ಹಣಕಾಸು ಸಚಿವಾಲಯ
azadi ka amrit mahotsav

ಎಸ್ & ಪಿ ಸಂಸ್ಥೆಯು ಸ್ಥಿರ ಮುನ್ನೋಟದೊಂದಿಗೆ ಭಾರತವನ್ನು ಬಿಬಿಬಿಗೆ  ಮೇಲ್ದರ್ಜೆಗೇರಿಸಿರುವುದು ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಹಣಕಾಸಿನ ಬಲವರ್ಧನೆಯ ಸಂಕೇತ

Posted On: 14 AUG 2025 6:37PM by PIB Bengaluru

ಭಾರತದ ದೀರ್ಘಕಾಲೀನ ಋಣ ಮೌಲ್ಯಮಾಪನ (ಸಾವರಿನ್ ಕ್ರೆಡಿಟ್ ರೇಟಿಂಗ್) ಅನ್ನು ʼಬಿಬಿಬಿʼ-(BBB-) ನಿಂದ ʼಬಿಬಿಬಿʼ(BBB)ಗೆ ಮತ್ತು ಅಲ್ಪಾವಧಿಯ ರೇಟಿಂಗ್ ಅನ್ನು 'ಎ-3' ನಿಂದ 'ಎ-2' ಗೆ ಸ್ಥಿರವಾದ ಮುನ್ನೋಟದೊಂದಿಗೆ ಮೇಲ್ದರ್ಜೆಗೇರಿಸುವ ಸ್ಟ್ಯಾಂಡರ್ಡ್ & ಪೂರ್ಸ್ (S&P) ಗ್ಲೋಬಲ್ ರೇಟಿಂಗ್‌ ಸಂಸ್ಥೆಯ ನಿರ್ಧಾರವನ್ನು ಹಣಕಾಸು ಸಚಿವಾಲಯ ಸ್ವಾಗತಿಸಿದೆ. ಈ ರೇಟಿಂಗ್ ಮೇಲ್ದರ್ಜೀಕೃತಗೊಂಡಿರುವುದು ಭಾರತದ ಆರ್ಥಿಕ ಪಥ ಮತ್ತು ಜಾಣ್ಮೆಯ ಹಣಕಾಸು ನಿರ್ವಹಣೆಯ ಮಹತ್ವದ ದೃಢೀಕರಣವಾಗಿದೆ. ಇದು 18 ವರ್ಷಗಳಲ್ಲಿ ಎಸ್ & ಪಿ ನಿಂದ ದೇಶದ ಮೊದಲ ಸಾವರಿನ್ ಅಪ್‌ಗ್ರೇಡ್ ಆಗಿದ್ದು, ಈ ಹಿಂದೆ 2007ರಲ್ಲಿ ಭಾರತವನ್ನು ಬಿಬಿಬಿ-  ಹೂಡಿಕೆ ದರ್ಜೆಗೆ ಏರಿಸಲಾಗಿತ್ತು. ಮೇ 2024ರಲ್ಲಿ, ಈ ಸಂಸ್ಥೆಯು ಭಾರತದ ಕುರಿತಾದ ತನ್ನ ದೃಷ್ಟಿಕೋನವನ್ನು 'ಸ್ಥಿರ' ದಿಂದ 'ಸಕಾರತ್ಮಕ' ಎಂದು ಪರಿಷ್ಕರಿಸಿತ್ತು.

ಇಂದು ಪ್ರಕಟವಾದ ಎಸ್ & ಪಿ ಯ ಭಾರತದ ಸಾವರಿನ್ ರೇಟಿಂಗ್ ವಿಮರ್ಶೆಯ ಪ್ರಕಾರ, ಈ ಮೇಲ್ದರ್ಜೆಯು ಭಾರತದ ಸಕಾರಾತ್ಮಕ ಮತ್ತು ಕ್ರಿಯಾತ್ಮಕ ಆರ್ಥಿಕ ಬೆಳವಣಿಗೆ, ಹಣಕಾಸಿನ ಬಲವರ್ಧನೆಗೆ ಸರ್ಕಾರದ ನಿರಂತರ ಬದ್ಧತೆ, ಸಾರ್ವಜನಿಕ ಖರ್ಚಿನ ಅದರಲ್ಲೂ ಬಂಡವಾಳ ಮತ್ತು ಮೂಲಸೌಕರ್ಯಗಳ ಸುಧಾರಿತ ಗುಣಮಟ್ಟಸದೃಢ ಕಾರ್ಪೊರೇಟ್, ಹಣಕಾಸು ಮತ್ತು ಬಾಹ್ಯ ಲೆಕ್ಕಾಚಾರ ತಃಖ್ತೆ ಸೇರಿದಂತೆ ಪ್ರಮುಖ ಅಂಶಗಳ ಸಂಯೋಜಿತ ಪ್ರತಿಬಿಂಬವಾಗಿದೆ. ವಿಶ್ವಾಸಾರ್ಹ ಹಣದುಬ್ಬರ ನಿರ್ವಹಣೆ ಮತ್ತು ನೀತಿ ಅಂದಾಜು ಹೆಚ್ಚಳ ಸಹ ಈ ನಿಟ್ಟಿನಲ್ಲಿ ಪಾತ್ರ ವಹಿಸಿದೆ.

ಭಾರತವನ್ನು ಜಾಗತಿಕವಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿಸಿರುವ ಭಾರತೀಯ ಆರ್ಥಿಕತೆಯ ಪ್ರಮುಖ ಸಾಮರ್ಥ್ಯಗಳನ್ನು ಎಸ್ & ಪಿ ತನ್ನ ವರದಿಯಲ್ಲಿ ವಿವರಿಸಿದೆ. ಹಣಕಾಸು ವರ್ಷ 22ರಿಂದ ಹಣಕಾಸು ವರ್ಷ 24ರವರೆಗೆ ನೈಜ ಜಿ.ಡಿ.ಪಿ ಬೆಳವಣಿಗೆಯು ಸರಾಸರಿ ಶೇಕಡ 8.8 ರಷ್ಟಿದ್ದು, ಇದು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಅತ್ಯಧಿಕವಾಗಿದೆ. ಹಣಕಾಸು ನೀತಿ ಸುಧಾರಣೆಗಳು, ವಿಶೇಷವಾಗಿ ಹಣದುಬ್ಬರ-ಗುರಿ ಅವಧಿಯ ಅಳವಡಿಕೆಯು ಹಣದುಬ್ಬರದ ನಿರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸಿವೆ ಎಂದು ಸಂಸ್ಥೆ ಹೇಳಿದೆ. ಜಾಗತಿಕ ಏರಿಳಿತಗಳು ಮತ್ತು ಬೆಲೆ ಹೆಚ್ಚಳದ ಹೊರತಾಗಿಯೂ, ಭಾರತವು ಒಟ್ಟಾರೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಳ್ಳುವ ಮೂಲಕ ಸಂಕಷ್ಟದಲ್ಲೂ ಸದೃಢತನ ಪ್ರದರ್ಶಿಸಿದೆ ಎಂದು ಎಸ್ & ಪಿ ಗುರುತಿಸಿದೆ. ಸ್ಥಳೀಯ ಬಂಡವಾಳ ಮಾರುಕಟ್ಟೆಗಳ ಗಣನೀಯ ಅಭಿವೃದ್ಧಿಯೊಂದಿಗೆ ವಿತ್ತೀಯ ಸುಧಾರಣೆಗಳು ಒಟ್ಟಾರೆ ಆರ್ಥಿಕತೆಗೆ ಹೆಚ್ಚು ಸ್ಥಿರ ಮತ್ತು ಪೂರಕ ವಾತಾವರಣವನ್ನು ಒದಗಿಸಿವೆ. ಭಾರತದ ಬಾಹ್ಯ ಮತ್ತು ಆರ್ಥಿಕ ಸ್ಥಿತಿ ಬಲಿಷ್ಠವಾಗಿದೆ ಹಾಗೂ ನೀತಿ ನಿರಂತರತೆ ಮತ್ತು ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವುದನ್ನು ಪ್ರಜಾಪ್ರಭುತ್ವ ಸಂಸ್ಥೆಗಳು ಮುಂದುವರಿಸಿವೆ ಎಂದು ವರದಿಯು ತಿಳಿಸಿದೆ.

2026ರ ಹಣಕಾಸು ವರ್ಷದಲ್ಲಿ ಜಿ.ಡಿ.ಪಿ ಬೆಳವಣಿಗೆ ಶೇ. 6.5 ರಷ್ಟಿರಲಿದೆ ಮತ್ತು ಮುಂದಿನ ಮೂರು ವರ್ಷಗಳು ಸತತವಾಗಿ ಅದೇ ವೇಗದಲ್ಲಿರಲಿದೆ ಎಂದು ಎಸ್ & ಪಿ ಭವಿಷ್ಯದ ಅಂದಾಜು ನೀಡಿದೆ. ವಿತ್ತೀಯ ಕೊರತೆ ಕಡಿತ ಮತ್ತು ಸಾರ್ವಜನಿಕ ಹೂಡಿಕೆ ಮುಂದುವರಿಕೆಯು ಸಕಾರಾತ್ಮಕ ರೇಟಿಂಗ್ ಕ್ರಮಗಳಿಗೆ ಮತ್ತಷ್ಟು ಬೆಂಬಲ ನೀಡಬಲ್ಲದಾಗಿದೆ ಎಂದು ಸಂಸ್ಥೆ ಹೇಳಿದೆ. ಭಾರತದ ಬೃಹತ್ ಮತ್ತು ಸ್ಥಿರ ದೇಶೀಯ ಬಳಕೆಯಿಂದಾಗಿ, ಇತ್ತೀಚೆಗೆ ಅಮೆರಿಕ ವಿಧಿಸಿರುವ ಸುಂಕದ ಪರಿಣಾಮವು ಸೀಮಿತವಾಗಿರಲಿದೆ ಎಂದು ವರದಿ ತಿಳಿಸಿದೆ.

ಇತ್ತೀಚೆಗೆ, ಮತ್ತೊಂದು ರೇಟಿಂಗ್ ಏಜೆನ್ಸಿಯಾದ ಮಾರ್ನಿಂಗ್ ಸ್ಟಾರ್ ಡಿ.ಬಿ.ಆರ್.ಎಸ್ ಕೂಡ ಭಾರತವನ್ನು "ಬಿಬಿಬಿ" ಸ್ಥಾನಮಾನಕ್ಕೆ ಮೇಲ್ದರ್ಜೆಗೇರಿಸಿತ್ತು.

 

*****


(Release ID: 2156588)