ಪ್ರಧಾನ ಮಂತ್ರಿಯವರ ಕಛೇರಿ
ʻಭಾರತ-ಜಪಾನ್ ಆರ್ಥಿಕ ವೇದಿಕೆʼಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ
Posted On:
29 AUG 2025 2:23PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಗೌರವಾನ್ವಿತ ಶ್ರೀ ಶಿಗೆರು ಇಶಿಬಾ ಅವರು 2025ರ ಆಗಸ್ಟ್ 29ರಂದು ಟೋಕಿಯೊದಲ್ಲಿ ʻಭಾರತೀಯ ಕೈಗಾರಿಕಾ ಒಕ್ಕೂಟʼ(ಸಿಐಐ) ಮತ್ತು ʻಕೀಡಾನ್ರೆನ್ʼ (ಜಪಾನ್ ಉದ್ಯಮ ಒಕ್ಕೂಟ) ಆಯೋಜಿಸಿದ್ದ ʻಭಾರತ-ಜಪಾನ್ ಆರ್ಥಿಕ ವೇದಿಕೆʼಯಲ್ಲಿ ಭಾಗವಹಿಸಿದ್ದರು. ʻಭಾರತ-ಜಪಾನ್ ವಾಣಿಜ್ಯ ನಾಯಕರ ವೇದಿಕೆʼಯ ʻಸಿಇಒʼಗಳು ಸೇರಿದಂತೆ ಭಾರತ ಮತ್ತು ಜಪಾನ್ನ ಪ್ರಮುಖ ಉದ್ಯಮ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.
ಈ ವೇಳೆ ಪ್ರಧಾನಮಂತ್ರಿಯವರು ತಮ್ಮ ಭಾಷಣದಲ್ಲಿ, ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯ ಬಗ್ಗೆ, ಅದರಲ್ಲೂ ವಿಶೇಷವಾಗಿ ಹೂಡಿಕೆ, ಉತ್ಪಾದನೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಯೋಗದ ಯಶಸ್ಸನ್ನು ಒತ್ತಿ ಹೇಳಿದರು. ಭಾರತದಲ್ಲಿ ತಮ್ಮ ಹೆಜ್ಜೆಗುರುತನ್ನು ಮತ್ತಷ್ಟು ಹೆಚ್ಚಿಸಲು ಜಪಾನಿನ ಕಂಪನಿಗಳನ್ನು ಆಹ್ವಾನಿಸಿದ ಅವರು, ಭಾರತದ ಬೆಳವಣಿಗೆಯ ಯಶೋಗಾಥೆಯು ಆ ಕಂಪನಿಗಳಿಗೆ ಅತ್ಯಾಕರ್ಷಕ ಅವಕಾಶಗಳನ್ನು ಒದಗಿಸುತ್ತದೆ ಎಂದರು. ಪ್ರಸ್ತುತ ಪ್ರಕ್ಷುಬ್ಧ ಜಾಗತಿಕ ಆರ್ಥಿಕ ಸನ್ನಿವೇಶದ ಹಿನ್ನೆಲೆಯಲ್ಲಿ ವಿಶ್ವಾಸಾರ್ಹ ಸ್ನೇಹಿತರ ನಡುವಿನ ಆಳವಾದ ಆರ್ಥಿಕ ಸಹಭಾಗಿತ್ವವು ಅತ್ಯಂತ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು. ರಾಜಕೀಯ ಸ್ಥಿರತೆ, ನೀತಿ ಮುಂಗಾಣಿಕೆ, ಸುಧಾರಣೆಗಳಿಗೆ ಬದ್ಧತೆ ಮತ್ತು ಸುಗಮ ವ್ಯಾಪಾರ ಪ್ರಯತ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಹೊಸ ವಿಶ್ವಾಸವನ್ನು ನೀಡಿವೆ ಎಂದು ಪ್ರಧಾನಿ ಒತ್ತಿ ಹೇಳಿದರು. ಜಾಗತಿಕ ಸಂಸ್ಥೆಗಳು ಇತ್ತೀಚೆಗೆ ಭಾರತದ ಕ್ರೆಡಿಟ್ ರೇಟಿಂಗ್ ಅನ್ನು ಮೇಲ್ದರ್ಜೆಗೆ ಏರಿಸಿರುವುದು ಈ ವಿಶ್ವಾಸವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಭಾರತ ಮತ್ತು ಜಪಾನ್ ನಡುವೆ ಅತ್ಯಾಧುನಿಕ ತಂತ್ರಜ್ಞಾನಗಳು, ಉತ್ಪಾದನೆ, ಹೂಡಿಕೆ ಮತ್ತು ಮಾನವ ಸಂಪನ್ಮೂಲ ವಿನಿಮಯದಲ್ಲಿ ಸಹಯೋಗದ ಮಹತ್ವದ ಸಾಮರ್ಥ್ಯವನ್ನು ಪ್ರಧಾನಿ ಒತ್ತಿಹೇಳಿದರು. ಭಾರತವು ಜಾಗತಿಕ ಬೆಳವಣಿಗೆಗೆ ಸುಮಾರು ಶೇ. 18ರಷ್ಟು ಕೊಡುಗೆ ನೀಡುತ್ತಿದೆ ಮತ್ತು ಕೆಲವೇ ವರ್ಷಗಳಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಹೇಳಿದರು. ಎರಡೂ ಆರ್ಥಿಕತೆಗಳ ಪೂರಕತೆಗಳನ್ನು ಗಮನದಲ್ಲಿಟ್ಟುಕೊಂಡು, ʻಮೇಕ್ ಇನ್ ಇಂಡಿಯಾʼ ಮತ್ತು ಇತರ ಉಪಕ್ರಮಗಳ ನಿಟ್ಟಿನಲ್ಲಿ ಜಪಾನ್ ಮತ್ತು ಭಾರತದ ನಡುವೆ ಹೆಚ್ಚಿನ ವ್ಯಾಪಾರ ಸಹಯೋಗಕ್ಕಾಗಿ ಐದು ಪ್ರಮುಖ ಕ್ಷೇತ್ರಗಳನ್ನು ಮೋದಿ ಅವರು ಪ್ರಸ್ತಾಪಿಸಿದರು. ಅವುಗಳೆಂದರೆ: i] ಉತ್ಪಾದನೆ - ಬ್ಯಾಟರಿಗಳು, ರೊಬೊಟಿಕ್ಸ್, ಅರೆವಾಹಕಗಳು, ಹಡಗು ನಿರ್ಮಾಣ ಮತ್ತು ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ; ii] ಕೃತಕ ಬುದ್ಧಿಮತ್ತೆ(ಎಐ), ಕ್ವಾಂಟಮ್ ಕಂಪ್ಯೂಟಿಂಗ್, ಬಾಹ್ಯಾಕಾಶ ಮತ್ತು ಬಯೋಟೆಕ್ ಸೇರಿದಂತೆ ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಸಹಯೋಗ; iii] ಹಸಿರು ಇಂಧನ ಪರಿವರ್ತನೆ; iv] ಸಾರಿಗೆ, ಹೈಸ್ಪೀಡ್ ರೈಲು ಮತ್ತು ಸರಕು-ಸಾಗಣೆ ಸೇರಿದಂತೆ ಮುಂದಿನ ಪೀಳಿಗೆಯ ಮೂಲಸೌಕರ್ಯ; ಮತ್ತು iv] ಕೌಶಲ್ಯ ಅಭಿವೃದ್ಧಿ ಮತ್ತು ಜನರ ನಡುವಿನ ಸಂಬಂಧಗಳು. ಪ್ರಧಾನ ಮಂತ್ರಿಯವರ ಸಂಪೂರ್ಣ ಟಿಪ್ಪಣಿಗಳನ್ನು ಇಲ್ಲಿ ನೋಡಬಹುದು [ಲಿಂಕ್]
ಈ ಸಂದರ್ಭ ಮಾತನಾಡಿದ ಜಪಾನ್ ಪ್ರಧಾನಮಂತ್ರಿ ಇಶಿಬಾ ಅವರು, ಸದೃಢ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಭಾರತೀಯ ಪ್ರತಿಭೆಗಳು ಮತ್ತು ಜಪಾನಿನ ತಂತ್ರಜ್ಞಾನದ ನಡುವೆ ಸಹಭಾಗಿತ್ವವನ್ನು ರೂಪಿಸುವಲ್ಲಿ ಜಪಾನಿನ ಕಂಪನಿಗಳ ಆಸಕ್ತಿಯ ಬಗ್ಗೆ ಗಮನ ಸೆಳೆದರು. ಭಾರತ ಮತ್ತು ಜಪಾನ್ ನಡುವಿನ ಮೂರು ಆದ್ಯತೆಗಳನ್ನು ಅವರು ಒತ್ತಿಹೇಳಿದರು, ಅವುಗಳೆಂದರೆ: ʻಪಿ 2 ಪಿʼ ಪಾಲುದಾರಿಕೆಯನ್ನು ಬಲಪಡಿಸುವುದು; ತಂತ್ರಜ್ಞಾನದ ಸಂಯೋಜನೆ, ಹಸಿರು ಉಪಕ್ರಮಗಳು ಮತ್ತು ಮಾರುಕಟ್ಟೆ ಹಾಗೂ ಉನ್ನತ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ನಿರ್ಣಾಯಕ ಕ್ಷೇತ್ರಗಳಲ್ಲಿ, ವಿಶೇಷವಾಗಿ ಅರೆವಾಹಕಗಳಲ್ಲಿ ಸಹಕಾರ.
12ನೇ ʻಭಾರತ ಜಪಾನ್ ವ್ಯಾಪಾರ ನಾಯಕರ ವೇದಿಕೆʼಯ (ಐಜೆಬಿಎಲ್ಎಫ್) ವರದಿಯನ್ನು ʻಐಜೆಬಿಎಲ್ಎಫ್ʼ ಸಹ ಅಧ್ಯಕ್ಷರು ಉಭಯ ನಾಯಕರಿಗೆ ಪ್ರಸ್ತುತಪಡಿಸಿದರು. ಭಾರತೀಯ ಮತ್ತು ಜಪಾನಿನ ಉದ್ಯಮದ ನಡುವೆ ಬೆಳೆಯುತ್ತಿರುವ ಪಾಲುದಾರಿಕೆಯನ್ನು ʻಜಪಾನ್ ಬಾಹ್ಯ ವ್ಯಾಪಾರ ಸಂಸ್ಥೆʼ (ಜೆಟ್ರೊ) ಅಧ್ಯಕ್ಷರು ಮತ್ತು ಸಿಇಒ ಶ್ರೀ ನೊರಿಹಿಕೊ ಇಶಿಗುರೊ ಎತ್ತಿ ತೋರಿಸಿದರು. ಉಕ್ಕು, ಎಐ, ಬಾಹ್ಯಾಕಾಶ, ಶಿಕ್ಷಣ ಮತ್ತು ಕೌಶಲ್ಯಗಳು, ಶುದ್ಧ ಇಂಧನ ಮತ್ತು ಮಾನವ ಸಂಪನ್ಮೂಲ ವಿನಿಮಯದಂತಹ ಕ್ಷೇತ್ರಗಳಲ್ಲಿ ಭಾರತೀಯ ಮತ್ತು ಜಪಾನಿನ ಕಂಪನಿಗಳ ನಡುವೆ ಸಹಿ ಹಾಕಲಾದ ವಿವಿಧ ʻಬಿ 2 ಬಿʼ ಒಪ್ಪಂದಗಳನ್ನು ಅವರು ಘೋಷಿಸಿದರು.
*****
(Release ID: 2161961)
Visitor Counter : 6
Read this release in:
English
,
Urdu
,
Hindi
,
Marathi
,
Manipuri
,
Bengali-TR
,
Bengali
,
Punjabi
,
Gujarati
,
Odia
,
Tamil
,
Telugu
,
Malayalam