ್ನು ನೋಡಿ, ಕಾಂಗ್ರೆಸ್ ಸರ್ಕಾರವು ಟ್ರ್ಯಾಕ್ಟರ್‌ಗೆ ಎಪ್ಪತ್ತು ಸಾವಿರ ರೂಪಾಯಿ ತೆರಿಗೆ ವಿಧಿಸುತ್ತಿತ್ತು. ಹೊಸ ಜಿ.ಎಸ್.ಟಿ ಸುಧಾರಣೆಗಳ ನಂತರ, ಅದೇ ಟ್ರ್ಯಾಕ್ಟರ್ ಸುಮಾರು ನಲವತ್ತು ಸಾವಿರ ರೂಪಾಯಿಗಳಷ್ಟು ಅಗ್ಗವಾಗಿದೆ.
ಸ್ನೇಹಿತರೇ,
ರೈತರು ಬಳಸುವ ಇತರ ಯಂತ್ರಗಳ ಮೇಲೂ ಜಿಎಸ್‌ಟಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ಉದಾಹರಣೆಗೆ, ಭತ್ತ ನಾಟಿ ಯಂತ್ರದ ಮೇಲೆ ಹದಿನೈದು ಸಾವಿರ ರೂಪಾಯಿಗಳ ಉಳಿತಾಯ ಇರುತ್ತದೆ. ಅದೇ ರೀತಿ, ಪವರ್ ಟಿಲ್ಲರ್‌ಗಳಲ್ಲಿ ಹತ್ತು ಸಾವಿರ ರೂಪಾಯಿಗಳ ಉಳಿತಾಯವನ್ನು ಖಾತರಿಪಡಿಸಲಾಗಿದೆ ಮತ್ತು ನೀವು ಥ್ರೆಷರ್‌ಗಳಲ್ಲಿ ಇಪ್ಪತ್ತೈದು ಸಾವಿರ ರೂಪಾಯಿಗಳವರೆಗೆ ಉಳಿಸುತ್ತೀರಿ. ಹನಿ ನೀರಾವರಿ, ತುಂತುರು ನೀರಾವರಿ ಅಥವಾ ಕೊಯ್ಲು ಯಂತ್ರಗಳಿಗೆ ಸಂಬಂಧಿಸಿದ ಉಪಕರಣಗಳಾಗಲಿ, ಎಲ್ಲದರ ಮೇಲೂ ಜಿ.ಎಸ್.ಟಿಯನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ.
ಸ್ನೇಹಿತರೇ,
ಜಿಎಸ್‌ಟಿ ಕಡಿತದಿಂದಾಗಿ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ರಸಗೊಬ್ಬರಗಳು ಮತ್ತು ಕೀಟನಾಶಕಗಳು ಸಹ ಅಗ್ಗವಾಗಿವೆ. ಒಟ್ಟಾರೆಯಾಗಿ, ಹಳ್ಳಿಯಲ್ಲಿರುವ ಒಂದು ಕುಟುಂಬವು ತನ್ನ ಉಳಿತಾಯವನ್ನು ದ್ವಿಗುಣಗೊಳಿಸಿದೆ. ಮೊದಲನೆಯದಾಗಿ, ದಿನನಿತ್ಯದ ವಸ್ತುಗಳು ಅಗ್ಗವಾಗಿವೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಕೃಷಿ ಉಪಕರಣಗಳು ಸಹ ಕಡಿಮೆ ಬೆಲೆಯಲ್ಲಿ ಲಭ್ಯವಿವೆ
ನನ್ನ ಪ್ರೀತಿಯ ರೈತ ಸ್ನೇಹಿತರೇ,
ಸ್ವಾತಂತ್ರ್ಯದ ನಂತರ, ನೀವು ಭಾರತವನ್ನು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದ್ದೀರಿ. ಈಗ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಬೇಕಾಗಿದೆ. ಒಂದೆಡೆ, ನಾವು ಸ್ವಾವಲಂಬಿಗಳಾಗಿರಬೇಕು. ಮತ್ತೊಂದೆಡೆ, ನಾವು ಜಾಗತಿಕ ಮಾರುಕಟ್ಟೆಗಾಗಿ ಉತ್ಪಾದಿಸಬೇಕು. ಈಗ, ಸ್ನೇಹಿತರೇ, ನಾವು ಪ್ರಪಂಚದ ಬಾಗಿಲುಗಳನ್ನು ತಟ್ಟಬೇಕು. ವಿಶ್ವ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗುವಂತಹ ಬೆಳೆಗಳ ಮೇಲೆಯೂ ನಾವು ಗಮನಹರಿಸಬೇಕು. ನಾವು ಆಮದುಗಳನ್ನು ಕಡಿಮೆ ಮಾಡಬೇಕು ಮತ್ತು ರಫ್ತು ಹೆಚ್ಚಿಸುವಲ್ಲಿ ಹಿಂದುಳಿಯಬಾರದು. ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಮತ್ತು ಪಲ್ಸ್ ಸ್ವಾವಲಂಬನೆ ಮಿಷನ್ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಮಹತ್ವದ ಸಂದರ್ಭದಲ್ಲಿ, ಈ ಯೋಜನೆಗಳಿಗಾಗಿ ನನ್ನ ರೈತ ಸಹೋದರ -ಸಹೋದರಿಯರಿಗೆ ಮತ್ತೊಮ್ಮೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಮುಂಬರುವ ದೀಪಾವಳಿ ಹಬ್ಬಕ್ಕಾಗಿ ನಾನು ನಿಮಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ತುಂಬಾ ಧನ್ಯವಾದಗಳು.
****
(Release ID: 2178032)
Visitor Counter : 14
Read this release in:
Telugu
,
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Malayalam