ಸಂಪುಟ
azadi ka amrit mahotsav

ಹಡಗು ನಿರ್ಮಾಣ, ಸಾಗರ ಹಣಕಾಸು ಮತ್ತು ದೇಶೀಯ ಸಾಮರ್ಥ್ಯ ಬಲವರ್ಧನೆಗೆ ಸಮಗ್ರ 4-ಸ್ತಂಭ ವಿಧಾನ


ಭಾರತದ ಹಡಗು ನಿರ್ಮಾಣ ಮತ್ತು ಸಾಗರ ವಲಯವನ್ನು ಪುನರುಜ್ಜೀವನಗೊಳಿಸಲು 69,725 ಕೋಟಿ ರೂಪಾಯಿ ಪ್ಯಾಕೇಜ್‌ಗೆ ಕೇಂದ್ರ ಸಂಪುಟ ಅನುಮೋದನೆ

ಒಟ್ಟು 24,736 ಕೋಟಿ ರೂಪಾಯಿ ನಿಧಿಯೊಂದಿಗೆ ಹಡಗು ನಿರ್ಮಾಣ ಹಣಕಾಸು ನೆರವು ಯೋಜನೆ 2036ರ ಮಾರ್ಚ್ 31 ರವರೆಗೆ ವಿಸ್ತರಣೆ

20,000 ಕೋಟಿ ರೂಪಾಯಿಗಳ ಸಾಗರ ಹೂಡಿಕೆ ನಿಧಿಯೊಂದಿಗೆ ಕಡಲ ಅಭಿವೃದ್ಧಿ ನಿಧಿಗೆ ಅನುಮೋದನೆ

19,989 ಕೋಟಿ ರೂಪಾಯಿ ವೆಚ್ಚದ ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆಯು ದೇಶೀಯ ಹಡಗು ನಿರ್ಮಾಣ ಸಾಮರ್ಥ್ಯವನ್ನು ಒಟ್ಟು 4.5 ಮಿಲಿಯನ್ ಟನ್‌ಗೆ ವಿಸ್ತರಿಸುವ ಗುರಿ ಹೊಂದಿದೆ

Posted On: 24 SEP 2025 3:08PM by PIB Bengaluru

ಸಾಗರ ವಲಯದ ಕಾರ್ಯತಂತ್ರ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ಗುರುತಿಸಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟವು ಭಾರತದ ಹಡಗು ನಿರ್ಮಾಣ ಮತ್ತು ಸಾಗರ ಪೂರಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು 69,725 ಕೋಟಿ ರೂಪಾಯಿಗಳ ಸಮಗ್ರ ಪ್ಯಾಕೇಜ್‌ಗೆ ಅನುಮೋದನೆ ನೀಡಿದೆ. ದೇಶೀಯ ಸಾಮರ್ಥ್ಯ ಬಲವರ್ಧನೆಗೊಳಿಸುವುದು, ದೀರ್ಘಕಾಲೀನ ಹಣಕಾಸು ಸುಧಾರಣೆ, ಗ್ರೀನ್‌ಫೀಲ್ಡ್ ಮತ್ತು ಬ್ರೌನ್‌ಫೀಲ್ಡ್ ಶಿಪ್‌ಯಾರ್ಡ್ ಅಭಿವೃದ್ಧಿಗೆ ಉತ್ತೇಜನ, ತಾಂತ್ರಿಕ ಸಾಮರ್ಥ್ಯಗಳು ಮತ್ತು ಕೌಶಲ್ಯ ವೃದ್ಧಿ ಮತ್ತು ಉತ್ಕೃಷ್ಟ ಕಡಲ ಮೂಲಸೌಕರ್ಯವನ್ನು ಸೃಷ್ಟಿಸಲು ಕಾನೂನು, ತೆರಿಗೆ ಮತ್ತು ನೀತಿ ಸುಧಾರಣೆಗಳನ್ನು ಜಾರಿಗೆ ತರಲು ರೂಪಿಸಲಾದ ನಾಲ್ಕು ಸ್ತಂಭಗಳ ವಿಧಾನವನ್ನು ಈ ಪ್ಯಾಕೇಜ್ ಒಳಗೊಂಡಿದೆ.

ಈ ಪ್ಯಾಕೇಜ್ ಅಡಿಯಲ್ಲಿ, ಹಡಗು ನಿರ್ಮಾಣ ಹಣಕಾಸು ನೆರವು ಯೋಜನೆ (ಎಸ್ ಬಿಎಫ್ ಎಎಸ್) ಅನ್ನು ಒಟ್ಟು 24,736 ಕೋಟಿ ರೂಪಾಯಿಗಳ ನಿಧಿಯೊಂದಿಗೆ 2036ರ ಮಾರ್ಚ್ 31 ರವರೆಗೆ ವಿಸ್ತರಣೆ ಮಾಡಲಾಗುವುದು. ಈ ಯೋಜನೆಯು ಭಾರತದಲ್ಲಿ ಹಡಗು ನಿರ್ಮಾಣವನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ ಮತ್ತು 4,001 ಕೋಟಿ ರೂಪಾಯಿ ಹಂಚಿಕೆಯೊಂದಿಗೆ ಹಡಗು ಒಡೆಯಲು ಸಾಲದ ನೀತಿಯನ್ನೂ ಒಳಗೊಂಡಿದೆ. ಎಲ್ಲಾ ಉಪಕ್ರಮಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಹಡಗು ನಿರ್ಮಾಣ ಮಿಷನ್ ಅನ್ನು ಸಹ ಸ್ಥಾಪಿಸಲಾಗುವುದು. 

ಅದರ ಜೊತೆಗೆ, ಈ ವಲಯಕ್ಕೆ ದೀರ್ಘಾವಧಿಯಲ್ಲಿ ಆರ್ಥಿಕ ನೆರವು ಒದಗಿಸಲು 25,000 ಕೋಟಿ ರೂಪಾಯಿಗಳ ಆವರ್ತ ನಿಧಿಯೊಂದಿಗೆ ಸಾಗರ ಅಭಿವೃದ್ಧಿ ನಿಧಿ (ಎಂಡಿಎಫ್) ಅನ್ನು ಅನುಮೋದಿಸಲಾಗಿದೆ. ಅದರಲ್ಲಿ ಭಾರತ ಸರ್ಕಾರದ ಶೇ.49 ರಷ್ಟು ಪಾಲಿನೊಂದಿಗೆ 20,000 ಕೋಟಿ ರೂಪಾಯಿಗಳ ಸಾಗರ ಹೂಡಿಕೆ ನಿಧಿ ಮತ್ತು ಸಾಲದ ಪರಿಣಾಮಕಾರಿ ವೆಚ್ಚವನ್ನು ತಗ್ಗಿಸಲು ಮತ್ತು ಯೋಜನೆಯ ಅವಲಂಬನೆಯನ್ನು ಸುಧಾರಿಸಲು 5,000 ಕೋಟಿ ರೂಪಾಯಿಗಳ ಬಡ್ಡಿ ಪ್ರೋತ್ಸಾಹ ನಿಧಿ ಸೇರಿವೆ. ಅಲ್ಲದೆ 19,989 ಕೋಟಿ ರೂಪಾಯಿಗಳ ಬಜೆಟ್ ವೆಚ್ಚದೊಂದಿಗೆ ಹಡಗು ನಿರ್ಮಾಣ ಅಭಿವೃದ್ಧಿ ಯೋಜನೆ (ಎಸ್ ಬಿಡಿಎಸ್), ದೇಶೀಯ ಹಡಗು ನಿರ್ಮಾಣ ಸಾಮರ್ಥ್ಯವನ್ನು ವಾರ್ಷಿಕವಾಗಿ ಒಟ್ಟು 4.5 ಮಿಲಿಯನ್ ಟನ್‌ಗೆ ವಿಸ್ತರಣೆ ಮಾಡುವುದು. ಬೃಹತ್ ಹಡಗು ನಿರ್ಮಾಣ ಕ್ಲಸ್ಟರ್‌ಗಳನ್ನು ಬೆಂಬಲಿಸುವುದು, ಮೂಲಸೌಕರ್ಯ ವಿಸ್ತರಣೆ, ಭಾರತೀಯ ಸಾಗರ ವಿಶ್ವವಿದ್ಯಾಲಯದ ಅಡಿಯಲ್ಲಿ ಭಾರತ ಹಡಗು ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸುವುದು ಮತ್ತು ಹಡಗು ನಿರ್ಮಾಣ ಯೋಜನೆಗಳಿಗೆ ಅಪಾಯದ ವ್ಯಾಪ್ತಿಯನ್ನು ಆಧರಿಸಿ ವಿಮೆ ಒದಗಿಸುವ ಗುರಿ ಹೊಂದಿದೆ. 

ಒಟ್ಟಾರೆ ಪ್ಯಾಕೇಜ್ 4.5 ಮಿಲಿಯನ್ ಒಟ್ಟು ಟನ್ ಹಡಗು ನಿರ್ಮಾಣ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಕೆ  ಮಾಡುತ್ತದೆ, ಸುಮಾರು 30 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ಭಾರತದ ಸಾಗರ ವಲಯಕ್ಕೆ ಸರಿಸುಮಾರು 4.5 ಲಕ್ಷ ಕೋಟಿ ರೂಪಾಯಿ ಹೂಡಿಕೆಗಳನ್ನು ಆಕರ್ಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಆರ್ಥಿಕ ಪರಿಣಾಮಗಳ ಹೊರತಾಗಿಯೂ ಈ ಉಪಕ್ರಮವು ನಿರ್ಣಾಯಕ ಪೂರೈಕೆ ಸರಣಿ ಮತ್ತು ಸಮುದ್ರ ಮಾರ್ಗಗಳಿಗೆ ಸ್ಥಿತಿಸ್ಥಾಪಕತ್ವವನ್ನು ತರುವ ಮೂಲಕ ರಾಷ್ಟ್ರೀಯ, ಇಂಧನ ಮತ್ತು ಆಹಾರ ಭದ್ರತೆಯನ್ನು ಬಲಪಡಿಸುತ್ತದೆ. ಇದು ಭಾರತದ ಭೌಗೋಳಿಕ ರಾಜಕೀಯ ಸ್ಥಿತಿಸ್ಥಾಪಕತ್ವ ಮತ್ತು ಕಾರ್ಯತಂತ್ರದ ಸ್ವಾವಲಂಬನೆ ಬಲವರ್ಧನೆಗೊಳಿಸುತ್ತದೆ ಮತ್ತು ಆತ್ಮನಿರ್ಭರ ಭಾರತದ ದೂರದೃಷ್ಟಿಯನ್ನು ಮುನ್ನಡೆಸುತ್ತದೆ ಮತ್ತು ಜಾಗತಿಕ ಸಾಗಣೆ ಮತ್ತು ಹಡಗು ನಿರ್ಮಾಣದಲ್ಲಿ ಭಾರತವನ್ನು ಸ್ಪರ್ಧಾತ್ಮಕ ಶಕ್ತಿಯಾಗಿ ರೂಪಿಸುತ್ತದೆ.

ಭಾರತ ವ್ಯಾಪಾರ ಮತ್ತು ಸಾಗರಯಾನದೊಂದಿಗೆ ಉಪಖಂಡವನ್ನು ಜಗತ್ತಿಗೆ ಸಂಪರ್ಕಿಸುವ ಶತಮಾನಗಳ ದೀರ್ಘ ಮತ್ತು ಪ್ರಸಿದ್ಧ ಕಡಲ ಇತಿಹಾಸವನ್ನು ಹೊಂದಿದೆ. ಇಂದು,ಸಾಗರ ವಲಯವು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿ ಉಳಿದಿದ್ದು, ಇದು ದೇಶದ ವ್ಯಾಪಾರದ ಗಾತ್ರದ ಪ್ರಕಾರ ಸುಮಾರು ಶೇ.95 ರಷ್ಟು ಮತ್ತು ಮೌಲ್ಯದ ಪ್ರಕಾರ ಶೇ. 70ರಷ್ಟು ಬೆಂಬಲಿಸುತ್ತದೆ. ಅದರ ಮೂಲದಲ್ಲಿ ಹಡಗು ನಿರ್ಮಾಣವಿದೆ, ಅದನ್ನು ಸಾಮಾನ್ಯವಾಗಿ "ಭಾರೀ ಎಂಜಿನಿಯರಿಂಗ್‌ನ ತಾಯಿ" ಎಂದು ಕರೆಯಲಾಗುತ್ತದೆ, ಅದು ಉದ್ಯೋಗ ಮತ್ತು ಹೂಡಿಕೆಗೆ ಗಮನಾರ್ಹವಾಗಿ ಕೊಡುಗೆ ನೀಡುವುದಲ್ಲದೆ ರಾಷ್ಟ್ರೀಯ ಭದ್ರತೆ, ಕಾರ್ಯತಂತ್ರದ ಸ್ವಾತಂತ್ರ್ಯ ಮತ್ತು ವ್ಯಾಪಾರ ಮತ್ತು ಇಂಧನ ಪೂರೈಕೆ ಸರಣಿಗಳ ಸ್ಥಿತಿಸ್ಥಾಪಕತ್ವವನ್ನು ವೃದ್ಧಿಸುತ್ತದೆ.

 

*****


(Release ID: 2170717) Visitor Counter : 15