ರೈಲ್ವೇ ಸಚಿವಾಲಯ
azadi ka amrit mahotsav

ದೀಪಾವಳಿ ಮತ್ತು ಛಟ್‌ ಹಬ್ಬಕ್ಕಾಗಿ 12,000ಕ್ಕೂ ಹೆಚ್ಚು ವಿಶೇಷ ರೈಲುಗಳು; ಅಕ್ಟೋಬರ್ 13ರಿಂದ 26ರವರೆಗೆ ಗಮ್ಯ ಸ್ಥಾನಕ್ಕೆ ಹೋಗುವ ಪ್ರಯಾಣ ಮತ್ತು ನವೆಂಬರ್ 17ರಿಂದ ಡಿಸೆಂಬರ್ 1ರವರೆಗೆ ಹಿಂದಿರುಗುವ ಪ್ರಯಾಣಕ್ಕೆ 20% ರಿಯಾಯಿತಿ: ಅಶ್ವಿನಿ ವೈಷ್ಣವ್


ನಾಲ್ಕು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳು ಬಿಹಾರವನ್ನು ದೆಹಲಿ, ಅಮೃತಸರ ಮತ್ತು ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸಲಿವೆ: ರೈಲ್ವೆ ಸಚಿವರು

ಪೂರ್ಣಿಯಾ ಮತ್ತು ಪಾಟನಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌; ವೈಶಾಲಿ, ಹಾಜಿಪುರ, ಸೋನೆಪುರ್, ಪಾಟನಾ, ರಾಜ್ಗಿರ್, ಗಾಯಾ ಮತ್ತು ಕೊಡೆರ್ಮಾ ನಡುವೆ ಬೌದ್ಧ ಸರ್ಕ್ಯೂಟ್ ರೈಲು ಸಂಪರ್ಕ ಕಲ್ಪಿಸಲಿದೆ: ಅಶ್ವಿನಿ ವೈಷ್ಣವ್

ಬಿಹಾರಕ್ಕೆ ದೊಡ್ಡ ಮಟ್ಟದಲ್ಲಿ ರೈಲು ವಿಸ್ತರಣೆ: ಬಕ್ಸಾರ್-ಲಖಿಸರಾಯ್ ಚತುಷ್ಪಥ ಕಾರಿಡಾರ್ ಆಗಲಿದೆ, ಪಾಟ್ನಾ ರಿಂಗ್ ರೈಲ್ವೆ, ಸುಲ್ತಾನ್‌ಗಂಜ್-ದಿಯೋಘರ್ ರೈಲು ಸಂಪರ್ಕ ಮತ್ತು ಪಾಟ್ನಾ-ಅಯೋಧ್ಯೆ ರೈಲು

Posted On: 21 AUG 2025 2:09PM by PIB Bengaluru

ದೀಪಾವಳಿ ಮತ್ತು ಛಟ್‌ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಭಾರತೀಯ ರೈಲ್ವೆ 12,000ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಸಂಸದ ಡಾ. ಸಂಜಯ್ ಜೈಸ್ವಾಲ್, ಕೇಂದ್ರ ಸಚಿವರಾದ ಲಾಲನ್ ಸಿಂಗ್ ಮತ್ತು ಸಂಸದ ಸಂಜಯ್ ಕುಮಾರ್ ಝಾ ಅವರೊಂದಿಗೆ ಚರ್ಚಿಸಿದ ನಂತರ ಮುಂಬರುವ ದೀಪಾವಳಿ ಮತ್ತು ಛಟ್‌ ಹಬ್ಬಗಳಿಗೆ ವಿಶೇಷ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಹಿಂದಿರುಗುವ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಬೇಕು ಎಂದು ಅವರು ಒತ್ತಿ ಹೇಳಿದರು.

ಹಿರಿಯ ಸಾರ್ವಜನಿಕ ಪ್ರತಿನಿಧಿಗಳೊಂದಿಗೆ ಸಮಾಲೋಚಿಸಿದ ನಂತರ, ದೀಪಾವಳಿ ಮತ್ತು ಛಟ್‌ ಹಬ್ಬಗಳಿಗಾಗಿ 12,000ಕ್ಕೂ ಹೆಚ್ಚು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಯಿತು. ಅದೇ ಸಮಯದಲ್ಲಿ, ಪ್ರಯಾಣಿಕರು ಹಿಂದಿರುಗುವ ಪ್ರಯಾಣದ ಸಮಯದಲ್ಲಿ ಯಾವುದೇ ತೊಂದರೆಗಳನ್ನು ಎದುರಿಸದಂತೆ ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಅಕ್ಟೋಬರ್ 13ರಿಂದ 26ರವರೆಗೆ ಗಮ್ಯಸ್ಥಾನಕ್ಕೆ ಹೋಗುವ ಮತ್ತು ನವೆಂಬರ್ 17ರಿಂದ ಡಿಸೆಂಬರ್ 1ರ ನಡುವೆ ಹಿಂದಿರುಗುವ ಪ್ರಯಾಣವನ್ನು ಕೈಗೊಳ್ಳುವ ಪ್ರಯಾಣಿಕರಿಗೆ ಹಿಂದಿರುಗುವ ಟಿಕೆಟ್‌ಗಳ ಮೇಲೆ 20% ರಿಯಾಯಿತಿ ನೀಡಲಾಗುವುದು ಎಂದು ಅವರು ಘೋಷಿಸಿದರು. ಈ ಉಪಕ್ರಮವನ್ನು ಈ ಹಬ್ಬದ ಋತುವಿನಲ್ಲಿ ಜಾರಿಗೆ ತರಲಾಗುವುದು ಮತ್ತು ಹೆಚ್ಚಿನ ಸಂಖ್ಯೆಯ ಜನರಿಗೆ ಪ್ರಯೋಜನವಾಗಲಿದೆ ಎಂದು ಹೇಳಿದರು.

ಇದಲ್ಲದೆ, ಗಾಯಾದಿಂದ ದೆಹಲಿಗೆ, ಸಹರ್ಸಾದಿಂದ ಅಮೃತಸರಕ್ಕೆ, ಛಪ್ರಾದಿಂದ ದೆಹಲಿ ಮತ್ತು ಮುಜಾಫರ್‌ಪುರದಿಂದ ಹೈದರಾಬಾದ್‌ಗೆ ನಾಲ್ಕು ಹೊಸ ಅಮೃತ್ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳನ್ನು ಪರಿಚಯಿಸಲಾಗುವುದು. ಭಗವಾನ್ ಬುದ್ಧನಿಗೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಒಳಗೊಂಡ ಮತ್ತು ವಿಶೇಷವಾಗಿ ಮಧ್ಯಮ ವರ್ಗದ ಕುಟುಂಬಗಳನ್ನು ಗುರಿಯಾಗಿರಿಸಕೊಂಡು ಹೊಸ ಸರ್ಕ್ಯೂಟ್ ರೈಲನ್ನು ಸಹ ಪ್ರಾರಂಭಿಸಲಾಗುವುದು. ಇದು ವೈಶಾಲಿ, ಹಾಜಿಪುರ, ಸೋನೆಪುರ್, ಪಾಟ್ನಾ, ರಾಜ್ಗಿರ್, ಗಾಯಾ ಮತ್ತು ಕೊಡೆರ್ಮಾವನ್ನು ಸಂಪರ್ಕಿಸುತ್ತದೆ ಎಂದು ಸಚಿವರು ಘೋಷಿಸಿದರು.

ಬಕ್ಸಾರ್-ಲಖಿಸರಾಯ್ ರೈಲು ವಿಭಾಗವನ್ನು ನಾಲ್ಕು ಮಾರ್ಗಗಳ ಕಾರಿಡಾರ್ ಆಗಿ ವಿಸ್ತರಿಸಲಾಗುವುದು, ಇದು ಹೆಚ್ಚಿನ ರೈಲು ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ. ಪಾಟ್ನಾ ಸುತ್ತಲೂ ರಿಂಗ್ ರೈಲ್ವೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು. ಸುಲ್ತಾನ್‌ಗಂಜ್ ಮತ್ತು ದಿಯೋಘರ್ ರೈಲು ಸಂಪರ್ಕ ಕಲ್ಪಿಸಲಾಗುವುದು. ಪಾಟ್ನಾ ಮತ್ತು ಅಯೋಧ್ಯೆ ನಡುವೆ ಹೊಸ ರೈಲು ಸೇವೆಯೂ ಆರಂಭವಾಗಲಿದೆ. ಲೌಕಾಹಾ ಬಜಾರ್‌ನಲ್ಲಿ ವಾಷಿಂಗ್ ಪಿಟ್ ಸೌಲಭ್ಯವನ್ನು ಸ್ಥಾಪಿಸಲಾಗುವುದು ಮತ್ತು ಬಿಹಾರದಲ್ಲಿ ಹೊಸದಾಗಿ ಅನುಮೋದಿತ ಹಲವಾರು ರಸ್ತೆ ಮೇಲ್ಸೇತುವೆಗಳ ಕಾಮಗಾರಿಯನ್ನು ಕೈಗೊಳ್ಳಲಾಗುವುದು ಎಂದು ಶ್ರೀ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದರು.

ಬಿಹಾರದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ಕೇಂದ್ರ ಸಚಿವರಾದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್, ಸಂಸದರಾದ ಡಾ.ಸಂಜಯ್ ಜೈಸ್ವಾಲ್ ಮತ್ತು ಸಂಜಯ್ ಕುಮಾರ್ ಝಾ ಅವರು ಬಿಹಾರಕ್ಕೆ ಹೆಚ್ಚಿನ ಯೋಜನೆಗಳನ್ನು ಅನುಮೋದಿಸಿದ್ದಕ್ಕಾಗಿ ಮತ್ತು ಅಮೃತ್ ಭಾರತ್ ಮತ್ತು ವಂದೇ ಭಾರತ್ ಸೇರಿದಂತೆ ಹಲವಾರು ಹೊಸ ರೈಲುಗಳನ್ನು ಪ್ರಾರಂಭಿಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.

 

 

*****

 


(Release ID: 2159074)