ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಲಕ್ನೋ, ತಿರುವನಂತಪುರಂ, ತಿರುಚ್ಚಿ, ಕೋಯಿಕ್ಕೋಡ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ತ್ವರಿತಗತಿ ವಲಸೆ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ - ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ - ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ (ಎಫ್.ಟಿ.ಐ-ಟಿ.ಟಿ.ಪಿ) ವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವೇಗ, ಪ್ರಮಾಣ ಮತ್ತು ವ್ಯಾಪ್ತಿಯ ದೃಷ್ಟಿಕೋನವನ್ನು ತ್ವರಿತಗತಿ ವಲಸೆ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ (ಎಫ್.ಟಿ.ಐ – ಟಿ.ಟಿ.ಪಿ) ದಲ್ಲಿ ಸಾಕಾರಗೊಳಿಸಲಾಗಿದೆ ಮತ್ತು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುವ ಮುಂದಿನ ಹಂತದ ಪ್ರಯತ್ನಗಳು ಇಂದು ಪ್ರಾರಂಭವಾಗುತ್ತಿವೆ
ಎಫ್.ಟಿ.ಐ – ಟಿ.ಟಿ.ಪಿ ಪ್ರಯಾಣಿಕರ ಅನುಕೂಲತೆಯನ್ನು ಸುಧಾರಿಸುವುದಲ್ಲದೆ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತದೆ
ಎಫ್.ಟಿ.ಐ – ಟಿ.ಟಿ.ಪಿ ಪರಿಚಯದೊಂದಿಗೆ, ಪ್ರಯಾಣಿಕರು ದೀರ್ಘ ಸರತಿ ಸಾಲುಗಳು, ಹಸ್ತಚಾಲಿತ ತಪಾಸಣೆ ಮತ್ತು ವಿಳಂಬಗಳನ್ನು ತಪ್ಪಿಸಬಹುದು ಮತ್ತು ಕೇವಲ 30 ಸೆಕೆಂಡುಗಳಲ್ಲಿ ವಲಸೆ ಅನುಮತಿ ಪಡೆಯಬಹುದು
2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಅಂತಾರಾಷ್ಟ್ರೀಯ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ
Posted On:
11 SEP 2025 3:01PM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಲಕ್ನೋ, ತಿರುವನಂತಪುರಂ, ತಿರುಚ್ಚಿ, ಕೋಯಿಕ್ಕೋಡ್ ಮತ್ತು ಅಮೃತಸರ ವಿಮಾನ ನಿಲ್ದಾಣಗಳಲ್ಲಿ ತ್ವರಿತಗತಿ ವಲಸೆ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ - ಫಾಸ್ಟ್ ಟ್ರ್ಯಾಕ್ ಇಮಿಗ್ರೇಷನ್ - ಟ್ರಸ್ಟೆಡ್ ಟ್ರಾವೆಲರ್ ಪ್ರೋಗ್ರಾಂ (ಎಫ್.ಟಿ.ಐ-ಟಿ.ಟಿ.ಪಿ) ವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ, ಕೇಂದ್ರ ಗೃಹ ಕಾರ್ಯದರ್ಶಿ ಮತ್ತು ಗುಪ್ತಚರ ಬ್ಯೂರೋ ನಿರ್ದೇಶಕರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು, ಈ ಸೌಲಭ್ಯವು ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುವುದಲ್ಲದೆ, ದೇಶದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಿಳಿದುಕೊಳ್ಳಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವೇಗ, ಪ್ರಮಾಣ ಮತ್ತು ವ್ಯಾಪ್ತಿಯ ದೃಷ್ಟಿಕೋನಕ್ಕೆ ಅನುಗುಣವಾಗಿ, ಪ್ರಯಾಣಿಕರ ಅನುಕೂಲತೆಯನ್ನು ಹೆಚ್ಚಿಸುವ ಮುಂದಿನ ಹಂತವು ಇಂದು ಈ ಕಾರ್ಯಕ್ರಮದೊಂದಿಗೆ ಪ್ರಾರಂಭವಾಗುತ್ತಿದೆ ಎಂದು ಅವರು ಹೇಳಿದರು. ತಾಂತ್ರಿಕ ಪರಿಕರಗಳ ಜೊತೆಗೆ, ನಾವು ಆತ್ಮವಿಶ್ವಾಸ ಹೆಚ್ಚಿಸುವವರಾಗಿಯೂ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಮಂತ್ರಿ ಮೋದಿ ಯಾವಾಗಲೂ ಒತ್ತಿ ಹೇಳುತ್ತಾರೆ ಮತ್ತು ಇಂದಿನ ಕಾರ್ಯಕ್ರಮವು ಈ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಶ್ರೀ ಶಾ ಹೇಳಿದರು.
ತ್ವರಿತಗತಿ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ (ಎಫ್.ಟಿ.ಐ-ಟಿ.ಟಿ.ಪಿ) ದೊಂದಿಗೆ, ಇಂದಿನಿಂದ ವಿಮಾನ ನಿಲ್ದಾಣಗಳಲ್ಲಿ ಸುಗಮ ವಲಸೆ ಸೌಲಭ್ಯಗಳು ಲಭ್ಯವಿರುತ್ತವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಕೇವಲ ಸೌಲಭ್ಯವನ್ನು ಒದಗಿಸುವುದು ಸಾಕಾಗುವುದಿಲ್ಲ; ಗರಿಷ್ಠ ಪ್ರಯಾಣಿಕರು ಅದನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಇದಕ್ಕಾಗಿ, ಪಾಸ್‌ಪೋರ್ಟ್ ಮತ್ತು ಒ.ಸಿ.ಐ ಕಾರ್ಡ್ ಗಳನ್ನು ನೀಡುವ ಸಮಯದಲ್ಲಿ ನೋಂದಣಿಯನ್ನು ಸುಲಭಗೊಳಿಸಲು ಪ್ರಯತ್ನಿಸಬೇಕು. ಇದನ್ನು ಕಾರ್ಯಗತಗೊಳಿಸಲು ಸಾಧ್ಯವಾದರೆ, ಪ್ರಯಾಣಿಕರು ಬೆರಳಚ್ಚು ಅಥವಾ ದಾಖಲೆಗಳಿಗಾಗಿ ಹಿಂತಿರುಗಬೇಕಾಗಿಲ್ಲ ಮತ್ತು ಅವರು ಬಯಸಿದಾಗಲೆಲ್ಲಾ ತಮ್ಮ ಪಾಸ್‌ಪೋರ್ಟ್ ಬಳಸಿಕೊಂಡು ಪ್ರಯಾಣಿಸಬಹುದು ಎಂದು ಅವರು ಹೇಳಿದರು. ಈ ಕಾರ್ಯಕ್ರಮದಿಂದ ಗರಿಷ್ಠ ಜನರಿಗೆ ಪ್ರಯೋಜನವಾಗುವಂತೆ ಎಲ್ಲಾ ತಾಂತ್ರಿಕ ಸಾಧ್ಯತೆಗಳನ್ನು ಅನ್ವೇಷಿಸಬೇಕು ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಭಾರತೀಯ ನಾಗರಿಕರು ಖಂಡಿತವಾಗಿಯೂ ಪ್ರಯೋಜನ ಪಡೆಯುತ್ತಾರೆ, ಆದರೆ ಒ.ಸಿ.ಐ ಕಾರ್ಡ್ ದಾರರು ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು.
ತ್ವರಿತಗತಿ - ವಿಶ್ವಾಸಾರ್ಹ ಪ್ರಯಾಣಿಕರ ಕಾರ್ಯಕ್ರಮ (ಎಫ್.ಟಿ.ಐ-ಟಿ.ಟಿ.ಪಿ) ಅನುಕೂಲತೆ ಮತ್ತು ರಾಷ್ಟ್ರೀಯ ಭದ್ರತೆ ಎರಡನ್ನೂ ಹೆಚ್ಚಿಸುವ ಕಾರ್ಯಕ್ರಮವಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈ ಕಾರ್ಯಕ್ರಮವನ್ನು 2024ರಲ್ಲಿ ದೆಹಲಿಯಲ್ಲಿ ಪ್ರಾರಂಭಿಸಲಾಯಿತು, ನಂತರ ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು, ಕೊಚ್ಚಿ ಮತ್ತು ಅಹಮದಾಬಾದ್ ವಿಮಾನ ನಿಲ್ದಾಣಗಳಲ್ಲಿ ಇದನ್ನು ಜಾರಿಗೆ ತರಲಾಯಿತು ಮತ್ತು ಇಂದು ಐದು ಹೊಸ ವಿಮಾನ ನಿಲ್ದಾಣಗಳನ್ನು ಸೇರಿಸಲಾಗಿದೆ ಎಂದು ಅವರು ಹೇಳಿದರು. ಈ ಪ್ರಕ್ರಿಯೆಯು ಈಗ ಒಟ್ಟು 13 ವಿಮಾನ ನಿಲ್ದಾಣಗಳಲ್ಲಿ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಶಾ ಮಾಹಿತಿ ನೀಡಿದರು. ಈ ಕಾರ್ಯಕ್ರಮವನ್ನು ಮುಂಬರುವ ನವಿ ಮುಂಬೈ ಮತ್ತು ಜೇವರ್ ವಿಮಾನ ನಿಲ್ದಾಣಗಳೊಂದಿಗೆ ಸಂಯೋಜಿಸಲು ಗೃಹ ಸಚಿವಾಲಯ ಯೋಜಿಸಿದೆ ಎಂದು ಅವರು ಹೇಳಿದರು. ಈ ಸೌಲಭ್ಯವನ್ನು ಬಳಸಿದ ಎಲ್ಲರೂ ಇದನ್ನು ಶ್ಲಾಘಿಸಿದ್ದಾರೆ ಎಂದು ಶ್ರೀ ಶಾ ಹೇಳಿದರು. ಪ್ರಯಾಣಿಕರು ಇನ್ನು ಮುಂದೆ ದೀರ್ಘ ಸರತಿ ಸಾಲುಗಳು ಅಥವಾ ಹಸ್ತಚಾಲಿತ ತಪಾಸಣೆಯನ್ನು ಎದುರಿಸಬೇಕಾಗಿಲ್ಲ, ಅವರು ಯಾವುದೇ ವಿಳಂಬವಿಲ್ಲದೆ ಕೇವಲ 30 ಸೆಕೆಂಡುಗಳಲ್ಲಿ ವಲಸೆ ಅನುಮತಿಯನ್ನು ಪಡೆಯುತ್ತಾರೆ. ಸುಮಾರು 3 ಲಕ್ಷ ಪ್ರಯಾಣಿಕರು ಈ ಪೋರ್ಟಲ್ ನಲ್ಲಿ ನೋಂದಾಯಿಸಿಕೊಂಡಿದ್ದಾರೆ, ಅದರಲ್ಲಿ 2.65 ಲಕ್ಷ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಇದನ್ನು ಬಳಸಿದ್ದಾರೆ ಮತ್ತು ಈ ಸಂಖ್ಯೆಯನ್ನು ನಿರಂತರವಾಗಿ ಹೆಚ್ಚಿಸಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ 11 ವರ್ಷಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ದಟ್ಟಣೆ ಗಮನಾರ್ಹವಾಗಿ ಬೆಳೆದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 2014ರಲ್ಲಿ ಹೊರಹೋಗುವ ಪ್ರಯಾಣಿಕರ ಸಂಖ್ಯೆ 3.54 ಕೋಟಿಯಷ್ಟಿತ್ತು, ಇದು 2024ರಲ್ಲಿ ಸುಮಾರು ಶೇ.73 ರಷ್ಟು ಹೆಚ್ಚಾಗಿ 6.12 ಕೋಟಿಗೆ ತಲುಪಿತು ಎಂದು ಅವರು ಹೇಳಿದರು. ಅದೇ ರೀತಿ, ಭಾರತಕ್ಕೆ ಬರುವ ವಿದೇಶಿ ಪ್ರಯಾಣಿಕರ ಸಂಖ್ಯೆ 2014ರಲ್ಲಿ 1.53 ಕೋಟಿಯಷ್ಟಿತ್ತು, ಇದು 2024ರಲ್ಲಿ ಸುಮಾರು ಶೇ.31 ರಷ್ಟು ಹೆಚ್ಚಾಗಿ ಸುಮಾರು 2 ಕೋಟಿಗೆ ತಲುಪಿದೆ. ಎರಡೂ ಅಂಕಿಅಂಶಗಳನ್ನು ಒಟ್ಟುಗೂಡಿಸಿದರೆ, 2014ರಲ್ಲಿ ಒಟ್ಟು ಪ್ರಯಾಣಿಕರ ಸಂಖ್ಯೆ 5.07 ಕೋಟಿಯಷ್ಟಿತ್ತು, ಆದರೆ 2024ರಲ್ಲಿ ಇದು 8.12 ಕೋಟಿಯಷ್ಟಾಯಿತು, ಇದು ವಿದೇಶದಿಂದ ಬರುವ ಅಥವಾ ವಿದೇಶಕ್ಕೆ ಪ್ರಯಾಣಿಸುವವರ ಒಟ್ಟಾರೆ ಶೇ.60 ರಷ್ಟು ಹೆಚ್ಚಳವನ್ನು ತೋರಿಸುತ್ತದೆ. ಎಲ್ಲಾ ಭಾರತೀಯ ನಾಗರಿಕರು ಮತ್ತು ಒ.ಸಿ.ಐ ಕಾರ್ಡ್‌ದಾರರು ಈ ಸೌಲಭ್ಯ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿಯಾಗಿರಬೇಕು ಎಂದು ಶ್ರೀ ಶಾ ಒತ್ತಿ ಹೇಳಿದರು.

ಎಫ್.ಟಿ.ಐ-ಟಿ.ಟಿ.ಪಿ ಯನ್ನು https://ftittp.mha.gov.in ಎಂಬ ಆನ್‌ಲೈನ್ ಪೋರ್ಟಲ್ ಮೂಲಕ ಅಳವಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು, ಅರ್ಜಿದಾರರು ತಮ್ಮ ವಿವರಗಳನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಅರ್ಜಿದಾರರ ಬಯೋಮೆಟ್ರಿಕ್ ಗಳನ್ನು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಲ್ಲಿ (ಎಫ್.ಆರ್.ಆರ್.ಒ) ಅಥವಾ ವಿಮಾನ ನಿಲ್ದಾಣದ ಮೂಲಕ ಹಾದುಹೋಗುವಾಗ ಸಂಗ್ರಹಿಸಲಾಗುತ್ತದೆ. ನೋಂದಾಯಿತ ಪ್ರಯಾಣಿಕರು ಇ-ಗೇಟ್ ನಲ್ಲಿ ವಿಮಾನಯಾನ ಸಂಸ್ಥೆ ನೀಡಿದ ಬೋರ್ಡಿಂಗ್ ಪಾಸ್ ಅನ್ನು ಸ್ಕ್ಯಾನ್ ಮಾಡಿ ನಂತರ ತಮ್ಮ ಪಾಸ್‌ಪೋರ್ಟ್ ಅನ್ನು ಸ್ಕ್ಯಾನ್ ಮಾಡಬೇಕು. ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿ ಸ್ಥಾಪಿಸಲಾದ ಇ-ಗೇಟ್ ಗಳಲ್ಲಿ ಪ್ರಯಾಣಿಕರ ಬಯೋಮೆಟ್ರಿಕ್ ಗಳನ್ನು ಪರಿಶೀಲಿಸಲಾಗುತ್ತದೆ. ಯಶಸ್ವಿ ಪರಿಶೀಲನೆಯ ನಂತರ, ಇ-ಗೇಟ್ ಸ್ವಯಂಚಾಲಿತವಾಗಿ ತೆರೆಯುತ್ತದೆ ಮತ್ತು ವಲಸೆ ಅನುಮತಿ ನೀಡಲಾಗುತ್ತದೆ.
*****
(Release ID: 2165673)
Visitor Counter : 2
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Malayalam