ಹಣಕಾಸು ಸಚಿವಾಲಯ
azadi ka amrit mahotsav

ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿಯಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ₹10,907 ಕೋಟಿ ಮೌಲ್ಯದ 5 ಲಕ್ಷಕ್ಕೂ ಹೆಚ್ಚು ಸಾಲ ಅರ್ಜಿಗಳನ್ನು ಮಂಜೂರು ಮಾಡಿದೆ 


ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಸಹ-ಅರ್ಜಿದಾರರನ್ನು ಸೇರಿಸುವುದು, ವಿದ್ಯುತ್ ಸಾಮರ್ಥ್ಯ ಆಧಾರಿತ ಮಿತಿಗಳನ್ನು ತೆಗೆದುಹಾಕುವಂತಹ ಹಲವಾರು ಸುಧಾರಣೆಗಳ ಪರಿಚಯ

Posted On: 07 OCT 2025 4:22PM by PIB Bengaluru

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯು (PMSGMBY) ಸ್ವಚ್ಛ ಮತ್ತು ಕೈಗೆಟುಕುವ ಸೌರ ಶಕ್ತಿಯೊಂದಿಗೆ ಮನೆಗಳನ್ನು ಸಬಲೀಕರಣಗೊಳಿಸುವಲ್ಲಿ ಒಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಸೆಪ್ಟೆಂಬರ್ 2025ರ ಅಂತ್ಯದ ವೇಳೆಗೆ, ಸಾರ್ವಜನಿಕ ವಲಯದ ಬ್ಯಾಂಕುಗಳು (PSBಗಳು) 5.79 ಲಕ್ಷಕ್ಕೂ ಹೆಚ್ಚು ಸಾಲದ ಅರ್ಜಿಗಳನ್ನು ಮಂಜೂರು ಮಾಡಿದ್ದು, ಇದರ ಒಟ್ಟು ಮೊತ್ತ ₹10,907 ಕೋಟಿಗಳಾಗಿವೆ. ಈ ಮೂಲಕ, ಮನೆ ಚಾವಣಿ (ರೂಫ್ ಟಾಪ್) ಸೌರ ವ್ಯವಸ್ಥೆಗಳನ್ನು ಅಳವಡಿಸಲು ಫಲಾನುಭವಿಗಳಿಗೆ ನೀಡುವ ಹಣಕಾಸಿನ ನೆರವನ್ನು ಇನ್ನಷ್ಟು ಬಲಪಡಿಸಲಾಗಿದೆ.

ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ (PMSGMBY) ಅನುಷ್ಠಾನವನ್ನು ಸಕ್ರಿಯವಾಗಿ ಬೆಂಬಲಿಸಲಾಗುತ್ತಿದೆ. ಇದಕ್ಕಾಗಿ, ಸಾಲ ವಿತರಣಾ ಪ್ರಕ್ರಿಯೆಯನ್ನು ಸುಗಮಗೊಳಿಸುವುದು, ಸಾರ್ವಜನಿಕ ವಲಯದ ಬ್ಯಾಂಕುಗಳ (PSB) ಮೂಲಕ ಭದ್ರತಾ ರಹಿತ (collateral-free) ಕೈಗೆಟುಕುವ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ಒದಗಿಸುವುದು ಮತ್ತು ಸರಳೀಕೃತ ಹಣಕಾಸು ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಸಾಲದ ಅರ್ಜಿಗಳನ್ನು ಜನ್ ಸಮರ್ಥ್ ಪೋರ್ಟಲ್ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ, ಇದು ಪಿಎಂ ಸೂರ್ಯ ಘರ್  ಮುಫ್ತ್ ಬಿಜ್ಲಿ ಯೋಜನೆಯ ರಾಷ್ಟ್ರೀಯ ಪೋರ್ಟಲ್ ನೊಂದಿಗೆ (pmsuryaghar.gov.in) ಸಂಯೋಜಿಸಲ್ಪಟ್ಟಿದೆ. ಇದು ಫಲಾನುಭವಿಗಳಿಗೆ ಮೊದಲಿನಿಂದ ಕೊನೆಯವರೆಗೂ ಸುಗಮವಾದ ಡಿಜಿಟಲ್ ಅರ್ಜಿ ಪ್ರಕ್ರಿಯೆ, ಉತ್ತಮ ಬಳಕೆದಾರ ಅನುಭವ ಮತ್ತು ದತ್ತಾಂಶ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲು ಖಚಿತಪಡಿಸುತ್ತದೆ.

ಈ ಮಾದರಿ ಸಾಲ ಯೋಜನೆಯು ಪ್ರಮುಖ ಪ್ರಯೋಜನಗಳನ್ನು ನೀಡುತ್ತದೆ, ಅವುಗಳೆಂದರೆ: ಸ್ಪರ್ಧಾತ್ಮಕ ಬಡ್ಡಿ ದರದಲ್ಲಿ ಭದ್ರತಾ ರಹಿತವಾಗಿ ₹2 ಲಕ್ಷದವರೆಗೆ ಸಾಲ, ವಿದ್ಯುತ್ ವೆಚ್ಚದ ಉಳಿತಾಯಕ್ಕೆ ಅನುಗುಣವಾಗಿ ದೀರ್ಘಾವಧಿಯ ಮರುಪಾವತಿ, ಸಾಲ ವಿತರಣೆಯಾದ ದಿನದಿಂದ 6 ತಿಂಗಳ ಮರುಪಾವತಿ ಮುಂದೂಡಿಕೆ ಅವಧಿ, ಅರ್ಜಿದಾರರಿಂದ ಕಡಿಮೆ ಮಾರ್ಜಿನ್ ಹಣದ ಕೊಡುಗೆ ಮತ್ತು ಸ್ವಯಂ ಘೋಷಣೆ ಆಧಾರಿತ ಡಿಜಿಟಲ್ ಮಂಜೂರಾತಿ ಪ್ರಕ್ರಿಯೆ.

ಸಾರ್ವಜನಿಕ ವಲಯದ ಬ್ಯಾಂಕುಗಳ ಸಕ್ರಿಯ ಭಾಗವಹಿಸುವಿಕೆಯೊಂದಿಗೆ, ಸಾಲದ ಲಭ್ಯತೆಯನ್ನು ಸುಲಭಗೊಳಿಸಲು ಮತ್ತು ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಹಲವಾರು ಸುಧಾರಣೆಗಳನ್ನು ಪರಿಚಯಿಸಲಾಗಿದೆ. ಬಳಕೆದಾರರಿಂದ ಬಂದ ಪ್ರತಿಕ್ರಿಯೆಯ ಆಧಾರದ ಮೇಲೆ, ಅರ್ಹತೆಯ ವ್ಯಾಪ್ತಿಯನ್ನು ವಿಸ್ತರಿಸಲು ಸಹ-ಅರ್ಜಿದಾರರನ್ನು ಸೇರಿಸುವುದು, ವಿದ್ಯುತ್ ಸಾಮರ್ಥ್ಯ ಆಧಾರಿತ ಮಿತಿಗಳನ್ನು ತೆಗೆದುಹಾಕುವುದು ಮತ್ತು ಸರಳೀಕೃತ ದಾಖಲಾತಿಗಳ ಅವಶ್ಯಕತೆಯಂತಹ ಗಮನಾರ್ಹ ಸುಧಾರಣೆಗಳನ್ನು ಈ ಸಾಲ ಯೋಜನೆಯಲ್ಲಿ ಅಳವಡಿಸಲಾಗಿದೆ.

ಹಣಕಾಸು ಸೇವೆಗಳ ಇಲಾಖೆಯು, ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಸಮನ್ವಯದೊಂದಿಗೆ, ಈ ಯೋಜನೆಯಡಿಯಲ್ಲಿನ ಸಾಲಗಳ ಪ್ರಗತಿಯನ್ನು ಸಕ್ರಿಯವಾಗಿ ಪರಿಶೀಲಿಸುತ್ತದೆ. ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಗಳು (SLBC) ಮತ್ತು ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಗಳ (LDM) ಸಹಯೋಗದೊಂದಿಗೆ ಅನುಷ್ಠಾನವನ್ನು ಬಲಪಡಿಸಲಾಗುತ್ತಿದ್ದು, ಈ ಮೂಲಕ ಯೋಜನೆಯನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು, ಉತ್ತಮ ಪ್ರಚಾರ ನೀಡಲು ಮತ್ತು ವ್ಯಾಪಕವಾಗಿ ತಲುಪಿಸಲು ಚಾಲನೆ ನೀಡಲಾಗುತ್ತಿದೆ.

 

*****
 


(Release ID: 2175869) Visitor Counter : 6