ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
ಪೆಟ್ರೋಲ್ ನಲ್ಲಿ 20% ಎಥೆನಾಲ್ ಮಿಶ್ರಣ ಮತ್ತು ಅದಕ್ಕೆ ಸಂಬಂಧಿಸಿ ವ್ಯಕ್ತವಾದ ಕಳವಳಗಳಿಗೆ ಪ್ರತಿಕ್ರಿಯೆ
Posted On:
12 AUG 2025 4:40PM by PIB Bengaluru
ಪೆಟ್ರೋಲ್ ನಲ್ಲಿ 20% ಎಥೆನಾಲ್ ಮಿಶ್ರಣ ಇರುವ (E-20) ಪೆಟ್ರೋಲ್ ಬಳಕೆಯು ವಾಹನದ ಮೈಲೇಜ್ ಮತ್ತು ಜೀವಿತಾವಧಿಯ ಮೇಲೆ ಬೀರುವ ಪರಿಣಾಮದ ಕುರಿತು ಎತ್ತಲಾದ ಕೆಲವು ಕಳವಳಗಳಿಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು 2025ರ ಆಗಸ್ಟ್ 4, ರಂದು ವಿವರವಾದ ಪ್ರತಿಕ್ರಿಯೆಯನ್ನು ನೀಡಿದೆ. ಈ ಬಗ್ಗೆ ಸ್ವೀಕರಿಸಿಸಲಾದ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರವಾಗಿ ವಿವರವಾದ ಪ್ರತಿಕ್ರಿಯೆಯನ್ನು ಕೆಳಗೆ ನೀಡಲಾಗಿದೆ:
ಜೈವಿಕ ಇಂಧನಗಳು ಮತ್ತು ನೈಸರ್ಗಿಕ ಅನಿಲವು ಭಾರತದ ಇಂಧನ ಸೇತುವೆಗಳಾಗಿವೆ. ಅವು ಹಸಿರು ಜಗತ್ತಿಗೆ ನಮ್ಮ ಬದ್ಧತೆಗಳನ್ನು ಪೂರೈಸುವ ದಿಕ್ಕಿನಲ್ಲಿ ಕಾರ್ಯಸಾಧ್ಯವಾದ, ಅಡ್ಡಿಆತಂಕರಹಿತ ಪರಿವರ್ತನೆಯನ್ನು ಪ್ರತಿನಿಧಿಸುತ್ತವೆ ಮತ್ತು 2070 ರ ವೇಳೆಗೆ ಭಾರತವು ನಿವ್ವಳ ಶೂನ್ಯಕ್ಕೆ ಸಹಿ ಹಾಕಿರುವ ನಮ್ಮ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (ಎನ್.ಡಿ.ಸಿ.-NDC) ಗೆ ಅನುಗುಣವಾಗಿವೆ. ನೀತಿ ಆಯೋಗ ನಡೆಸಿದ ಎಥೆನಾಲ್‌ನ ಜೀವನ ಚಕ್ರ ಹೊರಸೂಸುವಿಕೆಯ ಕುರಿತ ಅಧ್ಯಯನವು ಕಬ್ಬು ಮತ್ತು ಮೆಕ್ಕೆಜೋಳ ಆಧಾರಿತ ಎಥೆನಾಲ್ ಬಳಕೆಯ ಸಂದರ್ಭದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆ ಪೆಟ್ರೋಲ್‌ಗಿಂತ ಅನುಕ್ರಮವಾಗಿ 65% ಮತ್ತು 50% ರಷ್ಟು ಕಡಿಮೆಯಾಗಿರುತ್ತದೆ ಎಂದು ಹೇಳಿದೆ.
ಇದರಲ್ಲಿ ಮಾಲಿನ್ಯ ಕಡಿತದ ಜೊತೆಗೆ, ಗ್ರಾಮೀಣ ಆರ್ಥಿಕತೆಗೆ ಪ್ರಯೋಜನಗಳು, ಕಬ್ಬಿನ ಬಾಕಿ ಪಾವತಿ ಸಮಸ್ಯೆ ನಿವಾರಣೆ ಮತ್ತು ದೇಶದಲ್ಲಿ ಮೆಕ್ಕೆಜೋಳ ಕೃಷಿಯ ಕಾರ್ಯಸಾಧ್ಯತೆಯನ್ನು ಸುಧಾರಿಸುವ ವಿಷಯದಲ್ಲಿ ಪರಿವರ್ತನಾತ್ಮಕ ಪ್ರಯೋಜನಗಳಿವೆ. ರೈತರಿಗೆ ಹೆಚ್ಚಿನ ಆದಾಯವು ಅವರ ಯೋಗಕ್ಷೇಮವನ್ನು ಹೆಚ್ಚಿಸಲು ಕೊಡುಗೆ ನೀಡಿದೆ ಮಾತ್ರವಲ್ಲದೆ ರೈತರ ಆತ್ಮಹತ್ಯೆಗಳ ಸವಾಲನ್ನು ನಿರ್ಣಾಯಕವಾಗಿ ನಿಭಾಯಿಸಲು ಸಹಾಯ ಮಾಡಿದೆ. ಕೆಲವು ವರ್ಷಗಳ ಹಿಂದೆ ವಿದರ್ಭದಂತಹ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆಗಳು ವ್ಯಾಪಕವಾಗಿದ್ದವು ಎಂಬುದನ್ನು ನೆನಪಿಸಿಕೊಳ್ಳಬಹುದು.
ಎಥೆನಾಲ್ ಮಿಶ್ರಣ ಕಾರ್ಯಕ್ರಮದೊಂದಿಗೆ, ಹಿಂದೆ ಕಚ್ಚಾ ತೈಲ ಆಮದಿಗಾಗಿ ಖರ್ಚು ಮಾಡಲಾಗುತ್ತಿದ್ದ ಹಣವು ಈಗ "ಅನ್ನದಾತರು" ಮಾತ್ರವಲ್ಲದೆ "ಊರ್ಜಾದಾತರು" ಆಗಿರುವ ನಮ್ಮ ರೈತರಿಗೆ ಹೋಗುತ್ತಿದೆ. ಎಥೆನಾಲ್ ಸರಬರಾಜು ವರ್ಷ (ಇ.ಎಸ್.ವೈ.-ESY) 2014-15 ರಿಂದ ಇ.ಎಸ್.ವೈ. 2024-25 ರವರೆಗಿನ 2025ರ ಜುಲೈ ವರೆಗಿನ ಕಳೆದ ಹನ್ನೊಂದು ವರ್ಷಗಳಲ್ಲಿ, ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒ.ಎಂ.ಸಿ.-OMC ಗಳು) ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ರೂ. 1,44,087 ಕೋಟಿಗೂ ಹೆಚ್ಚು ವಿದೇಶಿ ವಿನಿಮಯ ಉಳಿತಾಯ/ಸಂರಕ್ಷಣೆ ಮಾಡಿವೆ, ಸುಮಾರು 245 ಲಕ್ಷ ಮೆಟ್ರಿಕ್ ಟನ್‌ಗಳ ಕಚ್ಚಾ ತೈಲಕ್ಕೆ ಬದಲಿಯಾಗಿ ನಿರ್ಣಾಯಕ ಇಂಧನ ಸುರಕ್ಷತೆಯನ್ನು ಒದಗಿಸಿದೆ ಮತ್ತು ಸುಮಾರು 736 ಲಕ್ಷ ಮೆಟ್ರಿಕ್ ಟನ್‌ಗಳ ಇಂಗಾಲದ ಡೈಆಕ್ಸೈಡ್ (CO2) ಹೊರಸೂಸುವಿಕೆಯನ್ನು ಕಡಿಮೆ ಮಾಡಿದೆ, ಇದು 30 ಕೋಟಿ ಗಿಡಗಳನ್ನು ನೆಡುವುದಕ್ಕೆ ಸಮಾನವಾಗಿರುತ್ತದೆ. 20% ಮಿಶ್ರಣದಲ್ಲಿ, ಈ ವರ್ಷದಲ್ಲಿಯೇ ರೈತರಿಗೆ ಪಾವತಿ ರೂ. 40,000 ಕೋಟಿಗಳಷ್ಟಾಗಬಹುದು ಎಂಬ ಅಂದಾಜಿದೆ. ಮತ್ತು ವಿದೇಶೀ ವಿನಿಮಯ ಉಳಿತಾಯ ರೂ. 43,000 ಕೋಟಿಗಳಷ್ಟಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಾರ್ಯಕ್ಷಮತೆ ಮತ್ತು ಮೈಲೇಜ್‌ಗೆ ಸಂಬಂಧಿಸಿದ ಕಳವಳಗಳನ್ನು ಸರ್ಕಾರ 2020 ರ ಆರಂಭದಲ್ಲಿಯೇ ನಿರೀಕ್ಷಿಸಿತ್ತು ಮತ್ತು ನೀತಿ ಆಯೋಗದ ಅಂತರ ಸಚಿವ ಸಮಿತಿ (ಐ.ಎಂ.ಸಿ.-IMC) ಅವುಗಳನ್ನು ದೀರ್ಘವಾಗಿ ಪರಿಶೀಲಿಸಿತು. ಇದರ ಹಿನ್ನೆಲೆಯಲ್ಲಿ ಐ.ಒ.ಸಿ.ಎಲ್, ಎ.ಆರ್.ಎ.ಐ., ಮತ್ತು ಎಸ್.ಐ.ಎ.ಎಂ. ಸಂಶೋಧನಾ ಅಧ್ಯಯನಗಳನ್ನು ಸಹ ಕೈಗೊಂಡವು.
ಇ-20 ಬಳಕೆಯು ಉತ್ತಮ ವೇಗವರ್ಧನೆ, ಉತ್ತಮ ಸವಾರಿ ಗುಣಮಟ್ಟವನ್ನು ನೀಡುತ್ತದೆ ಮತ್ತು ಮುಖ್ಯವಾಗಿ, ಇ 10 ಇಂಧನಕ್ಕೆ ಹೋಲಿಸಿದರೆ ಸುಮಾರು 30% ರಷ್ಟು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಎಥೆನಾಲ್‌ನ ಅಧಿಕ-ಆಕ್ಟೇನ್ ಸಂಖ್ಯೆ (ಪೆಟ್ರೋಲ್‌ನ 84.4 ಕ್ಕೆ ಹೋಲಿಸಿದರೆ ~108.5) ಎಥೆನಾಲ್-ಮಿಶ್ರಿತ ಇಂಧನಗಳನ್ನು ಆಧುನಿಕ ಹೈ-ಕಂಪ್ರೆಷನ್ ಎಂಜಿನ್‌ಗಳಿಗೆ ನಿರ್ಣಾಯಕವಾದ ಹೈ-ಆಕ್ಟೇನ್ ಅವಶ್ಯಕತೆಗಳಿಗೆ ಅಮೂಲ್ಯವಾದ ಪರ್ಯಾಯವನ್ನಾಗಿ ಮಾಡುತ್ತದೆ. ಇ20 ಗಾಗಿ ಟ್ಯೂನ್ ಮಾಡಲಾದ ವಾಹನಗಳು ಉತ್ತಮ ವೇಗವರ್ಧನೆಯನ್ನು ನೀಡುತ್ತವೆ, ಇದು ನಗರ ಚಾಲನಾ ಪರಿಸ್ಥಿತಿಗಳಲ್ಲಿ ಬಹಳ ಮುಖ್ಯವಾದ ಅಂಶವಾಗಿದೆ. ಜೊತೆಗೆ, ಎಥೆನಾಲ್‌ನ ಆವಿಯಾಗುವಿಕೆಯಲ್ಲುಂಟಾಗುವ ಅಧಿಕ ಶಾಖವು ಇಂಧನ ಹೆಚ್ಚು ಪ್ರಮಾಣದಲ್ಲಿ ಖರ್ಚಾಗುವುದನ್ನು ನಿರ್ಬಂಧಿಸುತ್ತದೆ, ಒಳಗಿನ ತಾಪಮಾನವನ್ನು ಕಡಿಮೆ ಮಾಡುತ್ತದೆ, ಗಾಳಿ-ಇಂಧನ ಮಿಶ್ರಣ ಸಾಂದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರಮಾಣ ದಕ್ಷತೆಯನ್ನು ಹೆಚ್ಚಿಸುತ್ತದೆ.
ಹಿಂದೆ ಭಾರತದಲ್ಲಿ ಪೆಟ್ರೋಲನ್ನು 88 ರ ಸಂಶೋಧನಾ ಆಕ್ಟೇನ್ ಸಂಖ್ಯೆ (RON) ನೊಂದಿಗೆ ಮಾರಾಟ ಮಾಡಲಾಗುತ್ತಿತ್ತು. ಇಂದು, ಭಾರತದಲ್ಲಿ ಸಾಮಾನ್ಯ ಪೆಟ್ರೋಲ್ ಬಿ.ಎಸ್. VI (BS-VI) ಅವಶ್ಯಕತೆಗಳನ್ನು ಪೂರೈಸಲು ರಿಸರ್ಚ್ ಆಕ್ಟೇನ್ ನಂಬರ್ 91 ನ್ನು ಹೊಂದಿದೆ, ಇದು ಹಾನಿಕಾರಕ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಆದಾಗ್ಯೂ, ಇದನ್ನು ಮತ್ತೆ ಎಥೆನಾಲ್ 20 ಮಿಶ್ರಣದೊಂದಿಗೆ ಆರ್.ಒ.ಎನ್. 95ಕ್ಕೆ ಸುಧಾರಿಸಲಾಗಿದೆ, ಇದರ ಪರಿಣಾಮವಾಗಿ ಅಂತರ್ದಹನ ಇಂಜಿನ್ ಗಳಲ್ಲಿ ಉಂಟಾಗುವ ಶಬ್ದ ಮಾಲಿನ್ಯ ಕಡಿಮೆಯಾಗಿದೆ, ಇಂಧನ ದಕ್ಷತೆ ಮತ್ತು ಕಾರ್ಯಕ್ಷಮತೆ ಕಂಡುಬರುತ್ತದೆ.
ಇ20 ಇಂಧನ ದಕ್ಷತೆಯಲ್ಲಿ "ತೀವ್ರ" ಕಡಿತವನ್ನು ಉಂಟುಮಾಡುತ್ತದೆ ಎಂದು ಹೇಳುವ ಟೀಕೆಗಳು/ ವಿಮರ್ಶೆಗಳು ಸರಿಯಾದವುಗಳಲ್ಲ. ವಾಹನದ ಮೈಲೇಜ್ ಕೇವಲ ಇಂಧನ ಮಾದರಿಗಳನ್ನು ಮೀರಿ ವಿವಿಧ ಅಂಶಗಳಿಂದ ಪ್ರಭಾವಿತವಾಗಿರುತ್ತದೆ. ಇವುಗಳಲ್ಲಿ ಚಾಲನಾ ಅಭ್ಯಾಸಗಳು, ತೈಲ ಬದಲಾವಣೆಗಳು ಮತ್ತು ಏರ್ ಫಿಲ್ಟರ್ ಶುಚಿತ್ವ, ಟೈರ್ ಒತ್ತಡ ಮತ್ತು ಜೋಡಣೆ ಹಾಗು ಹವಾನಿಯಂತ್ರಣದ ಹೊರೆಯಂತಹ ನಿರ್ವಹಣಾ ಅಭ್ಯಾಸಗಳು ಒಳಗೊಂಡಿವೆ.
ಭಾರತೀಯ ಆಟೋಮೊಬೈಲ್ ತಯಾರಕರ ಸಂಘ (ಎಸ್.ಐ.ಎ.ಎಂ.) ಹಾಗೂ ಪ್ರಮುಖ ವಾಹನ ತಯಾರಕರೊಂದಿಗೆ ವ್ಯಾಪಕ ಚರ್ಚೆಗಳನ್ನು ನಡೆಸಲಾಗಿದೆ. ಇ 10 ವಾಹನಗಳಲ್ಲಿ ದಕ್ಷತೆಯ ಕುಸಿತ (ಯಾವುದಾದರೂ ಇದ್ದರೆ) ಅಲ್ಪವಾಗಿದೆ. ಕೆಲವು ತಯಾರಕರಿಗೆ, ವಾಹನಗಳು 2009 ರಿಂದಲೂ ಇ 20 ಹೊಂದಾಣಿಕೆಯಾಗುತ್ತಿವೆ. ಅಂತಹ ವಾಹನಗಳಲ್ಲಿ ಇಂಧನ ದಕ್ಷತೆಯಲ್ಲಿ ಯಾವುದೇ ಕುಸಿತದ ಪ್ರಶ್ನೆ ಉದ್ಭವಿಸುವುದಿಲ್ಲ.
ಇ-0 ಪೆಟ್ರೋಲ್‌ಗೆ ಹಿಂತಿರುಗುವ ಪರ್ಯಾಯ ಹಾದಿಯು ಮಾಲಿನ್ಯದ ವಿರುದ್ಧ ನಡೆಸಲಾದ ಕಠಿಣ ಹೋರಾಟದ ಲಾಭಗಳನ್ನು ಮತ್ತು ಇಂಧನ ಪರಿವರ್ತನೆಯಲ್ಲಿ ಸಾಧಿಸಿದ ಯಶಸ್ಸನ್ನು ಕಳೆದುಕೊಳ್ಳುವುದಾಗಿರುತ್ತದೆ. ಐ.ಎಂ.ಸಿ.ಯ ಮಾರ್ಗಸೂಚಿಯು 2021 ರಿಂದ ಸಾರ್ವಜನಿಕ ವೀಕ್ಷಣೆಗೆ ಲಭ್ಯವಿದೆ ಮತ್ತು ಇ-20 ಅನ್ನು ತಲುಪಲು ಮಾಪನಾಂಕ ನಿರ್ಣಯಿಸಿದ ಮಾರ್ಗವನ್ನು ಅದು ರೂಪಿಸಿದೆ. ಅಂದಿನಿಂದ, ವಾಹನ ತಂತ್ರಜ್ಞಾನವನ್ನು ಸುಧಾರಿಸಲು, ಪೂರೈಕೆ ಸರಪಳಿಯ ಮಾಪನಾಂಕ ನಿರ್ಣಯಿಸಲು ಮತ್ತು ಒಟ್ಟಾರೆ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು 4 ವರ್ಷಗಳಿಗೂ ಹೆಚ್ಚಿನ ಅವಧಿಯ ಅವಕಾಶವನ್ನು ಒದಗಿಸಲಾಗಿದೆ.
ಇದಲ್ಲದೆ, ಬ್ರೆಜಿಲ್ ನಲ್ಲಿ ವರ್ಷಗಳಿಂದ ಇ 27 ಜಾರಿಯಲ್ಲಿದೆ ಮತ್ತು ಅದು ಯಾವುದೇ ಸಮಸ್ಯೆಗಳಿಲ್ಲದೆ ಯಶಸ್ವಿಯಾಗಿ ಚಾಲನೆಯಲ್ಲಿದೆ ಎಂಬುದು ಗಮನಾರ್ಹ. ಟೊಯೋಟಾ, ಹೋಂಡಾ, ಹುಂಡೈ ಮುಂತಾದ ವಾಹನ ತಯಾರಕರು ಅಲ್ಲಿಯೂ ವಾಹನಗಳನ್ನು ಉತ್ಪಾದಿಸುತ್ತಾರೆ. ಇದಲ್ಲದೆ, ಇ 20 ಗಾಗಿ ಸುರಕ್ಷತಾ ಮಾನದಂಡಗಳು ಬಿ.ಐ.ಎಸ್. ನಿರ್ದಿಷ್ಟತೆಗಳೊಂದಿಗೆ ಮತ್ತು ಆಟೋಮೋಟಿವ್ ಇಂಡಸ್ಟ್ರಿ ಮಾನದಂಡಗಳ ಮೂಲಕ ಉತ್ತಮವಾಗಿ ಸ್ಥಾಪಿತವಾಗಿವೆ. ಚಾಲನೆ, ವಾಹನದ ಪ್ರಾರಂಭ, ಲೋಹದ ಹೊಂದಾಣಿಕೆ, ಪ್ಲಾಸ್ಟಿಕ್ ಹೊಂದಾಣಿಕೆ ಸೇರಿದಂತೆ ಹೆಚ್ಚಿನ ನಿಯತಾಂಕಗಳಲ್ಲಿ, ಯಾವುದೇ ಸಮಸ್ಯೆಗಳಿಲ್ಲ. ಕೆಲವು ಹಳೆಯ ವಾಹನಗಳ ಸಂದರ್ಭದಲ್ಲಿ ಮಾತ್ರ, ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಮಿಶ್ರಣ ಮಾಡದ ಇಂಧನವನ್ನು ಬಳಸುವುದಕ್ಕೆ ಮೊದಲೇ ಬದಲಾಯಿಸಬೇಕಾಗಬಹುದು. ಈ ಬದಲಾವಣೆ ಅಂತಹ ತುಟ್ಟಿಯೇನಲ್ಲ ಬದಲು ಅದು ಅಗ್ಗವಾಗಿದೆ ಮತ್ತು ಕಾಲಾನುಕ್ರಮದ ಸರ್ವಿಸ್ ಸಮಯದಲ್ಲಿ ಸುಲಭವಾಗಿ ನಿರ್ವಹಿಸಬಹುದು. ಇದನ್ನು ವಾಹನದ ಜೀವಿತಾವಧಿಯಲ್ಲಿ ಒಮ್ಮೆ ಮಾಡಬೇಕಾಗಬಹುದು ಮತ್ತು ಯಾವುದೇ ಅಧಿಕೃತ ಕಾರ್ಯಾಗಾರದಲ್ಲಿ ಕೈಗೊಳ್ಳಬೇಕಾದ ಸರಳ ಪ್ರಕ್ರಿಯೆಯಾಗಿದೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಮಿಶ್ರಣ ಮಾಡದ ಪೆಟ್ರೋಲ್ ಇಂಧನಕ್ಕಿಂತ ಅಗ್ಗವಾಗಿರಬೇಕು ಮತ್ತು ಈ ವೆಚ್ಚದ ಪ್ರಯೋಜನವನ್ನು ಗ್ರಾಹಕರಿಗೆ ರವಾನಿಸಲಾಗಿಲ್ಲ ಎಂಬ ಕೆಲವು ಕಳವಳಗಳು ವ್ಯಕ್ತವಾಗಿವೆ. ಅವರು ನೀತಿ ಆಯೋಗದ ವರದಿಯನ್ನು ಉಲ್ಲೇಖಿಸುತ್ತಿದ್ದಾರೆ. 2020-21 ರಲ್ಲಿ, ನೀತಿ ಆಯೋಗದ ವರದಿಯನ್ನು ಸಿದ್ಧಪಡಿಸಿದಾಗ, ಎಥೆನಾಲ್ ಪೆಟ್ರೋಲ್‌ಗಿಂತ ಅಗ್ಗವಾಗಿತ್ತು. ಕಾಲಾನಂತರದಲ್ಲಿ, ಎಥೆನಾಲ್‌ನ ಖರೀದಿ ಬೆಲೆ ಹೆಚ್ಚಾಗಿದೆ ಮತ್ತು ಈಗ ಎಥೆನಾಲ್‌ನ ಸರಾಸರಿ ಬೆಲೆ ಸಂಸ್ಕರಿಸಿದ ಪೆಟ್ರೋಲ್‌ನ ಬೆಲೆಗಿಂತ ಹೆಚ್ಚಾಗಿದೆ.
ಪ್ರಸ್ತುತ, 31.07.2025 ರಂತೆ, 2024-25 ರ ಎಥೆನಾಲ್ ಪೂರೈಕೆ ವರ್ಷಕ್ಕೆ ಸರಾಸರಿ ಖರೀದಿ ವೆಚ್ಚವು ಲೀಟರ್‌ಗೆ ರೂ.71.32 ಆಗಿದೆ, ಇದರಲ್ಲಿ ಸಾರಿಗೆ ಮತ್ತು ಜಿಎಸ್‌ಟಿ ಸೇರಿದೆ. ಇ20 ಉತ್ಪಾದಿಸಲು, ಒ.ಎಂ.ಸಿ.ಗಳು ಈ ಸಂಗ್ರಹಿಸಿದ ಎಥೆನಾಲ್‌ನ 20% ಅನ್ನು ಮೋಟಾರ್ ಸ್ಪಿರಿಟ್ (ಎಂ.ಎಸ್.-MS) ನೊಂದಿಗೆ ಮಿಶ್ರಣ ಮಾಡುತ್ತವೆ. ಸಿ-ಹೆವಿ ಮೊಲಾಸಸ್ ಆಧಾರಿತ ಎಥೆನಾಲ್‌ನ ಬೆಲೆ ರೂ.46.66 (ESY 2021-22) ರಿಂದ ರೂ.57.97 (ESY 2024-25) ಕ್ಕೆ ಏರಿದೆ. ಅದೇ ಅವಧಿಯಲ್ಲಿ ಮೆಕ್ಕೆಜೋಳ ಆಧಾರಿತ ಎಥೆನಾಲ್‌ನ ಬೆಲೆ ರೂ.52.92 ರಿಂದ ರೂ.71.86 ಕ್ಕೆ ಏರಿದೆ. ಪೆಟ್ರೋಲ್‌ಗೆ ಹೋಲಿಸಿದರೆ ಎಥೆನಾಲ್ ಬೆಲೆಯಲ್ಲಿ ಹೆಚ್ಚಳವಾಗಿದ್ದರೂ, ತೈಲ ಕಂಪನಿಗಳು ಎಥೆನಾಲ್ ಮಿಶ್ರಣ ಆದೇಶದಿಂದ ಹಿಂದೆ ಸರಿದಿಲ್ಲ ಏಕೆಂದರೆ ಈ ಕಾರ್ಯಕ್ರಮವು ಇಂಧನ ಸುರಕ್ಷತೆಯನ್ನು ನೀಡುತ್ತದೆ, ರೈತರ ಆದಾಯ ಮತ್ತು ಪರಿಸರ ಸುಸ್ಥಿರತೆಯನ್ನು ಹೆಚ್ಚಿಸುತ್ತದೆ.
ಎಥೆನಾಲ್ ಮಿಶ್ರಣವು ರಾಷ್ಟ್ರೀಯ ಕಾರ್ಯಕ್ರಮವಾಗಿದೆ. ಕೆಲವರು ಕಾರು ಮಾಲೀಕರ ಮನಸ್ಸಿನಲ್ಲಿ ಭಯ ಮತ್ತು ಗೊಂದಲವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಾರೆ, ಆಯ್ದ ಮಾಹಿತಿಯನ್ನು ಆರಿಸಿಕೊಂಡು ಮತ್ತು ಇ20 ಇಂಧನಗಳ ಬಳಕೆಯಿಂದ ಉಂಟಾಗುವ ಕಾರು ಹಾನಿಯನ್ನು ವಿಮಾ ಕಂಪನಿಗಳು ಭರಿಸುವುದಿಲ್ಲ ಎಂಬ ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಾರೆ. ಈ ಭಯ ಹುಟ್ಟಿಸುವ ಮಾತು ಸಂಪೂರ್ಣವಾಗಿ ಆಧಾರರಹಿತವಾಗಿದೆ ಮತ್ತು ವಿಮಾ ಕಂಪನಿಯು ಮಾಡಿದ ಸ್ಪಷ್ಟೀಕರಣದ ಟ್ವೀಟಿನ ಸ್ಕ್ರೀನ್ ಶಾಟನ್ನು ಭಯ ಮತ್ತು ಗೊಂದಲವನ್ನು ಸೃಷ್ಟಿಸಲು ಉದ್ದೇಶಪೂರ್ವಕವಾಗಿ ತಪ್ಪಾಗಿ ಅರ್ಥೈಸಲಾಗಿದೆ. ಇ20 ಇಂಧನದ ಬಳಕೆಯು ಭಾರತದಲ್ಲಿ ವಾಹನಗಳ ವಿಮೆಯ ಸಿಂಧುತ್ವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
ಏತನ್ಮಧ್ಯೆ, ವಾಹನಗಳ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ಅವಶ್ಯವಾದ ಯಾವುದೇ ಬೆಂಬಲವನ್ನು ಒದಗಿಸಲು ಆಟೋಮೊಬೈಲ್ ತಯಾರಕರು ವಾಹನ ಮಾಲೀಕರೊಂದಿಗೆ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ತನ್ನ ವಾಹನಕ್ಕೆ ಮತ್ತಷ್ಟು ಟ್ಯೂನಿಂಗ್ ಅಥವಾ ಬಿಡಿಭಾಗಗಳ ಬದಲಿ ಅಗತ್ಯವಿರಬಹುದು ಎಂದು ನಂಬುವ ವಾಹನ ಮಾಲೀಕರಿಗೆ, ಅಂತಹ ವಿನಂತಿಗಳಿಗೆ ಸ್ಪಂದಿಸಲು ಅಧಿಕೃತ ಸೇವಾ ಕೇಂದ್ರಗಳ ಸಂಪೂರ್ಣ ಜಾಲ ಲಭ್ಯವಿದೆ.
ದೇಶವು ಇ-20 ನ್ನು ದಾಟಿ ಬಹಳ ವೇಗವಾಗಿ ಮೀರಿ ಹೋಗುತ್ತದೆಯೇ ಎಂಬ ಬಗ್ಗೆ ಆತಂಕಗಳು ಮುಂದುವರೆದಿವೆ. ಇ-20 ನ್ನು ಮೀರಿದ ಯಾವುದೇ ಕ್ರಮಕ್ಕೆ ಎಚ್ಚರಿಕೆಯಿಂದ ಮಾಪನಾಂಕ ನಿರ್ಣಯಿಸಬೇಕಾದ ಅಗತ್ಯವಿದೆ, ಇದಕ್ಕಾಗಿ ವ್ಯಾಪಕ ಸಮಾಲೋಚನೆ ನಡೆಯುತ್ತಿದೆ. ಇದು ಈಗಾಗಲೇ ಬ್ರೆಜಿಲ್‌ನಲ್ಲಿರುವ ಅದೇ ವಾಹನ ತಯಾರಕರು ಹಾಗೂ ಇತರ ತಯಾರಕರು, ಫೀಡ್ ಸ್ಟಾಕ್‌ಗಳ ಪೂರೈಕೆಯಲ್ಲಿ ತೊಡಗಿರುವ ಘಟಕಗಳು, ಸಂಶೋಧನೆ ಮತ್ತು ಅಭಿವೃದ್ಧಿ (R&D) ಏಜೆನ್ಸಿಗಳು, ತೈಲ ಕಂಪನಿಗಳು ಮತ್ತು ಎಥೆನಾಲ್ ಉತ್ಪಾದಕರನ್ನು ಒಳಗೊಂಡಿದೆ. ಈ ಪ್ರಕ್ರಿಯೆಯು ಇನ್ನಷ್ಟೇ ಅಂತಿಮ ತೀರ್ಮಾನಕ್ಕೆ ಬರಬೇಕಿದೆ. ಏತನ್ಮಧ್ಯೆ, ಪ್ರಸ್ತುತ ಮಾರ್ಗಸೂಚಿಯು ಸರ್ಕಾರವನ್ನು 31.10.2026 ರವರೆಗೆ ಇ-20 ಕ್ಕೆ ಬದ್ಧಗೊಳಿಸಿದೆ. 31.10.2026ರ ನಂತರದ ನಿರ್ಧಾರಗಳು ಅಂತರ ಸಚಿವರ ಸಮಿತಿಯ ವರದಿಯ ಸಲ್ಲಿಕೆ, ಅದರ ಶಿಫಾರಸುಗಳ ಮೌಲ್ಯಮಾಪನ, ಪಾಲುದಾರರ ಸಮಾಲೋಚನೆಗಳು ಮತ್ತು ಈ ನಿಟ್ಟಿನಲ್ಲಿ ಸರ್ಕಾರದ ನಿರ್ಧಾರವನ್ನು ಒಳಗೊಂಡಿರುತ್ತದೆ. ಆ ನಿರ್ಧಾರ ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ.
ಸರ್ಕಾರವು ಶುದ್ಧ, ಹೆಚ್ಚು ಸುಸ್ಥಿರ ಇಂಧನ ಆಯ್ಕೆಗಳನ್ನು ಉತ್ತೇಜಿಸಲು ಮತ್ತು ಗ್ರಾಹಕರ ಮೇಲೆ ಕನಿಷ್ಠ ಪರಿಣಾಮ ಬೀರುವಂತೆ ಅಂತಹ ಪರಿವರ್ತನೆಗಳನ್ನು ಜಾರಿಗೆ ತರಲು ಬದ್ಧವಾಗಿದೆ.
****
(Release ID: 2155839)