ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನವನ್ನು ಉದ್ದೇಶಿಸಿ ಮಾತನಾಡಿದರು


ಭಾರತವು ಎಲ್ಲರಿಗೂ ಅವಕಾಶಗಳನ್ನು ಒದಗಿಸುವ ಮುಕ್ತ ವೇದಿಕೆಗಳನ್ನು ನಿರ್ಮಿಸಿದೆ, 'ಎಲ್ಲರಿಗಾಗಿ ವೇದಿಕೆಗಳು, ಎಲ್ಲರಿಗೂ ಪ್ರಗತಿ': ಪ್ರಧಾನಮಂತ್ರಿ

ಜಾಗತಿಕ ಅಡೆತಡೆಗಳು ಮತ್ತು ಅನಿಶ್ಚಿತತೆಯ ಹೊರತಾಗಿಯೂ, ಭಾರತದ ಬೆಳವಣಿಗೆ ಗಮನಾರ್ಹವಾಗಿ ಉಳಿದಿದೆ: ಪ್ರಧಾನಮಂತ್ರಿ

ಭಾರತವು ಸ್ವಾವಲಂಬಿಯಾಗಬೇಕು; ಭಾರತದಲ್ಲಿ ತಯಾರಿಸಬಹುದಾದ ಪ್ರತಿಯೊಂದು ಉತ್ಪನ್ನವನ್ನು ಭಾರತದಲ್ಲೇ ತಯಾರಿಸಬೇಕು: ಪ್ರಧಾನಮಂತ್ರಿ

ಭಾರತದಲ್ಲಿ, ನಾವು ಸಶಕ್ತ ರಕ್ಷಣಾ ವಲಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಅಲ್ಲಿ ಪ್ರತಿಯೊಂದು ಘಟಕವೂ 'ಮೇಡ್ ಇನ್ ಇಂಡಿಯಾ'ದ ಗುರುತನ್ನು ಹೊಂದಿರುತ್ತದೆ: ಪ್ರಧಾನಮಂತ್ರಿ

ಜಿ ಎಸ್ ಟಿಯಲ್ಲಿನ ರಚನಾತ್ಮಕ ಸುಧಾರಣೆಗಳು ಭಾರತದ ಬೆಳವಣಿಗೆಯ ಕಥೆಗೆ ಹೊಸ ಆಯಾಮ ನೀಡಲು ಸಿದ್ಧವಾಗಿವೆ: ಪ್ರಧಾನಮಂತ್ರಿ

Posted On: 25 SEP 2025 11:55AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಆಯೋಜಿಸಲಾದ 'ಉತ್ತರ ಪ್ರದೇಶ ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನ 2025'ಕ್ಕೆ ಚಾಲನೆ ನೀಡಿ, ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸಮಸ್ತ ವ್ಯಾಪಾರಿಗಳು, ಹೂಡಿಕೆದಾರರು, ಉದ್ಯಮಿಗಳು ಹಾಗೂ ಯುವ ಪ್ರತಿನಿಧಿಗಳನ್ನು ಪ್ರಧಾನಮಂತ್ರಿಯವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಪ್ರದರ್ಶನದಲ್ಲಿ 2,200ಕ್ಕೂ ಅಧಿಕ ಪ್ರದರ್ಶಕರು ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಅನಾವರಣಗೊಳಿಸುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಅವರು ಹರ್ಷ ವ್ಯಕ್ತಪಡಿಸಿದರು. ಈ ಬಾರಿಯ ವ್ಯಾಪಾರ ಪ್ರದರ್ಶನಕ್ಕೆ 'ರಷ್ಯಾ' ಪಾಲುದಾರ ರಾಷ್ಟ್ರವಾಗಿರುವುದು, ಉಭಯ ದೇಶಗಳ ನಡುವಿನ ಕಾಲಪರೀಕ್ಷಿತ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ದ್ಯೋತಕವಾಗಿದೆ ಎಂದು ಶ್ರೀ ಮೋದಿಯವರು ವಿಶೇಷವಾಗಿ ಪ್ರಸ್ತಾಪಿಸಿದರು. ಈ ಬೃಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅವರ ಸರ್ಕಾರದ ಸಹೋದ್ಯೋಗಿಗಳು ಮತ್ತು ಇತರ ಎಲ್ಲ ಪಾಲುದಾರರಿಗೆ ಅಭಿನಂದನೆ ಸಲ್ಲಿಸಿದರು. ಸಮಾಜದ ಕಟ್ಟಕಡೆಯ ವ್ಯಕ್ತಿಯ ಏಳಿಗೆಯಾದ 'ಅಂತ್ಯೋದಯ'ದ ಪಥವನ್ನು ದೇಶಕ್ಕೆ ತೋರಿದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿಯಂದೇ ಈ ಶುಭ ಸಂದರ್ಭ ಒದಗಿ ಬಂದಿರುವುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಅಂತ್ಯೋದಯದ ನಿಜವಾದ ಅರ್ಥವೇ, ಅಭಿವೃದ್ಧಿಯ ಫಲಗಳು ಸಮಾಜದ ಅತ್ಯಂತ ಬಡವರನ್ನೂ ತಲುಪುವಂತೆ ಮಾಡುವುದು ಮತ್ತು ಎಲ್ಲ ಬಗೆಯ ತಾರತಮ್ಯವನ್ನು ನಿರ್ಮೂಲನೆ ಮಾಡುವುದಾಗಿದೆ ಎಂದು ಅವರು ಪ್ರತಿಪಾದಿಸಿದರು. ಭಾರತವು ಇದೀಗ ಇದೇ ಸಮಗ್ರ ಅಭಿವೃದ್ಧಿ ಮಾದರಿಯನ್ನು ಇಡೀ ವಿಶ್ವಕ್ಕೆ ಅರ್ಪಿಸುತ್ತಿದೆ ಎಂದು ಅವರು ಹೆಮ್ಮೆಯಿಂದ ನುಡಿದರು.

ಭಾರತದ ಫಿನ್ ಟೆಕ್ ವಲಯಕ್ಕೆ ದೊರೆತ ಜಾಗತಿಕ ಮನ್ನಣೆಯನ್ನು ಉದಾಹರಣೆಯಾಗಿ ನೀಡಿದ ಪ್ರಧಾನಮಂತ್ರಿಯವರು, ಸರ್ವಸ್ಪರ್ಶಿ ಅಭಿವೃದ್ಧಿಗೆ ಇದು ನೀಡುತ್ತಿರುವ ಕೊಡುಗೆಯೇ ಇದರ ಅತ್ಯಂತ ಮಹತ್ವದ ಲಕ್ಷಣವಾಗಿದೆ ಎಂದು ಬಣ್ಣಿಸಿದರು. ಯುಪಿಐ, ಆಧಾರ್, ಡಿಜಿಲಾಕರ್ ಮತ್ತು ಒಎನ್ಡಿಸಿಯಂತಹ ಮುಕ್ತ ವೇದಿಕೆಗಳನ್ನು ಭಾರತವು ನಿರ್ಮಿಸಿದೆ ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಈ ವೇದಿಕೆಗಳು ಎಲ್ಲರನ್ನೂ ಜೊತೆಯಲ್ಲಿ ಕೊಂಡೊಯ್ಯುತ್ತಾ, ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳನ್ನು ಒದಗಿಸುತ್ತವೆ. "ಎಲ್ಲರಿಗಾಗಿ ವೇದಿಕೆಗಳು, ಎಲ್ಲರ ಪ್ರಗತಿ" (Platforms for All, Progress for All) ಎಂಬುದು ಇದರ ಹಿಂದಿನ ಮೂಲತತ್ವವಾಗಿದೆ ಎಂದು ಅವರು ಪ್ರತಿಪಾದಿಸಿದರು. ಈ ವೇದಿಕೆಗಳ ಪ್ರಭಾವವು ಇಂದು ಭಾರತದಾದ್ಯಂತ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮಾಲ್ ಗಳಲ್ಲಿ ಶಾಪಿಂಗ್ ಮಾಡುವವರಿಂದ ಹಿಡಿದು ಬೀದಿಬದಿಯ ಚಹಾ ಮಾರಾಟಗಾರರವರೆಗೆ ಪ್ರತಿಯೊಬ್ಬರೂ ಯುಪಿಐ ಬಳಸುತ್ತಿದ್ದಾರೆ ಎಂದು ಪ್ರಧಾನಿ ತಿಳಿಸಿದರು. ಒಂದು ಕಾಲದಲ್ಲಿ ಕೇವಲ ದೊಡ್ಡ ಕಂಪನಿಗಳಿಗೆ ಮಾತ್ರ ಲಭ್ಯವಿದ್ದ  ಔಪಚಾರಿಕ ಸಾಲ ಸೌಲಭ್ಯವು, ಇಂದು 'ಪಿಎಂ ಸ್ವನಿಧಿ' ಯೋಜನೆಯ ಮೂಲಕ ಬೀದಿ ಬದಿ ವ್ಯಾಪಾರಿಗಳ ಮನೆ ಬಾಗಿಲಿಗೆ ತಲುಪುತ್ತಿದೆ ಎಂದು ಅವರು ಹೇಳಿದರು.

ಸರ್ಕಾರಿ ಇ-ಮಾರ್ಕೆಟ್ ಪ್ಲೇಸ್ (GeM) ಅನ್ನು ಮತ್ತೊಂದು ಪರಿವರ್ತಕ ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ಮೋದಿಯವರು, ಒಂದು ಕಾಲದಲ್ಲಿ ಸರ್ಕಾರಕ್ಕೆ ಸರಕುಗಳನ್ನು ಮಾರಾಟ ಮಾಡುವುದು ದೊಡ್ಡ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿತ್ತು ಎಂದು ಸ್ಮರಿಸಿದರು. ಇಂದು, ಸುಮಾರು 25 ಲಕ್ಷ ಮಾರಾಟಗಾರರು ಮತ್ತು ಸೇವಾ ಪೂರೈಕೆದಾರರು GeM ಪೋರ್ಟಲ್ ಗೆ ಸಂಪರ್ಕಗೊಂಡಿದ್ದಾರೆ. ಇವರಲ್ಲಿ ಸಣ್ಣ ವ್ಯಾಪಾರಿಗಳು, ಉದ್ಯಮಿಗಳು ಮತ್ತು ಅಂಗಡಿಯವರು ಸೇರಿದ್ದು, ಅವರು ಈಗ ನೇರವಾಗಿ ಭಾರತ ಸರ್ಕಾರಕ್ಕೆ ಮಾರಾಟ ಮಾಡಲು ಸಾಧ್ಯವಾಗಿದೆ. ಇಲ್ಲಿಯವರೆಗೆ, ಸರ್ಕಾರವು GeM ಮೂಲಕ ₹15 ಲಕ್ಷ ಕೋಟಿ ಮೌಲ್ಯದ ಸರಕು ಮತ್ತು ಸೇವೆಗಳನ್ನು ಖರೀದಿಸಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಇದರಲ್ಲಿ, ಸರಿಸುಮಾರು ₹7 ಲಕ್ಷ ಕೋಟಿ ಮೌಲ್ಯದ ಖರೀದಿಗಳನ್ನು MSMEಗಳು ಮತ್ತು ಸಣ್ಣ ಕೈಗಾರಿಕೆಗಳಿಂದ ಮಾಡಲಾಗಿದೆ. ಹಿಂದಿನ ಸರ್ಕಾರಗಳ ಕಾಲದಲ್ಲಿ ಇಂತಹ ಸನ್ನಿವೇಶವನ್ನು ಊಹಿಸಲೂ ಸಾಧ್ಯವಿರಲಿಲ್ಲ ಎಂದು ಅವರು ಹೇಳಿದರು. ಈಗ, ದೇಶದ ದೂರದ ಮೂಲೆಯಲ್ಲಿರುವ ಒಂದು ಸಣ್ಣ ಅಂಗಡಿಯವರೂ ಸಹ GeM ಪೋರ್ಟಲ್ ನಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದುವೇ ಅಂತ್ಯೋದಯದ ಸಾರ ಮತ್ತು ಭಾರತದ ಅಭಿವೃದ್ಧಿ ಮಾದರಿಯ ಅಡಿಪಾಯ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು.

ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ಸಾಗುತ್ತಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿಯವರು, "ಜಾಗತಿಕ ಅಡೆತಡೆಗಳು ಮತ್ತು ಅನಿಶ್ಚಿತತೆಯ ನಡುವೆಯೂ, ಭಾರತದ ಬೆಳವಣಿಗೆ ಆಕರ್ಷಕವಾಗಿ ಉಳಿದಿದೆ" ಎಂದು ಹೇಳಿದರು. ಅಡೆತಡೆಗಳು ಭಾರತವನ್ನು ಬೇರೆಡೆಗೆ ತಿರುಗಿಸುವುದಿಲ್ಲ, ಬದಲಿಗೆ ಅವು ಹೊಸ ದಿಕ್ಕುಗಳನ್ನು ಬಹಿರಂಗಪಡಿಸುತ್ತವೆ ಎಂದು ಅವರು ಹೇಳಿದರು. ಈ ಸವಾಲುಗಳ ಮಧ್ಯೆಯೂ ಭಾರತವು ಮುಂಬರುವ ದಶಕಗಳಿಗೆ ಬಲವಾದ ಅಡಿಪಾಯವನ್ನು ಹಾಕುತ್ತಿದೆ. ರಾಷ್ಟ್ರದ ಸಂಕಲ್ಪ ಮತ್ತು ಮಾರ್ಗದರ್ಶಿ ಮಂತ್ರವು ಆತ್ಮನಿರ್ಭರ ಭಾರತವಾಗಿದೆ ಎಂದು ಶ್ರೀ ಮೋದಿಯವರು ಪುನರುಚ್ಚರಿಸಿದರು. ಇತರರ ಮೇಲೆ ಅವಲಂಬಿತವಾಗಿರುವುದಕ್ಕಿಂತ ಹೆಚ್ಚಿನ ಅಸಹಾಯಕತೆ ಬೇರೊಂದಿಲ್ಲ ಎಂದು ಅವರು ದೃಢಪಡಿಸಿದರು. ಬದಲಾಗುತ್ತಿರುವ ಜಗತ್ತಿನಲ್ಲಿ, ಒಂದು ದೇಶವು ಇತರರ ಮೇಲೆ ಹೆಚ್ಚು ಅವಲಂಬಿತವಾದರೆ, ಅದರ ಬೆಳವಣಿಗೆ ಅಷ್ಟೇ ರಾಜಿಗೊಳ್ಳುತ್ತದೆ. "ಭಾರತವು ಸ್ವಾವಲಂಬಿಯಾಗಬೇಕು. ಭಾರತದಲ್ಲಿ ತಯಾರಿಸಬಹುದಾದ ಪ್ರತಿಯೊಂದು ಉತ್ಪನ್ನವನ್ನು ಭಾರತದಲ್ಲೇ ಉತ್ಪಾದಿಸಬೇಕು" ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಉದ್ಯಮಿಗಳು, ವ್ಯಾಪಾರಿಗಳು ಮತ್ತು ನವೋದ್ಯಮಿಗಳ ಈ ದೊಡ್ಡ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಅವರು ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಪ್ರಮುಖ ಪಾಲುದಾರರು ಎಂದು ತಿಳಿಸಿದರು, ಮತ್ತು ಭಾರತದ ಸ್ವಾವಲಂಬನೆಯನ್ನು ಬಲಪಡಿಸುವಂತಹ ವ್ಯಾಪಾರ ಮಾದರಿಗಳನ್ನು ವಿನ್ಯಾಸಗೊಳಿಸಲು ಅವರಿಗೆ ಕರೆ ನೀಡಿದರು.

ಸರ್ಕಾರವು 'ಮೇಕ್ ಇನ್ ಇಂಡಿಯಾ' ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಸಂಪೂರ್ಣ ಗಮನ ಹರಿಸಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ದೇಶದೊಳಗೆ "ಚಿಪ್ಗಳಿಂದ ಹಿಡಿದು ಹಡಗುಗಳವರೆಗೆ" ಎಲ್ಲವನ್ನೂ ಉತ್ಪಾದಿಸುವ ದೃಷ್ಟಿಕೋನವನ್ನು ಒತ್ತಿ ಹೇಳಿದರು. ಇದನ್ನು ಬೆಂಬಲಿಸಲು, ಸರ್ಕಾರವು ಉದ್ಯಮ ಸ್ನೇಹಿ ವಾತಾವರಣವನ್ನು ಸುಧಾರಿಸಲು ನಿರಂತರವಾಗಿ ಶ್ರಮಿಸುತ್ತಿದೆ. 40,000ಕ್ಕೂ ಹೆಚ್ಚು ಅನಗತ್ಯ ನಿಯಮಾವಳಿಗಳನ್ನು ರದ್ದುಪಡಿಸಲಾಗಿದೆ ಮತ್ತು ಸಣ್ಣಪುಟ್ಟ ವ್ಯಾಪಾರ ದೋಷಗಳಿಗೆ ಕಾನೂನು ಪ್ರಕರಣಗಳನ್ನು ಎದುರಿಸಬೇಕಾಗಿದ್ದ ನೂರಾರು ನಿಯಮಗಳನ್ನು ಅಪರಾಧಮುಕ್ತಗೊಳಿಸಲಾಗಿದೆ ಎಂದು ಶ್ರೀ ಮೋದಿಯವರು ತಿಳಿಸಿದರು. ಸರ್ಕಾರವು ಉದ್ಯಮಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದರು. ಆದಾಗ್ಯೂ, ಸರ್ಕಾರಕ್ಕಿರುವ ಕೆಲವು ಪ್ರಮುಖ ನಿರೀಕ್ಷೆಗಳನ್ನೂ ಅವರು ಹಂಚಿಕೊಂಡರು. ತಯಾರಾಗುವ ಎಲ್ಲಾ ಉತ್ಪನ್ನಗಳು ಅತ್ಯುನ್ನತ ಗುಣಮಟ್ಟವನ್ನು ಹೊಂದಿರಬೇಕು ಎಂದು ಅವರು ಆಗ್ರಹಿಸಿದರು. ನಾಗರಿಕರು ದೇಶೀಯ ಉತ್ಪನ್ನಗಳ ಗುಣಮಟ್ಟದಲ್ಲಿ ನಿರಂತರ ಸುಧಾರಣೆಯನ್ನು ನಿರೀಕ್ಷಿಸುತ್ತಿದ್ದು, ಗುಣಮಟ್ಟದಲ್ಲಿ ಯಾವುದೇ ರಾಜಿ ಇರಬಾರದು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಇಂದು ಪ್ರತಿಯೊಬ್ಬ ಭಾರತೀಯನೂ 'ಸ್ವದೇಶಿ' ಚಿಂತನೆಗೆ ಹತ್ತಿರವಾಗುತ್ತಿದ್ದಾನೆ ಮತ್ತು ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಲು ಬಯಸುತ್ತಿದ್ದಾನೆ. "ಇದು ಸ್ವದೇಶಿ" ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಭಾವನೆ ದೇಶಾದ್ಯಂತ ಮೊಳಗುತ್ತಿದೆ. ಈ ಮಂತ್ರವನ್ನು ಅಳವಡಿಸಿಕೊಂಡು, 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಅವರು ವ್ಯಾಪಾರಿಗಳಿಗೆ ಕರೆ ನೀಡಿದರು.

ಸಂಶೋಧನೆಯ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, ಈ ಕ್ಷೇತ್ರದಲ್ಲಿ ಹೂಡಿಕೆಯು ಹಲವು ಪಟ್ಟು ಹೆಚ್ಚಾಗಬೇಕು ಎಂದು ಹೇಳಿದರು. ಈ ವಿಸ್ತರಣೆಯನ್ನು ಬೆಂಬಲಿಸಲು ಸರ್ಕಾರವು ಈಗಾಗಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ದೃಢಪಡಿಸಿದರು. ಸಂಶೋಧನೆಯಲ್ಲಿ ಖಾಸಗಿ ಹೂಡಿಕೆಯು ಈಗ ಅತ್ಯಗತ್ಯವಾಗಿದೆ ಮತ್ತು ಅದನ್ನು ಸಕ್ರಿಯವಾಗಿ ಮುಂದುವರಿಸಬೇಕು ಎಂದು ಶ್ರೀ ಮೋದಿಯವರು ಒತ್ತಿ ಹೇಳಿದರು. ಇದನ್ನು "ಕಾಲದ ಬೇಡಿಕೆ" ಎಂದು ಬಣ್ಣಿಸಿದ ಅವರು, ದೇಶೀಯ ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಸಮಗ್ರ ಪರಿಸರ ವ್ಯವಸ್ಥೆಯನ್ನು ರಚಿಸುವಂತೆ ಕರೆ ನೀಡಿದರು.

ಉತ್ತರ ಪ್ರದೇಶವು ಅಸಾಧಾರಣ ಹೂಡಿಕೆ ಸಾಮರ್ಥ್ಯದಿಂದ ತುಂಬಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಇತ್ತೀಚಿನ ವರ್ಷಗಳಲ್ಲಿ ನಡೆದ ಸಂಪರ್ಕ ಕ್ರಾಂತಿಯು ಸಾಗಾಣಿಕೆ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ ಎಂದು ಹೇಳಿದರು. ಉತ್ತರ ಪ್ರದೇಶವು ಈಗ ದೇಶದಲ್ಲೇ ಅತಿ ಹೆಚ್ಚು ಎಕ್ಸ್ಪ್ರೆಸ್ ವೇಗಳನ್ನು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿದೆ. ಅಲ್ಲದೆ, ಎರಡು ಪ್ರಮುಖ ಮೀಸಲಾದ ಸರಕು ಸಾಗಣೆ ಕಾರಿಡಾರ್ಗಳಿಗೆ ಇದು ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪಾರಂಪರಿಕ ಪ್ರವಾಸೋದ್ಯಮದಲ್ಲಿ ಯುಪಿ ಮೊದಲ ಸ್ಥಾನದಲ್ಲಿದೆ ಮತ್ತು 'ನಮಾಮಿ ಗಂಗೆ'ಯಂತಹ ಉಪಕ್ರಮಗಳು ರಾಜ್ಯವನ್ನು ಕ್ರೂಸ್ ಪ್ರವಾಸೋದ್ಯಮದ ನಕ್ಷೆಯಲ್ಲಿ ಸೇರಿಸಿವೆ ಎಂದು ಶ್ರೀ ಮೋದಿಯವರು ನುಡಿದರು. 'ಒಂದು ಜಿಲ್ಲೆ, ಒಂದು ಉತ್ಪನ್ನ' ಯೋಜನೆಯು ಯುಪಿಯ ವಿವಿಧ ಜಿಲ್ಲೆಗಳ ಉತ್ಪನ್ನಗಳು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪಲು ನೆರವಾಗಿದೆ ಎಂದು ಅವರು ಒತ್ತಿ ಹೇಳಿದರು. ಉತ್ಪಾದನಾ ವಲಯದಲ್ಲಿ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಉತ್ಪಾದನೆಯಲ್ಲಿ ಯುಪಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಕಳೆದ ದಶಕದಲ್ಲಿ ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದರಲ್ಲಿ ಯುಪಿಯ ಪಾತ್ರ ಮಹತ್ವದ್ದಾಗಿದ್ದು, ದೇಶದಲ್ಲಿ ತಯಾರಾಗುವ ಒಟ್ಟು ಮೊಬೈಲ್ ಫೋನ್ ಗಳಲ್ಲಿ ಸುಮಾರು ಶೇಕಡ 55 ರಷ್ಟನ್ನು ಇದೇ ರಾಜ್ಯ ಉತ್ಪಾದಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಸೆಮಿಕಂಡಕ್ಟರ್ ವಲಯದಲ್ಲಿ ಭಾರತದ ಸ್ವಾವಲಂಬನೆಯನ್ನು ಯುಪಿ ಮತ್ತಷ್ಟು ಬಲಪಡಿಸಲಿದೆ. ಇಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಒಂದು ಪ್ರಮುಖ ಸೆಮಿಕಂಡಕ್ಟರ್ ಘಟಕವು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಅವರು ಹೇಳಿದರು.

ರಕ್ಷಣಾ ವಲಯವನ್ನು ಮತ್ತೊಂದು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಶ್ರೀ ಮೋದಿಯವರು, ಭಾರತದ ಸಶಸ್ತ್ರ ಪಡೆಗಳು ದೇಶೀಯ ಪರಿಹಾರಗಳನ್ನು ಬಯಸುತ್ತಿವೆ ಮತ್ತು ಬಾಹ್ಯ ಅವಲಂಬನೆಯನ್ನು ಕಡಿಮೆ ಮಾಡುವ ಗುರಿ ಹೊಂದಿವೆ ಎಂದು ಹೇಳಿದರು. "ಭಾರತದಲ್ಲಿ, ನಾವು ಸಶಕ್ತ ರಕ್ಷಣಾ ವಲಯವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಅಲ್ಲಿ ಪ್ರತಿಯೊಂದು ಘಟಕವೂ 'ಮೇಡ್ ಇನ್ ಇಂಡಿಯಾ'ದ ಗುರುತನ್ನು ಹೊಂದಿರುತ್ತದೆ" ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ಪರಿವರ್ತನೆಯಲ್ಲಿ ಉತ್ತರ ಪ್ರದೇಶದ ಮಹತ್ವದ ಪಾತ್ರವನ್ನು ಅವರು ಎತ್ತಿ ತೋರಿಸಿದರು, ರಷ್ಯಾದ ಸಹಯೋಗದೊಂದಿಗೆ ಸ್ಥಾಪಿಸಲಾದ ಕಾರ್ಖಾನೆಯಲ್ಲಿ ಶೀಘ್ರದಲ್ಲೇ AK-203 ರೈಫಲ್ ಗಳ ಉತ್ಪಾದನೆ ಪ್ರಾರಂಭವಾಗಲಿದೆ ಎಂದು ಹೇಳಿದರು. ಯುಪಿಯಲ್ಲಿ ರಕ್ಷಣಾ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅಲ್ಲಿ ಈಗಾಗಲೇ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಇತರ ಶಸ್ತ್ರಾಸ್ತ್ರ ವ್ಯವಸ್ಥೆಗಳ ಉತ್ಪಾದನೆ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿಯವರು ಎಲ್ಲ ಪಾಲುದಾರರನ್ನು ಉದ್ದೇಶಿಸಿ, ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡಲು ಮತ್ತು ಉತ್ಪಾದನೆ ಮಾಡಲು ಕರೆ ನೀಡಿದರು, ಅಲ್ಲಿ ಲಕ್ಷಾಂತರ MSMEಗಳ (ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಬಲವಾದ ಮತ್ತು ವಿಸ್ತರಿಸುತ್ತಿರುವ ಜಾಲವಿದೆ. ರಾಜ್ಯದೊಳಗೆ ಸಂಪೂರ್ಣ ಉತ್ಪನ್ನಗಳನ್ನು ಉತ್ಪಾದಿಸಲು ಅವರ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಂತೆ ಅವರು ಪ್ರೋತ್ಸಾಹಿಸಿದರು. ಉತ್ತರ ಪ್ರದೇಶ ಸರ್ಕಾರ ಮತ್ತು ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಲು ಸಿದ್ಧವಿದೆ ಎಂದು ಅವರು ಭರವಸೆ ನೀಡಿದರು.

'ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆ' ಎಂಬ ಬದ್ಧತೆಯೊಂದಿಗೆ ಭಾರತವು ತನ್ನ ಕೈಗಾರಿಕೆಗಳು, ವ್ಯಾಪಾರಿಗಳು ಮತ್ತು ನಾಗರಿಕರೊಂದಿಗೆ ದೃಢವಾಗಿ ನಿಂತಿದೆ ಎಂದು ತಿಳಿಸಿದ ಶ್ರೀ ಮೋದಿಯವರು, ಕೇವಲ ಮೂರು ದಿನಗಳ ಹಿಂದೆ ಜಾರಿಗೆ ತರಲಾದ ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳ ಬಗ್ಗೆ ಬೆಳಕು ಚೆಲ್ಲಿದರು. ಇವು "ಭಾರತದ ಬೆಳವಣಿಗೆಯ ಕಥೆಯನ್ನು ಮುನ್ನಡೆಸುವ ರಚನಾತ್ಮಕ ಬದಲಾವಣೆಗಳು" ಎಂದು ಅವರು ಬಣ್ಣಿಸಿದರು. ಈ ಸುಧಾರಣೆಗಳು ಜಿಎಸ್ಟಿ ನೋಂದಣಿಯನ್ನು ಸರಳಗೊಳಿಸುತ್ತವೆ, ತೆರಿಗೆ ವಿವಾದಗಳನ್ನು ಕಡಿಮೆ ಮಾಡುತ್ತವೆ ಮತ್ತು ಎಂ ಎಸ್ ಎಂ ಇಗಳಿಗೆ ಮರುಪಾವತಿಯನ್ನು ವೇಗಗೊಳಿಸುತ್ತವೆ, ಇದರಿಂದ ಪ್ರತಿಯೊಂದು ವಲಯಕ್ಕೂ ಪ್ರಯೋಜನವಾಗಲಿದೆ. ಪಾಲುದಾರರು ಮೂರು ವಿಭಿನ್ನ ಹಂತಗಳನ್ನು ಅನುಭವಿಸಿದ್ದಾರೆ ಎಂದು ಪ್ರಧಾನಮಂತ್ರಿಯವರು ಗಮನಿಸಿದರು—ಜಿ ಎಸ್ ಟಿ ಪೂರ್ವ, ಜಿ ಎಸ್ ಟಿ ನಂತರ, ಮತ್ತು ಈಗಿನ ಮುಂದಿನ ಪೀಳಿಗೆಯ ಜಿ ಎಸ್ ಟಿ ಸುಧಾರಣೆಗಳು—ಮತ್ತು ಇವುಗಳಿಂದ ಆದ ಗಮನಾರ್ಹ ವ್ಯತ್ಯಾಸವನ್ನು ಒತ್ತಿ ಹೇಳಿದರು. ಇದಕ್ಕೆ ಉದಾಹರಣೆಗಳನ್ನು ನೀಡುತ್ತಾ, 2014ಕ್ಕಿಂತ ಮೊದಲು, ಅನೇಕ ತೆರಿಗೆಗಳಿಂದಾಗಿ ವ್ಯಾಪಾರ ವೆಚ್ಚಗಳು ಮತ್ತು ಮನೆಯ ಬಜೆಟ್ಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು ಎಂದು ಹೇಳಿದರು. 2014ಕ್ಕಿಂತ ಮೊದಲು ₹1,000 ಬೆಲೆಯ ಶರ್ಟ್ಗೆ ಸುಮಾರು ₹170 ತೆರಿಗೆ ಇತ್ತು. 2017 ರಲ್ಲಿ ಜಿಎಸ್ಟಿ ಪರಿಚಯಿಸಿದ ನಂತರ, ಇದು ₹50 ಕ್ಕೆ ಇಳಿಯಿತು. ಸೆಪ್ಟೆಂಬರ್ 22 ರಿಂದ ಜಾರಿಗೆ ಬಂದ ಪರಿಷ್ಕೃತ ದರಗಳೊಂದಿಗೆ, ಅದೇ ₹1,000 ಶರ್ಟ್ಗೆ ಈಗ ಕೇವಲ ₹35 ತೆರಿಗೆ ಬೀಳುತ್ತದೆ.

ಇನ್ನೂ ವಿಸ್ತಾರವಾಗಿ ವಿವರಿಸಿದ ಪ್ರಧಾನಮಂತ್ರಿಯವರು, ಜಿ ಎಸ್ ಟಿ ಸುಧಾರಣೆಗಳ ಸ್ಪಷ್ಟ ಪ್ರಯೋಜನಗಳನ್ನು ನಿತ್ಯದ ಜೀವನಕ್ಕೆ ಸಂಬಂಧಿಸಿದ ಉದಾಹರಣೆಯೊಂದಿಗೆ ವಿವರಿಸಿದರು. ಅವರು ಗಮನಿಸಿದಂತೆ, 2014 ರಲ್ಲಿ, ಟೂತ್ ಪೇಸ್ಟ್, ಶಾಂಪೂ, ಹೇರ್ ಆಯಿಲ್ ಮತ್ತು ಶೇವಿಂಗ್ ಕ್ರೀಮ್ ನಂತಹ ಅಗತ್ಯ ವಸ್ತುಗಳಿಗೆ ₹100 ಖರ್ಚು ಮಾಡಿದರೆ ₹31 ತೆರಿಗೆ ಬೀಳುತ್ತಿತ್ತು, ಇದರಿಂದ ಒಟ್ಟು ಬಿಲ್ ₹131 ಆಗುತ್ತಿತ್ತು. 2017 ರಲ್ಲಿ ಜಿ ಎಸ್ ಟಿ ಪರಿಚಯಿಸಿದ ನಂತರ, ಇದೇ ₹100 ಮೌಲ್ಯದ ವಸ್ತುಗಳ ಬೆಲೆ ₹118 ಆಯಿತು, ಇದರಿಂದ ನೇರವಾಗಿ ₹13 ಉಳಿತಾಯವಾಯಿತು. ಇತ್ತೀಚಿನ ಜಿ ಎಸ್ ಟಿ ಸುಧಾರಣೆಗಳೊಂದಿಗೆ, ಈ ವೆಚ್ಚವು ಮತ್ತಷ್ಟು ಕಡಿಮೆಯಾಗಿ ₹105 ಕ್ಕೆ ಇಳಿದಿದೆ—ಇದು 2014ಕ್ಕಿಂತ ಹಿಂದಿನ ದರಗಳಿಗೆ ಹೋಲಿಸಿದರೆ ಒಟ್ಟು ₹26 ರ ಉಳಿತಾಯ ನೀಡುತ್ತದೆ. ಇದು ಸಾಮಾನ್ಯ ಕುಟುಂಬಗಳಿಗೆ ಗಮನಾರ್ಹ ಮಾಸಿಕ ಉಳಿತಾಯವನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. 2014 ರಲ್ಲಿ ಅಗತ್ಯ ವಸ್ತುಗಳಿಗಾಗಿ ವಾರ್ಷಿಕ ₹1 ಲಕ್ಷ ಖರ್ಚು ಮಾಡುತ್ತಿದ್ದ ಕುಟುಂಬವು ₹20,000–₹25,000 ತೆರಿಗೆಗಳನ್ನು ಪಾವತಿಸುತ್ತಿತ್ತು ಎಂದು ಅವರು ವಿವರಿಸಿದರು. ಇಂದು, ಹೊಸ ಜಿ ಎಸ್ ಟಿ ವ್ಯವಸ್ಥೆಯ ಅಡಿಯಲ್ಲಿ, ಹೆಚ್ಚಿನ ಅಗತ್ಯ ವಸ್ತುಗಳು ಕೇವಲ ಶೇ. 5 ರಷ್ಟು ಜಿಎಸ್ಟಿಗೆ ಒಳಪಡುತ್ತಿರುವುದರಿಂದ, ಅದೇ ಕುಟುಂಬವು ವಾರ್ಷಿಕವಾಗಿ ಕೇವಲ ₹5,000–₹6,000 ಮಾತ್ರ ಪಾವತಿಸುತ್ತದೆ.

ಭಾರತದ ಗ್ರಾಮೀಣ ಆರ್ಥಿಕತೆಯಲ್ಲಿ ಟ್ರಾಕ್ಟರ್ ಗಳ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, 2014ಕ್ಕಿಂತ ಮೊದಲು, ಟ್ರಾಕ್ಟರ್ ಖರೀದಿಗೆ ₹70,000 ಕ್ಕೂ ಹೆಚ್ಚು ತೆರಿಗೆ ಬೀಳುತ್ತಿತ್ತು ಎಂದು ಉಲ್ಲೇಖಿಸಿದರು. ಇಂದು, ಅದೇ ಟ್ರಾಕ್ಟರ್ ಗೆ ಕೇವಲ ₹30,000 ತೆರಿಗೆ ಬೀಳುತ್ತದೆ, ಇದರಿಂದ ರೈತರಿಗೆ ₹40,000 ಕ್ಕೂ ಹೆಚ್ಚು ನೇರ ಉಳಿತಾಯ ಆಗುತ್ತಿದೆ. ಬಡವರಿಗೆ ಪ್ರಮುಖ ಉದ್ಯೋಗ ಮೂಲವಾಗಿರುವ ಮೂರು ಚಕ್ರದ ವಾಹನಗಳು  ಈ ಹಿಂದೆ ₹55,000 ತೆರಿಗೆಗೆ ಒಳಗಾಗುತ್ತಿದ್ದು, ಈಗ ಅದು ₹35,000 ಕ್ಕೆ ಇಳಿದಿದೆ—ಇದರಿಂದ ₹20,000 ಉಳಿತಾಯ ಆಗುತ್ತಿದೆ ಎಂದು ಅವರು ತಿಳಿಸಿದರು. ಅದೇ ರೀತಿ, ಜಿಎಸ್ಟಿ ದರಗಳು ಕಡಿಮೆಯಾದ ಕಾರಣದಿಂದಾಗಿ, ಸ್ಕೂಟರ್ಗಳು ಈಗ ₹8,000 ಅಗ್ಗವಾಗಿದ್ದು ಮತ್ತು ಮೋಟರ್ಸೈಕಲ್ಗಳು 2014ಕ್ಕೆ ಹೋಲಿಸಿದರೆ ₹9,000 ಅಗ್ಗವಾಗಿವೆ. ಈ ಉಳಿತಾಯಗಳು ಬಡವರು, ಹೊಸ ಮಧ್ಯಮ ವರ್ಗ, ಮತ್ತು ಮಧ್ಯಮ ವರ್ಗದವರಿಗೆ ಪ್ರಯೋಜನ ನೀಡುತ್ತಿವೆ ಎಂದು ಶ್ರೀ ಮೋದಿ ಹೇಳಿದರು. ಇದರ ನಡುವೆಯೂ, ಕೆಲವು ರಾಜಕೀಯ ಪಕ್ಷಗಳು ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿವೆ ಎಂದು ಅವರು ಎಚ್ಚರಿಸಿದರು. ವಿರೋಧ ಪಕ್ಷಗಳು ತಮ್ಮ ಆಡಳಿತ ವೈಫಲ್ಯಗಳನ್ನು ಮುಚ್ಚಿಹಾಕಲು ಸುಳ್ಳುಗಳನ್ನು ಹರಡುತ್ತಿವೆ ಎಂದು ಅವರು ಟೀಕಿಸಿದರು, ಮತ್ತು ಅವರ ಆಡಳಿತಾವಧಿಯಲ್ಲಿ ಅತಿಯಾದ ತೆರಿಗೆಯು ಸಾಮಾನ್ಯ ನಾಗರಿಕರ ಮೇಲೆ ಭಾರ ಹಾಕಿತ್ತು ಎಂದು ಪ್ರತಿಪಾದಿಸಿದರು. ತಮ್ಮ ಸರ್ಕಾರವು ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡಿದೆ, ಹಣದುಬ್ಬರವನ್ನು ನಿಯಂತ್ರಿಸಿದೆ, ಮತ್ತು ಜನರ ಆದಾಯ ಮತ್ತು ಉಳಿತಾಯ ಎರಡನ್ನೂ ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ₹12 ಲಕ್ಷದವರೆಗಿನ ಆದಾಯವನ್ನು ತೆರಿಗೆ-ಮುಕ್ತಗೊಳಿಸುವ ಮೂಲಕ ಮತ್ತು ಹೊಸ ಜಿಎಸ್ಟಿ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ, ಈ ವರ್ಷವೊಂದರಲ್ಲೇ ನಾಗರಿಕರಿಗೆ ₹2.5 ಲಕ್ಷ ಕೋಟಿ ಉಳಿತಾಯವಾಗಲಿದೆ ಎಂದು ಅವರು ಗಮನಿಸಿದರು. ರಾಷ್ಟ್ರವು ಜಿ ಎಸ್ ಟಿ ಉಳಿತಾಯ ಉತ್ಸವವನ್ನು ಆಚರಿಸುತ್ತಿದೆ ಎಂದು ಅವರು ಘೋಷಿಸಿದರು ಮತ್ತು ಸಾರ್ವಜನಿಕ ಬೆಂಬಲದೊಂದಿಗೆ ಜಿಎಸ್ಟಿ ಸುಧಾರಣೆಗಳ ಈ ಪ್ರಗತಿ ನಿರಂತರವಾಗಿ ಮುಂದುವರಿಯುತ್ತದೆ ಎಂದು ದೃಢಪಡಿಸಿದರು.

ಭಾರತವು ಇಂದು ಸುಧಾರಣೆಗಳಿಗಾಗಿ ಬಲವಾದ ಇಚ್ಛಾಶಕ್ತಿಯನ್ನು ಹೊಂದಿದೆ, ಇದು ಪ್ರಜಾಪ್ರಭುತ್ವ ಮತ್ತು ರಾಜಕೀಯ ಸ್ಥಿರತೆ, ಮತ್ತು ನೀತಿ ಸ್ಥಿರತೆಯಿಂದ ಬೆಂಬಲಿತವಾಗಿದೆ ಎಂದು ಪ್ರಧಾನಮಂತ್ರಿಯವರು ದೃಢಪಡಿಸಿದರು. ಭಾರತವು ವಿಶಾಲವಾದ, ನುರಿತ ಕಾರ್ಯಪಡೆ ಮತ್ತು ಚೈತನ್ಯದಾಯಕ ಯುವ ಗ್ರಾಹಕರ ನೆಲೆಯನ್ನು ಹೊಂದಿದೆ—ಇದು ಜಾಗತಿಕವಾಗಿ ಬೇರೆ ಯಾವುದೇ ಪ್ರದೇಶದಲ್ಲಿ ಒಟ್ಟಿಗೆ ಕಂಡುಬರದ ಅಪ್ರತಿಮ ಸಂಯೋಜನೆ ಎಂದು ಅವರು ಒತ್ತಿ ಹೇಳಿದರು. ತಮ್ಮ ಬೆಳವಣಿಗೆಯನ್ನು ಉನ್ನತೀಕರಿಸಲು ಬಯಸುವ ಯಾವುದೇ ಹೂಡಿಕೆದಾರರಿಗೆ ಅಥವಾ ಕಂಪನಿಗೆ, ಭಾರತದಲ್ಲಿ ಹೂಡಿಕೆ ಮಾಡುವುದು ಅತ್ಯಂತ ಆಕರ್ಷಕ ಅವಕಾಶ ಎಂದು ಶ್ರೀ ಮೋದಿ ಹೇಳಿದರು. ಭಾರತದಲ್ಲಿ, ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಹೂಡಿಕೆ ಮಾಡುವುದು ಉಭಯ ಪಕ್ಷಗಳಿಗೂ ಗೆಲುವು ತರುವ ಸನ್ನಿವೇಶವಾಗಿದೆ ಎಂದು ಅವರು ಪ್ರತಿಪಾದಿಸಿದರು.  ಎಲ್ಲರ ಸಾಮೂಹಿಕ ಪ್ರಯತ್ನಗಳಿಂದ, ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ಉತ್ತರ ಪ್ರದೇಶ ನಿರ್ಮಾಣವಾಗಲಿದೆ ಎಂದು ದೃಢವಿಶ್ವಾಸ ವ್ಯಕ್ತಪಡಿಸುತ್ತಾ ಪ್ರಧಾನಮಂತ್ರಿಯವರು ತಮ್ಮ ಮಾತುಗಳನ್ನು ಮುಗಿಸಿದರು. ಅಂತಾರಾಷ್ಟ್ರೀಯ ವ್ಯಾಪಾರ ಪ್ರದರ್ಶನದಲ್ಲಿ ಭಾಗವಹಿಸಿದ ಎಲ್ಲರಿಗೂ ಅವರು ಶುಭಾಶಯಗಳನ್ನು ಕೋರಿದರು.

ಈ ಕಾರ್ಯಕ್ರಮದಲ್ಲಿ ಇತರ ಗಣ್ಯರ ಜೊತೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಉಪಸ್ಥಿತರಿದ್ದರು.

ಹಿನ್ನೆಲೆ

'ಮೇಕ್ ಇನ್ ಇಂಡಿಯಾ', 'ವೋಕಲ್ ಫಾರ್ ಲೋಕಲ್' ಮತ್ತು 'ಆತ್ಮನಿರ್ಭರ ಭಾರತ' ಪರಿಕಲ್ಪನೆಗಳಿಗೆ ತಮ್ಮ ಬದ್ಧತೆಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಇಂದು (ಸೆಪ್ಟೆಂಬರ್ 25) ಗೌತಮ ಬುದ್ಧ ನಗರ ಜಿಲ್ಲೆಯ ಗ್ರೇಟರ್ ನೋಯ್ಡಾದಲ್ಲಿ ಉತ್ತರ ಪ್ರದೇಶ ಅಂತರರಾಷ್ಟ್ರೀಯ ವ್ಯಾಪಾರ ಪ್ರದರ್ಶನ-2025ಕ್ಕೆ (UPITS-2025) ಚಾಲನೆ ನೀಡಿದರು.

"ಅತ್ಯುತ್ತಮ ಉತ್ಪನ್ನಗಳ ಮೂಲ ಇಲ್ಲೇ ಆರಂಭ" (Ultimate Sourcing Begins Here) ಎಂಬ ಘೋಷವಾಕ್ಯದೊಂದಿಗೆ ಈ ವ್ಯಾಪಾರ ಪ್ರದರ್ಶನವು ಸೆಪ್ಟೆಂಬರ್ 25 ರಿಂದ 29 ರವರೆಗೆ ನಡೆಯಲಿದೆ. ನಾವೀನ್ಯತೆ, ಏಕೀಕರಣ ಮತ್ತು ಅಂತಾರಾಷ್ಟ್ರೀಕರಣ ಎಂಬ ಮೂರು ಪ್ರಮುಖ ಉದ್ದೇಶಗಳನ್ನು ಇದು ಹೊಂದಿದೆ. ರಫ್ತುದಾರರು, ಸಣ್ಣ ವ್ಯಾಪಾರಗಳು ಮತ್ತು ಗ್ರಾಹಕರಿಗೆ ಅವಕಾಶಗಳನ್ನು ಒದಗಿಸುವ ಸಲುವಾಗಿ, ಮೂರು ಹಂತದ ಖರೀದಿದಾರರ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಇದು ಅಂತಾರಾಷ್ಟ್ರೀಯ ಖರೀದಿದಾರರು, ದೇಶೀಯ ಬಿಸಿನೆಸ್-ಟು-ಬಿಸಿನೆಸ್ (B2B) ಖರೀದಿದಾರರು, ಮತ್ತು ದೇಶೀಯ ಬಿಸಿನೆಸ್-ಟು-ಕನ್ಸ್ಯೂಮರ್ (B2C) ಖರೀದಿದಾರರನ್ನು ಗುರಿಯಾಗಿಸಿಕೊಂಡಿದೆ.

UPITS-2025 ರಾಜ್ಯದ ವೈವಿಧ್ಯಮಯ ಕರಕುಶಲ ಸಂಪ್ರದಾಯಗಳು, ಆಧುನಿಕ ಕೈಗಾರಿಕೆಗಳು, ಸದೃಢ ಎಂ ಎಸ್ ಎಂ ಇಗಳು ಮತ್ತು ಉದಯೋನ್ಮುಖ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಿದೆ. ಕರಕುಶಲ, ಜವಳಿ, ಚರ್ಮ, ಕೃಷಿ, ಆಹಾರ ಸಂಸ್ಕರಣೆ, ಐಟಿ, ಎಲೆಕ್ಟ್ರಾನಿಕ್ಸ್, ಆಯುಷ್ ಸೇರಿದಂತೆ ಹಲವು ಪ್ರಮುಖ ವಲಯಗಳು ಇಲ್ಲಿ ಪ್ರತಿನಿಧಿಸಲ್ಪಡಲಿವೆ. ಅಲ್ಲದೆ, ಉತ್ತರ ಪ್ರದೇಶದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಪಾಕಪದ್ಧತಿಯನ್ನು ಒಂದೇ ಸೂರಿನಡಿ ಅನಾವರಣಗೊಳಿಸಲಾಗುವುದು.

ರಷ್ಯಾ ಈ ಪ್ರದರ್ಶನದಲ್ಲಿ ಪಾಲುದಾರ ರಾಷ್ಟ್ರವಾಗಿ ಭಾಗವಹಿಸುತ್ತಿದ್ದು, ಇದು ದ್ವಿಪಕ್ಷೀಯ ವ್ಯಾಪಾರ, ತಂತ್ರಜ್ಞಾನ ವಿನಿಮಯ ಮತ್ತು ದೀರ್ಘಕಾಲೀನ ಸಹಕಾರಕ್ಕೆ ದಾರಿ ಮಾಡಿಕೊಡುವ ಮೂಲಕ ವ್ಯೂಹಾತ್ಮಕ ಪ್ರಾಮುಖ್ಯತೆಯನ್ನು ಹೆಚ್ಚಿಸಿದೆ. ಈ ವ್ಯಾಪಾರ ಪ್ರದರ್ಶನದಲ್ಲಿ 2,400ಕ್ಕೂ ಹೆಚ್ಚು ಪ್ರದರ್ಶಕರು, 1,25,000 B2B ಸಂದರ್ಶಕರು ಮತ್ತು 4,50,000 B2C ಸಂದರ್ಶಕರು ಭಾಗವಹಿಸಲಿದ್ದಾರೆ.

 

 

*****


(Release ID: 2171188) Visitor Counter : 6