ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅರುಣಾಚಲಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂ. ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ
ಅರುಣಾಚಲ ಪ್ರದೇಶ ಶಾಂತಿ ಮತ್ತು ಸಂಸ್ಕೃತಿಯ ಸಂಗಮ, ಇದು ಭಾರತದ ಹೆಮ್ಮೆ: ಪ್ರಧಾನಮಂತ್ರಿ
ಈಶಾನ್ಯ ಭಾರತದ ಅಷ್ಟಲಕ್ಷ್ಮಿ: ಪ್ರಧಾನಮಂತ್ರಿ
ಈಶಾನ್ಯವು ರಾಷ್ಟ್ರದ ಅಭಿವೃದ್ಧಿಯ ಪ್ರೇರಕ ಶಕ್ತಿಯಾಗುತ್ತಿದೆ: ಪ್ರಧಾನಮಂತ್ರಿ
ವೈಬ್ರಂಟ್ ವಿಲೇಜ್ ಕಾರ್ಯಕ್ರಮದ ಯಶಸ್ಸು ಜನರ ಜೀವನ ಸುಲಭವಾಗಿದೆ: ಪ್ರಧಾನಮಂತ್ರಿ
ಜಿ.ಎಸ್.ಟಿಯನ್ನು ಈಗ ಶೇ.5 ಮತ್ತು ಶೇ.18ಕ್ಕೆ ಇಳಿಸಿ ಸರಳೀಕರಿಸಲಾಗಿದೆ, ಹೆಚ್ಚಿನ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಮಾಡಲಾಗಿದೆ: ಪ್ರಧಾನಮಂತ್ರಿ
Posted On:
22 SEP 2025 1:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಸುಮಾರು 5,100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ವಶಕ್ತ ಡೊನ್ಯಿ ಪೊಲೊಗೆ ಗೌರವ ಸಲ್ಲಿಸಿ, ಎಲ್ಲರಿಗೂ ಆಶೀರ್ವಾದ ಮಾಡಬೇಕೆಂದು ಪ್ರಾರ್ಥಿಸಿದರು.
ಹೆಲಿಪ್ಯಾಡ್‌ನಿಂದ ಇಳಿದು ನೆಲದ ಮೇಲೆ ಪ್ರಯಾಣ ಮಾಡಿದೆ, ದಾರಿಯುದ್ದಕ್ಕೂ ಅಸಂಖ್ಯಾತ ಜನರನ್ನು ಭೇಟಿ ಮಾಡಿದೆ ಮತ್ತು ಮಕ್ಕಳು ಮತ್ತು ಯುವಕರು ರಾಷ್ಟ್ರಧ್ವಜವನ್ನು ಹಿಡಿದಿರುವುದನ್ನು ನೋಡಿದೆ, ಅರುಣಾಚಲ ಪ್ರದೇಶದ ಆತ್ಮೀಯ ಆತಿಥ್ಯದಿಂದಾಗಿ ಹೃದಯ ತುಂಬಿ ಬಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅರುಣಾಚಲವು ಉದಯಿಸುವ ಸೂರ್ಯನ ಭೂಮಿ ಮಾತ್ರವಲ್ಲದೆ ಉತ್ಸಾಹಭರಿತ ದೇಶಭಕ್ತಿಯ ಭೂಮಿಯಾಗಿದೆ ಎಂದರು. ರಾಷ್ಟ್ರಧ್ವಜದ ಮೊದಲ ಬಣ್ಣ ಕೇಸರಿ ಬಣ್ಣದ್ದಾಗಿರುವಂತೆ, ಅರುಣಾಚಲದ ಆತ್ಮವೂ ಕೇಸರಿಯಿಂದ ಆರಂಭವಾಗುತ್ತದೆ. ಅರುಣಾಚಲದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಶೌರ್ಯ ಮತ್ತು ಸರಳತೆಯ ಸಂಕೇತ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ರಾಜ್ಯದ ಬಗ್ಗೆ ತಮ್ಮ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದ ಅವರು, ಪ್ರತಿ ಭೇಟಿಯು ತನಗೆ ಅಪಾರ ಸಂತೋಷವನ್ನುಂಟು ಮಾಡುತ್ತದೆ ಮತ್ತು ಜನರೊಂದಿಗೆ ಕಳೆದ ಪ್ರತಿ ಕ್ಷಣವೂ ಸ್ಮರಣೀಯವಾಗಿದೆ ಎಂದು ಹೇಳಿದರು. ತನಗೆ ತೋರಿಸುತ್ತಿರುವ ಪ್ರೀತಿ ಮತ್ತು ವಾತ್ಸಲ್ಯವನ್ನು ತನಗೆ ದೊಡ್ಡ ಗೌರವ ದೊರೆತಂತಾಗಿದೆ ಎಂದರು. "ತವಾಂಗ್ ಮಠದಿಂದ ನಮ್ಸೈನಲ್ಲಿರುವ ಗೋಲ್ಡನ್ ಪಗೋಡಾದವರೆಗೆ, ಅರುಣಾಚಲಪ್ರದೇಶವು ಶಾಂತಿ ಮತ್ತು ಸಂಸ್ಕೃತಿಯ ಸಂಗಮವನ್ನು ಪ್ರತಿನಿಧಿಸುತ್ತದೆ" ಎಂದು ಪ್ರಧಾನಮಂತ್ರಿ ಹೇಳಿದರು, ಈ ಪವಿತ್ರ ಭೂಮಿಗೆ ನಮಸ್ಕರಿಸುತ್ತಾ, ಇದು ಭಾರತ ಮಾತೆಯ ಹೆಮ್ಮೆ ಎಂದು ಬಣ್ಣಿಸಿದರು.
ಅರುಣಾಚಲ ಪ್ರದೇಶದ ಇಂದಿನ ತಮ್ಮ ಭೇಟಿ ಮೂರು ವಿಭಿನ್ನ ಕಾರಣಗಳಿಗಳಿಂದಾಗಿ ಅತ್ಯಂತ ವಿಶೇಷವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಮೊದಲನೆಯದಾಗಿ, ನವರಾತ್ರಿಯ ಶುಭ ದಿನದಂದು ಸುಂದರವಾದ ಪರ್ವತ ಶ್ರೇಣಿಗಳನ್ನು ವೀಕ್ಷಿಸುವ ಸೌಭಾಗ್ಯ ತಮಗೆ ದೊರಕಿತು ಎಂದು ಹೇಳಿದರು. ಈ ದಿನದಂದು ಭಕ್ತರು ಹಿಮಾಲಯದ ಪುತ್ರಿ ಮಾತೆ ಶೈಲಪುತ್ರಿಯನ್ನು ಪೂಜಿಸುತ್ತಾರೆ ಎಂದು ಅವರು ಹೇಳಿದರು. ಎರಡನೆಯದಾಗಿ, ದೇಶಾದ್ಯಂತ ಮುಂದಿನ ಪೀಳಿಗೆಯ ಜಿ.ಎಸ್.ಟಿ ಸುಧಾರಣೆಗಳ ಅನುಷ್ಠಾನ ಮತ್ತು ಜಿ.ಎಸ್.ಟಿ ಉಳಿತಾಯ ಉತ್ಸವ ಆರಂಭವಾಗುತ್ತಿದೆ ಎಂದು ಘೋಷಿಸಿದರು. ಹಬ್ಬದ ಸಮಯದಲ್ಲಿ ನಾಗರಿಕರಿಗೆ ಎರಡು ಪಟ್ಟು ಲಾಭವಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಮೂರನೆಯದಾಗಿ, ವಿದ್ಯುತ್, ಸಂಪರ್ಕ, ಪ್ರವಾಸೋದ್ಯಮ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅರುಣಾಚಲ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯನ್ನು ಅವರು ಒತ್ತಿ ಹೇಳಿದರು. ಇದು ಕೇಂದ್ರ ಮತ್ತು ರಾಜ್ಯದಲ್ಲಿನ ತಮ್ಮ ಸರ್ಕಾರಗಳ ಡಬಲ್ ಪ್ರಯೋಜನವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು ಮತ್ತು ಈ ಯೋಜನೆಗಳಿಗಾಗಿ ಅರುಣಾಚಲದ ಜನರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಜಿ.ಎಸ್.ಟಿ ಉಳಿತಾಯ ಉತ್ಸವವು ಭಾರತದ ಜನರಿಗೆ ಸಂತೋಷ, ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ಅವರು ದೃಢಪಡಿಸಿದರು.
ಅರುಣಾಚಲ ಪ್ರದೇಶವು ಸೂರ್ಯನ ಕಿರಣಗಳನ್ನು ಮೊದಲು ಪಡೆಯುತ್ತಿದ್ದರೂ ಸಹ ಕ್ಷಿಪ್ರ ಅಭಿವೃದ್ಧಿಯ ಕಿರಣಗಳು ಈ ಪ್ರದೇಶವನ್ನು ತಲುಪಲು ಹಲವು ದಶಕಗಳೇ ತೆಗೆದುಕೊಂಡಿದ್ದು ದುರದೃಷ್ಟಕರ ಎಂದು ಉಲ್ಲೇಖಿಸಿದ ಶ್ರೀ ನರೇಂದ್ರ ಮೋದಿ, 2014ಕ್ಕೂ ಮುನ್ನ ಹಲವು ಬಾರಿ ಅರುಣಾಚಲಕ್ಕೆ ಭೇಟಿ ನೀಡಿ ಇಲ್ಲಿನ ಜನರೊಂದಿಗೆ ಇದ್ದುದ್ದನ್ನು ನೆನಪಿಸಿಕೊಂಡರು. ರಾಜ್ಯವು ಪ್ರಕೃತಿಯಿಂದ, ಅದರ ಭೂಮಿ, ಶ್ರಮಶೀಲ ನಾಗರಿಕರು ಮತ್ತು ಅಪಾರ ಸಾಮರ್ಥ್ಯದೊಂದಿಗೆ ಹೇರಳವಾಗಿ ಆಶೀರ್ವದಿಸಲ್ಪಟ್ಟಿದೆ. ಈ ಎಲ್ಲಾ ಸಾಮರ್ಥ್ಯಗಳ ಹೊರತಾಗಿಯೂ ಹಿಂದಿನ ಕಾಲದಲ್ಲಿ ದೆಹಲಿಯಿಂದ ಆಡಳಿತ ನಡೆಸಿದವರು ಅರುಣಾಚಲವನ್ನು ನಿರಂತರವಾಗಿ ನಿರ್ಲಕ್ಷಿಸಿದ್ದಾರೆ ಎಂದು ಪ್ರಧಾನಮಂತ್ರಿ ಪ್ರಮುಖವಾಗಿ ಪ್ರಸ್ತಾಪಿಸಿದರು. ಕಡಿಮೆ ಜನಸಂಖ್ಯೆ ಮತ್ತು ಕೇವಲ ಎರಡು ಲೋಕಸಭಾ ಸ್ಥಾನಗಳನ್ನು ಹೊಂದಿರುವ ಅರುಣಾಚಲ ಪ್ರದೇಶವು ಗಮನಕ್ಕೆ ಅರ್ಹವಲ್ಲ ಎಂಬ ಮನಸ್ಥಿತಿಗಾಗಿ ಪ್ರಧಾನಮಂತ್ರಿ ಅವರು ಕೆಲವು ರಾಜಕೀಯ ಪಕ್ಷಗಳನ್ನು ಟೀಕಿಸಿದರು. ಈ ವಿಧಾನವು ಅರುಣಾಚಲ ಪ್ರದೇಶ ಮತ್ತು ಅಭಿವೃದ್ಧಿಯ ಪಯಣದಲ್ಲಿ ಬಹಳ ಹಿಂದುಳಿದಿದ್ದ ಇಡೀ ಈಶಾನ್ಯಕ್ಕೆ ಗಮನಾರ್ಹ ಹಾನಿಯನ್ನುಂಟುಮಾಡಿದೆ ಎಂದು ಅವರು ಹೇಳಿದರು.
2014ರಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದ ನಂತರ ಹಿಂದಿನ ಸರ್ಕಾರದ ಮನಸ್ಥಿತಿಯಿಂದ ದೇಶವನ್ನು ಮುಕ್ತಗೊಳಿಸಲು ಸಂಕಲ್ಪ ಮಾಡಿದ್ದೇನೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ತಮ್ಮ ಸರ್ಕಾರದ ಮಾರ್ಗದರ್ಶಿ ಸ್ಫೂರ್ತಿ ಯಾವುದೇ ರಾಜ್ಯದ ಮತಗಳು ಅಥವಾ ಸ್ಥಾನಗಳ ಸಂಖ್ಯೆ ಮುಖ್ಯವಲ್ಲ, ಬದಲಿಗೆ “ರಾಷ್ಟ್ರ ಮೊದಲು” ಎಂಬ ತತ್ವ ಎಂದು ಅವರು ಬಲವಾಗಿ ಪ್ರತಿಪಾದಿಸಿದರು. ಸರ್ಕಾರದ ಪ್ರಮುಖ ಮಂತ್ರ - 'ನಾಗರಿಕ ದೇವೋಭವ'ವನ್ನು ಅವರು ಪುನರುಚ್ಚರಿಸಿದರು. ಹಿಂದೆಂದೂ ಗುರುತಿಸಲ್ಪಡದವರನ್ನು ಈಗ ನರೇಂದ್ರ ಮೋದಿ ಪೂಜಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ವಿರೋಧ ಪಕ್ಷದ ಆಡಳಿತದಲ್ಲಿ ನಿರ್ಲಕ್ಷಿಸಲ್ಪಟ್ಟ ಈಶಾನ್ಯವು 2014ರ ನಂತರ ಅಭಿವೃದ್ಧಿ ಆದ್ಯತೆಗಳ ಕೇಂದ್ರವಾಯಿತು ಎಂದು ಅವರು ಪ್ರಮುಖವಾಗಿ ಪ್ರತಿಪಾದಿಸಿದರು. ಪ್ರದೇಶದ ಅಭಿವೃದ್ಧಿಗಾಗಿ ಬಜೆಟ್ ಅನ್ನು ಹಲವು ಪಟ್ಟು ಹೆಚ್ಚಳ ಮಾಡಲಾಗಿದೆ ಮತ್ತು ಕೊನೆಯ ಮೈಲು ಸಂಪರ್ಕ ಮತ್ತು ಸೇವೆಯನ್ನು ನಮ್ಮ ಆಡಳಿತದ ಹೆಗ್ಗರುತುಗಳನ್ನಾಗಿ ಮಾಡಲಾಯಿತು. ಆಡಳಿತವು ಇನ್ನು ಮುಂದೆ ದೆಹಲಿಗೆ ಸೀಮಿತವಾಗಿರುವುದಿಲ್ಲ, ಅಧಿಕಾರಿಗಳು ಮತ್ತು ಮಂತ್ರಿಗಳು ಆಗಾಗ್ಗೆ ಈಶಾನ್ಯಕ್ಕೆ ಭೇಟಿ ನೀಡುತ್ತಿರಲೇಬೇಕು ಎಂದು ಅವರು ಪ್ರತಿಪಾದಿಸಿದರು.
ಹಿಂದಿನ ಸರ್ಕಾರದ ಆಡಳಿತದಲ್ಲಿ, ಕೇಂದ್ರ ಸಚಿವರು ಎರಡರಿಂದ ಮೂರು ತಿಂಗಳಿಗೊಮ್ಮೆ ಮಾತ್ರ ಈಶಾನ್ಯಕ್ಕೆ ಭೇಟಿ ನೀಡುತ್ತಿದ್ದರು ಎಂದು ಒತ್ತಿ ಹೇಳಿದರು. ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ಸರ್ಕಾರದ ಅಡಿಯಲ್ಲಿ, ಕೇಂದ್ರ ಸಚಿವರು 800 ಕ್ಕೂ ಅಧಿಕ ಬಾರಿ ಈಶಾನ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಈ ಭೇಟಿಗಳು ಸಾಂಕೇತಿಕವಲ್ಲ ಎಂದು ಅವರು ಒತ್ತಿ ಹೇಳಿದರು; ಸಚಿವರು ರಾತ್ರಿಯಿಡೀ ಉಳಿದು ಈ ಪ್ರದೇಶದೊಂದಿಗೆ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸ್ವತಃ ತಾವು ಈಶಾನ್ಯಕ್ಕೆ 70 ಕ್ಕೂ ಅಧಿಕ ಬಾರಿ ಭೇಟಿ ನೀಡಿರುವುದಾಗಿ ಪ್ರಧಾನಮಂತ್ರಿ ಹೇಳಿದರು. ಕಳೆದ ವಾರವಷ್ಟೇ ತಾವು ಮಿಜೋರಂ, ಮಣಿಪುರ ಮತ್ತು ಅಸ್ಸಾಂಗೆ ಪ್ರಯಾಣಿಸಿ ಗುವಾಹಟಿಯಲ್ಲಿ ರಾತ್ರಿ ಕಳೆದಿರುವುದಾಗಿ ಹೇಳಿದರು. ಈಶಾನ್ಯದ ಬಗ್ಗೆ ತಮ್ಮ ಆಳವಾದ ಪ್ರೀತಿಯನ್ನು ವ್ಯಕ್ತಪಡಿಸಿದ ಅವರು, ತಮ್ಮ ಸರ್ಕಾರವು ಭಾವನಾತ್ಮಕ ಅಂತರವನ್ನು ಕಡಿಮೆ ಮಾಡಿದೆ ಮತ್ತು ದೆಹಲಿಯನ್ನು ಜನರ ಸಮೀಪಕ್ಕೆ ತಂದಿದೆ ಎಂದು ಹೇಳಿದರು.
ಈಶಾನ್ಯದ ಎಂಟು ರಾಜ್ಯಗಳನ್ನು ಅಷ್ಟಲಕ್ಷ್ಮಿಯರೆಂದು ಪೂಜಿಸಲಾಗುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಆದ್ದರಿಂದ ಅಭಿವೃದ್ಧಿಯ ಪಯಣದಲ್ಲಿ ಹಿಂದೆ ಉಳಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಕೇಂದ್ರ ಸರ್ಕಾರವು ಈ ಪ್ರದೇಶದ ಪ್ರಗತಿಗೆ ಗಣನೀಯ ಪ್ರಮಾಣದ ಅನುದಾನವನ್ನು ಹಂಚಿಕೆ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಒಂದು ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಕೇಂದ್ರವು ಸಂಗ್ರಹಿಸುವ ತೆರಿಗೆಯ ಒಂದು ಭಾಗವನ್ನು ರಾಜ್ಯಗಳಿಗೆ ವಿತರಿಸಲಾಗುತ್ತದೆ ಎಂದು ಅವರು ವಿವರಿಸಿದರು. ಹಿಂದಿನ ಆಡಳಿತದಲ್ಲಿ, ಅರುಣಾಚಲ ಪ್ರದೇಶವು ಹತ್ತು ವರ್ಷಗಳಲ್ಲಿ ಕೇಂದ್ರ ತೆರಿಗೆಗಳಿಂದ ಕೇವಲ 6,000 ಕೋಟಿ ರೂಪಾಯಿಗಳನ್ನು ಪಡೆಯಿತು. ಅದಕ್ಕೆ ಪ್ರತಿಯಾಗಿ ನಮ್ಮ ಸರ್ಕಾರದಡಿಯಲ್ಲಿ ಅರುಣಾಚಲ ಪ್ರದೇಶವು ಅದೇ ಅವಧಿಯಲ್ಲಿ 1 ಲಕ್ಷ ಕೋಟಿ ರೂಪಾಯಿಗೂ ಅಧಿಕ ಅಂದರೆ 16 ಪಟ್ಟು ಅಧಿಕ ಅನುದಾನ ಪಡೆದಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಈ ಅಂಕಿ ಅಂಶವು ತೆರಿಗೆ ಪಾಲಿಗೆ ಮಾತ್ರ ಸಂಬಂಧಿಸಿದೆ ಮತ್ತು ರಾಜ್ಯದಲ್ಲಿ ಜಾರಿಗೆ ಬರುತ್ತಿರುವ ವಿವಿಧ ಯೋಜನೆಗಳು ಮತ್ತು ಪ್ರಮುಖ ಮೂಲಸೌಕರ್ಯ ಯೋಜನೆಗಳಡಿಯಲ್ಲಿ ಹೆಚ್ಚುವರಿ ವೆಚ್ಚಗಳು ಒಳಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅದಕ್ಕಾಗಿಯೇ ಅರುಣಾಚಲ ಪ್ರದೇಶ ಇಂದು ಇಷ್ಟೊಂದು ವ್ಯಾಪಕ ಮತ್ತು ಕ್ಷಿಪ್ರ ಅಭಿವೃದ್ಧಿಗೆ ಸಾಕ್ಷಿಯಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಉದ್ದೇಶಗಳು ಉದಾತ್ತವಾಗಿದ್ದರೆ ಮತ್ತು ಪ್ರಯತ್ನಗಳು ಪ್ರಾಮಾಣಿಕವಾಗಿದ್ದರೆ, ಫಲಿತಾಂಶ ಸ್ಪಷ್ಟವಾಗಿ ಗೋಚರಿಸುತ್ತವೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಉತ್ತಮ ಆಡಳಿತದ ಮೇಲೆ ಹೆಚ್ಚಿನ ಗಮನಹರಿಸಿರುವ ಈಶಾನ್ಯವು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರೇರಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. ತಮ್ಮ ಸರ್ಕಾರಕ್ಕೆ ನಾಗರಿಕರ ಕಲ್ಯಾಣಕ್ಕಿಂತ ಬೇರೇನೂ ಮುಖ್ಯವಲ್ಲ ಎಂದು ಅವರು ದೃಢಪಡಿಸಿದರು. ಜೀವನವನ್ನು ಸುಲಭಗೊಳಿಸುವುದು, ಸರ್ಕಾರವು ಜೀವನ ಸುಲಭಗೊಳಿಸುವತ್ತ ಕೆಲಸ ಮಾಡುತ್ತಿದೆ; ಪ್ರಯಾಣದ ತೊಂದರೆಗಳನ್ನು ಕಡಿಮೆ ಮಾಡಲು, ಸುಲಭ ಪ್ರಯಾಣ; ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸಲು, ವೈದ್ಯಕೀಯ ಚಿಕಿತ್ಸೆಯ ಸುಲಭವಾಗಿ ದೊರಕುವಂತೆ ಮಾಡುವುದು, ಸುಲಭವಾಗಿ ಶಿಕ್ಷಣವನ್ನು ಲಭ್ಯವಾಗುವಂತೆ ಮಾಡುವುದು ಮತ್ತು ವ್ಯವಹಾರವನ್ನು ಸುಗಮಗೊಳಿಸಲು, ವ್ಯಾಪಾರವನ್ನು ಸುಗಮಗೊಳಿಸುವತ್ತ ಕೆಲಸ ಮಾಡಲಾಗುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಗುರಿಗಳನ್ನು ಸಕ್ರಿಯವಾಗಿ ಅನುಸರಿಸುತ್ತಿವೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಒಂದು ಕಾಲದಲ್ಲಿ ರಸ್ತೆಗಳನ್ನು ಊಹಿಸಿಕೊಳ್ಳಲಾಗದ ಪ್ರದೇಶಗಳು ಈಗ ಗುಣಮಟ್ಟದ ಹೆದ್ದಾರಿಗಳ ನಿರ್ಮಾಣಕ್ಕೆ ಸಾಕ್ಷಿಯಾಗುತ್ತಿವೆ. ಒಂದು ಕಾಲದಲ್ಲಿ ಅಸಾಧ್ಯವೆಂದು ಪರಿಗಣಿಸಲಾಗಿದ್ದ ಸೆಲಾ ಸುರಂಗದಂತಹ ಮೂಲಸೌಕರ್ಯವು ಈಗ ಅರುಣಾಚಲ ಪ್ರದೇಶದ ಪ್ರಗತಿಯ ಸಂಕೇತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಅರುಣಾಚಲ ಪ್ರದೇಶ ಮತ್ತು ಈಶಾನ್ಯದ ದೂರದ ಪ್ರದೇಶಗಳಲ್ಲಿ ಹೆಲಿಪೋರ್ಟ್‌ಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಉಡಾನ್ ಯೋಜನೆಯಡಿಯಲ್ಲಿ ಈ ಪ್ರದೇಶಗಳನ್ನು ಸಂಯೋಜಿಸುವ ಮೂಲಕ ಹೊಲ್ಲೊಂಗಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಅದು ಇದೀಗ ದೆಹಲಿಗೆ ನೇರ ವಿಮಾನಗಳನ್ನು ಒದಗಿಸುತ್ತದೆ. ಈ ಅಭಿವೃದ್ಧಿಯು ನಿರ್ದಿಷ್ಟ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಮಾತ್ರವಲ್ಲದೆ, ಸ್ಥಳೀಯ ರೈತರು ಮತ್ತು ಸಣ್ಣ ಕೈಗಾರಿಕೆಗಳಿಗೆ ಸಹ ಪ್ರಯೋಜನವನ್ನು ಕಲ್ಪಿಸುತ್ತದೆ. ದೇಶಾದ್ಯಂತ ಪ್ರಮುಖ ಮಾರುಕಟ್ಟೆಗಳಿಗೆ ಹಣ್ಣುಗಳು, ತರಕಾರಿಗಳು ಮತ್ತು ಇತರ ಉತ್ಪನ್ನಗಳನ್ನು ಸಾಗಿಸುವುದು ಇದೀಗ ಸಾಕಷ್ಟು ಸುಲಭವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯತ್ತ ದೇಶವು ಸಾಮೂಹಿಕವಾಗಿ ಶ್ರಮಿಸುತ್ತಿದೆ ಮತ್ತು ಪ್ರತಿಯೊಂದು ರಾಜ್ಯವು ರಾಷ್ಟ್ರೀಯ ಉದ್ದೇಶಗಳೊಂದಿಗೆ ಹೊಂದಿಕೆ ಮಾಡಿಕೊಂಡಾಗ ಮಾತ್ರ ಈ ದೂರದೃಷ್ಟಿಯನ್ನು ಸಾಕಾರಗೊಳಿಸಲು ಸಾಧ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಈ ಗುರಿಗಳನ್ನು ಸಾಧಿಸುವಲ್ಲಿ ಈಶಾನ್ಯವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಇಂಧನ ವಲಯವನ್ನು ಪ್ರಮುಖ ಉದಾಹರಣೆಯಾಗಿ ಉಲ್ಲೇಖಿಸಿದ ಪ್ರಧಾನಮಂತ್ರಿ, 2030ರ ವೇಳೆಗೆ ಸೌರ, ಪವನ ಮತ್ತು ಜಲವಿದ್ಯುತ್ ಸೇರಿದಂತೆ ಅಸಾಂಪ್ರದಾಯಿಕ ಮೂಲಗಳಿಂದ 500 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಭಾರತ ಹೊಂದಿದೆ ಎಂದು ಹೇಳಿದರು. ಈ ಕಾರ್ಯಾಚರಣೆಗೆ ಅರುಣಾಚಲ ಪ್ರದೇಶವು ಸಕ್ರಿಯವಾಗಿ ಕೊಡುಗೆ ನೀಡುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದ ಶ್ರೀ ನರೇಂದ್ರ ಮೋದಿ, ವಿದ್ಯುತ್ ಉತ್ಪಾದಕನಾಗಿ ಅರುಣಾಚಲದ ಸ್ಥಾನವನ್ನು ಬಲಪಡಿಸುವ, ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಕೈಗೆಟುಕುವ ವಿದ್ಯುತ್ ಒದಗಿಸುವ ಎರಡು ಹೊಸ ವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವುದಾಗಿ ಘೋಷಿಸಿದರು. ಕಷ್ಟಕರವಾದ ಅಭಿವೃದ್ಧಿ ಕಾರ್ಯಗಳನ್ನು ತಪ್ಪಿಸುವ ವಿರೋಧ ಪಕ್ಷ ದೀರ್ಘಕಾಲದಿಂದ ರೂಢಿಸಿಕೊಂಡಿರುವ ಪ್ರವೃತ್ತಿಯನ್ನು ಪ್ರಧಾನಮಂತ್ರಿ ಟೀಕಿಸಿದರು ಮತ್ತು ಇದು ಅರುಣಾಚಲ ಮತ್ತು ಇಡೀ ಈಶಾನ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ಹೇಳಿದರು. ಗುಡ್ಡಗಾಡು ಪ್ರದೇಶಗಳು - ಪರ್ವತ ಪ್ರದೇಶಗಳು, ಅರಣ್ಯ ಪ್ರದೇಶಗಳು - ಹೆಚ್ಚಾಗಿ ಹಿಂದುಳಿದವು ಎಂದು ಘೋಷಿಸಲ್ಪಟ್ಟವು ಮತ್ತು ವಿರೋಧ ಪಕ್ಷದಿಂದ ನಿರ್ಲಕ್ಷಿಸಲ್ಪಟ್ಟವು ಎಂದು ಅವರು ಉಲ್ಲೇಖಿಸಿದರು. ಈಶಾನ್ಯದ ಬುಡಕಟ್ಟು ಪ್ರದೇಶಗಳು ಮತ್ತು ಜಿಲ್ಲೆಗಳು ಹೆಚ್ಚು ನಷ್ಟ ಅನುಭವಿಸಿವೆ ಮತ್ತು ಗಡಿಯ ಸಮೀಪವಿರುವ ಹಳ್ಳಿಗಳನ್ನು “ಕೊನೆಯ ಹಳ್ಳಿಗಳು” ಎಂದು ತಿರಸ್ಕರಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇದು ಹಿಂದಿನ ಸರ್ಕಾರಗಳು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಮತ್ತು ಅದರ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಈ ನಿರ್ಲಕ್ಷ್ಯವು ಬುಡಕಟ್ಟು ಮತ್ತು ಗಡಿ ಪ್ರದೇಶಗಳಿಂದ ಜನರ ನಿರಂತರ ವಲಸೆಗೆ ಕಾರಣವಾಯಿತು ಎಂದರು.
ಪ್ರಾದೇಶಿಕ ಅಭಿವೃದ್ಧಿಯ ಕಡೆಗೆ ತಮ್ಮ ಸರ್ಕಾರವು ಹಿಂದಿನ ಮನೋಭಾವವನ್ನು ಪರಿವರ್ತಿಸಿದೆ ಎಂದು ಹೇಳಿದ ಶ್ರೀ ನರೇಂದ್ರ ಮೋದಿ, ಹಿಂದಿನ ಸರ್ಕಾರಗಳು ”ಹಿಂದುಳಿದ” ಎಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಜಿಲ್ಲೆಗಳನ್ನು "ಮಹತ್ವಾಕಾಂಕ್ಷೆಯ ಜಿಲ್ಲೆಗಳು" ಎಂದು ಮರು ವ್ಯಾಖ್ಯಾನಿಸಲಾಗಿದೆ ಮತ್ತು ಬೆಳವಣಿಗೆಗೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಒಮ್ಮೆ “ಕೊನೆಯ ಹಳ್ಳಿಗಳು” ಎಂದು ನಿರ್ಲಕ್ಷಿಸಿದ್ದ ಗಡಿ ಗ್ರಾಮಗಳನ್ನು ಈಗ ದೇಶದ “ಮೊದಲ ಹಳ್ಳಿಗಳು" ಎಂದು ಗುರುತಿಸಲಾಗಿದೆ. ಗಡಿ ಪ್ರದೇಶಗಳಲ್ಲಿ ಅಭಿವೃದ್ಧಿಯ ವೇಗವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಈ ಬದಲಾವಣೆಯ ಸಕಾರಾತ್ಮಕ ಫಲಿತಾಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ವೈಬ್ರೆಂಟ್ ಗ್ರಾಮಗಳ ಕಾರ್ಯಕ್ರಮದ ಯಶಸ್ಸು ಜನರ ಜೀವನದ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸಿದೆ. ಅರುಣಾಚಲ ಪ್ರದೇಶದಲ್ಲಿ ಮಾತ್ರ ಅಂತಹ 450 ಕ್ಕೂ ಅಧಿಕ ಗಡಿ ಗ್ರಾಮಗಳು ಕ್ಷಿಪ್ರ ಪ್ರಗತಿಯನ್ನು ಸಾಧಿಸಿವೆ, ರಸ್ತೆಗಳು, ವಿದ್ಯುತ್ ಮತ್ತು ಇಂಟರ್ನೆಟ್‌ನಂತಹ ಅಗತ್ಯ ಮೂಲಸೌಕರ್ಯಗಳು ಈಗ ಈ ಪ್ರದೇಶಗಳನ್ನು ತಲುಪುತ್ತಿವೆ. ಗಡಿ ಪ್ರದೇಶಗಳಿಂದ ನಗರಗಳಿಗೆ ವಲಸೆ ಸಾಮಾನ್ಯವಾಗಿದ್ದರೂ, ಈ ಗ್ರಾಮಗಳು ಈಗ ಪ್ರವಾಸೋದ್ಯಮದ ಹೊಸ ಕೇಂದ್ರಗಳಾಗಿ ಹೊರಹೊಮ್ಮುತ್ತಿವೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಇರುವ ಅಪಾರ ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಹೊಸ ಪ್ರದೇಶಗಳಿಗೆ ಸಂಪರ್ಕ ವಿಸ್ತರಿಸುತ್ತಿದ್ದಂತೆ ಪ್ರವಾಸೋದ್ಯಮವು ಸ್ಥಿರವಾಗಿ ವೃದ್ಧಿಯಾಗುತ್ತಿದೆ ಎಂದು ಹೇಳಿದರು. ಕಳೆದೊಂದು ದಶಕದಲ್ಲಿ ಅರುಣಾಚಲಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅವರು ತೃಪ್ತಿ ವ್ಯಕ್ತಪಡಿಸಿದರು. ಅರುಣಾಚಲದ ಪ್ರವಾಸೋದ್ಯಮ ಶಕ್ತಿ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಮೀರಿದೆ ಎಂದು ಅವರು ಬಲವಾಗಿ ಹೇಳಿದರು, ಸಮ್ಮೇಳನ ಸಭಾಂಗಣ ಮತ್ತು ಸಮಗ್ರ ಪ್ರವಾಸೋದ್ಯಮದ ಅಭಿವರದ್ಧಿಯಿಂದ ಜಾಗತಿಕ ಮಟ್ಟದಲ್ಲಿ ಅದರ ಸ್ಥಾನ ಏರಿಕೆಯಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತವಾಂಗ್‌ನಲ್ಲಿ ಮುಂಬರುವ ಆಧುನಿಕ ಸಮಾವೇಶ ಕೇಂದ್ರವು ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ನೀಡುತ್ತದೆ ಎಂದು ಶ್ರೀ ನರೇಂದ್ರ ಮೋದಿ ಘೋಷಿಸಿದರು. ಭಾರತ ಸರ್ಕಾರವು ಆರಂಭಿಸಿದ ವೈಬ್ರೆಂಟ್ ಗ್ರಾಮಗಳ ಕಾರ್ಯಕ್ರಮವು ಗಡಿಯುದ್ದಕ್ಕೂ ಇರುವ ಹಳ್ಳಿಗಳಿಗೆ ಒಂದು ಮೈಲಿಗಲ್ಲು ಎಂಬುದು ಸಾಬೀತಾಗುತ್ತಿದೆ, ಇದು ಅರುಣಾಚಲದ ಅಭಿವೃದ್ಧಿಗೆ ಗಮನಾರ್ಹ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ದೆಹಲಿ ಮತ್ತು ಇಟಾನಗರ ಎರಡೂ ಕಡೆ ತಮ್ಮದೇ ಸರ್ಕಾರಗಳು ಕೆಲಸ ಮಾಡುತ್ತಿರುವುದರಿಂದ ಅರುಣಾಚಲ ಪ್ರದೇಶದಲ್ಲಿಂದು ಕ್ಷಿಪ್ರ ಅಭಿವೃದ್ಧಿಯು ಉಂಟಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ, ಕೇಂದ್ರ ಮತ್ತು ರಾಜ್ಯದ ಸಂಯೋಜಿತ ಶಕ್ತಿಯನ್ನು ಅಭಿವೃದ್ಧಿಗೆ ಬಳಸಲಾಗುತ್ತಿದೆ ಎಂದು ಹೇಳಿದರು. ಕ್ಯಾನ್ಸರ್ ಸಂಸ್ಥೆಯ ಕೆಲಸ ಆರಂಭ ಮತ್ತು ಈ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಯನ್ನು ಅವರು ಉಲ್ಲೇಖಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಹಲವು ನಾಗರಿಕರು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಪಡೆದಿದ್ದಾರೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಈ ಸಾಧನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಕ ಸಾಧ್ಯವಾಗಿದೆ ಎಂದು ಅವರು ಖಾತ್ರಿಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳಿಂದಾಗಿ ಅರುಣಾಚಲ ಪ್ರದೇಶ ಕೃಷಿ ಮತ್ತು ತೋಟಗಾರಿಕೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಕಿವಿ, ಕಿತ್ತಳೆ, ಏಲಕ್ಕಿ ಮತ್ತು ಅನಾನಸ್‌ನಂತಹ ಸ್ಥಳೀಯ ಉತ್ಪನ್ನಗಳು ರಾಜ್ಯಕ್ಕೆ ಹೊಸ ಹೆಗ್ಗೆರುತನ್ನು ನೀಡುತ್ತಿವೆ ಎಂದು ಅವರು ತಿಳಿಸಿದರು. ಪಿ.ಎಂ-ಕಿಸಾನ್ ಸಮ್ಮಾನ್ ನಿಧಿ ಯೋಜನೆ ಈ ಪ್ರದೇಶದ ರೈತರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದರು.
ತಮ್ಮ ಸರ್ಕಾರಕ್ಕೆ ತಾಯಂದಿರು, ಸಹೋದರಿಯರು ಮತ್ತು ಹೆಣ್ಣುಮಕ್ಕಳ ಸಬಲೀಕರಣವು ಪ್ರಮುಖ ಆದ್ಯತೆಯಾಗಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ದೇಶಾದ್ಯಂತ ಮೂರು ಕೋಟಿ “ಲಖ್ಪತಿ ದೀದಿ” ಗಳನ್ನು ಸೃಷ್ಟಿಸುವ ತಮ್ಮ ಧ್ಯೇಯವನ್ನು ಅವರು ಪುನರುಚ್ಚರಿಸಿದರು ಮತ್ತು ಮುಖ್ಯಮಂತ್ರಿ ಪೆಮಾ ಖಂಡು ಮತ್ತು ಅವರ ತಂಡವು ಈ ಧ್ಯೇಯವನ್ನು ಸಕ್ರಿಯವಾಗಿ ಮುನ್ನಡೆಸುತ್ತಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಹಲವು ಉದ್ಯೋಗಸ್ಥ ಮಹಿಳಾ ಹಾಸ್ಟೆಲ್‌ಗಳ ಆರಂಭವನ್ನು ಅವರು ಉಲ್ಲೇಖಿಸಿದದು, ಇದು ಯುವತಿಯರಿಗೆ ಹೆಚ್ಚಿನ ಪ್ರಯೋಜನವನ್ನು ಒದಗಿಸುತ್ತದೆ ಎಂದರು.
ಇಂದಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರ ಉಪಸ್ಥಿತಿಯನ್ನು ಪ್ರಸ್ತಾಪಿಸಿದ ಅವರು, ಮತ್ತೊಮ್ಮೆ ಜಿ.ಎಸ್.ಟಿ ಉಳಿತಾಯ ಉತ್ಸವಕ್ಕೆ ಅಭಿನಂದನೆಗಳನ್ನು ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಮುಂದಿನ ಪೀಳಿಗೆಯ ಜಿ.ಎಸ್.ಟಿ ಸುಧಾರಣೆಗಳ ಪ್ರಯೋಜನಗಳು ಅವರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ ಎಂದು ಒತ್ತಿ ಹೇಳಿದರು. ಪ್ರತಿ ಮನೆಗಳು ಇದೀಗ ತಮ್ಮ ಮಾಸಿಕ ಬಜೆಟ್‌ನಲ್ಲಿ ಗಣನೀಯ ಪರಿಹಾರದ ಅನುಭವ ಗಳಿಸುತ್ತವೆ ಎಂದು ಅವರು ಹೇಳಿದರು. ಅಡುಗೆ ಸಾಮಗ್ರಿಗಳು, ಮಕ್ಕಳಿಗೆ ಶೈಕ್ಷಣಿಕ ಸಾಮಗ್ರಿಗಳು ಮತ್ತು ಪಾದರಕ್ಷೆಗಳು ಮತ್ತು ಬಟ್ಟೆಗಳಂತಹ ಅಗತ್ಯ ವಸ್ತುಗಳು ಹೆಚ್ಚು ಕೈಗೆಟುಕುವ ದರದಲ್ಲಿವೆ ಎಂದು ಪ್ರಧಾನಮಂತ್ರಿ ಹೇಳಿದರು.
2014ರ ಪೂರ್ವದ ಅವಧಿಯನ್ನು ನಾಗರಿಕರು ನೆನಪಿಸಿಕೊಳ್ಳುವಂತೆ ಕರೆ ನೀಡಿದ ಅವರು, ಆ ಸಮಯದಲ್ಲಿ ಎದುರಿಸಿದ ಹಲವಾರು ಸವಾಲುಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾ, ಹಣದುಬ್ಬರವು ಗಗನಕ್ಕೇರುತ್ತಿತ್ತು, ಪ್ರಮುಖ ಹಗರಣಗಳು ವ್ಯಾಪಕವಾಗಿದ್ದವು ಮತ್ತು ಅಂದಿನ ಸರ್ಕಾರವು ಸಾರ್ವಜನಿಕರ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸುತ್ತಲೇ ಇತ್ತು ಎಂದು ಪ್ರಧಾನಮಂತ್ರಿ ಹೇಳಿದರು. 2 ಲಕ್ಷ ರೂಪಾಯಿ ವಾರ್ಷಿಕ ಆದಾಯವು ಸಹ ಆದಾಯ ತೆರಿಗೆಗೆ ಒಳಪಟ್ಟಿತ್ತು ಮತ್ತು 2014 ರ ಪೂರ್ವದ ಆಡಳಿತದಲ್ಲಿ ಅನೇಕ ಅಗತ್ಯ ವಸ್ತುಗಳ ಮೇಲೆ ಶೇಕಡ 30ಕ್ಕಿಂತ ಅಧಿಕ ದರದಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು ಎಂದು ಅವರು ಗಮನಸೆಳೆದರು.
ನಾಗರಿಕರ ಆದಾಯ ಮತ್ತು ಉಳಿತಾಯ ಎರಡನ್ನೂ ಹೆಚ್ಚಿಸುವ ತಮ್ಮ ಬದ್ಧತೆಯನ್ನು ಸ್ಮರಿಸಿಕೊಂಡ ಶ್ರೀ ನರೇಂದ್ರ ಮೋದಿ, ಹಲವು ವರ್ಷಗಳಲ್ಲಿ ಪ್ರಮುಖ ಸವಾಲುಗಳನ್ನು ಎದುರಿಸುತ್ತಿದ್ದರೂ ತಮ್ಮ ಸರ್ಕಾರವು ಆದಾಯ ತೆರಿಗೆ ದರಗಳನ್ನು ನಿರಂತರವಾಗಿ ತಗ್ಗಿಸಿದೆ ಎಂದರು. ಈ ವರ್ಷ 12 ಲಕ್ಷದವರೆಗಿನ ವಾರ್ಷಿಕ ಆದಾಯವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಲಾಗಿದೆ. ಜಿ.ಎಸ್.ಟಿಯನ್ನು ಈಗ ಕೇವಲ ಎರಡು ಸ್ಲ್ಯಾಬ್‌ಗಳಲ್ಲಿ ಶೇ.5 ಮತ್ತು ಶೇ.18ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅವರು ಘೋಷಿಸಿದರು. ಅನೇಕ ವಸ್ತುಗಳು ತೆರಿಗೆ ಮುಕ್ತವಾಗಿವೆ ಮತ್ತು ಇತರ ಸರಕುಗಳ ಮೇಲಿನ ತೆರಿಗೆಗಳನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಶ್ರೀ ನರೇಂದ್ರ ಮೋದಿ ಒತ್ತಿ ಹೇಳಿದರು. ಮನೆ ನಿರ್ಮಿಸುವುದು, ಸ್ಕೂಟರ್ ಅಥವಾ ಬೈಕ್ ಖರೀದಿಸುವುದು, ಹೊರಗೆ ಊಟ ಮಾಡುವುದು ಮತ್ತು ಪ್ರಯಾಣಿಸುವುದು ಎಲ್ಲವೂ ಹೆಚ್ಚು ಕೈಗೆಟುಕುವ ದರಗಳಾಗಿವೆ ಎಂದು ಅವರು ಪ್ರಸ್ತಾಪಿಸಿದರು. ಜಿ.ಎಸ್.ಟಿ ಉಳಿತಾಯ ಉತ್ಸವವು ಜನರಿಗೆ ಸ್ಮರಣೀಯ ಮೈಲಿಗಲ್ಲಾಗಲಿದೆ ಎಂದು ಅವರು ಖಾತ್ರಿಪಡಿಸಿದರು.
ಅರುಣಾಚಲ ಪ್ರದೇಶದ ದೇಶಭಕ್ತಿಯ ಮನೋಭಾವವನ್ನು ಶ್ಲಾಘಿಸಿದ ಶ್ರೀ ನರೇಂದ್ರ ಮೋದಿ, ಇಲ್ಲಿನ ಜನರು “ನಮಸ್ಕಾರ” ಕ್ಕೂ ಮುನ್ನವೇ “ಜೈ ಹಿಂದ್” ಎಂದು ಹೇಳುತ್ತಾರೆ. ರಾಷ್ಟ್ರವನ್ನು ಸ್ವಾರ್ಥಕ್ಕಿಂತ ಮೇಲಿಟ್ಟಿದ್ದಾರೆ ಎಂದು ಹೇಳಿದರು. ದೇಶವು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸಾಮೂಹಿಕವಾಗಿ ಶ್ರಮಿಸುತ್ತಿರುವಾಗ, ಸ್ವಾವಲಂಬನೆಯ ರಾಷ್ಟ್ರೀಯ ನಿರೀಕ್ಷೆ ಇದೆ ಎಂದು ಅವರು ಒತ್ತಿ ಹೇಳಿದರು. ಭಾರತವು ಸ್ವಾವಲಂಬಿಯಾದಾಗ ಮಾತ್ರ ಅಭಿವೃದ್ಧಿ ಹೊಂದುತ್ತದೆ ಮತ್ತು ಅದಕ್ಕಾಗಿ ”ಸ್ವದೇಶಿ” ಮಂತ್ರ ಅತ್ಯಗತ್ಯ ಎಂದು ಅವರು ಹೇಳಿದರು. ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸುವುದು ಮತ್ತು ಮಾರಾಟ ಮಾಡುವುದು ಮತ್ತು ಅವುಗಳನ್ನು ಸ್ವದೇಶಿ ಎಂದು ಹೆಮ್ಮೆಯಿಂದ ಘೋಷಿಸುವ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ನಾಗರಿಕರು ಸ್ವದೇಶಿಯನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಈ ಮಂತ್ರವನ್ನು ಅನುಸರಿಸುವುದರಿಂದ ರಾಷ್ಟ್ರ, ಅರುಣಾಚಲ ಪ್ರದೇಶ ಮತ್ತು ಇಡೀ ಈಶಾನ್ಯದ ಅಭಿವೃದ್ಧಿ ವೇಗಗೊಳ್ಳುತ್ತದೆ ಎಂದು ಅವರು ಖಾತ್ರಿಪಡಿಸಿದರು. ಹೊಸದಾಗಿ ಆರಂಭಿಸಲಾದ ಅಭಿವೃದ್ಧಿ ಯೋಜನೆಗಳಿಗೆ ಶುಭ ಹಾರೈಸುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಅರುಣಾಚಲ ಪ್ರದೇಶದ ರಾಜ್ಯಪಾಲ, ಲೆಫ್ಟಿನೆಂಟ್ ಜನರಲ್ ಕೆ.ಟಿ.ಪರ್ನಾಯಕ್ (ನಿವೃತ್ತ), ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಶ್ರೀ ಪೆಮಾ ಖಂಡು, ಕೇಂದ್ರ ಸಚಿವರಾದ ಶ್ರೀ ಕಿರಣ್ ರಿಜಿಜು ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿನ್ನೆಲೆ
ಈ ಪ್ರದೇಶದಲ್ಲಿನ ವಿಶಾಲವಾದ ಜಲವಿದ್ಯುತ್ ಸಾಮರ್ಥ್ಯವನ್ನು ಬಳಸಿಕೊಳ್ಳುವ ಮತ್ತು ಸುಸ್ಥಿರ ಇಂಧನ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಅವರು ಇಟಾನಗರದಲ್ಲಿ 3,700 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಎರಡು ಪ್ರಮುಖ ಜಲವಿದ್ಯುತ್ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅರುಣಾಚಲ ಪ್ರದೇಶದ ಸಿಯೋಮ್ ಉಪ-ಜಲಾನಯನ ಪ್ರದೇಶದಲ್ಲಿ ಹಿಯೋ ಜಲವಿದ್ಯುತ್ ಯೋಜನೆ (240 ಮೆಗಾವ್ಯಾಟ್) ಮತ್ತು ಟಾಟೊ-I ಜಲವಿದ್ಯುತ್ ಯೋಜನೆ (186 ಮೆಗಾವ್ಯಾಟ್) ಅಭಿವೃದ್ಧಿಪಡಿಸಲಾಗುವುದು.
ತವಾಂಗ್‌ನಲ್ಲಿ ಅತ್ಯಾಧುನಿಕ ಸಮಾವೇಶ ಕೇಂದ್ರಕ್ಕೂ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ತವಾಂಗ್‌ನ ಗಡಿ ಜಿಲ್ಲೆಯಲ್ಲಿ 9,820 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿರುವ ಈ ಕೇಂದ್ರವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳು, ಸಾಂಸ್ಕೃತಿಕ ಉತ್ಸವಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸಲು ಒಂದು ಮಹತ್ವದ ಸೌಲಭ್ಯವಾಗಿ ಕಾರ್ಯನಿರ್ವಹಿಸಲಿದೆ. 1,500 ಕ್ಕೂ ಅಧಿಕ ಪ್ರತಿನಿಧಿಗಳು ಒಂದೆಡೆ ಸೇರುವ ಸಾಮರ್ಥ್ಯವಿರುವ ಈ ಕೇಂದ್ರವು ಜಾಗತಿಕ ಮಾನದಂಡಗಳನ್ನು ಪೂರೈಸುತ್ತದೆ ಮತ್ತು ಈ ಪ್ರದೇಶದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಸಾಮರ್ಥ್ಯವನ್ನು ಬೆಂಬಲಿಸಲು ನೆರವಾಗಲಿದೆ.
ಪ್ರಧಾನಮಂತ್ರಿ ಅವರು 1,290 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಬಹು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದರು, ಇದು ಸಂಪರ್ಕ, ಆರೋಗ್ಯ, ಅಗ್ನಿಶಾಮಕ ಸುರಕ್ಷತೆ, ದುಡಿಯುವ ಮಹಿಳಾ ಹಾಸ್ಟೆಲ್‌ಗಳು ಸೇರಿದಂತೆ ವಿವಿಧ ವಲಯಗಳನ್ನು ಪೂರೈಸುತ್ತದೆ. ಈ ಉಪಕ್ರಮಗಳು ಈ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜಿಸುವ, ಜೀವನದ ಗುಣಮಟ್ಟ ಸುಧಾರಿಸುವ ಮತ್ತು ಸಂಪರ್ಕವನ್ನು ವೃದ್ಧಿಸುವ ನಿರೀಕ್ಷೆಯಿದೆ.
ಸುಲಭ ವ್ಯಾಪಾರ ವಹಿವಾಟನ್ನು ಖಾತ್ರಿಪಡಿಸಿಕೊಳ್ಳುವ ಮತ್ತು ಕ್ರಿಯಾಶೀಲ ಉದ್ಯಮ ಪೂರಕ ಪರಿಸರ ವ್ಯವಸ್ಥೆಯನ್ನು ಬೆಳೆಸುವ ತಮ್ಮ ದೂರದೃಷ್ಟಿಗೆ ಅನುಗುಣವಾಗಿ ಪ್ರಧಾನಮಂತ್ರಿ ಅವರು ಇತ್ತೀಚಿನ ಜಿ.ಎಸ್.ಟಿ ದರ ಏಕರೂಪಗೊಳಿಸುವಿಕೆಯ ಪರಿಣಾಮದ ಕುರಿತು ಸ್ಥಳೀಯ ತೆರಿಗೆದಾರರು, ವ್ಯಾಪಾರಿಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.
****
(Release ID: 2169787)
Read this release in:
English
,
Urdu
,
Marathi
,
Hindi
,
Nepali
,
Manipuri
,
Bengali
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam