ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹರಿಯಾಣದ ರೇವಾರಿಯಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

प्रविष्टि तिथि: 16 FEB 2024 4:17PM by PIB Bengaluru

ಭಾರತ್ ಮಾತಾ ಕಿ – ಜೈ!

ಭಾರತ್ ಮಾತಾ ಕಿ – ಜೈ!

ಭಾರತ್ ಮಾತಾ ಕಿ – ಜೈ!

ಶೌರ್ಯದ ನಾಡು ರೇವಾರಿಯಿಂದ ಹರಿಯಾಣದ ಎಲ್ಲರಿಗೂ ರಾಮ್ ರಾಮ್! ನಾನು ರೇವಾರಿಗೆ ಭೇಟಿ ನೀಡಿದಾಗಲೆಲ್ಲಾ ಅನೇಕ ಹಳೆಯ ನೆನಪುಗಳು ಮತ್ತೆ ತಾಜಾಗೊಳ್ಳುತ್ತವೆ. ರೇವಾರಿಯೊಂದಿಗಿನ ನನ್ನ ಸಂಪರ್ಕವು ಸದಾ ವಿಶಿಷ್ಟವಾಗಿದೆ. ರೇವಾರಿಯ ಜನರು ಮೋದಿಯನ್ನು ಅಪಾರವಾಗಿ ಪ್ರೀತಿಸುತ್ತಾರೆ ಎಂದು ನನಗೆ ತಿಳಿದಿದೆ. ಮತ್ತು ನನ್ನ ಸ್ನೇಹಿತ ರಾವ್ ಇಂದರ್ಜಿತ್ ಜೀ ಮತ್ತು ಮುಖ್ಯಮಂತ್ರಿ ಮನೋಹರ್ ಲಾಲ್ ಜೀ ಹೇಳಿದಂತೆ, 2013 ರಲ್ಲಿ ಭಾರತೀಯ ಜನತಾ ಪಕ್ಷವು ನನ್ನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದಾಗ, ನನ್ನ ಮೊದಲ ಕಾರ್ಯಕ್ರಮವನ್ನು ರೇವಾರಿಯಲ್ಲಿ ನಡೆಸಲಾಯಿತು ಮತ್ತು ಸಮಯದಲ್ಲಿ ರೇವಾರಿ ನನಗೆ 272 ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸಿತು. ಮತ್ತು ನಿಮ್ಮ ಆಶೀರ್ವಾದವು ಯಶಸ್ಸಾಗಿ ಬದಲಾಯಿತು. ಈಗ ಜನರು ಹೇಳುತ್ತಿದ್ದಾರೆ, ನಾನು ಮತ್ತೊಮ್ಮೆ ರೇವಾರಿಗೆ ಬಂದಾಗ, ಈ ಬಾರಿ ಅದು 400 ಕ್ಕೂ ಹೆಚ್ಚು (ಸೀಟುಗಳು) ಆಗಿರುತ್ತವೆ ಎಂದು. ನಿಮ್ಮ ಆಶೀರ್ವಾದದೊಂದಿಗೆ ಎನ್.ಡಿ.ಎ. ಸರ್ಕಾರವು 400 ಕ್ಕೂ ಹೆಚ್ಚು (ಸೀಟುಗಳು) ಹೊಂದಿರುತ್ತದೆ.

ಸ್ನೇಹಿತರೇ,

ಪ್ರಜಾಪ್ರಭುತ್ವದಲ್ಲಿ ಸ್ಥಾನಗಳ ಮಹತ್ವವನ್ನು ನಿರಾಕರಿಸಲಾಗದು, ಆದರೆ ನನಗೆ, ಅದರ ಜೊತೆಗೆ, ಜನರ ಆಶೀರ್ವಾದವು ಒಂದು ದೊಡ್ಡ ಆಸ್ತಿಯಾಗಿದೆ. ಇಂದು, ಭಾರತವು ಜಾಗತಿಕವಾಗಿ ಹೊಸ ಎತ್ತರವನ್ನು ತಲುಪಿದೆ, ಅದು ನಿಮ್ಮ ಆಶೀರ್ವಾದದಿಂದಾಗಿ, ಇದು ನಿಮ್ಮ ಆಶೀರ್ವಾದದ ಪವಾಡ. ಎರಡು ದೇಶಗಳಿಗೆ ಪ್ರವಾಸದ ನಂತರ ನಾನು ನಿನ್ನೆ ತಡರಾತ್ರಿ ಹಿಂತಿರುಗಿದೆ. ಯುಎಇ ಮತ್ತು ಕತಾರ್‌ನಲ್ಲಿ ಇಂದು ಭಾರತಕ್ಕೆ ಸಿಗುವ ಗೌರವ, ಪ್ರತಿಯೊಂದು ಮೂಲೆಯಿಂದಲೂ ಸುರಿಯುತ್ತಿರುವ ಶುಭಾಶಯಗಳು, ಅದು ಮೋದಿಯ ಗೌರವ ಮಾತ್ರವಲ್ಲ; ಇದು ಪ್ರತಿಯೊಬ್ಬ ಭಾರತೀಯನ ಗೌರವ, ಅದು ನಿಮ್ಮದು. ಭಾರತವು ಜಿ -20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದಾಗ, ಅದು ಸಾಧ್ಯವಾದುದು ನಿಮ್ಮ ಆಶೀರ್ವಾದದಿಂದಾಗಿ. ಭಾರತೀಯ ತ್ರಿವರ್ಣ ಧ್ವಜವು ಬೇರೆ ಯಾರೂ ತಲುಪಲು ಸಾಧ್ಯವಾಗದ ಚಂದ್ರನನ್ನು ತಲುಪಿದಾಗ, ಅದೂ  ನಿಮ್ಮ ಆಶೀರ್ವಾದದಿಂದಾಗಿ ಸಾಧ್ಯವಾಗಿದೆ. ಕಳೆದ 10 ವರ್ಷಗಳಲ್ಲಿ, ಭಾರತವು 11 ನೇ ಸ್ಥಾನದಿಂದ 5 ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ ಮತ್ತು ಅದೆಲ್ಲವೂ ನಿಮ್ಮ ಆಶೀರ್ವಾದಗಳಿಂದಾಗಿ. ಮತ್ತು ಈಗ, ಮುಂಬರುವ ವರ್ಷಗಳಲ್ಲಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯನ್ನಾಗಿ ಮಾಡಲು ನನ್ನ ಮೂರನೇ ಅವಧಿಯಲ್ಲಿ ನನಗೆ ನಿಮ್ಮ ಆಶೀರ್ವಾದಗಳು ಬೇಕಾಗಿವೆ.

ಹರಿಯಾಣದ ನನ್ನ ಸಹೋದರ ಮತ್ತು ಸಹೋದರಿಯರೇ,

‘ವಿಕಸಿತ ಭಾರತ’ ನಿರ್ಮಾಣಕ್ಕಾಗಿ, ಹರಿಯಾಣ ಅಭಿವೃದ್ಧಿ ಹೊಂದುವುದು ಸಹ ನಿರ್ಣಾಯಕವಾಗಿದೆ. ಇಲ್ಲಿ ಆಧುನಿಕ ರಸ್ತೆಗಳು ನಿರ್ಮಾಣವಾದಾಗ ಮಾತ್ರ ಹರಿಯಾಣ ಪ್ರಗತಿಯಾಗುತ್ತದೆ. ಆಧುನಿಕ ರೈಲ್ವೆ ಜಾಲವಿದ್ದಾಗ ಮಾತ್ರ ಹರಿಯಾಣದ ಪ್ರಗತಿಯಾಗುತ್ತದೆ. ಇಲ್ಲಿ ದೊಡ್ಡ ಮತ್ತು ಉತ್ತಮ ಆಸ್ಪತ್ರೆಗಳು ಇದ್ದಾಗ ಮಾತ್ರ ಹರಿಯಾಣ ಪ್ರಗತಿಯಾಗುತ್ತದೆ. ಸ್ವಲ್ಪ ಸಮಯದ ಹಿಂದೆ, ಅಂತಹ ಕಾಮಗಾರಿಗಳಿಗೆ ಸಂಬಂಧಿಸಿದ ಸುಮಾರು 10,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಹರಿಯಾಣಕ್ಕೆ ಅರ್ಪಿಸುವ ಅವಕಾಶ ನನಗೆ ಸಿಕ್ಕಿತು. ಇದರಲ್ಲಿ ರೇವಾರಿ ಏಮ್ಸ್, ಗುರುಗ್ರಾಮ್ ಮೆಟ್ರೋ, ಹಲವಾರು ರೈಲು ಮಾರ್ಗಗಳು ಮತ್ತು ಹೊಸ ರೈಲುಗಳು ಸೇರಿವೆ. ಇವುಗಳಲ್ಲಿ, ಜ್ಯೋತಿಸರ್‌ನಲ್ಲಿ ಕೃಷ್ಣ ಸರ್ಕ್ಯೂಟ್ ಯೋಜನೆಯ ಮೂಲಕ ನಿರ್ಮಿಸಲಾದ ಆಧುನಿಕ ಮತ್ತು ಭವ್ಯವಾದ ವಸ್ತುಸಂಗ್ರಹಾಲಯವೂ ಇದೆ. ಮತ್ತು ಭಗವಾನ್ ರಾಮನ ಆಶೀರ್ವಾದ ಎಷ್ಟಿದೆಯೆಂದರೆ, ಇತ್ತೀಚಿನ ದಿನಗಳಲ್ಲಿ, ಎಲ್ಲೆಡೆ ಅಂತಹ ಪವಿತ್ರ ಕಾರ್ಯಗಳೊಂದಿಗೆ ಸಂಬಂಧ ಹೊಂದಲು ನನಗೆ ಅವಕಾಶ ಸಿಗುತ್ತಿದೆ; ಇದು ಭಗವಾನ್ ರಾಮನ ಕೃಪೆ. ಈ ವಸ್ತುಸಂಗ್ರಹಾಲಯವು ಭಗವಾನ್ ಶ್ರೀ ಕೃಷ್ಣನ ಭಗವದ್ಗೀತೆಯ ಸಂದೇಶ ಮತ್ತು ಪವಿತ್ರ ಭೂಮಿಯ ಪಾತ್ರವನ್ನು ಜಗತ್ತಿಗೆ ಪರಿಚಯಿಸುತ್ತದೆ. ಈ ಸೌಲಭ್ಯಗಳಿಗಾಗಿ ರೇವಾರಿ ಸೇರಿದಂತೆ ಇಡೀ ಹರಿಯಾಣದ ಜನರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸಹೋದರರೇ ಮತ್ತು  ಸಹೋದರಿಯರೇ,

ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಮೋದಿಯವರ ಭರವಸೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಮತ್ತು ರೇವಾರಿ ಮೋದಿಯವರ ಭರವಸೆಗೆ ಮೊದಲ ಸಾಕ್ಷಿಯಾಗಿದೆ. ಇಲ್ಲಿ, ನಾನು ಪ್ರಧಾನಿ ಹುದ್ದೆಯ ಅಭ್ಯರ್ಥಿಯಾಗಿ ದೇಶಕ್ಕೆ ಕೆಲವು ಭರವಸೆಗಳನ್ನು ನೀಡಿದ್ದೆ. ಜಾಗತಿಕವಾಗಿ ಭಾರತದ ಸ್ಥಾನಮಾನ ಏರಬೇಕೆಂದು ರಾಷ್ಟ್ರ ಬಯಸಿತು. ನಾವು ಇದನ್ನು ಪ್ರದರ್ಶಿಸಿದ್ದೇವೆ. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವನ್ನು ರಾಷ್ಟ್ರ ಬಯಸಿತು. ಇಂದು, ಇಡೀ ರಾಷ್ಟ್ರವು ಭವ್ಯವಾದ ರಾಮ ಮಂದಿರದಲ್ಲಿ ಭಗವಾನ್ ರಾಮನ ದೈವಿಕ ಉಪಸ್ಥಿತಿಯನ್ನು ವೀಕ್ಷಿಸುತ್ತಿದೆ. ಅಯೋಧ್ಯೆಯಲ್ಲಿ ಭಗವಾನ್ ರಾಮನ ದೇವಾಲಯವನ್ನು ಎಂದಿಗೂ ನಿರ್ಮಿಸಬಾರದು ಎಂದು ಹೇಳುತ್ತಿದ್ದ, ನಮ್ಮ ಭಗವಾನ್ ರಾಮನನ್ನು ಕಾಲ್ಪನಿಕ ಎಂದು ಪರಿಗಣಿಸುತ್ತಿದ್ದ ಕಾಂಗ್ರೆಸ್‌ನವರು ಸಹ ಈಗ 'ಜೈ ಸಿಯಾ ರಾಮ್' ಎಂದು ಜಪಿಸಲು ಪ್ರಾರಂಭಿಸಿದ್ದಾರೆ.

ಸ್ನೇಹಿತರೇ,

ದಶಕಗಳಿಂದ, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ 370ನೇ ವಿಧಿಯನ್ನು ತೆಗೆದುಹಾಕುವಲ್ಲಿ ಕಾಂಗ್ರೆಸ್ ಅಡೆತಡೆಗಳನ್ನು ಹಾಕುತ್ತಿತ್ತು. ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕುವುದಾಗಿ ನಾನು ನಿಮಗೆ ಭರವಸೆ ನೀಡಿದ್ದೆ. ಕಾಂಗ್ರೆಸ್‌ನ ಸಾಕಷ್ಟು ಪ್ರಯತ್ನಗಳ ಹೊರತಾಗಿಯೂ, ಇಂದು, 370ನೇ ವಿಧಿಯನ್ನು ಇತಿಹಾಸದ ಪುಟಗಳಿಗೆ ಸೇರಿಸಲಾಗಿದೆ. ಇಂದು, ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳೆಯರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಸ್ಥಳೀಯ ಜನರು ತಮ್ಮ ಹಕ್ಕುಗಳನ್ನು ಪಡೆಯಲು ಪ್ರಾರಂಭಿಸಿದ್ದಾರೆ. ಅದಕ್ಕಾಗಿಯೇ ಜನರು ಮತ್ತೊಂದು ಸಂಕಲ್ಪವನ್ನು ತೆಗೆದುಕೊಂಡಿದ್ದಾರೆ ಮತ್ತು ಸಾರ್ವಜನಿಕರು ಹೇಳುತ್ತಿದ್ದಾರೆ ಮತ್ತು ನೀವು ಸಹ ಹೇಳುತ್ತಿದ್ದೀರಿ - 370ನೇ ವಿಧಿಯನ್ನು ತೆಗೆದುಹಾಕಿದ ಬಿಜೆಪಿಯನ್ನು 370 ಸ್ಥಾನಗಳೊಂದಿಗೆ ಸ್ವಾಗತಿಸಲಾಗುತ್ತದೆ. ಎಂದು. ಬಿಜೆಪಿಯ 370 (ಸ್ಥಾನಗಳು) ಎನ್.ಡಿ.ಎ. ಯನ್ನು  400 (ಸ್ಥಾನಗಳು) ದಾಟಿ ಮುನ್ನಡೆಸುತ್ತದೆ.

ಸ್ನೇಹಿತರೇ,

ಇಲ್ಲಿಯೇ ರೇವಾರಿಯಲ್ಲಿ, ಮಾಜಿ ಸೈನಿಕರಿಗೆ ಒಂದು ಶ್ರೇಣಿ ಒಂದು ಪಿಂಚಣಿ (ಒ.ಆರ್.ಒ.ಪಿ.-OROP) ಜಾರಿಗೆ ತರುವ ಭರವಸೆಯನ್ನು ನಾನು ನೀಡಿದ್ದೆ. ಕೇವಲ 500 ಕೋಟಿ ರೂಪಾಯಿಗಳ ಬಜೆಟ್ ಮೀಸಲಿಡುವ ಮೂಲಕ ಒ.ಆರ್.ಒ.ಪಿ. ಜಾರಿಗೆ ತರುವುದಾಗಿ ಕಾಂಗ್ರೆಸ್ ಸುಳ್ಳು ಭರವಸೆ ನೀಡಿತು. ನಿಮ್ಮ ಆಶೀರ್ವಾದದಿಂದ ರೇವಾರಿಯ ವೀರ ಭೂಮಿಯಿಂದ ತೆಗೆದುಕೊಂಡ ಪ್ರತಿಜ್ಞೆಯನ್ನು ನಾನು ಈಡೇರಿಸಿದ್ದೇನೆ. ಒ.ಆರ್.ಒ.ಪಿ., ಒಂದು ಶ್ರೇಣಿ ಒಂದು ಪಿಂಚಣಿ (One Rank One Pension) ಅಡಿಯಲ್ಲಿ, ಇಲ್ಲಿಯವರೆಗೆ, ಮಾಜಿ ಸೈನಿಕರು ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಮತ್ತು ಪ್ರಮುಖ ಫಲಾನುಭವಿಗಳಲ್ಲಿ ಹರಿಯಾಣದ ಮಾಜಿ ಸೈನಿಕರೂ ಸೇರಿದ್ದಾರೆ. ನಾನು ರೇವಾರಿಯ ಸೈನಿಕರ ಕುಟುಂಬಗಳ ಬಗ್ಗೆ ಮಾತನಾಡಿದರೆ, ಅವರು ಒ.ಆರ್.ಒ.ಪಿ ನಿಂದಲೇ 600 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಈಗ ಹೇಳಿ, ಕಾಂಗ್ರೆಸ್ ಇಡೀ ದೇಶದ ಮಾಜಿ ಸೈನಿಕರಿಗೆ ಬಜೆಟ್‌ನಲ್ಲಿ ರೇವಾರಿಯ ಸೈನಿಕರ ಕುಟುಂಬಗಳು ಪಡೆದ ಮೊತ್ತಕ್ಕಿಂತ ಕಡಿಮೆ ಹಣವನ್ನು ಮೀಸಲಿಟ್ಟಿತ್ತು. ಮತ್ತು ಅದು ಕೇವಲ 500 ಕೋಟಿ ರೂಪಾಯಿಗಳು! ಇಂತಹ ಸುಳ್ಳು ಮತ್ತು ವಂಚನೆಯಿಂದಾಗಿ ದೇಶವು ಕಾಂಗ್ರೆಸ್ ಅನ್ನು ತಿರಸ್ಕರಿಸಿದೆ.

ಸ್ನೇಹಿತರೇ,

ರೇವಾರಿಯ ನಿವಾಸಿಗಳು ಮತ್ತು ಹರಿಯಾಣದ ಜನರಿಗೆ ಇಲ್ಲಿ ಏಮ್ಸ್ ಸ್ಥಾಪಿಸಲಾಗುವುದು ಎಂದು ನಾನು ಭರವಸೆ ನೀಡಿದ್ದೆ. ಇಂದು, ಏಮ್ಸ್ ನಿರ್ಮಾಣ ಪ್ರಕ್ರಿಯೆ ಪ್ರಾರಂಭವಾಗಿದೆ, ಮತ್ತು ನಮ್ಮ ರಾವ್ ಇಂದರ್ಜಿತ್ ಕೆಲಸಕ್ಕಾಗಿ ನಿರಂತರವಾಗಿ ಆಗ್ರಹಿಸುತ್ತಿದ್ದಾರೆ ಮಾತ್ರವಲ್ಲದೆ ಅದನ್ನು ಶ್ರದ್ಧೆಯಿಂದ ಅನುಸರಿಸುತ್ತಿದ್ದಾರೆ. ಇಂದು, ಏಮ್ಸ್‌ನ ಅಡಿಪಾಯ ಹಾಕಲಾಗಿದೆ. ನಾನು ನಿಮಗೆ ಭರವಸೆ ನೀಡುತ್ತೇನೆ- ಇಂದು ಏಮ್ಸ್‌ನ ಅಡಿಪಾಯ ಹಾಕಲಾಗಿದೆ ಮತ್ತು ನಾವು ಅದನ್ನು ಉದ್ಘಾಟಿಸುತ್ತೇವೆ ಎಂದು. ಇದು ನಿಮಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ, ಯುವಜನರು ವೈದ್ಯರಾಗಲು ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಹಲವಾರು ಉದ್ಯೋಗ ಮತ್ತು ಸ್ವ-ಉದ್ಯೋಗ ಅವಕಾಶಗಳನ್ನು ಸೃಷ್ಟಿಸುತ್ತದೆ. ದೇಶದ 22 ನೇ ಏಮ್ಸ್ ಅನ್ನು ರೇವಾರಿಯಲ್ಲಿ ಸ್ಥಾಪಿಸಲಾಗುತ್ತಿದೆ. ಕಳೆದ 10 ವರ್ಷಗಳಲ್ಲಿ, 15 ಹೊಸ ಏಮ್ಸ್‌ಗಳನ್ನು ಅನುಮೋದಿಸಲಾಗಿದೆ. ಸ್ವಾತಂತ್ರ್ಯದ ನಂತರ 2014 ರವರೆಗೆ, ದೇಶದಲ್ಲಿ ಸುಮಾರು 380 ವೈದ್ಯಕೀಯ ಕಾಲೇಜುಗಳು ಇದ್ದವು. ಕಳೆದ 10 ವರ್ಷಗಳಲ್ಲಿ, 300 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಹರಿಯಾಣದಲ್ಲಿಯೂ ಸಹ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಕೆಲಸ ವೇಗವಾಗಿ ಪ್ರಗತಿಯಲ್ಲಿದೆ.

ಸ್ನೇಹಿತರೇ,

ದೇಶದ ಜನರ ಆಶೀರ್ವಾದದಿಂದ ಈಡೇರಿರುವ ಹಲವಾರು ಭರವಸೆಗಳನ್ನು ನಾನು ಎಣಿಸಬಲ್ಲೆ. ಆದರೆ, ಕಾಂಗ್ರೆಸ್‌ನ ಹಿಂದಿನ ಸಾಧನೆ ಏನು? ದೇಶದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರನ್ನು ದಶಕಗಳ ಕಾಲ ಮೂಲಭೂತ ಅವಶ್ಯಕತೆಗಳಿಂದ ವಂಚಿತರನ್ನಾಗಿಸಿ, ಅವರನ್ನು ಹಿಂಸಿಸಿರುವುದು ಕಾಂಗ್ರೆಸ್‌ನ ಹಿಂದಿನ ಸಾಧನೆಯಾಗಿದೆ. ರಾಷ್ಟ್ರ ಮತ್ತು ಅದರ ನಾಗರಿಕರ ಕಲ್ಯಾಣಕ್ಕಿಂತ ಕೇವಲ ಒಂದು ಕುಟುಂಬದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದು ಕಾಂಗ್ರೆಸ್‌ನ ಹಿಂದಿನ ಸಾಧನೆಯಾಗಿದೆ. ಕಾಂಗ್ರೆಸ್‌ನ ಹಿಂದಿನ ಸಾಧನೆ ಇತಿಹಾಸದಲ್ಲಿ ಅತಿದೊಡ್ಡ ಹಗರಣಗಳನ್ನು ಒಳಗೊಂಡಿದೆ. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಉತ್ತೇಜಿಸುವುದು ಕಾಂಗ್ರೆಸ್‌ನ ಹಿಂದಿನ ಸಾಧನೆಯಾಗಿದೆ. ಸೈನ್ಯ ಮತ್ತು ಸೈನಿಕರು ಎರಡನ್ನೂ ದುರ್ಬಲಗೊಳಿಸುವುದು ಕಾಂಗ್ರೆಸ್‌ನ ಹಿಂದಿನ ಸಾಧನೆಯಾಗಿದೆ. ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯ,  ಏಕೆಂದರೆ ಇಂದಿಗೂ ಕಾಂಗ್ರೆಸ್‌ನ ತಂಡ ಒಂದೇ ಆಗಿದೆ, ನಾಯಕರು ಒಂದೇ ಆಗಿದ್ದಾರೆ, ಅವರ ಉದ್ದೇಶಗಳು ಒಂದೇ ಆಗಿರುತ್ತವೆ ಮತ್ತು ಅವರ ನಿಷ್ಠೆ ಒಂದೇ ಕುಟುಂಬದೊಂದಿಗೆ ಇರುತ್ತದೆ. ಆದ್ದರಿಂದ, ಅವರ ನೀತಿಗಳು ಸಹ ಒಂದೇ ಆಗಿರುತ್ತವೆ, ಇದರಲ್ಲಿ ಲೂಟಿ, ಭ್ರಷ್ಟಾಚಾರ ಮತ್ತು ವಿನಾಶ ಸೇರಿವೆ.

ಸ್ನೇಹಿತರೇ,

ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುವುದು ತನ್ನ ಸಹಜ ಹಕ್ಕು ಎಂದು ನಂಬುತ್ತದೆ. ಅದಕ್ಕಾಗಿಯೇ ಬಡ ಮಗ ಪ್ರಧಾನಿಯಾದಾಗಿನಿಂದ; ಅವರು ನನ್ನ ವಿರುದ್ಧ ಒಬ್ಬರ ನಂತರ ಒಬ್ಬರಂತೆ ಪಿತೂರಿ ನಡೆಸುತ್ತಿದ್ದಾರೆ. ಆದರೆ ನಾನು ಜನರ ದೈವಿಕ ಬೆಂಬಲದಿಂದ ಆಶೀರ್ವದಿಸಲ್ಪಟ್ಟಿದ್ದೇನೆ. ಕಾಂಗ್ರೆಸ್‌ನ ಪ್ರತಿಯೊಂದು ಪಿತೂರಿಗೆ ಜನರು ಗುರಾಣಿಯಾಗಿ ನಿಲ್ಲುತ್ತಾರೆ. ಕಾಂಗ್ರೆಸ್ ಹೆಚ್ಚು ಪಿತೂರಿಗಳನ್ನು ಹೂಡಿದಷ್ಟೂ, ಜನರು ನನ್ನನ್ನು ಬಲಪಡಿಸುತ್ತಾರೆ, ಅವರ ಆಶೀರ್ವಾದವನ್ನು ನನಗೆ ನೀಡುತ್ತಾರೆ. ಈ ಬಾರಿಯೂ ಸಹ, ಕಾಂಗ್ರೆಸ್ ನನ್ನ ವಿರುದ್ಧ ಎಲ್ಲಾ ರಂಗಗಳನ್ನು ತೆರೆದಿದೆ. ಆದರೆ ನನ್ನ ದೇಶದ ಜನರ ಭದ್ರತಾ ಗುರಾಣಿ ಇದ್ದಾಗ, ಜನರ ಆಶೀರ್ವಾದ ನನ್ನೊಂದಿಗಿದ್ದಾಗ, ತಾಯಂದಿರು ಮತ್ತು ಸಹೋದರಿಯರು ಗುರಾಣಿಯಾಗಿ ನಿಂತಾಗ, ನಾವು ಬಿಕ್ಕಟ್ಟುಗಳನ್ನು ನಿವಾರಿಸುವುದಲ್ಲದೆ ರಾಷ್ಟ್ರವನ್ನು ಮುಂದಕ್ಕೆ ಕೊಂಡೊಯ್ಯುತ್ತೇವೆ. ಮತ್ತು ಅದಕ್ಕಾಗಿಯೇ, ನಿಮ್ಮೆಲ್ಲರ ಮತ್ತು ಜನರ ಆಶೀರ್ವಾದದೊಂದಿಗೆ ಭಾರತದ ಪ್ರತಿಯೊಂದು ಮೂಲೆಯಿಂದ ನಾನು ಅನುಭವಿಸುತ್ತಿದ್ದೇನೆ – ಎನ್.ಡಿ.ಎ. ಸರ್ಕಾರ, 400 ಕ್ಕೂ ಹೆಚ್ಚು ಸ್ಥಾನಗಳು! ಎನ್.ಡಿ.ಎ.  ಸರ್ಕಾರ, 400 ಕ್ಕೂ ಹೆಚ್ಚು ಸ್ಥಾನಗಳು! ಎನ್.ಡಿ.ಎ.  ಸರ್ಕಾರ, 400 ಕ್ಕೂ ಹೆಚ್ಚು ಸ್ಥಾನಗಳು! ಎನ್.ಡಿ.ಎ.  ಸರ್ಕಾರ, 400 ಕ್ಕೂ ಹೆಚ್ಚು ಸ್ಥಾನಗಳು! ಎಂಬ ಜನರ ಮಾತುಗಳನ್ನು.

ಸ್ನೇಹಿತರೇ,

ಒಂದೇ ಕುಟುಂಬದ ಪ್ರೀತಿಯ ಹಿಡಿತದಲ್ಲಿ, ಕಾಂಗ್ರೆಸ್ ಇಂದು ತನ್ನ ಇತಿಹಾಸದಲ್ಲಿ ಅತ್ಯಂತ ದಯನೀಯ ಹಂತವನ್ನು ಎದುರಿಸುತ್ತಿದೆ, ಹರಿಯಾಣದಲ್ಲಿಯೂ ಸಹ. ಅವರ ನಾಯಕರಿಗೆ ತಮ್ಮದೇ ಆದ ಸ್ಟಾರ್ಟ್ ಅಪ್ ಅನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಆದರೆ ಅವರು ದೇಶವನ್ನು ನಡೆಸುವ ಕನಸು ಕಾಣುತ್ತಿದ್ದಾರೆ. ಇಂದಿನ ಕಾಂಗ್ರೆಸ್‌ನ ಸ್ಥಿತಿಯನ್ನು ನೋಡಿ, ಕಾಂಗ್ರೆಸ್‌ನ ಹಿರಿಯ ನಾಯಕರು ಒಬ್ಬೊಬ್ಬರಾಗಿ ಅವರನ್ನು ಬಿಟ್ಟು ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಅವರೊಂದಿಗೆ ಸೇರಲು ಉದ್ದೇಶಿಸಿದ್ದವರೂ ಅವರಿಂದ  ತಪ್ಪಿಸಿಕೊಳ್ಳುತ್ತಿದ್ದಾರೆ. ಇಂದು, ಕಾಂಗ್ರೆಸ್‌ಗೆ ತನ್ನ ಕಾರ್ಯಕರ್ತರೇ ಇಲ್ಲದಂತಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿರುವಲ್ಲೆಲ್ಲಾ, ಅವರ ಸರ್ಕಾರಗಳು ಸಹ ಸ್ಥಿರವಾಗಿಲ್ಲ. ಇಂದು, ಹಿಮಾಚಲ ಪ್ರದೇಶದಲ್ಲಿ ಸಂಬಳ ಮತ್ತು ಪಿಂಚಣಿ ಪಾವತಿಸುವಲ್ಲಿ ತೊಂದರೆಗಳಿವೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡಲು ಸಹ ಸಾಧ್ಯವಾಗುತ್ತಿಲ್ಲ.

ಸಹೋದರರೇ ಮತ್ತು ಸಹೋದರಿಯರೇ,

ಒಂದು ಕಡೆ, ಕಾಂಗ್ರೆಸ್‌ನ ದುರಾಡಳಿತವಿದೆ, ಮತ್ತು ಇನ್ನೊಂದು ಕಡೆ, ಬಿಜೆಪಿಯ ಉತ್ತಮ ಆಡಳಿತವಿದೆ. ಹರಿಯಾಣದಲ್ಲಿ 10 ವರ್ಷಗಳಿಂದ ಡಬಲ್-ಎಂಜಿನ್ ಸರ್ಕಾರವಿದೆ. ಆದ್ದರಿಂದ, ಬಡವರ ಕಲ್ಯಾಣಕ್ಕಾಗಿ ಮೋದಿ ಯಾವುದೇ ಯೋಜನೆಗಳನ್ನು ಮಾಡಿದರೂ, ಅವುಗಳನ್ನು ಅನುಷ್ಠಾನಗೊಳಿಸುವಲ್ಲಿ ಹರಿಯಾಣ ಮುಂಚೂಣಿಯಲ್ಲಿದೆ. ಹರಿಯಾಣ ಕೃಷಿ ಕ್ಷೇತ್ರದಲ್ಲಿಯೂ ಅಭೂತಪೂರ್ವ ಪ್ರಗತಿ ಸಾಧಿಸುತ್ತಿದೆ ಮತ್ತು ಕೈಗಾರಿಕೆಗಳ ವ್ಯಾಪ್ತಿಯು ಇಲ್ಲಿ ನಿರಂತರವಾಗಿ ವಿಸ್ತರಿಸುತ್ತಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಹರಿಯಾಣದ ದಕ್ಷಿಣ ಭಾಗವು ಈಗ ವೇಗವಾಗಿ ಮುಂದುವರಿಯುತ್ತಿದೆ. ರಸ್ತೆಗಳು, ರೈಲ್ವೆಗಳು ಮತ್ತು ಮಹಾನಗರಗಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳು ಪ್ರದೇಶದ ಮೂಲಕ ಹಾದು ಹೋಗುತ್ತಿವೆ. ದಿಲ್ಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯ ದಿಲ್ಲಿ-ದೌಸಾ-ಲಾಲ್ಸೋಟ್ ವಿಭಾಗದ ಮೊದಲ ಹಂತದ ಉದ್ಘಾಟನೆ ಪೂರ್ಣಗೊಂಡಿದೆ. ದೇಶದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಹರಿಯಾಣದ ಗುರುಗ್ರಾಮ್, ಪಲ್ವಾಲ್ ಮತ್ತು ನುಹ್ ಜಿಲ್ಲೆಗಳ ಮೂಲಕ ಹಾದುಹೋಗುತ್ತಿದೆ.

ಸ್ನೇಹಿತರೇ,

2014ರ ಮೊದಲು, ಹರಿಯಾಣದಲ್ಲಿ ರೈಲ್ವೆ ಅಭಿವೃದ್ಧಿಗೆ ವಾರ್ಷಿಕವಾಗಿ ಸರಾಸರಿ 300 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗುತ್ತಿತ್ತು. ಕೇವಲ 300 ಕೋಟಿ ರೂಪಾಯಿಗಳು! ಈ ವರ್ಷ, ಹರಿಯಾಣದಲ್ಲಿ ರೈಲ್ವೆಗೆ ಸುಮಾರು 3,000 ಕೋಟಿ ರೂಪಾಯಿಗಳ ಬಜೆಟ್ ನಿಗದಿಪಡಿಸಲಾಗಿದೆ. ಈಗ, 300 ಕೋಟಿ ಮತ್ತು 3,000 ಕೋಟಿ ರೂಪಾಯಿಗಳ ನಡುವಿನ ವ್ಯತ್ಯಾಸವನ್ನು ನೋಡಿ. ಮತ್ತು ವ್ಯತ್ಯಾಸವು ಕಳೆದ 10 ವರ್ಷಗಳಲ್ಲಿ ಬಂದಿದೆ. ರೋಹ್ಟಕ್-ಮೆಹಮ್-ಹನ್ಸಿ ಮತ್ತು ಜಿಂದ್-ಸೋನಿಪತ್‌ನಂತಹ ಹೊಸ ರೈಲು ಮಾರ್ಗಗಳು ಮತ್ತು ಅಂಬಾಲಾ ಕ್ಯಾಂಟ್-ದಪ್ಪರ್‌ನಂತಹ ರೈಲು ಮಾರ್ಗಗಳ ದ್ವಿಗುಣಗೊಳಿಸುವಿಕೆಯು ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡುತ್ತದೆ. ಅಂತಹ ಸೌಲಭ್ಯಗಳನ್ನು ರಚಿಸಿದಾಗ, ಜೀವನವು ಸುಲಭವಾಗುತ್ತದೆ ಮತ್ತು ವ್ಯವಹಾರವೂ ಸುಲಭವಾಗುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ಪ್ರದೇಶದ ರೈತರು ನೀರಿನ ಕೊರತೆಯಿಂದ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರವು ಸಹ ಶ್ಲಾಘನೀಯ ಕೆಲಸ ಮಾಡಿದೆ. ಪ್ರಪಂಚದಾದ್ಯಂತದ ನೂರಾರು ಪ್ರಮುಖ ಕಂಪನಿಗಳು ಇಂದು ಹರಿಯಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದು ಹೆಚ್ಚಿನ ಸಂಖ್ಯೆಯ ಯುವಜನರಿಗೆ ಉದ್ಯೋಗವನ್ನು ಒದಗಿಸಿದೆ.

ಸ್ನೇಹಿತರೇ,

ಹರಿಯಾಣ ಜವಳಿ ಉದ್ಯಮದಲ್ಲಿಯೂ ಸಹ ಹೆಸರು ಗಳಿಸುತ್ತಿದೆ. ದೇಶದಿಂದ ರಫ್ತು ಮಾಡುವ ರತ್ನಗಂಬಳಿಗಳಲ್ಲಿ 35% ಕ್ಕಿಂತ ಹೆಚ್ಚು ಮತ್ತು ಸುಮಾರು 20% ರಷ್ಟು ಜವಳಿ ಹರಿಯಾಣದಲ್ಲೇ ಉತ್ಪಾದಿಸಲ್ಪಡುತ್ತವೆ. ನಮ್ಮ ಸಣ್ಣ ಕೈಗಾರಿಕೆಗಳು ಹರಿಯಾಣದಲ್ಲಿ ಜವಳಿ ಉದ್ಯಮವನ್ನು ಮುನ್ನಡೆಸುತ್ತಿವೆ. ಪಾಣಿಪತ್ ಕೈಮಗ್ಗ ಉತ್ಪನ್ನಗಳಿಗೆ, ಫರಿದಾಬಾದ್ ಜವಳಿ ಉತ್ಪಾದನೆಗೆ, ಗುರುಗ್ರಾಮ್ ಸಿದ್ಧ ಉಡುಪುಗಳಿಗೆ, ಸೋನಿಪತ್ ತಾಂತ್ರಿಕ ಜವಳಿಗಳಿಗೆ ಮತ್ತು ಭಿವಾನಿ ನೇಯಲ್ಪಡದಿರುವ ಬಟ್ಟೆಗಳಿಗೆ ಹೆಸರುವಾಸಿಯಾಗಿದೆ. ಕಳೆದ 10 ವರ್ಷಗಳಲ್ಲಿ, ಕೇಂದ್ರ ಸರ್ಕಾರವು ಎಂ.ಎಸ್.ಎಂ.ಇ.ಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ಶತಕೋಟಿ ರೂಪಾಯಿಗಳ ಸಹಾಯವನ್ನು ನೀಡಿದೆ. ಇದು ಅಸ್ತಿತ್ವದಲ್ಲಿರುವ ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಬಲಪಡಿಸುವುದಲ್ಲದೆ, ಹರಿಯಾಣದಲ್ಲಿ ಸಾವಿರಾರು ಹೊಸ ಕೈಗಾರಿಕೆಗಳ ಸ್ಥಾಪನೆಗೆ ಕಾರಣವಾಗಿದೆ.

ಸ್ನೇಹಿತರೇ,

ರೇವಾರಿ ವಿಶ್ವಕರ್ಮ ಸಂಗಾತಿಗಳ ಕರಕುಶಲತೆಗೆ ಹೆಸರುವಾಸಿಯಾಗಿದೆ. ಇಲ್ಲಿನ ಹಿತ್ತಾಳೆ ಕೆಲಸ ಮತ್ತು ಕರಕುಶಲತೆಯು ಬಹಳ ಪ್ರಸಿದ್ಧವಾಗಿದೆ. ಮೊದಲ ಬಾರಿಗೆ, ನಾವು 18 ವ್ಯವಹಾರಗಳೊಂದಿಗೆ ಸಂಬಂಧ ಹೊಂದಿರುವ ಕುಶಲಕರ್ಮಿಗಳಿಗಾಗಿ ಪಿಎಂ ವಿಶ್ವಕರ್ಮ ಎಂಬ ಪ್ರಮುಖ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ಲಕ್ಷಾಂತರ ಫಲಾನುಭವಿಗಳು ಪಿಎಂ ವಿಶ್ವಕರ್ಮ ಯೋಜನೆಗೆ ಸೇರುತ್ತಿದ್ದಾರೆ. ಬಿಜೆಪಿ ಸರ್ಕಾರ ಯೋಜನೆಗೆ 13,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಯೋಜಿಸುತ್ತಿದೆ. ಈ ಯೋಜನೆಯು ನಮ್ಮ ಸಾಂಪ್ರದಾಯಿಕ ಕುಶಲಕರ್ಮಿಗಳು ಮತ್ತು ಅವರ ಕುಟುಂಬಗಳ ಜೀವನವನ್ನು ಬದಲಾಯಿಸಲಿದೆ.

ಸಹೋದರ ಸಹೋದರಿಯರೇ,

ಮೋದಿಯ ಖಾತರಿಯು ಮೇಲಾಧಾರವಾಗಿ ನೀಡಲು ಏನೂ ಇಲ್ಲದವರಿಗೂ ಇದೆ. ದೇಶದ ಸಣ್ಣ ರೈತರು ಬ್ಯಾಂಕುಗಳಿಗೆ ಮೇಲಾಧಾರವಾಗಿ ನೀಡಲು ಏನನ್ನೂ ಹೊಂದಿರಲಿಲ್ಲ. ಮೋದಿ ಅವರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಖಾತರಿಯನ್ನು ನೀಡಿದರು. ಬಡವರು, ದಲಿತರು, ಹಿಂದುಳಿದವರು ಮತ್ತು ಒಬಿಸಿ ಕುಟುಂಬಗಳ ಪುತ್ರರು ಮತ್ತು ಪುತ್ರಿಯರಿಗೆ ಬ್ಯಾಂಕುಗಳಲ್ಲಿ ಮೇಲಾಧಾರವಾಗಿ ನೀಡಲು ಏನೂ ಇರಲಿಲ್ಲ. ಮೋದಿ ಮುದ್ರಾ ಯೋಜನೆಯನ್ನು ಪ್ರಾರಂಭಿಸಿದರು ಮತ್ತು ಮೇಲಾಧಾರವಿಲ್ಲದೆ ಸಾಲ ನೀಡಲು ಪ್ರಾರಂಭಿಸಿದರು. ಅನೇಕ ಸಂಗಾತಿಗಳು ದೇಶದಲ್ಲಿ ಕೈಗಾಡಿಗಳು/ಬಂಡಿಗಳು ಮತ್ತು ಅಂಗಡಿಗಳಲ್ಲಿ ಸಣ್ಣ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಅವರು ದಶಕಗಳಿಂದ ನಗರಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರಿಗೆ ಮೇಲಾಧಾರವಾಗಿ ನೀಡಲು ಏನೂ ಇರಲಿಲ್ಲ. ಪ್ರಧಾನಿ ಸ್ವನಿಧಿ ಯೋಜನೆಯ ಮೂಲಕ ಮೋದಿ ಅವರಿಗೂ ಖಾತರಿಯನ್ನು ನೀಡಿದ್ದಾರೆ.

ಸ್ನೇಹಿತರೇ,

10 ವರ್ಷಗಳ ಹಿಂದೆ ಹಳ್ಳಿಗಳಲ್ಲಿ ನಮ್ಮ ಸಹೋದರಿಯರ ಪರಿಸ್ಥಿತಿ ಹೇಗಿತ್ತು? ಹೆಚ್ಚಿನ ಸಮಯ, ನಮ್ಮ ಸಹೋದರಿಯರು ನೀರು ವ್ಯವಸ್ಥೆ ಮಾಡುವುದು, ಉರುವಲು ಸಂಗ್ರಹಿಸುವುದು ಅಥವಾ ಅಡುಗೆಗಾಗಿ ಇತರ ವ್ಯವಸ್ಥೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಮೋದಿ ಉಚಿತ ಅನಿಲ ಸಂಪರ್ಕಗಳನ್ನು ತಂದರು, ನೀರಿನ ಪೈಪ್‌ಲೈನ್‌ಗಳನ್ನು ಮನೆ ಬಾಗಿಲಿಗೆ ತಂದರು. ಇಂದು, ಹರಿಯಾಣದ ಹಳ್ಳಿಗಳಲ್ಲಿರುವ ನನ್ನ ಸಹೋದರಿಯರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಮತ್ತು ಅವರ ಸಮಯವೂ ಉಳಿತಾಯವಾಗಿದೆ. ಇದು ಮಾತ್ರವಲ್ಲದೆ, ಸಹೋದರಿಯರಿಗೆ ಈಗ ಸಾಕಷ್ಟು ಉಚಿತ ಸಮಯವಿರುವುದರಿಂದ ಅವರ ಆದಾಯವನ್ನು ಹೆಚ್ಚಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಕಳೆದ 10 ವರ್ಷಗಳಲ್ಲಿ, ನಾವು ದೇಶಾದ್ಯಂತ 10 ಕೋಟಿ ಸಹೋದರಿಯರನ್ನು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕಿಸಿದ್ದೇವೆ. ಇದರಲ್ಲಿ ಹರಿಯಾಣದ ಲಕ್ಷಾಂತರ ಸಹೋದರಿಯರೂ ಸೇರಿದ್ದಾರೆ. ಈ ಸಹೋದರಿಯರ ಗುಂಪುಗಳಿಗೆ ಕೋಟ್ಯಂತರ ರೂಪಾಯಿಗಳ ಸಹಾಯವನ್ನು ನೀಡಲಾಗಿದೆ. ಸಾಧ್ಯವಾದಷ್ಟು ಸಹೋದರಿಯರನ್ನು 'ಲಖಪತಿ ದೀದಿ'ಗಳನ್ನಾಗಿ ಮಾಡುವುದು ನನ್ನ ಪ್ರಯತ್ನ. ಇಲ್ಲಿಯವರೆಗೆ, 1 ಕೋಟಿ ಸಹೋದರಿಯರು 'ಲಖಪತಿ ದೀದಿ'ಗಳಾಗಿದ್ದಾರೆ. ಕೆಲವು ದಿನಗಳ ಹಿಂದೆ, ನಾವು ಮಂಡಿಸಿದ ಬಜೆಟ್‌ನಲ್ಲಿ 3 ಕೋಟಿ ಸಹೋದರಿಯರನ್ನು 'ಲಖಪತಿ ದೀದಿ'ಗಳನ್ನಾಗಿ ಮಾಡುವ ಗುರಿ ಇದೆ. ನಾವು ನಮೋ ಡ್ರೋನ್ ದೀದಿ ಯೋಜನೆಯನ್ನು ಸಹ ಪ್ರಾರಂಭಿಸಿದ್ದೇವೆ. ಇದರ ಅಡಿಯಲ್ಲಿ, ಸಹೋದರಿಯರ ಗುಂಪುಗಳಿಗೆ ಡ್ರೋನ್‌ಗಳನ್ನು ನಿರ್ವಹಿಸಲು ತರಬೇತಿ ನೀಡಲಾಗುವುದು ಮತ್ತು ಅವರಿಗೆ ಡ್ರೋನ್‌ಗಳನ್ನು ಒದಗಿಸಲಾಗುವುದು. ಈ ಡ್ರೋನ್‌ಗಳನ್ನು ಕೃಷಿ ಚಟುವಟಿಕೆಗಳಲ್ಲಿ ಬಳಸಲಾಗುವುದು ಮತ್ತು ಇದು ಸಹೋದರಿಯರಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ.

ಸ್ನೇಹಿತರೇ,

ಹರಿಯಾಣವು ಅಗಾಧ ಅವಕಾಶಗಳ ರಾಜ್ಯ. ಹರಿಯಾಣದಲ್ಲಿ ಮೊದಲ ಬಾರಿಗೆ ಮತದಾರರಾಗಿರುವ 18-20-22 ವರ್ಷ ವಯಸ್ಸಿನವರಿಗೆ ನಾನು ವಿಶೇಷವಾಗಿ ಹೇಳುತ್ತೇನೆ, ನಿಮ್ಮ ಭವಿಷ್ಯವು ತುಂಬಾ ಉಜ್ವಲವಾಗಿರುತ್ತದೆ. ಡಬಲ್-ಎಂಜಿನ್ ಸರ್ಕಾರವು ನಿಮಗಾಗಿ 'ವಿಕ್ಷಿತ್ ಹರಿಯಾಣ'ವನ್ನು ಅಭಿವೃದ್ಧಿಪಡಿಸಲು ಬದ್ಧವಾಗಿದೆ. ತಂತ್ರಜ್ಞಾನದಿಂದ ಜವಳಿವರೆಗೆ ಮತ್ತು ಪ್ರವಾಸೋದ್ಯಮದಿಂದ ವ್ಯಾಪಾರದವರೆಗೆ ಪ್ರತಿಯೊಂದು ವಲಯದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಾವು ಶ್ರಮಿಸುತ್ತಿದ್ದೇವೆ. ಇಂದು, ಇಡೀ ಜಗತ್ತು ಭಾರತದಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿದೆ. ಮತ್ತು ಹರಿಯಾಣ ಹೂಡಿಕೆಗೆ ಅತ್ಯುತ್ತಮ ತಾಣವಾಗಿ ಹೊರಹೊಮ್ಮುತ್ತಿದೆ. ಹೂಡಿಕೆಯಲ್ಲಿ ಹೆಚ್ಚಳ ಎಂದರೆ ಹೊಸ ಉದ್ಯೋಗಾವಕಾಶಗಳಲ್ಲಿ ಹೆಚ್ಚಳ. ಆದ್ದರಿಂದ, ಡಬಲ್-ಎಂಜಿನ್ ಸರ್ಕಾರಕ್ಕೆ ನಿಮ್ಮ ಆಶೀರ್ವಾದವನ್ನು ನೀಡುವುದನ್ನು ಮುಂದುವರಿಸುವುದು ಅತ್ಯಗತ್ಯ. ಮತ್ತೊಮ್ಮೆ, ಏಮ್ಸ್ ಮತ್ತು ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗಾಗಿ ನಿಮಗೆ ಅಭಿನಂದನೆಗಳು! ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ಭಾರತ್ ಮಾತಾ ಕಿ - ಜೈ!

ತುಂಬಾ ಧನ್ಯವಾದಗಳು.

 

ಘೋಷಣೆ:  ಇದು ಪ್ರಧಾನಿಯವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ. 

 

*****


(रिलीज़ आईडी: 2176924) आगंतुक पटल : 15
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam