ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

79ನೇ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು

Posted On: 15 AUG 2025 3:52PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೆಹಲಿಯ ಕೆಂಪು ಕೋಟೆಯ ಕೊತ್ತಲಗಳಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯಂಗವಾಗಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಶ್ರೀ ಮೋದಿ ಅವರ 103 ನಿಮಿಷಗಳ ಕಾಲ ಕೆಂಪು ಕೋಟೆಯಿಂದ ಮಾಡಿದ ಭಾಷಣವು ಅತ್ಯಂತ ದೀರ್ಘ ಮತ್ತು ನಿರ್ಣಾಯಕ ಭಾಷಣವಾಗಿದ್ದು, 2047ರ ವೇಳೆಗೆ ವಿಕ್ಷಿತ ಭಾರತಕ್ಕಾಗಿ ದಿಟ್ಟ ಮಾರ್ಗಸೂಚಿಯನ್ನು ರೂಪಿಸಿದೆ. ಪ್ರಧಾನಮಂತ್ರಿ ಅವರ ಭಾಷಣವು ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ಗಮನ ಕೇಂದ್ರೀಕರಿಸಿತ್ತು, ಇತರರನ್ನು ಅವಲಂಬಿಸಿದ ರಾಷ್ಟ್ರದಿಂದ ಜಾಗತಿಕವಾಗಿ ಆತ್ಮವಿಶ್ವಾಸ, ತಾಂತ್ರಿಕವಾಗಿ ಮುಂದುವರಿದ ಮತ್ತು ಆರ್ಥಿಕವಾಗಿ ಸ್ಥಿತಿಸ್ಥಾಪಕತ್ವದ ಶಕ್ತಿಯುಳ್ಳ ದೇಶದವರೆಗೆ ಭಾರತದ ಪ್ರಯಾಣವನ್ನು ಎತ್ತಿ ತೋರಿಸಿತು.

ಶ್ರೀ ಮೋದಿ ಅವರು 2047ರ ವಿಕ್ಷಿತ ಭಾರತ್‌ಗಾಗಿ ತಮ್ಮ ಚಿಂತನೆಯನ್ನು ವಿವರಿಸಿದರು, ಭಾರತದ ಪ್ರಗತಿಯು ಸ್ವಾವಲಂಬನೆ, ನಾವೀನ್ಯತೆ ಮತ್ತು ನಾಗರಿಕ ಸಬಲೀಕರಣದ ಮೇಲೆ ನಿರ್ಮಿತವಾಗಿದೆ ಎಂದು ಒತ್ತಿ ಹೇಳಿದರು. ವ್ಯೂಹಾತ್ಮಕ ರಕ್ಷಣೆಯಿಂದ ಹಿಡಿದು ಅರೆವಾಹಕಗಳವರೆಗೆ, ಶುದ್ಧ ಇಂಧನದಿಂದ ಕೃಷಿಯವರೆಗೆ ಮತ್ತು ಡಿಜಿಟಲ್ ಸಾರ್ವಭೌಮತ್ವದಿಂದ ಯುವ ಸಬಲೀಕರಣದವರೆಗೆ, 2047ರ ವೇಳೆಗೆ ಭಾರತವನ್ನು 10 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಪರಿವರ್ತಿಸಲು ಮಾರ್ಗಸೂಚಿ ಪ್ರಯತ್ನಿಸುತ್ತದೆ ಎಂದು ಅವರು ಹೇಳಿದರು. ಇದು ಜಾಗತಿಕವಾಗಿ ಸ್ಪರ್ಧಾತ್ಮಕ, ಸಾಮಾಜಿಕವಾಗಿ ಎಲ್ಲರನ್ನೂ ಒಳಗೊಂಡ ಮತ್ತು ಕಾರ್ಯತಂತ್ರದ ಸ್ವಾಯತ್ತತೆಯ ದೇಶವಾಗಿ ರೂಪುಗೊಳ್ಳಲಿದೆ 

ಪ್ರಧಾನಮಂತ್ರಿ ಅವರ ಭಾಷಣದ ಮುಖ್ಯಾಂಶಗಳು ಇಲ್ಲಿವೆ.

1. ಸಾಮಾನ್ಯ

  • ಭವ್ಯ ಸ್ವಾತಂತ್ರ್ಯೋತ್ಸವವು ನಮ್ಮ 140 ಕೋಟಿ ಜನರ ನಿರ್ಣಯಗಳ ಆಚರಣೆಯಾಗಿದೆ.
  • ಭಾರತವು ನಿರಂತರವಾಗಿ ಏಕತೆಯ ಚೈತನ್ಯವನ್ನು ಬಲಪಡಿಸುತ್ತಿದೆ.
  • 75 ವರ್ಷಗಳಿಂದ, ಭಾರತದ ಸಂವಿಧಾನವು ದೀಪಸ್ತಂಭದಂತೆ ನಮಗೆ ಮಾರ್ಗದರ್ಶನ ನೀಡುತ್ತಿದೆ.
  • ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರು ಭಾರತದ ಸಂವಿಧಾನಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟ್ರದ ಮೊದಲ ಮಹಾನ್ ವ್ಯಕ್ತಿ.
  • ಪ್ರಕೃತಿ ನಮ್ಮೆಲ್ಲರನ್ನೂ ಪರೀಕ್ಷಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ನಾವು ಅನೇಕ ನೈಸರ್ಗಿಕ ವಿಕೋಪಗಳನ್ನು ಎದುರಿಸಿದ್ದೇವೆ - ಭೂಕುಸಿತಗಳು, ಮೇಘ ಸ್ಫೋಟಗಳು ಮತ್ತು ಲೆಕ್ಕವಿಲ್ಲದಷ್ಟು ಇತರ ವಿಪತ್ತುಗಳು.
  • ಆಪರೇಷನ್ ಸಿಂದೂರ್‌ನ ಧೈರ್ಯಶಾಲಿ ವೀರ ಯೋಧರಿಗೆ ನಮಸ್ಕರಿಸಲು ಕೆಂಪು ಕೋಟೆಯ ಕೊತ್ತಲಗಳು ಇಂದು ಅವಕಾಶ ಒದಗಿಸಿವೆ.
  • ಭಾರತವು ಈಗ ಬಹಳ ದಿನಗಳಿಂದ ಅನುಭವಿಸುತ್ತಿರುವ ಪರಮಾಣು ಬೆದರಿಕೆಗಳನ್ನು ಇನ್ನು ಮುಂದೆ ಸಹಿಸುವುದಿಲ್ಲ ಎಂದು ನಿರ್ಧರಿಸಿದೆ.
  • ನಮ್ಮ ಶತ್ರುಗಳು ಭವಿಷ್ಯದಲ್ಲಿ ಭಯೋತ್ಪಾದನೆಯ ಕೃತ್ಯಗಳನ್ನು ಮುಂದುವರಿಸಿದರೆ, ನಮ್ಮ ಸೈನ್ಯವು ತನ್ನದೇ ಆದ ನಿಯಮಗಳ ಮೇಲೆ, ತನ್ನದೇ ಆಯ್ಕೆಯ ಸಮಯದಲ್ಲಿ, ಅದು ಸೂಕ್ತವೆಂದು ಭಾವಿಸುವ ರೀತಿಯಲ್ಲಿ  ನಿರ್ಧಾರಗಳನ್ನು ಕೈಗೊಳ್ಳುತ್ತದೆ ಮತ್ತು ಅದು ಗುರಿಗಳನ್ನು ಆಯ್ಕೆ ಮಾಡಿ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತದೆ. ನಾವು ಸೂಕ್ತ ಮತ್ತು ದಮನಕಾರಿ ಪ್ರತಿಕ್ರಿಯೆಯನ್ನು ನೀಡುತ್ತೇವೆ.
  • ಭಾರತ ಈಗ ರಕ್ತ ಮತ್ತು ನೀರು ಒಟ್ಟಿಗೆ ಹರಿಯುವುದಿಲ್ಲ ಎಂದು ನಿರ್ಧರಿಸಿದೆ. ಸಿಂಧೂ ನದಿ ನೀರಿನ ಒಪ್ಪಂದವು ಅನ್ಯಾಯಯುತವಾಗಿದೆ ಎಂಬುದನ್ನು ಜನರು ಅರಿತುಕೊಂಡಿದ್ದಾರೆ. ನಮ್ಮ ರೈತರು ಬಳಲುತ್ತಿರುವಾಗ ಸಿಂಧೂ ನದಿ ವ್ಯವಸ್ಥೆಯ ನೀರು ಶತ್ರು ಭೂಮಿಗೆ ನೀರಾವರಿ ಒದಗಿಸಿತು.
  • ನಮ್ಮ ರೈತರ ಹಿತದೃಷ್ಟಿಯಿಂದ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಸಿಂಧೂ ನೀರಿನ ಒಪ್ಪಂದವು ನಮಗೆ ಸ್ವೀಕಾರಾರ್ಹವಲ್ಲ.
  • ವಿಕ್ಷಿತ ಭಾರತದ ಮೂಲಾಧಾರವೂ ಸ್ವಾವಲಂಬಿ ಭಾರತವಾಗಿದೆ.
  • ಅವಲಂಬನೆಯು ಅಭ್ಯಾಸವಾದಾಗ ಮತ್ತು ನಾವು ಸ್ವಾವಲಂಬನೆಯನ್ನು ಅರಿತುಕೊಳ್ಳದಿದ್ದಾಗ ಮತ್ತು ಅದನ್ನು ತ್ಯಜಿಸಿ ಇತರರ ಮೇಲೆ ಅವಲಂಬಿತರಾದರೆ ಅದು ದೊಡ್ಡ ದುರದೃಷ್ಟ.
  • ಸ್ವಾವಲಂಬನೆಯು ನಮ್ಮ ಸಾಮರ್ಥ್ಯಕ್ಕೆ ಸಂಬಂಧಿಸಿದೆ ಮತ್ತು ಸ್ವಾವಲಂಬನೆ ಕಡಿಮೆಯಾಗಲು ಪ್ರಾರಂಭಿಸಿದಾಗ, ನಮ್ಮ ಸಾಮರ್ಥ್ಯವು ನಿರಂತರವಾಗಿ ಕುಸಿಯುತ್ತದೆ. ಆದ್ದರಿಂದ, ನಮ್ಮ ಸಾಮರ್ಥ್ಯವನ್ನು ಸಂರಕ್ಷಿಸಲು, ನಿರ್ವಹಿಸಲು ಮತ್ತು ವರ್ಧಿಸಲು, ಸ್ವಾವಲಂಬಿಯಾಗಿರುವುದು ಅವಶ್ಯವಾಗಿದೆ.
  • ಭಾರತ ಇಂದು ಪ್ರತಿಯೊಂದು ವಲಯದಲ್ಲೂ ಆಧುನಿಕ ಪರಿಸರ ವ್ಯವಸ್ಥೆಯನ್ನು ರಚಿಸುತ್ತಿದೆ ಮತ್ತು ಆಧುನಿಕ ಪರಿಸರ ವ್ಯವಸ್ಥೆಯು ನಮ್ಮ ದೇಶವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಯನ್ನಾಗಿ ಮಾಡುತ್ತದೆ.
  • “ನಾನು ದೇಶದ ಯುವಜನರಿಗೆ ತಮ್ಮ ನವೀನ ಆಲೋಚನೆಗಳನ್ನು ಮುಂದಿಡಲು ಕರೆ ನೀಡುತ್ತೇನೆ. ಇಂದಿನ ಕಲ್ಪನೆಯು ಮುಂದಿನ ಪೀಳಿಗೆಯ ಭವಿಷ್ಯವನ್ನು ರೂಪಿಸಬಹುದು. ಈ ಪ್ರಯಾಣದಲ್ಲಿ ನಾನು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇನೆ” ಎಂದು ಶ್ರೀ ಮೋದಿ ಹೇಳಿದರು.
  • ಕೊವಿನ್ ನಂತಹ ಸ್ಥಳೀಯ ಲಸಿಕೆಗಳು ಮತ್ತು ವೇದಿಕೆಗಳು ಜಾಗತಿಕವಾಗಿ ಲಕ್ಷಾಂತರ ಜೀವಗಳನ್ನು ಉಳಿಸಿದ ಭಾರತದ ಕೋವಿಡ್-19 ಪ್ರತಿಕ್ರಿಯೆಯಿಂದ ಸ್ಫೂರ್ತಿ ಪಡೆದು, ನಾವು ನಾವೀನ್ಯತೆಯ ಮನೋಭಾವವನ್ನು ವಿಸ್ತರಿಸಬೇಕು.
  • ನಮ್ಮ ವಿಜ್ಞಾನಿಗಳು ಮತ್ತು ಯುವಜನರು ನಮ್ಮದೇ ಆದ ಜೆಟ್ ಎಂಜಿನ್‌ಗಳನ್ನು ನಿರ್ಮಿಸಬೇಕು, ಅದನ್ನು ನೇರ ಸವಾಲಾಗಿ ತೆಗೆದುಕೊಳ್ಳಬೇಕು.
  • ಸಂಶೋಧಕರು ಮತ್ತು ಉದ್ಯಮಿಗಳು ಹೊಸ ಔಷಧಗಳು ಮತ್ತು ವೈದ್ಯಕೀಯ ತಂತ್ರಜ್ಞಾನಗಳಿಗೆ ಪೇಟೆಂಟ್‌ಗಳನ್ನು ಪಡೆದುಕೊಳ್ಳಬೇಕು, ಭಾರತವು ತನ್ನದೇ ಆದ ಆರೋಗ್ಯ ರಕ್ಷಣಾ ಅಗತ್ಯಗಳನ್ನು ಪೂರೈಸುವುದಲ್ಲದೆ ವೈದ್ಯಕೀಯ ಸ್ವಾವಲಂಬನೆ ಮತ್ತು ನಾವೀನ್ಯತೆಯ ಜಾಗತಿಕ ಕೇಂದ್ರವಾಗುವುದನ್ನು ಖಚಿತಪಡಿಸಿಕೊಳ್ಳಬೇಕು, ಅದು  ವಿಜ್ಞಾನ, ತಂತ್ರಜ್ಞಾನ ಮತ್ತು ಮಾನವ ಕಲ್ಯಾಣದಲ್ಲಿ ದೇಶದ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ.
  • ರಾಷ್ಟ್ರೀಯ ಉತ್ಪಾದನಾ ಮಿಷನ್ ಹೆಚ್ಚಿನ ವೇಗದಲ್ಲಿ ಪ್ರಗತಿಯಲ್ಲಿದೆ.
  • ಭಾರತದ ಬಜೆಟ್‌ನ ಹೆಚ್ಚಿನ ಪಾಲು ಇನ್ನೂ ಪೆಟ್ರೋಲ್, ಡೀಸೆಲ್ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುವತ್ತ ಹೋಗುತ್ತದೆ. ಭಾರತದ ಕಡಲಿನೊಳಗಿನ ಇಂಧನ ಸಂಪನ್ಮೂಲಗಳನ್ನು ಬಳಸಿಕೊಳ್ಳಲು, ಇಂಧನ ಸ್ವಾವಲಂಬನೆಯನ್ನು ಹೆಚ್ಚಿಸಲು ಮತ್ತು ವಿದೇಶಿ ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸಂಪೂರ್ಣ ಸ್ವತಂತ್ರ ಮತ್ತು ಶಕ್ತಿಶಾಲಿ ಭಾರತದತ್ತ ಮತ್ತೊಂದು ಹೆಜ್ಜೆಯನ್ನು ಗುರುತಿಸಲು ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್ ಅನ್ನು ಪ್ರಾರಂಭಿಸಲಾಗುವುದು.
  • ನಾಗರಿಕರು ಮತ್ತು ಅಂಗಡಿಯವರು "ಸ್ಥಳೀಯ ಉತ್ಪನ್ನಗಳಿಗೆ ಮೊದಲಾದ್ಯತೆ" (ವೋಕಲ್ ಫಾರ್ ಲೋಕಲ್) ಉಪಕ್ರಮದ ಅಡಿಯಲ್ಲಿ ಭಾರತ ನಿರ್ಮಿತ ಸರಕುಗಳನ್ನು ಬೆಂಬಲಿಸಬೇಕು.
  • ಸ್ವದೇಶಿ ಹೆಮ್ಮೆ ಮತ್ತು ಬಲದಿಂದ ಹುಟ್ಟಿಕೊಳ್ಳಬೇಕು, ಬಲವಂತದಿಂದಲ್ಲ.
  • ಸ್ವಾವಲಂಬನೆಯನ್ನು ಹೆಚ್ಚಿಸಲು, ಉದ್ಯಮಶೀಲತೆಯನ್ನು ಬೆಂಬಲಿಸಲು ಮತ್ತು ಭಾರತದ ಆರ್ಥಿಕ ಮತ್ತು ಕೈಗಾರಿಕಾ ನೆಲೆಯನ್ನು ಬಲಪಡಿಸಲು ಅಂಗಡಿಗಳ ಹೊರಗೆ "ಸ್ವದೇಶಿ" ಫಲಕಗಳಂತಹ ಗೋಚರ ಪ್ರಚಾರಕ್ಕಾಗಿ ನಾವು ಒತ್ತಾಯಿಸಬೇಕು.
  • ಭಾರತದ ಶಕ್ತಿ ಅದರ ಜನರು, ನಾವೀನ್ಯತೆ ಮತ್ತು ಸ್ವಾವಲಂಬನೆಯ ಬದ್ಧತೆಯಲ್ಲಿದೆ.
  • ಕಳೆದ ದಶಕದಲ್ಲಿ, ಭಾರತವು ಸುಧಾರಣೆ, ಕಾರ್ಯಕ್ಷಮತೆ ಮತ್ತು ರೂಪಾಂತರದಲ್ಲಿ ತೊಡಗಿದೆ, ಆದರೆ ಈಗ ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಮುಂದುವರಿಯುವ ಸಮಯ ಬಂದಿದೆ.
  • ಕಾನೂನುಗಳು, ನಿಯಮಗಳು ಮತ್ತು ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದೆ, ಉದ್ಯಮಶೀಲತೆಯನ್ನು ಪ್ರೋತ್ಸಾಹಿಸಲಾಗುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯನು ವಿಕ್ಷಿತ ಭಾರತವನ್ನು ನಿರ್ಮಿಸಲು ಕೊಡುಗೆ ನೀಡಬಹುದಾದ ಆಧುನಿಕ, ಪರಿಣಾಮಕಾರಿ ಮತ್ತು ನಾಗರಿಕ ಸ್ನೇಹಿ ಪರಿಸರ ವ್ಯವಸ್ಥೆಯನ್ನು ರಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
  • ಮುಂದಿನ ಪೀಳಿಗೆಯ ಸುಧಾರಣೆಗಳಿಗಾಗಿ ಕಾರ್ಯಪಡೆಯನ್ನು ರಚಿಸಲಾಗುವುದು, ಇದು ಆರ್ಥಿಕ ಚಟುವಟಿಕೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಸ್ತುತ ಕಾನೂನುಗಳು, ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಮೌಲ್ಯಮಾಪನ ಮಾಡುತ್ತದೆ. ಕಾರ್ಯಪಡೆಯು ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿ ನಿಗದಿತ ಕಾಲ ಮಿತಿಯೊಂದಿಗೆ ಕೆಲಸ ಮಾಡುತ್ತದೆ:
  • ನವೋದ್ಯಮ (ಸ್ಟಾರ್ಟ್‌ಅಪ್‌ಗಳು), ಎಂ.ಎಸ್.ಎಂ.ಇ.ಗಳು ಮತ್ತು ಉದ್ಯಮಿಗಳಿಗೆ ಅನುಸರಣೆ ವೆಚ್ಚವನ್ನು ಕಡಿಮೆ ಮಾಡುವುದು
  • ಅನಿಯಂತ್ರಿತ ಕಾನೂನು ಕ್ರಮಗಳ ಭಯದಿಂದ ಸ್ವಾತಂತ್ರ್ಯವನ್ನು ಒದಗಿಸುವುದು
  • ವ್ಯಾಪಾರಕ್ಕೆ ಅನುಕೂಲಕರ ವಾತಾವರಣ ನಿರ್ಮಿಸಲು ಕಾನೂನುಗಳನ್ನು ಸುವ್ಯವಸ್ಥಿತಗೊಳಿಸಲಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.
  • ಸುಧಾರಣೆಗಳು ನಾವೀನ್ಯತೆ, ಉದ್ಯಮಶೀಲತೆ ಮತ್ತು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಪರಿಸರ ವ್ಯವಸ್ಥೆಯನ್ನು ರಚಿಸುವ ಗುರಿಯನ್ನು ಹೊಂದಿವೆ.
  • ಸಾಮಾಜಿಕ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನಾವು ಪರಿಪೂರ್ಣತೆಯ (ಸ್ಯಾಚುರೇಶನ್) ವಿಧಾನದೊಂದಿಗೆ ಕೆಲಸ ಮಾಡುತ್ತಿದ್ದೇವೆ.
  • ಇಂದು, ಸರ್ಕಾರವು ಸ್ಯಾಚುರೇಶನ್ ವಿಧಾನದೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಕೋಟ್ಯಂತರ ಫಲಾನುಭವಿಗಳು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಮತ್ತು ನೇರ ನಗದು ವರ್ಗಾವಣೆ ನಿಜವಾಗಿಯೂ ಕ್ರಾಂತಿಕಾರಿ ಹೆಜ್ಜೆಯಾಗಿದೆ.
  • ಇಂದು, ಕಳೆದ 10 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಬಡ ಜನರು - ಬಡತನವನ್ನು ನಿವಾರಿಸಿ ಅದರಿಂದ ಹೊರಬಂದಿದ್ದಾರೆ, ಹೊಸ "ನವ-ಮಧ್ಯಮ ವರ್ಗ"ವನ್ನು ಸೃಷ್ಟಿಸಿದ್ದಾರೆ.
  • ನಾವು ಸಾಮಾಜಿಕವಾಗಿ ಹಿಂದುಳಿದ ಗುಂಪುಗಳ ಬಗ್ಗೆ ಮಾತ್ರ ಕಾಳಜಿ ವಹಿಸುವುದಲ್ಲ, ಮಹತ್ವಾಕಾಂಕ್ಷೆಯ ಜಿಲ್ಲೆಗಳ ಮೂಲಕ ಹಿಂದುಳಿದ ಪ್ರದೇಶಗಳಿಗೆ ಆದ್ಯತೆ ನೀಡಲು ಮತ್ತು ಬ್ಲಾಕ್ ಗಳ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನೀಡಲು ನಾವು ಬಯಸುತ್ತೇವೆ.
  • ಭಾರತವು ಇನ್ನು ಮುಂದೆ ತನ್ನ ರಾಷ್ಟ್ರೀಯ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ, ಮತ್ತು ಕಾರ್ಯಾಚರಣೆಯು ದೇಶೀಯ ತಂತ್ರಜ್ಞಾನ ಮತ್ತು ರಕ್ಷಣಾ ವೇದಿಕೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿ ತ್ವರಿತವಾಗಿ ಮತ್ತು ನಿರ್ಣಾಯಕವಾಗಿ ಕಾರ್ಯನಿರ್ವಹಿಸುವ ದೇಶದ ಸಾಮರ್ಥ್ಯವನ್ನು ಒತ್ತಿಹೇಳುತ್ತದೆ.
  • ಇತರರ ಮೇಲಿನ ಅವಲಂಬನೆಯು ರಾಷ್ಟ್ರದ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಅವಲಂಬನೆಯು ಅಭ್ಯಾಸವಾದಾಗ, ಅಪಾಯಕಾರಿಯಾದಾಗ ಅದು ದುರದೃಷ್ಟಕರ. ಅದಕ್ಕಾಗಿಯೇ ನಾವು ಸ್ವಾವಲಂಬಿಯಾಗಲು ಜಾಗೃತರಾಗಿರಬೇಕು ಮತ್ತು ಬದ್ಧರಾಗಿರಬೇಕು. ಸ್ವಾವಲಂಬನೆಯು ಕೇವಲ ರಫ್ತು, ಆಮದು, ರೂಪಾಯಿ ಅಥವಾ ಡಾಲರ್ ಬಗ್ಗೆ ಅಲ್ಲ. ಇದು ನಮ್ಮ ಸಾಮರ್ಥ್ಯಗಳು, ನಮ್ಮ ಸ್ವಂತ ಶಕ್ತಿಯ ಬಗ್ಗೆ.
  • ಸುಧಾರಣೆಯು ಕೇವಲ ಆರ್ಥಿಕತೆಯ ಬಗ್ಗೆ ಅಲ್ಲ, ನಾಗರಿಕರ ದೈನಂದಿನ ಜೀವನವನ್ನು ಪರಿವರ್ತಿಸುವ ಬಗ್ಗೆ.
  • ನಮ್ಮ ಸರ್ಕಾರ ಕೈಗೊಂಡ ಸುಧಾರಣೆಗಳು ಸಾಮಾನ್ಯ ಜನರಿಗೆ ಅನುಕೂಲಕರ, ನ್ಯಾಯಸಮ್ಮತ ಮತ್ತು ಸಬಲೀಕರಣವನ್ನು ಅನುಭವಿಸಬಹುದಾದ ಆಧುನಿಕ, ನಾಗರಿಕ ಕೇಂದ್ರಿತ ಸರ್ಕಾರವನ್ನು ಸೂಚಿಸುತ್ತವೆ.
  • ಭಾರತವು ರಚನಾತ್ಮಕ, ನಿಯಂತ್ರಕ, ನೀತಿ, ಪ್ರಕ್ರಿಯೆ ಮತ್ತು ಕಾರ್ಯವಿಧಾನದ ಸುಧಾರಣೆಗಳಿಗೆ ಬದ್ಧವಾಗಿದೆ, ಆ ಮೂಲಕ ಆಡಳಿತವು ಜನರಿಗಾಗಿ ಕೆಲಸ ಮಾಡುವ ರಾಷ್ಟ್ರವನ್ನು ನಿರ್ಮಿಸುತ್ತದೆ, ಹೊರತು ಅದಕ್ಕೆ ವಿರುದ್ದವಾಗಿ ಅಲ್ಲ.
  • ಇತರರ ಮಿತಿಗಳ ಮೇಲೆ ಗಮನ ಕೇಂದ್ರೀಕರಿಸುವ ಬದಲು, ಭಾರತವು ತನ್ನದೇ ಆದ ಪ್ರಗತಿಯ ಮಾರ್ಗವನ್ನು ವಿಸ್ತರಿಸಬೇಕು.
  • ಹೆಚ್ಚುತ್ತಿರುವ ಆರ್ಥಿಕ ಸ್ವಾರ್ಥದ ಜಗತ್ತಿನಲ್ಲಿ, ಭಾರತದ ಸಾಮರ್ಥ್ಯಗಳನ್ನು ಬಲಪಡಿಸುವುದು, ಅವಕಾಶಗಳನ್ನು ವಿಸ್ತರಿಸುವುದು ಮತ್ತು ನಾಗರಿಕರನ್ನು ಸಬಲೀಕರಣಗೊಳಿಸುವುದರ ಮೇಲೆ ಗಮನ ಹರಿಸಬೇಕು. ಈ ಸುಧಾರಣೆಗಳು ಆಡಳಿತ ಪರಿವರ್ತನೆಯ ವೇಗವರ್ಧಿತ ಹಂತದ ಆರಂಭವನ್ನು ಗುರುತಿಸುತ್ತವೆ, ಇವು ಭಾರತವು ಹೆಚ್ಚು ಸ್ಥಿತಿಸ್ಥಾಪಕತ್ವವುಳ್ಳ, ಎಲ್ಲರನ್ನೂ ಒಳಗೊಳ್ಳುವ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿದೆ ಎಂಬುದನ್ನು ಖಚಿತಪಡಿಸುತ್ತವೆ.
  • ಪ್ರತಿಯೊಬ್ಬ ಭಾರತೀಯನು ಭಾರತ ನಿರ್ಮಿತ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅಥವಾ ರಾಷ್ಟ್ರದ ಸ್ವಾತಂತ್ರ್ಯದ ಶತಮಾನೋತ್ಸವದ ವೇಳೆಗೆ ಸಮೃದ್ಧ, ಶಕ್ತಿಶಾಲಿ ಮತ್ತು ವಿಕ್ಷಿತ ಭಾರತವನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ, ತಾಂತ್ರಿಕ ಮತ್ತು ಕೈಗಾರಿಕಾ ಉದ್ಯಮಗಳಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಬೇಕು.
  • ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವಲ್ಲಿ, ನಾವು ನಿಲ್ಲುವುದಿಲ್ಲ ಅಥವಾ ತಲೆಬಾಗುವುದಿಲ್ಲ, ನಾವು ಶ್ರಮಿಸುತ್ತಲೇ ಇರುತ್ತೇವೆ ಮತ್ತು 2047 ರಲ್ಲಿ ನಮ್ಮ ಕಣ್ಣ ಮುಂದೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ.
  • ನಮ್ಮ ಜೀವನದಲ್ಲಿ, ನಮ್ಮ ವ್ಯವಸ್ಥೆಗಳಲ್ಲಿ, ನಮ್ಮ ನಿಯಮಗಳು, ಕಾನೂನುಗಳು ಮತ್ತು ಸಂಪ್ರದಾಯಗಳಲ್ಲಿ ಗುಲಾಮಗಿರಿಯ ಒಂದು ಕಣವೂ ಉಳಿಯಲು ನಾವು ಬಿಡುವುದಿಲ್ಲ. ಎಲ್ಲಾ ರೀತಿಯ ಗುಲಾಮಗಿರಿಯಿಂದ ಮುಕ್ತರಾಗುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ.
  • ನಮ್ಮ ಪರಂಪರೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಮ್ಮ ಗುರುತಿನ ಅತಿದೊಡ್ಡ ಆಭರಣ, ದೊಡ್ಡ ರತ್ನ, ದೊಡ್ಡ ಕಿರೀಟ ಆಭರಣ ನಮ್ಮ ಪರಂಪರೆಯಾಗಿದೆ, ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತೇವೆ.
  • ಇವೆಲ್ಲವುಗಳಲ್ಲಿ ಏಕತೆ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ ಮತ್ತು ಆದ್ದರಿಂದ ಯಾರೂ ಏಕತೆಯ ಎಳೆಯನ್ನು ಮುರಿಯಲು ಸಾಧ್ಯವಾಗಬಾರದು ಎಂಬುದು ನಮ್ಮ ಸಾಮೂಹಿಕ ಸಂಕಲ್ಪವಾಗಿದೆ.

2. ರಕ್ಷಣಾ ಸಚಿವಾಲಯ

  •  ಆಪರೇಷನ್ ಸಿಂದೂರ್ ಭಾರತದ ರಕ್ಷಣಾ ಸ್ವಾವಲಂಬನೆ ಮತ್ತು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯ ಪ್ರದರ್ಶನವಾಗಿದೆ.
  •  ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸ್ಥಿರ ಕಾರ್ಯಾಚರಣೆಯ ಫಲಿತಾಂಶಗಳನ್ನು ಆಪ್ ಸಿಂಧೂರ್‌ ತೋರಿಸಿದೆ.
  •  ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು, ಕಾರ್ಯಾಚರಣೆಯು ಭಯೋತ್ಪಾದಕ ಜಾಲಗಳು ಮತ್ತು ಪಾಕಿಸ್ತಾನ ಮೂಲದ ಮೂಲಸೌಕರ್ಯವನ್ನು ಕೆಡವಿತು, ಇದು ಭಾರತವು ಇನ್ನು ಮುಂದೆ ಪರಮಾಣು ಬ್ಲ್ಯಾಕ್‌ಮೇಲ್ ಅಥವಾ ವಿದೇಶಿ ನಿಯಮಗಳ ಬೆದರಿಕೆಗಳನ್ನು ಅಂಗೀಕರಿಸದು ಎಂಬ ಹೊಸ ಯುಗವನ್ನು ಸಂಕೇತಿಸುತ್ತದೆ..
  •  ಭಾರತದಲ್ಲಿ ತಯಾರಿಸಿದ ಶಸ್ತ್ರಾಸ್ತ್ರಗಳು ಸೇರಿದಂತೆ ಸ್ಥಳೀಯ ಸಾಮರ್ಥ್ಯಗಳು ಭಾರತವನ್ನು ನಿರ್ಣಾಯಕವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿವೆ, ರಾಷ್ಟ್ರೀಯ ಭದ್ರತೆಯು ವಿದೇಶಿ ಅವಲಂಬನೆಯನ್ನು ಹೊಂದಿರಬಾರದು  ಎಂಬುದನ್ನು ಇದು  ಸಾಬೀತುಪಡಿಸುತ್ತದೆ.
  •  ಭಾರತೀಯ ನಾವೀನ್ಯಕಾರರು ಮತ್ತು ಯುವಜನರು ಭಾರತದೊಳಗೆ ಜೆಟ್ ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಬೇಕು, ಭವಿಷ್ಯದ ರಕ್ಷಣಾ ತಂತ್ರಜ್ಞಾನವು ಸಂಪೂರ್ಣವಾಗಿ ಸ್ವದೇಶಿ ಮತ್ತು ಸ್ವಾವಲಂಬಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
  •  ಆಧುನಿಕ ರಕ್ಷಣಾ ನಾವೀನ್ಯತೆಗಳಿಗೆ ಮಾರ್ಗದರ್ಶನ ನೀಡಲು ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಮತ್ತು ಪೌರಾಣಿಕ ಪರಂಪರೆಯಿಂದ ಸ್ಫೂರ್ತಿ ಪಡೆಯುತ್ತದೆ. ಭಾರತದ ಆಕ್ರಮಣಕಾರಿ ಮತ್ತು ತಡೆಗಟ್ಟುವ ಸಾಮರ್ಥ್ಯಗಳನ್ನು ಬಲಪಡಿಸಲು, ಶತ್ರು ರಕ್ಷಣಾ ಒಳನುಸುಳುವಿಕೆಗಳನ್ನು ತಟಸ್ಥಗೊಳಿಸುವ ಮತ್ತು ಭಾರತದ ಆಕ್ರಮಣಕಾರಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ "ಮಿಷನ್ ಸುದರ್ಶನ ಚಕ್ರ"ವನ್ನು ನಾವು ಪ್ರಾರಂಭಿಸುತ್ತಿದ್ದೇವೆ.
  •  ಪೌರಾಣಿಕ ಶ್ರೀ ಕೃಷ್ಣನ ಸುದರ್ಶನ ಚಕ್ರದಂತೆಯೇ, ಈ ಕಾರ್ಯಾಚರಣೆಯು ಭಾರತದ ಕಾರ್ಯತಂತ್ರದ ಸ್ವಾಯತ್ತತೆಗೆ ಬದ್ಧತೆಯನ್ನು ಒತ್ತಿಹೇಳುತ್ತದೆ, ಯಾವುದೇ ಬೆದರಿಕೆಗೆ ತ್ವರಿತ, ನಿಖರ ಮತ್ತು ಶಕ್ತಿಯುತ ಪ್ರತಿಕ್ರಿಯೆಗಳನ್ನು ಖಚಿತಪಡಿಸುತ್ತದೆ.
  •   ಉಪಕ್ರಮವು ಭಾರತದ ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಲಪಡಿಸುವ ಮೂಲಕ ತ್ವರಿತ, ನಿಖರ ಮತ್ತು ಶಕ್ತಿಯುತ ರಕ್ಷಣಾ ಪ್ರತಿಕ್ರಿಯೆಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ.
  •  ಎಲ್ಲಾ ಸಾರ್ವಜನಿಕ ಸ್ಥಳಗಳು 2035 ರ ವೇಳೆಗೆ ವಿಸ್ತೃತ ರಾಷ್ಟ್ರವ್ಯಾಪಿ ಭದ್ರತಾ ಕವಚದಿಂದ ಆವರಿಸಲ್ಪಡುತ್ತವೆ, ಇದು ರಾಷ್ಟ್ರಕ್ಕೆ ಸಮಗ್ರ ರಕ್ಷಣೆಯನ್ನು ಖಾತ್ರಿಪಡಿಸುತ್ತದೆ ಮತ್ತು ಸ್ವಾವಲಂಬಿ ರಕ್ಷಣೆಗೆ ಭಾರತದ ಬದ್ಧತೆಯನ್ನು ಪ್ರದರ್ಶಿಸುತ್ತದೆ.

3. ಹಣಕಾಸು ಸಚಿವಾಲಯ

  •  ದೀಪಾವಳಿಯ ವೇಳೆಗೆ ಮುಂದಿನ ಪೀಳಿಗೆಯ ಜಿ.ಎಸ್.ಟಿ ಸುಧಾರಣೆಗಳು ದೈನಂದಿನ ಅಗತ್ಯ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುತ್ತವೆ, ಇದು ಎಂ.ಎಸ್.ಎಂ.ಇಗಳು, ಸ್ಥಳೀಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಪ್ರಯೋಜನವನ್ನು ನೀಡುತ್ತದೆ, ಅದೇ ಸಮಯದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಮತ್ತು ಹೆಚ್ಚು ಪರಿಣಾಮಕಾರಿ, ನಾಗರಿಕ ಸ್ನೇಹಿ ಆರ್ಥಿಕತೆಯನ್ನು ಸೃಷ್ಟಿಸುತ್ತದೆ.
  •  ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸಲು ಆದಾಯ ತೆರಿಗೆ ಸುಧಾರಣೆ ಮತ್ತು ಮುಖರಹಿತ ಮೌಲ್ಯಮಾಪನವನ್ನು ಪರಿಚಯಿಸಲಾಯಿತು.
  •  12 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡುವುದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಉತ್ಸುಕರಾಗಿರುವ ನನ್ನ ಮಧ್ಯಮ ವರ್ಗದ ಕುಟುಂಬಗಳಿಗೆ ಹೆಚ್ಚಿನ ಸಂತೋಷವನ್ನು ತಂದಿದೆ.
  •  ಉತ್ಪಾದನೆಯಲ್ಲಿ ನಮ್ಮ ಶಕ್ತಿಯನ್ನು ಜಗತ್ತು ಗುರುತಿಸಲು, ಶೂನ್ಯ ದೋಷ, ಶೂನ್ಯ ಪರಿಣಾಮದ ಉತ್ಪನ್ನಗಳಿಗೆ ಬದ್ಧವಾಗಿರುವ ಮೂಲಕ ನಾವು ನಿರಂತರವಾಗಿ ಗುಣಮಟ್ಟದಲ್ಲಿ ಹೊಸ ಎತ್ತರವನ್ನು ಏರಬೇಕು.
  •  ನಮ್ಮ ಪ್ರತಿಯೊಂದು ಉತ್ಪನ್ನವು ಹೆಚ್ಚಿನ ಮೌಲ್ಯವನ್ನು ಹೊಂದಿರಬೇಕು, ಆದರೆ ಕಡಿಮೆ ವೆಚ್ಚದಾಯಕವಾಗಿರಬೇಕು. ಮನೋಭಾವದಿಂದಲೇ ನಾವು ಮುಂದುವರಿಯಬೇಕು.
  •  ಜಾಗತಿಕ ಅಸ್ಥಿರತೆಯ ನಡುವೆ, ಭಾರತದ ಹಣಕಾಸಿನ ಶಿಸ್ತು, ಭಾರತದ ಹಣಕಾಸಿನ ಶಕ್ತಿ, ಭರವಸೆಯ ಕಿರಣವಾಗಿ ಉಳಿದಿದೆ, ಇಡೀ ಜಗತ್ತು ಭಾರತೀಯ ಆರ್ಥಿಕತೆಯಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದೆ.

4. ಗೃಹ ವ್ಯವಹಾರಗಳ ಸಚಿವಾಲಯ

  •  ಭಾರತದ ಜನಸಂಖ್ಯಾ ಸಮಗ್ರತೆಯನ್ನು ಕಾಪಾಡುವುದು ಅತ್ಯಂತ ಮಹತ್ವದ್ದಾಗಿದೆ.
  •  ಗಡಿ ಪ್ರದೇಶಗಳಲ್ಲಿ ಒಳನುಸುಳುವಿಕೆ ಮತ್ತು ಅಕ್ರಮ ವಲಸೆಯಿಂದಾಗಿ ಜನಸಂಖ್ಯಾ ಅಸಮತೋಲನದ ಅಪಾಯಗಳು ಹೆಚ್ಚಾಗಿದ್ದು, ನಾಗರಿಕರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ.
  • ಭಾರತದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ, ಕಾರ್ಯತಂತ್ರದ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸುವ ಗುರಿಯನ್ನು ಹೊಂದಿರುವ ಉನ್ನತ-ಶಕ್ತಿಯ ಜನಸಂಖ್ಯಾ ಮಿಷನ್ ಪ್ರಾರಂಭಿಸಲಾಗುವುದು.
  •  ನಮ್ಮ ಬುಡಕಟ್ಟು ಪ್ರದೇಶಗಳು ಮತ್ತು ಯುವಜನರು ಮಾವೋವಾದದ ಹಿಡಿತದಲ್ಲಿ ಸಿಲುಕಿದ್ದರು. ಇಂದು, ನಾವು ಸಂಖ್ಯೆಯನ್ನು 125 ಕ್ಕೂ ಹೆಚ್ಚು ಜಿಲ್ಲೆಗಳಿಂದ ಕೇವಲ 20 ಕ್ಕೆ ಇಳಿಸಿದ್ದೇವೆ.
  •  ಒಂದು ಕಾಲದಲ್ಲಿ "ರೆಡ್ ಕಾರಿಡಾರ್" ಎಂದು ಕರೆಯಲಾಗುತ್ತಿದ್ದ ಪ್ರದೇಶಗಳು ಈಗ ಹಸಿರು ಅಭಿವೃದ್ಧಿಯ ಕಾರಿಡಾರ್‌ಗಳಾಗುತ್ತಿವೆ. ಇದು ನಮಗೆ ಹೆಮ್ಮೆಯ ವಿಷಯ.
  •  ಭಾರತದ ನಕ್ಷೆಯಲ್ಲಿ ಒಂದು ಕಾಲದಲ್ಲಿ ರಕ್ತದಿಂದ ಕೆಂಪು ಬಣ್ಣ ಬಳಿದ ಭಾಗಗಳಲ್ಲಿ, ನಾವು ಈಗ ಸಂವಿಧಾನದ ತ್ರಿವರ್ಣ ಧ್ವಜವನ್ನು ಹಾರಿಸಿದ್ದೇವೆ., ಕಾನೂನಿನ ನಿಯಮ ಮತ್ತು ಅಭಿವೃದ್ಧಿಯನ್ನು ತಂದಿದ್ದೇವೆ.

5. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ

  •  ಅವಲಂಬನೆಯಿಂದ ಸ್ವಾವಲಂಬನೆಯತ್ತ ದೇಶದ ಪ್ರಯಾಣಕ್ಕೆ ಭಾರತದ ರೈತರು ಬೆನ್ನೆಲುಬಾಗಿದ್ದಾರೆ.
  •  ವಸಾಹತುಶಾಹಿ ಆಳ್ವಿಕೆಯು ದೇಶವನ್ನು ಬಡತನಕ್ಕೆ ತಳ್ಳಿತ್ತು, ಆದರೆ ರೈತರ ದಣಿವರಿಯದ ಪ್ರಯತ್ನಗಳೇ ಭಾರತದ ಕಣಜಗಳನ್ನು ತುಂಬಿಸಿ ದೇಶದ ಆಹಾರ ಸಾರ್ವಭೌಮತ್ವವನ್ನು ಭದ್ರಪಡಿಸಿದವು.
  •  ಭಾರತ ತನ್ನ ರೈತರ ಹಿತಾಸಕ್ತಿಗಳಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ.
  •  "ನಾನು ಯಾವುದೇ ಹಾನಿಕಾರಕ ನೀತಿಯ ವಿರುದ್ಧ ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಗೋಡೆಯಂತೆ ನಿಂತಿದ್ದೇನೆ, ಅವರ ಹಕ್ಕುಗಳು ಮತ್ತು ಜೀವನೋಪಾಯವನ್ನು ರಕ್ಷಿಸುತ್ತೇನೆ" ಎಂದು ಪ್ರಧಾನಮಂತ್ರಿ ಹೇಳಿದರು.
  •  ಕಳೆದ ವರ್ಷ, ಭಾರತೀಯ ರೈತರು ಧಾನ್ಯಗಳ ಉತ್ಪಾದನೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದರು.
  •  ಕೃಷಿಯು ಭಾರತದ ಅಭಿವೃದ್ಧಿಯ ಮೂಲಾಧಾರವಾಗಿ ಉಳಿದಿದೆ, ಭಾರತವು ಹಾಲು, ದ್ವಿದಳ ಧಾನ್ಯಗಳು ಮತ್ತು ಸೆಣಬಿನಲ್ಲಿ ನಂ. 1 ಮತ್ತು ಅಕ್ಕಿ, ಗೋಧಿ, ಹತ್ತಿ, ಹಣ್ಣುಗಳು ಮತ್ತು ತರಕಾರಿಗಳಲ್ಲಿ ನಂ. 2 ಆಗಿದೆ.
  •  ಕೃಷಿ ರಫ್ತು ₹4 ಲಕ್ಷ ಕೋಟಿ ದಾಟಿದೆ, ಇದು ದೇಶದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಪ್ರತಿಬಿಂಬಿಸುತ್ತದೆ.
  •  ರೈತರನ್ನು ಮತ್ತಷ್ಟು ಸಬಲೀಕರಣಗೊಳಿಸಲು, 100 ಹಿಂದುಳಿದ ಕೃಷಿ ಜಿಲ್ಲೆಗಳಿಗೆ ಪ್ರಧಾನ ಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಯನ್ನು ಪ್ರಾರಂಭಿಸಲಾಯಿತು, ಇದು ಪ್ರಧಾನ ಮಂತ್ರಿ-ಕಿಸಾನ್, ನೀರಾವರಿ ಯೋಜನೆಗಳು ಮತ್ತು ಜಾನುವಾರು ಸಂರಕ್ಷಣಾ ಕಾರ್ಯಕ್ರಮಗಳ ಮೂಲಕ ನಡೆಯುತ್ತಿರುವ ಬೆಂಬಲವನ್ನು ಪೂರೈಸುತ್ತದೆ, ಭಾರತದ ಸಮೃದ್ಧಿಯ ಬೆನ್ನೆಲುಬು ಬಲವಾಗಿರುವುದನ್ನು ಮತ್ತು ಸ್ಥಿತಿಸ್ಥಾಪಕತ್ವವನ್ನು ಗಳಿಸಿಕೊಂಡಿರುವುದನ್ನು ್ಖಚಿತಪಡಿಸುತ್ತದೆ.
  •  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಮಳೆನೀರು ಕೊಯ್ಲು, ನೀರಾವರಿ ಯೋಜನೆಗಳು, ಗುಣಮಟ್ಟದ ಬೀಜ ವಿತರಣೆ ಮತ್ತು ಸಕಾಲಿಕ ರಸಗೊಬ್ಬರ ಪೂರೈಕೆಯಂತಹ ಸರ್ಕಾರಿ ಯೋಜನೆಗಳು ಒಟ್ಟಾಗಿ ದೇಶಾದ್ಯಂತ ರೈತರ ವಿಶ್ವಾಸವನ್ನು ಹೆಚ್ಚಿಸಿವೆ.

6. ಪಶುಸಂಗೋಪನಾ ಸಚಿವಾಲಯ

  •  ಉತ್ತರ ಭಾರತದಲ್ಲಿಯೇ, ಕಾಲು ಮತ್ತು ಬಾಯಿ ರೋಗವನ್ನು ತಡೆಗಟ್ಟಲು ಸುಮಾರು 125 ಕೋಟಿ ಉಚಿತ ಡೋಸ್ ಲಸಿಕೆಗಳನ್ನು ಜಾನುವಾರುಗಳಿಗೆ ನೀಡಲಾಗಿದೆ.

7. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

  •  50-60 ವರ್ಷಗಳ ಹಿಂದೆ ಅರೆವಾಹಕ (ಸೆಮಿಕಂಡಕ್ಟರ್) ಕಾರ್ಖಾನೆಗಳನ್ನು ಸ್ಥಾಪಿಸುವ ಪ್ರಯತ್ನಗಳು "ಹುಟ್ಟಿನಲ್ಲೇ ಕೊಲ್ಲಲ್ಪಟ್ಟವು" ಆದರೆ ಇತರ ರಾಷ್ಟ್ರಗಳು ಅಭಿವೃದ್ಧಿ ಹೊಂದಿದವು, ಭಾರತವು ಈಗ ಅರೆವಾಹಕ ಉತ್ಪಾದನೆಯಲ್ಲಿ ಮಿಷನ್ ಮೋಡ್‌ನಲ್ಲಿದೆ.
  •  ಭಾರತವು 2025 ರ ಅಂತ್ಯದ ವೇಳೆಗೆ ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್‌ಗಳನ್ನು ಪ್ರಾರಂಭಿಸಲಿದೆ, ಇದು ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಷ್ಟ್ರದ ಬೆಳೆಯುತ್ತಿರುವ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ.
  •  ಜಾಗತಿಕ ಸ್ಪರ್ಧಾತ್ಮಕತೆಗೆ ಕೃತಕಬುದ್ಧಿಮತ್ತೆ (AI), ಸೈಬರ್ ಭದ್ರತೆ, ಡೀಪ್-ಟೆಕ್ ಮತ್ತು ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ನಾವೀನ್ಯತೆ ಅಗತ್ಯ.

8. ಬಾಹ್ಯಾಕಾಶ ಇಲಾಖೆ

  •  ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರ ಗಮನಾರ್ಹ ಸಾಧನೆಗಳಲ್ಲಿ ಇಡೀ ಭಾರತ ಸಂತೋಷಪಡುತ್ತದೆ.
  •  ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣಕ್ಕಾಗಿ ಮಹತ್ವಾಕಾಂಕ್ಷೆಯ ಯೋಜನೆಗಳೊಂದಿಗೆ ಆತ್ಮನಿರ್ಭರ ಭಾರತ ಗಗನಯಾನಕ್ಕೆ ತಯಾರಿ ನಡೆಸುತ್ತಿದೆ, ಇದು ಸ್ಥಳೀಯ ಬಾಹ್ಯಾಕಾಶ ಸಾಮರ್ಥ್ಯಗಳ ಹೊಸ ಯುಗವನ್ನು ಸಂಕೇತಿಸುತ್ತದೆ.
  •  300 ಕ್ಕೂ ಹೆಚ್ಚು ನವೋದ್ಯಮಗಳು   (ಸ್ಟಾರ್ಟ್‌ಅಪ್‌ಗಳು) ಉಪಗ್ರಹಗಳು, ಪರಿಶೋಧನೆ ಮತ್ತು ಅತ್ಯಾಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳಲ್ಲಿ ಸಕ್ರಿಯವಾಗಿ ಹೊಸತನವನ್ನು ಕಂಡುಕೊಳ್ಳುತ್ತಿವೆ, ಭಾರತವು ಬಾಹ್ಯಾಕಾಶ ವಿಜ್ಞಾನ ಮತ್ತು ಪರಿಶೋಧನೆಯಲ್ಲಿ ಭಾಗವಹಿಸುವುದಲ್ಲದೆ ಜಾಗತಿಕವಾಗಿ ಮುಂಚೂಣಿಯಲ್ಲಿದೆ ಎಂಬುದನ್ನೂ ಇದು ಖಚಿತಪಡಿಸುತ್ತದೆ.

9. ಪರಮಾಣು ಇಂಧನ ಇಲಾಖೆ

  •  10 ಹೊಸ ಪರಮಾಣು ರಿಯಾಕ್ಟರ್‌ಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ ಮತ್ತು ಭಾರತದ ಸ್ವಾತಂತ್ರ್ಯದ 100 ನೇ ವರ್ಷದ ವೇಳೆಗೆ, ರಾಷ್ಟ್ರವು ತನ್ನ ಪರಮಾಣು ಇಂಧನ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಇದು ಇಂಧನ ಸ್ವಾವಲಂಬನೆಯನ್ನು ಬಲಪಡಿಸುತ್ತದೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ಬೆಂಬಲಿಸುತ್ತದೆ.
  •  ಭಾರತವು ಪರಮಾಣು ವಲಯವನ್ನು ಖಾಸಗಿಯವರಿಗೆ  ತೆರೆಯುತ್ತಿದೆ, ಇಂಧನ ಮತ್ತು ತಂತ್ರಜ್ಞಾನದಲ್ಲಿ ಅಭೂತಪೂರ್ವ ಅವಕಾಶಗಳನ್ನು ಸೃಷ್ಟಿಸುತ್ತಿದೆ.
  •  ಭಾರತವು ಇಂಧನ ಆಮದುಗಳ ಮೇಲೆ ಅವಲಂಬಿತವಾಗಿಲ್ಲದಿದ್ದರೆ, ಉಳಿಸಿದ ಹಣವನ್ನು ರೈತರ ಕಲ್ಯಾಣಕ್ಕಾಗಿ ಬಳಸಬಹುದು, ರಾಷ್ಟ್ರದ ಸಮೃದ್ಧಿಯ ಬೆನ್ನೆಲುಬನ್ನು ಮತ್ತಷ್ಟು ಬಲಪಡಿಸಬಹುದು.

10. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

  •  ₹1 ಲಕ್ಷ ಕೋಟಿ ಮೌಲ್ಯದ ಪ್ರಮುಖ ಉದ್ಯೋಗ ಯೋಜನೆ - ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆ ಪ್ರಾರಂಭಿಸಲಾಗುವುದು. ಈ ಯೋಜನೆಯಡಿಯಲ್ಲಿ, ಹೊಸದಾಗಿ ಉದ್ಯೋಗಕ್ಕೆ ಸೇರಿರುವ ಯುವಜನರು ₹15,000 ಪಡೆಯುತ್ತಾರೆ. ಈ ಯೋಜನೆಯು 3 ಕೋಟಿ ಯುವ ಭಾರತೀಯರಿಗೆ ಪ್ರಯೋಜನವನ್ನು ನೀಡುವ ಗುರಿಯನ್ನು ಹೊಂದಿದೆ, ಸ್ವತಂತ್ರ ಭಾರತದಿಂದ ಸಮೃದ್ಧ ಭಾರತಕ್ಕೆ ಸೇತುವೆಯನ್ನು ಬಲಪಡಿಸುತ್ತದೆ.
  •   ಉಪಕ್ರಮವು ಭಾರತದ ಜನಸಂಖ್ಯಾ ಸಾಮರ್ಥ್ಯವನ್ನು ನಿಜವಾದ ಆರ್ಥಿಕ ಮತ್ತು ಸಾಮಾಜಿಕ ಸಮೃದ್ಧಿಯಾಗಿ ಪರಿವರ್ತಿಸುತ್ತದೆ, ಸ್ವತಂತ್ರ ಭಾರತದಿಂದ ಸಮೃದ್ಧ ಭಾರತಕ್ಕೆ ಸೇತುವೆಯನ್ನು ಬಲಪಡಿಸುತ್ತದೆ ಮತ್ತು ಯುವಜನರು ರಾಷ್ಟ್ರದ ಪ್ರಗತಿ ಮತ್ತು ಅಭಿವೃದ್ಧಿಗೆ ಸಕ್ರಿಯವಾಗಿ ಕೊಡುಗೆ ನೀಡಲು ಸಬಲೀಕರಣಗೊಳಿಸುತ್ತದೆ.

11. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂ.ಎಸ್.ಎಂ.ಇ.-MSME)

  •  ದೀಪಾವಳಿಯಂದು ಮುಂದಿನ ಪೀಳಿಗೆಯ ಜಿ.ಎಸ್.ಟಿ. ಸುಧಾರಣೆಗಳನ್ನು ಅನಾವರಣಗೊಳಿಸಲಾಗುವುದು, ಇದು ಅಗತ್ಯ ವಸ್ತುಗಳ ಮೇಲಿನ ತೆರಿಗೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಎಂ.ಎಸ್.ಎಂ.ಇ.ಗಳು, ಸ್ಥಳೀಯ ಮಾರಾಟಗಾರರು ಮತ್ತು ಗ್ರಾಹಕರಿಗೆ ಪರಿಹಾರವನ್ನು ಒದಗಿಸುತ್ತದೆ.
  •  ಸರ್ಕಾರದ ಸುಧಾರಣೆಗಳು ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು), ಎಂ.ಎಸ್.ಎಂ.ಇಗಳು ಮತ್ತು ಉದ್ಯಮಿಗಳಿಗೆ ಅನುಸರಣೆ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿವೆ, ಅದೇ ಸಮಯದಲ್ಲಿ ಹಳೆಯ ಕಾನೂನು ನಿಬಂಧನೆಗಳ ಭಯದಿಂದ ಸ್ವಾತಂತ್ರ್ಯವನ್ನು ಖಚಿತಪಡಿಸುತ್ತವೆ. ಇದು ವ್ಯಾಪಾರ ಬೆಳವಣಿಗೆಗೆ ಹೆಚ್ಚು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ, ನಾವೀನ್ಯತೆ ಮತ್ತು ಆರ್ಥಿಕ ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.

12. ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯ

• ಭಾರತವು "ವಿಶ್ವದ ಔಷಧಾಲಯ" ವಾಗಿ ತನ್ನನ್ನು ತಾನು ಬಲಪಡಿಸಿಕೊಳ್ಳಬೇಕು.

• ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹೂಡಿಕೆ ಮಾಡುವ ತುರ್ತು ಅವಶ್ಯಕತೆಯಿದೆ.

• "ಮಾನವೀಯತೆಯ ಕಲ್ಯಾಣಕ್ಕಾಗಿ ನಾವು ಅತ್ಯುತ್ತಮ ಮತ್ತು ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸಬೇಕಲ್ಲವೇ?"

• ದೇಶೀಯ ಔಷಧೀಯ ನಾವೀನ್ಯತೆಯಲ್ಲಿ ಭಾರತದ ಬೆಳೆಯುತ್ತಿರುವ ಶಕ್ತಿ, ಹೊಸ ಔಷಧಿಗಳು, ಲಸಿಕೆಗಳು ಮತ್ತು ಜೀವ ಉಳಿಸುವ ಚಿಕಿತ್ಸೆಗಳನ್ನು ಸಂಪೂರ್ಣವಾಗಿ ಭಾರತದೊಳಗೆ ಅಭಿವೃದ್ಧಿಪಡಿಸುವ ಅಗತ್ಯವನ್ನು ಒತ್ತಿಹೇಳುತ್ತದೆ.

• ಆಹಾರ ಭದ್ರತೆಯನ್ನು ಆಮದುಗಳಿಗೆ ಬಿಡಬಾರದು.

• ಭಾರತೀಯ ರೈತರು ಸಬಲೀಕರಣಗೊಳ್ಳುವುದನ್ನು ಮತ್ತು ಭಾರತದ ಕೃಷಿ ಸ್ವತಂತ್ರವಾಗಿ ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರಗಳು ಮತ್ತು ಪ್ರಮುಖ ಒಳಹರಿವಿನ ಸಾಮಗ್ರಿಗಳನ್ನು ದೇಶೀಯವಾಗಿ ಉತ್ಪಾದಿಸುವ ತುರ್ತು ಅವಶ್ಯಕತೆಯಿದೆ.

• ಇತರ ದೇಶಗಳನ್ನು ಅವಲಂಬಿಸದೆ, ಭಾರತದ ಅವಶ್ಯಕತೆಗೆ ಅನುಗುಣವಾಗಿ ನಮ್ಮ ಸ್ವಂತ ರಸಗೊಬ್ಬರಗಳನ್ನು ತಯಾರಿಸಲು ನಾವು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು.

• ಇದು ರೈತರ ಕಲ್ಯಾಣಕ್ಕೆ ಮಾತ್ರವಲ್ಲದೆ ರಾಷ್ಟ್ರದ ಆರ್ಥಿಕ ಸಾರ್ವಭೌಮತ್ವವನ್ನು ಬಲಪಡಿಸಲು ಸಹ ನಿರ್ಣಾಯಕವಾಗಿದೆ.

13. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

  •  ಮಹಿಳಾ ಸ್ವಸಹಾಯ ಗುಂಪುಗಳು ಅದ್ಭುತಗಳನ್ನು ಮಾಡಿವೆ, ಅವುಗಳ ಉತ್ಪನ್ನಗಳು ಪ್ರಪಂಚದಾದ್ಯಂತ ಜಾಗತಿಕ ಮಾರುಕಟ್ಟೆಗಳನ್ನು ತಲುಪಿವೆ.
  •  ಭಾರತದ ಹೆಣ್ಣುಮಕ್ಕಳು ಸ್ಟಾರ್ಟ್‌ಅಪ್‌ಗಳಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ, ಕ್ರೀಡೆಯಿಂದ ಸಶಸ್ತ್ರ ಪಡೆಗಳವರೆಗೆ ಪ್ರಾಬಲ್ಯ ಸಾಧಿಸುತ್ತಿದ್ದಾರೆ. ಅವರು ಹೆಗಲಿಗೆ ಹೆಗಲು ಕೊಟ್ಟು ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಹೆಮ್ಮೆಯಿಂದ ಭಾಗವಹಿಸುತ್ತಿದ್ದಾರೆ.
  •  ನಮೋ ಡ್ರೋನ್ ದೀದಿ ಮಹಿಳೆಯರಿಗೆ ಹೊಸ ಗುರುತಿಸುವಿಕೆಯನ್ನು ನೀಡಿದೆ.
  •  ನಾವು ಮೂರು ಕೋಟಿ ಮಹಿಳೆಯರನ್ನು 'ಲಖ್ಪತಿ ದೀದಿ'ಗಳನ್ನಾಗಿ ಮಾಡಲು ಪ್ರತಿಜ್ಞೆ ಮಾಡಿದ್ದೇವೆ.

14. ಕಾನೂನು ಮತ್ತು ನ್ಯಾಯ ಸಚಿವಾಲಯ

  •  ಕಳೆದ ವರ್ಷಗಳಲ್ಲಿ, ಸರ್ಕಾರವು 40,000 ಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ರದ್ದುಗೊಳಿಸುವ ಮತ್ತು 1,500 ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ಐತಿಹಾಸಿಕ ಸುಧಾರಣೆಗಳ ಅಲೆಯನ್ನು ಕೈಗೊಂಡಿದೆ.
  •  ಸದಾ ನಾಗರಿಕರ ಹಿತಾಸಕ್ತಿಗಳನ್ನು ಮುಂಚೂಣಿಯಲ್ಲಿರಿಸಿಕೊಂಡು ಡಜನ್ ಗಟ್ಟಲೆ ಇತರ ಕಾನೂನುಗಳನ್ನು ಸಂಸತ್ತಿನಲ್ಲಿ ಸರಳೀಕರಿಸಲಾಯಿತು.
  •  ಇತ್ತೀಚಿನ ಅಧಿವೇಶನದಲ್ಲಿಯೇ 280 ಕ್ಕೂ ಹೆಚ್ಚಿನ ನಿಬಂಧನೆಗಳನ್ನು ತೆಗೆದುಹಾಕಲಾಯಿತು, ಆಡಳಿತವನ್ನು ಸರಳಗೊಳಿಸಲಾಯಿತು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಹೆಚ್ಚು ಲಭ್ಯ ಇರುವಂತೆ ಮಾಡಲಾಯಿತು.
  •  ನಾವು ದಂಡ ಸಂಹಿತೆಯನ್ನು ರದ್ದುಪಡಿಸಿದ್ದೇವೆ ಮತ್ತು ಭಾರತೀಯ ನ್ಯಾಯ ಸಂಹಿತವನ್ನು ತಂದಿದ್ದೇವೆ, ಇದು ಭಾರತದ ನಾಗರಿಕರಲ್ಲಿ ನಂಬಿಕೆ, ಒಂದು ರೀತಿಯ ಆತ್ಮೀಯತೆ ಮತ್ತು ಸೂಕ್ಷ್ಮತೆಯನ್ನು ತುಂಬಿದೆ.

15. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

  •  ಬೊಜ್ಜು ನಮ್ಮ ರಾಷ್ಟ್ರಕ್ಕೆ ಅತ್ಯಂತ ಗಂಭೀರ ಬಿಕ್ಕಟ್ಟಾಗುತ್ತಿದೆ.
  •  ಬೊಜ್ಜಿನ ವಿರುದ್ಧ ಹೋರಾಡಲು ಪ್ರತಿ ಕುಟುಂಬವು ಅಡುಗೆ ಎಣ್ಣೆ ಬಳಕೆಯನ್ನು 10% ಕಡಿಮೆ ಮಾಡಲು ಸಂಕಲ್ಪ ಮಾಡಬೇಕು.

16. ಬುಡಕಟ್ಟು ವ್ಯವಹಾರಗಳ ಸಚಿವಾಲಯ

  •  ಇಂದು, ಮಾವೋವಾದ ಮತ್ತು ನಕ್ಸಲ್‌ವಾದದಿಂದ ಮುಕ್ತರಾದ ನಂತರ, ಬಸ್ತಾರ್‌ನ ಯುವಜನರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ.
  •   ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ಬುಡಕಟ್ಟು ಪ್ರದೇಶಗಳನ್ನು ನಕ್ಸಲ್‌ವಾದದಿಂದ ಮುಕ್ತಗೊಳಿಸುವ ಮೂಲಕ ಮತ್ತು ನನ್ನ ಬುಡಕಟ್ಟು ಕುಟುಂಬಗಳ ಯುವಜನರ ಜೀವಗಳನ್ನು ಉಳಿಸುವ ಮೂಲಕ, ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಿದ್ದೇವೆ.

17. ಸಂಸ್ಕೃತಿ ಸಚಿವಾಲಯ

  •  ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳ ರಕ್ಷಣೆಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಗುರು ತೇಜ್ ಬಹದ್ದೂರ್ ಜೀ ಅವರ 350 ನೇ ಹುತಾತ್ಮ ವಾರ್ಷಿಕೋತ್ಸವವನ್ನು ವರ್ಷ ಆಚರಿಸಲಾಗುತ್ತಿದೆ.
  •  ನಮ್ಮ ಸಂಸ್ಕೃತಿಯ ಬಲವು ನಮ್ಮ ವೈವಿಧ್ಯತೆಯಲ್ಲಿದೆ.
  •  'ಮಹಾ ಕುಂಭ'ದ ಯಶಸ್ಸು ಭಾರತದ ಏಕತೆ ಮತ್ತು ಶಕ್ತಿಗೆ ಒಂದು ಪ್ರತಿಧ್ವನಿಸುವ ಸಾಕ್ಷಿಯಾಗಿದೆ.
  •  ನಾವು ಮರಾಠಿ, ಅಸ್ಸಾಮಿ, ಬಾಂಗ್ಲಾ, ಪಾಲಿ ಮತ್ತು ಪ್ರಾಕೃತ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದ್ದೇವೆ.
  •  ನಮ್ಮ ಭಾಷೆಗಳು ಹೆಚ್ಚು ಅಭಿವೃದ್ಧಿ ಹೊಂದಿದಷ್ಟೂ, ಅವು ಹೆಚ್ಚು ಶ್ರೀಮಂತವಾಗುತ್ತವೆ, ನಮ್ಮ ಸಂಪೂರ್ಣ ಜ್ಞಾನ ವ್ಯವಸ್ಥೆಯು ಬಲಗೊಂಡು ವೃದ್ಧಿಸುತ್ತದೆ
  •  ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ, ನಾವು ಈಗ ದೇಶಾದ್ಯಂತ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ಶತಮಾನಗಳಷ್ಟು ಹಳೆಯ ದಾಖಲೆಗಳನ್ನು ಪತ್ತೆಹಚ್ಚಲು ಮತ್ತು ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತನ್ನು ಸಂರಕ್ಷಿಸಲು ಇಂದಿನ ತಂತ್ರಜ್ಞಾನವನ್ನು ಬಳಸಲು ಕೆಲಸ ಮಾಡುತ್ತಿದ್ದೇವೆ.
  •  ರಾಷ್ಟ್ರೀಯ ಸೇವೆಯ ಈ ಶತಮಾನದಷ್ಟು ದೀರ್ಘವಾದ ಪ್ರಯಾಣಕ್ಕೆ ಕೊಡುಗೆ ನೀಡಿದ ಎಲ್ಲಾ ಸ್ವಯಂಸೇವಕರಿಗೆ ನಾನು ನಮಸ್ಕರಿಸುತ್ತೇನೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ 100 ವರ್ಷಗಳ ಭವ್ಯ ಮತ್ತು ಸಮರ್ಪಿತ ಪ್ರಯಾಣದ ಬಗ್ಗೆ ರಾಷ್ಟ್ರವು ಹೆಮ್ಮೆಪಡುತ್ತದೆ, ಇದು ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ.

18. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ

  •  ಯುವಜನರ ಉಜ್ವಲ ಭವಿಷ್ಯಕ್ಕಾಗಿ ಮತ್ತು ರೈತರ ಕಲ್ಯಾಣಕ್ಕಾಗಿ ಇಂಧನ ಸ್ವಾತಂತ್ರ್ಯವು ಅತ್ಯಂತ ಮಹತ್ವದ್ದಾಗಿದೆ ಮತ್ತು ಇದನ್ನು ಸಾಧಿಸಲಾಗುವುದು.
  •  ಕಳೆದ 11 ವರ್ಷಗಳಲ್ಲಿ ಇಂಧನದಲ್ಲಿ ಸ್ವಾವಲಂಬನೆಯ ನಮ್ಮ ಸಂಕಲ್ಪದೊಂದಿಗೆ, ಭಾರತದಲ್ಲಿ ಸೌರಶಕ್ತಿಯು ಮೂವತ್ತು ಪಟ್ಟು ಹೆಚ್ಚಾಗಿದೆ.
  •  ಮಿಷನ್ ಗ್ರೀನ್ ಹೈಡ್ರೋಜನ್‌ನೊಂದಿಗೆ, ಭಾರತ ಇಂದು ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ
  •  ಜಗತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಚರ್ಚಿಸುತ್ತಿರುವಾಗ, ಭಾರತವು 2030 ರ ವೇಳೆಗೆ 50% ಶುದ್ಧ ಇಂಧನ ಶಕ್ತಿಯನ್ನು ಸಾಧಿಸಲು ಸಂಕಲ್ಪಿಸಿತ್ತು, ಆದರೆ  ಜನರ ಬದ್ಧತೆಗೆ ಧನ್ಯವಾದಗಳು, ಆ ಗುರಿಯನ್ನು 2025 ರ ವೇಳೆಗೆ ತಲುಪಲಾಗಿದೆ.
  •  ಸೌರ, ಪರಮಾಣು, ಜಲ ಮತ್ತು ಜಲಜನಕ ಶಕ್ತಿಯು ಆಧುನಿಕ ರೀತಿಯಲ್ಲಿ ಮುಂದುವರೆದಿದ್ದು, ಇಂಧನ ಸ್ವಾತಂತ್ರ್ಯದತ್ತ ನಿರ್ಣಾಯಕ ಹೆಜ್ಜೆಯಾಗಿದೆ.

19. ವಿದ್ಯುತ್ ಸಚಿವಾಲಯ

  •  ಸೌರ ಫಲಕಗಳು ಅಥವಾ ವಿದ್ಯುತ್ ವಾಹನಗಳಿಗೆ ಅಗತ್ಯವಿರುವ ಘಟಕಗಳು ಇರಲಿ, ನಾವು ನಮ್ಮದೇ ಆದ ಘಟಕಗಳನ್ನು ತಯಾರಿಸಬೇಕು.

20. ಗಣಿ ಸಚಿವಾಲಯ

• ಇಂಧನ, ಕೈಗಾರಿಕೆ ಮತ್ತು ರಕ್ಷಣೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಪಡೆದುಕೊಳ್ಳಲು, ಭಾರತವು ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಪ್ರಾರಂಭಿಸಿದೆ, ಇಂಧನ, ಕೈಗಾರಿಕೆ ಮತ್ತು ರಕ್ಷಣೆಗೆ ಅಗತ್ಯವಾದ ಖನಿಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು 1,200 ತಾಣಗಳನ್ನು ಅನ್ವೇಷಿಸುತ್ತಿದೆ.

•  ಈ ಖನಿಜಗಳನ್ನು ನಿಯಂತ್ರಿಸುವುದು ಕಾರ್ಯತಂತ್ರದ ಸ್ವಾಯತ್ತತೆಯನ್ನು ಬಲಪಡಿಸುತ್ತದೆ, ಭಾರತದ ಕೈಗಾರಿಕಾ ಮತ್ತು ರಕ್ಷಣಾ ವಲಯಗಳು ಸ್ವಾವಲಂಬಿಯಾಗಿ ಉಳಿಯುವುದನ್ನು ಖಚಿತಪಡಿಸುತ್ತದೆ.

                21. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

•  ಯುವಜನರು ಭಾರತದ ಸ್ವಂತ ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬೇಕು, ಸಂವಹನ, ದತ್ತಾಂಶ ಮತ್ತು ತಾಂತ್ರಿಕ ಪರಿಸರ ವ್ಯವಸ್ಥೆಗಳು ಸುರಕ್ಷಿತ ಮತ್ತು ಸ್ವತಂತ್ರವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು, ಭಾರತದ ಡಿಜಿಟಲ್ ಸ್ವಾಯತ್ತತೆಯನ್ನು ಬಲಪಡಿಸಬೇಕು.

• ಕ್ರೀಡೆಗಳನ್ನು ಉತ್ತೇಜಿಸಲು, ನಾವು ರಾಷ್ಟ್ರೀಯ ಕ್ರೀಡಾ ನೀತಿಯನ್ನು ತಂದಿದ್ದೇವೆ.

•  ನಾವು ದೇಶದಲ್ಲಿ 'ಖೇಲೋ ಇಂಡಿಯಾ ನೀತಿ'ಯನ್ನು ಪರಿಚಯಿಸಿದ್ದೇವೆ.

ಟಿಪ್ಪಣಿ: ಕೆಲವು ವಿಷಯಗಳು ಒಂದಕ್ಕಿಂತ ಹೆಚ್ಚು ಸಚಿವಾಲಯಗಳ ಒಳಗೊಳ್ಳುವಿಕೆಯನ್ನು ಹೊಂದಿವೆ, ಅದಕ್ಕೆ ಅನುಗುಣವಾಗಿ ಅವುಗಳನ್ನು ಪುನರಾವರ್ತಿಸಬಹುದು.

 

*****


(Release ID: 2157061)