ಪ್ರಧಾನ ಮಂತ್ರಿಯವರ ಕಛೇರಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು
ರಾಷ್ಟ್ರಕ್ಕೆ ಆರ್.ಎಸ್.ಎಸ್ ಕೊಡುಗೆಯನ್ನು ಒತ್ತಿ ಹೇಳಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಪ್ರಧಾನಮಂತ್ರಿ ಬಿಡುಗಡೆ ಮಾಡಿದರು
ಒಂದು ಶತಮಾನದ ಹಿಂದೆ ಆರ್.ಎಸ್.ಎಸ್ ಸ್ಥಾಪನೆಯು ಪ್ರತಿ ಯುಗದ ಸವಾಲುಗಳನ್ನು ಎದುರಿಸಲು ಹೊರಹೊಮ್ಮಿದ ರಾಷ್ಟ್ರೀಯ ಪ್ರಜ್ಞೆಯ ಶಾಶ್ವತ ಚೈತನ್ಯವನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ
ಪರಮಪೂಜ್ಯ ಡಾ. ಹೆಡ್ಗೆವಾರ್ ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ: ಪ್ರಧಾನಮಂತ್ರಿ
ಆರ್.ಎಸ್.ಎಸ್ ಸ್ವಯಂಸೇವಕರು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಮತ್ತು ಸಮಾಜವನ್ನು ಸಬಲೀಕರಣಗೊಳಿಸಲು ಅವಿಶ್ರಾಂತವಾಗಿ ಶ್ರಮಿಸಿದ್ದಾರೆ: ಪ್ರಧಾನಮಂತ್ರಿ
ಇಂದು ಬಿಡುಗಡೆಯಾದ ಸ್ಮರಣಾರ್ಥ ಅಂಚೆಚೀಟಿಯು 1963ರ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಹೆಮ್ಮೆಯಿಂದ ಪಾಲ್ಗೊಂಡ ಆರ್.ಎಸ್.ಎಸ್ ಸ್ವಯಂಸೇವಕರಿಗೆ ಗೌರವವಾಗಿದೆ: ಪ್ರಧಾನಮಂತ್ರಿ
ಆರಂಭದಿಂದಲೂ, ಆರ್.ಎಸ್.ಎಸ್ ರಾಷ್ಟ್ರ ನಿರ್ಮಾಣದ ಮೇಲೆ ಕೇಂದ್ರೀಕರಿಸಿದೆ: ಪ್ರಧಾನಮಂತ್ರಿ
ಆರ್.ಎಸ್.ಎಸ್ ನ ಶಾಖೆಯು ಸ್ಫೂರ್ತಿಯ ನೆಲವಾಗಿದೆ, ಅಲ್ಲಿ 'ನಾನು' ಇಂದ 'ನಾವು' ಗೆ ಪ್ರಯಾಣ ಪ್ರಾರಂಭವಾಗುತ್ತದೆ: ಪ್ರಧಾನಮಂತ್ರಿ
ಒಂದು ಶತಮಾನದ ಆರ್.ಎಸ್.ಎಸ್ ಕಾರ್ಯದ ಅಡಿಪಾಯವು ರಾಷ್ಟ್ರ ನಿರ್ಮಾಣದ ಗುರಿ, ವೈಯಕ್ತಿಕ ಅಭಿವೃದ್ಧಿಯ ಸ್ಪಷ್ಟ ಮಾರ್ಗ ಮತ್ತು ಶಾಖೆಯ ಉತ್ಸಾಹಭರಿತ ಅಭ್ಯಾಸವನ್ನು ಆಧರಿಸಿದೆ: ಪ್ರಧಾನಮಂತ್ರಿ
'ರಾಷ್ಟ್ರ ಮೊದಲು' ಎಂಬ ಒಂದೇ ತತ್ವ ಮತ್ತು 'ಏಕ್ ಭಾರತ್, ಶ್ರೇಷ್ಠ ಭಾರತ' ಎಂಬ ಒಂದೇ ಗುರಿಯಿಂದ ಮಾರ್ಗದರ್ಶಿಸಲ್ಪಟ್ಟ ಆರ್.ಎಸ್.ಎಸ್ ಅಸಂಖ್ಯಾತ ತ್ಯಾಗಗಳನ್ನು ಮಾಡಿದೆ: ಪ್ರಧಾನಮಂತ್ರಿ
ಸಂಘದ ಸ್ವಯಂಸೇವಕರು ಸಾಂವಿಧಾನಿಕ ಮೌಲ್ಯಗಳಲ್ಲಿನ ನಂಬಿಕೆಯಿಂದ ಮಾರ್ಗದರ್ಶಿಸಲ್ಪಟ್ಟು ಸಮಾಜಕ್ಕೆ ದೃಢ ಮತ್ತು ಬದ್ಧರಾಗಿರುತ್ತಾರೆ: ಪ್ರಧಾನಮಂತ್ರಿ
ಸಂಘವು ದೇಶಭಕ್ತಿ ಮತ್ತು ಸೇವೆಯ ಸಂಕೇತವಾಗಿದೆ: ಪ್ರಧಾನಮಂತ್ರಿ
ಇತರರ ದುಃಖವನ್ನು ನಿವಾರಿಸಲು ವೈಯಕ್ತಿಕ ಕಷ್ಟಗಳನ್ನು ಸಹಿಸಿಕೊಳ್ಳುವುದು ಪ್ರತಿಯೊಬ್ಬ ಸ್ವಯಂಸೇವಕರ ವಿಶಿಷ್ಟ ಲಕ್ಷಣವಾಗಿದೆ: ಪ್ರಧಾನಮಂತ್ರಿ
ಸಂಘವು ಸಮಾಜದ ಎಲ್ಲಾ ವರ್ಗಗಳ ಜನರಲ್ಲಿ ಸ್ವಾಭಿಮಾನ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸಿದೆ: ಪ್ರಧಾನಮಂತ್ರಿ
ಪಂಚ ಪರಿವರ್ತನವು ಪ್ರತಿಯೊಬ್ಬ ಸ್ವಯಂಸೇವಕರನ್ನು ರಾಷ್ಟ್ರದ ಸವಾಲುಗಳನ್ನು ಎದುರಿಸಲು ಮತ್ತು ಜಯಿಸಲು ಪ್ರೇರೇಪಿಸುತ್ತದೆ: ಪ್ರಧಾನಮಂತ್ರಿ
Posted On:
01 OCT 2025 1:28PM by PIB Bengaluru
ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೋದಿ ಅವರು, ಎಲ್ಲಾ ನಾಗರಿಕರಿಗೆ ನವರಾತ್ರಿ ಶುಭಾಶಯಗಳನ್ನು ತಿಳಿಸಿದರು, ಇಂದು ಮಹಾ ನವಮಿ ಮತ್ತು ಸಿದ್ಧಿದಾತ್ರಿ ದೇವಿಯ ದಿನವಾಗಿದೆ ಎಂದು ಹೇಳಿದರು. ನಾಳಿನ ವಿಜಯದಶಮಿಯು ಭವ್ಯ ಹಬ್ಬವಾಗಿದ್ದು, ಇದು ಭಾರತೀಯ ಸಂಸ್ಕೃತಿಯ ಅನ್ಯಾಯದ ವಿರುದ್ಧ ನ್ಯಾಯದ ವಿಜಯ, ಸುಳ್ಳಿನ ವಿರುದ್ದ ಸತ್ಯದ ವಿಜಯ ಮತ್ತು ಕತ್ತಲೆಯ ವಿರುದ್ಧ ಬೆಳಕಿನ ವಿಜಯವನ್ನು ಸಂಕೇತಿಸುತ್ತದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನೂರು ವರ್ಷಗಳ ಹಿಂದೆ ಇಂತಹ ಪವಿತ್ರ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದು, ಇದು ಕಾಕತಾಳೀಯವಲ್ಲ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಸಾವಿರಾರು ವರ್ಷಗಳ ಹಿಂದಿನ ಪ್ರಾಚೀನ ಪರಂಪರೆಯ ಪುನರುಜ್ಜೀವನ ಇದಾಗಿದ್ದು, ಇದರಲ್ಲಿ ರಾಷ್ಟ್ರೀಯ ಪ್ರಜ್ಞೆಯು ಪ್ರತಿ ಯುಗದ ಸವಾಲುಗಳನ್ನು ಎದುರಿಸಲು ಹೊಸ ರೂಪಗಳಲ್ಲಿ ಪ್ರಕಟವಾಗುತ್ತದೆ ಎಂದು ಅವರು ಹೇಳಿದರು. ಈ ಯುಗದಲ್ಲಿ, ಸಂಘವು ಆ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸಾಕಾರವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಶತಮಾನೋತ್ಸವ ವರ್ಷವನ್ನು ವೀಕ್ಷಿಸುವುದು ಪ್ರಸ್ತುತ ಪೀಳಿಗೆಯ ಸ್ವಯಂಸೇವಕರಿಗೆ ದೊರೆತ ಸೌಭಾಗ್ಯ ಎಂದು ಬಣ್ಣಿಸಿದ ಶ್ರೀ ಮೋದಿ, ದೇಶ ಸೇವೆಗೆ ಸಮರ್ಪಿತರಾಗಿರುವ ಅಸಂಖ್ಯಾತ ಸ್ವಯಂಸೇವಕರಿಗೆ ಶುಭ ಹಾರೈಸಿದರು. ಆರ್ ಎಸ್ ಎಸ್ ಸಂಸ್ಥಾಪಕ ಮತ್ತು ಪರಮಪೂಜ್ಯ ಡಾ. ಹೆಡ್ಗೆವಾರ್ ಅವರಿಗೆ ಪ್ರಧಾನಮಂತ್ರಿ ಗೌರವ ಸಲ್ಲಿಸಿದರು. ಆರ್.ಎಸ್.ಎಸ್ ನ 100 ವರ್ಷಗಳ ಅದ್ಭುತ ಪ್ರಯಾಣದ ಸ್ಮರಣಾರ್ಥ ಭಾರತ ಸರ್ಕಾರ ವಿಶೇಷ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದೆ ಎಂದು ಅವರು ಘೋಷಿಸಿದರು. ₹100 ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನ ಮತ್ತು ಇನ್ನೊಂದು ಬದಿಯಲ್ಲಿ ಸಿಂಹದೊಂದಿಗೆ ವರದ ಮುದ್ರೆಯಲ್ಲಿರುವ ಭಾರತ ಮಾತೆಗೆ ಸ್ವಯಂಸೇವಕರು ನಮಸ್ಕರಿಸುತ್ತಿರುವ ಭವ್ಯ ಚಿತ್ರವಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತೀಯ ಕರೆನ್ಸಿಯಲ್ಲಿ ಭಾರತ ಮಾತೆಯ ಚಿತ್ರ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಶ್ರೀ ಮೋದಿ ಹೇಳಿದರು. ನಾಣ್ಯವು ಆರ್.ಎಸ್.ಎಸ್ ನ ಮಾರ್ಗದರ್ಶಿ ಧ್ಯೇಯವಾಕ್ಯವಾದ "ರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ, ಇದಂ ನ ಮಮ" ಅನ್ನು ಸಹ ಹೊಂದಿದೆ ಎಂದು ಅವರು ಹೇಳಿದರು.
ಇಂದು ಬಿಡುಗಡೆಯಾದ ಸ್ಮರಣಾರ್ಥ ಅಂಚೆ ಚೀಟಿಯ ಮಹತ್ವ ಮತ್ತು ಅದರ ಆಳವಾದ ಐತಿಹಾಸಿಕ ಪ್ರಸ್ತುತತೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, 1963ರ ಜನವರಿ 26 ರಂದು ನಡೆದ ಗಣರಾಜ್ಯೋತ್ಸವ ಪಥಸಂಚಲನದ ಮಹತ್ವವನ್ನು ನೆನಪಿಸಿಕೊಂಡರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಹೆಮ್ಮೆಯಿಂದ ಪಥಸಂಚಲನದಲ್ಲಿ ಭಾಗವಹಿಸಿ, ದೇಶಭಕ್ತಿಯ ರಾಗಗಳಿಗೆ ಲಯಬದ್ಧವಾಗಿ ನಡೆದರು ಎಂದು ಹೇಳಿದರು. ಈ ಅಂಚೆಚೀಟಿ ಆ ಐತಿಹಾಸಿಕ ಕ್ಷಣದ ಸ್ಮರಣೆಯನ್ನು ಸೆರೆಹಿಡಿಯುತ್ತದೆ ಎಂದು ಅವರು ಹೇಳಿದರು.
ಈ ಸ್ಮರಣಾರ್ಥ ನಾಣ್ಯಗಳು ಮತ್ತು ಅಂಚೆಚೀಟಿಗಳ ಬಿಡುಗಡೆಗಾಗಿ ಭಾರತದ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ ಶ್ರೀ ಮೋದಿ, "ಈ ಸ್ಮರಣಾರ್ಥ ಅಂಚೆಚೀಟಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಮತ್ತು ಸಮಾಜವನ್ನು ಸಬಲೀಕರಣಗೊಳಿಸಲು ನಿರಂತರವಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರ ಅಚಲ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.
ಮಹಾನ್ ನದಿಗಳು ತಮ್ಮ ತಟಗಳಲ್ಲಿ ಮಾನವ ನಾಗರಿಕತೆಗಳನ್ನು ಪೋಷಿಸುವಂತೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಸಂಖ್ಯಾತ ಜೀವಗಳನ್ನು ಪೋಷಿಸಿದೆ ಮತ್ತು ಶ್ರೀಮಂತಗೊಳಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭೂಮಿ, ಹಳ್ಳಿಗಳು ಮತ್ತು ಅದು ಹರಿಯುವ ಪ್ರದೇಶಗಳನ್ನು ಪೋಷಿಸುವ ನದಿ ಮತ್ತು ಭಾರತೀಯ ಸಮಾಜದ ಪ್ರತಿಯೊಂದು ವರ್ಗವನ್ನು ಮತ್ತು ದೇಶದ ಪ್ರತಿಯೊಂದು ಪ್ರದೇಶವನ್ನು ತಲುಪಿರುವ ಸಂಘದ ನಡುವಿನ ಹೋಲಿಕೆಯನ್ನು ವಿವರಿಸುತ್ತಾ, ಇದು ನಿರಂತರ ಸಮರ್ಪಣೆ ಮತ್ತು ಪ್ರಬಲ ರಾಷ್ಟ್ರೀಯ ಸೆಳೆತದ ಫಲಿತಾಂಶವಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ವಿವಿಧ ಪ್ರದೇಶಗಳನ್ನು ಪೋಷಿಸಲು ಹಲವು ತೊರೆಗಳಾಗಿ ಕವಲೊಡೆಯುವ ನದಿಗೆ ಹೋಲಿಸಿದ ಪ್ರಧಾನಮಂತ್ರಿ, ಸಂಘದ ಪ್ರಯಾಣವು ಇದನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು, ಶಿಕ್ಷಣ, ಕೃಷಿ, ಸಮಾಜ ಕಲ್ಯಾಣ, ಬುಡಕಟ್ಟು ಜನಾಂಗದ ಉನ್ನತಿ, ಮಹಿಳಾ ಸಬಲೀಕರಣ, ಕಲೆ ಮತ್ತು ವಿಜ್ಞಾನ ಮತ್ತು ಕಾರ್ಮಿಕ ವಲಯ ಸೇರಿದಂತೆ ಜೀವನದ ಎಲ್ಲಾ ಆಯಾಮಗಳಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವಲ್ಲಿ ಅದರ ವಿವಿಧ ಅಂಗಸಂಸ್ಥೆಗಳು ತೊಡಗಿಸಿಕೊಂಡಿವೆ. ಸಂಘವು ಬಹು ವಾಹಿನಿಗಳಾಗಿ ವಿಸ್ತರಿಸಲ್ಪಟ್ಟಿದ್ದರೂ, ಅವುಗಳ ನಡುವೆ ಎಂದಿಗೂ ವಿಭಜನೆಯಾಗಿಲ್ಲ ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಪ್ರತಿಯೊಂದು ವಾಹಿನಿ, ವೈವಿಧ್ಯಮಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಂದು ಸಂಘಟನೆಯು “ರಾಷ್ಟ್ರ ಮೊದಲು" ಎಂಬ ಒಂದೇ ಉದ್ದೇಶ ಮತ್ತು ಭಾವನೆಯನ್ನು ಹಂಚಿಕೊಳ್ಳುತ್ತವೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
"ಪ್ರಾರಂಭದಿಂದಲೂ, ರಾಷ್ಟ್ರೀಯ ಸ್ವಯಂಸೇವಕ ಸಂಘವು “ರಾಷ್ಟ್ರ ನಿರ್ಮಾಣ" ಎಂಬ ಉದಾತ್ತ ಉದ್ದೇಶವನ್ನು ಅನುಸರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಈ ಉದ್ದೇಶವನ್ನು ಸಾಧಿಸಲು, ಸಂಘವು ರಾಷ್ಟ್ರೀಯ ಅಭಿವೃದ್ಧಿಗೆ ಅಡಿಪಾಯವಾಗಿ ವೈಯಕ್ತಿಕ ಅಭಿವೃದ್ಧಿಯ ಮಾರ್ಗವನ್ನು ಆರಿಸಿಕೊಂಡಿದೆ ಎಂದು ಅವರು ಒತ್ತಿ ಹೇಳಿದರು. ಈ ಹಾದಿಯಲ್ಲಿ ಮುಂದುವರಿಯಲು, ಸಂಘವು ಶಾಖೆಗಳ ದೈನಂದಿನ ಮತ್ತು ನಿಯಮಿತ ನಡವಳಿಕೆಯಲ್ಲಿ ಶಿಸ್ತುಬದ್ಧ ಕೆಲಸದ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಅವರು ಹೇಳಿದರು.
"ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ರಾಷ್ಟ್ರವು ನಿಜವಾಗಿಯೂ ಬಲಿಷ್ಠವಾಗುತ್ತದೆ ಎಂದು ಪೂಜ್ಯ ಡಾ. ಹೆಡ್ಗೆವಾರ್ ಅರ್ಥಮಾಡಿಕೊಂಡಿದ್ದರು; ಪ್ರತಿಯೊಬ್ಬ ನಾಗರಿಕನು ರಾಷ್ಟ್ರಕ್ಕಾಗಿ ಬದುಕಲು ಕಲಿತಾಗ ಮಾತ್ರ ಭಾರತ ಪ್ರಗತಿ ಸಾಧಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು. ಅದಕ್ಕಾಗಿಯೇ ಡಾ. ಹೆಡ್ಗೆವಾರ್ ಅವರು ವೈಯಕ್ತಿಕ ಅಭಿವೃದ್ಧಿಗೆ ಬದ್ಧರಾಗಿರುವ ವಿಶಿಷ್ಟ ವಿಧಾನವನ್ನು ಅಳವಡಿಸಿಕೊಂಡಿದ್ದರು ಎಂದು ಅವರು ಹೇಳಿದರು. "ಜನರನ್ನು ಅವರು ಇರುವಂತೆಯೇ ಸ್ವೀಕರಿಸಿ, ಅವರು ಹೇಗಿರಬೇಕೋ ಹಾಗೆಯೇ ರೂಪಿಸಿ" ಎಂಬ ಡಾ. ಹೆಡ್ಗೆವಾರ್ ಅವರ ಮಾರ್ಗದರ್ಶಿ ತತ್ವವನ್ನು ಶ್ರೀ ಮೋದಿ ಉಲ್ಲೇಖಿಸಿದರು. ಡಾ. ಹೆಡ್ಗೆವಾರ್ ಅವರ ಸಾರ್ವಜನಿಕ ತೊಡಗಿಸಿಕೊಳ್ಳುವ ವಿಧಾನವನ್ನು ಅವರು ಕುಂಬಾರನ ವಿಧಾನಕ್ಕೆ ಹೋಲಿಸಿದರು - ಸಾಮಾನ್ಯ ಜೇಡಿಮಣ್ಣಿನಿಂದ ಪ್ರಾರಂಭಿಸಿ, ಅದರ ಮೇಲೆ ಶ್ರದ್ಧೆಯಿಂದ ಕೆಲಸ ಮಾಡುತ್ತಾನೆ, ಅದಕ್ಕೊಂದು ರೂಪ ನೀಡಿ, ಬೆಂಕಿಯಿಂದ ಬೇಯಿಸಿ, ಅಂತಿಮವಾಗಿ ಇಟ್ಟಿಗೆಗಳನ್ನು ಬಳಸಿ ಭವ್ಯವಾದ ರಚನೆಯನ್ನು ನಿರ್ಮಿಸುತ್ತಾನೆ. ಅದೇ ರೀತಿಯಲ್ಲಿ, ಡಾ. ಹೆಡ್ಗೆವಾರ್ ಸಾಮಾನ್ಯ ವ್ಯಕ್ತಿಗಳನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ, ಅವರಿಗೆ ದೋರದೃಷ್ಟಿ ನೀಡಿ, ಅವರನ್ನು ರಾಷ್ಟ್ರಕ್ಕಾಗಿ ಸಮರ್ಪಿತ ಸ್ವಯಂಸೇವಕರನ್ನಾಗಿ ರೂಪಿಸಿದರು. ಇದಕ್ಕಾಗಿಯೇ ಸಾಮಾನ್ಯ ಜನರು ಅಸಾಧಾರಣ ಮತ್ತು ಅಭೂತಪೂರ್ವ ಕಾರ್ಯಗಳನ್ನು ಸಾಧಿಸಲು ಒಗ್ಗೂಡುತ್ತಾರೆ ಎಂದು ಸಂಘದ ಬಗ್ಗೆ ಹೇಳಲಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಾಖೆಗಳಲ್ಲಿ ವೈಯಕ್ತಿಕ ಅಭಿವೃದ್ಧಿಯ ಉದಾತ್ತ ಪ್ರಕ್ರಿಯೆಯು ಮುಂದುವರಿದಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಶಾಖೆಯ ನೆಲವನ್ನು ಸ್ಫೂರ್ತಿಯ ಪವಿತ್ರ ಸ್ಥಳವೆಂದು ಬಣ್ಣಿಸಿದರು, ಅಲ್ಲಿ ಸ್ವಯಂಸೇವಕನು "ನಾನು" ಇಂದ "ನಾವು" ಗೆ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತಾನೆ, ಅವನು ಸಾಮೂಹಿಕ ಚೈತನ್ಯವನ್ನು ಪ್ರತಿನಿಧಿಸುತ್ತಾನೆ. ಈ ಶಾಖೆಗಳು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಯನ್ನು ಉತ್ತೇಜಿಸುವ, ವ್ಯಕ್ತಿತ್ವ ನಿರ್ಮಾಣದ ತ್ಯಾಗದ ಯಜ್ಞಪೀಠಗಳಾಗಿವೆ ಎಂದು ಅವರು ಹೇಳಿದರು. ಶಾಖೆಗಳಲ್ಲಿ, ರಾಷ್ಟ್ರೀಯ ಸೇವೆ ಮತ್ತು ಧೈರ್ಯದ ಮನೋಭಾವ ಬೇರೂರುತ್ತದೆ, ತ್ಯಾಗ ಮತ್ತು ಸಮರ್ಪಣೆಯ ಮನೋಭಾವವು ಸಹಜವಾಗುತ್ತದೆ, ವೈಯಕ್ತಿಕ ಶ್ರೇಯದ ಬಯಕೆ ಕಡಿಮೆಯಾಗುತ್ತದೆ ಮತ್ತು ಸ್ವಯಂಸೇವಕರು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ತಂಡದ ಕೆಲಸದ ಮೌಲ್ಯಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದು ಪ್ರಧಾನಮಂತ್ರಿ ವಿವರಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಪ್ರಯಾಣವು ಮೂರು ಮೂಲಭೂತ ಸ್ತಂಭಗಳನ್ನು ಆಧರಿಸಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ರಾಷ್ಟ್ರ ನಿರ್ಮಾಣದ ಭವ್ಯ ದೃಷ್ಟಿಕೋನ, ವೈಯಕ್ತಿಕ ಅಭಿವೃದ್ಧಿಗೆ ಸ್ಪಷ್ಟ ಮಾರ್ಗ ಮತ್ತು ಶಾಖೆಗಳ ರೂಪದಲ್ಲಿ ಸರಳ ಆದರೆ ಕ್ರಿಯಾತ್ಮಕ ಕಾರ್ಯ ವಿಧಾನ - ಈ ಸ್ತಂಭಗಳ ಮೇಲೆ ನಿಂತು, ಸಂಘವು ಲಕ್ಷಾಂತರ ಸ್ವಯಂಸೇವಕರನ್ನು ರೂಪಿಸಿದೆ. ಅವರು ಸಮರ್ಪಣೆ, ಸೇವೆ ಮತ್ತು ರಾಷ್ಟ್ರೀಯ ಶ್ರೇಷ್ಠತೆಯ ಬದ್ಧತೆಯ ಅನ್ವೇಷಣೆಯ ಮೂಲಕ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರವನ್ನು ಮುನ್ನಡೆಸುತ್ತಿದ್ದಾರೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದಾಗಿನಿಂದ ದೇಶದ ಆದ್ಯತೆಗಳೊಂದಿಗೆ ತನ್ನ ಆದ್ಯತೆಗಳನ್ನು ಹೊಂದಿಸಿಕೊಂಡಿದೆ ಎಂದು ಶ್ರೀ ಮೋದಿ ಹೇಳಿದರು. ಪ್ರತಿ ಕಾಲದಲ್ಲೂ ದೇಶ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ಸಂಘ ಎದುರಿಸಿದೆ ಎಂದು ಹೇಳಿದರು. ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿಕೊಂಡ ಅವರು, ಪೂಜ್ಯ ಡಾ. ಹೆಡ್ಗೆವಾರ್ ಮತ್ತು ಇತರ ಅನೇಕ ಕಾರ್ಯಕರ್ತರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು, ಡಾ. ಹೆಡ್ಗೆವಾರ್ ಅನೇಕ ಬಾರಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದರು ಎಂದು ಹೇಳಿದರು. ಸಂಘವು ಹಲವಾರು ಸ್ವಾತಂತ್ರ್ಯ ಹೋರಾಟಗಾರರನ್ನು ಬೆಂಬಲಿಸಿತು, ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿತು ಎಂದು ಪ್ರಧಾನಮಂತ್ರಿ ಹೇಳಿದರು. ಚಿಮೂರ್ ನಲ್ಲಿ 1942 ರ ಚಳುವಳಿಯನ್ನು ಅವರು ಉಲ್ಲೇಖಿಸಿದರು, ಅಲ್ಲಿ ಅನೇಕ ಸ್ವಯಂಸೇವಕರು ಬ್ರಿಟಿಷ್ ದೌರ್ಜನ್ಯಗಳನ್ನು ಅನುಭವಿಸಿದರು. ಸ್ವಾತಂತ್ರ್ಯದ ನಂತರ, ಹೈದರಾಬಾದಿನಲ್ಲಿ ನಿಜಾಮನ ದಬ್ಬಾಳಿಕೆಯನ್ನು ವಿರೋಧಿಸುವುದರಿಂದ ಹಿಡಿದು ಗೋವಾ ಮತ್ತು ದಾದ್ರಾ ಮತ್ತು ನಗರ ಹವೇಲಿಯ ವಿಮೋಚನೆಗೆ ಕೊಡುಗೆ ನೀಡುವವರೆಗೂ ಸಂಘವು ತನ್ನ ತ್ಯಾಗಗಳನ್ನು ಮುಂದುವರಿಸಿತು. ಇದೆಲ್ಲದಕ್ಕೂ, "ರಾಷ್ಟ್ರ ಮೊದಲು" ಮಾರ್ಗದರ್ಶಿ ಭಾವನೆಯಾಗಿತ್ತು ಮತ್ತು "ಏಕ್ ಭಾರತ್, ಶ್ರೇಷ್ಠ ಭಾರತ" ಅಚಲ ಗುರಿಯಾಗಿತ್ತು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ತನ್ನ ದೇಶ ಸೇವೆಯ ಪ್ರಯಾಣದುದ್ದಕ್ಕೂ ದಾಳಿಗಳು ಮತ್ತು ಪಿತೂರಿಗಳನ್ನು ಎದುರಿಸಿದೆ ಎಂದ ಶ್ರೀ ಮೋದಿ, ಸ್ವಾತಂತ್ರ್ಯದ ನಂತರವೂ ಸಂಘವನ್ನು ನಿಗ್ರಹಿಸಲು ಮತ್ತು ಮುಖ್ಯವಾಹಿನಿಯೊಂದಿಗೆ ಅದರ ಏಕೀಕರಣವನ್ನು ತಡೆಯಲು ಪ್ರಯತ್ನಗಳು ಹೇಗೆ ನಡೆದವು ಎಂಬುದನ್ನು ನೆನಪಿಸಿಕೊಂಡರು. ಪೂಜ್ಯ ಗುರೂಜಿಯನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಲಾಯಿತು ಎಂದು ಅವರು ಹೇಳಿದರು. ಆದರೂ, ಬಿಡುಗಡೆಯಾದ ನಂತರ, ಗುರೂಜಿ ಅತ್ಯಂತ ತಾಳ್ಮೆಯಿಂದ ಪ್ರತಿಕ್ರಿಯಿಸುತ್ತಾ, "ಕೆಲವೊಮ್ಮೆ ನಾಲಿಗೆ ಹಲ್ಲುಗಳ ನಡುವೆ ಸಿಲುಕಿಕೊಂಡು ಘಾಸಿಗೊಳಗಾಗುತ್ತದೆ. ಆದರೆ ನಾವು ಹಲ್ಲು ಮುರಿಯುವುದಿಲ್ಲ, ಏಕೆಂದರೆ ಹಲ್ಲು ಮತ್ತು ನಾಲಿಗೆ ಎರಡೂ ನಮ್ಮವೇ" ಎಂದು ಹೇಳಿದರು. ತೀವ್ರ ಚಿತ್ರಹಿಂಸೆ ಮತ್ತು ವಿವಿಧ ರೀತಿಯ ದಬ್ಬಾಳಿಕೆಯನ್ನು ಅನುಭವಿಸಿದರೂ, ಗುರೂಜಿ ಯಾವುದೇ ಅಸಮಾಧಾನ ಅಥವಾ ದ್ವೇಷವನ್ನು ಹೊಂದಿರಲಿಲ್ಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಗುರೂಜಿಯ ಋಷಿಯಂತಹ ವ್ಯಕ್ತಿತ್ವ ಮತ್ತು ಸೈದ್ಧಾಂತಿಕ ಸ್ಪಷ್ಟತೆಯು ಪ್ರತಿಯೊಬ್ಬ ಸ್ವಯಂಸೇವಕನಿಗೆ ಮಾರ್ಗದರ್ಶಕ ಬೆಳಕಾಗಿ, ಸಮಾಜದ ಬಗ್ಗೆ ಏಕತೆ ಮತ್ತು ಸಹಾನುಭೂತಿಯ ಮೌಲ್ಯಗಳನ್ನು ಬಲಪಡಿಸುತ್ತಿದೆ ಎಂದು ಅವರು ವಿವರಿಸಿದರು. ನಿಷೇಧಗಳು, ಪಿತೂರಿಗಳು ಅಥವಾ ಸುಳ್ಳು ಪ್ರಕರಣಗಳನ್ನು ಎದುರಿಸಿದರೂ, ಸ್ವಯಂಸೇವಕರು ಎಂದಿಗೂ ಕಹಿಭಾವನೆಗೆ ಅವಕಾಶ ನೀಡಲಿಲ್ಲ, ಏಕೆಂದರೆ ಅವರು ತಾವು ಸಮಾಜದಿಂದ ಪ್ರತ್ಯೇಕವಾಗಿಲ್ಲ - ಸಮಾಜವು ತಮ್ಮಿಂದ ಮಾಡಲ್ಪಟ್ಟಿದೆ ಎಂದು ಅವರು ಅರ್ಥಮಾಡಿಕೊಂಡರು. ಒಳ್ಳೆಯದು ತಮಗೆ ಸೇರಿದ್ದು ಮತ್ತು ಕೆಟ್ಟದ್ದೂ ಕೂಡ ತಮಗೇ ಸೇರಿದ್ದು ಎಂಬುದಾಗಿ ಅವರು ತಿಳಿದಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು.
ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಪ್ರತಿಯೊಬ್ಬ ಸ್ವಯಂಸೇವಕರ ಅಚಲ ನಂಬಿಕೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘವು ಎಂದಿಗೂ ಕಹಿಭಾವನೆಯನ್ನು ಹೊಂದಿರದಿರಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ತುರ್ತು ಪರಿಸ್ಥಿತಿಯ ಸಮಯದಲ್ಲಿ, ಈ ನಂಬಿಕೆಯೇ ಸ್ವಯಂಸೇವಕರಿಗೆ ಶಕ್ತಿ ನೀಡಿತು ಮತ್ತು ಅವರಿಗೆ ವಿರೋಧಿಸುವ ಬಲವನ್ನು ನೀಡಿತು ಎಂದು ನೆನಪಿಸಿಕೊಂಡರು. ಈ ಎರಡು ಪ್ರಮುಖ ಮೌಲ್ಯಗಳು - ಸಮಾಜದೊಂದಿಗಿನ ಏಕತೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆ - ಸ್ವಯಂಸೇವಕರನ್ನು ಪ್ರತಿಯೊಂದು ಬಿಕ್ಕಟ್ಟಿನಲ್ಲಿಯೂ ಒಗ್ಗೂಡಿಸಿವೆ ಮತ್ತು ಸಾಮಾಜಿಕ ಅಗತ್ಯಗಳ ಬಗ್ಗೆ ಸಂವೇದನಾಶೀಲರನ್ನಾಗಿಸಿವೆ ಎಂದು ಅವರು ಒತ್ತಿ ಹೇಳಿದರು. ಕಾಲಾನಂತರದಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದರೂ, ಸಂಘವು ದೈತ್ಯ ಆಲದ ಮರದಂತೆ ದೃಢವಾಗಿ ನಿಂತಿದೆ, ರಾಷ್ಟ್ರ ಮತ್ತು ಸಮಾಜಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದರು.
ಆರಂಭದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘವು ದೇಶಭಕ್ತಿ ಮತ್ತು ಸೇವೆಗೆ ಸಮಾನಾರ್ಥಕವಾಗಿದೆ ಎಂದು ಶ್ರೀ ಮೋದಿ ಹೇಳಿದರು. ವಿಭಜನೆಯ ನೋವಿನ ಸಮಯದಲ್ಲಿ, ಲಕ್ಷಾಂತರ ಕುಟುಂಬಗಳು ಸ್ಥಳಾಂತರಗೊಂಡಾಗ, ಸ್ವಯಂಸೇವಕರು ಸೀಮಿತ ಸಂಪನ್ಮೂಲಗಳೊಂದಿಗೆ ನಿರಾಶ್ರಿತರಿಗೆ ಸೇವೆ ಸಲ್ಲಿಸಲು ಮುಂಚೂಣಿಯಲ್ಲಿ ನಿಂತಿದ್ದರು ಎಂದು ಅವರು ನೆನಪಿಸಿಕೊಂಡರು. ಇದು ಕೇವಲ ಪರಿಹಾರ ಕಾರ್ಯವಾಗಿರಲಿಲ್ಲ - ಇದು ರಾಷ್ಟ್ರದ ಆತ್ಮವನ್ನು ಬಲಪಡಿಸುವ ಕೆಲಸವಾಗಿತ್ತು ಎಂದು ಅವರು ಒತ್ತಿ ಹೇಳಿದರು.
1956ರಲ್ಲಿ ಗುಜರಾತಿನ ಅಂಜಾರ್ ನಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪವನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು ಮತ್ತು ವ್ಯಾಪಕ ವಿನಾಶವನ್ನು ವಿವರಿಸಿದರು. ಆಗಲೂ ಸ್ವಯಂಸೇವಕರು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪೂಜ್ಯ ಗುರೂಜಿ ಗುಜರಾತಿನಲ್ಲಿ ಸಂಘದ ಆಗಿನ ಮುಖ್ಯಸ್ಥ ವಕೀಲ್ ಸಾಹೇಬ್ ಅವರಿಗೆ ಪತ್ರ ಬರೆದಿದ್ದನ್ನು ಅವರು ನೆನಪಿಸಿಕೊಂಡರು, ಅದರಲ್ಲಿ ಅವರು ಇತರರ ದುಃಖವನ್ನು ನಿವಾರಿಸಲು ನಿಸ್ವಾರ್ಥವಾಗಿ ದುಃಖವನ್ನು ಸಹಿಸಿಕೊಳ್ಳುವುದು ಉದಾತ್ತ ಹೃದಯದ ಲಕ್ಷಣವಾಗಿದೆ ಎಂದು ಹೇಳಿದ್ದರು.
1962ರ ಯುದ್ಧವನ್ನು ನೆನಪಿಸಿಕೊಂಡ ಶ್ರೀ ಮೋದಿ, "ಪ್ರತಿಯೊಬ್ಬ ಸ್ವಯಂಸೇವಕರ ವಿಶಿಷ್ಟ ಲಕ್ಷಣವೆಂದರೆ ಇತರರ ನೋವನ್ನು ನಿವಾರಿಸಲು ಕಷ್ಟಗಳನ್ನು ಸಹಿಸಿಕೊಳ್ಳುವುದು" ಎಂದು ಹೇಳಿದರು. ಆ ಯುದ್ಧದ ಸಮಯದಲ್ಲಿ, ಆರ್ ಎಸ್ ಎಸ್ ಸ್ವಯಂಸೇವಕರು ಸಶಸ್ತ್ರ ಪಡೆಗಳನ್ನು ದಣಿವರಿಯದೆ ಬೆಂಬಲಿಸಿದರು, ಅವರ ಮನೋಸ್ಥೈರ್ಯವನ್ನು ಹೆಚ್ಚಿಸಿದರು ಮತ್ತು ಗಡಿ ಹಳ್ಳಿಗಳಿಗೆ ನೆರವು ನೀಡಿದರು ಎಂದು ಅವರು ಹೇಳಿದರು. ಪೂರ್ವ ಪಾಕಿಸ್ತಾನದಿಂದ ಲಕ್ಷಾಂತರ ನಿರಾಶ್ರಿತರು ಯಾವುದೇ ಆಶ್ರಯ ಅಥವಾ ಸಂಪನ್ಮೂಲಗಳಿಲ್ಲದೆ ಭಾರತಕ್ಕೆ ಆಗಮಿಸಿದ 1971 ರ ಬಿಕ್ಕಟ್ಟನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ಆ ಕಷ್ಟದ ಸಮಯದಲ್ಲಿ, ಸ್ವಯಂಸೇವಕರು ಆಹಾರವನ್ನು ವ್ಯವಸ್ಥೆ ಮಾಡಿದರು, ಆಶ್ರಯ, ಆರೋಗ್ಯ ಸೇವೆ ಒದಗಿಸಿದರು, ಅವರ ಕಣ್ಣೀರು ಒರೆಸಿದರು ಮತ್ತು ಅವರ ನೋವನ್ನು ಹಂಚಿಕೊಂಡರು. 1984 ರ ಗಲಭೆಯ ಸಮಯದಲ್ಲಿ ಸ್ವಯಂಸೇವಕರು ಅನೇಕ ಸಿಖ್ಖರಿಗೆ ಆಶ್ರಯ ನೀಡಿದರು ಎಂದು ಶ್ರೀ ಮೋದಿ ಹೇಳಿದರು.
ಚಿತ್ರಕೂಟದಲ್ಲಿರುವ ನಾನಾಜಿ ದೇಶಮುಖ್ ಅವರ ಆಶ್ರಮದಲ್ಲಿ ತಾವು ವೀಕ್ಷಿಸಿದ ಸೇವಾ ಚಟುವಟಿಕೆಗಳಿಂದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಬೆರಗಾಗಿದ್ದರು ಎಂದು ನೆನಪಿಸಿಕೊಂಡ ಶ್ರೀ ಮೋದಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಾಗ್ಪುರಕ್ಕೆ ಭೇಟಿ ನೀಡಿದ್ದಾಗ ಸಂಘದ ಶಿಸ್ತು ಮತ್ತು ಸರಳತೆಯಿಂದ ಪ್ರಭಾವಿತರಾಗಿದ್ದರು ಎಂದು ಉಲ್ಲೇಖಿಸಿದರು.
ಪಂಜಾಬ್ ನಲ್ಲಿನ ಪ್ರವಾಹ, ಹಿಮಾಚಲ ಮತ್ತು ಉತ್ತರಾಖಂಡದಲ್ಲಿ ಸಂಭವಿಸಿದ ವಿಪತ್ತುಗಳು ಮತ್ತು ಕೇರಳದ ವಯನಾಡಿನಲ್ಲಿ ಸಂಭವಿಸಿದ ದುರಂತದಂತಹ ವಿಪತ್ತುಗಳಲ್ಲಿಯೂ ಸಹ ಸ್ವಯಂಸೇವಕರು ಮೊದಲು ಸ್ಪಂದಿಸಿದವರಲ್ಲಿ ಒಬ್ಬರಾಗಿದ್ದರು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಇಡೀ ಜಗತ್ತು ಸಂಘದ ಧೈರ್ಯ ಮತ್ತು ಸೇವಾ ಮನೋಭಾವವನ್ನು ಪ್ರತ್ಯಕ್ಷವಾಗಿ ಕಂಡಿತು ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಪಯಣದಲ್ಲಿ ಸಮಾಜದ ವಿವಿಧ ವರ್ಗಗಳಲ್ಲಿ ಸ್ವಯಂ ಅರಿವು ಮತ್ತು ಹೆಮ್ಮೆಯ ಜಾಗೃತಿ ಮೂಡಿಸಿದ್ದು ಅತ್ಯಂತ ಮಹತ್ವದ ಕೊಡುಗೆಗಳಲ್ಲಿ ಒಂದಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಸಂಘವು ದೇಶದ ಅತ್ಯಂತ ದೂರದ ಮತ್ತು ಪ್ರವೇಶಿಸಲಾಗದ ಪ್ರದೇಶಗಳಲ್ಲಿ, ವಿಶೇಷವಾಗಿ ಭಾರತದ ಸುಮಾರು ಹತ್ತು ಕೋಟಿ ಬುಡಕಟ್ಟು ಸಹೋದರ ಸಹೋದರಿಯರಿಗಾಗಿ ನಿರಂತರವಾಗಿ ಕೆಲಸ ಮಾಡಿದೆ ಎಂದು ಹೇಳಿದರು. ಸತತ ಸರ್ಕಾರಗಳು ಈ ಸಮುದಾಯಗಳನ್ನು ಹೆಚ್ಚಾಗಿ ಕಡೆಗಣಿಸುತ್ತಿದ್ದರೂ, ಸಂಘವು ಅವರ ಸಂಸ್ಕೃತಿ, ಹಬ್ಬಗಳು, ಭಾಷೆಗಳು ಮತ್ತು ಸಂಪ್ರದಾಯಗಳಿಗೆ ಆದ್ಯತೆ ನೀಡಿತು. ಸೇವಾ ಭಾರತಿ, ವಿದ್ಯಾ ಭಾರತಿ ಮತ್ತು ವನವಾಸಿ ಕಲ್ಯಾಣ್ ಆಶ್ರಮದಂತಹ ಸಂಸ್ಥೆಗಳು ಬುಡಕಟ್ಟು ಸಬಲೀಕರಣದ ಸ್ತಂಭಗಳಾಗಿ ಹೊರಹೊಮ್ಮಿವೆ. ಇಂದು ಬುಡಕಟ್ಟು ಸಮುದಾಯಗಳಲ್ಲಿ ಬೆಳೆಯುತ್ತಿರುವ ಆತ್ಮ ವಿಶ್ವಾಸವು ಅವರ ಜೀವನವನ್ನು ಪರಿವರ್ತಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು.
ಭಾರತದ ದೂರದ ಪ್ರದೇಶಗಳಲ್ಲಿ ಬುಡಕಟ್ಟು ಸಮುದಾಯಗಳ ಜೀವನವನ್ನು ಸುಧಾರಿಸಲು ಅವಿಶ್ರಾಂತವಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಲಕ್ಷಾಂತರ ಸ್ವಯಂಸೇವಕರಿಗೆ ತೀವ್ರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಶ್ರೀ ಮೋದಿ, ಅವರ ಸಮರ್ಪಣೆ ದೇಶದ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ಐತಿಹಾಸಿಕವಾಗಿ ಬುಡಕಟ್ಟು ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡಿರುವ ಸವಾಲುಗಳು ಮತ್ತು ಅಭಿಯಾನಗಳ ಬಗ್ಗೆ ಪ್ರಧಾನಮಂತ್ರಿ ಶ್ಲಾಘಿಸಿದರು ಮತ್ತು ಸಂಘವು ಮೌನವಾಗಿ ಮತ್ತು ದೃಢವಾಗಿ ತನ್ನ ತ್ಯಾಗವನ್ನು ಅರ್ಪಿಸಿದೆ ಮತ್ತು ದಶಕಗಳಿಂದ ಇಂತಹ ಬಿಕ್ಕಟ್ಟುಗಳಿಂದ ರಾಷ್ಟ್ರವನ್ನು ರಕ್ಷಿಸುವ ಕರ್ತವ್ಯವನ್ನು ಮಾಡಿದೆ ಎಂದು ಒತ್ತಿ ಹೇಳಿದರು.
ಜಾತಿ ಆಧಾರಿತ ತಾರತಮ್ಯ ಮತ್ತು ಪ್ರತಿಗಾಮಿ ಪದ್ಧತಿಗಳಂತಹ ಆಳವಾಗಿ ಬೇರೂರಿರುವ ಸಾಮಾಜಿಕ ಅನಿಷ್ಟಗಳು ಹಿಂದೂ ಸಮಾಜಕ್ಕೆ ಬಹಳ ಹಿಂದಿನಿಂದಲೂ ಗಂಭೀರ ಸವಾಲಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಕಳವಳವನ್ನು ಪರಿಹರಿಸಲು ರಾಷ್ಟ್ರೀಯ ಸ್ವಯಂಸೇವಕ ಸಂಘವು ನಿರಂತರ ಪ್ರಯತ್ನಗಳನ್ನು ಮಾಡಿದೆ ಎಂದು ಅವರು ಎತ್ತಿ ತೋರಿಸಿದರು. ವಾರ್ಧಾದಲ್ಲಿ ನಡೆದ ಆರ್ ಎಸ್ ಎಸ್ ಶಿಬಿರಕ್ಕೆ ಮಹಾತ್ಮ ಗಾಂಧಿಯವರ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಗಾಂಧೀಜಿಯವರು ಆರ್.ಎಸ್.ಎಸ್ ನ ಸಮಾನತೆ, ಸಹಾನುಭೂತಿ ಮತ್ತು ಸಾಮರಸ್ಯದ ಮನೋಭಾವವನ್ನು ಪೂರ್ಣ ಹೃದಯದಿಂದ ಶ್ಲಾಘಿಸಿದ್ದಾರೆ ಎಂದು ಹೇಳಿದರು. ಡಾ. ಹೆಡ್ಗೇವಾರ್ ಅವರಿಂದ ಇಂದಿನವರೆಗೆ, ಆರ್.ಎಸ್.ಎಸ್ ನ ಪ್ರತಿಯೊಬ್ಬ ಪ್ರಮುಖ ವ್ಯಕ್ತಿ ಮತ್ತು ಸರಸಂಘಚಾಲಕರು ತಾರತಮ್ಯ ಮತ್ತು ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ್ದಾರೆ ಎಂದು ಅವರು ಹೇಳಿದರು. ಪೂಜ್ಯ ಗುರೂಜಿಯವರು "ನ ಹಿಂದೂ ಪತಿತೋ ಭವೇತ್" ಅಂದರೆ ಪ್ರತಿಯೊಬ್ಬ ಹಿಂದೂ ಒಂದೇ ಕುಟುಂಬದ ಭಾಗ ಮತ್ತು ಯಾರೂ ಕೀಳಲ್ಲ ಅಥವಾ ಪತಿತರಲ್ಲ ಎಂಬ ಮನೋಭಾವವನ್ನು ನಿರಂತರವಾಗಿ ಉತ್ತೇಜಿಸಿದರು ಎಂದು ಶ್ರೀ ಮೋದಿ ಒತ್ತಿ ಹೇಳಿದರು. "ಅಸ್ಪೃಶ್ಯತೆ ಪಾಪವಲ್ಲದಿದ್ದರೆ, ಜಗತ್ತಿನಲ್ಲಿ ಯಾವುದೂ ಪಾಪವಲ್ಲ" ಎಂದು ಹೇಳಿದ್ದ ಪೂಜ್ಯ ಬಾಳಾಸಾಹೇಬ್ ದೇವರಸ್ ಅವರ ಮಾತನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಪೂಜ್ಯ ರಾಜು ಭೈಯಾ ಮತ್ತು ಪೂಜ್ಯ ಸುದರ್ಶನ್ ಜಿ ಅವರು ಕೂಡ ತಮ್ಮ ಸರಸಂಘಚಾಲಕ್ ಅವಧಿಯಲ್ಲಿ ಈ ಮನೋಭಾವವನ್ನು ಮುಂದುವರೆಸಿದರು ಎಂದು ಅವರು ಹೇಳಿದರು. ಪ್ರಸ್ತುತ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ ಜಿ ಅವರು "ಒಂದು ಬಾವಿ, ಒಂದು ದೇವಾಲಯ ಮತ್ತು ಒಂದು ಸ್ಮಶಾನ" ಎಂಬ ದೃಷ್ಟಿಕೋನದಲ್ಲಿ ಸಾಮಾಜಿಕ ಸಾಮರಸ್ಯದ ಸ್ಪಷ್ಟ ಗುರಿಯನ್ನು ಸಮಾಜದ ಮುಂದೆ ಇಟ್ಟಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಸಂಘವು ಈ ಸಂದೇಶವನ್ನು ದೇಶದ ಮೂಲೆ ಮೂಲೆಗೂ ಹರಡಿದೆ ಮತ್ತು ತಾರತಮ್ಯ, ವಿಭಜನೆ ಮತ್ತು ಅಪಸ್ವರಗಳಿಂದ ಮುಕ್ತ ಸಮಾಜವನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. ಸಾಮರಸ್ಯ ಮತ್ತು ಎಲ್ಲರನ್ನೂ ಒಳಗೊಂಡ ಸಮಾಜಕ್ಕಾಗಿ ಇದು ಸಂಕಲ್ಪದ ಆಧಾರವಾಗಿದೆ, ಇದನ್ನು ಸಂಘವು ಹೊಸ ಚೈತನ್ಯದಿಂದ ಬಲಪಡಿಸುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಶತಮಾನದ ಹಿಂದೆ ಸ್ಥಾಪನೆಯಾದಾಗ, ಆ ಕಾಲದ ಅಗತ್ಯತೆಗಳು ಮತ್ತು ಹೋರಾಟಗಳು ವಿಭಿನ್ನವಾಗಿದ್ದವು ಎಂದು ಶ್ರೀ ಮೋದಿ ಹೇಳಿದರು. ಶತಮಾನಗಳ ರಾಜಕೀಯ ಅಧೀನತೆಯಿಂದ ಮುಕ್ತಿ ಪಡೆಯಲು ಮತ್ತು ತನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಲು ಭಾರತ ಶ್ರಮಿಸುತ್ತಿತ್ತು. ಇಂದು, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿರುವಾಗ ಮತ್ತು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲು ಸಜ್ಜಾಗುತ್ತಿರುವಾಗ, ಸವಾಲುಗಳು ವಿಕಸನಗೊಂಡಿವೆ ಎಂದು ಅವರು ಹೇಳಿದರು. ಜನಸಂಖ್ಯೆಯ ಒಂದು ದೊಡ್ಡ ಭಾಗವು ಬಡತನದಿಂದ ಹೊರಬಂದಿದೆ, ಹೊಸ ವಲಯಗಳು ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುತ್ತಿವೆ ಮತ್ತು ಭಾರತವು ರಾಜತಾಂತ್ರಿಕತೆಯಿಂದ ಹವಾಮಾನ ನೀತಿಗಳವರೆಗೆ ಜಾಗತಿಕವಾಗಿ ತನ್ನ ಧ್ವನಿಯನ್ನು ಪ್ರತಿಪಾದಿಸುತ್ತಿದೆ. ಇಂದಿನ ಸವಾಲುಗಳಲ್ಲಿ ಇತರ ರಾಷ್ಟ್ರಗಳ ಮೇಲಿನ ಆರ್ಥಿಕ ಅವಲಂಬನೆ, ರಾಷ್ಟ್ರೀಯ ಏಕತೆಗೆ ಅಡ್ಡಿಪಡಿಸುವ ಪಿತೂರಿಗಳು ಮತ್ತು ಜನಸಂಖ್ಯೆಯ ಅಪಬಳಕೆ ಸೇರಿವೆ ಎಂದು ಅವರು ಹೇಳಿದರು. ಪ್ರಧಾನ ಮಂತ್ರಿಯಾಗಿ, ಸರ್ಕಾರವು ಈ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುತ್ತಿರುವುದಕ್ಕೆ ತೃಪ್ತಿ ಇದೆ. ಒಬ್ಬ ಸ್ವಯಂಸೇವಕನಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ಈ ಸವಾಲುಗಳನ್ನು ಗುರುತಿಸಿದ್ದಲ್ಲದೆ ಅವುಗಳನ್ನು ಎದುರಿಸಲು ಒಂದು ದೃಢವಾದ ಮಾರ್ಗಸೂಚಿಯನ್ನು ರೂಪಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಐದು ಪರಿವರ್ತನಾ ನಿರ್ಣಯಗಳಾದ ಸ್ವಯಂ ಅರಿವು, ಸಾಮಾಜಿಕ ಸಾಮರಸ್ಯ, ಕುಟುಂಬ ತಿಳುವಳಿಕೆ, ನಾಗರಿಕ ಶಿಸ್ತು ಮತ್ತು ಪರಿಸರ ಪ್ರಜ್ಞೆ ರಾಷ್ಟ್ರ ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಸ್ವಯಂಸೇವಕರಿಗೆ ಪ್ರಬಲ ಸ್ಫೂರ್ತಿಯಾಗಿವೆ ಎಂದು ಶ್ರೀ ಮೋದಿ ವಿವರಿಸಿದರು. ಸ್ವಯಂ ಅರಿವು ಎಂದರೆ ಗುಲಾಮಗಿರಿಯ ಮನಸ್ಥಿತಿಯಿಂದ ವಿಮೋಚನೆ ಮತ್ತು ತಮ್ಮ ಪರಂಪರೆ ಮತ್ತು ಮಾತೃ ಭಾಷೆಯ ಬಗ್ಗೆ ಹೆಮ್ಮೆ ಪಡುವುದು ಎಂದು ಅವರು ವಿವರಿಸಿದರು. ಸ್ವಯಂ ಅರಿವು ಎಂದರೆ ಸ್ವದೇಶಿಯನ್ನು ಅಳವಡಿಸಿಕೊಳ್ಳುವುದು ಎಂದರ್ಥ ಎಂದು ಅವರು ಒತ್ತಿ ಹೇಳಿದರು. ಸ್ವಾವಲಂಬನೆ ಇನ್ನು ಮುಂದೆ ಒಂದು ಆಯ್ಕೆಯಲ್ಲ, ಬದಲಿಗೆ ಅವಶ್ಯಕತೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಸ್ವದೇಶಿ ಮಂತ್ರವನ್ನು ಸಾಮೂಹಿಕ ಸಂಕಲ್ಪವಾಗಿ ಅಳವಡಿಸಿಕೊಳ್ಳುವಂತೆ ಪ್ರಧಾನಮಂತ್ರಿ ಸಮಾಜಕ್ಕೆ ಕರೆ ನೀಡಿದರು ಮತ್ತು "ವೋಕಲ್ ಫಾರ್ ಲೋಕಲ್" ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ತಮ್ಮ ಸಂಪೂರ್ಣ ಶಕ್ತಿಯನ್ನು ಮುಡಿಪಾಗಿಡಬೇಕೆಂದು ಒತ್ತಾಯಿಸಿದರು.
"ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾವಾಗಲೂ ಸಾಮಾಜಿಕ ಸಾಮರಸ್ಯಕ್ಕೆ ಆದ್ಯತೆ ನೀಡಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಸಾಮಾಜಿಕ ಸಾಮರಸ್ಯ ಎಂದರೆ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವುದು ಮತ್ತು ವಂಚಿತರಿಗೆ ಆದ್ಯತೆ ನೀಡುವ ಮೂಲಕ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಎಂದು ಅವರು ವ್ಯಾಖ್ಯಾನಿಸಿದರು. ಇಂದು ರಾಷ್ಟ್ರವು ಪ್ರತ್ಯೇಕತಾವಾದಿ ಸಿದ್ಧಾಂತಗಳು ಮತ್ತು ಪ್ರಾದೇಶಿಕತೆಯಿಂದ ಹಿಡಿದು ಜಾತಿ ಮತ್ತು ಭಾಷಾ ವಿವಾದಗಳು ಮತ್ತು ಬಾಹ್ಯ ಶಕ್ತಿಗಳಿಂದ ಉತ್ತೇಜಿಸಲ್ಪಟ್ಟ ವಿಭಜಕ ಪ್ರವೃತ್ತಿಗಳವರೆಗೆ ತನ್ನ ಏಕತೆ, ಸಂಸ್ಕೃತಿ ಮತ್ತು ಭದ್ರತೆಯ ಮೇಲೆ ನೇರವಾಗಿ ಪರಿಣಾಮ ಬೀರುವ ಸವಾಲುಗಳನ್ನು ಎದುರಿಸುತ್ತಿದೆ ಎಂದು ಶ್ರೀ ಮೋದಿ ಹೇಳಿದರು. ಭಾರತದ ಆತ್ಮವು ಯಾವಾಗಲೂ "ವೈವಿಧ್ಯತೆಯಲ್ಲಿ ಏಕತೆ"ಯಲ್ಲಿ ಬೇರೂರಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು ಮತ್ತು ಈ ತತ್ವವನ್ನು ಮುರಿದರೆ, ಭಾರತದ ಶಕ್ತಿ ಕಡಿಮೆಯಾಗುತ್ತದೆ ಎಂದು ಎಚ್ಚರಿಸಿದರು. ಆದ್ದರಿಂದ, ಈ ಮೂಲಭೂತ ಮನೋಭಾವವನ್ನು ನಿರಂತರವಾಗಿ ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಇಂದು ಸಾಮಾಜಿಕ ಸಾಮರಸ್ಯವು ಜನಸಂಖ್ಯೆಯ ಅಪಬಳಕೆ ಮತ್ತು ಒಳನುಸುಳುವಿಕೆಯಿಂದ ಗಂಭೀರ ಸವಾಲನ್ನು ಎದುರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು, ಇದು ಆಂತರಿಕ ಭದ್ರತೆ ಮತ್ತು ಭವಿಷ್ಯದ ಶಾಂತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಕಾಳಜಿಯು ಕೆಂಪು ಕೋಟೆಯಿಂದ ಜನಸಂಖ್ಯಾ ಮಿಷನ್ ಅನ್ನು ಘೋಷಿಸಲು ಕಾರಣವಾಯಿತು ಎಂದು ಅವರು ಒತ್ತಿ ಹೇಳಿದರು. ಈ ಬೆದರಿಕೆಯನ್ನು ಎದುರಿಸಲು ಜಾಗರೂಕತೆ ಮತ್ತು ದೃಢನಿಶ್ಚಯದ ಕ್ರಮಕ್ಕೆ ಅವರು ಕರೆ ನೀಡಿದರು.
ಕುಟುಂಬ ತಿಳುವಳಿಕೆಯು ಇಂದಿನ ಅಗತ್ಯವಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತೀಯ ನಾಗರಿಕತೆಯ ಅಡಿಪಾಯವನ್ನು ರೂಪಿಸುವ ಮತ್ತು ಭಾರತೀಯ ಮೌಲ್ಯಗಳಿಂದ ಪ್ರೇರಿತವಾದ ಕುಟುಂಬ ಸಂಸ್ಕೃತಿಯನ್ನು ಪೋಷಿಸುವುದು ಇದರ ಉದ್ದೇಶ ಎಂದು ಅವರು ವ್ಯಾಖ್ಯಾನಿಸಿದರು. ಕುಟುಂಬ ತತ್ವಗಳನ್ನು ಎತ್ತಿಹಿಡಿಯುವುದು, ಹಿರಿಯರನ್ನು ಗೌರವಿಸುವುದು, ಮಹಿಳೆಯರನ್ನು ಸಬಲೀಕರಣಗೊಳಿಸುವುದು, ಯುವಜನರಲ್ಲಿ ಮೌಲ್ಯಗಳನ್ನು ತುಂಬುವುದು ಮತ್ತು ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವ ಮಹತ್ವವನ್ನು ಅವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಕುಟುಂಬಗಳು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದರು.
ಪ್ರತಿಯೊಂದು ಯುಗದಲ್ಲೂ, ಪ್ರಗತಿ ಸಾಧಿಸಿದ ರಾಷ್ಟ್ರಗಳು ನಾಗರಿಕ ಶಿಸ್ತಿನ ಬಲವಾದ ಅಡಿಪಾಯದೊಂದಿಗೆ ಮುಂದುವರೆದವು ಎಂಬುದನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿ, ನಾಗರಿಕ ಶಿಸ್ತು ಎಂದರೆ ಕರ್ತವ್ಯ ಪ್ರಜ್ಞೆಯನ್ನು ಬೆಳೆಸುವುದು ಮತ್ತು ಪ್ರತಿಯೊಬ್ಬ ನಾಗರಿಕನು ತಮ್ಮ ಜವಾಬ್ದಾರಿಗಳ ಬಗ್ಗೆ ತಿಳಿದಿರುವುದನ್ನು ಖಚಿತಪಡಿಸಿಕೊಳ್ಳುವುದು ಎಂದು ಒತ್ತಿ ಹೇಳಿದರು. ಸ್ವಚ್ಛತೆಯನ್ನು ಉತ್ತೇಜಿಸುವುದು, ರಾಷ್ಟ್ರೀಯ ಆಸ್ತಿಗಳನ್ನು ಗೌರವಿಸುವುದು ಮತ್ತು ಕಾನೂನು ಮತ್ತು ನಿಯಮಗಳನ್ನು ಪಾಲಿಸುವುದು ನಾಗರಿಕರ ಕರ್ತವ್ಯ ಎಂದು ಅವರು ಕರೆ ನೀಡಿದರು. ನಾಗರಿಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂಬುದು ಸಂವಿಧಾನದ ಆಶಯವಾಗಿದ್ದು, ಈ ಸಾಂವಿಧಾನಿಕ ಮೌಲ್ಯವನ್ನು ನಿರಂತರವಾಗಿ ಬಲಪಡಿಸಬೇಕು ಎಂದು ಶ್ರೀ ಮೋದಿ ಹೇಳಿದರು.
ಪರಿಸರವನ್ನು ರಕ್ಷಿಸುವುದು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಅತ್ಯಗತ್ಯ ಮತ್ತು ಮನುಕುಲದ ಭವಿಷ್ಯಕ್ಕೆ ನೇರವಾಗಿ ಸಂಬಂಧಿಸಿದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಆರ್ಥಿಕತೆಯ ಮೇಲೆ ಮಾತ್ರವಲ್ಲದೆ ಪರಿಸರ ವಿಜ್ಞಾನದ ಮೇಲೂ ಗಮನಹರಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಜಲ ಸಂರಕ್ಷಣೆ, ಹಸಿರು ಇಂಧನ ಮತ್ತು ಶುದ್ಧ ಇಂಧನದಂತಹ ಅಭಿಯಾನಗಳು ಈ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಗಳಾಗಿವೆ ಎಂದು ಅವರು ಹೇಳಿದರು.
"ರಾಷ್ಟ್ರೀಯ ಸ್ವಯಂಸೇವಕ ಸಂಘದ ಐದು ಪರಿವರ್ತನಾತ್ಮಕ ಸಂಕಲ್ಪಗಳಾದ ಸ್ವಯಂ ಅರಿವು, ಸಾಮಾಜಿಕ ಸಾಮರಸ್ಯ, ಕುಟುಂಬ ತಿಳುವಳಿಕೆ, ನಾಗರಿಕ ಶಿಸ್ತು ಮತ್ತು ಪರಿಸರ ಪ್ರಜ್ಞೆ - ರಾಷ್ಟ್ರದ ಬಲವನ್ನು ಹೆಚ್ಚಿಸುವ, ಭಾರತವು ವೈವಿಧ್ಯಮಯ ಸವಾಲುಗಳನ್ನು ಎದುರಿಸಲು ಸಹಾಯ ಮಾಡುವ ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಅಡಿಪಾಯ ಸ್ತಂಭಗಳಾಗಿ ಕಾರ್ಯನಿರ್ವಹಿಸುವ ಪ್ರಮುಖ ಸಾಧನಗಳಾಗಿವೆ" ಎಂದು ಪ್ರಧಾನಮಂತ್ರಿ ಹೇಳಿದರು.
2047ರಲ್ಲಿ ಭಾರತವು ತತ್ವಶಾಸ್ತ್ರ ಮತ್ತು ವಿಜ್ಞಾನ, ಸೇವೆ ಮತ್ತು ಸಾಮಾಜಿಕ ಸಾಮರಸ್ಯದ ಮೇಲೆ ನಿರ್ಮಿಸಲಾದ ಅದ್ಭುತ ರಾಷ್ಟ್ರವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದೃಷ್ಟಿಕೋನ, ಎಲ್ಲಾ ಸ್ವಯಂಸೇವಕರ ಸಾಮೂಹಿಕ ಪ್ರಯತ್ನ ಮತ್ತು ಅವರ ಅಚಲ ಸಂಕಲ್ಪವಾಗಿದೆ ಎಂದು ಅವರು ಹೇಳಿದರು. ಸಂಘವು ರಾಷ್ಟ್ರದ ಮೇಲಿನ ಅಚಲ ನಂಬಿಕೆಯನ್ನು ಆಧರಿಸಿದೆ, ಆಳವಾದ ಸೇವಾ ಪ್ರಜ್ಞೆಯಿಂದ ಪ್ರೇರಿತವಾಗಿದೆ, ತ್ಯಾಗ ಮತ್ತು ತಪಃಶಕ್ತಿಯಲ್ಲಿ ಹದಗೊಳಿಸಲ್ಪಟ್ಟಿದೆ, ಮೌಲ್ಯಗಳು ಮತ್ತು ಶಿಸ್ತಿನಿಂದ ಪರಿಷ್ಕರಿಸಲ್ಪಟ್ಟಿದೆ ಮತ್ತು ರಾಷ್ಟ್ರೀಯ ಕರ್ತವ್ಯವನ್ನು ಜೀವನದ ಅತ್ಯುನ್ನತ ಕರ್ತವ್ಯವೆಂದು ಪರಿಗಣಿಸುವ ಮೂಲಕ ದೃಢವಾಗಿ ನಿಂತಿದೆ ಎಂದು ಅವರು ರಾಷ್ಟ್ರಕ್ಕೆ ನೆನಪಿಸಿದರು. ಭಾರತ ಮಾತೆಯ ಸೇವೆ ಮಾಡುವ ದೊಡ್ಡ ಕನಸಿನೊಂದಿಗೆ ಸಂಘವು ಬೇರ್ಪಡಿಸಲಾಗದ ಸಂಬಂಧ ಹೊಂದಿದೆ ಎಂದು ಅವರು ಹೇಳಿದರು.
"ಭಾರತೀಯ ಸಂಸ್ಕೃತಿಯ ಬೇರುಗಳನ್ನು ಆಳವಾಗಿಸುವುದು ಮತ್ತು ಬಲಪಡಿಸುವುದು ಸಂಘದ ಆದರ್ಶವಾಗಿದೆ. ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ಹೆಮ್ಮೆಯನ್ನು ತುಂಬಲು ಅದು ಶ್ರಮಿಸುತ್ತಿದೆ. ಪ್ರತಿಯೊಂದು ಹೃದಯದಲ್ಲೂ ಜನಸೇವೆಯ ಜ್ವಾಲೆಯನ್ನು ಬೆಳಗಿಸುವುದು ಇದರ ಗುರಿಯಾಗಿದೆ. ಭಾರತೀಯ ಸಮಾಜವನ್ನು ಸಾಮಾಜಿಕ ನ್ಯಾಯದ ಸಂಕೇತವನ್ನಾಗಿ ಮಾಡುವುದು ಇದರ ದೃಷ್ಟಿಕೋನವಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿಯನ್ನು ಹೆಚ್ಚಿಸುವುದು ಇದರ ಧ್ಯೇಯವಾಗಿದೆ. ರಾಷ್ಟ್ರಕ್ಕೆ ಸುರಕ್ಷಿತ ಮತ್ತು ಉಜ್ವಲ ಭವಿಷ್ಯವನ್ನು ಖಚಿತಪಡಿಸುವುದು ಇದರ ಸಂಕಲ್ಪವಾಗಿದೆ" ಎಂದು ಶ್ರೀ ಮೋದಿ ಹೇಳಿದರು ಮತ್ತು ಈ ಐತಿಹಾಸಿಕ ಸಂದರ್ಭದಲ್ಲಿ ಎಲ್ಲರನ್ನೂ ಅಭಿನಂದಿಸುವ ಮೂಲಕ ತಮ್ಮ ಮಾತು ಮುಗಿಸಿದರು.
ಕೇಂದ್ರ ಸಂಸ್ಕೃತಿ ಸಚಿವ ಶ್ರೀ ಗಜೇಂದ್ರ ಸಿಂಗ್ ಶೇಕಾವತ್, ದೆಹಲಿ ಮುಖ್ಯಮಂತ್ರಿ ಶ್ರೀಮತಿ ರೇಖಾ ಗುಪ್ತಾ, ಆರ್.ಎಸ್.ಎಸ್ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ), ಶ್ರೀ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ
ಆರ್.ಎಸ್.ಎಸ್ ನ ಶತಮಾನೋತ್ಸವದ ಅಂಗವಾಗಿ, ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಆರ್ ಎಸ್ ಎಸ್ ಕೊಡುಗೆಗಳನ್ನು ಒತ್ತಿ ಹೇಳುವ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು.
1925ರಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರು ಸ್ಥಾಪಿಸಿದ ಆರ್ ಎಸ್ ಎಸ್, ನಾಗರಿಕರಲ್ಲಿ ಸಾಂಸ್ಕೃತಿಕ ಅರಿವು, ಶಿಸ್ತು, ಸೇವೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಗುರಿಯೊಂದಿಗೆ ಸ್ವಯಂಸೇವಕ ಆಧಾರಿತ ಸಂಘಟನೆಯಾಗಿ ಸ್ಥಾಪಿಸಲ್ಪಟ್ಟಿತು.
ರಾಷ್ಟ್ರ ಪುನರ್ನಿರ್ಮಾಣಕ್ಕಾಗಿ ಆರ್ ಎಸ್ ಎಸ್ ಒಂದು ವಿಶಿಷ್ಟ ಜನರಿಂದ ಪೋಷಿಸಲ್ಪಟ್ಟ ಚಳುವಳಿಯಾಗಿದೆ. ಇದರ ಉದಯವನ್ನು ಶತಮಾನಗಳ ವಿದೇಶಿ ಆಳ್ವಿಕೆಗೆ ಪ್ರತಿಕ್ರಿಯೆಯಾಗಿ ನೋಡಲಾಗಿದೆ, ಅದರ ನಿರಂತರ ಬೆಳವಣಿಗೆಗೆ ಧರ್ಮದಲ್ಲಿ ಬೇರೂರಿರುವ ಭಾರತದ ರಾಷ್ಟ್ರೀಯ ಹೆಮ್ಮೆಯ ದೃಷ್ಟಿಕೋನದ ಭಾವನಾತ್ಮಕ ಅನುರಣನವೇ ಕಾರಣವಾಗಿದೆ.
ಸಂಘದ ಪ್ರಮುಖ ಒತ್ತು ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ನಿರ್ಮಾಣವಾಗಿದೆ. ಇದು ಮಾತೃಭೂಮಿಯ ಬಗ್ಗೆ ಭಕ್ತಿ, ಶಿಸ್ತು, ಸಂಯಮ, ಧೈರ್ಯ ಮತ್ತು ಶೌರ್ಯವನ್ನು ತುಂಬುತ್ತದೆ. ಸಂಘದ ಅಂತಿಮ ಗುರಿ ಭಾರತದ "ಸರ್ವಾಂಗೀಣ ಉನ್ನತಿ" (ಸರ್ವಾಂಗೀಣ ಅಭಿವೃದ್ಧಿ), ಇದಕ್ಕಾಗಿ ಪ್ರತಿಯೊಬ್ಬ ಸ್ವಯಂಸೇವಕನು ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಾನೆ.
ಕಳೆದ ಶತಮಾನದಲ್ಲಿ, ಆರ್ ಎಸ್ ಎಸ್ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಮತ್ತು ವಿಪತ್ತು ಪರಿಹಾರದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರವಾಹ, ಭೂಕಂಪ ಮತ್ತು ಚಂಡಮಾರುತಗಳು ಸೇರಿದಂತೆ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಆರ್ ಎಸ್ ಎಸ್ ಸ್ವಯಂಸೇವಕರು ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಇದರ ಜೊತೆಗೆ, ಆರ್.ಎಸ್.ಎಸ್ ನ ವಿವಿಧ ಅಂಗಸಂಸ್ಥೆಗಳು ಯುವಜನರು, ಮಹಿಳೆಯರು ಮತ್ತು ರೈತರ ಸಬಲೀಕರಣ, ಸಾರ್ವಜನಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಸಮುದಾಯಗಳನ್ನು ಬಲಪಡಿಸುವಲ್ಲಿ ಕೊಡುಗೆ ನೀಡಿವೆ.
ಶತಮಾನೋತ್ಸವ ಆಚರಣೆಗಳು ಆರ್.ಎಸ್.ಎಸ್ ನ ಐತಿಹಾಸಿಕ ಸಾಧನೆಗಳನ್ನು ಗೌರವಿಸುವುದಲ್ಲದೆ, ಭಾರತದ ಸಾಂಸ್ಕೃತಿಕ ಪ್ರಯಾಣಕ್ಕೆ ಮತ್ತು ಅದರ ರಾಷ್ಟ್ರೀಯ ಏಕತೆಯ ಸಂದೇಶಕ್ಕೆ ಅದರ ನಿರಂತರ ಕೊಡುಗೆಗಳನ್ನು ಎತ್ತಿ ತೋರಿಸುತ್ತವೆ.
*****
(Release ID: 2173662)
Visitor Counter : 13