ಪ್ರಧಾನ ಮಂತ್ರಿಯವರ ಕಛೇರಿ
ಜೋಧಪುರದಲ್ಲಿ ರಾಜಸ್ಥಾನ ಹೈಕೋರ್ಟ್‌ನ ಅಮೃತ ಮಹೋತ್ಸವ(ಪ್ಲಾಟಿನಂ ಜುಬಿಲಿ) ಆಚರಣೆ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
Posted On:
25 AUG 2024 6:53PM by PIB Bengaluru
ರಾಜಸ್ಥಾನದ ರಾಜ್ಯಪಾಲ ಶ್ರೀ ಹರಿಭಾವು ಕಿಶನ್‌ರಾವ್ ಬಾಗ್ಡೆ ಜಿ, ರಾಜಸ್ಥಾನದ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭಜನ್‌ಲಾಲ್ ಶರ್ಮಾ, ನ್ಯಾಯಮೂರ್ತಿ ಶ್ರೀ ಸಂಜೀವ್ ಖನ್ನಾ ಜಿ, ಕೇಂದ್ರ ಕಾನೂನು ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಜಿ, ರಾಜಸ್ಥಾನ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಶ್ರೀ ಮಣೀಂದ್ರ ಮೋಹನ್ ಶ್ರೀವಾಸ್ತವ ಜಿ, ಇತರೆ ಎಲ್ಲ ಗೌರವಾನ್ವಿತ ನ್ಯಾಯಾಧೀಶರೆ, ಕಾನೂನು ರಂಗದ ಗಣ್ಯ ಸದಸ್ಯರೆ, ಇಲ್ಲಿ ಹಾಜರಿರುವ ಮಹಿಳೆಯರೆ ಮತ್ತು ಮಹನೀಯರೆ!
ಮೊದಲನೆಯದಾಗಿ, ನಾನು ನಿಮ್ಮೆಲ್ಲರಲ್ಲಿ ಕ್ಷಮೆ ಯಾಚಿಸುತ್ತೇನೆ. ನಾನು ಇಂದು ಇಲ್ಲಿಗೆ ತಲುಪಲು ಸುಮಾರು 10 ನಿಮಿಷ ತಡವಾಯಿತು. ನಾನು ಮಹಾರಾಷ್ಟ್ರದಿಂದ ಹೊರಟಿದ್ದೆ, ಆದರೆ ಹವಾಮಾನ ವೈಪರೀತ್ಯದಿಂದಾಗಿ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ನಾನು ನಿಮ್ಮೆಲ್ಲರಲ್ಲಿ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ.
ಸ್ನೇಹಿತರೆ,
ಇಂದು ರಾಜಸ್ಥಾನ ಹೈಕೋರ್ಟ್‌ನ ಅಮೃತ ಮಹೋತ್ಸವ(ಪ್ಲಾಟಿನಂ ಜುಬಿಲಿ) ಆಚರಣೆಯಲ್ಲಿ ನಿಮ್ಮೊಂದಿಗೆ ಇರಲು ನನಗೆ ಅವಕಾಶ ಸಿಕ್ಕಿದ್ದಕ್ಕೆ ಸಂತೋಷವಾಗಿದೆ. ನಮ್ಮ ಸಂವಿಧಾನವು 75 ವರ್ಷಗಳನ್ನು ಪೂರೈಸಲಿರುವ ಸಮಯದಲ್ಲಿ ರಾಜಸ್ಥಾನ ಹೈಕೋರ್ಟ್ 75 ವರ್ಷಗಳನ್ನು ಪೂರೈಸಿದೆ. ಆದ್ದರಿಂದ, ಇದು ಅನೇಕ ಮಹಾನ್ ವ್ಯಕ್ತಿಗಳ ನ್ಯಾಯಾಂಗ ಸಮಗ್ರತೆ ಮತ್ತು ಕೊಡುಗೆಗಳನ್ನು ಆಚರಿಸುವ ಒಂದು ಸಂದರ್ಭವಾಗಿದೆ. ಇದು ಸಂವಿಧಾನದ ಮೇಲಿನ ನಮ್ಮ ನಂಬಿಕೆಗೆ ಒಂದು ಉದಾಹರಣೆಯಾಗಿದೆ. ಈ ಸಂದರ್ಭದಲ್ಲಿ ನಾನು ರಾಜಸ್ಥಾನದ ಎಲ್ಲಾ ನ್ಯಾಯಮೂರ್ತಿಗಳು, ನ್ಯಾಯಾಧೀಶರು, ವಕೀಲರು ಮತ್ತು ಜನತೆಯನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ರಾಜಸ್ಥಾನ ಹೈಕೋರ್ಟ್‌ನ ಅಸ್ತಿತ್ವವು ನಮ್ಮ ದೇಶದ ಏಕತೆಯ ಇತಿಹಾಸದೊಂದಿಗೆ ಸಂಬಂಧ ಹೊಂದಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ 500ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಸಂಯೋಜಿಸಿ ದೇಶವನ್ನು ಒಂದೇ ದಾರದಲ್ಲಿ ಹೆಣೆದಾಗ, ರಾಜಸ್ಥಾನದ ಅನೇಕ ರಾಜಪ್ರಭುತ್ವದ ರಾಜ್ಯಗಳು ಸಹ ಅದರ ಭಾಗವಾಗಿದ್ದವು ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ಜೈಪುರ, ಉದಯಪುರ ಮತ್ತು ಕೋಟಾ ಸೇರಿದಂತೆ ವಿವಿಧ ಸ್ಥಳಗಳು ತಮ್ಮದೇ ಆದ ಹೈಕೋರ್ಟ್‌ಗಳನ್ನು ಹೊಂದಿದ್ದವು. ರಾಜಸ್ಥಾನ ಹೈಕೋರ್ಟ್ ಅವುಗಳ ಏಕೀಕರಣದೊಂದಿಗೆ ಅಸ್ತಿತ್ವಕ್ಕೆ ಬಂದಿತು. ಅಂದರೆ, ರಾಷ್ಟ್ರೀಯ ಏಕತೆಯು ನಮ್ಮ ನ್ಯಾಯಾಂಗ ವ್ಯವಸ್ಥೆಯ ಅಡಿಪಾಯವೂ ಆಗಿದೆ. ಈ ಅಡಿಪಾಯದ ಕಲ್ಲು ಬಲವಾದಷ್ಟೂ, ನಮ್ಮ ದೇಶ ಮತ್ತು ಅದರ ಸಂಸ್ಥೆಗಳು ಬಲವಾಗಿರುತ್ತವೆ.
ಸ್ನೇಹಿತರೆ,
ನ್ಯಾಯ ಯಾವಾಗಲೂ ಸರಳ ಮತ್ತು ಸ್ಪಷ್ಟವಾಗಿರುತ್ತದೆ ಎಂದು ನಾನು ನಂಬುತ್ತೇನೆ. ಆದರೆ ಕೆಲವೊಮ್ಮೆ, ಕಾರ್ಯವಿಧಾನಗಳು ಅದನ್ನು ಸಂಕೀರ್ಣಗೊಳಿಸುತ್ತವೆ. ನ್ಯಾಯವನ್ನು ಸಾಧ್ಯವಾದಷ್ಟು ಸರಳ ಮತ್ತು ಸ್ಪಷ್ಟಪಡಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಈ ದಿಕ್ಕಿನಲ್ಲಿ ರಾಷ್ಟ್ರವು ಅನೇಕ ಐತಿಹಾಸಿಕ ಮತ್ತು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರಿಂದ ನನಗೆ ತೃಪ್ತಿ ಇದೆ. ಸಂಪೂರ್ಣವಾಗಿ ಅಪ್ರಸ್ತುತವಾಗಿದ್ದ ನೂರಾರು ವಸಾಹತುಶಾಹಿ ಕಾನೂನುಗಳನ್ನು ನಾವು ರದ್ದುಗೊಳಿಸಿದ್ದೇವೆ. ಸ್ವಾತಂತ್ರ್ಯದ ಹಲವು ದಶಕಗಳ ನಂತರ, ದೇಶವು ಭಾರತೀಯ ದಂಡ ಸಂಹಿತೆಯ ಬದಲಿಗೆ ಭಾರತೀಯ ನ್ಯಾಯ ಸಂಹಿತೆ(ಭಾರತೀಯ ನ್ಯಾಯ ಸಂಹಿತೆ) ಅಳವಡಿಸಿಕೊಂಡಿದ್ದು, ಗುಲಾಮಗಿರಿಯ ಮನಸ್ಥಿತಿಯಿಂದ ನಮ್ಮನ್ನು ಮುಕ್ತಗೊಳಿಸಿದೆ. ಶಿಕ್ಷೆಯನ್ನು ನ್ಯಾಯದಿಂದ ಬದಲಾಯಿಸುವುದು ಭಾರತೀಯ ತತ್ವಶಾಸ್ತ್ರದ ಅಡಿಪಾಯವೂ ಆಗಿದೆ. ಭಾರತೀಯ ನ್ಯಾಯ ಸಂಹಿತೆ ಈ ಮಾನವ ಚಿಂತನೆಯನ್ನು ಮುನ್ನಡೆಸುತ್ತದೆ. ಭಾರತೀಯ ನ್ಯಾಯ ಸಂಹಿತೆ ನಮ್ಮ ಪ್ರಜಾಪ್ರಭುತ್ವವನ್ನು ವಸಾಹತುಶಾಹಿ ಮನಸ್ಥಿತಿಯಿಂದ ಮುಕ್ತಗೊಳಿಸುತ್ತದೆ. ನ್ಯಾಯ ಸಂಹಿತೆಯ ಈ ಮೂಲ ಚೈತನ್ಯವು ಸಾಧ್ಯವಾದಷ್ಟು ಪರಿಣಾಮಕಾರಿಯಾಗುವಂತೆ ನೋಡಿಕೊಳ್ಳುವುದು ಈಗ ನಮ್ಮ ಜವಾಬ್ದಾರಿಯಾಗಿದೆ.
ಸ್ನೇಹಿತರೆ,
ಕಳೆದ ದಶಕದಲ್ಲಿ, ನಮ್ಮ ದೇಶವು ವೇಗವಾಗಿ ಬದಲಾಗಿದೆ. ಕೇವಲ 10 ವರ್ಷಗಳ ಹಿಂದೆ, ನಾವು 10ನೇ ಸ್ಥಾನದಲ್ಲಿದ್ದೆವು, ಇಂದು ನಾವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ. ಇಂದು ರಾಷ್ಟ್ರದ ಕನಸುಗಳು ದೊಡ್ಡದಾಗಿವೆ, ನಮ್ಮ ಜನರ ಆಕಾಂಕ್ಷೆಗಳು ಮೇಲೇರಿವೆ. ಅದಕ್ಕಾಗಿಯೇ ನಾವು ನವ ಭಾರತದ ಅಗತ್ಯಗಳಿಗೆ ಅನುಗುಣವಾಗಿ ಹೊಸತನ ಕಂಡುಕೊಳ್ಳುವುದು ಮತ್ತು ನಮ್ಮ ವ್ಯವಸ್ಥೆಗಳನ್ನು ಆಧುನೀಕರಿಸುವುದು ಅತ್ಯಗತ್ಯ. ಎಲ್ಲರಿಗೂ ನ್ಯಾಯ ಖಚಿತಪಡಿಸಲು ಇದು ಅಷ್ಟೇ ಮುಖ್ಯವಾಗಿದೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನವು ಹೇಗೆ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಐಟಿ ಕ್ರಾಂತಿಯ ಮೂಲಕ ಸಾಧ್ಯವಾದ ರೂಪಾಂತರದ ದೊಡ್ಡ ಉದಾಹರಣೆ ಇ-ಕೋರ್ಟ್‌ಗಳ ಯೋಜನೆಯಾಗಿದೆ. ಇಂದು ದೇಶಾದ್ಯಂತ 18,000ಕ್ಕೂ ಹೆಚ್ಚು ನ್ಯಾಯಾಲಯಗಳನ್ನು ಗಣಕೀಕರಿಸಲಾಗಿದೆ. 26 ಕೋಟಿಗೂ ಹೆಚ್ಚು ಪ್ರಕರಣಗಳ ಮಾಹಿತಿಯನ್ನು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ ಮೂಲಕ ಕೇಂದ್ರೀಕೃತ ಆನ್‌ಲೈನ್ ವೇದಿಕೆಗೆ ಸಂಪರ್ಕಿಸಲಾಗಿ. ದೇಶದಲ್ಲಿ 3,000ಕ್ಕೂ ಹೆಚ್ಚು ನ್ಯಾಯಾಲಯ ಸಂಕೀರ್ಣಗಳು ಮತ್ತು 1,200ಕ್ಕೂ ಹೆಚ್ಚು ಜೈಲುಗಳು ಈಗ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂಪರ್ಕಗೊಂಡಿವೆ. ರಾಜಸ್ಥಾನವೂ ಈ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಇಲ್ಲಿ, ನೂರಾರು ನ್ಯಾಯಾಲಯಗಳನ್ನು ಗಣಕೀಕರಿಸಲಾಗಿದೆ. ಕಾಗದರಹಿತ ನ್ಯಾಯಾಲಯಗಳು, ಇ-ಫೈಲಿಂಗ್, ಎಲೆಕ್ಟ್ರಾನಿಕ್ ಸಮನ್ಸ್ ಸೇವೆ ಮತ್ತು ವರ್ಚುವಲ್ ವಿಚಾರಣೆಗಳು ಸಾಮಾನ್ಯ ಬದಲಾವಣೆಗಳಲ್ಲ. ಸಾಮಾನ್ಯ ನಾಗರಿಕನ ದೃಷ್ಟಿಕೋನದಿಂದ, ದಶಕಗಳಿಂದ ನ್ಯಾಯಾಲಯಗಳಿಗೆ ಬಂದಾಗ "ಚಕ್ಕರ್"(ಸುಳಿ) ಎಂಬ ಪದವು ಬಹುತೇಕ ಕಡ್ಡಾಯವಾಗಿತ್ತು. ನ್ಯಾಯಾಲಯದ "ಚಕ್ಕರ್", ಪ್ರಕರಣಗಳ "ಚಕ್ಕರ್", ಅಂದರೆ ನೀವು ಒಮ್ಮೆ ಸಿಲುಕಿಕೊಂಡರೆ, ನೀವು ಯಾವಾಗ ಹೊರಬರುತ್ತೀರಿ ಎಂದು ಯಾರಿಗೂ ತಿಳಿಯುತ್ತಿರಲಿಲ್ಲ! ಇಂದು, ದೇಶವು ಆ ಸಾಮಾನ್ಯ ನಾಗರಿಕನ ನೋವನ್ನು ಕೊನೆಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ, ದಶಕಗಳ ನಂತರ ಆ ಅಂತ್ಯವಿಲ್ಲದ "ಚಕ್ಕರ್" ಮುರಿಯಲು. ಇದು ನ್ಯಾಯದಲ್ಲಿ ಹೊಸ ಭರವಸೆ ಹುಟ್ಟುಹಾಕಿದೆ. ನಾವು ಈ ಭರವಸೆಯನ್ನು ಉಳಿಸಿಕೊಳ್ಳಬೇಕು ಮತ್ತು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಸುಧಾರಿಸುವುದನ್ನು ಮುಂದುವರಿಸಬೇಕು.
ಸ್ನೇಹಿತರೆ,
ಹಲವು ಕಾರ್ಯಕ್ರಮಗಳಲ್ಲಿ, ನಾನು ಶತಮಾನಗಳಷ್ಟು ಹಳೆಯದಾದ ನಮ್ಮ ಮಧ್ಯಸ್ಥಿಕೆ ವ್ಯವಸ್ಥೆಯನ್ನು ಆಗಾಗ್ಗೆ ಉಲ್ಲೇಖಿಸಿದ್ದೇನೆ. ಇಂದು, ಕೈಗೆಟುಕುವ ಮತ್ತು ತ್ವರಿತ ನಿರ್ಧಾರಗಳಿಗಾಗಿ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳು ಬಹಳ ಮುಖ್ಯವಾಗುತ್ತಿವೆ. ಪರ್ಯಾಯ ವಿವಾದ ಕಾರ್ಯವಿಧಾನದ ಈ ವ್ಯವಸ್ಥೆಯು ಜೀವನ ಸುಲಭತೆಯನ್ನು ಮಾತ್ರವಲ್ಲದೆ, ನ್ಯಾಯದ ಸುಲಭತೆಯನ್ನು ಸಹ ಉತ್ತೇಜಿಸುತ್ತದೆ. ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಮತ್ತು ಹೊಸ ನಿಬಂಧನೆಗಳನ್ನು ಸೇರಿಸುವ ಮೂಲಕ, ಸರ್ಕಾರವು ಈ ದಿಕ್ಕಿನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ನ್ಯಾಯಾಂಗದ ಸಹಕಾರದೊಂದಿಗೆ, ಈ ವ್ಯವಸ್ಥೆಗಳು ಇನ್ನಷ್ಟು ಬಲಗೊಳ್ಳುತ್ತವೆ.
ನಮ್ಮ ನ್ಯಾಯಾಂಗವು ರಾಷ್ಟ್ರೀಯ ವಿಷಯಗಳ ಬಗ್ಗೆ ಜಾಗರೂಕತೆ ಮತ್ತು ಸಕ್ರಿಯವಾಗಿರುವ ನೈತಿಕ ಜವಾಬ್ದಾರಿಯನ್ನು ನಿರಂತರವಾಗಿ ನಿರ್ವಹಿಸಿದೆ. ಸಾಂವಿಧಾನಿಕ ಏಕೀಕರಣವನ್ನು ಖಚಿತಪಡಿಸಿದ ಕಾಶ್ಮೀರದಿಂದ 370ನೇ ವಿಧಿ ತೆಗೆದುಹಾಕಿರುವುದು ಒಂದು ಉದಾಹರಣೆಯಾಗಿ ನಮ್ಮ ಮುಂದೆ ಇದೆ. ಸಿಎಎಯಂತಹ ಮಾನವೀಯ ಕಾನೂನು ಕೂಡ ನಮ್ಮ ಮುಂದೆ ಒಂದು ಉದಾಹರಣೆಯಾಗಿದೆ. ಅಂತಹ ವಿಷಯಗಳಲ್ಲಿ, ರಾಷ್ಟ್ರದ ಹಿತದೃಷ್ಟಿಯಿಂದ ಸ್ವಾಭಾವಿಕ ಅಥವಾ ಸಹಜ ನ್ಯಾಯವು ಏನು ಹೇಳುತ್ತದೆ ಎಂಬುದನ್ನು ನಮ್ಮ ನ್ಯಾಯಾಲಯಗಳ ತೀರ್ಪುಗಳು ಯಾವಾಗಲೂ ಸ್ಪಷ್ಟಪಡಿಸಿವೆ. ಹೈಕೋರ್ಟ್‌ಗಳಿಂದ ಸುಪ್ರೀಂ ಕೋರ್ಟ್‌ವರೆಗೆ, ನ್ಯಾಯಾಂಗವು ಹಲವಾರು ಸಂದರ್ಭಗಳಲ್ಲಿ, ರಾಷ್ಟ್ರ ಮೊದಲು ಎಂಬ ನಿರ್ಣಯವನ್ನು ಬಲಪಡಿಸಿದೆ. ಈ ಆಗಸ್ಟ್ 15ರಂದು ಕೆಂಪುಕೋಟೆಯಿಂದ ನಾನು ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಿದ್ದೇನೆ ಎಂಬುದು ನಿಮಗೂ ನೆನಪಿರಬಹುದು. ಬಹುಶಃ, ಒಂದು ಸರ್ಕಾರ ಈ ವಿಷಯದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದೆ, ಆದರೆ ನಮ್ಮ ನ್ಯಾಯಾಂಗವು ದಶಕಗಳಿಂದ ಅದನ್ನು ಪ್ರತಿಪಾದಿಸುತ್ತಿದೆ. ರಾಷ್ಟ್ರೀಯ ಏಕತೆಯ ವಿಷಯಗಳ ಬಗ್ಗೆ ನ್ಯಾಯಾಂಗದ ಸ್ಪಷ್ಟ ನಿಲುವು ನಾಗರಿಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಸ್ನೇಹಿತರೆ,
21ನೇ ಶತಮಾನದ ಭಾರತವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುವ ಪದವೆಂದರೆ ಏಕೀಕರಣ(ಸಂಯೋಜನೆ). ಸಾರಿಗೆ ವಿಧಾನಗಳ ಏಕೀಕರಣ, ದತ್ತಾಂಶದ ಏಕೀಕರಣ, ಆರೋಗ್ಯ ವ್ಯವಸ್ಥೆಯ ಏಕೀಕರಣ! ದೇಶದಲ್ಲಿ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಐಟಿ ವ್ಯವಸ್ಥೆಗಳನ್ನು ಸಂಯೋಜಿಸಬೇಕು ಎಂಬುದು ನಮ್ಮ ದೃಷ್ಟಿ. ಅದು ಪೊಲೀಸ್, ವಿಧಿವಿಜ್ಞಾನ, ಪ್ರಕ್ರಿಯೆ ಸೇವಾ ಕಾರ್ಯವಿಧಾನಗಳು ಮತ್ತು ಸುಪ್ರೀಂ ಕೋರ್ಟ್‌ನಿಂದ ಜಿಲ್ಲಾ ನ್ಯಾಯಾಲಯಗಳವರೆಗೆ ಸಂಪೂರ್ಣ ನ್ಯಾಯಾಂಗ ರಚನೆಯಾಗಿರಲಿ, ಪ್ರತಿಯೊಂದು ಇಲಾಖೆಯು ಸಂಪರ್ಕಿತ ವ್ಯವಸ್ಥೆಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕು. ಇಂದು, ಈ ಏಕೀಕರಣ ಯೋಜನೆಯನ್ನು ರಾಜಸ್ಥಾನದ ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯ ಯಶಸ್ಸಿಗೆ ನಾನು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೆ,
ಇಂದಿನ ಭಾರತದಲ್ಲಿ ಬಡವರನ್ನು ಸಬಲೀಕರಣಗೊಳಿಸಲು ತಂತ್ರಜ್ಞಾನದ ಬಳಕೆಯು ಪ್ರಯತ್ನಿಸಿದ ಮತ್ತು ಪರೀಕ್ಷಿಸಲ್ಪಟ್ಟ ಸೂತ್ರವಾಗಿದೆ. ಕಳೆದ 10 ವರ್ಷಗಳಲ್ಲಿ, ಅನೇಕ ಜಾಗತಿಕ ಸಂಸ್ಥೆಗಳು ಮತ್ತು ಸಂಘಟನೆಗಳು ಇದಕ್ಕಾಗಿ ಭಾರತವನ್ನು ಹೊಗಳಿವೆ. ಡಿಬಿಟಿ (ನೇರ ನಗದು ವರ್ಗಾವಣೆ) ಯಿಂದ ಯುಪಿಐವರೆಗೆ, ಹಲವಾರು ಕ್ಷೇತ್ರಗಳಲ್ಲಿ ಭಾರತದ ಕೆಲಸವು ಜಾಗತಿಕ ಮಾದರಿಯಾಗಿ ಹೊರಹೊಮ್ಮಿದೆ. ನಾವು ಈಗ ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಇದೇ ಅನುಭವವನ್ನು ಅಳವಡಿಸಿಕೊಳ್ಳಬೇಕು. ಈ ದಿಕ್ಕಿನಲ್ಲಿ, ತಂತ್ರಜ್ಞಾನದ ಮೂಲಕ ಮತ್ತು ಸ್ವಂತ ಭಾಷೆಯಲ್ಲಿ ಕಾನೂನು ದಾಖಲೆಗಳನ್ನು ಪ್ರವೇಶಿಸುವುದು ಬಡವರನ್ನು ಸಬಲೀಕರಣಗೊಳಿಸಲು ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗುತ್ತದೆ. ಸರ್ಕಾರವು ಈ ಉದ್ದೇಶಕ್ಕಾಗಿ ದಿಶಾ ಎಂಬ ನವೀನ ಪರಿಹಾರವನ್ನು ಸಹ ಉತ್ತೇಜಿಸುತ್ತಿದೆ. ನಮ್ಮ ಕಾನೂನು ವಿದ್ಯಾರ್ಥಿಗಳು ಮತ್ತು ಇತರೆ ಕಾನೂನು ತಜ್ಞರು ಈ ಅಭಿಯಾನದಲ್ಲಿ ನಮಗೆ ಬೆಂಬಲ ನೀಡಬಹುದು. ಇದಲ್ಲದೆ, ದೇಶದ ಜನರು ಸ್ಥಳೀಯ ಭಾಷೆಗಳಲ್ಲಿ ಕಾನೂನು ದಾಖಲೆಗಳು ಮತ್ತು ತೀರ್ಪುಗಳನ್ನು ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಈಗಾಗಲೇ ಇದನ್ನು ಪ್ರಾರಂಭಿಸಿದೆ. ಅದರ ಮಾರ್ಗದರ್ಶನದಲ್ಲಿ, ನ್ಯಾಯಾಂಗ ದಾಖಲೆಗಳನ್ನು 18 ಭಾಷೆಗಳಿಗೆ ಅನುವಾದಿಸಬಹುದಾದ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಅಂತಹ ಪ್ರಯತ್ನಗಳಿಗಾಗಿ ನಾನು ನಮ್ಮ ನ್ಯಾಯಾಂಗ ವ್ಯವಸ್ಥೆಯನ್ನು ಶ್ಲಾಘಿಸುತ್ತೇನೆ.
ಸ್ನೇಹಿತರೆ,
ನಮ್ಮ ನ್ಯಾಯಾಲಯಗಳು ನ್ಯಾಯದ ಸುಲಭತೆಗೆ ಅತ್ಯುನ್ನತ ಆದ್ಯತೆ ನೀಡುವುದನ್ನು ಮುಂದುವರಿಸುತ್ತವೆ ಎಂಬ ವಿಶ್ವಾಸ ನನಗಿದೆ. ನಾವು ನಿರ್ಮಿಸಲು ಬಯಸುವ 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ದಲ್ಲಿ ಎಲ್ಲರಿಗೂ ಸರಳ, ಪ್ರವೇಶಿಸಬಹುದಾದ ಮತ್ತು ಅನುಕೂಲಕರ ನ್ಯಾಯ ಖಾತರಿಪಡಿಸುವುದು ಅತ್ಯಗತ್ಯ. ಈ ಆಶಯದೊಂದಿಗೆ, ಮತ್ತೊಮ್ಮೆ, ರಾಜಸ್ಥಾನ ಹೈಕೋರ್ಟ್‌ನ ಅಮೃತಮಹೋತ್ಸವದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.
ತುಂಬು ಧನ್ಯವಾದಗಳು!
*****
(Release ID: 2176747)
Visitor Counter : 12
Read this release in:
English
,
Urdu
,
Marathi
,
हिन्दी
,
Hindi_MP
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam