ಪ್ರಧಾನ ಮಂತ್ರಿಯವರ ಕಛೇರಿ
ಸೆಪ್ಟೆಂಬರ್ 11 ರಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರು ವಾರಣಾಸಿಯಲ್ಲಿ ಮಾರಿಷಸ್ ಪ್ರಧಾನಮಂತ್ರಿ ಅವರನ್ನು ಸತ್ಕರಿಸಲಿದ್ದಾರೆ
ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವರ್ಣಪಟಲವನ್ನು ಪರಿಶೀಲಿಸಲಿರುವ ಉಭಯ ನಾಯಕರು
ಭಾರತದ ‘ಮಹಾಸಾಗರ’(MAHASAGR) ದೃಷ್ಟಿಕೋನ ಮತ್ತು 'ನೆರೆಹೊರೆ ಮೊದಲು' ನೀತಿಯಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಮಾರಿಷಸ್
ಸಮೃದ್ಧಿ ಮತ್ತು ಸುಸ್ಥಿರತೆಯ ಪ್ರಯಾಣದಲ್ಲಿ ವಾರಣಾಸಿ ಶೃಂಗಸಭೆಯು ಮಹತ್ವದ ಮೈಲಿಗಲ್ಲನ್ನು ಸೃಷ್ಟಿಸಲಿದೆ
ಡೆಹ್ರಾಡೂನ್‌ನಲ್ಲಿ ಪ್ರವಾಹ ಪರಿಸ್ಥಿತಿಯ ಕುರಿತಾದ ವೈಮಾನಿಕ ಸಮೀಕ್ಷೆ ಮತ್ತು ತಮ್ಮ ಅಧ್ಯಕ್ಷತೆಯ ಪರಿಶೀಲನಾ ಸಭೆ ನಡೆಸಲಿರುವ ಪ್ರಧಾನಮಂತ್ರಿ
Posted On:
10 SEP 2025 1:01PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 11 ರಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡಕ್ಕೆ ಭೇಟಿ ನೀಡಲಿದ್ದಾರೆ.
ವಾರಣಾಸಿಯಲ್ಲಿ ಬೆಳಿಗ್ಗೆ 11:30ರ ಸುಮಾರಿಗೆ, ಪ್ರಧಾನಮಂತ್ರಿ ಅವರು 2025 ರ ಸೆಪ್ಟೆಂಬರ್ 9 ರಿಂದ 16 ರವರೆಗೆ ಭಾರತ ಪ್ರವಾಸದಲ್ಲಿರುವ ಮಾರಿಷಸ್ ಪ್ರಧಾನಮಂತ್ರಿ ಅವರಾದ ಗೌರವಾನ್ವಿತ ಡಾ. ನವೀನ್ ಚಂದ್ರ ರಾಮಗೂಲಂ ಅವರಿಗೆ ಆತಿಥ್ಯ ನೀಡಲಿದ್ದಾರೆ.
ತದನಂತರ, ಪ್ರಧಾನಮಂತ್ರಿ ಅವರು ಡೆಹ್ರಾಡೂನ್‌ಗೆ ಪ್ರಯಾಣ ಬೆಳೆಸಲಿದ್ದು, ಸಂಜೆ 4:15ರ ಸುಮಾರಿಗೆ ಉತ್ತರಾಖಂಡದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ. ಸಂಜೆ 5 ಗಂಟೆ ಸುಮಾರಿಗೆ, ಪ್ರಧಾನಮಂತ್ರಿ ಅವರು ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಲಿದ್ದಾರೆ.
ಐತಿಹಾಸಿಕ ನಗರಿಯಾದ ವಾರಣಾಸಿಯಲ್ಲಿ ಉಭಯ ನಾಯಕರ ನಡುವಿನ ಸಭೆಯು ಭಾರತ ಮತ್ತು ಮಾರಿಷಸ್ ನಡುವಿನ ವಿಶೇಷ ಮತ್ತು ವಿಶಿಷ್ಟ ಸಂಬಂಧವನ್ನು ರೂಪಿಸಿರುವ ಶಾಶ್ವತ ನಾಗರಿಕತೆಯ ಸಂಪರ್ಕ, ಆಧ್ಯಾತ್ಮಿಕ ಸಂಬಂಧಗಳು ಮತ್ತು ಉಭಯ ದೇಶಗಳ ಜನರ ಮಧ್ಯೆ ಆಳವಾದ ಬೇರೂರಿರುವ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿವೆ.
ದ್ವಿಪಕ್ಷೀಯ ಚರ್ಚೆಯ ಸಮಯದಲ್ಲಿ, ಉಭಯ ನಾಯಕರು ಅಭಿವೃದ್ಧಿ ಪಾಲುದಾರಿಕೆ ಮತ್ತು ಸಾಮರ್ಥ್ಯ ವೃದ್ಧಿಯ ಮೇಲೆ ಹೆಚ್ಚು ಒತ್ತು ನೀಡಲಿದ್ದು, ಸಹಕಾರದ ಸಂಪೂರ್ಣ ವರ್ಣಪಟಲವನ್ನು ಪರಿಶೀಲಿಸಲಿದ್ದಾರೆ. ಆರೋಗ್ಯ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ಇಂಧನ, ಮೂಲಸೌಕರ್ಯ ಹಾಗೂ ನವೀಕರಿಸಬಹುದಾದ ಇಂಧನ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ನೀಲಿ ಆರ್ಥಿಕತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಯೋಗವನ್ನು ವಿಸ್ತರಿಸುವ ಅವಕಾಶಗಳ ಬಗ್ಗೆಯೂ ಅವರು ಚರ್ಚಿಸಲಿದ್ದಾರೆ.
ಮಾರ್ಚ್ 2025ರಲ್ಲಿ ಪ್ರಧಾನಮಂತ್ರಿ ಮೋದಿ ಅವರ ಮಾರಿಷಸ್‌ನ ಅಧಿಕೃತ ಭೇಟಿ ಸಂದರ್ಭದಲ್ಲಿ ಉಭಯ ನಾಯಕರು ದ್ವಿಪಕ್ಷೀಯ ಸಂಬಂಧವನ್ನು 'ವರ್ಧಿತ ಕಾರ್ಯತಂತ್ರದ ಪಾಲುದಾರಿಕೆ'ಗೆ ಕೊಂಡೊಯ್ದ ಪರಿಣಾಮವಾಗಿ ಉಂಟಾದ ಸಕಾರಾತ್ಮಕ ಪ್ರಚೋದನೆಯ ಮೇರೆಗೆ ಈ ಭೇಟಿಯನ್ನು ಆಯೋಜಿಸಲಾಗಿದೆ.
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಮೌಲ್ಯಯುತ ಪಾಲುದಾರ ಮತ್ತು ನಿಕಟ ಕಡಲ ನೆರೆಯ ರಾಷ್ಟ್ರವಾಗಿರುವ ಮಾರಿಷಸ್ ಭಾರತದ ಮಹಾಸಾಗರ (ಪ್ರದೇಶದಾದ್ಯಂತ ಭದ್ರತೆ ಮತ್ತು ಬೆಳವಣಿಗೆಗೆ ಪರಸ್ಪರ ಮತ್ತು ಸಮಗ್ರ ಪ್ರಗತಿ) ದೃಷ್ಟಿ ಮತ್ತು 'ನೆರೆಹೊರೆ ಮೊದಲು' ನೀತಿಯ ಪ್ರಮುಖ ಭಾಗವಾಗಿದೆ. ಎರಡೂ ದೇಶಗಳ ನಡುವಿನ ಆಳವಾದ ಸಹಕಾರವು ಉಭಯ ದೇಶಗಳ ಜನರ ಸಮೃದ್ಧಿ ಮಾತ್ರವಲ್ಲದೆ, ಜಾಗತಿಕ ದಕ್ಷಿಣದ ಸಾಮೂಹಿಕ ಆಕಾಂಕ್ಷೆಗಳಿಗೂ ಮಹತ್ವದ ಪಾತ್ರವಹಿಸಲಿದೆ.
ವಾರಣಾಸಿಯ ಈ ಶೃಂಗಸಭೆಯು ಭಾರತ ಮತ್ತು ಮಾರಿಷಸ್‌ನ ಪರಸ್ಪರ ಸಮೃದ್ಧಿ, ಸುಸ್ಥಿರ ಅಭಿವೃದ್ಧಿ ಹಾಗೂ ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಂಡ ಸಮಗ್ರ ಭವಿಷ್ಯದ ಹಂಚಿಕೆಯ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿ ಹೊರಹೊಮ್ಮಲಿದೆ.
*****
(Release ID: 2165251)
Visitor Counter : 2
Read this release in:
Assamese
,
Bengali
,
Odia
,
English
,
Urdu
,
Marathi
,
Hindi
,
Manipuri
,
Bengali-TR
,
Punjabi
,
Gujarati
,
Telugu
,
Malayalam