ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

79ನೇ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ ಕೆಂಪು ಕೋಟೆಯ ಪ್ರಾಂಗಣದಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 15 AUG 2025 12:29PM by PIB Bengaluru

ನನ್ನ ಪ್ರೀತಿಯ ದೇಶಬಾಂಧವರೇ,

ಈ ಸ್ವಾತಂತ್ರ್ಯೋತ್ಸವವು ನಮ್ಮ ಜನರ 140 ಕೋಟಿ ಸಂಕಲ್ಪಗಳ ಆಚರಣೆಯಾಗಿದೆ. ಈ ಸ್ವಾತಂತ್ರ್ಯೋತ್ಸವವು ಸಾಮೂಹಿಕ ಸಾಧನೆಗಳು ಮತ್ತು ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ಹೃದಯಗಳು ಸಂತೋಷದಿಂದ ತುಂಬಿವೆ. ರಾಷ್ಟ್ರವು ನಿರಂತರವಾಗಿ ಏಕತೆಯ ಮನೋಭಾವವನ್ನು ಬಲಪಡಿಸುತ್ತಿದೆ. ಇಂದು, 140 ಕೋಟಿ ಭಾರತೀಯರು ತ್ರಿವರ್ಣ ಧ್ವಜದ ಬಣ್ಣಗಳಿಂದ ಕಂಗೊಳಿಸುತ್ತಿದ್ದಾರೆ. ಮರುಭೂಮಿಯಾಗಿರಲಿ, ಹಿಮಾಲಯದ ಶಿಖರಗಳಾಗಿರಲಿ, ಸಮುದ್ರ ತೀರಗಳಾಗಿರಲಿ, ಅಥವಾ ಜನನಿಬಿಡ ಪ್ರದೇಶಗಳಾಗಿರಲಿ, 'ಹರ್ ಘರ್ ತಿರಂಗಾ' ಹಾರುತ್ತಿದೆ, ಎಲ್ಲೆಡೆ ಒಂದೇ ಪ್ರತಿಧ್ವನಿ, ಒಂದೇ ಹರ್ಷೋದ್ಗಾರ: ನಮ್ಮ ಜೀವಕ್ಕಿಂತ ಪ್ರಿಯವಾದ ನಮ್ಮ ತಾಯ್ನಾಡಿಗೆ ಜೈ.

ನನ್ನ ಪ್ರೀತಿಯ ದೇಶವಾಸಿಗಳೇ,

1947ರಲ್ಲಿ, ಅನಂತ ಸಾಧ್ಯತೆಗಳು ಮತ್ತು ಲಕ್ಷಾಂತರ ಮಂದಿಯ ತೋಳ್ಬಲದೊಂದಿಗೆ, ನಮ್ಮ ದೇಶವು ಸ್ವತಂತ್ರವಾಯಿತು. ರಾಷ್ಟ್ರದ ಆಕಾಂಕ್ಷೆಗಳು ಗಗನಕ್ಕೆ ಹಾರಿದವು. ಆದರೆ ಸವಾಲುಗಳು ಇನ್ನೂ ಹೆಚ್ಚಾಗಿದ್ದವು. ಪೂಜ್ಯ ಬಾಪು ಅವರ ತತ್ವಗಳನ್ನು ಅನುಸರಿಸಿ, ಸಂವಿಧಾನ ಸಭೆಯ ಸದಸ್ಯರು ಬಹಳ ಮುಖ್ಯವಾದ ಪಾತ್ರವನ್ನು ನಿರ್ವಹಿಸಿದರು. 75 ವರ್ಷಗಳಿಂದ, ಭಾರತದ ಸಂವಿಧಾನವು ದೀಪಸ್ತಂಭದಂತೆ ನಮ್ಮನ್ನು ಮುನ್ನಡೆಸುತ್ತಿದೆ. ನಮ್ಮ ಸಂವಿಧಾನ ನಿರ್ಮಾತೃಗಳಾದ ಡಾ. ರಾಜೇಂದ್ರ ಪ್ರಸಾದ್, ಬಾಬಾಸಾಹೇಬ್ ಅಂಬೇಡ್ಕರ್, ಪಂಡಿತ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಂತಹ ಅನೇಕ ಮೇಧಾವಿಗಳು ಮತ್ತು ಮಹಾನ್ ನಾಯಕರು ಪ್ರಮುಖ ಪಾತ್ರ ವಹಿಸಿದರು. ನಮ್ಮ ಮಹಿಳೆಯರು ಸಹ ಗಣನೀಯ ಕೊಡುಗೆ ನೀಡಿದರು. ಹಂಸ ಮೆಹ್ತಾ ಮತ್ತು ದಾಕ್ಷಾಯಣಿ ವೇಲಾಯುಧನ್ ಅವರಂತಹ ಮೇಧಾವಿಗಳು ಭಾರತದ ಸಂವಿಧಾನವನ್ನು ಬಲಪಡಿಸುವಲ್ಲಿ ತಮ್ಮ ಪಾತ್ರವನ್ನು ವಹಿಸಿದರು. ಇಂದು, ಕೆಂಪು ಕೋಟೆಯ ಪ್ರಾಂಗಣದಿಂದ, ದೇಶಕ್ಕೆ ಮಾರ್ಗದರ್ಶನ ನೀಡಿದ ಈ ಸಂವಿಧಾನ ನಿರ್ಮಾತೃಗಳಿಗೆ ನಾನು ಗೌರವಯುತ ನಮನಗಳನ್ನು ಸಲ್ಲಿಸುತ್ತೇನೆ.

ನನ್ನ ಪ್ರೀತಿಯ ದೇಶಬಾಂಧವರೇ,

ಇಂದು, ನಾವು ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ 125 ನೇ ಜನ್ಮ ದಿನವನ್ನು ಆಚರಿಸುತ್ತಿದ್ದೇವೆ. ಭಾರತದ ಸಂವಿಧಾನಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ರಾಷ್ಟ್ರದ ಮೊದಲ ಮಹಾನ್ ವ್ಯಕ್ತಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ. 370 ನೇ ವಿಧಿಯ ಗೋಡೆಯನ್ನು ಒಡೆದಿರುವುದು ಮತ್ತು "ಒಂದು ರಾಷ್ಟ್ರ, ಒಂದು ಸಂವಿಧಾನ" ಎಂಬ ಮಂತ್ರದ ಸಾಕ್ಷಾತ್ಕಾರ ಸಂವಿಧಾನಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ನಾವು ಸಲ್ಲಿಸಿದ ನಿಜವಾದ ಗೌರವವಾಗಿದೆ. ಇಂದು ಕೆಂಪು ಕೋಟೆಯಲ್ಲಿ ಅನೇಕ ಗಣ್ಯ ಅತಿಥಿಗಳು ಇದ್ದಾರೆ, ದೂರದ ಪ್ರದೇಶಗಳ ಗ್ರಾಮ ಪಂಚಾಯತ್ ಸದಸ್ಯರು, "ಡ್ರೋನ್ ದೀದಿಯರು", "ಲಕ್ಷಾಧಿಪತಿ ದೀದಿಯರು", ಕ್ರೀಡಾಪಟುಗಳು ಮತ್ತು ರಾಷ್ಟ್ರದ ಜೀವನಕ್ಕೆ ಕೊಡುಗೆ ನೀಡಿದ ಇತರ ಗಣ್ಯ ವ್ಯಕ್ತಿಗಳು ಇಲ್ಲಿದ್ದಾರೆ. ಒಂದು ರೀತಿಯಲ್ಲಿ, ನನ್ನ ಕಣ್ಣ ಮುಂದೆ ಒಂದು ಮಿನಿ ಭಾರತವನ್ನೇ ನಾನು ನೋಡುತ್ತಿದ್ದೇನೆ ಮತ್ತು ವಿಶಾಲವಾದ ಭಾರತವು ತಂತ್ರಜ್ಞಾನದ ಮೂಲಕ ಕೆಂಪು ಕೋಟೆಯೊಂದಿಗೆ ಸಂಪರ್ಕ ಹೊಂದಿದೆ. ಸ್ವಾತಂತ್ರ್ಯದ ಈ ಮಹಾ ಹಬ್ಬದಂದು, ನನ್ನ ಎಲ್ಲಾ ದೇಶವಾಸಿಗಳಿಗೆ, ಪ್ರಪಂಚದಾದ್ಯಂತ ಇರುವ ಭಾರತ ಪ್ರೇಮಿಗಳಿಗೆ ಮತ್ತು ಎಲ್ಲೆಡೆ ಇರುವ ನಮ್ಮ ಸ್ನೇಹಿತರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ಸ್ನೇಹಿತರೇ,

ಪ್ರಕೃತಿ ನಮ್ಮೆಲ್ಲರನ್ನೂ ಪರೀಕ್ಷಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ನಾವು ಭೂಕುಸಿತಗಳು, ಮೇಘಸ್ಫೋಟಗಳು ಮತ್ತು ಅಸಂಖ್ಯಾತ ಇತರ ನೈಸರ್ಗಿಕ ವಿಕೋಪಗಳನ್ನು ಎದುರಿಸಿದ್ದೇವೆ. ಸಂತ್ರಸ್ತರಿಗೆ ನಮ್ಮ ಸಂತಾಪಗಳು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯಾಚರಣೆಗಳು, ಪರಿಹಾರ ಕಾರ್ಯಗಳು ಮತ್ತು ಪುನರ್ವಸತಿ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿವೆ.

ಸ್ನೇಹಿತರೇ,

ಇಂದಿನ ಆಗಸ್ಟ್ 15 ವಿಶೇಷ ಮಹತ್ವವನ್ನು ಹೊಂದಿದೆ. ಇಂದು ಕೆಂಪು ಕೋಟೆಯ ಪ್ರಾಂಗಣದಿಂದ ಆಪರೇಷನ್ ಸಿಂಧೂರದ ವೀರ ಯೋಧರಿಗೆ ನಮನ ಸಲ್ಲಿಸುವ ಅವಕಾಶ ದೊರೆತಿರುವುದು ನನಗೆ ತುಂಬಾ ಹೆಮ್ಮೆ ತಂದಿದೆ. ನಮ್ಮ ವೀರ ಯೋಧರು ಶತ್ರುಗಳನ್ನು ಅವರ ಕಲ್ಪನೆಗೂ ಮೀರಿ ಸದೆಬಡಿದಿದ್ದಾರೆ. ಏಪ್ರಿಲ್ 22 ರಂದು, ಭಯೋತ್ಪಾದಕರು ಗಡಿಯನ್ನು ದಾಟಿ ಪಹಲ್ಗಾಮ್‌ ನಲ್ಲಿ ಹತ್ಯಾಕಾಂಡವನ್ನು ನಡೆಸಿದರು, ಜನರ ಧರ್ಮದ ಬಗ್ಗೆ ಕೇಳಿ ಅವರನ್ನು ಕೊಂದರು, ಅವರ ಹೆಂಡತಿಯರ ಮುಂದೆ ಗಂಡಂದಿರಿಗೆ ಗುಂಡು ಹಾರಿಸಿದರು ಮತ್ತು ಅವರ ಮಕ್ಕಳ ಮುಂದೆ ತಂದೆಯನ್ನು ಕೊಂದರು. ಇಡೀ ದೇಶವು ಆಕ್ರೋಶಭರಿತವಾಯಿತು ಮತ್ತು ಇಡೀ ಜಗತ್ತು ಈ ಹತ್ಯಾಕಾಂಡದಿಂದ ಆಘಾತಕ್ಕೊಳಗಾಯಿತು.

ನನ್ನ ಪ್ರೀತಿಯ ದೇಶವಾಸಿಗಳೇ,

ಆಪರೇಷನ್ ಸಿಂಧೂರ ಆ ಆಕ್ರೋಶದ ಅಭಿವ್ಯಕ್ತಿಯಾಗಿತ್ತು. 22 ರಂದು ನಡೆದ ಘಟನೆಗಳ ನಂತರ, ನಾವು ನಮ್ಮ ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದೆವು - ತಂತ್ರವನ್ನು ನಿರ್ಧರಿಸಲು, ಗುರಿಯನ್ನು ಆಯ್ಕೆ ಮಾಡಲು ಮತ್ತು ಸಮಯವನ್ನು ಆಯ್ಕೆ ಮಾಡಲು ಸ್ವಾತಂತ್ರ್ಯ ನೀಡಿದೆವು ಮತ್ತು ನಮ್ಮ ಸೈನ್ಯವು ದಶಕಗಳಿಂದ ಸಂಭವಿಸದ ಕೆಲಸವನ್ನು ಸಾಧಿಸಿತು. ನೂರಾರು ಕಿಲೋಮೀಟರ್ ಶತ್ರು ಪ್ರದೇಶಕ್ಕೆ ನುಗ್ಗಿ, ಭಯೋತ್ಪಾದಕ ಕೇಂದ್ರ ಕಚೇರಿಗಳನ್ನು ನೆಲಸಮಗೊಳಿಸಿದರು, ಭಯೋತ್ಪಾದಕರ ನೆಲೆಗಳನ್ನು ಅವಶೇಷಗಳನ್ನಾಗಿ ಮಾಡಿದರು. ಪಾಕಿಸ್ತಾನಕ್ಕೆ ಇನ್ನೂ ನಿದ್ರೆ ಬಂದಿಲ್ಲ. ಪಾಕಿಸ್ತಾನದಲ್ಲಿನ ವಿನಾಶವು ಎಷ್ಟು ತೀವ್ರವಾಗಿದೆಯೆಂದರೆ, ಪ್ರತಿದಿನ ಹೊಸ ಬಹಿರಂಗಪಡಿಸುವಿಕೆಗಳು ಮತ್ತು ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಿವೆ.

ನನ್ನ ಪ್ರೀತಿಯ ದೇಶಬಾಂಧವರೇ,

ನಮ್ಮ ರಾಷ್ಟ್ರವು ಹಲವು ದಶಕಗಳಿಂದ ಭಯೋತ್ಪಾದನೆಯನ್ನು ಸಹಿಸಿಕೊಂಡಿದೆ. ದೇಶದ ಹೃದಯಕ್ಕೆ ಪದೇ ಪದೇ ಇರಿಯಲಾಗಿದೆ. ಈಗ, ನಾವು ಹೊಸ ಮಾನದಂಡವನ್ನು ಸ್ಥಾಪಿಸಿದ್ದೇವೆ: ಭಯೋತ್ಪಾದನೆಯನ್ನು ಪೋಷಿಸುವವರು ಮತ್ತು ಆಶ್ರಯ ನೀಡುವವರು ಮತ್ತು ಭಯೋತ್ಪಾದಕರಿಗೆ ಶಕ್ತಿ ನೀಡುವವರನ್ನು ಇನ್ನು ಮುಂದೆ ಪ್ರತ್ಯೇಕವಾಗಿ ನೋಡಲಾಗುವುದಿಲ್ಲ. ಅವರೆಲ್ಲರೂ ಮನುಕುಲದ ಸಮಾನ ಶತ್ರುಗಳು, ಅವರ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಈ ಪರಮಾಣು ಬೆದರಿಕೆಗಳನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ ಎಂದು ಭಾರತ ಈಗ ನಿರ್ಧರಿಸಿದೆ. ಇಷ್ಟು ದಿನ ನಡೆಯುತ್ತಿದ್ದ ಪರಮಾಣು ಬೆದರಿಕೆಯನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಮ್ಮ ಶತ್ರುಗಳು ಭವಿಷ್ಯದಲ್ಲಿ ಈ ಪ್ರಯತ್ನವನ್ನು ಮುಂದುವರಿಸಿದರೆ, ನಮ್ಮ ಸೈನ್ಯವು ತನ್ನದೇ ಆದ ನಿಯಮಗಳ ಮೇಲೆ, ಅದು ಆಯ್ಕೆ ಮಾಡುವ ಸಮಯದಲ್ಲಿ, ಅದು ಸೂಕ್ತವೆಂದು ಭಾವಿಸುವ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ ಮತ್ತು ಅದು ಆಯ್ಕೆ ಮಾಡುವ ಗುರಿಗಳನ್ನು ಗುರಿಯಾಗಿಸುತ್ತದೆ ಮತ್ತು ನಾವು ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತೇವೆ. ನಾವು ಸೂಕ್ತವಾದ ಮತ್ತು ಪ್ರಬಲ ಪ್ರತಿಕ್ರಿಯೆಯನ್ನು ನೀಡುತ್ತೇವೆ.

ನನ್ನ ಪ್ರೀತಿಯ ದೇಶಬಾಂಧವರೇ,

ಭಾರತ ಈಗ ನಿರ್ಧರಿಸಿದೆ - ರಕ್ತ ಮತ್ತು ನೀರು ಒಟ್ಟಿಗೆ ಹರಿಯುಲಾಗುವುದಿಲ್ಲ. ಸಿಂಧೂ ನದಿ ನೀರು ಒಪ್ಪಂದ ಎಷ್ಟು ಅನ್ಯಾಯ ಮತ್ತು ಏಕಪಕ್ಷೀಯವಾಗಿದೆ ಎಂಬುದನ್ನು ದೇಶದ ಜನರು ಈಗ ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ. ಭಾರತದಲ್ಲಿ ಹುಟ್ಟುವ ನದಿಗಳ ನೀರು ನಮ್ಮ ಶತ್ರುಗಳ ಜಮೀನುಗಳಿಗೆ ನೀರುಣಿಸುತ್ತಿದೆ, ಆದರೆ ನಮ್ಮದೇ ದೇಶದ ರೈತರು ಮತ್ತು ಮಣ್ಣು ಬಾಯಾರಿಕೆಯಲ್ಲಿಯೇ ಉಳಿದಿದೆ. ಕಳೆದ ಏಳು ದಶಕಗಳಿಂದ ನಮ್ಮ ರೈತರಿಗೆ ಊಹಿಸಲಾಗದ ನಷ್ಟವನ್ನುಂಟುಮಾಡಿರುವ ಒಪ್ಪಂದ ಇದಾಗಿತ್ತು. ಈಗ, ಭಾರತಕ್ಕೆ ನ್ಯಾಯಯುತವಾಗಿ ಸೇರಿರುವ ನೀರನ್ನು ಭಾರತಕ್ಕೆ ಮಾತ್ರ, ಭಾರತದ ರೈತರಿಗೆ ಮಾತ್ರ ಮೀಸಲಿಡಲಾಗುವುದು. ಭಾರತವು ದಶಕಗಳಿಂದ ಸಹಿಸಿಕೊಂಡಿರುವ ಸಿಂಧೂ ಒಪ್ಪಂದದ ಸ್ವರೂಪವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ. ನಮ್ಮ ರೈತರ ಹಿತದೃಷ್ಟಿಯಿಂದ ಮತ್ತು ರಾಷ್ಟ್ರದ ಹಿತದೃಷ್ಟಿಯಿಂದ ಈ ಒಪ್ಪಂದವು ನಮಗೆ ಸ್ವೀಕಾರಾರ್ಹವಲ್ಲ.

ನನ್ನ ಪ್ರೀತಿಯ ದೇಶವಾಸಿಗಳೇ,

ಅಸಂಖ್ಯಾತ ಜನರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ತಮ್ಮ ಇಡೀ ಯೌವನವನ್ನು ಸಮರ್ಪಿಸಿದರು, ತಮ್ಮ ಜೀವನವನ್ನು ಜೈಲುಗಳಲ್ಲಿ ಕಳೆದರು ಮತ್ತು ಗಲ್ಲು ಶಿಕ್ಷೆಯನ್ನು ಪಡೆದರು. ಇದಾವುದೂ ಅವರ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ಬದಲಾಗಿ ಭಾರತಮಾತೆಯ ಗೌರವಕ್ಕಾಗಿ, ಕೋಟ್ಯಂತರ ಜನರ ಸ್ವಾತಂತ್ರ್ಯಕ್ಕಾಗಿ, ಗುಲಾಮಗಿರಿಯ ಸರಪಳಿಗಳನ್ನು ಕಳಚುವುದಕ್ಕಾಗಿ ಮತ್ತು ಅವರ ಹೃದಯದಲ್ಲಿ ಇದ್ದದ್ದು ಒಂದೇ ಭಾವನೆ - ಘನತೆ.

ಸ್ನೇಹಿತರೇ,

ಗುಲಾಮಗಿರಿಯು ನಮ್ಮನ್ನು ಬಡವರನ್ನಾಗಿ ಮಾಡಿದ್ದಲ್ಲದೆ, ಅವಲಂಬಿತರನ್ನಾಗಿಯೂ ಮಾಡಿತು. ಇತರರ ಮೇಲಿನ ನಮ್ಮ ಅವಲಂಬನೆ ಹೆಚ್ಚುತ್ತಲೇ ಇತ್ತು. ಸ್ವಾತಂತ್ರ್ಯದ ನಂತರ, ಕೋಟ್ಯಂತರ ಜನರಿಗೆ ಆಹಾರ ನೀಡುವುದು ದೊಡ್ಡ ಸವಾಲಾಗಿತ್ತು ಎಂದು ನಮಗೆಲ್ಲರಿಗೂ ತಿಳಿದಿದೆ. ಮತ್ತು ದೇಶದ ಕಣಜಗಳನ್ನು ತುಂಬಲು ಶ್ರಮಿಸಿದವರು ನನ್ನ ದೇಶದ ರೈತರು ಮಾತ್ರ. ಅವರು ದೇಶವನ್ನು ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡಿದರು. ಯಾವುದೇ ರಾಷ್ಟ್ರಕ್ಕೆ, ಇಂದಿಗೂ ಸಹ, ಸ್ವಾಭಿಮಾನದ ಬಹುದೊಡ್ಡ ಅಳತೆಯೆಂದರೆ ಅದರ ಸ್ವಾವಲಂಬನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ವಿಕಸಿತ ಭಾರತದ ಅಡಿಪಾಯವೂ ಸ್ವಾವಲಂಬಿ ಭಾರತವೇ ಆಗಿದೆ. ಒಂದು ರಾಷ್ಟ್ರವು ಇತರರ ಮೇಲೆ ಹೆಚ್ಚು ಅವಲಂಬಿತವಾದಷ್ಟೂ ಅದರ ಸ್ವಾತಂತ್ರ್ಯವು ಹೆಚ್ಚು ಪ್ರಶ್ನಾರ್ಹವಾಗುತ್ತದೆ. ಅವಲಂಬನೆಯು ಅಭ್ಯಾಸವಾದಾಗ ದುರದೃಷ್ಟ ಎದುರಾಗುತ್ತದೆ, ನಾವು ಸ್ವಾವಲಂಬನೆಯನ್ನು ತ್ಯಜಿಸಿ ಇತರರ ಮೇಲೆ ಅವಲಂಬಿತರಾಗುವುದು ನಮ್ಮ ಅರಿವಿಗೇ ಬರುವುದಿಲ್ಲ. ಈ ಅಭ್ಯಾಸವು ಅಪಾಯದಿಂದ ಕೂಡಿದೆ, ಆದ್ದರಿಂದ ಸ್ವಾವಲಂಬಿಯಾಗಲು ನಾವು ಪ್ರತಿ ಕ್ಷಣವೂ ಜಾಗರೂಕರಾಗಿರಬೇಕು.

ನನ್ನ ಪ್ರೀತಿಯ ದೇಶಬಾಂಧವರೇ,

ಸ್ವಾವಲಂಬನೆ ಎಂಬುದು ಕೇವಲ ಆಮದು ಮತ್ತು ರಫ್ತಿಗೆ ಅಥವಾ ರೂಪಾಯಿ, ಪೌಂಡ್ ಮತ್ತು ಡಾಲರ್‌ ಗಳಿಗೆ ಸೀಮಿತವಾಗಿಲ್ಲ. ಇದರ ಅರ್ಥ ಅಷ್ಟೊಂದು ಸೀಮಿತವಾದುದಲ್ಲ. ಸ್ವಾವಲಂಬನೆ  ನಮ್ಮ ಸಾಮರ್ಥ್ಯಕ್ಕೆ ಸಂಬಂಧಿಸಿದೆ ಮತ್ತು ಸ್ವಾವಲಂಬನೆ ಕಡಿಮೆಯಾಗಲು ಪ್ರಾರಂಭಿಸಿದಾಗ, ಸಾಮರ್ಥ್ಯವು ನಿರಂತರವಾಗಿ ಕುಸಿಯುತ್ತದೆ. ಆದ್ದರಿಂದ, ನಮ್ಮ ಸಾಮರ್ಥ್ಯವನ್ನು ಸಂರಕ್ಷಿಸಲು,   ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು, ಸ್ವಾವಲಂಬಿಯಾಗಿರುವುದು ಕಡ್ಡಾಯವಾಗಿದೆ.

ಸ್ನೇಹಿತರೇ,

ಆಪರೇಷನ್ ಸಿಂಧೂರದಲ್ಲಿ ನಾವು 'ಮೇಡ್‌ ಇನ್‌ ಇಂಡಿಯಾ' ಎಂಬ ಅದ್ಭುತವನ್ನು ಕಂಡಿದ್ದೇವೆ. ನಮ್ಮ ಬಳಿ ಯಾವ ಶಸ್ತ್ರಾಸ್ತ್ರಗಳು ಮತ್ತು ಸಾಮರ್ಥ್ಯಗಳಿವೆ, ಯಾವ ಶಕ್ತಿ ಅವರನ್ನು ಕಣ್ಣು ಮಿಟುಕಿಸುವುದರೊಳಗೆ ನಾಶಮಾಡುತ್ತಿದೆ ಎಂಬುದರ ಬಗ್ಗೆ ಶತ್ರುಗಳಿಗೆ ಯಾವುದೇ ಕಲ್ಪನೆಯೂ ಇರಲಿಲ್ಲ. ನಾವು ಸ್ವಾವಲಂಬಿಗಳಲ್ಲದಿದ್ದರೆ, ನಾವು ಆಪರೇಷನ್ ಸಿಂಧೂರ್ ಅನ್ನು ಇಷ್ಟು ವೇಗವಾಗಿ ಕಾರ್ಯಗತಗೊಳಿಸಲಾಗುತ್ತಿತ್ತೇ ಎಂಬುದನ್ನು ಯೋಚಿಸಿ? ನಮಗೆ ಯಾರು ಸರಬರಾಜು ಮಾಡಬಹುದು, ನಮಗೆ ಅಗತ್ಯವಿರುವ ಉಪಕರಣಗಳು ಸಿಗುತ್ತವೆಯೇ ಅಥವಾ ಇಲ್ಲವೇ ಎಂಬ ಚಿಂತೆಗಳು ನಮ್ಮನ್ನು ಕಾಡುತ್ತಿದ್ದವು. ಆದರೆ 'ಮೇಡ್ ಇನ್ ಇಂಡಿಯಾ'ದ ಶಕ್ತಿ ನಮ್ಮ ಕೈಯಲ್ಲಿ, ನಮ್ಮ ಪಡೆಗಳ ಕೈಯಲ್ಲಿದ್ದ ಕಾರಣ, ಅವರು ಯಾವುದೇ ಚಿಂತೆಯಿಲ್ಲದೆ, ಯಾವುದೇ ಅಡೆತಡೆಯಿಲ್ಲದೆ ಮತ್ತು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ಶೌರ್ಯವನ್ನು ಪ್ರದರ್ಶಿಸಿದರು. ಇಂದು ನಾವು ನೋಡುತ್ತಿರುವ ಫಲಿತಾಂಶವು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗಾಗಿ ಕಳೆದ ಹತ್ತು ವರ್ಷಗಳಿಂದ ನಮ್ಮ ನಿರಂತರ ಅಭಿಯಾನದ ಫಲಿತಾಂಶವಾಗಿದೆ.

ಸ್ನೇಹಿತರೇ,

ಇನ್ನೊಂದು ವಿಷಯದ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನು ಬಯಸುತ್ತೇನೆ. 21 ನೇ ಶತಮಾನವು ತಂತ್ರಜ್ಞಾನ ಆಧಾರಿತ ಶತಮಾನ ಎಂಬುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ ಮತ್ತು ಯಾವ ದೇಶವು ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿದೆಯೋ ಅದು ಅಭಿವೃದ್ಧಿಯ ಉತ್ತುಂಗವನ್ನು ಮುಟ್ಟಿದೆ, ಶಿಖರವನ್ನು ತಲುಪಿದೆ ಮತ್ತು ಆರ್ಥಿಕ ಶಕ್ತಿಯ ಹೊಸ ಆಯಾಮಗಳನ್ನು ಸಾಧಿಸಿದೆ ಎಂದು ಇತಿಹಾಸ ಹೇಳುತ್ತದೆ. ನಾವು ತಂತ್ರಜ್ಞಾನದ ವಿವಿಧ ಆಯಾಮಗಳ ಬಗ್ಗೆ ಮಾತನಾಡುವಾಗ, ನಾನು ಅರೆವಾಹಕಗಳತ್ತ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ನಾನು ಇಲ್ಲಿ ಕೆಂಪು ಕೋಟೆಯ ಆವರಣದಲ್ಲಿ ಯಾವುದೇ ವ್ಯಕ್ತಿ ಅಥವಾ ಸರ್ಕಾರವನ್ನು ಟೀಕಿಸಲು ನಿಂತಿಲ್ಲ, ಅಥವಾ ನಾನು ಹಾಗೆ ಮಾಡಲು ಬಯಸುವುದಿಲ್ಲ. ಆದರೆ ನಮ್ಮ ದೇಶದ ಯುವಜನರು ಇದನ್ನು ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ನಮ್ಮ ದೇಶದಲ್ಲಿ, ಅರೆವಾಹಕಗಳಿಗೆ ಸಂಬಂಧಿಸಿದ ಕಡತಗಳು 50-60 ವರ್ಷಗಳ ಹಿಂದೆ ಚಲಿಸಲು ಪ್ರಾರಂಭಿಸಿದವು. ಅರೆವಾಹಕ ಕಾರ್ಖಾನೆಯ ಕಲ್ಪನೆಯು ಆಗ ಪ್ರಾರಂಭವಾಯಿತು. ಇಂದು, ಅರೆವಾಹಕಗಳು ಜಾಗತಿಕ ಶಕ್ತಿಯಾಗಿವೆ, ಆದರೆ 50-60 ವರ್ಷಗಳ ಹಿಂದೆ, ಈ ಕಲ್ಪನೆಯನ್ನು ನಿಲ್ಲಿಸಲಾಯಿತು, ವಿಳಂಬಗೊಳಿಸಲಾಯಿತು ಮತ್ತು ಮುಂದೂಡಲಾಯಿತು ಎಂದು ತಿಳಿದರೆ ನನ್ನ ಯುವ ಸ್ನೇಹಿತರು ಆಘಾತಕ್ಕೊಳಗಾಗುತ್ತಾರೆ. ಅರೆವಾಹಕಗಳ ಪರಿಕಲ್ಪನೆಯೇ ರದ್ದುಗೊಂಡಿತು. ನಾವು 50-60 ವರ್ಷಗಳನ್ನು ವ್ಯರ್ಥ ಮಾಡಿದ್ದೇವೆ. ಏತನ್ಮಧ್ಯೆ, ಅನೇಕ ದೇಶಗಳು ಅರೆವಾಹಕಗಳಲ್ಲಿ ಪರಿಣತಿ ಪಡೆದವು ಮತ್ತು ಜಗತ್ತಿನಲ್ಲಿ ತಮ್ಮ ಶಕ್ತಿಯನ್ನು ಸ್ಥಾಪಿಸಿದವು.

ಸ್ನೇಹಿತರೇ,

ಇಂದು ನಾವು ಆ ಹೊರೆಯಿಂದ ಮುಕ್ತರಾಗಿದ್ದೇವೆ ಮತ್ತು ಅರೆವಾಹಕಗಳ ಕೆಲಸವನ್ನು ಮಿಷನ್ ಮೋಡ್‌ ನಲ್ಲಿ ಮುಂದುವರಿಸಿದ್ದೇವೆ. ಆರು ವಿಭಿನ್ನ ಅರೆವಾಹಕ ಘಟಕಗಳು ವಾಸ್ತವವಾಗುತ್ತಿವೆ ಮತ್ತು ನಾವು ನಾಲ್ಕು ಹೊಸ ಘಟಕಗಳಿಗೆ ಹಸಿರು ನಿಶಾನೆ ತೋರಿಸಿದ್ದೇವೆ.

ನನ್ನ ದೇಶವಾಸಿಗಳಿಗೆ, ವಿಶೇಷವಾಗಿ ಯುವಜನರಿಗೆ ಮತ್ತು ಭಾರತದ ತಂತ್ರಜ್ಞಾನದ ಶಕ್ತಿಯನ್ನು ಅರ್ಥಮಾಡಿಕೊಳ್ಳುವ ಪ್ರಪಂಚದಾದ್ಯಂತದವರಿಗೆ, ನಾನು ಹೇಳುವುದೇನೆಂದರೆ - ಈ ವರ್ಷದ ಅಂತ್ಯದ ವೇಳೆಗೆ, ಭಾರತದ ಜನರಿಂದ ಭಾರತದಲ್ಲಿ ತಯಾರಿಸಿದ 'ಮೇಡ್ ಇನ್ ಇಂಡಿಯಾ' ಚಿಪ್ ಮಾರುಕಟ್ಟೆಯಲ್ಲಿ ಲಭ್ಯವಿರುತ್ತದೆ. ನಾನು ಇನ್ನೊಂದು ಉದಾಹರಣೆ ನೀಡುತ್ತೇನೆ. ಇಂಧನ ಕ್ಷೇತ್ರದಲ್ಲಿ, ಪೆಟ್ರೋಲ್, ಡೀಸೆಲ್ ಮತ್ತು ಅನಿಲಕ್ಕಾಗಿ ನಾವು ಅನೇಕ ದೇಶಗಳನ್ನು ಅವಲಂಬಿಸಿದ್ದೇವೆ ಎಂದು ನಮಗೆಲ್ಲರಿಗೂ ತಿಳಿದಿದೆ, ಅವುಗಳನ್ನು ಖರೀದಿಸಲು ನಾವು ಲಕ್ಷಾಂತರ ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೇವೆ. ದೇಶವನ್ನು ಇಂಧನದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು ಅತ್ಯಗತ್ಯ. ನಾವು ಈ ಬಗ್ಗೆ ಸಂಕಲ್ಪವನ್ನು ಮಾಡಿದೆವು ಮತ್ತು ಕಳೆದ 11 ವರ್ಷಗಳಲ್ಲಿ, ಸೌರಶಕ್ತಿಯು ಮೂವತ್ತು ಪಟ್ಟು ಹೆಚ್ಚಾಗಿದೆ. ನಾವು ಶುದ್ಧ ಇಂಧನವನ್ನು ಪಡೆಯಲು ಜಲವಿದ್ಯುತ್ ಅನ್ನು ವಿಸ್ತರಿಸಲು ಹೊಸ ಅಣೆಕಟ್ಟುಗಳನ್ನು ನಿರ್ಮಿಸುತ್ತಿದ್ದೇವೆ. ಮಿಷನ್ ಗ್ರೀನ್ ಹೈಡ್ರೋಜನ್‌ ನಲ್ಲಿ ಭಾರತ ಇಂದು ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿದೆ. ಇಂಧನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಭಾರತವು ಪರಮಾಣು ಶಕ್ತಿಯಲ್ಲಿ ಪ್ರಮುಖ ಉಪಕ್ರಮಗಳನ್ನು ಸಹ ಕೈಗೊಳ್ಳುತ್ತಿದೆ. ಪರಮಾಣು ಇಂಧನ ಕ್ಷೇತ್ರದಲ್ಲಿ, 10 ಹೊಸ ರಿಯಾಕ್ಟರ್‌ ಗಳು ವೇಗವಾಗಿ ಪ್ರಗತಿ ಸಾಧಿಸುತ್ತಿವೆ. 2047 ರ ಹೊತ್ತಿಗೆ, ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ ಹೊತ್ತಿಗೆ - 'ವಿಕಸಿತ ಭಾರತ'ದ ಸಂಕಲ್ಪವನ್ನು ಸಾಧಿಸುವ ಗುರಿಯನ್ನು ನಾವು ಹೊಂದಿದ್ದೇವೆ - ನಾವು ನಮ್ಮ ಪರಮಾಣು ಇಂಧನ ಸಾಮರ್ಥ್ಯವನ್ನು ಹತ್ತು ಪಟ್ಟು ಹೆಚ್ಚಿಸುವ ಸಂಕಲ್ಪದೊಂದಿಗೆ ಮುಂದುವರಿಯುತ್ತಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಸುಧಾರಣೆಗಳು ನಿರಂತರ ಪ್ರಕ್ರಿಯೆ; ಸಮಯ ಮತ್ತು ಸಂದರ್ಭಗಳ ಬೇಡಿಕೆಗೆ ಅನುಗುಣವಾಗಿ ಸುಧಾರಣೆಗಳನ್ನು ಮಾಡಬೇಕು. ಪರಮಾಣು ಇಂಧನ ಕ್ಷೇತ್ರದಲ್ಲಿ, ನಾವು ಪ್ರಮುಖ ಸುಧಾರಣೆಗಳನ್ನು ಮಾಡಿದ್ದೇವೆ. ನಾವು ಈಗ ಖಾಸಗಿ ವಲಯಕ್ಕೂ ಪರಮಾಣು ಶಕ್ತಿಯ ಬಾಗಿಲುಗಳನ್ನು ತೆರೆದಿದ್ದೇವೆ; ನಾವು ನಮ್ಮ ಸಾಮರ್ಥ್ಯಗಳನ್ನು ಒಂದುಗೂಡಿಸಲು ಬಯಸುತ್ತೇವೆ.

ನನ್ನ ಪ್ರೀತಿಯ ದೇಶಬಾಂಧವರೇ,

ಇಂದು ಜಗತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವಾಗ, ಭಾರತವು 2030 ರ ವೇಳೆಗೆ ಶೇ.50 ರಷ್ಟು ಶುದ್ಧ ಇಂಧನವನ್ನು ಸಾಧಿಸಲು ಸಂಕಲ್ಪ ಮಾಡಿದೆ ಎಂದು ನಾನು ಜಗತ್ತಿಗೆ ಹೇಳಲು ಬಯಸುತ್ತೇನೆ. ಅದು 2030 ರ ವೇಳೆಗೆ ನಮ್ಮ ಗುರಿಯಾಗಿತ್ತು. ನನ್ನ ದೇಶವಾಸಿಗಳ ಸಾಮರ್ಥ್ಯವದಿಂದಾಗಿ, ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಸಂಕಲ್ಪದಿಂದಾಗಿ - ನಾವು 2025 ರಲ್ಲಿಯೇ ಶೇ.50 ರಷ್ಟು ಶುದ್ಧ ಇಂಧನ ಗುರಿಯನ್ನು ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮೊದಲೇ ಸಾಧಿಸಿದ್ದೇವೆ. ಏಕೆಂದರೆ ನಾವು ಪ್ರಕೃತಿಯ ಬಗ್ಗೆ ಎಷ್ಟು ಜವಾಬ್ದಾರರೋ ಅಷ್ಟೇ ಸಂವೇದನಾಶೀಲರಾಗಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಬಜೆಟ್‌ ನ ಬಹುಭಾಗವನ್ನು ಪೆಟ್ರೋಲ್, ಡೀಸೆಲ್, ಅನಿಲ ಇತ್ಯಾದಿಗಳನ್ನು ತರಲು ಖರ್ಚು ಮಾಡಲಾಗಿದೆ. ಲಕ್ಷಾಂತರ ಕೋಟಿ ರೂಪಾಯಿಗಳು ವ್ಯರ್ಥವಾಗಿವೆ. ನಾವು ಇಂಧನದ ಮೇಲೆ ಮತ್ತೊಬ್ಬರ ಮೇಲೆ ಅವಲಂಬಿತವಾಗಿಲ್ಲದಿದ್ದರೆ, ಆ ಹಣವನ್ನು ನನ್ನ ದೇಶದ ಯುವಕರ ಭವಿಷ್ಯಕ್ಕಾಗಿ ಬಳಸಲಾಗುತ್ತಿತ್ತು, ಆ ಹಣವನ್ನು ನನ್ನ ದೇಶದ ಬಡವರು ಬಡತನದ ವಿರುದ್ಧ ಹೋರಾಡಲು ಬಳಸಲಾಗುತ್ತಿತ್ತು, ಆ ಹಣವನ್ನು ನನ್ನ ದೇಶದ ರೈತರ ಕಲ್ಯಾಣಕ್ಕಾಗಿ ಬಳಸಲಾಗುತ್ತಿತ್ತು, ಆ ಹಣವನ್ನು ನನ್ನ ದೇಶದ ಹಳ್ಳಿಗಳ ಪರಿಸ್ಥಿತಿಯನ್ನು ಬದಲಾಯಿಸಲು ಬಳಸಲಾಗುತ್ತಿತ್ತು, ಆದರೆ ನಾವು ಅದನ್ನು ವಿದೇಶಗಳಿಗೆ ನೀಡಬೇಕಾಗಿತ್ತು. ಈಗ ನಾವು ಸ್ವಾವಲಂಬಿಗಳಾಗುವತ್ತ ಕೆಲಸ ಮಾಡುತ್ತಿದ್ದೇವೆ. ದೇಶವನ್ನು ಅಭಿವೃದ್ಧಿಪಡಿಸಲು, ನಾವು ಈಗ 'ಸಮುದ್ರ ಮಂಥನ'ದತ್ತ  ಸಾಗುತ್ತಿದ್ದೇವೆ. ನಮ್ಮ ಸಮುದ್ರ ಮಂಥನವನ್ನು ಮುಂದಕ್ಕೆ ತೆಗೆದುಕೊಂಡು, ತೈಲ ನಿಕ್ಷೇಪಗಳು, ಸಮುದ್ರದ ಅಡಿಯಲ್ಲಿ ಅನಿಲ ನಿಕ್ಷೇಪಗಳನ್ನು ಹುಡುಕುವತ್ತ ನಾವು ಮಿಷನ್ ಮೋಡ್‌ ನಲ್ಲಿ ಕೆಲಸ ಮಾಡಲು ಬಯಸುತ್ತೇವೆ ಮತ್ತು ಆದ್ದರಿಂದ ಭಾರತವು ರಾಷ್ಟ್ರೀಯ ಆಳ ಜಲ ಪರಿಶೋಧನಾ ಮಿಷನ್ ಅನ್ನು ಪ್ರಾರಂಭಿಸಲಿದೆ. ಇಂಧನ ಸ್ವತಂತ್ರರಾಗಲು ಇದು ನಮ್ಮ ಪ್ರಮುಖ ಘೋಷಣೆಯಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ಇಡೀ ಜಗತ್ತು ನಿರ್ಣಾಯಕ ಖನಿಜಗಳ ಬಗ್ಗೆ ಬಹಳ ಜಾಗರೂಕವಾಗಿದೆ, ಜನರು ಅವುಗಳ ಸಾಮರ್ಥ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದ್ದಾರೆ. ನಿನ್ನೆಯವರೆಗೆ ಹೆಚ್ಚು ಗಮನ ಸೆಳೆಯದ ವಿಷಯ ಇಂದು ಚರ್ಚೆಯ ವಿಷಯವಾಗಿದೆ. ನಿರ್ಣಾಯಕ ಖನಿಜಗಳಲ್ಲಿ ಸ್ವಾವಲಂಬನೆ ನಮಗೂ ಬಹಳ ಅವಶ್ಯಕವಾಗಿದೆ. ಇಂಧನ ವಲಯ, ಕೈಗಾರಿಕಾ ವಲಯ, ರಕ್ಷಣಾ ವಲಯ ಅಥವಾ ಯಾವುದೇ ಇತರ ತಂತ್ರಜ್ಞಾನ ವಲಯವಾಗಿರಲಿ, ಇಂದು ನಿರ್ಣಾಯಕ ಖನಿಜಗಳು ತಂತ್ರಜ್ಞಾನದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಆದ್ದರಿಂದ ನಾವು ರಾಷ್ಟ್ರೀಯ ನಿರ್ಣಾಯಕ ಮಿಷನ್ ಅನ್ನು ಪ್ರಾರಂಭಿಸಿದ್ದೇವೆ, 1200 ಕ್ಕೂ ಹೆಚ್ಚು ಸ್ಥಳಗಳಲ್ಲಿ ಪರಿಶೋಧನಾ ಅಭಿಯಾನಗಳು ನಡೆಯುತ್ತಿವೆ ಮತ್ತು ನಿರ್ಣಾಯಕ ಖನಿಜಗಳಲ್ಲಿಯೂ ನಾವು ಸ್ವಾವಲಂಬಿಗಳಾಗುವತ್ತ ಸಾಗುತ್ತಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ದೇಶದ ಪ್ರತಿಯೊಬ್ಬ ನಾಗರಿಕರೂ ಬಾಹ್ಯಾಕಾಶ ಕ್ಷೇತ್ರದ ಅದ್ಭುತಗಳನ್ನು ನೋಡುತ್ತಿದ್ದಾರೆ ಮತ್ತು ಹೆಮ್ಮೆಯಿಂದ ಬೀಗುತ್ತಿದ್ದಾರೆ ಮತ್ತು ನಮ್ಮ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶ ಕೇಂದ್ರದಿಂದ ಹಿಂತಿರುಗಿದ್ದಾರೆ. ಅವರು ಕೆಲವೇ ದಿನಗಳಲ್ಲಿ ಭಾರತಕ್ಕೂ ಬರುತ್ತಿದ್ದಾರೆ. ನಾವು ಬಾಹ್ಯಾಕಾಶದಲ್ಲಿ ಆತ್ಮನಿರ್ಭರ ಭಾರತ್ ಗಗನಯಾನಕ್ಕೂ ಸಿದ್ಧತೆ ನಡೆಸುತ್ತಿದ್ದೇವೆ. ನಮ್ಮದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ಇತ್ತೀಚೆಗೆ ಬಾಹ್ಯಾಕಾಶದಲ್ಲಿ ಮಾಡಲಾದ ಸುಧಾರಣೆಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ, ನನ್ನ ದೇಶದ 300 ಕ್ಕೂ ಹೆಚ್ಚು ನವೋದ್ಯಮಗಳು ಈಗ ಬಾಹ್ಯಾಕಾಶ ವಲಯದವೊಂದರಲ್ಲಿಯೇ ಕಾರ್ಯನಿರ್ವಹಿಸುತ್ತಿವೆ ಮತ್ತು ಸಾವಿರಾರು ಯುವಜನರು ಆ 300 ನವೋದ್ಯಮಗಳಲ್ಲಿ ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಇದು ನನ್ನ ದೇಶದ ಯುವಜನರ ಶಕ್ತಿ ಮತ್ತು ಇದು ನಮ್ಮ ದೇಶದ ಯುವಜನರ ಮೇಲಿನ ನಮ್ಮ ನಂಬಿಕೆ.

ನನ್ನ ಪ್ರೀತಿಯ ದೇಶಬಾಂಧವರೇ,

2047 ರಲ್ಲಿ ನಾವು 100 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುವ ಸಂದರ್ಭದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸಲು 140 ಕೋಟಿ ಭಾರತೀಯರು ಪೂರ್ಣ ಸಾಮರ್ಥ್ಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಈ ಸಂಕಲ್ಪವನ್ನು ಪೂರೈಸಲು, ಭಾರತ ಇಂದು ಪ್ರತಿಯೊಂದು ವಲಯದಲ್ಲಿ ಆಧುನಿಕ ಪರಿಸರ ವ್ಯವಸ್ಥೆಯನ್ನು ರಚಿಸುತ್ತಿದೆ ಮತ್ತು ಆಧುನಿಕ ಪರಿಸರ ವ್ಯವಸ್ಥೆಯು ನಮ್ಮ ದೇಶವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಇಂದು, ಕೆಂಪು ಕೋಟೆಯ ಪ್ರಾಂಗಣದಿಂದ, ನನ್ನ ದೇಶದ ಯುವ ವಿಜ್ಞಾನಿಗಳಿಗೆ, ನನ್ನ ಪ್ರತಿಭಾನ್ವಿತ ಯುವಜನತೆಗೆ, ನನ್ನ ಎಂಜಿನಿಯರ್‌ ಗಳು ಮತ್ತು ವೃತ್ತಿಪರರಿಗೆ ಮತ್ತು ಸರ್ಕಾರದ ಪ್ರತಿಯೊಂದು ಇಲಾಖೆಗೆ ನನ್ನ ಮನವಿ. ನಮ್ಮ ಮೇಡ್ ಇನ್ ಇಂಡಿಯಾ ಫೈಟರ್ ಜೆಟ್‌ ಗಳಿಗೆ ಜೆಟ್ ಎಂಜಿನ್ ನಮ್ಮದಾಗಿರಬೇಕೇ ಅಥವಾ ಬೇಡವೇ? ನಮ್ಮನ್ನು ವಿಶ್ವದ ಫಾರ್ಮಾ ಎಂದು ಪರಿಗಣಿಸಲಾಗುತ್ತದೆ. ಲಸಿಕೆಗಳ ಕ್ಷೇತ್ರದಲ್ಲಿ ನಾವು ಹೊಸ ದಾಖಲೆಗಳನ್ನು ಸ್ಥಾಪಿಸುತ್ತಿದ್ದೇವೆ, ಆದರೆ ಸಂಶೋಧನೆ ಮತ್ತು ಅಭಿವೃದ್ಧಿಗೆ ನಾವು ಹೆಚ್ಚಿನ ಶಕ್ತಿಯನ್ನು ವ್ಯಯಿಸುವುದು ಇಂದಿನ ಅಗತ್ಯವಲ್ಲವೇ, ನಮಗೆ ನಮ್ಮದೇ ಆದ ಪೇಟೆಂಟ್‌ ಗಳು ಇರಬೇಕು, ಮನುಕುಲದ ಕಲ್ಯಾಣಕ್ಕಾಗಿ ಅಗ್ಗದ ಮತ್ತು ಅತ್ಯಂತ ಪರಿಣಾಮಕಾರಿ ಔಷಧಿಗಳನ್ನು ನಾವು ಸಂಶೋಧಿಸಬೇಕು ಮತ್ತು ಬಿಕ್ಕಟ್ಟಿನ ಸಮಯದಲ್ಲಿ, ಇವು ಯಾವುದೇ ಅಡ್ಡಪರಿಣಾಮಗಳಿಲ್ಲದೆ ಮನುಕುಲದ ಕಲ್ಯಾಣಕ್ಕೆ ಉಪಯುಕ್ತವಾಗಬೇಕು. ಭಾರತ ಸರ್ಕಾರವು ಬಯೋಇ3 ನೀತಿಯನ್ನು ರೂಪಿಸಿದೆ. ದೇಶದ ಯುವಜನರು ಬಯೋಇ3 ನೀತಿಯನ್ನು ಅಧ್ಯಯನ ಮಾಡಬೇಕು ಮತ್ತು ಮುಂದಿನ ಹೆಜ್ಜೆ ಇಡಬೇಕೆಂದು ನಾನು ವಿನಂತಿಸುತ್ತೇನೆ. ನಾವು ದೇಶದ ಭವಿಷ್ಯವನ್ನು ಬದಲಾಯಿಸಬೇಕಾಗಿದೆ ಮತ್ತು ನಮಗೆ ನಿಮ್ಮ ಬೆಂಬಲ ಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು ಐಟಿ ಯುಗ, ನಮಗೆ ಡೇಟಾದ ಶಕ್ತಿ ಇದೆ, ಅದು ಇಂದಿನ ಅಗತ್ಯವಲ್ಲವೇ? ಆಪರೇಟಿಂಗ್ ಸಿಸ್ಟಮ್‌ ಗಳಿಂದ ಸೈಬರ್ ಭದ್ರತೆಯವರೆಗೆ, ಡೀಪ್‌ ಟೆಕ್‌ ನಿಂದ ಕೃತಕ ಬುದ್ಧಿಮತ್ತೆಯವರೆಗೆ, ಎಲ್ಲವೂ ನಮ್ಮದೇ ಆಗಿರಬೇಕು, ಅದರ ಮೇಲೆ ನಮ್ಮ ಸ್ವಂತ ಜನರ ಶಕ್ತಿಯನ್ನು ಕೇಂದ್ರೀಕರಿಸಬೇಕು, ನಾವು ಜಗತ್ತಿಗೆ ಅವರ ಸಾಮರ್ಥ್ಯಗಳ ಶಕ್ತಿಯನ್ನು ಪರಿಚಯಿಸಬೇಕು.

ಸ್ನೇಹಿತರೇ,

ಇಂದು ಅದು ಸಾಮಾಜಿಕ ಮಾಧ್ಯಮವಾಗಲಿ ಅಥವಾ ಯಾವುದೇ ಇತರ ವೇದಿಕೆಯಾಗಲಿ, ನಾವು ವಿಶ್ವದ ವೇದಿಕೆಯಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮದೇ ಆದ ಯುಪಿಐ ವೇದಿಕೆ ಇಂದು ಜಗತ್ತನ್ನು ಅಚ್ಚರಿಗೊಳಿಸುತ್ತಿದೆ ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ. ನಮಗೆ ಸಾಮರ್ಥ್ಯವಿದೆ; ಭಾರತವೊಂದೇ ಯುಪಿಐ ಮೂಲಕ ಶೇ.50 ನೈಜ ಸಮಯದ ವಹಿವಾಟುಗಳನ್ನು ಮಾಡುತ್ತಿದೆ. ಇದರರ್ಥ ಶಕ್ತಿ. ಅದು ಸೃಜನಶೀಲ ಜಗತ್ತು, ಸಾಮಾಜಿಕ ಮಾಧ್ಯಮ ಅಥವಾ ಈ ಯಾವುದೇ ವೇದಿಕೆಯಾಗಿರಲಿ, ನನ್ನ ದೇಶದ ಯುವಜನರಿಗೆ ನಾನು ಸವಾಲು ಹಾಕುತ್ತೇನೆ, ಬನ್ನಿ, ನಮಗೆ ನಮ್ಮದೇ ಆದ ವೇದಿಕೆಗಳು ಏಕೆ ಇರಬಾರದು, ನಾವು ಇತರರನ್ನು ಏಕೆ ಅವಲಂಬಿಸಬೇಕು, ಭಾರತದ ಸಂಪತ್ತು ಏಕೆ ಹೊರಬರಬೇಕು ಮತ್ತು ನಿಮ್ಮ ಸಾಮರ್ಥ್ಯದಲ್ಲಿ ನನಗೆ ನಂಬಿಕೆ ಇದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ಇಂಧನಕ್ಕಾಗಿ ಜಗತ್ತಿನ ಮೇಲೆ ಅವಲಂಬಿತರಾಗಿರುವಂತೆಯೇ, ರಸಗೊಬ್ಬರಗಳಿಗಾಗಿಯೂ ಸಹ ನಾವು ಜಗತ್ತನ್ನು ಅವಲಂಬಿಸಬೇಕಾಗಿರುವುದು ದೇಶದ ದುರದೃಷ್ಟ. ನನ್ನ ದೇಶದ ರೈತರು ರಸಗೊಬ್ಬರಗಳನ್ನು ಸರಿಯಾಗಿ ಬಳಸುವ ಮೂಲಕ ಭೂಮಿ ತಾಯಿಗೆ ಸೇವೆ ಸಲ್ಲಿಸಬಹುದು. ನಾವು ವಿವೇಚನೆಯಿಲ್ಲದೆ ಬಳಸುವ ಮೂಲಕ ಭೂಮಿ ತಾಯಿಗೆ ಬಹಳಷ್ಟು ಹಾನಿ ಮಾಡುತ್ತಿದ್ದೇವೆ. ಆದರೆ ಅದೇ ಸಮಯದಲ್ಲಿ, ದೇಶದ ಯುವಜನರಿಗೆ, ದೇಶದ ಉದ್ಯಮಕ್ಕೆ, ದೇಶದ ಖಾಸಗಿ ವಲಯಕ್ಕೆ ನಾನು ಹೇಳಲು ಬಯಸುತ್ತೇನೆ, ರಸಗೊಬ್ಬರಗಳ ಸಂಗ್ರಹವನ್ನು ತುಂಬಲು, ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಮತ್ತು ಭಾರತದ ಅಗತ್ಯಗಳಿಗೆ ಅನುಗುಣವಾಗಿ ನಮ್ಮದೇ ಆದ ರಸಗೊಬ್ಬರಗಳನ್ನು ತಯಾರಿಸಲು ಅವಕಾಶ ಮಾಡಿಕೊಡಿ, ನಾವು ಇತರರನ್ನು ಅವಲಂಬಿಸಬಾರದು.

ಸ್ನೇಹಿತರೇ,

ಮುಂಬರುವ ಯುಗ ವಿದ್ಯುತ್ ಚಾಲಿತ ವಾಹನಗಳ (ಎಲೆಕ್ಟ್ರಿಕ್ ವಾಹನಗಳು) ಯುಗ. ಈಗ ನಾವು ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿಗಳನ್ನು ತಯಾರಿಸದಿದ್ದರೆ, ನಾವು ಅವುಗಳ ಮೇಲೆ ಅವಲಂಬಿತರಾಗುತ್ತೇವೆ. ಅದು ಸೌರ ಫಲಕಗಳಾಗಲಿ ಅಥವಾ ಎಲೆಕ್ಟ್ರಾನಿಕ್ ವಾಹನಗಳಿಗೆ ಅಗತ್ಯವಿರುವ ಯಾವುದೇ ವಸ್ತುವಾಗಿರಲಿ, ನಾವು ನಮ್ಮ ಸ್ವಂತದನ್ನೇ ಹೊಂದಿರಬೇಕು.

ಸ್ನೇಹಿತರೇ,

ದೇಶದ ಯುವಜನರ ಸಾಮರ್ಥ್ಯಗಳಲ್ಲಿ ನನಗೆ ನಂಬಿಕೆ ಇರುವುದರಿಂದ ನಾನು ಇದನ್ನು ಹೇಳುವ ಧೈರ್ಯ ಮಾಡುತ್ತೇನೆ ಮತ್ತು ಈ ನಂಬಿಕೆ ಅವರು ನನ್ನ ದೇಶದ ಯುವಕರು ಎಂಬ ಕಾರಣಕ್ಕಾಗಿ ಮಾತ್ರವಲ್ಲ, ಕೋವಿಡ್ ಸಮಯದಲ್ಲಿ ನಾವು ಅನೇಕ ವಿಷಯಗಳ ಮೇಲೆ ಅವಲಂಬಿತರಾಗಿದ್ದೆವು, ನಮ್ಮ ದೇಶದ ಯುವಕರಿಗೆ ನಮ್ಮದೇ ಆದ ಲಸಿಕೆ ಬೇಕು ಎಂದು ಹೇಳಿದಾಗ, ದೇಶವು ಅದನ್ನು ಮಾಡುವ ಮೂಲಕ ಸಾಬೀತುಪಡಿಸಿತು. ಕೋ-ವಿನ್ ವೇದಿಕೆ ನಮ್ಮದಾಗಬೇಕು ಎಂದಾಗ, ದೇಶವು ಅದನ್ನು ಮಾಡಿ ತೋರಿಸಿತು. ಕೋಟ್ಯಂತರ ಜನರ ಜೀವಗಳನ್ನು ಉಳಿಸುವ ಕೆಲಸವನ್ನು ನಾವು ಮಾಡಿದೆವು. ಅದೇ ಮನೋಭಾವ, ಅದೇ ಉತ್ಸಾಹವನ್ನು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಯಾಗಲು, ನಮ್ಮ ಅತ್ಯುತ್ತಮವಾದದ್ದನ್ನು ನಾವೆಲ್ಲರೂ ನೀಡಬೇಕು.

ಸ್ನೇಹಿತರೇ,

ಕಳೆದ 11 ವರ್ಷಗಳಲ್ಲಿ, ಉದ್ಯಮಶೀಲತೆ ಅಗಾಧವಾದ ಶಕ್ತಿಯನ್ನು ಪಡೆದುಕೊಂಡಿದೆ. ಇಂದು, 2 ಮತ್ತು 3 ನೇ ಶ್ರೇಣಿ ನಗರಗಳಲ್ಲಿ ಲಕ್ಷಾಂತರ ನವೋದ್ಯಮಗಳು ದೇಶದ ಆರ್ಥಿಕತೆ ಮತ್ತು ನಾವೀನ್ಯತೆಯನ್ನು ಬಲಪಡಿಸುತ್ತಿವೆ. ಅದೇ ರೀತಿ, ನಮ್ಮ ಅನೇಕ ಹೆಣ್ಣುಮಕ್ಕಳು ಸೇರಿದಂತೆ ನಮ್ಮ ಕೋಟ್ಯಂತರ ಯುವಜನರು ಮುದ್ರಾ ಯೋಜನೆಯ ಮೂಲಕ ತಮ್ಮ ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಸಾಲ ಪಡೆದಿದ್ದಾರೆ. ಅವರು ತಮ್ಮ ಕಾಲಿನ ಮೇಲೆ ನಿಂತಿರುವುದು ಮಾತ್ರವಲ್ಲದೆ, ಇತರರನ್ನೂ ಸಬಲೀಕರಣಗೊಳಿಸುತ್ತಿದ್ದಾರೆ. ಇದು ಕೂಡ ಒಂದು ರೀತಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಸ್ವಾವಲಂಬಿಯಾಗಲು ಅವಕಾಶವನ್ನು ನೀಡುತ್ತಿದೆ.

ಸ್ನೇಹಿತರೇ,

ಹಿಂದೆ, ಮಹಿಳಾ ಸ್ವಸಹಾಯ ಗುಂಪುಗಳ ಬಗ್ಗೆ ಯಾರೂ ಹೆಚ್ಚು ಗಮನ ಹರಿಸಲಿಲ್ಲ. ಆದರೆ ಕಳೆದ 10 ವರ್ಷಗಳಲ್ಲಿ, ಮಹಿಳಾ ಸ್ವಸಹಾಯ ಗುಂಪುಗಳು ಅದ್ಭುತಗಳನ್ನು ಮಾಡಿವೆ. ಇಂದು, ಅವರ ಉತ್ಪನ್ನಗಳು ಪ್ರಪಂಚದಾದ್ಯಂತ ಮಾರುಕಟ್ಟೆಗಳನ್ನು ತಲುಪುತ್ತಿವೆ. ನಮ್ಮ ಮಹಿಳಾ ಸ್ವಸಹಾಯ ಗುಂಪುಗಳು ಲಕ್ಷಾಂತರ ಕೋಟಿ ರೂಪಾಯಿಗಳ ವ್ಯವಹಾರವನ್ನು ಮಾಡುತ್ತಿವೆ. ನಾನು ಒಮ್ಮೆ ಮನ್ ಕಿ ಬಾತ್‌ ನಲ್ಲಿ ಆಟಿಕೆಗಳ ಬಗ್ಗೆ ಮಾತನಾಡಿದ್ದೆ. ನಾವು ವಿದೇಶಗಳಿಂದ ಕೋಟ್ಯಂತರ ರೂಪಾಯಿಗಳ ಆಟಿಕೆಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ನಾನು ಮನ್ ಕಿ ಬಾತ್‌ ನಲ್ಲಿ, "ನನ್ನ ಯುವ ಸ್ನೇಹಿತರೇ, ನಾವು ವಿದೇಶದಿಂದ ಆಟಿಕೆಗಳನ್ನು ತರುತ್ತಲೇ ಇರಬೇಕಾ?" ಎಂದು ಕೇಳಿದೆ. ಇಂದು ನನ್ನ ದೇಶವು ಆಟಿಕೆಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ ಎಂದು ನಾನು ಹೆಮ್ಮೆಯಿಂದ ಹೇಳುತ್ತೇನೆ. ಇದರರ್ಥ ದೇಶವು ಸಾಧ್ಯವಿರುವ ಎಲ್ಲ ಅವಕಾಶಗಳನ್ನು ಪಡೆದರೆ ಮತ್ತು ಎಲ್ಲಾ ಅಡೆತಡೆಗಳಿಂದ ಮುಕ್ತವಾದರೆ, ಅದು ದೊಡ್ಡದನ್ನು ಸಾಧಿಸಬಹುದು. ದೇಶದ ಯುವಜನರಿಗೆ ನಾನು ಹೇಳುವುದೇನೆಂದರೆ: ನಿಮ್ಮ ನವೀನ ಆಲೋಚನೆಗಳನ್ನು ಮುಂದಿಡಿ, ನನ್ನ ಸ್ನೇಹಿತರೇ, ನಿಮ್ಮ ಆಲೋಚನೆಗಳನ್ನು ಸಾಯಲು ಬಿಡಬೇಡಿ. ಇಂದಿನ ಆಲೋಚನೆಯು ಮುಂಬರುವ ಪೀಳಿಗೆಯ ಭವಿಷ್ಯವನ್ನು ರೂಪಿಸಬಹುದು. ನಾನು ನಿಮ್ಮೊಂದಿಗೆ ನಿಲ್ಲುತ್ತೇನೆ. ನಾನು ನಿಮಗಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಈ ಪ್ರಯಾಣದಲ್ಲಿ ನಿಮ್ಮ ಪಾಲುದಾರನಾಗಲು ನಾನು ಸಿದ್ಧನಿದ್ದೇನೆ. ಮುಂದೆ ಬನ್ನಿ, ಧೈರ್ಯವನ್ನು ತೋರಿಸಿ, ಉಪಕ್ರಮವನ್ನು ತೆಗೆದುಕೊಳ್ಳಿ. ಉತ್ಪಾದನೆಯ ಬಗ್ಗೆ ಯೋಚಿಸುತ್ತಿರುವ ಯುವಕರೇ, ಬನ್ನಿ, ಮುಂದಾಳತ್ವ ವಹಿಸಿ. ನಾವು ಸರ್ಕಾರಿ ನಿಯಮಗಳನ್ನು ಬದಲಾಯಿಸಬೇಕಾದರೆ ನನಗೆ ಹೇಳಿ. ದೇಶವು ಈಗ ನಿಲ್ಲಲು ಬಯಸುವುದಿಲ್ಲ. 2047 ದೂರವಿಲ್ಲ - ಪ್ರತಿ ಕ್ಷಣವೂ ಅಮೂಲ್ಯವಾಗಿದೆ. ಸ್ನೇಹಿತರೇ, ನಾವು ಒಂದು ಕ್ಷಣವನ್ನೂ ವ್ಯರ್ಥ ಮಾಡಲು ಬಯಸುವುದಿಲ್ಲ.

ಸ್ನೇಹಿತರೇ,

ಇದು ಮುನ್ನಡೆಯಲು ಒಂದು ಅವಕಾಶ, ದೊಡ್ಡ ಕನಸು ಕಾಣಲು ಒಂದು ಅವಕಾಶ, ನಮ್ಮ ಸಂಕಲ್ಪಗಳಿಗೆ ನಮ್ಮನ್ನು ಅರ್ಪಿಸಿಕೊಳ್ಳಲು ಒಂದು ಅವಕಾಶ. ಸರ್ಕಾರ ನಿಮ್ಮೊಂದಿಗಿದ್ದರೆ ಮತ್ತು ನಾನು ನಿಮ್ಮೊಂದಿಗಿದ್ದರೆ, ನಾವು ಈಗ ಹೊಸ ಇತಿಹಾಸವನ್ನು ಸೃಷ್ಟಿಸಬಹುದು.

ಸ್ನೇಹಿತರೇ,

ಇಂದು, ರಾಷ್ಟ್ರೀಯ ಉತ್ಪಾದನಾ ಮಿಷನ್ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ನಮ್ಮ ಎಂ ಎಸ್‌ ಎಂ ಇ ಗಳನ್ನು ಪ್ರಪಂಚವು ಗುರುತಿಸುತ್ತಿದೆ ಮತ್ತು ಗೌರವಿಸುತ್ತಿದೆ. ಜಾಗತಿಕವಾಗಿ ಕೆಲವು  ದೊಡ್ಡ ಉತ್ಪನ್ನಗಳ ತಯಾರಿಕೆಯಲ್ಲಿ ನಮ್ಮ ದೇಶದ ಎಂ ಎಸ್‌ ಎಂ ಇ ಗಳ ಕೆಲವು ಸಾಧನ ಅಥವಾ ಬಿಡಿಭಾಗ ಯಾವಾಗಲೂ ಇರುತ್ತದೆ. ಇವುಗಳನ್ನು ಹೆಮ್ಮೆಯ ಭಾವನೆಯಿಂದ ರಫ್ತು ಮಾಡಲಾಗುತ್ತದೆ. ಆದರೆ ನಾವು ಸರ್ವಾಂಗೀಣ ಮತ್ತು ಸಮಗ್ರ ಅಭಿವೃದ್ಧಿಯ ಹಾದಿಯತ್ತ ಸಾಗಲು ಬಯಸುತ್ತೇವೆ. ಅದಕ್ಕಾಗಿಯೇ ನಾವು ಅವುಗಳ ಸಾಮರ್ಥ್ಯಗಳನ್ನು ಬಲಪಡಿಸಬೇಕು. ನಾನು ಒಮ್ಮೆ ಕೆಂಪು ಕೋಟೆಯಿಂದ ಶೂನ್ಯ ದೋಷ, ಶೂನ್ಯ ಪರಿಣಾಮದ ಬಗ್ಗೆ ಹೇಳಿದ್ದೆ. ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಶಕ್ತಿಯನ್ನು ಜಗತ್ತು ಗುರುತಿಸಬೇಕೆಂದು ನಾವು ಬಯಸಿದರೆ, ನಾವು ನಿರಂತರವಾಗಿ ಗುಣಮಟ್ಟದಲ್ಲಿ ಹೊಸ ಎತ್ತರವನ್ನು ಏರಬೇಕು ಎಂದು ನಾನು ಪುನರುಚ್ಚರಿಸಲು ಬಯಸುತ್ತೇನೆ. ಜಗತ್ತು ಗುಣಮಟ್ಟವನ್ನು ಸ್ವೀಕರಿಸುತ್ತದೆ. ನಮ್ಮ ಗುಣಮಟ್ಟವು ಅತ್ಯುತ್ತಮವಾಗಿರಬೇಕು ಮತ್ತು ಕಚ್ಚಾ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಮ್ಮ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವ ಮಾರ್ಗಗಳನ್ನು ಕಂಡುಹಿಡಿಯಲು ಸರ್ಕಾರದ ಪ್ರಯತ್ನಗಳು ಸಹ ಇರುತ್ತವೆ.

ಸ್ನೇಹಿತರೇ,

ಉತ್ಪಾದನಾ ಕ್ಷೇತ್ರದಲ್ಲಿ ತೊಡಗಿರುವ ನಮಗೆಲ್ಲರಿಗೂ "ಕಡಿಮೆ ಬೆಲೆ, ಹೆಚ್ಚಿನ ಮೌಲ್ಯ"  ಎಂಬುದು ಮಂತ್ರವಾಗಿರಬೇಕು. ನಮ್ಮ ಪ್ರತಿಯೊಂದು ಉತ್ಪನ್ನವು ಹೆಚ್ಚಿನ ಮೌಲ್ಯವನ್ನು ಹೊಂದಿರಬೇಕು, ಆದರೆ ಕಡಿಮೆ ಬೆಲೆಯಿರಬೇಕು. ಈ ಮನೋಭಾವದಿಂದ ನಾವು ಮುನ್ನಡೆಯಬೇಕು.

ನನ್ನ ಪ್ರೀತಿಯ ದೇಶವಾಸಿಗಳೇ,

ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಜನರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ನಾನು ಮೊದಲೇ ಹೇಳಿದ್ದೇನೆ - ಅವರು ತಮ್ಮ ಯೌವನವನ್ನು ಮುಡಿಪಾಗಿಟ್ಟರು; ಅವರು ಗಲ್ಲಿಗೇರಿಸಲ್ಪಟ್ಟರು, ಏಕೆ? ಸ್ವತಂತ್ರ ಭಾರತಕ್ಕಾಗಿ. 75-100 ವರ್ಷಗಳ ಹಿಂದೆ, ಇಡೀ ರಾಷ್ಟ್ರವು ಸ್ವತಂತ್ರ ಭಾರತದ ಮಂತ್ರದೊಂದಿಗೆ ಬದುಕಿದ್ದ ಆ ಅವಧಿಯನ್ನು ನೆನಪಿಸಿಕೊಳ್ಳಿ. ಇಂದು, ಕಾಲದ ಅಗತ್ಯ ಹೀಗಿದೆ: ಸ್ವತಂತ್ರ ಭಾರತದ ಮಂತ್ರದಿಂದ ಬದುಕಿದವರು ನಮಗೆ ಸ್ವಾತಂತ್ರ್ಯವನ್ನು ನೀಡಿದರು. ಈಗ, 140 ಕೋಟಿ ಭಾರತೀಯರ ಮಂತ್ರವು ಸಮೃದ್ಧ ಭಾರತವಾಗಿರಬೇಕು. ಲಕ್ಷಾಂತರ ಜನರ ತ್ಯಾಗಗಳು ನಮಗೆ ಸ್ವಾತಂತ್ರ್ಯವನ್ನು ತರಬಹುದಾದರೆ, ಸಂಕಲ್ಪಗಳು, ಕಠಿಣ ಪರಿಶ್ರಮ, ಸ್ವಾವಲಂಬನೆ, "ವೋಕಲ್‌ ಫಾರ್‌ ಲೋಕಲ್‌"ನ ಉತ್ತೇಜನ ಮತ್ತು ಲಕ್ಷಾಂತರ ಜನರ ಸ್ವದೇಶಿ ಮಂತ್ರದ ಪಠಣದಿಂದ, ನಾವು ಸಮೃದ್ಧ ಭಾರತವನ್ನು ಸಹ ನಿರ್ಮಿಸಬಹುದು. ಆ ಪೀಳಿಗೆಯು ಸ್ವತಂತ್ರ ಭಾರತಕ್ಕೆ ತನ್ನನ್ನು ತಾನು ಅರ್ಪಿಸಿಕೊಂಡಿತು; ಈ ಪೀಳಿಗೆಯು ಸಮೃದ್ಧ ಭಾರತಕ್ಕಾಗಿ ಹೊಸ ದಿಟ್ಟ ಹೆಜ್ಜೆಗಳನ್ನು ಇಡಬೇಕು, ಇದು ಇಂದಿನ ಅಗತ್ಯವಾಗಿದೆ. ಅದಕ್ಕಾಗಿಯೇ ನಾನು ಮತ್ತೆ ಮತ್ತೆ ಒತ್ತಾಯಿಸುತ್ತಲೇ ಇರುತ್ತೇನೆ ಮತ್ತು ದೇಶದ ಎಲ್ಲಾ ಪ್ರಭಾವಿಗಳಿಗೆ ನಾನು ಹೇಳಲು ಬಯಸುತ್ತೇನೆ - ಈ ಮಂತ್ರವನ್ನು ಹರಡಲು ನನಗೆ ಸಹಾಯ ಮಾಡಿ. ನಾನು ಎಲ್ಲಾ ರಾಜಕೀಯ ಪಕ್ಷಗಳಿಗೆ, ರಾಜಕಾರಣಿಗಳಿಗೆ, ಎಲ್ಲರಿಗೂ ಮನವಿ ಮಾಡುತ್ತೇನೆ: ಬನ್ನಿ, ಇದು ಯಾವುದೇ ಒಂದು ರಾಜಕೀಯ ಪಕ್ಷದ ಕಾರ್ಯಸೂಚಿಯಲ್ಲ. ಭಾರತ ನಮ್ಮೆಲ್ಲರಿಗೂ ಸೇರಿದ್ದು. ಒಟ್ಟಾಗಿ, "ವೋಕಲ್‌ ಫಾರ್‌ ಲೋಕಲ್‌" ಅನ್ನು ಪ್ರತಿಯೊಬ್ಬ ನಾಗರಿಕನ ಜೀವನದ ಮಂತ್ರವನ್ನಾಗಿ ಮಾಡೋಣ.

ಭಾರತದಲ್ಲಿ ತಯಾರಾದ, ಭಾರತದ ನಾಗರಿಕರ ಬೆವರಿನಿಂದ ತಯಾರಾದ, ನಮ್ಮ ಮಣ್ಣಿನ ಪರಿಮಳವನ್ನು ಹೊಂದಿರುವ ಮತ್ತು ಸ್ವಾವಲಂಬನೆಗಾಗಿ ನಮ್ಮ ಸಂಕಲ್ಪವನ್ನು ಬಲಪಡಿಸುವ ಉತ್ಪನ್ನಗಳನ್ನು ಮಾತ್ರ ನಾವು ಖರೀದಿಸಬೇಕು ಮತ್ತು ಬಳಸಬೇಕು. ಇದು ನಮ್ಮ ಸಾಮೂಹಿಕ ಸಂಕಲ್ಪವಾಗಬೇಕು. ಆಗ ಸ್ನೇಹಿತರೇ, ನಾವು ಶೀಘ್ರದಲ್ಲೇ ಜಗತ್ತನ್ನು ಬದಲಾಯಿಸುತ್ತೇವೆ. ಇಂದು ನಾನು ಪ್ರತಿಯೊಬ್ಬ ಸಣ್ಣ ವ್ಯಾಪಾರಿ ಮತ್ತು ಅಂಗಡಿಯವರಿಗೆ ಮನವಿ ಮಾಡಲು ಬಯಸುತ್ತೇನೆ, ನಿಮಗೂ ಒಂದು ಜವಾಬ್ದಾರಿ ಇದೆ. ಬಾಲ್ಯದಲ್ಲಿ, ಅಂಗಡಿಗಳ ಮೇಲೆ "ತುಪ್ಪದ ಅಂಗಡಿ" ಎಂದು ಮಾತ್ರ ಬರೆಯುವುದನ್ನು ನಾವು ನೋಡುತ್ತಿದ್ದೆವು, ಆದರೆ ಕಾಲಾನಂತರದಲ್ಲಿ ಜನರು "ಶುದ್ಧ ತುಪ್ಪದ ಅಂಗಡಿ" ಎಂದು ಬರೆಯಲು ಪ್ರಾರಂಭಿಸಿದರು. ಅದೇ ರೀತಿ, ದೇಶಾದ್ಯಂತ ವ್ಯಾಪಾರಿಗಳು ಮತ್ತು ಅಂಗಡಿಯವರು ತಮ್ಮ ಮನೆಗಳಲ್ಲಿ "ಸ್ವದೇಶಿ ಸರಕುಗಳನ್ನು ಇಲ್ಲಿ ಮಾರಾಟ ಮಾಡಲಾಗುತ್ತದೆ" ಎಂಬ ಫಲಕಗಳನ್ನು ಹಾಕಬೇಕೆಂದು ನಾನು ಬಯಸುತ್ತೇನೆ. ನಾವು ಸ್ವದೇಶಿಯ ಬಗ್ಗೆ ಹೆಮ್ಮೆಪಡೋಣ. ನಾವು ಅದನ್ನು ಬಲವಂತದಿಂದ ಬಳಸಬಾರದು, ಆದರೆ ಶಕ್ತಿಯಿಂದ, ನಮ್ಮ ಸ್ವಂತ ಶಕ್ತಿಗಾಗಿ ಮತ್ತು ಅಗತ್ಯವಿದ್ದರೆ, ಇತರರು ಅದನ್ನು ಬಳಸಲು ಒತ್ತಾಯಿಸಬೇಕು. ಇದು ನಮ್ಮ ಶಕ್ತಿಯಾಗಿರಬೇಕು. ಇದು ನಮ್ಮ ಮಾರ್ಗದರ್ಶಿ ಮಂತ್ರವಾಗಿರಬೇಕು.

ನನ್ನ ಪ್ರೀತಿಯ ದೇಶಬಾಂಧವರೇ,

ಬಹಳ ಸಮಯದಿಂದ, ನನಗೆ ಸರ್ಕಾರದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ನಾನು ಅನೇಕ ಏರಿಳಿತಗಳನ್ನು ಕಂಡಿದ್ದೇನೆ. ಸರ್ಕಾರಗಳು ಎದುರಿಸುವ ಸವಾಲುಗಳ ಜೊತೆಗೆ ಆಡಳಿತ ವ್ಯವಸ್ಥೆಗಳ ಮಿತಿಗಳ ಬಗ್ಗೆಯೂ ನನಗೆ ಪರಿಚಯವಿದೆ. ಆದರೂ, ಇದೆಲ್ಲದರ ಹೊರತಾಗಿಯೂ, ಬೇರೆಯವರ ಸಾಧನೆಗಳನ್ನು ದುರ್ಬಲಗೊಳಿಸಲು ನಮ್ಮ ಶಕ್ತಿಯನ್ನು ವ್ಯರ್ಥ ಮಾಡದಿರುವುದು ನಮ್ಮ ಜವಾಬ್ದಾರಿಯಾಗಿದೆ. ನನ್ನ ಅಪಾರ ಅನುಭವದಿಂದ, ನಾನು ಹೇಳುವುದೇನೆಂದರೆ, ಇತರರನ್ನು ದುರ್ಬಲಗೊಳಿಸುವಲ್ಲಿ ನಮ್ಮ ಶಕ್ತಿಯನ್ನು ವ್ಯಯಿಸಬಾರದು; ಬದಲಾಗಿ, ನಮ್ಮ ಸ್ವಂತ ಸಾಮರ್ಥ್ಯಗಳು ಮತ್ತು ಸಾಧನೆಗಳನ್ನು ಸುಧಾರಿಸಲು ನಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಬೇಕು. ನಾವು ಬೆಳೆದು ಶ್ರೇಷ್ಠರಾದಾಗ, ಜಗತ್ತು ನಮ್ಮ ಮೌಲ್ಯವನ್ನು ಒಪ್ಪಿಕೊಳ್ಳುತ್ತದೆ. ಇಂದು, ಪ್ರಪಂಚದಾದ್ಯಂತ ಆರ್ಥಿಕ ಸ್ವ-ಹಿತಾಸಕ್ತಿ ಹೆಚ್ಚುತ್ತಿರುವಾಗ, ಇಂದಿನ ಅಗತ್ಯವೆಂದರೆ ನಾವು ಬಿಕ್ಕಟ್ಟುಗಳ ಬಗ್ಗೆ ದುಃಖಿಸುತ್ತಾ ಕುಳಿತುಕೊಳ್ಳಬಾರದು. ಧೈರ್ಯದಿಂದ, ನಮ್ಮ ಸ್ವಂತ ಶಕ್ತಿ ಮತ್ತು ನಿಲುವನ್ನು ಹೆಚ್ಚಿಸಲು ನಾವು ಶ್ರಮಿಸಬೇಕು ಮತ್ತು ನನ್ನ 25 ವರ್ಷಗಳ ಆಡಳಿತಾತ್ಮಕ ಅನುಭವದಿಂದ, ನಾನು ಇದನ್ನು ಹೇಳಬಲ್ಲೆ - ನಾವು ಈ ಮಾರ್ಗವನ್ನು ಆರಿಸಿಕೊಂಡರೆ ಮತ್ತು ಎಲ್ಲರೂ ಅದನ್ನು ಆರಿಸಿಕೊಂಡರೆ, ಯಾವುದೇ ಸ್ವಾರ್ಥದ ಹಿತಾಸಕ್ತಿಗೂ ನಮ್ಮನ್ನು ಎಂದಿಗೂ ಸಿಲುಕಿಸಲು ಸಾಧ್ಯವಾಗುವುದಿಲ್ಲ.

ನನ್ನ ಪ್ರೀತಿಯ ದೇಶವಾಸಿಗಳೇ,

ಕಳೆದ ದಶಕವು ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ದಶಕವಾಗಿದೆ. ಆದರೆ ಈಗ, ನಾವು ನಮ್ಮ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ಸೇರಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ, ಎಫ್‌ ಡಿ ಐ ಕ್ಷೇತ್ರದಲ್ಲಿರಲಿ, ವಿಮಾ ವಲಯದಲ್ಲಾಗಲಿ, ಜಾಗತಿಕ ವಿಶ್ವವಿದ್ಯಾಲಯಗಳು ಭಾರತದಲ್ಲಿ ಕ್ಯಾಂಪಸ್‌ ಗಳನ್ನು ಸ್ಥಾಪಿಸಲು ಅವಕಾಶ ನೀಡುವುದಾಗಿರಲಿ ನಾವು ಅನೇಕ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ನಾವು 40,000 ಕ್ಕೂ ಹೆಚ್ಚು ಅನಗತ್ಯ ಅನುಸರಣೆಗಳನ್ನು ರದ್ದುಗೊಳಿಸಿದ್ದೇವೆ. ಅಷ್ಟೇ ಅಲ್ಲ, ನಾವು 1,500 ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಕಾನೂನುಗಳನ್ನು ಸಹ ರದ್ದುಗೊಳಿಸಿದ್ದೇವೆ. ಸಾರ್ವಜನಿಕರ ಹಿತಾಸಕ್ತಿಗಳನ್ನು ಯಾವಾಗಲೂ ಮೊದಲು ಇರಿಸುವ ಮೂಲಕ ಅವುಗಳನ್ನು ಸರಳಗೊಳಿಸಲು ಡಜನ್ಗಟ್ಟಲೆ ಕಾನೂನುಗಳನ್ನು ಸಂಸತ್ತಿನಲ್ಲಿ ತಿದ್ದುಪಡಿ ಮಾಡಿದ್ದೇವೆ. ಈ ಬಾರಿಯೂ ಸಹ, ಗದ್ದಲದ ನಡುವೆ, ಆದಾಯ ತೆರಿಗೆ ಕಾಯ್ದೆಯಲ್ಲಿನ ಮಹತ್ವದ ಸುಧಾರಣೆಯ ಬಗೆಗಿನ ಸುದ್ದಿ ಜನರಿಗೆ ತಲುಪಿಲ್ಲದಿರಬಹುದು. ನಾವು 280 ಕ್ಕೂ ಹೆಚ್ಚು ಸೆಕ್ಷನ್‌ ಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಸ್ನೇಹಿತರೇ, ನಮ್ಮ ಸುಧಾರಣೆಗಳು ಆರ್ಥಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ - ನಾಗರಿಕರ ಜೀವನವನ್ನು ಸುಲಭಗೊಳಿಸಲು ಸುಧಾರಣೆಗಳನ್ನು ಸಹ ಜಾರಿಗೆ ತಂದಿದ್ದೇವೆ. ಆದಾಯ ತೆರಿಗೆ ಮರುಪಾವತಿಗಳ ತ್ವರಿತತೆಯು ಸುಧಾರಣೆಗಳ ಪರಿಣಾಮವಾಗಿದೆ. ನಗದುರಹಿತ ಮೌಲ್ಯಮಾಪನಗಳು ಸುಧಾರಣೆಗಳ ಪರಿಣಾಮವಾಗಿದೆ. 12 ಲಕ್ಷ ರೂ.ವರೆಗಿನ ಆದಾಯವನ್ನು ಆದಾಯ ತೆರಿಗೆಯಿಂದ ವಿನಾಯಿತಿ ನೀಡುವುದು - ಇದು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಉತ್ಸುಕರಾಗಿರುವ ನನ್ನ ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳ ಸಂತೋಷವನ್ನು ತಂದಿದೆ. 12 ಲಕ್ಷ ರೂ.ವರೆಗಿನ ಆದಾಯವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಬಹುದು ಎಂದು ಯಾರೂ ಊಹಿಸಿರಲಿಲ್ಲ, ಆದರೆ ನಾವು ಇಂದು ಅದನ್ನು ವಾಸ್ತವ ಮಾಡಿದ್ದೇವೆ.

ಒಂದು ರಾಷ್ಟ್ರದ ಶಕ್ತಿ ಬೆಳೆದಾಗ, ಅದರ ನಾಗರಿಕರು ಪ್ರಯೋಜನ ಪಡೆಯುತ್ತಾರೆ. ಬ್ರಿಟಿಷ್ ಆಳ್ವಿಕೆಯ ದಿನಗಳಿಂದ, ನಾವು ದಂಡ ಸಂಹಿತೆಗೆ ಬದ್ಧರಾಗಿದ್ದೆವು, ಶಿಕ್ಷೆಯ ನಿರಂತರ ಭಯದಲ್ಲಿ ಬದುಕುತ್ತಿದ್ದೆವು. ಸ್ವಾತಂತ್ರ್ಯದ ಎಪ್ಪತ್ತೈದು ವರ್ಷಗಳು ಹೀಗೆ ಕಳೆದವು. ನಾವು ದಂಡ ಸಂಹಿತೆಯನ್ನು ರದ್ದುಗೊಳಿಸಿದ್ದೇವೆ ಮತ್ತು ಭಾರತೀಯ ನ್ಯಾಯ ಸಂಹಿತೆಯನ್ನು ಪರಿಚಯಿಸಿದ್ದೇವೆ. ಇದು ಭಾರತದ ನಾಗರಿಕರ ಬಗ್ಗೆ ನಂಬಿಕೆ, ಸಂಬಂಧದ ಭಾವನೆ ಮತ್ತು ಸೂಕ್ಷ್ಮತೆಯಿಂದ ತುಂಬಿದೆ. ಸುಧಾರಣೆಯ ಪ್ರಯಾಣವನ್ನು ವೇಗಗೊಳಿಸಲು ನಾವು ನಿರ್ಧರಿಸಿದ್ದೇವೆ ಮತ್ತು ನಾವು ವೇಗವಾಗಿ ಮುನ್ನಡೆಯಲು ಬಯಸುತ್ತೇವೆ. ನಾನು ನನ್ನ ದೇಶವಾಸಿಗಳಿಗೆ ಹೇಳಲು ಬಯಸುವುದೇನೆಂದರೆ: ನಾನು ಏನೇ ಮಾಡಿದರೂ, ನಾನು ದೇಶಕ್ಕಾಗಿ ಮಾಡುತ್ತಿದ್ದೇನೆ, ನನಗಾಗಿ ಅಲ್ಲ, ಯಾರಿಗೂ ಹಾನಿ ಮಾಡಲು ಅಲ್ಲ. ರಾಷ್ಟ್ರದ ಉಜ್ವಲ ಭವಿಷ್ಯಕ್ಕಾಗಿ ಮುಂದೆ ಬಂದು ನಮ್ಮೊಂದಿಗೆ ಸೇರಲು ನಾನು ರಾಜಕೀಯ ಪಕ್ಷಗಳು, ನನ್ನ ಪ್ರತಿಸ್ಪರ್ಧಿಗಳು ಮತ್ತು ಎಲ್ಲಾ ಸಹ ನಾಯಕರನ್ನು ಆಹ್ವಾನಿಸುತ್ತೇನೆ. ಅದು ರಚನಾತ್ಮಕ ಸುಧಾರಣೆಗಳಾಗಲಿ, ನಿಯಂತ್ರಕ ಸುಧಾರಣೆಗಳಾಗಲಿ, ನೀತಿ ಸುಧಾರಣೆಗಳಾಗಲಿ, ಕಾರ್ಯವಿಧಾನದ ಸುಧಾರಣೆಗಳಾಗಲಿ ಅಥವಾ ಸಾಂವಿಧಾನಿಕ ಸುಧಾರಣೆಗಳಾಗಲಿ, ಇಂದು ನಾವು ಪ್ರತಿಯೊಂದು ಸುಧಾರಣೆಯನ್ನು ನಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದೇವೆ.

ನನ್ನ ಪ್ರೀತಿಯ ದೇಶಬಾಂಧವರೇ,

ಮುಂದಿನ ಪೀಳಿಗೆಯ ಸುಧಾರಣೆಗಳಿಗಾಗಿ, ನಾವು ಒಂದು ಕಾರ್ಯಪಡೆಯನ್ನು ರಚಿಸಲು ನಿರ್ಧರಿಸಿದ್ದೇವೆ. ಈ ಕಾರ್ಯಪಡೆಯು ನಿಗದಿತ ಸಮಯದೊಳಗೆ ತನ್ನ ಕೆಲಸವನ್ನು ಪೂರ್ಣಗೊಳಿಸುತ್ತದೆ. ಪ್ರಸ್ತುತ ನಿಯಮಗಳು, ಕಾನೂನುಗಳು, ನೀತಿಗಳು ಮತ್ತು ಕಾರ್ಯವಿಧಾನಗಳನ್ನು 21 ನೇ ಶತಮಾನಕ್ಕೆ ಸರಿಹೊಂದುವಂತೆ, ಜಾಗತಿಕ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮತ್ತು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಕೋನಕ್ಕೆ ಹೊಂದಿಕೆಯಾಗುವಂತೆ ಮರು-ರಚಿಸಬೇಕು. ನಿಗದಿತ ಅವಧಿಯೊಳಗೆ ಇದನ್ನು ಸಾಧಿಸಲು ಕಾರ್ಯಪಡೆಯನ್ನು ರಚಿಸಲಾಗಿದೆ.

ಸ್ನೇಹಿತರೇ,

ಈ ಸುಧಾರಣೆಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸುವ ಎಲ್ಲರಿಗೂ ಧೈರ್ಯ ತುಂಬುತ್ತವೆ. ಅದು ನಮ್ಮ ನವೋದ್ಯಮಗಳಾಗಿರಬಹುದು, ನಮ್ಮ ಸಣ್ಣ ಕೈಗಾರಿಕೆಗಳಾಗಿರಬಹುದು ಅಥವಾ ನಮ್ಮ ಗುಡಿ ಕೈಗಾರಿಕೆಗಳಾಗಿರಬಹುದು, ಉದ್ಯಮಿಗಳು ತಮ್ಮ ಅನುಸರಣಾ ವೆಚ್ಚದಲ್ಲಿ ಗಮನಾರ್ಹ ಇಳಿಕೆಯನ್ನು ಕಾಣುತ್ತಾರೆ, ಇದು ಅವರಿಗೆ ಹೊಸ ಶಕ್ತಿಯನ್ನು ನೀಡುತ್ತದೆ. ರಫ್ತು ಕ್ಷೇತ್ರದಲ್ಲೂ ಸಹ, ಲಾಜಿಸ್ಟಿಕ್ಸ್ ಮತ್ತು ವ್ಯವಸ್ಥೆಗಳಲ್ಲಿನ ಬದಲಾವಣೆಗಳು ಅವರಿಗೆ ಪ್ರಮುಖ ಪ್ರಯೋಜನವನ್ನು ನೀಡುತ್ತವೆ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಕ್ಷುಲ್ಲಕ ವಿಷಯಗಳಿಗೆ ಜೈಲು ಶಿಕ್ಷೆ ವಿಧಿಸುವ ಕಾನೂನುಗಳಿವೆ, ಆದರೆ ಯಾರೂ ಅವುಗಳ ಬಗ್ಗೆ ಗಮನ ಹರಿಸಲಿಲ್ಲ. ಭಾರತೀಯ ನಾಗರಿಕರನ್ನು ಜೈಲಿನಲ್ಲಿ ಇರಿಸುವ ಅಂತಹ ಅನಗತ್ಯ ಕಾನೂನುಗಳನ್ನು ರದ್ದುಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ನನ್ನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇನೆ. ನಾವು ಈ ಹಿಂದೆ ಸಂಸತ್ತಿನಲ್ಲಿ ಮಸೂದೆಯನ್ನು ಪರಿಚಯಿಸಿದ್ದೆವು; ಈ ಬಾರಿ ನಾವು ಅದನ್ನು ಮತ್ತೆ ತಂದಿದ್ದೇವೆ.

ಸ್ನೇಹಿತರೇ,

ಈ ದೀಪಾವಳಿಯನ್ನು ನಾನು ನಿಮಗಾಗಿ ಡಬಲ್ ದೀಪಾವಳಿಯನ್ನಾಗಿ ಮಾಡಲಿದ್ದೇನೆ. ಈ ದೀಪಾವಳಿಯಲ್ಲಿ, ನಮ್ಮ ದೇಶವಾಸಿಗಳಿಗೆ ಒಂದು ದೊಡ್ಡ ಉಡುಗೊರೆ ಸಿಗಲಿದೆ. ಕಳೆದ 8 ವರ್ಷಗಳಲ್ಲಿ, ನಾವು ಜಿ  ಎಸ್‌ ಟಿ ಯಲ್ಲಿ ದೊಡ್ಡ ಸುಧಾರಣೆಯನ್ನು ಮಾಡಿದ್ದೇವೆ, ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿದ್ದೇವೆ, ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸಿದ್ದೇವೆ ಮತ್ತು 8 ವರ್ಷಗಳ ನಂತರ, ನಾವು ಅದನ್ನು ಒಮ್ಮೆ ಪರಿಶೀಲಿಸುವುದು ಈಗಿನ ಅಗತ್ಯವಾಗಿದೆ. ನಾವು ಉನ್ನತಾಧಿಕಾರ ಸಮಿತಿಯನ್ನು ಸ್ಥಾಪಿಸುವ ಮೂಲಕ ಪರಿಶೀಲನೆಯನ್ನು ಪ್ರಾರಂಭಿಸಿದ್ದೇವೆ ಮತ್ತು ರಾಜ್ಯಗಳೊಂದಿಗೆ ಚರ್ಚೆಗಳನ್ನು ನಡೆಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ಮುಂದಿನ ಪೀಳಿಗೆಯ ಜಿ ಎಸ್‌ ಟಿ ಸುಧಾರಣೆಗಳನ್ನು ತರುತ್ತಿದ್ದೇವೆ, ಇದು ಈ ದೀಪಾವಳಿಗೆ ನಿಮಗೆ ಉಡುಗೊರೆಯಾಗಲಿದೆ. ಸಾಮಾನ್ಯ ಜನರ ಅಗತ್ಯಗಳ ಮೇಲಿನ ತೆರಿಗೆಗಳಲ್ಲಿ ಭಾರಿ ಇಳಿಕೆಯಾಗಲಿದೆ, ಅನೇಕ ಸೌಲಭ್ಯಗಳು ಹೆಚ್ಚಾಗಲಿವೆ. ನಮ್ಮ ಎಂ ಎಸ್‌ ಎಂ ಇ ಗಳು, ನಮ್ಮ ಸಣ್ಣ ಉದ್ಯಮಿಗಳು ಇದರಿಂದ ಭಾರಿ ಲಾಭ ಪಡೆಯುತ್ತಾರೆ. ದಿನನಿತ್ಯದ ವಸ್ತುಗಳು ತುಂಬಾ ಅಗ್ಗವಾಗುತ್ತವೆ ಮತ್ತು ಇದು ಆರ್ಥಿಕತೆಗೆ ಹೊಸ ಉತ್ತೇಜನವನ್ನು ನೀಡುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ,

ಇಂದು ದೇಶವು ಮೂರನೇ ಅತಿದೊಡ್ಡ ಆರ್ಥಿಕತೆಯಾಗುವತ್ತ ವೇಗವಾಗಿ ಸಾಗುತ್ತಿದೆ. ನಾವು ಬಾಗಿಲು ತಟ್ಟುತ್ತಿದ್ದೇವೆ ಮತ್ತು ನಾವು ಅದನ್ನು ಬಹಳ ವೇಗವಾಗಿ ಸಾಧಿಸುತ್ತೇವೆ ಮತ್ತು ನಾನು ನಿಮ್ಮ ನಡುವೆ ಬಂದು ಕೆಂಪು ಕೋಟೆಯ ಪ್ರಾಂಗಣದಿಂದ ಈ ಸುದ್ದಿಯನ್ನು ಹಂಚಿಕೊಳ್ಳುವ ದಿನ ಬರುತ್ತದೆ. ಇಂದು ಇಡೀ ಜಗತ್ತು ಭಾರತದ ಆರ್ಥಿಕತೆ ಮತ್ತು ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿಶ್ವಾಸ ಹೊಂದಿದೆ. ಇಷ್ಟೊಂದು ಅಸ್ಥಿರತೆಯ ನಡುವೆಯೂ, ಭಾರತದ ಆರ್ಥಿಕ ಶಿಸ್ತು, ಭಾರತದ ಹಣಕಾಸಿನ ಶಕ್ತಿಯು ಭರವಸೆಯ ಕಿರಣವಾಗಿದೆ. ಆರ್ಥಿಕತೆಯು ಬಿಕ್ಕಟ್ಟಿನಲ್ಲಿರುವಾಗ, ಭಾರತ ಮಾತ್ರ ಅದರಿಂದ ಹೊರಬರಲು ಸಾಧ್ಯ ಎಂದು ಜಗತ್ತಿಗೆ ವಿಶ್ವಾಸ ಬಂದಿದೆ. ಇಂದು ಹಣದುಬ್ಬರ ನಿಯಂತ್ರಣದಲ್ಲಿದೆ, ನಮ್ಮ ವಿದೇಶಿ ವಿನಿಮಯ ಮೀಸಲುಗಳು ಬಹಳ ಪ್ರಬಲವಾಗಿವೆ, ನಮ್ಮ ಸ್ಥೂಲ ಆರ್ಥಿಕ ಸೂಚಕಗಳು ಬಹಳ ಪ್ರಬಲವಾಗಿವೆ, ಜಾಗತಿಕ ರೇಟಿಂಗ್ ಏಜೆನ್ಸಿಗಳು ಸಹ ಭಾರತವನ್ನು ನಿರಂತರವಾಗಿ ಶ್ಲಾಘಿಸುತ್ತಿವೆ, ಭಾರತೀಯ ಆರ್ಥಿಕತೆಯಲ್ಲಿ ಹೆಚ್ಚಿನ ವಿಶ್ವಾಸವನ್ನು ವ್ಯಕ್ತಪಡಿಸುತ್ತಿವೆ. ಈ ಬೆಳೆಯುತ್ತಿರುವ ಆರ್ಥಿಕತೆಯ ಪ್ರಯೋಜನಗಳು ನನ್ನ ದೇಶದ ಬಡವರಿಗೆ, ನನ್ನ ದೇಶದ ರೈತರಿಗೆ, ನನ್ನ ದೇಶದ ಮಹಿಳಾ ಶಕ್ತಿಗೆ, ನನ್ನ ದೇಶದ ಮಧ್ಯಮ ವರ್ಗದವರಿಗೆ ತಲುಪುವಂತೆ ಮತ್ತು ಅದು ನನ್ನ ದೇಶದ ಅಭಿವೃದ್ಧಿಗೆ ಶಕ್ತಿಯ ಮೂಲವಾಗುವಂತೆ ನಾವು ಈ ದಿಕ್ಕಿನಲ್ಲಿ ಹೊಸ ಪ್ರಯತ್ನಗಳನ್ನು ಮಾಡುತ್ತಿದ್ದೇವೆ.

ಇಂದು, ನಮ್ಮ ಯುವಜನರಿಗೆ ಹೊಸ ವಲಯಗಳಲ್ಲಿ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ದೇಶದ ಯುವಕರಿಗಾಗಿ ಕೌಶಲ್ಯ ಅಭಿವೃದ್ಧಿ, ಸ್ವ-ಉದ್ಯೋಗ, ದೊಡ್ಡ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ನ ಬೃಹತ್ ಅಭಿಯಾನ ನಡೆಯುತ್ತಿದೆ. ಇಂದು ನಾನು ನಿಮಗೂ, ನನ್ನ ದೇಶದ ಯುವಜನರಿಗೂ ಒಳ್ಳೆಯ ಸುದ್ದಿಯನ್ನು ತಂದಿದ್ದೇನೆ. ಇಂದು ಆಗಸ್ಟ್ 15. ಇಂದು, ಆಗಸ್ಟ್ 15 ರಂದು, ನಮ್ಮ ದೇಶದ ಯುವಜನರಿಗಾಗಿ ನಾವು 1 ಲಕ್ಷ ಕೋಟಿ ರೂ.ಗಳ ಯೋಜನೆಯನ್ನು ಪ್ರಾರಂಭಿಸುತ್ತಿದ್ದೇವೆ ಮತ್ತು ಅನುಷ್ಠಾನಗೊಳಿಸುತ್ತಿದ್ದೇವೆ. ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆಯನ್ನು ಇಂದು ಆಗಸ್ಟ್ 15 ರಂದು ಜಾರಿಗೆ ತರಲಾಗುತ್ತಿದೆ, ಇದು ನಿಮಗೆ ತುಂಬಾ ಒಳ್ಳೆಯ ಸುದ್ದಿ. ಈ ಯೋಜನೆಯಡಿಯಲ್ಲಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವ ಪ್ರತಿಯೊಬ್ಬರಿಗೂ ಸರ್ಕಾರವು 15000 ರೂ.ಗಳನ್ನು ನೀಡುತ್ತದೆ. ಹೊಸ ಉದ್ಯೋಗವನ್ನು ಒದಗಿಸಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಪ್ರೋತ್ಸಾಹ ಧನವನ್ನು ಸಹ ನೀಡಲಾಗುವುದು. ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆಯು ಸುಮಾರು 3.5 ಕೋಟಿ ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಇದಕ್ಕಾಗಿ ನಾನು ಎಲ್ಲಾ ಯುವಜನರನ್ನು ಅಭಿನಂದಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ಭಾರತದಲ್ಲಿ ಪ್ರತಿಯೊಬ್ಬರೂ ಮಹಿಳೆಯರ ಶಕ್ತಿಯನ್ನು ಒಪ್ಪಿಕೊಳ್ಳಲು ಪ್ರಾರಂಭಿಸಿದ್ದಾರೆ. ನಮ್ಮ ಮಹಿಳೆಯರು ಬೆಳೆಯುತ್ತಿರುವ ಆರ್ಥಿಕತೆಯ ಫಲಾನುಭವಿಗಳು ಮಾತ್ರವಲ್ಲ, ಬೆಳೆಯುತ್ತಿರುವ ಆರ್ಥಿಕತೆಯನ್ನು ವೇಗಗೊಳಿಸುವಲ್ಲಿ ನಮ್ಮ ಮಹಿಳೆಯರು ಸಹ ಸಾಕಷ್ಟು ಕೊಡುಗೆ ನೀಡಿದ್ದಾರೆ, ನಮ್ಮ ಮಾತೃ ಶಕ್ತಿ ಕೊಡುಗೆ ನೀಡಿದೆ, ನಮ್ಮ ನಾರಿ ಶಕ್ತಿ ಕೊಡುಗೆ ನೀಡಿದೆ. ನವೋದ್ಯಮಗಳಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ, ನಮ್ಮ ಹೆಣ್ಣುಮಕ್ಕಳು ಛಾಪು ಮೂಡಿಸುತ್ತಿದ್ದಾರೆ. ಅವರು ಕ್ರೀಡಾ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದಾರೆ, ಸೈನ್ಯದಲ್ಲಿ ಮಿಂಚುತ್ತಿದ್ದಾರೆ, ಇಂದು ಅವರು ಹೆಮ್ಮೆಯಿಂದ ದೇಶದ ಅಭಿವೃದ್ಧಿ ಪ್ರಯಾಣದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಭಾಗವಹಿಸುತ್ತಿದ್ದಾರೆ. ಮೊದಲ ಎನ್‌ ಡಿ ಎ ಮಹಿಳಾ ಅಭ್ಯರ್ಥಿಗಳು ಹೊರಬಂದಾಗ  ಇಡೀ ದೇಶ ಹೆಮ್ಮೆಯಿಂದ ತುಂಬಿತ್ತು. ಎಲ್ಲಾ ಟಿವಿ ವಾಹಿನಿಗಳು ಅವರನ್ನು ಹಿಂಬಾಲಿಸಿದವು. ಎಂತಹ ಹೆಮ್ಮೆಯ ಕ್ಷಣ ಅದು. ಸ್ವಸಹಾಯ ಗುಂಪುಗಳು, 10 ಕೋಟಿ ಸ್ವಸಹಾಯ ಗುಂಪುಗಳ ಸಹೋದರಿಯರು ಅದ್ಭುತ ಕೆಲಸವನ್ನು ಮಾಡುತ್ತಿದ್ದಾರೆ. ನಮೋ ಡ್ರೋನ್ ದೀದಿ ನಾರಿ ಶಕ್ತಿಯ ಹೊಸ ಗುರುತಾಗಿದೆ. ನಾನು ಹಳ್ಳಿಯಲ್ಲಿ ಒಬ್ಬ ಸಹೋದರಿಯನ್ನು ಭೇಟಿಯಾದೆ, ಈಗ ಗ್ರಾಮಸ್ಥರು ತನ್ನನ್ನು ಪೈಲಟ್ ಎಂದು ಕರೆಯುತ್ತಾರೆ ಎಂದು ಅವರು ಹೇಳಿದರು. ತಾನು ಹೆಚ್ಚು ವಿದ್ಯಾವಂತಳಲ್ಲ, ಆದರೆ ಒಂದು ಸ್ಥಾನಮಾನವನ್ನು ಗಳಿಸಿದ್ದೇನೆ ಎಂದು ಅವಳು ತುಂಬಾ ಹೆಮ್ಮೆಯಿಂದ ಹೇಳುತ್ತಿದ್ದಳು.

ಸ್ನೇಹಿತರೇ,

ನಾವು 3 ಕೋಟಿ ಮಹಿಳೆಯರನ್ನು ಲಕ್ಷಾಧಿಪತಿ ದೀದಿಗಳನ್ನಾಗಿ ಮಾಡಲು ಪ್ರತಿಜ್ಞೆ ಮಾಡಿದ್ದೆವು ಮತ್ತು ನಾವು ಅದರಲ್ಲಿ ವೇಗವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ನನಗೆ ತೃಪ್ತಿ ಇದೆ. ನಾವು ನಿಗದಿತ ಸಮಯಕ್ಕಿಂತ ಮೊದಲೇ 3 ಕೋಟಿ ಗುರಿಯನ್ನು ಸಾಧಿಸುತ್ತೇವೆ ಮತ್ತು ಇಂದು ನಾನು ದೇಶಕ್ಕೆ ಸಂತೋಷದಿಂದ ಹೇಳಲು ಬಯಸುತ್ತೇನೆ, ನನ್ನ ನಾರಿ ಶಕ್ತಿಯ ಬಲವನ್ನು ನೋಡಿ, ಎರಡು ಕೋಟಿ ಮಹಿಳೆಯರು ಅಲ್ಪ ಸಮಯದಲ್ಲೇ ಲಕ್ಷಾಧಿಪತಿ ದೀದಿಯಾಗಿದ್ದಾರೆ. ಇಂದು ಕೆಲವು ಲಕ್ಷಾಧಿಪತಿ ದೀದಿಗಳು ನಮ್ಮ ಮುಂದೆ ಕುಳಿತಿದ್ದಾರೆ. ಇದು ನನ್ನ ಶಕ್ತಿ, ಮತ್ತು ಸ್ನೇಹಿತರೇ, ಇದು ಭಾರತದ ಅಭಿವೃದ್ಧಿ ಪ್ರಯಾಣದಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಎಂದು ನನಗೆ ನಂಬಿಕೆಯಿದೆ.

ನನ್ನ ಪ್ರೀತಿಯ ದೇಶಬಾಂಧವರೇ,

ಭಾರತದ ಆರ್ಥಿಕತೆಗೆ ನನ್ನ ದೇಶದ ರೈತರು ಬಹು ದೊಡ್ಡ ಕೊಡುಗೆ ನೀಡಿದ್ದಾರೆ. ಭಾರತದ ರೈತರ ಕಠಿಣ ಪರಿಶ್ರಮ ಫಲ ನೀಡುತ್ತಿದೆ. ಕಳೆದ ವರ್ಷ, ನನ್ನ ದೇಶದ ರೈತರು ಧಾನ್ಯಗಳ ಉತ್ಪಾದನೆಯಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದರು, ಇದು ನನ್ನ ದೇಶದ ಸಾಮರ್ಥ್ಯ. ಅಷ್ಟೇ ಪ್ರಮಾಣದ ಭೂಮಿ, ಆದರೆ ವ್ಯವಸ್ಥೆಗಳು ಬದಲಾಗಿವೆ, ನೀರು ತಲುಪಲು ಪ್ರಾರಂಭಿಸಿದೆ, ಉತ್ತಮ ಬೀಜಗಳು ಲಭ್ಯವಾಗುತ್ತಿವೆ, ರೈತರು ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ, ಆದ್ದರಿಂದ ಅವರು ದೇಶಕ್ಕಾಗಿ ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಂದು ಭಾರತ ಹಾಲು, ದ್ವಿದಳ ಧಾನ್ಯಗಳು ಮತ್ತು ಸೆಣಬಿನ ಉತ್ಪಾದನೆಯಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಇಂದು ನಾವು ವಿಶ್ವದ ಎರಡನೇ ಅತಿದೊಡ್ಡ ಮೀನು ಉತ್ಪಾದಕರಾಗಿದ್ದೇವೆ. ನನ್ನ ಮೀನುಗಾರ ಸಹೋದರ ಸಹೋದರಿಯರ ಶಕ್ತಿಯನ್ನು ನೋಡಿ. ಮೀನು ಉತ್ಪಾದನೆಯಲ್ಲಿ ನಾವು ವಿಶ್ವದಲ್ಲಿ ಎರಡನೇ ಸ್ಥಾನವನ್ನು ತಲುಪಿದ್ದೇವೆ. ಇಂದು ಭಾರತವು ಅಕ್ಕಿ, ಗೋಧಿ, ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದೆ.

ಸ್ನೇಹಿತರೇ,

ನನ್ನ ದೇಶದ ರೈತರ ಉತ್ಪನ್ನಗಳು ಇಂದು ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿವೆ ಎಂದು ತಿಳಿದರೆ ನೀವು ಸಂತೋಷಪಡುವಿರಿ. 4 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ನನ್ನ ದೇಶದ ರೈತರು ಅವರ ಶಕ್ತಿಯನ್ನು ನಮಗೆ ತೋರಿಸಿದ್ದಾರೆ. ಅವರು ಸಣ್ಣ ರೈತರಾಗಿರಲಿ, ಜಾನುವಾರು ಸಾಕಣೆದಾರರಾಗಿರಲಿ, ಮೀನುಗಾರರಾಗಿರಲಿ, ನಾವು ಅವರಿಗೆ ದೇಶದ ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳನ್ನು ಒದಗಿಸುತ್ತಿದ್ದೇವೆ. ಅದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಾಗಿರಲಿ, ಮಳೆ ನೀರು ಕೊಯ್ಲು ಆಗಿರಲಿ, ನೀರಾವರಿ ಯೋಜನೆಗಳಾಗಿರಲಿ, ಗುಣಮಟ್ಟದ ಬೀಜಗಳಾಗಿರಲಿ, ರಸಗೊಬ್ಬರಗಳ ಬೇಡಿಕೆಯಾಗಿರಲಿ. ಇಂದು ಪ್ರತಿಯೊಂದು ವಲಯದಲ್ಲೂ ರೈತರು ಬೆಳೆ ವಿಮೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಅವರು ಧೈರ್ಯಶಾಲಿಯಾಗುತ್ತಿದ್ದಾರೆ, ದೇಶವು ಅದರ ಫಲಿತಾಂಶಗಳನ್ನು ಸಹ ಪಡೆಯುತ್ತಿದೆ. ಮೊದಲು ಇದು ಕಲ್ಪನೆಯ ವಿಷಯವಾಗಿತ್ತು, ಇಂದು ಅದು ವಾಸ್ತವವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮಗೆ ಕೋವಿಡ್ ಲಸಿಕೆ ಉಚಿತವಾಗಿ ನೀಡಲಾಯಿತು ಎಂದು ನಾವು ನೆನಪಿಸಿಕೊಳ್ಳುತ್ತೇವೆ, ಆದರೆ ನಾವು ನಮ್ಮ ದೇಶದ ಜಾನುವಾರುಗಳನ್ನು ಉಳಿಸಲು ಇಲ್ಲಿಯವರೆಗೆ ಪ್ರಾಣಿಗಳಿಗೆ 125 ಕೋಟಿ ಡೋಸ್‌ ಲಸಿಕೆಗಳನ್ನು ಉಚಿತವಾಗಿ ನೀಡಿದ್ದೇವೆ. ಉತ್ತರ ಭಾರತದಲ್ಲಿ 'ಖುರ್ಪಾಕ' ರೋಗ ಎಂದು ಕರೆಯಲ್ಪಡುವ ಕಾಲು ಮತ್ತು ಬಾಯಿ ರೋಗವನ್ನು ತೊಡೆದುಹಾಕಲು, ನಾವು 125 ಕೋಟಿ ಡೋಸ್‌ ಗಳನ್ನು ನೀಡಿದ್ದೇವೆ, ಅದು ಕೂಡ ಉಚಿತವಾಗಿ. ಕೃಷಿಯ ವಿಷಯದಲ್ಲಿ, ಒಂದಲ್ಲ ಒಂದು ಕಾರಣದಿಂದ ಇತರರಿಗಿಂತ ಹಿಂದುಳಿದಿರುವ ದೇಶದ 100 ಜಿಲ್ಲೆಗಳಲ್ಲಿ ರೈತರು ತುಲನಾತ್ಮಕವಾಗಿ ಕಡಿಮೆ ಕೃಷಿ ಮಾಡುತ್ತಿದ್ದಾರೆ, ಆದ್ದರಿಂದ ನಾವು ದೇಶಾದ್ಯಂತ 100 ಜಿಲ್ಲೆಗಳನ್ನು ಗುರುತಿಸಿದ್ದೇವೆ ಮತ್ತು ಅಲ್ಲಿನ ರೈತರನ್ನು ಸಬಲೀಕರಣಗೊಳಿಸಲು, ರೈತರಿಗೆ ಸಹಾಯ ಮಾಡಲು ಅಭಿಯಾನವನ್ನು ಪ್ರಾರಂಭಿಸಿದ್ದೇವೆ ಮತ್ತು ಇದಕ್ಕಾಗಿ ನಾವು ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಯು ದೇಶದ ಆ 100 ಜಿಲ್ಲೆಗಳಿಗೆ ಸಹಾಯವನ್ನು ಒದಗಿಸುತ್ತದೆ, ಆಗ ಅಲ್ಲಿನ ರೈತರು ಭಾರತದ ಇತರ ರೈತರೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಭಾರತದ ರೈತರು, ಭಾರತದ ಜಾನುವಾರು ಸಾಕಣೆದಾರರು, ಭಾರತದ ಮೀನುಗಾರರು, ಇವರು ನಮ್ಮ ದೊಡ್ಡ ಆದ್ಯತೆಗಳು. ಭಾರತದ ರೈತರು, ಭಾರತದ ಮೀನುಗಾರರು ಮತ್ತು ಭಾರತದ ಜಾನುವಾರು ರೈತರಿಗೆ ಸಂಬಂಧಿಸಿದ ಯಾವುದೇ ಹಾನಿಕಾರಕ ನೀತಿಯ ವಿರುದ್ಧ ಮೋದಿ ಗೋಡೆಯಂತೆ ನಿಂತಿದ್ದಾರೆ. ಭಾರತವು ತನ್ನ ರೈತರು, ಜಾನುವಾರು ರೈತರು ಮತ್ತು ಮೀನುಗಾರರೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದನ್ನು ಎಂದಿಗೂ  ಒಪ್ಪುವುದಿಲ್ಲ.

ನನ್ನ ಪ್ರೀತಿಯ ದೇಶಬಾಂಧವರೇ,

ಬಡತನ ಎಂದರೇನು ಎಂದು ನಾನು ಪುಸ್ತಕಗಳಲ್ಲಿ ಓದಬೇಕಾಗಿಲ್ಲ. ನನಗೆ ಅದು ಗೊತ್ತಿದೆ, ನಾನು ಸರ್ಕಾರದಲ್ಲೂ ಇದ್ದೇನೆ ಮತ್ತು ಆದ್ದರಿಂದ ಸರ್ಕಾರವು ಕಡತಗಳಿಗೆ ಸೀಮಿತವಾಗಿರಬಾರದು ಎಂಬುದು ನನ್ನ ಪ್ರಯತ್ನವಾಗಿದೆ. ಸರ್ಕಾರವು ದೇಶದ ನಾಗರಿಕರ ಬದುಕಿನಲ್ಲಿ ಇರಬೇಕು.

ಅವರು ದಲಿತರಾಗಿರಲಿ, ದಮನಿತರಾಗಿರಲಿ, ಶೋಷಿತರಾಗಿರಲಿ ಅಥವಾ ವಂಚಿತರಾಗಿರಲಿ, ಸರ್ಕಾರಗಳು ಅವರ ಬಗ್ಗೆ ಸಕಾರಾತ್ಮಕವಾಗಿರಬೇಕು, ಸರ್ಕಾರಗಳು ಜನಪರವಾಗಿರಬೇಕು. ಆ ದಿಕ್ಕಿನಲ್ಲಿ ನಾವು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸಮಾಜದಲ್ಲಿ ಅಗತ್ಯವಿರುವ ಪ್ರತಿಯೊಬ್ಬ ವ್ಯಕ್ತಿಗೂ, ಸರ್ಕಾರಿ ಯೋಜನೆಗಳು ಮೊದಲಿನಿಂದಲೂ ಇದ್ದವು ಎಂದು ಕೆಲವರು ಭಾವಿಸುತ್ತಾರೆ - ಇಲ್ಲ, ನಾವು ಸರ್ಕಾರಿ ಯೋಜನೆಗಳನ್ನು ವಾಸ್ತವದಲ್ಲಿ ಅನುಷ್ಠಾನಗೊಳಿಸುತ್ತಿದ್ದೇವೆ. ನಾವು ಪರಿಪೂರ್ಣತೆಗೆ ಒತ್ತು ನೀಡುತ್ತೇವೆ, ಏಕೆಂದರೆ ಸಾಮಾಜಿಕ ನ್ಯಾಯದ ಯಾವುದೇ ನಿಜವಾದ ಅನುಷ್ಠಾನವಿದ್ದರೆ, ಯಾವುದೇ ಅರ್ಹ ವ್ಯಕ್ತಿಯನ್ನು ಬಿಡಲಾಗುವುದಿಲ್ಲ. ಅಲ್ಲಿ ಸರ್ಕಾರವು ಅರ್ಹ ವ್ಯಕ್ತಿಯ ಮನೆಗೆ ಹೋಗಿ ಅವರಿಗೆ ನ್ಯಾಯಯುತವಾಗಿ ಸೇರಬೇಕಾದದ್ದನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ನಾವು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.

ಜನ ಧನ್ ಖಾತೆಗಳನ್ನು ತೆರೆದಾಗ, ಅದು ಕೇವಲ ಬ್ಯಾಂಕ್ ಖಾತೆ ತೆರೆಯುವುದಾಗಿರಲಿಲ್ಲ - ಅದು ಜನರಿಗೆ ಸ್ವಾಭಿಮಾನವನ್ನು ನೀಡಿತು, ಬ್ಯಾಂಕಿನ ಬಾಗಿಲುಗಳು ನನಗೂ ತೆರೆದಿವೆ, ನಾನು ಕೂಡ ಬ್ಯಾಂಕಿನೊಳಗೆ ಹೋಗಬಹುದು, ಮೇಜಿನ ಮೇಲೆ ಕೈಯಿಟ್ಟು ಮಾತನಾಡಬಹುದು ಎಂಬ ಭಾವನೆಯನ್ನು ಮೂಡಿಸಿತು. ಈ ಆತ್ಮವಿಶ್ವಾಸವನ್ನು ನಾವು ಹುಟ್ಟುಹಾಕಿದ್ದೇವೆ. ಆಯುಷ್ಮಾನ್ ಭಾರತ್ ಜನರನ್ನು ಮೌನವಾಗಿ ಅನಾರೋಗ್ಯವನ್ನು ಸಹಿಸಿಕೊಳ್ಳುವ ಅಭ್ಯಾಸದಿಂದ ಮುಕ್ತಗೊಳಿಸಿದೆ ಮತ್ತು ಅವರಿಗೆ ಉತ್ತಮ ಆರೋಗ್ಯ ರಕ್ಷಣೆ ಪಡೆಯಲು ಸಹಾಯ ಮಾಡಿದೆ. ಹಿರಿಯ ನಾಗರಿಕರಿಗೆ ಅವರ ಆರೋಗ್ಯ ಅಗತ್ಯಗಳಿಗಾಗಿ ನಾವು 5,00,000 ರೂಪಾಯಿಗಳಿಗಿಂತ ಹೆಚ್ಚು ಸಹಾಯ ಮಾಡಿದಾಗ, ಅದು ಅವರ ಯೋಗಕ್ಷೇಮದ ಬಗ್ಗೆ ನಮಗಿರುವ ಕಾಳಜಿಯನ್ನು ತೋರಿಸುತ್ತದೆ. ಇಂದು, ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಮೂಲಕ 4 ಕೋಟಿ ಬಡ ಜನರು ಮನೆಗಳನ್ನು  ಪಡೆದಿದ್ದಾರೆ - ಅಂದರೆ ಅವರ ಜೀವನದಲ್ಲಿ ಹೊಸ ಕನಸುಗಳು ಚಿಗುರುತ್ತವೆ. ಅವು ಕೇವಲ ನಾಲ್ಕು ಗೋಡೆಗಳಲ್ಲ, ಸ್ನೇಹಿತರೇ. ಬೀದಿಬದಿ ವ್ಯಾಪಾರಿಗಳಿಗೆ, ಪ್ರಧಾನಮಂತ್ರಿ ಸ್ವನಿಧಿ  ಯೋಜನೆ ಇದೆ, ಒಂದು ಕಾಲದಲ್ಲಿ ಹೆಚ್ಚಿನ ಬಡ್ಡಿಯನ್ನು ಪಾವತಿಸುವ ಚಕ್ರದಲ್ಲಿ ಸಿಲುಕಿಕೊಂಡಿದ್ದವರಿಗೆ, ಈ ಯೋಜನೆಯು ಈಗ ಮುಕ್ತವಾಗಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟಿದೆ. ಇಂದು ಬೀದಿಬದಿ ವ್ಯಾಪಾರಿಗಳು ಸಹ ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವುದನ್ನು ಮತ್ತು ಮಾಡುವುದನ್ನು ನೀವು ನೋಡಿರಬೇಕು. ಈ ಬದಲಾವಣೆಯು ಸಮಾಜದ ಕೊನೆಯ ವ್ಯಕ್ತಿಯ ಜೀವನದಲ್ಲಿಯೂ ಸರ್ಕಾರ ಇರಬೇಕು ಎಂಬುದನ್ನು ತೋರಿಸುತ್ತದೆ. ಅದಕ್ಕಾಗಿಯೇ ಈ ತಳಮಟ್ಟದ ಯೋಜನೆಗಳನ್ನು ವಿನ್ಯಾಸಗೊಳಿಸಲಾಗುತ್ತದೆ, ಕಾರ್ಯಗತಗೊಳಿಸಲಾಗುತ್ತದೆ ಮತ್ತು ಅವು ಬೇರೂರಿದಾಗ, ಅವು ಜನರ ಜೀವನದಲ್ಲಿ ಪರಿವರ್ತನೆಯನ್ನು ತರುವ ಪ್ರಬಲ ಮಾಧ್ಯಮವಾಗುತ್ತವೆ. ಬಡವರು, ತುಳಿತಕ್ಕೊಳಗಾದವರು, ಬುಡಕಟ್ಟು ಸಮುದಾಯಗಳು, ವಂಚಿತರು, ವಿಭಿನ್ನ ಸಾಮರ್ಥ್ಯ ಹೊಂದಿರುವವರು ಮತ್ತು ನಮ್ಮ ವಿಧವೆ ತಾಯಂದಿರು ಮತ್ತು ಸಹೋದರಿಯರು ತಮ್ಮ ಹಕ್ಕುಗಳಿಗಾಗಿ ಕಂಬಗಳನ್ನು ಸುತ್ತಬೇಕಾಗಿತ್ತು. ತಮ್ಮ ಇಡೀ ಜೀವನವನ್ನು ಒಂದು ಸರ್ಕಾರಿ ಕಚೇರಿಯಿಂದ ಮತ್ತೊಂದು ಕಚೇರಿಗೆ ಅಲೆಯಬೇಕಾಗಿತ್ತು. ಇಂದು, ಸರ್ಕಾರವು ಪರಿಪೂರ್ಣತೆಯ ವಿಧಾನದೊಂದಿಗೆ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಕೋಟ್ಯಂತರ ಫಲಾನುಭವಿಗಳು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಮತ್ತು ನೇರ ಸವಲತ್ತು ವರ್ಗಾವಣೆಯು ನಿಜವಾಗಿಯೂ ಕ್ರಾಂತಿಕಾರಿ ಹೆಜ್ಜೆಯಾಗಿದೆ.

ಸ್ನೇಹಿತರೇ,

ದೇಶವು "ಗರೀಬಿ ಹಟಾವೋ" (ಬಡತನ ನಿರ್ಮೂಲನೆ) ಎಂಬ ಘೋಷಣೆಯನ್ನು ಹಲವು ಬಾರಿ ಕೇಳಿದೆ, ಕೆಂಪು ಕೋಟೆಯಿಂದಲೂ ಕೇಳಿದೆ ಮತ್ತು ರಾಷ್ಟ್ರವು ಅದನ್ನು ಪದೇ ಪದೇ ಕೇಳಿ ಬೇಸತ್ತಿದೆ. ಬಡತನವನ್ನು ತೊಡೆದುಹಾಕಲು ಸಾಧ್ಯವಿಲ್ಲ ಎಂದು ಜನರು ಒಪ್ಪಿಕೊಂಡಿದ್ದರು. ಆದರೆ ನಾವು ಬಡವರ ಮನೆಗಳಿಗೆ ನೇರವಾಗಿ ಯೋಜನೆಗಳನ್ನು ಕೊಂಡೊಯ್ದಾಗ, ಅವರ ಮನಸ್ಸಿನಲ್ಲಿ ವಿಶ್ವಾಸವನ್ನು ತುಂಬಿದಾಗ, ನನ್ನ ದೇಶದ 25 ಕೋಟಿ ಬಡ ಜನರು ಬಡತನವನ್ನು ಸೋಲಿಸಿದರು, ಅದನ್ನು ಮೀರಿ ಮೇಲೇರಿದರು ಮತ್ತು ಹೊಸ ಇತಿಹಾಸವನ್ನು ಸೃಷ್ಟಿಸಿದರು. ಇಂದು, ಕಳೆದ 10 ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಬಡವರು ಬಡತನವನ್ನು ಜಯಿಸಿ ಅದರಿಂದ ಹೊರಬಂದಿದ್ದಾರೆ, ಹೊಸ "ನವ-ಮಧ್ಯಮ ವರ್ಗ"ವನ್ನು ಸೃಷ್ಟಿಸಿದ್ದಾರೆ.

ಸ್ನೇಹಿತರೇ,

ಈ ನವ-ಮಧ್ಯಮ ವರ್ಗ ಮತ್ತು ಅಸ್ತಿತ್ವದಲ್ಲಿರುವ ಮಧ್ಯಮ ವರ್ಗವು ಆಕಾಂಕ್ಷೆಗಳು ಮತ್ತು ಪ್ರಯತ್ನಗಳಿಂದ ತುಂಬಿದ ಪಾಲುದಾರಿಕೆಯನ್ನು ರೂಪಿಸುತ್ತದೆ ಮತ್ತು ಇದು ದೇಶವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ದೊಡ್ಡ ಶಕ್ತಿಯಾಗಿ ಪರಿಣಮಿಸಲಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಶೀಘ್ರದಲ್ಲೇ, ನಾವು ಮಹಾನ್ ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಅವರ 200 ನೇ ಜಯಂತಿಯನ್ನು ಆಚರಿಸಲಿದ್ದೇವೆ. ಈ ಆಚರಣೆಗಳನ್ನು ನಾವು ಪ್ರಾರಂಭಿಸಲಿದ್ದೇವೆ. ಮಹಾತ್ಮ ಜ್ಯೋತಿಬಾ ಫುಲೆ ಅವರ ತತ್ವಗಳು ಮತ್ತು ಅವರು ನಮಗೆ ನೀಡಿದ "ಹಿಂದುಳಿದವರಿಗೆ ಆದ್ಯತೆ" ಎಂಬ ಮಂತ್ರ ನಮಗೆ ಸ್ಫೂರ್ತಿಯಾಗಿದೆ. ಹಿಂದುಳಿದವರಿಗೆ ಆದ್ಯತೆ ನೀಡುವ ಮೂಲಕ, ನಾವು ಪರಿವರ್ತನೆಯ ಉತ್ತುಂಗವನ್ನು ತಲುಪಲು ಬಯಸುತ್ತೇವೆ. ಇದಕ್ಕಾಗಿ ನಾವು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಲು ಬಯಸುತ್ತೇವೆ. ಪಾರದರ್ಶಕ ನೀತಿಗಳ ಮೂಲಕ, "ಹಿಂದುಳಿದವರಿಗೆ ಆದ್ಯತೆ"ಯನ್ನು ವಾಸ್ತವವನ್ನಾಗಿ ಮಾಡಲು ಮತ್ತು ಅದನ್ನು ಪ್ರತಿಯೊಬ್ಬ ಹಿಂದುಳಿದ ವ್ಯಕ್ತಿಯ ಜೀವನದಲ್ಲಿ ತರಲು ನಾವು ಬಯಸುತ್ತೇವೆ.

ಸ್ನೇಹಿತರೇ,

ಬೀದಿಬದಿ ವ್ಯಾಪಾರಿಗಳಿಗಾಗಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಾಗಿರಲಿ, ನಮ್ಮ ಕುಶಲಕರ್ಮಿಗಳಿಗಾಗಿ ವಿಶ್ವಕರ್ಮ ಯೋಜನೆಯಾಗಿರಲಿ, ಬುಡಕಟ್ಟು ಸಮುದಾಯಗಳಲ್ಲಿ ಹಿಂದುಳಿದರುವವರಿಗಾಗಿ ಪ್ರಧಾನ ಮಂತ್ರಿ ಜನಮನ್ ಯೋಜನೆಯಾಗಿರಲಿ ಅಥವಾ ಪೂರ್ವ ಭಾರತವನ್ನು ಅಭಿವೃದ್ಧಿಯಲ್ಲಿ ದೇಶದ ಉಳಿದ ಭಾಗಗಳೊಂದಿಗೆ ಸಮನಾಗಿ ತಂದು ನಾಯಕತ್ವದ ಅವಕಾಶಗಳನ್ನು ನೀಡುವ ನಮ್ಮ ಪ್ರಯತ್ನಗಳಾಗಿರಲಿ - ನಾವು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿಲ್ಲ, ಹಿಂದುಳಿದ ಪ್ರದೇಶಗಳಿಗೂ ಆದ್ಯತೆ ನೀಡಲು ಬಯಸುತ್ತೇವೆ. ಹಿಂದುಳಿದ ಜಿಲ್ಲೆಗಳಿಗೆ ನಾವು ಆದ್ಯತೆ ನೀಡಲು ಬಯಸುತ್ತೇವೆ. ಹಿಂದುಳಿದಿರುವ ತಾಲ್ಲೂಕುಗಳಿಗೂ ನಾವು ಆದ್ಯತೆ ನೀಡಲು ಬಯಸುತ್ತೇವೆ. 100 ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು 500 ಮಹತ್ವಾಕಾಂಕ್ಷೆಯ ತಾಲ್ಲೂಕುಗಳಿಗೆ ನಾವು ಅದೇ ಧ್ಯೇಯದೊಂದಿಗೆ ಕೆಲಸ ಮಾಡಿದ್ದೇವೆ. ಪೂರ್ವ ಭಾರತದ ಅಭಿವೃದ್ಧಿಗಾಗಿ ಅಲ್ಲಿನ ಜನರ ಜೀವನವನ್ನು ಪರಿವರ್ತಿಸುವ ಮತ್ತು ಆ ಪ್ರದೇಶವನ್ನು ದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ಸಕ್ರಿಯ ಭಾಗೀದಾರರನ್ನಾಗಿ ಮಾಡುವ ಗುರಿಯೊಂದಿಗೆ.ಸಾವಿರಾರು ಕೋಟಿ ರೂಪಾಯಿಗಳ ಮೂಲಸೌಕರ್ಯ ಯೋಜನೆಗಳಿಗೆ ನಾವು ಒತ್ತು ನೀಡಿದ್ದೇವೆ.

ನನ್ನ ಪ್ರೀತಿಯ ದೇಶಬಾಂಧವರೇ,

ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿ ಇರಬೇಕು. ಕ್ರೀಡೆಯೂ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕರು ತಮ್ಮ ಮಕ್ಕಳು ಆಟವಾಡುವುದನ್ನು ನೋಡಲು ಇಷ್ಟಪಡದ ಕಾಲವಿತ್ತು, ಇಂದು ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಮಕ್ಕಳು ಕ್ರೀಡೆಯಲ್ಲಿ ಮುಂದೆ ಬಂದರೆ, ಅವುಗಳಲ್ಲಿ ಆಸಕ್ತಿ ತೋರಿಸಿದರೆ, ಪೋಷಕರು ಹೆಮ್ಮೆಯಿಂದ ಬೀಗುತ್ತಾರೆ. ನಾನು ಇದನ್ನು ಒಳ್ಳೆಯ ಸಂಕೇತವೆಂದು ಪರಿಗಣಿಸುತ್ತೇನೆ. ನನ್ನ ದೇಶದ ಕುಟುಂಬಗಳಲ್ಲಿ ಕ್ರೀಡೆಗಳಿಗೆ ಪ್ರೋತ್ಸಾಹದ ವಾತಾವರಣವನ್ನು ನೋಡಿದಾಗ, ನನ್ನ ಎದೆ ಹೆಮ್ಮೆಯಿಂದ ಉಬ್ಬುತ್ತದೆ. ಇದು ದೇಶದ ಭವಿಷ್ಯಕ್ಕೆ ಬಹಳ ಶುಭ ಸೂಚನೆ ಎಂದು ನಾನು ಪರಿಗಣಿಸುತ್ತೇನೆ.

ಸ್ನೇಹಿತರೇ,

ಕ್ರೀಡೆಗಳನ್ನು ಉತ್ತೇಜಿಸಲು, ನಾವು ರಾಷ್ಟ್ರೀಯ ಕ್ರೀಡಾ ನೀತಿಯನ್ನು ಜಾರಿಗೆ ತಂದಿದ್ದೇವೆ - ಹಲವಾರು ದಶಕಗಳ ನಂತರ, ನಾವು ದೇಶದಲ್ಲಿ 'ಖೇಲೋ ಇಂಡಿಯಾ ನೀತಿ'ಯನ್ನು ಪರಿಚಯಿಸಿದ್ದೇವೆ, ಇದರಿಂದಾಗಿ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸಮಗ್ರ ಪ್ರಯತ್ನ ನಡೆಯಬಹುದು. ಶಾಲೆಯಿಂದ ಒಲಿಂಪಿಕ್ಸ್‌ ವರೆಗೆ, ತರಬೇತಿಯಲ್ಲಿ, ಫಿಟ್‌ನೆಸ್ ವಿಷಯಗಳಲ್ಲಿ, ಕ್ರೀಡಾ ಮೈದಾನಗಳಲ್ಲಿ, ಕ್ರೀಡೆಗಳಿಗೆ ಸೌಲಭ್ಯಗಳಲ್ಲಿ, ಆಟಗಳಿಗೆ ಅಗತ್ಯವಾದ ಉಪಕರಣಗಳನ್ನು ಒದಗಿಸುವಲ್ಲಿ ಅಥವಾ ಕ್ರೀಡಾ ಸಾಮಗ್ರಿಗಳನ್ನು ತಯಾರಿಸಲು ಸಣ್ಣ ಕೈಗಾರಿಕೆಗಳಿಗೆ ಸಹಾಯ ಮಾಡುವಲ್ಲಿ ನಾವು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಬಯಸುತ್ತೇವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಈ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅತ್ಯಂತ ದೂರದ ಪ್ರದೇಶಗಳಲ್ಲಿರುವ ಮಕ್ಕಳಿಗೂ ಸಹ ನಾವು ಕೊಂಡೊಯ್ಯಲು ಬಯಸುತ್ತೇವೆ.

ಆದರೆ ಸ್ನೇಹಿತರೇ,

ನಾನು ಫಿಟ್ನೆಸ್ ಬಗ್ಗೆ ಮಾತನಾಡುವಾಗ, ಕ್ರೀಡೆಯ ಬಗ್ಗೆ ಮಾತನಾಡುವಾಗ, ನಿಮ್ಮ ಮುಂದೆ ಒಂದು ಕಳವಳಕಾರಿ ವಿಷಯವನ್ನು ಇಡಲು ಬಯಸುತ್ತೇನೆ. ನಮ್ಮ ದೇಶದ ಪ್ರತಿಯೊಂದು ಕುಟುಂಬವೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು - ಬೊಜ್ಜು ನಮ್ಮ ರಾಷ್ಟ್ರಕ್ಕೆ ಅತ್ಯಂತ ಗಂಭೀರ ಬಿಕ್ಕಟ್ಟಾಗುತ್ತಿದೆ. ಮುಂಬರುವ ವರ್ಷಗಳಲ್ಲಿ, ಪ್ರತಿ ಮೂರು ಜನರಲ್ಲಿ ಒಬ್ಬರು ಬೊಜ್ಜಿನಿಂದ ಬಳಲುತ್ತಾರೆ ಎಂದು ತಜ್ಞರು ಹೇಳುತ್ತಾರೆ. ನಾವು ಬೊಜ್ಜಿನಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕು. ಆದ್ದರಿಂದ, ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದ್ದರೂ, ನಾನು ಒಂದು ಸಣ್ಣ ಸಲಹೆಯನ್ನು ನೀಡಿದ್ದೇನೆ - ಪ್ರತಿ ಕುಟುಂಬವು ಅಡುಗೆ ಎಣ್ಣೆ ಮನೆಗೆ ಬಂದಾಗ, ಅದು ಸಾಮಾನ್ಯಕ್ಕಿಂತ ಶೇ.10 ರಷ್ಟು ಕಡಿಮೆ ಇರಬೇಕು ಮತ್ತು ಅದರ ಬಳಕೆಯೂ ಶೇ.10 ರಷ್ಟು ಕಡಿಮೆಯಾಗಬೇಕು ಎಂದು ನಿರ್ಧರಿಸಬೇಕು. ಹಾಗೆ ಮಾಡುವುದರಿಂದ, ಬೊಜ್ಜಿನ ವಿರುದ್ಧದ ಹೋರಾಟವನ್ನು ಗೆಲ್ಲುವಲ್ಲಿ ನಾವು ನಮ್ಮ ಕೊಡುಗೆಯನ್ನು ನೀಡಿದಂತಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ದೇಶವು ಅದೃಷ್ಟಶಾಲಿಯಾಗಿದೆ - ನಾವು ಸಾವಿರಾರು ವರ್ಷಗಳಷ್ಟು ಹಳೆಯದಾದ ಪರಂಪರೆಯ ವಾರಸುದಾರರು, ಅದು ನಮಗೆ ಶಕ್ತಿ, ಸ್ಫೂರ್ತಿ ಮತ್ತು ತ್ಯಾಗ ಮತ್ತು ತಪಸ್ಸಿನ ಮಾರ್ಗವನ್ನು ತೋರಿಸುತ್ತಲೇ ಇದೆ. ಈ ವರ್ಷ ಗುರು ತೇಜ್ ಬಹದ್ದೂರ್ ಜಿ ಅವರ 350 ನೇ ಹುತಾತ್ಮ ವಾರ್ಷಿಕೋತ್ಸವ, ಅವರು ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ರಕ್ಷಿಸಲು ಸರ್ವಸ್ವವನ್ನೂ ತ್ಯಾಗ ಮಾಡಿದರು. ಇಂದು ನಾನು ಅವರಿಗೆ ನನ್ನ ಗೌರವಯುತ ನಮನ ಸಲ್ಲಿಸುತ್ತೇನೆ.

ಸ್ನೇಹಿತರೇ,

ನಮ್ಮ ಸಂಸ್ಕೃತಿಯ ಬಲವು ನಮ್ಮ ವೈವಿಧ್ಯತೆಯಲ್ಲಿದೆ. ನಾವು ವೈವಿಧ್ಯತೆಯನ್ನು ಆಚರಿಸಲು ಬಯಸುತ್ತೇವೆ, ವೈವಿಧ್ಯತೆಯನ್ನು ಆಚರಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತೇವೆ. ಭಾರತ ಮಾತೆ, ಭವ್ಯವಾದ ಉದ್ಯಾನದಂತೆ, ಅಸಂಖ್ಯಾತ ಬಗೆಯ ಹೂವುಗಳಿಂದ ಅಲಂಕರಿಸಲ್ಪಟ್ಟಿದ್ದು, ಇದು ಅವಳ ಶ್ರೀಮಂತ ವೈವಿಧ್ಯತೆಗೆ ಸೇರ್ಪಡೆಯಾಗಿದೆ ಎಂದು ನಾವು ಹೆಮ್ಮೆಪಡುತ್ತೇವೆ. ಈ ವೈವಿಧ್ಯತೆಯು ನಮ್ಮ ಶ್ರೇಷ್ಠ ಪರಂಪರೆ ಮತ್ತು ನಮ್ಮ ಹೆಮ್ಮೆ. ಪ್ರಯಾಗರಾಜ್‌ ನಲ್ಲಿ ನಡೆದ 'ಮಹಾಕುಂಭ'ದಲ್ಲಿ, ಭಾರತದ ವೈವಿಧ್ಯತೆಯನ್ನು ಹೇಗೆ ಜೀವಂತಗೊಳಿಸಲಾಯಿತು ಎಂಬುದನ್ನು ನಾವು ನೋಡಿದ್ದೇವೆ - ಕೋಟ್ಯಂತರ ಜನರು, ಒಂದೇ ಭಾವನೆ, ಒಂದೇ ಮನೋಭಾವದಲ್ಲಿ, ಒಂದೇ ಪ್ರಯತ್ನದಲ್ಲಿ ಒಂದಾದರು - ಇದನ್ನು ಜಗತ್ತು ನಿಜವಾಗಿಯೂ ಅದ್ಭುತವೆಂದು ಪರಿಗಣಿಸುತ್ತದೆ. 'ಮಹಾಕುಂಭ'ದ ಯಶಸ್ಸು ಭಾರತದ ಏಕತೆ ಮತ್ತು ಶಕ್ತಿಗೆ ಅದ್ಭುತ ಸಾಕ್ಷಿಯಾಗಿದೆ.

ಸ್ನೇಹಿತರೇ,

ನಮ್ಮ ದೇಶವು ಭಾಷಾ ವೈವಿಧ್ಯತೆಯಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ನಾವು ಮರಾಠಿ, ಅಸ್ಸಾಮಿ, ಬಾಂಗ್ಲಾ, ಪಾಲಿ ಮತ್ತು ಪ್ರಾಕೃತ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿದ್ದೇವೆ. ನನ್ನ ಅಭಿಪ್ರಾಯದಲ್ಲಿ, ನಮ್ಮ ಭಾಷೆಗಳು ಹೆಚ್ಚು ಅಭಿವೃದ್ಧಿ ಹೊಂದಿದಷ್ಟೂ, ಅವು ಹೆಚ್ಚು ಶ್ರೀಮಂತವಾಗುವುದರಿಂದ, ನಮ್ಮ ಸಂಪೂರ್ಣ ಜ್ಞಾನ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದು ನಮ್ಮ ಶಕ್ತಿ - ಮತ್ತು ಇಂದಿನ ದತ್ತಾಂಶ ಯುಗದಲ್ಲಿ, ಇದು ಜಗತ್ತಿಗೆ ಒಂದು ದೊಡ್ಡ ಶಕ್ತಿಯಾಗಬಹುದು, ಏಕೆಂದರೆ ನಮ್ಮ ಭಾಷೆಗಳ ಶಕ್ತಿ ಅಂತಹದು. ನಾವು ನಮ್ಮ ಎಲ್ಲಾ ಭಾಷೆಗಳ ಬಗ್ಗೆ ಹೆಮ್ಮೆ ಪಡಬೇಕು ಮತ್ತು ಪ್ರತಿಯೊಬ್ಬರೂ ಅವುಗಳ ಅಭಿವೃದ್ಧಿಗೆ ಕೊಡುಗೆ ನೀಡಬೇಕು.

ಸ್ನೇಹಿತರೇ,

ನಮ್ಮ ಹಸ್ತಪ್ರತಿಗಳು ಅಪಾರ ಜ್ಞಾನ ಭಂಡಾರವನ್ನು ಹೊಂದಿವೆ, ಆದರೆ ಅವುಗಳ ಬಗ್ಗೆ ಅಸಡ್ಡೆ ಇದೆ. ಜ್ಞಾನ ಭಾರತಂ ಮಿಷನ್ ಅಡಿಯಲ್ಲಿ, ನಾವು ಈಗ ದೇಶಾದ್ಯಂತ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು ಮತ್ತು ಪ್ರಾಚೀನ ದಾಖಲೆಗಳನ್ನು ಪತ್ತೆಹಚ್ಚಲು ಮತ್ತು ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನದ ಭಂಡಾರವನ್ನು ಸಂರಕ್ಷಿಸಲು ಕೆಲಸ ಮಾಡುತ್ತಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಈ ದೇಶವು ಕೇವಲ ಸರ್ಕಾರಗಳಿಂದ ನಿರ್ಮಾಣವಾಗಿಲ್ಲ; ಅಧಿಕಾರವನ್ನು ಹಿಡಿದವರಿಂದ ಮಾತ್ರ  ನಿರ್ಮಾಣವಾಗಿಲ್ಲ; ಕೇವಲ ಆಡಳಿತ ನಡೆಸುವವರಿಂದ ನಿರ್ಮಾಣವಾಗಿಲ್ಲ ಎಂದು ನಮ್ಮ ದೃಢವಾದ ನಂಬಿಕೆ. ಈ ರಾಷ್ಟ್ರವು ಕೋಟ್ಯಂತರ ಜನರ - ಋಷಿಗಳು, ಮುನಿಗಳು, ವಿಜ್ಞಾನಿಗಳು, ಶಿಕ್ಷಕರು, ರೈತರು, ಸೈನಿಕರು, ಕಾರ್ಮಿಕರು - ಕಠಿಣ ಪರಿಶ್ರಮದಿಂದ ನಿರ್ಮಾಣವಾಗಿದೆ - ಪ್ರತಿಯೊಬ್ಬರ ಪ್ರಯತ್ನಗಳು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡುತ್ತವೆ. ವ್ಯಕ್ತಿಗಳು ಮತ್ತು ಸಂಸ್ಥೆಗಳು ಎರಡೂ ಕೊಡುಗೆ ನೀಡುತ್ತವೆ. ಇಂದು, ಬಹಳ ಹೆಮ್ಮೆಯಿಂದ, ನಾನು ಅಂತಹ ಒಂದು ಸಂಸ್ಥೆಯನ್ನು ಉಲ್ಲೇಖಿಸಲು ಬಯಸುತ್ತೇನೆ. ನೂರು ವರ್ಷಗಳ ಹಿಂದೆ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಲಾಯಿತು. ಈ ನೂರು ವರ್ಷಗಳ ರಾಷ್ಟ್ರೀಯ ಸೇವೆಯು ಒಂದು ಅದ್ಭುತ ಮತ್ತು ಸುವರ್ಣ ಅಧ್ಯಾಯವಾಗಿದೆ. ಭಾರತ ಮಾತೆಗೆ ಸೇವೆ ಸಲ್ಲಿಸುವ ಗುರಿಯೊಂದಿಗೆ, ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರವನ್ನು ನಿರ್ಮಿಸುವ ಸಂಕಲ್ಪದೊಂದಿಗೆ, ಸ್ವಯಂಸೇವಕರು ಒಂದು ಶತಮಾನದಿಂದ ಮಾತೃಭೂಮಿಯ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಸೇವೆ, ಸಮರ್ಪಣೆ, ಸಂಘಟನೆ ಮತ್ತು ಅಪ್ರತಿಮ ಶಿಸ್ತು - ಇವು ಅದರ ವಿಶಿಷ್ಟ ಲಕ್ಷಣಗಳಾಗಿವೆ. ಒಂದರ್ಥದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘವು ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆಯಾಗಿದ್ದು, ಶತಮಾನಗಳಷ್ಟು ಹಳೆಯ ಸಮರ್ಪಣೆಯ ಇತಿಹಾಸವನ್ನು ಹೊಂದಿದೆ. ಇಂದು, ಕೆಂಪು ಕೋಟೆಯ ಪ್ರಾಂಗಣದಿಂದ, ಈ ಶತಮಾನದಷ್ಟು ಹಳೆಯ ರಾಷ್ಟ್ರೀಯ ಸೇವೆಯ ಪ್ರಯಾಣಕ್ಕೆ ಕೊಡುಗೆ ನೀಡಿದ ಎಲ್ಲಾ ಸ್ವಯಂಸೇವಕರಿಗೆ ನಾನು ನಮಸ್ಕರಿಸುತ್ತೇನೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಈ ಭವ್ಯ ಮತ್ತು ಸಮರ್ಪಿತ ಪ್ರಯಾಣದ ಬಗ್ಗೆ ರಾಷ್ಟ್ರವು ಹೆಮ್ಮೆಪಡುತ್ತದೆ, ಅದು ನಮಗೆ ಸ್ಫೂರ್ತಿ ನೀಡುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ,

ನಾವು ಸಮೃದ್ಧಿಯತ್ತ ಸಾಗುತ್ತಿದ್ದೇವೆ, ಆದರೆ ಸಮೃದ್ಧಿಯ ಹಾದಿಯು ಭದ್ರತೆಯ ಮೂಲಕ ಹಾದುಹೋಗುತ್ತದೆ. ಕಳೆದ 11 ವರ್ಷಗಳಲ್ಲಿ, ನಾವು ರಾಷ್ಟ್ರೀಯ ಭದ್ರತೆಗಾಗಿ, ರಾಷ್ಟ್ರವನ್ನು ರಕ್ಷಿಸಲು ಮತ್ತು ಅದರ ನಾಗರಿಕರ ಸುರಕ್ಷತೆಗಾಗಿ ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡಿದ್ದೇವೆ. ಬದಲಾವಣೆಯನ್ನು ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ರಾಷ್ಟ್ರದ ವಿಶಾಲ ಬುಡಕಟ್ಟು ಪ್ರದೇಶಗಳು ಹಲವು ದಶಕಗಳಿಂದ ನಕ್ಸಲಿಸಂ ಮತ್ತು ಮಾವೋವಾದದ ಹಿಡಿತದಲ್ಲಿ ರಕ್ತಸಿಕ್ತವಾಗಿದ್ದವು ಎಂದು ದೇಶಕ್ಕೆ ತಿಳಿದಿದೆ. ನನ್ನ ಬುಡಕಟ್ಟು ಕುಟುಂಬಗಳು ಅತ್ಯಂತ ದೊಡ್ಡ ನೋವನ್ನು ಸಹಿಸಿಕೊಂಡವು - ಬುಡಕಟ್ಟು ತಾಯಂದಿರು ಮತ್ತು ಸಹೋದರಿಯರು ತಮ್ಮ ಭರವಸೆಯ ಮಕ್ಕಳನ್ನು ಕಳೆದುಕೊಂಡರು; ಚಿಕ್ಕ ಮಕ್ಕಳನ್ನು ತಪ್ಪು ದಾರಿಗೆ ಎಳೆಯಲಾಯಿತು, ದಾರಿ ತಪ್ಪಿಸಲಾಯಿತು ಮತ್ತು ಅವರ ಜೀವನವನ್ನು ನಾಶಪಡಿಸಲಾಯಿತು. ನಾವು ದೃಢ ಮತ್ತು ನಿರ್ಣಾಯಕ ಕ್ರಮ ಕೈಗೊಂಡೆವು. 125 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಕ್ಸಲಿಸಂ ಬೇರೂರಿದ್ದ ಸಮಯವಿತ್ತು. ನಮ್ಮ ಬುಡಕಟ್ಟು ಪ್ರದೇಶಗಳು ಮತ್ತು ಯುವಕರು ಮಾವೋವಾದದ ಹಿಡಿತದಲ್ಲಿ ಸಿಲುಕಿದ್ದರು. ಇಂದು, ನಾವು ಆ ಸಂಖ್ಯೆಯನ್ನು 125 ಕ್ಕೂ ಹೆಚ್ಚು ಜಿಲ್ಲೆಗಳಿಂದ ಕೇವಲ 20 ಕ್ಕೆ ಇಳಿಸಿದ್ದೇವೆ. ಇದು ನಮ್ಮ ಬುಡಕಟ್ಟು ಸಮುದಾಯಗಳಿಗೆ ನಾವು ಸಲ್ಲಿಸಿದ ಅತ್ಯುತ್ತಮ ಸೇವೆಯಾಗಿದೆ. ಬಸ್ತಾರ್ ಎಂಬುದು ಮಾವೋವಾದಿ ಮತ್ತು ನಕ್ಸಲೈಟ್ ಬಾಂಬ್‌ ಗಳು ಮತ್ತು ಬಂದೂಕುಗಳ ಶಬ್ದಗಳಿಗೆ ಹೆಸರಾಗಿದ್ದ ಕಾಲವಿತ್ತು. ಇಂದು, ಮಾವೋವಾದ ಮತ್ತು ನಕ್ಸಲಿಸಂನಿಂದ ಮುಕ್ತರಾದ ನಂತರ, ಬಸ್ತಾರ್‌ ನ ಯುವಕರು ಒಲಿಂಪಿಕ್ಸ್‌ ನಲ್ಲಿ ಭಾಗವಹಿಸುತ್ತಿದ್ದಾರೆ; ಸಾವಿರಾರು ಯುವಕರು "ಭಾರತ್ ಮಾತಾ ಕಿ ಜೈ" ಎಂದು ಕೂಗುತ್ತಾ ಕ್ರೀಡಾ ಕ್ಷೇತ್ರವನ್ನು ಪ್ರವೇಶಿಸುತ್ತಿದ್ದಾರೆ ಮತ್ತು ಇಡೀ ವಾತಾವರಣವು ಉತ್ಸಾಹದಿಂದ ತುಂಬಿದೆ. ರಾಷ್ಟ್ರವು ಈ ರೂಪಾಂತರಕ್ಕೆ ಸಾಕ್ಷಿಯಾಗುತ್ತಿದೆ. ಒಂದು ಕಾಲದಲ್ಲಿ "ರೆಡ್ ಕಾರಿಡಾರ್" ಎಂದು ಕರೆಯಲ್ಪಡುತ್ತಿದ್ದ ಪ್ರದೇಶಗಳು ಈಗ ಹಸಿರು ಅಭಿವೃದ್ಧಿಯ ಕಾರಿಡಾರ್‌ ಗಳಾಗುತ್ತಿವೆ. ಇದು ನಮಗೆ ಹೆಮ್ಮೆಯ ವಿಷಯ. ಒಂದು ಕಾಲದಲ್ಲಿ ಭಾರತದ ಭೂಪಟವು ರಕ್ತವರ್ಣದಿಂದ ಕೆಂಪಾಗಿದ್ದ ಭಾಗಗಳು ಈಗ ಸಂವಿಧಾನ, ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿಯ ತ್ರಿವರ್ಣ ಧ್ವಜವನ್ನು ಹಾರಿಸಿವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇದು ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ವರ್ಷಾಚರಣೆ. ಈ ಬುಡಕಟ್ಟು ಪ್ರದೇಶಗಳನ್ನು ನಕ್ಸಲಿಸಂನಿಂದ ಮುಕ್ತಗೊಳಿಸುವ ಮೂಲಕ ಮತ್ತು ನನ್ನ ಬುಡಕಟ್ಟು ಕುಟುಂಬಗಳ ಯುವಕರ ಜೀವಗಳನ್ನು ಉಳಿಸುವ ಮೂಲಕ, ನಾವು ಅವರಿಗೆ ನಿಜವಾದ ಗೌರವ ಸಲ್ಲಿಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ನಾನು ರಾಷ್ಟ್ರವನ್ನು ಒಂದು ಗಂಭೀರ ಕಾಳಜಿ ಮತ್ತು ಸವಾಲಿನ ಬಗ್ಗೆ ಎಚ್ಚರಿಸಲು ಬಯಸುತ್ತೇನೆ. ಉದ್ದೇಶಪೂರ್ವಕ ಪಿತೂರಿಯ ಭಾಗವಾಗಿ, ದೇಶದ ಜನಸಂಖ್ಯಾಶಾಸ್ತ್ರವನ್ನು ಬದಲಾಯಿಸಲಾಗುತ್ತಿದೆ. ಹೊಸ ಬಿಕ್ಕಟ್ಟಿನ ಬೀಜಗಳನ್ನು ಬಿತ್ತಲಾಗುತ್ತಿದೆ. ಈ ನುಸುಳುಕೋರರು ನಮ್ಮ ಯುವಕರ ಜೀವನೋಪಾಯವನ್ನು ಕಸಿದುಕೊಳ್ಳುತ್ತಿದ್ದಾರೆ. ಈ ನುಸುಳುಕೋರರು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾರೆ. ಇದನ್ನು ಸಹಿಸಲಾಗುವುದಿಲ್ಲ. ಈ ನುಸುಳುಕೋರರು ಮುಗ್ಧ ಬುಡಕಟ್ಟು ಜನಾಂಗದವರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ಅವರ ಭೂಮಿಯನ್ನು ಕಸಿದುಕೊಳ್ಲೂತ್ತಿದ್ದಾರೆ. ರಾಷ್ಟ್ರವು ಇದನ್ನು ಸಹಿಸುವುದಿಲ್ಲ. ಜನಸಂಖ್ಯಾ ಬದಲಾವಣೆ ಸಂಭವಿಸಿದಾಗ, ವಿಶೇಷವಾಗಿ ಗಡಿ ಪ್ರದೇಶಗಳಲ್ಲಿ, ಅದು ರಾಷ್ಟ್ರೀಯ ಭದ್ರತೆಗೆ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಇದು ದೇಶದ ಏಕತೆ, ಸಮಗ್ರತೆ ಮತ್ತು ಪ್ರಗತಿಗೆ ಬೆದರಿಕೆ ಹಾಕುತ್ತದೆ. ಇದು ಸಾಮಾಜಿಕ ಉದ್ವಿಗ್ನತೆಯ ಬೀಜಗಳನ್ನು ಬಿತ್ತುತ್ತದೆ. ಯಾವುದೇ ದೇಶವು ನುಸುಳುಕೋರರಿಗೆ ಶರಣಾಗಲು ಸಾಧ್ಯವಿಲ್ಲ. ವಿಶ್ವದ ಯಾವುದೇ ರಾಷ್ಟ್ರವು ಹಾಗೆ ಮಾಡುವುದಿಲ್ಲ - ಹಾಗಾದರೆ ನಾವು ಭಾರತದಲ್ಲಿ ಅದನ್ನು ಮಾಡಲು ಬಿಡಲಾಗುತ್ತದೆಯೇ? ನಮ್ಮ ಪೂರ್ವಜರು ತ್ಯಾಗದ ಮೂಲಕ ಸ್ವಾತಂತ್ರ್ಯವನ್ನು ಪಡೆದರು; ಅವರು ನಮಗೆ ಸ್ವತಂತ್ರ ಭಾರತವನ್ನು ನೀಡಿದರು. ನಮ್ಮ ರಾಷ್ಟ್ರದೊಳಗೆ ಇಂತಹ ಕೃತ್ಯಗಳನ್ನು ನಾವು ಸ್ವೀಕರಿಸದಿರುವುದು ಆ ಮಹಾನ್ ಆತ್ಮಗಳಿಗೆ ತೋರಿಸುವ ನಮ್ಮ ಕರ್ತವ್ಯವಾಗಿದೆ. ಇದು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿರುತ್ತದೆ. ಆದ್ದರಿಂದ, ಇಂದು ಕೆಂಪು ಕೋಟೆಯ ಪ್ರಾಂಗಣದಿಂದ ಒಂದು ಉನ್ನತಾಧಿಕಾರದ ಜನಸಂಖ್ಯಾ ಮಿಷನ್ ಅನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ನಾನು ಘೋಷಿಸುತ್ತಿದ್ದೇನೆ. ಈ ಮಿಷನ್ ಮೂಲಕ, ಭಾರತದಲ್ಲಿ ಈಗ ಎದುರಾಗಿರುವ ತೀವ್ರ ಬಿಕ್ಕಟ್ಟನ್ನು ಉದ್ದೇಶಪೂರ್ವಕ ಮತ್ತು ಸಮಯಕ್ಕೆ ಅನುಗುಣವಾಗಿ ಪರಿಹರಿಸಲಾಗುವುದು. ನಾವು ಈ ದಿಕ್ಕಿನಲ್ಲಿ ಮುಂದುವರಿಯುತ್ತಿದ್ದೇವೆ.

ನನ್ನ ಪ್ರೀತಿಯ ದೇಶಬಾಂಧವರೇ,

ನಾಳೆ ದೇಶಾದ್ಯಂತ ಶ್ರೀ ಕೃಷ್ಣನ ಜನ್ಮಾಷ್ಟಮಿಯ ಪವಿತ್ರ ಹಬ್ಬವನ್ನು ಆಚರಿಸಲಾಗುತ್ತದೆ.

ಸ್ನೇಹಿತರೇ,

ನಾನು ಭಗವಾನ್ ಶ್ರೀ ಕೃಷ್ಣನನ್ನು ನೆನಪಿಸಿಕೊಂಡಾಗ, ಇಂದು ಪ್ರಪಂಚದಾದ್ಯಂತ ಯುದ್ಧದ ವಿಧಾನಗಳು ಬದಲಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಭಾರತವು ಪ್ರತಿಯೊಂದು ಹೊಸ ಯುದ್ಧ ವಿಧಾನವನ್ನು ನಿಭಾಯಿಸಲು ಸಮರ್ಥವಾಗಿದೆ ಎಂದು ನಾವು ನೋಡಿದ್ದೇವೆ. ತಂತ್ರಜ್ಞಾನದಲ್ಲಿ ನಮಗಿರುವ ಪರಿಣತಿಯನ್ನು ಆಪರೇಷನ್ ಸಿಂಧೂರದಲ್ಲಿ ನಾವು ತೋರಿಸಿದ್ದೇವೆ. ಪಾಕಿಸ್ತಾನವು ನಮ್ಮ ಮಿಲಿಟರಿ ನೆಲೆಗಳು, ನಮ್ಮ ವಾಯುನೆಲೆಗಳು, ನಮ್ಮ ಸೂಕ್ಷ್ಮ ಸ್ಥಳಗಳು, ನಮ್ಮ ಪೂಜಾ ಸ್ಥಳಗಳು, ನಮ್ಮ ನಾಗರಿಕರ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ ಗಳೊಂದಿಗೆ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ದಾಳಿ ಮಾಡಿದೆ. ದೇಶವು ಅದನ್ನು ನೋಡಿದೆ, ಆದರೆ ಕಳೆದ 10 ವರ್ಷಗಳಲ್ಲಿ ದೇಶವನ್ನು ಸುರಕ್ಷಿತವಾಗಿಡಲು ಮಾಡಿದ ಪ್ರಯತ್ನಗಳ  ಫಲಿತಾಂಶವೆಂದರೆ ನಮ್ಮ ವೀರ ಯೋಧರು ಮತ್ತು ನಮ್ಮ ತಂತ್ರಜ್ಞಾನದಿಂದ ಅವರ ಪ್ರತಿಯೊಂದು ದಾಳಿಯೂ ತರಗೆಲೆಗಳಂತೆ ಚದುರಿಹೋಗಿವೆ. ಅವರು ಸಣ್ಣ ಹಾನಿಯನ್ನು ಸಹ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ, ಯುದ್ಧಭೂಮಿಯಲ್ಲಿ ತಂತ್ರಜ್ಞಾನ ವಿಸ್ತರಿಸುತ್ತಿರುವಾಗ, ತಂತ್ರಜ್ಞಾನವು ಪ್ರಬಲವಾಗುತ್ತಿರುವಾಗ, ರಾಷ್ಟ್ರದ ರಕ್ಷಣೆಗಾಗಿ, ದೇಶದ ನಾಗರಿಕರ ಸುರಕ್ಷತೆಗಾಗಿ, ನಾವು ಇಂದು ಗಳಿಸಿರುವ ಪರಿಣತಿಯನ್ನು ಮತ್ತಷ್ಟು ವಿಸ್ತರಿಸಬೇಕಾಗಿದೆ. ಇಂದು ನಾವು ಸಾಧಿಸಿರುವ ಪಾಂಡಿತ್ಯವನ್ನು ನಿರಂತರವಾಗಿ ಉನ್ನತೀಕರಿಸಬೇಕಾಗಿದೆ. ಮತ್ತು ಆದ್ದರಿಂದ, ಸ್ನೇಹಿತರೇ, ನಾನು ಪ್ರತಿಜ್ಞೆ ಮಾಡಿದ್ದೇನೆ. ನನಗೆ ನಿಮ್ಮ ಆಶೀರ್ವಾದ ಬೇಕು, ನನಗೆ ಕೋಟ್ಯಂತರ ದೇಶವಾಸಿಗಳ ಆಶೀರ್ವಾದ ಬೇಕು, ಏಕೆಂದರೆ ಎಷ್ಟೇ ಸಮೃದ್ಧಿಯಿದ್ದರೂ, ಭದ್ರತೆಯ ಬಗ್ಗೆ ಅಸಡ್ಡೆ ಇದ್ದರೆ, ಸಮೃದ್ಧಿಯೂ ಸಹ ಪ್ರಯೋಜನವಿಲ್ಲ. ಆದ್ದರಿಂದ ಭದ್ರತೆಯ ಮಹತ್ವ ಬಹಳ ದೊಡ್ಡದು.

ಅದಕ್ಕಾಗಿಯೇ ನಾನು ಇಂದು ಕೆಂಪು ಕೋಟೆಯ ಪ್ರಾಂಗಣದಿಂದ ಹೇಳುತ್ತಿದ್ದೇನೆ, ಮುಂದಿನ 10 ವರ್ಷಗಳಲ್ಲಿ, 2035 ರ ವೇಳೆಗೆ, ಆಸ್ಪತ್ರೆಗಳು, ರೈಲ್ವೆ, ಯಾವುದೇ ಧಾರ್ಮಿಕ ಕೇಂದ್ರಗಳಂತಹ ಕಾರ್ಯತಂತ್ರದ ಮತ್ತು ನಾಗರಿಕ ಪ್ರದೇಶಗಳನ್ನು ಒಳಗೊಂಡಂತೆ ದೇಶದ ಎಲ್ಲಾ ಪ್ರಮುಖ ಸ್ಥಳಗಳಿಗೆ ಹೊಸ ತಂತ್ರಜ್ಞಾನದ ವೇದಿಕೆಗಳ ಮೂಲಕ ಸಂಪೂರ್ಣ ಭದ್ರತಾ ರಕ್ಷಣೆ ನೀಡಲಾಗುವುದು. ಈ ಭದ್ರತಾ ಕವಚವು ವಿಸ್ತರಿಸುತ್ತಲೇ ಇರಬೇಕು, ದೇಶದ ಪ್ರತಿಯೊಬ್ಬ ನಾಗರಿಕನು ಸುರಕ್ಷಿತವಾಗಿರಬೇಕು, ನಮ್ಮ ಮೇಲೆ ದಾಳಿ ಮಾಡಲು ಯಾವುದೇ ತಂತ್ರಜ್ಞಾನ ಬಂದರೂ, ನಮ್ಮ ತಂತ್ರಜ್ಞಾನವು ಅದಕ್ಕಿಂತ ಉತ್ತಮವಾಗಿದೆ ಎಂದು ಸಾಬೀತುಪಡಿಸಬೇಕು. ಆದ್ದರಿಂದ, ಮುಂಬರುವ 10 ವರ್ಷಗಳಲ್ಲಿ, 2035 ರವರೆಗೆ, ನಾನು ಈ ರಾಷ್ಟ್ರೀಯ ಭದ್ರತಾ ಕವಚವನ್ನು ವಿಸ್ತರಿಸಲು, ಬಲಪಡಿಸಲು, ಆಧುನೀಕರಿಸಲು ಬಯಸುತ್ತೇನೆ ಮತ್ತು ಭಗವಾನ್ ಶ್ರೀ ಕೃಷ್ಣನಿಂದ ಸ್ಫೂರ್ತಿ ಪಡೆದು, ನಾವು ಶ್ರೀ ಕೃಷ್ಣನ ಸುದರ್ಶನ ಚಕ್ರದ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ಮಹಾಭಾರತ ಯುದ್ಧ ನಡೆಯುತ್ತಿರುವಾಗ, ಶ್ರೀಕೃಷ್ಣನು ತನ್ನ ಸುದರ್ಶನ ಚಕ್ರದಿಂದ ಸೂರ್ಯನ ಬೆಳಕನ್ನು ತಡೆದು ಹಗಲಿನಲ್ಲಿ ಕತ್ತಲೆಯಾಗುವಂತೆ ಮಾಡಿದ್ದು ನಿಮಗೆ ತಿಳಿದಿರಬಹುದು. ಸುದರ್ಶನ ಚಕ್ರದಿಂದ ಸೂರ್ಯನ ಬೆಳಕನ್ನು ನಿರ್ಬಂಧಿಸಲಾಯಿತು ಮತ್ತು ಅರ್ಜುನನು ಜಯದ್ರಥನನ್ನು ಕೊಲ್ಲಲು ತಾನು ಮಾಡಿದ ಪ್ರತಿಜ್ಞೆಯನ್ನು ಪೂರೈಸಲು ಸಾಧ್ಯವಾಯಿತು. ಇದು ಸುದರ್ಶನ ಚಕ್ರದ ಶಕ್ತಿ ಮತ್ತು ತಂತ್ರದ ಫಲಿತಾಂಶವಾಗಿದೆ. ಈಗ ದೇಶವು ಮಿಷನ್ ಸುದರ್ಶನ ಚಕ್ರವನ್ನು ಪ್ರಾರಂಭಿಸಲಿದೆ. ಈ ಮಿಷನ್ ಸುದರ್ಶನ ಚಕ್ರ, ಒಂದು ಶಕ್ತಿಶಾಲಿ ಆಯುಧ ವ್ಯವಸ್ಥೆಯಾಗಿದ್ದು, ಶತ್ರುಗಳ ದಾಳಿಯನ್ನು ನಾಶಪಡಿಸುವುದಲ್ಲದೆ, ಶತ್ರುಗಳ ಮೇಲೆ ಹಲವು ಪಟ್ಟು ಹೆಚ್ಚು ಪ್ರತಿದಾಳಿ ಮಾಡುತ್ತದೆ.

ಭಾರತದ ಈ ಸುದರ್ಶನ ಚಕ್ರ ಮಿಷನ್ ಗೆ ನಾವು ಕೆಲವು ಮೂಲಭೂತ ಅಂಶಗಳನ್ನು ಸಹ ನಿರ್ಧರಿಸಿದ್ದೇವೆ; ಮುಂಬರುವ 10 ವರ್ಷಗಳಲ್ಲಿ ಅದನ್ನು ಹೆಚ್ಚಿನ ತೀವ್ರತೆಯಿಂದ ಮುಂದಕ್ಕೆ ಕೊಂಡೊಯ್ಯಲು ನಾವು ಬಯಸುತ್ತೇವೆ. ಮೊದಲನೆಯದಾಗಿ, ಈ ಸಂಪೂರ್ಣ ಆಧುನಿಕ ವ್ಯವಸ್ಥೆ, ಅದರ ಸಂಶೋಧನೆ, ಅಭಿವೃದ್ಧಿ, ಅದರ ಉತ್ಪಾದನೆಯನ್ನು ನಮ್ಮ ದೇಶದಲ್ಲಿಯೇ ಮಾಡಬೇಕು, ಇದನ್ನು ನಮ್ಮ ದೇಶದ ಯುವಜನರ ಪ್ರತಿಭೆಯಿಂದ ಮಾಡಬೇಕು, ಇದನ್ನು ನಮ್ಮ ದೇಶದ ಜನರೇ ಮಾಡಬೇಕು. ಎರಡನೆಯದಾಗಿ, ಯುದ್ಧದ ವಿಷಯದಲ್ಲಿ ಭವಿಷ್ಯದ ಸಾಧ್ಯತೆಗಳನ್ನು ಲೆಕ್ಕಹಾಕುವ ಮತ್ತು ಪ್ಲಸ್ ಒನ್‌ ತಂತ್ರವನ್ನು ರೂಪಿಸುವ ಒಂದು ವ್ಯವಸ್ಥೆ ಇರುತ್ತದೆ. ಮತ್ತು ಮೂರನೆಯ ವಿಷಯವೆಂದರೆ ಸುದರ್ಶನ ಚಕ್ರದ ಶಕ್ತಿ, ಅದು ತುಂಬಾ ನಿಖರವಾಗಿತ್ತು, ಅದು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗಿ ಶ್ರೀ ಕೃಷ್ಣನ ಬಳಿಗೆ ಮರಳುತ್ತಿತ್ತು. ಈ ಸುದರ್ಶನ ಚಕ್ರದ ಮೂಲಕ ನಾವು ಗುರಿಯಿಟ್ಟು ನಿಖರವಾದ ಕ್ರಮಕ್ಕಾಗಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಸಾಗುತ್ತೇವೆ ಮತ್ತು ಬದಲಾಗುತ್ತಿರುವ ಯುದ್ಧ ವಿಧಾನಗಳಲ್ಲಿ ರಾಷ್ಟ್ರದ ಭದ್ರತೆ ಮತ್ತು ನಾಗರಿಕರ ಸುರಕ್ಷತೆಗಾಗಿ ಈ ಕೆಲಸವನ್ನು ಹೆಚ್ಚಿನ ಬದ್ಧತೆಯೊಂದಿಗೆ ಮುಂದಕ್ಕೆ ಕೊಂಡೊಯ್ಯವುದಾಗಿ ನಾನು ಪ್ರತಿಜ್ಞೆ ಮಾಡುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ಪ್ರಜಾಪ್ರಭುತ್ವ, ಸ್ವತಂತ್ರ ಭಾರತದ ಬಗ್ಗೆ ಮಾತನಾಡುವಾಗ, ನಮ್ಮ ಸಂವಿಧಾನವು ನಮಗೆ ಅತ್ಯುತ್ತಮ ದೀಪಸ್ತಂಭ, ನಮ್ಮ ಸ್ಫೂರ್ತಿಯ ಕೇಂದ್ರ, ಆದರೆ 50 ವರ್ಷಗಳ ಹಿಂದೆ, ಭಾರತದ ಸಂವಿಧಾನದ ಕತ್ತು ಹಿಸುಕಲಾಯಿತು. ಭಾರತದ ಸಂವಿಧಾನದ ಬೆನ್ನಿಗೆ ಚೂರಿಯಿಂದ ಇರಲಾಯಿತು, ದೇಶವನ್ನು ಜೈಲಾಗಿ ಪರಿವರ್ತಿಸಲಾಯಿತು, ತುರ್ತು ಪರಿಸ್ಥಿತಿಯನ್ನು  ಹೇರಲಾಯಿತು, ತುರ್ತು ಪರಿಸ್ಥಿತಿಗೆ 50 ವರ್ಷಗಳು ಸಂದಿವೆ, ದೇಶದ ಯಾವುದೇ ಪೀಳಿಗೆಯು ಸಂವಿಧಾನವನ್ನು ಕೊಂದ ಈ ಪಾಪವನ್ನು ಎಂದಿಗೂ ಮರೆಯಬಾರದು. ಸಂವಿಧಾನವನ್ನು ಕೊಂದ ಪಾಪಿಗಳನ್ನು ಮರೆಯಬಾರದು ಮತ್ತು ಭಾರತದ ಸಂವಿಧಾನದ ಕಡೆಗೆ ನಮ್ಮ ಸಮರ್ಪಣೆಯನ್ನು ಬಲಪಡಿಸುವ ಮೂಲಕ ನಾವು ಮುಂದುವರಿಯಬೇಕು, ಅದು ನಮ್ಮ ಸ್ಫೂರ್ತಿ.

ನನ್ನ ಪ್ರೀತಿಯ ದೇಶಬಾಂಧವರೇ,

ನಾನು ಈ ಕೆಂಪು ಕೋಟೆಯಿಂದ ಪಂಚ ಪ್ರಾಣದ ಬಗ್ಗೆ ಮಾತನಾಡಿದ್ದೆ. ಇಂದು, ನನ್ನ ದೇಶವಾಸಿಗಳಿಗೆ ಮತ್ತೊಮ್ಮೆ ಕೆಂಪು ಕೋಟೆಯಿಂದ ನೆನಪಿಸಲು ಬಯಸುತ್ತೇನೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಹಾದಿಯಲ್ಲಿ ನಾವು ನಿಲ್ಲುವುದಿಲ್ಲ ಅಥವಾ ತಲೆಬಾಗುವುದಿಲ್ಲ, ನಾವು ಶ್ರಮಿಸುತ್ತಲೇ ಇರುತ್ತೇವೆ ಮತ್ತು 2047 ರಲ್ಲಿ ನಮ್ಮ ಕಣ್ಣೆದುರೇ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮ ಎರಡನೆಯ ಪ್ರತಿಜ್ಞೆ ಏನೆಂದರೆ, ನಮ್ಮ ಜೀವನದಲ್ಲಿ, ನಮ್ಮ ವ್ಯವಸ್ಥೆಗಳಲ್ಲಿ, ನಮ್ಮ ನಿಯಮಗಳು, ಕಾನೂನುಗಳು ಮತ್ತು ಸಂಪ್ರದಾಯಗಳಲ್ಲಿ ಗುಲಾಮಗಿರಿಯ ಒಂದು ಕಣವೂ ಉಳಿಯಲು ನಾವು ಬಿಡುವುದಿಲ್ಲ. ಎಲ್ಲಾ ರೀತಿಯ ಗುಲಾಮಗಿರಿಯಿಂದ ನಾವು ಮುಕ್ತರಾಗುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ.

ನನ್ನ ಪ್ರೀತಿಯ ದೇಶಬಾಂಧವರೇ,

ನಮ್ಮ ಪರಂಪರೆಯ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ನಮ್ಮ ಗುರುತಿನ ಅತಿದೊಡ್ಡ ಆಭರಣ, ಅತಿದೊಡ್ಡ ರತ್ನ, ಅತಿದೊಡ್ಡ ಕಿರೀಟ ನಮ್ಮ ಪರಂಪರೆಯಾಗಿದೆ, ನಾವು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಏಕತೆಯು ಇವೆಲ್ಲವುಗಳಲ್ಲಿ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಆದ್ದರಿಂದ ಯಾರೂ ಏಕತೆಯ ಎಳೆಯನ್ನು ಮುರಿಯಲು ಸಾಧ್ಯವಾಗಬಾರದು ಎಂಬುದು ನಮ್ಮ ಸಾಮೂಹಿಕ ಸಂಕಲ್ಪವಾಗಿರುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ,

ಭಾರತ ಮಾತೆಗೆ ನಮ್ಮ ಕರ್ತವ್ಯವನ್ನು ಪೂರೈಸುವುದು ಯಾವುದೇ ಪೂಜೆಗಿಂತ ಕಡಿಮೆಯಲ್ಲ, ತಪಸ್ಸಿಗಿಂತ ಕಡಿಮೆಯಲ್ಲ, ಆರಾಧನೆಗಿಂತ ಕಡಿಮೆಯಲ್ಲ ಮತ್ತು ಅದೇ ಭಾವನೆಯೊಂದಿಗೆ, ಮಾತೃಭೂಮಿಯ ಕಲ್ಯಾಣಕ್ಕಾಗಿ, ನಮ್ಮ ಅತ್ಯಂತ ಕಠಿಣ ಪರಿಶ್ರಮವನ್ನು ಹಾಕುತ್ತಾ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ನಾವು ನಮ್ಮನ್ನು ಸಮರ್ಪಿಸಿಕೊಳ್ಳುತ್ತೇವೆ, ನಾವು ಹೊಂದಿರುವ ಸಾಮರ್ಥ್ಯದೊಂದಿಗೆ ನಾವು ಯಾವುದೇ ಅವಕಾಶವನ್ನು ಬಿಡುವುದಿಲ್ಲ, ಅಷ್ಟೇ ಅಲ್ಲ, ನಾವು ಹೊಸ ಅವಕಾಶಗಳನ್ನು ಸೃಷ್ಟಿಸುತ್ತೇವೆ ಮತ್ತು ಅವುಗಳನ್ನು ಸೃಷ್ಟಿಸಿದ ನಂತರ, ನಾವು 140 ಕೋಟಿ ದೇಶವಾಸಿಗಳ ಬಲದೊಂದಿಗೆ ಮುಂದುವರಿಯುತ್ತೇವೆ, ಮುನ್ನಡೆಯುತ್ತೇವೆ, ಮುನ್ನುಗ್ಗುತ್ತೇವೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾವು ನೆನಪಿಟ್ಟುಕೊಳ್ಳಬೇಕು, 140 ಕೋಟಿ ದೇಶವಾಸಿಗಳು ನೆನಪಿಟ್ಟುಕೊಳ್ಳಬೇಕು, ಕಷ್ಟಪಟ್ಟು ದುಡಿದವನು, ಕಷ್ಟಪಟ್ಟು ಕೆಲಸ ಮಾಡಿದವನು ಇತಿಹಾಸವನ್ನು ಸೃಷ್ಟಿಸಿದ್ದಾನೆ. ಕಷ್ಟಪಟ್ಟು ದುಡಿದವನು, ಇತಿಹಾಸವನ್ನು ಸೃಷ್ಟಿಸಿದ್ದಾನೆ. ಉಕ್ಕಿನ ಬಂಡೆಗಳನ್ನು ಮುರಿದವನು, ಕಾಲವನ್ನು ಬಗ್ಗಿಸಿದ್ದಾನೆ. ಉಕ್ಕಿನ ಬಂಡೆಗಳನ್ನು ಮುರಿದವನು, ಕಾಲವನ್ನು ಬಗ್ಗಿಸಿದ್ದಾನೆ ಮತ್ತು ಇದು ಕಾಲವನ್ನು ಬಗ್ಗಿಸುವ ಸಮಯ, ಇದು ಸರಿಯಾದ ಸಮಯ.

ನನ್ನ ಪ್ರೀತಿಯ ದೇಶಬಾಂಧವರೇ,

ಮತ್ತೊಮ್ಮೆ, ಈ ಮಹಾನ್ ಸ್ವಾತಂತ್ರ್ಯೋತ್ಸವದಂದು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ನೀವು ನನ್ನೊಂದಿಗೆ ಹೇಳಿ,

ಜೈ ಹಿಂದ್! ಜೈ ಹಿಂದ್! ಜೈ ಹಿಂದ್!

ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ! ಭಾರತ್ ಮಾತಾ ಕಿ ಜೈ!

ವಂದೇ ಮಾತರಂ! ವಂದೇ ಮಾತರಂ! ವಂದೇ ಮಾತರಂ!

ಧನ್ಯವಾದಗಳು!

 

*****


(Release ID: 2157014)