ಪ್ರಧಾನ ಮಂತ್ರಿಯವರ ಕಛೇರಿ
ನವದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತನಾಡಿದರು
ಕರ್ತವ್ಯ ಭವನವು ಅಭಿವೃದ್ಧಿ ಹೊಂದಿದ ಭಾರತದ ನೀತಿಗಳು ಮತ್ತು ದಿಕ್ಕುಗಳಿಗೆ ಮಾರ್ಗದರ್ಶನ ನೀಡುತ್ತದೆ: ಪ್ರಧಾನಮಂತ್ರಿ
ಕರ್ತವ್ಯ ಭವನವು ರಾಷ್ಟ್ರದ ಕನಸುಗಳನ್ನು ನನಸಾಗಿಸುವ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ: ಪ್ರಧಾನಮಂತ್ರಿ
ಭಾರತವನ್ನು ಸರ್ವಾಂಗೀಣ ದೃಷ್ಟಿಕೋನದಿಂದ ರೂಪಿಸಲಾಗುತ್ತಿದೆ, ಅಲ್ಲಿ ಪ್ರಗತಿಯು ಪ್ರತಿಯೊಂದು ಪ್ರದೇಶವನ್ನು ತಲುಪುತ್ತಿದೆ: ಪ್ರಧಾನಮಂತ್ರಿ
ಕಳೆದ 11 ವರ್ಷಗಳಲ್ಲಿ, ಭಾರತವು ಪಾರದರ್ಶಕ, ಸ್ಪಂದಿಸುವ ಮತ್ತು ನಾಗರಿಕ ಕೇಂದ್ರಿತ ಆಡಳಿತ ಮಾದರಿಯನ್ನು ನಿರ್ಮಿಸಿದೆ: ಪ್ರಧಾನಮಂತ್ರಿ
ನಾವೆಲ್ಲರೂ ಒಟ್ಟಾಗಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡೋಣ ಮತ್ತು ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದ ಯಶೋಗಾಥೆಯನ್ನು ಬರೆಯೋಣ: ಪ್ರಧಾನಮಂತ್ರಿ
Posted On:
06 AUG 2025 8:35PM by PIB Bengaluru
ನವದೆಹಲಿಯ ಕರ್ತವ್ಯ ಪಥದಲ್ಲಿ ಇಂದು ಕರ್ತವ್ಯ ಭವನ-3 ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರಾಂತಿಯ ಮಾಸವಾದ ಆಗಸ್ಟ್, ಆಗಸ್ಟ್ 15 ಕ್ಕೆ ಮುನ್ನವೇ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ತಂದಿದೆ ಎಂದು ಹೇಳಿದರು. ಆಧುನಿಕ ಭಾರತ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಧನೆಗಳಿಗೆ ಭಾರತ ಸಾಕ್ಷಿಯಾಗುತ್ತಿದೆ ಎಂದು ಅವರು ಹೇಳಿದರು. ನವದೆಹಲಿಯ ಇತ್ತೀಚಿನ ಮೂಲಸೌಕರ್ಯಗಳಾದ ಕರ್ತವ್ಯ ಪಥ, ಹೊಸ ಸಂಸತ್ತು ಕಟ್ಟಡ, ಹೊಸ ರಕ್ಷಣಾ ಕಚೇರಿಗಳ ಸಂಕೀರ್ಣ, ಭಾರತ ಮಂಟಪ, ಯಶೋಭೂಮಿ, ಹುತಾತ್ಮರಿಗೆ ಸಮರ್ಪಿತವಾದ ರಾಷ್ಟ್ರೀಯ ಯುದ್ಧ ಸ್ಮಾರಕ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆ ಮತ್ತು ಕರ್ತವ್ಯ ಭವನದ ನಿರ್ಮಾಣ ಮುಂತಾದದವುಗಳನ್ನು ಪಟ್ಟಿಮಾಡಿದರು. ಇವು ಕೇವಲ ಹೊಸ ಕಟ್ಟಡಗಳು ಅಥವಾ ಸಾಮಾನ್ಯ ಮೂಲಸೌಕರ್ಯಗಳಲ್ಲ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ , ಅಮೃತ ಕಾಲದಲ್ಲಿ, ಅಭಿವೃದ್ಧಿ ಹೊಂದಿದ ಭಾರತವನ್ನು ರೂಪಿಸುವ ನೀತಿಗಳನ್ನು ಈ ಕಟ್ಟಡಗಳಲ್ಲಿ ರೂಪಿಸಲಾಗುತ್ತಿದೆ ಮತ್ತು ಮುಂಬರುವ ದಶಕಗಳಲ್ಲಿ, ರಾಷ್ಟ್ರದ ದಿಕ್ಕನ್ನು ಈ ಸಂಸ್ಥೆಗಳು ನಿರ್ಧರಿಸುತ್ತವೆ ಎಂದು ಹೇಳಿದರು. ಕರ್ತವ್ಯ ಭವನದ ಉದ್ಘಾಟನೆಗಾಗಿ ಎಲ್ಲಾ ನಾಗರಿಕರನ್ನು ಅಭಿನಂದಿಸಿದ ಅವರು, ಅದರ ನಿರ್ಮಾಣದಲ್ಲಿ ಭಾಗಿಯಾದ ಎಂಜಿನಿಯರ್ ಗಳು ಮತ್ತು ಕಾರ್ಮಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಕರ್ತವ್ಯ ಪಥ ಮತ್ತು ಕರ್ತವ್ಯ ಭವನ ಎರಡೂ ಭಾರತದ ಪ್ರಜಾಪ್ರಭುತ್ವ ಮತ್ತು ಅದರ ಸಂವಿಧಾನದ ಮೂಲ ಚೈತನ್ಯವನ್ನು ಪ್ರತಿಧ್ವನಿಸುತ್ತವೆ ಎಂದು ತಿಳಿಸಿದ ಶ್ರೀ ಮೋದಿ, ಆಳವಾದ ಚಿಂತನೆಯ ನಂತರ ಕಟ್ಟಡಕ್ಕೆ 'ಕರ್ತವ್ಯ ಭವನ' ಎಂದು ಹೆಸರಿಸಲಾಗಿದೆ ಎಂದು ಹೇಳಿದರು. ಭಗವದ್ಗೀತೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ , ಲಾಭ ಅಥವಾ ನಷ್ಟದ ಆಲೋಚನೆಗಳನ್ನು ಮೀರಿ ಕರ್ತವ್ಯ ಮನೋಭಾವದಿಂದ ವರ್ತಿಸಬೇಕು ಎಂಬ ಭಗವಾನ್ ಶ್ರೀ ಕೃಷ್ಣನ ಬೋಧನೆಗಳನ್ನು ನೆನಪಿಸಿಕೊಂಡರು. ಭಾರತೀಯ ಸಂಸ್ಕೃತಿಯಲ್ಲಿ 'ಕರ್ತವ್ಯ' ಎಂಬ ಪದವು ಕೇವಲ ಜವಾಬ್ದಾರಿಗೆ ಸೀಮಿತವಾಗಿಲ್ಲ, ಅದು ಭಾರತದ ಕ್ರಿಯಾತ್ಮಕ ತತ್ವದ ಸಾರವನ್ನು ಸಾಕಾರಗೊಳಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಇದು ಕರ್ತವ್ಯದ ನಿಜವಾದ ಅರ್ಥವನ್ನು ಪ್ರತಿನಿಧಿಸುವ, ಸ್ವಯಂ ಮೀರಿದ ಸಾಮೂಹಿಕತೆಯನ್ನು ಅಳವಡಿಸಿಕೊಳ್ಳುವ ಒಂದು ಭವ್ಯವಾದ ದೃಷ್ಟಿಕೋನ ಎಂದು ಪ್ರಧಾನಮಂತ್ರಿ ಬಣ್ಣಿಸಿದರು. ಕರ್ತವ್ಯ ಕೇವಲ ಒಂದು ಕಟ್ಟಡದ ಹೆಸರಲ್ಲ ಎಂದು ಹೇಳಿದ ಪ್ರಧಾನಮಂತ್ರಿ , ಕೋಟ್ಯಂತರ ಭಾರತೀಯ ನಾಗರಿಕರ ಕನಸುಗಳನ್ನು ನನಸಾಗಿಸುವ ಪವಿತ್ರ ನೆಲವಾಗಿದೆ ಎಂದು ಹೇಳಿದರು. "ಕರ್ತವ್ಯವು ಆರಂಭ ಮತ್ತು ಅದೃಷ್ಟ ಎರಡೂ ಆಗಿದೆ, ಕರುಣೆ ಮತ್ತು ಶ್ರದ್ಧೆಯಿಂದ ಬಂಧಿಸಲ್ಪಟ್ಟಿದೆ, ಕರ್ತವ್ಯವು ಕ್ರಿಯೆಯ ಎಳೆ, ಕನಸುಗಳ ಒಡನಾಡಿ, ಸಂಕಲ್ಪಗಳ ಭರವಸೆ ಮತ್ತು ಪ್ರಯತ್ನದ ಪರಾಕಾಷ್ಠೆಯಾಗಿದೆ" ಎಂದು ಶ್ರೀ ಮೋದಿ ಹೇಳಿದರು. ಕರ್ತವ್ಯವು ಪ್ರತಿಯೊಬ್ಬರ ಜೀವನದಲ್ಲಿ ದೀಪವನ್ನು ಬೆಳಗಿಸುವ ಇಚ್ಛಾಶಕ್ತಿಯಾಗಿದೆ. ಕೋಟ್ಯಂತರ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಅಡಿಪಾಯವಾಗಿದೆ ಎಂದು ಒತ್ತಿ ಹೇಳಿದರು. ಕರ್ತವ್ಯವು ಭಾರತಮಾತೆಯ ಜೀವ ಶಕ್ತಿಯ ವಾಹಕ ಮತ್ತು 'ನಾಗರಿಕ ದೇವೋ ಭವ' ಮಂತ್ರದ ಪಠಣವಾಗಿದೆ ಎಂದು ಅವರು ಹೇಳಿದರು. ರಾಷ್ಟ್ರದ ಬಗ್ಗೆ ಶ್ರದ್ಧೆಯಿಂದ ಮಾಡುವ ಪ್ರತಿಯೊಂದು ಕೆಲಸವೂ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಭಾರತದ ಆಡಳಿತ ಯಂತ್ರವು ಬ್ರಿಟಿಷ್ ವಸಾಹತುಶಾಹಿ ಯುಗದಲ್ಲಿ ನಿರ್ಮಿಸಲಾದ ಕಟ್ಟಡಗಳಿಂದಲೇ ಕಾರ್ಯನಿರ್ವಹಿಸುತ್ತಿತ್ತು ಎಂದು ಹೇಳಿದ ಪ್ರಧಾನಮಂತ್ರಿ , ಈ ಹಳೆಯ ಆಡಳಿತ ಕಟ್ಟಡಗಳಲ್ಲಿನ ಕಳಪೆ ಕೆಲಸದ ಪರಿಸ್ಥಿತಿಗಳನ್ನು ಒಪ್ಪಿಕೊಂಡರು, ಅವುಗಳಲ್ಲಿ ಸಾಕಷ್ಟು ಸ್ಥಳಾವಕಾಶ, ಗಾಳಿ, ಬೆಳಕಿನ ಕೊರತೆ ಇತ್ತು. ಗೃಹ ಸಚಿವಾಲಯದಂತಹ ಪ್ರಮುಖ ಸಚಿವಾಲಯವು ಸುಮಾರು 100 ವರ್ಷಗಳ ಕಾಲ ಒಂದೇ ಕಟ್ಟಡದಿಂದ ಸಾಕಷ್ಟು ಮೂಲಸೌಕರ್ಯಗಳಿಲ್ಲದೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಊಹಿಸುವುದು ಕಷ್ಟ ಎಂದು ಅವರು ಹೇಳಿದರು. ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಪ್ರಸ್ತುತ ದೆಹಲಿಯಾದ್ಯಂತ 50 ವಿಭಿನ್ನ ಸ್ಥಳಗಳಿಂದ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ ಶ್ರೀ ಮೋದಿ, ಈ ಸಚಿವಾಲಯಗಳಲ್ಲಿ ಹಲವು ಬಾಡಿಗೆ ಕಟ್ಟಡಗಳಿಂದ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಬಾಡಿಗೆಗಳ ಮೇಲಿನ ವಾರ್ಷಿಕ ವೆಚ್ಚವು ದಿಗ್ಭ್ರಮೆಗೊಳಿಸುವಷ್ಟಿದೆ- ₹1,500 ಕೋಟಿಗಳಷ್ಟಿದೆ ಎಂದು ಅವರು ಹೇಳಿದರು. ಇಷ್ಟೊಂದು ದೊಡ್ಡ ಮೊತ್ತವನ್ನು ಚದುರಿದ ಸರ್ಕಾರಿ ಕಚೇರಿಗಳ ಬಾಡಿಗೆಗಾಗಿಯೇ ಖರ್ಚು ಮಾಡಲಾಗುತ್ತಿದೆ, ಈ ವಿಕೇಂದ್ರೀಕರಣದಿಂದಾಗಿ ಸಿಬ್ಬಂದಿಗಳ ಚಲನವಲನದ ಮತ್ತೊಂದು ಸವಾಲು ಸಹ ಎದುರಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು, ಅಂದಾಜು 8,000 ರಿಂದ 10,000 ಉದ್ಯೋಗಿಗಳು ಪ್ರತಿದಿನ ಸಚಿವಾಲಯಗಳ ನಡುವೆ ಓಡಾಡುತ್ತಾರೆ, ಇದರ ಪರಿಣಾಮವಾಗಿ ನೂರಾರು ವಾಹನಗಳ ಚಲನೆ, ವೆಚ್ಚ ಮತ್ತು ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು. ಪರಿಣಾಮವಾಗಿ ಸಮಯದ ನಷ್ಟವು ಆಡಳಿತಾತ್ಮಕ ದಕ್ಷತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದರು.
21ನೇ ಶತಮಾನದ ಭಾರತಕ್ಕೆ 21ನೇ ಶತಮಾನದ ಆಧುನಿಕ ಕಟ್ಟಡಗಳು ಬೇಕಾಗಿವೆ ಎಂದು ಹೇಳಿದ ಶ್ರೀ ಮೋದಿ, ತಂತ್ರಜ್ಞಾನ, ಭದ್ರತೆ ಮತ್ತು ಅನುಕೂಲತೆಯ ವಿಷಯದಲ್ಲಿ ಅನುಕರಣೀಯವಾದ ಕಟ್ಟಡಗಳ ಅಗತ್ಯವನ್ನು ಒತ್ತಿ ಹೇಳಿದರು. ಈ ಕಟ್ಟಡಗಳು ಸಿಬ್ಬಂದಿಗೆ ಆರಾಮದಾಯಕ ವಾತಾವರಣವನ್ನು ಸಕ್ರಿಯಗೊಳಿಸಬೇಕು, ತ್ವರಿತ ನಿರ್ಧಾರ ತೆಗೆದುಕೊಳ್ಳುವಿಕೆಯನ್ನು ಸುಗಮಗೊಳಿಸಬೇಕು ಮತ್ತು ಸೇವೆಗಳ ಸುಗಮ ವಿತರಣೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕರ್ತವ್ಯ ಭವನದಂತಹ ದೊಡ್ಡ ಪ್ರಮಾಣದ ಕಟ್ಟಡಗಳನ್ನು ಸಮಗ್ರ ದೃಷ್ಟಿಕೋನದೊಂದಿಗೆ ಕರ್ತವ್ಯ ಪಥದ ಸುತ್ತಲೂ ನಿರ್ಮಿಸಲಾಗುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ , ಮೊದಲನೆಯ ಕರ್ತವ್ಯ ಭವನದ ನಿರ್ಮಾಣ ಪೂರ್ಣಗೊಂಡಿದೆ ಮತ್ತು ಇತರ ಕರ್ತವ್ಯ ಭವನಗಳ ನಿರ್ಮಾಣವು ವೇಗವಾಗಿ ಪ್ರಗತಿಯಲ್ಲಿದೆ ಎಂದರು. ಈ ಕಚೇರಿಗಳನ್ನು ಹೊಸ ಸಂಕೀರ್ಣಗಳಿಗೆ ಸ್ಥಳಾಂತರಿಸಿದ ನಂತರ, ಉದ್ಯೋಗಿಗಳು ಸುಧಾರಿತ ಕೆಲಸದ ವಾತಾವರಣದಿಂದ ಪ್ರಯೋಜನ ಪಡೆಯುತ್ತಾರೆ ಮತ್ತು ಅಗತ್ಯ ಸೌಲಭ್ಯಗಳನ್ನು ಪಡೆಯುತ್ತಾರೆ, ಇದು ಅವರ ಒಟ್ಟಾರೆ ಕೆಲಸದ ಫಲಿತಾಂಶವನ್ನು ಹೆಚ್ಚಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಸರ್ಕಾರವು ಚದುರಿದ ಸಚಿವಾಲಯ ಕಚೇರಿಗಳ ಬಾಡಿಗೆಗೆ ಪ್ರಸ್ತುತ ಖರ್ಚು ಮಾಡುತ್ತಿರುವ ₹1,500 ಕೋಟಿಯನ್ನು ಉಳಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.
"ಹೊಸ ರಕ್ಷಣಾ ಸಂಕೀರ್ಣಗಳು ಸೇರಿದಂತೆ ಭವ್ಯವಾದ ಕರ್ತವ್ಯ ಭವನ ಮತ್ತು ಇತರ ಪ್ರಮುಖ ಮೂಲಸೌಕರ್ಯ ಯೋಜನೆಗಳು ಭಾರತದ ಆವೇಗಕ್ಕೆ ಸಾಕ್ಷಿಯಷ್ಟೇ ಅಲ್ಲ, ಅದರ ಜಾಗತಿಕ ದೃಷ್ಟಿಕೋನದ ಪ್ರತಿಬಿಂಬವೂ ಆಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಜಗತ್ತಿಗೆ ನೀಡುತ್ತಿರುವ ದೃಷ್ಟಿಕೋನವನ್ನು ದೇಶದಲ್ಲಿಯೂ ಅಳವಡಿಸಿಕೊಳ್ಳಲಾಗುತ್ತಿದೆ ಮತ್ತು ಇದು ಅದರ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. ಮಿಷನ್ ಲೈಫ್ ಮತ್ತು 'ಒಂದು ಭೂಮಿ, ಒಂದು ಸೂರ್ಯ, ಒಂದು ಗ್ರಿಡ್' ಉಪಕ್ರಮಗಳಂತಹ ಭಾರತದ ಜಾಗತಿಕ ಕೊಡುಗೆಗಳನ್ನು ಎತ್ತಿ ತೋರಿಸಿದ ಶ್ರೀ ಮೋದಿ, ಈ ವಿಚಾರಗಳು ಮನುಕುಲದ ಭವಿಷ್ಯಕ್ಕಾಗಿ ಭರವಸೆಯನ್ನು ತರುತ್ತವೆ ಎಂದು ಹೇಳಿದರು. ಕರ್ತವ್ಯ ಭವನದಂತಹ ಆಧುನಿಕ ಮೂಲಸೌಕರ್ಯವು ಜನಪರ ಮನೋಭಾವ ಮತ್ತು ಗ್ರಹಪರ ರಚನೆಯ ಸಂಕೇತವಾಗಿದೆ ಎಂದು ಅವರು ಹೇಳಿದರು. ಕರ್ತವ್ಯ ಭವನವು ಮೇಲ್ಛಾವಣಿ ಸೌರ ಫಲಕಗಳನ್ನು ಹೊಂದಿದೆ ಎಂದು ಹೇಳಿದ ಪ್ರಧಾನಮಂತ್ರಿ , ಕಟ್ಟಡದಲ್ಲಿ ಸುಧಾರಿತ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗಳನ್ನು ಸಹ ಸಂಯೋಜಿಸಲಾಗಿದೆ ಮತ್ತು ಹಸಿರು ಕಟ್ಟಡಗಳು ಈಗ ಭಾರತದಾದ್ಯಂತ ವಿಸ್ತರಿಸುತ್ತಿವೆ ಎಂದು ಹೇಳಿದರು.
ಸರ್ಕಾರವು ಸಮಗ್ರ ದೃಷ್ಟಿಕೋನದಿಂದ ರಾಷ್ಟ್ರ ನಿರ್ಮಾಣದಲ್ಲಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ , ಇಂದು ದೇಶದ ಯಾವುದೇ ಭಾಗವು ಅಭಿವೃದ್ಧಿಯಿಂದ ವಂಚಿತವಾಗಿಲ್ಲ ಎಂದು ಹೇಳಿದರು. ದೆಹಲಿಯು ಹೊಸ ಸಂಸತ್ತಿನ ಕಟ್ಟಡದ ನಿರ್ಮಾಣಕ್ಕೆ ಸಾಕ್ಷಿಯಾಗಿದ್ದರೆ, ದೇಶಾದ್ಯಂತ 30,000 ಕ್ಕೂ ಹೆಚ್ಚು ಪಂಚಾಯತ್ ಭವನಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ಕರ್ತವ್ಯ ಭವನದಂತಹ ಹೆಗ್ಗುರುತು ಕಟ್ಟಡಗಳ ಜೊತೆಗೆ, ಬಡವರಿಗಾಗಿ ನಾಲ್ಕು ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ ಎಂದು ಶ್ರೀ ಮೋದಿ ಹೇಳಿದರು. ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಪೊಲೀಸ್ ಸ್ಮಾರಕವನ್ನು ಸ್ಥಾಪಿಸಲಾಗಿದೆ ಮತ್ತು ದೇಶಾದ್ಯಂತ 300 ಕ್ಕೂ ಹೆಚ್ಚು ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದರು. ದೆಹಲಿಯಲ್ಲಿ ಭಾರತ ಮಂಟಪ ತಲೆ ಎತ್ತಿದೆ, ದೇಶಾದ್ಯಂತ 1,300 ಕ್ಕೂ ಹೆಚ್ಚು ಅಮೃತ ಭಾರತ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕಳೆದ 11 ವರ್ಷಗಳಲ್ಲಿ ಸುಮಾರು 90 ಹೊಸ ವಿಮಾನ ನಿಲ್ದಾಣಗಳು ಹಾಗೂ ಯಶೋಭೂಮಿಯ ನಿರ್ಮಾಣದಲ್ಲಿನ ಭವ್ಯತೆಯು ಪರಿವರ್ತನೆಯ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.
ಹಕ್ಕುಗಳು ಮತ್ತು ಕರ್ತವ್ಯಗಳು ಒಂದಕ್ಕೊಂದು ಸಂಬಂಧ ಹೊಂದಿವೆ ಮತ್ತು ಕರ್ತವ್ಯಗಳ ನೆರವೇರಿಕೆಯು ಹಕ್ಕುಗಳ ಅಡಿಪಾಯವನ್ನು ಬಲಪಡಿಸುತ್ತದೆ ಎಂಬ ಮಹಾತ್ಮ ಗಾಂಧಿಯವರ ನಂಬಿಕೆಯನ್ನು ನೆನಪಿಸಿಕೊಂಡ ಶ್ರೀ ಮೋದಿ, ನಾಗರಿಕರಿಂದ ಕರ್ತವ್ಯಗಳನ್ನು ನಿರೀಕ್ಷಿಸಲಾಗುತ್ತದೆಯಾದರೂ, ಸರ್ಕಾರವು ಸಹ ತನ್ನ ಜವಾಬ್ದಾರಿಗಳನ್ನು ಅತ್ಯಂತ ಗಂಭೀರವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಸರ್ಕಾರವು ತನ್ನ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಿದಾಗ, ಅದು ಅದರ ಆಡಳಿತದಲ್ಲಿ ಪ್ರತಿಫಲಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಕಳೆದ ದಶಕವನ್ನು ದೇಶದಲ್ಲಿ ಉತ್ತಮ ಆಡಳಿತದ ದಶಕವೆಂದು ಗುರುತಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತಮ ಆಡಳಿತ ಮತ್ತು ಅಭಿವೃದ್ಧಿಯ ಹರಿವು ಸುಧಾರಣೆಗಳ ನದಿಮೂಲದಿಂದ ಹುಟ್ಟಿಕೊಂಡಿದೆ ಎಂದು ಅವರು ಹೇಳಿದರು, ಸುಧಾರಣೆಗಳನ್ನು ನಿರಂತರ ಮತ್ತು ಸಮಯ-ಸೀಮಿತ ಪ್ರಕ್ರಿಯೆಗಳು ಎಂದು ವಿವರಿಸಿದ ಅವರು, ಭಾರತವು ನಿರಂತರವಾಗಿ ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ ಎಂದು ಹೇಳಿದರು. "ಭಾರತದ ಸುಧಾರಣೆಗಳು ನಿರಂತರವಾಗಿರುವುದು ಮಾತ್ರವಲ್ಲ, ಕ್ರಿಯಾತ್ಮಕ ಮತ್ತು ದೂರದೃಷ್ಟಿಯುಳ್ಳವುಗಳಾಗಿವೆ" ಎಂದರು. ಸರ್ಕಾರ-ನಾಗರಿಕ ಸಂಬಂಧಗಳನ್ನು ಬಲಪಡಿಸಲು, ಜೀವನ ಸುಲಭತೆಯನ್ನು ಹೆಚ್ಚಿಸಲು, ಹಿಂದುಳಿದವರಿಗೆ ಆದ್ಯತೆ ನೀಡಲು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಆಡಳಿತ ದಕ್ಷತೆಯನ್ನು ಸುಧಾರಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಎತ್ತಿ ತೋರಿಸಿದರು. ದೇಶವು ಈ ಕ್ಷೇತ್ರಗಳಲ್ಲಿ ನಿರಂತರವಾಗಿ ಹೊಸತನವನ್ನು ಕಂಡುಕೊಳ್ಳುತ್ತಿದೆ ಎಂದು ಅವರು ಹೇಳಿದರು. "ಕಳೆದ 11 ವರ್ಷಗಳಲ್ಲಿ, ಭಾರತವು ಪಾರದರ್ಶಕ, ಸ್ಪಂದಿಸುವ ಮತ್ತು ನಾಗರಿಕ ಕೇಂದ್ರಿತ ಆಡಳಿತ ಮಾದರಿಯನ್ನು ಅಭಿವೃದ್ಧಿಪಡಿಸಿದೆ" ಎಂದು ಪ್ರಧಾನ ಮಂತ್ರಿಯವರು ಹೇಳಿದರು.
ತಾವು ಭೇಟಿ ನೀಡುವ ಪ್ರತಿಯೊಂದು ದೇಶದಲ್ಲೂ, ಜೆ.ಎ.ಎಂ ತ್ರಿವಳಿಗಳಾದ ಜನಧನ್, ಆಧಾರ್ ಮತ್ತು ಮೊಬೈಲ್ ಅನ್ನು ಜಾಗತಿಕವಾಗಿ ವ್ಯಾಪಕವಾಗಿ ಚರ್ಚಿಸಲಾಗಿದೆ ಮತ್ತು ಪ್ರಶಂಸಿಸಲಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ , ಜೆ.ಎ.ಎಂ ಭಾರತದಲ್ಲಿ ಸರ್ಕಾರಿ ಯೋಜನೆಗಳ ವಿತರಣೆಯನ್ನು ಪಾರದರ್ಶಕ ಮತ್ತು ಸೋರಿಕೆ ಮುಕ್ತವಾಗಿಸಿದೆ ಎಂದು ಹೇಳಿದರು. ಪಡಿತರ ಚೀಟಿಗಳು, ಅನಿಲ ಸಬ್ಸಿಡಿಗಳು ಮತ್ತು ವಿದ್ಯಾರ್ಥಿವೇತನಗಳಂತಹ ಯೋಜನೆಗಳಲ್ಲಿ, ಸುಮಾರು 10 ಕೋಟಿ ಫಲಾನುಭವಿಗಳ ಅಸ್ತಿತ್ವವನ್ನು ಪರಿಶೀಲಿಸಿರಲಿಲ್ಲ - ಅವರಲ್ಲಿ ಹಲವರು ಹುಟ್ಟಿಯೇ ಇರಲಿಲ್ಲ ಎಂದು ತಿಳಿದರೆ ಜನರು ಆಶ್ಚರ್ಯಚಕಿತರಾಗುತ್ತಾರೆ ಎಂದು ಅವರು ಹೇಳಿದರು. ಹಿಂದಿನ ಸರ್ಕಾರಗಳು ಈ ನಕಲಿ ಫಲಾನುಭವಿಗಳ ಹೆಸರಿನಲ್ಲಿ ಹಣವನ್ನು ವರ್ಗಾಯಿಸುತ್ತಿದ್ದವು, ಇದರ ಪರಿಣಾಮವಾಗಿ ಹಣವು ಅಕ್ರಮ ಖಾತೆಗಳಿಗೆ ಹೋಗುತ್ತಿತ್ತು ಎಂದು ಹೇಳಿದ ಶ್ರೀ ಮೋದಿ, ಪ್ರಸ್ತುತ ಸರ್ಕಾರದ ಅಡಿಯಲ್ಲಿ, ಎಲ್ಲಾ 10 ಕೋಟಿ ನಕಲಿ ಹೆಸರುಗಳನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಹೇಳಿದರು. ಈ ಕ್ರಮವು ದೇಶವು ₹4.3 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಅನರ್ಹರ ಕೈಗಳಿಗೆ ಹೋಗದಂತೆ ಉಳಿಸಿದೆ ಮತ್ತು ಈ ಗಣನೀಯ ಮೊತ್ತವನ್ನು ಈಗ ಅಭಿವೃದ್ಧಿ ಉಪಕ್ರಮಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಹೇಳಿದರು. ನಿಜವಾದ ಫಲಾನುಭವಿಗಳು ತೃಪ್ತರಾಗಿದ್ದಾರೆ ಮತ್ತು ರಾಷ್ಟ್ರೀಯ ಸಂಪನ್ಮೂಲಗಳು ಸುರಕ್ಷಿತವಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು.
ಭ್ರಷ್ಟಾಚಾರ ಮತ್ತು ಸೋರಿಕೆಗಳ ಜೊತೆಗೆ, ಹಳೆಯ ನಿಯಮಗಳು ಮತ್ತು ನಿಬಂಧನೆಗಳು ನಾಗರಿಕರಿಗೆ ತೊಂದರೆ ಉಂಟುಮಾಡುತ್ತಿದ್ದವು ಮತ್ತು ಸರ್ಕಾರದ ನಿರ್ಧಾರ ತೆಗೆದುಕೊಳ್ಳುವಿಕೆಗೆ ಅಡ್ಡಿಯಾಗಿದ್ದವು ಎಂದು ಒತ್ತಿ ಹೇಳಿದ ಶ್ರೀ ಮೋದಿ, ಈ ಸಮಸ್ಯೆಯನ್ನು ಪರಿಹರಿಸಲು, 1,500 ಕ್ಕೂ ಹೆಚ್ಚು ಹಳೆಯ ಕಾನೂನುಗಳನ್ನು - ಅವುಗಳಲ್ಲಿ ಹಲವು ವಸಾಹತುಶಾಹಿ ಕಾಲದ ಅವಶೇಷಗಳಾಗಿವೆ - ದಶಕಗಳಿಂದ ಆಡಳಿತಕ್ಕೆ ಅಡ್ಡಿಯಾಗಿದ್ದ ಕಾರಣ ರದ್ದುಗೊಳಿಸಲಾಗಿದೆ ಎಂದು ಹೇಳಿದರು. ಹಿಂದೆ ಜನರು ಮೂಲಭೂತ ಕೆಲಸಗಳಿಗೂ ಸಹ ಬಹು ದಾಖಲೆಗಳನ್ನು ಸಲ್ಲಿಸಬೇಕಾಗಿದ್ದರಿಂದ ಅನುಸರಣೆಯ ಹೊರೆ ಪ್ರಮುಖ ಸವಾಲಾಗಿತ್ತು ಎಂದು ಅವರು ಹೇಳಿದರು. ಕಳೆದ 11 ವರ್ಷಗಳಲ್ಲಿ 40,000 ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕಲಾಗಿದೆ ಮತ್ತು ಈ ತರ್ಕಬದ್ಧಗೊಳಿಸುವಿಕೆಯು ಸ್ಥಿರವಾದ ವೇಗದಲ್ಲಿ ಮುಂದುವರೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಹಿಂದೆ, ಇಲಾಖೆಗಳು ಮತ್ತು ಸಚಿವಾಲಯಗಳಾದ್ಯಂತ ಜವಾಬ್ದಾರಿಗಳು ಒಂದರ ಮೇಲೊಂದು ಅತಿಕ್ರಮಿಸುತ್ತಿದ್ದರಿಂದ ವಿಳಂಬ ಮತ್ತು ಅಡಚಣೆಗಳು ಉಂಟಾಗುತ್ತಿದ್ದವು ಎಂದು ಪ್ರಧಾನಮಂತ್ರಿ ಹೇಳಿದರು. ಕಾರ್ಯನಿರ್ವಹಣೆಯನ್ನು ಸುಗಮಗೊಳಿಸಲು, ಹಲವಾರು ಇಲಾಖೆಗಳನ್ನು ಸಂಯೋಜಿಸಲಾಯಿತು, ನಕಲುಗಳನ್ನು ತೆಗೆದುಹಾಕಲಾಯಿತು ಮತ್ತು ಅಗತ್ಯವಿದ್ದಲ್ಲಿ, ಸಚಿವಾಲಯಗಳನ್ನು ವಿಲೀನಗೊಳಿಸಲಾಯಿತು ಅಥವಾ ಹೊಸ ಸಚಿವಾಲಯಗಳನ್ನು ರಚಿಸಲಾಯಿತು ಎಂದು ಅವರು ಹೇಳಿದರು. ಜಲ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಲಶಕ್ತಿ ಸಚಿವಾಲಯ, ಸಹಕಾರಿ ಚಳುವಳಿಯನ್ನು ಬಲಪಡಿಸಲು ಸಹಕಾರ ಸಚಿವಾಲಯ, ಮೊದಲ ಬಾರಿಗೆ ಮೀನುಗಾರಿಕೆ ಸಚಿವಾಲಯ ಮತ್ತು ಯುವ ಸಬಲೀಕರಣದ ಮೇಲೆ ಕೇಂದ್ರೀಕರಿಸಲು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಂತಹ ಪ್ರಮುಖ ಸಚಿವಾಲಯಗಳನ್ನು ರಚಿಸಲಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಈ ಸುಧಾರಣೆಗಳು ಆಡಳಿತದ ದಕ್ಷತೆಯನ್ನು ಹೆಚ್ಚಿಸಿವೆ ಮತ್ತು ಸಾರ್ವಜನಿಕ ಸೇವೆಗಳ ವಿತರಣೆಯನ್ನು ವೇಗಗೊಳಿಸಿವೆ ಎಂದು ಅವರು ಹೇಳಿದರು.
ಕೆಲಸದ ಸಂಸ್ಕೃತಿಯನ್ನು ಸುಧಾರಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ , ಮಿಷನ್ ಕರ್ಮಯೋಗಿ ಮತ್ತು i-GOT ಯಂತಹ ಡಿಜಿಟಲ್ ವೇದಿಕೆಗಳು ಸರ್ಕಾರಿ ನೌಕರರಿಗೆ ತಾಂತ್ರಿಕ ಮತ್ತು ವೃತ್ತಿಪರ ತರಬೇತಿಯನ್ನು ನೀಡುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತಿವೆ ಎಂದು ಹೇಳಿದರು. ಇ-ಕಚೇರಿ, ಕಡತ ಟ್ರ್ಯಾಕಿಂಗ್ ಮತ್ತು ಡಿಜಿಟಲ್ ಅನುಮೋದನೆಗಳಂತಹ ವ್ಯವಸ್ಥೆಗಳು ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಕ್ರಾಂತಿಯನ್ನುಂಟು ಮಾಡುತ್ತಿವೆ - ಅವುಗಳನ್ನು ವೇಗವಾಗಿಸಿರುವುದಲ್ಲದೆ, ಸಂಪೂರ್ಣವಾಗಿ ಪತ್ತೆಹಚ್ಚಬಹುದಾಗಿದೆ ಮತ್ತು ಜವಾಬ್ದಾರಿಯುತವಾಗಿಸಿವೆ ಎಂದು ಅವರು ಒತ್ತಿ ಹೇಳಿದರು.
ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವುದರಿಂದ ಹೊಸ ಉತ್ಸಾಹ ಬರುತ್ತದೆ ಮತ್ತು ಚೈತನ್ಯದ ಮಟ್ಟ ಹೆಚ್ಚಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ಕಟ್ಟಡದಲ್ಲಿ ಹಾಜರಿರುವ ಪ್ರತಿಯೊಬ್ಬರೂ ಅದೇ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕೆಂದು ಅವರು ಒತ್ತಾಯಿಸಿದರು. ಅವರ ಸ್ಥಾನ ಏನೇ ಇರಲಿ, ಅವರ ಅಧಿಕಾರಾವಧಿಯನ್ನು ನಿಜವಾಗಿಯೂ ಸ್ಮರಣೀಯವಾಗಿಸಲು ಪ್ರಯತ್ನಿಸುವಂತೆ ಅವರು ಎಲ್ಲರಿಗೂ ಕರೆ ನೀಡಿದರು. ಇಲ್ಲಿಂದ ನಿರ್ಗಮಿಸುವಾಗ, ರಾಷ್ಟ್ರದ ಸೇವೆಯಲ್ಲಿ 100 ಪ್ರತಿಶತದಷ್ಟು ಕೊಡುಗೆ ನೀಡಿದ್ದೇನೆ ಎಂಬ ಹೆಮ್ಮೆಯ ಭಾವ ಇರಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.
ಕಡತಗಳು ಮತ್ತು ದಾಖಲೆಗಳ ಬಗೆಗಿನ ಮನೋಭಾವವನ್ನು ಬದಲಾಯಿಸುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಮೋದಿ, ಒಂದು ಕಡತ, ದೂರು ಅಥವಾ ಅರ್ಜಿಯು ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಯಾರಿಗಾದರೂ, ಆ ಕಾಗದದ ತುಂಡು ಅವರ ಆಳವಾದ ಭರವಸೆಯ ಸಂಕೇತವಾಗಬಹುದು ಎಂದು ಹೇಳಿದರು. ಒಂದು ಕಡತವು ಅಸಂಖ್ಯಾತ ಜನರ ಜೀವನದೊಂದಿಗೆ ಆಳವಾಗಿ ಸಂಪರ್ಕ ಹೊಂದಿರುತ್ತದೆ ಎಂದರು. ಒಂದು ಲಕ್ಷ ನಾಗರಿಕರಿಗೆ ಸಂಬಂಧಿಸಿದ ಕಡತವು ಒಂದು ದಿನ ವಿಳಂಬವಾದರೂ, ಅದು ಒಂದು ಲಕ್ಷ ಮಾನವ ದಿನಗಳ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದರು. ಈ ಮನಸ್ಥಿತಿಯೊಂದಿಗೆ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಮತ್ತು ಅನುಕೂಲತೆ ಅಥವಾ ಸಾಮಾನ್ಯ ಚಿಂತನೆಯನ್ನು ಮೀರಿ ಸೇವೆಯ ಅಪಾರ ಅವಕಾಶವನ್ನು ಗುರುತಿಸಬೇಕು ಎಂದು ಕರೆ ನೀಡಿದರು. ಹೊಸ ಆಲೋಚನೆಯನ್ನು ಹುಟ್ಟುಹಾಕುವುದರಿಂದ ಪರಿವರ್ತನಾತ್ಮಕ ಬದಲಾವಣೆಗೆ ಅಡಿಪಾಯ ಹಾಕಬಹುದು. ಎಲ್ಲಾ ಸಾರ್ವಜನಿಕ ಸೇವಕರು ಕರ್ತವ್ಯ ಪ್ರಜ್ಞೆಯೊಂದಿಗೆ ರಾಷ್ಟ್ರ ನಿರ್ಮಾಣಕ್ಕೆ ಆಳವಾಗಿ ಬದ್ಧರಾಗಿರಬೇಕು ಎಂದು ಅವರು ಕರೆ ನೀಡಿದರು, ಭಾರತದ ಅಭಿವೃದ್ಧಿಯ ಕನಸುಗಳು ಜವಾಬ್ದಾರಿಯ ಗರ್ಭದಲ್ಲಿ ಪೋಷಿಸಲ್ಪಡುತ್ತವೆ ಎಂಬುದನ್ನು ಅವರಿಗೆ ನೆನಪಿಸಿದರು.
ಇದು ಟೀಕೆಗೆ ಸಮಯವಲ್ಲದಿದ್ದರೂ, ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಂತೆಯೇ ಸ್ವಾತಂತ್ರ್ಯ ಪಡೆದ ಅನೇಕ ದೇಶಗಳು ವೇಗವಾಗಿ ಪ್ರಗತಿ ಸಾಧಿಸಿವೆ, ಆದರೆ ವಿವಿಧ ಐತಿಹಾಸಿಕ ಸವಾಲುಗಳಿಂದಾಗಿ ಭಾರತದ ಪ್ರಗತಿ ತುಲನಾತ್ಮಕವಾಗಿ ನಿಧಾನವಾಗಿದೆ ಎಂದು ಅವರು ಹೇಳಿದರು. ಈ ಸವಾಲುಗಳನ್ನು ಭವಿಷ್ಯದ ಪೀಳಿಗೆಗೆ ವರ್ಗಾಯಿಸದಂತೆ ನೋಡಿಕೊಳ್ಳುವುದು ಈಗ ನಮ್ಮ ಜವಾಬ್ದಾರಿಯಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಹಿಂದಿನ ಪ್ರಯತ್ನಗಳನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ , ಹಳೆಯ ಕಟ್ಟಡಗಳ ಗೋಡೆಗಳ ಒಳಗೆ ಪ್ರಮುಖ ನಿರ್ಧಾರಗಳು ಮತ್ತು ನೀತಿಗಳನ್ನು ತೆಗೆದುಕೊಳ್ಳಲಾಯಿತು, ಇದು 25 ಕೋಟಿ ನಾಗರಿಕರನ್ನು ಬಡತನದಿಂದ ಹೊರತಂದಿತು ಎಂದು ಹೇಳಿದರು. ಹೊಸ ಕಟ್ಟಡಗಳಲ್ಲಿ ಉತ್ತಮ ದಕ್ಷತೆಯೊಂದಿಗೆ, ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಮತ್ತು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುವುದು ನಮ್ಮ ಧ್ಯೇಯವಾಗಿದೆ ಎಂದು ಅವರು ಒತ್ತಿ ಹೇಳಿದರು. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಶ್ರೀ ಮೋದಿ ಕರೆ ನೀಡಿದರು, ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಂತಹ ಉಪಕ್ರಮಗಳ ಯಶೋಗಾಥೆಗಳಿಗೆ ಎಲ್ಲರೂ ಕೊಡುಗೆ ನೀಡುವಂತೆ ಹಾಗೂ ರಾಷ್ಟ್ರೀಯ ಉತ್ಪಾದಕತೆಯನ್ನು ಹೆಚ್ಚಿಸುವ ಬದ್ಧತೆಯನ್ನು ತೋರುವಂತೆ ಅವರು ಒತ್ತಾಯಿಸಿದರು, ಪ್ರವಾಸೋದ್ಯಮದ ಬಗ್ಗೆ ಚರ್ಚಿಸುವಾಗ, ಭಾರತ ಜಾಗತಿಕ ತಾಣವಾಗುವುದನ್ನು, ಬ್ರ್ಯಾಂಡ್‌ಗಳನ್ನು ಉಲ್ಲೇಖಿಸಿದಾಗ, ಜಗತ್ತು ಭಾರತೀಯ ಉದ್ಯಮಗಳತ್ತ ಗಮನ ಹರಿಸುವುದನ್ನು ಮತ್ತು ಶಿಕ್ಷಣದ ಬಗ್ಗೆ ಹೇಳುವಾಗ, ಪ್ರಪಂಚದಾದ್ಯಂತದ ವಿದ್ಯಾರ್ಥಿಗಳು ಭಾರತವನ್ನು ಆಯ್ಕೆ ಮಾಡುವುದನ್ನು ಖಚಿತಪಡಿಸಬೇಕು. ಭಾರತದ ಸಾಮರ್ಥ್ಯಗಳನ್ನು ಬಲಪಡಿಸುವುದು ಹಂಚಿಕೆಯ ಅನ್ವೇಷಣೆ ಮತ್ತು ವೈಯಕ್ತಿಕ ಧ್ಯೇಯವಾಗಬೇಕು ಎಂದು ಅವರು ಹೇಳಿದರು.
ಯಶಸ್ವಿ ರಾಷ್ಟ್ರಗಳು ಮುಂದೆ ಸಾಗಿದಾಗ, ಅವರು ತಮ್ಮ ಸಕಾರಾತ್ಮಕ ಪರಂಪರೆಯನ್ನು ತ್ಯಜಿಸುವುದಿಲ್ಲ, ಬದಲಾಗಿ ಅದನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಿದ ಶ್ರೀ ಮೋದಿ, ಭಾರತವು 'ವಿಕಾಸ್ ಔರ್ ವಿರಾಸತ್' (ಅಭಿವೃದ್ಧಿ ಮತ್ತು ಪರಂಪರೆ) ಎಂಬ ದೃಷ್ಟಿಕೋನದೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದರು. ಹೊಸ ಕರ್ತವ್ಯ ಭವನಗಳ ಉದ್ಘಾಟನೆಯ ನಂತರ, ಐತಿಹಾಸಿಕ ಉತ್ತರ ಮತ್ತು ದಕ್ಷಿಣ ಬ್ಲಾಕ್ ಗಳನ್ನು ಈಗ ಭಾರತದ ಜೀವಂತ ಪರಂಪರೆಯ ಭಾಗವಾಗಿ ಪರಿವರ್ತಿಸಲಾಗುವುದು ಎಂದು ಪ್ರಧಾನಮಂತ್ರಿ ಘೋಷಿಸಿದರು. ಈ ಐಕಾನಿಕ್ ಕಟ್ಟಡಗಳನ್ನು "ಯುಗೇ ಯುಗೀನ್ ಭಾರತ್ ಸಂಗ್ರಹಾಲಯ" ಎಂಬ ಸಾರ್ವಜನಿಕ ವಸ್ತುಸಂಗ್ರಹಾಲಯಗಳಾಗಿ ಪರಿವರ್ತಿಸಲಾಗುವುದು, ಇದು ಪ್ರತಿಯೊಬ್ಬ ನಾಗರಿಕರಿಗೂ ಭಾರತದ ಶ್ರೀಮಂತ ನಾಗರಿಕತೆಯ ಪ್ರಯಾಣವನ್ನು ವೀಕ್ಷಿಸಲು ಮತ್ತು ಅನುಭವಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಜನರು ಹೊಸ ಕರ್ತವ್ಯ ಭವನವನ್ನು ಪ್ರವೇಶಿಸುವಾಗ, ಈ ಸ್ಥಳಗಳ ಸ್ಫೂರ್ತಿ ಮತ್ತು ಪರಂಪರೆಯನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುವ ಮೂಲಕ ಪ್ರಧಾನಮಂತ್ರಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಕರ್ತವ್ಯ ಭವನದ ಉದ್ಘಾಟನೆಗಾಗಿ ಅವರು ಭಾರತದ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು ಮತ್ತು ಭಾರತ ಸರ್ಕಾರದ ಅಧಿಕಾರಿಗಳು ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಜಾನೆ ದೆಹಲಿಯ ಕರ್ತವ್ಯ ಪಥದಲ್ಲಿ ಕರ್ತವ್ಯ ಭವನವನ್ನು ಉದ್ಘಾಟಿಸಿದರು.
ಇದು ಪ್ರಧಾನ ಮಂತ್ರಿಯವರ ಆಧುನಿಕ, ದಕ್ಷ ಮತ್ತು ನಾಗರಿಕ ಕೇಂದ್ರಿತ ಆಡಳಿತದ ದೃಷ್ಟಿಕೋನಕ್ಕೆ ಸರ್ಕಾರದ ಬದ್ಧತೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಉದ್ಘಾಟನೆಯಾದ ಕರ್ತವ್ಯ ಭವನ - 03, ಸೆಂಟ್ರಲ್ ವಿಸ್ಟಾದ ವಿಶಾಲ ರೂಪಾಂತರದ ಭಾಗವಾಗಿದೆ. ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸುವ ಮತ್ತು ಚುರುಕಾದ ಆಡಳಿತವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿರುವ ಹಲವಾರು ಮುಂಬರುವ ಸಾಮಾನ್ಯ ಕೇಂದ್ರ ಸಚಿವಾಲಯ ಕಟ್ಟಡಗಳಲ್ಲಿ ಇದು ಮೊದಲನೆಯದು.
ಈ ಯೋಜನೆಯು ಸರ್ಕಾರದ ಸಮಗ್ರ ಆಡಳಿತ ಸುಧಾರಣಾ ಕಾರ್ಯಸೂಚಿಯನ್ನು ಸಾಕಾರಗೊಳಿಸುತ್ತದೆ. ಸಚಿವಾಲಯಗಳನ್ನು ಒಟ್ಟಿಗೆ ಇರಿಸುವ ಮೂಲಕ ಮತ್ತು ಅತ್ಯಾಧುನಿಕ ಮೂಲಸೌಕರ್ಯವನ್ನು ಅಳವಡಿಸಿಕೊಳ್ಳುವ ಮೂಲಕ, ಸಾಮಾನ್ಯ ಕೇಂದ್ರ ಸಚಿವಾಲಯವು ಅಂತರ-ಸಚಿವಾಲಯ ಸಮನ್ವಯವನ್ನು ಸುಧಾರಿಸುತ್ತದೆ, ನೀತಿ ಅನುಷ್ಠಾನವನ್ನು ವೇಗಗೊಳಿಸುತ್ತದೆ ಮತ್ತು ಸ್ಪಂದಿಸುವ ಆಡಳಿತ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ.
ಪ್ರಸ್ತುತ, ಹಲವಾರು ಪ್ರಮುಖ ಸಚಿವಾಲಯಗಳು 1950 ಮತ್ತು 1970 ರ ನಡುವೆ ನಿರ್ಮಿಸಲಾದ ಶಾಸ್ತ್ರಿ ಭವನ, ಕೃಷಿ ಭವನ, ಉದ್ಯೋಗ ಭವನ ಮತ್ತು ನಿರ್ಮಾಣ ಭವನದಂತಹ ಹಳೆಯ ಕಟ್ಟಡಗಳಿಂದ ಕಾರ್ಯನಿರ್ವಹಿಸುತ್ತಿವೆ, ಇವು ಈಗ ಹಳೆಯದಾಗಿವೆ ಮತ್ತು ಅಸಮರ್ಥವಾಗಿವೆ. ಹೊಸ ಸೌಲಭ್ಯಗಳು ದುರಸ್ತಿ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತವೆ, ಉತ್ಪಾದಕತೆಯನ್ನು ಹೆಚ್ಚಿಸುತ್ತವೆ, ಸಿಬ್ಬಂದಿ ಯೋಗಕ್ಷೇಮವನ್ನು ಸುಧಾರಿಸುತ್ತವೆ ಮತ್ತು ಒಟ್ಟಾರೆ ಸೇವಾ ವಿತರಣೆಯನ್ನು ಸುಧಾರಿಸುತ್ತವೆ.
ಕರ್ತವ್ಯ ಭವನ-03 ಅನ್ನು ದೆಹಲಿಯಾದ್ಯಂತ ಹರಡಿರುವ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳನ್ನು ಒಟ್ಟುಗೂಡಿಸುವ ಮೂಲಕ ದಕ್ಷತೆ, ನಾವೀನ್ಯತೆ ಮತ್ತು ಸಹಯೋಗವನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸುಮಾರು 1.5 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿರುವ ಅತ್ಯಾಧುನಿಕ ಕಚೇರಿ ಸಂಕೀರ್ಣವಾಗಿದ್ದು, ಎರಡು ನೆಲಮಾಳಿಗೆಗಳು ಮತ್ತು ಏಳು ಮಹಡಿಗಳನ್ನು (ನೆಲಮಹಡಿ + 6 ಮಹಡಿಗಳು) ಹೊಂದಿರುತ್ತದೆ. ಇದು ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ, ಗ್ರಾಮೀಣಾಭಿವೃದ್ಧಿ ಸಚಿವಾಲಯ, ಎಂ.ಎಸ್.ಎಂ.ಇ ಸಚಿವಾಲಯ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಗಳನ್ನು ಹೊಂದಿರುತ್ತದೆ.
ಹೊಸ ಕಟ್ಟಡವು ಐಟಿ-ಸಿದ್ಧವಾದ ಮತ್ತು ಸುರಕ್ಷಿತವಾದ ಕಾರ್ಯಸ್ಥಳಗಳು, ಐಡಿ ಕಾರ್ಡ್ ಆಧಾರಿತ ಪ್ರವೇಶ ನಿಯಂತ್ರಣ, ಸಂಯೋಜಿತ ಎಲೆಕ್ಟ್ರಾನಿಕ್ ಕಣ್ಗಾವಲು ಮತ್ತು ಕೇಂದ್ರೀಕೃತ ಕಮಾಂಡ್ ವ್ಯವಸ್ಥೆಯನ್ನು ಒಳಗೊಂಡಿರುವ ಆಧುನಿಕ ಆಡಳಿತ ಮೂಲಸೌಕರ್ಯವನ್ನು ಹೊಂದಿದೆ. ಇದು ಸುಸ್ಥಿರತೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಡಬಲ್-ಗ್ಲೇಜ್ಡ್ ಮುಂಭಾಗಗಳು, ಮೇಲ್ಛಾವಣಿಯ ಸೌರಶಕ್ತಿ, ಸೋಲಾರ್ ವಾಟರ್ ಹೀಟರ್, ಸುಧಾರಿತ ಎಚ್.ವಿ.ಎ.ಸಿ (ತಾಪನ, ವಾತಾಯನ ಮತ್ತು ಹವಾನಿಯಂತ್ರಣ) ವ್ಯವಸ್ಥೆಗಳು ಮತ್ತು ಮಳೆನೀರು ಕೊಯ್ಲುಗಳೊಂದಿಗೆ ಗೃಹ-4 (GRIHA-4) ರೇಟಿಂಗ್ ಅನ್ನು ಸಾಧಿಸುವ ಗುರಿಯನ್ನು ಹೊಂದಿದೆ. ಈ ಸೌಲಭ್ಯವು ಶೂನ್ಯ-ವಿಸರ್ಜನೆ ತ್ಯಾಜ್ಯ ನಿರ್ವಹಣೆ, ಆಂತರಿಕ ಘನತ್ಯಾಜ್ಯ ಸಂಸ್ಕರಣೆ, ಇ-ವಾಹನ ಚಾರ್ಜಿಂಗ್ ಕೇಂದ್ರಗಳು ಮತ್ತು ಮರುಬಳಕೆಯ ನಿರ್ಮಾಣ ಸಾಮಗ್ರಿಗಳ ವ್ಯಾಪಕ ಬಳಕೆಯ ಮೂಲಕ ಪರಿಸರ ಪ್ರಜ್ಞೆಯನ್ನು ಉತ್ತೇಜಿಸುತ್ತದೆ.
ಶೂನ್ಯ-ವಿಸರ್ಜನೆ ಕ್ಯಾಂಪಸ್ ಆಗಿರುವ ಕರ್ತವ್ಯ ಭವನವು ನೀರಿನ ಅಗತ್ಯಗಳ ಪ್ರಮುಖ ಭಾಗವನ್ನು ಪೂರೈಸಲು ತ್ಯಾಜ್ಯ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುತ್ತದೆ. ಕಟ್ಟಡವು ಕಲ್ಲು ಮತ್ತು ನೆಲಗಟ್ಟಿನ ಬ್ಲಾಕ್ ಗಳಲ್ಲಿ ಮರುಬಳಕೆಯ ನಿರ್ಮಾಣ ತ್ಯಾಜ್ಯವನ್ನು ಬಳಸಿದೆ, ಮೇಲ್ಮಣ್ಣಿನ ಬಳಕೆ ಮತ್ತು ರಚನಾತ್ಮಕ ಹೊರೆ ಕಡಿಮೆ ಮಾಡಲು ಹಗುರವಾದ ವಿಭಜನ ವಸ್ತುಗಳನ್ನು ಬಳಸಿದೆ ಮತ್ತು ಆಂತರಿಕ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಒಳಗೊಂಡಿದೆ.
ಈ ಕಟ್ಟಡವನ್ನು ಶೇ.30 ರಷ್ಟು ಕಡಿಮೆ ವಿದ್ಯುತ್ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ. ಕಟ್ಟಡವನ್ನು ತಂಪಾಗಿಡಲು ಮತ್ತು ಬಾಹ್ಯ ಶಬ್ದವನ್ನು ಕಡಿಮೆ ಮಾಡಲು ಇದು ವಿಶೇಷ ಗಾಜಿನ ಕಿಟಕಿಗಳನ್ನು ಹೊಂದಿದೆ. ಇಂಧನ ಉಳಿಸುವ ಎಲ್.ಇ.ಡಿ ದೀಪಗಳು, ಅಗತ್ಯವಿಲ್ಲದಿದ್ದಾಗ ದೀಪಗಳನ್ನು ಆಫ್ ಮಾಡಲು ಸಂವೇದಕಗಳು, ವಿದ್ಯುತ್ ಉಳಿಸುವ ಸ್ಮಾರ್ಟ್ ಎಲಿವೇಟರ್ ಗಳು ಮತ್ತು ವಿದ್ಯುತ್ ಬಳಕೆಯನ್ನು ನಿರ್ವಹಿಸಲು ಸುಧಾರಿತ ವ್ಯವಸ್ಥೆ ಇವೆಲ್ಲವೂ ವಿದ್ಯುತ್ ಉಳಿಸಲು ಸಹಾಯ ಮಾಡುತ್ತದೆ. ಕರ್ತವ್ಯ ಭವನ -03 ರ ಛಾವಣಿಯ ಮೇಲಿನ ಸೌರ ಫಲಕಗಳು ಪ್ರತಿ ವರ್ಷ 5.34 ಲಕ್ಷ ಯೂನಿಟ್ ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತವೆ. ಸೋಲಾರ್ ವಾಟರ್ ಹೀಟರ್ ಗಳು ದೈನಂದಿನ ಬಿಸಿನೀರಿನ ಅಗತ್ಯದ ಕಾಲು ಭಾಗಕ್ಕಿಂತ ಹೆಚ್ಚಿನದನ್ನು ಪೂರೈಸುತ್ತವೆ. ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳು ಸಹ ಲಭ್ಯವಿವೆ.
*****
(Release ID: 2153436)
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam