ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನ ಮಂತ್ರಿ ಭಾಷಣ

Posted On: 22 SEP 2025 3:28PM by PIB Bengaluru

ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ!

ಜೈ ಹಿಂದ್! ಜೈ ಹಿಂದ್! ಜೈ ಹಿಂದ್!

ಅರುಣಾಚಲ ಪ್ರದೇಶದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಕೆ.ಟಿ. ಪರ್ನಾಯಕ್ ಜಿ, ರಾಜ್ಯದ ಜನಪ್ರಿಯ ಮತ್ತು ಕ್ರಿಯಾಶೀಲ ಮುಖ್ಯಮಂತ್ರಿ ಪೇಮಾ ಖಂಡು ಜಿ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿ ಕಿರಣ್ ರಿಜಿಜು, ರಾಜ್ಯ ಸರ್ಕಾರದ ಸಚಿವರು, ನನ್ನ ಸಹ ಸಂಸದರಾದ ನಬಮ್ ರೆಬಿಯಾ ಜಿ ಮತ್ತು ಟ್ಯಾಪಿರ್ ಗಾವೊ ಜಿ, ಎಲ್ಲಾ ಶಾಸಕರು, ಇತರ ಜನಪ್ರತಿನಿಧಿಗಳೆ ಮತ್ತು ಅರುಣಾಚಲ ಪ್ರದೇಶದ ನನ್ನ ಪ್ರೀತಿಯ ಸಹೋದರ ಸಹೋದರಿಯರೆ,

ಬೊಮ್ಯೆರುಂಗ್ ಡೋನ್ಯಿ ಪೊಲೊ! ಸರ್ವಶಕ್ತ ಡೋನ್ಯಿ ಪೊಲೊ ನಮ್ಮೆಲ್ಲರನ್ನೂ ಆಶೀರ್ವದಿಸಲಿ!

ಸ್ನೇಹಿತರೆ,

ಹೆಲಿಪ್ಯಾಡ್‌ನಿಂದ ಈ ಮೈದಾನಕ್ಕೆ ಬರುವ ದಾರಿಯಲ್ಲಿ, ನಾನು ತ್ರಿವರ್ಣ ಧ್ವಜ ಬೀಸುತ್ತಿದ್ದ  ಮಕ್ಕಳು, ತ್ರಿವರ್ಣ ಧ್ವಜವನ್ನು ಹಿಡಿದ ಪುತ್ರರು ಮತ್ತು ಪುತ್ರಿಯರೊಂದಿಗೆ ಅನೇಕ ಜನರನ್ನು ಭೇಟಿಯಾದೆ. ಅರುಣಾಚಲದ ಗೌರವ ಮತ್ತು ವಾತ್ಸಲ್ಯವು ನನ್ನನ್ನು ಹೆಮ್ಮೆಯಿಂದ ತುಂಬುತ್ತಿದೆ. ಸ್ವಾಗತ ನೀಡಲು ಅಪಾರ ಜನರು ತುಂಬಿದ್ದರು. ಹಾಗಾಗಿ, ನಾನು ಇಲ್ಲಿಗೆ ಬರುವುದು ವಿಳಂಬವಾಯಿತು. ಅದಕ್ಕಾಗಿ ನಾನು ನಿಮ್ಮ ಕ್ಷಮೆ ಕೋರುತ್ತೇನೆ. ಅರುಣಾಚಲದ ಈ ಪವಿತ್ರ ಭೂಮಿ ಉದಯಿಸುತ್ತಿರುವ ಸೂರ್ಯನ ಭೂಮಿ ಮಾತ್ರವಲ್ಲ, ದೇಶಭಕ್ತಿಯು ಉತ್ತುಂಗಕ್ಕೇರುವ ಭೂಮಿಯೂ ಆಗಿದೆ. ನಮ್ಮ ತ್ರಿವರ್ಣ ಧ್ವಜದ ಮೊದಲ ಬಣ್ಣ ಕೇಸರಿಯಾಗಿರುವಂತೆ, ಅರುಣಾಚಲದ ಪ್ರಮುಖ ಬಣ್ಣವೂ ಕೇಸರಿ. ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶೌರ್ಯದ ಸಂಕೇತ, ಸರಳತೆಯ ಸಂಕೇತ. ನಾನು ರಾಜಕೀಯ ಶಕ್ತಿಯ ಕಾರಿಡಾರ್‌ಗಳನ್ನು ಪ್ರವೇಶಿಸುವ ಮೊದಲೇ ಅರುಣಾಚಲಕ್ಕೆ ಹಲವು ಬಾರಿ ಬಂದಿದ್ದೇನೆ. ನಾನು ಇಲ್ಲಿಂದ ಅಸಂಖ್ಯಾತ ನೆನಪುಗಳನ್ನು ಹೊತ್ತಿದ್ದೇನೆ, ಅವುಗಳನ್ನು ನೆನಪಿಸಿಕೊಳ್ಳುವುದು ಯಾವಾಗಲೂ ನನಗೆ ಸಂತೋಷ ನೀಡುತ್ತದೆ. ನಿಮ್ಮೊಂದಿಗೆ ಕಳೆದ ಪ್ರತಿ ಕ್ಷಣವೂ ನನಗೆ ಅಮೂಲ್ಯವಾದ ಸ್ಮರಣೆಯಾಗಿದೆ. ನೀವು ನನ್ನ ಮೇಲೆ ಸುರಿಸುವ ಪ್ರೀತಿ ಮತ್ತು ವಾತ್ಸಲ್ಯವು ಜೀವನದಲ್ಲಿ ಒಬ್ಬರು ಪಡೆಯಬಹುದಾದ ಬಹುದೊಡ್ಡ ಅದೃಷ್ಟ ಎಂದು ನಾನು ನಂಬುತ್ತೇನೆ. ತವಾಂಗ್ ಮಠದಿಂದ ನಮಸಾಯಿಯ ಗೋಲ್ಡನ್ ಪಗೋಡಾದವರೆಗೆ, ಅರುಣಾಚಲವು ಶಾಂತಿ ಮತ್ತು ಸಂಸ್ಕೃತಿಯ ಸಂಗಮವಾಗಿದೆ. ಇದು ಭಾರತ ಮಾತೆಯ ಹೆಮ್ಮೆ, ನಾನು ಈ ಪವಿತ್ರ ಭೂಮಿಗೆ ಭಕ್ತಿಯಿಂದ ನಮಿಸುತ್ತೇನೆ.

ಸ್ನೇಹಿತರೆ,

ಇಂದು ನನ್ನ ಅರುಣಾಚಲ ಭೇಟಿ 3 ಕಾರಣಗಳಿಗಾಗಿ ಬಹಳ ವಿಶೇಷವಾಗಿದೆ. ಮೊದಲನೆಯದಾಗಿ, ನವರಾತ್ರಿಯ ಈ ಮೊದಲ ದಿನದಂದು ಈ ಸುಂದರ ಪರ್ವತಗಳನ್ನು ನೋಡುವ ಅದೃಷ್ಟ ನನಗೆ ಸಿಕ್ಕಿದೆ. ನವರಾತ್ರಿಯ ಈ ದಿನದಂದು, ನಾವು ಬಲಿಷ್ಠ ಹಿಮಾಲಯದ ಪುತ್ರಿ ಮಾತೆ ಶೈಲಪುತ್ರಿಯನ್ನು ಪೂಜಿಸುತ್ತೇವೆ. ಎರಡನೆಯ ಕಾರಣವೆಂದರೆ, ಇಂದಿನಿಂದ ದೇಶಾದ್ಯಂತ ಮುಂದಿನ ಪೀಳಿಗೆಯ ಜಿ.ಎಸ್‌.ಟಿ ಸುಧಾರಣೆಗಳು ಜಾರಿಗೆ ಬಂದಿವೆ. ಇದು "ಜಿ.ಎಸ್‌.ಟಿ ಉಳಿತಾಯ ಉತ್ಸವ"ದ ಆರಂಭವಾಗಿದೆ. ಈ ಹಬ್ಬದ ಋತುವಿನಲ್ಲಿ ದೇಶದ ಜನರು 2 ಪಟ್ಟು ಲಾಭ ಪಡೆಯುತ್ತಾರೆ. ಮೂರನೆಯ ಕಾರಣವೆಂದರೆ ಈ ಶುಭ ದಿನದಂದು ಅರುಣಾಚಲ ಪ್ರದೇಶವು ಹಲವಾರು ಹೊಸ ಅಭಿವೃದ್ಧಿ ಯೋಜನೆಗಳನ್ನು ಪಡೆಯುತ್ತಿದೆ. ಇಂದು, ಅರುಣಾಚಲ ಪ್ರದೇಶವು ವಿದ್ಯುತ್, ಸಂಪರ್ಕ, ಪ್ರವಾಸೋದ್ಯಮ ಮತ್ತು ಆರೋಗ್ಯ ಸೇರಿದಂತೆ ಬಹು ವಲಯಗಳಲ್ಲಿ ಯೋಜನೆಗಳನ್ನು ಉಡುಗೊರೆಯಾಗಿ ನೀಡಿದೆ. ಇದು ಬಿಜೆಪಿಯ ಡಬಲ್-ಎಂಜಿನ್ ಸರ್ಕಾರದ "ಡಬಲ್ ಪ್ರಯೋಜನ"ದ ಒಂದು ಉಜ್ವಲ ಉದಾಹರಣೆಯಾಗಿದೆ. ಈ ಯೋಜನೆಗಳಿಗಾಗಿ ನಾನು ಅರುಣಾಚಲ ಪ್ರದೇಶದ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ನಾನು ಇಲ್ಲಿಗೆ ಬರುವ ಮೊದಲು, ಸಣ್ಣ ವ್ಯಾಪಾರಿಗಳನ್ನು ಭೇಟಿ ಮಾಡಲು, ಅವರ ಅಂಗಡಿಗಳಲ್ಲಿ ಉತ್ಪನ್ನಗಳನ್ನು ನೋಡಲು ಮತ್ತು ಹೆಚ್ಚು ಮುಖ್ಯವಾಗಿ, ಅವರ ಶಕ್ತಿ ಮತ್ತು ಉತ್ಸಾಹವನ್ನು ಅನುಭವಿಸಲು ನನಗೆ ಅವಕಾಶ ಸಿಕ್ಕಿತು. ಈ ಉಳಿತಾಯ ಉತ್ಸವದಲ್ಲಿ ವ್ಯಾಪಾರಿಗಳು, ಕುಶಲಕರ್ಮಿಗಳು ಮತ್ತು ಸಾರ್ವಜನಿಕರಲ್ಲಿ ಉತ್ಸಾಹವನ್ನು ನಾನು ಸ್ಪಷ್ಟವಾಗಿ ನೋಡಬಲ್ಲೆ.

ಸ್ನೇಹಿತರೆ,

ಸೂರ್ಯನ ಮೊದಲ ಕಿರಣಗಳು ಅರುಣಾಚಲದ ಮೇಲೆ ಬಿದ್ದರೂ, ದುಃಖಕರ ವಿಷಯವೆಂದರೆ, ವೇಗದ ಅಭಿವೃದ್ಧಿ ಕಿರಣಗಳು ಇಲ್ಲಿಗೆ ತಲುಪಲು ಹಲವಾರು ದಶಕಗಳೇ ಬೇಕಾಯಿತು. ನಾನು 2014ಕ್ಕೂ ಮೊದಲು ಹಲವು ಬಾರಿ ಅರುಣಾಚಲಕ್ಕೆ ಭೇಟಿ ನೀಡಿದ್ದೆ, ನಿಮ್ಮೊಂದಿಗೆ ವಾಸಿಸುತ್ತಿದ್ದೆ ಮತ್ತು ಪ್ರಕೃತಿಯು ಈ ಭೂಮಿಗೆ ನೀಡಿದ ಔದಾರ್ಯ, ಇಲ್ಲಿನ ಶ್ರಮಶೀಲ ಜನರು ಮತ್ತು ಅವರ ಅಗಾಧ ಸಾಮರ್ಥ್ಯವನ್ನು ನೇರವಾಗಿ ನೋಡಿದೆ. ಆದರೂ ದೆಹಲಿಯಲ್ಲಿ ಕುಳಿತು ದೇಶವನ್ನು ಆಳಿದವರು ಅರುಣಾಚಲವನ್ನು ನಿರ್ಲಕ್ಷಿಸಿದರು. ಕಾಂಗ್ರೆಸ್‌ನಂತಹ ಪಕ್ಷಗಳ ಕೆಲವೇ ಜನರು ಇಲ್ಲಿ ವಾಸಿಸುತ್ತಿದ್ದಾರೆ, ಕೇವಲ 2 ಲೋಕಸಭಾ ಸ್ಥಾನಗಳಿವೆ ಎಂದು ಭಾವಿಸಿದ್ದರು. ಹಾಗಾದರೆ ಅರುಣಾಚಲದ ಮೇಲೆ ಗಮನ ಹರಿಸಲು ಏಕೆ ಚಿಂತಿಸಬೇಕು? ಕಾಂಗ್ರೆಸ್‌ನ ಈ ಮನಸ್ಥಿತಿಯು ಅರುಣಾಚಲಕ್ಕೆ ಮತ್ತು ಇಡೀ ಈಶಾನ್ಯಕ್ಕೆ ದೊಡ್ಡ ಹಾನಿ ಉಂಟುಮಾಡಿತು. ನಮ್ಮ ಇಡೀ ಈಶಾನ್ಯವು ಅಭಿವೃದ್ಧಿಯಲ್ಲಿ ಬಹಳ ಹಿಂದುಳಿದಿತ್ತು.

ಸ್ನೇಹಿತರೆ,

2014ರಲ್ಲಿ ನೀವು ನನಗೆ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ದೇಶವನ್ನು ಈ ಕಾಂಗ್ರೆಸ್ ಮನಸ್ಥಿತಿಯಿಂದ ಮುಕ್ತಗೊಳಿಸಲು ನಾನು ನಿರ್ಧರಿಸಿದೆ. ನಮ್ಮ ಸ್ಫೂರ್ತಿ ಒಂದು ರಾಜ್ಯದಲ್ಲಿ ಮತಗಳ ಸಂಖ್ಯೆ ಅಥವಾ ಸ್ಥಾನಗಳಲ್ಲ. ನಮ್ಮ ಮಾರ್ಗದರ್ಶಿ ತತ್ವವೆಂದರೆ ರಾಷ್ಟ್ರ ಮೊದಲು. ನಮ್ಮ ಮಂತ್ರ ನಾಗರಿಕ ದೇವೋ ಭವ(ನಾಗರಿಕ ದೇವರಂತೆ). ಯಾರೂ ಎಂದಿಗೂ ಕಾಳಜಿ ವಹಿಸದವರನ್ನು ಮೋದಿ ಗೌರವಿಸುತ್ತಾರೆ. ಅದಕ್ಕಾಗಿಯೇ ಕಾಂಗ್ರೆಸ್ ಆಳ್ವಿಕೆಯಲ್ಲಿ ಮರೆತುಹೋದ ಈಶಾನ್ಯವು 2014ರಿಂದ ನಮ್ಮ ಅಭಿವೃದ್ಧಿ ಆದ್ಯತೆಗಳ ಕೇಂದ್ರವಾಗಿದೆ. ನಾವು ಈಶಾನ್ಯಕ್ಕೆ ಬಜೆಟ್ ಅನ್ನು ಹಲವಾರು ಬಾರಿ ಹೆಚ್ಚಿಸಿದ್ದೇವೆ. ಅನತಿ ದೂರಕ್ಕೆ ಸಂಪರ್ಕ ಕಲ್ಪಿಸುವುದು ಮತ್ತು ಸವಲತ್ತುಗಳ ವಿತರಣೆಯನ್ನು ನಮ್ಮ ಸರ್ಕಾರದ ವಿಶಿಷ್ಟ ಲಕ್ಷಣವನ್ನಾಗಿ ಮಾಡಿಕೊಂಡಿದ್ದೇವೆ. ಇದಲ್ಲದೆ, ದೆಹಲಿಯಲ್ಲಿ ಮಾತ್ರ ಕುಳಿತು ಸರ್ಕಾರವನ್ನು ನಡೆಸುವುದಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಂಡಿದ್ದೇವೆ. ಅಧಿಕಾರಿಗಳು ಮತ್ತು ಸಚಿವರು ಈಶಾನ್ಯಕ್ಕೆ ಹೆಚ್ಚಾಗಿ ಬರಬೇಕು, ರಾತ್ರಿಯಿಡೀ ಇಲ್ಲಿಯೇ ಇರಬೇಕು ಮತ್ತು ಇಲ್ಲಿ ನೆಲಕ್ಕಿಳಿದು ಮೇಲೆ ಕೆಲಸ ಮಾಡಬೇಕು.

ಸ್ನೇಹಿತರೆ,

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಕೇಂದ್ರ ಸಚಿವರು ಬಹುಶಃ 2 ಅಥವಾ 3 ತಿಂಗಳಿಗೊಮ್ಮೆ ಈಶಾನ್ಯಕ್ಕೆ ಭೇಟಿ ನೀಡುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸಚಿವರು ಈಗಾಗಲೇ 800ಕ್ಕೂ ಹೆಚ್ಚು ಬಾರಿ ಈಶಾನ್ಯಕ್ಕೆ ಭೇಟಿ ನೀಡಿದ್ದಾರೆ. ಇದು ಕೇವಲ ಸಾಂಕೇತಿಕ ಭೇಟಿ ನೀಡಿ ಹೊರಡುವ ವಿಷಯವಲ್ಲ. ನಮ್ಮ ಸಚಿವರು ಬಂದಾಗ, ಅವರು ದೂರದ ಪ್ರದೇಶಗಳಿಗೆ, ಜಿಲ್ಲೆಗಳಿಗೆ, ಬ್ಲಾಕ್‌ಗಳಿಗೆ ಹೋಗುವುದನ್ನು ಒಂದು ಗುರಿಯನ್ನಾಗಿ ಮಾಡುತ್ತಾರೆ. ಅಷ್ಟೇ ಅಲ್ಲ, ಅವರು ಇಲ್ಲಿ ಕನಿಷ್ಠ ಒಂದು ರಾತ್ರಿ ಕಳೆಯುತ್ತಾರೆ. ನಾನು ಪ್ರಧಾನಿಯಾಗಿ ಈಶಾನ್ಯಕ್ಕೆ 70ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದೇನೆ. ಕಳೆದ ವಾರವಷ್ಟೇ, ನಾನು ಮಿಜೋರಾಂ, ಮಣಿಪುರ ಮತ್ತು ಅಸ್ಸಾಂನಲ್ಲಿದ್ದೆ, ನಾನು ಗುವಾಹಟಿಯಲ್ಲಿ ರಾತ್ರಿ ತಂಗಿದ್ದೆ. ಈಶಾನ್ಯ ನನ್ನ ಹೃದಯಕ್ಕೆ ತುಂಬಾ ಹತ್ತಿರದಲ್ಲಿದೆ. ಅದಕ್ಕಾಗಿಯೇ ನಾವು ಹೃದಯದ ಅಂತರವನ್ನು ಅಳಿಸಿ ದೆಹಲಿಯನ್ನು ನಿಮಗೆ ಹತ್ತಿರ ತಂದಿದ್ದೇವೆ.

ಸ್ನೇಹಿತರೆ,

ನಾವು ಈಶಾನ್ಯದ 8 ರಾಜ್ಯಗಳನ್ನು 'ಅಷ್ಟ ಲಕ್ಷ್ಮಿ'(ಲಕ್ಷ್ಮಿ ದೇವಿಯ 8 ರೂಪಗಳು) ಎಂದು ಪೂಜಿಸುತ್ತೇವೆ. ಅದಕ್ಕಾಗಿಯೇ ಈ ಪ್ರದೇಶವು ಅಭಿವೃದ್ಧಿಯಲ್ಲಿ ಹಿಂದುಳಿಯಲು ನಾವು ಎಂದಿಗೂ ಬಿಡಬಾರದು. ಕೇಂದ್ರ ಸರ್ಕಾರವು ಈ ಪ್ರದೇಶದ ಬೆಳವಣಿಗೆಗೆ ಹೆಚ್ಚು ಹೆಚ್ಚು ಹಣ ಖರ್ಚು ಮಾಡುತ್ತಿದೆ. ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ, ಕೇಂದ್ರವು ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ನಿಮ್ಮಲ್ಲಿ ಕೆಲವರಿಗೆ ತಿಳಿದಿರಬಹುದು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಅರುಣಾಚಲ ಪ್ರದೇಶವು 10 ವರ್ಷಗಳಲ್ಲಿ ಕೇಂದ್ರ ತೆರಿಗೆಯಿಂದ ಕೇವಲ 6,000 ಕೋಟಿ ರೂಪಾಯಿ ಮಾತ್ರ ಪಡೆದುಕೊಂಡಿದೆ. ಆದರೆ ನಮ್ಮ ಬಿಜೆಪಿ ಸರ್ಕಾರದ 10 ವರ್ಷಗಳಲ್ಲಿ, ಅರುಣಾಚಲವು 1 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಪಡೆದುಕೊಂಡಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಬಿಜೆಪಿ ಸರ್ಕಾರವು ಅರುಣಾಚಲಕ್ಕೆ 16 ಪಟ್ಟು ಹೆಚ್ಚು ಹಣ ನೀಡಿದೆ. ಇದು ತೆರಿಗೆ ಪಾಲು ಮಾತ್ರ. ಇದಲ್ಲದೆ, ಕೇಂದ್ರ ಸರ್ಕಾರವು ಇಲ್ಲಿ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಿದೆ, ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಅದಕ್ಕಾಗಿಯೇ ಇಂದು ನೀವು ಅರುಣಾಚಲದಾದ್ಯಂತ ಇಂತಹ ವಿಶಾಲ ಮತ್ತು ತ್ವರಿತ ಅಭಿವೃದ್ಧಿಯನ್ನು ವೀಕ್ಷಿಸುತ್ತಿದ್ದೀರಿ.

ಸ್ನೇಹಿತರೆ,

ಕೆಲಸವನ್ನು ಸರಿಯಾದ ಉದ್ದೇಶದಿಂದ ಮಾಡಿದಾಗ, ಪ್ರಾಮಾಣಿಕತೆಯಿಂದ ಮಾಡಿದಾಗ, ಸ್ಪಷ್ಟ ಫಲಿತಾಂಶಗಳು ಗೋಚರಿಸುತ್ತವೆ. ಇಂದು ನಮ್ಮ ಈಶಾನ್ಯವು ದೇಶದ ಅಭಿವೃದ್ಧಿಯ ಪ್ರೇರಕ ಶಕ್ತಿಯಾಗುತ್ತಿದೆ. ಇಲ್ಲಿ ಪ್ರಮುಖ ಗಮನವು ಉತ್ತಮ ಆಡಳಿತದ ಮೇಲಿದೆ. ನಮ್ಮ ಸರ್ಕಾರಕ್ಕೆ, ನಾಗರಿಕರ ಕಲ್ಯಾಣಕ್ಕಿಂತ ಬೇರೇನೂ ಮುಖ್ಯವಲ್ಲ. ನಿಮ್ಮ ಜೀವನವನ್ನು ಸುಲಭಗೊಳಿಸಲು, ನಾವು ಜೀವನ ಸುಲಭತೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಪ್ರಯಾಣದಲ್ಲಿ ನೀವು ಕಷ್ಟಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಪ್ರಯಾಣದ ಸುಲಭತೆ ಇದೆ. ಆರೋಗ್ಯ ಸೇವೆಯನ್ನು ಹೆಚ್ಚು ಪ್ರವೇಶಿಸಲು, ವೈದ್ಯಕೀಯ ಚಿಕಿತ್ಸೆಯ ಸುಲಭತೆ ಇದೆ. ಮಕ್ಕಳು ತಮ್ಮ ಅಧ್ಯಯನದಲ್ಲಿ ಅಡೆತಡೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಶಿಕ್ಷಣದ ಸುಲಭತೆ ಇದೆ. ನಿಮ್ಮ ವ್ಯವಹಾರ ಮತ್ತು ವ್ಯಾಪಾರ ಬೆಂಬಲಿಸಲು, ವ್ಯಾಪಾರ ಮಾಡುವ ಸುಲಭತೆ ಇದೆ. ಈ ಎಲ್ಲಾ ಗುರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಬಿಜೆಪಿಯ ಡಬಲ್-ಎಂಜಿನ್ ಸರ್ಕಾರವು ಅವಿಶ್ರಾಂತವಾಗಿ ಕೆಲಸ ಮಾಡುತ್ತಿದೆ. ರಸ್ತೆಗಳ ಚಿಂತನೆಯು ಹಿಂದೆ ಅಸಾಧ್ಯವೆಂದು ತೋರುತ್ತಿದ್ದ ಪ್ರದೇಶಗಳಲ್ಲಿ, ಇಂದು ಆಧುನಿಕ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಸೆಲಾ ಸುರಂಗದಂತಹ ಮೂಲಸೌಕರ್ಯ ಯೋಜನೆಗಳು ಒಂದು ಕಾಲದಲ್ಲಿ ಊಹಿಸಲೂ ಅಸಾಧ್ಯವಾಗಿದ್ದವು, ಆದರೆ ಇಂದು ಸೆಲಾ ಸುರಂಗವು ಅರುಣಾಚಲದ ಗುರುತಿನ ಸಂಕೇತವಾಗಿದೆ.

ಅರುಣಾಚಲ ಸೇರಿದಂತೆ ಈಶಾನ್ಯದ ದೂರದ ಪ್ರದೇಶಗಳಲ್ಲಿ ಹೆಲಿಪೋರ್ಟ್‌ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಅದಕ್ಕಾಗಿಯೇ ಈ ಪ್ರದೇಶಗಳನ್ನು ಉಡಾನ್ ಯೋಜನೆಯ ಮೂಲಕ ಸಂಪರ್ಕಿಸಲಾಗಿದೆ. ಹೊಲೊಂಗಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವೂ ಪೂರ್ಣಗೊಂಡಿದೆ. ಈಗ ಇಲ್ಲಿಂದ ದೆಹಲಿಗೆ ನೇರ ವಿಮಾನಗಳಿವೆ. ಇದು ಸಾಮಾನ್ಯ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಮಾತ್ರವಲ್ಲದೆ, ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೂ ಪ್ರಯೋಜನ ನೀಡುತ್ತದೆ. ಇಲ್ಲಿಂದ ದೇಶದ ಪ್ರಮುಖ ಮಾರುಕಟ್ಟೆಗಳಿಗೆ ಹಣ್ಣುಗಳು, ತರಕಾರಿಗಳು ಮತ್ತು ಇತರ ಉತ್ಪನ್ನಗಳನ್ನು ಸಾಗಿಸುವುದು ಈಗ ಹೆಚ್ಚು ಸುಲಭವಾಗಿದೆ.

ಸ್ನೇಹಿತರೆ,

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ದೇಶದ ಪ್ರತಿಯೊಂದು ರಾಜ್ಯವು ಅಭಿವೃದ್ಧಿ ಹೊಂದಿದಾಗ ಮಾತ್ರ ಭಾರತವು ಅಭಿವೃದ್ಧಿ ಹೊಂದುತ್ತದೆ. ಪ್ರತಿ ರಾಜ್ಯವು ರಾಷ್ಟ್ರೀಯ ಗುರಿಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆದಾಗ ಮಾತ್ರ ಭಾರತವು ಪ್ರಗತಿ ಸಾಧಿಸುತ್ತದೆ. ಈ ರಾಷ್ಟ್ರೀಯ ಉದ್ದೇಶಗಳನ್ನು ಸಾಧಿಸುವಲ್ಲಿ ಈಶಾನ್ಯವು ಪ್ರಮುಖ ಪಾತ್ರ ವಹಿಸುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ವಿದ್ಯುತ್ ವಲಯವು ಇದಕ್ಕೆ ಉತ್ತಮ ಉದಾಹರಣೆಯಾಗಿದೆ. 2030ರ ವೇಳೆಗೆ ಭಾರತವು ಅಸಾಂಪ್ರದಾಯಿಕ ಮೂಲಗಳಿಂದ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ. ಸೌರಶಕ್ತಿ, ಪವನ ಶಕ್ತಿ ಮತ್ತು ಜಲವಿದ್ಯುತ್ ಮೂಲಕ ಈ ಗುರಿಯನ್ನು ಸಾಧಿಸಲಾಗುವುದು. ಅರುಣಾಚಲ ಪ್ರದೇಶವೂ ರಾಷ್ಟ್ರದೊಂದಿಗೆ ಹೆಜ್ಜೆ ಹಾಕುತ್ತಿದೆ. ಇಂದು ಉದ್ಘಾಟನೆಗೊಂಡ 2 ವಿದ್ಯುತ್ ಯೋಜನೆಗಳು ವಿದ್ಯುತ್ ಉತ್ಪಾದಕ ರಾಜ್ಯವಾಗಿ ಅರುಣಾಚಲದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತವೆ. ಈ ಯೋಜನೆಗಳು ರಾಜ್ಯದ ಸಾವಿರಾರು ಯುವಕರಿಗೆ ಉದ್ಯೋಗಗಳನ್ನು ಒದಗಿಸುತ್ತವೆ, ಇಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೈಗೆಟುಕುವ ಬೆಲೆಗೆ ವಿದ್ಯುತ್ತನ್ನು ಖಚಿತಪಡಿಸುತ್ತವೆ. ಕಾಂಗ್ರೆಸ್ ಯಾವಾಗಲೂ ಒಂದು ಅಭ್ಯಾಸ ಹೊಂದಿದೆ. ಕಷ್ಟಕರವಾದ ಅಭಿವೃದ್ಧಿ ಕಾರ್ಯ ಬಂದಾಗಲೆಲ್ಲಾ ಅವರು ಅದನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ, ಅವರು ಸುಮ್ಮನಾಗಿ ಬಿಡುತ್ತಿದ್ದರು. ಈ ಅಭ್ಯಾಸದಿಂದಾಗಿ, ಈಶಾನ್ಯ ಮತ್ತು ಅರುಣಾಚಲ ಪ್ರದೇಶಗಳು ಬಹಳವಾಗಿ ನರಳಿದವು. ಅಭಿವೃದ್ಧಿಯು ಸವಾಲಾಗಿದ್ದ ದೂರದ, ಪರ್ವತಮಯ ಅಥವಾ ಅರಣ್ಯದ ಆಳದಲ್ಲಿರುವ ಪ್ರದೇಶಗಳನ್ನು ಕಾಂಗ್ರೆಸ್ ಕೈಬಿಟ್ಟಿತು, "ಹಿಂದುಳಿದವು" ಎಂದು ಘೋಷಿಸಿತು, ಅವುಗಳನ್ನು ಮರೆತುಬಿಟ್ಟಿತು. ಇದರಲ್ಲಿ ಬುಡಕಟ್ಟು ಪ್ರದೇಶಗಳು ಮತ್ತು ಈಶಾನ್ಯದ ಜಿಲ್ಲೆಗಳು ಹೆಚ್ಚು ಸೇರಿವೆ. ಗಡಿಯುದ್ದಕ್ಕೂ ಇರುವ ಹಳ್ಳಿಗಳನ್ನು ಕಾಂಗ್ರೆಸ್ "ದೇಶದ ಕೊನೆಯ ಹಳ್ಳಿಗಳು" ಎಂದು ಘೋಷಿಸಿತು, ಅವರು ಅಭಿವೃದ್ಧಿ ಮಾಡುವ ಜವಾಬ್ದಾರಿಯಿಂದ ಕೈತೊಳೆದುಕೊಂಡರು. ಹಾಗೆ ಮಾಡುವುದರ ಮೂಲಕ, ಕಾಂಗ್ರೆಸ್ ತನ್ನ ವೈಫಲ್ಯಗಳನ್ನು ಮರೆಮಾಡಲು ಪ್ರಯತ್ನಿಸಿತು. ಪರಿಣಾಮವಾಗಿ, ಬುಡಕಟ್ಟು ಮತ್ತು ಗಡಿ ಪ್ರದೇಶಗಳಿಂದ ಜನರ ನಿರಂತರ ವಲಸೆ ನಡೆಯಿತು.

ಸ್ನೇಹಿತರೆ,

ನಮ್ಮ ಬಿಜೆಪಿ ಸರ್ಕಾರ ಈ ಕಾರ್ಯವಿಧಾನವನ್ನು ಬದಲಾಯಿಸಿದೆ. "ಹಿಂದುಳಿದ ಜಿಲ್ಲೆಗಳು" ಎಂದು ಕಾಂಗ್ರೆಸ್ ಕರೆಯುತ್ತಿದ್ದ ಪ್ರದೇಶಗಳನ್ನು ನಾವು ಮಹತ್ವಾಕಾಂಕ್ಷೆಯ ಜಿಲ್ಲೆಗಳು ಎಂದು ಮರುನಾಮಕರಣ ಮಾಡಿದ್ದೇವೆ, ಅವುಗಳ ಅಭಿವೃದ್ಧಿಯನ್ನು ಆದ್ಯತೆಯನ್ನಾಗಿ ಮಾಡಿದ್ದೇವೆ. ಕಾಂಗ್ರೆಸ್ "ಕೊನೆಯ ಹಳ್ಳಿಗಳು" ಎಂದು ಕರೆದ ಗಡಿಯಲ್ಲಿರುವ ಹಳ್ಳಿಗಳನ್ನು ನಾವು ದೇಶದ ಮೊದಲ ಹಳ್ಳಿಗಳೆಂದು ಗೌರವಿಸಲು ಪ್ರಾರಂಭಿಸಿದ್ದೇವೆ. ಫಲಿತಾಂಶಗಳು ಇಂದು ಗೋಚರಿಸುತ್ತಿವೆ. ಗಡಿ ಗ್ರಾಮಗಳು ಅಭಿವೃದ್ಧಿಯಲ್ಲಿ ಹೊಸ ಆವೇಗ  ಕಾಣುತ್ತಿವೆ. ರೋಮಾಂಚನಕಾರಿ ಗ್ರಾಮಗಳು(ವೈಬ್ರೆಂಟ್ ವಿಲೇಜಸ್) ಕಾರ್ಯಕ್ರಮದ ಯಶಸ್ಸು ಜನರ ಜೀವನವನ್ನು ಸುಲಭಗೊಳಿಸಿದೆ. ಅರುಣಾಚಲ ಪ್ರದೇಶದಲ್ಲಿಯೂ ಸಹ, 450ಕ್ಕೂ ಹೆಚ್ಚು ಗಡಿ ಗ್ರಾಮಗಳು ತ್ವರಿತ ಪ್ರಗತಿ ಕಂಡಿವೆ. ರಸ್ತೆಗಳು, ವಿದ್ಯುತ್ ಮತ್ತು ಇಂಟರ್ನೆಟ್ ಸೌಲಭ್ಯಗಳು ಈ ಪ್ರದೇಶಗಳನ್ನು ತಲುಪಿವೆ. ಮೊದಲು, ಜನರು ಗಡಿ ಗ್ರಾಮಗಳಿಂದ ಪಟ್ಟಣಗಳ ಕಡೆಗೆ ವಲಸೆ ಹೋಗುತ್ತಿದ್ದರು, ಆದರೆ ಈಗ ಈ ಗಡಿ ಗ್ರಾಮಗಳು ಪ್ರವಾಸೋದ್ಯಮದ ಹೊಸ ಕೇಂದ್ರಗಳಾಗುತ್ತಿವೆ.

ಸ್ನೇಹಿತರೆ,

ಅರುಣಾಚಲ ಪ್ರದೇಶ ಪ್ರವಾಸೋದ್ಯಮಕ್ಕೆ ಅಪಾರ ಸಾಮರ್ಥ್ಯ ಹೊಂದಿದೆ. ಸಂಪರ್ಕವು ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತಿರುವಂತೆ, ಇಲ್ಲಿ ಪ್ರವಾಸೋದ್ಯಮವು ಸ್ಥಿರವಾಗಿ ಬೆಳೆಯುತ್ತಿದೆ. ಕಳೆದ ದಶಕದಲ್ಲಿ ಅರುಣಾಚಲಕ್ಕೆ ಭೇಟಿ ನೀಡಿರುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಆದರೆ ಅರುಣಾಚಲದ ಸಾಮರ್ಥ್ಯವು ಪ್ರಕೃತಿ ಮತ್ತು ಸಂಸ್ಕೃತಿ ಆಧಾರಿತ ಪ್ರವಾಸೋದ್ಯಮವನ್ನು ಮೀರಿದೆ. ಇಂದು, ಪ್ರಪಂಚದಾದ್ಯಂತ ಸಮ್ಮೇಳನ ಮತ್ತು ಸಂಗೀತ ಕಚೇರಿ ಪ್ರವಾಸೋದ್ಯಮದ ಬೆಳೆಯುತ್ತಿರುವ ಪ್ರವೃತ್ತಿಯಾಗಿದೆ. ಅದಕ್ಕಾಗಿಯೇ ತವಾಂಗ್‌ನಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಸಮಾವೇಶ ಕೇಂದ್ರವು ಅರುಣಾಚಲ ಪ್ರದೇಶದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲಿದೆ. ಸರ್ಕಾರದ ರೋಮಾಂಚನಕಾರಿ ಹಳ್ಳಿಗಳು(ವೈಬ್ರೆಂಟ್ ವಿಲೇಜಸ್) ಕಾರ್ಯಕ್ರಮವು ನಮ್ಮ ಗಡಿಗಳ ಸಮೀಪದಲ್ಲಿರುವ ಹಳ್ಳಿಗಳಿಗೆ ಒಂದು ಮೈಲಿಗಲ್ಲು ಎಂದು ಸಾಬೀತಾಗುತ್ತಿದೆ, ಇದು ಅರುಣಾಚಲ ಪ್ರದೇಶಕ್ಕೆ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಸ್ನೇಹಿತರೆ,

ಇಂದು, ದೆಹಲಿ ಮತ್ತು ಇಟಾನಗರದಲ್ಲಿ ಬಿಜೆಪಿ ಸರ್ಕಾರಗಳು ಇರುವುದರಿಂದ ಅರುಣಾಚಲ ಪ್ರದೇಶವು ತ್ವರಿತ ಅಭಿವೃದ್ಧಿ ಕಾಣುತ್ತಿದೆ. ಕೇಂದ್ರ ಮತ್ತು ರಾಜ್ಯದ ಸಂಯೋಜಿತ ಶಕ್ತಿಯು ಅಭಿವೃದ್ಧಿಗೆ ಸಮರ್ಪಿತವಾಗಿದೆ. ಉದಾಹರಣೆಗೆ, ಇಲ್ಲಿ ಕ್ಯಾನ್ಸರ್ ಸಂಸ್ಥೆಯ ಕೆಲಸ ಪ್ರಾರಂಭವಾಗಿದೆ, ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ, ಇಲ್ಲಿ ಅನೇಕ ಜನರು ಆಯುಷ್ಮಾನ್ ಯೋಜನೆಯಡಿ ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೆಲ್ಲವೂ ಕೇಂದ್ರ ಮತ್ತು ರಾಜ್ಯದ ಡಬಲ್-ಎಂಜಿನ್ ಸರ್ಕಾರದಿಂದ ಸಾಧ್ಯವಾಗಿದೆ.

ಸ್ನೇಹಿತರೆ,

ಡಬಲ್-ಎಂಜಿನ್ ಸರ್ಕಾರದ ಪ್ರಯತ್ನಗಳಿಂದಾಗಿ ಅರುಣಾಚಲ ಪ್ರದೇಶವು ಕೃಷಿ ಮತ್ತು ತೋಟಗಾರಿಕೆಯಲ್ಲೂ ಪ್ರಗತಿ ಸಾಧಿಸುತ್ತಿದೆ. ಇಲ್ಲಿಂದ ಬರುವ ಕಿವಿ, ಕಿತ್ತಳೆ, ಏಲಕ್ಕಿ ಮತ್ತು ಅನಾನಸ್ ಹಣ್ಣುಗಳು ಅರುಣಾಚಲ ಪ್ರದೇಶಕ್ಕೆ ಹೊಸ ಗುರುತು ನೀಡುತ್ತಿವೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿಯಿಂದ ಬರುವ ನಿಧಿಗಳು ಇಲ್ಲಿನ ರೈತರಿಗೆ ತುಂಬಾ ಉಪಯುಕ್ತವಾಗಿವೆ.

ಸ್ನೇಹಿತರೆ,

ನಮ್ಮ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಸಬಲೀಕರಣಗೊಳಿಸುವುದು ನಮ್ಮ ಅತ್ಯುನ್ನತ ಆದ್ಯತೆಗಳಲ್ಲಿ ಒಂದಾಗಿದೆ. 3 ಕೋಟಿ 'ಲಕ್ಷಾಧಿಪತಿ ದೀದಿ'ಗಳನ್ನು ರೂಪಿಸುವುದು ಒಂದು ದೊಡ್ಡ ಧ್ಯೇಯವಾಗಿದೆ, ಇದು ಸ್ವತಃ ಮೋದಿಯವರ ಧ್ಯೇಯವಾಗಿದೆ. ಪೆಮಾ ಖಂಡು ಜಿ ಮತ್ತು ಅವರ ತಂಡವು ಈ ಧ್ಯೇಯಕ್ಕೆ ವೇಗ ನೀಡುತ್ತಿರುವುದು ನನಗೆ ಸಂತೋಷ ತಂದಿದೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಕೆಲಸ ಮಾಡುವ ಮಹಿಳಾ ಹಾಸ್ಟೆಲ್‌ಗಳನ್ನು ನಿರ್ಮಿಸಲು ಪ್ರಾರಂಭಿಸಲಾದ ಕೆಲಸವು ನಮ್ಮ ಹೆಣ್ಣು ಮಕ್ಕಳಿಗೆ ಹೆಚ್ಚಿನ ಅನುಕೂಲ ತರುತ್ತದೆ.

ಸ್ನೇಹಿತರೆ,

ಇಂದು ನಾನು ಇಲ್ಲಿ ತಾಯಂದಿರು ಮತ್ತು ಸಹೋದರಿಯರ ದೊಡ್ಡ ಸಭೆಯನ್ನು ನೋಡುತ್ತಿದ್ದೇನೆ. ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಜಿ.ಎಸ್‌.ಟಿ ಉಳಿತಾಯ ಉತ್ಸವಕ್ಕೆ ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಮುಂದಿನ ಪೀಳಿಗೆಯ ಜಿ.ಎಸ್‌.ಟಿ ಸುಧಾರಣೆಗಳು ನಿಮಗೆ ಹೆಚ್ಚು ಪ್ರಯೋಜನ ನೀಡುತ್ತವೆ. ಇಂದಿನಿಂದ ನಿಮ್ಮ ಮಾಸಿಕ ಮನೆಯ ಬಜೆಟ್‌ನಲ್ಲಿ ನಿಮಗೆ ಹೆಚ್ಚು ಅಗತ್ಯವಿರುವ ಪರಿಹಾರ ಸಿಗುತ್ತದೆ. ಅಡುಗೆ ಮನೆಯ ವಸ್ತುಗಳು, ಮಕ್ಕಳ ಶೈಕ್ಷಣಿಕ ಸಾಮಗ್ರಿಗಳು, ಬಟ್ಟೆ ಮತ್ತು ಬೂಟುಗಳು ಎಲ್ಲವೂ ಈಗ ಹೆಚ್ಚು ಕೈಗೆಟುಕುವ ಬೆಲೆಗೆ ಸಿಗುತ್ತವೆ.

ಸ್ನೇಹಿತರೆ,

2014ರ ಹಿಂದಿನ ದಿನಗಳನ್ನು ಯೋಚಿಸಿ. ಎಷ್ಟೊಂದು ತೊಂದರೆಗಳಿದ್ದವು. ಹಣದುಬ್ಬರವು ಗಗನಕ್ಕೇರಿತ್ತು, ಎಲ್ಲೆಡೆ ಬೃಹತ್ ಹಗರಣಗಳು ನಡೆಯುತ್ತಿದ್ದವು, ಅಂದಿನ ಕಾಂಗ್ರೆಸ್ ಸರ್ಕಾರವು ಜನರ ಮೇಲೆ ತೆರಿಗೆಯ ಹೊರೆ ಹೆಚ್ಚಿಸುತ್ತಲೇ ಇತ್ತು. ಆ ಸಮಯದಲ್ಲಿ, ಯಾರಾದರೂ ವರ್ಷಕ್ಕೆ ಕೇವಲ 2 ಲಕ್ಷ ರೂಪಾಯಿ ಗಳಿಸಿದರೂ ಸಹ, ಅವರು ಆದಾಯ ತೆರಿಗೆ ಪಾವತಿಸಬೇಕಾಗಿತ್ತು. ಇದು 11 ವರ್ಷಗಳ ಹಿಂದೆ. 2 ಲಕ್ಷ ರೂಪಾಯಿ ಆದಾಯದ ಮೇಲೆ ತೆರಿಗೆ ವಿಧಿಸಲಾಯಿತು. ಅನೇಕ ಅಗತ್ಯ ವಸ್ತುಗಳ ಮೇಲೆ, ಕಾಂಗ್ರೆಸ್ ಸರ್ಕಾರವು 30 ಪ್ರತಿಶತಕ್ಕಿಂತ ಹೆಚ್ಚು ತೆರಿಗೆ ವಿಧಿಸಿತು. ಮಕ್ಕಳ ಟಾಫಿಗಳ ಮೇಲೂ ತುಂಬಾ ತೆರಿಗೆ ವಿಧಿಸಲಾಯಿತು.

ಸ್ನೇಹಿತರೆ,

ಆ ಸಮಯದಲ್ಲಿ, ನಿಮ್ಮ ಆದಾಯ ಮತ್ತು ಉಳಿತಾಯ ಎರಡನ್ನೂ ಹೆಚ್ಚಿಸಲು ನಾನು ಕೆಲಸ ಮಾಡುತ್ತೇನೆ ಎಂದು ನಾನು ನಿಮಗೆ ಭರವಸೆ ನೀಡಿದ್ದೆ. ಅನೇಕ ವರ್ಷಗಳಲ್ಲಿ, ದೇಶವು ಅನೇಕ ದೊಡ್ಡ ಸವಾಲುಗಳನ್ನು ಎದುರಿಸಿತು. ಆದರೆ ನಾವು ನಿರಂತರವಾಗಿ ಆದಾಯ ತೆರಿಗೆ ಕಡಿಮೆ ಮಾಡಿದ್ದೇವೆ. ಯೋಚಿಸಿ, 11 ವರ್ಷಗಳ ಹಿಂದೆ 2 ಲಕ್ಷ ರೂಪಾಯಿ ಮೇಲಿನ ಆದಾಯಕ್ಕೆ ತೆರಿಗೆ ಇತ್ತು. ಈ ವರ್ಷ, ನಾವು 12 ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತವೆಂದು ಘೋಷಿಸಿದ್ದೇವೆ. ಇಂದಿನಿಂದ, ಜಿ.ಎಸ್‌.ಟಿಯನ್ನು ಕೇವಲ 2 ಶ್ರೇಣಿಗಳಾಗಿ ಸರಳೀಕರಿಸಲಾಗಿದೆ, ಅಂದರೆ, 5 ಪ್ರತಿಶತ ಮತ್ತು 18 ಪ್ರತಿಶತ. ಅನೇಕ ವಸ್ತುಗಳು ಸಂಪೂರ್ಣ ತೆರಿಗೆ ಮುಕ್ತವಾಗಿವೆ, ಇತರೆ ಸರಕುಗಳಿಗೆ ತೆರಿಗೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಾಗಿದೆ. ನೀವು ಹೊಸ ಮನೆ ಕಟ್ಟಲು, ಸ್ಕೂಟರ್ ಅಥವಾ ಬೈಕ್ ಖರೀದಿಸಲು, ಹೊರಗೆ ಊಟ ಮಾಡಲು ಅಥವಾ ಪ್ರಯಾಣಿಸಲು ಬಯಸುತ್ತೀರಾ ಎಂಬುದು ಈಗ ಎಲ್ಲವೂ ಹೆಚ್ಚು ಕೈಗೆಟುಕುವಂತಾಗಿದೆ. ಈ ಜಿ.ಎಸ್‌.ಟಿ ಉಳಿತಾಯ ಉತ್ಸವವು ನಿಮಗೆ ನಿಜಕ್ಕೂ ಸ್ಮರಣೀಯವಾಗಲಿದೆ.

ಸ್ನೇಹಿತರೆ,

"ನಮಸ್ಕಾರ" ಎಂದು ಹೇಳುವ ಮೊದಲು ನೀವು "ಜೈ ಹಿಂದ್" ಎಂದು ಹೇಳುವ ಈ ವಿಶೇಷ ಗುಣಕ್ಕಾಗಿ ನಾನು ಅರುಣಾಚಲ ಪ್ರದೇಶವನ್ನು ಯಾವಾಗಲೂ ಮೆಚ್ಚುತ್ತೇನೆ. ನೀವು ರಾಷ್ಟ್ರವನ್ನು ನಿಮ್ಮ ಮುಂದೆ ಇಡುವ ಜನರು. ಇಂದು, ನಾವೆಲ್ಲರೂ 'ವಿಕಸಿತ ಭಾರತ' (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಿಸಲು ಒಟ್ಟಾಗಿ ಕೆಲಸ ಮಾಡುತ್ತಿರುವಾಗ, ದೇಶವು ನಮ್ಮಿಂದ ಒಂದು ನಿರೀಕ್ಷೆ ಹೊಂದಿದೆ. ಈ ನಿರೀಕ್ಷೆ 'ಆತ್ಮನಿರ್ಭರ ಭಾರತ'(ಸ್ವಾವಲಂಬನೆ). ಭಾರತವು ಸ್ವಾವಲಂಬಿಯಾದಾಗ ಮಾತ್ರ ಅಭಿವೃದ್ಧಿ ಹೊಂದುತ್ತದೆ. ಭಾರತದ ಸ್ವಾವಲಂಬನೆಗಾಗಿ, ಸ್ವದೇಶಿಯ ಮಂತ್ರ ಅತ್ಯಗತ್ಯ. ಕಾಲದ ಬೇಡಿಕೆ, ರಾಷ್ಟ್ರದ ಬೇಡಿಕೆಯೆಂದರೆ, ನಾವು ಸ್ವದೇಶಿ ಅಳವಡಿಸಿಕೊಳ್ಳುವುದಾಗಿದೆ: ದೇಶದಲ್ಲಿ ತಯಾರಾಗುವುದನ್ನು ಮಾತ್ರ ಖರೀದಿಸಿ, ದೇಶದಲ್ಲಿ ತಯಾರಾಗಿರುವುದನ್ನು ಮಾತ್ರ ಮಾರಾಟ ಮಾಡಿ ಮತ್ತು ಹೆಮ್ಮೆಯಿಂದ ಹೇಳಿ - ಇದು ಸ್ವದೇಶಿ. ನೀವೆಲ್ಲರೂ ನನ್ನೊಂದಿಗೆ ಹೇಳುತ್ತೀರಾ? ನಾನು "ಹೆಮ್ಮೆಯಿಂದ ಹೇಳು" ಎಂದು ಹೇಳಿದಾಗ ನೀವು "ಇದು ಸ್ವದೇಶಿ" ಎಂದು ಹೇಳುತ್ತೀರಿ. ಹೆಮ್ಮೆಯಿಂದ ಹೇಳು - ಇದು ಸ್ವದೇಶಿ! ಹೆಮ್ಮೆಯಿಂದ ಹೇಳು - ಇದು ಸ್ವದೇಶಿ! ಹೆಮ್ಮೆಯಿಂದ ಹೇಳು - ಇದು ಸ್ವದೇಶಿ! ಹೆಮ್ಮೆಯಿಂದ ಹೇಳು - ಇದು ಸ್ವದೇಶಿ! ಹೆಮ್ಮೆಯಿಂದ ಹೇಳು - ಇದು ಸ್ವದೇಶಿ! ಈ ಮಂತ್ರವನ್ನು ಅನುಸರಿಸುವ ಮೂಲಕ ರಾಷ್ಟ್ರವು ಪ್ರಗತಿ ಹೊಂದುತ್ತದೆ, ಅರುಣಾಚಲ ಮತ್ತು ಈಶಾನ್ಯದ ಅಭಿವೃದ್ಧಿ ವೇಗಗೊಳ್ಳುತ್ತದೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ನಿಮಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇಂದು ನವರಾತ್ರಿಯ ಶುಭ ಹಬ್ಬ ಮಾತ್ರವಲ್ಲ, ಉಳಿತಾಯ ಉತ್ಸವವೂ ಆಗಿದೆ. ನೀವೆಲ್ಲರೂ ಈ ಭವ್ಯ ಆಚರಣೆಯ ಭಾಗವಾಗಿರುವುದರಿಂದ, ನಾನೊಂದು ಮನವಿ ಮಾಡುತ್ತೇನೆ. ದಯವಿಟ್ಟು ನಿಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆಯಿರಿ, ಬ್ಯಾಟರಿ ದೀಪಗಳನ್ನು ಆನ್ ಮಾಡಿ ಮತ್ತು ಅವುಗಳನ್ನು ಎತ್ತರಕ್ಕೆ ಹಿಡಿಯಿರಿ. ಸುತ್ತಲೂ ನೋಡಿ, ಇದು ಉಳಿತಾಯ ಉತ್ಸವದ ದೃಶ್ಯ, ಇದು ಅದರ ಶಕ್ತಿ. ನವರಾತ್ರಿಯ ಈ ಮೊದಲ ದಿನದಂದು, ಎಲ್ಲೆಡೆ ಬೆಳಕು ಇದೆ ಮತ್ತು ಅರುಣಾಚಲದ ಬೆಳಕು ಇಡೀ ರಾಷ್ಟ್ರಾದ್ಯಂತ ಹರಡುತ್ತದೆ. ನಿಮ್ಮ ಸುತ್ತಲೂ ನೋಡಿ. ಇದು ಮಿನುಗುವ ನಕ್ಷತ್ರಗಳಂತೆ ಹೊಳೆಯುವ ದೀಪಗಳಾಗಿವೆ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ತುಂಬು ಧನ್ಯವಾದಗಳು!

****


(Release ID: 2170452) Visitor Counter : 13