ಪ್ರಧಾನ ಮಂತ್ರಿಯವರ ಕಛೇರಿ
ಅಹಮದಾಬಾದ್ ನಲ್ಲಿ ಸರ್ದಾರ್ ಧಾಮ್ ಹಂತ-II, ಬಾಲಕಿಯರ ಹಾಸ್ಟೆಲ್ ನ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣ
Posted On:
24 AUG 2025 10:24PM by PIB Bengaluru
ಕೇಂದ್ರ ಸಚಿವ ಸಂಪುಟದ ನನ್ನ ಎಲ್ಲ ಸಹೋದ್ಯೋಗಿಗಳೇ, ಗುಜರಾತ್ ಸರ್ಕಾರದ ಎಲ್ಲ ಸಚಿವರೇ, ಇಲ್ಲಿ ನೆರೆದಿರುವ ಎಲ್ಲ ಸಂಸತ್ ಸದಸ್ಯರೇ, ಎಲ್ಲ ಶಾಸಕರೇ, ಸರ್ದಾರ್ ಧಾಮದ ಅಧ್ಯಕ್ಷರಾದ ಶ್ರೀ ಗಗ್ಜಿ ಭಾಯಿ ಅವರೇ, ಟ್ರಸ್ಟಿ ವಿ.ಕೆ. ಪಟೇಲ್ ಅವರೇ, ದಿಲೀಪ್ ಭಾಯಿ ಅವರೇ, ಎಲ್ಲ ಗಣ್ಯರೇ, ಹಾಗೂ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ, ವಿಶೇಷವಾಗಿ ನನ್ನ ಪ್ರೀತಿಯ ಹೆಣ್ಣು ಮಕ್ಕಳೇ.
ಸರ್ದಾರ್ ಧಾಮದ ಹೆಸರು ಎಷ್ಟು ಪವಿತ್ರವಾಗಿದೆಯೋ, ಅದರ ಕೆಲಸವೂ ಅಷ್ಟೇ ಪವಿತ್ರವಾಗಿದೆ. ಇಂದು, ಹೆಣ್ಣುಮಕ್ಕಳ ಸೇವೆಗಾಗಿ ಮತ್ತು ಅವರ ಶಿಕ್ಷಣಕ್ಕಾಗಿ ಒಂದು ವಿದ್ಯಾರ್ಥಿನಿಲಯವನ್ನು ಉದ್ಘಾಟಿಸಲಾಗುತ್ತಿದೆ. ಈ ವಿದ್ಯಾರ್ಥಿನಿಲಯದಲ್ಲಿ ತಂಗುವ ಹೆಣ್ಣುಮಕ್ಕಳು ತಮ್ಮ ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳನ್ನು ನನಸಾಗಿಸಿಕೊಳ್ಳಲು ಅನೇಕ ಅವಕಾಶಗಳನ್ನು ಪಡೆಯುತ್ತಾರೆ. ಇದಷ್ಟೇ ಅಲ್ಲದೆ, ಈ ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಂತು ಸಮರ್ಥರಾದಾಗ, ಅವರು ಸಹಜವಾಗಿಯೇ ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಮತ್ತು ಅವರ ಕುಟುಂಬಗಳೂ ಕೂಡ ಸಶಕ್ತವಾಗುತ್ತವೆ. ಆದ್ದರಿಂದ, ಈ ವಿದ್ಯಾರ್ಥಿನಿಲಯದಲ್ಲಿ ತಂಗುವ ಅವಕಾಶ ಪಡೆಯುವ ಎಲ್ಲಾ ಹೆಣ್ಣುಮಕ್ಕಳಿಗೆ, ಅವರ ಉಜ್ವಲ ಭವಿಷ್ಯಕ್ಕಾಗಿ ನಾನು ಮೊದಲು ಶುಭ ಹಾರೈಸುತ್ತೇನೆ ಮತ್ತು ಅವರ ಕುಟುಂಬಗಳಿಗೂ ಸಹ ಶುಭ ಹಾರೈಸುತ್ತೇನೆ.
ಸ್ನೇಹಿತರೇ,
ವಿದ್ಯಾರ್ಥಿನಿಯರ ಹಾಸ್ಟೆಲ್ ನ ಎರಡನೇ ಹಂತದ ಶಿಲಾನ್ಯಾಸ ಮಾಡುವ ಅವಕಾಶವನ್ನು ನೀವು ನನಗೆ ನೀಡಿರುವುದು ನನ್ನ ಸೌಭಾಗ್ಯ. ಇಂದು, ಸಮಾಜದ ಭಗೀರಥ ಪ್ರಯತ್ನದಿಂದ, 3 ಸಾವಿರ ಹೆಣ್ಣುಮಕ್ಕಳಿಗೆ ಅತ್ಯುತ್ತಮ ವ್ಯವಸ್ಥೆಗಳು ಮತ್ತು ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ ಭವ್ಯವಾದ ಕಟ್ಟಡವೊಂದು ದೊರೆಯುತ್ತಿದೆ. ಬರೋಡಾದಲ್ಲಿಯೂ ಕೂಡ 2 ಸಾವಿರ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ನನಗೆ ತಿಳಿಸಲಾಗಿದೆ. ಸೂರತ್, ರಾಜ್ಕೋಟ್ ಮತ್ತು ಮೆಹ್ಸಾನಾದಲ್ಲಿಯೂ ಕೂಡ ಈ ರೀತಿಯ ಶಿಕ್ಷಣ, ಕಲಿಕೆ ಮತ್ತು ತರಬೇತಿಗಾಗಿ ಅನೇಕ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಈ ಪ್ರಯತ್ನಗಳಿಗೆ ಕೊಡುಗೆ ನೀಡುತ್ತಿರುವವರೆಲ್ಲರೂ ಅಭಿನಂದನೆಗೆ ಅರ್ಹರು, ಏಕೆಂದರೆ ಸಮಾಜದ ಶಕ್ತಿಯಿಂದ ಮಾತ್ರ ನಮ್ಮ ದೇಶ ಪ್ರಗತಿ ಸಾಧಿಸುತ್ತದೆ. ಇಂದು ಈ ಸಂದರ್ಭದಲ್ಲಿ, ನಾನು ಸರ್ದಾರ್ ಸಾಹೇಬರ ಪಾದಗಳಿಗೆ ನಮಿಸುತ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ, ಭಾರತದ ಅಭಿವೃದ್ಧಿಗೆ ಗುಜರಾತಿನ ಅಭಿವೃದ್ಧಿ ಅತ್ಯಗತ್ಯ ಎಂದು ಯಾವಾಗಲೂ ಹೇಳುತ್ತಿದ್ದೆ. ಮತ್ತು ಇಂದು ಕಾಕತಾಳೀಯ ಏನಂದರೆ, ಗುಜರಾತ್ ನನಗೆ ಏನನ್ನು ಕಲಿಸಿದೆಯೋ, ನಾನು ಗುಜರಾತಿನಿಂದ ಏನನ್ನು ಕಲಿತೆನೋ, ಅದು ದೇಶದ ಅಭಿವೃದ್ಧಿಗಾಗಿ ಬಳಕೆಯಾಗುತ್ತಿದೆ. 25-30 ವರ್ಷಗಳ ಹಿಂದೆ ಗುಜರಾತಿನಲ್ಲಿ ಅನೇಕ ಮಾನದಂಡಗಳಲ್ಲಿ ಕೆಲವು ಚಿಂತಾಜನಕ ವಿಷಯಗಳಿದ್ದವು ಎಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಅಭಿವೃದ್ಧಿಯ ಜೊತೆಗೆ, ಗುಜರಾತ್ ಸಾಮಾಜಿಕ ಕ್ಷೇತ್ರಗಳಲ್ಲೂ ಅನೇಕ ಬಿಕ್ಕಟ್ಟುಗಳನ್ನು ಮತ್ತು ಸವಾಲುಗಳನ್ನು ಎದುರಿಸಬೇಕಾಯಿತು. ಮತ್ತು ನಾನು ಮುಖ್ಯಮಂತ್ರಿಯಾದ ಹೊಸದರಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹೆಣ್ಣುಮಕ್ಕಳು ಬಹಳ ಹಿಂದೆ ಉಳಿದಿದ್ದಾರೆ ಎಂಬುದು ಮೊದಲ ಬಾರಿಗೆ ನನ್ನ ಗಮನಕ್ಕೆ ಬಂತು, ಮತ್ತು ಆ ವಿಷಯ ನನ್ನ ಮನಸ್ಸನ್ನು ಕಲಕಿತು. ಅನೇಕ ಕುಟುಂಬಗಳು ತಮ್ಮ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಶಾಲೆಗೆ ಸೇರಿದವರೂ ಸಹ ಬೇಗನೆ ಶಾಲೆಯನ್ನು ತೊರೆದುಬಿಡುತ್ತಿದ್ದರು. 25 ವರ್ಷಗಳ ಹಿಂದೆ, ನೀವೆಲ್ಲರೂ ನನಗೆ ಬೆಂಬಲ ನೀಡಿದ ಕಾರಣ ಇಡೀ ಪರಿಸ್ಥಿತಿಯೇ ಬದಲಾಯಿತು. ನಾವು 'ಕನ್ಯಾ ಶಿಕ್ಷಣ'ಕ್ಕಾಗಿ ರಥಯಾತ್ರೆಗಳನ್ನು ಮಾಡುತ್ತಿದ್ದುದು ನಿಮಗೆಲ್ಲರಿಗೂ ನೆನಪಿರಬಹುದು. ಜೂನ್ 13, 14, 15 ರಂದು, ತಾಪಮಾನವು 40-42 ಡಿಗ್ರಿ ಇರುತ್ತಿತ್ತು, ನಾವು ಹಳ್ಳಿಗಳಿಗೆ ಹೋಗಿ, ಮನೆ ಮನೆಗೆ ಹೋಗಿ ಹೆಣ್ಣುಮಕ್ಕಳ ಬೆರಳು ಹಿಡಿದು ಶಾಲೆಗೆ ಕರೆತರುತ್ತಿದ್ದೆವು. ಶಾಲೆಯ 'ಪ್ರವೇಶೋತ್ಸವ'ಕ್ಕಾಗಿ ನಾವು ಅಂತಹ ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸಿದೆವು. ಮತ್ತು ಈ ಕೆಲಸದಿಂದ ನಮಗೆ ದೊಡ್ಡ ಪ್ರಯೋಜನಗಳಾಗಿವೆ ಎನ್ನುವುದು ನನ್ನ ಸೌಭಾಗ್ಯ. ಅದರಿಂದಾಗಿ, ಇಂದು ಶಾಲೆಗಳ ಮೂಲಸೌಕರ್ಯವು ಅಗತ್ಯಕ್ಕೆ ತಕ್ಕಂತೆ ನಿರ್ಮಾಣವಾಯಿತು, ಶಾಲೆಗಳಿಗೆ ಆಧುನಿಕ ಸೌಲಭ್ಯಗಳು ದೊರೆತವು, ಎಲ್ಲಾ ರೀತಿಯ ವ್ಯವಸ್ಥೆಗಳು ಅಭಿವೃದ್ಧಿಗೊಂಡವು ಮತ್ತು ಶಿಕ್ಷಕರನ್ನು ನೇಮಿಸಲಾಯಿತು. ಸಮಾಜವೂ ಕೂಡ ಬಹಳ ಉತ್ಸಾಹದಿಂದ ಭಾಗವಹಿಸಿ ತನ್ನ ಜವಾಬ್ದಾರಿಯನ್ನು ಪೂರೈಸಿತು. ಇದರ ಫಲಿತಾಂಶವಾಗಿ, ನಾವು ಶಾಲೆಗೆ ಸೇರಿಸಿದ ಗಂಡುಮಕ್ಕಳು ಮತ್ತು ಹೆಣ್ಣುಮಕ್ಕಳು ಇಂದು ವೈದ್ಯರು, ಇಂಜಿನಿಯರ್ ಗಳಾಗಿದ್ದಾರೆ. ಶಾಲೆಯಿಂದ ಹೊರಗುಳಿಯುವವರ ಸಂಖ್ಯೆ ಕಡಿಮೆಯಾಗಿದೆ ಮತ್ತು ಇದಲ್ಲದೆ, ಗುಜರಾತ್ನ ಪ್ರತಿ ಮೂಲೆಯಲ್ಲೂ ಶಿಕ್ಷಣದ ಹಸಿವು ಜಾಗೃತಗೊಂಡಿದೆ.
ಎರಡನೆಯ ದೊಡ್ಡ ಚಿಂತೆಯ ವಿಷಯವೆಂದರೆ ಭ್ರೂಣಹತ್ಯೆಯ ಪಾಪ. ಇದು ನಮ್ಮ ಮೇಲಿದ್ದ ಒಂದು ದೊಡ್ಡ ಕಳಂಕವಾಗಿತ್ತು. ಹಲವು ಬಾರಿ ನಮ್ಮ ಸಮಾಜ ಇದರ ಬಗ್ಗೆ ಚಿಂತಿಸುತ್ತಿತ್ತಾದರೂ, ಸಮಾಜವು ನನಗೆ ಬೆಂಬಲ ನೀಡಿ ಒಂದು ಆಂದೋಲನವನ್ನೇ ಪ್ರಾರಂಭಿಸಿತು. ನಾವು ಸೂರತ್ನಿಂದ ಉಮಿಯಾ ಮಾತೆಯವರೆಗೆ ಒಂದು ಮೆರವಣಿಗೆಯನ್ನು ನಡೆಸಿದ್ದೆವು. ‘ಗಂಡು-ಹೆಣ್ಣು ಸಮಾನರು’ ಎಂಬ ಭಾವನೆಯನ್ನು ಬಲಪಡಿಸಲಾಯಿತು. ನಮ್ಮ ಗುಜರಾತ್ ಶಕ್ತಿಯನ್ನು ಆರಾಧಿಸುವ ನಾಡು. ಇಲ್ಲಿ ಉಮಿಯಾ ಮಾತೆ, ಮಾ ಖೋಡಲ್, ಮಾ ಕಾಳಿ, ಮಾ ಅಂಬಾ, ಮಾ ಬಹುಚರ್ ಅವರ ಆಶೀರ್ವಾದವಿದೆ. ಅಂತಹ ಸಮಾಜದಲ್ಲಿ ಭ್ರೂಣಹತ್ಯೆ ಎಂಬುದು ಒಂದು ಕಳಂಕವಾಗಿತ್ತು. ಈ ಭಾವನೆ ಜಾಗೃತವಾಗಿ, ಎಲ್ಲರ ಬೆಂಬಲ ಸಿಕ್ಕಾಗ, ಇಂದು ನಾವು ಗುಜರಾತಿನಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯ ನಡುವಿನ ದೊಡ್ಡ ಅಂತರವನ್ನು ಹಂತಹಂತವಾಗಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ.
ಸ್ನೇಹಿತರೇ,
ಶ್ರೇಷ್ಠ ಉದ್ದೇಶಗಳೊಂದಿಗೆ ಮತ್ತು ಸಮಾಜದ ಒಳಿತಿಗಾಗಿ ಶುದ್ಧ ಮನಸ್ಸಿನಿಂದ ಪ್ರಯತ್ನಗಳನ್ನು ಮಾಡಿದಾಗ, ದೇವರೂ ಕೂಡ ಬೆಂಬಲಿಸುತ್ತಾನೆ ಮತ್ತು ದೇವರ ರೂಪದಲ್ಲಿರುವ ಸಮಾಜವೂ ಬೆಂಬಲಿಸುತ್ತದೆ. ಮತ್ತು ಫಲಿತಾಂಶಗಳು ಕೂಡ ಲಭಿಸುತ್ತವೆ. ಇಂದು ಸಮಾಜದಲ್ಲಿ ಒಂದು ಹೊಸ ಜಾಗೃತಿ ಮೂಡಿದೆ. ನಮ್ಮ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಲು, ಅವರ ಗೌರವ ಮತ್ತು ಸಮ್ಮಾನವನ್ನು ಹೆಚ್ಚಿಸಲು ನಾವು ಸ್ವತಃ ಮುಂದೆ ಬರುತ್ತಿದ್ದೇವೆ. ಅವರಿಗಾಗಿ ಸೌಲಭ್ಯಗಳನ್ನು ಸೃಷ್ಟಿಸುತ್ತಿದ್ದೇವೆ, ಭವ್ಯವಾದ ಹಾಸ್ಟೆಲ್ ಗಳನ್ನು ನಿರ್ಮಿಸುತ್ತಿದ್ದೇವೆ. ನಾವು ಗುಜರಾತಿನಲ್ಲಿ ಬಿತ್ತಿದ ಬೀಜವು ಇಂದು ದೇಶದಾದ್ಯಂತ ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬ ಜನಾಂದೋಲನವಾಗಿ ಮಾರ್ಪಟ್ಟಿದೆ. ಮಹಿಳೆಯರ ಸುರಕ್ಷತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ದೇಶದಲ್ಲಿ ಐತಿಹಾಸಿಕ ಕೆಲಸಗಳು ನಡೆಯುತ್ತಿವೆ. ನಾವು ನಮ್ಮ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವಾಗ, 'ಆಪರೇಷನ್ ಸಿಂಧೂರ'ದಂತಹ ಪ್ರಯತ್ನಗಳಿಂದ ನಮ್ಮ ಹೆಣ್ಣುಮಕ್ಕಳ ಧ್ವನಿಯನ್ನು ಕೇಳುತ್ತೇವೆ, ಅವರ ಸಾಮರ್ಥ್ಯವನ್ನು ಗುರುತಿಸುತ್ತೇವೆ. ಹಳ್ಳಿಗಳಲ್ಲಿ 'ಲಕ್ಷಪತಿ ದೀದಿ' ಯೋಜನೆಯ ಗುರಿ 3 ಕೋಟಿ ಇತ್ತು, ನಾವು 2 ಕೋಟಿ ತಲುಪಿದ್ದೇವೆ. 'ಡ್ರೋನ್ ದೀದಿ' ಮುಂತಾದ ಯೋಜನೆಗಳು ಇಡೀ ಗ್ರಾಮೀಣ ಪ್ರದೇಶದಲ್ಲಿ ನಮ್ಮ ಸಹೋದರಿಯರ ಬಗೆಗಿನ ದೃಷ್ಟಿಕೋನವನ್ನೇ ಬದಲಿಸಿವೆ. ಬ್ಯಾಂಕ್ ಸಖಿ, ಇನ್ಶೂರೆನ್ಸ್ ಸಖಿ, ಹೀಗೆ ಅನೇಕ ಯೋಜನೆಗಳನ್ನು ನಮ್ಮ ನಾರಿಶಕ್ತಿಯೇ ಅನುಷ್ಠಾನಗೊಳಿಸಿ ಗ್ರಾಮೀಣ ಆರ್ಥಿಕತೆಗೆ ಚೈತನ್ಯ ನೀಡುತ್ತಿದೆ.
ಸ್ನೇಹಿತರೇ,
ಶಿಕ್ಷಣದ ಅತಿ ದೊಡ್ಡ ಉದ್ದೇಶವೆಂದರೆ, ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡುವಂತಹ ಜನರನ್ನು ಸೃಷ್ಟಿಸುವುದು ಮತ್ತು ಅಂತಹ ಜನರ ಸಾಮರ್ಥ್ಯವನ್ನು ಹೆಚ್ಚಿಸುವುದು. ಇಂದು, ನಾವು ಈ ಎಲ್ಲಾ ವಿಷಯಗಳ ಬಗ್ಗೆ ಅತ್ಯಂತ ವೇಗವಾಗಿ ಮಾತನಾಡುತ್ತಿರುವಾಗ, ಇದು ಹೆಚ್ಚು ಪ್ರಸ್ತುತವಾಗಿದೆ. ಈಗ ನಮ್ಮ ನಡುವೆ ಕೌಶಲ್ಯದ ಸ್ಪರ್ಧೆ ನಡೆಯಬೇಕು, ಪ್ರತಿಭೆಯ ಸ್ಪರ್ಧೆ ನಡೆಯಬೇಕು. ಏನೇ ಆದರೂ, ಕೌಶಲ್ಯವೇ ಒಂದು ಸಮಾಜದ ಶಕ್ತಿ. ಇಂದು, ಭಾರತದ ನುರಿತ ಮಾನವ ಸಂಪನ್ಮೂಲಕ್ಕೆ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚಿದೆ. ಕಳೆದ ಹಲವು ದಶಕಗಳಿಂದ ಸರ್ಕಾರವು ಶಿಕ್ಷಣ ವ್ಯವಸ್ಥೆಯ ಬಗ್ಗೆ ಈ ಅನಿರ್ದಿಷ್ಟ ನಿಲುವನ್ನು ಕಾಯ್ದುಕೊಂಡಿತ್ತು; ನಾವು ಅದರಲ್ಲಿ ದೊಡ್ಡ ಬದಲಾವಣೆಯನ್ನು ತಂದಿದ್ದೇವೆ; ಹಳೆಯ ವ್ಯವಸ್ಥೆಯಿಂದ ಹೊರಬಂದು, ನಾವು ಆ ಪರಿಸ್ಥಿತಿಯನ್ನು ಬದಲಾಯಿಸುತ್ತಿದ್ದೇವೆ. ಮತ್ತು ನಾವು ಜಾರಿಗೊಳಿಸಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಕೌಶಲ್ಯ ಮತ್ತು ಪ್ರತಿಭೆಯ ಮೇಲೆ ಅತಿ ಹೆಚ್ಚು ಒತ್ತು ನೀಡಲಾಗಿದೆ. ನಾವು 'ಸ್ಕಿಲ್ ಇಂಡಿಯಾ ಮಿಷನ್' ಅನ್ನು ಪ್ರಾರಂಭಿಸಿದ್ದೇವೆ. ಇದರ ಅಡಿಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕೋಟಿಗಟ್ಟಲೆ ಯುವಜನರಿಗಾಗಿ ನುರಿತ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದೇವೆ. ಪ್ರಪಂಚದಲ್ಲಿ ಇದಕ್ಕೆ ಭಾರಿ ಬೇಡಿಕೆಯಿದೆ. ಇಂದು ಪ್ರಪಂಚದ ದೊಡ್ಡ ಭಾಗವು ವೃದ್ಧಾಪ್ಯದ ಸಮಸ್ಯೆಯಿಂದ ಸುತ್ತುವರಿದಿದೆ, ಅವರಿಗೆ ಯುವಜನರು ಬೇಕಾಗಿದ್ದಾರೆ, ಮತ್ತು ಇದನ್ನು ಜಗತ್ತಿಗೆ ನೀಡುವ ಸಾಮರ್ಥ್ಯ ಭಾರತಕ್ಕಿದೆ. ನಮ್ಮ ಯುವಕರು ಕೌಶಲ್ಯಪೂರ್ಣರಾಗಿದ್ದರೆ, ಅವರಿಗೆ ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಅವರ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಸಾಮರ್ಥ್ಯವು ಇದರಿಂದ ಬರುತ್ತದೆ. ಯುವಕರಿಗೆ ಉದ್ಯೋಗ ನೀಡುವುದು ಮತ್ತು ಅದಕ್ಕಾಗಿ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. 11 ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಕೆಲವೇ ಕೆಲವು ಸ್ಟಾರ್ಟ್ ಅಪ್ ಗಳಿದ್ದವು, ಆದರೆ ಇಂದು ಭಾರತದಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ಸುಮಾರು 2 ಲಕ್ಷ ತಲುಪಿದೆ. ಇವುಗಳಲ್ಲಿ, ಟಿಯರ್ 2, ಟಿಯರ್ 3 ಮತ್ತು ಸಣ್ಣ ನಗರಗಳಲ್ಲಿಯೂ ಸ್ಟಾರ್ಟ್ ಅಪ್ ಗಳು ಹೊರಹೊಮ್ಮಲು ಪ್ರಾರಂಭಿಸಿವೆ. ನಾವು 'ಮುದ್ರಾ ಯೋಜನೆ'ಯನ್ನು ಪ್ರಾರಂಭಿಸಿದೆವು, ಬ್ಯಾಂಕುಗಳಿಂದ ಸಾಲಗಳು ಸಿಗುವಂತೆ ಮಾಡಿದೆವು, ಯಾವುದೇ ಗ್ಯಾರಂಟಿ ಇಲ್ಲದೆ ಸಾಲಗಳು ಲಭ್ಯವಾದವು. ಇದರಿಂದಾಗಿ 33 ಲಕ್ಷ ಕೋಟಿ ರೂಪಾಯಿ, ಕೇವಲ 33 ಲಕ್ಷ ಕೋಟಿ ರೂಪಾಯಿ, ಯುವಜನರಿಗೆ ಸ್ವಯಂ ಉದ್ಯೋಗಕ್ಕಾಗಿ ನೀಡಲಾಗಿದೆ. ಇದರ ಪರಿಣಾಮವಾಗಿ, ಇಂದು ಲಕ್ಷಾಂತರ ಯುವಕರು ಸ್ವಾವಲಂಬಿಗಳಾಗಿದ್ದಾರೆ ಮತ್ತು ತಮ್ಮ ಜೊತೆಗೆ ಇನ್ನೊಬ್ಬರಿಗೆ ಅಥವಾ ಇಬ್ಬರಿಗೆ ಉದ್ಯೋಗ ನೀಡುತ್ತಿದ್ದಾರೆ. ಮತ್ತು ನಿಮಗೆಲ್ಲರಿಗೂ ತಿಳಿದಿರುವಂತೆ, ಈ ಬಾರಿ ಆಗಸ್ಟ್ 15 ರಂದು ನಾನು ಒಂದು ಯೋಜನೆಯನ್ನು ಘೋಷಿಸಿ ಜಾರಿಗೆ ತಂದೆ. 'ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್ ಗಾರ್ ಯೋಜನೆ' ಎಂಬುದು ಒಂದು ಲಕ್ಷ ಕೋಟಿ ರೂಪಾಯಿಗಳ ಯೋಜನೆಯಾಗಿದೆ. ಇದರ ಅಡಿಯಲ್ಲಿ, ನೀವು ಖಾಸಗಿ ವಲಯದಲ್ಲಿ ಯಾರಿಗಾದರೂ ಉದ್ಯೋಗ ನೀಡಿದರೆ, ಅವರ ಮೊದಲ ಸಂಬಳದಲ್ಲಿ ಸರ್ಕಾರವು 15 ಸಾವಿರ ರೂಪಾಯಿಗಳನ್ನು ನೀಡುತ್ತದೆ.
ಸ್ನೇಹಿತರೇ,
ಇಂದು, ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ದಾಖಲೆ ವೇಗದಲ್ಲಿ ನಡೆಯುತ್ತಿವೆ. 'ಪಿಎಂ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆ' ಅಡಿಯಲ್ಲಿ, ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿದೆ. ಡ್ರೋನ್ ಮತ್ತು ರಕ್ಷಣಾ ಉದ್ಯಮಗಳು ಭಾರತದಲ್ಲಿ ನಿರಂತರವಾಗಿ ಬೆಳೆಯುತ್ತಿವೆ. ಮತ್ತು ಸರ್ಕಾರದ ಅತಿದೊಡ್ಡ ಗಮನ ಮತ್ತು ಒತ್ತು 'ಮಿಷನ್ ಮ್ಯಾನುಫ್ಯಾಕ್ಚರಿಂಗ್' ಮೇಲಿದೆ. ಈ ಎಲ್ಲಾ ಅಭಿಯಾನಗಳು ಗುಜರಾತ್ನಲ್ಲಿಯೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ.
ಸ್ನೇಹಿತರೇ,
ಇಂದು ಜಗತ್ತು ಭಾರತದ ಶ್ರಮವನ್ನು ಮತ್ತು ಭಾರತದ ಪ್ರತಿಭೆಯನ್ನು ಗೌರವಿಸುತ್ತದೆ ಹಾಗೂ ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದೆ. ಅದಕ್ಕಾಗಿಯೇ ಜಗತ್ತಿನ ವಿವಿಧ ದೇಶಗಳಲ್ಲಿ ಅನೇಕ ಅವಕಾಶಗಳು ಸೃಷ್ಟಿಯಾಗುತ್ತಿವೆ. ನಮ್ಮ ಯುವಕರು ಆರೋಗ್ಯ ಸೇವೆ, ಶಿಕ್ಷಣ ಮತ್ತು ಬಾಹ್ಯಾಕಾಶದಂತಹ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಶ್ರೇಷ್ಠತೆಯಿಂದ ಜಗತ್ತನ್ನು ಅಚ್ಚರಿಗೊಳಿಸುತ್ತಿದ್ದಾರೆ.
ಸ್ನೇಹಿತರೇ,
ಈ ಬಾರಿಯ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯ ಮೇಲಿಂದ ನಾನು 'ಸ್ವದೇಶಿ'ಯ ಮಹತ್ವವನ್ನು ವಿಶೇಷವಾಗಿ ಒತ್ತಿ ಹೇಳಿದ್ದೇನೆ, ಅದಕ್ಕಾಗಿ ಆಗ್ರಹಪೂರ್ವಕವಾಗಿ ಮನವಿ ಮಾಡಿದ್ದೇನೆ. ನನ್ನ ಸಹೋದರರೇ, ಭಾರತವು ಆತ್ಮನಿರ್ಭರವಾಗಲೇಬೇಕು. ಇಂದು ಸಮಾಜದ ಎಲ್ಲಾ ಗಣ್ಯರು ನನ್ನೆದುರು ಆಸೀನರಾಗಿದ್ದೀರಿ. ಹಿಂದೆಲ್ಲಾ, ನಿಮಗೆ ಕಾರ್ಯಗಳನ್ನು ವಹಿಸಿ ನಾನು ನಿಮ್ಮ ಆಶೀರ್ವಾದವನ್ನು ಸಂಪಾದಿಸಿರಬಹುದು. ಆದರೆ ಇಂದು ನಾನೊಂದು ಸತ್ಯವನ್ನು ಒಪ್ಪಿಕೊಳ್ಳಲೇಬೇಕು, ನೀವು ಆ ಎಲ್ಲಾ ಕಾರ್ಯಗಳನ್ನು ಮಾಡಿ ಮುಗಿಸಿ, ಸಾಧಿಸಿ ತೋರಿಸಿದ್ದೀರಿ. ನನ್ನ ಎರಡೂವರೆ ದಶಕಗಳ ಅನುಭವದಲ್ಲಿ, ನೀವು ನನ್ನ ಯಾವ ನಿರೀಕ್ಷೆಯನ್ನೂ ಸುಳ್ಳಾಗಿಸಿಲ್ಲ, ಇದುವರೆಗೂ ಹಾಗೆ ಆಗಿಯೇ ಇಲ್ಲ. ಇದೇ ಕಾರಣಕ್ಕೆ, ನನ್ನ ಅಪೇಕ್ಷೆಗಳೂ ಸ್ವಲ್ಪ ಹೆಚ್ಚಾಗುತ್ತವೆ. ಪ್ರತಿ ಬಾರಿಯೂ, ನಿಮಗೆ ಮತ್ತಷ್ಟು ಜವಾಬ್ದಾರಿಗಳನ್ನು ವಹಿಸಬೇಕೆಂಬ ಬಯಕೆ ನನ್ನಲ್ಲಿ ಹೆಚ್ಚಾಗುತ್ತಿದೆ. ಇಂದು ನಾನು ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಇಂದಿನ ಅಸ್ಥಿರ ಜಗತ್ತಿನಲ್ಲಿ, ಭಾರತಕ್ಕೆ ಆತ್ಮನಿರ್ಭರತೆಯೇ ಅತ್ಯಂತ ಶ್ರೇಷ್ಠ ಮಾರ್ಗ. ಆತ್ಮನಿರ್ಭರತೆ ಎಂದರೆ, ನಾವು ಸ್ವದೇಶಿ ಉತ್ಪನ್ನಗಳಿಗೇ ಬದ್ಧರಾಗಬೇಕು. 'ಮೇಕ್ ಇನ್ ಇಂಡಿಯಾ'ದ ಕುರಿತ ನಮ್ಮ ಸಂಕಲ್ಪ ಮತ್ತಷ್ಟು ದೃಢವಾಗಬೇಕು.
'ಸ್ವದೇಶಿ' ಎಂಬುದು ನೂರು ವರುಷಗಳ ಹಿಂದಿನ ಚಳುವಳಿಯಲ್ಲ, ಬದಲಿಗೆ ನಮ್ಮ ನಾಳಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಮಹಾನ್ ಸಂಕಲ್ಪ. ಈ ಸಂಕಲ್ಪದ ನೊಗವನ್ನು ನೀವೇ ಹೊರಬೇಕು. ನಮ್ಮ ಸಮಾಜದ ಯುವಶಕ್ತಿ, ನಮ್ಮ ಹೆಣ್ಣು-ಗಂಡು ಮಕ್ಕಳು ಇದರ ಸಾರಥಿಗಳಾಗಬೇಕು. ನಮ್ಮ ಮನೆ-ಮನಗಳಲ್ಲಿ ಒಂದೇ ಒಂದು ಪರದೇಶಿ ವಸ್ತುವಿಗೂ ಜಾಗವಿಲ್ಲ ಎಂಬ ದೃಢ ನಿಶ್ಚಯ ನಮ್ಮದಾಗಬೇಕು. ನಾನು ‘ವೆಡ್ ಇನ್ ಇಂಡಿಯಾ’ ಎಂಬೊಂದು ಕರೆ ನೀಡಿದ್ದೆ. ಆ ಕ್ಷಣದಲ್ಲೇ, ಎಷ್ಟೋ ಜನರು ವಿದೇಶಗಳಲ್ಲಿ ನಿಶ್ಚಯವಾಗಿದ್ದ ತಮ್ಮ ವಿವಾಹಗಳನ್ನು ರದ್ದುಪಡಿಸಿ, ಭಾರತದ ಮಣ್ಣಿಗೇ ಮರಳಿ ಬಂದು ಇಲ್ಲಿಯೇ ದಾಂಪತ್ಯಕ್ಕೆ ಕಾಲಿಟ್ಟರು. ಒಮ್ಮೆ ಹೀಗೆ ಮನಸ್ಸು ಮಾಡಿದರೆ ಸಾಕು, ದೇಶಪ್ರೇಮದ ಕಿಡಿ ತಂತಾನೇ ಹೊತ್ತಿಕೊಳ್ಳುತ್ತದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ವೇ ನಮ್ಮ ವಿಜಯದ ಮಂತ್ರ, ನಮ್ಮ ಅಸ್ಮಿತೆಯ ತಂತ್ರ. ನಮ್ಮ ಭಾವಿ ಪೀಳಿಗೆಯ ಭವಿಷ್ಯ ಅಡಗಿರುವುದೇ ಇದರಲ್ಲಿ. ಆದ್ದರಿಂದ, ನೀವು ಭಾರತೀಯ ಉತ್ಪನ್ನಗಳನ್ನೇ ಅಪ್ಪಿಕೊಳ್ಳುವ ಸಂಕಲ್ಪ ಮಾಡಿ. ಆಗ ನೋಡಿ, ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿ, ಗುಣಮಟ್ಟ ತಾನಾಗಿಯೇ ಮೇಲೇರುತ್ತದೆ. ಉತ್ತಮ ಉತ್ಪನ್ನ, ಉತ್ತಮ ಪ್ಯಾಕೇಜಿಂಗ್, ಜೊತೆಗೆ ಕೈಗೆಟುಕುವ ಬೆಲೆ – ಎಲ್ಲವೂ ಸಾಧ್ಯವಾಗುತ್ತದೆ. ನಮ್ಮ ಸಂಪತ್ತು ಪರರ ಪಾಲಾಗುವುದು ದೇಶಕ್ಕೆ ಮಾಡುವ ಅನ್ಯಾಯ. ಸಮಾಜದಲ್ಲಿ ಈ ಜಾಗೃತಿಯನ್ನು ಮೂಡಿಸಿ, ನಾನು ವಹಿಸಿರುವ ಈ ಪುಟ್ಟ ಜವಾಬ್ದಾರಿಯನ್ನು ನೀವು ಯಶಸ್ವಿಗೊಳಿಸಿ, ರಾಷ್ಟ್ರಕ್ಕೆ ನವಚೈತನ್ಯವನ್ನು ತುಂಬುತ್ತೀರಿ ಎಂಬ ಅಚಲವಾದ ನಂಬಿಕೆ ನನಗಿದೆ.
ನನ್ನ ವ್ಯಾಪಾರಿ ಬಂಧುಗಳಿಗೂ ನಾನೊಂದು ಮನವಿ ಮಾಡಿಕೊಳ್ಳುತ್ತೇನೆ. ನಮ್ಮ ಸಮಾಜ ಈಗ ಕೇವಲ ಕೃಷಿಕರ ಸಮಾಜವಾಗಿ ಉಳಿದಿಲ್ಲ, ಇದು ವ್ಯಾಪಾರ-ಉದ್ಯಮಗಳ ಸಮಾಜವಾಗಿಯೂ ಬೆಳೆದಿದೆ. ಒಬ್ಬ ವ್ಯಾಪಾರಿಯಾಗಿ ನಿಮ್ಮಲ್ಲಿ ನನ್ನ ಆಗ್ರಹವೇನೆಂದರೆ – ‘ನನ್ನ ಅಂಗಡಿಯಲ್ಲಿ ಕೇವಲ ಭಾರತೀಯ ಉತ್ಪನ್ನಗಳು ಮಾತ್ರ ಲಭ್ಯ’ ಎಂಬ ಹೆಮ್ಮೆಯ ಫಲಕವನ್ನು ಹಾಕಿ. ಸ್ವದೇಶಿ ವಸ್ತುಗಳನ್ನು ಬಯಸುವವರು ನಮ್ಮಲ್ಲಿಗೇ ಬರಲಿ, ನಾವು ಸ್ವದೇಶಿ ವಸ್ತುಗಳನ್ನೇ ಮಾರೋಣ. ಇದು ಕೂಡ ಒಂದು ದೇಶಭಕ್ತಿಯೇ. ಕೇವಲ 'ಆಪರೇಷನ್ ಸಿಂಧೂರ್' ಮಾತ್ರ ದೇಶಭಕ್ತಿಯಲ್ಲ, ಇದೂ ಕೂಡ ದೇಶಭಕ್ತಿಯೇ. ನನ್ನ ಈ ಮನದಾಸೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. ಇದಕ್ಕೆ ನಿಮ್ಮ ಕಾಣಿಕೆ ನೀಡಿ, ಈ ಸಂಕಲ್ಪವನ್ನು ನೀವು ಖಂಡಿತವಾಗಿಯೂ ಈಡೇರಿಸುತ್ತೀರಿ ಎಂದು ನನಗೆ ಭರವಸೆ ಕೊಡಿ. ನಿಮ್ಮೆಲ್ಲರ ನಡುವೆ ಇರುವ ಸೌಭಾಗ್ಯ ನನಗೆ ಲಭಿಸಿದ್ದಕ್ಕೆ ನಾನು ಅತ್ಯಂತ ಕೃತಜ್ಞ. ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳು. ಮತ್ತು ವಿಶೇಷವಾಗಿ ಹೆಣ್ಣುಮಕ್ಕಳಿಗೆ ನನ್ನ ತುಂಬುಹೃದಯದ ಆಶೀರ್ವಾದಗಳು.
ನಮಸ್ಕಾರ.
ಸೂಚನೆ: ಪ್ರಧಾನಮಂತ್ರಿ ಅವರು ಮಾಡಿದ ಭಾಷಣವು ಮೂಲತಃ ಗುಜರಾತಿ ಭಾಷೆಯಲ್ಲಿದ್ದು, ಇಲ್ಲಿ ಅದನ್ನು ಅನುವಾದ ಮಾಡಲಾಗಿದೆ.
*****
(Release ID: 2160487)