ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಶ್ರೀ ಧರ್ಮೇಂದ್ರ ಪ್ರಧಾನ್ ಅವರು ದೇಶಾದ್ಯಂತದ ಶಾಲಾ ವಿದ್ಯಾರ್ಥಿಗಳಲ್ಲಿ ನಾವೀನ್ಯತೆಯನ್ನು ಪ್ರಚೋದಿಸಲು ʻವಿಕಸಿತ ಭಾರತ್ ಬಿಲ್ಡಥಾನ್- 2025ʼಕ್ಕೆ ಚಾಲನೆ ನೀಡಿದರು
ʻವಿಕಸಿತ ಭಾರತ್ ಬಿಲ್ಡಥಾನ್-2025ʼ ಅಭಿಯಾನವು ನಾವೀನ್ಯತೆಯ ಪುನರುಜ್ಜೀವನಕ್ಕೆ ಕಾರಣವಾಗಲಿದೆ ಮತ್ತು ಯುವ ನವೋದ್ಯಮಿಗಳನ್ನು ʻಆತ್ಮನಿರ್ಭರ ಭಾರತʼದ ಚಾಲಕರಾಗಿ ಸಶಕ್ತಗೊಳಿಸುತ್ತದೆ: ಶ್ರೀ ಧರ್ಮೇಂದ್ರ ಪ್ರಧಾನ್
1,000ಕ್ಕೂ ಹೆಚ್ಚು ವಿಜೇತರ ಸನ್ಮಾನಗಳು ಮತ್ತು ಫಲಿತಾಂಶಗಳೊಂದಿಗೆ ಜನವರಿ 2026ರಲ್ಲಿ ʻಬಿಲ್ಡಥಾನ್ʼ ಸಂಪನ್ನಗೊಳ್ಳಲಿದೆ
Posted On:
23 SEP 2025 5:25PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಇಂದು `ವಿಕಸಿತ ಭಾರತ ಬಿಲ್ಡಥಾನ್- 2025’ಕ್ಕೆ ಚಾಲನೆ ನೀಡಿದರು. ಇದು ಭಾರತದಾದ್ಯಂತದ ಶಾಲೆಗಳಾದ್ಯಂತ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ರೂಪಿಸಲಾದ ಅದ್ಭುತ ರಾಷ್ಟ್ರವ್ಯಾಪಿ ನಾವೀನ್ಯತೆ ಆಂದೋಲನವಾಗಿದೆ. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು(ಡಿ.ಒ.ಎಸ್.ಇ.ಎಲ್), ʻಅಟಲ್ ಇನ್ನೋವೇಶನ್ ಮಿಷನ್ʼ, ನೀತಿ ಆಯೋಗ ಮತ್ತು ʻಎ.ಐ.ಸಿ.ಟಿ.ಇʼ ಸಹಯೋಗದೊಂದಿಗೆ 'ವಿಕಸಿತ ಭಾರತ್ ಬಿಲ್ಡಥಾನ್-2025' ಅನ್ನು ಆಯೋಜಿಸುತ್ತಿದೆ. ಈ ಸಂದರ್ಭದಲ್ಲಿ ಸಚಿವರು ʻವಿಕಸಿತ ಭಾರತ್ ಬಿಲ್ಡಥಾನ್ʼನ ಜಿಂಗಲ್ ಮತ್ತು ಲಾಂಛನವನ್ನು(ಲೋಗೊ) ಬಿಡುಗಡೆ ಮಾಡಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿಗಳಾದ ಶ್ರೀ ಸಂಜಯ್ ಕುಮಾರ್; ಭಾರತ ಸರ್ಕಾರದ ವಾರ್ತಾ ಶಾಖೆ ಪ್ರಧಾನ ಮಹಾನಿರ್ದೇಶಕರಾದ ಶ್ರೀ ಧೀರೇಂದ್ರ ಓಜಾ; ಎ.ಐ.ಸಿ.ಟಿ.ಇ ಅಧ್ಯಕ್ಷರಾದ ಪ್ರೊ. ಟಿ.ಜಿ.ಸೀತಾರಾಮ್; ಎ.ಐ.ಸಿ.ಟಿ.ಇ ಉಪಾಧ್ಯಕ್ಷರಾದ ಡಾ. ಅಭಯ್ ಜೆರೆ; ನೀತಿ ಆಯೋಗದ ʻಎ.ಐ.ಎಂʼ ಯೋಜನಾ ನಿರ್ದೇಶಕರಾದ ಶ್ರೀ ದೀಪಕ್ ಬಾಗ್ಲಾ; ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಧೀರಜ್ ಸಾಹು; ಹಾಗೂ ಸಚಿವಾಲಯ, ʻಕೆ.ವಿ.ಎಸ್ʼ ಮತ್ತು ʻಎನ್.ವಿ.ಎಸ್ʼನ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಇದುವರೆಗಿನ ಅತಿದೊಡ್ಡ ಶಾಲಾ ಹ್ಯಾಕಥಾನ್ ಎನಿಸಿರುವ ʻವಿಕಸಿತ ಭಾರತ್ ಬಿಲ್ಡಥಾನ್ʼ ಉಪಕ್ರಮವು 'ವೋಕಲ್ ಫಾರ್ ಲೋಕಲ್ʼ, ʻಆತ್ಮನಿರ್ಭರ ಭಾರತʼ, ʻಸ್ವದೇಶಿ ಮತ್ತು ಸಮೃದ್ಧಿ' ಎಂಬ ನಾಲ್ಕು ವಿಷಯಗಳ ಮೇಲೆ ಉತ್ಪನ್ನಗಳನ್ನು ಕಲ್ಪನೆ ಮಾಡಲು ಮತ್ತು ನಿರ್ಮಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ. ಆ ಮೂಲಕ ತಳಮಟ್ಟದಲ್ಲಿ ನಾವೀನ್ಯತೆಯ ಸಂಸ್ಕೃತಿಯನ್ನು ಮತ್ತಷ್ಟು ಬಲಪಡಿಸುತ್ತದೆ,ʼʼ ಎಂದು ಹೇಳಿದರು. ಈ ಉಪಕ್ರಮವು ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಆಚರಿಸುತ್ತದೆ, ದೇಶದಲ್ಲಿ ನಾವೀನ್ಯತೆಯ ಪುನರುಜ್ಜೀವನವನ್ನು ತರುತ್ತದೆ ಮತ್ತು ಯುವ ಪೀಳಿಗೆಯು ಸಮೃದ್ಧಿ, ವಿಕಸಿತ ಮತ್ತು ಆತ್ಮನಿರ್ಭರ ಭಾರತದ ಪ್ರಮುಖ ಚಾಲಕರಾಗುವುದನ್ನು ಖಚಿತಪಡಿಸುತ್ತದೆ,ʼʼ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯದರ್ಶಿಗಳಾದ ಶ್ರೀ ಸಂಜಯ್ ಕುಮಾರ್ ಅವರು ಸಮಗ್ರ ಅವಲೋಕನವನ್ನು ಪ್ರಸ್ತುತಪಡಿಸುವ ಮೂಲಕ ʻಬಿಲ್ಡಥಾನ್ʼಗೆ ವೇದಿಕೆ ಸಜ್ಜುಗೊಳಿಸದರು. ಇದೇವೇಳೆ, ಭಾರತದಾದ್ಯಂತ ವಿದ್ಯಾರ್ಥಿಗಳ ನಾವೀನ್ಯತೆಯನ್ನು ಬೆಳೆಸುವಲ್ಲಿ ಅದರ ಮಹತ್ವವನ್ನು ಎತ್ತಿ ತೋರಿದರು.
ರಾಷ್ಟ್ರೀಯ ಅಭಿವೃದ್ಧಿಗಾಗಿ ಸೃಜನಶೀಲ ಚಿಂತನೆಯನ್ನು ಪ್ರೇರೇಪಿಸುವುದು, ಸ್ವಾವಲಂಬನೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವುದು, ಸಂಯೋಜಿತ ನಾವೀನ್ಯತೆಯಲ್ಲಿ ಶಾಲೆಗಳನ್ನು ತೊಡಗಿಸಿಕೊಳ್ಳುವುದು, ಸಂಭಾವ್ಯ ವಿಶ್ವ ದಾಖಲೆಯ ಮೂಲಕ ಭಾರತವನ್ನು ಜಾಗತಿಕ ನಾವೀನ್ಯತೆ ರಾಜಧಾನಿಯಾಗಿ ಬಿಂಬಿಸುವುದು ಹಾಗೂ ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಯುವ ಸಮಸ್ಯೆ ಪರಿಹರಿಸುವವರನ್ನು ಆಚರಿಸುವ ಗುರಿಗಳನ್ನು ʻಬಿಲ್ಡಥಾನ್ʼ ಹೊಂದಿದೆ. ʻಶಾಲಾ ನಾವಿನ್ಯತೆ ಮ್ಯಾರಥಾನ್-2024ʼರ ಯಶಸ್ಸಿನ ಆಧಾರದ ಮೇಲೆ ಇದನ್ನು ರೂಪಿಸಲಾಗಿದೆ. ಇದು ʻವಿದ್ಯಾರ್ಥಿ ನಾವಿನ್ಯತೆ ಕಾರ್ಯಕ್ರಮʼ(ಎಸ್ಐಪಿ) ಮತ್ತು ʻವಿದ್ಯಾರ್ಥಿ ಉದ್ಯಮಶೀಲತೆ ಕಾರ್ಯಕ್ರಮʼ(ಎಸ್ಇಪಿ)ದಂತಹ ಉಪಕ್ರಮಗಳಿಗೂ ʻಶಾಲಾ ನಾವಿನ್ಯತೆ ಮ್ಯಾರಥಾನ್ʼ ದಾರಿ ಮಾಡಿದೆ. ಜೊತೆಗೆ ʻಅಟಲ್ ಟಿಂಕರಿಂಗ್ ಲ್ಯಾಬ್ʼನಿಂದದ ಪೇಟೆಂಟ್‌ಗಳು ಮತ್ತು ನವೋದ್ಯಮಳಿಗೂ ಇದು ಉತ್ತೇಜನ ನೀಡಿದೆ.
ʻವಿಕಸಿತ ಭಾರತ ಬಿಲ್ಡಥಾನ್ʼನ ಪ್ರಯಾಣವು ಇಂದು, ಸೆಪ್ಟೆಂಬರ್ 23ರಂದು ಪ್ರಾರಂಭವಾಗಲಿದೆ. ʻವಿಕಸಿತ ಭಾರತ ಬಿಲ್ಡಥಾನ್ʼ ಪೋರ್ಟಲ್‌ನಲ್ಲಿ(https://vbb.mic.gov.in/) ನೋಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 6ರವರೆಗೆ ಅವಕಾಶವಿದೆ. ಇದರ ನಂತರ ಅಕ್ಟೋಬರ್ 6 ರಿಂದ ಅಕ್ಟೋಬರ್ 13ರವರೆಗೆ ಶಾಲೆಗಳಿಗೆ ತಯಾರಿ ಅವಧಿ ಇರುತ್ತದೆ, ಇದರಲ್ಲಿ ಶಿಕ್ಷಕರು ಪೋರ್ಟಲ್‌ನಲ್ಲಿ ನೋಂದಣಿ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿ ತಂಡಗಳಿಗೆ ಮಾರ್ಗದರ್ಶನ ನೀಡುತ್ತಾರೆ. ನಂತರ ವಿದ್ಯಾರ್ಥಿಗಳು ತಮ್ಮ ಆಲೋಚನೆಗಳು ಮತ್ತು ಮೂಲಮಾದರಿಗಳನ್ನು ಪೋರ್ಟಲ್‌ನಲ್ಲಿ ಸಲ್ಲಿಸುತ್ತಾರೆ. ʻಬಿಲ್ಡಾಥಾನ್ʼನ ಪ್ರಧಾನ ಕಾರ್ಯಕ್ರಮವಾದ ʻಲೈವ್ ಸಿಂಕ್ರೊನೈಸ್ಡ್ ಇನ್ನೋವೇಶನ್ ಈವೆಂಟ್ʼ ಅಕ್ಟೋಬರ್ 13 ರಂದು ನಡೆಯಲಿದೆ. ಈ ಕಾರ್ಯಕ್ರಮದ ನಂತರ, ವಿದ್ಯಾರ್ಥಿಗಳು ತಮ್ಮ ಅಂತಿಮ ನಮೂದುಗಳನ್ನು ಅಕ್ಟೋಬರ್ 13 ರಿಂದ ಅಕ್ಟೋಬರ್ 31 ರವರೆಗೆ ಸಲ್ಲಿಸುತ್ತಾರೆ. ತಜ್ಞರ ಸಮಿತಿಯು ನವೆಂಬರ್ 1 ರಿಂದ ಡಿಸೆಂಬರ್ 31 ರವರೆಗೆ ಎರಡು ತಿಂಗಳ ಅವಧಿಯಲ್ಲಿ ಸಲ್ಲಿಕೆಗಳನ್ನು ಮೌಲ್ಯಮಾಪನ ಮಾಡುತ್ತದೆ. ಫಲಿತಾಂಶಗಳ ಪ್ರಕಟಣೆ ಮತ್ತು ಅಗ್ರ 1,000ಕ್ಕೂ ಹೆಚ್ಚು ವಿಜೇತರ ಸನ್ಮಾನದೊಂದಿಗೆ ಜನವರಿ 2026 ರಲ್ಲಿ ʻಬಿಲ್ಡಾಥಾನ್ʼ ಸಂಪನ್ನಗೊಳ್ಳಲಿದೆ.
ʻವಿಕಸಿತ ಭಾರತ ಬಿಲ್ಡಥಾನ್-2025ʼರ ನಿರೂಪಣಾ ವಿಷಯ ಮತ್ತು ಉದ್ದೇಶಗಳನ್ನು ತಿಳಿಸುವ ವೀಡಿಯೊವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
****
(Release ID: 2170281)