ಪ್ರಧಾನ ಮಂತ್ರಿಯವರ ಕಛೇರಿ 
                
                
                
                
                
                    
                    
                        ಬಿಹಾರದ ಪುರ್ನಿಯಾದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ
                    
                    
                        
                    
                
                
                    Posted On:
                15 SEP 2025 7:26PM by PIB Bengaluru
                
                
                
                
                
                
                ಭಾರತ್ ಮಾತಾ ಕಿ – ಜೈ!
ಭಾರತ್ ಮಾತಾ ಕಿ – ಜೈ!
ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರಿಫ್ ಮೊಹಮ್ಮದ್ ಖಾನ್ ಜಿ, ನಮ್ಮ ಜನಪ್ರಿಯ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಜಿ, ವೇದಿಕೆಯಲ್ಲಿ ಉಪಸ್ಥಿತರಿರುವ ಇತರೆ ಗಣ್ಯರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ!
ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು. ಪುರ್ನಿಯಾದ ಪುರಾಣ ದೇವಿ, ಭಕ್ತ ಪ್ರಹ್ಲಾದ ಮತ್ತು ಮಹರ್ಷಿ ಮೇಹಿ ಬಾಬಾ ಅವರ ಕರ್ಮಸ್ಥಳ. ಈ ಮಣ್ಣು ಫಣೀಶ್ವರನಾಥ ರೇಣು ಮತ್ತು ಸತಿನಾಥ ಭಾದುರಿ ಅವರಂತಹ ಕಾದಂಬರಿಕಾರರಿಗೂ ಜನ್ಮ ನೀಡಿದೆ. ಇದು ವಿನೋಬಾ ಭಾವೆ ಅವರಂತಹ 'ಕರ್ಮಯೋಗಿಗಳ' 'ಕರ್ಮಭೂಮಿ'. ನಾನು ಈ ಪವಿತ್ರ ಭೂಮಿಗೆ ಮತ್ತೆ ಮತ್ತೆ ನಮಸ್ಕರಿಸುತ್ತೇನೆ.
ನಾನು ಮಾತು ಪ್ರಾರಂಭಿಸುವ ಮೊದಲು, ನಾನು ನಿಮ್ಮೆಲ್ಲರಿಗೂ ಕ್ಷಮೆ ಕೇಳುತ್ತೇನೆ. ನನ್ನ ಕಾರ್ಯಕ್ರಮ ಕೋಲ್ಕತಾದಲ್ಲೂ ಇತ್ತು. ಹಾಗಾಗಿ, ನಾನು ಇಲ್ಲಿಗೆ ಬರುವುದು ತಡವಾಯಿತು. ಇದರ ಹೊರತಾಗಿಯೂ, ನಿಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಜನರು ನನ್ನನ್ನು ಆಶೀರ್ವದಿಸಲು ಇಲ್ಲಿಗೆ ಬಂದಿದ್ದೀರಿ, ನೀವು ತುಂಬಾ ಸಮಯದಿಂದ ಕಾಯುತ್ತಿದ್ದೀರಿ, ನಾನು ನಿಮಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಮತ್ತೊಮ್ಮೆ, ತಡವಾಗಿ ಬಂದಿದ್ದಕ್ಕಾಗಿ ಕ್ಷಮೆ ಯಾಚಿಸಲು ನಾನು ಜನರ ಪಾದಗಳಿಗೆ ನಮಸ್ಕರಿಸುತ್ತೇನೆ.
ಸ್ನೇಹಿತರೆ,
ಇಂದು ಬಿಹಾರಕ್ಕಾಗಿ ಸುಮಾರು 40,000 ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ರೈಲ್ವೆ, ವಿಮಾನ ನಿಲ್ದಾಣಗಳು, ವಿದ್ಯುತ್ ಮತ್ತು ನೀರಿಗೆ ಸಂಬಂಧಿಸಿದ ಈ ಯೋಜನೆಗಳು ಸೀಮಾಂಚಲದ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ. ಇಂದು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 40,000ಕ್ಕೂ ಹೆಚ್ಚು ಫಲಾನುಭವಿಗಳು ಪಕ್ಕಾ(ಶಾಶ್ವತ) ಮನೆಗಳನ್ನು ಪಡೆದಿದ್ದಾರೆ. ಇದು ಈ 40,000 ಕುಟುಂಬಗಳಿಗೆ ಹೊಸ ಆರಂಭವನ್ನು ಸೂಚಿಸುತ್ತದೆ. ಧನ್ ತೇರಸ್, ದೀಪಾವಳಿ ಮತ್ತು ಛತ್ ಪೂಜೆಗೆ ಸ್ವಲ್ಪ ಮೊದಲು ಪಕ್ಕಾ ಮನೆ ಪಡೆಯುವುದು ಮತ್ತು ನಿಮ್ಮ ಸ್ವಂತ ಮನೆಯ ಗೃಹ ಪ್ರವೇಶ ನಡೆಸುವುದು ನಿಜಕ್ಕೂ ಒಂದು ಆಶೀರ್ವಾದ. ನಾನು ಈ ಕುಟುಂಬಗಳನ್ನು ಅಭಿನಂದಿಸುತ್ತೇನೆ ಮತ್ತು ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.
ಸ್ನೇಹಿತರೆ,
ಇಂದಿನ ಸಂದರ್ಭವು ನನ್ನ ನಿರಾಶ್ರಿತ ಸಹೋದರ ಸಹೋದರಿಯರಿಗೆ ಭರವಸೆ ನೀಡುವುದರ ಬಗ್ಗೆಯೂ ಆಗಿದೆ. ಅವರಿಗೂ ಪಕ್ಕಾ ಮನೆ ಸಿಗುವ ದಿನ ಬರುತ್ತದೆ, ಇದು ಮೋದಿಯವರ ಭರವಸೆ. ನಮ್ಮ ಸರ್ಕಾರ ಕಳೆದ 11 ವರ್ಷಗಳಲ್ಲಿ ಬಡವರಿಗೆ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಈಗ ನಾವು ಇನ್ನೂ 3 ಕೋಟಿ ಮನೆಗಳನ್ನು ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬ ಬಡವನಿಗೆ ಪಕ್ಕಾ ಮನೆ ಸಿಗುವವರೆಗೂ ಮೋದಿ ಅವರು ನಿಲ್ಲುವುದಿಲ್ಲ ಅಥವಾ ವಿರಮಿಸುವುದಿಲ್ಲ. ಹಿಂದುಳಿದವರಿಗೆ ಆದ್ಯತೆ ಮತ್ತು ಬಡವರಿಗೆ ಸೇವೆ ನೀಡುವುದು ಮೋದಿಯವರ ಧ್ಯೇಯ.
ಸ್ನೇಹಿತರೆ,
ಇಂದು ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯಂದು ನಾವು ಎಂಜಿನಿಯರ್‌ಗಳ ದಿನ ಆಚರಿಸುತ್ತಿದ್ದೇವೆ. 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ) ಮತ್ತು 'ವಿಕಸಿತ ಬಿಹಾರ'(ಅಭಿವೃದ್ಧಿ ಹೊಂದಿದ ಬಿಹಾರ) ನಿರ್ಮಿಸುವಲ್ಲಿ ಎಂಜಿನಿಯರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಸಂದರ್ಭದಲ್ಲಿ ದೇಶದ ಎಲ್ಲಾ ಎಂಜಿನಿಯರ್‌ಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದಿನ ಕಾರ್ಯಕ್ರಮದಲ್ಲೂ ಎಂಜಿನಿಯರ್‌ಗಳ ಕಠಿಣ ಪರಿಶ್ರಮ ಮತ್ತು ಕೌಶಲ್ಯಗಳು ಗೋಚರಿಸುತ್ತವೆ. ಪುರ್ನಿಯಾ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು 5 ತಿಂಗಳಿಗಿಂತ ಮುಂಚೆಯೇ ದಾಖಲೆಯ ಸಮಯದಲ್ಲಿ ನಿರ್ಮಿಸಲಾಗಿದೆ. ಇಂದು ಈ ಟರ್ಮಿನಲ್ ಉದ್ಘಾಟನೆಯಾಗಿ, ಮೊದಲ ವಾಣಿಜ್ಯ ವಿಮಾನಕ್ಕೂ ಚಾಲನೆ ನೀಡಲಾಗಿದೆ. ನಮ್ಮ ವಿಮಾನಯಾನ ಸಚಿವರಾದ ಶ್ರೀ ನಾಯ್ಡು ಜಿ ಕೂಡ ಇಲ್ಲಿ ಉಪಸ್ಥಿತರಿದ್ದಾರೆ. ಅವರಿಗೆ ನಾವು ಚಪ್ಪಾಳೆ ತಟ್ಟೋಣ, ಏಕೆಂದರೆ ಅವರೇ ಇಲ್ಲಿಂದ ವಿಮಾನಗಳ ಹಾರಾಟದ ಮೇಲ್ವಿಚಾರಣೆ ನಡೆಸುತ್ತಾರೆ. ಈ ಹೊಸ ವಿಮಾನ ನಿಲ್ದಾಣದೊಂದಿಗೆ, ಪುರ್ನಿಯಾ ಈಗ ದೇಶದ ವಾಯುಯಾನ ನಕ್ಷೆಗೆ ಸೇರಿದೆ. ಇಂದಿನಿಂದ ಪುರ್ನಿಯಾ ಮತ್ತು ಸೀಮಾಂಚಲ್ ಪ್ರದೇಶವು ದೇಶಾದ್ಯಂತದ ಪ್ರಮುಖ ನಗರಗಳು ಮತ್ತು ವ್ಯಾಪಾರ ಕೇಂದ್ರಗಳೊಂದಿಗೆ ನೇರ ಸಂಪರ್ಕ ಹೊಂದುತ್ತದೆ.
ಸ್ನೇಹಿತರೆ,
ಎನ್‌ಡಿಎ ಸರ್ಕಾರವು ಈ ಇಡೀ ಪ್ರದೇಶವನ್ನು ಆಧುನಿಕ ಹೈಟೆಕ್ ರೈಲು ಸೇವೆಗಳೊಂದಿಗೆ ಸಂಪರ್ಕಿಸುತ್ತಿದೆ. ಇಂದು ನಾನು ವಂದೇ ಭಾರತ್, ಅಮೃತ್ ಭಾರತ್ ಮತ್ತು ಪ್ಯಾಸೆಂಜರ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದೆ. ಹೊಸ ಅರಾರಿಯಾ-ಗಲ್ಗಾಲಿಯಾ ರೈಲು ಮಾರ್ಗವನ್ನು ಉದ್ಘಾಟಿಸಲಾಗಿದೆ ಮತ್ತು ಹೊಸ ವಿಕ್ರಮಶಿಲಾ-ಕಟಾರಿಯಾ ರೈಲು ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ಸ್ನೇಹಿತರೆ,
ಕೆಲವೇ ದಿನಗಳ ಹಿಂದೆ ಭಾರತ ಸರ್ಕಾರ, ಮತ್ತೊಂದು ಪ್ರಮುಖ ನಿರ್ಧಾರ  ತೆಗೆದುಕೊಂಡಿತು. ಬಕ್ಸಾರ್-ಭಾಗಲ್ಪುರ್ ಹೈ-ಸ್ಪೀಡ್ ಕಾರಿಡಾರ್‌ನ ಮೊಕಾಮಾ-ಮುಂಗೇರ್ ವಿಭಾಗಕ್ಕೆ ಅನುಮೋದನೆ ನೀಡಲಾಗಿದೆ. ಇದು ಮುಂಗೇರ್, ಜಮಾಲ್ಪುರ್ ಮತ್ತು ಭಾಗಲ್ಪುರ್ ನಂತಹ ಕೈಗಾರಿಕಾ ಕೇಂದ್ರಗಳಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಭಾಗಲ್ಪುರ್-ದುಮ್ಕಾ-ರಾಮ್‌ಪುರ್ಹತ್ ಜೋಡಿ ರೈಲು ಮಾರ್ಗಕ್ಕೆ ಸರ್ಕಾರ ಅನುಮೋದನೆ ನೀಡಿದೆ.
ಸ್ನೇಹಿತರೆ,
ರಾಷ್ಟ್ರದ ಅಭಿವೃದ್ಧಿಗೆ ಬಿಹಾರದ ಅಭಿವೃದ್ಧಿ ಅತ್ಯಗತ್ಯ. ಅದೇ ರೀತಿ ಬಿಹಾರದ ಅಭಿವೃದ್ಧಿಗೆ, ಪುರ್ನಿಯಾ ಮತ್ತು ಸೀಮಾಂಚಲ್ ಅಭಿವೃದ್ಧಿಯೂ ಅಗತ್ಯ. ಆರ್‌ಜೆಡಿ ಮತ್ತು ಕಾಂಗ್ರೆಸ್ ಸರ್ಕಾರಗಳ ದುರಾಡಳಿತದಿಂದಾಗಿ ಈ ಪ್ರದೇಶವು ಹೆಚ್ಚು ನಷ್ಟ ಅನುಭವಿಸಿದೆ. ಆದರೆ ಈಗ, ಎನ್‌ಡಿಎ ಸರ್ಕಾರವು ಪರಿಸ್ಥಿತಿಯನ್ನು ಬದಲಾಯಿಸುತ್ತಿದೆ. ಈ ಪ್ರದೇಶವು ಈಗ ಅಭಿವೃದ್ಧಿಯ ಕೇಂದ್ರವಾಗಿದೆ.
ಸ್ನೇಹಿತರೆ,
ಬಿಹಾರವನ್ನು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಕೆಲಸವೂ ನಡೆಯುತ್ತಿದೆ. ಭಾಗಲ್ಪುರದ ಪಿರ್ಪೈಂಟಿಯಲ್ಲಿ 2,400 ಮೆಗಾವ್ಯಾಟ್ ಉಷ್ಣ ವಿದ್ಯುತ್ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಸ್ನೇಹಿತರೆ,
ಬಿಹಾರದ ಡಬಲ್-ಎಂಜಿನ್ ಸರ್ಕಾರವು ರೈತರು ಮತ್ತು ಹೈನುಗಾರರ ಆದಾಯ ಹೆಚ್ಚಿಸಲು ಬದ್ಧವಾಗಿದೆ. ಇಂದು, ಕೋಸಿ-ಮೆಚಿ ಅಂತರ-ರಾಜ್ಯ ನದಿ ಸಂಪರ್ಕ ಯೋಜನೆಯ ಮೊದಲ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದು ಪೂರ್ವ ಕೋಸಿ ಮುಖ್ಯ ಕಾಲುವೆಯನ್ನು ವಿಸ್ತರಿಸುತ್ತದೆ, ಲಕ್ಷಾಂತರ ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ ಮತ್ತು ಪ್ರವಾಹದ ಸವಾಲು ಎದುರಿಸುವುದನ್ನು ಸುಲಭಗೊಳಿಸುತ್ತದೆ.
ಸ್ನೇಹಿತರೆ,
ಮಖಾನಾ ಕೃಷಿಯು ಬಿಹಾರದಲ್ಲಿ ರೈತರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಹಿಂದಿನ ಸರ್ಕಾರಗಳು ಮಖಾನಾ ಮತ್ತು ಅದನ್ನು ಬೆಳೆಸಿದ ರೈತರನ್ನು ನಿರ್ಲಕ್ಷಿಸಿವೆ. ಮತ್ತು ಈಗ ಇಲ್ಲಿ ಸುತ್ತಾಡುವವರು ನನ್ನ ಸರ್ಕಾರ ಬರುವ ಮೊದಲು ಮಖಾನಾ ಎಂಬ ಪದವನ್ನು ಕೇಳಿರಲಿಲ್ಲ ಎಂಬುದನ್ನು ನಾನು ವಿಶ್ವಾಸದಿಂದ ಹೇಳಬಲ್ಲೆ. ಮಖಾನಾಗೆ ಅರ್ಹವಾದ ಆದ್ಯತೆಯನ್ನು ನೀಡಿದ್ದು ನಮ್ಮ ಸರ್ಕಾರ.
ಸ್ನೇಹಿತರೆ,
ರಾಷ್ಟ್ರೀಯ ಮಖಾನಾ ಮಂಡಳಿ ಸ್ಥಾಪಿಸುವುದಾಗಿ ನಾನು ಬಿಹಾರದ ಜನರಿಗೆ ಭರವಸೆ ನೀಡಿದ್ದೆ. ನಿನ್ನೆಯಷ್ಟೇ ಕೇಂದ್ರ ಸರ್ಕಾರವು ರಾಷ್ಟ್ರೀಯ ಮಖಾನಾ ಮಂಡಳಿಯ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿತು. ಮಖಾನಾ ರೈತರಿಗೆ ನ್ಯಾಯಯುತ ಬೆಲೆ ಸಿಗುವಂತೆ ಮತ್ತು ಈ ವಲಯದಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಮಖಾನಾ ಮಂಡಳಿ ನಿರಂತರವಾಗಿ ಕೆಲಸ ಮಾಡುತ್ತದೆ. ಮಖಾನಾ ಕ್ಷೇತ್ರದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಸುಮಾರು 450 ಕೋಟಿ ರೂಪಾಯಿ ಯೋಜನೆಯನ್ನು ಅನುಮೋದಿಸಿದೆ.
ಸ್ನೇಹಿತರೆ,
ಬಿಹಾರದಲ್ಲಿ ಅಭಿವೃದ್ಧಿಯ ಈ ವೇಗ, ಬಿಹಾರದ ಈ ಪ್ರಗತಿ, ಕೆಲವು ಜನರಿಗೆ ಇಷ್ಟವಾಗುವುದಿಲ್ಲ. ದಶಕಗಳಿಂದ ಬಿಹಾರವನ್ನು ಶೋಷಿಸಿದವರು, ಈ ಮಣ್ಣಿಗೆ ದ್ರೋಹ ಬಗೆದವರು, ಬಿಹಾರವೂ ಹೊಸ ಮೈಲಿಗಲ್ಲುಗಳನ್ನು ಸಾಧಿಸಬಹುದು ಎಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬಿಹಾರದ ಪ್ರತಿಯೊಂದು ವಲಯದಲ್ಲಿ ಸಾವಿರಾರು ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳು ನಡೆಯುತ್ತಿರುವುದನ್ನು ನೀವು ನೋಡಬಹುದು. ಹಾಕಿ ಏಷ್ಯಾ ಕಪ್ ಆಯೋಜಿಸುವ ರಾಜ್‌ಗೀರ್, ಆಂಟಾ–ಸಿಮಾರಿಯಾ ಸೇತುವೆಯಂತಹ ಐತಿಹಾಸಿಕ ನಿರ್ಮಾಣ ಕಾರ್ಯಗಳು ಮತ್ತು ಬಿಹಾರದಲ್ಲಿ ತಯಾರಿಸಿದ ಲೋಕೋಮೋಟಿವ್‌ಗಳನ್ನು ಆಫ್ರಿಕಾಕ್ಕೆ ರಫ್ತು ಮಾಡುವಂತಹ ಪ್ರಮುಖ ಘಟನೆಗಳು ನಡೆಯುತ್ತಿವೆ. ಆದರೆ ಕಾಂಗ್ರೆಸ್ ಮತ್ತು ಆರ್‌ಜೆಡಿ ಈ ಪ್ರಗತಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಬಿಹಾರ ಮುಂದುವರೆದಾಗಲೆಲ್ಲಾ, ಈ ಜನರು ಬಿಹಾರವನ್ನು ಅವಮಾನಿಸಲು ಪ್ರಾರಂಭಿಸುತ್ತಾರೆ. ಇತ್ತೀಚೆಗೆ ಆರ್‌ಜೆಡಿಯ ಮಿತ್ರ ಪಕ್ಷವಾಗಿರುವ ಕಾಂಗ್ರೆಸ್, ಬಿಹಾರವನ್ನು ಸಾಮಾಜಿಕ ಮಾಧ್ಯಮದಲ್ಲಿ 'ಬೀಡಿ'ಗೆ ಹೋಲಿಸಿದ್ದನ್ನು ನೀವು ನೋಡಿರಬೇಕು. ಬಿಹಾರದ ಮೇಲಿನ ಅವರ ದ್ವೇಷ ಅಂತಹದು! ಅವರು ಹಗರಣಗಳು ಮತ್ತು ಭ್ರಷ್ಟಾಚಾರದ ಮೂಲಕ ಬಿಹಾರದ ಖ್ಯಾತಿಯನ್ನು ಹಾಳು ಮಾಡಿದರು. ಈಗ, ಬಿಹಾರದ ಪ್ರಗತಿಯನ್ನು ನೋಡಿ, ಕಾಂಗ್ರೆಸ್ ಮತ್ತು ಆರ್‌ಜೆಡಿ ಮತ್ತೊಮ್ಮೆ ರಾಜ್ಯಕ್ಕೆ ಕೆಟ್ಟ ಹೆಸರು ತರಲು ನಿರ್ಧರಿಸಿವೆ.
ಸಹೋದರ ಸಹೋದರಿಯರೆ,
ಇಂತಹ ಮನಸ್ಥಿತಿ ಹೊಂದಿರುವ ಜನರು ಬಿಹಾರಕ್ಕೆ ಎಂದಿಗೂ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ. ತಮ್ಮ ಖಜಾನೆಯನ್ನು ತುಂಬುವ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದ್ದವರು, ಬಡವರ ಮನೆಗಳ ಬಗ್ಗೆ ಏಕೆ ಕಾಳಜಿ ವಹಿಸುತ್ತಾರೆ? ಕಾಂಗ್ರೆಸ್ ಸರ್ಕಾರ 100 ಪೈಸೆ ಅಭಿವೃದ್ಧಿಗೆ ಕಳುಹಿಸಿದರೆ, ಅದರಲ್ಲಿ 85 ಪೈಸೆ ಲೂಟಿ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪ್ರಧಾನಿಯವರೇ ಒಮ್ಮೆ ಒಪ್ಪಿಕೊಂಡಿದ್ದರು. ಈಗ ನೀವು ಹೇಳಿ, ಕಾಂಗ್ರೆಸ್-ಆರ್‌ಜೆಡಿ ಸರ್ಕಾರದ ಅವಧಿಯಲ್ಲಿ ಬಡವರ ಖಾತೆಗೆ ನೇರವಾಗಿ ಹಣ ತಲುಪಿದೆಯೇ? ಲಾಟೀನು ಅಥವಾ ಲ್ಯಾಂಟರ್ನ್ (ಆರ್‌ಜೆಡಿಯ ಚಿಹ್ನೆ) ಬೆಳಗಿಸುವ ಮೂಲಕ, ಅವರ ಕೈಗಳು ಮತ್ತು ಕಾಲುಗಳು ಆ ಹಣವನ್ನು ಕಸಿದುಕೊಂಡವು, ಅವರೇ 85 ಪೈಸೆಯನ್ನು ನುಂಗಿದರು. ಕೊರೊನಾ ಸಾಂಕ್ರಾಮಿಕ ರೋಗದಿಂದ, ಪ್ರತಿ ಬಡ ಕುಟುಂಬವು ಉಚಿತ ಪಡಿತರವನ್ನು ಪಡೆಯುತ್ತಿದೆ. ಕಾಂಗ್ರೆಸ್-ಆರ್‌ಜೆಡಿ ಸರ್ಕಾರಗಳು ಎಂದಾದರೂ ನಿಮಗೆ ಉಚಿತ ಆಹಾರ ಧಾನ್ಯವನ್ನು ಒದಗಿಸುತ್ತಿದ್ದವೇ? ಇಂದು, ಆಯುಷ್ಮಾನ್ ಭಾರತ್ ಯೋಜನೆಯ ಕಾರಣದಿಂದಾಗಿ ಪ್ರತಿ ಬಡ ಕುಟುಂಬವು 5 ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯ ಪಡೆಯುತ್ತಿವೆ. ನಿಮಗಾಗಿ ಆಸ್ಪತ್ರೆಗಳನ್ನು ನಿರ್ಮಿಸಲು ಸಾಧ್ಯವಾಗದಿದ್ದಾಗ ಅವರು ನಿಮಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಬಹುದೇ? ಅವರು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಬಹುದೇ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ? ಅವರು ನಿಮಗಾಗಿ ಎಂದಾದರೂ ಕಾಳಜಿ ವಹಿಸಿದರೆ?
ಸ್ನೇಹಿತರೆ,
ಕಾಂಗ್ರೆಸ್ ಮತ್ತು ಆರ್‌ಜೆಡಿ ಬಿಹಾರದ ಗೌರವಕ್ಕೆ ಮಾತ್ರವಲ್ಲದೆ, ಬಿಹಾರದ ಅಸ್ಮಿತೆಗೂ ಬೆದರಿಕೆಯಾಗಿದೆ. ಇಂದು, ಸೀಮಾಂಚಲ್ ಮತ್ತು ಪೂರ್ವ ಭಾರತದಾದ್ಯಂತ ನುಸುಳುಕೋರರಿಂದಾಗಿ ಭಾರಿ ಜನಸಂಖ್ಯಾ ಬಿಕ್ಕಟ್ಟು ಉಂಟಾಗಿದೆ. ಬಿಹಾರ, ಬಂಗಾಳ, ಅಸ್ಸಾಂ ಮತ್ತು ಇತರ ಹಲವು ರಾಜ್ಯಗಳ ಜನರು ತಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಚಿಂತಿತರಾಗಿದ್ದಾರೆ. ಅದಕ್ಕಾಗಿಯೇ ನಾನು ಕೆಂಪು ಕೋಟೆಯಿಂದ ಜನಸಂಖ್ಯಾ ಮಿಷನ್ ಘೋಷಿಸಿದೆ. ಆದರೆ ಅವರ ಮತ ಬ್ಯಾಂಕ್ ರಾಜಕೀಯದ ಸ್ವಾರ್ಥವನ್ನು ನೋಡಿ. ಕಾಂಗ್ರೆಸ್, ಆರ್‌ಜೆಡಿ ಮತ್ತು ಅವರ ಸಂಪೂರ್ಣ ರಾಜಕೀಯ ವ್ಯವಸ್ಥೆಯು ನುಸುಳುಕೋರರ ಪರವಾಗಿ ವಕಾಲತ್ತು ವಹಿಸುವುದು, ಅವರನ್ನು ರಕ್ಷಿಸುವುದು, ನಾಚಿಕೆಯಿಲ್ಲದೆ ಘೋಷಣೆಗಳನ್ನು ಕೂಗುವುದು ಮತ್ತು ವಿದೇಶದಿಂದ ಅಕ್ರಮವಾಗಿ ಬಂದವರನ್ನು ರಕ್ಷಿಸಲು ಮೆರವಣಿಗೆಗಳನ್ನು ಆಯೋಜಿಸುವಲ್ಲಿ ನಿರತವಾಗಿದೆ. ಈ ಜನರು ಬಿಹಾರ ಮತ್ತು ದೇಶದ ಸಂಪನ್ಮೂಲಗಳು ಮತ್ತು ಭದ್ರತೆ ಎರಡನ್ನೂ ಕಸಿದುಕೊಳ್ಳಲು ಬಯಸುತ್ತಾರೆ. ಆದರೆ ಇಂದು, ಪುರ್ನಿಯಾದ ಮಣ್ಣಿನಿಂದ ನಾನು ಅವರಿಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಆರ್‌ಜೆಡಿ ಮತ್ತು ಕಾಂಗ್ರೆಸ್ ಎಚ್ಚರಿಕೆಯಿಂದ ಆಲಿಸಬೇಕು. ಪ್ರತಿಯೊಬ್ಬ ನುಸುಳುಕೋರರು ಹೊರಹೋಗಬೇಕಾಗುತ್ತದೆ. ನುಸುಳುವಿಕೆಗೆ ಬೀಗ ಹಾಕುವುದು ಎನ್‌ಡಿಎಯ ದೃಢ ಜವಾಬ್ದಾರಿಯಾಗಿದೆ. ಒಳನುಸುಳುವವರನ್ನು ರಕ್ಷಿಸಲು ಮುಂದೆ ಬಂದಿರುವ ನಾಯಕರಿಗೆ ನಾನು ಸವಾಲು ಹಾಕುತ್ತೇನೆ. ಒಳನುಸುಳುವವರನ್ನು ರಕ್ಷಿಸಲು ನೀವು ಎಷ್ಟೇ ಪ್ರಯತ್ನ ಮಾಡಿದರೂ, ಅವರನ್ನು ತೆಗೆದುಹಾಕುವ ನಮ್ಮ ಸಂಕಲ್ಪದಂತೆ ನಾವು ಕಾರ್ಯ ನಿರ್ವಹಿಸುವುದನ್ನು ಮುಂದುವರಿಸುತ್ತೇವೆ. ಒಳನುಸುಳುವವರಿಗೆ ಗುರಾಣಿಯಾಗಲು ಪ್ರಯತ್ನಿಸುವವರು, ಎಚ್ಚರಿಕೆಯಿಂದ ಆಲಿಸಿ. ಭಾರತದಲ್ಲಿ ಭಾರತದ ಕಾನೂನು ಮೇಲುಗೈ ಸಾಧಿಸುತ್ತದೆ, ಅದು ಒಳನುಸುಳುವವರ ಇಚ್ಛೆಗಲ್ಲ. ಇದು ಮೋದಿಯವರ ಭರವಸೆ. ಒಳನುಸುಳುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ದೇಶವು ಅದರ ಸಕಾರಾತ್ಮಕ ಫಲಿತಾಂಶಗಳಿಗೆ ಸಾಕ್ಷಿಯಾಗುತ್ತದೆ. ಒಳನುಸುಳುವವರನ್ನು ಬೆಂಬಲಿಸಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಮಾಡುತ್ತಿರುವ ಶಬ್ದಕ್ಕೆ, ಬಿಹಾರದ ಜನರು ಮತ್ತು ದೇಶದ ಜನರು ಅವರಿಗೆ ಸೂಕ್ತ ಉತ್ತರ ನೀಡಲಿದ್ದಾರೆ.
ಸ್ನೇಹಿತರೆ,
ಕಳೆದ 2 ದಶಕಗಳಿಂದ ಬಿಹಾರದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಅಧಿಕಾರದಿಂದ ಹೊರಗಿವೆ. ನಿಸ್ಸಂದೇಹವಾಗಿ, ಇದರಲ್ಲಿ ದೊಡ್ಡ ಪಾತ್ರ ಬಿಹಾರದ ತಾಯಂದಿರು ಮತ್ತು ಸಹೋದರಿಯರದ್ದಾಗಿದೆ. ಇಂದು, ನಾನು ವಿಶೇಷವಾಗಿ ಬಿಹಾರದ ತಾಯಂದಿರು ಮತ್ತು ಸಹೋದರಿಯರಿಗೆ ನಮಸ್ಕರಿಸುತ್ತೇನೆ. ಬಹಿರಂಗ ಹತ್ಯೆಗಳು, ಅತ್ಯಾಚಾರಗಳು ಮತ್ತು ಅಪಹರಣಗಳಿಂದ ಹೆಚ್ಚು ಬಳಲುತ್ತಿರುವವರು ಆರ್‌ಜೆಡಿ ಯುಗದಲ್ಲಿ ಬಿಹಾರದ ನನ್ನ ತಾಯಂದಿರು ಮತ್ತು ಸಹೋದರಿಯರು, ಈ ನೆಲದ ಮಹಿಳೆಯರು. ಆದರೆ ಡಬಲ್-ಎಂಜಿನ್ ಸರ್ಕಾರದಲ್ಲಿ, ಅದೇ ಮಹಿಳೆಯರು 'ಲಖ್ಪತಿ ದೀದಿಗಳು' ಮತ್ತು 'ಡ್ರೋನ್ ದೀದಿಗಳು' ಆಗುತ್ತಿದ್ದಾರೆ. ನಾವು ಇಂದು 'ಡ್ರೋನ್ ದೀದಿಗಳನ್ನು' ರೂಪಿಸುತ್ತಿದ್ದೇವೆ. ಮಹಿಳೆಯರು ಸ್ವ-ಸಹಾಯ ಗುಂಪುಗಳ ಮೂಲಕ ಬೃಹತ್ ಕ್ರಾಂತಿಯನ್ನು ಮುನ್ನಡೆಸುತ್ತಿದ್ದಾರೆ. ವಿಶೇಷವಾಗಿ ನಿತೀಶ್ ಜಿ ಅವರ ನಾಯಕತ್ವದಲ್ಲಿ, 'ಜೀವಿಕಾ ದೀದಿ' ಚಳವಳಿಯ ಯಶಸ್ಸು ಅಭೂತಪೂರ್ವವಾಗಿದೆ. ಬಿಹಾರ ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ.
ಸ್ನೇಹಿತರೆ,
ಇಂದಿಗೂ ಸಹ, ನಮ್ಮ ಸಹೋದರಿಯರಿಗಾಗಿ ಸುಮಾರು 500 ಕೋಟಿ ರೂಪಾಯಿಗಳ ಸಮುದಾಯ ಹೂಡಿಕೆ ನಿಧಿಯನ್ನು ಬಿಡುಗಡೆ ಮಾಡಲಾಗಿದೆ. 500 ಕೋಟಿ ರೂಪಾಯಿಗಳು! ಈ ಮೊತ್ತವು ಕ್ಲಸ್ಟರ್ ಮಟ್ಟದ ಸಂಸ್ಥೆಗಳನ್ನು ತಲುಪುತ್ತದೆ, ಇದು ಹಳ್ಳಿಗಳಾದ್ಯಂತ ಸ್ವಸಹಾಯ ಗುಂಪುಗಳನ್ನು ಸಬಲೀಕರಣಗೊಳಿಸುತ್ತದೆ. ಇದು ಮಹಿಳೆಯರಿಗೆ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಲು ಅವಕಾಶ ನೀಡುತ್ತದೆ.
ಸ್ನೇಹಿತರೆ,
ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಏಕೈಕ ಕಾಳಜಿ ಯಾವಾಗಲೂ ಅವರ ಸ್ವಂತ ಕುಟುಂಬವಾಗಿದೆ. ಅವರು ನಿಮ್ಮ ಕುಟುಂಬಗಳ ಬಗ್ಗೆ ಎಂದಿಗೂ ಕಾಳಜಿ ವಹಿಸುವುದಿಲ್ಲ. ಆದರೆ ಮೋದಿಗೆ, ನೀವೆಲ್ಲರೂ ಮೋದಿಯ ಕುಟುಂಬ. ಅದಕ್ಕಾಗಿಯೇ ಮೋದಿ ಹೇಳುತ್ತಾರೆ: 'ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್'. ಮತ್ತು ಈ ಜನರು ಏನು ಮಾಡುತ್ತಾರೆ? ಅವರ ಕುಟುಂಬಕ್ಕೆ ಬೆಂಬಲ, ಮತ್ತು ಅವರ ಕುಟುಂಬದ ಅಭಿವೃದ್ಧಿ!
ಆದ್ದರಿಂದ, ಸಹೋದರ ಸಹೋದರಿಯರೆ,
ಮೋದಿ ನಿಮ್ಮ ಖರ್ಚಿನ ಬಗ್ಗೆ ಕಾಳಜಿ ವಹಿಸುತ್ತಾರೆ, ಮೋದಿ ನಿಮ್ಮ ಉಳಿತಾಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಮುಂಬರುವ ದಿನಗಳಲ್ಲಿ ಅನೇಕ ಹಬ್ಬಗಳು ಹತ್ತಿರದಲ್ಲಿವೆ. ಈ ಬಾರಿ, ದೀಪಾವಳಿ ಮತ್ತು ಛಠ್‌ಗೆ ಮುನ್ನ ನಮ್ಮ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗಕ್ಕೆ ಬಹುದೊಡ್ಡ ಉಡುಗೊರೆ ನೀಡಿದೆ. ಇಂದು ಸೆಪ್ಟೆಂಬರ್ 15, ನಿಖರವಾಗಿ ಒಂದು ವಾರದ ನಂತರ, ಸೆಪ್ಟೆಂಬರ್ 22ರಂದು, ನವರಾತ್ರಿಯ ಮೊದಲ ದಿನ, ದೇಶಾದ್ಯಂತ ಜಿಎಸ್‌ಟಿ ದರ ಗಣನೀಯವಾಗಿ ಕಡಿಮೆಯಾಗುತ್ತದೆ. ನಿಮ್ಮ ದೈನಂದಿನ ಅಗತ್ಯ ವಸ್ತುಗಳ ಮೇಲೆ ಜಿಎಸ್‌ಟಿಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ. ಜಿಎಸ್‌ಟಿ ಕಡಿತದಿಂದಾಗಿ ಅಡುಗೆಮನೆ ನಡೆಸುವ ವೆಚ್ಚವು ತುಂಬಾ ಕಡಿಮೆಯಾಗುತ್ತದೆ ಎಂದು ನಾನು ಇಲ್ಲಿ ಹಾಜರಿರುವ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಹೇಳಲು ಬಯಸುತ್ತೇನೆ. ಟೂತ್‌ಪೇಸ್ಟ್, ಸೋಪ್ ಮತ್ತು ಶಾಂಪೂಗಳಿಂದ ಹಿಡಿದು ತುಪ್ಪ ಮತ್ತು ಅನೇಕ ಆಹಾರ ಪದಾರ್ಥಗಳವರೆಗೆ ಎಲ್ಲವೂ ಅಗ್ಗವಾಗಲಿವೆ. ಮಕ್ಕಳ ಅಧ್ಯಯನಕ್ಕೆ ಅಗತ್ಯವಿರುವ ಲೇಖನ ಸಾಮಗ್ರಿಗಳ ಬೆಲೆಗಳು ಸಹ ಕಡಿಮೆಯಾಗಲಿವೆ. ಈ ಹಬ್ಬದ ಸಮಯದಲ್ಲಿ ಮಕ್ಕಳಿಗೆ ಹೊಸ ಬಟ್ಟೆ ಮತ್ತು ಬೂಟುಗಳನ್ನು ಖರೀದಿಸುವುದು ಸಹ ಸುಲಭವಾಗುತ್ತದೆ, ಏಕೆಂದರೆ ಇವುಗಳು ಸಹ ಅಗ್ಗವಾಗಲಿವೆ. ಬಡವರ ಬಗ್ಗೆ ಕಾಳಜಿ ವಹಿಸುವ ಸರ್ಕಾರವಿದ್ದಾಗ, ಅದು ಬಡವರ ಕಲ್ಯಾಣಕ್ಕಾಗಿ ನಿಖರವಾಗಿ ಈ ರೀತಿಯಲ್ಲಿ ಕೆಲಸ ಮಾಡುತ್ತದೆ.
ಸ್ನೇಹಿತರೆ,
ಪುರ್ನಿಯಾ ಪುತ್ರರು ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರಿಗೆ ಭಾರತದ ಶಕ್ತಿಯನ್ನು ತೋರಿಸಿದ್ದರು. ಇಂದು ಮತ್ತೊಮ್ಮೆ, ನಾವು ಆಪರೇಷನ್ ಸಿಂದೂರ ಮೂಲಕ ಶತ್ರುಗಳಿಗೆ ಅದೇ ರಾಷ್ಟ್ರದ ಶಕ್ತಿಯನ್ನು ತೋರಿಸಿದ್ದೇವೆ. ಪುರ್ನಿಯಾದ ಧೈರ್ಯಶಾಲಿ ಪುತ್ರರು ಸಹ ಈ ಕಾರ್ಯತಂತ್ರದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಅದು ರಾಷ್ಟ್ರದ ರಕ್ಷಣೆಯಾಗಿರಲಿ ಅಥವಾ ರಾಷ್ಟ್ರದ ಅಭಿವೃದ್ಧಿಯಾಗಿರಲಿ, ಬಿಹಾರವು ಯಾವಾಗಲೂ ಭಾರತದ ಪ್ರಗತಿಯಲ್ಲಿ ಪ್ರಮುಖ ಕೊಡುಗೆ ನೀಡಿದೆ. ಬಿಹಾರದ ಅಭಿವೃದ್ಧಿಯ ಈ ಅಭಿಯಾನವನ್ನು ನಾವು ಅದೇ ರೀತಿ ವೇಗಗೊಳಿಸುವುದನ್ನು ಮುಂದುವರಿಸಬೇಕು. ಮತ್ತೊಮ್ಮೆ, ಎಲ್ಲಾ ಅಭಿವೃದ್ಧಿ ಯೋಜನೆಗಳಿಗಾಗಿ ಬಿಹಾರದ ನನ್ನ ಸಹೋದರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿತೀಶ್ ಅವರ ನಾಯಕತ್ವವನ್ನು ನಾನು ಶ್ಲಾಘಿಸುತ್ತೇನೆ. ನಿಮ್ಮೆಲ್ಲರಿಗೂ ತುಂಬು ಧನ್ಯವಾದಗಳು. ಈಗ, ಪೂರ್ಣ ಶಕ್ತಿಯಿಂದ ಹೇಳಲು ನನ್ನೊಂದಿಗೆ ಸೇರಿ:
ಭಾರತ್ ಮಾತಾ ಕಿ - ಜೈ! ಭಾರತ್ ಮಾತಾ ಕಿ - ಜೈ! ಭಾರತ್ ಮಾತಾ ಕಿ - ಜೈ!
ತುಂಬು ಧನ್ಯವಾದಗಳು.
 
*****
                
                
                
                
                
                (Release ID: 2167167)
                Visitor Counter : 17
                
                
                
                    
                
                
                    
                
                Read this release in: 
                
                        
                        
                            English 
                    
                        ,
                    
                        
                        
                            Urdu 
                    
                        ,
                    
                        
                        
                            हिन्दी 
                    
                        ,
                    
                        
                        
                            Marathi 
                    
                        ,
                    
                        
                        
                            Manipuri 
                    
                        ,
                    
                        
                        
                            Bengali 
                    
                        ,
                    
                        
                        
                            Assamese 
                    
                        ,
                    
                        
                        
                            Punjabi 
                    
                        ,
                    
                        
                        
                            Gujarati 
                    
                        ,
                    
                        
                        
                            Odia 
                    
                        ,
                    
                        
                        
                            Telugu 
                    
                        ,
                    
                        
                        
                            Malayalam