ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯಲ್ಲಿ ಸಂಸತ್ ಸದಸ್ಯರಿಗಾಗಿ ಹೊಸದಾಗಿ ನಿರ್ಮಿಸಲಾಗಿರುವ ಫ್ಲಾಟ್‌ಗಳನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ
ಸಕಲ ಆಧುನಿಕ ಸೌಲಭ್ಯಗಳೊಂದಿಗೆ ಸ್ವಯಂಪೂರ್ಣವಾಗುವಂತೆ 184 ಟೈಪ್-VII ಬಹುಮಹಡಿ ಫ್ಲಾಟ್‌ಗಳ ವಿನ್ಯಾಸ
ವಸತಿ ಆವರಣದಲ್ಲಿ ಸಿಂಧೂರ ಸಸಿ ನೆಟ್ಟು ಶ್ರಮಜೀವಿಗಳೊಂದಿಗೆ ಪ್ರಧಾನಮಂತ್ರಿ ಸಂವಾದ
ಸಭಿಕರನ್ನುದ್ದೇಶಿಸಿ ಸಹ ಮಾತನಾಡಲಿರುವ ಪ್ರಧಾನಮಂತ್ರಿ
Posted On:
10 AUG 2025 10:44AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2025 ರ ಆಗಸ್ಟ್ 11 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿ ಸಂಸತ್ ಸದಸ್ಯರಿಗಾಗಿ ಹೊಸದಾಗಿ ನಿರ್ಮಿಸಲಾಗಿರುವ 184 ಟೈಪ್-VII ಬಹುಮಹಡಿ ಫ್ಲಾಟ್‌ಗಳನ್ನು ಉದ್ಘಾಟಿಸಲಿದ್ದಾರೆ.
ಇದೇ ವೇಳೆ ಪ್ರಧಾನಮಂತ್ರಿ ಅವರು ವಸತಿ ಸಮುಚ್ಚಯದ ಆವರಣದಲ್ಲಿ ಸಿಂಧೂರ ಸಸಿಯನ್ನು ನೆಡಲಿದ್ದಾರೆ ಹಾಗೂ ಶ್ರಮಜೀವಿಗಳೊಂದಿಗೆ ಸಂವಾದ ಕೂಡ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಸಂಸತ್ ಸದಸ್ಯರ ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಅನುಕೂಲವಾಗುವಂತೆ ಸಂಪೂರ್ಣ ಶ್ರೇಣಿಯ ಆಧುನಿಕ ಸೌಲಭ್ಯಗಳೊಂದಿಗೆ ಸಂಕೀರ್ಣವನ್ನು ಸ್ವಾವಲಂಬಿಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಸಿರು ತಂತ್ರಜ್ಞಾನದ ಸಂಯೋಜನೆಯೊಂದಿಗೆ ಈ ಯೋಜನೆಯು GRIHA 3-ಸ್ಟಾರ್ ರೇಟಿಂಗ್‌ನ ಮಾನದಂಡಗಳಿಗೆ ಬದ್ಧವಾಗಿದೆ ಮತ್ತು ರಾಷ್ಟ್ರೀಯ ಕಟ್ಟಡ ಸಂಹಿತೆ (NBC) 2016ಕ್ಕೆ ಅನುಗುಣವಾಗಿದೆ. ಈ ಪರಿಸರ ಸ್ನೇಹಿ ವೈಶಿಷ್ಟ್ಯಗಳು ಇಂಧನ ಸಂರಕ್ಷಣೆ, ನವೀಕರಿಸಬಹುದಾದ ಇಂಧನ ಉತ್ಪಾದನೆ ಮತ್ತು ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆಗೆ ಕೊಡುಗೆ ನೀಡಲಿವೆ ಎಂಬ ನಿರೀಕ್ಷೆ ಇದೆ.
ಆಧುನಿಕ ನಿರ್ಮಾಣ ತಂತ್ರಜ್ಞಾನದ ಬಳಕೆಯಿಂದಾಗಿ ನಿರ್ದಿಷ್ಟವಾಗಿ ಅಲ್ಯೂಮಿನಿಯಂ ಶಟರಿಂಗ್ ಹೊಂದಿರುವ ಏಕಶಿಲೆಯ ಕಾಂಕ್ರೀಟ್ - ರಚನಾತ್ಮಕ ಬಾಳಿಕೆಯನ್ನು ಖಚಿತಪಡಿಸುವುದರ ಜೊತೆಗೆ ಯೋಜನೆಯನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗಿದೆ. ಈ ಸಂಕೀರ್ಣವು ದಿವ್ಯಾಂಗ ಸ್ನೇಹಿಯೂ ಆಗಿದ್ದು, ಎಲ್ಲರ ಅಗತ್ಯಗಳನ್ನು ಪೂರೈಸುವ ಒಳಗೊಳ್ಳುವಿಕೆಯ ವಿನ್ಯಾಸಕ್ಕೆ ಬದ್ಧತೆಯನ್ನು ಪ್ರದರ್ಶಿಸಿದೆ.
ಸಂಸತ್ ಸದಸ್ಯರಿಗೆ ವಸತಿ ಕೊರತೆಯಿಂದಾಗಿ ಈ ಯೋಜನೆಯ ಅಭಿವೃದ್ಧಿ ಅಗತ್ಯವಾಗಿತ್ತು. ಭೂಮಿಯ ಸೀಮಿತ ಲಭ್ಯತೆಯಿಂದಾಗಿ, ಭೂಮಿಯ ಸಮರ್ಥ ಬಳಕೆಯ ಜೊತೆಗೆ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವ ಗುರಿಯೊಂದಿಗೆ ಲಂಬ ವಸತಿ ಅಭಿವೃದ್ಧಿಗಳಿಗೆ ನಿರಂತರ ಆದ್ಯತೆ ನೀಡಲಾಗಿದೆ.
ಪ್ರತಿಯೊಂದು ವಸತಿ ಘಟಕವು ಸರಿಸುಮಾರು 5,000 ಚದರ ಅಡಿ ಕಾರ್ಪೆಟ್ ಪ್ರದೇಶ ವಿಸ್ತೀರ್ಣ ಹೊಂದಿದ್ದು, ವಸತಿ ಮತ್ತು ಅಧಿಕೃತ ಕಾರ್ಯಕ್ರಮಗಳಿಗೆ ಸಾಕಷ್ಟು ಸ್ಥಳಾವಕಾಶವಿದೆ. ಕಚೇರಿಗಳು, ಸಿಬ್ಬಂದಿ ವಸತಿ ಮತ್ತು ಸಮುದಾಯ ಕೇಂದ್ರಕ್ಕಾಗಿ ನಿರ್ದಿಷ್ಟ ಸ್ಥಳ ಮೀಸಲಿರಿಸಿರುವುದು ಸಂಸತ್ತಿನ ಸದಸ್ಯರು ಸಾರ್ವಜನಿಕ ಪ್ರತಿನಿಧಿಗಳಾಗಿ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಪೂರಕವಾಗಿವೆ.
ಆಧುನಿಕ ರಚನಾತ್ಮಕ ವಿನ್ಯಾಸ ಮಾನದಂಡಗಳಿಗೆ ಅನುಗುಣವಾಗಿ ಸಂಕೀರ್ಣದೊಳಗಿನ ಎಲ್ಲಾ ಕಟ್ಟಡಗಳನ್ನು ಭೂಕಂಪನ ತಡೆದುಕೊಳ್ಳಬಹುದಾದಂತೆ ನಿರ್ಮಿಸಲಾಗಿದೆ. ಎಲ್ಲಾ ನಿವಾಸಿಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಸಮಗ್ರ ಮತ್ತು ಸದೃಢ ಭದ್ರತಾ ವ್ಯವಸ್ಥೆಯನ್ನು ಒದಗಿಸಲಾಗಿದೆ.
*****
(Release ID: 2154879)
Read this release in:
Punjabi
,
English
,
Urdu
,
Marathi
,
Hindi
,
Bengali-TR
,
Assamese
,
Manipuri
,
Bengali
,
Gujarati
,
Odia
,
Tamil
,
Telugu
,
Malayalam