ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಚೀನಾ ವಿದೇಶಾಂಗ ಸಚಿವರಾದ ವಾಂಗ್ ಯಿ


ದ್ವಿಪಕ್ಷೀಯ ಸಂಬಂಧಗಳಿಗೆ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿ ಅತ್ಯಗತ್ಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಗಳು

ಕಳೆದ ವರ್ಷ ಕಜಾನ್‌ ನಲ್ಲಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿಯಾದ ನಂತರ ದ್ವಿಪಕ್ಷೀಯ ಸಂಬಂಧಗಳಲ್ಲಿ ಸ್ಥಿರ ಮತ್ತು ಸಕಾರಾತ್ಮಕ ಪ್ರಗತಿಯನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು

ಎಸ್‌.ಸಿ.ಒ ಶೃಂಗಸಭೆಯಲ್ಲಿ ಭಾಗವಹಿಸಲು ಅಧ್ಯಕ್ಷ ಕ್ಸಿ ಅವರ ಆಹ್ವಾನವನ್ನು ಪ್ರಧಾನಮಂತ್ರಿವರು ಸ್ವೀಕರಿಸಿದರು

ಸ್ಥಿರ, ನಿರೀಕ್ಷಿತ ಮತ್ತು ರಚನಾತ್ಮಕ ದ್ವಿಪಕ್ಷೀಯ ಸಂಬಂಧಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಹಾಗೂ ಸಮೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು

Posted On: 19 AUG 2025 7:38PM by PIB Bengaluru

ಇಂದು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಚೀನಾದ ಕಮ್ಯುನಿಸ್ಟ್ ಪಕ್ಷದ ಪಾಲಿಟ್‌ ಬ್ಯೂರೊ ಸದಸ್ಯ ಹಾಗೂ ವಿದೇಶಾಂಗ ಸಚಿವರಾದ ಶ್ರೀ ವಾಂಗ್ ಯಿ ಅವರನ್ನು ಬರಮಾಡಿಕೊಂಡರು.

ಟಿಯಾಂಜಿನ್‌ ನಲ್ಲಿ ನಡೆಯಲಿರುವ ಎಸ್‌.ಸಿ.ಒ ಶೃಂಗಸಭೆಗಾಗಿ ಅಧ್ಯಕ್ಷ ಕ್ಸಿ ಅವರ ಸಂದೇಶ ಮತ್ತು ಆಹ್ವಾನವನ್ನು ಶ್ರೀ ವಾಂಗ್ ಯಿ ಅವರು ಪ್ರಧಾನಮಂತ್ರಿ ಅವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ, ವಿದೇಶಾಂಗ ಸಚಿವರಾದ ಡಾ. ಎಸ್. ಜೈಶಂಕರ್ ಅವರೊಂದಿಗಿನ ದ್ವಿಪಕ್ಷೀಯ ಸಭೆ ಮತ್ತು ತಮ್ಮ ಭೇಟಿಯ ಸಮಯದಲ್ಲಿ ಎನ್‌.ಎಸ್‌.ಎ ಶ್ರೀ ಅಜಿತ್ ದೋವಲ್ ಅವರೊಂದಿಗೆ ಸಹ-ಅಧ್ಯಕ್ಷತೆ ವಹಿಸಿದ್ದ 24ನೇ ವಿಶೇಷ ಪ್ರತಿನಿಧಿಗಳ ಸಭೆಯ ಕುರಿತು ತಮ್ಮ ಸಕಾರಾತ್ಮಕ ಅಭಿಪ್ರಾಯವನ್ನು ಅವರು ಹಂಚಿಕೊಂಡರು.

ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವ ಮಹತ್ವವನ್ನು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಅಲ್ಲದೆ, ಗಡಿ ಸಮಸ್ಯೆಗೆ ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕಾಗಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದರು.

ಕಳೆದ ವರ್ಷ ಕಜಾನ್‌ ನಲ್ಲಿ ಅಧ್ಯಕ್ಷ ಕ್ಸಿ ಅವರೊಂದಿಗಿನ ಭೇಟಿಯ ನಂತರ, ಪರಸ್ಪರ ಗೌರವ, ಹಿತಾಸಕ್ತಿ ಮತ್ತು ಸಂವೇದನೆಗಳ ಆಧಾರದ ಮೇಲೆ, ಕೈಲಾಸ ಮಾನಸ ಸರೋವರ ಯಾತ್ರೆಯ ಪುನರಾರಂಭ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಸ್ಥಿರ ಮತ್ತು ಸಕಾರಾತ್ಮಕ ಪ್ರಗತಿಯನ್ನು ಪ್ರಧಾನಮಂತ್ರಿ ಅವರು ಸ್ವಾಗತಿಸಿದರು.

ಎಸ್‌.ಸಿ.ಒ ಶೃಂಗಸಭೆಗೆ ನೀಡಿದ ಆಹ್ವಾನಕ್ಕಾಗಿ ಪ್ರಧಾನಮಂತ್ರಿ ಅವರು ಅಧ್ಯಕ್ಷ ಕ್ಸಿ ಅವರಿಗೆ ಧನ್ಯವಾದ ಅರ್ಪಿಸಿ, ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ಎಸ್‌.ಸಿ.ಒ ಶೃಂಗಸಭೆಯ ಚೀನಾದ ಅಧ್ಯಕ್ಷತೆಗೆ ಅವರು ಬೆಂಬಲ ವ್ಯಕ್ತಪಡಿಸಿದರು ಮತ್ತು ಟಿಯಾಂಜಿನ್‌ ನಲ್ಲಿ ಅಧ್ಯಕ್ಷ ಕ್ಸಿ ಅವರನ್ನು ಭೇಟಿಯಾಗಲು ಎದುರು ನೋಡುತ್ತಿರುವುದಾಗಿ ಹೇಳಿದರು. ಭಾರತ ಮತ್ತು ಚೀನಾ ನಡುವಿನ ಸ್ಥಿರ, ನಿರೀಕ್ಷಿತ ಮತ್ತು ರಚನಾತ್ಮಕ ಸಂಬಂಧಗಳು ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ಮತ್ತು ಸಮೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡಲಿವೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು.

 

*****
 


(Release ID: 2158172)